ಉಪ್ಪಿನಕಾಯಿ ಹಾಡ ಕೇಳಿ ಬಲು (ರು)ರೂಚೀ..
ತಪ್ಪದೆ ನೀವು ತಿಂದು ನೋಡೀ ಅದರಾ (ರು)ರೂಚೀ..
ಮಾವಿನಕಾಯಿ ಲಿಂಬೆಕಾಯಿ ಉಪ್ಪಿನಕಾಯಿ ..
ನೀವು ತಂದು ಹಾಕಬೇಕು ಉಪ್ಪಿನಕಾಯಿ ..
ಹೀಗೆ ನಾಲ್ಕನೇ ತರಗತಿಯಲ್ಲಿ ಎರಡನೇ ಪಿರಿಯಡ್ ನಲ್ಲಿ ವೇದಾವತಿ ಟೀಚರ್ ಹಾಡು ಹೇಳಿ ಕೊಡುತ್ತಿದ್ದರೆ,ನನಗೆ ಅಮ್ಮ ಮಾಡಿದ ಉಪ್ಪಿನಕಾಯಿಯ ನೆನಪಾಗಿ ಬಾಯಲ್ಲಿ ನೀರೊಡೆದು ಹಸಿವಾಗಲು ಪ್ರಾರಂಭವಾಗುತ್ತಿತ್ತು. ಯಾವಾಗ ಮದ್ಯಾಹ್ನದ ಬೆಲ್ ಹೊಡೆಯೋದು ಎಂದು ಶಾಲೆಯ ಎದುರು ನೇತು ಹಾಕಿದ್ದ ಕಂಚಿನ ಗಂಟೆಯ ಕಡೆಗೆ ದೃಷ್ಟಿ ಹರಿಯುತ್ತಿತ್ತು .
ಈ 'ಉಪ್ಪಿನಕಾಯಿ ' ಎಂಬ ಕಾಯಿ ಯಾವ ಮರದಲ್ಲೂ ಬೆಳೆಯುವಂತದ್ದಲ್ಲ. ಆದರೂ ಇದರ ಸವಿ ತಿಳಿಯದವರಿಲ್ಲ . ಅದೂ ಉಪ್ಪಿನಕಾಯಿ ಎಂಬ ಒಂದೇ ಹೆಸರಿನಡಿಯಲ್ಲಿ ಎಷ್ಟೊಂದು ಬಗೆ. ಮಾವಿನಕಾಯಿ ಲಿಂಬೆಕಾಯಿ ,ಅಂಬಟೆ, ಕರಂಡೆ, ಬೀಂಪುಳಿಗಳಂತಹಾ ಹುಳಿ ಇರುವ ಕಾಯಿ ಗಳು,ಇವುಗಳ ಜೊತೆ ಬಗೆ ಬಗೆಯ ತರಕಾರಿಗಳನ್ನು ಸೇರಿಸಿ ಬೆರೆಸಿ ಮಾಡುವ ಉಪ್ಪಿನಕಾಯಿಗಳು ಇದಿಷ್ಟು ವೆಜ್ಜಿಗರಿಗಾದರೆ, ನಾನು ವೆಜ್ಜು ಅನ್ನುವವರಿಗೆ ಸಮುದ್ರ ಫಲಗಳಾದ ಮೀನು ಸಿಗಡಿಗಳ ಉಪ್ಪಿನಕಾಯಿಗಳೂ ಲಭ್ಯ.ಅದು ಯಾವುದೇ ಇರಲಿ ಊಟಕ್ಕೆ ಹರಡಿದ ಬಾಳೆ ಎಲೆಯ ತುದಿಯಲ್ಲೊಂದು ದೃಷ್ಟಿ ಬೊಟ್ಟಿನಂತೆ ಕೆಂಪು ಬಣ್ಣದ ಉಪ್ಪಿನಕಾಯಿ ಇಲ್ಲದಿದ್ದರೆ ಊಟಕ್ಕೇನು ಬೆಲೆ!
ನಾನು ಚಿಕ್ಕವಳಿದ್ದಾಗ, ಜಂಬರದ ಮನೆಯಲ್ಲಿ ಊಟಕ್ಕೆ ಕೂತಾಗ ನನ್ನ ಗಾತ್ರ ನೋಡಿ 'ಇದಕ್ಕೆ ಬಳ್ಸಿದರೆ ಸುಮ್ಮನೆ ಇಡ್ಕುಗು' ಎಂದುಕೊಂಡು ಉಪ್ಪಿನಕಾಯಿ ಬಡಿಸದೇ ಮುಂದಕ್ಕೆ ಹೋಗಿ ಬಿಡುತ್ತಿದ್ದರು. ಹತ್ತಿರದಲ್ಲಿ ಕೂತ ಅಮ್ಮ ಬಯ್ದರೂ ಕೇಳದೆ,ನಾನು ಹಠ ಹಿಡಿದು, ಅವರನ್ನು ಕರೆದು ನನ್ನ ಬಾಳೆ ಎಲೆಗೂ ಬಡಿಸಿ ಹೋಗುವಂತೆ ಮಾಡುತ್ತಿದ್ದೆ.
ಹೀಗೆ ಈ ಉಪ್ಪಿನಕಾಯಿ ಎಲ್ಲರಿಗೂ ಪ್ರಿಯವಾಗಿ ಸರ್ವವ್ಯಾಪಿಯಾಗಿದ್ದರೂ ಇದನ್ನು ಹಾಕುವ ಕಲೆ ಎಲ್ಲರಿಗೂ ಸಿದ್ಧಿಸುವಂತಹುದಲ್ಲ. ಸಾಮಾನ್ಯವಾಗಿ ಹೊಸಿಲಕ್ಕಿ ತುಳಿದು ಮುದ್ದುಗಾಲಿಟ್ಟು ಮನೆಯೊಳಗೆ ಬರುವ ಸೊಸೆ ಸರ್ವರಂಗಳಲ್ಲೂ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾದರೂ, ಈ ಉಪ್ಪಿನಕಾಯಿ ತಯಾರಿಕೆಯ ಯಜಮಾನಿಕೆ ಮಾತ್ರ ಅತ್ತೆಯ ಕೈಯಲ್ಲೇ ಉಳಿದಿರುತ್ತದೆ. ಉಪ್ಪಿನಕಾಯ ಗುಣಮಟ್ಟವನ್ನು ಕಾಡಲು ತನ್ನ 'ಕೈಗುಣ' ಅತಿ ಮುಖ್ಯ ಎಂದು ನಂಬಿರುವ ಅತ್ತೆಮ್ಮ ಈ ಜವಾಬ್ಧಾರಿಂದ ನಿವೃತ್ತಳಾಗಿ ತನ್ನ ಹಿರಿತನವನ್ನು ಕಳೆದುಕೊಳ್ಳಲು ಸುತಾರಾಂ ಬಯಸುವುದಿಲ್ಲ.
ಉಪ್ಪಿನಕಾಯ ಹಾಕುವುದೇನು ಅಣು ವಿಜ್ಞಾನವೇ ಎಂದು ಕೆಲವರು ಲಘುವಾಗಿ ನಗುವುದನ್ನು ನಾನಿಷ್ಟ ಪಡುವುದಿಲ್ಲ. ಮರದ ಮಿಡಿಯಿಂದ ಹಿಡಿದು ಉಪ್ಪಿನಕಾಯಿ ಭರಣಿಯವರೆಗಿನ ಸುಧೀರ್ಘ ಯಾತ್ರೆಯ ಕಷ್ಟ ಸುಖಗಳು, ನೋವು ನಲಿವುಗಳು ಉಪ್ಪಿನಕಾಯಿ ತಯಾರಿಸುವ ನಮ್ಮಂತಹಾ ನುರಿತ ಕೈಗಳಿಗೆ ಮಾತ್ರ ಗೊತ್ತಿರುತ್ತದೆಯೇ ವಿನಃ ಬಾಯಿ ಚಪ್ಪರಿಸುತ್ತಾ ಲೊಟ್ಟೆ ಹೊಡೆದು ಮಿಡಿ ಉಪ್ಪಿನಕಾಯಿಗಳನ್ನು ಹೊಟ್ಟೆಗಿಳಿಸುವವರಿಗಲ್ಲ. ಪೇಟೆಯಲ್ಲಿ ಸಿಗುವ ರೆಡಿಮೇಡ್ ಉಪ್ಪಿನಕಾಯಿ ಬಾಟಲಿಗಳ ಲೇಬಲ್ ಮೇಲೆ ಬರೆದಿರುವ ಸಾಮಾಗ್ರಿಗಳ ವಿವರ ಓದಿದ ಮಾತ್ರಕ್ಕೆ ಉಪ್ಪಿನಕಾಯಿ ಹಾಕುವ ಕಲೆ ಸಿದ್ದಿಸುವುದೂ ಇಲ್ಲ. ಬೆರಳು ಚೀಪಿ ಮತ್ತೆ ಮತ್ತೆ ಸವಿಯುವಂತಹಾ ರುಚಿಯ ಉಪ್ಪಿನಕಾಯಿ ತಯಾರಿಕೆ ಒಂದು ಪಾರಂಪರಿಕ ಗುಟ್ಟಿನ ವಿದ್ಯೆ ಅಂದರೆ ಅತಿಶಯವೇನೂ ಇಲ್ಲ ಬಿಡಿ. ಆದರೂ ನಮ್ಮಜ್ಜಿ(ಜ್ಜ) ಮಾಡುವ ಉಪ್ಪಿನಕಾಯಿಯ ಕಥೆಯನ್ನು ನಿಮ್ಮಲ್ಲಿ ಮುಚ್ಚು ಮರೆಯಿಲ್ಲದೇ ಹಂಚಿಕೊಳ್ಳುತ್ತಿದ್ದೇನೆ ಕೇಳಿ.
ಸಾಧಾರಣವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮಾಮರ ಹೂ ಬಿಡುವ ಕಾಲ. ಇದೇ ಸಮಯದಲ್ಲಿ ಉಪ್ಪಿನಕಾಯಿ ಭರಣಿಗಳನ್ನು ಜಾಗ್ರತೆಯಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದರೊಂದಿಗೆ 'ಮಿಷನ್ ಉಪ್ಪಿನಕಾಯಿ'ಯ ರಣಾಂಗಣ ಸಿದ್ಧವಾಗುತ್ತಿತ್ತು. ದಿನಕ್ಕೆ ನಾಲ್ಕು ಬಾರಿ ಕೈಯ್ಯಲ್ಲಿ ಕತ್ತಿ ಹಿಡಿದು ಜೈತ್ರ ಯಾತ್ರೆ ನಡೆಸುತ್ತಿದ್ದ ನನ್ನಜ್ಜಿಯ ದೆಸೆಯಿಂದಾಗಿ ತೋಟದ ಮೂಲೆಯಲ್ಲಿದ್ದ ಮಿಡಿ ಮರದೆಡೆಗೆ ಸಾಗುವ ಹಾದಿ ಕಳೆ ಕೊಳೆಗಳನ್ನೆಲ್ಲಾ ಕಳೆದುಕೊಂಡು ಸ್ವಚ್ಚವಾಗಿ ಬಿಡುತ್ತಿತ್ತು. ಮರದಡಿಯಲ್ಲಿ ನಿಂತು ಕುತ್ತಿಗೆ ಉದ್ದ ಮಾಡಿ, ಎರಡೂ ಕೈಗಳನ್ನೆತ್ತಿ ತಮ್ಮ ಚತುರ್ಚಕ್ಷುಗಳಿಂದ ಹೊಮ್ಮುವ ದೃಷ್ಟಿಗೆ ಪೂರಕವಾಗಿ ಹಿಡಿದು ವೀಕ್ಷಿಸಿ ಮಾವಿನ ಮಿಡಿಯ ಗಾತ್ರವನ್ನು ಅಂದಾಜಿಸಿ ಮನೆಗೆ ಮರಳುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು.
ಮಾವಿನ ಮಿಡಿಗಳಿನ್ನೂ ಮರದಲ್ಲಿರುವಾಗಲೇ ಅಜ್ಜ ಅಂಗಡಿಯಿಂದ ಸಾಸಿವೆ ಮೆಣಸು ಅರಸಿನ ಕೊಂಬು ಇವುಗಳನ್ನೆಲ್ಲಾ ತಂದು ಜಮಾಯಿಸುತ್ತಿದ್ದರು. ಇವುಗಳನ್ನು ದಿನಗಟ್ಟಲೆ ಬಿಸಿಲಿಗಿಟ್ಟು ಗರಿ ಮುರಿ ಮಾಡುವುದು ಇನ್ನೊಂದು ಕೆಲಸ. ಗರಿ ಗರಿ ಒಣಗಿದ ಮೆಣಸನ್ನು ಕಣ್ಣು ಬಾಯಲ್ಲೆಲ್ಲಾ ನೀರಿಳಿಸಿಕೊಂಡು ಪುಡಿ ಮಾಡುವುದು ಮಗದೊಂದು ಕೆಲಸ. ಈಗಿನಂತೆ ಮಿಕ್ಸಿ ಗ್ರೈಂಡರುಗಳ ಕಾಲವಲ್ಲದ ಕಾರಣ ಈ 'ಸುಲಭ' ಕೆಲಸ ಅಜ್ಜನ ಪಾಲಿಗೆ ಬರುತ್ತಿತ್ತು. ಮೂಗಿಗೆ ಅಡ್ದಲಾಗಿ ದೊಡ್ಡ ಬಟ್ಟೆ ಕಟ್ಟಿ, ತಲೆಗೊಂದು ಮುಂಡಾಸು ಬಿಗಿದು, ಕೈಯಲ್ಲಿ ಬಲವಾದ 'ಬಲಗೆ'ಯನ್ನು ಹಿಡಿದು ಶಸ್ತ್ರಸನ್ನದ್ಧನಾದ ಯುದ್ಧವೀರನಂತೆ ಕಂಗೊಳಿಸುತ್ತಾ ತೊಳೆದು ಒರೆಸಿಟ್ಟ ದೊಡ್ಡ ಕಡೆಯುವ ಕಲ್ಲಿನ ಎದುರು ವಿರಾಜಮಾನರಾಗುತ್ತಿದ್ದರು.
ಅಜ್ಜಿ ಸಾಮಗ್ರಿಗಳನ್ನೆಲ್ಲಾ ಸೇರು ಪಾವುಗಳಲ್ಲಿ ಅಳೆದು ತಂದಿರಿಸುತ್ತಿದ್ದರು. ಕಾಲ ಕಾಲಕ್ಕೆ ಅಜ್ಜನ ಬೆನ್ನಿನ ಮೇಲೆ ಕುಳಿತ ಸೊಳ್ಳೆಗಳಿಗೆ ಹೊಡೆಯುವುದು, ನೊಣ ಓಡಿಸುವುದು ಮಾಡುತ್ತಾ ಅಜ್ಜನ ಪ್ರೀತಿಗೂ ಪಾತ್ರರಾಗುತ್ತಿದ್ದರು. ಆ ಇಳಿ ವಯಸ್ಸಿನಲ್ಲೂ ಅಜ್ಜನ ಮಮತೆಯ ನೋಟಕ್ಕೆ ಅಜ್ಜಿಯ ಕೆನ್ನೆ ಕೆಂಪು ಮೆಣಸಿನಂತೆ ಬಣ್ಣ ತಳೆಯುವುದನ್ನು ನಾವು ಸೋಜಿಗದಿಂದಲೇ ನೋಡುತ್ತಿದ್ದೆವು. ಪುಡಿಗಳೆಲ್ಲಾ ಸಿದ್ದವಾದ ಮೇಲೆ ಹಂಡೆಗಟ್ಟಲೆ ಕುದಿಸಿ ಆರಿಸಿದ ಉಪ್ಪಿನ ದ್ರಾವಣವೂ ಸಿದ್ಧವಾಗುತ್ತಿತ್ತು. ಇಲ್ಲಿಗೆ ಮಿಷನ್ ಉಪ್ಪಿನಕಾಯಿ ಒಂದು ಹಂತಕ್ಕೆ ಬಂದಂತಾಗುತ್ತಿತ್ತು.
ನಿಧಾನಕ್ಕೆ ಮಿಡಿಗಾಯಿ ಮರದಲ್ಲಿ ಸಮರ್ಪಕ ಗಾತ್ರ ಹೊಂದಿ ರಾರಾಜಿಸತೊಡಗಿದಾಗ ಅಜ್ಜ ಮತ್ತು ಅಜ್ಜಿಯ 'ಬೆಟಾಲಿಯನ್' ಮರದ ಬಳಿಗೆ ಹೋಗುತ್ತಿತ್ತು. ಅಜ್ಜ ಮರ ಹತ್ತಿ ಗೊಂಚಲು ಗೊಂಚಲು ಮಾವಿನಕಾಯಿಗಳನ್ನು ಕೊಯಿದು ಬುಟ್ಟಿಯಲ್ಲಿ ಕಟ್ಟಿ ಇಳಿಸುತ್ತಿದ್ದರು. ಮನೆಗೆ ಬಂದ ಕೂಡಲೇ ಮಜ್ಜನ ಮಾಡುತ್ತಿದ್ದ ಮಾವಿನಕಾಯಿಗಳು, ನೀರಾರಿದ ನಂತರ ತೊಟ್ಟು ಉಳಿಸಿಕೊಂಡು ಪರಿಮಳ ಬೀರುತ್ತಾ ಉಪ್ಪಿನೊಂದಿಗೆ ಭರಣಿ ಸೇರುತ್ತಿದ್ದವು.
ವಾಲಿ ಗುಹೆಯ ಒಳಗೆ ರಕ್ಕಸನೊಂದಿಗೆ ಹೋರಾಡುತ್ತಿದ್ದಾಗ ಹೊಳೆಯಂತೆ ಹರಿದು ಬಂದ ರಕ್ತ ಧಾರೆಯನ್ನು ನೋಡಿ ಹೆದರಿದ ಸುಗ್ರೀವ ಗುಹೆಯ ಬಾಗೆ ದೊಡ್ಡ ಬಂಡೆಗಲ್ಲನ್ನು ಅಡ್ಡವಿರಿಸಿದ್ದನಂತೆ. ಹಾಗೆಯೇ ಈ ಮಾವಿನಕಾಯಿ ಭರಣಿಗಳ ಮೇಲೂ ಮಣ ಭಾರದ ಕಲ್ಲು ಗುಂಡುಗಳು ಕುಳಿತುಕೊಳ್ಳುತ್ತಿದ್ದವು.ಜಲಸ್ಥಂಬನ ವಿದ್ಯೆ ಕಲಿತ ದುರ್ಯೋಧನ ವೈಶಂಪಾಯನ ಸರೋವರದ ಒಳಗೇ ಮುಳುಗಿದ್ದಂತೆ ಇದು ಮಾವಿನಕಾಯಿಗಳು ಉಪ್ಪು ನೀರಿನಲ್ಲಿ ಮುಳುಗಿಯೇ ಇರಲು ಸಹಕರಿಸುತ್ತಿತ್ತು. ಹೀಗೆ ಬಂಧನಕ್ಕೊಳಗಾದ ಒಂದೆರಡು ದಿನಗಳಲ್ಲಿಯೇ ಮಾವಿನ ಮಿಡಿಗಳು ತಮ್ಮ ಮೂಲ ರೂಪಗಳನ್ನು ಕಳೆದುಕೊಂಡು ಈಜಿಪ್ಟಿನ ಮಮ್ಮಿಗಳಂತೆ ಸಂಕುಚಿತಗೊಂಡು ಮುಂದಿನ ಪ್ರಕ್ರಿಯೆಗೆ ಸಿದ್ಧವಾಗುತ್ತಿದ್ದವು.
ಈಗ ಕೊನೆಯ ಮತ್ತು ಮಹತ್ವದ ಘಟ್ಟ. ನುಣ್ಣಗೆ ಮಾಡಿಟ್ಟ ಪುಡಿಗಳನ್ನು ಮರದ ಸಟ್ಟುಗದ ಸಹಾಯದಿಂದ ಬೆರೆಸಿ, ಅದಕ್ಕೆ ಉಪ್ಪಿನ ದ್ರಾವಣ ಹಾಕಿ ಕಲಸುತ್ತಿದ್ದರು. ಅದರೊಂದಿಗೆ ಉಪ್ಪಲ್ಲದ್ದಿದ ಮಾವಿನ ಮಿಡಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ದೊಡ್ಡ ದೊಡ್ಡ ಭರಣಿಗಳಲ್ಲಿ ತುಂಬಿ, ಮೇಲಿಂದ ಮತ್ತೊಂದಿಷ್ಟು ಹರಳುಪ್ಪು ಹಾಕಿ ಭದ್ರವಾಗಿ ಬಾಯಿ ಕಟ್ಟಿ ಕತ್ತಲ ಕೋಣೆಗೆ ಸಾಗಿಸುತ್ತಿದ್ದರು. ಇಲ್ಲಿಗೆ ಉಪ್ಪಿನಕಾಯಿ ಕಥೆ ಮುಗಿದಂತೆ.
ಈ ಉಪ್ಪಿನಕಾಯ ಭರಣಿಯ ಮುಚ್ಚಳ ತೆಗೆಯುವುದು ಎಂದರೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುವಷ್ಟೇ ನಿಯಮ ನಿಷ್ಟೆಗಳು ಬೆಕಾಗುತ್ತವೆ. ಈ ಕೆಲಸದ ಸರ್ವಾಧಿಕಾರ ಅಜ್ಜಿಗೆ ಮಾತ್ರವೇ ಇದ್ದಿದ್ದು. ಪ್ರತಿ ಬಾರಿ ಉಪ್ಪಿನಕಾಯಿ ಮುಚ್ಚಳ ತೆರೆಯುವ ಮೊದಲು ಕೈಯ್ಯಲ್ಲಿದ್ದ ನೀರ ಪಸೆಯನ್ನೆಲ್ಲಾ ಚೆನ್ನಾಗಿ ಒರೆಸಿಕೊಂಡು ತೆರೆಯಬೇಕಾಗಿತ್ತು. ಒಂದು ಹನಿ ತಗುಲಿದರೂ ಉಪ್ಪಿನಕಾಯ ಷೆಲ್ಪ್ ಲೈಪ್ ಕ್ಷೀಣಿಸುತ್ತದಂತೆ. ಬೇಕಾದಷ್ಟು ಉಪ್ಪಿನಕಾಯಿ ತೆಗೆದು ಭರಣಿ ಮುಚ್ಚುವ ಮೊದಲು, ಗಾಳಿ ತಾಗಿ ಹಾಳಾಗಬಾರದು ಎಂದು ಮೇಲಿನಿಂದ ಇನ್ನೊಂದಿಷ್ಟು ಉಪ್ಪು ಬೆರೆಸಿಡುತ್ತಿದ್ದರು. ಇದರಿಂದಾಗಿ ಉಪ್ಪಿನಕಾಯಿ ಭರಣಿ ಖಾಲಿಯಾಗುವ ಹೊತ್ತಿನಲ್ಲಿ ಅದು ನಿಜ ಅರ್ಥದ 'ಉಪ್ಪಿ'ನಕಾಯಿ ಆಗಿರುತ್ತಿತ್ತು.
ಈ ಉಪ್ಪಿನ ಕಾಯಿ ಕೇವಲ ನಾಲಿಗೆಯ ರುಚಿಗೆ ಮಾತ್ರವಾಗಿರದೇ ಬಾಂಧವ್ಯ ಬೆಸೆಯುವಲ್ಲೂ, ಬೆಳೆಸುವಲ್ಲೂ ಮಹತ್ವದ ಪಾತ್ರ ವಹಿಸುತ್ತಿತ್ತು ಎಂದರೆ ಅಚ್ಚರಿ ಎನಿಸಬಹುದು. ಈ ಡಿಪಾರ್ಟ್ಮೆಂಟಿನ ಹೆಡ್ ಕೂಡಾ ಅಜ್ಜಿಯೇ ಆಗಿದ್ದರು. ಮದುವೆ ಮಾಡಿ ಕೊಟ್ಟ ಮಗಳಂದಿರಿಗೆ, ತನ್ನ ಅಕ್ಕ ತಂಗಿಯರಿಗೆ, ಅತ್ತಿಗೆ ನಾದಿನಿಯರಿಗೆ ಎಲ್ಲಾ ಎಷ್ಟೆಷ್ಟು ಕೊಡಬೇಕು ಎಂಬುದನ್ನು ಯಾವುದೇ ವಕೀಲರ ನೆರವಿಲ್ಲದೇ ಪಾಲು ಪಟ್ಟಿ ನಡೆಸುತ್ತಿದ್ದಳು. ಇದರೊಂದಿಗೆ ಅಜ್ಜಿಯ ಉಪಿನಕಾಯಿಯ ರುಚಿಗೆ ಸೋತು, "ಸ್ವಲ್ಪ ಉಪ್ಪಿನಕಾಯಿ ಇದ್ರೆ ಕೊಡಿ ಅಮ್ಮಾ" ಬೇಡಿ ಬರುತ್ತಿದ್ದವರ ಪಾಲಿಗೂ ಕೊರತೆ ಮಾಡುತ್ತಿರಲಿಲ್ಲ. ತೆಗೆದುಕೊಂಡು ಹೋದವರ ಒಂದೆರಡು ಹೊಗಳಿಕೆಯ ಮಾತುಗಳು ಉಪ್ಪಿನಕಾಯಿ ಮಾಡುವಾಗ ಅನುಭವಿಸಿದ ಕಷ್ಟವನ್ನೆಲ್ಲಾ ಕ್ಷಣಾರ್ಧದಲ್ಲಿ ನೀಗಿಸಿ, 'ಬರುವ ವರ್ಷ ನಿಂಬೆಕಾಯದ್ದೂ ಸಹ ಮಾಡುವ ಯೋಚನೆಯುಂಟು, ನಿನಗೂ ಕೊಡ್ತೇನೆ' ಎಂದು ಆಶ್ವಾಸನೆ ಕೊಡುವ ಮಟ್ಟಕ್ಕೇರಿಸುತ್ತಿತ್ತು.
ಈಗೆಲ್ಲ ಕಾರಣಾಂತರಗಳಿಂದ ಮನೆಗಳಲ್ಲಿ ಉಪ್ಪಿನಕಾಯಿ ಹಾಕುವುದು ಕಮ್ಮಿಯಾಗುತ್ತಿದೆ. ಅಂಗಡಿಯಿಂದ ಬಣ್ಣ ಬಣ್ಣದ ಡಬ್ಬಗಳಲ್ಲೇ ತುಂಬಿ ಬಂದು ಡೈನಿಂಗ್ ಟೇಬಲ್ ಮೇಲೆ ದಬ್ಬಲ್ಪಡುವ ಉಪ್ಪಿನಕಾಯಿಗಳಲ್ಲಿ ಆತ್ಮೀಯತೆಯ ಪರಿಮಳವಿಲ್ಲ. ಇಷ್ಟು ದುಡ್ಡು ಸುರಿದು ತಂದಿದ್ದೇನೆ ಎಂಬ ಲೆಕ್ಕಾಚಾರದ ಕಹಿ ಮಾತ್ರ ಇರುತ್ತದೆ. ಸಾಂಪ್ರದಾಯಿಕವಾಗಿ ತಯಾರಿಸಿ ಹಂಚುವ ಉಪ್ಪಿನಕಾಯಿ ಮರೆಯಾಗುವುದರೊಂದಿಗೆ ಬಾಂಧವ್ಯಗಳೂ ಪ್ರೀತಿಯ ಉಪ್ಪಿಲ್ಲದೇ ಸಪ್ಪೆಯಾಗಿ ಮುಂದೊಂದು ದಿನ ನಮ್ಮ ತಿಕ್ಕಲು ಮಕ್ಕಳು 'ಪಿಕ್ಕಲ್' ಇಲ್ಲದೆ ಊಟ ಮಾಡುವ ಕಾಲ ಬಂದರೂ ಬರಬಹುದೇನೋ..!!
ಬಾಯಲ್ಲಿ ನೀರು ಬರ್ತಿದೆ.. ಉಪ್ಪಿನಕಾಯಿ ಒಂದಷ್ಟು ಕಳ್ಸಿ ಈ ಕಡೆ :)) Nice article..
ReplyDeleteಯಮ್ಮಿ ಯಮ್ಮಿ ಯಮ್ಮಿ....ಉಪ್ಪಿನಕಾಯಿ...ಈಗ ಮದ್ಯಾನ್ಹ ಇಲ್ಲಿ...ಊಟ ಸಿಕ್ಕರೆ ಸಕ್ಕತ್ತಾಗಿರುತ್ತೆ ಉಪ್ಪಿನಕಾಯಿ ಜೊತೆಗೆ..
ReplyDeleteಪಿಕ್ಕಲ್ ತಿನ್ನದವ ತಿಕ್ಕಲ್ ಆದಂತೆ ...ಹಹಹಹ
ಉಪ್ಪಿನಕಾಯಿ ಪುರಾಣ ಓದುತ್ತ ಓದುತ್ತ ನಮ್ಮೂರಿನ 'ಹನಿ' ಕವಿ ಹೆಚ್ .ಡುಂಡಿರಾಜರ 'ಮಿಡಿ ಹಾಕುವ ಮಂಗಳೂರಿನ ಹುಡುಗಿಯರೇನು ಮಹಾ ನಮ್ಮಜ್ಜಿಯು ಹಾಕುತ್ತಾರೆ ಮಿಡಿ ಉಪ್ಪಿನಕಾಯಿ' ಎಂಬ ಹನಿಕವನ ನೆನಪಾಯಿತು .
ReplyDeletechandrashekar shetty cartoonist
Deleteಉಪ್ಪಿನ ಕಾಯಿ ಕುರಿತ ನಿಮ್ಮ ಲೇಖನ , ನನ್ನ ಬಾಲ್ಯದ ದಿನಗಳಿಗೆ ಕರೆದೊಯ್ಯಿತು. ಹೌದು ನಮ್ಮ ಮನೆಯಲ್ಲಿ ಅಜ್ಜಿ ಕಲ್ಲಿನ ಜಾಡಿಯಲ್ಲಿ ನಿಂಬೆಕಾಯಿ, ಹೇರಳೆ ಕಾಯಿ, ಮಾವಿನ ಕಾಯಿ, ಇವುಗಳ ಉಪ್ಪಿನ ಕಾಯಿ ಹಾಕುತ್ತಿದ್ದರು. ನಮ್ಮ ಮನೆಯ ಉಪ್ಪಿನ ಕಾಯಿ ರುಚಿ ನಮ್ಮ ನೆಂಟರ ಮನೆಯಲ್ಲೆಲ್ಲಾ ಪ್ರಸಿದ್ದಿ ಹೊಂದಿತ್ತು. ಹಳ್ಳಿಯಲ್ಲಿ ಅಕ್ಕ ಪಕ್ಕದವರು ಸ್ವಾಮಿ ಸ್ವಲ್ಪ ಉಪ್ಪಿನ ಕಾಯಿ ಕೊಡಿ ಅಂತಾ ಕೇಳುತ್ತಿದ್ದರು. ನಿಮ್ಮ ಲೇಖನ ಸವಿಸ್ತಾರವಾಗಿ ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು. ಇನ್ನೇನು ಚಳಿಗಾಲ ಬಂತು ಹುಣಸೆ ಕಾಯಿ, ಮಾಗಲಿಬೇರು, ನೆಲ್ಲಿಕಾಯಿ, ತಂದು ಬಾಯಿ ಚಪ್ಪರಿಸುವ ರಸ ಮಾಡಲು ನನ್ನ ತಾಯಿ ರೆಡಿ ಆಗುತ್ತಿದ್ದಾರೆ. ಆಹಾ ಒಳ್ಳೆ ರುಚಿಭರಿತ ಉಪ್ಪಿನ ಕಾಯಿ ನೀಡಿದ್ದಕ್ಕೆ ಥ್ಯಾಂಕ್ಸ್,
ReplyDeleteChat Conversation End
"ಅಯ್ಯ್ನೋರ...ಕಾಯಿಲೆಯಿಂದ ನಾಲಿಗೆ ಮರಗಟ್ಟಿಬಿಟ್ಟಿದೆ....ಚೂರು ಉಪ್ಪಿನ ಕಾಯಿ ಅಪ್ಪಣೆ ಮಾಡಿಸಿ ಅಯ್ಯ್ನೋರ..." ಉಪ್ಪಿನಕಾಯಿಯ ಪ್ರೀತಿಯ ಸಾರ್ವಕಾಲಿಕ ದೃಶ್ಯ ಭೂತಯ್ಯನ ಮಗ ಅಯ್ಯು ಚಿತ್ರದಿಂದ..
ReplyDeleteವಾಹ್ ಉಪ್ಪಿನಕಾಯಿಯ ಪುರಾಣ..ತ್ರೇತ ಯುಗದಿಂದ ಹಾಡು, ದ್ವಾಪರಕ್ಕೆ ಬಂದು..ಕಲಿಯುಗದಲ್ಲಿ ಈಜಿಪ್ಟ್ ಹೋಗಿ ಬಂದದ್ದು ಖುಷಿ ಕೊಟ್ಟಿತು..ಎಳೆಯ ಎಡ ತುದಿಯ ಮೇಲೆ ಕೂತರು..ಊಟಕ್ಕೆ ಅಧಿಪತಿಯಾಗಿ ನಿಲ್ಲುವ ಈ ಉಪ್ಪಿನ ಕಾಯಿಯನ್ನ ಸವಿದವರೇ ಬಲ್ಲರು ರುಚಿಯನ್ನ..ಸೊಗಸಾಗಿದೆ ಪ್ರತಿಹಂತವನ್ನು ಪರಿಚಯ ಮಾಡಿಕೊಡುವ ಮೂಲಕ ಒಂದು ಹಳ್ಳಿಯ, ಹಾಗು ಒಂದು ತಲೆಮಾರಿನ ಪ್ರವಾಸ..ಬಲು ಸೊಗಸು..ಒಳ್ಳೆಯ ಲೇಖನ ಮೇಡಂ..
ReplyDeleteಎಂಟಿಆರ್ ನ ಮೂವತ್ತು ಡಬ್ಬ ಉಪ್ಪಿನಕಾಯಿಯ ಎದುರು ಒಂದು ಚೂರು ಊರಿನ ಉಪ್ಪಿನಕಾಯಿ ಸಿಕ್ಕಿದ್ರೆ ಅದರಷ್ಟು ರುಚಿ ಬೇರಾವುದು ಇಲ್ಲ.
ಮನೆಯಲ್ಲಿ ಹೋಳು ಉಪ್ಪಿನ ಕಾಯಿ ಮಾಡುವುದು ರೂಢಿ. ಈಗಿಲ್ಲ ಬಿಡಿ ಆ ರೂಢಿ. ಉಪ್ಪಿನಕಾಯಿ ತಯಾರು ಮಾಡುವುದೆಂದರೆ ಅದೊಂತರ ಹಬ್ಬ ಮನೆಯಲ್ಲಿ ನಾವು ಸಣ್ಣವರಿರುವಾಗ. ಈಗೆಲ್ಲಿ ಮಿಡಿಯೂ ಇಲ್ಲ, ಹೋಳೂ ಇಲ್ಲ..! ಮಾವಿನಮರವೇ ಮುದಿಯಾಗಿದೆ!
ಚೆನ್ನಾಗಿದೆ..ಇಂದು ಊಟಕ್ಕೆ ಕೂತಾಗ ಉಪ್ಪಿನಕಾಯಿ ಬಾಟಲ್ ಅನ್ನು ತುಂಬ ಹೊತ್ತು ದಿಟ್ಟಿಸಿ ನೋಡುತ್ತಾ ಕುಳಿತೆ.:)))))
ReplyDeleteಬಲು ಹಿಂದೆ ಹೆಣ್ಣುಮಕ್ಕಳು ತವರು ಮನೆಯಿಂದ ಉಪ್ಪಿನಕಾಯಿ ತರುತ್ತಿದ್ದರು.
ReplyDeleteuppina kayi vyakhyana chennagide.. malayala film nalli ondu joke ide uppumav...endare "solt mango tree" bahusha adu iddare uppinakayi adaralli belititto eno
ReplyDeleteನಮ್ಮ ಕಡೆ ಉಪ್ಪಿನ ಕಾಯಿ ಮಾಡಲಿಕ್ಕೆ ಅಪ್ಪೆ ಮಿಡಿ ಅನ್ನೋ ಮಾವಿನ ಕಾಯಿ ಉಪಯೋಗಿಸುತ್ತಾರೆ. ಅಪ್ಪೆ ಮಾವಿನ ಮರ ಹೊಳೆಯ ಬದಿಯದ್ದಾದರೆ, ಅದರಲ್ಲೂ ಜೀರಿಗೆ ಪರಿಮಳದ ಅಪ್ಪೆ ಮಾವಿನಕಾಯಿ ಯಾದರೆ ಅದರಿ೦ದ ಮಾಡಿದ ಉಪ್ಪಿನ ಕಾಯಿಯ ಬಗ್ಗೆ ಮಾತೇ ಇಲ್ಲಾ. ಬರೇ ರುಚಿ.. :)
ReplyDeleteನಿಮ್ಮ ಉಪ್ಪಿನಕಾಯಿಯ ಬರಹ ಓದಿ ಬಾಯಲ್ಲಿ ನೀರು ಬ೦ತು.. yummy... :)
೧೩ ವರ್ಷ ಬಿಡದೇ ನನ್ನ ಸಾಕಿದ್ದೇ ಈ ಉಪ್ಪಿನಕಾಯಿ. ಮಧ್ಯಾಹ್ನದ ಊಟ ಅಂದರೆ ತುಪ್ಪ ಉಪ್ಪಿನಕಾಯಿ ಬೆರೆಸಿದ ಅನ್ನ. ಎಂಥಾ ರುಚಿ ಅದರದು. ಈ ಲೇಕನ ಓದಿದಾಗ ಆ ಕಾಲದ ನೆನಪು ಬಂತು.
ReplyDeleteಮಾಲಾ
ondu sanna vishayavannu adeshtu sogasaagi heltiiri ? chenaagide .
ReplyDeleteondu sanna vishayavannu adeshtu sogasaagi heltiiri ? chenaagide .
ReplyDelete-sujatha lokesh .
ನಿಮ್ಮ ಬರಹ ಅದ್ಬುತ... ಒಬ್ಬ ಬರಹಗಾರನಿಗೆ ಇರಬೇಕಾದ ಎಲ್ಲವೂ ನಿಮ್ಮಲ್ಲಿ ತುಂಬಿವೆ... ಉಪ್ಪಿನಕಾಯಿ ಎಂಬ ನಿಮ್ಮ ಲೇಖನದ ಸುತ್ತು ಹೋಗಿ ಬಂದರೆ ಸಾಕು ಉಪ್ಪಿನಕಾಯಿಯ ಕಷ್ಟ-ಸುಖದರಿವಾಗಿಬಿಡುತ್ತದೆ, ತುಂಬಾ ವಿವರಗಳನ್ನೊಳಗೊಂಡ ಲೇಖನ. ನನಗೆ ಗೊತ್ತೆ ಇರಲಿಲ್ಲ ಉಪ್ಪಿನಕಾಯಿ ಹಾಕಲು ಇಷ್ಟೆಲ್ಲ ತಯಾರಿಗಳಿರುತ್ತವೆಯೆಂದು... ಸೊಗಸಾಗಿದೆ,
ReplyDeleteChennagide ani ... tumba lavalavike
ReplyDeleteನಿಮ್ಮ ಲೇಖನವೇ ಬಾಯಲ್ಲಿ ನೀರು ತರಿಸ್ತು ಮಾರಾಯ್ರೆ.. :))
ReplyDeleteನಾನು ಮಿಡಿ ಉಪ್ಪಿನಕಾಯಿ ಮಾಡಿದೆ ...ನಿಮ್ಮ ಬರಹ ಉಪ್ಪಿನಕಾಯಿಯಷ್ಟೇ ಚೆನ್ನಾಗಿದೆ ,ಅಭಿನಂದನೆಗಳು .
ReplyDelete