Pages

Total Visitors

Tuesday, August 7, 2012

ಆ ಎರಡು ಗಂಟೆಗಳು..



ಶನಿವಾರ ಬರುತ್ತಿರುವಂತೆಯೇ ಮನಸ್ಸು ಆದಿತ್ಯವಾರದ ರಜೆಯ ಮೂಡ್ ಹೊದ್ದುಕೊಳ್ಳುತ್ತದೆ. ಆದಿತ್ಯವಾರ ಸೋಮವಾರದ ಕೆಲಸದ ಚಿಂತೆ. ಇವತ್ತು ಶನಿವಾರ ಹಾಗೇ ಆಯ್ತು. ಹೇಗೂ ಫ್ರೀ ಇದ್ದೀವಿ  ಚಿಕ್ಕಮ್ಮನ ಮನೆಗೆ ಹೋಗೋಣ್ವಾ, ತುಂಬಾ ದಿನ ಆಯ್ತು ಅಂತ ರಾಗ ತೆಗೆದೆ. ನನ್ನ ರಾಗಕ್ಕೆ ಇವರ ಕುತ್ತಿಗೆ ಅಲುಗಾಡಿದ್ದೇ ತಡ, ಅವಳ ಮನೆಗೆ ತೆಗೆದುಕೊಂಡು ಹೋಗುವಂತವುಗಳನ್ನೆಲ್ಲಾ ಕಾರಿನ ಹಿಂದಿನ ಸೀಟಿಗೆ ತುರುಕಿದೆ. ಅವಳಿರುವುದು ಕೇರಳ.. ಅಂದ್ರೆ ತುಂಬಾ ದೂರ ಅಂದ್ಕೊಬೇಡಿ. ನಮ್ಮದು ಕರ್ನಾಟಕ ಕೇರಳ ಗಡಿಯ ಹತ್ತಿರವಿರುವ ಪ್ರದೇಶವಾದ್ದರಿಂದ ಅವಳು ಗಡಿಯ ಆ ಕಡೆಯಲ್ಲೇ ಇದ್ದಳು.ಬೆಳಗ್ಗೆಯೇ ಹೊರಟಿತು ನಮ್ಮ ಗಾಡಿ.. 

ಅಲ್ಲಿ ಮಾತಿನಲ್ಲಿ ಹೇಗೆ ಹೊತ್ತು ಹೋತೋ ಗೊತ್ತೇ ಆಗ್ಲಿಲ್ಲ. ಊಟ ಆದ ಸ್ವಲ್ಪ ಹೊತ್ತಲ್ಲೇ ಹೊರಡೋಣ ಅಂತ ಸುರು ಮಾಡಿದೆ. 'ಇನ್ನೊಂದು ಸ್ವಲ್ಪ ಹೊತ್ತು ಇದ್ರೇನೇ ನಿಂಗೆ? ಮನೆಯಲ್ಲೇನು ಅಳುವ ಮಕ್ಕಳಿದ್ದಾರಾ, ದಾರಿಯಲ್ಲಿ ಏನಾದ್ರೂ ಗಿಡ, ಹಣ್ಣು ಕಣ್ಣಿಗೆ ಬಿದ್ದಿರ್ಬೇಕು ಅದಕ್ಕೆ ಅವಸರವೇನೋ' ಅಂತ ಚಿಕ್ಕಮ್ಮ ಗದರಿಸಿದಳು. ಅವಳ ಸಂದೇಹ ಸುಳ್ಳಾಗಿರಲಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಪ್ಪು ಕಪ್ಪು ರಾಶಿ ಹಾಕಿಟ್ಟಂತೆ ಕುಂಟಾಲ ಹಣ್ಣುಗಳು ಬರುವಾಗಲೇ ಬಾಯಲ್ಲಿ ನೀರೂರಿಸಿದ್ದವು. 'ಸ್ವಲ್ಪ ಕಾರ್ ನಿಲ್ಸಿ ಹಣ್ಣು ಕುಯ್ಕೊಳ್ಳೋಣ..' ಅಂದ್ರೆ 'ಎಲ್ಲಾ ವಾಪಾಸ್ ಬರುವಾಗ..' ಅಂತ ಎಕ್ಸಿಲೇಟರ್ ತುಳಿದಿದ್ದರು. 

ಅವರಿನ್ನೂ ನಿಲ್ಲದ ಮಾತಿನ ಎಳೆ ಹಿಡಿದು ಮಾತಾನಾಡುತ್ತಾ ಇದ್ದರೆ ನಾನು ಇವರನ್ನು ಎಳೆದುಕೊಂಡು 'ಬೇಗ ಬೇಗ' ಅಂತ ಹೊರಟಿದ್ದೆ. ಹಣ್ಣಿನ ಗಿಡಗಳು ಕಂಡಲ್ಲೆಲ್ಲಾ 'ಇಲ್ಲಿ ನಿಲ್ಲಿಸಿ ..ಹಾಂ ..ಇಲ್ಲಿ ..' ಅಂತ ನಾನು ಇಳಿಯಲು ಸಿದ್ಧವಾಗುತ್ತಿದ್ದರೆ ಇವರು.. 'ನಿಲ್ಲು.. ಇಲ್ಲಲ್ಲ .. ಇನ್ನೂ ಸ್ವಲ್ಪ ಮುಂದೆ..,  ಅಲ್ಲಿ ತುಂಬಾ ಇದೆ' ಅಂತ ನನ್ನನ್ನು ತಡೆಯುತ್ತಿದ್ದರು. 'ಇನ್ನು ಮುಂದೆ ಹಣ್ಣು  ಕಾಣುವಾಗ ನಿಲ್ಲಿಸದಿದ್ರೆ ಕಾರಿನಿಂದ ಕೆಳಗೆ ಹಾರ್ತೀನಿ ಅಷ್ಟೇ' ಎಂಬ ನನ್ನ ಧಮಕಿಯ ನಡುವೆಯೂ ಕಾರ್ ವೇಗವಾಗಿ ಸಾಗುತ್ತಿತ್ತು. 

ಎದುರಿನಲ್ಲಿ  ಏರು ಹಾದಿ. ಮುಂದೆ ಎಸ್ ಆಕಾರದ ದೊಡ್ಡ ತಿರುವು. ಹೋಗುತ್ತಿದ್ದ ಕಾರ್ ತಟ್ಟನೇ ನಿಂತಿತು. ಇಲ್ಲೆಲ್ಲಿದೆ ಹಣ್ಣು ಎಂದು ನಾನು ಮಳೆಯಿಂದಾಗಿ  ಮುಚ್ಚಿದ್ದ ಗ್ಲಾಸನ್ನು ಇಳಿಸಿ ತಲೆ ಹೊರಗೆ ಹಾಕಿ ಹುಡುಕುತ್ತಿದ್ದರೆ, ಇವರು ಮತ್ತೆ ಮತ್ತೆ ಕಾರ್ ಸ್ಟಾರ್ಟ್ ಮಾಡುವ ಪ್ರಯತ್ನದಲ್ಲಿದ್ದಾರೆ.ಆಗಲೇ ನನ್ನ ತಲೆಯ ಟ್ಯೂಬ್ ಲೈಟ್ ಉರಿದು ಗಾಡಿ ಹಾಳಾಗಿದೆ ಅಂತ ತಿಳೀತು. 

ಹೆಚ್ಚಿನ ಜನ ಸಂಚಾರವಿಲ್ಲದ ಕಾಡಿನ ಹಾದಿ.ಪೇಟೆ ಎನ್ನುವ ನಾಲ್ಕಾರು ಅಂಗಡಿಗಳು ಇರುವ ಜಾಗ ಸಿಗಬೇಕಾದರೆ ಇನ್ನೂ ಆರೇಳು ಮೈಲು ಸಾಗಬೇಕಿತ್ತು. ಗಂಟೆ ನೋಡಿದರೆ ಅತ್ತ ಮಧ್ಯಾಹ್ನವೂ ಅಲ್ಲದ ಸಂಜೆಯೂ ಅಲ್ಲದ ಮೂರೂವರೆ.ನಾನು ಸುತ್ತು ಮುತ್ತೆಲ್ಲ ನೋಡಿದೆ. ರಸ್ತೆಯ ಒಂದು ಬದಿಯಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಕಾಣಿಕೆ ಡಬ್ಬಿ, ಇನ್ನೊಂದು ಕಡೆ ಧೂಮಾವತಿ ದೈವದ ಕಾಣಿಕೆ ಡಬ್ಬಿ.ಪರ್ಸ್ ಅಲ್ಲಾಡಿಸಿ ನೋಡಿದರೆ ಒಂದು ರೂಪಾಯಿ  ಸಿಕ್ಕಿತು. ಯಾವ ಡಬ್ಬಿಗೆ ಹಾಕಿದರೂ ತೊಂದರೆ ಕಟ್ಟಿಟ್ಟ ಬುತ್ತಿ. ಇನ್ನೊಂದು ದೇವರಿಗೆ ಸಿಟ್ಟು ಬಂದು ಗಾಡಿ ಇಂದಿಡೀ ಸ್ಟಾರ್ಟ್ ಆಗದಂತೆ ಶಾಪ ಕೊಟ್ಟು ಬಿಟ್ಟರೇ.. ಬೇಡಪ್ಪಾ.. ನಾಳೆ ಎಕ್ಲೇರ್ಸ್ ಕೊಳ್ಳೋಕಾದರೂ ಆತು ಎಂದು ಪರ್ಸಿನೊಳಗೆ ಪುನಃ ತುರುಕಿದೆ. ಹತ್ತಿರದಲ್ಲೇ ಒಂದು ಮನೆ ಇತ್ತು. ಆದರೆ ಅಲ್ಲಿದ್ದವರಿಂದ ಕಾರಿಗೇನೂ ಸಹಾಯವಾಗಲಾರದು ಅನ್ನಿಸಿತು. 

ಈಗ ನಮ್ಮ ದೃಷ್ಟಿ  ಏಕಕಾಲಕ್ಕೆ ಮೊಬೈಲ್ ನ ಮೇಲೆ.. ಈ ಕಾಡಿನೊಳಗೂ ಅದರ ರೇಂಜ್ ಸಿಗುವ ಬಗ್ಗೆ ಇಬ್ಬರಲ್ಲೂ ಸಂಶಯ ಇತ್ತು.ಮೊಬೈಲ್ ಮಾತ್ರ 'ತಾನು ಸಿದ್ಧ ಕಾಲ್ ಮಾಡಿ' ಅಂತ ನೆಟ್ವರ್ಕ್ ನೆಟ್ಟಗೆ  ಇರುವುದನ್ನು ತೋರಿಸುತ್ತಿತ್ತು.ಅಬ್ಬಾ..ಬದುಕಿದೆ
ವು  ಅಂದುಕೊಂಡೆವು. ಆದರೆ ಕರೆ ಮಾಡುವುದು ಯಾರಿಗೆ? ಇಲ್ಲಿ ನಮಗೆ ಗೊತ್ತಿರುವ ಮೆಕ್ಯಾನಿಕ್  ಗಳಿಲ್ಲ. ಜೊತೆಗೆ ಇದು ಕೇರಳ.ಭಾಷೆಯ ಸಮಸ್ಯೆ ಬೇರೆ.. 
ಶನಿವಾರ ಆದ್ದರಿಂದ ಮಗನಿಗೆ ಆಫೀಸಿನ ಕೆಲಸಗಳು ಹೆಚ್ಚು ಇರಲಾರದು ಅವನಿಗೆ ಹೇಳೋಣ ಅಂತ ಕರೆ ಮಾಡಿದೆವು. ಇನ್ನೆರಡು ಗಂಟೆಗಳಲ್ಲಿ ಅಲ್ಲಿ ಮೆಕ್ಯಾನಿಕ್ ಸಮೇತ ಬರ್ತೀನಿ ಅಂದ.ಸಧ್ಯದ ಸಮಸ್ಯೆಯೇನೋ ಪರಿಹಾರವಾಯಿತು. ಆದರೆ ಎರಡು ಗಂಟೆ ಈ ಕಾಡಿನ ದಾರಿಯಲ್ಲಿ ಮಾಡುವುದೇನು?ಕಾರ್ ಹಾಳಾಗುವುದು ಆಗಿದೆ. ಸ್ವಲ್ಪ ಹಣ್ಣಿನ ಗಿಡಗಳಿರುವಲ್ಲಿ ಹಾಳಾಗಿದ್ದರೆ ಇದರ ಗಂಟೇನು ಹೋಗುತ್ತಿತ್ತು ಎಂದು ಸಶಬ್ಧವಾಗಿಯೇ ಗೊಣಗಿದೆ. ಇವರಾಗಲೇ ಕ್ಯಾಮರಾ ಕುತ್ತಿಗೆಗೆ ನೇತು ಹಾಕಿ ಕೆಳಗಿಳಿದಾಗಿತ್ತು. 

ನಾನು ಕಾರಿನೊಳಗಿನಿಂದಲೇ ಹತ್ತಿರದಲ್ಲಿದ್ದ ಮನೆಯ ಕಡೆ ಕಣ್ಣುಹಾಯಿಸಿದೆ. ಪುಟ್ಟ ವಠಾರ. ಹೆಂಗಸೊಬ್ಬಳು ಹಾಲಿನ ಲೋಟ ಹಿಡಿದು ಕುಡಿಯಲೊಲ್ಲದ ಮಗನನ್ನು ಗದರಿಸುತ್ತಿದ್ದಳು.ಅವನು  ಬಾಯಲ್ಲಿ ಬಸ್ಸಿನ ಶಬ್ಧ ಮಾಡುತ್ತಾ ಅವಳ ಕೈಗೆ ಸಿಗದೆ ಅತ್ತಿತ್ತ ಒಡಾಡುತ್ತಿದ್ದ. ನಿಂತ ಕಾರಿನ ಕಡೆಗೆ ಕೈ ತೋರಿಸಿ ಹಾಲು ಕುಡಿಯದಿದ್ರೆ ಅವರು ಕರ್ಕೊಂಡು ಹೋಗ್ತಾರೆ ನಿನ್ನ ಅಂತ ಹೆದರಿಸಿದಳವಳು.ಗಟಗಟನೆ ಹಾಲು ಕುಡಿದ. ಅಜ್ಜಿಯೊಬ್ಬಳು ಮೊರದ ತುಂಬಾ ಬೀಡಿ ಎಲೆಗಳನ್ನಿಟ್ಟುಕೊಂಡು ಅದನ್ನು ಅಳತೆಗೆ ಕತ್ತರಿಸುತ್ತಿದ್ದಳು. ಹತ್ತಿರದಲ್ಲಿದ ಪೀಕುದಾನಿಯ ಕಡೆಗೆ ಆಗಾಗ ಬಗ್ಗಿ ಬಾಯೊಳಗಿರುವ ತಾಂಬೂಲ ರಸ ಉಗುಳುತ್ತಿದ್ದಳು.

ಹುಡುಗನಿಗೇನೆನಿತೋ ಅವಳಿಟ್ಟ ಪೀಕುದಾನಿಯನ್ನೆತ್ತಿಕೊಂಡು ನೆಲಕ್ಕೆ ಒತ್ತಿ ದೂಡುತ್ತಾ ಬಾಯಲ್ಲಿ ಹಾರ್ನಿನ ಸದ್ದು ಮಾಡುತ್ತಾ ಬಸ್ಸಾಟ ಆಡತೊಡಗಿದ.ನಡು ನಡುವಿಗೆ ನನ್ನ ಕಡೆಗೆ ಕಳ್ಳ ನೋಟ. ಕೆಲಸದಲ್ಲೆ ಮಗ್ನಳಾಗಿದ್ದ ಅಜ್ಜಿ ಪೀಕುದಾನಿಯ ಇದ್ದ ಕಡೆಗೆ ಉಗುಳಲು ಬಗ್ಗಿದರೆ ಅಲ್ಲೇನಿದೆ? ದೊಡ್ಡ ಸ್ವರದಲ್ಲಿ ಮಗುವಿಗೆ ಬೈದಳು. ಮನೆಯೊಳಗಿದ್ದ ಹೆಂಗಸು ಅದನ್ನು ಕೇಳಿ ಹೊರ ಬಂದು ಮಗುವಿನ ಬೆನ್ನಿಗೆ ಪೆಟ್ಟು ಕೊಟ್ಟು, ಪೀಕುದಾನಿಯನ್ನೆತ್ತಿ ಅಜ್ಜಿಯ ಪಕ್ಕದಲ್ಲಿಟ್ಟು ಅವನನ್ನೆತ್ತಿಕೊಂಡು  ಒಳ ನಡೆದಳು. ಅವನ ಅಳುವಿನ  ತಾರಕ ಸ್ವರ ಕಿವಿಗೆ ಅಪ್ಪಳಿಸತೊಡಗಿತು. 

ಬೇಸರವೆನಿಸಿ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಇನ್ನೊಂದು ಮನೆಯ ಕಡೆಗೆ ಕಣ್ಣು ಕೊಟ್ಟೆ. ಉದ್ದನೆಯ ಬಳ್ಳಿ ಕಟ್ಟಿ ಅಂಗಳದಲ್ಲಿ ನೇತು ಹಾಕಿದ್ದ ಬಟ್ಟೆಗಳು ಆ ಮನೆಯಲ್ಲಿರಬಹುದಾದ ಸದಸ್ಯರನ್ನು ಎಣಿಸುವಂತಿತ್ತು. ಎಳೆ ಪ್ರಾಯದ ಹುಡುಗಿಯೊಬ್ಬಳು ಒಂದಿಷ್ಟು ಮೋಡ ಮುಸುಕಿದೊಡನೆ ಹೊರ ಬಂದು ಆಕಾಶ ನೋಡಿ ಮಳೆಯ ಸಮೀಕ್ಷೆ ಮಾಡಿ ಒಳಗೆ ಹೋಗುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಸಾಗುವ ವಾಹನಗಳು. ಮತ್ತೆಲ್ಲ ಮೌನ.. 
ಸ್ವಲ್ಪ ಹೊತ್ತಿನಲ್ಲಿ ಹುಲ್ಲು ಹೊತ್ತ ಮಹಿಳೆಯೊಬ್ಬಳು ಕಣ್ಣಿಗೆ ಅಡ್ಡವಾಗಿದ್ದ ಹುಲ್ಲನ್ನು ಸರಿಸಿಕೊಂಡು ಕಾರಿನೊಳಗೆ ಇಣುಕಿ ನನ್ನ ಮುಖ ಕಂಡು ನಕ್ಕು ' ಎಂದಾಯಿ' ಎಂದಳು .. ನನ್ನ ಹಾಳು ಮೂಳು ಮಲಯಾಳಂ ನಲ್ಲಿ  ಅವಳಿಗೆ ವಿಷಯ ಹೇಳಿದೆ.  ಅರ್ಥವಾಯಿತೋ ಇಲ್ಲವೋ ತಿಳಿಯಲಿಲ್ಲ . 

ಅಷ್ಟರಲ್ಲಿ ನಮ್ಮ ಕಾರಿನ ಹಿಂದೆ  ರೈನುಕೋಟುದಾರಿಯೊಬ್ಬ ಪ್ಲಾಸ್ಟಿಕ್ ಕವರ್ ಹೊದೆದಿದ್ದ ದೊಡ್ಡ ಕಟ್ಟೊಂದನ್ನು ಎತ್ತಿಕೊಂಡು ಮಗುವಿದ್ದ ಮನೆಯ ಕಡೆಗೆ ನಡೆದ. ವಠಾರದಲ್ಲಿದ್ದ ಮೂರ್ನಾಲ್ಕು ಹೆಂಗಸರು ಅವನ ಸುತ್ತ ನೆರೆದರು. ಅವನು ಕಟ್ಟು ಬಿಚ್ಚಿ ಅದರಲ್ಲಿದ್ದ ಸೀರೆ ಮತ್ತು ಚೂಡಿದಾರ್ ಪೀಸ್ ಗಳನ್ನು ಒಂದೊಂದಾಗಿ ಹೊರತೆಗೆದು ತೋರಿಸುತ್ತಿದ್ದ. ರೇಟಿನ ಬಗ್ಗೆ ಚರ್ಚೆಗಳು ವಾತಾವರಣದ ಮೌನ ಕಲಕಿತ್ತು. ಒಂದು ಮನೆಯವಳು ಸೀರೆ ತೆಗೆದುಕೊಂಡಳು.ವನು ಹೋದ ಬಳಿಕ ಎಲ್ಲರೂ ಅದನ್ನು ಬಿಚ್ಚಿ ಹೊರಳಿಸಿ ಹೊರಳಿಸಿ ನೋಡಿದರು. ಸೀರೆಯ ಒಡತಿಯ ಮುಖದಲ್ಲಿ ಗೆಲುವಿತ್ತು.

ನನ್ನ ಕಣ್ಣು ಆಗಾಗ ಮಗ ಬರುವ ದಾರಿಯೆಡೆಗೆ .. ಅವನ ಕೆಂಪು ಕಾರು ಬರುವ ಕಡೆಗೇ ನೋಡುತ್ತಿತ್ತು. ನನ್ನ ನಿರೀಕ್ಷೆಯಂತೆ ದೂರದಲ್ಲಿ ಬರುವುದು ಕಾಣಿಸಿತು. ಮೆಕ್ಯಾನಿಕ್ ಇಳಿದವನೇ ರಿಪೆರಿಗೆ ಸಿದ್ಧನಾದ. ಟೈಮಿಂಗ್  ತಪ್ಪಿರಬೇಕು ಅಂದ. ಹೌದು ಮಾರಾಯಾ.. ನಮ್ಮ ಟೈಮೇ ಸರಿ ಇಲ್ಲ ಅಂದೆ. ಅದಕ್ಕವನು ಕಾರಿನ ಟೈಮಿಂಗ್ ಬೆಲ್ಟ್  ಅಕ್ಕಾ ನಾನು ಹೇಳಿದ್ದು ಅಂದ. ಒಂದೊಂದು ಸ್ಕ್ರೂ ಸಡಿಲಿಸುತ್ತಾ ತೊಂದರೆಗಳ ಸ್ಪಷ್ಟ ಚಿತ್ರಣ ನೀಡುತ್ತಾ ಹೋದ. ಇವರಿಬ್ಬರೂ ಅದನ್ನುಕೇಳುತ್ತಾ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾ, ಅವನ ಮಾತಿನೊಳಗೆ ಮುಳುಗಿದರು. 

ನನಗೇಕೋ ಈ ಕಾರಿನ ಭಾಷೆ ಅರ್ಥ ಆಗದೆ, ಪಕ್ಕದಲ್ಲಿದ್ದ ಮಗನ ಕಾರಿನೊಳಗೆ ನುಸುಳಿದೆ. ಅದರ ಬಾಕ್ಸಿನಲ್ಲಿ ಚಾಕೊಲೇಟ್ ಬಿಸ್ಕೆಟ್ ಇದೆ ಬೇಕಾದ್ರೆ ತೆಕ್ಕೋ ಎಂದ ಮಗರಾಯ. ಅವನು ಹೇಳುವ ಮೊದಲೇ ನನ್ನ ಕೈ ಅದನ್ನೆಲ್ಲ ಎತ್ತಿಕೊಂಡಾಗಿತ್ತು. ಆ ಮನೆಯ ಅಳುತ್ತಿದ್ದ ಮಗು ಈಗ ಬೇರೆ ಅಂಗಿ ಹಾಕಿಕೊಂಡು ಕಾರಿನ ಬಳಿ ಸೊಂಟಕ್ಕೆ ಕೈ ಕೊಟ್ಟು ನಿಂತಿತ್ತು. ಅದರಮ್ಮ ಎಷ್ಟು ಕರೆದರೂ ಅತ್ತ ಕಡೆಗೆ ತಿರುಗದೇ..!! ನನ್ನ ಕೈಯಲ್ಲಿದ್ದ ಚಾಕೋಲೇಟನ್ನು ಮಗುವಿಗೆ ಕೊಡಲಾ ಎಂದು ಅದರಮ್ಮನಲ್ಲಿ ಕೇಳಿದೆ. ನಾಚುತ್ತಲೇ ತಲೆ ಅಲುಗಿಸಿದಳು. ಯಾವುದೇ ಅಳುಕಿಲ್ಲದೆ ಅದು ತನ್ನ ಹಕ್ಕೆಂಬಂತೆ ಚಾಕೋಲೇಟ್ ಪಡೆದ ಮಗು ಕಾರಿನ ಇನ್ನಷ್ಟು ಸಮೀಪ ಬಂದು ನೋಡತೊಡಗಿತು. 

ಕುಳಿತು ಕುಳಿತು ಕಾಲು ನೋವು ಬಂದಿದ್ದರಿಂದ ಮೆಲ್ಲನೆ ಇಳಿದು ಸ್ವಲ್ಪ ದೂರ ರಸ್ತೆಯಲ್ಲಿ ನಡೆದೆ. ದೂರದಲ್ಲಿದ್ದ ಮನೆಯ ಹತ್ತಿರ ಪುಟ್ಟದೊಂದು ಹುಡುಗಿ ತನ್ನಷ್ಟಕ್ಕೆ ತಾನೆ ಇಳಿ ಬಿಟ್ಟ ಬಳ್ಳಿಯಲ್ಲಿ ಉಯ್ಯಾಲೆ ತೂಗಿಕೊಳ್ಳುತ್ತಿದ್ದಳು. ಯಾವುದೇ ಚಿಂತೆಯಿಲ್ಲ.. ಎಷ್ಟು ಸುಂದರ ಬಾಲ್ಯ ಅನ್ನಿಸಿತು.. ಎದುರಿನಿಂದ ಹೆಂಗಳೆಯರ ಗುಂಪೊಂದು ನಗುತ್ತ ಬರುತ್ತಿತ್ತು. ಎಲ್ಲಿಂದಲೋ ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದವರು.. ಯಾರನ್ನೂ ಕಾಯುವ ತಲೆ ಬಿಸಿ ಇಲ್ಲ ಇವರಿಗೆ ಅನ್ನಿಸ್ತು. ಕಾಲು ಎಳೆದಂತೆ ಮುಂದಕ್ಕೆ ಸಾಗುವ ಬದುಕು.. ಕಾರ್ ಹಾಳಾಗಿದೆ ಎಂದು ನಡು ರಸ್ತೆಯಲ್ಲಿ ಅಬ್ಬೇಪಾರಿಯಂತೆ  ಅಲೆಯುವ ನಾನೆಲ್ಲಿ.. ಸೈನಿಕರಂತೆ ನಡೆಯುವ ಇವರೆಲ್ಲಿ.. ಜೀವನೋತ್ಸಾಹಕ್ಕೆ ವಂದಿಸೋಣ ಅನ್ನಿಸಿತು.. ಮರಳಿ ಬಂದೆ.. 

ಸಂಜೆ ಗತ್ತಲು.. ಸೊಳ್ಳೆಗಳು ಹೊಸ ನೆತ್ತರಿನ ಮೋಹಕ್ಕೆ ಸಿಲುಕಿ ಆಗೀಗ ಮೈ ಮೇಲೆ ಕುಳಿತುಕೊಳ್ಳುತ್ತಿದ್ದವು.ಅಷ್ಟರಲ್
ಲಿ ನಮ್ಮ ಕಾರ್ ಭರ್ರ್ ಎಂಬ ಸದ್ದಿನೊಂದಿಗೆ ಸ್ಟಾರ್ಟ್ ಆಯಿತು. ನಾನು ಮತ್ತೆ ಸ್ವಸ್ಥಾನದಲ್ಲಿ ಕುಳಿತೆ. ಕೈ ಬೀಸುತ್ತಿದ್ದ ಪುಟ್ಟ ಕೈಗಳಿಗೆ ಟಾಟಾ ಮಾಡಿ ಎರಡೂ ಕಾರುಗಳು ಹೊರಟವು.

'ಈ ಕತ್ತಲಲ್ಲಿ ನಿನ್ನ ಕುಂಟಾಲ ಹಣ್ಣುಗಳು ಕಾಣುತ್ತಾ' ಅಂದ್ರು.. ನನಗೇಕೋ ಹಣ್ಣುಗಳು ಸಿಗುವ ಭರವಸೆ ಇರಲಿಲ್ಲ .. ಇವರು ಮಾತ್ರ ಹಣ್ಣಿರುವ ಕಡೆ ಕಾರ್ ನಿಲ್ಲಿಸಿ ಒಂದಷ್ಟು ಹಣ್ಣಿನ ಗೊಂಚಲುಗಳನ್ನು ಕೈಗೆ ತುರುಕಿದರು. ಕಪ್ಪು ಹಣ್ಣುಗಳು ಬಾಯೊಳಗೆ ಹೋಗುತ್ತಿದ್ದಂತೆಯೇ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುವುದನ್ನು ನಾನು ಸೈಡ್ ಮಿರರಿನಲ್ಲಿ ಪರೀಕ್ಷಿಸುತ್ತಾ ಕುಳಿತಿದ್ದರೆ ಮನೆ ಯಾವಾಗ ಬಂತು ಅಂತಲೇ ತಿಳಿಯಲಿಲ್ಲ.. !!



12 comments:

  1. ನೀವು ಪ್ರಕೃತಿಯ ಪುಸ್ತಕವನ್ನು ಓದ ಬಲ್ಲಿರಾದರೆ ಕಲ್ಲೂ ಕಥೆ ಹೇಳೀತು.....ಆದ್ರೆ ಈ ಸರ್ತಿ ಕಥೆ ಹೇಳಿದ್ದು ಕಾರ್ ! ಚೆಂದ ಇತ್ತು..ಕುಶಿ ಆಯಿತು :))

    ReplyDelete
  2. This comment has been removed by the author.

    ReplyDelete
  3. Nice Lahari!!
    (the deleted comment is mine...but my husband was logged in annisutte.so it shows srikanth

    :-)
    ms

    ReplyDelete
  4. ಅಕ್ಕ ಬಾಲ್ಯದಲ್ಲಿ ಪಾದೂರಿನ ಗುಡ್ಡೆಯಲ್ಲಿ ಕುಂಟಲ ಹಣ್ಣು ಮೆದ್ದ ನೆನಪಾಯಿತು. ಸುಂದರ ಬರವಣಿಗೆ ..

    ReplyDelete
  5. katena naan modlu odakke shuru maadide,nantara ade odisikondu hoytu.tumbaa chennaagide.

    ReplyDelete
  6. ಆ ಎರಡು ಗಂಟೆಯನ್ನು ನೀವು ಸದ್ವಿನಿಯೋಗಗೊಳಿಸಿದ ಪರಿ ಬಹಳ ಖುಷಿ ಕೊಟ್ಟಿತು.
    ಮಾಲಾ

    ReplyDelete
  7. ಕೆಟ್ಟು ನಿಂತ ಕಾರಿನ ಕರಾಮತ್ತು ಹೇಗಿದೆ ನೋಡಿ ..... ನಿಮ್ಮನ್ನು ಒಂದು ಸುಂದರ ಲೋಕಕ್ಕೆ ಕೊಂಡೊಯ್ದಿತ್ತು .... ಕಾರು ಕೆಡದಿದ್ದರೆ ನಿಮಗೆ ಇಷ್ಟು ಒಳ್ಳೆ ಟೂರು ಸಿಗ್ತಿತ್ತಾ !!?? :)

    ReplyDelete
  8. ನೀವು ಯಾವುದೇ ಸ್ಥಳಕ್ಕೆ ಹೋದರೂ ಕಥೆಗಳ ಲೋಕವನ್ನೇ ಸೃಷ್ಟಿ ಮಾಡಿಬಿಡುತ್ತೀರಾ... ಬದುಕೇ ಹಾಗೆ ನೋಡುವ ಕಣ್ಣುಗಳು ಮತ್ತು ನೋಡುವ ಮನಸ್ಸು ಜೊತೆಯಲ್ಲಿದ್ದರೇ ಏನು ಬೇಕಾದರೂ ಸೃಷ್ಟಿಸಿಬಿಡಬಹುದು... ನಿಮ್ಮ ಮನಸ್ಸು ಹಾಗೆ ಎಲ್ಲ ಕಡೆ ಹಾಯ್ದು ಅಲ್ಲಿರುವ ಎಲ್ಲರೊಳಗಿನ ಭಾವಗಳನ್ನು ಹೆಕ್ಕಿ ಪಾತ್ರಗಳನ್ನು ಸೃಷ್ಟಿಸಿಬಿಟ್ಟಿರಿ... ಕಥೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ನೀವು ಕುಂಟಲ ಹಣ್ಣು ಹುಡುಕುತ್ತಾ ಸಾಗಿ ಕೊನೆಯಲ್ಲಿ ಕೆಟ್ಟು ನಿಂತ ಕಾರಿನಿಂದಾಗಿ ಅಲ್ಲಿನ ಪ್ರಯಾಸದ ನಡುವೆ ನಿಮ್ಮ ಕಥಾಲೋಕವನ್ನು ಮನದಲ್ಲಿ ಮೂಡಿಸಿಕೊಂಡಿದ್ದು ಮಾತ್ರ ಅದ್ಬುತ.

    ReplyDelete
  9. ಪ್ರಕೃತಿಯೊಂದಿಗೆ ಬರಹವನ್ನು ಅರಳಿಸಿ ನಗಿಸಬಲ್ಲ ಜಾಣ್ಮೆ ನಿಮ್ಮ ಲೇಖನಿಗಿದೆ.. ಅದನ್ನು ಮತ್ತೆ ಸಾರಿದಂತಹ ಬರಹ ಇದು.. ಕೇವಲ ತಿಳಿ ಹಾಸ್ಯವೇ ಅಲ್ಲದೆ ತುಂಬಾ ವಿಷಯಗಳು ಅಸ್ವಾದನೆಗೆ ಸಿಕ್ಕವು.. ಅಚ್ಚರಿಗಳೊಂದಿಗೆ ಕಣ್ಣೆದುರು ತೆರೆದುಕೊಳ್ಳಬಹುದಾದ ಸೂಕ್ಷ್ಮ ವಿಚಾರಗಳು ಮನಸ್ಸನ್ನು ತನ್ನೆಡೆಗೆ ಕೊಂಡೊಯ್ದುಕೊಳ್ಳುವ ಪರಿಯನ್ನು ಸುಂದರವೆನಿಸುವಂತೆ ಚಿತ್ರಿಸಿದ್ದೀರಿ.. ಕುಂಟಾಲ ಹಣ್ಣುಗಳು ನಮ್ಮ ಬಾಯಲ್ಲೂ ನೀರೂರಿಸಿದ್ದು ಸುಳ್ಳಲ್ಲ.. ಚೆಂದದ ಬರಹ..:)))

    ReplyDelete
  10. ಸಾರ್ಥಕ ಎರಡು ಗಂಟೆಗಳು. :)

    ReplyDelete
  11. ಸುಂದರ ಪ್ರಕೃತಿಯ ವರ್ಣನೆಯಲ್ಲಿ , ಪುಟ್ಟ ಪುಟ್ಟ ಹಣ್ಣುಗಳು , ಕಾರಿನ ಕಥೆಯು , ಮನದಲ್ಲಿನ ವಿಚಾರಗಳು ಹಾಗೂ ಇಲ್ಲಿ ಹಾಕಿರುವ ಚಿತ್ರಗಳು .. ಎಲ್ಲವೂ ಸೇರಿ ಬರೆದಿರುವುದಕ್ಕಿಂದ ಇನ್ನೂ ಹೆಚ್ಚಿನ ಕಥೆಯನ್ನೇ ನಮ್ಮ ಮುಂದಿಡುತ್ತಿದೆ .. ತುಂಬಾ ವಿಸ್ಮಯ ಈ ಜಗತ್ತು .. !!

    ReplyDelete