Pages

Total Visitors

Friday, January 20, 2012

ಐ ಲವ್ ಯೂ ರಸ್ನಾ



ಅಡಿಗೆ ಮಾಡುವ ವಿಧಿ ವಿಧಾನಗಳನ್ನೆಲ್ಲ ನನ್ನ ಮಸ್ತಕದೊಳಗೆ ಇಳಿಸಲು ಸಮಯದ ಅಭಾವ ಹೊಂದಿದ ಅಮ್ಮ ಪುಸ್ತಕದ ಹಾಳೆಯೊಳಗಿಳಿಸಿ ಅದನ್ನು ನನ್ನ ಕಣ್ಣಿಗೆ ಕಾಣುವಂತೆ ಟೇಬಲ್ ಮೇಲಿಟ್ಟು 'ಜಾಗ್ರತೆ' ಎನ್ನುವ ಪದವನ್ನು ಮನೆಯಲ್ಲಿ ಹೇಳಿದ್ದು ಸಾಲದೆ, ಬಸ್ಸಿನ ಸೀಟಿನಲ್ಲಿ ಅಸೀನಳಾಗಿ ಬಸ್ ಹೊರಟ ಮೇಲೂ ತಲೆ ಹೊರಗೆ ಹಾಕಿ ಹೇಳಿದಳು. 

ಅಮ್ಮನನ್ನು ಬೀಳ್ಕೊಟ್ಟು ಮನೆಯೊಳಗೆ ಕಾಲಿಡುವಾಗಲೇ ರೋಮಾಂಚನ . ನೀಟಾಗಿ ಅಡುಗೆ ಮನೆಯಲ್ಲಿ ಕವುಚಿಟ್ಟ ಸ್ಟೀಲ್ ಪಾತ್ರೆಗಳು ಲೋಟ ಸೌಟುಗಳು ನನ್ನ ಗಡಿಬಿಡಿಗೆ ಸ್ಥಾನಪಲ್ಲಟಗೊಂಡಾಗ ಉಂಟಾಗುವ ಶಬ್ಧಗಳು ಸಂಗೀತ ವಾದ್ಯಗಳೋ ಎಂಬಂತೆ ನನ್ನ ಸ್ವರ ಅದರೊಡನೆ ಜೊತೆಗೂಡುತ್ತಿತ್ತು. ಅಡುಗೆ ಮನೆಯೊಡನಾಟ ಹೊಸತೇನು ಅಲ್ಲವಾದರೂ. ಅಲ್ಲಿ ಅಮ್ಮನ ಸ್ಟವ್  ಆಫ್  ಎಂಬ ಆರ್ಡರೋ, ಕಾಯಿ  ಹೆರೆದು ಕೊಡ್ತೀಯ ಮುದ್ದು ಪ್ಲೀಸ್ ಎಂಬ ಬೇಡಿಕೆಗಳೋ.. ಇರುತ್ತಿದ್ದವು. ಇಡೀ ಅಡುಗೆ ಮನೆಯನ್ನು ನನ್ನ ಕಾರ್ಯ ಕ್ಷೇತ್ರವಾಗಿಸುವ ಸಂಪೂರ್ಣ ಸ್ವಾತಂತ್ರ್ಯ ಬಂದದ್ದು ಇಂದೇ.. 

ಮೊದಲಿಗೆ ತಿಂಡಿ ಡಬ್ಬಗಳನ್ನೆಲ್ಲ ಹುಡುಕಿ ನನಗಿಷ್ಟವಾದ ಹುರಿಗಾಳನ್ನು ತಟ್ಟೆ ತುಂಬಾ ಸುರುವಿಕೊಂಡೆ..ಬಾಯಿಗೆ ಹುರಿಗಾಳೆಸೆದುಕೊಂಡು, ಅಮ್ಮ ಬರೆದಿಟ್ಟ ಹಾಳೆಯ ಮೇಲೆ ಕಣ್ಣಾಡಿಸಿದೆ. 
ತರಕಾರಿ ಚೆನ್ನಾಗಿ ತೊಳೆದು ಎಂಬಲ್ಲಿಂದ ಸುರುವಾಗಿ,ಇಳಿಸಿ ಒಗ್ಗರಣೆ ಹಾಕುವಲ್ಲಿಯವರೆಗಿನ ವಿಸ್ತಾರವಿತ್ತಲ್ಲಿ. ಕಣ್ಣೆತ್ತಿ ಗೋಡೆಯ ಮೇಲಿದ್ದ ಗಂಟೆ ನೋಡಿದರೆ ಅದಿನ್ನೂ ಹತ್ತರ ಸಮೀಪ ಬಂದಿತ್ತಷ್ಟೆ. ಇಷ್ಟು ಬೇಗ ಯಾಕೆ ಈ ಯಕಶ್ಚಿತ್ ಸಾಂಬಾರನ್ನು ಮಾಡಿಡುವುದು ಎಂದು ತಟ್ಟೆಯಲ್ಲಿದ್ದ ಹುರಿಗಾಳಿನೊಡನೆ ಹೊರ ಬಂದು ಟಿ ವಿ  ಯೊಳಗೆ ಕಣ್ಣು ತೂರಿಸಿದೆ. ರಸಮಯ ಘಟ್ಟಕ್ಕೆ ಬಂದಿತ್ತು ಯಾವುದೋ ಹಳೆ ಸಿನೆಮಾ ..

ಅಷ್ಟರಲ್ಲಿ ಬಾಗಿಲಿನ ಬೆಲ್ ಹೊಡೆದುಕೊಂಡಿದ್ದು ಕೇಳಿಸಿತು. ಎದ್ದ  ರಭಸಕ್ಕೆ ಮಡಿಲಲ್ಲಿಟ್ಟುಕೊಂಡಿದ್ದ ಹುರಿಗಾಳಿನ ತಟ್ಟೆ ಚಿಮ್ಮಿ  ನೆಲದ ಮೇಲೆಲ್ಲ ಹರಡಿತು. ಅದನ್ನೆಲ್ಲ ಕ್ಲೀನ್ ಮಾಡುವಷ್ಟು ವ್ಯವದಾನವಿಲ್ಲದೆ ಕಾಲಿನಲ್ಲಿ ಅವಸರ ಅವಸರವಾಗಿ ಮಂಚದ ಅಡಿಗೆ ಸರಿಸಿ, ಕಾಣದಂತೆ ಮಾಡಿ ಬಾಗಿಲು ತೆರೆದರೆ, ನಾವು ಮೊದಲಿದ್ದ ಮನೆಯ ನೆರೆಯಲ್ಲಿದ್ದ ಆಂಟಿ. ಮತ್ತು ಅವರ ಕೈ ಹಿಡಿದುಕೊಂಡು ನಿಂತ ನೇರವಾಗಿ ಇಂಗ್ಲೆಂಡಿನಿಂದಲೇ ಇಂಪೋರ್ಟ್ ಆದಂತೆ ಕಾಣುತ್ತಿದ್ದ ಬಿಳಿ ಬಣ್ಣದ ಪುಟ್ಟ ಹುಡುಗಿ .

ಟಿ ವಿ ಯ ವಾಲ್ಯೂಮಿನ ತರಂಗಗಳಿಂದಲೇ ಗೊತ್ತಾದವರಂತೆ ಅಮ್ಮ ಮನೇಲಿಲ್ವಾ ಅಂದರು ಅನುಭವಿ  ಆಂಟಿ.

ಕೊಂಚ ಗಂಭೀರ ಮುಖಬಾವದೊಂದಿಗೆ  ಅಮ್ಮ ಇಲ್ಲ, ಹೊರಗೋಗಿದ್ದಾರೆ, ನೀವು ಬನ್ನಿ ಒಳಗೆ ಅಂತ ಆದರದಿಂದ  ಸ್ವಾಗತಿಸಿದೆ.  

ಅತ್ತಿತ್ತ ಕಣ್ಣಾಡಿಸುತ್ತಲೇ ಒಳಗೆ ಬಂದು ಕುರ್ಚಿಯಲ್ಲಿ ಕುಳಿತು ಕೈಯಲ್ಲಿದ್ದ ಪುಸ್ತಕದ ಕಟ್ಟನ್ನು ಟೀಪಾಯಿಗೆ ವರ್ಗಾಯಿಸಿದರು. ಓದ್ಲಿಕ್ಕೆ ಅಂತ ಮೊನ್ನೆ ತೆಗೊಂಡು ಹೋಗಿದ್ದೆ,  ಕೊಟ್ಟಿದ್ದೀನಿ ಅಂತ ಅಮ್ಮನಿಗೆ ಹೇಳ್ಬಿಡು ಅಂದರು. ಆ ಪುಸ್ತಕವನ್ನವರು ತೆಗೆದುಕೊಂಡು ಹೋಗಿ ತಿಂಗಳುಗಳೇ  ಉರುಳಿದ್ದವು. ನಾಲ್ಕಾರು ಬಾರಿ ಕೇಳಿದ ಮೇಲಷ್ಟೆ ಬಂದಿದೆ ಇಂದಿಲ್ಲಿಗೆ ಎನ್ನುವ ಸತ್ಯ ನನಗೂ ತಿಳಿದಿತ್ತು. 

ಅಮ್ಮ ಅಡುಗೆ ಎಲ್ಲಾ ಮಾಡಿಟ್ಟು ಹೋದ್ರಾ.. ಎಂದು ಪ್ರಶ್ನಿಸಿ,ಉತ್ತರದ ಅವಕಾಶವೂ ನೀಡದೆ ಮೇಲೆದ್ದು ನಿಂತು ನಾನಿನ್ನು ಹೊರಡ್ತೀನಿ .. ಪೇಟೆ ಕಡೆ ಹೋಗ್ಬೇಕಿದೆ ಎಂದರು.
ಮನೆಗೆ ಬಂದ ಅತಿಥಿಗಳಿಗೆ ಬಾಯಾರಿಕೆಯೂ ಕೊಡದೆ ಹಾಗೇ ಕಳುಹಿಸಿ ನನ್ನ ಮರ್ಯಾದೆಗೆ ಕುಂದುಂಟು ಮಾಡಿಕೊಳ್ಳುವ ಇಚ್ಚೆ ನನಗಿರಲಿಲ್ಲ. ಇರಿ. ಒಂದು ನಿಮಿಷ. ಕುಡಿಯಲಿಕ್ಕೆ ಏನಾದ್ರು ತರ್ತೀನಿ , ನಿಮ್ಗೆ ಕಾಫಿ ತಾನೆ.. ನಿಂಗೇನು ಪುಟ್ಟಾ ಎಂದು ಮುದ್ದು ಹುಡುಗಿಯ ಗಲ್ಲ ಸವರಿ ಕೇಳಿದೆ. ನಂಗೆ ಜ್ಯೂಸ್ ಅಕ್ಕಾ ಎಂದು ಕೀ ಕೊಟ್ಟಂತೆ ಉಲಿದಳು. 

ಕಾಫಿ ಎನ್ನುವ ದ್ರಾವಣವನ್ನು ನಾನು ಕುಡಿಯದೇ ಇರುವ ಕಾರಣ, ನೋಡಿದ್ದ  ಬಣ್ಣದ ಅಂದಾಜಿನ ಮೇಲೆ ಒಂದು ಲೋಟ ತಯಾರಿಸಿದೆ. ಜ್ಯೂಸ್  ಮಾಡಲು ಸಕ್ಕರೆ ಡಬ್ಬದಿಂದ ಒಂದಷ್ಟು ಸಕ್ಕರೆ ಸುರುವಿ  ನಿಂಬೆ ಹಣ್ಣು ಹಿಂಡಿ,ನೀರು ಸೇರಿಸಿ ಗೊಟಕಾಯಿಸಿದೆ. ನೀರಿನದೇ ಬಣ್ಣ ಹೊತ್ತಿದ್ದ ಅದು ಗಾಜಿನ ಲೋಟದಲ್ಲಿಳಿದಾಗ ಏಕೋ ಆಕರ್ಷಕ ಅನ್ನಿಸಲಿಲ್ಲ.ಆಗಷ್ಟೇ ಟಿವಿಯಲ್ಲಿ ಸುಂದರ  ಟ್ರೇಯ ಮೇಲಿಟ್ಟ ಉದ್ದುದ್ದದ  ಲೋಟಗಳಲ್ಲಿ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿದ್ದ ಜ್ಯೂಸಿನ ಜಾಹಿರಾತನ್ನು ನೋಡಿದ್ದೆ.  ಮಕ್ಕಳೆಲ್ಲಾ ಒಕ್ಕೊರಳಲ್ಲಿ ಐ ಲವ್ ಯೂ ರಸ್ನಾ ಎಂದು ಕಿರುಚುತ್ತಿದ್ದುದನ್ನು  ನೋಡಿಯೇ ಬಾಯಾರಿಕೆ ಆಗುವಂತಿತ್ತು ಅದು .ಇದನ್ನು ಯಾಕೆ ಅದೇ ರೀತಿ ವರ್ಣಮಯಗೊಳಿಸಬಾರದು  ಎಂಬ ಯೋಚನೆ ತಲೆಗೆ ಬಂದಿದ್ದೇ ತಡ  , ಸಾಮಗ್ರಿಗಾಗಿ ಕೊಂಚ ತಡಕಾಡಿದೆ.  ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿಯೇ ಬಿಟ್ಟಿತು. ಒಂದು ಚಮಚ ಭರ್ತಿ ರಂಗಿನ ಹುಡಿಯನ್ನು ಹಾಕಿ ಚೆನ್ನಾಗಿ ಕಲಕಿ ರಸ್ನಾ ಗರ್ಲ್ ನಂತೆ ಇದ್ದ ಪುಟ್ಟ ಹುಡುಗಿಯ  ಕೈಗೆ ನೀಡಿದೆ. 
ಆಂಟಿ ಕಾಫಿಯ ಕಪ್ಪನ್ನು ಅನುಮಾನಿಸುತ್ತ ಎತ್ತಿಕೊಂಡು, ಕಾಫಿಯ ಪರಿಮಳಕ್ಕೇನೋ ಕಣ್ಣು ಮುಚ್ಚಿ ಕುಡಿದರು. ಆದರೆ ನನ್ನ ನೋಟವೆಲ್ಲ ಪುಟ್ಟ ಹುಡುಗಿಯತ್ತಲೇ... ಸಂತಸದಿಂದ ಕಣ್ಣರಳಿಸಿ,ಗಾಜಿನ ಲೋಟದಲ್ಲಿದ ಜ್ಯೂಸನ್ನು ಪೂರ್ತಿಯಾಗಿ ಕುಡಿದು ಮುಗಿಸುವವರೆಗೆ ಲೋಟ ಕೆಳಗಿಳಿಸದ ಬಾಲೆ, ಲೋಟ ಕೆಳಗಿಟ್ಟವಳೇ ಹೋಗೋಣ ದೊಡ್ಡಮ್ಮ ಎಂದು ಹೇಳತೊಡಗಿದಳು.ಅವಳ ತುಟಿಯ ಸುತ್ತೆಲ್ಲ ಜ್ಯೂಸಿನ ಬಣ್ಣ ಮೆತ್ತಿ  ಮುಖವೀಗ ಹನುಮಂತನಂತಾಗಿತ್ತು. ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ನಾನು ನಿಂತಿದ್ದರೆ ,  ಆಂಟಿ ಇವಳನ್ನು ಕರೆದುಕೊಂಡು ಹೇಗಮ್ಮ ಪೇಟೆಗೆ ಹೋಗೋದು .. ಎಂದು ಕೈಯಲ್ಲಿದ್ದ ಕರವಸ್ತ್ರ ದಲ್ಲಿ ಒರೆಸಲು ಪ್ರಯತ್ನಿಸಿ ಅದನ್ನು ರಂಗು ರಂಗಾಗಿಸಿದರು. ನನ್ನ ಕಡೆಗೆ ತಿರುಗಿ ಸೋತ ಸ್ವರದಲ್ಲಿ "ಎಲ್ಲಿ ಸ್ವಲ್ಪ ನೀರು ಕೊಡು"  ಎಂದು ನೀರು ತೆಗೆದುಕೊಂಡು ಆ  ಬಣ್ಣವನ್ನು ತಿಕ್ಕಿ ತಿಕ್ಕಿ ತೊಳೆಯ ಹೊರಟು ಅವಳ ಮುಖವನ್ನು ನಿಜವಾದ ಮಂಗನಂತೆ ಮಾಡಿ ಬಿಟ್ಟರು. 
ಅವರಲ್ಲಿಂದ ಹೋದ ಮೇಲೇ  ಬಿದ್ದು ಬಿದ್ದು ನಗಲು ಶುರು ಮಾಡಿದ  ನಾನು, ಸಾಂಬಾರು ಮಾಡಿದ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ ಆಗದೇ.. 







8 comments:

  1. amma maneyinda hora hodaga nentaru bandaga madida athithi!! sathkara layakithu....

    ReplyDelete
  2. ಅಹ್ಹಹ್ಹಾ...

    ಸೊಗಸಾದ ನಿರೂಪಣೆ ಅನಿತಕ್ಕಾ.

    ReplyDelete
  3. ಅನೀತಕ್ಕ ನನಗೆ ನಗುವುದನ್ನು ಬಿಟ್ಟು ಪ್ರತಿಕ್ರಿಯಿಸಲೂ ಆಗುತ್ತಿಲ್ಲ.. ಎಷ್ಟು ಚೆಂದ ಬರೆಯುತ್ತೀರೆಂದರೆ ಹಾಸ್ಯವನ್ನುಕ್ಕಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಲೇಖನ.. ಎಂದಿನಂತೆ ನಿರೂಪಣೆ ಸಂಪೂರ್ಣ ಅಂಕಗಳನ್ನು ಜೇಬಿಗಿಳಿಸಿದೆ.. ನಿಮ್ಮ ಕೈಯಲ್ಲಿ ಒಂದು ಸಂದರ್ಭ ಸಿಕ್ಕಿದರೆ ಸಾಕು ಅದನ್ನು ತುಂಬಾ ರಸವತ್ತಾಗಿ ಶೃಂಗರಿಸುವ ಜಾಣ್ಮೆ ನಿಮ್ಮಲ್ಲಿದೆ.. ಒಬ್ಬ ಸುಂದರ ಬರಹಗಾರ್ತಿ ನೀವು, ನಿಮ್ಮ ಬರವಣಿಗೆಯನ್ನು ಓದಿ ಆನಂದಿಸುವುದೇ ಒಂದು ಚೆಂದ.. ತುಂಬಾ ಚೆನ್ನಾಗಿದೆ ಈ ನಿಮ್ಮ ’ಐ ಲವ್ ಯು ರಸ್ನ’ ಕತೆ..:))) ಆಗಬಹುದು ಸಾಂಬಾರ್ ಮಾಡಿದ ಕಥೆಯನ್ನು ಇನ್ನೊಮ್ಮೆ ಹೇಳಿ, ಆದರೆ ಈಗ ಮಾಡಿದ ಅವಾಂತರಕ್ಕೆ ಬಲಿ ಆ ಮಗು, ನೀವು ಮಾಡಿದ ಸಾಂಬಾರ್’ಗೆ ಬಲಿ ನೀವೆಯೋ?! ;)

    ReplyDelete
  4. Sakkath ide nage lekhana :):) keep it up Anitha :):)

    ReplyDelete
  5. ನಿಮ್ಮಲ್ಲಿ ಬಂದಾಗ ನಿಮ್ಮ ಆತಿಥ್ಯ ಸ್ವೀಕರಿಸಲು ಹೆದರಿಕೆ ಆಗುತ್ತಿದೆ....

    ReplyDelete