Pages

Total Visitors

Friday, December 30, 2011



ಒಂಟಿ .. 

ನಡೆದಾಡಿದವೆಷ್ಟೋ ಹೆಜ್ಜೆಗಳು 
ಬಿಟ್ಟು ಗುರುತುಗಳ ..
ನಾನಿಲ್ಲಿ ಒಂಟಿ, ನನ್ನವರಿಲ್ಲಿಲ್ಲ .. 

ಕಳೆದ ಕಾಲದ ನೆನಪ 
ಮೈ ತುಂಬಾ ಹೊದ್ದರೂ 
ಬದಲಾಗಿದ್ದು ನಾನೇ... ಕಡಲಲ್ಲ .. 

ನೋಟಕ್ಕೆ ನಿಲುಕುವಷ್ಟೇ 
ಹರಿಯಬಿಡಬಹುದು ಮನ 
ಅದರಾಚೆಗಿನ ನಿಜವು ನನ್ನದಲ್ಲ .. 














Tuesday, December 27, 2011

ಅತಿಥಿ



ರೀ ..ಇವತ್ತು ನಮ್ಮ ಹೊಸ ಅತಿಥಿಯನ್ನು ಮನೆಗೆ ಕರ್ಕೊಂಡು ಬರೋಣ್ವಾ..  

'ನೋಡೇ ಶಿಲ್ಲೂ ನೀನೂ ನಾನೂ ಇಡೀ ದಿನ ಆಫೀಸ್ನಲ್ಲಿ ಕೆಲ್ಸ ಮಾಡಿ ಸುಸ್ತಾಗಿರ್ತೀವಿ  ಮನೇಗ್ಬಂದ್ರೆ ಇಲ್ಲಿನೂ ಕಡ್ಮೆ ಕೆಲ್ಸ ಇರಲ್ಲ.ಎಲ್ಲಾ ಮುಗ್ಸಿ ಹಾಸಿಗೆ ಸೇರುವಾಗ ಹನ್ನೊಂದು ಗಂಟೆ ಆಗಿರುತ್ತೆ. ಇದರ ನಡುವೆ ಈ ಹೊಸ ಜವಾಬ್ಧಾರಿ ಅಗತ್ಯ ಇದೆ ಅಂತ ಅನ್ಸುತ್ತಾ ನಿಂಗೆ? ಯೋಚ್ನೆ ಮಾಡು .. 
' ಅದೆಲ್ಲಾ ನಂಗೊತ್ತಿಲ್ಲ. ನಂಗೆ ಮನೆಗೆ ಬಂದ್ರೆ ನಿಮ್ ಮುಖ ನಾನು ..ನನ್ನ ಮುಖ ನೀವು ಇಷ್ಟೇ ನೋಡೋದು ಬೇಜಾರಾಗಿ ಬಿಟ್ಟಿದೆ .ಅದೂ ಅಲ್ಲದೆ , ಅದನ್ನ ಜವಾಬ್ಧಾರಿ ಅಂತ ಯಾಕಂದ್ಕೋಬೇಕು?ನಮ್ಮದೇ ಒಂದು ಭಾಗ ಅಂತ ಅಂದ್ಕೊಂಡ್ರಾಯ್ತಪ್ಪ. ನನ್ನ ಕೆಲ್ಸದ ಜೊತೆ ಅವನೇನೂ ನಂಗೆ ಭಾರ ಅನ್ಸಲ್ಲ. ನಿಮ್ಮನ್ನೇನೂ ಅದು ಮಾಡಿ ಇದು ಮಾಡಿ ಅಂತನ್ನಲ್ಲ. .. ಸುರೇಶ್ ಪ್ಲೀಸ್ ಒಪ್ಕೋಳ್ಳೀಪ್ಪಾ.

'ಹ್ಹೋ..! ಆಗ್ಲೇ ನೀನೇ ಎಲ್ಲಾ ಡಿಸೈಡ್ ಮಾಡಿ ಆಗಿದೆ .. ಬಿಡು ಇನ್ನು ನನ್ನೇನು ಕೇಳೋದು..? ನಿನ್ನಿಷ್ಟ ಬಂದಂತೆ ಮಾಡ್ಕೋ..'

'ಪ್ಲೀಸ್ ಸುರೇಶ್ ಸಿಟ್ಟು ಮಾಡ್ಕೋಬೇಡಿ. ನಾನ್ಯಾವತ್ತಾದ್ರು ನಿಮ್ಮನ್ನ ಕೇಳ್ದೆ ಏನಾದ್ರು ಮಾಡಿದ್ದೀನಾ.. ನೀವೂ ಕೂಡಾ ಹಾಗೇ ಅಂತ ನಂಗೊತ್ತು. ನನ್ನ ಆಸೆ ಇದು ಅಂತ ಅಂದ್ಕೊಳ್ಳಿ.. ಅಷ್ಟಕ್ಕೂ ಇದ್ರಲ್ಲಿ ತಪ್ಪೇನಿದೆ ಹೇಳಿ..'

'ತಪ್ಪಿನ ಪ್ರಶ್ನೆ ಅಲ್ಲ ಶಿಲ್ಲೂ.. ಮುಂದೆ ಕಷ್ಟ ಪಡ್ಬೇಕಾಗುತ್ತೇನೋ ಅನ್ನೋ ಭಯ.. ಜೊತೆಗೆ ಅಮ್ಮ ಬೇರೆ ಊರಿಂದ ಬರ್ತಿದ್ದಾರೆ. ಅವರಿಗೆ  ನಮ್ಮ ಈ ನಿರ್ಧಾರ ಬೇಸರ ಆಗ್ಬಹುದು. ನಾನು ನೀನು ಒಪ್ಪಿದಷ್ಟು ಸುಲಭ ಅಲ್ಲ ಅವ್ರನ್ನು ಮಣಿಸೋದು..ಅದಲ್ಲದೇ ಆ ಪುಟ್ಟ  ಜೀವವನ್ನು ಸಾಕೋ  ಅನುಭವ ಆದ್ರೂ ನಿಂಗೇನಿದೆ ಹೇಳು..?' 

'ಅನುಭವಕ್ಕೆ ಏನು.. ಯಾರ್ಗೂ ಹುಟ್ಟಿನಿಂದಲೇ  ಬಂದು ಬಿಡಲ್ಲ  ಅದು. ನಾವೇ ಕಲೀಬೇಕು... ಆದ್ರೆ . ಹೆಣ್ಣಿಗೆ ತಾಯ್ತನ ಅನ್ನೋದು ರಕ್ತದಲ್ಲೇ ಇರುತ್ತೆ ಬಿಡಿ. . ಅದನ್ನು ಹೊಸದಾಗಿ ಕಲಿಯಬೇಕಿಲ್ಲ..'
ಅಷ್ಟಕ್ಕೂ ಇದನ್ನ ನಿರ್ಧಾರ ಮಾಡ್ಬೇಕಾಗಿರೋದು ನೀವು.. ಅವ್ರಲ್ಲ. ಅವ್ರನ್ನ ಒಪ್ಸೋ ಕೆಲ್ಸ ನಂಗೆ ಬಿಟ್ಬಿಡಿ. ನಿಧಾನವಾಗಿ ಹೇಳಿದ್ರೆ ಅರ್ಥ ಮಾಡ್ಕೊಳ್ತಾರೆ. ಅದೂ ಅಲ್ದೇ ನಂಗೀಗ ಆಫೀಸ್ ಟೈಮಿಂಗ್ಸ್  ಕೂಡಾ ಈಗ  ಚೇಂಜ್ ಆಗಿದೆ. ಹಾಗಾಗಿ ಅವ್ನನ್ನ ನೋಡ್ಕೋಳ್ಳೋಕೂ ಕಷ್ಟ ಆಗಲ್ಲ. ನಾವಿಬ್ರೇ ಅಲ್ಲದೆ ಇನ್ನೊಂದು ಜೀವ ನಮಗಾಗಿ ಕಾಯ್ತಾ ಇರುತ್ತೆ ಅನ್ನೋದು ಎಷ್ಟು ಸಂತಸದ ವಿಷ್ಯ ಅಲ್ವಾ ಡಿಯರ್.. 

ಆಹಾ... ಈಗ ಡಿಯರ್ ಗಿಯರ್ ಅಂತೆಲ್ಲ ನನ್ನ ಪೂಸಿ ಮಾಡೋದೇನೂ ಬೇಕಾಗಿಲ್ಲ.

ಹೇ ಇಲ್ಲಾ ಸುರೇಶ್.. ಅವ್ನು ಎಷ್ಟು ಮುದ್ದು ಮುದ್ದು ಇದ್ದಾನೆ ಅಂದ್ರೆ ನೋಡಿದ ಕೂಡ್ಲೇ ಎತ್ಕೊಳ್ಳದೇ ಇರೋಕೆ ಮನ್ಸೇ ಬರಲ್ಲ.. ನೀವೂ ಅಷ್ಟೇ ನೋಡಿ.. ಈವಾಗೇನೋ ಹೀಗೆಲ್ಲ  ಮಾತಾಡ್ತೀರಿ ..ಅವ್ನು ಬಂದ್ಮೇಲೆ ನನ್ನ ಕಡೆ ನೋಡೋಕೂ ಟೈಮ್ ಇರಲ್ಲ ನಿಮ್ಗೆ..

ಸರಿ ಸರಿ ಅವ್ನಿನ್ನು  ಮನೆಗೇ ಬಂದಿಲ್ಲ .. ಆಗ್ಲೇ ಸುರು ಆಯ್ತು ಗುಣಗಾನ. ಬಂದ್ಮೇಲಂತೂ ನನ್ನ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ ಅನ್ಸುತ್ತೆ.. 

ಅಯ್ಯೋ ಹಾಗ್ಯಾಕಂದ್ಕೋತೀರಿ.. ಎಲ್ರಿಗೂ ನೀವೆ ಬೇಯ್ಸಿ  ಹಾಕಿದ್ರಾಯ್ತಪ್ಪ.. 

ಇರು ನಿಂಗೆ ಮಾಡ್ತೀನಿ.. ಮಾತಲ್ಲಂತೂ ನಿನ್ನ ಗೆಲ್ಲಕಾಗಲ್ಲ ಬಿಡು..ನಿನ್ನ ಕುಶಿನೇ ನಂಗೂ ಬೇಕಾಗಿರೋದು .. ಆದ್ರೆ ಈ ಸಂತೋಷವನ್ನು ಇಷ್ಟು ದೊರ ನಿಂತ್ಕೊಂಡು ಸೆಲೆಬ್ರೇಟ್ ಮಾಡೋದು ತಪ್ಪು ಅಂತ ಅನ್ಸಲ್ವಾ ನಿಂಗೆ.. 

 ಆಹಾ .. ಅದೆಲ್ಲ ಏನೂ ಬೇಡ ರಾಯರೇ.. ಸಧ್ಯಕ್ಕೆ ದೂರದಿಂದಲೇ ಥ್ಯಾಂಕ್ಸ್ ಹೇಳ್ತೀನಿ .. ಯಾಕೆಂದ್ರೆ .ಶುಭಸ್ಯ ಶೀಘ್ರಂ .. ಈವಾಗಲೇ ಹೊರಟು ಬಿಡೋಣ ... ನನ್ನ  ಫ್ರೆಂಡ್ ಗೆ ಫೋನ್ ಮಾಡಿ ಈಗ್ಳೆ ಬರ್ತಾ ಇದ್ದೀನಿ  ಅಂತ ಹೇಳ್ಬಿಡ್ತೀನಿ. ಆಮೇಲೆ ಬೇರೆ ಯಾರಾದ್ರೂ ಕೇಳಿದ್ರು ಅಂತ ಅವ್ಳು ನಾಯಿ ಮರಿ ಕೊಟ್ಬಿಟ್ರೆ ಕಷ್ಟ.. 


Sunday, December 25, 2011

ಮಾ(ಬಾ)ತುಕತೆ






ಆಗಷ್ಟೆ ಮರದಿಂದ ಅಡಿಕೆ ತೆಗೆದು ಹಾಕಿ ಆಗಿತ್ತು.ತೋಟದ ತುಂಬೆಲ್ಲ ಕೇಸರಿ ಬಣ್ಣದ ಅಡಿಕೆ. ಹೆಕ್ಕಿ ಬುಟ್ಟಿಗೆ ತುಂಬಿಸುವುದರಲ್ಲೆ ಮಗ್ನಳಾಗಿದ್ದೆ. 
ಹಿಂದಿನಿಂದ  ಏನೋ ಸದ್ದಾದಂತಾಯ್ತು .ನನ್ನ ಹಿಂಬಾಲಕರಂತೆ ನಿಂತಿದ್ದ ಬಾತುಕೋಳಿಗಳ ಪುಟ್ಟ ಗುಂಪೊಂದು ಕುತೂಹಲದ ನೋಟದಲ್ಲಿ ನನ್ನನ್ನು ನೋಡುತ್ತಿದವು.
ಹತ್ತಿರದಲ್ಲೇ ಹರಡಿಕೊಂಡಿದ್ದ ಅಡಿಕೆಯನ್ನು ಒಂದೆರಡು ಬಾರಿ ಕುಕ್ಕಿ ನೋಡಿದವು. 

ಅವುಗಳಲ್ಲಿ ಒಂದು ಇನ್ನು ಸ್ವಲ್ಪ ಹತ್ತಿರ ಬಂದು ಬುಟ್ಟಿಯಲ್ಲಿದ್ದ  ಹಣ್ಣಡಿಕೆಯೊಂದನ್ನು ಕೊಕ್ಕಿನಲ್ಲಿ ಕುಟುಕಿತು. ಯಾವ ರುಚಿಯೂ ಕಾಣದೆ ಪುನಃ ನೆಲಕ್ಕೆ ಹಾಕಿತು.


ನಂತರ ಒಂದಿಷ್ಟೂ ಹೆದರದೆ ನನ್ನ ಬಳಿ ಬಂದು ಏನು ಮಾಡುತ್ತಿದ್ದೀಯಾ ಎಂದಿತು.
ಕೆಲಸದ ತರಾತುರಿಯಲ್ಲಿದ್ದ ನಾನು ಕೊಂಚ ಅಸಹನೆಯಲ್ಲಿ 'ಕಾಣುತ್ತಿಲ್ಲವೇ.. ಅಡಿಕೆ ಹೆಕ್ಕುತ್ತಿರುವುದು'.. ಎಂದೆ. 

ಇದನ್ನು ಹೆಕ್ಕಿ ತಿನ್ನಲು ಉಪಯೋಗಿಸುತ್ತೀಯಾ..ಎಂದಿತು. 
ಕೆಲಸದ ಬೇಸರ ನೀಗಲು ಮಾತುಕತೆಯೂ ಒಂದು ದಾರಿ ಎಂದುಕೊಂಡು,' ಇಲ್ಲ..ಇದನ್ನು ಮನೆಗೆ ಒಯ್ದು ಒಣಗಿಸುತ್ತೇನೆ' ಎಂದೆ.

'ಆಮೇಲೆ ತಿನ್ನುವುದೋ..?' ಎಂದಿತದು ಸೋಜಿಗದಿಂದ.. 

'ಇಲ್ಲ..ಚೆನ್ನಾಗಿ ಒಣಗಿದ ನಂತರ ಸುಲಿದು ಮಾರುತ್ತೇವೆ'ಎಂದೆ. 
ಕೊಂಚ ಗಲಿಬಿಲಿಯಿಂದ 'ಮಾರುವುದೇ .. ಹಾಗೆಂದರೇನು' ಎಂದಿತು.
'ಬೇರೊಬ್ಬರಿಗೆ ಕೊಡುವುದು. ಅದರ ಬದಲಾಗಿ ನಮಗೆ ಹಣ ನೀಡುತ್ತಾರೆ'. ಎಂದೆ..

'ಹಣವೇ.. ಸರಿ ಸರಿ ಆಮೇಲೆ ಅದನ್ನು ತಿನ್ನುವುದಲ್ಲವೇ'.. ಅಂದು ತಲೆ ಅಲುಗಿಸುತ್ತಾ ಕೇಳಿತು. 

'ಇಲ್ಲ ಇಲ್ಲ .. ಹಣವನ್ನು ತಿನ್ನುವುದಿಲ್ಲ.. ಅದರಿಂದ ಆಹಾರ ಪಧಾರ್ಥಗಳನ್ನು ಕೊಂಡು ತಂದು, ಶುಚಿಗೊಳಿಸಿ, ಬೇಯಿಸಿ, ಮಸಾಲೆಗಳನ್ನೆಲ್ಲ ಬೆರೆಸಿ ರುಚಿಕರವಾದ ಬಳಿಕ ತಿನ್ನುವುದು'.. ಎಂದೆ.



..ತಿನ್ನುವುದಕ್ಕೆ ಅಷ್ಟೆಲ್ಲ ಕಷ್ಟ ಪಡಬೇಕೇ..ಯಾಕೋ ಏನೂ ಅರ್ಥವಾಗದವರಂತೆ ಮುಖ ಮಾಡಿಕೊಂಡು, ನನ್ನನ್ನು ನನ್ನ ಪಾಡಿಗೆ ಬಿಟ್ಟು, ಅಲ್ಲೆಲ್ಲ ದಾರಾಳ ಹಾರಿಕೊಂಡಿದ್ದ ಕೀಟಗಳನ್ನು,ನೆಲದಲ್ಲಿ ತೆವಳುತ್ತಿದ್ದ ಎರೆಹುಳುಗಳನ್ನು  ಹಿಡಿದು ತಿನ್ನಲು, ತನ್ನ ಗುಂಪು ಸೇರಿಕೊಂಡಿತು.. 


Tuesday, December 20, 2011

ಗುಲ್ ಮೊಹರ್ ...



ಬಂದಾಗ ಮಾರ್ಚ್ ತಿಂಗಳು 

ಮೈ ಕೈಯೆಲ್ಲಾ ಖಾಲಿ ಖಾಲಿ 

ಶೂನ್ಯಕ್ಕೆ ನೆಟ್ಟ ನೋಟ 

ತಲೆಯ ಮೇಲೆ ಬೆಂಕಿಯ 

ಮಳೆಗರೆವ ಸುಡು  ಸೂರ್ಯ 

ನೆತ್ತರೂ ಆರುವ ಕಾಲ 

ತೇವ ಕಾಣದ ನೆಲದಾಳದಲ್ಲಿ 

ಅದೇನೋ ಕಂಪನ 

ಸಹಜವಿದು ಎಂಬಂತೆ  ಕುಡಿವೊಡೆವ  

ಹೊಸ ಮೊಗ್ಗುಗಳಿಗೆಲ್ಲಿ 

ಅಡಗಿತ್ತೋ ಜೀವ ಚೈತನ್ಯ  

ಹಸಿರ ಹರೆಯಕೆ 

ನಾಚಿಕೆಯ ಅರುಣರಾಗ 

ಆವರಿಸಿದ ಇಬ್ಬನಿಯ ಜೊತೆಗೆ

ಮೌನದಲೇ ಪ್ರೇಮ ಸಲ್ಲಾಪ .... 


Sunday, December 18, 2011

ಹೋರಾಟ





ಕುದಿಯುತ್ತಿರುವ ಸಾರಿಗೆ ಏನೋ ಕಡಿಮೆಯಾದಂತನಿಸಿತು. ಕೊತ್ತಂಬರಿ ಸೊಪ್ಪೇ ಹಾಕಿರಲಿಲ್ಲ. ಅದನ್ನು ತರಲು ಅಂಗಳದ ಮೂಲೆಯ ಕೈತೋಟದ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. 

ಪಕ್ಕನೇ ಎರಡು ದೊಡ್ಡ ಜಾತಿಯ ಕಡು ಕಪ್ಪು ಬಣ್ಣದ ಇರುವೆಗಳು ಕಣ್ಣು ಸೆಳೆದವು.ಇರುವೆಗಳ ಸಹಕಾರೀ ಗುಣ, ಶಿಸ್ತು,ಕಾರ್ಯ ಚಟುವಟಿಕೆಗಳ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಇವುಗಳು ಕಾಳಗಕ್ಕೆ ಸಿದ್ಧರಾದಂತೆ ಎದುರು ಬದುರು ನಿಂತಿರುವ ರೀತಿ ಹೊಸದಾಗಿ ತೋರಿತು. 

ಹೊರಟ ಕೆಲಸ ಮರೆತು ಅವುಗಳತ್ತಲೇ ನೋಡುತ್ತಾ ನಿಂತೆ. ನಾನು ಅಂದುಕೊಂಡಿದ್ದು ನಿಜವಾಗಿತ್ತು.ಅವು ಹತ್ತಿರ ಬಂದು ಬಲಾಬಲಗಳ ಪರೀಕ್ಷೆ ಮಾಡುವಂತೆ ಕೈಯಿಂದ ಕಾಲಿನಿಂದ ಪರಸ್ಪರ ದೂಡಿಕೊಳ್ಳುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ಇರುವೆ ಪಕ್ಕದ ಗೋಡೆಯ ಮೇಲೆ ಹತ್ತಿ ಅಲ್ಲಿಂದ ಕೆಳಗಿದ್ದ ಇರುವೆಯ ಮೇಲೆ ನೆಗೆದು ಅದನ್ನು ಕೆಡವಿತು. ಬಲವಾಗಿ ಒಂದನ್ನೊಂದು ಗಟ್ಟಿ ಹಿಡಿದುಕೊಂಡು ಉಂಡೆಯಾಕಾರದಂತೆ ಅತ್ತಿಂದಿತ್ತ ಇತ್ತಿಂದತ್ತ ಉರುಳಿ ತಮ್ಮ ಚೂಪಾದ ಕೊಂಡಿಗಳಲ್ಲಿ ಚುಚ್ಚಿಕೊಳ್ಳುತ್ತಿದ್ದವು.

.ಬೀದಿ ನಾಯಿಗಳ ಜಗಳ ನೋಡಿ ಅಭ್ಯಾಸವಿದ್ದ ನನಗೆ, ಅವುಗಳಂತೆ ಇವು ಕೂಡಾ ಒಂದು ಶರಣಾಗತಿಯನ್ನು ಸೂಚಿಸುತ್ತಾ ನಿಂತರೆ ಇನ್ನೊಂದು ಅದನ್ನು ಬಿಟ್ಟು ಹೋಗಬಹುದು ಎಂದುಕೊಂಡು, ಮಾಡಬೇಕಿದ್ದ ಕೆಲಸ ನೆನಪಿಸಿಕೊಂಡು ಅಲ್ಲಿಂದ ಕಾಲ್ತೆಗೆದೆ. 

ಸ್ವಲ್ಪ ಹೊತ್ತು ಕಳೆದು ಪುನಃ ಕುತೂಹಲದಿಂದ ಆ ಜಾಗಕ್ಕೆ ಬಂದು ಪರೀಕ್ಷಿಸಿದೆ. ಎರಡೂ ಇರುವೆಗಳು ಅತ್ಯಂತ  ಪ್ರೀತಿಪಾತ್ರರಂತೆ  ಒಂದನ್ನೊಂದು ಅಪ್ಪಿಕೊಂಡು ಸತ್ತು ಬಿದ್ದಿದ್ದವು.

ಸಾಲಾಗಿ ಬರುತ್ತಿದ್ದ ಇನ್ನೊಂದು ಜಾತಿಯ  ಚಿಕ್ಕ ಇರುವೆಗಳ ಸಾಲು ಅವುಗಳನ್ನು ತಮ್ಮ ಆಹಾರವೆಂಬಂತೆ  ಗೂಡಿಗೆ ಹೂತ್ತೊಯ್ಯಲು ಪ್ರಯತ್ನಿಸುತ್ತಿರುವುದು ಯಾಕೋ ಶವ ಮೆರವಣಿಗೆಯಂತೆ ತೋರಿತು. 

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತೆಷ್ಟು ನಿಜ .. !!


Friday, December 16, 2011

ತುಂ ಬಿನ್ ಜಾವೂ ಕಹಾ ...




ಇನ್ನೂ ಮಲಗಿಯೇ ಇದ್ದ ಹೆಂಡತಿಯ ಕಡೆಗೊಮ್ಮೆ ನೋಡಿದೆ. ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವ ಒಂದು ಕ್ಷಣ ಮೂಡಿತು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಕಣ್ಣುಗಳನ್ನು ಕೂಡಲೇ ಅವಳ ಕಡೆಯಿಂದ  ಇತ್ತ ತಿರುಗಿಸಿ ಅಗತ್ಯದ ಯಾವುದೇ ವಸ್ತು ಉಳಿದಿಲ್ಲ  ಎಂಬುದನ್ನು ಮತ್ತೊಮ್ಮೆ ಕಣ್ಣಾಡಿಸಿ ಪರೀಕ್ಷಿಸಿಕೊಂಡೆ. ಭಾರವಾದ ಸೂಟ್ ಕೇಸನ್ನು ಕೈಯಲ್ಲಿ ಹಿಡಿದು ಸದ್ದಾಗದಂತೆ ಬಾಗಿಲು ಮುಚ್ಚಿ ಹೊರಬಂದೆ. ಮನೆಯ ಮುಂದೆ ಇಳಿಜಾರಾದ ಕಾರಣ ಕಾರನ್ನು ಸದ್ದಾಗದಂತೆ ಕೊಂಚ ದೂರ ನ್ಯೂಟ್ರಲ್‌ನಲ್ಲೆ ಚಲಾಯಿಸಿ ನಂತರ ಸ್ಟಾರ್ಟ್ ಮಾಡಿ ಹೊರಟೆ. 
ಮೊಬೈಲ್ ನಲ್ಲಿ ಮೆಸೇಜ್ ಬಂದ ಸದ್ದು. ಕಾಯುತ್ತಿದ್ದೇನೆ ,ಹೊರಟಿದ್ದೀರಾ?.. ಸ್ವರ್ಣ..

ಗಾಡಿ ಇನ್ನೂ ಕೊಂಚ ವೇಗ ವೃದ್ಧಿಸಿಕೊಂಡಿತು ..



ಸ್ವರ್ಣ..ಎಷ್ಟು ಸುಂದರ ಹೆಸರು. ಹೆಸರಿನಷ್ಟೆ ಅವಳೂ , ಅವಳ ವ್ಯಕ್ತ್ವಿತ್ವ, ಅವಳ ಆಲೋಚನೆಗಳು,  ಎಲ್ಲವೂ ಸುಂದರವೆ..ಒಂದೆರಡು ಬಾರಿಯ ಭೇಟಿಯಲ್ಲೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿದ್ದಳು.

ಕಾರಿನ ಹೆಡ್ ಲೈಟಿನ ಬೆಳಕಿಗೆ ಕಂಡ ಮುಂಜಾನೆಯ ಗಾಳಿಗೆ ಹಾರುತ್ತಿದ್ದ ಅವಳ  ಬಣ್ಣದ ಸೆರಗು ನನ್ನ ಯೋಚನಾ ಲಹರಿಯನ್ನು ತುಂಡರಿಸಿತು. 

ಕೈಯಲ್ಲಿ ಪರ್ಸ್ ಹಿಡಿದು  ಕಾಯುತ್ತಾ ನಿಂತಿದ್ದಳು .ನನ್ನನ್ನು ಕಾಣುತ್ತಿದ್ದಂತೆಯೇ ಅವಳ ಮೊಗದಲ್ಲಿ ಅರಳಿತ್ತು ಸಂತಸ ಬೆರೆತ ನಸು ನಗು.ನನ್ನನ್ನು ಬಿಟ್ಟು ಹೋಗಿಯೇ ಬಿಟ್ರೇನೋ ಅಂದ್ಕೊಂಡೆ.. ಅಂದಳು. 
ಕಾರಿನಲ್ಲಿ  ಆನ್ ಮಾಡಿದ್ದ ಎಫ್ ಎಂ ನಲ್ಲಿ ' ತುಂ ಬಿನ್ ಜಾವೂ   ಕಹಾ   .. ' ಎಂದ್ಹು  ತೇಲಿ ಬರುತ್ತಿದ್ದ ಹಾಡು ಆಗಷ್ಟೇ ಅವಳ ಕಿವಿಗೆ ಬಿದ್ದು ಮೊಗದಲ್ಲಿ ನಾಚಿಕೆ ಆವರಿಸಿತು.
ನನಗ್ಯಾಕೋ ನಮ್ಮ ನಡುವೆ ಮಾತಿಗಿಂತ ಮೌನ ತುಂಬ ಹಿತಕರವೆನಿತು. ಅವಳೂ ಅದನ್ನು ಅರ್ಥ ಮಾಡಿಕೊಂಡವಳಂತೆ ಒಂದೊಂದಾಗಿ ಓಡುತ್ತಿರುವಂತೆ ಬಾಸವಾಗುವ ರಸ್ತೆ ಬದಿಯ ಮರಗಿಡಗಳ ಕಡೆಗೆ ಕಣ್ಣು ನೆಟ್ಟಳು. 
ಸ್ವಲ್ಪ ಮುಂದೆ ಸಾಗುತ್ತಿದ್ದಂತೆ  ರೋಡ್ ನಿಂದ ಒಂದು ಕವಲು ದಾರಿಯ ಕಡೆಗೆ ಬೆರಳು ತೋರಿಸಿ ಈ ರಸ್ತೆ .. ಎಂದಳು.ತಲೆಯಲುಗಿಸಿದ ನಾನು ಸುತ್ತಲಿನ ಹಸಿರು , ಬೆಳಗಿನ ಬೆಳಕಿಗೆ ಅಲ್ಲಲ್ಲಿ ಅನಾವರಣಗೊಳ್ಳುತ್ತಿದ್ದ ಮನೆಗಳು, ಎಲ್ಲವನ್ನೂ ಕಣ್ಣೊಳಗೆ ಇಳಿಸುತ್ತಲೇ ದಾರಿ ಸವೆಸುತ್ತಿದ್ದೆ. 

ದೂರದ ಪರಿವೆಯೇ ಇರಲಿಲ್ಲ. ನನ್ನೆಲ್ಲ ದುಃಖಗಳೂ ಇಂದೇ ಕೊನೆಗೊಳ್ಳುವುದು ಎಂಬ  ಸಮಾಧಾನ ಭಾವ ಎಲ್ಲವನ್ನೂ ಮರೆಸಿತ್ತು. 

ಹಳೆಯ ದೊಡ್ಡ ಕಟ್ಟಡವೊಂದು ದೂರದಲ್ಲಿ ಕಾಣಿಸಿದಾಗ ಅದರ ಎದುರು ನಿಲ್ಲಿಸಿ ಎಂದಳು. ತಾನೇ ಮುಂದಾಗಿ ಒಳ ನಡೆದು ಯಾರನ್ನೋ ಕರೆದು ಕಾರಿನಲ್ಲಿದ್ದ  ಬ್ಯಾಗ್ ಗಳನ್ನು ಒಯ್ಯಲು ಹೇಳಿದಳು. 

ನನ್ನ ಮನದಲ್ಲೇನೋ ಕಂಪನ .ಏನನ್ನೋ ಕಳೆದುಕೊಳ್ಳುತ್ತಿದ್ದೇನೆಯೇ..  ಕಣ್ಣಲ್ಲಿ ಕಂಬನಿ ಇಣುಕಿದಂತೆನಿಸಿ, ಕೆನ್ನೆ ಸವರಿಕೊಂಡೆ. ಒದ್ದೆಯಾಯಿತು ಕೈ.. ಎದೆಯೊಳಗಿನ ಭಾರ ಕರಗಿದಂತೆ.. 
ಜೊತೆಗೊಂದು ನಿರ್ಧಾರ ಭಾವ.. ಇಲ್ಲ...  ನನ್ನ ಈ ನಡೆಯಿಂದ ನನ್ನ ಮುಂದಿನ ಬದುಕಿಗೆ ಕೆಡುಕೇನೂ ಆಗಲಾರದು  ಎನ್ನುವ  ಪೂರ್ಣ ವಿಶ್ವಾಸ.

ಇವಳನ್ನು ಮೊದಲ ಬಾರಿಗೆ ಕಂಡು ,ಭೇಟಿಯಾಗಿ ವಿಷಯ ತಿಳಿಸಿದಾಗಲೇ ತನ್ನ ಅನಾಥ ಆಶ್ರಮಕ್ಕೆ ಅವುಗಳ ಅಗತ್ಯ ಇದೆ ಎಂದು ಇಲ್ಲಿಯವರೆಗೆ ಕರೆತಂದಿದ್ದಳು.    ಕಳೆದುಕೊಂಡಿದ್ದ ಮಗನ ಆಟಿಕೆ ಬಟ್ಟೆ ಬರೆಗಳನ್ನು ಹರವಿಟ್ಟುಕೊಂಡು ನಿತ್ಯವೂ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಗೊಳಿಸಲು ಇದರಿಂದ ಉತ್ತಮ ದಾರಿಯ ಆಯ್ಕೆ ನನ್ನಲ್ಲಿರಲಿಲ್ಲ.ಜೇಬಿಗೆ ಕೈ ಹಾಕಿ ಸಹಿ ಹಾಕಿದ್ದ ಚೆಕ್ ಒಂದನ್ನು ಅವಳ ಕೈಗೆ ನೀಡಿ ಇದು ನನ್ನ ಪುಟ್ಟ ಕಾಣಿಕೆ. ಇನ್ನೊಮ್ಮೆ ನನ್ನವಳೊಡನೆ ಇಲ್ಲಿಗೆ ಬರುತ್ತೇನೆ .. ಎಂದು, ಅವಳೇನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ ಕಾರು ಚಲಾಯಿಸಿದೆ. ಕಾರಿನ ಸೈಡ್ ಮಿರರ್ ನಲ್ಲಿ ಅವಳು ತನ್ನ ಆಶ್ರಮದ ಪುಟಾಣಿ ಮಕ್ಕಳೊಡನೆ ಕೈ ಬೀಸುತ್ತಿರುವುದು ಕಾಣಿಸಿತು. 


Thursday, December 1, 2011

ಸೌಧ ..



ಬಸ್ ಹೊರಡಲು ಇನ್ನೊಂದೆರಡು ನಿಮಿಷ ಅಷ್ಟೆ..  ನನ್ನ ಪಕ್ಕದ ಸೀಟ್ ಕಾಲಿ ಇತ್ತು. ಅದರೆಡೆಗೊಮ್ಮೆ ಕಣ್ಣು ಹಾಸಿ ಆರಾಮವಾಗಿ ಕಾಲು ಚಾಚಿ ಕುಳಿತೆ. ಕೊಂಚ ಭಾರವಿರಬಹುದು ಅನ್ನುವಂತೆ ಭಾಸವಾಗುವ ಬ್ಯಾಗುಗಳನ್ನು ಹೊತ್ತು ಟಿಕೆಟ್ ನಂಬರನ್ನು ಸೀಟಿನ ನಂಬರಿನೊಂದಿಗೆ ತಾಳೆ ಹಾಕುತ್ತಾ ನನ್ನ ಪಕ್ಕಕ್ಕೆ ಬಂದು ನಿಂತವಳನ್ನು ಕತ್ತೆತ್ತಿ ಕುತೂಹಲದಿಂದ ನೋಡಿದೆ. ವಯಸ್ಸು ನನ್ನಿಂದ ಕೊಂಚ ಹೆಚ್ಚೇ ಆಗಿದ್ದಂತೆ ಅವಳ ಕೂದಲಿನ ಬಣ್ಣ ಹೇಳಿತು. ಸ್ವಲ್ಪ ದಡೂತಿ ದೇಹ, ಮೊಗದಲ್ಲಿ ಪ್ರಶಾಂತ ನಗೆ. ಮೆತ್ತಗೆ ಲಗ್ಗೇಜುಗಳನ್ನು ಸೀಟಿನ ಕೆಳಗೆ ಜೋಡಿಸಿ ಕುಳಿತುಕೊಳ್ಳಲು ಅನುವಾದಳು. ಅವಳು ಕುಳಿತುಕೊಳ್ಳುವಾಗ ನನ್ನನ್ನು ಇನ್ನಷ್ಟು ಬದಿಗೆ ಸರಿಸಿದಂತೆನಿಸಿತು. ನಾನು ಸ್ವಲ್ಪ ಬಿಗಿಯಾಗಿ ಕುಳಿತು ಕಿಟಕಿಯ ಹೊರಗಿಣುಕಿದೆ.

ಬಸ್ಸಾಗಲೇ ಹೊರಟಾಗಿತ್ತು. ಅವಳು ಮುಂದಕ್ಕೆ ಬಾಗಿ ಬ್ಯಾಗಿನಲ್ಲೇನೊ ಹುಡುಕುತ್ತಿದ್ದಳು. ಡ್ರೈವರ್ ಒಮ್ಮೆಲೇ ಹಾಕಿದ ಬ್ರೇಕ್ ಗೆ ಜೋಲಿಹೊಡೆದು ನನ್ನಡೆಗೆ ವಾಲಿದಳು. ನಾನು ಓದಲೆಂದು ಹಿಡಿದಿದ್ದ ಪುಸ್ತಕ ಅವಳ ಕೈ ತಗಲಿ ಜಾರಿ ಕೆಳಗೆ ಬಿತ್ತು. ನಾನು ಬಗ್ಗುವುದರೊಳಗೆ ಅದನ್ನು ಹೆಕ್ಕಿ ಕೊಟ್ಟು 'ಸ್ಸಾರೀ' ಎಂದಳು. ಅವಳ ಮಂದಹಾಸ ಮತ್ತೊಮ್ಮೆ ನನ್ನನ್ನು ಸೆಳೆಯಿತು. ನಗು ಅವಳ ಮೊಗದಿಂದ ನನ್ನ ಮೊಗದೆಡೆಗೂ ಹರಿದು  ಪ್ರತಿಫಲಿಸಿತು. ತುಟಿಯರಳಿಸಿದ ನನ್ನನ್ನು ಕಂಡು ಮಾತು ಸುರು ಮಾಡಲು ಸಿಕ್ಕಿದ ಅನುಮತಿಯೇನೋ ಎನ್ನುವಂತೆ 'ನೀವು ದೂರ' ಎಂದಳು. 

ಮಗಳ ಮನೆಗೆ ಹೋಗ್ತಿದ್ದೀನಿ.. ನೀವು..? 

ಒಂದು ಕ್ಷಣ ಏನನ್ನೊ ಧ್ಯಾನಿಸಿದವಳಂತೆ ನನ್ನ ಕಡೆಗೆ ನೋಡಿ 'ಮಗನ ಮನೆಗೆ' ಎಂದಳು.

ಹೌದಾ.. ಏನು ಮಾಡ್ತಿದ್ದಾನೆ ನಿಮ್ಮ ಮಗ, ಎಷ್ಟು ಮಕ್ಕಳು ನಿಮಗೆ ನನ್ನ ಪ್ರಶ್ನೆ ಮರಳಿತು.

'ಎರಡು ಗಂಡು ಮಕ್ಕಳು, ಒಬ್ಬ ಇಂಜಿನಿಯರ್ ಆಗಿದ್ದಾನೆ , ಇನ್ನೊಬ್ಬ ಡೆಲ್ಲಿಯಲ್ಲಿ ಸರ್ಕಾರಿ ಉದ್ಯೋಗಿ. ಅಲ್ಲಿಂದಲೇ ಬರ್ತಾ ಇದ್ದೀನಿ ಈ ಮಗನ ಮನೆಗೆ .. ನಿಮಗೆಷ್ಟು ಮಕ್ಕಳು..' ಎಂದಳು 

'ಮೂವರು, ಇಬ್ಬರು ಹುಡುಗರು, ಒಬ್ಬಳು ಹುಡುಗಿ. ಎಲ್ಲರಿಗೂ ಮದುವೆ ಆಗಿದೆ. ಮಗಳು  ಚೊಚ್ಚಲ ಬಸುರಿ,ದಿನ ತುಂಬುತ್ತಾ ಬಂತು. ಹಾಗಾಗಿ ಅವಳ ಮನೆಗೆ ಹೊರಟಿದ್ದೇನೆ.ಇನ್ನೇನು ಕೆಲ ದಿನಗಳಲ್ಲಿ ಅಜ್ಜಿಯೂ ಆಗ್ತೀನಿ ಅಂದೆ ನಗುತ್ತಾ..  

ಅವಳು ನಸುನಕ್ಕು, 'ನಾನಾಗಲೇ ಇಬ್ಬರು ಮೊಮ್ಮಕ್ಕಳ ದೊಡ್ಡ ಅಜ್ಜಿ ಆಗಿದ್ದೀನಿ. ಎಷ್ಟು ಸುಂದರ ಅಲ್ವಾ ಪುಟ್ಟ ಮಕ್ಕಳ ಒಡನಾಟ.. ನಮ್ಮ ಬಾಲ್ಯ ಮತ್ತೊಮ್ಮೆ ಮರುಕಳಿಸುತ್ತೆ. ಹಾಗೇ ತುಂಬಾ ಜವಾಬ್ದಾರಿಯ ಕೆಲಸ ಕೂಡಾ.. ಕಳೆದ ಸಲ ನನ್ನ ಡೆಲ್ಲಿಯಲ್ಲಿರುವ ಮೊಮ್ಮಗ ಅಲ್ಲೇ ಮನೆಯ ಕಾಂಪೌಂಡ್ ಒಳಗೇ ಇರುವ ಪುಟ್ಟ ಈಜುಕೊಳಕ್ಕೆ ಬಿದ್ದಿದ್ದ. ನಾನು ಕೂಡಲೇ ಹಾರಿ ಅವನನ್ನು ಎತ್ತಿ ಹಿಡಿದಿದ್ದಕ್ಕಾಯ್ತು. ಇಲ್ಲದಿದ್ದರೆ ...!! ಮಗ ಸೊಸೆ ಮತ್ತೆ ನನ್ನ ಹೊಗಳಿದ್ದೇ ಹೊಗಳಿದ್ದು.. ಅವರ ಕಣ್ಣಲ್ಲಿ ನಾನು ಆ ಕ್ಷಣದಲ್ಲಿ ದೇವರೇ ಆಗಿದ್ದೆ. ಆದ್ರೆ ನಂಗೆ ಅದನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತೆ' ಅಂದಳು.

ನನಗ್ಯಾಕೋ ಅವಳು ತನ್ನ ಮಗನ ಮನೆಯಲ್ಲಿರುವ ಈಜುಕೊಳದ ಬಗ್ಗೆ ಹೇಳಲೇ ಈ ವಿಷಯವನ್ನು ಎತ್ತಿರಬೇಕೆಂದೆನಿಸಿತು. ಈಗ ಸುಮ್ಮನುಳಿದು ಕಡಿಮೆ ಎನಿಸಿಕೊಳ್ಳಲು ನಾನೂ ಇಷ್ಟ ಪಡಲಿಲ್ಲ. ದೊಡ್ಡ ಮಗನ ಫಾರ್ಮ್ ಹೌಸಿನ ಅಂದ, ಎರಡನೇ ಮಗನ ಮೂರಂತಸ್ತಿನ ಮನೆಯ ವೈಭವ, ಮಗಳ ಹೊಸ ಹೊಸ ಡಿಸೈನಿನ ಆಭರಣಗಳ ವಿನ್ಯಾಸ ಎಲ್ಲವನ್ನೂ ಮಾತಿನಲ್ಲಿ ತಂದೆ. 
ನಮ್ಮಿಬ್ಬರ ಮಾತುಗಳು, ಬರ್ರೋ ಎಂದು ಸಾಗುತ್ತಿದ್ದ  ಬಸ್ಸಿನ ವೇಗವನ್ನು ಮೀರಿಸುವಂತೆ ಅತ್ತಿತ್ತ ಹರಿದಾಡಿದವು.ನಡುವಿನಲ್ಲೊಮ್ಮೆ ಬಸ್ ಊಟಕ್ಕೆ ನಿಲ್ಲಿಸಿದಾಗ ನಾವಿಬ್ಬರೂ ಹಳೆಯ ಗೆಳತಿಯರಂತೆ ಬೆರಳುಗಳನ್ನು ಹೆಣೆದು ಹೋಟೆಲ್ ಗೆ ನುಗ್ಗಿದ್ದೆವು. ಊಟ ಮಾಡಿ ಸಿಹಿ  ಬೀಡಾ ಬಾಯೊಳಗೆ ತುರುಕಿಕೊಳ್ಳುತ್ತಾ ಮತ್ತೊಮ್ಮೆ ಮಾತಿನ ಲೋಕದಲ್ಲಿ ವಿಹರಿಸತೊಡಗಿದೆವು. 

ನಮ್ಮ ಮಾತಿನಲ್ಲಿ, ನಮ್ಮಿಬ್ಬರ ಕುಟುಂಬದ ಚಿತ್ರಣಗಳು ಅನಾವರಣಗೊಳ್ಳುತ್ತಿದ್ದಂತೆ ಪರಸ್ಪರ ಎಲ್ಲರೂ ಪರಿಚಿತರಾದಂತೆನಿತು. 

ನಿಲ್ದಾಣ ಬಂದದ್ದು ಇಬ್ಬರ ಮುಖದಲ್ಲೂ ಬೇಸರದ ಚಿನ್ಹೆ ಮೂಡಿಸಿತು. ಆದರೆ ಅನಿವಾರ್ಯವಾದದ್ದರಿಂದ ಇಬ್ಬರೂ ಎದ್ದು ನಿಂತೆವು.  ಕಿಟಕಿ ಬದಿಯಲ್ಲಿದ್ದ ನಾನು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನಕ್ಕೆ ಕಣ್ಣು ಹಾಸಿ, ಪರೀಕ್ಷಿಸಿ ಕೆಳಗಿಳಿಯುತ್ತಿದ್ದಂತೇ, ಅವಳು ಅಲ್ಲಿ ಬಂದ ಖಾಲೀ ಆಟೋದೊಳಗೆ,ಕೈಯಲ್ಲಿದ್ದ ಚೀಟಿಯೊಂದನ್ನು ತೋರಿಸಿ, ಹತ್ತುತ್ತಿದ್ದಳು.

ಅವಳ ವಿಳಾಸವನ್ನು ಕೇಳದ ನನ್ನ ಮರೆವಿಗೆ ನಾನೇ ಬೈದುಕೊಳ್ಳುತ್ತಾ, ಅವಳೇರುತ್ತಿದ್ದ ಆಟೋದ ಕಡೆಗೆ ಧಾವಿಸುವಾಗಲೇ ಅದು ಧೂಳೆಬ್ಬಿಸುತ್ತಾ ಮರೆಯಾತು. ಸುಂದರ ಪ್ರಪಂಚವೊಂದು ಕಣ್ಣೆದುರೇ ಪುಡಿಯಾದ ಅನುಭವ.ಒಳಗಿನ ಖಾಲೀತನ ಹೊರಗಿಣುಕಲು ಪ್ರಯತ್ನಿಸಿತು. 

ಅಷ್ಟರಲ್ಲಿ ನನ್ನನ್ನು ತಾಕುವಂತೆ ಬಂದು ನಿಂತ ಇನ್ನೊಂದು ಆಟೋ ಹತ್ತಿ , ಹೋಗಬೇಕಿದ್ದ ಜಾಗದ ಹೆಸರು  ಹೇಳಿದೆ. ಆಟೊ ಗುರಿ ತಲುಪಿ ನಿಂತರೂ ಅರಿವಾಗದೇ ಅನ್ಯಮನಸ್ಕಳಾಗಿ ಕುಳಿತ ನನ್ನನ್ನು ಡ್ರೈವರ್, 'ಮೇಡಮ್' ಎಂದಾಗ ಗಡಬಡಿಸಿ  ಇಳಿದೆ. 

ನಿಧಾನಕ್ಕೆ ಹೆಜ್ಜೆ ಹಾಕಿ ಗೇಟ್ ಸರಿಸಿ, ಪರಿಚಿತ ಮುಖಗಳಿಗೆ ಮುಗುಳ್ನಗುತ್ತಾ ನನ್ನ ಕೋಣೆಯ ಕಡೆಗೆ ನಡೆದೆ. ಇನ್ನೇನು ಕೈ ಕಾಲು ಮುಖ ತೊಳೆದುಕೊಳ್ಳಲು ಟವೆಲ್ ಹಿಡಿದು ಹೊರಟಿದ್ದೆನಷ್ಟೆ, ಬಾಗಿಲು ಬಡಿಯ್ತಿತು. 'ಆಸರೆ' ಹಿರಿಯ ನಾಗರಿಕರ ಆಶ್ರಮದ ಜಯ ಮೇಡಮ್ ಹೊರಗೆ ನಿಂತಿದ್ದರು. ನನ್ನ ಪ್ರಶ್ನಾರ್ಥಕ ಮೊಗದ ಕಡೆ ನೋಡಿದವರೇ,ತಮ್ಮ ಹಿಂದಕ್ಕೆ  ಬೆರಳು ತೋರಿಸಿ, ಇವರು ಇವತ್ತಿನಿಂದ  ನಿಮ್ಮ ಜೊತೆಗಾತಿ. ನಿಮ್ಮ ರೂಮ್ ಇವರೂ ಶೇರ್ ಮಾಡ್ಕೊಳ್ತಾರೆ ಅಂದ್ರು. ಅವರ ಮರೆಯಿಂದ  ಇಣುಕಿದವಳನ್ನು ನೋಡಿದರೆ... ಬಸ್ಸಿನಲ್ಲಿದ್ದ ಅದೇ ಪ್ರಶಾಂತ ಮಂದಹಾಸ ! 
ಅವಳು ಮುಂದಡಿ ಇಟ್ಟು, ಅಚ್ಚರಿಯಿಂದ ಸ್ಥಬ್ಧಳಾಗಿದ್ದ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದೊತ್ತಿ, 'ನೀವು ಚೆನ್ನಾಗಿ ಕಥೆ ಕಟ್ಟುತ್ತೀರಿ' ಅಂದಳು. 

'ನೀವೂ ಕೂಡಾ' ಎಂದೆ ಜೋರಾಗಿ ನಗುತ್ತಾ.. 

ಇಬ್ಬರ ನಗುವಿನಲ್ಲಿ ಸಮಸ್ತ ನೋವುಗಳಿಗೂ ಪರಿಹಾರವಿದ್ದಂತೆ ಕಾಣುತ್ತಿತ್ತು.  

- - ಅನಿತಾ ನರೇಶ್ ಮಂಚಿ .
--