ಪ್ರಳಯ ..ಪ್ರಳಯ .. !!
2012 ರಲ್ಲಿ ಪ್ರಳಯ ಎಂದು ಸುದ್ಧಿ ಪತ್ರಿಕೆಗಳು, ಮೀಡಿಯಾಗಳು ಆಗಾಗ್ಗೆ ಹೇಳಿ ಹೇಳಿ ಅದನ್ನೀಗ 2030 ಕ್ಕೆ ವಿಸ್ತರಿಸಿದ್ದು ಎಲ್ಲರಿಗೂ ತಿಳಿದ ವಿಚಾರ ತಾನೇ..! ಆದರೂ ಭೂಮಿ ತಾಯಿಯೇಕೋ ಇದನ್ನು ಆಗಾಗ್ಗೆ ನೆನಪಿಸಿಕೊಂಡು ಸುಮ್ಮನೆ ನಗುವುದುಂಟು. ಅವಳು ನಕ್ಕಳು ಎಂದರೆ ಸಾಕು ಮತ್ತೊಮ್ಮೆ ಜಗವೆಲ್ಲ ಎದ್ದು ನಿಂತು,ಭೂಕಂಪ ಎಂದು ರಣರಂಪ ಮಾಡಿ , ತ್ಸುನಾಮಿಯೋ... ಸುನಾಮಿಯೋ ಎಂದು ಉಚ್ಚರಿಸಲು ಬಾರದ ನಾಮವನ್ನು ಜಪಿಸುತ್ತದೆ.
ಮೊನ್ನೆ ಮೊನ್ನೆ ಆದದ್ದು ಹೀಗೆಯೇ.. ಇಂಡೊನೇಶಿಯಾವನ್ನು ಗಡಗಡನೆ ನಡುಗಿಸಿದ ಭೂಕಂಪ ಇಂಡಿಯಾವನ್ನು ಅಲ್ಲಾಡಿಸಿ, ನಮ್ಮನ್ನೆಲ್ಲ ಹಗಲು ಹೊತ್ತಿನಲ್ಲಿ ಮನೆ ಬಿಟ್ಟು ಬೀದಿಗಿಳಿಯುವಂತೆ ಮಾಡಿತ್ತು. ಟಿ ವಿ ಯಲ್ಲಿ ಬರುವ ಬ್ರೇಕಿಂಗ್ ನ್ಯೂಸ್ ಗಳೆಲ್ಲ ಕಂಪಿಸುತ್ತಾ ಭೂಕಂಪನದ ಸುದ್ಧಿಯನ್ನು ಬಿತ್ತರಿಸುತ್ತಿದ್ದವು.ವಿಜ್ಞಾನಿಗಳು , ಜ್ಯೋತಿಷಿಗಳು ಎಲ್ಲಾ ಮೇಲೆದ್ದು ಮೈ ಕೊಡವಿಕೊಂಡು ತಮ್ಮ ತಮ್ಮ ಕಾಸ್ಟೂಮ್ ಹಾಕಿಕೊಂಡು ಜನರಿಗೆ ದರ್ಶನ ಭಾಗ್ಯವೀಯುತ್ತಿದ್ದರು.
ಮುಂದೇನೋ ಕಾದಿದೆ ಎಂದು ಒಳಗೊಳಗೇ ಹೆದರುತ್ತಾ ಅದನ್ನೇ ವೀಕ್ಷಿಸುತ್ತಿದ್ದವಳಿಗೆ ಹತ್ತಿರದಲ್ಲೇ ಕಂಪನದ ಅನುಭವವಾತು. ಗಾಭರಿಯಿಂದ ಎದ್ದು ನಿಂತರೆ ಪಕ್ಕದಲ್ಲಿದ್ದ ಮೊಬೈಲ್ ಸೈಲೆಂಟ್ ಮೋಡ್ ನಲ್ಲಿ ತನ್ನ ಮೈ ಕುಲುಕಿಸುತ್ತಾ ಮೆಸೇಜ್ ಬಂದಿದೆ ಎಂದಿತು. ತೆರೆದು ನೋಡಿದರೆ 'ಬೀಚ್ ಹತ್ತಿರವಿದೆಯೆಂದು ಬಿಡು ಬೀಸಾಗಿ ಹೋಗಬೇಡ, ಕಡಲು ಮುನಿದಿದೆ ಜಾಗ್ರತೆ' ಎಂದಿತ್ತು.
ಯಾಕೋ ಒಳ ಮನಸ್ಸು ನಡುಗಿ ಕೂಡಲೇ ಅದನ್ನು ಪರೀಕ್ಷೆ ಮುಗಿಸಿ ಮರಳುತ್ತಿದ್ದ ಮಗನ ಮೊಬೈಲ್ ಗೆ ರವಾನಿಸಿದೆ. ಅವನು ಮರುಕ್ಷಣದಲ್ಲಿ ' ಮಧ್ಯಾಹ್ನ ಎಕ್ಸಾಂ ಸುರು ಆಗುವಾಗ ನಾನಿದ್ದ ನೆಲ ನಡುಗಲು ಪಾರಂಭಿಸಿತು.. ಎದುರಿದ್ದ ಕೊಶ್ಚನ್ ಪೇಪರ್ ನೋಡಿದಾಗ ..' ಎಂದು ಕಿಡಿಗೇಡಿ ಉತ್ತರ ನೀಡಿದ. ಸ್ವಲ್ಪ ಹೊತ್ತಿನಲ್ಲಿ ಪುನಃ ಅವನ ಮೆಸೇಜ್.. 'ಅಪ್ಪನ ಹತ್ರ ಗುಡ್ಡ ಬೆಟ್ಟ ಎಲ್ಲಾ ಕಡೆ ಸಲೀಸಾಗಿ ಹೋಗುವಂತ ಹೊಸ ಮೋಡೆಲ್ ಗಾಡಿ ತೆಗೋಳ್ಳೋಕೆ ಹೇಳಮ್ಮಾ.. ಸುನಾಮಿ ಬಂದ್ರೆ ಅದ್ರಲ್ಲಿ ರೋಡ್ ಇಲ್ಲದ ಕಡೆಯೂ ಆರಾಮವಾಗಿ ಹೋಗ್ಬೋದು' ಎಂದು ತನ್ನ ಕ್ರಾಸ್ ಕಂಟ್ರಿ ರೇಸಿನಲ್ಲಿ ಭಾಗವಹಿಸುವ ಕನಸನ್ನು ನನಸಾಗಿಸುವ ಹೊಸ ಮಾರ್ಗ ಹುಡುಕಿದ. ಇದೆಲ್ಲಿಯಾದರೂ ಇವನಪ್ಪನ ಕಿವಿಗೆ ಬಿದ್ದರೆ ಕೋಪದಿಂದ ಅವರ ಮೈ ಕಂಪಿಸುವುದು ಗ್ಯಾರಂಟಿ ಎಂದುಕೊಂಡೆ.
ಅಷ್ಟರಲ್ಲಿ ಆತ್ಮೀಯರೊಬ್ಬರು ಫೋನಾಯಿಸಿ ನಾವು ಇಂತಹ ಸಮಯದಲ್ಲಿ ನಮ್ಮೊಡನೆ ಇರಲೇಬೇಕಾದ ವಸ್ತುಗಳನ್ನು ತುಂಬಿಟ್ಟುಕೊಂಡು ಎಮರ್ಜೆನ್ಸಿ ಕಿಟ್ ಅಂತ ಮಾಡಿಕೊಂಡಿದ್ದೇವೆ. ನೀವು ಹಾಗೆ ಜೋಡಿಸಿಟ್ಕೊಳ್ಳಿ, ಏನಾದ್ರು ಅವಘಡ ನಡೆದರೆ ಅದನ್ನೆತ್ತಿಕೊಂಡು ಹೊರಗೋಡಿದರೆ ಆಯ್ತು ಎಂದು ಒಳ್ಳೆಯ ಸಲಹೆ ನೀಡಿದರು. ನನಗೂ ಅದು ಸರಿ ಅನ್ನಿಸಿ ನಮ್ಮ ಮನೆಯ ಸದಸ್ಯರಿಗೂ ವಿಷಯ ತಿಳಿಸಿದೆ. ಸರಿ ಎಂದು ಎಲ್ಲರೂ ಗೋಣಾಡಿಸಿ, ತಮ್ಮ ತಮ್ಮ ಅಗತ್ಯದ ವಸ್ತುಗಳನ್ನು ಹೇಳತೊಡಗಿದರು.ನಾನು ಒಂದು ಹಳೆಯ ಡೈರಿ ಹಿಡಿದುಕೊಂಡು ಪ್ರತಿಯೊಬ್ಬರು ಹೇಳಿದ್ದನ್ನು ನಮೂದಿಸತೊಡಗಿದೆ.
ಮೊದಲಿಗೆ ಮಾವ, ಮನೆ ಜಾಗದ ರೆಕಾರ್ಡುಗಳು, ಹಣ, ಬ್ಯಾಂಕಿನ ಪಾಸ್ ಬುಕ್,ಬಿ ಪಿ ಶುಗರ್ ಕೆಮ್ಮು ದಮ್ಮು , ಆ ನೋವು ಈ ನೋವಿನ ಮಾತ್ರೆಗಳು,ಕಷಾಯದ ಹುಡಿಯ ಡಬ್ಬ,ತಾವು ಓದುವ ತಲೆ ದಿಂಬಿನಷ್ಟು ದಪ್ಪಗಿರುವ ಆಧ್ಯಾತ್ಮದ ಪುಸ್ತಕಗಳು, ಮನೆದೇವರ ಸಂಪುಟ.. ಹೀಗೆ ತಮ್ಮ ಅಗತ್ಯವನ್ನು ವಿಸ್ತರಿಸುತ್ತಿದ್ದರು.
ಅತ್ತೆ, ನಮ್ಮ ಅಡುಗೆ ಮನೆಯ ಸಕಲ ಪಾತ್ರೆ ಪಡಗಗಳು , ದವಸ ಧಾನ್ಯಗಳು, ಗ್ಯಾಸ್ ಸ್ಟೊವ್ ಸಿಲಿಂಡರ್, ನೆಲದಲ್ಲಿ ಮಲಗಿದರೆ ಮೈ ಕೈ ನೋವು ಬರುವ ಕಾರಣ, ನಾಲ್ಕು ಜನ ಸೇರಿದರೂ ಅತ್ತಿತ್ತ ಸರಿಸಲು ಕಷ್ಟ ಪಡಬೇಕಾದ, ಬೀಟಿ ಮರದ ಮಂಚ,ನೆಲದ ಮೇಲೆ ಕುಳಿತುಕೊಂಡು ಊಟ ಮಾಡಲು ಕಾಲು ನೋವಾಗುವುದರಿಂದ ಡೈನಿಂಗ್ ಟೇಬಲ್, ಚೇರ್ ಗಳು, ಬೆಡ್ ಶೀಟ್, ಹಾಸಿಗೆ ವಸ್ತ್ರಗಳು,ಎಲ್ಲರ ಬಟ್ಟೆಬರೆಗಳು , ಕವಾಟಿನಲ್ಲಿ ಇಟ್ಟಿರುವ ಅವರ ಮದುವೆಯ ಸೀರೆಯಿಂದ ಹಿಡಿದು ಕರವಸ್ತ್ರಗಳವರೆಗೆ ಎಲ್ಲವನ್ನೂ ಪಟ್ಟಿಗೆ ಸೇರಿಸಿ ಇನ್ನೇನಿದೆಯಪ್ಪಾ ಎಂದು ಆಲೋಚಿಸತೊಡಗಿದರು.
ಅದನ್ನು ಬರೆದು ಸುಸ್ತಾಗಿ ಇವರ ಕಡೆ ತಿರುಗಿದರೆ, ಮೊಬೈಲ್, ತಮ್ಮ ಅತಿ ಪ್ರೀತಿಯ ಕ್ಯಾಮರಾ, ಹ್ಯಾಂಡಿಕ್ಯಾಮ್ , ಲ್ಯಾಪ್ ಮೇಲೆ ಪವಡಿಸುವ ಲ್ಯಾಪ್ ಟಾಪ್ , , ಎಕ್ಸ್ಟ್ರ ಬ್ಯಾಟರಿಗಳು ಅವನ್ನೆಲ್ಲ ಕಾಲ ಕಾಲಕ್ಕೆ ಚಾರ್ಜ್ ಮಾಡಲು ಅನುಕೂಲವಾಗುವಂತೆ ಜನರೇಟರ್, ಎಂದೆಲ್ಲ ಹೇಳಿ ನನ್ನ ಲೀಸ್ಟನ್ನು ಸಂಪನ್ನ ಗೊಳಿಸಿದರು.
ಅಷ್ಟರಲ್ಲಿ ಬೈಕಿನ ಮೇಲೆ ರಂಗ ಪ್ರವೇಶ ಮಾಡಿದ ಮಗರಾಯ, ಪಕ್ಕದಲ್ಲಿದ್ದ ಸ್ಟೋರ್ ರೂಮಿಗೆ ದಾಳಿ ಮಾಡಿ ಖಾಲಿಯಾದ ಕ್ಯಾನುಗಳನ್ನು ಕೈಯಲ್ಲಿ ಹಿಡಿದು , ಬೈಕ್, ಕಾರ್ ಅದಕ್ಕೆ ಪೆಟ್ರೋಲ್ ಡೀಸೆಲ್, ಆಯಿಲ್, ಕೂಲೆಂಟ್ ಎಂದು ಪೆಟ್ರೋಲ್ ಬಂಕಿನಲ್ಲಿರುವ ಎಲ್ಲವನ್ನೂ ಹೇಳಿದ. ಮತ್ತೊಮ್ಮೆ ಮನೆ ಒಳಗೆ ಹೋಗಿ ಬಂದವನೇ, ಬಣ್ಣ ಬಣ್ಣದ ಕೂಲಿಂಗ್ ಗ್ಲಾಸುಗಳು, ಕೂದಲನ್ನು ಚಿತ್ರ ವಿಚಿತ್ರವಾಗಿ ನಿಲ್ಲಿಸುವ ಯಾವು ಯಾವುದೋ ಕ್ರೀಮು,ಶರೀರದ ಒಂದೊಂದು ಅಂಗಕ್ಕು ಪ್ರತ್ಯೇಕ ಪ್ರತ್ಯೇಕವಾಗಿ ಸಿಂಪಡಿಸುವ ಸೆಂಟುಗಳು,ಶ್ಯಾಂಪು ಸೋಪುಗಳು, ತರಹೇವಾರಿ ಬಣ್ಣದ ಶೂಸ್, ಚಪ್ಪಲುಗಳು ತಿನ್ನಲು ಚಿಪ್ಸ್ ಕುರ್ ಕುರೆ ಬ್ರೆಡ್ ಜ್ಯಾಮು,ಚಾಕ್ಲೆಟ್ ಗಳು, ಎರಡು ನಿಮಿಷದಲ್ಲಿ ಸಿದ್ಧವಾಗುವ ನ್ಯೂಡಲ್ಸ್ ಪ್ಯಾಕೇಟ್ ಗಳ ಸರಮಾಲೆ ಪಟ್ಟಿಯೊಳಗೆ ತುರುಕಿದ.
ನಮ್ಮ ಎಲ್ಲಾ ಚಟುವಟಿಕೆಗಳನ್ನು ಕಿವಿ ಬಡಿಯುತ್ತಾ ಬಾಲ ಬೀಸುತ್ತಾ ನೋಡುತ್ತಿದ್ದ ನಮ್ಮ ಮನೆಯ ಬಾಲ ಇರುವ ಏಕೈಕ ಸದಸ್ಯ, ಹುಲಿಯಂತಿರುವ ನಾಯಿ ಬೊವ್ ಬೊವ್ ಎಂದಿತು. ಕೂಡಲೇ ಆದರ ಪರವಾಗಿ ವಕಾಲತ್ತು ವಹಿಸಿದ ನನ್ನ ಮಗ ಅದರ ಅಗತ್ಯದ ನಾಯಿ ಬಿಸ್ಕತ್ತು, ಸಿರಪ್ ಗಳು, ಚೈನ್, ಬೆಲ್ಟ್ ಅಂತೆಲ್ಲ ಸೇರಿಸಿ ಅದನ್ನು ಸಮಾಧಾನ ಗೊಳಿಸಿದ.
ಉಳಿದದ್ದೀಗ ನನ್ನ ಸರದಿ. ಎಲ್ಲೆಲ್ಲಿಂದಲೂ ಸಂಪಾದಿಸಿದ ಮನೆಯ ಸುತ್ತಲೂ ಇರುವ ಹೂವಿನ ಕುಂಡಗಳು, ನನ್ನ ಅತಿ ಅಗತ್ಯದ ವ್ಯಾನಿಟಿ ಬ್ಯಾಗೆಂಬ ಮಾಯಾಚೀಲಗಳು, ಅವುಗಳಿಗೆ ಮ್ಯಾಚಿಂಗ್ ಡ್ರೆಸ್ ಚಪ್ಪಲಿ,ಹೇರ್ ಬ್ಯಾಂಡ್ ಗಳು, ಮುಖಕ್ಕೆ ಹಚ್ಚುವ ನ್ಯಾಚುರಲ್ ,ಹರ್ಬಲ್ ಎಂದೆಲ್ಲ ಹೇಳಿಕೊಳ್ಳುವ ಬಗೆ ಬಗೆಯ ಕ್ರೀಮುಗಳು, ನೀರಿನ ಕ್ಯಾನುಗಳು,ಚಾಕೊಲೇಟ್ ನ ಡಬ್ಬ , ಕತೆ ಪುಸ್ತಕಗಳ ರಾಶಿ, ಹೀಗೆ ಯಥಾನುಶಕ್ತಿ ಸೇರಿಸಿದೆ.
ಬರೆಯುತ್ತಿದ್ದ ಲೀಸ್ಟಿನ ಉದ್ದ ಸಾಧಾರಣ ಸೀರೆಯಷ್ಟಾಗಿತ್ತು. ಮನೆಯ ಸ್ಥಿರ ವಸ್ತುಗಳಾದ ಗೋಡೆ ಬಾಗಿಲುಗಳು,ನೆಲದಾಳಕ್ಕೆ ಬೇರು ಬಿಟ್ಟ ಮರ ಗಿಡಗಳು, ಇವುಗಳನ್ನುಳಿದು ಬೇರೆಲ್ಲ ನಮ್ಮ ಪಟ್ಟಿಯೊಳಗೆ ಕೂತಿತ್ತು. ಆದರೆ ಇದನ್ನೆಲ್ಲ ಹೊತ್ತೊಯ್ಯಬೇಕಾದರೆ ಮಹಾವಿಷ್ಣುವು ಮತ್ತೊಮ್ಮೆ ಮತ್ಸ್ಯಾವತಾರ ತಾಳಿ, ದೊಡ್ದ ಹಡಗನ್ನು ಕಳುಹಿಸಬೇಕಿತ್ತು!!
ತುಂಬಾ ಹೊತ್ತಿನಿಂದ ನಮ್ಮ ಮನೆಯ ವಿದ್ಯಮಾನಗಳನ್ನು ಬಾಗಿಲಿಗೆ ಕಿವಿ ಇಟ್ಟು ಕೇಳಿಸಿಕೊಳ್ಳುತ್ತಿದ್ದ ಪಕ್ಕದ ಮನೆಯ ವಿಮಲಮ್ಮ ,ಈಗ ಪ್ರತ್ಯಕ್ಷವಾಗಿ, 'ಅದೇನು ಮಾತು ಅಂತ ಆಡ್ತೀರೋ ನೀವುಗಳು.. ಒಂದು ವೇಳೆ ಭೂಕಂಪನೋ ಸುನಾಮಿನೋ ಆಯ್ತು ಅಂದ್ರೆ ನೀವೀಗ ಬರ್ದಿದ್ದೀರಲ್ಲ ಆ ಚೀಟಿ ಕೈಯಲ್ಲಿ ಹಿಡ್ಕೊಂಡು ಹೊರಗೆ ಓಡ್ರೀ'.. ಅಲ್ಲಾ ಎಂತಾ ಹುಚ್ಚು ಜನಗಳು ..ಸುಮ್ ಸುಮ್ನೆ ಹೆದರ್ತಾವೆ..ನಮ್ಮ ನಿದ್ದೆನೂ ಕೆಡಿಸ್ತಾವೆ.. ನಾನೇನೋ ರಸವತ್ತಾಗಿ ಅತ್ತೇ ಸೊಸೆ ಜಗಳನೋ,ಅಪ್ಪ ಮಕ್ಕಳ ಗಲಾಟೆನೋ ಆಗುತ್ತೆ ಅಂತ ಕಾದ್ರೆ.. ಇವುಗಳು ಅಸಂಭದ್ದ ಮಾತಾಡ್ತಾವೆ..'..ಛೇ .. ಇನ್ನು ನಾನು ಏನೇನೆಲ್ಲ ತುಂಬಿಸಿಟ್ಟುಕೊಳ್ಳಬೇಕಪ್ಪಾ ' ಎಂದು ಗೊಣಗುತ್ತಾ ಅವಸರದಿಂದ ಅವಳ ಮನೆ ಬಾಗಿಲನ್ನು ಡಬಾರನೆ ಮುಚ್ಚಿದಳು.
ನಿರ್ಲಿಪ್ತತೆ ಸಮಾಧಾನನೂ ..
ReplyDeleteಶಾಂತಿಯನ್ನೂ ಕೊಡುತ್ತದೆ...
ಬದುಕು ಉಳಿದರೆ ಸಾಕು, ಮತ್ತೆಲ್ಲವನ್ನೂ ಇನ್ನೊಮ್ಮೆ ಕಟ್ಟಬಲ್ಲೆವು, ಪಡೆಯಬಲ್ಲೆವು
ReplyDeletemazavaagide..endinante chokkatavaada baraha..
ReplyDeleteಮಾಧ್ಯಮಗಳು ಸರಕು ತುಂಬುವ ಹುಚ್ಚಿಗಗೆ ಆವಾಗಾವಾಗ ತೇಲಿ ಬಿಧುವ ಗಾಳಿ ಸುದ್ಧಿಗಳಲ್ಲಿ ಇದೂ ಒಂದು. ಆದರೂ ಕರಾವಳಿಯ ಜನ ಇಂತಹ ಕಿಟ್ ತಯಾರಿಯಾಗಿ ಇಟ್ಟುಕೊಂಡರೆ ಒಳಿತೇನೋ!
ReplyDeleteಕ್ಲೈಮ್ಯಾಕ್ಸಿನಲ್ಲಿ ಹಾಸ್ಯೋಕ್ತವಾಗಿ ತಿರುಗಿಸೋ ನಿಮ್ಮ ಕಲೆ ಅಮೋಘ!!!!
ನನ್ನ ಬ್ಲಾಗಿಗೂ ಸ್ವಾಗತ.
ಅಮಿತಾ..
ReplyDeleteನೀವು ಕಷ್ಟ ಪಟ್ಟು ತಯಾರಿಸಿದ ಲಿಸ್ಟಿಗೆ ಕಿಟ್ ಬ್ಯಾಗು ಹೊಲಿಸಲು ಒ೦ದು ಒಳ್ಳೆ ಉಪಾಯ ನನ್ನಿ೦ದ. ಒ೦ದು ಹತ್ತು ಹದಿನೈದು ಟಾರ್ಪಲ್ಲುಗಳೂ, ಒ೦ದು ಎ೦ಟು ಹತ್ತು ಪ್ಲಾಸ್ಟಿಕ್ ಬಟ್ಟೆ ಒಣಗಿಸುವ ದಾರದ ಸಿ೦ಬೆಗಳನ್ನೂ ಖರೀದಿಸಿ ಅದನ್ನು ಚ೦ದದ ಬ್ಯಾಗ್ ಹೊಲಿಯಿರಿ.ಎದುರಿಗೆ ಒ೦ದು ಪುಟಾಣಿ ಪರ್ಸ್[!] ನಿಮ್ಮ ಲಿಪ್ ಸ್ಟಿಕ್ ಇನ್ನಿತರೆ ಅರ್ಜ೦ಟಿಗೆ ಬೇಕಾಗುವ ವಸ್ತುಗಳನ್ನು ಇಟ್ಟುಕೊಳ್ಳಲು...!
ಅದನ್ನು ಬೆನ್ನಿಗೆ ಹಾಕಿಕೊಳ್ಳಲು ಹಿ೦ದೆ ಸ್ಟ್ರಿಪ್ ಕೂಡಾ ಇರಿಸಿಕೊ೦ಡರೆ ಒಳ್ಳೆಯದು.. ಚಿಕ್ಕದಾದರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ..!!!
:)) ಚ೦ದದ ಬರಹ..
hi Ani,
ReplyDeleteEnjoyed Reading It :-)
:D:D:D
ReplyDeletehaha naanu enu list maadodu anta tale kedisikoltaa iddene eega :))
ReplyDeleteNice one Anitha :))Liked it v much.
ಜನಗಳು ಊಹಾಪೋಹಗಳ ಬಲೆಗೆ ಹೇಗೆ ಸುಲಭವಾಗಿ ಬಿದ್ದು ತಮ್ಮ ನೆಮ್ಮದಿಯನ್ನೂ ಕೆಡಿಸಿಕೊಂಡು ಇತರರ ನೆಮ್ಮದಿಯನ್ನೂ ಹೇಗೆ ಕೆಡಿಸುತ್ತಾರೆ ಎನ್ನುವುದಕ್ಕೆ ಒಂದು ಸುಂದರ ಹಾಸ್ಯಭರಿತ ಲೇಖನ. ೧೯೬೨ ರಲ್ಲಿ ಪ್ರಳಯವಾಗುತ್ತದೆ ಎಂದು ಹೆದರಿ ಕೆಲವರು ಮನೆಯಲ್ಲಿನ ಪಾತ್ರೆ ಪದಗ ಮಾರಿ ಚೆನ್ನಾಗಿ ತರಹೆ ತರಹೆ ಅಡಿಗೆಗಳನ್ನು ಮಾಡಿಕೊಂಡು ಒಂದು ತೇಗಿದ್ದು ನೆನಪಿಗಾಗುತ್ತದೆ. ಓಡುವುದು ಎಲ್ಲಿಗೆ. ಅಲ್ಲಿಯೂ ಸಹ ಪ್ರಳಯದ ಅಥವಾ ಕಂಪನದ ಅಪಾಯವಿಲ್ಲವೆಂದು ಏನು ನಂಬಿಕೆ ಎಂದು ಯೋಚಿಸದೆ................................... ಚೆನ್ನಾಗಿದೆ ಲೇಖನ. ಧನ್ಯವಾದಗಳು
ReplyDeleteಜನ ಮರುಳೋ ಜಾತ್ರೆ ಮರುಳೋ ಅನ್ನೋಹಾಗೆ ಕಥೆ... ಚೆನ್ನಾಗಿದೆ ... :)))
ReplyDeleteಅಷ್ಟೆಲ್ಲಾ ಯಾಕೆ ಕಷ್ಟ ಪಡೋಕೆ ಹೋದ್ರಿ ಅನಿತಾ, ನಮ್ ಬ್ರಹ್ಮಾಂಡ ಗುರು ನರೇಂದ್ರ ಶರ್ಮಾರನ್ನು ಕಾಂಟ್ಯಾಕ್ಟ್ ಮಾಡಿ ....ಅವ್ರು ಖಂಡಿತ ನಿಮಗೆ ಪರಿಹಾರ ಹೇಳ್ತಾರೆ ...... ಪ್ರಳಯ ಆಗದ ಹಾಗೆ ತಡೆಯೋಕೆ ಅವರಿಂದ ಮಾತ್ರ ಸಾಧ್ಯ :)
ReplyDeletethumba chennagide.gambheera vishayavannu vinoda shailiyalli heluvudu nimma baravanigeya pluss point.1987 irabahudu,aagaloo pralayada suddi thumba haraditthu.namma pakkada maneya grihiniyobbalu pralayada suddiyannu vipareethavaagi nambi,thanna koralliddu chinnada yelakki saravannu nogi bittiddalu.marudina pralayada suddi sullu yendu gottaadaaga aake anubhavisida naraka yathane heluvude beda..baredare ade ondu adbhutha laghubarahavaagabahudu.
ReplyDeleteಬದುಕು ಅವನೇ ನೀಡಿದ್ದು ಆತ ಕಸಿದು ಕೊಲ್ಲುವುದಿದ್ದರೆ ನನ್ನ ಅಭ್ಯಂತರವಿಲ್ಲ ಅದಕ್ಕಾಗಿ ಭಾವು ಇಲ್ಲ ಲೇಖನ ಚೆನ್ನಾಗಿದೆ ....
ReplyDeleteಪ್ರಳಯ...!!!???- ಯಾಕೆ ಭಯ...!!! ಸಾವು ಅಷ್ಟೆ ಅಲ್ವಾ...!!! ಸಾವು ಯಾವೋತ್ತೋ ಒಂದು ದಿನ ಬರುವ ಬದಲು ಇಂದೇ ಬರಲಿ ಬಿಡಿ...!!! ಅದು ಹಾಗಲ್ಲ ಸಾವಿಗೆ ಪ್ರಳಯ ಎಂಬ ಕಾಲ ನಿರ್ಣಯ ಮಾಡಿ ಮಾನಸಿಕವಾಗಿ ಜರ್ಝಜರಿತವಾಗುವ ಮನಸ್ಸು ಏನೆಲ್ಲ ಮಾಡಿಕೊಳ್ಳುತ್ತದೆ ಎನ್ನುವುದನ್ನ ನಿಮ್ಮ ಲೇಖನದಲ್ಲಿ ಅಚ್ಚುಕಟ್ಟಾಗಿ, ಹಾಸ್ಯಭರಿತವಾಗಿ ವಿವರಿಸಿದ್ದೀರಾ, ಅದರ ಪೂರ್ವಾಭಾವಿಯಾಗಿ ಸಿದ್ದತೆ ಮಾಡಿಕೊಳ್ಳುವ ರೀತಿ ನೋಡಿ ಆಶ್ಚರ್ಯವಾಯಿತು. ಇಷ್ಟೆಲ್ಲ ಮನಸ್ಸಿಗೆ ಹೊಳೆಯುತ್ತಿದೆಯೇ ಶೇಖರಿಸಿಕೊಳ್ಳಲು ಮನಸ್ಸಿಗೆ ಎನ್ನುವುದು ಕೂಡ ಆಶ್ಚರ್ಯ, ಅದನ್ನು ಎತ್ತಿಕೊಂಡು ಎಲ್ಲಿ ಹೋಗಲು ಸಾಧ್ಯ ಎನ್ನುವುದನ್ನು ಮನಸ್ಸು ಆ ಕ್ಷಣ ಯೋಚಿಸುವುದಿಲ್ಲ ನೋಡಿ... ಎಲ್ಲವೂ ಬೇಕು ಎನ್ನುವುದರ ಹಿಂದೆ ಬೆಂಬತ್ತಿಹದು ಮನಸ್ಸು. ಅದು ನಿಮ್ಮ ಲೇಖನದಲ್ಲಿ ಸ್ಪಷ್ಟವಾಗಿತ್ತು. ಚೆನ್ನಾಗಿದೆ ಲೇಖನ... ಚೆನ್ನಾಗಿದೆ ಜೊತೆಗೆ ಶೇಖರಿಸಿಡಿಕೊಳ್ಳಬೇಕಾದ ವಸ್ತುಗಳ ಮಾಹಿತಿ.
ReplyDeleteಅಕ್ಕ ... ತುಂಬಾ ಸೂಪರ್. ಅಲ್ಲಾ ಇಷ್ಟೆಲ್ಲಾ ವಸ್ತು ಕಿಟ್ ನಾಗೆ ತುಂಬುತ್ತ? ಏನೇ ಆದರೂ ನಿಮ್ಮ ಯೋಚನೆ ಮಾತ್ರ ತುಂಬಾ ಒಳ್ಳೆಯದಿದೆ. ಹಾಸ್ಯದೊಂದಿಗೆ ಒಳ್ಳೆ ವಿಚಾರವನ್ನು ಮುಂದೆ ಇಟ್ಟಿದ್ದಿರಿ . ತುಂಬಾ ಖುಷಿಯಾಯ್ತು !
ReplyDeleteಹಾಯ್ ಅನಿತಕ್ಕಾ.. As usual toooo good :-) ಎಂಥೆಂಥ ವಿಷಯಗಳು ಕೂಡಾ,ಅವುಗಳನ್ನ ನೀವು ಹ್ಯಾಂಡಲ್ ಮಾಡೋ ರೀತಿಯಿಂದಾ ತುಂಬಾ ಭಿನ್ನವಾಗಿಯೇ ಕಾಣಿಸಿಕೊಳ್ಳುತ್ತವೆ.. ಘನಗಾಂಭೀರ್ಯದ ಆರಂಭಕ್ಕೆ ನೀರಿನಷ್ಟೇ ಸರಾಗವಾದ ನಿರೂಪಣೆಯೊಂದಿಗೆ ಹಾಸ್ಯವನ್ನ ಬೆರೆಸಿ ಒಳ್ಳೆಯ ಲೇಖನವನ್ನ ಕೊಟ್ಟಿದ್ದೀರಿ. मज़ा आया। :D
ReplyDeleteಶುಭಾಶಯಗಳು..
Anitha..as usual sakhath!!
ReplyDelete:-)
ms
Tumba hasya vagidea super
ReplyDelete