ಎಲೆ ಕಡಲೆ ನಿನ್ನ ಅಲೆಗಳಿಗೆ
ತೀರದೆಡೆಗೆ ತೀರದ ಬಯಕೆ
ತಾಯಿ ನೀನಹುದು ನಿಜ ಆದರೂ
ಎಳೆದೊಯ್ದು ಬಾಗಿಲು ಹಾಕುವೆಯೇಕೆ
ರಚ್ಚೆ ಹಿಡಿದ ತುಂಟ ಮಗುವದು
ಬೋರ್ಗರೆದು ನಿನ್ನ ತೆಕ್ಕೆ ಸಡಿಲಿಸಿ
ರಭಸದಿಂದ ಬರುತ್ತಿವೆ ದಡದೆಡೆಗೆ
ಕ್ಷಣ ಹೊತ್ತು ಬಿಟ್ಟು ಬಿಡಬಾರದೇ ಕನಿಕರಿಸಿ
ಪಿಸು ಮಾತು , ತುಸು ಪ್ರೀತಿ
ಬರಡು ನೆಲಕೆ ಬೇಕಿದೆ ತಂಪು ಆಲಿಂಗನ
ನಿನ್ನಲೆಯ ಅಲೆಯುವ ಹುಚ್ಚಿಗೆ
ಅದೇ ಹಾಕುವುದು ಕಡಿವಾಣ
ಮರುಕಳಿಸುವ ನೆನಪ ಅಲೆಗೆ
ಮರಳ ತೀರ ನೆನೆ ನೆನೆದು ಒದ್ದೆ.
ಹೊತ್ತ ಪರಿವೆಯಿಲ್ಲದೆ ನಿಂತು ನಾನು
ಈ ಚಿನ್ನಾಟವ ನೋಡುತ್ತಲೇ ಇದ್ದೆ.
