ಕಳಚಿಟ್ಟ ನಿತ್ಯದ ವ್ಯಾವಹಾರಿಕ ಉಡುಪು
ಬೇಕಿಲ್ಲ ಇನ್ನು ಕೊಂಚ ಹೊತ್ತದರ ಗೊಡವೆ
ಮುಖದ ವರ್ಣಿಕೆಗೆ ರೂಪುಗಳ ಆವಾಹಿಸಿ
ಕುಣಿಯಬೇಕಿದೆ ಬಗೆ ಬಗೆಯ ಭಂಗಿಯಲಿ
ನಿಮಿಷದಲಿ ರಾಜನೋ ರಾಣಿಯೋ
ರಕ್ಕಸನೋ, ಖಳನೋ ವೇಷದೊಳಗೆ
ಒಮ್ಮೆ ವೀರಾವೇಶ ಮಗದೊಮ್ಮೆ ಶೃಂಗಾರ
ಕರುಣಾ, ರೌದ್ರ ಶಾಂತಗಳ ಪರಿಮಳ
ನಿಂತಲ್ಲೇ ಹೆಜ್ಜೆ ತಪ್ಪದೆ ಸುತ್ತಿದ ರಿಂಗಣ
ನೋಟಕರಿಗೆ ಕುಳಿತಲ್ಲೇ ರೋಮಾಂಚನ
ಪ್ರಕರ ಬೆಳಕಿಗೆ ಹೊಳೆವ ದಿರಿಸ ಹೊತ್ತು
ವ್ಯಕ್ತ ಪಡಿಸಿದ್ದಿಲ್ಲಿ ಬೇರೆಯದೇ ಲೋಕ
ತೆಗೆದೆಸೆವ ಮಾತುಗಳು ಎದೆಯೊಳಗೆ ನಾಟಿ
ಹೌದು ಹೌದೆಂದು ಅರಸಿಕನನೂ ತಲೆದೂಗಿಸಿ
ಕೃತಕ ದೀಪದ ಬದುಕು ಕೊಂಚ ಹೊತ್ತಿನದಾದರು
ಪ್ರತಿ ಕ್ಷಣವೂ ಬೇರೊಂದು ಪಾತ್ರದೊಳ ಹೊಕ್ಕು
ಬಳಲಿ ಬಸವಳಿದ ದೇಹವೂ ಹೊಸ ಜೀವವ ಪಡೆದು
ಆನಂದದ ಅಲೆಗಳಲಿ ಮನ ಮನವ ತೋಯಿಸಿ
ಸಾರ್ಥಕದ ಮಧುರ ಕ್ಷಣಗಳ ತನ್ನೊಳಗೂ ಜೀವಿಸಿ
ಬೆಳಗಾಗುವುದರಲ್ಲಿ ಮತ್ತದೇ ಕಾಲಿ ಬಯಲು
ಕತ್ತಲಲ್ಲಿ ಕಂಡ ಭವ್ಯತೆ ತೋರದಿದ್ದರೂ ಇಲ್ಲಿ
ಎದೆಯೊಳಗೆ ಉಳಿದ ಬಾವದ ಹಕ್ಕಿಯ ನಿರಂತರ ಚಿಲಿಪಿಲಿ
ಬೇಕೆನಿಸುತ್ತದೆ ಇನ್ನೊಮ್ಮೆ ಮತ್ತೊಮ್ಮೆ
ನೆನಪಿನೊಳಗೆ ಪವಡಿಸಿ ಮತ್ತೆ ಮತ್ತೆ ಮಾರ್ಧನಿಸಿ
No comments:
Post a Comment