Pages

Total Visitors

Monday, February 13, 2012

ರಂಗ್ ದೇ .. ಮುಜೆ ರಂಗ್ ದೇ ..






ಚಿಕ್ಕವಳಿರುವಾಗ ಯಾರಾದರೂ ಬಂದು ಮದುವೆಯ ಇನ್ವಿಟೇಷನ್ ಕೊಟ್ಟರೆ ಸಾಕು, ನಾನು ಖುಷಿಯಿಂದ  ಕ್ಷಣ ಗಣನೆ ಮಾಡಲು ಪ್ರಾರಂಭಿಸುತ್ತಿದ್ದೆ. ನನ್ನ ಈ ಸಂತೋಷ ಮದುವೆಯ ಭರ್ಜರಿ ಊಟದ ಕನಸಿನಲ್ಲಲ್ಲ.. ಅದರ ಮುನ್ನಾ ದಿನದ ಮದುರಂಗಿ ಎಂಬ ವಿಶಿಷ್ಟ ಕಾರ್ಯಕ್ರಮದ ಸೆಳೆತಕ್ಕೆ..
ಆ ದಿನ ಹಿರಿ ಕಿರಿ ಕುರಿಗಳೆನ್ನದೆ ಎಲಾ ಹೆಂಗಳೆಯರು ಈ ಸಂಭ್ರಮದ ಅಂಗವಾಗುತ್ತಿದ್ದರು. ಮದುರಂಗಿ ಗಿಡದಿಂದ ತಂದಿಟ್ಟ ಸೊಪ್ಪನ್ನು ಆಯ್ದು , ನುಣ್ಣಗೆ ಕಡೆದು ಅದಕ್ಕೆ ನಿಂಬೆ ರಸ, ನೀಲಗಿರಿ ಎಣ್ಣೆ ಇತ್ಯಾದಿಗಳನ್ನೆಲ್ಲ ಬೆರೆಸಿ ಒಂದು ದೊಡ್ದ ಬಟ್ಟಲಿನಲ್ಲಿ ಇಡುತ್ತಿದ್ದರು. ಅದನ್ನು ಕಡ್ಡಿಗಳಿಂದ ತೆಗೆದು ಅಂಗೈ ಮೇಲೆ ಚಿಕ್ಕ, ದೊಡ್ಡ  ಚುಕ್ಕಿಗಳನ್ನಿಟ್ಟುಕೊಳ್ಳುತ್ತಿದ್ದೆವು. ಉಗುರುಗಳಿಗೂ ಅದರದೇ ಟೋಪಿಗಳನ್ನಿಡುತ್ತಿದ್ದೆವು.ಮದುಮಗಳಿಗೆ ಒಂದು ಕೈಗೆ ಚುಕ್ಕಿಗಳನ್ನಿಟ್ಟು ಇನ್ನೊಂದು ಕೈಯನ್ನು ಸೇರಿಸಿ ಬಿಗಿಯುತ್ತಿದ್ದರು. ಇದರಿಂದ ಸುಲಭದಲ್ಲಿ ಎರಡೂ ಕೈಗಳು ಒಂದೇ ವಿನ್ಯಾಸವನ್ನು ಹೊತ್ತುಕೊಳ್ಳುತ್ತಿದ್ದವು. ಕೆಲವೊಮ್ಮೆ ಅವಳ ತುಂಟ ಗೆಳತಿಯರು ಮದುಮಗನ ಹೆಸರನ್ನು ಸೊಟ್ಟ ಸೊಟ್ಟಗಾಗಿ ಅವಳ ಕೈಯಲ್ಲಿ ಮೂಡಿಸುತ್ತಿದ್ದುದು ಇನ್ನೊಂದು ಕೈಯಲ್ಲಿ ಉಲ್ಟಾ ಕಾಣುತ್ತಿತ್ತು. ಅದನ್ನು ನೋಡಿದ ಮದುಮಗಳ ಮುಖ ಮದುರಂಗಿಗಿಂತಲೂ ರಂಗಾಗಿದ್ದರೆ, ಅಜ್ಜಿಯಂದಿರ ಮುಖ 'ಏನ್ ಹುಡ್ಗೀರೋ ಸ್ವಲ್ಪವೂ ನಾಚಿಕೆಯಿಲ್ಲ' ಎಂದು ರಾಂಗ್ ಆಗುತ್ತಿತ್ತು. 
ಅದೇನಿದ್ದರೂ ಮದುವಣಗಿತ್ತಿಗೂ ಅವಳ ಗೆಳತಿಯರಿಗೂ ಸಂಭಂದಿಸಿದ ವಿಷಯ. ನನಗೆ ಅವರಿವರ ಕೈಯ ವಿನ್ಯಾಸಗಳನ್ನು ನೋಡಿ ನನ್ನ  ಕೈಯಲ್ಲೂ ಅಂತಹುದನ್ನೇ ಮೂಡಿಸಿಕೊಳ್ಳುವ ಹುಮ್ಮಸ್ಸು.ಅಂತೂ ಮನೆ ತಲುಪುವಾಗ ಮದುರಂಗಿ ಎಂಬುದು ಹಾಕಿದ ಅಂಗಿಯನ್ನೂ ಸೇರಿಸಿಕೊಂಡು ಸರ್ವಾಂಗಗಳಲ್ಲೂ ತುಂಬಿಕೊಂಡು ಸಿಡುಬಿನ ಕಲೆಯಂತೆ ತೋರುವ ನವ್ಯಕಲೆ ನನ್ನ ಕೈ ಮೈಗಳಲ್ಲಿರುತ್ತಿತ್ತು. 

ಸ್ವಲ್ಪ ದೊಡ್ಡವಳಾದ ಮೇಲೆ ಪೇಟೆಯಲ್ಲಿ ಸಿಗುವ ರೆಡಿಮೇಡ್ ಮೆಹಂದಿ ಕೋನ್ ಗಳ ಪರಿಚಯವಾಯಿತು. ಈಗೊಂದು ನೆಮ್ಮದಿ. ಅವುಗಳನ್ನು ಕೈಗೆ ಮೆತ್ತಿಕೊಳ್ಳಲು ಯಾರ್ಯಾರಿಗೋ ' ಮೇಡ್ ಫಾರ್ ಈಚ್ ಅದರ್' ಗಳು ಸಿಕ್ಕಿ ಅವರು ಮದುವೆ ಆಗಬೇಕಾದ ಅಗತ್ಯವಿರಲಿಲ್ಲ. ಇದರಿಂದಾಗಿ ಕಾಲೇಜ್ ಡೇ, ಬರ್ತ್ ಡೇ, ಪಿಕ್ನಿಕ್ ಡೇ, ಎಂಬೆಲ್ಲ ಡೇ ಗಳಲ್ಲಿ ಕೈ ರಂಗೇರುತ್ತಿತ್ತು. 

ಹಾಸ್ಟೆಲ್ ವಾಸದ ಸಮಯದಲ್ಲಿ ಬೊಂಬಾಯಿಯಿಂದ ಬಂದಿದ್ದ ಒಬ್ಬ ಗೆಳತಿ ನನ್ನ ಕೈಯ   ಚುಕ್ಕಿ ಚಿತ್ರಗಳನ್ನು ನೋಡಿ ನಕ್ಕು ಹೊಸ ಹೊಸ ನಮೂನೆಯ ಡಿಸೈನ್ ಗಳನ್ನು ಪರಿಚಯಿಸಿದಳು. ಮೊದಲೆಲ್ಲಾ ಕೇವಲ ಅಂಗೈಯೊಳಗೆ ಆಡಿ ನಲಿಯುತ್ತಿದ್ದ ವಿನ್ಯಾಸಗಳು ಬಳ್ಳಿ ಹೂವು ಕಾಯಿಗಳಾಗಿ ನಿಧಾನಕ್ಕೆ ಹಿಂಗೈಯನ್ನು ತಲುಪಿ ಮುಂಗೈವರೆಗೂ ಬೆಳೆದವು. ಕಾಲಿನ ಬೆರಳುಗಳೂ ಬೆರಳುಗಳೇ ತಾನೇ.. ಅವೇನು ಪಾಪ ಮಾಡಿದ್ದಾವೆ ಎಂದು ಅಲ್ಲಿಗೂ ಲಗ್ಗೆಯಿಟ್ಟಿತು.ನಾವೇ ಬಳಿದುಕೊಳ್ಳುತ್ತಿದ್ದ ಚಿತ್ರ ವಿಚಿತ್ರ ವಿನ್ಯಾಸಗಳು ಸಾಲದೇ ಮೆಹಂದಿ ಡಿಸೈನ್ ಬುಕ್ ಎಂಬ ಪುಸ್ತಕಗಳು ಮಾರುಕಟ್ಟೆಗೆ ಬಂದು ಇನ್ನಷ್ಟು ಕೋಲಾಹಲವೆಬ್ಬಿಸಿದವು. 

ಉಟ್ಕೊಂಡಿರೋ ಸಿಲ್ಕ್ ಸೀರೆ ನೋಡಿ  ' ಯಾವ್ದೇ ಇದು.. ಬನಾರಸ್ಸೊ, ಕಾಂಜೀವರಮ್ಮೋ, ಮೊಳಕಾಲ್ಮೂರೋ, ಎಂದು ತಲೆಯಿಂದ  ಕಾಲಿನವರೆಗೆ ದಿಟ್ಟಿಸಿ ನೋಡಿ ಪ್ರಶ್ನಿಸುವಂತೆ, ಈಗ ಅಂಗೈ ಮೇಲಿನ ಡಿಸೈನ್ ನೋಡಿ, ಕೈಯನ್ನು ಮುರಿಯುವಂತೆ ತಿರುಗಿಸಿ ಮುರುಗಿಸಿ  ' ಅಕ್ಕಾ.. ಅಕ್ಕಾ.. ಇದ್ಯಾವುದೇ ಅರೇಬಿಕ್ಕಾ..' ಎಂದೆಲ್ಲ ಪ್ರಶ್ನಿಸತೊಡಗಿದರು. 

ಉತ್ತರಿಸೋಣ ಎಂದರೆ ನನಗೇ ಅದರ ಬಗ್ಗೆ ಅರಿವಿದ್ದರೆ ತಾನೇ..ಇದನ್ನು ತಿಳಿದುಕೊಳ್ಳಲಾದರೂ,   ನಾನೂ ಒಂದೆರಡು ಡಿಸೈನ್ ಪುಸ್ತಕಗಳ ಒಡತಿಯಾಗಬೇಕೆಂಬ ಆಸೆ ಮೂಡಿ, ಪುಸ್ತಕದಂಗಡಿಗೆ ಧಾಳಿ ಇಟ್ಟೆ. ತಲೆದಿಂಬಿನಷ್ಟು ದಪ್ಪ ಪುಸ್ತಕದೊಳಗೆ ತನ್ನ ಮಸ್ತಕವನ್ನು ಹುದುಗಿಸಿ ಕುಳಿತಿದ್ದ ಅಂಗಡಿ ಮಾಲೀಕರು, ನನ್ನ ಹೆಜ್ಜೆ ಸದ್ದಿಗೆ , ದಪ್ಪ ಕನ್ನಡಕದೊಳಗಿನಿಂದಲೇ ಕಂಡ ಪುಟ್ಟ ಕಣ್ಣುಗಳಲ್ಲೇ ಏನು ಬೇಕೆಂದು ಪ್ರಶ್ನಿಸಿದರು. 'ಮೆಹಂದಿ ಪುಸ್ತಕ' ಎಂದೆ. ದಡಾಲನೆ ಕುಳಿತ ಕುರ್ಚಿಯಿಂದ  ಮೇಲೆದ್ದವರೇ ಮೆಹಂದಿ ಪುಸ್ತಕವೇ..?? ತುಣುಕ್..ತುಣುಕ್..ತರಾರ.. ಎಂದು ನೀರಿಗೆ ಕಲ್ಲೆಸೆದಂತೆ ಧ್ವನಿ  ಮಾಡುವುದನ್ನೇ ಹಾಡು ಎಂದು ಎಲ್ಲರನೂ ಮೂರ್ಖರನ್ನಾಗಿಸಿದ ಆ ' ದಿಲೇರ್ ಮೆಹಂದಿ' ಪುಸ್ತಕಗಳನ್ನು ಬೇರೆ ರಚಿಸಿದ್ದಾನೆಯೇ..?? ಎಂದರು.

ಅಲ್ಲಾ ಸ್ವಾಮೀ  ಕೈಗಳಿಗೆ ಹಾಕೋ ಮದುರಂಗಿಯ ಡಿಸೈನ್ ಪುಸ್ತಕ ಬೇಕಿತ್ತು ಎಂದೆ. ಕುರ್ಚಿಯಿಂದ  ಎದ್ದ ವೇಗದಲ್ಲೇ ಪುನಃ ಕುರ್ಚಿಯಲ್ಲಿ ಕುಕ್ಕರಿಸಿ, 'ಅಂತಹ ಪುಸ್ತಕಗಳ್ಯಾವುವೂ ನಮ್ಮಲ್ಲಿಲ್ಲ.. ಇಲ್ಲೇನಿದ್ದರೂ ಗಂಭೀರ ಸಾಹಿತ್ಯ, ಕಲೆಗಳ ಬಗ್ಗೆ ಪುಸ್ತಕಗಳಿವೆ ಅಷ್ಟೇ' ಎಂದು ಮತ್ತೆ ತಮ್ಮ ತಲೆಯನ್ನು ಬಗ್ಗಿಸಿ, ದಪ್ಪ  ಪುಸ್ತಕದೊಳಗೆ ಕಣ್ಣು ತೂರಿದರು. ಇದು ಕೂಡಾ ಗಂಭೀರ ಕಲೆಯೇ.. ಬಟ್ಟೆಗಂಟಿದರೆ ತಿಂಗಳುಗಳುರುಳಿದರೂ, ಕೆಲವೊಮ್ಮೆ ತಿಕ್ಕಿ  ಒಗೆದು ಬಟ್ಟೆ ಹರಿದರೂ ಕಲೆ ಉಳಿದು ಗಂಭೀರತೆಯನ್ನು ಸೃಷ್ಟಿಸುತ್ತದೆ, ಎಂದು ಮನದಲ್ಲೇ ಅಂದುಕೊಂಡು ಅಲ್ಲಿಂದ ಹೊರಬಿದ್ದೆ. 

ಪುಸ್ತಕವಿಲ್ಲದಿದ್ದರೇನ್.. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ಪವರಿಂದ ನೋಡಿ.. ಕುರಿತೋದದೆಯುಂ ಪರಿಣತಮತಿಯಾದೆ. ಈಗ ನನ್ನದೇ ಹೊಸ, ನವನವೀನ ವಿನೂತನವೆಂಬ ಬಗೆ ಬಗೆಯ ವಿನ್ಯಾಸಗಳನ್ನು ಬಿಡುವಿರುವಾಗೆಲ್ಲ ನನ್ನದೇ ಕೈಕಾಲುಗಳ ಮೇಲೂ, ನಿದ್ರಾವಸ್ತೆಯನ್ನು ಆಸ್ವಾದಿಸುತ್ತಾ , ಹೊದಿಕೆಯ ಹೊರ ಇಣುಕುವ ಬೇರೆಯವರ  ಕೈಗಳ ಮೇಲೂ ನನ್ನ ಅತ್ಯುನ್ನತ ಅಮೋಘ ಕಲಾ ಪ್ರದರ್ಶನವೇರ್ಪಡಿಸುತ್ತಿದ್ದೆ. 

ಇಷ್ಟೆಲ್ಲ ಕಲಿತ ಮೇಲೆ ಪ್ರಚಾರಕ್ಕೆ ಬಾರದೆ ಇರುತ್ತೇನೆಯೇ..' ತುಂಬಾ ಚಂದ ಇದೆ ಕಣೆ ನೀನು ಹಾಕುವ ಡಿಸೈನ್ಸ್.. ನನ್ನ ಅಕ್ಕನ ಗಂಡನ ಸೋದರ ಮಾವನ ಮಗನ ಹೆಂಡತಿಯ ತಂಗಿಯ ಮದ್ವೆ ಇದೆ ಕಣೆ .. ನೀನೇ ಬಂದು ಮೆಹೆಂದಿ ಹಾಕ್ಬೇಕು' ಎಂದು ಆತ್ಮೀಯರು ಯಾರಾದರೂ ಅಪ್ಪಿ ತಪ್ಪಿ ಹೇಳಿ ಬಿಟ್ಟರೆ ಹೋಗದೇ ಇರುವಷ್ಟು ಸೌಜನ್ಯ ಹೀನಳಲ್ಲ ನಾನು. ಅವರ ಗಾತ್ರಕ್ಕೆ ತಕ್ಕಂತೆ ಮೆಹೆಂದಿ ಕೋನ್ ಗಳನ್ನು ತರಿಸಿಡಲು ಹೇಳಿ, ಮುನ್ನಾ ದಿನವೇ ಹೋಗಿ, ಮೆಹೆಂದಿ ಮೆತ್ತಿ ಬೆನ್ನು ಕತ್ತು ನೋವು ಬರಿಸಿಕೊಂಡು ಸಮಾರಂಭದ ದಿನ ನನ್ನ  ಮನೆಯಲ್ಲೇ ಉಳಿಯುತ್ತಿದ್ದೆ.
ಒಮ್ಮೆ ಹೀಗೆ ನನ್ನ ಆತ್ಮೀಯ ಗೆಳತಿಯ ನಾದಿನಿಯ ಮದುವೆಯ  ಆಹ್ವಾನ ಸ್ವೀಕರಿಸಿದ್ದೆ.ಮದುವೆಯ ಮುನ್ನಾ ದಿನ ಬೆಳಗ್ಗೆ ನಿಂಗೆ ಏನೆಲ್ಲ ಬೇಕಾಗುತ್ತೆ ಹೇಳ್ಬಿಡೇಮ್ಮಾ.. ಮೊದ್ಲೇ ತರಿಸಿಟ್ರೆ ಎಲ್ಲೆಲ್ಲೊ ಹಾಕಿ ಹುಡ್ಕೋದು ಕಷ್ಟ ಆಗುತ್ತೆ ಕಣೆ ಅಂತ ಅಲವತ್ತುಕೊಂಡಳು. ನಾನು ಅದರ ಬಗ್ಗೆ ಹೇಳಲು ಮದುವೆಯ ಮುನ್ನಾ ದಿನ ಬೆಳ ಬೆಳಗ್ಗೆ ಫೋನ್ ಮಾಡಿದಾಗ, ಗೆಳತಿಯ ಮಾವ ಫೋನೆತ್ತಿ ,ಮದುಮಗಳು ಇನ್ನೂ ಎದ್ದಿಲ್ಲ.. ಉಳಿದವರೆಲ್ಲ ಟೈಲರ್ ಅಂಗಡಿಗೆ ಹೋಗಿದ್ದಾರಮ್ಮಾ.. ಏನು ವಿಷ್ಯ ಹೇಳು ಅಂದರು. ನಾನು ' ಏನಿಲ್ಲ ಮಾವ ನಾನು ಈಗ ಬರ್ತೀನಿ ಆರು ಕೋನ್ ತರಿಸಿಡಿ' ಎಂದು ಫೋನ್ ಕಟ್ ಮಾಡಿದೆ.  

ಬಾಗಿಲ ಬೆಲ್ ಒತ್ತಿದಾಗ ಗೆಳತಿಯ ಮಾವ ಬಾಗಿಲು ತೆಗೆದು ಸ್ವಾಗತಿಸಿದರು. ಮದುವೆ ಹುಡುಗಿ ಮೊಬೈಲ್ ಧಾರಿಣಿಯಾಗಿ ಸಿಂಹಾಸನಾಭಿಷಕ್ತೆಯಾಗಿದ್ದಳು. ಕುಳಿತಲ್ಲಿಂದಲೇ 'ಅಪ್ಪಾ ಕೋನ್ ಪ್ಲೀಸ್ 'ಎಂದು ಬೇಡಿಕೆಯಿಟ್ಟಳು. ಅವಳ ಅಪ್ಪನೂ ನನ್ನ ಗೆಳತಿಯ ಮಾವನೂ ಆದ ಮಹಾನುಭಾವರು ಒಳಗೆ ಹೋಗಿ ಒಂದು ಬಾಕ್ಸ್ ತಂದು ನನ್ನ ಕೈಯಲ್ಲಿಟ್ಟು, ' ಕೋನ್ ಅಂದ್ರಿ ನೀವು .. ಯಾವ ಫ್ಲೇವರ್ ಅಂತ ಹೇಳಲೇ ಇಲ್ಲ ನೋಡೀ.. ಹಾಗಾಗಿ ವೆನಿಲ್ಲಾ, ಪಿಸ್ತಾ, ಸ್ಟಾಬೆರಿ ಮೂರೂ ಫ್ಲೇವರಿನ ಎರಡೆರಡು ಕೋನ್ ತಂದಿದ್ದೇನೆ ಅಂದರು. 

ಅಷ್ಟರಲ್ಲಿ ಜೀವ ಬಂದವಳಂತೆ ಎದ್ದ ಮೊಬೈಲ್ ಸುಂದರಿ ' ಅಯ್ಯೋ .. ನೀವು ಐಸ್ ಕ್ರೀಮ್ ಕೋನ್ ತಂದದ್ದಾ.. ದೇವಾ.. ಅವರು ಹೇಳಿದ್ದು ಮೆಹೆಂದಿ ಕೋನ್ ಅಪ್ಪಾ..' ಎಂದು ಬಿರಿದ ಕೇಶವನ್ನು ಬಂಧಿಸದೇ, ಬಿಟ್ಟ ಮಂಡೆಯಲ್ಲೇ, ಹ್ಹೋ .. ಅದುವಾ.. ಮಾರಾಯ್ತಿ ತರ್ತೀನಿ ಇರು ..ಎಂಬ  ಅವಳ ಅಪ್ಪನ ಕೂಗನ್ನು ಲೆಕ್ಕಿಸದೇ ಅಂಗಡಿ ಕಡೆಗೆ ಓಡಿದಳು. ಅವಳ ಅಪ್ಪನೂ ಪರ್ಸ್ ಹಿಡಿದುಕೊಂಡು ಹಿಂದಿನಿಂದಲೇ ಹೋದರು. ಅವರು ಬರುವವರೆಗೆ ನನಗೇನೂ ಕೆಲಸ ಇಲ್ಲದ ಕಾರಣ ಐಸ್ ಕ್ರೀಮ್ ಫ್ಲೇವರ್ ಗಳನ್ನು 'ಟೆಸ್ಟ್' ಮಾಡಲಿಕ್ಕಾಗಿ 'ಟೇಸ್ಟ್' ಮಾಡುತ್ತಾ ಟೈಮ್ ವೇಸ್ಟ್ ಆಗದಂತೆ ನೋಡಿಕೊಂಡೆ.  

ಇನ್ನು ಒಂದೆರಡು ಐಸ್ ಕ್ರೀಮ್  ಬಾಕ್ಸಿನಲಿ ಬಾಕಿ ಇರುವಾಗಲೇ  ಮ್ಯಾರಥಾನ್ ನಲ್ಲಿ ಓಡಿದವಳಂತೆ ಬೆವರು ಸುರಿಸುತ್ತಾ ನನ್ನ ಪಕ್ಕ ಬಂದು ಅಂಗಡಿಯಲ್ಲಿದ್ದ ಹಳೆ ಸ್ಟಾಕ್ ಮೆಹಂದಿ ಕೋನ್ ಗಳನ್ನೆಲ್ಲ ನನ್ನ ಮುಂದೆ ಸುರಿದಳು.ಅವಳ ಬಾಡಿ ಬಸವಳಿದ ಮೋರೆ ನೋಡಿ ಕರುಣೆ ಉಕ್ಕಿ , ಉಳಿದಿದ್ದ ಐಸ್ ಕ್ರೀಮನ್ನು ತಿನ್ನುವಂತೆ ಹೇಳಿ, ನಂತರ ಚೆನ್ನಾಗಿ ಕೈ ಕಾಲು ಮುಖ ತೊಳೆದು ಒಣಗಿಸಿಕೊಂಡು ನನ್ನ ಮುಂದೆ ಬಂದು ಅಲ್ಲಾಡದೆ ಕುಳಿತುಕೊಳ್ಳಲು ಆಜ್ಞಾಪಿಸಿದೆ. ನನ್ನ ಅಪ್ಪಣೆಯನ್ನು ಶಿರಸಾವಹಿಸಿ ನನಗೆ ತನ್ನ ಕೈಗಳನ್ನೊಪ್ಪಿಸಿ, ಸ್ತಬ್ದ ಚಿತ್ರದಂತೆ ಕುಳಿತಳು. ಕೇಳಿದ ಪ್ರಶ್ನೆಗಳಿಗೆಲ್ಲ ಕೊಂಚವೂ ಮೈ ಕೈ ಕುಲುಕಿಸದೆ ಉತ್ತರ ಹೇಳಿ, ನಗು ಬರುವಾಗೆಲ್ಲ ಉಸಿರುಗಟ್ಟಿದವಳಂತೆ ನಿಶ್ಯಬ್ಧಳಾಗಿಯೇ ನಕ್ಕು ನನಗೆ ಸಹಕರಿಸಿದಳು. ಹಾಗೆಂದು ನನ್ನ ಕೆಲಸವೇನೂ ಸುಲಭವಿತ್ತೆಂದು ತಿಳಿಯಬೇಡಿ. ಆಗಾಗ ಬರುವ ಅವಳ ಗೆಳತಿಯರ , ನಾಳೆಯಷ್ಟೇ ಸಂಸಾರವೆಂಬ ಬಾವಿಗೆ ದುಮುಕಲಿರುವ ಅವಳ ಭಾವೀ  ಪತಿಯ ಫೋನುಗಳು ಬಂದಾಗ ಅವಳ ಕಿವಿ ಮತ್ತು ಕುತ್ತಿಗೆಯ ನಡುವೆ ಫೋನನ್ನು ಇಡುವ ಕೆಲಸ ನನ್ನದಾಗಿತ್ತು. ಅಷ್ಟೂ ಸಾಲದು ಎಂಬಂತೆ ಬರುವ ಮೆಸೇಜುಗಳಿಗೆಲ್ಲಾ, ಅವಳು ಡಿಕ್ಟೇಷನ್ ಕೊಟ್ಟ ಉತ್ತರಗಳನ್ನು  ನಾನೇ ಟೈಪಿಸಿ ರವಾನಿಸಬೇಕಿತ್ತು. ಸ್ವಲ್ಪ ಹೊತ್ತಲ್ಲೇ ಈ ಕಾರ್ಯ ಮಾಡಿ ಸುಸ್ತಾದ ನಾನು ಅವಳ ಕಣ್ಣು ತಪ್ಪಿಸಿ ಮೊಬೈಲಿನ ಸ್ವಿಚ್ ಆಫ್ ಮಾಡಿ ಬದಿಗೆಸೆದೆ. 

ಅವಳು ತಂದ ಮೆಹೆಂದಿಯ ಕೋನ್ ಗಳಲ್ಲಿ ಒಂದೇನೋ ಸರಾಗವಾಗಿ ಹೊರಬಂದು ಅವಳ ಕೈಗಳಲ್ಲಿ ಚಿತ್ತಾರ ಮೂಡಿಸಿ ಉಪಕರಿಸಿತ್ತು. ಮತ್ತುಳಿದವೆಲ್ಲ ನನ್ನ ಬಗ್ಗೆ ಕೊಂಚವೂ ಕನಿಕರ ತೋರದೆ, ತೆರೆದ ರಂಧ್ರದಿಂದ ಹೊರಗಿಣುಕದೆ ಮುಷ್ಕರ ಹೂಡಿದ್ದವು. ನನ್ನ ತಲೆಯೊಳಗಿದ್ದ ಸ್ವಲ್ಪವೇ ಸ್ವಲ್ಪ  ಕಿಲುಬು ಕಟ್ಟಿ ಕೂತಿದ್ದ ಬುದ್ಧಿ ಎಂಬುದನ್ನು ಖರ್ಚು ಮಾಡಲು ಇದೀಗ ಸಕಾಲ. ಸುತ್ತಿದ್ದ ಕೋನ್ ಗಳನ್ನೆಲ್ಲ ಬಿಚ್ಚಿ ಅವುಗಳಿಗೆ ಒಂದಿಷ್ಟು ನಿಂಬೆ ಹಣ್ಣಿನ ಶರಬತ್ತು ಕುಡಿಸಿ, ಕಲಕಿ ಕುಲುಕಿ, ಬೇರೆ ಕೋನ್ ತಯಾರಿಸಿ ತುಂಬಿ ಅವಳ ಕೈ ಕಾಲುಗಳ ಮೇಲೆ ಇಳಿಸಿದೆ. ಇಷ್ಟಾಗುವಾಗ ನನ್ನ ತನು ಮನ, ಒಂದೆರಡು ಬಾರಿ ನನ್ನ ಪರ್ಸನ್ನು ತೆರೆದ ಕಾರಣ ಅದರೊಳಗಿದ್ದ ಧನ ಎಲ್ಲವೂ ರಂಗೇರಿ , ' ರಂಗೀಲಾರೇ ತೇರೆ ರಂಗ್ ಮೆ ಯು ರಂಗಾಹೆ ಮೇರೆ ಮನ್ .. ಎಂದು ಹಾಡತೊಡಗಿದವು. 
ಹೀಗೆ ಮನೆಯಿಂದ  ಹೊರಡುವಾಗ ಮಂಗಮ್ಮನಂತಿದ್ದವಳು , ಮರಳಿ ಬರುವಾಗ ರಂಗಮ್ಮನಾಗಿ ಬಡ್ತಿ ಪಡೆದಿದ್ದೆ. 
ಕಲ್ಲಿನಲ್ಲಿ ನುಣ್ಣಗೆ ಅರೆಯುತ್ತಿದ್ದ ಕಾಲ ನನಗೆ  ಶಿಲಾಯುಗವನ್ನು ನೆನಪಿಸಿದರೆ, ಮಿಕ್ಸಿಯಲ್ಲಾಗುವ ಅದರ ನಯವಾದ  ಪುಡಿ, ಕಬ್ಬಿಣ ಅಥವಾ ಸ್ಟೀಲ್ ಯುಗದ ಪ್ರತೀಕ.  ಆದರೆ ಈಚೆಗೆ ಯಾಕೋ ಮೈಮೇಲೆಲ್ಲ ಅಂಟಿಸಿಕೊಳ್ಳುವ , ವಿವಿಧ ವಿನ್ಯಾಸದ ಪ್ಲಾಸ್ಟಿಕ್ ಮೆಹೆಂದಿ ಸ್ಟಿಕ್ಕರ್ ಗಳು ಈಗಿನ ಧಾವಂತದ 'ಯೂಸ್ ಎಂಡ್ ತ್ರೊ' ಪ್ಲಾಸ್ಟಿಕ್ ಯುಗವನ್ನು ನೆನಪಿಸುತ್ತಾ  ಬಂದು ನನ್ನ ಅಪರೂಪಕ್ಕೊಮ್ಮೆ ಏರ್ಪಡುತ್ತಿದ್ದ ಕಲಾ ಪ್ರಾವೀಣ್ಯದ ಪ್ರದರ್ಶನಕ್ಕೆ ಕಡಿವಾಣ ಹಾಕಿದೆ ಎಂಬುದು ಬಹಳ ಬೇಸರದ ಸಂಗತಿ. ಇದನ್ನು ಕೇಳಿ  ನಿಮಗೂ ನನ್ನಷ್ಟೇ ಬೇಸರವಾಗಿದ್ದಲಿ ನಿಮ್ಮ ಕೈಗಳನ್ನು ನನ್ನ ಮುಂದೆ ನೀಡಿ ನನ್ನ ದುಃಖವನ್ನು ಶಮನಗೊಳಿಸಿ.  


14 comments:

  1. ಸುಂದರ ಭಾವನೆಗಳ ವಿಶೇಷ ವರ್ಣನೆ.. ಮತ್ತೊಂದು ಸಾರಿ ರಾತ್ರಿ ಬಿಡುವಿನ ಸಮಯದಲ್ಲಿ ಓದಿ ಕಾಮೆಂಟ್ ಮಾಡುತ್ತೇವೆ.. ಸಾಲುಗಳ ರಚನೆ ಹಾಗು ಪದಗಳ ಬಳಕೆ ಇಷ್ಟವಾಗಿದೆ.. :)

    ReplyDelete
  2. ಮುಖದಲ್ಲೊಂದು ಮಂದಹಾಸ ಮೂಡಿಸಿದ ಲಹರಿ.. ಚೆನ್ನಾಗಿದೆ. :-)

    ReplyDelete
  3. awesome-est write up...loved it..am sharing it on FB
    ನೀರಿಗೆ ಕಲ್ಲೆಸೆದಂತೆ ಧ್ವನಿ ಮಾಡುವುದನ್ನೇ ಹಾಡು ಎಂದು ಎಲ್ಲರನೂ ಮೂರ್ಖರನ್ನಾಗಿಸಿದ ಆ ' ದಿಲೇರ್ ಮೆಹಂದಿ' ಪುಸ್ತಕಗಳನ್ನು ಬೇರೆ ರಚಿಸಿದ್ದಾನೆಯೇ..?? ಎಂದರು.

    ಅಲ್ಲಾ ಸ್ವಾಮೀ ಕೈಗಳಿಗೆ ಹಾಕೋ ಮದುರಂಗಿಯ ಡಿಸೈನ್ ಪುಸ್ತಕ ಬೇಕಿತ್ತು ಎಂದೆ. ಕುರ್ಚಿಯಿಂದ ಎದ್ದ ವೇಗದಲ್ಲೇ ಪುನಃ ಕುರ್ಚಿಯಲ್ಲಿ ಕುಕ್ಕರಿಸಿ, 'ಅಂತಹ ಪುಸ್ತಕಗಳ್ಯಾವುವೂ ನಮ್ಮಲ್ಲಿಲ್ಲ.. ಇಲ್ಲೇನಿದ್ದರೂ ಗಂಭೀರ ಸಾಹಿತ್ಯ, ಕಲೆಗಳ ಬಗ್ಗೆ ಪುಸ್ತಕಗಳಿವೆ ಅಷ್ಟೇ' ಎಂದು ಮತ್ತೆ ತಮ್ಮ ತಲೆಯನ್ನು ಬಗ್ಗಿಸಿ, ದಪ್ಪ ಪುಸ್ತಕದೊಳಗೆ ಕಣ್ಣು ತೂರಿದರು. ಇದು ಕೂಡಾ ಗಂಭೀರ ಕಲೆಯೇ.. ಬಟ್ಟೆಗಂಟಿದರೆ ತಿಂಗಳುಗಳುರುಳಿದರೂ, ಕೆಲವೊಮ್ಮೆ ತಿಕ್ಕಿ ಒಗೆದು ಬಟ್ಟೆ ಹರಿದರೂ ಕಲೆ ಉಳಿದು ಗಂಭೀರತೆಯನ್ನು ಸೃಷ್ಟಿಸುತ್ತದೆ, ಎಂದು ಮನದಲ್ಲೇ ಅಂದುಕೊಂಡು ಅಲ್ಲಿಂದ ಹೊರಬಿದ್ದೆ. goodness how i laughed...also Icecream cone part of too good..freeflowing humour....
    :-)
    malathi S

    ReplyDelete
  4. ಬೇಸರವಾ? ನೀವು ಬರೆದಿದ್ದನ್ನೂ ಓದಿ ಬೇಸರವಾಗುವ ಛಾನ್ಸೇ ಇಲ್ಲ, ಆದರೆ ನಾನು ಹುಡುಗನಾದುದ್ದರಿಂದ ಮದರಂಗಿಯ ಡಿಸೈನ್ ಗೆ ಕೈ ಕೊಡಲಾರೆ..;) ಅನೀತಕ್ಕಾ ಸಕ್ಕತ್ತಾಗಿ ನಕ್ಕಿದ್ದೇನೆ, ಮೆಹಂದಿಯ ಪುರಾಣದಿಂದಿಡಿದು ಇಂದಿನ ’ಯೂಸ್ ಅಂಡ್ ಥ್ರೋ’ ಯುಗದ ವರೆಗೂ ಮೆಹಂದಿಯ ಪ್ರವರ ಹರಡಿದ್ದು ಮನಸ್ಸಿಗೆ ಅಹ್ಲಾದವನ್ನು ನೀಡಿ ನಗೆಯುಕ್ಕಿಸುತ್ತದೆ ನಿಮ್ಮ ಈ ಕಥೆ.. ಏನಿದು ’ರಂಗ್ ದೇ .. ಮುಜೆ ರಂಗ್ ದೇ ..’ ಎಂದುಕೊಂಡು ಸ್ಟಾರ್ಟ್ ಮಾಡಿದ್ದಾರಲ್ಲಾ ಈ ಕಥೆಯಲ್ಲಿ ಎಂದು ಕುತೂಹಲದಿಂದಲೇ ಇಲ್ಲಿ ಇಣುಕಿದೆ, ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗೋದೊಂದು ಬಾಕಿ ಹಾಗಿದೆ ಈ ಕಥೆ.. ನಿಮಗೆ ಚಿಕ್ಕಂದಿನಿಂದಲೂ ಮದರಂಗಿಯ ಮೇಲಿದ್ದ ಮೋಹ ಮತ್ತು ಅದು ನಿಮ್ಮನ್ನು ಅದರ ಡಿಸೈನ್ ಗಳ ಬಗ್ಗೆ ಕಲಿಯುವಂತೆ ಮಾಡಿದ್ದು, ’ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ಪವರಿಂದ ನೋಡಿ’ ಎಂದುಕೊಂಡು ಡಿಸೈನರ್ ಪ್ರವೀಣೆಯಾಗಿದ್ದು ಮತ್ತು ಆ ಮದರಂಗಿಯ ಕಲೆಯೇ ನಿಮ್ಮನ್ನು ವರ್ಲ್ಡ್ ಫೇಮಸ್ ಮಾಡಿದ್ದು, ಹಾಗೇ ನಾಲ್ಕು ಕೋನ್ ಐಸ್ ಕ್ರೀಂಗಳು ಹೊಟ್ಟೆಯೊಳಕ್ಕೆ ಜಾರಿದ್ದು..;) ಎಲ್ಲವೂ ತುಂಬಾ ಮೂಡಿ ಬಂದು ಕಂಪ್ಲೀಟ್ ಲಾಫ್ಟರ್ ಪ್ಯಾಕೇಜ್ ಸಿಕ್ಕಂತಾಯ್ತು.. ಮನಸಾರೆ ನಕ್ಕಿದ್ದೇನೆ..:)))

    ReplyDelete
  5. ಮದರಂಗಿ ಅಂದಾಗ ನೆನಪಾಯಿತು. ಅದೆಲ್ಲೋ ಮರೆಯಾದ ಕೈಯ ರೇಖೆಗಳಲ್ಲಿ ಅರಳಿದ ರಂಗೋಲಿಯ ಹುಡುಗಿ. ಕಣ್ಣಂಚಿನ ಮೆಚ್ಚುಗೆಗೆ ಕಂದು ಬಣ್ಣದ ಮೆಹಂದಿ ಕೆಂಪಾಗಿ ಅರಳಿದ್ದು. ಜೊತೆಗೆ ಕೆನ್ನೆ, ತುಟಿಯ ರಂಗು. ಬಾಗಿದ ಮುಖ ಮೇಲೆತ್ತಲೇ ಇಲ್ಲ. " ಬಾಯ್" ಎಂದು ಉಸುರುವವರೆಗೂ. ನಿಮ್ಮ ಮದರಂಗಿ ನನ್ನ ರಂಗಿಯನ್ನು ನೆನಪಿಸಿತು. ವಂದನೆಗಳು.

    ReplyDelete
    Replies
    1. ಸುಂದರವಾದ ಬರಹ...ಇಷ್ಟ ಆಯ್ತು :)

      Delete
  6. ಹಾಸ್ಯಮಯವಾಗಿ ಅಚ್ಚುಕಟ್ಟಾಗಿ ಓದಿಸಿಕೊಂಡು ಹೋಗುವಂತೆ ಬರೆಯುವ ಕಲೆ ಕರಗತವಾಗಿದೆ ನಿಮ್ಮಲ್ಲಿ. ಮೆಹಂದಿಯ ಹಿಂದಿನ-ಇತ್ತೀಚಿನ ದಿನಗಳಲ್ಲಿ ಆಳವಡಿಸಿಕೊಂಡಿರುವುದನ್ನು ಸುಂದರವಾಗಿದೆ, ಲೇಖನ ಓದಿದ ಎಲ್ಲರೂ ಒಂದು ಬಾರಿ ಬದುಕಿನ ಹಿಂದಿನ ಚಿತ್ರಣವನ್ನು ತಿರುಗಿ ನೋಡುವಂತಾಗಿದೆ. ಪದಗಳ ಬಳಕೆಯು ಅಚ್ಚುಕಟ್ಟಾಗಿವೆ... ಪದಗಳ ಬಳಕೆಯ ಒಳಾರ್ಥ ಅರಿಯದ ಗೆಳತಿಯ ಮಾವನ ಪ್ರಸಂಗ, "ಒಂದೆರಡು ಬಾರಿ ನನ್ನ ಪರ್ಸನ್ನು ತೆರೆದ ಕಾರಣ ಅದರೊಳಗಿದ್ದ ಧನ ಎಲ್ಲವೂ ರಂಗೇರಿ, ರಂಗೀಲಾರೇ ತೇರೆ ರಂಗ್ ಮೆ ಯು ರಂಗಾಹೆ ಮೇರೆ ಮನ್ .. ಎಂದು ಹಾಡಗಳ" ಸಾಲುಗಳನ್ನು ನೆನಪಿಸಿಕೊಂಡಿದ್ದು, ನೀವು ಹಿಂದೆ ಅನುಭವಿಸಿದ ಚಿತ್ರಣವೇ ನಿಮ್ಮ ಲೇಖನವಾಗಿದೆ ಎಂಬುದನ್ನು ಬಿಂಬಿಸುತ್ತದೆ.

    ReplyDelete
  7. ಅನಿತಕ್ಕ ಬರಹ ಬಹಳ ಸು೦ದರವಾಗಿದೆ. ಮೆಹ೦ದಿ ಯಾರಿಗೆ ಇಷ್ಟವಾಗೋಲ್ಲ. ನಿಮ್ಮಿ೦ದ ಹಾಕಿಸಿಕೊಳ್ಳುವ ಭಾಗ್ಯ ನನಗೂ ಬರಲಿ.....:)

    ReplyDelete
  8. ನಿಮ್ಮ ಲೇಖನವು ಅತ್ಯುತ್ತಮವಾಗಿದೆ. ಓದುಗನ ಎಲ್ಲಿಯು ಅಡೆತಡೆಯಿಲ್ಲದೆ ಓದಿಸಿಕೊಂಡು ಹೋಗುವುದರೊಂದಿಗೆ ಬದುಕಿನ ಮಂಜಲುಗಳಲ್ಲಿ ಒಂದು ಕ್ಷಣ ಎಲ್ಲರಲೂ ಬಂದು ಹೋಗುವ ಮೆಹಂದಿ ಹಾಕಿಸಿಕೊಳ್ಳುವ ಪರಿಪಾಠ ಸುಂದರವಾಗಿ ಮೊಡಿಬಂದಿದೆ. ಕಲೆಯ ಹಿಂದಿನ-ಈಗಿನ ಚಿತ್ರಣವನ್ನು ಸುಂದರವಾಗಿ ಬಿಂಬಿಸಿದ್ದೀರಾ. ಹುಡುಗಿಯ ಮಾವನವರು ಮೆಹಂದಿ ಕೋನ್ ಗಳ ಬದಲಾಗಿ ಐಸ್ ಕ್ರೀಂನ ಕೋನ್ ಗಳನ್ನು ತಂದು ಪಜೀತಿಪಟ್ಟ ಪ್ರಸಂಗ ಹಾಸ್ಯಮಯವಾಗಿ ಮೊಡಿಬಂದಿದೆ. ಪುಸ್ತಕದಂಗಡಿಯಲ್ಲಿ ಮೆಹಂದಿ ಕಲೆಗೆ ಸಂಬಂಧಪಟ್ಟ ಪುಸ್ತಕ ಕೇಳಿ ಮೆಹಂದಿಯ ಬಗೆಗೆ ಅರಿವಿಲ್ಲದ ಅಂಗಡಿ ಮಾಲಿಕ 'ದಿಲೇರ್ ಮೆಹಂದಿ' ಎಂಬುವ ಮೆಹಂದಿ ಪುಸ್ತಕವನ್ನು ಬರೆದಿದ್ದಾನಾ ಎಂದು ಕೇಳುವ ಪ್ರಸಂಗ, ಮೆಹಂದಿ ಹಾಕಿಸಿಕೊಳ್ಳುವಾಗ ಮೊಬೈಲ್ ಮಾಹೆಯ ಚಿತ್ರಣವನ್ನು ಚೆನ್ನಾಗಿ ಚಿತ್ರಿಸಿದ್ದೀರಾ... ಒಟ್ಟಿನಲ್ಲಿ ಬದುಕಿನಲ್ಲಿ ಅನುಭವಿಸಿದ್ದನ್ನು ಸುಂದರವಾಗಿ ಲೇಖನದ ಮೊಲಕ ಹೊರತಂದಿದ್ದೀರಾ

    ReplyDelete
  9. ಗೋರಂಟಿ ಎಂಬುದು ನಮ್ಮ ಹಳ್ಳಿಗಾಡಿನ ಮಾನಸದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಕಲೆ. ಮರದಿಂದ ಎಲೆ ಕಿತ್ತು, ರುಬ್ಬಿ, ಅಲಂಕರಿಸುವ ರಸಗಳಿಗೆ.

    ಉತ್ತಮ ಬರಹ.

    ReplyDelete
  10. ಅನಿತಾ ಮೇಡಂ,

    ಸುಂದರ ಲೇಖನ....ಓದುಗರನ್ನು ಅನಾಯಾಸವಾಗಿ ಓದಿಸಿಕೊಂಡು ಹೋಗುವ ನಿಮ್ಮ ಬರವಣಿಗೆಯ ಶೈಲಿ ನನಗಿಷ್ಟ......ಮತ್ತೊಂದು ಸುಂದರ ಬರಹ....ಧನ್ಯವಾದಗಳು....

    ನನ್ನ ಬ್ಲಾಗ್ ಗೂ ಬನ್ನಿ
    http://ashokkodlady.blogspot.com/

    ReplyDelete
  11. ಅಹಹ್ಹಾಹ್ಹಹ.. :) ಸಕತ್ ಮಜವಾದ ಲೇಖನ .. ಇಂದು ನಮ್ಮ ಅಕ್ಕಂದಿರ ನೆನಪು ಮಾಡಿಸಿಬಿಟ್ಟಿರಿ ನೀವು.. ಈ ನಿಮ್ಮ ಕಥೆಯಲ್ಲಿ ನೀವು ಹೇಳಿದ ಪ್ರತೀ ಸಾಲುಗಳಲ್ಲೂ ನಮ್ಮ ಅಕ್ಕಂದಿರೆ ಕಾಣಿಸುವರು ಹಾಗು ಇದು ನಮ್ಮಲ್ಲಿಯೂ ಸಹ ನಡೆದ ನೈಜ ಘಟನೆಯ ಸಿಹಿ ನೆನಪುಗಳು .. ಆದರೆ ಇಲ್ಲಿ ಐಸ್`ಕ್ರೀಂ ಒಂದರ ಸನ್ನಿವೇಶ ಹೊರೆತುಪಡಿಸಿ.. ನಮ್ಮ ಸುಂದರ ಬಾಲ್ಯದ ನೆನಪುಗಳ ಪುಸ್ತಕದ ಒಂದು ಪುಟ ಈ ನಿಮ್ಮ ರಂಗ್ ದೇ .. ಕಹಾನಿ.. ಚಿಕ್ಕವರಿದ್ದಾಗ ನಡೆದ ಘಟನೆ ಇದು.. :)
    ನಮ್ಮ ಸ್ನೇಹಿತರು ನೋಡಿ ನಗುತ್ತಾರೆ ಬೇಡ ಅಕ್ಕ ಎಂದು ಎಷ್ಟು ಹೇಳಿದರೂ ಕೇಳದೆಯೇ ಹೊಸ ಹೊಸ ಚಿತ್ರ ಚಿತ್ತಾರಗಳ ಮೆಹಂದಿ ಪ್ರಯೋಗಕ್ಕೆ ನಮ್ಮ ಕೈಗಳೇ .. ಅಕ್ಕಂದಿರ ಸ್ಲೇಟು .. ಬರೆದು ನೋಡುವುದು ತಪ್ಪಾದಾಗ ಮತ್ತೆ ಕೈ ತೊಳೆದು ತಿದ್ದಿ ತಿದ್ದಿ ಡಿಸೈನ್ ಹಾಕುವುದು.. ಸುಮಾರು ಕಾಲೇಜು ಮೆಟ್ಟಿಲು ಹತ್ತುವ ವರೆಗೂ ಅಂದರೆ ನಮ್ಮ ಹೈಸ್ಕೂಲ್ ದಿನಗಳ ವರೆಗೂ ಮೆಹಂದಿ ಟ್ರಯಲ್`ಗಳಿಗೆ ಕೈ ಕೆಂಪಾಗುತ್ತಿದ್ದವು.. ಕಾರಣ ಏನಾದರೂ ಇರಬಹದು.. ಒಟ್ಟಿನಲ್ಲಿ ನಮ್ಮ ಅಮ್ಮ ದೊಡ್ಡಮ್ಮ ಚಿಕ್ಕಮ್ಮ ಅತ್ತೆ ಅತ್ತಿಗೆ ಅಕ್ಕಂದಿರು ಎಲ್ಲರೂ ಸೇರಿ ರಂಗೋಲಿಯಾಗಲಿ, ಮೆಹಂದಿ , ಅಡುಗೆ , ಸ್ವೆಟರ್ , ಬ್ಯಾಗ್ ಹಾಗು ಈ ಗೋಡೆಗಳ ಮೇಲೆ ಡಿಸೈನ್ ಮಾಡಿ ಹಾಕುವ ಬಟ್ಟೆಯ ಮೇಲೆ ಮಿಂಚು ಗಾಜು ಬಣ್ಣದ ದಾರ ಇನ್ನು ಏನೇನೋ ಎಲ್ಲಾ ತರಹದ ವಿವರಣೆಯ ಒಂದು ಪುಸ್ತಕವನ್ನೇ ಸಿದ್ದ ಮಾಡಿ ಇಡುತ್ತಿದ್ದರು.. ಮನೆಗೆ ಬಂದವರು ಅದನ್ನು ನೋಡಿ.. ಅವರವರ ಮನೆಯಲ್ಲೂ ಹಬ್ಬದ ದಿನಗಳಲ್ಲಿ ರಂಗೋಲಿ , ಮೆಹಂದಿ , ಅಡುಗೆ ಹೀಗೆ ವಿವಿಧ ಕಾರ್ಯಗಳಿಗೆ ನಮ್ಮ ಅಕ್ಕಂದಿದನ್ನ್ನು ಕರೆದಾಗ , ಅವರಷ್ಟೇ ಹೋಗಲು ಒಪ್ಪುತ್ತಿರಲಿಲ್ಲ.. ವಾಪಾಸು ಮನೆಗೆ ಬರುವಾಗ ಕತ್ತಲಲ್ಲಿ ಕಷ್ಟ ಎಂದು ನಾವು ಸಹ ಜೊತೆಯಲ್ಲಿ ಹೊಗಿಬರಬೇಕಿತ್ತು.. ಆಗ ಮದುಮಗಳ ಕೈಮೇಲೆ ಡಿಸೈನ್ ಮೂಡುವ ಮೊದಲು ಸ್ಯಾಂಪಲ್ ನಮ್ಮ ಮೇಲೆ ಮೂಡುತ್ತಿತ್ತು.. ನೆನದರೆ ತುಂಬಾ ವಿಚಿತ್ರಗಳು ಇನ್ನೂ ಇವೆ.. ಆದರೆ ಎಲ್ಲರೂ ಕಾಮೆಂಟ್ ಮಾಡಿ ಮುಗಿಸಿದ ಮೇಲೆ ನಮ್ಮ ಅನುಭವವನ್ನು ನಿಮಗೆ ತಿಳಿಸೋಣವೆಂದು ಕಾಯುತ್ತಿದ್ದೆವು ಅನಿತಕ್ಕ.. ಈ ದಿನವೆಕೋ ನಿಮ್ಮ ಈ ಲೇಖನ ಓದಿ ನಿಮ್ಮನ್ನು ಅಕ್ಕ ಎನ್ನುವ ಮನಸ್ಸಾಗಿ ಅನಿತಕ್ಕ ಎಂದು ಬರೆದಿದ್ದೇವೆ.. ಇಷ್ಟವಾಗದಿದ್ದರೆ ದಯವಿಟ್ಟು ಕ್ಷಮೆ ಇರಲಿ.. ಅಕ್ಕ ಒಂದು ಮಜವಾದ ಅನುಭವವನ್ನು ಹಂಚಿಕೊಂಡ ನಿಮಗೆ ವಂದನೆಗಳು.. :)

    ReplyDelete
  12. ಮದುರಂಗಿಯ ವರ್ಣ ವಿಲಾಸ ಇಷ್ಟವಾಯಿತು. ಅಲ್ಲಲ್ಲಿ ಧಾರಾಳವಾಗಿ ನಗಿಸಿಕೊಂಡು ಸಾಗುವ ಬರಹ ಮನಸಿಗೆ ಮುದ ನೀಡಿತು.

    ReplyDelete