"ನನ್ನ ಹೊಸ ಸಾಕ್ಸ್ ಎಲ್ಲಿ ಕಾಣ್ತಿಲ್ಲ?" ಪತಿರಾಯರು ಆಫೀಸಿಗೆ ಹೊರಟು ಬೊಬ್ಬೆ ಹಾಕುತ್ತಿದ್ದರು.
"ಅಲ್ಲೇ ಇಟ್ಟಿದ್ದೀನಿ ನೋಡಿ.. ಯಾವಾಗ್ಲು ಇಡುವ ಸ್ಟ್ಯಾಂಡಿನಲ್ಲೇ.. ಸ್ವಲ್ಪ ಸರಿ ಕಣ್ಣುಬಿಟ್ಟು ನೋಡಿದ್ರೆ ಸಿಗುತ್ತೆ.. ನಾನೇ ಕೈಗೆ ಹಿಡಿಸಿ ಆಗ್ಬೇಕು ನಿಮ್ಗೆ.." ಎಂದು ಸ್ವಲ್ಪ ಜೋರಿನಿಂದ ದಬಾಯಿಸಿದೆ.
"ಅಲ್ಲೇ ಇದ್ರೆ ನಿನ್ನನ್ಯಾಕೆ ಕೇಳ್ತಿದ್ದೆ? ಬೇಗ ಹುಡ್ಕಿ ಕೊಡು ಲೇಟ್ ಆಗ್ತಿದೆ ನಂಗೆ.."
"ಅರ್ರೇ ..!! ಅಲ್ಲೇ ಇಟ್ಟಿದ್ದೆ ನಿನ್ನೆ ..ಎಲ್ಲಿ ಹೋಗುತ್ತೆ.. ಅದ್ಕೇನಾದ್ರೂ ಕಾಲು ಇದೆಯಾ ಎಲ್ಲೆಲ್ಲೋ ಹೋಗ್ಲಿಕ್ಕೆ.." ಎಂದು ಗೊಣಗುತ್ತಾ ನಾನೂ ಬಂದು ನೋಡಿದೆ. ಅಲ್ಲೆಲ್ಲೂ ಕಾಣಿಸಲೇ ಇಲ್ಲ..
"ಇಲ್ಲಿಯೇ ಇಟ್ಟಿದ್ದೆ.. ಸರೀ ನೆನಪಿದೆ ನಂಗೆ.. ಈಗ ನೀವು ಬೇರೆ ಹಾಕ್ಕೊಂಡು ಹೋಗಿ.. ಆಮೇಲೆ ಹುಡ್ಕಿಡ್ತೀನಿ" ಅಂದೆ.
"ನೀನು ಹುಡ್ಕಿ ಇಡು.. ಬಂದು ಹಾಕ್ಕೊಂಡು ಮನೆಯೊಳಗೆ ಓಡಾಡ್ತೀನಿ ..ಇದೇನು ಹೊಸ ಸಮಸ್ಯೆ ಅಲ್ಲ.. ಮೊನ್ನೆಯೂ ಒಂದು ಹೀಗೇ ಆಗಿತ್ತು.. ಇವತ್ತಿನ್ನು ಒಂದೊಂದು ಕಾಲಿಗೆ ಒಂದೊಂದು ಬಣ್ಣದ್ದನ್ನು ಹಾಕ್ಕೊಂಡು ಹೋಗ್ಬೇಕಷ್ಟೆ.." ಎಂದು ದುಸು ದುಸು ಮಾಡುತ್ತಾ ಹೋದರು.
ಇವ್ರು ಹೇಳಿದ್ದು ಸರಿಯೇ ಇತ್ತು.. ಮೊನ್ನೆ ಕೂಡಾ ಒಂದು ಸಾಕ್ಸ್ ಕಾಣೆಯಾಗಿದ್ದು ಇನ್ನೂ ಸಿಕ್ಕಿರಲೇ ಇಲ್ಲ.. ಇವತ್ತಂತೂ ಹುಡುಕಿಯೇ ಬಿಡಬೇಕು ಎಂದು ಸೆರಗು ಬಿಗಿದು ಸಿದ್ಧಳಾದೆ. ರೂಮ್ ಇಡೀ ಜಾಲಾಡಿದರೂ ಅದರ ಸುಳಿವಿಲ್ಲ. ಯಾಕೋ ಕವಾಟಿನ ಹಿಂದೆ ಕೂಡಾ ನೋಡಿ ಬಿಡುವ ಎಂದೆನಿಸಿ ಟಾರ್ಚ್ ಹಾಕಿ ನೋಡಿದೆ. ಕಪ್ಪಗೆ ಏನೋ ಕಂಡಿತು. ಸೀದಾ ಮುಟ್ಟಲು ಹೆದರಿಕೆಯಾಗಿ ಒಂದು ಕೋಲು ಹಿಡಿದುಕೊಂಡು ಮೆಲ್ಲನೆ ಎಳೆದೆ.
ನೋಡಿದರೆ ಅದು ಹರಿದು ತೂತಾಗಿ ಜೀರ್ಣಾವಸ್ಥೆಗೆ ತಲುಪಿರುವ ಇವರ ಹೊಸ ಸಾಕ್ಸಿನ ಕಳೇಬರ. ಅದರ ಜೊತೆಗೆ ಕಾಣೆಯಾಗಿದ್ದ ಹಳೆ ಸಾಕ್ಸಿನ ತುಣುಕುಗಳು ಅಂಟಿಕೊಂಡಿದ್ದವು.ಈ ರೀತಿಯಾಗಿ ಮೋಕ್ಷ ಕಂಡ ಎರಡು ಸಾಕ್ಸಿನ ಅವಸ್ಥೆ ನೋಡಿದರೆ ಇದು ಮೂಷಿಕರಾಜನ ಕೆಲಸವೇ ಅಂತ ಗ್ಯಾರಂಟಿಯಾಗಿ ಹೋಯಿತು.
ಇದನ್ನು ಹಿಡಿಯುವುದು ಹೇಗಪ್ಪ ಅನ್ನೋದನ್ನ ತಲೆ ಕೆರೆದುಕೊಂಡು ಚಿಂತಿಸತೊಡಗಿದೆ.ಕೂಡಲೇ ಅಂಗಡಿಗೆ ಹೋಗಿ ಯಾವುದಾದ್ರು ಇಲಿ ಕೊಲ್ಲುವ ಔಷಧ ಕೊಡಿ ಅಂತ ಕೇಳಿದೆ. ಅವರು ಒಂದು ಬಿಸ್ಕೆಟ್ ತರದ ತುಂಡುಗಳಿರುವ ಪ್ಯಾಕೆಟ್ ಕೊಟ್ಟು ಇದನ್ನು ರಾತ್ರಿ ಇಲಿ ಬರುವ ಜಾಗದಲ್ಲಿಇಡಿ. ಇದನ್ನು ತಿಂದ್ರೆ ಇಲಿ ಕೂಡಲೆ ಸಾಯ್ತದೆ. ಆದ್ರೆ ಇದನ್ನು ಇಡುವ ಮೊದಲು ಅದಕ್ಕೆ ಇಷ್ಟ ಆಗುವ ಯಾವುದಾದ್ರು ತಿಂಡಿ ಇಟ್ಟು ಮೊದಲು ಅದನ್ನು ಆಕರ್ಷಿಸಬೇಕು. ನೋಡಿ ಈ ಚಕ್ಕುಲಿ, ಕೋಡುಬಳೆ, ನೆಲಗಡಲೆ ಚಿಕ್ಕಿ, ಚಿಪ್ಸ್ ಇದೆಲ್ಲ ಇಲಿಗೆ ಬಾರೀ ಇಷ್ಟ ಅಂದ್ರು.ಸರಿ ಎಲ್ಲಾ ಒಂದೊಂದು ಪ್ಯಾಕೆಟ್ ಕೊಡಿ ಅಂತ ಕಟ್ಟಿಸಿಕೊಂಡು ಮನೆಗೆ ಬಂದೆ.
ಇವರು ಸಂಜೆ ಆಫೀಸಿನಿಂದ ಬಂದವರು ನಾನು ಕಾಫೀ ಮಾಡುವ ಹೊತ್ತಿಗೆ ಎಲ್ಲಾ ತಿಂಡಿ ಪ್ಯಾಕೆಟ್ ಓಪನ್ ಮಾಡಿ ತಟ್ಟೆಗೆ ತುಂಬಿಕೊಂಡು ಕ್ರಿಕೆಟ್ ಮ್ಯಾಚ್ ನೋಡಲಿಕ್ಕೆ ಸುರು ಮಾಡಿದ್ರು. ಹೋಯ್.. ಅದು ನಿಮ್ಗಲ್ಲ .. ಇಲಿಗೆ ಮಾರಾಯ್ರೆ .. ಅಂತ ಕಿರುಚಿ ಅವರ ಕೈಯಿಂದ ತಟ್ಟೆ ಎಳೆದಿಟ್ಟು ಅವರಿಗೆ ಸಪ್ಪೆ ಉಪ್ಪಿಟ್ಟು ತುಂಬಿದ ತಟ್ಟೆ ಕೊಟ್ಟೆ.
ತಿಂಡಿ ಪ್ಯಾಕೆಟ್ ಎಲ್ಲಾ ಖಾಲಿ ಆದ್ರೂ ಇಲಿ ಒಂದು ದಿನವೂ ಅದಕ್ಕಾಗಿ ಇರುವ ವಿಷಪೂರಿತ ಬಿಸ್ಕೆಟ್ ಮುಟ್ಟಲೇ ಇಲ್ಲ. ಪಕ್ಕದ ಮನೆಯವರು ಹೇಳಿದ್ರು ಅಂತ ಬಗೆ ಬಗೆಯ ಹಣ್ಣಿನ ಒಳಗೆ ಅದರ ಬಿಸ್ಕೆಟ್ ತುರುಕಿ ಇಟ್ಟೆ. ಸಾಲದು ಅಂತ ಫ್ರುಟ್ ಸಲಾಡ್ ಮಾಡಿ ಕೊಟ್ರೂ ಆ ಮೂಷಿಕ ಮೂಸಿ ಕೂಡ ನೋಡಲಿಲ್ಲ. ಊಹೂಂ.. ಅದನ್ನು ಕೊಲ್ಲುವ ನನ್ನ ಎಲ್ಲಾ ಪ್ರಯತ್ನಗಳನ್ನು ನುಚ್ಚು ನೂರು ಮಾಡಿ ಆರಾಮವಾಗಿ ರಾತ್ರಿ ದಡ ಬಡ ಸದ್ದು ಮಾಡುತ್ತಾ ಅತ್ತಿತ್ತಾ ಓಡಾಡುತ್ತಿತ್ತು. ಸ್ಕಾರ್ಫ್, ಕರ್ಚಿಫ್, ,ಟಿ ವಿ ಗೆ ಮುಚ್ಚಿದ ಬಟ್ಟೆಯ ಕವರ್, ಮಗನ ತಲೆ ಏರುವ ನಮೂನೆವಾರು ಕ್ಯಾಪುಗಳು ಆಗಿಂದಾಗ್ಗೆ ಕಾಣೆಯಾಗಿ ಅಲ್ಲಿಲ್ಲಿ ಹರಿದು ಹೊಸ ಡಿಸೈನಿನಲ್ಲಿ ಮತ್ತೆ ಕೈ ಸೇರುತ್ತಿತ್ತು. ಈ ಸಮಸ್ಯೆಂದಾಗಿ ನನ್ನ ತಲೆ ಕೆಟ್ಟು ಹನ್ನೆರಡಾಣೆಯಾಗಿತ್ತು.
ಸಂಜೆ ಮಗ ಮನೆಗೆ ಬರುವಾಗ ಅವನ ಬೈಕಿನ ಎದುರು ಭಾಗದಲ್ಲಿ ಒಂದು ಪುಟ್ಟ ಬಾಕ್ಸ್ ಇತ್ತು. "ಇವತ್ತು ನಮ್ಮಲ್ಲಿ ಯಾರದ್ದಾದ್ರೂ ಬರ್ತ್ ಡೇ ಉಂಟಾ ಹೇಗೆ.. ಏನೋ ಗಿಫ್ಟ್ ಇದ್ದಂತೆ ಕಾಣುತ್ತೆ" ಅಂದೆ. "ಇದು ನಿಂಗೆ ಅಂತ್ಲೇ ತಂದಿದ್ದು, ಮೆಲ್ಲಗೆ ಬಿಡಿಸಿ ನೋಡು" ಅಂತ ಬಾಕ್ಸನ್ನು ನನಗೆ ಹಸ್ತಾಂತರಿಸಿದ.
ಕುತೂಹಲದಿಂದ ಬಾಕ್ಸ್ ತೆರೆದು ಇಣುಕಿದರೆ ಪುಟ್ಟ ಬೆಕ್ಕಿನ ಮರಿಯೊಂದು 'ಮಿಯಾಂಯ್' ಎಂದಿತು.
"ಇದೆಂತಕ್ಕೆ ತಂದೆ ಮಾರಾಯ. ಈಗ ಇರೋ ಇಲಿ ಸಾಕಲಿಕ್ಕೆ ಬಿಸ್ಕೆಟ್, ಚಿಪ್ಸ್ ತಂದು ಸಾಕಾಯ್ತು ಇನ್ನು ಇದಕ್ಕೆ ಹಾಲು ಕೂಡಾ ತರ್ಬೇಕು" ಅಂತ ಗೊಣಗಿದೆ. ಹಾಲಿನ ಪಾತ್ರೆಗೆ ಬಾಯಿ ಹಾಕಿ ನೆಕ್ಕಿಕೊಂಡು, ರಾತ್ರಿ ಹಾಸಿಗೆಯ ಮೇಲೆ ಗುರ್ ಗುರ್ ಎಂದು ಸದ್ದು ಮಾಡುತ್ತಾ ಮಲಗುವ ಈ 'ಫಿಲಿಸ್ ಡೊಮೆಸ್ಟಿಕ್' ಗಳನ್ನು ನೋಡಿದರೆ ನನಗೆ 'ಸ್ಟಿಕ್' ಹಿಡಿದು ಓಡಿಸುವಷ್ಟು ಸಿಟ್ಟು ಬರುತ್ತಿತ್ತು.
ನನ್ನ ಗೊಣಗಾಟಕ್ಕೆ ಪ್ರತಿಯಾಗಿ ಅವನು "ಇದು ನಿನ್ನ ಮಾಮೂಲಿ ಕಂಟ್ರಿ ಬೆಕ್ಕಲ್ಲ. ಇದು ಪರ್ಷಿಯನ್ ಕ್ರಾಸ್ ಬೆಕ್ಕು .. ಇದರ ಬಾಲ ನೋಡು ಎಷ್ಟು ಚಂದ ಇದೆ.... ಈಗ ನಮಗೆ ಉಪದ್ರ ಕೊಡುವ ಇಲಿಗಳಿಂದ ನಮಗೆ ಮುಕ್ತಿ ಕರುಣಿಸುವ ದೇವರು ಇದು.. ಸ್ವಲ್ಪ ದೊಡ್ಡದಾಗಲಿ.. ಆಮೇಲೆ ನೋಡು" ಎಂದ.
ಒಡನೆ ಮಹಾಭಾರತದಲ್ಲಿ ದುರ್ಯೋಧನ ಹೇಗೆ 'ನಿಷ್ಪಾಂಡವ ಪ್ಲಥ್ವಿ'ಯ ಬಗ್ಗೆ ಕನಸು ಕಾಣುತ್ತಿದ್ದನೋ ಹಾಗೆ ನಾನು ಮೂಷಿಕವಿಲ್ಲದ ವಾಸದ ಮನೆಯ ಕನಸು ಕಂಡೆ. ಈ ಬೆಕ್ಕಿನ ಜಾತಿ ಯಾವುದಾದರೂ ಇರಲಿ.. ಇಲಿ ಹಿಡಿಯುವುದು ಅದರ ಜನ್ಮ ಸಿದ್ಧ ಹಕ್ಕು ಮತ್ತು ಕರ್ತವ್ಯ ತಾನೇ... 'ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟ ನೆಗೆ'ದಿದ್ದನ್ನು ಹಿರಿಯರಿಂದ ಕೇಳಿ ತಿಳಿದಿದ್ದೆನಲ್ಲ.ಇಷ್ಟು ಸಣ್ಣದನ್ನು ಸಾಕಲಿಕ್ಕೇನು ಮಹಾ ಕಷ್ಟ ಅಂದುಕೊಂಡು ಮರುದಿನದಿಂದ ಅರ್ಧ ಲೀಟರ್ ಹಾಲು ಹೆಚ್ಚಿಗೆ ತರಿಸಿಕೊಳ್ಳತೊಡಗಿದೆ.
ಬೆಕ್ಕಿಗಾಗಿ ರಟ್ಟಿನ ಬಾಕ್ಸಿನೊಳಗೆ ನನ್ನ ಹಳೇ ಕಾಟನ್ ಸೀರೆಯ ಹಂಸ ತೂಲಿಕಾ ತಲ್ಪ ಸಿದ್ಧವಾಯಿತು. ಮಗ ಅದನ್ನು ತನ್ನ ಮಂಚದ ಅಡಿಯಲ್ಲೇ ಇಟ್ಟುಕೊಳ್ಳುತ್ತೇನೆಂದು ಎತ್ತಿಕೊಂಡು ಹೋದ. ಮರುದಿನ ಬೆಳಿಗ್ಗೆ ಎದ್ದು ಬೆಕ್ಕಿನ ಹಾಸಿಗೆಗೆ ಇಣುಕಿದರೆ ಖಾಲಿಯಾದ ಹಾಸಿಗೆ ನನ್ನನ್ನಣಕಿಸಿತು. 'ಅಯ್ಯೋ ಇದನ್ನು ಏನಾದ್ರು ಇಲಿ ತೆಗೊಂಡೋಯ್ತಾ ಹೇಗೆ' ಎಂದು ಗಾಭರಿಯಿಂದ ಮಗನನ್ನೇಳಿಸಿದೆ. ಅವನ ಹೊದಿಕೆ ಸರಿಸಿದ ಕೂಡಲೇ ಅವನ ಮಗ್ಗುಲಿನಿಂದ ಮೈ ಮುರಿದು ಎದ್ದ ಬೆಕ್ಕಿನ ಮರಿ 'ಮಿಯಾಂಯ್' ಎಂದು ನನಗೆ ಗುಡ್ ಮಾರ್ನಿಂಗ್ ಹೇಳಿತು.
"ಪಾಪ ಅಮ್ಮ ಇದು.. ರಾತ್ರಿ ಸಣ್ಣಗೆ ಅಳ್ತಾ ಇತ್ತು.ಅದರ ಅಮ್ಮನನ್ನೆಲ್ಲ ಬಿಟ್ಟು ಬಂದಿದ್ದಲ್ವಾ.. ಅದಕ್ಕೆ ಎತ್ತಿ ನನ್ನ ಹತ್ತಿರ ಮಲಗಿಸಿಕೊಂಡೆ. ಸ್ವಲ್ಪವೂ ರಗಳೆ ಮಾಡದೆ ಮಲಗಿತು" ಎಂದ ಪ್ರಾಣಿಗಳ ಮನಃಶಾಸ್ತ್ರ ಕಲಿತವರ ಫೋಸ್ ಕೊಡುತ್ತಾ..
ಈಗ ನಾನೂ ಇಲಿಯ ಬಗ್ಗೆ ಚಿಂತೆ ಮಾಡುವುದು ಬಿಟ್ಟೆ. ಹೇಗೂ ಬೆಕ್ಕಿದೆ ಅಲ್ವಾ .. ಇಲಿಯೂ ಆಗೀಗ ಏನಾದರೂ ಕಾಟ ಕೊಟ್ಟರೂ ಭೂಮಿಯ ಮೇಲೆ ಇನ್ನು ಅದಕ್ಕಿರುವ ಕೆಲವೇ ದಿನಗಳನ್ನು ನೆನೆದು, ಅಲ್ಲಿಯವರೆಗೆ ಗಮ್ಮತ್ತು ಮಾಡಲಿ ಎಂದು ಕ್ಷಮಿಸಿ ಬಿಡುತ್ತಿದ್ದೆ.
ನಿಧಾನಕ್ಕೆ ದೊಡ್ಡದಾಗುತ್ತಿದ್ದ ಬೆಕ್ಕು ಒಂದು ದಿನ ಸಣ್ಣ ಹಲ್ಲಿ ಮರಿಯನ್ನು ಹಿಡಿದು ತಂದು ನನ್ನೆದುರಿಗೆ ಇಟ್ಟಿತು. ಇದು ನನಗೆ ನನ್ನ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿರುವ ಸೂಚನೆ ಎನಿಸಿತು.ಇದನ್ನು ಮನೆಯಲ್ಲಿ ಎಲ್ಲರಿಗೂ ಹೇಳಿ ಸಂಭ್ರಮ ಪಟ್ಟೆ.
ಮರುದಿನ ಮಗ ಮನೆಗೆ ಬಂದವನೇ "ಅಮ್ಮಾ ಇಂದಿನಿಂದ ಬೆಕ್ಕಿಗೆ ಅನ್ನ ಹಾಕ್ಬೇಡ" ಅಂದ.. "ಯಾಕೋ.. ಅದೇನು ಮಾಡಿತು ನಿಂಗೆ ಪಾಪದ್ದು. ಅದ್ಕೆ ಒಂದು ಮುಷ್ಟಿ ಅನ್ನ ಹಾಕಿದ್ರೆ ಎಂತ ಬರ ಬರುತ್ತಾ ನಮ್ಗೆ" ಎಂದೆ.
"ಹಾಗಲ್ಲ ಅಮ್ಮಾ.. ಬೆಕ್ಕಿಗೆ ಅಂತ್ಲೇ ಬೇರೆ ರೀತಿಯ ಆಹಾರ ಸಿಗುತ್ತೆ. ಅದನ್ನು ಹಾಕ್ಬೇಕಂತೆ. ನನ್ನ ಫ್ರೆಂಡ್ ಹೇಳಿದ. ನೋಡು ನಾನು ತೆಗೊಂಡೇ ಬಂದಿದ್ದೀನಿ.ಇದ್ರ ಹೆಸ್ರು 'ಓನ್ಲೀ ಫಾರ್ ಕ್ಯಾಟ್ಸ್' ಅಂತ. ಇದು ಜೂನಿಯರ್ ಬೆಕ್ಕುಗಳಿಗೆ. ಒಳ್ಳೇ ಬ್ರಾಂಡೆಡ್ ಕಂಪೆನಿಯ ಫುಡ್ ಇದು.. ಸ್ವಲ್ಪ ದೊಡ್ಡ ಆದ ಮೇಲೆ ಬೇರೆ ತರದ್ದು ಉಂಟು. ಈ ಅನ್ನ, ದೋಸೆ ಇಡ್ಲಿ ಅಂತ ಮನುಷ್ಯರು ತಿನ್ನುವುದನ್ನು ಅದಕ್ಕೆ ಹಾಕಿದ್ರೆ ಅದರ ಹೊಟ್ಟೆ ಹಾಳಾಗುತ್ತಂತೆ.. ಇವತ್ತಿನಿಂದಲೇ ಈ ಹೊಸ ಆಹಾರ ಸುರು ಮಾಡು" ಎಂದು ಪ್ಯಾಕೆಟ್ ಬಿಡಿಸಿ, ಸಣ್ಣ ಸಣ್ಣ ಉಂಡ್ಲಕಾಳಿನಂತದ್ದನ್ನು ಬೆಕ್ಕಿಗೆ ಹಾಕಿದ. ಅದು ಬಾರೀ ಇಷ್ಟ ಪಟ್ಟು ಕ್ಷಣಾರ್ಧದಲ್ಲಿ ತಟ್ಟೆ ಖಾಲಿ ಮಾಡಿತು.
ಬೆಕ್ಕು, ಬದಲಾದ ತನ್ನ ಆಹಾರಕ್ಕೆ ಎಷ್ಟು ಒಗ್ಗಿ ಹೋಯಿತು ಎಂದರೆ ಅನ್ನ ದೋಸೆಗಳನ್ನು ತಿನ್ನುವುದಿರಲಿ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ತಾನು ಕುಡಿಯುವ ಹಾಲಿನ ಮೇಲೆಯೂ ಈ 'ಕ್ಯಾಟಾಹಾರ' ತೇಲಿಕೊಂಡು ಇರದಿದ್ದರೆ ಅದನ್ನೂ ಮೂಸಿ ನೋಡುತ್ತಿರಲಿಲ್ಲ.
ಇಷ್ಟಾದರೂ ಸುಮ್ಮನೆ ಇರುತ್ತಿದ್ದೆನೇನೋ..
ಒಂದು ದಿನ ರಾತ್ರಿ ಪಕ್ಕನೆ ಏನೋ ಸದ್ದಿಗೆ ಎಚ್ಚರ ಆಯ್ತು. ಸದ್ದಿನ ಮೂಲ ಹುಡುಕುತ್ತಾ ಟಾರ್ಚ್ ಹಿಡಿದು ಹೊರ ನಡೆದೆ. ಬೆಳಕು ಹರಿಸಿ ನೋಡಿದ ದೃಶ್ಯ ನನಗೆ ಹಾರ್ಟ್ ಅನ್ನುವುದು ಇದ್ದಿದ್ದರೆ ಅದು ಒಡೆಯುವಂತೆ ಇತ್ತು. ಬೆಕ್ಕಿನ ಆಹಾರ 'ಓನ್ಲಿ ಫಾರ್ ಕ್ಯಾಟ್' ಪ್ಯಾಕೇಟಿನ ಒಂದು ಬದಿ ಹರಿದು ಓಪನ್ ಆಗಿ ಅದರಿಂದ ತುಂಡುಗಳು ಹೊರಗೆ ಚೆಲ್ಲಿದೆ. ಅದರ ಒಂದು ಮಗ್ಗುಲಿನಲ್ಲಿ ನಮ್ಮ ಬೆಕ್ಕೂ , ಇನ್ನೊಂದು ಮಗ್ಗುಲಿನಲ್ಲಿ ಇಲಿಯೂ ಅದನ್ನು ತಿನ್ನುತ್ತಾ ಕುಳಿತಿವೆ.
ಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡುವ ಕಂಪೆನಿಗಳೋ, ಅವುಗಳನ್ನು ನಂಬಿ ನಮ್ಮ ಸಹಜ ಆಹಾರವನ್ನು ಮರೆಯುವ ನಾವುಗಳೂ, ಈ ಬೆಕ್ಕಿನಿಂದ ಪಾಠ ಕಲಿಯಬೇಕಾದ್ದು ಇದೆ ಅನ್ನಿಸಿತು.
ಈಗ ನಾನು ಪುನಃ ಇಲಿ ಹಿಡಿಯುವ ಹೊಸ ಅನ್ವೇಷಣೆಗಳ ಬಗ್ಗೆ ಕಿವಿ ತೆರೆದಿದ್ದೇನೆ. ನಿಮ್ಮ ಸಲಹೆಗಳೇನಾದರೂ ಇದ್ರೆ ದಯವಿಟ್ಟು ತಿಳಿಸಿ.
Haha...sulalithavaagi odisikondu hoyitu :)))
ReplyDeleteಅನಿತಕ್ಕ... ನಿಮ್ಮ ಈ ಸಾಹಸಗಾಥೆ ಬಹಳ ಮಜವಾಗಿದೆ. ಇನ್ನಾದರೂ ನಿಮಗೆ ಇಲಿ ಹಿಡಿಯುವಲ್ಲಿ ಯಶಸ್ಸು ಸಿಗಲಿ...:)
ReplyDeletehahaha....ಮೂಷಿಕ ವಾಹನ ಮೋದಕ ಹಸ್ತ.. ಶ್ಲೋಕ ನೆನಪಿಗೆ ಬಂತು.. ಮೂಷಿಕ ಚರಿತೆ ಸೂಪರ್...
ReplyDeleteನಾನೂ ಹೀಗೇ ಸೋತವನೇ, ಆದರೆ ಇದಕ್ಕೆ ಒ೦ದು ತಾರ್ಕಿಕ ಪರಿಹಾರ ಕೊಡಬಲ್ಲೆ ! ಬೆಕ್ಕಿಗೆ ಬೆಳಗೆ ಮಾಮೂಲೀ ಭೋಜನ ನೀಡಿ, ರಾತ್ರಿ ಹೊತ್ತು ಹಸಿವಾಗಿ, ಆಹಾರದ ಅನ್ವೇಷಣೆ ಪ್ರಚೋದಿಸುವ೦ತೆ, ಹೆಚ್ಚು ಆಹಾರ ಕೊಡಬೇಡಿ. atb
ReplyDeleteತುಂಬಾ ಸುಸ್ತು ಹೊಡಿಸಿದ ಇಲಿ,,, ಸಿಗುವುದೇ ನಿಮಗೆ ಇಲಿ ಕಾದು ನೋಡುವಂತಾಗಲಿ ಇನ್ನೊಂದು ಹೊಸ ಲೇಖನದ ಮೂಲಕ... ಲೇಖನ ಅಚ್ಚುಕಟ್ಟಾಗಿತ್ತು, ಎಲ್ಲರೂ ಇಲಿ ಹಿಡಿಯುವಲ್ಲಿ ಸಫಲತೆ ಕಂಡರೆ, ನೀವು ಮಾತ್ರ ಲೇಖನದಲ್ಲಿ ಯಶಸ್ಸು ಕಾಣುವಂತಾಯಿತು. ಇಲಿ ಹಿಡಿಯಲು ಬೆಕ್ಕು ತಂದು ಅದಕ್ಕೆ ತರಾವರಿ ಐಟಂಗಳನ್ನು ನೀಡುವುದರ ಮೂಲಕ ನೀವೇ ಹಸಿವು ನೀಗಿಸುವುದರಿಂದ ತನ್ನ ಬೇಟೆಯನ್ನು ಯಾಕೆ ಮಾಡುತ್ತದೆ. ಆದರೂ ನಿಮ್ಮ ಕಥೆಯಲ್ಲಿ ಇಲಿ ಮತ್ತು ಬೆಕ್ಕು ಸಹಪಂಕ್ತಿಯ ಭೋಜನ ಸವಿದು ನಿಮ್ಮನ್ನು ಕೆರಳಿಸಿದ್ದು ಮಾತ್ರ ತುಂಬಾ ಚೆನ್ನಾಗಿತ್ತು... :-)
ReplyDeleteಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡುವ ಕಂಪೆನಿಗಳೋ, ಅವುಗಳನ್ನು ನಂಬಿ ನಮ್ಮ ಸಹಜ ಆಹಾರವನ್ನು ಮರೆಯುವ ನಾವುಗಳೂ, ಈ ಬೆಕ್ಕಿನಿಂದ ಪಾಠ ಕಲಿಯಬೇಕಾದ್ದು ಇದೆ ಅನ್ನಿಸಿತು.
ReplyDeleteನಿಜ ....ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಎಷ್ಟು ಅತಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.
ಮಗಳು ಅನಿತಾಳಿಗೆ
Deleteಲೇಖ್ಹನ ಓದಿ ದಂಗಾಗಿ ಬಿಟ್ಟೆ.
ಅನುಭವ ನನ್ನದೇ ಅನ್ನಿಸಿತು.
ನೆನಪಿನ ಸುರುಳಿ ಬಿಚ್ಚಿಕೊಂಡಿತು.
ಸುಮಾರು ಇಪ್ಪತ್ತು ವರುಷ ಹಿಂದಿನ ಕಥೆ. ನಮ್ಮ ಪರ್ಶಿಯನ್ ಕ್ಯಾಟ್ ಬಿಲ್ಲಿ ನಿನ್ನ ಬೆಕ್ಕಿನಂತೆ ಅಹಿಂಸಾವಾದಿಯಾಗಿಯೇ ಬೆಳೆದು ಬಿಟ್ಟ. ಅವನಿಗೆ ಆ ಸಮಯದಲ್ಲಿ ತಿನಿಸಾಗಿ ಇಂದಿನಂತೆ ಅಂಗಡಿಗಳಲ್ಲಿ " ಕ್ಯಾಟ್ ಫೀಡ್" ದೊರೆಯುತ್ತಾ ಇರಲಿಲ್ಲ.
ಅದಕ್ಕೆ ಅವನು ಪರಿಹಾರ ಕಂಡುಕೊಂಡಿದ್ದ.
ನಮ್ಮ ನಾಯಿಗಳ ಜತೆಗೆ ವಾಚ್ ಮ್ಯಾನ್ ಮುನಿಸ್ವಾಮಿ ನಾಯಿಗಳಿಗೆ ಇಕ್ಕುವ "ಬಾಡೂಟದ ರುಚಿ" ಹಿಡಿದು ಬಿಟ್ಟ.ನಾಯಿಗಳ ಜತಗೇ ಅವನ ಆಹಾರ ಸೇವನೆ!
ತನ್ನ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ಆಗಾಗ ಕಾಗೆ ಮರಿಗಳು ಮತ್ತು ಅಳಿಲು ಮರಿಗಳನ್ನು ಮನೆಯೊಳಗೆ ತಂದು ಆಟ ಆಡುತ್ತಾ ಇದ್ದ. ಅವುಗಳಿಗೆ ಏನೂ ಹಾನಿ ಮಾಡುತ್ತಾ ಇರಲಿಲ್ಲ. ಆಟವಾಡಿ ಅವನ್ನು ಸ್ವಸ್ಥಾನಕ್ಕೆ ತಲುಪಿಸುತ್ತಾ ಇದ್ದ,
ಆದರೆ ಅವನು ನಮ್ಮ ಮನೆಯೊಳಗಣ ಇಲಿಯನ್ನು ಹಿಡಿಯಲೇ ಇಲ್ಲ.
ನಮ್ಮ ಒಂಟಿ ಇಲಿ ಅದರ ಗೆಳತಿಯನ್ನೂ ಕರೆದುಕೊಂಡು ಬಂದು ನಮ್ಮ ಟೀವಿ ಮತ್ತು ಸೋಫಾಗಳಮೇಲೆ ಹಗಲು ಹೊತ್ತೇ ರಾರಾಜಿಸ ತೋಡಗಿತು. ಬಿಲ್ಲಿ ಅವುಗಳ ಕುಣಿತವನ್ನು ನೋಡಿ ಆನಂದ ಪಡುತ್ತಾ ಇದ್ದ.
ಮನೆಯೊಳಗಿನ ಇಲಿಗಳು ಅವುಗಳ ರಂಪಾಟ ಮುಂದುವರೆಸಿದುವು.
ನಮಗೆ ರೋಸಿ ಹೋಯಿತು. ನಾನು ಇಲಿಗಳನ್ನು ಕಂಡಲ್ಲಿ ಹೊಡೆಯಬಹುದು! - ಎಂದು ಯಜಮಾನತಿ ಆಣತಿ ಇತ್ತಳು.
ನನ್ನ ಪುಟ್ಟ ಮಗಳು ರಚನಾಳು ಶೂಟಿಂಗ್ ಕಾಂಪಿಟೀಶನ್ ಗಳಲ್ಲಿ ಉಪಯೋಗಿಸುತ್ತಾ ಇದ್ದ ೦ .177 Bore Air Rifle ಬಳಸಿ ಎರಡು ದಿನ ಕಾದು ಕುಳಿತು ಇಲಿಗಳ ಶಿಕಾರಿ ಮಾಡಿದೆ.
ಸತ್ತ ಇಲಿಗಳನ್ನೂ ಬಿಲ್ಲಿ ಮೂಸಿ ನೋಡಲಿಲ್ಲ.
ಬದಲಿಗೆ, ಆತ ನನಗೇ "ಮಿಯಾಂವ್" ಅಂತ ಬೈದ!
ನಾನು ನನಗೆ ಇಲಿ ಕೊಂದ ಪಾಪ ಇಲ್ಲ! ಶಿಕಾರಿ ಮಾಡಲು ಹೇಳಿದವರಿಗೇ ಅದುತಟ್ಟುತ್ತದೆ - ಅಂತ ಅಂದರೆ, ಮನೆಯ ಯಜಮಾನತಿ ಇಲಿಗಳನ್ನು ಕೊಂದವರಿಗೇ ಆ ಪಾಪ ಸಲ್ಲುತ್ತ ದೆ! - ......ಅಂತ ನನ್ನನ್ನು ಪಾಪ ಕೂಪಕ್ಕೆ ನೂಕಿ ಆರಾಮ ಕಾಲಕಳೆದಳು.
ಮುಂದಕ್ಕೆ ಯಾವ ಇಲಿಗಳೂ ಮನೆಯೊಳಗೆ ಬರಲಿಲ್ಲ!
ಬೆಕ್ಕು ವಾಸ ಇದ್ದರೆ ಅದರ ಮೈ ವಾಸನೆಗೆ ಹೊಸದಾಗಿ ಇಲಿಗಳು ಬಂದು ಠಿಕಾಣಿ ಹೂಡುವುದಿಲ್ಲ ಅಂತ ಒಬ್ಬ ಅಜ್ಜಿ ನಮಗೆ ಹೇಳಿದ್ದು ನಿಜ ಅನ್ನಿಸಿತು.
ಆದರೆ ನಾನು ಬಿಲ್ಲಿಯ ಸ್ನೇಹಿತರಾಗಿದ್ದ - ಅಂದರೆ "ನಮ್ಮಲ್ಲಿ ಮೊದಲೇ ನೆಲೆಸಿದ್ದ ಇಲಿಗಳನ್ನು" ಶೂಟ್ ಮಾಡ ಬೇಕಾಯಿತು.
Warning:
Air Rifle ಉಪಯೋಗಿಸುವುದಾದರೆ ಜಾಗ್ರತೆ ಬೇಕು. Rifle Pellets ಒಮ್ಮೊಮ್ಮೆ Ricochet ಆಗುತ್ತವೆ ಹಾಗಾದರೆ ನಮಗೇ ಅಪಾಯ!
ಇಲಿಯ ಮೇಲೆ ಬಂದೂಕು ಎತ್ತಲು ನಿನಗೆ ಮನ ಬರಲಿಕ್ಕಿಲ್ಲ - ಅಂತ ಆಶಿಸುತ್ತೇನೆ.
ನಿನ್ನ ತಂಟೆಕೋರ ಇಲಿ ದೀರ್ಘಾಯುವಾಗಲಿ!
ಇಂತೀ
ಪೆಜತ್ತಾಯ ಅಂಕಲ್
Superb!
ReplyDeleteಆಹಾ ಎಂತ ಸಾಮರಸ್ಯ! ಒಳ್ಳೆ ಕಥನ ಶೈಲಿ ಅನಿತಾ ಅವರೇ ಮೆಚ್ಚಿದೆ ಮೆಚ್ಚಿದೆ.
ReplyDeleteVery nice Anithakka.. Nakkoo nakkoo saakaaythu.. :D :D
ReplyDeleteSooper Ani.......
ReplyDeleteಏ೦ಥಾ fraaandshipppppp ಅವರಿಬ್ಬರದ್ದು.....
ಕಣ್ಣಿಗೆ ಕಟ್ಟಿದ೦ತೆ ಬರೆಯುವ ನಿಮ್ಮ ಕಲೆ ನಿಜಕ್ಕೂ ಇಷ್ಟವಾಗುತ್ತೆ ನನಗೆ......
Like it... enjoy the story... :)
ReplyDelete