Pages

Total Visitors

Thursday, July 5, 2012

ಪರಿಹಾರ..





'ಆಂಟೀ ಆಂಟೀ..' ಪಕ್ಕದ ಮನೆಯ ಪುಟ್ಟಿಯ ಸ್ವರದಲ್ಲಿ ಅಳುವಿತ್ತು. ಯಾವಾಗಲೂ ಅಷ್ಟೇ ತಂಟೆ ಮಾಡುವುದರಲ್ಲಿ ನಿಸ್ಸೀಮಳಾಗಿರುವ ಅವಳು ಏನಾದರೂ ದೂರು ದುಮ್ಮಾನಗಳಿದ್ದರೆ ಅದರ ಪರಿಹಾರಕ್ಕೆ ನನ್ನನ್ನವಲಂಭಿಸುತ್ತಿದ್ದಳು. 

ಅವಳಮ್ಮನಾದರೆ ಮೊದಲೆರಡು ಪೆಟ್ಟು ಕೊಟ್ಟು ಆಮೇಲೆ 'ಯಾಕೇ ಅಳ್ತಿದ್ದೀಯಾ' ಅಂತ.. ಕೇಳ್ತಾಳೆ ಅಂತ ಗೊತ್ತಿದೆ ಅವಳಿಗೆ!!

ಬ್ರಹ್ಮಪುತ್ರಾ ನದಿ ಉಕ್ಕೇರಿ ಎಲ್ಲಾ ಕಡೆ ಜಲಾವೃತವಾದುದನ್ನು ಟಿ ವಿ  ಯಲ್ಲಿ ನೋಡುತ್ತಿದ್ದ ನಾನು 'ಹ್ಹೋ ಪುಟ್ಟಿ ರಾಣಿಯವರು ಬರಬೇಕು' ಎಂದು ಅವಳನ್ನು ಸ್ವಾಗತಿಸಿದೆ.

ಬಂದವಳೇ ' ಆಂಟೀ ನಿಮಗ್ಗೊತ್ತಾ' ಅಂದಳು

'ಏನು ಪುಟ್ಟೀ' 

'ಆಂಟೀ.. ಕಪ್ಪೆ ಕೂಗಿದ್ರೆ ಮಳೆ ಬರೋದಂತೆ ..' 

'ಹೌದಾ ಪುಟ್ಟಿ .. ಜಾಣೆ ನೀನು.. ನಿಂಗ್ಯಾರು ಹೇಳಿದ್ರು ಇದನ್ನ ..'

'ಆ ಮನೆ 'ದೊಡ್ಡ' ಹೇಳಿದ್ರು' 

'ಅದು ಸರಿ ಆದ್ರೆ ಅದ್ಕೆ ನೀನ್ಯಾಕೆ ಅಳ್ತೀಯಾ.. ನೀನು ಅತ್ರೂ ಮಳೆ ಬರುತ್ತಾ ..'

'ಆಂಟೀ.. ಮತ್ತೇ.. ಮತ್ತೇ.. ನಾನು ಕಪ್ಪೇನ ಸಾಯಿಸ್ಬಿಟ್ಟೆ.. ಹಾಗಿದ್ರೆ ಇನ್ನು ಮಳೆ ಬರಲ್ವಾ.. ಮಳೆ ಬರದಿದ್ರೆ ನಾನು ಕಲರ್ ಕಲರ್ ದೋಣಿ ಬಿಡೋದು ಹೇಗೆ? ಮೊನ್ನೆ ತಂದ ಹೊಸ ರೈನ್ ಕೋಟ್ ಹಾಕೋದು ಯಾವಾಗ..?' ಅಳು ಇನ್ನೂ ಜೋರಾಯಿತು.

ನನಗೂ ಇವಳ ತಂಟೆಗೆ ಸಿಟ್ಟು ಬಂತು.. 

'ಅಲ್ವೇ ಪುಟ್ಟಿ ಪಾಪದ ಆ ಕಪ್ಪೇನ ಯಾಕೇ ಸಾಯ್ಸಿದ್ದು.. ನೀನು ಒಳ್ಳೆ ಹುಡ್ಗಿ ಅಂದ್ಕೊಡಿದ್ದೆ..'

ಬಿಕ್ಕುತ್ತಾ 'ನಾನು ನಡೀತಾ ಬರುವಾಗ ನನ್ನ ಎದುರೇ ಟಪ್ ಟಪ್ ಅಂತ ಹೋಗ್ತಾ ಇತ್ತು. ನಾನು ಪಸ್ಟ್ ಹೋಗ್ಬೇಕೂಂದ್ರೆ ದಾರೀನೇ ಬಿಡ್ಲಿಲ್ಲ. ನಂಗೂ ಸಿಟ್ಟು ಬರಲ್ವಾ.. ಕಲ್ಲು ಎಸೆದೆ. ಅದು ನಿಮ್ಮ ತಾವರೆ ಕೊಳಕ್ಕೆ ಹಾರಿ ಬಿದ್ಬಿಡ್ತು ಆಂಟೀ.. ಎಷ್ಟು ಹುಡ್ಕಿದ್ರೂ ಕಾಣ್ಲೇ ಇಲ್ಲ. ನೀರಿಗೆ ಬಿದ್ದವರು ಸತ್ತೋಗ್ತಾರೆ ಅಲ್ವಾ.. ಆಂಟೀ ನಾನು ಬೇಕೂಂತ ಮಾಡ್ಲಿಲ್ಲ..' ಫ್ರಾಕಿನ ತುದಿಯಲ್ಲಿ ಕಣ್ಣೊರೆಸಿಕೊಂಡಳು. 

ನಾನು ಜೋರಾಗಿ ನಗುತ್ತಾ 'ಅಯ್ಯೋ ಮುದ್ದು, ಕಪ್ಪೆ ನೀರಿಗೆ ಬಿದ್ರೆ ಸಾಯೋದಿಲ್ಲ. ಅದ್ಕೆ ಸ್ವಿಮ್ಮಿಂಗ್  ಬರುತ್ತೆ. ಅದು ನೀರಲ್ಲೂ ನೆಲದಲ್ಲೂ ಎರಡೂ ಕಡೆ ಇರುತ್ತೆ..' 

ನನ್ನ ಮಾತನ್ನು ತಡೆದು ' ಆಂಟೀ ಹಾಗಿದ್ರೆ ಮಳೆ ಬರುತ್ತೆ ಅಲ್ವಾ ಎಂದಳು ಕುಷಿಯಲ್ಲಿ.. 

'ಹೂಂ ಪುಟ್ಟಿ .. ಈಗ ಇದನ್ನು ತಗೋ' ಅಂತ ಅವಳ ಕೈಗೆ ಒಂದು ಚಾಕೊಲೇಟ್  ತುರುಕಿದೆ. 

ಹೊರಗೋಡಿದವಳೇ ಮತ್ತೆ ತಿರುಗಿ ಬಂದಳು. 

'ಆಂಟೀ ..' 

'ಏನಮ್ಮಾ..' 

'ಆಂಟೀ ಟಿ ವಿ ಲಿ ತೋರಿಸ್ತಾ ಇದ್ದಾರೆ ಅಲ್ವಾ ಆ ರಿವರ್ ಇರುವಲ್ಲಿ ತುಂಬಾ ಮಳೆ ಬರುತ್ತಾ' ಅಂದಳು. 

'ಹೌದು .. ನೋಡು.. ಎಷ್ಟೊಂದು ಮನೆಗಳೆಲ್ಲ ಮುಳುಗಿದೆ ನೀರಲ್ಲಿ ಪಾಪ' ಅಂದೆ.

ಆಂಟೀ ಅಲ್ಲಿರುವ ಕಪ್ಪೆಗಳನ್ನೆಲ್ಲಾ ಸಾಯಿಸಿದ್ರೆ ಮಳೆ ನಿಂತು ಬಿಡುತ್ತೆ ಅಲ್ವಾ.. !!! ಎಂದು ಪರಿಹಾರ ತಿಳಿಸಿ ಹೊರಗೋಡಿದಳು. 


14 comments:

  1. ಇಲ್ಲೂ ಕಪ್ಪೆ ಕೂಗಬಾರ್ದಾ...ಮಳೆನೇ ಇಲ್ಲ ..ಜಪಾನ್ ನಲ್ಲಿ ನೆರೆ ಬರದಂತೆ ಕಪ್ಪೆ ಗಳ ನಿರ್ಮೂಲ ಮಾಡಬೇಕಿತ್ತು !! ಮಕ್ಕಳ ನಿರ್ಮಲ ಮನಸ್ಸಿಗೆ ಏನೆಲ್ಲಾ ಹೊಳೆಯತ್ತೆ ..ಚೆನ್ನಾಗಿದೆ ..ಇಲ್ಲೂ ಒಂದು Surprise ಇಟ್ಟಿದ್ದೀರಿ ..
    ಅಭಿನಂದನೆಗಳು .

    ReplyDelete
  2. makkaLa alochanegaLe heege bahaLa majavaagirutte.....tumbaa channaagide...:)

    ReplyDelete
  3. ಅಕ್ಕ , ನಿಮ್ಮ ನಿರೂಪಣ ಶೈಲಿ ಯಲ್ಲಿ ನಾನು ಮಗುವಾಗಿ ನಿಮ್ಮಲ್ಲಿ ಪ್ರಶ್ನಿಸಿದಂತೆ ಭಾಸವಾಯಿತು !

    ReplyDelete
  4. ಹಹಹ ಮೂಢ ನಂಬಿಕೆಯ ದಡ್ಡರಿಗೆ ಒಳ್ಳೆಯ ಛಡಿ ಏಟು ಕೊಟ್ಟಿದ್ದಾಳೆ.

    ReplyDelete
  5. Mugda Nirmala manasina tolalaata abhivyaktagondide ... Sundaravaagide sister

    ReplyDelete
  6. tumbaa chennaagide................

    ReplyDelete
  7. ಹಾಸ್ಯಭರಿತವಾದ ಲೇಖನ... ಮಕ್ಕಳ ಮಾತಿನ ಬಗೆಗೆ ಹೆಚ್ಚು ಗಮನಕೊಡದ ತಾಯಂದಿರು ಅವರ ಮಾತುಗಳಲ್ಲಿರುವ ಗೂಢಾರ್ಥವನ್ನು ಅರಿಯುವ ಮನಸ್ಸನ್ನು ಹೆತ್ತ ತಂದೆ-ತಾಯಿಯಾದ ದೊಡ್ಡವರು ಆಲಿಸಬೇಕಾಗುತ್ತದೆ ಅವರಲ್ಲಿರುವ ವಿಡಂಭನಾತ್ಮಕ ದೃಷ್ಟಿಕೋನಗಳನ್ನು ನೋಡಿದಾಗ ಇವರಿಗೂ ಇಂತಹ ಆಲೋಚನೆಗಳು ಬರುತ್ತಾವಾ ಎನ್ನುವಷ್ಟು ಆಶ್ಚರ್ಯವಾಗಿಬಿಡುತ್ತದೆ... ಅದರಲ್ಲಿ ನೀವು ಅವರ ಮನಸ್ಸಿನ ಆಳದಲ್ಲಿರುವ ಸೂಕ್ಷ್ಮವನ್ನು ಗಮನಿಸಿ ಲೇಖನದ ಮೂಲಕ ಹೊರತಂದಿದ್ದೀರಾ, ತುಂಬಾ ಚೆನ್ನಾಗಿದೆ.. ಕೊನೆಯಲ್ಲಿ ಕೂಡುವುದು-ಕಳೆಯುವುದರ ಲೆಖ್ಖದಂತೆ ಮಕ್ಕಳ ಮನಸ್ಸಿನಲ್ಲಿ ಮೂಡಿದ ಭಾವ ಚೆನ್ನಾಗಿತ್ತು ಕಪ್ಪೆ ಕೂಗಿದರೇ ಮಳೆ ಬರುತ್ತೇ... ಕಪ್ಪೆ ಸಾಯಿಸಿದರೇ ಮಳೆ ನಿಂತುಹೋಗುತ್ತದೆ.

    ReplyDelete
  8. tumba chennagide anitha ... olle punch koneli ! jothege haakiro fotos koodaa sooper

    ReplyDelete
  9. hahahaha :D Olle prasanga, nimmade typical niroopane :-) inthaha chutuku-prasangagalu odalu khushi kodutte. :D

    ReplyDelete
  10. ತುಂಬಾ ಇಷ್ಟ ಆಯ್ತು !! ಸರಳವಾಗಿ ಓದಿಸಿಕೊಂಡು ಹೋಗುವಂತಿದೆ :)

    ReplyDelete
  11. ಮಗುವಿನ ಮುಗ್ದ ಪ್ರಶ್ನೆಗೆ ಉತ್ತರ ಉಂಟಾ ? ಇಷ್ಟವಾಯ್ತು ಬರಹ

    ReplyDelete