Pages

Total Visitors

Friday, January 25, 2013

ಒಂದು ಬೆರಗು ..









ಎದ್ದವಳೇ ಹೊರಗಿಣುಕಿದೆ. ಕಣ್ಣು ಹೊಸಕಿ ಎರಡೆರಡು ಸಲ ನೋಡಿದೆ. ಇಲ್ಲಾ.. ಏನೂ ಕಾಣಿಸುತ್ತಿಲ್ಲ. ಮನೆಯ ಮುಂದಿದ್ದ ಅಂಗಳ, ಅದರಾಚೆಯ ಮಾವಿನ ಮರಗಳು, ಬದಿಯಲ್ಲಿ ಹಬ್ಬಿದ್ದ ಮಲ್ಲಿಗೆ ಗುಲಾಬಿ ಹೂತೋಟ, ನಂತರದ ಕಾಲು ಹಾದಿ, ಫಸಲು ಹೊತ್ತಿರುವ ತೆಂಗಿನಮರಗಳ ನೋಟ.. ಒಂದೂ ಇಲ್ಲ.   ನನ್ನ ಕಣ್ಣಿಗೆ ಏನಾದರೂ ಆಗಿದೆಯೇ.. ಉಹುಂ.. ಹಾಗೇನಿಲ್ಲ.. ಮನೆಯೊಳಗೆ ಎಲ್ಲಾ ಚೆನ್ನಾಗಿ ಕಾಣುತ್ತಿದೆ. ಇದ್ದಕ್ಕಿದ್ದಂತೆ ನಿಶ್ಚಲವಾಗಿ ನಿಂತಿದ್ದ ಎಲ್ಲವನ್ನೂ ಯಾವ ಮಾಯೆ ಹೊತ್ತೊಯ್ದಿತು..!! 


ಅದರಿಂದಲೂ ದೊಡ್ಡ ಪ್ರಶ್ನೆ ಅದೆಲ್ಲ ಇಲ್ಲದೆ ಬರಡು ಬದುಕು ಬದುಕಲು ಸಾಧ್ಯವೇ..? ಮಾವಿನ ಮರಗಳು ದಿನಾ ಅಂಗಳಕ್ಕೆ ಉದುರಿಸುತ್ತಿದ್ದ ಎಲೆಗಳನ್ನು ಅವುಗಳಿಗೆ ಬಯ್ದುಕೊಳ್ಳುತ್ತಲೇ ಗುಡಿಸಿ ಎಸೆದರೂ, ಮನೆಯ ಎದುರು ಆಚೀಚೆ ಕಾವಲುಗಾರರಂತೆ ನಿಂದ ಅದರ ಎತ್ತರದ ನಿಲುವಿಗೆ, ಅದರ ಮೇಲಿದ್ದ ಹಕ್ಕಿಗಳ ಚೆಲುವಿಗೆ ಮಾರು ಹೋಗುವ ಮನ. 

ಗುಲಾಬಿಯ ಚುಚ್ಚುವ ಮುಳ್ಳು ಎಷ್ಟು ಸಲ ರಕ್ತ ಹೀರಿದರೂ ಪರಿಮಳಿಸಿ ನಗುವ ಹೂವಿನೆಡೆಗೆ ಹರಿವ ಪ್ರೀತಿ..  ಆಧಾರ ಗೂಟದ ಮೇಲೇರಬೇಕಿದ್ದ ಮಲ್ಲಿಗೆ ಬಳ್ಳಿ ನಿಯಮ ತಪ್ಪಿಸಿ ನೆಲದಲ್ಲಿ ಹರಿದಾಡಿ ಕಾಲಿಗೆ ಸಿಕ್ಕಿಕೊಂಡರೂ ಮೆಲ್ಲನೆತ್ತಿ ಮೇಲೇರಿಸುವ ಹಠ.. 


ಒಣಗಿದ ಎಲೆಗಳ ಹಾಸಿಗೆಯ ಮೇಲೆ ಚರ ಪರ ಸದ್ದು ಮಾಡುತ್ತಾ ಯಾರೋ ಬರುತ್ತಿದ್ದಾರೆ ಎಂಬ ಸುಳುಹನ್ನು ಮೊದಲೇ ಬಿಟ್ಟು ಕೊಡುವ ಕಾಲು ಹಾದಿ, ತಂಪಾದ ನೆರಳು ನೀಡುತ್ತಾ  ಹಿತವಾದ ಗಾಳಿಗೆ ಓಲಾಡುತ್ತಾ ಇರುವ ತೆಂಗಿನ ಮರಗಳ ಲಾಸ್ಯ.. ಎಲ್ಲವೂ ರಾತ್ರಿ ಕಳೆಯುವುದರೊಳಗೆ ಹೀಗೆ ಮರೆಯಾಗಬಹುದು ಒಂದು ದಿನ ಎಂಬ ಕಲ್ಪನೆಯೇ ಇರಲಿಲ್ಲ.. ಯಾರಾದರು ಹೇಳಿದರೂ ನಂಬಿಕೆ ಹುಟ್ಟುತ್ತಿರಲಿಲ್ಲ.. 


ಮನೆಯ ಮುಖ ಮಂಟಪದ ಗೇಟನ್ನು ಸದ್ದಿಲ್ಲದೆ ಸರಿಸಿ, ಎದುರಿನ ಅಂಗಳಕ್ಕೆ ಬರಿಗಾಲಲ್ಲಿ ಇಳಿದೆ. ಮತ್ತೆ ನಾಲ್ಕು ಹೆಜ್ಜೆ ಹಾಕಿದ್ದೆನಷ್ಟೇ.. ಏನೋ ಅಸ್ಪಷ್ಟವಾಗಿ ನನ್ನೆದುರು ಎತ್ತರಕ್ಕೆ ನಿಂತಿತ್ತು. ನಡೆಯುತ್ತಿದ್ದಂತೇ ಮಾಮರದ ರೆಂಬೆ ಕೊಂಬೆಗಳೆಲ್ಲಾ ವಿವರವಾಗಿ ಕಾಣಿಸಿದವು. ಕಾಲು ಹಾದಿ ಇನ್ನೂ ಅಲ್ಲೇ  ತಣ್ಣಗೆ ಮಲಗಿತ್ತು. ಹೂಗಳು ಮೆಲ್ಲನೆ ಮೈಮುರಿದು ಏಳುವ ತಯಾರಿಯಲ್ಲಿದ್ದವು. ಅದರಾಚೆಯ ಎಲ್ಲವೂ ನನ್ನ ಹೆಜ್ಜೆಗಳು ಸಾಗುತ್ತಿದ್ದಂತೆ ನಿಚ್ಚಳವಾಗತೊಡಗಿದವು.. ಅಬ್ಬಾ.. ಎಲ್ಲವೂ ಇದ್ದಲ್ಲೇ ಇದೆ.. ಎಂದಿನಂತೆ.. 


ಮರಳುತ್ತಿದ್ದ ನನಗೆ ಇವರ ಧ್ವನಿ ಕೇಳಿಸಿತು.  "ಇಷ್ಟೊಂದು ಇಬ್ಬನಿ ಎಂದೂ ಬಿದ್ದಿರಲಿಲ್ಲ.. ನಿನ್ನ ಗೆಜ್ಜೆ ಸದ್ದು ಹತ್ತಿರ ಬಂದರೂ ನೀನು ಕಾಣಿಸಲಿಲ್ಲ.. !!



13 comments:

  1. ಬೆರಗು ! ಎಷ್ಟ್ ಚೆಂದ ಹೇಳ್ತಾ ಹೋಗ್ತೀರಿ !

    ReplyDelete
  2. ಅನಿತಾ, ಅಂತೂ ಇಬ್ಬನಿಯ ಮಧ್ಯೆಯೆ ನಮ್ಮನ್ನು ಕರೆದುಕೊಂಡು ಹೋಗಿಬಿಟ್ರಿ! ಫೋಟೊ, ಲೇಖನ ಎರಡು ಸಖತ್ ಆಗಿದೆ!

    ReplyDelete
  3. ಇಬ್ಬನಿ ತಬ್ಬಿದ ಇಳೆಯ ಅಂದದ ಚಿತ್ರಗಳು...
    ಮನಕೂ ಇಬ್ಬನಿ ತಬ್ಬಿದ ಭಾವ....

    ReplyDelete
  4. ಅನಿತಕ್ಕ, ನಿರೂಪಣೆ 'ಮಂಜು-ಭಾಷಿಣಿ'! ಚಿತ್ರದ ಮಂಜು ಹನಿಗಳು ಬರಹದಲ್ಲಿ ತಣ್ಣನೆಯ ಅನುಭವ ನೀಡುತ್ತವೆ!

    ReplyDelete
  5. ಮಲೆನಾಡಿನ ಆ ಮುಂಜಾವಿನ ಅನುಭವ ತಂದುಕೊಟ್ಟ ಲೇಖನ ಓದುತ್ತಾ ಹೋದ ಹಾಗೆ ನಾವು ಅಲ್ಲಿದ್ದೆನಿ ಎನ್ನುವ ಭಾವದೊಂದಿಗೆ ಛಳಿಯಾಯಿತು..ಸುಂದರ ಚಿತ್ರಗಳು, ವಿವರಣೆ..ಎಲ್ಲವು ಸೊಗಸು..

    ReplyDelete
  6. ಒಳ್ಳೆಯ ನಿರೂಪಣೆ, ಅತ್ಯುತ್ತಮ ಚಿತ್ರಗಳು. ವಾಹ್

    ReplyDelete
  7. ಎಂದಿನಂತೆ ನಿರೂಪಣೆ ಸೂಪರ್...ಸುಂದರ ಚಿತ್ರಗಳು......

    ReplyDelete
  8. This comment has been removed by the author.

    ReplyDelete
  9. ಇಂತಹ ಚೆಂದದ ನಿಸರ್ಗದ ಮಡಿಲಲ್ಲಿದ್ದು ಅದನ್ನು ಇಷ್ಟು ಚೆಂದವಾಗಿ ವರ್ಣಿಸಿ ’ನಾವೂ ಕೂಡ ಇಂತಹ ನಿಸರ್ಗದ ಮಡಿಲಲ್ಲಿದ್ದಿದ್ದರೆ’ ಎಂಬ ಆಸೆಯೊಂದಕ್ಕೆ ಬೆಳಕು ನೀಡುವಂತಹ ಬರಹ. ಎಂದಿನಂತೆ ಓದಿಸಿಕೊಂಡು ಹೋಗುತ್ತದೆ ಈ ಬರಹವೂ. ’ಮಂಜು ಭಾಷಿಣಿ’ಯ ರಮ್ಯ ಮನಹೋರ ಪಲುಕುಗಳು ಸುಂದರವೆನಿಸಿದವು. :)

    ReplyDelete
  10. ಫೋಟೋಗಳು ಬಹಳ ಸು೦ದರವಾಗಿದೆ ಅನಿತಕ್ಕ... ಬರವಣಿಗೆ ಕೂಡ

    ReplyDelete
  11. ಅದ್ಭುತ ಚಿತ್ರ ಬರಹ. ಅಭಿನಂದನೆಗಳು. ಛಾಯಾಚಿತ್ರಕಾರರಿಗೂ ಹಾರ್ದಿಕ ಅಭಿನಂದನೆಗಳು.

    ReplyDelete