Pages

Total Visitors

Monday, June 10, 2013

ಎಲ್ಲಿ ಭೂರಮೆ..



ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ವನಸಿರಿ ಮಳೆ ಹನಿಗಳ ಮಾಲೆ ಧರಿಸಿ ಬೀಸಿ ಬರುವ ಗಾಳಿಯಲೆಗೆ ತೊನೆದಾಡುತ್ತಾ ನರ್ತಿಸುತ್ತಿದ್ದವು.ನಾವು ಸಾಗುತ್ತಿರುವ ಬೆಟ್ಟಗಳ ನಡುವಿನ ತಿರುವು ಮುರುವಿನ  ಹಾದಿ ಇದ್ಯಾವುದೂ  ತನಗೆ ಸಂಬಂಧವಿಲ್ಲ ಎನ್ನುವಂತೆ ಒದ್ದೆಯಾಗಿ  ತಣ್ಣಗೆ ಮಲಗಿತ್ತು.

 ಯಾವುದೇ ಎಚ್ಚರಿಕೆಯ ಸೂಚನೆಗಳಿಲ್ಲದಿದ್ದರೂ ವಾಹನದ ವೇಗ ತನ್ನಿಂದ ತಾನೇ ತಗ್ಗುತಿತ್ತು. ಕಣ್ಣು ಸರಿ ಇದ್ದರೂ ತಡಕಾಡುತ್ತಾ ಚಲಾಯಿಸುವಂತಾಗುತ್ತಿತ್ತು.ಕಣ್ಣಿನ ಎದುರು ಮಂಜಿನ ಲೋಕವೊಂದು ಪ್ರತ್ಯಕ್ಷವಾಗಿತ್ತು.



ನೆಲಕ್ಕೆ ಹೆಜ್ಜೆಯೂರಿ ನಿಂತಾಗ ತಣ್ಣನೆಯ ಅಲೆಯೊಂದು ನಮ್ಮನ್ನು ಸುತ್ತುವರಿಯಿತು. ಮಂಜಿನ ಪದರದೊಳಗೆ ಸಿಲುಕಿದ ನಾವು ನಮ್ಮ ಗುರುತು ಪರಿಚಯಗಳನ್ನು ಕಳೆದುಕೊಂಡು ವಿಶ್ವ ಮಾನವರಾದೆವು. ಹತ್ತಡಿ ದೂರದಲ್ಲಿ ನಿಂತರೂ ಕಣ್ಣಿಗೆ ಗೋಚರಿಸದೇ ಅದೃಶ್ಯ ಜೀವಿಗಳಾದೆವು.'ನಮಗೆ ನಾವು ಮಾತ್ರ ಬೇರಾರು ಇಲ್ಲ' ಎಂಬ ವೇದಾಂತವು ತಲೆಯೊಳಗೆ ನುಗ್ಗಿ ಸುಲಭವಾಗಿಯೇ ವೇದಾಂತಿಗಳಾದೆವು. ಪ್ರಕೃತಿಯ ಮಾಯಾಜಾಲದ ಬಲೆಯೊಳಗೆ ಸಿಲುಕಿ ಎಲ್ಲವನ್ನೂ ಮರೆತೆವು.

ಪುಟ್ಟದೊಂದು ಕೊಳ, ಅದರ ಹಿಂದೆ  ಕುಂಡಿಕೆ ಅಲ್ಲೇ ಸ್ವಲ್ಪ ಮೇಲ್ಬಾಗದಲ್ಲಿ ಎರಡು ದೇವರ ಗುಡಿಗಳು ಇದ್ದವು. ಒಂದು ಪಕ್ಕದಲ್ಲಿ ಪ್ರಪಾತವಿದ್ದರೆ ಇನ್ನೊಂದೆಡೆಯಲ್ಲಿ ಎತ್ತರದ ಗಿರಿಯಿತ್ತು. ಇದರರ್ಥ ನಾವು ಕೊಡಗಿನ ತಲಕಾವೇರಿಯ ಮಡಿಲನ್ನು ಸೇರಿದ್ದೇವೆ ಎಂದಾಗಿತ್ತು.


ಹೌದು ಇದು ಕಾವೇರಿಯ ಉಗಮ ಸ್ಥಳ. ಪುರಾಣ ಪ್ರಸಿದ್ಧ ಭೂಮಿ. ಲೋಪಾಮುದ್ರೆ ಲೋಕ ಕಲ್ಯಾಣಕ್ಕಾಗಿ ಅಗಸ್ತ್ಯನ  ಕಮಂಡಲದಿಂದ ಹೊರ ಬಂದು ಕಾವೇರಿಯಾಗಿ ಹರಿಯಲು ಮೊದಲಿಟ್ಟದ್ದು ಇಲ್ಲಿಂದಲೇ. ದಕ್ಷಿಣದ ಸುರಗಂಗೆ, ಬಿಂದು ಮಾತ್ರ ಪ್ರೋಕ್ಷಣೆಯಿಂದ  ಸರ್ವ ಪಾಪಗಳನ್ನು ನಿವಾರಿಸುವ ಶಕ್ತಿ ಹೊಂದಿದ ದೇವಿಯೆಂದೇ ಪೂಜಿಸಲ್ಪಡುವ ಕಾವೇರಿ ತಾಯಿಯ ತವರಿದು. ನೀರು ಸಕಲ ಚರಾಚರಗಳಿಗೂ ಮೂಲ . ಕೊಳೆಯನ್ನು ತೊಳೆಯುತ್ತದೆ. ಅನ್ನವನ್ನು ನೀಡುತ್ತದೆ.  ಇದರಿಂದಾಗಿ ಸಹಜವಾಗಿಯೇ ಪೂಜನೀಯವೆನಿಸುತ್ತದೆ. ಅದರಲ್ಲೂ ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಮನದಣಿಯೆ ಉಣಬಡಿಸುವ ತಾಣ ಪವಿತ್ರ ಕ್ಷೇತ್ರವೂ ಆಗಿದ್ದಾಗ ಮನಸ್ಸು ಅಲ್ಲಿಗೆಳೆಯುವುದರಲ್ಲಿ ಅಚ್ಚರಿಯೇನಿದೆ?

ಮುಂದೇನಿದೆ ಎಂಬ ಕುತೂಹಲವೇ.. ಬನ್ನಿ ನಮ್ಮೊಡನೆ..


ಎತ್ತರೆತ್ತರದ ಪರ್ವತಗಳಿಂದ ಸುತ್ತುವರಿದ ಈ ಸ್ಥಳ ಕೊಡಗಿನ ಪ್ರವಾಸಿಗಳ ಮುಖ್ಯ ಆಕರ್ಷಣೆ. ಪ್ರಕೃತಿಯ ನಡುವೆ ಕರಗಿ ಹೋಗಬೇಕೆನ್ನುವವರ ಕನಸಿನ ಅರಮನೆ.ಭಾಗಮಂಡಲದಿಂದ ಎಂಟು ಕಿಲೋ ಮೀಟರುಗಳ ಅಂತರದಲ್ಲಿರುವ ತಲಕಾವೇರಿ ಪ್ರವಾಸಿಗಳ ಸ್ವರ್ಗ. 


ಕಾವೇರಿ ಕುಂಡಿಕೆಯನ್ನೊಳಗೊಂಡ ಪುಟ್ಟದೇಗುಲ.ಎದುರಿಗೊಂದು ಕೊಳ. ಅದರ  ತಣ್ಣಗಿನ  ನೀರಲ್ಲಿ ಮುಳುಗೇಳುವುದೂ ಅದ್ಭುತ ಅನುಭವ.ಅಲ್ಲೇ ಮೇಲ್ಬಾಗದಲ್ಲಿ ಗಣಪತಿ ಮತ್ತು ಅಗಸ್ತೇಶ್ವರನ ಗುಡಿ. ಅದರ ಪಕ್ಕದಲ್ಲಿರುವ ಮೆಟ್ಟಿಲುಗಳು ನಿಮ್ಮನ್ನು ಬ್ರಹ್ಮಗಿರಿಯನ್ನೇರಿಸುತ್ತವೆ. 



 ಮೇಲೇರಿ ಸುತ್ತ ಕಣ್ಣು ಹಾಯಿಸಿದರೆ ಅಲೆ ಅಲೆಯಾಗಿ ಪರ್ವತಗಳು ಕಾಣಿಸುತ್ತವೆ. ಸುಮ್ಮನೆ ನಿಂತಲ್ಲಿಂದಲೇ ಒಂದು ಸುತ್ತು ತಿರುಗಿ. ನೀವೊಂದು ಹಸಿರಿನ ಬೆಟ್ಟಗಳ ಗೋಲದೊಳಗೆ ಕುಳಿತಂತೆ ಅನುಭವವಾಗುತ್ತದೆ. ನಿಮ್ಮಿಂದ ತಗ್ಗಿನಲ್ಲಿ  ಕೆಳಗೆ ಮೋಡಗಳು ಲಾಸ್ಯವಾಡುತ್ತಾ ಸಂಚರಿಸುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಮೋಡಗಳು ನಿಮ್ಮನ್ನು ಆವರಿಸಿ ಮುಚ್ಚಿ ಬಿಡಬಹುದು.ಅರಸಿಕ ಮನಸ್ಸೂ ಇಲ್ಲಿ ಕವಿಯಾಗಬಹುದು. ಭಾವುಕ ಮನಸ್ಸು ಮೌನವಾಗಬಹುದು. 


ಹೊತ್ತು ತಾನಾಗಿಯೇ ಕರಗುತ್ತದೆ.  ಕಾಲವೆಂಬುದನ್ನು ಸ್ಥಗಿತಗೊಳಿಸಿ ಇಲ್ಲೇ ಉಳಿಯುವ ಮನ ನಿಮ್ಮದಾಗುತ್ತದೆ.ಮತ್ತೊಮ್ಮೆ ಬರುವ ಪ್ರತಿಜ್ಞೆ ಮಾಡಿಯೇ ಕುಳಿತಲ್ಲಿಂದ ಏಳುತ್ತೀರಿ. ಮನಸ್ಸು ನಿಮಗರಿವಿಲ್ಲದೇ


 ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲೆ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ  ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
ಅಲ್ಲಿ ಆ ಕಡೆ ನೋಡಲಾ
ಅಲ್ಲಿ ಕೊಡವರ ನಾಡಲಾ
ಅಲ್ಲಿ ಕೊಡವರ ಬೀಡಲಾ
ಎಂಬ ಪಂಜೆಯವರ ಹಾಡನ್ನು ಗುಣುಗುಣಿಸತೊಡಗುತ್ತದೆ.