Pages

Total Visitors

Showing posts with label ಲಘು ಬರಹ. Show all posts
Showing posts with label ಲಘು ಬರಹ. Show all posts

Tuesday, April 26, 2016

ಸತ್ತವರನ್ನು ಬದುಕಿಸುವ ಹಕ್ಕಿ


ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ಅವಸರ ಅವಸರವಾಗಿ ತಿಂಡಿ ತಿಂದು ಮನೆಯ ಹೊರಗೆ ಕಾದಿರುತ್ತಿದ್ದ ಗೆಳತಿ ನೈನಾಳ ಜೊತೆ  ಗದ್ದೆ ಬಯಲಿಗೆ ಆಟವಾಡಲು ಹೋಗುತ್ತಿದ್ದೆ. ವಠಾರದ ಹುಡುಗರ ಗುಂಪು ಅಲ್ಲಿ ಚಿಣ್ಣಿ ಕೋಲು ಆಡುತ್ತಿತ್ತು. ಹಾಗಂತ ನಾನು ಮತ್ತು ನೈನಾ ಅದರ ವೀಕ್ಷಕರಾಗಿ ಹೋಗುತ್ತಿದ್ದುದೇನಲ್ಲ. ಅಲ್ಲಿ ತಲುಪುವವರೆಗೆ ಗೆಳತಿಯರಾಗಿ ಕೈ ಹಿಡಿದು ನಡೆಯುತ್ತಿದ್ದ ನಾವು ಅಲ್ಲಿಗೆ ತಲುಪಿದ ಕೂಡಲೆ ವಿರುದ್ಧ ಬಣಗಳ ಆಟಗಾರರಾಗುತ್ತಿದ್ದೆವು.
ಆಟ ಬಹಳ ಬಿರುಸಿನಿಂದ ಸಾಗಿತ್ತು. ನಾನು ಹಾರಿಸಿ ಹೊಡೆದ ಕೋಲು ಗದ್ದೆಯ ಬದಿಯ ಬೇಲಿಯ ಸಾಲಿಗೆ ಬಿತ್ತು. ಕೂಡಲೇ ಪರ ಪರ ಸದ್ದಿನೊಂದಿಗೆ ಹೊರ ಬಂದ ಹಕ್ಕಿಯೊಂದು ರೆಕ್ಕೆಗಳನ್ನು ಬಡಿಯುತ್ತಾ ಹೊರ ಹಾರಿತು.  ನೋಡೇ  ಹಕ್ಕಿ ಎಂದು ಗೆಳತಿಯನ್ನು ಕರೆದು ಅದು ಹಾರಿದ ಕಡೆಗೆ ಕೈ ತೋರಿದೆ. ಯಾಕೋ ಮಾತಿಲ್ಲದೆ ಮೌನವಾದಳು.
ಆಟ ಎಷ್ಟೇ ರಸವತ್ತಾಗಿರಲಿ ಸಂಜೆ ಆರು ಗಂಟೆಯೊಳಗೆ ಮನೆ ಸೇರದಿದ್ದರೆ ಕೈಯಲ್ಲಿ ಬೆತ್ತ ಝಳಪಿಸುತ್ತಾ ಬರುವ ಅಮ್ಮ ಕಾಣಿಸಿಕೊಳ್ಳುವ ಭಯವಿದ್ದ ಕಾರಣ ಆಟ ನಿಲ್ಲಿಸಿ ಮನೆಯ ಕಡೆ ಹೊರಟೆ.  ಅಲ್ವೇ.. ಆಗ ಹಕ್ಕಿ ತೋರಿಸಿದರೆ ಮಾತೇ ಆಡ್ಲಿಲ್ವಲ್ಲೇ ಯಾಕೇ? ಎಂದೆ.
 ನಿಂಗಷ್ಟು ಬುದ್ಧಿ ಬೇಡ್ವೇನೇ.. ಅದು ಅದೃಷ್ಟದ ಹಕ್ಕಿ. ಅದನ್ನು ನೋಡಿದವರಿಗೆ ಅದೃಷ್ಟ ಬರುತ್ತೆ. ಆದ್ರೆ ಅವರು ಹಕ್ಕಿ ನೋಡಿದ್ದನ್ನು ಯಾರಿಗೂ ಹೇಳಬಾರದು. ನೀನು ನೋಡಿಯೂ ಪ್ರಯೋಜನ ಇಲ್ಲದೇ ಹೋಯ್ತು, ನೀನು ಹೇಳದೇ ಇದ್ದಿದ್ದರೆ ಇವತ್ತು ನಿಮ್ಮ ಟೀಮ್ ಗೆಲ್ತಿತ್ತು ಗೊತ್ತಾ  ಎಂದಳು.
ಅಚ್ಚರಿಯಿಂದ ಅವಳು ಹೇಳುವುದನ್ನು ಕೇಳಿಸಿಕೊಂಡ ನಾನು ಆ ದಿನ ಕಳೆದುಕೊಂಡ ನನ್ನ ಅದೃಷ್ಟಕ್ಕಾಗಿ ಮರುಗಿದೆ.
ಮರುದಿನ ಶಾಲೆಗೆ ನೈನಾಳ ಜೊತೆಗೆ ಹೊರಟರೂ ನನ್ನ ಕಣ್ಣು ಹಾದಿ ಬದಿಯ ಬೇಲಿ, ಮರ ಗಿಡ, ಪೊದರುಗಳ ನಡುವೆ ನುಸುಳಿ ನುಸುಳಿ ಮರಳುತ್ತಿತ್ತು. ಎಲ್ಲಿಯಾದರೂ ಅದೃಷ್ಟದ ಹಕ್ಕಿ ಮತ್ತೊಮ್ಮೆ ಕಂಡರೆ, ಇವತ್ತು ಶಾಲೆಯಲ್ಲಿ ಹೋಮ್ವರ್ಕ್ ಮಾಡದಿದ್ದರೂ, ಸರಿಯುತ್ತರ ಹೇಳದಿದ್ದರೂ ಟೀಚರುಗಳು ಬಯ್ಯದಂತೆ ನನ್ನ ಅದೃಷ್ಟ ಕೆಲಸ ಮಾಡೀತೇನೋ ಎಂಬ ದೂರದ ಆಸೆ. ಸ್ವಲ್ಪ ದೂರ ನಡೆಯುತ್ತಲೇ ನೈನಾ  ನೋಡೇ ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ ನಿಂಗೊಂದು ಗುಟ್ಟಿನ ಸುದ್ದಿ ಹೇಳ್ತೀನಿ, ಆದ್ರೆ ಅದನ್ನು ನೀನ್ಯಾರಿಗೂ ಹೇಳಬಾರದು ಎಂದು ಪ್ರಾಮಿಸ್ ಮಾಡಿಸಿಕೊಂಡಳು.
ಅವಳು ಮಾತು ಶುರು ಮಾಡುವುದನ್ನೇ ಕಾದೆ.
ನೋಡೇ, ಯಾರಾದ್ರೂ ಸತ್ರೆ ಏನ್ಮಾಡ್ತಾರೆ ಹೇಳು ಅಂದಳು.
ಆವತ್ತು ಹಿಂದಿನ ಮನೆಯ ತಾತ ಸತ್ತಿದ್ದಾಗ  ದೂರದಲ್ಲೆಲ್ಲೋ ಕೊಂಡೊಯ್ದು  ಸುಟ್ಟು ಹಾಕಿದ ಸುದ್ದಿಯನ್ನು ಕೇಳಿಸಿಕೊಂಡಿದ್ದೆ. ನನಗೇನೋ ಅವರೇನು ಮಾಡ್ತಾರೆ ಅಂತ ನೋಡುವ ಕುತೂಹಲ ಇದ್ದರೂ ಅಮ್ಮ ಹೋಗಲು ಬಿಟ್ಟಿರಲಿಲ್ಲ. ಮಕ್ಕಳೆಲ್ಲಾ ಅಲ್ಲಿಗೆ ಹೋಗಬಾರದು ಎಂದು ತಡೆದಿದ್ದಳು.
ಹಾಗಾಗಿ ನಾನು ಕೇಳಿ ತಿಳಿದಿದ್ದ ಸುದ್ದಿಯನ್ನೇ ಅವಳಿಗೆ ಹೇಳಿದೆ.
ಹೂಂ ಎಂದು ಒಪ್ಪಿದಂತೆ ತಲೆದೂಗಿಸಿ ಮಾತು ಮುಂದುವರಿಸಿದಳು.  ಆದ್ರೆ ಅವರನ್ನು ಮತ್ತೆ ಬದುಕಿಸಬಹುದು ಅಂತ ನಿಂಗೆ ಗೊತ್ತಾ ಎಂದಳು.
ಹೌದಾ.. ಎಂದು ಬಾಯ್ತೆರೆದು ನಿಂತೆ.  ಯಾರಿಗೂ ಗೊತ್ತಿಲ್ಲದಂತಹ ರಹಸ್ಯವೊಂದು ನನ್ನೆದುರು ಅನಾವರಣಗೊಳ್ಳಲಿತ್ತು.
ಹೂಂ ಕಣೇ.. ನಿಜವಾಗಿಯೂ.. ನಿನ್ನೆ ನೋಡಿದ್ದ ಅದೃಷ್ಟದ ಹಕ್ಕಿ ಗೊತ್ತಲ್ಲಾ .. ಆ ಹಕ್ಕಿಯಿಂದ ಮನುಷ್ಯರನ್ನು ಬದುಕಿಸಬಹುದು ಎಂದಳು.
ನನಗೀಗ ನನ್ನ ಗೆಳತಿ ಪ್ರಪಂಚದ ಅತ್ಯದ್ಭುತ ವ್ಯಕ್ತಿಯಂತೆ ಕಾಣಿಸತೊಡಗಿದಳು. ಮತ್ತು ಅವಳು ಹೇಳ ಹೊರಟಿರುವ ವಿಷಯದ ಗಹನತೆಯೂ ನನ್ನರಿವಿಗೆ ಬಂದು ಗಂಭೀರ ಕೇಳುಗಳಾದೆ.
ಆ ಅದೃಷ್ಟದ ಹಕ್ಕಿ ಮೊಟ್ಟೆ ಇಟ್ಟು ಮರಿ ಮಾಡಿರುವ ಸಮಯದಲ್ಲಿ .. ಅಂದ್ರೆ ಆ ಹಕ್ಕಿ ಮರಿಗಳಿನ್ನೂ  ಹಾರಲು ಕಲಿತಿರಬಾರದು. ಅಮ್ಮ ಹಕ್ಕಿ ಆಹಾರ ತರೋದಿಕ್ಕೆ ಹೊರಗೆ ಹೋಗಿ ಸಂಜೆ ಬರುತ್ತೆ. ಅದು ಬರುವ ಸ್ವಲ್ಪ ಮೊದಲಷ್ಟೇ ಗೂಡಿನ ಹತ್ತಿರ ಹೋಗಿ ಆ ಮರಿಗಳನ್ನು ಕೊಲ್ಲಬೇಕು ಎಂದಳು.
ಅಯ್ಯೋ.. ಯಾಕೇ ಆ ಹಕ್ಕಿ ಮರಿಗಳನ್ನು ಕೊಲ್ಲೋದು? ಹಾಗೇ ಆ ಮರಿಗಳು ಸತ್ರೆ ನಮಗೆ ಅದೃಷ್ಟದ ಹಕ್ಕಿ ನೋಡೋದಕ್ಕೆ ಸಿಗುತ್ಯೇನೇ ಮತ್ತೆ ಎಂದು ನನ್ನ ದೂರದೃಷ್ಟಿಯ ಬುದ್ಧಿವಂತಿಕೆಯನ್ನು ತೋರಿಸಿದೆ.  ಹೇಳೋದನ್ನು ಪೂರಾ ಕೇಳು ಎಂದು ಬಯ್ದಳು.
ಸರಿ ಎಂದು ತಲೆಯಲುಗಿಸುತ್ತಾ ಅವಳ ಮಾತುಗಳಿಗೆ ಕಿವಿಗೊಟ್ಟೆ.
ಆ ಮರಿಗಳನ್ನು ಕೊಲ್ಲುವಾಗ ಸ್ವಲ್ಪ ಅಂದರೆ  ಒಂದು  ಸೂಜಿಯ ಮೊನೆಯಷ್ಟೂ ಹಕ್ಕಿ ಮರಿಗಳಿಗೆ ಗಾಯಗಳಾಗಬಾರದು ಹಾಗೆ ಕೊಲ್ಲಬೇಕು ಗೊತ್ತಾಯ್ತಾ.. ಮತ್ತೆ ನಾವಲ್ಲಿಯೇ ಅಡಗಿ ಕೂರಬೇಕು. ಅದರ ಅಮ್ಮ ಗೂಡಿಗೆ ಬಂದು ಮರಿಗಳು ಸತ್ತು ಬಿದ್ದಿದ್ದನ್ನು ನೋಡುತ್ತೆ. ಮರಿಗಳನ್ನು ಪರೀಕ್ಷಿಸಿ ಎಲ್ಲೂ ಗಾಯಗಳಿಲ್ಲ ಅಂತಾದರೆ ಗೂಡು ಬಿಟ್ಟು ವೇಗವಾಗಿ ಹಾರುತ್ತಾ ಹೋಗುತ್ತದೆ. ಅದು ಹೋಗಿ ಬರುವಾಗ ಅದರ ಕೊಕ್ಕಿನಲ್ಲಿ ಒಂದು ಮರದ ಕಡ್ಡಿ ಇರುತ್ತದೆ. ಆ ಕಡ್ಡಿಯನ್ನು ಅದು ಮರಿಗಳ ಮೂಗಿನ ಹತ್ತಿರ ಇಟ್ಟರೆ ಸಾಕು ಮರಿಗಳು ಜೀವ ಆಗಿ ಏಳುತ್ತವೆ. ಯಾಕೆಂದರೆ ಅದು ಸಂಜೀವಿನಿ ಕಡ್ಡಿ. ಅದರ ಕೆಲಸ ಮುಗಿದ ಕೂಡಲೇ ಅದು ಹೊರಗೆ ನೋಡುತ್ತದೆ. ಆಗಲೇ ಕತ್ತಲಾಗಿರುತ್ತೆ ಅಲ್ವಾ.. ಹಾಗಾಗಿ ಅದು ಆ ಕಡ್ಡಿಯನ್ನು ಗೂಡಲ್ಲೇ ಇಟ್ಟುಕೊಳ್ಳುತ್ತದೆ. ಬೆಳಗಾದ ನಂತರ ಮತ್ತೆ ಎಲ್ಲಿಂದ ತಂದಿತೋ ಅಲ್ಲಿಗೆ ತೆಗೊಂಡೋಗಿ ಇಡುತ್ತದೆ.  ನಾವು ಆ ಹಕ್ಕಿಗಳು ಮಲಗಿದ ಮೇಲೆ ಮೆಲ್ಲನೆ  ಅದರ ಗೂಡಿನಿಂದ ಆ ಕಡ್ಡಿಯನ್ನು ತರಬೇಕು.  ಆ  ಕಡ್ಡಿಯಿಂದ ಯಾವುದೇ ಸತ್ತ ಮನುಷ್ಯರನ್ನು ಬದುಕಿಸಬಹುದು ಗೊತ್ತಾ ಎಂದಳು. 
ಕಥೆ ಬಲು ಆಕರ್ಷಣೀಯವಾಗಿ ನಿಮಗೂ ಅಂತಹಾ ಹಕ್ಕಿಯನ್ನು ನೋಡುವ ಅದೃಷ್ಟ ಒಲಿದರೆ ಎಂಬಾಸೆ ಮೂಡಿರಬೇಕಲ್ಲ.   ಆದರೆ ನನಗೆ ನಿಶ್ಚಿತವಾಗಿಯೂ ಗೊತ್ತಿದೆ ನೀವು ಆ ಹಕ್ಕಿಯನ್ನು ನೋಡಿದ ಅದೃಷ್ಟವಂತರೇ ಎಂದು. ಯಾಕೆಂದರೆ ಭಾರತದ ಎಲ್ಲಾ ಕಡೆಯೂ ಸಾಮಾನ್ಯವಾಗಿ ಕಾಣುವ ಕನ್ನಡದದಲ್ಲಿ ಕೆಂಭೂತ ಎಂದೂ ಇಂಗ್ಲೀಷಿನಲ್ಲಿ greater coucal or crow pheasant ಎಂದು ಕರೆಯಲ್ಪಡುವ ನಮ್ಮ ನಿಮ್ಮ ಮನೆಯ ಸುತ್ತ ಮುತ್ತ ಕಾಣಸಿಗುವ  ಹಕ್ಕಿ ಇದು. ಸಾಧಾರಣ ಕಾಗೆಯಷ್ಟೇ ಗಾತ್ರದ ಶಕ್ತಿಶಾಲಿಯಾದ ಮಣ್ಣಿನ ಕೆಂಪು ಬಣ್ಣದ ರೆಕ್ಕೆಗಳನ್ನು ಹೊಂದಿದ ಆಕರ್ಷಕವಾದ ಕೆಂಪನೆಯ ಕಣ್ಣನ್ನು ಹೊಂದಿದ ಹಕ್ಕಿ. ಎತ್ತರೆತ್ತರದ ಮರಗಳಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಬೇರೆ ಹಕ್ಕಿಗಳ ಮೊಟ್ಟೆಗಳನ್ನು ಕದಿಯುವುದರಲ್ಲಿ ಚಾಣಾಕ್ಷ್ಯ. ಹುಳ ಹುಪ್ಪಟೆಗಳು, ಸಣ್ಣ ಸರೀಸೃಪಗಳು, ಬಸವನ ಹುಳ ಇಂತವೆಲ್ಲಾ ಇವುಗಳ ಬ್ರೇಕ್‌ಫಾಸ್ಟ್, ಡಿನ್ನರ್ ಸಪ್ಪರ್ ಗಳು.  ಬೆಳಗ್ಗಿನ ಹೊತ್ತು ಸೋಮಾರಿಗಳಂತೆ ಬಿಸಿಲಿಗೆ ಮೈಯೊಡ್ಡಿ ಕುಳಿತಿರುತ್ತವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ಹಕ್ಕಿಗಳದ್ದು ಅನುರೂಪದ ದಾಂಪತ್ಯ. ಒಂದು ಹೆಣ್ಣು ಒಂದು ಗಂಡು ಹೇಗೋ ಏನೋ ಹೊಂದಿಕೊಂಡು ಎನ್ನುವ ಕವಿವಾಣಿ ಇವರಿಗೂ ಅನ್ವಯವೇ. ಜೊತೆಯಲೀ ಜೊತೆ ಜೊತೆಯಲೀ ಅಂತ ಹಾಡಿಕೊಂಡು ಒಟ್ಟಿಗೆ ಸುತ್ತುವ ಪ್ರೇಮಿಗಳೇ ಇವು. 
ಅಯ್ಯೋ ಈ ಹಕ್ಕಿ ನಮಗೂ ಗೊತ್ತು ಅಂತ ನೀವೂ ಈಗ ಸಂಜೀವಿನಿ ಕಡ್ಡಿಗಾಗಿ ಹುಡುಕಾಟಕ್ಕೆ ಹೊರಟಿರಾ.. ಸ್ವಲ್ಪ ನನ್ನ ಕಥೆಯ ಉಪಸಂಹಾರ ಕೇಳಿ ಹೋಗಿ. 
ತುಂಬಾ ಸಮಯಗಳವರೆಗೆ ಗೆಳತಿ ಹೇಳಿದ ಕಥೆಯನ್ನು  ನಂಬಿ ದಾರಿಯಲ್ಲಿ ಬಿದ್ದ ಸ್ವಲ್ಪ ಭಿನ್ನ ಎಂದು ಕಾಣಿಸಿದ ಒಣಗಿಲು  ಕಡ್ಡಿಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಮನೆಗೆ ಬರುತ್ತಿದ್ದೆ.  ಇದು ಸಂಜೀವಿನಿ ಕಡ್ಡಿ ಇರಬಹುದೇ ಎಂದು ತಿಳಿಯುವ ಪ್ರಯೋಗಕ್ಕಾಗಿ  ಕೆಲವು ಇರುವೆಗಳನ್ನು ಸಾಯಿಸಿ  ಅದರ ಮುಖದೆದುರು ಕಡ್ಡಿ ಹಿಡಿದು ಜೀವ ಬರುವುದೇನೋ ಎಂದು ಕಾಯುತ್ತಿದ್ದೆ. ಒಮ್ಮೆ ಸಂಜೀವಿನಿ ಕಡ್ಡಿ ಕೈಗೆ ಸಿಕ್ಕಿದರೆ ಸತ್ತವರನ್ನೆಲ್ಲಾ ಬದುಕಿಸುವ ಕನಸು ಕಾಣುತ್ತಿದ್ದೆ. ಒಮ್ಮೆ ಬ್ಯಾಗಿನಲ್ಲಿ ನನ್ನ ಪುಸ್ತಕವನ್ನು ತೆಗೆಯಲು ಕೈ ಹಾಕಿದ ಅಮ್ಮನಿಗೆ ಸಿಕ್ಕಿದ್ದು ಈ ಕಸ ಕಡ್ಡಿಗಳ ರಾಶಿ.
ಆ ದಿನ ಜೀವ ಬಂದೇ ಬಿಟ್ಟಿತು..  ನಾನು ಸಾಯಿಸಿದ ಇರುವೆಗಳಿಗಲ್ಲ.. ಅಮ್ಮನ ಕೈಯಲ್ಲಿದ್ದ ಬೆತ್ತಕ್ಕೆ..!!

Friday, November 14, 2014

ಮ್..ಮ್.. ಅಂದರೆ ಅಮ್ಮನಾ..

ಭಾಷೆ ಅನ್ನುವುದು ಸಂವಹನದ ಮಾಧ್ಯಮ. ಒಬ್ಬನಿಂದ ಇನ್ನೊಬ್ಬನಿಗೆ ಭಾವನೆಗಳನ್ನು ಹಂಚಿಕೊಳ್ಳಲೆಂದೇ ಹುಟ್ಟಿಕೊಂಡದ್ದು. ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳು ಇರುವ ಕಾರಣ ಒಂದೇ ಭಾಷೆಯನ್ನು ಮಾತನಾಡುವ ಜನರ ಗುಂಪುಗಳು ಪ್ರತ್ಯೇಕವಾಗಿ ತಮ್ಮನ್ನು ಆ ಭಾಷೆಯ ಜನರೆಂದು ಗುರುತಿಸಿಕೊಳ್ಳತೊಡಗಿದರು. ಭಾಷೆಗಳಿಂದಲೇ ಮನುಷ್ಯ ಮನುಷ್ಯನಲ್ಲಿ ಗೋಡೆಗಳು ಎದ್ದವು. ತಮ್ಮ ತಮ್ಮಲ್ಲೇ ತಾನು ಮೇಲು ನೀನು ಕೀಳು ಎಂದು ಪ್ರಾರಂಭವಾದ  ಕಚ್ಚಾಟಗಳು ಇನ್ನೂ ಮುಂದುವರಿಯುತ್ತಲೇ  ಇದೆ.
ಆದರೆ ಇವುಗಳಿಗೂ ಮೀರಿದ, ಪ್ರಪಂಚದಾದ್ಯಂತ ಹೆಚ್ಚಿನೆಲ್ಲಾ ಮನೆಗಳಲ್ಲಿ ಬಳಸಲ್ಪಡುವ 'ಯೂನಿವರ್ಸಲ್ ಲಾಂಗ್ವೇಜ್' ಒಂದಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. ಇದಕ್ಕೆ ಯಾವುದೇ ವರ್ಣಮಾಲೆಗಳಿಲ್ಲ. ಇಂತಹ ಪದಾರ್ಥಕ್ಕೆ ಇಂತಹುದೇ ಶಬ್ಧಗಳೆಂದಿಲ್ಲ.ಒಂದೇ ಪದ ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸಬಹುದು. ಅತಿ ಕ್ಲಿಷ್ಟವೆಂದು ಕಾಣುವ, ಅರ್ಥೈಸಿಕೊಳ್ಳಲು ಕಠಿಣ ಎನಿಸುವ ಭಾಷೆಯಾದರೂ ಇದು ಎಲ್ಲರೂ ಮೆಚ್ಚುವ ಭಾಷೆ. 
ಈ ವಿಚಿತ್ರ ಭಾಷೆಯ ಬಗ್ಗೆ ಯಾರಿಗೂ ಯಾವುದೇ ರೀತಿಯ ಪೂರ್ವಾಗ್ರಹಗಳಿಲ್ಲದೇ ಇರುವುದು ಮತ್ತು ಇದನ್ನು ಕೇಳಿದವರೆಲ್ಲ ಆನಂದಿಸುವುದು ಇದರ ಹಿರಿಮೆಗೆ ಸಾಕ್ಷಿ. ಇದನ್ನು ಕಲಿಸುವ ಶಾಲೆಗಳಾಗಲೀ, ಭಾಷೆಯ ಬಳಕೆಯನ್ನು ಅಧ್ಯಯನ ಮಾಡುವ ವಿದ್ವಾಂಸರಾಗಲಿ ಇಲ್ಲದಿದ್ದರೂ ಎಲ್ಲೆಡೆ ಪಸರಿಸಿ ಸಂತಸವನ್ನುಂಟುಮಾಡುವ ಈ ಭಾಷೆಯನ್ನು  ತಿಳಿದವರು ನಮ್ಮ ನಿಮ್ಮ ಮನೆಗಳಲ್ಲೂ ಇದ್ದಾರೆ.
 
ಅರ್ರೆರೆ..! ಇದೇನಿದು ಎಂದು  ತಲೆ ಕೆರೆದುಕೊಳ್ಳಬೇಡಿ.

ಇದರ ಬಳಕೆದಾರರು ಮನೆಯೊಳಗಿರುವ ತೊದಲು ನುಡಿಯ ಪುಟಾಣಿಗಳು. ಇವುಗಳು ಪುಟ್ಟ ಮಕ್ಕಳಿರುವ ಎಲ್ಲಾ ಮನೆಗಳಲ್ಲಿ ಅವರವರ ಆಡುನುಡಿಗೆ ಹೊಂದಿಕೊಂಡು ಬೇರೆ ಬೇರೆಯಾಗಿ ಕೇಳಿದರೂ ಎಲ್ಲವನೂ ಒಂದೇ ಹೆಸರಿನಡಿಯಲ್ಲಿ ತರಬಹುದು. ಈ ಭಾಷೆ ಎಷ್ಟು ಆನಂದಕರವೋ ಅಷ್ಟೇ ಅಪಾಯಕಾರಿ ಕೂಡಾ.. ಬಹುಬೇಗ ನಿಮ್ಮನ್ನು ತನ್ನ ಪ್ರಭಾವಲಯದ ತೆಕ್ಕೆಗೆ ಎಳೆದುಕೊಂಡು ನೀವೂ ಕೂಡಾ ಹಾಗೇ ಮಾತನಾಡುವಂತೆ ಪ್ರೇರೇಪಿಸುತ್ತದೆ. ಈ ಭಾಷೆಯ ತಾಕತ್ತೇ ಅಂತಹದು. ಈಗ ನಿಮಗೂ ಅದರ ನೆನಪು ಬರುತ್ತಿರಬಹುದಲ್ಲ.. 

ಹೌದು.. ನಾನು ಬಾಲಭಾಷೆಯ ಬಗೆಗೇ ಹೇಳುತ್ತಿರುವುದು.  





ಮೊದಲಿಗೆ ಈ ಭಾಷೆಯನ್ನು  ಬೇರೆ ಮನೆಗಳಲ್ಲಿ ಕೇಳಿ ಮಾತ್ರ ತಿಳಿದಿದ್ದ ನಾನು 'ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು' ಎಂದು ಹಾಡಲು ಶುರು ಮಾಡಿ ಸ್ವಲ್ಪ ಸಮಯದಲ್ಲಿ ಈ ಭಾಷೆಯ ವಲಯಕ್ಕೆ ಸಿಲುಕಿ ನನ್ನ ಭಾಷೆಯನ್ನು ಮರೆಯುವಂತಾಯಿತು. 

ಮೊದಲಿಗೆ ಕೇವಲ ಬೆಳದಿಂಗಳ ನಗು ಸೂಸುತ್ತಿದ್ದ ಮಗ ತಿಂಗಳು ಉರುಳಿದಂತೆಲ್ಲಾ ವಿಚಿತ್ರ ಶಬ್ಧಗಳನ್ನು ಉಚ್ಚರಿಸತೊಡಗಿದ. ಆ ಶಬ್ಧಗಳಿಗೆ ಅರ್ಥ ಹುಡುಕುವುದು ಕಷ್ಟವೇ ಆಗಿದ್ದರೂ ನನಗೆ ಬೇಕಾದಂತೆ ಅರ್ಥ ಮಾಡಿಕೊಂಡು ಅದೇ ಸರಿ ಎಂದುಕೊಳ್ಳುತ್ತಿದ್ದೆ. 

ಮಗುವಿನ ಮೊದಲ ನುಡಿಯೇ ಅಮ್ಮಾ ಎಂದು ಅನೇಕ ಹಾಡುಗಳಲ್ಲೂ, ಸಿನಿಮಾದ ಸೆಂಟಿಮೆಂಟಲ್ ಡೈಲಾಗುಗಳಲ್ಲೂ ಕೇಳಿ ತಿಳಿದಿದ್ದ ನಾನು ನಮ್ಮ ಮನೆಯ ಮುದ್ದು ಕಂದ 'ಮ್..ಮ್..' ಎಂದೊಡನೆ ಪಾಯಸ ಮಾಡಿ ಇವತ್ತು ನನ್ನ ಮಗ ನನ್ನನ್ನು 'ಅಮ್ಮಾ' ಎಂದ ಎಂದು ಸಂತಸ ಪಟ್ಟಿದ್ದೆ. 

ಮರುದಿನದಿಂದ ಮತ್ತೆ ಮತ್ತೆ ಆ ಪದವನ್ನು ಅವನ ಬಾಂದ ಆಲಿಸುವಾಸೆ. 'ಅಮ್ಮಾ ಹೇಳು ಪುಟ್ಟೂ, ಹೇಳು ಕಂದಾ' ಎಂದು ಎಷ್ಟು ಪೂಸಿ ಮಾಡಿದರೂ ಹೇಳದ ಈ ಕಂದ ಊಟ ಮಾಡಿಸುವ ಹೊತ್ತಿಗೆ ಮನೆಯಿಂದ ಹೊರಗೆ ಕರೆದುಕೊಂಡು ಹೋದೊಡನೇ ಪಕ್ಕದ ಮನೆಯ ನಾಯ ಕಡೆಗೆ ಕೈ ತೋರಿಸುತ್ತಾ 'ಮ್.. ಮ್..' ಎಂದ. 

ಸರಿ ಹೋಗಲಿ .. ಸಣ್ಣದಲ್ಲವೇ.. ಕಲಿತುಕೊಳ್ತಾನೆ ಇನ್ನು ಎಂದು ಸುಮ್ಮನಾದೆ. 

ಒಂದೆರಡು ದಿನದಲ್ಲೇ ಇನ್ನೊಂದು ಅಕ್ಷರ ಶಬ್ಧ ರೂಪವನ್ನು ಪಡೆತು. ಅದು 'ಹ'

ಇದಕ್ಕೇನಿರಬಹುದಪ್ಪಾ ಅರ್ಥ ಅಂತೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವಾಗಲೇ ಆಫೀಸಿಗೆ ಹೊರಟ ಇವರ ಕಾಲಬಳಿ ನಿಂತು 'ಹ' ಎಂದ. ಹೋ.. ಇದು ಅಪ್ಪ ಎಂದು ಕರೆಯುವ ಹೊಸ ವಿಧಾನ ಎಂದುಕೊಂಡು ಅವರ ಸಂತಸಕ್ಕಾಗಿ ಇನ್ನೊಮ್ಮೆ ಪಾಯಸ ಮಾಡಲಾಯಿತು. 

ಸ್ವಲ್ಪ ದಿನಗಳಲ್ಲಿ ಇವನ ಶಬ್ಧಕೋಶಗಳು ಹಲವಾರು ಪದಗಳನ್ನು, ಇಡೀ, ಅರ್ಧ ಅಕ್ಷರಗಳನ್ನು ಪಡೆದುಕೊಂಡು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಈಗ 'ಅಮ್ಮಾ' ಎಂಬುದನ್ನು ನಾನು ಪ್ರಯತ್ನ ಪೂರ್ವಕವಾಗಿ ನನ್ನ ಕಡೆಗೆ ಬೆಟ್ಟು ಮಾಡಿಸಿ ತೋರಿಸಿ ಕಲಿಸಿದ್ದೆ.  ಈಗ ಮುಂದಿನ ಪಾಠವಾಗಿ ಅವನ ಹೆಸರನ್ನು ಹೇಳಿಕೊಡಲು ಪ್ರಯತ್ನ ಮಾಡುತ್ತಿದ್ದೆ. ಚೇ ಹೇಳು ಮುದ್ದು ಎಂದಾಗ ಹೇಳುತ್ತಿದ್ದ. ತ ಹೇಳಿ ಕೊಟ್ಟೆ. ಅದನ್ನೂ ಒಂದೇಟಿಗೆ ಕಲಿತ. ನ ಅಂತಲೂ ಹೇಳಿಕೊಟ್ಟೆ. ಅಯ್ಯೋ ಅದು ಕೂಡಾ ಹೇಳಿದ. ಇನ್ನೇನು ಕಷ್ಟ ಎಂದು ಅವನ ಕಡೆಗೆ ಅವನ ಬೆಟ್ಟು ತಿರುಗಿಸಿ  'ಚೇತನ್ ಹೇಳು..' ಎಂದೆ. 
'ಹೇಹನ್' ಎಂದು ಅವನ ಎದೆ ಅವನೇ ತಟ್ಟಿಕೊಂಡ.  

ಮಕ್ಕಳಿಗೆ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿ ಅವುಗಳನ್ನು ಗುರುತಿಸಲು ಕಲಿಸುವುದು ಸುಲಭ ಎಂದು ಯಾರೋ ಹೇಳಿದರು. ಅಂದಿನಿಂದ ನಮ್ಮ ಮನೆ ಪುಸ್ತಕ ಭಂಡಾರವೇ ಆಯಿತು, ವಿವಿಧ ಪ್ರಾಣಿ ಪಕ್ಷಿಗಳು,  ಹೂಗಳು ಇರುವ ಹಲವು ಪುಸ್ತಕಗಳು ಟೀಪಾಯನ್ನು ಅಲಂಕರಿಸಿದವು. 

'ನೋಡಿ ಕಲಿ ಮಾಡಿ ತಿಳಿ' ಎಂಬ ನುಡಿಯಲ್ಲಿ ನಂಬಿಕೆಟ್ಟು ಅವನೂ ಸ್ವತಂತ್ರವಾಗಿ ಕಲಿಯಲಿ ಎಂದು ಆ ಪುಟ್ಟ  ಕೈಗೆ ಪಕ್ಷಿಗಳ ಪುಸ್ತಕ ಕೊಟ್ಟು ನಾನು ನನ್ನ ಕೆಲಸಗಳಲ್ಲಿ ಮುಳುಗಿದ್ದೆ. ಮಗನ ಕಲಿಕಾ ಪ್ರಗತಿಯನ್ನು ನೋಡುವ ಸಲುವಾಗಿ ಅವನ ಹತ್ತಿರ ಬಂದಾಗ ಹಕ್ಕಿಗಳೆಲ್ಲಾ ತಮ್ಮ ರೆಕ್ಕೆ ಪುಕ್ಕ ಕಳೆದುಕೊಂಡು ಯಾವುದರ ಮೈಗೆ ಇನ್ಯಾವುದರ ತಲೆಯನ್ನೂ ಪಡೆದು ಇಡೀ ರೂಮಿನಲ್ಲಿ ಫ್ಯಾನಿನ ಗಾಳಿಗೆ ಸಿಕ್ಕ ಸಿಕ್ಕ ಕಡೆ ಹಾರಾಡುತ್ತಿದ್ದವು. ಒಂದೆರಡು ತುಂಡುಗಳು ಅವನ ಬಾಯೊಳಗೂ ಸೇರಿದ್ದವು. ಅದನ್ನೆಲ್ಲಾ ಗುಡಿಸಿ ಕಸದ ಬುಟ್ಟಿಗೆ ಸೇರಿಸಿದೆ. ಅಂದಿನಿಂದ ಅವನ ಸ್ವಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಹುಚ್ಚು ಕೆಲಸ ಬಿಟ್ಟು ಅವನಿಗೆ ಎಟುಕದಷ್ಟು ಎತ್ತರದಲ್ಲಿ ಪುಸ್ತಕಗಳನ್ನಿರಿಸಿದೆ. 

ಈಗ ನಾನು ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಾಣಿಗಳ ಚಿತ್ರವಿರುವ ಪುಸ್ತಕವನ್ನು ಎದುರಿರಿಸಿ, ಅವನ ಎರಡೂ ಕೈಗಳನ್ನು ನನ್ನ ವಶದಲ್ಲೇ ಇಟ್ಟುಕೊಂಡು ಚಿತ್ರ ತೋರಿಸಿ ಅವುಗಳ ಹೆಸರನ್ನು ಹೇಳಿಕೊಡಲಾರಂಭಿಸಿದೆ. ಹುಲಿ, ಸಿಂಹ ಚಿರತೆಗಳನ್ನೆಲ್ಲಾ ಮೌನವಾಗೇ ನೋಡಿದ ಅವನು ಖಡ್ಗ ಮೃಗದ ಚಿತ್ರ ಬಂದಾಗ ತುಟಿ ಅರಳಿಸಿದ. 
ಇದು ಖಡ್ಗಮೃಗ ಎಂದು ಹೇಳಿಕೊಟ್ಟೆ.
ಹಗ್ಗುಬುದ ಎಂದ. 

ಮಗ ಸಣ್ಣವನಾದ ಕಾರಣ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಲ್ಲೇ ನನ್ನೊಡನೆ ಕಾಲ ಕಳೆಯುತ್ತಿದ್ದ. ಇದನ್ನೂ ಕಲಿಕಾ ಕೇಂದ್ರವಾಗಿ ಉಪಯೋಗಿಸಬಾರದೇಕೆ ಎಂಬ ಆಸೆ ನನ್ನಲ್ಲಿ ಮೊಳಕೆಯೊಡೆದಿದ್ದೇ ಸರಿ. ಹೊಸ ಪಠ್ಯ ಸಿದ್ಧವಾಯ್ತು. ಅಡುಗೆ ಮನೆಯಲ್ಲಿ ಸಿಗುವ ಅವನಿಗೆ ಇಷ್ಟವಾದ ಪದಾರ್ಥದಿಂದಲೇ ವಿದ್ಯೆಯ ಓಂಕಾರ ಶುರು ಆಯಿತು. ಪುಟ್ಟ ಪುಟ್ಟದಾಗಿ ಬೆಲ್ಲ ತುಂಡು ಮಾಡಿ ಅವನೆದುರಿಗಿಟ್ಟು ಬೆಲ್ಲ ಎಂದು ಹೇಳಿಕೊಟ್ಟೆ. ಒಂದೆರಡು ದಿನ ತಿನ್ನುವುದು ಮಾತ್ರ ಮಾಡಿದ ಅವನು ಹೆಸರು ಹೇಳುವುದರ ಕಡೆಗೆ ಗಮನವೇ ಕೊಡಲಿಲ್ಲ. ಈಗ ನಾನು ಅದನ್ನು ದೂರದಲ್ಲಿಟ್ಟು ಇದೇನು ಹೇಳು, ಹೇಳಿದರೆ ಕೊಡುತ್ತೇನೆ ಎಂದು ಆಸೆ ತೋರಿಸಿದೆ. ಅವನೋ ನನ್ನಿಂದ ಬುದ್ಧಿವಂತ. ಬೆಲ್ಲ ಕೈಗೆ ಬರುವಲ್ಲಿಯವರೆಗೆ ಆ.. ಆ.. ಅಂತ ಅಳಲು ಶುರು ಮಾಡಿದವನು ನಿಲ್ಲಿಸಲೇ ಇಲ್ಲ.
ಮರುದಿನ ಬೆಲ್ಲದ ಪಾಠ ನಿಲ್ಲಿಸುವ ಅಂದಾಜಿನಲ್ಲಿದ್ದೆ. ಆದರೆ ವಿದೇಯ ವಿದ್ಯಾರ್ಥಿಯಂತೆ ಆ ಹೊತ್ತಿಗೆ ಅಡುಗೆ ಮನೆಗೆ ಬಂದ ಅವನು ಬೆಲ್ಲದ ಡಬ್ಬ ತೋರಿಸಿ ' ಮಿಂಗ' ಕೊ.. ಎಂದು ಕೈ ಚಾಚಿದ. ಅಲ್ಲಿಂದ ನಂತರ ನಾವು ಪಾಯಸಕ್ಕೆ ಬೆಲ್ಲದ ಬದಲು ಮಿಂಗ ಹಾಕಲು ಪ್ರಾರಂಭಿಸಿದೆವು. 
ಕಡ್ಲೆ ಎಂಬುದು 'ಹಂಡ'ವಾಯಿತು.  ಪ್ಯಾಂಟು 'ಹ್ಯಾಮು' ಆಗಿ ಬದಲಾಗಿ, ಪೆನ್ನು 'ಹಮ್ಮು' ಆತು. ಕುಳಿತುಕೋ ಎಂಬುದು 'ತೀಕ' ಎಂದಾತು. ಈಗ ಅವನು ಶಿಕ್ಷಕನಾದ. ನಾನು ಕಲಿಯುತ್ತಲೇ ಹೋದೆ. 

ಪ್ರಪಂಚದ ಅತಿ ಸೌಂದರ್ಯಯುತ ಭಾಷೆಯ ಬಗೆಗೆ ಆಗಿನ  ಅವನ ಜ್ಞಾನದ ಕಡಿಮೆ ಪಾಲು ಅನುಭವ ನನ್ನದಾದರೂ ಆ ಅನುಭವ ಕೊಟ್ಟ ಆನಂದದ ಬುತ್ತಿ ಜೀವನ ಪೂರ್ತಿ ನನ್ನೊಡನೆಯೇ ಇರುತ್ತದೆ. ಈಗ ಅವನು ದೊಡ್ಡವನಾಗಿ ಹಲವಾರು ಭಾಷೆಗಳನ್ನು ಒಂದಿಷ್ಟೂ ವ್ಯಾಕರಣ ತಪ್ಪಿಲ್ಲದೇ ಮಾತನಾಡಬಹುದು. ಆದರೆ ಆಗಿನ ಆ ಬಾಲಭಾಷೆ ನೀಡಿದ  ಸಂತಸದ  ಅನುಭೂತಿ ನನ್ನೊಳಗೆ ಈಗಲೂ ಜೀವಂತವಾಗಿ ಉಳಿದಿರುವುದು, ಆಗಾಗ ಮೆಲುಕು ಹಾಕುವಂತಾಗಿ ನಗೆ ತರಿಸುವುದು ಅದರ ಹೆಚ್ಚುಗಾರಿಕೆಯಲ್ಲದೆ ಇನ್ನೇನು..!!




Thursday, July 3, 2014

ಜ್ವರ ಬರುವ ಹಾಗಿದೇ..




ಘಟ್ಟ ಹತ್ತಿ ಇಳಿದಿದ್ದು ಬರೀ ನೆವ ಅಷ್ಟೇ.. ಅಲ್ಲಿ ಮಳೆಯೇ ಇಲ್ಲದೆ ಉರಿ ಬಿಸಿಲಿನಲ್ಲಿ ಅಡ್ಡಾಡಿ ಮನೆ ಸೇರಿದರೆ ಯಾಕೋ ಮೈಯೆಲ್ಲಾ ಬಿಸಿಯಾದಂತೇ, ಕಣ್ಣುಗಳು ಬೆಂಕಿಯುಗುಳುವಂತಾ ಅನುಭವ. 'ನಾಸಿಕವೂ ಸಂಪಿಗೆಯಂತೇ..' ಎಂದು ನನ್ನ ಮಾಮೂಲು ಕಿರುಚು ಕಂಠದಲ್ಲಿ ಹಾಡ ಹೊರಟರೆ ಅದು 'ದಾಸಿಕಬೂ ದಪ್ಪಿಗೆಯತ್ತೇ' ಎಂದು ಕೇಳಿಸಿತು. 

ಆಹಾ.. 'ಜ್ವರ ಬರುವ ಹಾಗಿದೆ.. ಹಾಸಿಗೆಯು ಹಾಕಿದೆ.. ಸುಮ್ಮನಲ್ಲಿ ಮಲಗು ಎಂದು ನನಗೆ ಹೇಳಬಾರದೇ' ರಾಗವಾಗಿ ಇವರಲ್ಲಿ ಕೇಳಿದೆ. ಹೀಗೆ ಕೇಳಿದರೆ ಸಂಗೀತ ಪ್ರಿಯರಾದ ಅವರ ತಲೆ ಅಲುಗೀತು ಎಂಬ ಆಸೆ ನನ್ನದು. "ನಂಗೆ ಒಂದ್ಲೋಟ ಬಿಸಿ ಚಹಾ ಮಾಡಿಕೊಟ್ಟು ಮತ್ತೆಷ್ಟು ಹೊತ್ತು ಬೇಕಾದ್ರು ನಿದ್ದೆ ಮಾಡು" ಎಂದು ಅಭಯ ಪ್ರದಾನ ಮಾಡಿದರು.

ಅಷ್ಟೇ ತಾನೇ.. 'ಬಸ್ ದೋ ಮಿನಿಟ್..  ಆದ್ರೆ ಆಮೇಲೆ ನಾನಾಗಿ ಏಳುವವರೆಗೆ ಏಳಿಸಬಾರದು..' ಅಂತ ಮೊದಲೇ ಆರ್ಡರ್ ಪಾಸ್ ಮಾಡಿ ನವಿಲಿನ ನಡಿಗೆಯಲ್ಲಿ ಅಡುಗೆ ಮನೆಗೆ ನಡೆದೆ.

ಆದರೆ ಅಷ್ಟೆಲ್ಲ ಸುಲಭದಲ್ಲಿ ಹಾಡು ಹಗಲೇ ನನಗೆ ನಿದ್ರಾ ಭಾಗ್ಯ ಒಲಿಯುವುದು ಯಾರಿಗಾದರೂ ಪಥ್ಯವಾದೀತೇ..?? ಮೊಬೈಲ್ ನಾನಿಲ್ಲಿದ್ದೇನೆ ಎಂದು ಬಡಿದುಕೊಳ್ಳತೊಡಗಿತು. 

ಎತ್ತಿ 'ಹಲೋ' ಎಂದರೆ ನನ್ನ ಬದಲಾದ ಸ್ವರದಿಂದ ವಿಚಲಿತಳಾದ ನನ್ನ ಗೆಳತಿ 'ನೀನು ನೀನೆಯೋ' ಎಂದು ಪರಮ ತತ್ವಜ್ಞಾನಿಗೂ ಅರ್ಥವಾಗದಂತಹ ಪ್ರಶ್ನೆಯೊಂದನ್ನು ನನ್ನ ಕಡೆಗೆ ಎಸೆದಳು. 

ನಾನೇಕೆ ಸುಮ್ಮನುಳಿಯಲಿ ಹೇಳಿ.. 'ನಾನು ನಾನೇ' ಎಂದೆ ಆಗಷ್ಟೇ ಮೋಕ್ಷ ಸಾಕ್ಷಾತ್ಕಾರವಾದ ಸ್ಟೈಲಿನಲ್ಲಿ. 

'ಏನಾಗಿದೆಯೇ ನಿನ್ನ ಸ್ವರಕ್ಕೆ.. ನನ್ನನ್ನು ಬಿಟ್ಟು ಆಗುಂಬೆ ಘಾಟಿ ಏರಿದೆಯಲ್ಲ..ಮೊದಲೇ ಗಿಣಿಗೆ ಹೇಳುವಂತೆ ಹೇಳಿದೆ. ನಂಗೀಗ ಆಫೀಸಿಗೆ ರಜೆ ಹಾಕುವಂತೆ ಇಲ್ಲ. ಸ್ವಲ್ಪ ದಿನ ಬಿಟ್ಟು ಒಟ್ಟಿಗೆ  ಹೋಗೋಣ. ನಾನೂ ಬರ್ತೀನಿ ಅಂತ .. ಕೇಳಿದೆಯಾ ನನ್ನ ಮಾತನ್ನು..  ನನ್ನ ಬೇಸರದ ನಿಟ್ಟುಸಿರಿನ ತಾಪ, ಶಾಪ ನಿನಗೆ ತಟ್ಟದೇ ಇದ್ದೀತೇ.. ಅನುಭವಿಸು ಈಗ' ಎಂದು ತನ್ನ ಹೊಟ್ಟೆ ಉರಿ ಕಾರಿದಳು. 

'ಇದೇನು ಮಹಾ ಬಿಡೇ..ಎಂತೆಂತಾ ಕಾಯಿಲೆಗಳಿಗೆ ಹೆದರಿದವಳಲ್ಲ ನಾನು .. ಈ ಪುಟುಗೋಸಿ ಜ್ವರಕ್ಕೆ ಹೆದರುವುದುಂಟೇ.. ಒಂಚೂರು ರೆಸ್ಟ್ ತೆಗೊಂಡ್ರೆ ಕಡಿಮೆಯಾಗುತ್ತೆ' ಎಂದು ಅವಳ ಹೊಟ್ಟೆ ಕಿಚ್ಚಿಗೆ ತಣ್ಣೀರೆರೆದೆ.

ಆದರೂ ಅವಳೆಲ್ಲಿ ಬಿಡುತ್ತಾಳೆ ..'ಮೈ ಕೈಯೆಲ್ಲಾ ನೋಯ್ತಾ ಇದೆಯೇನೇ..? ಕೈಕಾಲಿನ ಕೀಲುಗಳೆಲ್ಲ ಸರಾಗವಾಗಿ ಮಡಿಚಿ ಬಿಡಿಸಿ ಮಾಡಲಿಕ್ಕಾಗುತ್ತಾ..? ಉಸಿರಾಟ ಸರಿ ಇದೆ ಅಲ್ವಾ.. ?' ಕಣ್ಣಲ್ಲೇನು ನೀರು ಬರ್ತಿಲ್ಲಾ ತಾನೇ..? ಬಾಯಿ  ರುಚಿ ಸರಿ ಇದೆಯಾ, ಹೊಟ್ಟೆಗೆ ಆಹಾರ ಎಲ್ಲಾ ಸೇರುತ್ತೆ ತಾನೇ? ಎಂದೆಲ್ಲಾ ಡಾಕ್ಟರ್ ಮಾದರಿಯ ಎರಡನೇ ಸುತ್ತಿನ ಪ್ರಶ್ನಾವಳಿಗಳನ್ನು ನನ್ನ ಕಡೆಗೆ ಎಸೆದಳು. 
ಈಗ್ಯಾಕೋ ಕೊಂಚ ಗಾಭರಿಯಾದರೂ ತೋರಗೊಡದೆ, ನಿಧಾನಕ್ಕೆ ಎದ್ದು  ಕೈ ಕಾಲು ಮೇಲೆ ಕೆಳಗೆ ಮಾಡಿ , ಬಗ್ಗಿ ಎದ್ದು ಪರೀಕ್ಷಿಸಿಕೊಂಡು ಗಂಟು,  ಕೀಲುಗಳೆಲ್ಲಾ ಮೊದಲಿನಂತೆ ವರ್ಕ್ ಆಗ್ತಾ ಇದೆ ಎಂದು ದೃಢಪಡಿಸಿಕೊಂಡೆ. ಉಸಿರಾಟ ಸರಿಯಾಗಿ ನಡೆಯುತ್ತಾ ಇರುವುದರಿಂದ ತಾನೇ ನಾನು ಜೀವಂತವಾಗಿರೋದು..ಹಾಗಾಗಿ ಅದರ ಸಮಸ್ಯೆಯೇನೂ ಇಲ್ಲ. ಇನ್ನು ಈರುಳ್ಳಿ ಹೆಚ್ಚುವಾಗಲೂ ಕಣ್ಣಲ್ಲಿ ಹನಿ  ನೀರು ಬಾರದ ಗೂಬೆ ಕಣ್ಣಿನೋಳೆಂಬ ಖ್ಯಾತಿವೆತ್ತ ನನ್ನನ್ನು ದೂರದಲ್ಲಿ ನಿಂತು ಬರಬೇಕೋ ಬೇಡವೋ ಎಂದು ಕಾಡುತ್ತಿರುವ ಈ ಯಕಶ್ಚಿತ್ ಜ್ವರಕ್ಕೆ ಕಣ್ಣೀರಿಳಿಸುವ ಧೈರ್ಯ ಬಂದೀತೇ..ಕೊನೆಯದಾಗಿ ಅವಳು ಕೇಳಿದ ಆಹಾರದ ಸಂಗತಿ ಯಾಕೋ ಉತ್ತರಿಸಲು ಕೊಂಚ ಗಲಿಬಿಲಿ ಅನ್ನಿಸಿತು. ನಾಲ್ಕು ದೋಸೆ ಗುಳುಂ ಮಾಡಿ ಅದರ ಮೇಲೆ ಅರ್ಧ ಲೀಟರ್ ಜ್ಯೂಸ್ ಎಂಬ ದ್ರಾವಕವನ್ನೆರೆದುಕೊಂಡು ಸ್ವಲ್ಪ ಹೊತ್ತಾಗಿತ್ತಷ್ಟೇ, ಹಾಗಾಗಿ ಈಗ ಪರೀಕ್ಷೆ ಮಾಡಿ ಪುನಃ ಗಂಟಲಿನಲ್ಲಿ ಏನಾದರು ತುರುಕೋಣ ಎಂದರೆ ಸ್ಥಳವೇ ಇಲ್ಲ  !

ನನ್ನ ಉತ್ತರಕ್ಕಾಗಿ ಕಾದು ಕುಳಿತಿದ್ದ ಗೆಳತಿ.. ಯಾಕೇ .. ಏನಾಯ್ತು.. ಮಾತಾಡ್ತಾ ಇಲ್ಲ.. ಅಂದಳು.

'ಇಲ್ಲಾ ಕಣೇ, ಏನೂ ಇಲ್ಲ.. ಎಲ್ಲಾ ಸರಿಯಾಗೇ ಇದ್ದೀನಿ' ಅಂದೆ.

 ಅವಳು ಮತ್ತೆ ' ನಂಗ್ಯಾಕೋ ನಿಂಗೆ ಇಲಿ ಜ್ವರಾನೋ, ಮಂಗನ ಜ್ವರಾನೋ, ಕೋಳಿ ಜ್ವರಾನೋ ಬಂದಿರ್ಬೇಕು ಅಂತ ಡೌಟು ಕಣೇ.. ಯಾಕಂದ್ರೆ ನಿನ್ನನ್ನಿನ್ನೂ ಮನುಷ್ಯ ಜಾತಿ ಅಂತ ಯಾರೂ ಒಪ್ಕೊಳ್ಳೋಕೆ ಸಿದ್ಧ ಇಲ್ಲ ಅಲ್ವಾ ಅದಕ್ಕೆ ಹೇಳಿದೆ ಅಷ್ಟೇ.. ಯಾವ್ದಕ್ಕೂ ಡಾಕ್ಟ್ರ ಹತ್ರ ಹೋಗಿ ಒಂದು ಬ್ಲಡ್ ಚೆಕ್ ಅಪ್ ಮಾಡಿಸ್ಕೊಳ್ಳೇ ಅಂತ ಬಾಂಬೆಸೆದು ನಾನು ಬಯ್ಯಲು ಬಾಯ್ದೆರೆಯುವ  ಮೊದಲೇ  ಫೋನಿರಿಸಿದಳು.

ನನಗೂ ಜ್ವರಕ್ಕೂ ಅವಿನಾಭಾವ ನಂಟು. ಮೊದಲೆಲ್ಲ ಊರಲ್ಲಿ ಯಾರಿಗಾದರೂ ಜ್ವರ ಬಂದಿದೆ ಎಂಬ ಸುದ್ಧಿ ಗೊತ್ತಾದರೆ ಸಾಕು,ನನ್ನಮ್ಮ ನನಗೆ ಮಫ್ಲರು, ಶಾಲು, ಸ್ವೆಟರು ಹೊದೆಸಿ ಸನ್ಮಾನ ಮಾಡಲು ಪ್ರಾರಂಭಿಸುತ್ತಿದ್ದಳು. ನನಗೆ ಜ್ವರ ಬಂದರೆ ಬೇಗ ವಾಸಿ ಆಗೋದಿಲ್ಲ ಎಂಬುದು ಅದಕ್ಕೆ ಇನ್ನೊಂದು ಕಾರಣ. ಡಾಕ್ಟರರಾಗಿದ್ದ ಅಪ್ಪ ಕ್ಲಿನಿಕ್ಕಿನಿಂದ ಬಂದ ಕೂಡಲೇ ಅವರ ಕಿಟ್ ನಿಂದ ನಾಲ್ಕಾರು ಬಣ್ಣ ಬಣ್ಣದ ಮಾತ್ರೆಗಳನ್ನು ತೆಗೆದಿರಿಸುತ್ತಿದ್ದಳು.ತಣ್ಣೀರ ಪಟ್ಟಿ ಕಟ್ಟಲು ಬಟ್ಟೆ ರೆಡಿ ಮಾಡುತ್ತಿದ್ದಳು. ಅಮ್ಮ ಜ್ವರ ಮನೆಯೊಳಗೆ ಇಣುಕದ ಹಾಗೆ ಇಷ್ಟೆಲ್ಲಾ ತಯಾರಿ ನಡೆಸಿದ್ದರೂ ನನಗೆ ಹೇಗೋ ಜ್ವರ ಬಂದು ಬಿಡುತ್ತಿತ್ತು.ಆಗ ಅಮ್ಮ, ನಂಗೊತ್ತಿತ್ತು .. ಇವ್ಳಿಗೆ ಜ್ವರ ಬಂದೇ ಬರುತ್ತೆ ಅಂತ .. ನೋಡಿ ನಾನು ಮೊದ್ಲೇ ಎಲ್ಲಾ ರೆಡಿ ಮಾಡಿದ್ದಕ್ಕಾಯ್ತು" ಅಂತ ಹೇಳುತ್ತಾ  ತನ್ನ ಸಿದ್ಧತೆಗಳನ್ನೆಲ್ಲಾ ನನ್ನ ಮೇಲೆ ಪ್ರಯೋಗಿಸಲು ಪ್ರಾರಂಭಿಸುತ್ತಿದ್ದಳು. 

ಮೊದಲಿಗೆ  ಅಮ್ಮ ನನ್ನ ಕೈಗೆ ಬಣ್ಣ ಬಣ್ಣದ ಮಾತ್ರೆಗಳನ್ನು  ತಂದು ತುರುಕುತ್ತಿದ್ದಳು. ಆ ಮಾತ್ರೆಗಳ ಬಣ್ಣವೇನೋ ಸುಂದರವಾಗಿದ್ದರೂ ಅದರ ಕಹಿ  ಮತ್ತು ವಾಸನೆಯನ್ನು ತಡೆಯಲಾರದೇ ಅವಳ ಕಣ್ಣು ತಪ್ಪಿಸಿ ಮೆಲ್ಲನೆ ಮಂಚದ ಕೆಳಗೆ ಎಸೆದುಬಿಡುತ್ತಿದ್ದೆ. ಹೀಗೆ  ಹೊತ್ತು ಹೊತ್ತಿಗೆ ನನ್ನ ಕೈ ಸೇರುತ್ತಿದ್ದ ಮಾತ್ರೆಗಳೆಲ್ಲ ಬೆಚ್ಚಗೆ ಮಂಚದಡಿ ಮಲಗುತ್ತಿದ್ದ ಕಾರಣ ನನ್ನ ಜ್ವರವೂ ನನ್ನ ಜೊತೆಯೇ ಉಳಿದುಕೊಳ್ಳುತ್ತಿತ್ತು.ಮತ್ತೆ ಅಮ್ಮನ ತಣ್ಣೀರು ಪಟ್ಟಿ ಎಂಬ ಶಿಕ್ಷೆ. ಬೆಚ್ಚಗೆ ಹೊದ್ದರೂ ಚಳಿಯಾಗಿ ಗಡಗಡನೆ ನಡುಗುವ ನನ್ನ ತಲೆಗೆ ತಣ್ಣೀರಲ್ಲಿ ಅದ್ದಿದ ಬಟ್ಟೆ ಇಟ್ಟಾಗ ನರಕ ದರ್ಶನವಾಗುತ್ತಿತ್ತು. 
ಆದರೂ ಅದಕ್ಕೆಲ್ಲ ತಣಿಯದ ನನ್ನ ಜ್ವರಕ್ಕೆ  ಅಪ್ಪನೇ ಮದ್ದು ಮಾಡಬೇಕಿತ್ತು. ಅಪ್ಪನ ಟ್ರೀಟ್ ಮೆಂಟ್ ಅಂತೂ ಇನ್ನೂ ಹಿಂಸೆಯದ್ದು.  ನನ್ನ ನರಪೇತಲ ಮೈಯಲ್ಲಿ ಮಾಂಸ ಅನ್ನುವುದೇನಾದ್ರು ಇದೆಯಾ ಅಂತ ಹುಡುಕಿ 'ವ್ಹೋ' ಎಂದು ಅಳುತ್ತಿದ್ದ ನನ್ನನ್ನು ಸಮಾಧಾನಿಸುತ್ತಲೇ ಸೂಜಿ ಚುಚ್ಚುತ್ತಿದ್ದರು. 

ಒಮ್ಮೆ ಮಂಚದ ಕೆಳಗೆ ಇಟ್ಟಿದ್ದ ಹಳೆ ಪೆಟ್ಟಿಗೆಗಳ ಸ್ಥಳಾಂತರವೆಂಬ ಉತ್ಕತನಕ್ಕೆ, ಜಿರಳೆಗಳು ತಿಂದು ಅಳಿದುಳಿದಿದ್ದ ಮಾತ್ರೆಗಳ ಪಳೆಯುಳಿಕೆಗಳು ಸಿಕ್ಕಿದ್ದವು. ಹೀಗೆ ನನ್ನ 'ಲಾಂಗ್ ಲಿವ್' ಜ್ವರದ ಕಾರಣ ಜಗಜ್ಜಾಹೀರಾಗಿತ್ತು. ಅದರ ನಂತರ ನಾನು ಮಾತ್ರೆ ನುಂಗಿ ಆಗುವವರೆಗೇ ಪಕ್ಕದಲ್ಲೇ ನಿಂತಿರುತ್ತಿದ್ದ ಅಮ್ಮ, ನುಂಗಿ ಆಯಿತು ಎಂದರೂ ಬಿಡದೇ ಯಶೋದೆ ಕೃಷ್ಣನಿಗೆ ಹೇಳಿದಂತೆ ಬಾಯಿ  ತೆರೆದು ತೋರಿಸು ಎನ್ನುತ್ತಿದ್ದಳು. ಅಲ್ಲೆಲ್ಲೂ ಮಾತ್ರೆ ಉಳಿದುಕೊಂಡಿಲ್ಲ ಎಂದು ನಿಶ್ಚಯವಾದ ಮೇಲೆಯೇ ನಿರ್ಗಮಿಸುತ್ತಿದ್ದಳು.    

ಆದರೂ ನನಗೆ ಈ ಜ್ವರ ಅಂದರೆ ಯಾಕೋ 'ಪ್ಯಾರ್ಗೆ ಆಗ್ಬಿಟ್ಟೈತೆ'.

ಅದಕ್ಕೂ ಕಾರಣಗಳಿಲ್ಲದಿಲ್ಲ.  ಜ್ವರ ಎಲ್ಲರನ್ನೂ ಕಾಡುವ ರೋಗವಾದರೂ, ಅದರಿಂದ ಆಗುವ ಉಪಕಾರಗಳ ಬಗ್ಗೆ ನಿಮಗಿನ್ನೂ ಗೊತ್ತಿಲ್ಲ ಅಂತ ಕಾಣುತ್ತೆ ಹಾಗಾಗಿ ಜ್ವರವನ್ನೂ ಇಷ್ಟ ಪಡುವವರಿದ್ದಾರೆಯೇ ಎಂಬ ಸಂದೇಹ ನಿಮ್ಮೊಳಗಿರುವುದು..!!
ನಾನಾಗ ಆರನೆಯ ತರಗತಿಯಲ್ಲಿದ್ದೆ. ಗಣಿತ ಹೇಳಿಕೊಡಲು ಹೊಸದಾಗಿ ಒಬ್ಬರು ಟೀಚರ್ ಬಂದಿದ್ದರು. ಅವರು ಗಣಿತವನ್ನು  ಬೋರ್ಡಿನಲ್ಲಿ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ, ವಿದ್ಯಾರ್ಥಿಗಳ ಬೆನ್ನಿನ ಮೇಲೆ ಕೋಲಿನಿಂದ ಬರೆ ಎಳೆದು ಹೇಳಿಕೊಡುತ್ತಿದ್ದರು. ಹಾಗಾಗಿ ಅವರ ಕ್ಲಾಸು ಎಂದರೆ ಎಲ್ಲರಿಗೂ ನಡುಕ. ಇನ್ನು ಗಣಿತ ಟೆಸ್ಟ್ ಅನ್ನುವುದು ಹೇಗಿರಬಹುದು ನೀವೇ ಊಹಿಸಿ. 'ನಾಡಿದ್ದು ಟೆಸ್ಟ್ ಇದೆ ಎಲ್ಲರೂ ಸರಿ ಕಲಿತು ಬನ್ನಿ' ಎಂದು ಬೆತ್ತ ಝಳಪಿಸುತ್ತಾ ನುಡಿದು ಕ್ಲಾಸಿನಿಂದ ಹೊರ ಹೋಗಿದ್ದರು ಆ ದಿನ.  ನನ್ನ ಅದೃಷ್ಟಕ್ಕೆ ಸರಿಯಾಗಿ ಟೆಸ್ಟ್ ಎಂದು ಹೇಳಿದ ದಿನ ನಾನು ಜ್ವರದಿಂದ ಮುಸುಕೆಳೆದು ಹಾಸಿಗೆಯಲ್ಲಿ ಕನಸು ಕಾಣುತ್ತಾ ಮಲಗಿದ್ದೆ. ಟೆಸ್ಟ್ ಮುಗಿದು ಆನ್ಸರ್ ಶೀಟ್ ಹಿಡಿದು ಕ್ಲಾಸಿಗೆ ಎರಡು ಬೆತ್ತದ ಸಮೇತವೇ ಬಂದಿದ್ದರು. ಆ ದಿನ ಇಡೀ ಕ್ಲಾಸಿನಲ್ಲಿ ಧೈರ್ಯವಾಗಿ ತಲೆ ಎತ್ತಿ ಕೂತವಳೆಂದರೆ ನಾನೊಬ್ಬಳೇ.. ಇದು ಜ್ವರದ ಮಹಿಮೆಯಲ್ಲದೇ ಇನ್ನೇನು ಹೇಳಿ. 

ಇನ್ನೊಮ್ಮೆ ನಮ್ಮನೆಗೆ 'ನಾರದನ ಹೆಣ್ರೂಪ' ಎಂದೇ ಪ್ರಸಿದ್ಧಿ ಹೊಂದಿದ್ದ ಕಾಶತ್ತೆ  ಬರ್ತೀನಿ ಅಂದಿದ್ದರು. ಅವರು ಯಾರದೇ ಮನೆಗೆ ನುಗ್ಗಿದರೂ ಸಾಕು ಮನೆಯೊಳಗೆ ಮಾತಿನ ಚಕಮಕಿ ಗ್ಯಾರಂಟಿ. 'ನಿನ್ನ ಬಗ್ಗೆ ಅವ್ಳು ಹೀಗೆ ಹೇಳಿದ್ಲು, ಕೇಳಿ ನಂಗೆ ಮನಸ್ಸು ತಡೀಲಿಲ್ಲ ಕಣೇ ಹೇಳೋಣಾ ಅಂತ ಇಲ್ಲಿಗೆ ಬಂದೆ ನೋಡಮ್ಮಾ..'  ಎಂದು  ಆಣೆ ಪ್ರಮಾಣಗಳ ಸಾಕ್ಷಿಗಳೊಂದಿಗೆ ನಂಬುವಂತೆ ಮಾತನಾಡುವ ಚಾಕಚಕ್ಯತೆ ಹೊಂದಿದವರು ಅವರು. ಅಂತವರು ಬಂದು ಹೋದರೆ ತ್ಸುನಾಮಿಗಿಂತ ಹೆಚ್ಚಿನ ಹಾನಿ ನಿಶ್ಚಿತ ಎಂದು ತಿಳಿದ ನಾನು 'ಅಯ್ಯೋ ಕಾಶತ್ತೇ.. ಇಲ್ಲಿ ಎಲ್ರಿಗೂ ಜೋರು ಜ್ವರ ಕಣ್ರೀ..ನೀವು ಬರ್ತೀನಿ ಅಂದಿದ್ದು ತುಂಬಾನೇ ಕುಶಿ  ಆಯ್ತು ನೋಡಿ. ಕಷ್ಟಕ್ಕಾಗಬೇಕಾದರೆ ನಮ್ಮವರೇ ಆಗ್ಬೇಕು ಅಲ್ವಾ.. ಬನ್ನಿ .. ಎಲ್ರೂ ಹಾಸಿಗೆ ಹಿಡಿದಿದ್ದೀವಿ..  ಅದೇನೋ ಚಿಕೂನ್ ಗುನ್ಯಾ ಅಂತೆ. ಬಂದು ನಮ್ಗೆಲ್ಲ ಒಂದಿಷ್ಟು ಗಂಜೀನಾದ್ರು ಬೇಯ್ಸಿ  ಹಾಕಿ' ಎಂದೆ.  ಕಾಶತ್ತೆ ಬಾರದೇ ಈಗೊಂದೆರಡು ವರ್ಷದ ಮೇಲಾಯಿತು. ಇದೂ ಜ್ವರದ ಹಿರಿಮೆಯೇ ತಾನೇ.. 

ಇದಿಷ್ಟೇ ಆಗಿದ್ದರೆ ಇದೇನು ಮಹಾ ಅನ್ನಬಹುದಿತ್ತು .. ಆದರೆ ನನ್ನ ಜ್ವರದ ಮಹಿಮೆ ಇಷ್ಟಕ್ಕೆ ನಿಲ್ಲುವುದಿಲ್ಲ. 

ಅದೇನಾಯ್ತೋ ಗೊತ್ತಿಲ್ಲ ದೇವರು ದಿಂಡರನ್ನೆಲ್ಲ ಲೆಕ್ಕಕ್ಕಿಂತ ಹೆಚ್ಚು ಪಕ್ಕಕ್ಕೆ ಸೇರಿಸಿಕೊಳ್ಳದ ನಮ್ಮಜ್ಜ ಅಜ್ಜಿಗೆ ಇದ್ದಕ್ಕಿದ್ದಂತೆ ಕಾಶಿ ಯಾತ್ರೆಯ ಹಂಬಲ ಸುರು ಆಯಿತು. ಯಾರ್ಯಾರನ್ನೋ ಕೇಳಿ ಅಲ್ಲಿಗೆ ಹೋಗುವ ಬಸ್ಸಿನ ಹೆಸರು ದಾರಿಗಳನ್ನೆಲ್ಲ ಗುರುತು ಹಾಕಿಕೊಂಡಿದ್ದರು. ಆಗೆಲ್ಲ ಈಗಿನಂತೆ ಕ್ಷಣಾರ್ಧದಲ್ಲಿ ಸುದ್ಧಿಗಳು ಒಂದೂರಿಂದ ಇನ್ನೊಂದೂರಿಗೆ ಹೋಗುತ್ತಿರಲಿಲ್ಲ. ನಮಗೆ ಆ ಸುದ್ಧಿಯ ವಿವರದ ಕಾಗದ ಬಂದು ತಲುಪುವ ಮೊದಲೇ ನಾವು ರಜೆಗೆ ಅಜ್ಜನ ಮನೆಗೆ ಹೋಗುವುದು ಎಂದು ಹೊರಟೇ ಬಿಟ್ಟಿದ್ದೆವು. ನಮ್ಮನ್ನು ಕಂಡು ಅಜ್ಜ ಅಜ್ಜಿಗೆ ಕುಶಿ  ಆಗಿ ಕಾಶಿ ಯಾತ್ರೆಗೆ ನಾವೂ ಅವರೊಡನೆ ಹೋಗುವುದೆಂದಾಯಿತು.

ನಾಳೆ ಹೊರಡುವ ದಿನ ಎಂದಾದರೆ ಅದರ ಮೊದಲಿನ ದಿನವೇ ನನ್ನ ಪ್ರೀತಿಯ ಜ್ವರ ನಾನು ಬರ್ತೀನಿ ಅಂತ ನನ್ನನ್ನು ಹಿಡಿದುಕೊಂಡಿತು. ಅದೂ ಸಾಮಾನ್ಯ ಜ್ವರ ಅಲ್ಲ. ಮೈಯೆಲ್ಲ ಕೆಂಡದಂತೆ ಸುಡುತ್ತಿತ್ತು. ಹೀಗಾಗಿ ನನ್ನನ್ನು ಬಿಟ್ಟು ಹೋಗುವಂತೆಯೂ ಇಲ್ಲ ಕರೆದುಕೊಂಡು ಹೋಗುವಂತೆಯೂ ಇಲ್ಲ ಎಂಬ ಸಂದಿಗ್ದ ಎದುರಾಯಿತು. ಅಜ್ಜಿ ಆಗ ' ಎಂತ ಯಾತ್ರೆಯೂ ಬೇಡ, ಕೂಸಿಂಗೆ ಮೊದಲು ಉಷಾರಾಗಲಿ, ಮತ್ತೆಲ್ಲ ಹೋಪಲ್ಲಿಗೆ ಹೋಪದು" ಎಂದು ತೀರ್ಪಿತ್ತು ಕಟ್ಟಿದ್ದ ಗಂಟು ಮೂಟೆ ಬಿಚ್ಚಿ ನನ್ನ ಸೇವೆಗೆ ನಿಂತರು. ಒಂದೆರಡು ದಿನದಲ್ಲಿ ಜ್ವರ ಕಡಿಮೆಯಾಯಿತಾದರೂ ಪೂರ್ತಿ ಹೋಗಿರಲಿಲ್ಲ. ಅಜ್ಜ ಡಾಕ್ಟರ್ ಹತ್ತಿರ ಮದ್ದಿಗೆ ಹೋಗಿದ್ದರು. ಬರುವಾಗ ತಂದ ಸುದ್ಧಿ ಹೆದರಿಕೆ ಹುಟ್ಟಿಸುವಂತಿತ್ತು. ಅದೇನೆಂದರೆ ಆ ದಿನ ಕಾಶಿ ಯಾತ್ರೆಗೆ ನಾವೆಲ್ಲ ಹೋಗಬೇಕಿದ್ದ ಬಸ್ಸು ಪಲ್ಟಿ ಹೊಡೆದು ಕೆಲವರು ಸತ್ತು ಹಲವರಿಗೆ ಗಂಭೀರ ಏಟಾಗಿತ್ತು.ಅಲ್ಲಿಯವರೆಗೆ ನನ್ನ ಜ್ವರಕ್ಕೆ ಬಯ್ಯುತ್ತಿದ್ದ ಎಲ್ಲರೂ ಜೀವ ಉಳಿಸಿದ  ಅದನ್ನು ಹೊಗಳಿದ್ದೇ ಹೊಗಳಿದ್ದು. 

ಇಂತಿರ್ಪ  ಜ್ವರ ಬಂದರೆ ಬೇಡ ಅನ್ನೋರು ಉಂಟೇ ನೀವೇ ಹೇಳಿ. ಅಯ್ಯೋ ಇದು ಜ್ವರ ಏರಿ ಹೇಳ್ತಾ ಇರೋ ಬಡಬಡಿಕೆ ಅಲ್ಲಾ.. ನನ್ನ ನಂಬಿ ಪ್ಲೀಸ್.. 

Friday, February 21, 2014

ಕಲೆಯ ಬಲೆ



ಎಲ್ಲರೂ ಕಲೆಯ ಬಗ್ಗೆ ಮಾತನಾಡುತ್ತಾ ಕುಳಿತಿದ್ದರೆ ಏನನ್ನೂ ಅರಿಯದ ನಾನು ಪೆಚ್ಚು ಮುಖ ಹಾಕಿಕೊಂಡೇ ಕೇಳಿಸಿಕೊಳ್ಳುತ್ತಿದ್ದೆ. ಹಿರಿಯರೊಬ್ಬರು ' ಅಲ್ಲಮ್ಮಾ ಮನೆಯೊಳಗೇ ಕುಳಿತರೆ ಕಲೆಯ ಬಗ್ಗೆ ಏನು ತಿಳಿಯುತ್ತೆ ನಿಂಗೆ? ಸ್ವಲ್ಪ ಹೊರಗಿನ ಲೋಕ ನೋಡು..ಅದಕ್ಕೇನೂ ಹೆಚ್ಚು ದೂರ ಹೋಗಬೇಕಿಲ್ಲ. ನಮ್ಮೂರಿನ ದೇವಸ್ಥಾನಗಳೇ ಸಾಕು ಮೊದಲ  ಪರಿಚಯಕ್ಕೆ' ಎಂದರು. ಹಿರಿಯರ ಮಾತಿಗೆ ಎದುರಾಡುವುದುಂಟೇ ಎಂದು ಇವರೆದುರು ಒದರಾಡಿ ಒಂದು ದಿನ ಪುರುಸೊತ್ತು  ಮಾಡಿಕೊಂಡೆ. ಹೊರಟಿತು ನನ್ನ ಸವಾರಿ ಊರ ಹೊರಗಿನ ದೇವಸ್ಥಾನ ನೋಡಲು 

ಹಳೆಯ ಕಾಲದ ಪುಟ್ಟ ದೇಗುಲ 'ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು' ಎಂದು ಹಾಕಿದ್ದ ಫಲಕ ಕಣ್ಮನ ಸೆಳೆತು. ಒಳಗೆ ಕಾಲಿಟ್ಟಂತೆ ಕಂಡ ಲೋಕವೋ ವರ್ಣನಾತೀತ. ಆದರೂ ನೀವಿಲ್ಲಿ ಕೇಳಲು ಕಾತರರಾಗಿರುವುದರಿಂದ ನನಗೆ ತಿಳಿದ ಮಟ್ಟಿಗೆ ವರ್ಣಿಸುವುದು ಅನಿವಾರ್ಯ. ಎತ್ತ ನೋಡಿದರತ್ತ ಕಲೆಯೋ ಕಲೆ. ಮೊದಲು ಕಣ್ಣಿಗೆ ಬಿದ್ದಿದ್ದು ಗುಡಿಯಿಂದ ಹೊರಗಿದ್ದ ಮಂಡಿಯೂರಿ ಮಲಗಿದ್ದ ನಂದಿ.ನಂದಿಯ ಹೊಟ್ಟೆ ಬೆನ್ನು ಎಲ್ಲಾ ಕಡೆ ಭಕ್ತರು ಹಣೆಗೆ ಹಚ್ಚಿದ ನಂತರ ಕೈಯಲ್ಲುಳಿದ ಕುಂಕುಮ , ಗಂಧಗಳ ಕಲೆ. ಸ್ವಲ್ಪ ಮುಂದೆ ಹಚ್ಚಿಟ್ಟ ದೀಪದ ಎಣ್ಣೆ ನೆಲದಲ್ಲೆಲ್ಲಾ ಹರಡಿ ಆದ ಕಪ್ಪಗಿನ ಕಲೆ. ಅತ್ತಿತ್ತ ಇರುವ ಗೋಡೆಗಳ ಮೇಲೆಲ್ಲ ಭಕ್ತಿ ಹೆಚ್ಚಾದ ಜನರ ಉಗುರಿನಿಂದರಳಿದ ಗೋಡೆ ಕಲೆ. ಹಳೆಯ ಕಾಲದ ಕಲ್ಲಿನ ಕುಸುರಿಗಳ ಸಂದು ಗೊಂದುಗಳಲ್ಲೆಲ್ಲಾ ಜೇಡನ ಬಲೆ.. ಆಹಾ ಧನ್ಯಳಾದೆ ಎಂದುಕೊಂಡು ಈ ಅಚ್ಚರಿಯನ್ನು ಅಡಗಿಸಿಕೊಳ್ಳುತ್ತಾ ಇನ್ನೊಂದು ಬಾಗಿಲಿನಿಂದ ಹೊರಗೆ ಬಂದರೆ ಹಾದಿಯ ಎರಡೂ ಬದಿಗಳಲ್ಲಿ ತಾಂಬೂಲದ ಪಿಚಕಾರಿ ಕಲೆ. ಲಂಡನ್ನಿನ ಮಾಡರ್ನ್ ಆರ್ಟ್ ಗ್ಯಾಲರಿಗೂ ಸಡ್ಡು ಹೊಡೆಯುವಂತಿದ್ದ ಇದನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಂಡೆ. ಧ್ಯಾನಸ್ಥ ಮನಸ್ಸಿನಿಂದ ಹೊರಬಂದೆ.

ಹಾಗೆಂದು ನನಗೆ ಕಲೆಯ ಬಗ್ಗೆ ಏನೂ ತಿಳಿದಿಲ್ಲ ಎಂದು ನೀವಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಎಂದು ಹೇಳಬಯಸುತ್ತೇನೆ. ಏಕೆಂದರೆ ನಾನು ಹುಟ್ಟು ಕಲಾವಿದೆ ಎಂದು ಬಹು ಜನರಿಗೆ ತಿಳಿದಿಲ್ಲ. ಚಿಕ್ಕವಳಿರುವಾಗ ಅಲ್ಲಿಲ್ಲಿ ಬಿದ್ದೆದ್ದು ಹಾಕಿಕೊಂಡ ಅಂಗಿಗೆ ಕಲೆ ಮಾಡಿಕೊಳ್ಳುತ್ತಿದ್ದೆ. ಸ್ವಲ್ಪ ದೊಡ್ಡವಳಾದ ಮೇಲೆ ನನ್ನ ಕಾರ್ಯಕ್ಷೇತ್ರ ಮನೆಯ ಹೊರಗೆಯೂ ಹಬ್ಬಿ ತೋಟದೊಳಗೆಲ್ಲಾ ಸುತ್ತಿ ಸುಳಿದು ತೊಳೆದರೂ ಹೋಗದ ಬಾಳೆಕಾ
ಯಿಯ ಕಲೆ ಗೇರುಹಣ್ಣಿನ ಕಲೆಗಳನ್ನು ಅಂಗಿಗಳಿಗೆ ಚಿತ್ತಾರವಾಗಿಸುತ್ತಿದ್ದೆ. ಒಮ್ಮೆಯಂತೂ ಗೇರುಬೀಜ ತಿನ್ನುವ ಆಸೆಗೆ ಬಿದ್ದು ಹಸಿ ಬೀಜವನ್ನು ಹಾಗೇ ಬಾಗೆ ಹಾಕಿ ಜಗಿದಿದ್ದೆ. ಅದರ 'ಸೊನೆ' ಬಾಯಿಯ ಸುತ್ತೆಲ್ಲಾ ಹುಣ್ಣುಗಳನ್ನುಂಟು ಮಾಡಿ ಕೆಲ ಕಾಲ ಮುಖದಲ್ಲೂ ನನ್ನ ಕಲಾ ರಸಿಕತೆಯನ್ನು ಪ್ರದರ್ಶಿಸುತ್ತಿತ್ತು. 
ಕೆಲವೊಮ್ಮೆ ನನ್ನಿಂದಲ್ಲದೇ ಪರರೂ ನನ್ನನ್ನು ಕಲಾಮಾಧ್ಯಮವಾಗಿ ಬಳಸಿಕೊಂಡು ಕಾಫಿಯೋ ಚಹಾವೋ ತುಂಬಿದ ಕಪ್ಪನ್ನು ನಾನು ಗಟ್ಟಿಯಾಗಿ  ಹಿಡಿದುಕೊಳ್ಳುವ ಮುನ್ನವೇ ಅವರು ಕೈ ಬಿಟ್ಟು ನನ್ನ ಬಟ್ಟೆಯ ಮೇಲೆ ಭೂಪಟಗಳಂತಿರುವ ಶಾಶ್ವತ ರಚನೆಗಳು ಮೂಡುತ್ತಿದ್ದವು. ಹಾಕಿದ ಹೊಸ ಬಟ್ಟೆಯ ಗತಿ ಹೀಗಾದ ದಿನ ಅಮ್ಮನ ಕೈಯ ಬೆರಳುಗಳು ಬೆನ್ನಿನಲ್ಲಿ ಮೂಡಿ ಅಲ್ಲೊಂದು ಹೊಸ ಕಲಾಪ್ರಕಾರವನ್ನು ತೋರ್ಪಡಿಸುತ್ತಿತ್ತು.  ಈ ಹಳೆಯ ಕಥೆಗಳೆಲ್ಲಾ ನಾನು ಕಲೆಯ ಬಗ್ಗೆ ಅಜ್ಞಾನಿಯೇನಲ್ಲ ಎಂದುದನ್ನು ಹೇಳಲಷ್ಟೇ ತಿಳಿಸಿದ್ದು. 

ಇತ್ತೀಚೆಗೊಮ್ಮೆ ನನ್ನ ಕಲಾ ಮನಸ್ಸನ್ನು ಅರಿತ ಸಹೃದಯರೊಬ್ಬರು ' ಕಲೆಯ ಬಗ್ಗೆ' ನಮ್ಮ ಯುವ ಮಂಡಲದಲ್ಲಿ ಕಾರ್ಯಕ್ರಮವಿದೆ. ಬರಲೇಬೇಕು.. ನೀವು ಮಾತ್ರವಲ್ಲ ನಿಮ್ಮ ಬಂಧು ಮಿತ್ರರನ್ನೂ ಕರೆತರಬೇಕು ಎಂದು ಒತ್ತಾಯಿಸಿದ್ದರು. ಮೊದಲೊಮ್ಮೆ ಟಿ ವಿ ಯಲ್ಲಿ ಯಾವ ಕಲೆಗಳನ್ನು ತೆಗೆಯಲು ಯಾವ ವಸ್ತುಗಳನ್ನು ಬಳಸಬೇಕೆಂದು ವಿವರಿಸುವ ಕಾರ್ಯಕ್ರಮವೊಂದು ಬಂದಿತ್ತು. ಆದರೆ ಆ ಹೊತ್ತಿಗೆ ಸರಿಯಾಗಿ ವಿದ್ಯುತ್ ಪೂರೈಕೆ ನಿಂತು ಹೋಗಿ ' ..... ತಿಳಿಸಿಕೊಟ್ಟ ಇವರಿಗೆ ವಂದನೆಗಳು' ಎನ್ನುವಾಗ ವಿದ್ಯುತ್ ಪೂರೈಕೆ ಮರಳಿತ್ತು. ಈ ಸಲ ಭಾಷಣವಾದ್ದರಿಂದ ಅವರು ಹೇಳುವಾಗ ಬರೆದುಕೊಂಡರಾಯಿತು ಎಂದು ನನ್ನ ಗೆಳತಿಯರ ಒಡಗೂಡಿ ಕೈಯಲ್ಲಿ ಪೆನ್ ಪೇಪರು ಹಿಡಿದು ಹೊರಟಿದ್ದೆ.
ಅವರು ಮಾತು ಪ್ರಾರಂಭಿಸುತ್ತಾ ' ಕಲೆ ಅಂದರೆ ಇರದಿರುವುದನ್ನು ಕಾಣುವುದು' ಎಂದರು. ಅಲ್ಲಾ ಸ್ವಾಮೀ ಇರದಿರುವುದನ್ನೇ ಕಲೆ ಎಂದರೆ ಇರುವುದನ್ನು ಏನೆನ್ನಬೇಕು ಎಂಬುದೆ ನನಗೂ ನನ್ನ ಜೊತೆಗಾತಿಯರಿಗೂ ಅರಿವಾಗಲಿಲ್ಲ. ಇರಲಿ ಕಲೆಯನ್ನು ಹೋಗಲಾಡಿಸುವ ಬಗ್ಗೆ ಮುಂದೆ ಹೇಳಬಹುದೆಂದು ಕಿವಿ ಕಣ್ಣು ಬಾ ತೆರೆದು ಕುಳಿತೆವು. ನಮ್ಮ ಆಸಕ್ತಿ ನೋಡಿ ಅವರಿಗೂ ಸಂತಸವಾಯ್ತು. ಇನ್ನಷ್ಟು ಉತ್ಸಾಹದಿಂದ ಇರದಿರುವುದರ ಊಹೆ ಹೇಗೆ ಕಲೆಯಾಗುತ್ತದೆ ಎಂಬುದನ್ನು ವಿವರಿಸತೊಡಗಿದರು. ಕಣ್ಣೆದುರು ಕಾಣುವ ನಮ್ಮ ಕಲೆಯೂ , ಕಣ್ಣಿಗೆ ಕಾಣದ ಇವರ ಕಲೆಯೂ ಬೇರೆ ಬೇರೆ ಎಂದು ನನ್ನರಿವಿಗೆ ಬಂದಾಗ ಭಾಷಣ ಮುಗಿದು ಊಟದ ಹೊತ್ತಾಗಿತ್ತು. ಔತಣದಲ್ಲಿ ಪಾಲ್ಗೊಂಡು ಸೀರೆಗೆ ಅಂಟಿದ ಸಾರಿನ ಅರಿಶಿನದ ಬಣ್ಣವನ್ನು ತೆಗೆಯುವುದು ಹೇಗೆಂದು ಚಿಂತಾಕ್ರಾಂತಳಾಗಿ ಮನೆಗೆ ಮರಳಿದೆ. 

ನನ್ನರಿವಿಗೆ ಸುಲಭಕ್ಕೆ ನಿಲುಕದ ಈ ಕಲೆಯ ಬಗ್ಗೆ ಹಲವರು ಲೀಲಾಜಾಲವಾಗಿ ವಿವರಿಸುತ್ತಾರೆ. ಒಬ್ಬರು ಮಾತನಾಡುವುದು ಒಂದು ಕಲೆ ಎಂದರೆ, ಇನ್ನೊಬ್ಬರು ಚಿತ್ರ, ಸಂಗೀತ ಇವುಗಳು ಕಲೆ ಎನ್ನುತ್ತಾರೆ. ಇದೆಲ್ಲ ಹುಟ್ಟಿನಿಂದಲೇ ಬರುವ ಪ್ರತಿಭೆಗಳಾದರೂ ಕೆಲವನ್ನು ಕಷ್ಟಪಟ್ಟು ಕಲಿಯಲೂ ಬಹುದೇನೋ. ಆದರೆ ಇನ್ನು ಕೆಲವರು ದಿನ ನಿತ್ಯದ ನಮ್ಮ ನಡೆ ನಡವಳಿಕೆಗಳನ್ನು ಕೆಲಸ ಮಾಡುವ ವಿಧಾನವನ್ನು ಕಲೆಯೆಂದು ಬಣ್ಣಿಸುವುದುಂಟು. ' ನನ್ನಜ್ಜ  ವೀಳ್ಯ ಹಾಕಲು ಸುಣ್ಣ ತೀಡುವುದಿದೆಯಲ್ಲ ಅದೂ ಒಂದು ಕಲೆ ಎಂದು ಅಜ್ಜನ ಪುಳ್ಳಿ ಹೇಳಿದರೆ, ನನ್ನಮ್ಮ ತರಕಾರಿ ಕತ್ತರಿಸುವುದು ಒಂದು ಕಲೆ ಎಂದು ಅಮ್ಮನ ಮಗಳು ನುಡಿಯುತ್ತಾಳೆ. ಅಷ್ಟೇಕೆ ದಿನ ನಿತ್ಯ ಮೂರು ಹೊತ್ತು ಹೊಟ್ಟೆಗೆ ಆಹಾರ ಸೇವಿಸುತ್ತೇವಲ್ಲ ಆ ಸೇವನಾ ಕ್ರಮವೂ ಒಂದು ಕಲೆಯಂತೆ. ಹಾಗಿದ್ದ ಮೇಲೆ ಬಡಿಸುವುದು ಕೂಡಾ ಕಲಾ ಪ್ರಕಾರದೊಳಗೆ ಬಾರದಿದ್ದೀತೇ?
 
ಹಳ್ಳಿಯ ಕಾರ್ಯಕ್ರಮಗಳಲ್ಲಿ ಬಾಳೆಲೆಯ ಮೇಲೆ ಊಟ ಸರ್ವೇಸಾಮಾನ್ಯ.ಬಾಳೆ ಎಲೆಯ ಮೇಲೆ ತುಂಬಾ ಜಾಗವಿದೆ ಎಂದು ಹೇಗೆಂದರೆ ಹಾಗೇ ಎಲ್ಲೆಂದರೆ ಅಲ್ಲಿ ಬಡಿಸಿ ಹೋಗುವುದು ಸಾಧ್ಯವಿಲ್ಲ. ಉಪ್ಪು ಉಪ್ಪಿನಕಾಯಿಗಳು ಎಲೆಯ ತುದಿಯನ್ನು ಅಲಂಕರಿಸಿದರೆ ಅದರಿಂದೀಚೆಗೆ ಎಲೆಯ ಎದುರು ಬದಿಯಲ್ಲಿ  ಚಟ್ನಿ ಪಲ್ಯ ಗೊಜ್ಜು ಕೋಸಂಬರಿಗಳು ಬೀಳಬೇಕು. ಎಲೆಯ ಇನ್ನೊಂದು ಕೆಳಗಿನ ಮೂಲೆಯಲ್ಲಿ ಪಾಯಸವೇ ಇರಬೇಕು. ಅವೆಲ್ಲದರ ನಡುವೆ ಅನ್ನ ಅಧ್ಯಕ್ಷ ಪದವಿ ಪಡೆದು ನಡುವಿನಲ್ಲಿ ಕುಳಿತಿರುತ್ತದೆ. ನಂತರ ಸಾಲಾಗಿ ಸಾರು ಸಾಂಬಾರು ಪಳಧ್ಯಗಳ ಮೆರವಣಿಗೆ ನಡು ನಡುವೆ ಹೋಳಿಗೆ ತುಪ್ಪ ಕಾಹಾಲುಗಳ ನೈವೇಧ್ಯದ ಜೊತೆ ಜೊತೆಗೆ ಸಾಗಬೇಕು. ಕೊನೆಯಲ್ಲಿ ಮಜ್ಜಿಗೆ ಬಂದರೆ ಊಟ ಮುಗಿದೇಳುವ ಹೊತ್ತು.  ಹೀಗೆ ಕ್ರಮದಿಂದ ಬಡಿಸುವುದರ ಅರಿವಿಲ್ಲದವರಿಗೆ ಬಡಿಸುವುದು ಎಂದರೆ ಮೈ ನಡುಕ ಬರುವುದು ಸುಳ್ಳಲ್ಲ. 
 
ಪೇಟೆಯಲ್ಲಿದ್ದ ನಮ್ಮ ಚಿಕ್ಕಪ್ಪನಿಗೆ ತಾನು ಒಂದಾನೊಂದು ಕಾಲದಲ್ಲಿ ಉದ್ದುದ್ದದ ಊಟದ ಸಾಲುಗಳಿಗೆ ಬಡಿಸಿ ಕ್ಷಣಾರ್ಧದಲ್ಲಿ ಊಟ ಮುಗಿಸಿ ಏಳುವಂತೆ ಮಾಡುತ್ತಿದ್ದ ಗತಕಾಲದ ವೈಭವವನ್ನು ಆಗಾಗ ನಮ್ಮ ಮುಂದಿಡುತ್ತಾ ನಾವೆಲ್ಲ ಇನ್ನೂ ಅವರ ಮಟ್ಟಕ್ಕೇರಿಲ್ಲ ಎಂದು ನೆನಪಿಸುವುದು ಬಲು ಇಷ್ಟದ ಕೆಲಸ. ಆದರೆ ನಾವಂತೂ ಅವರು ಒಂದು ಸಮಾರಂಭದಲ್ಲೂ ಬಡಿಸಿದ್ದನ್ನು ನೋಡಿದವರಾಗಿರಲಿಲ್ಲ. ಊಟದ ಹೊತ್ತಾದ ಕೂಡಲೇ ಎಲೆ "ಡಿದು ಮೊದಲನೇ ಪಂಕ್ತಿಗೆ ಊಟ ಮುಗಿಸಿ ಏಳುತ್ತಿದ್ದರು. 
ಆದರೆ ಮನೆಯಲ್ಲೇ ನಡೆಯುವ ಸಮಾರಂಭಗಳಿದ್ದಾಗ ಕೆಲವೊಮ್ಮೆ ಗ್ರಹಗತಿಗಳು ಕೆಟ್ಟದಾಗುವುದೂ ಉಂಟು.  ಮೊದಲನೇ ಪಂಕ್ತಿಗೆ ಊಟ ಮುಗಿಸಿ ಎದ್ದಿದ್ದ ಚಿಕ್ಕಪ್ಪ ಎರಡನೇ ಪಂಕ್ತಿಗೆ ಊಟಕ್ಕೆ ಕುಳಿತ ನಮ್ಮನ್ನು ಕಡೆಗಣ್ಣ ನೋಟದಿಂದ ನೋಡುತ್ತಾ ದೂರದಲ್ಲಿ ನಿಂತಿದ್ದರು. ನಮ್ಮ ಕಪಿ ಸೈನ್ಯಕ್ಕೆ ಅವರನ್ನು ಗೋಳುಗುಟ್ಟಿಸುವುದೆಂದರೆ ಇಷ್ಟ. ನಮಗೆ ಬಡಿಸಿ ಎಂದು ನಾವು ಕೇಳಿದ "ನಯದ ಮಾತುಗಳಿಗೆ ಸೊಪ್ಪು ಹಾಕದ ಅವರನ್ನು ಮಣಿಸಲು 'ನಮಗೆ ಚಿಕ್ಕಪ್ಪ ಬಡಿಸಿದರೇ ಊಟ ಮಾಡುವುದು ಇಲ್ಲದಿದ್ದರೆ ಸಾಮೂಹಿಕವಾಗಿ ಊಟಕ್ಕೆ ಬಹಿಷ್ಕಾರ ಹಾಕುತ್ತೇವೆ' ಎಂದು ಗದ್ದಲ ಎಬ್ಬಿಸಿದೆವು.ಊಟಕ್ಕೆ ಮೊದಲೇ ನಾಲ್ಕು ಹೋಳಿಗೆ , ಅತ್ತಿತ್ತ ನಡೆಯುವಾಗಲೆಲ್ಲಾ ವಡೆ ಕಜ್ಜಾಯಗಳನ್ನು ಬಾಯಾಡಿಸುತ್ತಲೇ ಇದ್ದ ನಮಗೆ ಹಸಿವಾಗಿದ್ದುದು ಅಷ್ಟರಲ್ಲೇ ಇತ್ತು. ಆದರೆ ನಮ್ಮ ಈ ರೌಧ್ರ ಬೇಡಿಕೆಗೆ ಮಣಿದ ಚಿಕ್ಕಪ್ಪ ಬೇರೆ ದಾರಿಯಿಲ್ಲದೇ ಬಡಿಸಲು ಬಂದರು. ಅತ್ತಿತ್ತ ನೋಡಿ ಬಡಿಸಲು ಸುಲಭವೂ ಹಗುರವೂ ಆಗಿದ್ದ ಬಾಣಲೆಯಲ್ಲಿ ಇಟ್ಟಿದ್ದ ಹಪ್ಪಳವನ್ನೆತ್ತಿಕೊಂಡು ಬಂದರು. ಬಡಿಸುತ್ತಾ ನಮ್ಮ ಸಾಲಿನ ತುದಿಯವರೆಗೆ ತಲುಪಿದಾಗ ಅವರ ಮೊಗದಲ್ಲಿ ನಾನೂ ಬಡಿಸಿದೆ ಎಂಬ ಹೆಮ್ಮೆಯ ನಗುವಿತ್ತು. ಬಾಣಲೆಯನ್ನು ಪಕ್ಕಕ್ಕಿಟ್ಟವರೇ  ಮೀಸೆಯ ಮೇಲೆ ಕೈಯಾಡಿಸಿ ತಿರುವಿದರು. ಬಾಣಲೆಯ ಅಂಚಿನಲ್ಲಿದ್ದ ಮಸಿ ಮುಖಕ್ಕೆ ಮೆತ್ತಿಕೊಂಡಿತು. ನಾವು ನಗುವ ಅವಕಾಶವನ್ನು ಬಿಡಲುಂಟೇ? ನಮ್ಮ ಹಾಸ್ಯಕ್ಕೆ ಇನ್ನಷ್ಟು ತಬ್ಬಿಬ್ಬಾದ ಅವರು ಉಟ್ಟಿದ್ದ ಶುಭ್ರ ಬಿಳಿಯ ವೇಸ್ಟಿಯಲ್ಲಿ  ಮುಖ ಒರೆಸಿಕೊಂಡರು. ಅದಕ್ಕಷ್ಟು ಮಸಿ ಅಂಟಿತು. ಆಹಾ ..  ಆಗ ತಿಳಿಯಿತು ನೋಡಿ ನನಗೆ ಬಡಿಸುವ ಕಲೆಯ ಬಗ್ಗೆ. 
ಪ್ರಪಂಚದಲ್ಲಿ ಸಾವಿರ ಸಾವಿರ  ಕಲೆಗಳಿರಬಹುದು ಬಿಡಿ. ಆದರೆ ನನಗೆ ತಿಳಿದ ಕಲೆಗಳು ಕೇವಲ ಎರಡೇ ಎರಡು. ಒಂದು ತೊಳೆದರೆ ಹೋಗುವಂತಹುದು ಮತ್ತಿನ್ನೊಂದು ತೊಳೆಯುವುದು ಬಿಡಿ ಹರಿದರೂ ಹೋಗದಂತದ್ದು. ನನ್ನ ಈ ಅಸಾಮಾನ್ಯ ಕಲಾಮಯ ತಲೆಯೊಳಗೆ ಇನ್ನಷ್ಟು ಕಲೆಗಳ ವಿವರಗಳನ್ನಿಳಿಸಿ ಗೋಜಲಾಗಿಸುವುದು ನನಗಿಷ್ಟವಿಲ್ಲದ ಕಾರಣ  ಕಲೆಯ ಬಗ್ಗೆ ಕೊರೆಯುವುದನ್ನು ಬಿಟ್ಟು ಕೈಗೆ ಅಂಟಿದ ಶಾಯಿಯ ಕಲೆಯನ್ನು ತೊಳೆದುಕೊಳ್ಳುವತ್ತ ಗಮನ ಹರಿಸುತ್ತೇನೆ. 

( ಮಾರ್ಚ್ 2014 ರ ಉತ್ಥಾನ ಮಾಸಪತ್ರಿಕೆಯಲ್ಲಿ  ಪ್ರಕಟಿತ ) 

Tuesday, November 19, 2013

ಶ್ವಾನ ಕಲಿಸಿದ ಭಾಷೆ


ದೂರದ ಕಾಲೇಜು ಎಂದ ಮೇಲೆ ಉಳಿದುಕೊಳ್ಳಲು ವ್ಯವಸ್ಥೆ ಬೇಡವೇ..?ನನ್ನ ಲಗೇಜ್ ಸಮೇತ ಬಂದಿಳಿದದ್ದು ಮೆಸ್ ಗೆ. ಹೆಸರಾಂತ ಕಾಲೇಜ್ ಆದ ಕಾರಣ ಅದರ ಸುತ್ತ ಮುತ್ತಲಿದ್ದ ಮನೆಯವರಿಗೆ ಇದೊಂದು ಲಾಭದಾಯಕ ಉದ್ಯೋಗವೇ ಆಗಿತ್ತು. ಮನೆಯಂತೆಯೇ ಇದ್ದ ಮೆಸ್  ಜೈಲಿನ ಸೆಲ್ಲುಗಳಂತಹ ಹಾಸ್ಟೆಲ್ ರೂಮುಗಳನ್ನು ನೆನಪಿಸುತ್ತಿರಲಿಲ್ಲ. ಹಾಸ್ಟೆಲ್ಲಿನ ಎಲ್ಲಾ ಸವಲತ್ತುಗಳನ್ನು ಹೊಂದಿದ್ದರೂ, ಅಲ್ಲಿನಂತೆ ವಾರ್ಡನ್ ನ ಹೆದರಿಕೆ ಇರಲಿಲ್ಲ.ಮೆಸ್ಸಿನಲ್ಲಿದ್ದವರನ್ನು  ಮೇಡಂ ಎನ್ನದೆ ಆಂಟೀ ಎಂದು ಕರೆದು ಪೂಸಿ ಹೊಡೆಯುವ ಸೌಭಾಗ್ಯವನ್ನು ಹೊಂದಿದ್ದೆವು.
ಹುಡುಗಿಯರ ಮೆಸ್ ಎಂದ ಮೇಲೆ ಕೇಳಬೇಕೆ.. ಸದಾ ಮಾತು ಮಾತು ಮಾತು..ಎಂದೂ ಮುಗಿಯದ ಮಾತಿನ ಪ್ರಪಂಚ ನಮ್ಮದು. ಆಗೆಲ್ಲ ಆಂಟೀ ತಾಳುವಷ್ಟು ತಾಳಿ ನಂತರ ಬಯ್ಯುತ್ತಿದ್ದರು. ' ನೀವೆಂತ ಕಾಲೇಜಿಗೆ ಸೇರಿದ್ದು ಮಾತಾಡ್ಲಿಕ್ಕಾ.. ನಿಮ್ಮ ಪುಸ್ತಕಕ್ಕೆಲ್ಲ ಫಂಗಸ್ ಬಂದಿದೆ ನೋಡಿ. ನನ್ನ ಗ್ರಾಚಾರಕ್ಕೆ ನೀವು ಫೈಲ್ ಆದ್ರೆ ಬರುವ ವರ್ಷ ಒಂದಾದ್ರು ಮಕ್ಕಳು ನನ್ನ ಮನೆಗೆ ಬರ್ಲಿಕ್ಕುಂಟಾ.. ನೀವು  ಹೀಗೆ  ಮಾಡಿದ್ರೆ ನಾನು ಉಪವಾಸ ಬೀಳ್ಬೇಕಷ್ಟೆ.. ನನ್ನ ಕರ್ಮ ನೀವು ಒಳ್ಳೇ ಮಕ್ಕಳು ಅಂತಲ್ವಾ ನಾನು ಸೇರಿಸಿಕೊಂಡದ್ದು.. ನೀವು  ಹೀಗೆ  ಮಾತಾಡುವುದಾ..' ಎಂದು ತಮ್ಮ ಭಯವನ್ನು ಹೊರ ಹಾಕಿ ನಮ್ಮನ್ನೂ ಹೆದರಿಸುತ್ತಿದ್ದರು.
ಒಂದೆರಡು ದಿನ ಇಂಟೆನ್ಸಿವ್ ಕೇರ್ ನಲ್ಲಿರುವ ಪೇಶಂಟಿನಷ್ಟು ಸೀರಿಯಸ್ಸು ಮುಖ ಹೊತ್ತು ಪುಸ್ತಕದೊಳಗೆ ಮುಳುಗುತ್ತಿದ್ದೆವು. ಮತ್ತೆ ನಾಯಿ ಬಾಲ ಡೊಂಕಾಗುತ್ತಿತ್ತು.ನಮ್ಮ ಈ ದಿನಚರಿಗೆ  ಇನ್ನಷ್ಟು ರಂಗು  ಬಂದಿದ್ದು ಹೊಸ ಹುಡುಗಿಯೊಬ್ಬಳು ಬೊಂಬಾಯಿಯಿಂದ ಎಂಟ್ರಿ ಕೊಟ್ಟಾಗ.

ಆದಿತ್ಯವಾರದ ರಜಾ ದಿನವದು.ಎಂದಿನಂತೆ ಓದುವ ನೆಪದಲ್ಲಿ ಪಿಸಿ ಪಿಸಿ ಹರಟುತ್ತಿದ್ದೆವು. ಹೊರಗಿನ ಬಾಗಿಲು ಬಡಿಯಿತು . ಬಾಗಿಲ ಪಕ್ಕದಲ್ಲೇ ಕುಳಿತಿದ್ದ ನಾನು ಅಂದಿನ ಓದಿಗೆ ಆದ ಸುಖಾಂತದಿಂದಾಗಿ ಸಂತೋಷದಿಂದ ಎದ್ದು ಬಾಗಿಲು ತೆರೆದೆ.ಹೊರಗೆ ಒಬ್ಬಳು ನಮ್ಮದೇ ವಯಸ್ಸಿನ ಹುಡುಗಿ, ಅವಳ ಜೊತೆಯಲ್ಲಿ ಅವಳ ಅಪ್ಪ ಅಮ್ಮ ಆಗಿರಬಹುದು ಎಂದು ನಾನಂದುಕೊಂಡ ಮತ್ತಿಬ್ಬರು ನಡು ವಯಸ್ಕರು. ಅವರು ಹಿಂದಿಯಲ್ಲಿ 'ಮಾಜೀ ಹೆ ಕ್ಯಾ.. ?' ಎಂದರು. ಹಿಂದಿಯನ್ನು  ಹೈಸ್ಕೂಲಿನಲ್ಲಿರುವಾಗ ಬಾಯಿ  ಪಾಠ ಮಾಡಿ ಹೇಗೋ ಕಷ್ಟಪಟ್ಟು ಫಸ್ಟ್ ಕ್ಲಾಸಿನ ಹೊಸಿಲೊಳಗೆ ಬಲವಂತವಾಗಿ ಅದನ್ನೆಳೆದು ತಂದ ಸಾಹಸಿ ನಾನು. ಕಸ್ತೂರಿ ಕನ್ನಡ ಮಾತ್ರ ಮಾತನಾಡುತ್ತಿದ್ದ ನನಗೆ  ,ಹಿಂದಿಯಲ್ಲಿ  ಮಾತನಾಡುವುದೆಂದರೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆಯೇ ಸರಿ.ಸಹಾಯಕ್ಕಾಗಿ ಗೆಳತಿಯರ ಮುಖ ನೋಡಿದರೆ ಸರಿ ಸುಮಾರು ನನ್ನಷ್ಟೇ ಭಾಷಾಪಾಂಡಿತ್ಯ ಹೊಂದಿದ ಅವರು ಪುಸ್ತಕದೊಳಗೆ ತಮ್ಮ ಮಸ್ತಕ ತೂರಿಸಿ ಗಂಭೀರರಾಗಿದ್ದಾರೆ. ನಾನೇ ಧೈರ್ಯ ತಂದುಕೊಂಡು 'ಆಯಿಯೇ.. ಬೈಟಿಯೇ..' ಎಂದು,ಮರುಕ್ಷಣದಲ್ಲಿ  'ಆಂಟೀ' ಎಂದು ಕೂಗುತ್ತಾ ಅಲ್ಲಿಂದ ಕಾಲು ತೆಗೆದೆ. ಅವರ ಮತ್ತುಳಿದ ಸಂಭಾಷಣೆಗಳೆಲ್ಲಾ ಅವರ ಮಾತೃಭಾಷೆ ಕೊಂಕಣಿಯಲ್ಲೇ ಮುಂದುವರಿದು ಆ ಹುಡುಗಿ ನಮ್ಮ ಮೆಸ್ಸಿನ ಹೊಸ ಸದಸ್ಯಳಾದಳು. ಅವಳ ಅಮ್ಮ ಅವಳನ್ನು ಬಿಟ್ಟು ಅಳುತ್ತಾ ಹೊರನಡೆದರೆ, ಅವರು ಹೊರ ನಡೆದ ತಕ್ಷಣ ಅವಳು ತನ್ನ ಲಗೇಜಿನ ಮೇಲೆಯೇ ಬೋರಲು ಬಿದ್ದು ಅಳತೊಡಗಿದಳು. ಇದೆಲ್ಲಾ ಮಾಮೂಲಿ ಎಂಬಂತೆ ಆಂಟೀ ತಮ್ಮ ಕೆಲಸ ನೆನಪಿಸಿಕೊಂಡು ಒಳಗೆ ಹೋದರು.ನಮಗೆ ಅವಳನ್ನು ಸುಮ್ಮನೆ ಬಿಡಲಾದೀತೇ.. ಎಷ್ಟೆಂದರು ಅವಳು ನಮ್ಮಂತೆ ದೂರದೂರಿಂದ ಬಂದವಳಲ್ಲವೇ..? ಆದರೆ ನಮ್ಮೊಳಗೆ ಗಡಿ ಸಮಸ್ಯೆಯಂತೆ ಭಾಷಾ ಸಮಸ್ಯೆ ಇತ್ತು.  ಹಾಗಾಗಿ  ನಾವು ಅವಳನ್ನು ಯಾವ ಭಾಷೆಯಲ್ಲಿ ಸಮಾಧಾನಿಸುವುದು ಎಂದು ತಲೆಕೆಡಿಸಿಕೊಳ್ಳತೊಡಗಿದೆವು. ಇದ್ದ ಹದಿನಾಲ್ಕು ಮಂದಿಯೂ ಆಲೋಚಿಸಿ ಅವಳಿಗೆ ಅರ್ಥವಾಗುವ ಹಿಂದಿಯಲ್ಲಿಯೇ ಒಂದೆರಡು ವಾಕ್ಯ ರಚಿಸಿದೆವು.   ಅದನ್ನು ಉರು ಹೊಡೆಯಲು ಸಮಯವಿಲ್ಲದ್ದುದರಿಂದ ಹಾಳೆಯೊಂದರಲ್ಲಿ  ಬರೆದುಕೊಂಡು ದೊಡ್ಡದಾಗಿ ಓದಿ ಹೇಳಿದೆವು. ಅವಳು ನಮ್ಮ ಈ ಪಚೀತಿಗಳನ್ನು ನೋಡುತ್ತಾ ಆಳುತ್ತಿದ್ದವಳು ಬಿದ್ದು ಬಿದ್ದು ನಗತೊಡಗಿದಳು.  

ಸಧ್ಯದ ಪರಿಸ್ಥಿತಿ ಸುಧಾರಿಸಿದರೂ ಇನ್ನು ವರ್ಷ ಪೂರ್ತಿ ಅವಳ ಜೊತೆ ಏಗಬೇಕಲ್ಲ ಎಂಬುದೇ ನಮ್ಮ ಚಿಂತೆ. ಈಗ ಅಚ್ಛ ಕನ್ನಡದ ಹುಚ್ಚು ಕಂದಮ್ಮಗಳಾದ ನಾವು ಅವಳಿಗೆ ಕನ್ನಡ ಕಲಿಸುವ ಬಗ್ಗೆ ಆಲೋಚಿಸುವ ಬದಲು ನಾವೆಲ್ಲ  ಹಿಂದಿ  ಕಲಿಯಲು ಉತ್ಸುಕರಾದೆವು. ಈ ರಾಷ್ಟ್ರ ಭಾಷೆ ಎಂಬ ಕಬ್ಬಿಣದ ಕಡಲೆ ನಮ್ಮೆಲ್ಲರ ಬಾಯಲ್ಲೂ ತುಂಬಿಕೊಂಡಿತು.
ನಮ್ಮೆದುರಿಗಿದ್ದ ಏಕಮಾತ್ರ ಉಪಾಯವೆಂದರೆ ಏಕಲವ್ಯರಾಗುವುದು. ನಮ್ಮ ಗುರು ದ್ರೋಣಾಚಾರ್ಯರು ನಮ್ಮೆದುರು ನ್ಯಾಷನಲ್ ಟಿ  ವಿ ಯ ರೂಪದಲ್ಲಿ ಕಾಣತೊಡಗಿದರು. ಕುಳಿತಲ್ಲಿ ನಿಂತಲ್ಲಿ ನಮ್ಮ ಶಬ್ಧವೇದಿ ಬಾಣಗಳು ಯಾರ್ಯಾರಿಗೋ ತಗಲತೊಡಗಿದವು.ಆಗ ಟಿ ವಿ  ಯಲ್ಲಿ ಬರುತ್ತಿದ್ದ ರಾಮಾಯಣ ಸೀರಿಯಲ್ಲಿನಿಂದ ಪ್ರೇರಣೆ ಹೊಂದಿ ಮಾತಾಶ್ರೀ, ಪಿತಾಶ್ರೀ ಗಳಂತೆ ಎಲ್ಲರ ಹೆಸರಿನ ಮುಂದೆ ಶ್ರೀಗಳನ್ನು ಹಚ್ಚಿ ಅವರನ್ನು ಧನ್ಯರಾಗಿಸಿದೆವು.
ನಮ್ಮ ಗೆಳತಿಯೂ ಈಗ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವಳ ಹಿಂದಿಯನ್ನು ಕುಲಗೆಡಿಸಿ ನಮ್ಮ ಲೆವೆಲ್ಲಿನಲ್ಲೇ ಮಾತನಾಡತೊಡಗಿದಳು.
' ಪಾನೀ ಕಾಯ್ತಾ ಇದೆ ಜಲ್ದಿ ನಹಾಕೆ ಬಾ..' ಎಂದರೆ ಎದ್ದು ಸ್ನಾನದ ಮನೆಗೆ  ಹೋಗುವಷ್ಟು ಬುದ್ಧಿವಂತಳಾದಳು. ನಾವುಗಳು ಇದೇ ಲೆವೆಲ್ಲಿನಲ್ಲಿ ಉಳಿದುಬಿಡುತ್ತಿದ್ದೆವೇನೋ ಆ ಮಹಾಗುರುವಿನ ಎಂಟ್ರಿ ಆಗದಿರುತ್ತಿದ್ದರೆ ... 

ನಮ್ಮ ಮೆಸ್ಸಿನಲ್ಲಿ ಒಂದು ಪೀಚಲು ಶರೀರಿ ನಾಯಿ  ಇತ್ತು.ಅದು ಬ್ಯಾಂಕ್ ಮೆನೇಜರರೊಬ್ಬರ ನಾಯಿಯೆಂದೂ, ಅವರು ಟ್ರಾನ್ಸ್ಪರ್ ಆಗಿ ಹೋಗುವಾಗ ನಾಯಿಯನ್ನು ಅನಾಥವಾಗಿ ಇಲ್ಲಿಯೇ ಬಿಟ್ಟು ಹೋಗಿದ್ದರು ಎಂಬ ಇತಿಹಾಸ ಹೊತ್ತ ನಾಯಿ ಅದಾದ ಕಾರಣ ನಮ್ಮೆಲ್ಲರ ಕರುಣೆಗೂ ಅದು ಪಾತ್ರವಾಗಿತ್ತು.ಮತ್ತು ಇಲ್ಲಿ ನಿತ್ಯ ಆಹಾರ ಸಿಗುತ್ತಿದ್ದುದರಿಂದ ಅದು ಇಲ್ಲಿಯೇ ಅತ್ತಿತ್ತ ಸುಳಿಯುತ್ತಾ ಇದ್ದುದರಿಂದಾಗಿ ಇಲ್ಲಿಯದೇ ನಾಯಿ ಎಂಬಂತಾಗಿತ್ತು. ಅದಕ್ಕೆ ಅದರ ಪಾಲಿನ ಆಹಾರವಲ್ಲದೇ ನಮ್ಮೆಲ್ಲರ ಉಳಿಕೆಯ ಆಹಾರವನ್ನು ಹಾಕುತ್ತಿದ್ದೆವು. ಅದು ಎಲ್ಲವನ್ನೂ ಗಬ ಗಬನೆ ನುಂಗಿ ಮತ್ತೆ ನಮ್ಮನ್ನು ನೋಡಿ ಬೊಗಳುತ್ತಿತ್ತು. ನಾವೆಷ್ಟೇ ಬೆಣ್ಣೆ ಹಚ್ಚಿ ದೋಸೆ ತಿನ್ನಿಸಿದರೂ ಅದು ನಮ್ಮನ್ನು ನೋಡಿ ಗುರ್ ರ್ರ್.. ಅನ್ನುತ್ತಲೇ ಇತ್ತು.ಅಷ್ಟೇಕೆ ಮೆಸ್ಸಿನ ಆಂಟಿಯನ್ನು ನೋಡಿಯೂ ಆಗೀಗ ಬೊಗಳಿ ಗದ್ದಲವೆಬ್ಬಿಸುತ್ತಿತ್ತು. ನಾವ್ಯಾರೂ ಆ ನಾಯಿ  ಬಾಲ ಅಲ್ಲಾಡಿಸುವುದನ್ನೇ ನೋಡಿರಲಿಲ್ಲ. ಒಮ್ಮೊಮ್ಮೆ ಬಯ್ಯುವವರು ಯಾರೂ ಕಾಣಿಸದೇ ಇದ್ದರೆ ಮನೆಯ ಒಳಗೆ ನುಗ್ಗಿ ಬರುತ್ತಿತ್ತು.ಅದಕ್ಕೆ ತಂಟೆ ಮಾಡಿದರೆ ಹೊಡೆಯಲೆಂದೇ ಆಂಟೀ ಒನಕೆಯಿಂದ  ಸ್ವಲ್ಪ ಕಡಿಮೆ ದಪ್ಪದ ಕೋಲೊಂದನ್ನು ತಂದಿರಿಸಿದ್ದರು. 

ಇದು ಮಲ್ಟಿ ಪರ್ಪಸ್ ಕೋಲು. ನಮ್ಮ ಆಂಟೀ ಕೆಲಸದಲ್ಲಿ ತುಂಬಾ ಚುರುಕು. ನಮ್ಮೆಲ್ಲರಿಗೂ ಹೊತ್ತು ಹೊತ್ತಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಿದ್ದುದಲ್ಲದೇ,ಹಪ್ಪಳ ಸಂಡಿಗೆ ಬಾಳ್ಕ ಗಳಂತವುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಅದನ್ನು ಒಣಗಲು ಹಾಕಿದ್ದು ಅದು ಹೇಗೆ ಕಾಗೆಗಳಿಗೆ ಗೊತ್ತಾಗುತ್ತಿತ್ತೋ ಏನೋ?? ಹುಡುಗರು, ಹುಡುಗಿಯರ ಹಾಸ್ಟೆಲ್ಲಿನ ಮುಂದೆ ಅತ್ತಿತ್ತ ಠಳಾಸುವಂತೆ ಇವು ಹಾರಾಟ ಪ್ರಾರಂಭಿಸುತ್ತಿದ್ದವು. ಆಗ ಆಂಟಿ ಈ ಕೋಲನ್ನು ನೆಲಕ್ಕೆ ಹೊಡೆದು ದೊಡ್ಡ ಶಬ್ಧವೆಬ್ಬಿಸಿ ಅವುಗಳನ್ನು ಹೆದರಿ ಹಾರುವಂತೆ ಮಾಡುತ್ತಿದ್ದರು. ಮನೆಯೊಳಗೆ ಸೇರಿಕೊಂಡ ಜಿರಲೆಗಳನ್ನು ಹೊಡೆಯಲು, ಅಪುರೂಪಕ್ಕೊಮ್ಮೆ ನಮ್ಮ ಕೈಗೆ ಸಿಗುತ್ತಿದ್ದ ಮೂಷಿಕವನ್ನು ಮುಗಿಸಲು ಇದೇ ಕೋಲು ಉಪಯೋಗವಾಗುತ್ತಿತ್ತು.ನನ್ನಂತಹ ಉದ್ದ ಕಮ್ಮಿ  ಇರುವವರಿಗೆ ಬಟ್ಟೆ ಹರವಲು ಉಪಯೋಗಿಸಲ್ಪಡುತ್ತಿತ್ತು. ನಾವೇನಾದರೂ ರಾಜ ಮಹಾರಾಜರ ವಂಶಸ್ಥರಾಗಿದ್ದರೆ ಈ ಮಲ್ಟಿ ಪರ್ಪಸ್ ಕೋಲಿಗೆ ಚಿನ್ನದ ಕಟ್ಟು ಹಾಕಿಸುತ್ತಿದ್ದುದರಲ್ಲಿ ಸಂಶಯವೇ ಇರಲಿಲ್ಲ. ಅದು ಯಾರು ಕಣ್ಣು ಮುಚ್ಚಿ ಕೈ ನೀಡಿದರೂ ಹಿಂದಿನ ಬಾಗಿಲಿನ ಮೂಲೆಯಲ್ಲಿ ಕೈಗೆ ಸಿಗುವಂತಿರುತ್ತಿತ್ತು. ಮತ್ತು ಯಾರೇ ತೆಗೆದರೂ ಅಲ್ಲೇ ಇಡಬೇಕೆನ್ನುವ ಸುಗ್ರೀವಾಜ್ಞೆಗೂ ಒಳಪಟ್ಟಿತ್ತು. 

ಆದಿನ ಬೆಳ್ಳಂಬೆಳಗ್ಗೆ  ನಾಯಿ ಒಳಬಂದು ಡೈನಿಂಗ್  ಟೇಬಲ್  ಕೆಳಗೆ ಮಲಗಿ ನಮಗೆ ಹಲ್ಲು ತೋರಿಸಿ ಜೋರು ಮಾಡುತ್ತಿತ್ತು. ಅದನ್ನು ಹೆದರಿಸಲು ನಮ್ಮ ಮಲ್ಟಿ ಪರ್ಪಸ್ ಕೋಲು ಇರುವ ಕಡೆ ಧಾವಿಸಿದರೆ ಅಲ್ಲೆಲ್ಲಿದೆ ಕೋಲು? 

. ನಮ್ಮ ಮೆಸ್ಸಿನ ಆಂಟಿಯಂತೂ ಮೆಸ್ಸಿನ ಹುಡುಗಿಯರು ಕಳೆದು ಹೋಗಿದ್ದರೂ ಇಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ತಮ್ಮ ದೇಹದ ಭಾಗವೇ ತುಂಡಾಯಿತೇನೋ ಎಂಬಂತಹ ದುಃಖದಲ್ಲಿ ಮುಳುಗಿದ್ದರು.ನಾವೆಲ್ಲರೂ ಎಲ್ಲಾ ಕಡೆ ಹುಡುಕಿ ಬಸವಳಿದೆವು. ನಮ್ಮ  ಹಿಂದಿ ಹುಡುಗಿಯೊಬ್ಬಳ ವಿನಃ ಉಳಿದೆಲ್ಲರೂ ಈ ಸಂತಾಪದ ಸಮಯದಲ್ಲಿ ಒಟ್ಟಾಗಿ ನಿಂತಿದ್ದೆವು.

ಅವಳು ಎರಡು ತಿಂಗಳಲ್ಲಿ ಬರುವ ಆದಿತ್ಯವಾರದಲ್ಲಿ ಇದು ಕೊನೆಯ ಆದಿತ್ಯವಾರವಾದ್ದರಿಂದ,   ತನ್ನ ಬಟ್ಟೆಗಳನ್ನು ಒಗೆಯಲು ಬಾತ್ ರೂಮ್ ಸೇರಿದ್ದಳು. ಉಳಿದೆಲ್ಲಾ ಆದಿತ್ಯವಾರಗಳಲ್ಲಿ ನಾವು ನಮ್ಮ ಒಂದು ವಾರದ ಬಟ್ಟೆಯನ್ನು ಒಗೆಯುತ್ತಾ ಕಷ್ಟ ಪಡುತ್ತಿದ್ದರೆ ಅವಳು ಅವಳ ಹಾಕಿದ ಬಟ್ಟೆಗಳಿಗೆ ಸೆಂಟ್ ಸಿಂಪಡಿಸಿ, ಮಡಿಚುವ ಕಾಯಕವೆಸಗುತ್ತಿದ್ದಳು. ಈಗ ಬಾತ್ ರೂಮಿನಿಂದ ಅವಳ  ಹಿಂದಿ  ಹಾಡುಗಳು ನಮ್ಮ ಕಿವಿಯ ತಮ್ಮಟೆಯನ್ನಪ್ಪಳಿಸುತ್ತಿದ್ದವು. ಅವಳ ಹಾಡುಗಳು ಎಷ್ಟು ಚೆನ್ನಾಗಿದ್ದವೆಂದರೆ, ರೊಮ್ಯಾಂಟಿಕ್ ಹಾಡುಗಳು ಶೋಕ ಗೀತೆಯಂತೆಯೂ, ಶೋಕಗೀತೆಗಳು ಯಕ್ಷಗಾನದ ಏರುಪದಗಳಂತೆಯೂ ಕೇಳಿಸುತ್ತಿದ್ದವು.ಆದರೆ ನಮ್ಮ ಬಾತ್ ರೂಮಿನ ಚಿಲಕ ಸರಿ ಇಲ್ಲದ ಕಾರಣ ಎಲ್ಲರೂ ಹಾಡು ಹೇಳುವುದು ಅನಿವಾರ್ಯವಾಗಿತ್ತು.

ಹೊರಗೆ ನಿಂತು 'ಕೋಲ್ ಹೆ ಕ್ಯಾ ನಿನ್ನ ಪಾಸ್' ಅಂತ ವಿಚಾರಿಸಿಕೊಂಡೆವು.. ಅವಳು ನ ಹೀ.. ಡಂಡಾ ಹೆ ಎಂದು  ಎಂದು ಕಿರುಚಿ ಹಾಡು ಮುಂದುವರಿಸಿದಳು. ದಂಡಪಿಂಡ ಯಾವುದಿದ್ದರೂ ನಮಗೇನನಂತೆ ಎಂದು ನಾವು ಮತ್ತೆ ಕೋಲನ್ನು ಅರಸುತ್ತಾ ಮನೆಯ ಮೂಲೆ ಮೂಲೆ ಸುತ್ತುತ್ತಿದ್ದೆವು. ಇದ್ದಕ್ಕಿದ್ದಂತೇ ಬಾತ್ ರೂಮಿ ನಿಂದ  ಹಿಂದೀ ಹಾಡಿನ ಜೊತೆ ಟಪ್ ಟಪ್ ಎಂಬ ಸದ್ದು ಹಾಡಿನೊಡನೆ ಶೃತಿಯಂತೆ ಕೇಳಿ ಬರತೊಡಗಿತು. ನಾವೆಲ್ಲ ಹೋಗಿ ಬಾತ್ ರೂಮಿನ  ಬಾಗಿಲು ತೆರೆಯುವುದನ್ನು ಕಾದು ನಿಂತೆವು. ಬಾಗಿಲು ತೆರೆಯಿತು. ನಮ್ಮೆಲ್ಲರ ಗದ್ದಲವನ್ನು ಒಳಗಿನಿಂದಲೇ ಕೇಳಿದ್ದ ಅವಳು, 'ಕ್ಯಾ ಹುವಾ ಕ್ಯಾ ಡೂಂಡ್ ರಹೆ ಹೆ ಆಪ್ 'ಅಂತ ಕೇಳುತ್ತಾ ಹೊರಬಂದಳು.  ಅವಳೀಗ ಒನಕೆ ಓಬವ್ವನ ಸ್ಟೈಲಿನಲ್ಲಿ ಕಚ್ಚೆಯ ಬದಲು ಹಾಫ್ ಪ್ಯಾಂಟ್ ಹಾಕಿ ಕೈಯಲ್ಲಿ ಒನಕೆಯ ಬದಲು ಕೋಲು ಹಿಡಿದು ನಿಂತಿದ್ದಳು. ಕಲ್ಲಿನಲ್ಲಿ ಬಟ್ಟೆ ಒಗೆಯುವ ಅಬ್ಯಾಸ ಇಲ್ಲದ ಕಾರಣ ಅವಳು ಕೋಲನ್ನು ಬಟ್ಟೆಗಳಿಗೆ ಬಡಿದು ನಮಗೆ ತಿಳಿಯದ ಹೊಸ ರೀತಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು.  ಇದನ್ನೇ ಹುಡ್ಕಿದ್ದು ಅಂತ ಅವಳ ಕೈಯಲ್ಲಿದ್ದ ಕೋಲನ್ನು ತೋರಿಸಿದೆ. 'ಪೆಹೆಲೆ  ಬತಾಯಾತಾನಾ.. ಡಂಡಾ ಹೆ ಮೆರೆ ಪಾಸ್..' ಎಂದು ತಣ್ಣಗೆ ಹೇಳುತ್ತಾ ಬಾಗಿಲ ಮೂಲೆಯಲ್ಲಿಟ್ಟಳು. ಕೋಲು ಕಂಡ ಕೂಡಲೇ ನಾಯಿಯೂ ಬಾಲ ಮುದುರಿ ಹೊರಗೋಡಿತು. 

ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ನಾಯಿ ಕುಂಯ್ ಕುಂಯ್ ಎಂದು ಬಾಲ ಅಲ್ಲಾಡಿಸುತ್ತಾ ಕುಣಿಯುವುದು ಕಾಣಿಸಿತು. ಅದರೆದುರಲ್ಲಿ ನಮ್ಮ ಬಾಂಬೇ ಬೆಡಗಿ  ಹುಣಸೇ ಬೀಜದಷ್ಟು ದೊಡ್ಡ ಮಾರೀ ಬಿಸ್ಕೆಟ್ಟಿನ ತುಂಡನ್ನು ಹಿಡಿದು 'ಆವೋ ರಾಜಾ.. ತುಮ್ಹೇ ಬಿಸ್ಕೆಟ್ ಕಿಲಾತೀ ಹೂಂ..' ಎಂದು  ನಿಂತಿದ್ದಳು ನಾವು ಇಡೀ ಪ್ಯಾಕೆಟ್ ಬಿಸ್ಕೆಟ್ ಹಾಕಿದರೂ ಬಾಲ ಎತ್ತದೇ ಗುರ್ರ್ ಅನ್ನುವ ನಾಯಿ ಈಗ  ಈ ರೀತಿ ವರ್ತಿಸುವುದು ಅಚ್ಚರಿ ತರಿಸಿತು. ಅದು ಅವಳನ್ನು ಎಷ್ಟು ಹಚ್ಚಿಕೊಂಡಿತೆಂದರೆ ಅವಳ ಆಜ್ಞಾನುಸಾರಿಯಾಗಿ ಅವಳು 'ಬೈಟೊ' ಎಂದರೆ ಕುಳಿತು, 'ಉಠೋ' ಎಂದರೆ ನಿಂತು ನಮಗೆ ಅಚ್ಚರಿ ತರಿಸಿತು.
ನಾವೆಲ್ಲರೂ ಈಗ ನಮ್ಮ ಪಾಠ ಪುಸ್ತಕಗಳನ್ನು ಬದಿಗಿಟ್ಟು ನಾಯಿಯ ಈ ನಡವಳಿಕೆಯ ಬಗ್ಗೆ ಸಂಶೋಧನೆ ಪ್ರಾರಂಭಿಸಿದೆವು. ಆ ಸಂಶೋದನೆ ಎಷ್ಟು ಗಂಭೀರವಾಗಿತ್ತೆಂದರೆ ನಾವು ನಾಯಿಯ ಬಾಲದಂತೆ ಅದರ ಹಿಂದೆಯೇ ಬಿದ್ದಿರುತ್ತಿದ್ದೆವು.ಅದನ್ನು ನಾವೂ ಒಲಿಸಿಕೊಳ್ಳಲು ಮನೆಯವರು ಗೋಗರೆದು ಕೇಳಿದರೂ ಕೊಡದ ನಮ್ಮ ನಮ್ಮ  ಪಾಕೆಟ್ ಮನಿಯನ್ನು ಖರ್ಚು ಮಾಡಿ ನಾಯಿಗಾಗಿ  ಬ್ರೆಡ್ಡಿನಿಂದ ಹಿ ಡಿದು ರಸ್ಕಿನವರೆಗೆ, ಮೊಟ್ಟೆಯಿಂದ  ಹಿಡಿದು ಮೂಳೆಯವರೆಗೆ ತಂದು ಹಾಕುತ್ತಿದ್ದೆವು. ಅದಕ್ಕೆ ಖುಷಿ ಆಗಲೆಂದು 'ನಾಯಿಮರಿ  ನಾಯಿಮರಿ' ಪದ್ಯವನ್ನು ಚೆನ್ನಾಗಿ ಕಲಿತು ಹಾಡುತ್ತಿದ್ದೆವು.ಆದರೂ ಅದು ಮೊದಲಿನಂತೆ ನಾವು ಕೊಟ್ಟದ್ದನ್ನು ತಿಂದು ನಮಗೆ 'ಗುರ್ರ್' ಎನ್ನುತ್ತಾ ಇರುತ್ತಿತ್ತು.  
ಮೆಸ್ ಹತ್ತಿರವಿದ್ದುದರಿಂದ ಮದ್ಯಾಹ್ನ ಊಟಕ್ಕೆ ಅಲ್ಲಿಗೆ ಬರುತ್ತಿದ್ದೆವು.  ಆ  ದಿನ ನಾವು ಮನೆಗೆ ಬರುವಾಗ ಸೂಟ್ ಬೂಟಿನಿಂದ ಅಲಂಕೃತರಾದವರೊಬ್ಬರು ಆಂಟಿಯೊಂದಿಗೆ 'ಅದು ನನ್ನ ನಾಯಿ  ನಾನು ಅದನ್ನೀಗ ತೆಗೊಂಡು ಹೋಗ್ತೀನಿ' ಅಂತ ಪಟ್ಟು  ಹಿಡಿದು ಕುಳಿತಿದ್ದರು. ಆಂಟೀ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು. ನಾಯಿಯೂ ಅವರನ್ನು ಗುರುತು ಹಿಡಿದು  ಬಾಲ ಅಲ್ಲಾಡಿಸುತ್ತಿತ್ತು. ಇದು ಮಾತಿನಿಂದ ಬಗೆ ಹರಿಯುವಂತೆ ಕಾಣುತ್ತಿರಲಿಲ್ಲ. ಕೊನೆಯದಾಗಿ ಅವರು 'ಆಯ್ತು ಹಾಗಿದ್ರೆ..ನಾನು ಕರೆದಾಗ ನಾಯಿ  ನನ್ನ ಕಡೆ ಬಂದರೆ ನನಗೆ.. ನಿಮ್ಮ ಕಡೆ ಬಂದರೆ ನಿಮಗೆ.. ನಾಯಿ ಯೇ ಫೈಸ್ಲಾ ಮಾಡ್ಲಿ' ಎಂದು ಕೊನೆಯ ತೀರ್ಮಾನ ಹೇಳಿ ಬಿಟ್ಟರು. ನಮಗೂ ಒಪ್ಪದೇ ಬೇರೆ ವಿಧಿಯಿರಲಿಲ್ಲ.  ನಮ್ಮ ಮೌನವನ್ನು ಒಪ್ಪಿಗೆ ಎಂದುಕೊಂಡ ಅವರು 'ಆವೋ ರಾಜ ಮೇರೆ ಪಾಸ್..' ಎಂದರು. 
ಇದ್ದಕ್ಕಿದ್ದಂತೆ  ನಮ್ಮ ಬುದ್ಧಿಯ ಟ್ಯೂಬ್ ಲೈಟುಗಳು ಪ್ರಖರವಾಗಿ ಉರಿದು  ನಾಯಿಯ ನಡವಳಿಕೆಯ ಮಿಸ್ಟ್ರಿ ಸಾಲ್ವ್ ಆಯ್ತು. ಅದು ಹಿಂದಿ ಭಾಷೆಗೆ ಒಗ್ಗಿದ ನಾಯಿ ಯಾದ ಕಾರಣ ನಮ್ಮ ಕನ್ನಡ ಅದಕ್ಕೆ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡೆವು.  ನಾವು ಸೋಲುವ ಭಯವೂ ಹುಟ್ಟಿಕೊಂಡಿತು. ಆದ್ರೆ ನಾಯಿಯನ್ನು ನಮ್ಮ ಕಡೆ ಉಳಿಸಿಕೊಳ್ಳಬೇಕಿದ್ರೆ ಅದಕ್ಕೆ ಅರ್ಥವಾಗುವಂತೇ  ಮಾತಾಡಬೇಕಿತ್ತು. ನಮ್ಮಹಿಂದೀ ಸುಂದರಿ ಬೇರೆ 'ಇವತ್ತು ಪ್ರಾಕ್ಟಿಕಲ್ಸ್ ಇದೆ ಕ್ಯಾಂಟೀನಿಗೆ ಹೋಗ್ತೀನಿ' ಅಂತ ಊಟಕ್ಕೆ ಬಂದಿರಲಿಲ್ಲ.. ಸ್ವಲ್ಪ ಹೊತ್ತು ನಮ್ಮ ಎದೆ ಬಡಿತದ ಸದ್ದೇ ನಮಗೆ ಕೇಳುವಂತಹ ಮೌನ. ಪರೀಕ್ಷಾ ಕಾಲದ ತಲ್ಲಣ.. ಪಾಸಾಗುವುದು ಮಾತ್ರವಲ್ಲ ನೂರಕ್ಕೆ ನೂರು ಬಾರದಿದ್ರೆ ನಾಯಿಯನ್ನು ಕಳೆದುಕೊಳ್ಳುವ ಭಯ ..
.ಈಗ ನಮ್ಮ ನಡುವಿನಿಂದ ಒಂದು ಸ್ವರ ನಿಧಾನಕ್ಕೆ ಎದ್ದಿತು. 'ಆವೋ ರಾಜ ತುಮ್ಹೆ ಅಂಡಾ ಕೊಡ್ತೀನಿ..' ನಮ್ಮ ಶ್ವಾನ ಸುಂದರನೀಗ ಕಿವಿ ನಿಮಿರಿಸಿ  ನಮ್ಮತ್ತ ನೋಡಿತು.ನಮ್ಮನ್ನು ನೋಡಿ ಬಾಲ ಅಲ್ಲಾಡಿಸುತ್ತಾ ಹತ್ತಿರ ಬಂತು.ನಾವೆಲ್ಲ ಸಂತೋಷದಿಂದ   ಕೈ ಕೈ ಹಿಡಿದು ಕುಣಿದೆವು. ಬಂದವರು ಸುಮ್ಮನೆ ಎದ್ದು ಹೋದರು.

ನಾಯಿ  ಕೂಡಾ ತಾನು ಕಲಿತ ಭಾಷೆಗೆ ಕೊಡುವ ಮರ್ಯಾಧೆಯನ್ನು ಕಂಡು ನಾವು ನಮ್ಮ ನುಡಿ ಕನ್ನಡವನ್ನು ಹಿಂದಿ ಹುಡುಗಿಗೆ ಚೆನ್ನಾಗಿ ಕಲಿಸಬೇಕೆಂಬ ದೃಢ ನಿರ್ಧಾರಕ್ಕೆ ಬಂದೆವು. ಜೊತೆಗೆ  ಹಿಂದಿಯನ್ನು  ತಪ್ಪಿಲ್ಲದೆ ಮಾತನಾಡುವಷ್ಟಾದರು ಕಲಿಯಬೇಕೆಂಬ ಹಠವೂ ಹುಟ್ಟಿತು. ಅಂದಿನಿಂದ ನಮ್ಮ ಹರಟೆಯ ಸಮಯವೆಲ್ಲ ಭಾಷಾ ಕಲಿಕೆಯ ಸಮಯವಾಗಿ ಮಾರ್ಪಟ್ಟಿತು. ನಮ್ಮ ಆಂಟೀ ನಮಗೆಲ್ಲಾ ಬಂದ ಒಳ್ಳೆಯ ಬುದ್ಧಿಗಾಗಿ ಸಂತೋಷ ಪಡುತ್ತಾ, ಬರುವ ವರ್ಷ ತಮ್ಮ ಮೆಸ್ಸಿಗೆ ಇನ್ನಷ್ಟು ಹುಡುಗಿಯರು ಬರುವ ಬಗ್ಗೆ ಕನಸು ಕಾಣ ತೊಡಗಿದರು.


Thursday, April 11, 2013

ಹಬ್ಬದ ಸಡಗರ


ಒಬ್ಬರ ಮನೆಯಲ್ಲಿ ಮದುವೆ ಉಪನಯನಗಳಂತಹ ಸಂಭ್ರಮ ಇರಬಹುದು ,ಇನ್ನೊಬ್ಬರ ಮನೆಯಲ್ಲಿ ಪೂಜೆ ಇರಬಹುದು,ಈ ಸಂಭ್ರಮ ಸಡಗರಗಳು ಅದನ್ನು ನಡೆಸುವವರ ಮನೆ ಮನಗಳಲ್ಲಿ ಮಾತ್ರ ಇರುತ್ತದೆ. ಅದರೆ ಎಲ್ಲರೂ ಒಂದೇ ಬಗೆಯ ಸಂತಸವನ್ನು ಮನೆ ಮನೆಗಳಲ್ಲಿ ಆಚರಿಸಿ ಸಂತಸ ಹಂಚಿಕೊಳ್ಳುತ್ತಾರೆ ಎಂದರೆ ಅವುಗಳಿಗೆ ಮೂಲ ಕಾರಣ ಹಬ್ಬಗಳು. 

ಈ ಹಬ್ಬಗಳು ನೂರು ಮೈಲು ದೂರದಲ್ಲಿ ಬರುತ್ತಿರುವಾಗಲೇ ಇಲ್ಲಿ ಮಾವಿನೆಲೆಯ ತೋರಣ ಕಟ್ಟಿ ಸ್ವಾಗತಕ್ಕೆ ಸಿದ್ಧತೆಗಳಾಗುತ್ತದೆ. ಅದರಲ್ಲೂ ಹೆಂಗಳೆಯರಿಗೆ ಹಬ್ಬದ ದಿನಗಳೆಂದರೆ ಉತ್ಸಾಹದ ಜೊತೆ ಜೊತೆಗೆ  ಜವಾಬ್ದಾರಿ  ತಗಲಿಕೊಂಡು ಬಿಡುತ್ತವೆ. 

ಯುಗಾದಿ ದಿನ ಬೇವು ಬೆಲ್ಲ ತಿಂದು ಮುಖ ಕಹಿ  ಮಾಡಿಕೊಂಡು ಸುಧಾರಿಸಿಕೊಳ್ಳುವಾಗಲೇ ಹಬ್ಬದ ಇನ್ನೊಂದಷ್ಟು ದಿನಗಳು ಹೆಸರುಗಳು ನಾಲಿಗೆಯಲ್ಲಿ ನಲಿದಾಡಲು ತೊಡಗುತ್ತವೆ. 'ನಾಗರ ಪಂಚಮಿ  ನಾಡಿಗೆ ದೊಡ್ಡದು' ಎಂದು ಬಗ್ಗಿ ಕಲ್ಲಿನ ನಾಗರಗಳಿಗೆಲ್ಲಾ ಹಾಲೆರೆದು ಬೆನ್ನಿನ್ನೂ ನೆಟ್ಟಗಾಗುವಷ್ಟರಲ್ಲಿ ಬೇರೆ ಹಬ್ಬಗಳು ಒಂದೊಂದಾಗಿ 'ಹಾಜರ್ ಸಾರ್' ಎಂದು ಮನೆಯೊಳಗೆ ಪ್ರವೇಶಿಸಲು ಸರತಿಯಲ್ಲಿ ನಿಂತಿರುತ್ತದೆ. ದಿನನಿತ್ಯದ ಯಾಂತ್ರಿಕ ಬದುಕಿಗೆ ಒಂದಿಷ್ಟು ಹರ್ಷದ ಸಿಂಚನಗರೆಯುತ್ತವೆ.

ಗಂಡಸರೇನೋ ಆ ದಿನ ಸಿಕ್ಕ ರಜೆಯನ್ನು ಕಳೆಯಲು ರುಚಿ ರುಚಿ ಊಟದ ಜೊತೆಗೆ ಸೋಫಾದ ಮೇಲೆ ಮೈ ಚೆಲ್ಲಿ ಮಲಗುವ ಕನಸು ಕಾಣುತ್ತಿದ್ದರೆ ಹೆಂಗಸರು ರೇಶಿಮೆ ಸೀರೆ ಉಟ್ಟು ಸರಬರ ಸದ್ದು ಮಾಡುತ್ತಾ ವಿಶೇಷ ತಿನಿಸುಗಳ ಸಿದ್ಧತೆಯಲ್ಲಿರುತ್ತಾರೆ.ಅದರಲ್ಲೂ ಹೊಸದಾಗಿ ಸೊಸೆಯಾದವಳೋ, ಅಥವಾ ಸೇರಕ್ಕಿಯನ್ನು ಒದ್ದು ಒಳ ಬಂದ ನವಸೊಸೆಯ ಅತ್ತೆಯಾದವಳಿಗೋ ಈ ಹಬ್ಬ ಇನ್ನಷ್ಟು ಮಹತ್ವದ್ದಾಗಿರುತ್ತದೆ. ಅತ್ತೆಗೆ ತಾನಿಷ್ಟು ಕಾಲ ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಸೊಸೆಗೂ ಪರಿಚುಸುವ ಆಸೆಯಾದರೆ ಸೊಸೆಗೆ ತನ್ನ ತವರಲ್ಲಿ ಆಚರಿಸುತ್ತಿದ್ದ ಹಬ್ಬದ ಸಡಗರವನ್ನು ಇಲ್ಲಿಯೂ ಕಾಣುವಾಸೆ. 

ಹೆಣ್ಣಾಗಿ ನಾನು ಈ ಎಲ್ಲಾ ಆಸೆಗಳಿಂದ ಮುಕ್ತಳಾಗಲು ಹೇಗೆ ಸಾಧ್ಯ. ಹಬ್ಬ ಹಳೆಯದೇ ಆದರೂ ನನಗೆ ಹೊಸ ಮನೆಯಲ್ಲಿ ಆಚರಿಸುವ ಉತ್ಸಾಹ. ಜೊತೆಗೆ ಇಲ್ಲಿಯ ರೀತಿ ರಿವಾಜನ್ನು ಅರಿಯುವ ಕುತೂಹಲ. 
'ಹಬ್ಬದ ದಿನವೇ ಬೆಳಿಗ್ಗೆ ಬೇಗ ಎದ್ದು ಎಲ್ಲಾ ತಯಾರಿ ಮಾಡೋಣಮ್ಮಾ.ಇವತ್ತು ಮಾಡಿಟ್ರೆ ನಿನ್ನ ಮಾವನೋ, ನಿನ್ನ ಗಂಡಾನೋ ಡಬ್ಬಿಗೆ ಕೈ ಹಾಕಿ ತಿಂದು ಬಿಡುತ್ತಾರೆ. ಇನ್ನೂ ನೈವೇಧ್ಯ ಆಗಿಲ್ಲ,ಎಂಜಲು ಮಾಡ್ಬಿಟ್ರಲ್ಲ ಅಂದ್ರೆ ಕೈ ಹಾಕಿ ತೆಗೊಂಡ್ರೆ ಅದು ಹೇಗೆ ಎಂಜಲಾಗುತ್ತೆ?  ಎನ್ನುವೆಲ್ಲಾ ಅಥರ್ವಣ ಪಾಠಗಳನ್ನು ಮಾಡ್ತಾರೆ..' ಅಂದರು. ತವರಲ್ಲಿ ನಾನೂ ಇದನ್ನೇ ಮಾಡುತ್ತಿದ್ದೆ ಅಂತ ಅತ್ತೆಯೆದುರು ಹೇಳೋಕೆ ಸಾಧ್ಯಾನೇ..!! ಹೂಂ ಅಂತ ತಲೆ ಅಲುಗಿಸಿದೆ. 

ಮರುದಿನ ಸೂರ್ಯ ಹುಟ್ಟುವ ಮೊದಲೇ ಎದ್ದು ಸ್ನಾನ ಮಾಡಿ ಫಿಲ್ಮೀ ಸ್ಟೈಲಿನಲ್ಲಿ ತಲೆಗೆ ಟವೆಲ್ ಸುತ್ತಿ ಅಡುಗೆ ಮನೆಗೆ ಪ್ರವೇಶ ಮಾಡಿದೆ. ಅತ್ತೆ ಆಗಲೇ ಎದ್ದು ತನ್ನ ಸುತ್ತ ಸಾಮಾನುಗಳ ರಾಶಿಯನ್ನೇ ಹರಡಿಕೊಂಡು ಕಿರಾಣಿ ಅಂಗಡಿಯ ಮಾಲೀಕರಂತೆ ಕಾಣಿಸುತ್ತಿದ್ದರು. ಅವರ ನಿರ್ದೇಶನದಂತೆ ಸ್ವಲ್ಪವನ್ನು ಹುರಿದು, ಇನ್ನೊಂದಿಷ್ಟು ತುರಿದು ಎಂಬೆಲ್ಲ ಕೆಲ್ಸಗಳನ್ನು ಮಡಿಲಿಗೆಳೆದುಕೊಂಡೆ. ಮೈಸೂರುಪಾಕು, ಸಾಟುಗಳೆಂಬ ಸಿಹಿ  ತಿಂಡಿಗಳು ಪರಿಮಳ ಸೂಸುತ್ತಾ ಡಬ್ಬದಲ್ಲಿ ಕುಳಿತುಕೊಂಡವು. ದೇವರಿಗೂ ಬರೀ ಸಿಹಿ  ತಿಂದ್ರೆ ಬೇಸರ ಬರೋಲ್ವಾ.. ಅವನಿಗಾಗಿ ಕರುಂ ಕುರುಂ  ಚಕ್ಕುಲಿ, ಕೋಡುಬಳೆ, ವಡೆಯ ತಯಾರಿ ಆಗಬೇಕಿತ್ತು. ಅದರ ಸಿದ್ಧತೆಗಾಗಿ ಅತ್ತೆ ಹುರಿದ ಉದ್ದಿನಬೇಳೆಯ ಹುಡಿಯನ್ನು ಹುಡುಕುತ್ತಿದ್ದರು. ಎಲ್ಲಿ ಹುಡುಕಿದರೂ ಇಲ್ಲ. ನಾನೂ ಹುಡುಕಿದೆ. ಊಹೂಂ.. ಕಾಣಿಸಲಿಲ್ಲ. ಎಲ್ಲೋ ಅಂಗಡಿಯವನು ಕೊಡಲಿಕ್ಕೆ ಮರೆತಿದ್ದಾನೆ ಅಂತ  ಹಬ್ಬಕ್ಕೆ ತರಿಸಿದ ಸಾಮಾನು ಚೀಟಿಯನ್ನು ತಂದು ಅದರಲ್ಲಿ ನೋಡಿದರೆ ಪಟ್ಟಿಯಲ್ಲಿ ಆ ಹೆಸರೇ ಸೇರಿರಲಿಲ್ಲ. ಅಂಗಡಿಯವನು ಚೀಟಿಯಲ್ಲಿದ್ದ ಸಾಮಾನುಗಳನ್ನೇ ಕಟ್ಟಿ ಕೊಡಲು ಮರೆತಿರುತ್ತಾನೆ ಅಂದ ಮೇಲೇ ಬರೆಯಲು ಮರೆತಿದ್ದ ಸಾಮಾನನ್ನು ಹುಡುಕಿದರೆ ಸಿಗುವುದೆಲ್ಲಿಂದ..? 'ಇಷ್ಟು ವರ್ಷ ಹೀಗೆ ಆಗಿರಲಿಲ್ಲ. ಈಗಿನ್ನೂ ಇಷ್ಟು ಬೇಗ ಯಾವ ಅಂಗಡಿ ತಾನೇ ಬಾಗಿಲು ತೆರೆಯುತ್ತೆ.? ಏನಮ್ಮಾ ಮಾಡೋದೀಗ' ಎಂದು ಅತ್ತೆ ಆತಂಕಗೊಂಡರು.   

ನನ್ನ ತವರಲ್ಲಿ ಅಮ್ಮ ಇಡೀ ಬೇಳೆಯನ್ನು ಹುರಿದು ಮಿಕ್ಸಿಯಲ್ಲಿ ಹುಡಿ ಮಾಡಿ ಚಕ್ಕುಲಿ ಮಾಡುತ್ತಿದ್ದುದು ಅಂತ ತಿಳಿದಿದ್ದುದರಿಂದ ' ಅದೆಷ್ಟು ಹೊತ್ತಿದೆ ಅತ್ತೇ.. ಸ್ವಲ್ಪ ಹುರಿದು ಹುಡಿ ಮಾಡಿದರಾಯ್ತು. ನಾನೇ ಮಾಡಿಕೊಡ್ತೀನಿ ನಿಲ್ಲಿ..' ಎಂದೆ. ಬಾಣಲೆಯಲ್ಲಿ ಹುರಿಯುತ್ತಿದ್ದ  ಉದ್ದಿನಬೇಳೆ ಕೆಂಪಗಾಗುತ್ತಿದ್ದಂತೆ ಅಷ್ಟು ಹೊತ್ತು ಪ್ರಖರವಾಗಿ ಉರಿಯುತ್ತಿದ್ದ ಬಲ್ಬ್ ಕೂಡಾ ನಿಧಾನಕ್ಕೆ ಡಿಮ್ ಆಗಿ ಕೆಂಪಗಾಯಿತು. 

ಇದೇನು ಕರ್ಮ ಹಬ್ಬದ ದಿನ ಕರೆಂಟ್  ಹೀಗಾಗೋದು..? ಎಂದು ಇಬ್ಬರಿಗೂ ತಲೆ ಬಿಸಿ ಆಯಿತು. ನಾವಿಬ್ಬರೂ ಒಬ್ಬರಾದ ಮೇಲೊಬ್ಬರಂತೆ ಕರೆಂಟಿನವರಿಗೆ ಬಯ್ದು ಅದೂ ಸಾಕಾಗದೆ ನಮ್ಮೂರ ಲೈನ್ ಮ್ಯಾನ್ ನ ವಂಶದವರ ಜನ್ಮ ಜಾಲಾಡಿದೆವು. ಅಷ್ಟರಲ್ಲಿ ಸ್ವಲ್ಪ ಬಲ್ಬ್ ಎಲ್ಲಿದೆ ಎಂದು ಕಾಣುವಂತೆ ಉರಿಯುತ್ತಿದ್ದ ಅದು ಪೂರ್ಣ ಮಾಯವಾಯಿತು. 

ಇನ್ನು ಬಯ್ದು ಪ್ರಯೋಜನವಿಲ್ಲ ಎಂದು  ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿದ್ದ ಮಾವನವರನ್ನು ಎಬ್ಬಿಸಿ, ಲೈನ್ ಮ್ಯಾನಿಗೆ ಫೋನ್ ಮಾಡಲು ಒತ್ತಾಯಿಸಿದೆವು. 'ಹಬ್ಬ ಅಲ್ವಾ ಸಾರ್.. ನಾನು ಎರಡು ದಿನ ರಜೆಯಲ್ಲಿದ್ದೀನಿ. ಅಂತ ಫೋನ್ ಕಟ್ ಮಾಡಿದ. ಛೇ.. ಇನ್ನೇನು ಮಾಡೋದು ಎಂದು ಅತ್ತೆ ತಲೆ ಮೇಲೆ ಕೈ ಹೊತ್ತರೆ ನಾನು ಎದೆಗುಂದದೇ, ಕೊಂಚ ಸಿಟ್ಟಿನ ಸ್ವರದಲ್ಲೆ  ' ಅತ್ತೇ ಒನಕೆ ಎಲ್ಲಿದೆ ಹೇಳಿ' ಎಂದು ಓಬವ್ವನ ಮಾದರಿಯಲ್ಲೇ ಸೊಂಟಕ್ಕೆ ಸೆರಗು ಬಿಗಿದು ಕೇಳಿದೆ. ಮೊದಲೇ ವೀರಕಲಿಗಳ ನಾಡು ಕೊಡಗಿನಿಂದ ಬಂದವಳು.ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ಅಮ್ಮ ಬೇರೆ ' ಇವಳಿಗೆ ಸ್ವಲ್ಪ ಸಹನೆ ಕಮ್ಮಿ , ಒಂಚೂರು ಕೋಪವೂ ಜಾಸ್ತಿ, ಅಂತೆಲ್ಲ ಹೇಳಿ ಬಿಟ್ಟಿದ್ದರು. ಆದ್ದರಿಂದ ನನ್ನ ಈಗಿನ ರೋಷಾವೇಶಕ್ಕೆ  ಅತ್ತೆ ಸ್ವಲ್ಪ ನಡುಗಿ  ನಾನೇನೋ ಅವನ ತಲೆ ಒಡೆಯಲು ಹೋಗುತ್ತಿರುವಂತೆ 'ಲೈನ್ ಮ್ಯಾನ್ ಪಾಪ ರಜೆ ಅಂತೆ, ಅವ್ನಿಗೂ ಹಬ್ಬ ಮಾಡ್ಬೇಕಲ್ಲ ಬಿಟ್ಬಿಡೇ ಸುಮ್ನೆ' ಅಂದ್ರು.

' ಅವ್ನು ಇರ್ಲಿ ಅತ್ತೆ ಅವನ ಪಾಡಿಗೆ, ನೀವು ಒನಕೆ ಕೊಡಿ. ಒರಳಿಗಾದ್ರು ಹಾಕಿ ಈ ಉದ್ದಿನ ಬೇಳೆಯನ್ನು ಹುಡಿ ಮಾಡಿ ಕೊಡ್ತೀನಿ' ಅಂದೆ. ಅತ್ತೇ ಕೂಡಲೇ  ' ಅಯ್ಯೋ ಹಾಗಂದಿದ್ದಾ ನೀನು.. ತಡಿ ತಡಿ ತಂದೆ ಎಂದು ಒಳಹೋಗಿ ಒನಕೆ ಹುಡುಕಿ ತಂದಿಟ್ಟರು. ನಾನು ಒನಕೆಯಲ್ಲಿ ಅಕ್ಕಿ ಹುಡಿ ಮಾಡುವುದನ್ನು ಚಿಕ್ಕಂದಿನಲ್ಲಿ ನೋಡಿದ್ದು ನೆನಪಿತ್ತೇ ವಿನಃ ಅದರ ಬಗ್ಗೆ ಬೇರೇನೂ ತಿಳಿದಿರಲಿಲ್ಲ. ಒರಳಿಗೆ ತುಂಬಾ ಉದ್ದಿನಬೇಳೆಯನ್ನು ತುಂಬಿ ಲೈನ್ ಮ್ಯಾನ್ ನ ತಲೆಗೇ ಹೊಡೆಯುವಷ್ಟು ಶಕ್ತಿ ಹಾಕಿ ಕುಟ್ಟಿದೆ. ಒಳಗಿದ್ದ ಉದ್ದಿನಬೇಳೆ 'ಚೆಲ್ಲಿದರೂ ಮಲ್ಲಿಗೇಯಾ..' ಎಂಬಂತೆ ಸುತ್ತಲೂ ಚೆಲ್ಲಿತು. ಮತ್ತೊಮ್ಮೆ ತುಂಬಿ ನಿಧಾನಕ್ಕೆ ಕುಟ್ಟಿದರೂ ಆ ಕೆಲಸ ಸುಸೂತ್ರವಾಗಿ ನಡೆಯುವಂತೆ ತೋರಲಿಲ್ಲ. 
ಆದರೆ ಮನೆಯ ಸೊಸೆಯಾಗಿ ನಾನು ಅಷ್ಟು ಸುಲಭಕ್ಕೆ ಕೈ ಚೆಲ್ಲಿ ಕುಳಿತುಕೊಳ್ಳಲು ಸಾಧ್ಯವೇ..? ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಅತ್ತೆಯ ಕಡೆಗೆ ತಿರುಗಿ ' ಅತ್ತೇ ಬೀಸುವ ಕಲ್ಲು ಇಲ್ಲವೇ' ಎಂದೆ.
ನನ್ನ ಓಬವ್ವಾವತಾರ ನೋಡಿಯೇ ಅರ್ಧ ಸುಸ್ತಾಗಿದ್ದ ಅತ್ತೆ, 'ಇದೆಯಮ್ಮಾ ಆದ್ರೆ ಅದನ್ನು ಮುಟ್ಟದೇ ಮೂರು ವರ್ಷ ಕಳೀತು. ಈಗ ಹೊಸದಾಗಿ ಬ್ರಹ್ಮ ಕಲಶ ಮಾಡಿ ತೊಳೀಬೇಕಷ್ಟೇ' ಎಂದರು 

ಅಷ್ಟರಲ್ಲಿ ನಮ್ಮ ಗಲಾಟೆಗೆ ಕಣ್ಣು ಪಿಳುಕಿಸುತ್ತಾ ಎದ್ದ ನನ್ನ ಪತಿರಾಯರಿಗೆ ಹೊಸ ಹೆಂಡತಿಯ ಉತ್ಸಾಹಕ್ಕೆ ಭಂಗ ತರುವ ಮನಸ್ಸಾಗಲಿಲ್ಲ. ಬಲ ಭೀಮನಂತೆ ಎದ್ದು ಬೀಸುವ ಕಲ್ಲನ್ನೆತ್ತಿ ಅಂಗಳದಲ್ಲಿರಿಸಿ, ಎರಡು ಕೊಡ ನೀರು ಹೊಯ್ದು ಸ್ನಾನ ಮಾಡಿಸಿದರು. ನಾನು ಒಣಗಿದ ಬಟ್ಟೆಯಲ್ಲಿ ಅದನ್ನೊರೆಸಿದೆ. ಆದ್ರೂ ಯಾಕೋ ಏನೋ ಮಿಸ್ಸಿಂಗ್ ಅಂತ ಅನ್ನಿಸತೊಡಗಿತು. ನೋಡಿದರೆ ಅದನ್ನು ತಿರುಗಿಸುವ  ಮರದ ಹಿಡಿಯೇ ಇರಲಿಲ್ಲ. 

ಈಗ ಮಾವನ ಸರದಿ. ನಾವು ಬಾಯಿ  ತೆರೆಯುವುದಕ್ಕೆ ಮುನ್ನವೇ ಅದಕ್ಕೊಂದು ಮರದ ಹಿಡಿ ಹೊಂದಿಸಿ ಕೊಟ್ಟರು. ಎಲ್ಲಾ ಸಿದ್ಧವಾಗಿ ನಾನು ಕಲ್ಲಿನೆದುರು ಕುಳಿತೆ. ಅತ್ತೆಯೂ ನನ್ನೆದುರು ಕುಳಿತು ಕೈ ಜೋಡಿಸಿದರು.ಸುಮ್ಮನೆ ಹಿಟ್ಟು ಬೀಸುವ ಬದಲು ಹಬ್ಬದ ಸಡಗರ ಹೆಚ್ಚಿಸಲು  ' ನಿಮ್ಗೆ ಬೀಸುವ ಕಲ್ಲಿನ ಪದ ಬರುತ್ತಾ ಅತ್ತೆ' ಅಂದೆ. ಮೊದಲೇ ಕೆಲಸ ಆಗದ ಮಂಡೆ ಬಿಸಿಯಲ್ಲಿದ್ದ ಅವರು  ಒಂದು ಹಾಡೂ ನೆನಪಾಗದೇ, 'ಇಲ್ಲಮ್ಮಾ ಸತ್ಯನಾರಾಯಣ ಪೂಜೆಯ ಹಾಡು ಮಾತ್ರ ನೆನಪಾಗ್ತಿದೆ ಈಗ ಹೇಳಲಾ' ಅಂದ್ರು. ನಂಗೆ ಹಾಗೊಂದಿದೆ ಅಂತ ಗೊತ್ತಿರಲಿಲ್ಲ. ಹುಂ ಹೇಳಿ ಅತ್ತೆ ಅಂದೆ.
 " ಸತ್ಯ ದೇವ ಕೊಡು ಪ್ರಸಾದವಾ , ಶಿರದಿ ಮೆರೆವ ಪತ್ರ ಪುಷ್ಪ ಭರಿತ ದ್ರವ್ಯವಾ.." "ಗೆ ಸರಾಗವಾಗಿ ಸುರುವಾದ ಹಾಡು ಬೀಸುವ ಕಲ್ಲಿನೊಂದಿಗೆ ಸ್ಪರ್ಧೆ ಮಾಡಲಾಗದೇ ಫಸ್ಟ್ ಗೇರು ಹಾಕಿದರೂ ಏರದ ಗಾಡಿಯಂತೆ ಏದುಬ್ಬಸ ಬಿಡತೊಡಗಿತು. ' ನಂಗೆ ಕೆಲ್ಸ ಮಾಡುತ್ತಾ ಹಾಡೋಕ್ಕಾಗಲ್ಲಮ್ಮ .. ನೀನೇ ಹೇಳು ಅಂದರು. 
ಮರ್ಯಾಧೆಗೆ ಒಂದಾದರೂ ದೇವರ ನಾಮ ನೆನಪಿಗೆ ಬರಬೇಡವೇ..!! ಹೋಗಲಿ ದೇಶ ಭಕ್ತಿ ಗೀತೆಯನ್ನು ನೆನಪಿಸಿಕೊಂಡೆ. ಅದೂ ಜನ ಗಣ ಮನ, ವಂದೇ ಮಾತರಂ ಬಿಟ್ಟು ಮುಂದೆ ಹೋಗಲಿಲ್ಲ. ಮದುವೆಗಿಂತ ಎಷ್ಟೋ ಮೊದಲು ನೋಡಿದ ಸಿನೆಮಾದಾ ಹಾಡು 'ಕಬೂತರ್ ಜಾ ಜಾ'  ನೆನಪಾಗಿ ಅದನ್ನೇ ಹಾಡಿದೆ. ಅಷ್ಟರಲ್ಲಿ ಅದನ್ನು ಕೇಳಿಸಿಕೊಂಡ ನನ್ನವರು ' ಕಬೂತರ್ ಬಿಡು ಕಾಗೆ ಕೂಡಾ ಈ ಸ್ವರ ಕೇಳಿ ಹೆದರಿ ಹಾರುತ್ತೆ. ಜಾ .. ಜಾ.. ಅಂತ ಹೇಳಲೇ ಬೇಕಿಲ್ಲ ಅಂತ ಕಿಚಾಸಿದರು. ನನ್ನ ಸ್ವರ ಮಾಧುರ್ಯದ ಬಗ್ಗೆ ಇಂತಹ ಮಾತು ಕೇಳಿ ಸಿಟ್ಟು ಬಂದು, ಅತ್ತೆ ಎದುರಿಗಿರುವುದರಿಂದ ಬಯ್ಗುಳಗಳನ್ನು ನುಂಗಿಕೊಂಡು ಮೌನವಾಗಿ ಬೀಸುವುದನ್ನು ರಭಸಗೊಳಿಸಿದೆ. 

ಅಂತೂ ಇಂತೂ ಉದ್ದಿನಬೇಳೆಯನ್ನು ಹುಡಿಯ ರೂಪಕ್ಕೆ ತಂದು, ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಚಕ್ಕುಲಿ ವಡೆಯ  ಹಿಟ್ಟು ರೆಡಿ ಮಾಡಿದ್ದಾಯಿತು. ಈಗ ಉತ್ಸಾಹದಲ್ಲಿ ಎಣ್ಣೆ ಬಿಸಿಗಿಟ್ಟು ಕಾದ ಎಣ್ಣೆಗೆ ಚಕ್ಕುಲಿ ಹಾಕಿದೆ. ಡಬ್ ಎಂಬ ಸದ್ದಿನೊದನೆ ಎಣ್ಣೆ ಹೊರ ಚೆಲ್ಲಿತು. ' ಎಲ್ಲಿಯೋ ಉದ್ದಿನ ಬೇಳೆ ಇಡೀ ಉಳ್ಕೊಂಡಿದೆ ಎಂದರು ಅತ್ತೆ ಅನುಭವೀ  ಕಂಠದಲ್ಲಿ. ದೋಸೆಯ ಕಾವಲಿಯ ಮುಚ್ಚಳವನ್ನೇ ಗುರಾಣಿಯಂತೆ ಹಿಡಿದು ಚಕ್ಕುಲಿ ಬೇಯಿಸಿ ತೆಗೆದಿದ್ದಾಯಿತು.ಚಕ್ಕುಲಿ ಸಿಡಿತಕ್ಕೆ ಸಿಕ್ಕಿ ಕೆಲವು ಕಡೆ ತನ್ನ ಮೂಲ ಆಕಾರವನ್ನು ಕಳೆದುಕೊಂಡು ಹೊಸ ರೂಪ ಹೊಂದಿತ್ತು. ದೇವನೊಬ್ಬ ನಾಮ ಹಲವು ಎಂಬುದಿಲ್ಲಿ ನಾಮ ಒಂದೇ ರೂಪ ಹಲವು ಆಗಿತ್ತು. ಆದರೇನು ರುಚಿಯಲ್ಲಿ ವ್ಯತ್ಯಾಸವಿಲ್ಲ ತಾನೇ ಅಂತ ನಾವೇ ಸಮಾಧಾನ ಪಟ್ಟುಕೊಂಡೆವು. 

ದೇವರಿಗೆ ನೈವೇಧ್ಯ ಆದ ನಂತರ  "ಇಷ್ಟು ಭಕ್ತಿಯಲ್ಲಿ ಯಾರೂ ನೈವೇಧ್ಯ ತಯರು ಮಾಡಿರಲಿಕ್ಕಿಲ್ಲ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೇವರು ಕೊಟ್ಟೇ ಕೊಡ್ತಾನೆ" ಎಂದು ಚಕ್ಕುಲಿ ಪ್ರಿಯರಾದ ಮಾವ ನಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದರು.ಅತ್ತೆಯಂತೂ ಇದರಿಂದ ಸಂತೋಷಗೊಂಡು ಬರೋ ತಿಂಗಳು ಬರುವ ಹಬ್ಬಕ್ಕೆ ಇನ್ನೊಂದು ಸೇರು ಹಿಟ್ಟು ಹೆಚ್ಚೇ ಚಕ್ಕುಲಿ ಮಾಡ್ಬೇಕು. ರುಚಿ ಪರಿಮಳ ಎಲ್ಲಾ ತುಂಬಾ ಚೆನ್ನಾಗಿದೆ ಎಂದರು. 

ನಾನಂತೂ ಆ ದಿನವೂ ಕರೆಂಟ್ ಹೋಗದಿರಲಿ ಅಂತೆ ಈಗಿನಿಂದಲೇ ಆ ಹಬ್ಬದ ದೇವರನ್ನು ಬೇಡಿಕೊಳ್ಳಲು ಪ್ರಾರಂಭಿಸಿದ್ದೇನೆ. 

  






Tuesday, March 12, 2013

ಅಜ್ಞಾತ ಸಮರ


ನಿತ್ಯವೂ ನನಗೆ ತಿಳಿದ ಮಟ್ಟಿಗೆ, ರುಚಿ ಶುಚಿಯಾಗಿ ನನಗೆ ಮರ್ಯಾದೆಯಾಗಿ ಮಾಡಲು ಬರುತ್ತಿದ್ದ ಅನ್ನ ಸಾರು ಪಲ್ಯ ಸಾಂಬಾರುಗಳನ್ನೇ ವಿಧ ವಿಧ ತರಕಾರಿ ಬಳಸಿ, ವಿವಿಧ ಸಂಭವನೀಯತೆಗಳನ್ನು ಬಳಸಿಕೊಂಡು ಹೊಸದು ಎಂದು ಲೇಬಲ್ ಹಚ್ಚಿ ಬಡಿಸುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಅಪುರೂಪಕ್ಕೆ ಹೋಟೆಲ್ಲಿಗೆ ಹೋಗಿ ಬಂದಾಗ ಒಂದೆರಡು ದಿನ ನನ್ನ ಅಡುಗೆಯ ಬಗ್ಗೆ ಒಂದಿಷ್ಟು ಕೊಂಕು ಕುಹಕಗಳು ಹಿಂದಿನಿಂದ ಕೇಳಿ  ಬಂದರೂ ನನ್ನ ಎದುರಲ್ಲಾಡುವ ಧೈರ್ಯ ಯಾರಿಗೂ ಬಂದಿರಲಿಲ್ಲ. 

ಆದರೆ ಯಾವಾಗ ಮಗರಾಯ ಕಾಲೇಜು ಮೆಟ್ಟಿಲು ಹತ್ತಿಳಿದು ಬಸವಳಿಯತೊಡಗಿದನೋ ಅಂದಿನಿಂದ ನನ್ನ ಅಡುಗೆಗಳೆಲ್ಲ ಅವನ ಕಣ್ಣಿಗೆ ಬಣ್ಣಹೀನವಾಗಿಯೂ,  ಬಾಗೆ ರುಚಿಹೀನವಾಗಿಯೂ ಕಾಣಿಸತೊಡಗಿತು. ಬೆಳಗ್ಗೆ ತಿನ್ನುವ ತಿಂಡಿಯನ್ನು  ಕಮೆಂಟು ಮಾಡಿಕೊಂಡು ತಿನ್ನುವಷ್ಟು ಬೇಗ ಅವನು ಹಾಸಿಗೆಯಿಂದ  ಏಳುತ್ತಿರಲಿಲ್ಲವಾದ್ದರಿಂದ ಅದು ಸಧ್ಯಕ್ಕೆ ಬಚಾವಾಗಿತ್ತು. ರಾತ್ರಿ ಊಟ ಮಾಡುವಾಗ ಸಾಂಬಾರಿನ ತಪಲೆಯ ಮುಚ್ಚಳ ತೆಗೆದು ಸೌಟು ಹಾಕಿ ತಿರುವಿ , ಮೂಗನ್ನು ಅರಳಿಸಿ " ಇವತ್ತು ಕ್ಯಾಂಟೀನಿನ ಮಾಮು ಮಾಡಿದ  ಸಾರು ಎಷ್ಟು ಪರಿಮಳ ಇತ್ತು ಗೊತ್ತಾ.. ಇದ್ಯಾವಾಗ ಹಾಗೆ ಗಮಗಮಿಸುತ್ತದೋ.." ಎಂದು ನನ್ನ ಮುಖ ನೋಡುತ್ತಿದ್ದ. ನಾನು ಸಹಾಯಕ್ಕಾಗಿ ಇವರ ಮುಖ ನೋಡಿದರೆ ಇವರು ರನ್ ಔಟ್ ಆಗುವ ಅಪಾಯದಲ್ಲಿರುವ ಕ್ರಿಕೆಟ್ ಆಟಗಾರ ತನ್ನ ಕ್ರೀಸ್ ಗೆ ಮರಳುವ ವೇಗದಲ್ಲಿ ಅಲ್ಲಿಂದ ಊಟ ಮುಗಿಸಿ ಓಡುತ್ತಿದ್ದರು. ಇನ್ನು ಮಗನ ವಾದ ಸರಪಣಿಗೆ ಇದಿರಾಡಿ ಹೊತ್ತು ಕಳೆದರೆ ನೋಡಬೇಕಾಗುವ ಸೀರಿಯಲ್ಲು ಮಿಸ್ ಆಗುವ ಭಯದಲ್ಲಿ ನಾನು ಮೌನವಾಗಿಯೇ ಊಟ ಮುಗಿಸಿ ಏಳುತ್ತಿದ್ದೆ. 

ಮೊದಲೆಲ್ಲಾ ಆಗೊಮ್ಮೆ ಈಗೊಮ್ಮೆ ಹೊರಡುತ್ತಿದ್ದ ಈ 'ಡೈಲಾಗ್ ಡೆಲಿವರಿ'ಗಳು ಈಗೀಗ ಪ್ರತಿದಿನವೂ ಪ್ರಸವಿಸತೊಡಗಿ ನನಗೆ ನಿತ್ಯ ಹೊಟ್ಟೆ ನೋವು ಕೊಡುತ್ತಿತ್ತು.ಇಷ್ಟುದ್ದ ಇದ್ದ ಪೋರನನ್ನು ಇಷ್ಟೆತ್ತರ ಬೆಳೆಸಲು ಬಳಸಿದ ಅಹಾರ ಈಗ ಇದ್ದಕ್ಕಿದ್ದಂತೇ ಸತ್ವಹೀನವಾಗುವುದೆಂದರೆ  ನನಗೆ ಅವಮಾನವಲ್ಲವೇ..?  ಇದರಿಂದಾಗಿ ನಾನು ಅವನ 'ಕ್ಯಾಂಟೀನಿನ ಮಾಮು'"ನೊಂದಿಗೆ  ಅಜ್ಞಾತ ಕದನಕ್ಕಿಳಿದೆ. 
ಇದರ ಮೊದಲ ಕ್ರಮವಾಗಿ ಟಿ ವಿ  ಯಲ್ಲಿ ಬರುವ ಅಡುಗೆ ಕಾರ್ಯಕ್ರಮ ನೋಡಿ ಹೊಸ ರುಚಿಗಳನ್ನು ಮಾಡೋಣ ಎಂದುಕೊಂಡೆ. ಆದರೆ ಅದರಲ್ಲಿ ಬಳಸುವ  ಸಾಮಗ್ರಿಗಳು ನನ್ನ ಕೈಗೆ ಸುಲಭ ಲಭ್ಯವಾಗದ ಕಾರಣ ಅದನ್ನು ಸೀರಿಯಲ್ ನೋಡಿದಂತೆ  ಸುಮ್ಮನೆ ನೋಡಿ ಆನಂದಿಸುವುದೇ ಒಳ್ಳೆಯದೆನಿಸಿತು. . ಹಾಗೆಂದು ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದುಂಟೇ. ಮಾರ್ಕೆಟ್ಟಿನಲ್ಲಿ ನನ್ನಂತಹ ಜ್ಞಾನದಾಹಿಗಳಿಗಾಗಿ ತರಹೇವಾರಿ ಹೊಸ ರುಚಿ ಅಡುಗೆ ಪುಸ್ತಕಗಳಿಗೇನು ಬರವೇ..? ಸಿಕ್ಕ ಸಿಕ್ಕ ಅಡುಗೆ ಪುಸ್ತಕಗಳನ್ನೆಲ್ಲಾ ತಂದು ನನ್ನ ಅಡುಗೆ ಮನೆಯ ಕವಾಟು ತುಂಬಿಸತೊಡಗಿದೆ. 

ಇದರಿಂದಾದ ಮೊದಲ ಪ್ರಯೋಜನ ಎಂದರೆ ಅಲ್ಲಿನ ಖಾಲಿ ಜಾಗಲ್ಲಿ ನಿರಾತಂಕವಾಗಿ ಅಡ್ಡಾಡಿಕೊಂಡು ಕಣ್ಣಿಗೆ ಬೀಳದೆ ಮರೆಯಾಗಿದ್ದ ಜಿರಳೆ ವಂಶಜರು ಅಲ್ಲಿ ಜಾಗ ಇಲ್ಲದೆ ಹೊರ ಬಿದ್ದರು. ನನ್ನ ಪೊರಕೆಯ ಪ್ರಹಾರಕ್ಕೆ ಸಿಕ್ಕಿ ವೀರ ಸ್ವರ್ಗ ಪಡೆದರು. ಒಂದು ದಿನ ನಾನು ಒಂದು ಕೈಯಲ್ಲಿ ಅಡುಗೆ ಪುಸ್ತಕ ಮತ್ತು ಇನ್ನೊಂದು ಕೈಯಲ್ಲಿ ಬಿಸಾಡಲೆಂದು  ಮೀಸೆಯಿಂದೆತ್ತಿ  ಹಿಡಿದ ಸತ್ತ  ಜಿರಳೆಯಿಂದ  ಅಲಂಕೃತಳಾಗಿ ನಿಂತಿದ್ದನ್ನು  ಕಂಡು ತಪ್ಪು ತಿಳಿದ ನನ್ನ ಮಗ " ಇವತ್ತು ಅಮ್ಮ ಚೈನೀಸ್ ಸ್ಪೆಷಲ್ ಮಾಡ್ತಾಳೆ ಅನ್ಸುತ್ತೆ ಅಪ್ಪಾ" ಅಂತ ಇವರ ಕಿವಿಯೂದಿದ್ದ. ನನಗೆ ಕಾಣದಂತೆ ಇವರು ಮೀಸೆಯಡಿಯಲ್ಲೇ ನಕ್ಕಿದ್ದರು. 

ಒಂದು ದಿನ  ನನ್ನ ಪುಸ್ತಕದ ರಾಶಿ ನೋಡಿದ ಇವರು "ಈ ಎಲ್ಲಾ ಪುಸ್ತಕ ಓದಿ  ದಿನಕ್ಕೆರಡು ಅಡುಗೆ ಮಾಡಿದ್ರೂ ಇದು ನಮ್ಮ ಮೊಮ್ಮಕ್ಕಳ ಕಾಲದವರೆಗೆ ಮುಗಿಯಲಾರದೇನೋ, ಆದ್ರೆ ಈ ಪುಸ್ತಕ ಬಂದ ಮೇಲೆ ನೀನು ಹೆಚ್ಚಾಗಿ ಅವಲಕ್ಕಿಯ  ಬಗೆ ಬಗೆ ಅವತಾರಗಳನ್ನೇ ತಿಂಡಿ ಅಂತ ಕೊಡ್ತಾ ಇದ್ದೀಯಾ" ಎಂದು ಗಂಭೀರ ಆರೋಪ ಹೊರಿಸಿದರು. ಅಲ್ಲ .. ನಾನಾದ್ರು ಏನು ಮಾಡಲಿ ಹೇಳಿ..  ಒಂದು ಪುಸ್ತಕ ತೆಗೆದು ಯಾವ ತಿಂಡಿ ಒಳ್ಳೆಯದು ಎಂದು ಪುಟ ಮಗುಚುವಾಗಲೇ ಇವರೆಲ್ಲರಿಗೂ ಆಫೀಸಿಗೆ, ಕಾಲೇಜಿಗೆ ಹೋಗಲು ಅವಸರವಾಗುತ್ತಿತ್ತು. ಹಾಗಾಗಿ ಬಹುತೇಕ ದಿನ ಅವಸರದ ಅವಲಕ್ಕಿಯೇ ತಿಂಡಿಯಾಗುತ್ತಿತ್ತು.

ನನ್ನನ್ನು ತಮಾಷೆ ಮಾಡುವ ಇವರುಗಳು ಬೆರಳು ಚಪ್ಪರಿಕೊಂಡು ತಿನ್ನುವ ತಿಂಡಿ ಮಾಡಿಯೇ ಸಿದ್ಧ ಎಂದು ಇವತ್ತು ಪ್ರತಿಜ್ಞೆ ಮಾಡಿಯೇ ಬಿಟ್ಟಿದ್ದೆ. ಬೆಳಗ್ಗಿನ ಗಡಿಬಿಡಿಗೆ ಅದೆಲ್ಲ ಆಗುವುದಿಲ್ಲ. ಶನಿವಾರವಾದ್ದರಿಂದ  ಹೇಗೂ ಮಧ್ಯಾಹ್ನಕ್ಕೆ ಮಗನೂ ಕಾಲೇಜಿನಿಂದ ಊಟಕ್ಕೆ ಮನೆಗೆ ಬರುತ್ತಾನೆ. ಅವನಿಗೆ ನನ್ನ ಕೈಯ ಜಲಕ್ ತೋರಿಸಿಯೇ ಬಿಡುತ್ತೇನೆ ಎಂದು ಮನದಲ್ಲೆ ವಿಘ್ನ ವಿನಾಶಕನನ್ನು ನೆನೆದು ಕಣ್ಣು ಮುಚ್ಚಿ ಪುಸ್ತಕದ ಪುಟವೊಂದನ್ನು ಬಿಡಿಸಿ, ಈಗ ಕಣ್ಣು ಬಿಟ್ಟೆ. 

ಕಡಲೆ ಬೇಳೆ ಉಪಯೋಗಿಸಿ ಮಾಡುವ ಅಡುಗೆಯೊಂದಿತ್ತು ಅದರಲ್ಲಿ. ಮಾಡಲು ಹೆಚ್ಚು ಸಾಮಗ್ರಿಯೂ ಬೇಡ ಎಂದು ಖುಶಿಪಟ್ಟುಕೊಂಡು ಕಡಲೆ ಬೇಳೆಯನ್ನು ಕುಕ್ಕರಿನಲ್ಲಿ ಬೇಯಲಿಟ್ಟು ಬಾಕಿ ತಯಾರಿ ಸುರು ಮಾಡಿದೆ. ತೆಂಗಿನಕಾಯಿ  ಹೆರೆದಿಡಿ. ಏಲಕ್ಕಿ ಹುಡಿ ಮಾಡಿ, ಬೆಲ್ಲ ತುರಿದಿಡಿ ಎಂಬೆಲ್ಲ ಆಜ್ಞೆಗಳನ್ನು ಓದುವಾಗ ಯಾಕೋ ಸಿಟ್ಟು ಬರಲಿಕೆ ಶುರು ಆಯ್ತು. ಅಲ್ಲಾ ಮದ್ವೆಯಾಗಿ ಇಷ್ಟು ಸಮಯವಾಯ್ತು ಯಾರೂ ನನ್ನನ್ನು ಅದು ಮಾಡು, ಇದು ಮಾಡು.. ಎಂದು ಅಂದಿರಲಿಲ್ಲ. ಅಂತಾದ್ದರಲ್ಲಿ ನಾನೇ ದುಡ್ಡು ಕೊಟ್ಟು ತಂದ ಪುಸ್ತಕ ನನಗೇ ಆರ್ಡರ್ ಮಾಡುವುದೆಂದರೆ.. ಕೋಪ ಬರದಿರುತ್ತದೆಯೇ..ಕೂಡಲೇ ಕ್ಯಾಂಟೀನ್ ಮಾಮು"ನ ಮೇಲಿನ ನನ್ನ ಸ್ಪರ್ಧೆ ನೆನಪಿಗೆ ಬಂದು ಸಮಾಧಾನಿಸಿಕೊಂಡೆ. 

ಮತ್ತೆ  ಪುಸ್ತಕದತ್ತ ಕಣ್ಣಾಡಿಸಿದರೆ  ಅದರಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಿಳಿ ಪೇಸ್ಟ್, ಶುಂಠಿ ಹಸಿಮೆಣಸಿನ ಪೇಸ್ಟ್, ಪುದೀನ ಕೊತ್ತಂಬರಿ ಸೊಪ್ಪಿನ ಹಸಿರು ಪೇಸ್ಟ್, ಕೆಂಪು ಮೆಣಸಿನ ಸಿಪ್ಪೆಯ ಕೆಂಪು ಪೇಸ್ಟ್ ಎಂದೆಲ್ಲಾ ಇತ್ತು. ಛೇ.. ಆಗ ಇದನ್ಯಾಕೆ ಓದದೇ ಉಳಿದೆ .. ಬಹುಷಃ ಸಿಟ್ಟುಬಂದಿದ್ದಾಗ ಕಣ್ಣು ಕಾಣದೇ ಇದ್ದಿರಬಹುದು ಎಂದುಕೊಂಡು ಅದನ್ನೆಲ್ಲ ರೆಡಿ ಮಾಡಿದೆ.

ಕೊನೆಗೆ ಮಾಡುವ ವಿಧಾನ ಓದಿಕೊಂಡು ಒಂದೊಂದೇ ಪೇಸ್ಟುಗಳನ್ನು ಹಾಕಿ ಕಲಕಿರಿ, ಮಗುಚಿರಿ, ತಿರುವಿರಿ .. ಎಂದೆಲ್ಲಾ ಮಾಡಿದೆ.  ಕೊನೆಗೆ ಇಳಿಸಿರಿ ಎಂದಿತ್ತು. ಅದನ್ನೂ ಮಾಡಿದೆ. ಈಗ ರುಚಿ ಬಣ್ಣ ಸುವಾಸನೆ ಎಲ್ಲಾ ಅದ್ಭುತವಾಗಿ ಹೊರ ಹೊಮ್ಮುತ್ತಿತ್ತು. ಆದರೆ ನಾನು ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಕಾಯಿ  ತುರಿ ಏಲಕ್ಕಿ ಹುಡಿ ಬೆಲ್ಲಗಳು ಪಕ್ಕದಲ್ಲೇ ತಣ್ಣಗೆ ಕುಳಿತಿದ್ದವು...ಅರ್ರೇ .. ಇದೇನು ಮಾಯ  ಎಂದುಕೊಂಡು  ಇನ್ನೊಮ್ಮೆ ಓದಿದೆ. 

ಹೇಳಿ ಕೇಳಿ ನಮ್ಮೂರು ಕರಾವಳಿ. ತಲೆ ಮೇಲೆ ಫ್ಯಾನ್ ಎಂಬ ಇಂಜಿನ್ನು ಭರ್ರೋ ಎಂದು ಸದಾಕಾಲ ಅರಚಿಕೊಂಡು ಸುತ್ತದಿದ್ರೆ ನಾವು ನಿಲ್ಲಲೇ ಸಾಧ್ಯವಿಲ್ಲ. ಅಂತಾದ್ರಲ್ಲಿ ಅಡುಗೆ ಮನೆ ಇನ್ನಷ್ಟು ಬಿಸಿ ಏರಿಸುವ ತಾಣ. ಇಲ್ಲಿ ಕೆಲ್ಸ ಮಾಡುವಾಗ ಫ್ಯಾನ್ ತನ್ನ ಯೋಗ್ಯತೆಯನ್ನು ಮೀರಿ ಫುಲ್ ಸ್ಪೀಡಿನಲ್ಲಿ ಇರಲೇಬೇಕಾದದ್ದು ಅನಿವಾರ್ಯ. ಈ ಫ್ಯಾನ್ ತಿರುಗುವ ಸ್ಪೀಡಿಗೆ ಪುಸ್ತಕದ ಪುಟ ಮಗುಚಿಕೊಂಡು ಇನ್ನೊಂದು ಪೇಜಿಗೆ ಹೋಗಿ ಅಲ್ಲಿ ಕಡಲೇ ಬೇಳೆ ಬಳಸಿ ಮಾಡುವ ದಾಲ್ ಸ್ಪೆಷಲ್ ವಿವರಿಸಿತ್ತು. ಯಾವುದೋ ಒಂದು ಅಡುಗೆ ತಿನ್ನುವಂತಾಗಿದೆಯಲ್ಲ ಎಂದು ನನ್ನನ್ನು ನಾನೇ ಹೊಗಳಿಕೊಳ್ಳುತ್ತಾ ಕಾಯಿ  ತುರಿಯನ್ನು ಫ್ರಿಜ್ಜಿನೊಳಕ್ಕೆ ತಳ್ಳಿ, ಬೆಲ್ಲ, ಏಲಕ್ಕಿಗಳನ್ನು ಅವುಗಳ ಯಥಾಸ್ಥಾನದಲ್ಲಿಟ್ಟೆ. 
ಅಷ್ಟರಲ್ಲೇ ಮಗನ ಬೈಕ್ ದೂಳೆಬ್ಬಿಸುತ್ತಾ ಅಂಗಳಕ್ಕೆ ಬಂದೇ ಬಿಟ್ಟಿತು.ಕುಶಿಯಿಂದ  ಹೊರಗಿಣುಕಿದರೆ ಅವನ ಹಿಂದಿನಿಂದ ಶುಭ್ರ ಬಿಳಿ ವಸ್ತ್ರಧಾರಿಯೊಬ್ಬರು ಇಳಿಯುತ್ತಿದ್ದಾರೆ.  ಕಣ್ಣಲ್ಲೇ ಮಗನನ್ನು ಕೇಳಿದೆ. 

ಅವನ ಉತ್ತರ ಬರುವ ಮೊದಲೇ ಅವರು " ನಮಸ್ಕಾರ ಅಮ್ಮ, ನಾನು ನಿಮ್ಮ ಮಗನ ಕಾಲೇಜಿನ ಕ್ಯಾಂಟೀನಿನ ಮಾಮು. ನನ್ನ ಸರ್ವೀಸಿನಲ್ಲೇ ನಿಮ್ಮ ಮಗನಂತವನನ್ನು ನೋಡಿರಲಿಲ್ಲ. ನನ್ನ ಕ್ಯಾಂಟೀನಿನಲ್ಲಿ ಎಷ್ಟೇ ಚೆನ್ನಾಗಿ ಅಡುಗೆ ಮಾಡಿರಲಿ ಇವನು ಊಟಕ್ಕೆ ಕುಳಿತು, 'ಏನೇ ಹೇಳಿದ್ರು ಮಾಮು, ನನ್ನಮ್ಮ ಮಾಡಿದಷ್ಟು ರುಚಿ ಇಲ್ಲ ಇದು' ಅನ್ನುತ್ತಾನೆ ನೋಡಿ. ಹಾಗೇ ಇವತ್ತು ಶನಿವಾರ ಅಲ್ವ.. ಮಧ್ಯಾಹ್ನಕ್ಕೆ ಕ್ಯಾಂಟೀನಿನಲ್ಲಿ  ಯಾರೂ ಊಟಕ್ಕಿರೋದಿಲ್ಲ.ಅದಕ್ಕಾಗಿ ನಾನೇ ನಿಮ್ಮ ಕೈ ಅಡುಗೆ ಊಟ ಮಾಡುವ ಅಂತ ಬಂದೆ" ಎಂದು ಕೈ ಕಾಲು ತೊಳೆದು ಪದ್ಮಾಸನ ಹಾಕಿ ಬಾಳೆ ಎಲೆಯೆದುರು ಕುಳಿತೇ ಬಿಟ್ಟರು. 

ನನ್ನ ಹಿಂದೆಯೇ ಅಡುಗೆ ರೂಮಿಗೆ ಬಂದ ನನ್ನ ಮಗನ ತಲೆ ಮೇಲೆ ಮೊಟಕಿದೆ. ಅವನು ತುಂಟ ನಗೆ ನಕ್ಕು ತಾನೂ ಅವರೊಂದಿಗೆ ಊಟಕ್ಕೆ ಕುಳಿತ. ಮರು ಮಾತನಾಡದೇ ಇದ್ದದ್ದನ್ನೆಲ್ಲಾ ನನ್ನ ಹೊಸ ರುಚಿಯ ಸಮೇತ ಬಡಿಸಿದೆ. ಮೌನವಾಗಿಯೇ ಊಟ ಮುಗಿಸಿದ ಅವರು,ನಂತರ ಕೈ ತೊಳೆದುಕೊಂಡು " ಊಟ ಚೆನ್ನಾಗಿತ್ತು.. ನಿಮ್ಮ ಮಗ ಹೊಗಳೋದು ಸುಮ್ಮನೆ ಅಲ್ಲ.. ಅದ್ರಲ್ಲೂ ಈ ಬೇಳೆ ಐಟಮ್ ಅಂತೂ ಬೊಂಬಾಟ್.. ಏನೆಲ್ಲ ಹಾಕಿದ್ರಿ ಎಂದರು. ಪಟ ಪಟನೆ  ಆ ಎಲ್ಲಾ ಸಾಮಗ್ರಿಗಳ ಉತ್ತರ ಹೊರ ಬರಲು ನಾನೇನು ಬಾಯಿ ಪಾಠ ಮಾಡಿದ ವಿದ್ಯಾರ್ಥಿಯೇ..? ಪಕ್ಕನೇ ಏನೂ ನೆನಪಿಗೆ ಬರಲಿಲ್ಲ. ಆದರೆ ಕೊನೆಗೆ ಒಳಗಿಟ್ಟ ಬೆಲ್ಲ, ಏಲಕ್ಕಿ, ತೆಂಗಿನಕಾಯಿ  ನೆನಪಿಗೆ ಬಂದು ಅದನ್ನೇ ಹೇಳಿದೆ. ಅವರು ವಿಶ್ವದ ಎಂಟನೇ ಅದ್ಭುತವನ್ನು ನೋಡಿದಷ್ಟೇ ಬೆರಗಿನಿಂದ ನನ್ನ ಕಡೆ ನೋಡುತ್ತಾ ನಿರ್ಗಮಿಸಿದರು.   





Monday, February 18, 2013

ಪಾರ್ಕ್ ..



ಬೇಗ ಬಾ ಬಸ್ಸು ಮಿಸ್ಸಾಗುತ್ತೆ ಎಂದು ಹೈ ಪಿಚ್ ನಲ್ಲಿ ಕಿರುಚುತ್ತಾ ಹೊರಡಲನುವಾಗಿದ್ದ ಬಸ್ಸಿನ ಮೆಟ್ಟಲೇರಿದೆ. ನನ್ನ ಹಿಂದೆಯೇ ಸೆಕೆಂಡಿನ ಅಂತರದಲ್ಲಿ ಅವಳೂ ಬಸ್ಸಿನೊಳಗೆ ತೂರಿಕೊಂಡಳು. ಓಲಂಪಿಕ್ಸ್ ನಲ್ಲಿ ಪದಕ ಪಡೆದವರ ಮುಖದ ಹೊಳಪು ನಮ್ಮಲ್ಲಿ. ಅದಕ್ಕೆ ಕಾರಣವೂ ಇತ್ತು. ಬರೀ ನಾವಿಬ್ಬರೇ ಆಗಿದ್ದರೆ ಚಲಿಸುತ್ತಿರುವ ಬಸ್ಸನ್ನು ಓಡುತ್ತಲೇ ಏರುತ್ತಿದ್ದೆವೋ ಏನೋ.. ಆದರೆ ನನ್ನ ಕೈಯಲ್ಲಿ ಈಗಿನ್ನೂ ನಡೆಯುವುದಕ್ಕೆ ಕಲಿಯುತ್ತಿರುವ ಮಗ, ಅವಳ ಕೈಯಲ್ಲಿ 'ಈ ಬಸ್ಸು ಬೇಡ' ಎಂದು ಕಿರುಚುತ್ತಿರುವ ಮೂರು ವರ್ಷದ ಮಗಳು. ಅವರಿಬ್ಬರ ಬೇಕು ಬೇಡಗಳನ್ನು ಪೂರೈಸಲು ಹಿಡಿದುಕೊಂಡ ದೊಡ್ಡ ಬ್ಯಾಗು. ಇವಿಷ್ಟರಲ್ಲಿ ಯಾವುದನ್ನೂ ಕೆಳಗೆ ಉರುಳಿಸದೇ ಬಸ್ಸನ್ನೇರಿದ ನಮಗೆ ಸಂತಸವಾಗದೇ ಇದ್ದೀತೇ..?

ಆತ್ಮೀಯ ಗೆಳತಿ ನೈನಾ ಕೊಡಗಿನ ಪುಟ್ಟ ಹಳ್ಳಿಯೊಂದರಿಂದ  ನನ್ನನ್ನು ನೋಡಲು ಪೇಟೆಗೆ ಬಂದಿದ್ದಳು.

ನನಗೆ ನಮ್ಮೂರ ಪಾರ್ಕನ್ನು ಅವಳಿಗೆ ತೋರಿಸುವ ಉತ್ಸಾಹ. "ನಾನು ಕೊಡಗಿನಲ್ಲಿ ಕಾಣದ ಅದ್ಯಾವ ಸೀಮೆ ಹೂವಿದೆಯೇ ಇಲ್ಲಿ..? ನಿನ್ನೆ ಬೀಚಲ್ಲಿ ನಡೆದೂ ನಡೆದೂ ಸುಸ್ತಾಗಿದೆ. ಇವತ್ತು ಹಾಯಾಗಿ ಕಾಲು ಚಾಚಿ ಹಳೇ ಸುದ್ದಿಗಳನ್ನು ನೆನಪಿಸಿಕೊಳ್ಳೋಣ" ಎಂದು ಗೋಗರೆಯುತ್ತಿದ್ದ ಅವಳನ್ನು ಎಬ್ಬಿಸಿ ಹೊರಡಿಸಿ ಬಸ್ಸು ಏರಿಸುವಲ್ಲಿ ಸಫಲಳಾಗಿದ್ದೆ. 

ಬಸ್ಸೊಳಗೆ ಖಾಲಿ ಸೀಟಿಗಾಗಿ ಕಣ್ಣಾಡಿಸಿದೆವು. ಮಕ್ಕಳನ್ನು ಕಟ್ಟಿಕೊಂಡು ಬಂದರೆ ಆಗುವ ಒಂದೇ ಒಂದು ಉಪಕಾರ ಎಂದರೆ ಬಸ್ಸಿನೊಳಗೆ ಯಾರಾದರು ಪ್ಯಣ್ಯಾತ್ಮರು ಕರೆದು ಸೀಟ್ ಕೊಡುವುದು. ಒಳಗೊಳಗೇ ಅವರು ಬಯ್ದುಕೊಳ್ಳುವುದು ನಮಗೆ ಕೇಳುವುದಿಲ್ಲ ಬಿಡಿ. ಅವಸರದಲ್ಲಿ ಹಿಂದಿನ ಬಾಗಿಲಿನಲ್ಲಿ ಹತ್ತಿದ್ದ ಕಾರಣ ಹಿಂದಿನ ಸೀಟಿನ ಎರಡು ಜನ ಮೇಲೆದ್ದು ನಮ್ಮನ್ನಲ್ಲಿ ಕೂರಲು ಹೇಳಿ ತಮ್ಮ ಬೆನ್ನು ನೆಟ್ಟಗೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ನಿಂತುಕೊಂಡರು. 

ನಾವು ಸೀಟು ಸಿಕ್ಕಿದ ಖುಷಿಯಲ್ಲಿ ಇದ್ದೆಲ್ಲಾ ಹಲ್ಲುಗಳನ್ನು ಬಿಟ್ಟು ಅವರಿಗೊಂದು  'ಥ್ಯಾಂಕ್ಯೂ' ಹೇಳಿ ಮಕ್ಕಳನ್ನು ತೊಡೆಯ ಮೇಲೇರಿಸಿಕೊಂಡು ಆಸೀನರಾದೆವು. ಆಗಲೇ ತಿಳಿದಿದ್ದು ಸತ್ಯ ಸಂಗತಿ. ಸೀಟಿನ ಸ್ಪಂಜು ಎಂಬ ವಸ್ತು ಒಂದು ಕಾಲದಲ್ಲಿ ಅಲ್ಲಿತ್ತುಎಂದು ಪ್ರಮಾಣ ಮಾಡಿ ಹೇಳಿದರೂ ನಂಬದಂತಿತ್ತು. ಒಂದೊಂದು ಜಂಪ್ ಗಳಲ್ಲಿ ಎತ್ತಿ ಎತ್ತಿ ಹಾಕಿದಾಗ ನಾವು ಮಕ್ಕಳು ಸಮೇತ ಮೇಲಕ್ಕೇರಿ ಪುನಃ ಕಬ್ಬಿಣ ಕಾಣುತ್ತಿರುವ ಸೀಟಿನ ಅಸ್ಥಿಪಂಜರದ ಮೇಲೆ  ಬೀಳುತ್ತಿದ್ದೆವು. 

ಅಷ್ಟರಲ್ಲಿ ಕಂಡೆಕ್ಟರ್ 'ಯಾರಲ್ಲಿ ರಾಮಕಾಂತಿ' ಅಂದ. ನಮ್ಮ ಎದುರು ಕುಳಿತಿದ್ದವಳು ರಭಸದಿಂದ ಎದ್ದು ಕೆಳಗಿಳಿದಳು. ಇನ್ನೂ ಸ್ವಲ್ಪ ಮುಂದೆ ಹೋದಂತೆ 'ಯಾರ್ರೀ ಜ್ಯೋತಿ' ಎಂಬ ಕಂಡಕ್ಟರಿನ ಉದ್ಗಾರ ಕೇಳಿಸಿತು. ನಮ್ಮ ಪಕ್ಕದಲ್ಲಿ ಕುಳಿತಿದ್ದವಳು ತನ್ನ ಸಮಾನು ಸರಂಜಾಮಿನೊಂದಿಗೆ ನಮ್ಮ ಕಾಲುಗಳನ್ನು ಜ್ಯಾಮ್ ಮಾಡುತ್ತಾ ಇಳಿದಳು. 

ನನ್ನ ಗೆಳತಿ ನನ್ನ ಪಕ್ಕೆಗೆ ತಿವಿದು " ಟಿಕೆಟ್ ತೆಗೊಳ್ಳುವಾಗ ಕಂಡೆಕ್ಟರ್ ಗೆ ನನ್ನ ಹೆಸರು ಹೇಳ್ಬೇಡ" ಅಂದಳು.
"ನಿನ್ನ ಹೆಸರಾ ... ಯಾಕೇ ..  ನೀನೇನು ಪ್ರೈಮ್ ಮಿನಿಸ್ಟರಾ ಹೆಸರು ಹೇಳಿದ ಕೂಡಲೇ ಗೊತ್ತಾಗಲು" ಅಂದೆ. 

"ಅಲ್ಲಾ ಕಣೇ ಈಗ ರಾಮಕಾಂತಿ , ಜ್ಯೋತಿ ಅಂತೆಲ್ಲ ಅವರ ಹೆಸರು ಕರೆದಾಗ ಅವ್ರು ಇಳ್ದಿದ್ದಲ್ವಾ.." ಅಂದಳು.

" ಅಯ್ಯೋ ಎಷ್ಟು ಸಲ ನಮ್ಮೂರಿಗೆ ಬಂದಿದ್ದೀಯ.. ಅಷ್ಟೂ ಗೊತ್ತಾಗ್ಲಿಲ್ಲ್ವಾ... ಅದೆಲ್ಲ ನಮ್ಮೂರ ಚಿತ್ರಮಂದಿರಗಳ ಹೆಸರುಗಳು ಕಣೇ" ಎಂದು ಜಂಭದಿಂದ ನುಡಿದು, "ಸ್ವಲ್ಪ ಪೇಟೆ ಕಡೆ ಹೆಸರುಗಳು, ಬಸ್ ರೂಟ್ ಗಳು ಗೊತ್ತಿರ್ಬೇಕು ಕಣೆ .. ಇಲ್ದಿದ್ರೆ ಕಷ್ಟ" ಎಂದು ಅವಳ ಹೆಡ್ಡುತನಕ್ಕೆ ಮರುಕ ಸೂಚಿಸಿದೆ. 

ವೇಗವಾಗಿ ಸಾಗುತ್ತಿದ್ದ ಬಸ್ ಕಂಡಕ್ಟರನ ವಿಷಲ್ ಸದ್ದಿಗೆ ಗಡಕ್ಕನೆ ಬ್ರೇಕ್ ಹಾಕಿದಾಗ ನನ್ನ ಮಾತಿಗೂ ಬ್ರೇಕ್ ಬಿತ್ತು. ಹಾಗೇ ಮೇಲೆಗರಿ ಟಾಪಿಗೆ ತಲೆ ಹೆಟ್ಟಿಸಿಕೊಂಡು ಮತ್ತೆ ಸೀಟಿಗೆ ಮರಳುವಾಗ ಕೈಲ್ಲಿದ್ದ ಬ್ಯಾಗ್ ಮುಂದಿನ ಸೀಟಿನಲ್ಲಿ ಕುಳಿತಿದ್ದವಳ ತಲೆಯ ಮೇಲಿತ್ತು. ಮೆಲ್ಲನೆ 'ಸ್ಸಾರೀ' ಅನ್ನುತ್ತಾ ಬ್ಯಾಗನ್ನು ಜಾಗ್ರತೆಯಾಗಿ ಕೆಳಗೆ ತೆಗೆದಿರಿಸಿ ಸುಧಾರಿಸಿಕೊಂಡೆ. ಶಾಲೆಯಲ್ಲಿ ಮೊದಲು ಶಿಕ್ಷಕರು ಕೊಡುತ್ತಿದ್ದ 'ಪರಂಗಿ ಮಣೆ' ಎಂಬ ಶಿಕ್ಷೆಯನ್ನು ಮತ್ತೊಮ್ಮೆ ಅನುಭವಿಸುತ್ತಾ ನಮ್ಮ ಕಾಲಿನ ಬಲದಲ್ಲೇ ಕುಳಿತು ಪ್ರಯಾಣಾನಂದವನ್ನು ಅನುಭವಿಸುತ್ತಿದ್ದೆವು.  ನಾನು ಹೊರಗೆ ಕಣ್ಣು ಹಾಯಿಸಿ "ನಾವಿಳಿಯುವ ಜಾಗ ಬಂತು ಏಳೇ" ಎಂದೆ.  'ಬೇಗ ..ಬೇಗ' ಎಂದೊರಲುತ್ತಿದ್ದ ಕಂಡಕ್ಟರಿನ ಮಾತಿಗೆ ಒಂದಿಷ್ಟೂ ಬೆಲೆ ಕೊಡದೆ, ಬೀಳುತ್ತಿರುವ ಮಕ್ಕಳು, ಬ್ಯಾಗುಗಳನ್ನು ಸಂಭಾಳಿಸಿಕೊಂಡು ನಿಧಾನಕ್ಕೆ ಲ್ಯಾಂಡ್ ಆದೆವು.  

ನಮ್ಮನ್ನಿಳಿಸಿ ಮುಂದೆ ಸಾಗಿದ ಬಸ್ ಸೃಷ್ಟಿಸಿದ  ಹೊಗೆಯ ಮೋಡ ಕರಗಿ ಪರಿಸರ ಸ್ಪಷ್ಟವಾದ ನಂತರ ನನಗೆ ನಾವಿಳಿಯಬೇಕಾದ ಸ್ಟಾಪಿಗಿಂತ ಒಂದು ಸ್ಟಾಪ್ ಮೊದಲೇ ಇಳಿದು ಬಿಟ್ಟಿದ್ದೇವೆಂದು ಜ್ಞಾನೋದಯವಾಯಿತು. ನಾಲ್ಕು ಮಾರ್ಗಗಳು ಕೂಡುವ ಜಾಗದಲ್ಲಿ ಇಳಿದು ಯಾವ ಕಡೆ ಹೋಗಬೇಕೆಂದು ಕಣ್ ಕಣ್ ಬಿಡುತ್ತಿರುವ ನನ್ನನ್ನು ಸಂಶಯದಿಂದ ನೋಡಿದ ಗೆಳತಿ " ನಿಂಗೂ ದಾರಿ ಗೊತ್ತಿಲ್ವೇನೇ..ಬೇಕಿದ್ರೆ ಯಾರನ್ನಾದರೂ ಕೇಳೋಣ " ಎಂದು ಸಲಹೆ ನೀಡಿದಳು.

ಅವಳೆದುರು ಆಗಷ್ಟೇ ರೂಟ್ ಗಳ ಬಗ್ಗೆ ಭಾಷಣ ಮಾಡಿ ಈಗ ದಾರಿ ಗೊತ್ತಿಲ್ಲ ಎಂದರೆ ಹೇಗೆ..? "ಇಲ್ಲ ಕಣೇ ಮಕ್ಕಳಿಗೆ ಏನಾದ್ರು ತಿನ್ನೋಕೆ ಹಿಡ್ಕೊಂಡು ಹೋಗೋಣ ಅಂತ ಇಲ್ಲೇ ಇಳಿದೆ. ಪಾರ್ಕ್ ಹತ್ರ ಸರಿಯಾಗಿ ಏನೂ ಸಿಗಲ್ಲ. ಅಲ್ಲೆಲ್ಲಾ ಹಾಳು ಮೂಳು ಡೇಟ್ ಬಾರ್ ಆಗಿದ್ದು ಮಾರ್ತಾರೆ" ಎಂದು ನನ್ನ ಅಗಾಧ ಜ್ಞಾನ ಪ್ರದರ್ಶಿಸಿದೆ. ಹತ್ತಿರದಲ್ಲಿದ್ದ ಅಂಗಡಿಗೆ ನುಗ್ಗಿ ಚಾಕ್ಲೆಟ್ ಬಿಸ್ಕೆಟ್‌ಗಳನ್ನು ಮೊದಲೇ ತುಂಬಿದ್ದ ಚೀಲಕ್ಕೆ ಒತ್ತಿ  ತುರುಕಿದೆ. 

ಹಿಂದೆಂದೋ ಬಂದಿದ್ದ ನೆನಪಿನಲ್ಲಿ " ನೋಡು ಆ ಕಡೆ ನಾಲ್ಕು ಹೆಜ್ಜೆ ಹಾಕಿದ್ರೆ ಪಾರ್ಕ್ ಸಿಗುತ್ತೆ ಕಣೇ, ಆ ಬಸ್ಸಲ್ಲಿ ಬೇರೇ ಕೂತು ಕಾಲೆಲ್ಲ ಜೋಮು ಹಿಡಿದಿತ್ತು. ಈಗ ಸ್ವಲ್ಪ ನಡೆದರೆ ಸರಿ ಆಗುತ್ತೆ" ಅನ್ನುತ್ತಾ ಪಾದ ಬೆಳೆಸಿದೆ. ಬಸ್ಸಿನ ಅಲುಗಾಟಕ್ಕೆ ತೊಟ್ಟಿಲು ತೂಗಿದ ಅನುಭವವಾಗಿ ನಿದ್ದೆಯ ಜೊಂಪಿನಲ್ಲಿದ್ದ  ಅವಳ ಮಗಳನ್ನು ಎತ್ತಿ ಸೊಂಟಕ್ಕೇರಿಸಿ "ಹೂಂ" ಅನ್ನುತ್ತಾ ನನ್ನೊಡನೆ ಹೆಜ್ಜೆ ಹಾಕಿದಳು ನೈನಾ.

ನಾನು ಹೇಳಿದ ನಾಲ್ಕು ಹೆಜ್ಜೆ ನಲ್ವತ್ತಾಗಿ ನಾನ್ನೂರು ದಾಟಿದರೂ ಪಾರ್ಕ್ ಎಂಬುದು ಕಾಣದೆ ಎದುರಿಗೆ ಅತ್ತಿತ್ತ ಮರಗಳಿಲ್ಲದೇ ಬಣಗುಡುತ್ತಿದ್ದ ರಸ್ತೆ ಹೆಬ್ಬಾವಿನಂತೆ ಮಲಗಿ ಭಯವೆಬ್ಬಿಸಿತು. ಮದ್ಯಾಹ್ನ ಊಟ ಮುಗಿಸಿದ ಕೂಡಲೇ ನನ್ನ ಅವಸರಕ್ಕೆ ಹೊರಟ ಕಾರಣ ಸೂರ್ಯ ನೆತ್ತಿ ಮೇಲೆಯೇ ಕೂತಿದ್ದ. ಸೆಕೆಯ ಪೆಟ್ಟಿಗೆ ತತ್ತರಿಸಿ ಬೆವರಿನಲ್ಲಿ ತೋಯ್ದ ಮಕ್ಕಳು ರಚ್ಚೆ ಹಿಡಿಯುತ್ತಿದ್ದವು. ಕೊಡಗೆಂಬ ಚಳಿಯ ಗೂಡಿನ ಮೂಡಿ ( ಹುಡುಗಿ) ಮೂಡ್ ಆಫ್ ಮಾಡಿಕೊಂಡು ನಾನಿನ್ನು ಒಂದು ಹೆಜ್ಜೆ ಮುಂದೆ ಇಡಲ್ಲ ಅಂತ ಮೊಂಡು ಹಿಡಿದಳು. ಅನಿವಾರ್ಯವಾಗಿ ಅಲ್ಲೆ  ನಿಂತು ಬಳಿ ಬಂದ ರಿಕ್ಷಾವೊಂದಕ್ಕೆ ಕೈ ತಡೆದು ನಿಲ್ಲಿಸಿ, ಪಾರ್ಕ್ ಎಂದು ಸ್ಟೈಲಾಗಿ ಹೇಳಿ ಕೂತೆವು. ಅವನು ನಮ್ಮನ್ನು ಒಂದು ರೀತಿ ನೋಡಿ ನಾವು ನಡೆದು ಬಂದ ಹಾದಿಯಲ್ಲೇ ನಮ್ಮನ್ನು ಮತ್ತೆ ಮೆರವಣಿಗೆ ಕರೆದೊಯ್ದ. ನಾಲ್ಕು ಮಾರ್ಗಗಳು ಸೇರುವ ಸರ್ಕಲ್ ದಾಟಿ ಇನ್ನೊಂದು ರಸ್ತೆಯಲ್ಲಿ  ಸ್ವಲ್ಪವೇ ದೂರ ಸಾಗಿ ಪಾರ್ಕ್ ಎಂಬ ಬೋರ್ಡಿನೆದುರು ನಿಲ್ಲಿಸಿದ. 

ನಾನೀಗ ಮುಸಿ ಮುಸಿ ನಗುತ್ತಿದ್ದ ಗೆಳತಿಯ ಮುಖದ ಕಡೆ ನೋಡುವ ಧೈರ್ಯ ಮಾಡದೇ ಸುಮ್ಮನೆ ದುಡ್ಡೆಣಿಸಿ ನೀಡಿ ಪಾರ್ಕಿನ ಪ್ರವೇಶ ದ್ವಾರದೆಡೆಗೆ ನಡೆದೆ. ಅಲ್ಲೊಂದು ಇಲ್ಲೊಂದು ಎಲೆಗಳನ್ನು ಬೋಳಿಸಿ ನಿಂತಿದ್ದ ಮೇ ಫ್ಲವರ್ ಮರ, ನಡೆವ ಕಾಲು ಹಾದಿಯಲ್ಲಿ ವಿಪುಲವಾಗಿ ಬೆಳೆದು ಹೂ ಬಿಟ್ಟಿದ್ದ ಕಾಡು ಲಂಟಾನಾ, ಪಾರ್ಥೇನಿಯಂ, 'ಕಿರ್ರೀ.. ಕಿರ್ರೀಂ ಎಂದು ತುಂಡಾಗುವಂತೆ ಸದ್ದು ಮಾಡುತ್ತಾ ಮಕ್ಕಳ ಭಾರ ಹೊರಲಾರದೇ ಹೊತ್ತು ಜೀಕುತ್ತಿರುವ ಜೋಕಾಲಿ.. ಸಿಮೆಂಟು ಕಿತ್ತು ಹೋಗಿದ್ದ ಜಾರು ಬಂಡಿ, ಅತ್ತಿತ್ತ ಹರಿದೆಸೆದ ಪೇಪರ್, ಪ್ಲಾಸ್ಟಿಕ್ ಗಳು ಗಾಳಿಗೆ ಮೇಲೆದ್ದು ಹಾರಾಡುತ್ತಿರುವ ನೋಟ, ಅಲ್ಲಿಲ್ಲಿ ಕದ್ದು ಮುಚ್ಚಿ ಪ್ರೇಮಿಸುತ್ತಿರುವ ರೋಮಿಯೋ ಜ್ಯೂಲಿಯೆಟ್ಟುಗಳು.. ಮೊದಲೇ ಬಿಸಿಲಿಗೆ ಕೆಂಪಾಗಿದ್ದ ಗೆಳತಿಯ ಮುಖ ಇದನ್ನೆಲ್ಲಾ ನೋಡಿ ಸಿಟ್ಟಿನಿಂದ ಇನ್ನಷ್ಟು ರಾಗರಂಜಿತವಾಯಿತು. 

ಅಲ್ಲೇ ಸಣ್ಣ ಹಾರೆ ಹಿಡಿದು ಮಣ್ಣು ಅಗೆಯುತ್ತಿದ್ದ ಕೆಲಸದವನನ್ನು ಕಂಡೆ. ಗೆಳತಿಯ ಕಡೆಗೆ ತಿರುಗಿ "ತುಂಬಾ ಗಿಡಗಳಿತ್ತು ಕಣೇ ಇಲ್ಲಿ.. ಬಹುಷಃ ಎಲ್ಲಾ ತೆಗೆದು ಹೊಸದಾಗಿ ಗಿಡ ನೆಡ್ತಾರೇನೋ.. ನೋಡಲ್ಲಿ ಅವ್ನು ತೋಡ್ತಿದ್ದಾನೆ. ಅದೂ ತುಂಬಾ ದೊಡ್ಡ ಗುಂಡಿ ಬೇರೆ.. ಯಾವುದಾದ್ರು ಫಾರಿನ್ ಹೂವಿನ ಮರ ಹಾಕ್ತಾರೇನೋ ಇಲ್ಲಿ" ಎಂದು ಅವಳನ್ನೆಳೆದುಕೊಂಡು ಅತ್ತ ಕಡೆಗೆ ನಡೆದೆ.

"ನಾನು ಕಳೆದ ಸಲ ಬಂದಿದ್ದಾಗ ತುಂಬಾ ಗಿಡ ಇತ್ತಿಲ್ಲಿ, ಎಲ್ಲೋಯ್ತು ಅದೆಲ್ಲ" ಅಂತ ಅಗೆಯುತ್ತಿದ್ದ ಕೆಲ್ಸದವನಲ್ಲಿ ಕೇಳಿದೆ. 

"ಅಯ್ಯೋ ಅದೆಲ್ಲ ಫವರ್ ಶೋ ಇದ್ದಾಗ ನರ್ಸರಿಯವರು ತಂದಿಡ್ತಾರೆ ಮುಗಿದ ಕೂಡ್ಲೇ ತೆಗೊಂಡೋಯ್ತಾರೆ" ಅಂದ. 

ನನ್ನನ್ನು ಕನಿಕರದಿಂದ ನೋಡಿದ ಗೆಳತಿಯ ನೋಟವನ್ನು ನಿರ್ಲಕ್ಷಿಸಿ, " ಈಗ ಯಾವ ಗಿಡ ನೆಡೋದಿಕ್ಕೆ ಗುಂಡಿ ಮಾಡ್ತಾ ಇದ್ದೀರಾ? ಗುಂಡಿಯ ಅಳತೆ ನೋಡಿದ್ರೆ ಯಾವ್ದಾದ್ರು ಮರ ಆಗೋ ಜಾತಿಯ ಗಿಡ ನೆಡ್ತಿದ್ದಿರೇನೋ  ಅನ್ನಿಸ್ತಾ ಇದೆ" ಎಂದು ನನ್ನ ಪಾಂಡಿತ್ಯವನ್ನು ಪ್ರದರ್ಶನಕ್ಕಿರಿಸಿದೆ. 

"ಕುಡಿಯಕ್ಕೆ  ಒಂದು ಬೊಗಸೆ ನೀರಿಲ್ಲ ಇಲ್ಲಿ..ಅದನ್ನು ಮನೆಂದ್ಲೇ ಹೊತ್ಕೊಂಬರ್ಬೇಕು, ಅಂತಾದ್ರಲ್ಲಿ ಇಲ್ಲಿ ಮರ ನೆಡೋದಾ.." ಅಂದ ಬೆವರಿಳಿಸಿಕೊಂಡು

"ಮತ್ಯಾಕೆ ಇಷ್ಟೊಂದು ದೊಡ್ಡ ಗುಂಡಿ" ಅಂದೆ.

"ನನ್ ಕರ್ಮ ಏನ್ ಹೇಳ್ತೀರಾ.. ಯಾವ್ದೋ ಅಡ್ನಾಡಿ ಬೀದಿ ನಾಯಿ ಇಲ್ಲೇ ಪಾರ್ಕೊಳಗೆ ಸತ್ತಿದೆ. ಮೂರು ದಿನ ಆದ್ರೂ ಮುನಿಸಿಪಾಲಿಟಿಯವರು ಬರ್ಲಿಲ್ಲ. ಇನ್ನು ಅವ್ರು ಬರಲ್ಲ.. ಅದ್ಕೇ ನಾನೇ ಹೂತಾಕ್ತಿದ್ದೀನಿ. ಏನೋ ದಯೆ ಇಟ್ಟು ನೀವು ನನ್ನ ಕಷ್ಟ ಕೇಳಿದಿರಿ. ಒಂದೈದು ರೂಪಾಯಿ  ಕೊಟ್ರೆ ನಿಮ್ಮೆಸರು ಹೇಳಿ ಒಂದು ಚಾ ಕುಡೀತೀನಿ ತಾಯಿ.. ಎಂದು ಹಲ್ಲು ಬಿಟ್ಟ. 

ಅಷ್ಟರಲ್ಲಿ ರಾಗ ತೆಗೆಯುತ್ತಿದ್ದ ನನ್ನ ಮಗ ಮತ್ತು ಅವಳ ಮಗಳ ಗಲಾಟೆಯಿಂದ  ಬೇಸತ್ತ ಗೆಳತಿ,

ಐದು ರೂಪಾಯಿ  ಅವನಿಗಿತ್ತು ಇನ್ನೇನೋ ಕೇಳ ಹೊರಟ ನನ್ನನ್ನು  " ಸಾಕು ನಡಿಯೇ ಮನೆಗೆ.. ಇನ್ನೇನಾದ್ರೂ ಪ್ರಶ್ನೆ ಕೇಳಿದ್ರೆ ನಿನ್ನ ಅದೇ ಗುಂಡಿಲಿ ಹೂತಾಕ್ತೀನಿ. ಎಂದು ಎಕ್ಸಿಟ್ ದ್ವಾರದೆಡೆಗೆ 
ನನ್ನನ್ನು ನೂಕಿಕೊಂಡು ಹೊರಟಳು. 





('ಸಖಿ' ಯಲ್ಲಿ ಪ್ರಕಟಿತ )