ಹಾಸಿಗೆಯಲ್ಲಿ ಕಣ್ಣು ಬಿಟ್ಟು ಮಲಗಿಕೊಂಡೇ ಆಲೋಚಿಸುತ್ತಿದ್ದೆ. ಅಮ್ಮ ಬಂದು 'ಗಂಟೆ ಆಯಿತು ಏಳು ಬೇಗ' ಅಂತ ನಾಲ್ಕಾರು ಸಲ ಕರೆದು ಹೋಗಿದ್ದಳು. ಈಗ ಹೊರಗಿನಿಂದ 'ದೀಪು' ಅಂತ ಅಪ್ಪನ ಸ್ವರವೂ ಕೇಳಿಸಿತು. ಇನ್ನೂ ಏಳದಿದ್ದರೆ ಬೆಳಿಗ್ಗೆ ಬೆಳಿಗ್ಗೆಯೇ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದುಕೊಂಡು ಮೆಲ್ಲನೆ ಎದ್ದು ತಲೆ ಬಗ್ಗಿಸಿಕೊಂಡು ಬಚ್ಚಲು ಮನೆಗೆ ನಡೆದೆ. ಅಪ್ಪ ಮತ್ತು ತಂಗಿ ಪಾಲಿ ಆಗಲೇ ದೋಸೆ ತಿನ್ನುತ್ತಾ ಕುಳಿತಿದ್ದರು.
ನನ್ನ ತಟ್ಟೆ ತೆಗೆದುಕೊಂಡು ಬಂದು ಪಾಲಿಯ ಪಕ್ಕವೇ ಕೂತೆ. ಯಾರೂ ನನ್ನನ್ನು ಮಾತಾಡಿಸದಿರಲಿ ಅಂತ ದೇವರನ್ನು ಬೇಡಿಕೊಂಡೆ. ಅಪ್ಪ ಆಗಲೇ ತಮ್ಮ ತಟ್ಟೆ ಎತ್ತಿಕೊಂಡು ಕೈ ತೊಳೆಯಲು ಎದ್ದರು. ನಮ್ಮಲ್ಲಿ ಅವರವರ ತಟ್ಟೆ ಲೋಟ ಅವರೇ ತೊಳೆಯಬೇಕು. ಈ ನಿಯಮ ಅಪ್ಪನೇ ಮಾಡಿದ್ದು. ಆದ್ರೆ ಪಕ್ಕದ ಮನೆ ಸುಧಿ ಮನೆಯ ಕ್ರಮವೇ ಒಳ್ಳೇದು ಅಂತ ನನ್ನ ಭಾವನೆ. ಅವ್ನ ತಟ್ಟೆ ಲೋಟ ಎಲ್ಲಾ ಅವ್ನಕ್ಕ ಪ್ರೀತಿನೇ ತೊಳೆದುಕೊಡ್ತಾಳೆ. ಅವ್ನನ್ನ ಕೇಳಿದರೆ ಗಂಡು ಹುಡುಗರು ಮನೆ ಕೆಲ್ಸ ಮಾಡ್ಬಾರ್ದು ಕಣೋ ಅಂತಾನೆ. ನಮ್ಮನೇನೇ ಇಷ್ಟು ವಿಚಿತ್ರ. ಅಪ್ಪ ಅಮ್ಮಂದು ಸಾವಿರ ರೂಲ್ಸ್..
ಅಮ್ಮ ತಲೆಗೆ ಮೊಟಕಿ 'ಎಲ್ಲಿದ್ದೀಯಾ.. ದೋಸೆ ಬೇಕಾ ಸಾಕಾ ಅಂತ ಆಗಿಂದ ಕೇಳ್ತಾ ಇದ್ದೀನಿ.. ಏನಾಗಿದೆ ನಿಂಗೆ' ಅಂತ ಕೇಳುವವರೆಗೆ ಯೋಚನೆಯಲ್ಲೇ ಮುಳುಗಿದ್ದೆ. ಯಾಕೋ ತಿಂದಿದ್ದು ಒಂದೇ ದೋಸೆ ಆದರೂ ಹೊಟ್ಟೆ ತುಂಬಿದಂತೆನಿಸಿ 'ಸಾಕು ನಂಗೆ' ಅಂತ ಎದ್ದೆ.
ಇವತ್ತು ಕಡೇ ದಿನ. ಇಂದೊಂದು ದಿನ ಬೇಗ ಕಳೆದು ಬಿಡಲಪ್ಪಾ.. ಓಹ್ ಎಷ್ಟು ಸಾರಿ ಕೇಳಿಕೊಂಡೆನೇನೋ ಹೀಗೆ..ಈ ನನ್ನ ತಲೆಬಿಸಿಗೆ ಕಾರಣವೇ ಬೇರೆ.
ಮೊನ್ನೆ ಸಂಜೆ ಶಾಲೆ ಮುಗಿದಾಗ ಪ್ರೇಯರ್ ಹಾಲಿಗೆ ಎಲ್ಲರನ್ನೂ ಕರೆದು, 'ನಾಳೆಂದ ಮೂರು ದಿನ ಜನಗಣತಿ ಇರೋದ್ರಿಂದ ನಿಮಗೆಲ್ಲಾ ರಜ. ಹಾಗಂತ ಇಡೀ ದಿನ ಆಟ ಆಡೋದಲ್ಲ.. ನಾವು ಟೀಚರ್ಸ್ ನಿಮ್ಮ ಮನೆಗೆ ಬರ್ತೀವಿ .ಆಗ ಓದಿಕೊಂಡು ಇರ್ಬೇಕು. ನಿಮ್ಮ ಮನೆಯವರಲ್ಲೂ ವಿಚಾರಿಸುತ್ತೇವೆ. ಓದದವರಿಗೆ ಶಾಲೆಯಲ್ಲಿ ಪನಿಶ್ ಮೆಂಟ್ ಇದೆ' ಅಂದಿದ್ರು. ಅದಾದ್ರು ದೊಡ್ದ ವಿಷಯ ಅಲ್ಲ. ಟೀಚರ್ ಏನಾದ್ರು ಇಡೀ ದಿನ ಇರ್ತಾರ..? ಅಲ್ಲಿ ಬರೋದು ಕಾಣುವಾಗ ಪುಸ್ತಕ ಕೈಯಲ್ಲಿ ಹಿಡಿದರಾಯಿತು. ಹಾಗೇ ಆಡ್ಲಿಕ್ಕೆ ಅಮ್ಮ ಆದ್ರೂ ಎಲ್ಲಿ ಬಿಡ್ತಾಳೆ. ಅವ್ಳೇ ಟೀಚರುಗಳಿಗಿಂತ ಹೆಚ್ಚಾಗಿ ಬಯ್ತಾಳೆ. ಅದ್ರೂ ಇದು ನನ್ನ ಸಮಸ್ಯೆಯೇ ಅಲ್ಲ.
ಸಮಸ್ಯೆ ಇರೋದು ನೀಲಾ ಟೀಚರ್ ನಮ್ಮನೇಗೆ ಬರೋದ್ರಲ್ಲಿ. ಅವ್ರು ನನ್ನ ಕ್ಲಾಸ್ ಟೀಚರ್. ಗಣಿತ ಅವ್ರೇ ಮಾಡೋದು. ನಂಗೂ ಅವ್ರನ್ನ ಕಂಡರೆ ಇಷ್ಟಾನೇ.. ಲೆಕ್ಕದಲ್ಲಿ ಯಾವಾಗ್ಲೂ ನಾನೇ ಫಸ್ಟ್ ಇಡೀ ಕ್ಲಾಸಿಗೆ. ಯಾವಾಗ್ಲಾದ್ರು ಸಿಕ್ಕಿದ್ರೆ ಹೊಗಳ್ತಾ ಇರ್ತಾರೆ ಅಂತ ಅಮ್ಮ ಹೆಮ್ಮೆಯಿಂದ ಅಪ್ಪನತ್ರ ಹೇಳೋದನ್ನು ಕೇಳಿದ್ದೀನಿ ನಾನು.
ಆದ್ರೆ ಈ ಸಲದ ಕಥೆಯೇ ಬೇರೆ. ಅದಕ್ಕೆ ಕಾರಣ ಮಾತ್ರ ಈ ಅಪ್ಪ ಅಮ್ಮನೇ.. ಓ ಅಲ್ಲಿ ಕಾಣುತ್ತಲ್ವಾ ಕಲ್ಯಾಣ ಮಂಟಪ.. ಅಲ್ಲಿ ಅಮ್ಮನ ಊರಿನ ಕಡೆಯವರದ್ದು ಮದುವೆ ಇತ್ತು. ಅವ್ರು ಕಾಗದ ಕೊಡೋದಿಕ್ಕು ನಮ್ಮಲ್ಲಿಗೆ ಬಂದಿದ್ರು. 'ನೀವೂ ಬನ್ನಿ. ಅಲ್ಲಿ ಎಲ್ರೂ ನಿಮ್ಮನ್ನ ಕೇಳ್ತಾರೆ .. ಮಕ್ಳಿಗೆ ಅಡುಗೆ ಮಾಡಿಟ್ಟಿದ್ದೀನಿ. ಬಡಿಸ್ಕೊಂಡು ಊಟ ಮಾಡ್ತಾರೆ. ಪರೀಕ್ಶೆ ಇಲ್ಲಾಂದಿದ್ರೆ ಎಲ್ರೂ ಹೋಗ್ಬೋದಿತ್ತು. ತೊಂದ್ರೇ ಏನೂ ಇಲ್ಲ. ಮಕ್ಳು ಅವ್ರ ಪಾಡಿಗೆ ಓದೋದನ್ನು ಅಭ್ಯಾಸ ಮಾಡೋದು ಒಳ್ಳೇದಲ್ವಾ .. ಓದ್ಕೊಳ್ಳಿ .. ನಾವು ಹೋಗಿ ಬಂದ್ಬಿಡೋಣ ಅಂತ ಅಪ್ಪನೊಂದಿಗೆ ಹೊರಟಿದ್ಲು. ಹೊರಡುವಾಗ ಸಾವಿರ ಸಲ ಹೇಳಿರಬಹುದು. ಮನೇಲೇ ಇರಿ. ಹೊರಗೆಲ್ಲೂ ಹೋಗ್ಬೇಡಿ. ಚೆನ್ನಾಗಿ ಓದಿಕೊಳ್ಳಿ. ನಾವು ಬಂದ ಮತ್ತೆ ಆಟ ಆಡ್ಲಿಕ್ಕೆ ಹೋದ್ರಾಯ್ತು ಅಂತ. ಎಲ್ಲಾದಕ್ಕು ಕೋಲೆಬಸವನ ತರ ತಲೆ ತೂಗಿದ್ದೆವು ನಾನು ಮತ್ತು ಪಾಲಿ.
ಅವ್ರು ಆಕಡೆ ಹೋದ ಕೂಡ್ಲೇ ಪಾಲಿ ಪಕ್ಕದ ಮನೆ ಶಾರೀನ್ನ ಕರ್ದು ಅವ್ಳ ಜೊತೆ ಗೊಂಬೆ ಆಟ ಆಡ್ತಾ ಕೂತ್ಕೊಂಡ್ಳು. ನನ್ನನ್ನೂ ಕರೆದಳು. ನಂಗ್ಯಾಕೋ ಈ ಗೊಂಬೆ ಆಟ ಇಷ್ಟಾನೇ ಇಲ್ಲ. ನಾನು ಮೆಲ್ಲನೆ ' ನೋಡೇ ಪಾಲಿ ನೀವಿಬ್ರೂ ಇಲ್ಲೇ ಆಡ್ಕೋತಾ ಇರಿ. ನಾನು ಸುಧಿ ಮನೆಗೆ ಹೋಗಿ ಬೇಗ ಬರ್ತೀನಿ' ಅಂದೆ. ಅದಕ್ಕವಳು 'ಬೇಡ ಗೊತ್ತಾದ್ರೆ ಆಮೇಲೆ ಅಮ್ಮ ಬಯ್ತಾಳೆ' ಅಂದ್ಲು. 'ನನ್ನ ಲೆಕ್ಕದ ನೋಟ್ಸ್ ಅವ್ನತ್ರಾನೇ ಇದೆ .. ಈಗ ಬಂದೆ' ಅಂತ ಹೊರಟೇ ಬಿಟ್ಟಿದ್ದೆ.
ಅಲ್ಲಿ ಹೋಗ್ಬೇಕಿದ್ರೆ ಸುಧಿ ಮನೆಗೆ ಹೊಸ ಕೇರಂ ಬೋರ್ಡ್ ತಂದಿದ್ರು. ನಮ್ಗಂತೂ ತುಂಬಾ ಇಷ್ಟದ ಆಟ. ಶಾಲೇಲಿ ಗೇಮ್ಸ್ ಪಿರಿಯಡ್ ಗೆ ಎಲ್ಲಾ ಹೊರಗೆ ಆಡ್ತಾ ಇದ್ರೆ ನಾವೊಂದು ನಾಲ್ಕು ಜನ ಕೇರಂ ಆಡ್ತಿದ್ದೆವು. ಚೆನ್ನಾಗಿ ಬರ್ತಿತ್ತು ಈ ಆಟ. ಇಲ್ಲಿ ನೋಡಿದ್ರೆ ಪ್ರೀತಿ ಅವ್ಳ ಫ್ರೆಂಡ್ ರಾಜಿ ಮತ್ತೆ ರೀನಾ ಮೂರೇ ಜನ ಪಾಪರ್ ಆಟ ಆಡ್ತಿದ್ರು. ನನ್ನನ್ನು ಕಂಡ ಕೂಡ್ಲೇ ಪ್ರೀತಿ ' ಹೋ .. ಚಾಂಪಿಯನ್ ಬಂದಾ.. ಒಳ್ಳೇದಾಯ್ತು.. ಬಾರೋ ಆಟಕ್ಕೆ ಅಂತ ಹಿಡಿದೆಳೆದು ಕೂರಿಸಿದಳು. ನಂಗೆ ಅವ್ಳು ಹಾಗೇ ಕರೆದ ಕುಶಿಗೆ ನೋಟ್ಸು, ಮನೆ, ಪಾಲಿ, ನಾಳೆಯ ಪರೀಕ್ಷೆ ಎಲ್ಲಾ ಮರೆತೇ ಹೋಯ್ತು.
ಪಾಲಿ ಒಂದೆರಡು ಸಲ ಬಂದು ಕರೆದು ಹೋದಳು. ನಾನು ಒಂದಾಟ ಆಡಿ ಸ್ವಲ್ಪ ಓದಿ ಬರ್ತೀನಿ ನೀನು ಹೋಗು ಅಂತ ಅವಳನ್ನಟ್ಟಿದೆ. ' ಅಮ್ಮಂಗೆ ಹೇಳ್ತೀನಿ' ಅಂತ ಹೇಳ್ತಾನೇ ಹೋದಳು.
ಸುಧಿಯ ಅಮ್ಮನ ಒತ್ತಾಯಕ್ಕೆ ಊಟ ಕೂಡಾ ಅಲ್ಲೇ ಮಾಡಿ ಮತ್ತೆ ಆಡಿದೆವು. ಗಂಟೆ ಮೂರಾಗುವ ಹೊತ್ತಿಗೆ ಇನ್ನು ಅಮ್ಮ ಅಪ್ಪ ಬರುವ ಹೊತ್ತಾಯಿತು ಅಂತ ಹೊರಟೆ. ಸುಧಿ ಅಮ್ಮ ಕೊಟ್ಟ ಮೈಸೂರ್ ಪಾಕ್ ಆಗಲೇ ಕಿಸೆಯಲ್ಲಿ ತುರುಕಿಕೊಂಡಿದ್ದೆ. ಪಾಲಿಗೆ ಅದನ್ನು ಕೊಟ್ಟು ' ಅಮ್ಮಂಗೆ ನಾನು ಸುಧಿ ಮನೆಗೆ ಹೋಗಿದ್ದು ಹೇಳ್ಬೇಡ ಅಂದೆ. ಅವಳೂ ಮೈಸೂರುಪಾಕಿನ ತುಂಡನ್ನು ಇಡಿಯಾಗಿ ಬಾಯೊಳಗೆ ತುರುಕಿಕೊಂಡಿದ್ದ ಕಾರಣ ಮಾತಾಡಲಾಗದೆ ತಲೆ ಆಡಿಸಿಯೇ ನನ್ನ ಮಾತಿಗೆ ಸಮ್ಮತಿ ಸೂಚಿಸಿದ್ದಳು.
ಸ್ವಲ್ಪ ಹೊತ್ತಲ್ಲಿ ಮನೆಗೆ ಬಂದ ಅಮ್ಮ ಅಪ್ಪನಿಗೆ ಪುಸ್ತಕ ಬಿಡಿಸಿಟ್ಟು ಓದ್ತಾ ಇದ್ದ ನಮ್ಮನ್ನು ಕಂಡು ಕುಶಿ ಆಗಿ ' ಸಾಕೀಗ ಓದಿದ್ದು.. ಒಳ್ಳೇ ಮಕ್ಕಳು.. ಸ್ವಲ್ಪ ಹೊರಗೆ ಆಡ್ಕೊಳ್ಳಿ ಅಂದಿದ್ದಳು. ನನ್ನ ಸವಾರಿ ಪುನಃ ಸುಧಿ ಮನೆಗೆ ನಡೆದಿತ್ತು ಕೇರಂ ಆಡಲು.
ಮಾರನೇ ದಿನ ಲೆಕ್ಕ ಪರೀಕ್ಷೆ. ಮಾಡ್ಲಿಕ್ಕೆ ಹೊರಟ್ರೆ ಯಾವ್ದೂ ಸರಿ ಆಗ್ಲಿಲ್ಲ. ತುಂಬಾ ಕಷ್ಟ ಇತ್ತು. ಜೊತೆಗೆ ಟೀಚರ್ ಬೇರೆ ಬೇಗ ಬೇಗ ಮಾಡಿ ಕೊಡಿ.. ನಂಗೆ ಆಫೀಸಲ್ಲಿ ಕೆಲ್ಸ ಇದೆ ಅಂತ ಪೇಪರ್ ಎಳ್ಕೊಂಡು ಹೋಗಿಯೇ ಬಿಟ್ಟಿದ್ರು. ಉತ್ತರ ಪತ್ರಿಕೆ ಕೊಡುವಾಗ ನನ್ನ ಹೆಸರು ಕಡೇಯಲ್ಲಿ ಹೇಳಿ ಮಾರ್ಕ್ ಹೇಳಿದ್ರು. ಹತ್ತಕ್ಕೆ ಎರಡು. ಎಲ್ಲಾ ಮಕ್ಕಳು ನಗ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು. ಟೀಚರಿಗೇ ಪಾಪ ಎನ್ನಿಸಿ.. ಯಾಕೇ ಇಷ್ಟು ಕಡಿಮೆ ಮಾರ್ಕು.. ಏನಾಯ್ತು.. ಅಂದರು. ನಂಗೆ ಮೊನ್ನೆ ಜೋರು ಜ್ವರ ಬಂದಿತ್ತು.. ಲೆಕ್ಕ ಅಬ್ಯಾಸ ಮಾಡ್ಲಿಕೆ ಆಗ್ಲಿಲ್ಲ ಮಲಗಿದ್ದೆ ಅಂತ ಸುಳ್ಳು ಬಿಟ್ಟಿದ್ದೆ. ಸರಿ ಸರಿ.. ಮೊದ್ಲೇ ಹೇಳ್ಬೇಕಿತ್ತು.. ಅಂತ ಕನಿಕರ ತೋರಿಸಿದ್ದರು.
ಎಲ್ಲಾ ಮುಗಿತಪ್ಪ ಅಂತ ಸಮಾಧಾನದಿಂದ ಇದ್ದೆ. ಆದರೆ ಈಗ ಅದೇ ನೀಲಾ ಟೀಚರ್ ಬಂದ್ರೆ ಮೊನ್ನೆಯ ಸಂಗತಿ ಹೇಳಿಯೇ ಹೇಳ್ತಾರೆ. ಆಗ ನಾನು ಸುಳ್ಳು ಹೇಳಿದ್ದು ಅಮ್ಮನಿಗೆ ಗೊತ್ತಾಗುತ್ತೆ. ಜೊತೆಗೆ ಮೊದ್ಲಿನ ದಿನ ಸುಧಿ ಮನೇಲಿ ಆಟ ಆಡಿದ್ದು , ಲೆಕ್ಕದಲ್ಲಿ ಎರಡೇ ಎರಡು ಮಾರ್ಕು ಬಂದಿದ್ದು.. ಎಲ್ಲಾ ಗೊತ್ತಾಗುತ್ತೆ.
ದೇವ್ರೇ.. ಈ ಸಲ ಕ್ಷಮಿಸು.. ಇನ್ನು ಮುಂದೆ ಸುಧಿ ಮನೆ ಕಡೆ ಹೋಗಲ್ಲ. ಅವರ ಕೇರಂ ಬೋರ್ಡ್ ಮುಟ್ಟಿ ಕೂಡಾ ನೋದಲ್ಲ. ಅಂತ ಪ್ರತಿಜ್ಞೆ ಮಾಡಿದೆ.
ಹೊರಗಡೆ ಯಾರೋ ಬಂದ ಸದ್ದು. ಮೆಲ್ಲನೆ ಕಿಟಕಿಯಿಂದಲೇ ಇಣುಕಿದೆ. ನೀಲಾ ಟೀಚರ್ ಚಿಕ್ಕ ಹುಡುಗಿಯ ಕೈ ಹಿಡಿದು ನಿಂತಿದ್ರು. ಅಮ್ಮ ಸೀರೆ ಸೆರಗಲ್ಲಿ ಕೈ ಒರೆಸಿಕೊಳ್ಳುತ್ತಾ ಹೊರಗೆ ಹೋದಳು. ನನಗೆ ಪ್ರಾಣ ಹೋಗುವಷ್ಟು ಹೆದರಿಕೆ ಆಯ್ತು.
ಮೊನ್ನೆ ನೋಡಿದ ಒಂದು ಪಿಕ್ಚರಲ್ಲಿ ನನ್ನ ಪ್ರಾಯದ ಹುಡುಗನೊಬ್ಬ ಮನೆ ಬಿಟ್ಟು ಓಡಿ ಹೋಗಿದ್ದು ನೆನಪಾಯ್ತು. ನಾನು ಹಾಗೇ ಎಲ್ಲಿಯಾದರೂ ಓಡಿದರೆ ಹೇಗೆ ಅಂತ ಆಲೋಚಿಸಿದೆ.ಆದ್ರೆ ಆ ಹುಡುಗನಿಗೆ ಬಂದ ತೊಂದರೆಗಳೂ ನೆನಪಾಗಿ ಕಾಲೆತ್ತಿ ಇಡಲು ಶಕ್ತಿ ಇಲ್ಲದಷ್ಟು ಭಯ ಆತು.
ಅಷ್ಟರಲ್ಲಿ ಅಮ್ಮ 'ಹೋ.. ಬನ್ನಿ ಬನ್ನಿ.. ಇವಳ್ಯಾರು ಪುಟ್ಟ ಹುಡುಗಿ' ಅಂತ ಒತ್ತಾಯ ಮಾಡಿ ಒಳಗೆ ಕರೆಯುವುದು ಕೇಳಿಸಿತು.
ನೀಲಾ ಟೀಚರ್, ' ನಿಮ್ಮಲ್ಲಿಬ್ರೇ ಮಕ್ಕಳಲ್ವಾ ಇರೋದು .. ಹೊಸದಾಗಿ ಏನೂ ಬರೆಯಲಿಕ್ಕೆ ಇಲ್ಲ. ಹಳೇದನ್ನೇ ನೋಡಿ ಬರೀತೀನಿ. ಇವ್ಳು ನನ್ನ ಮಗಳು. ಮನೇಲಿ ಒಬ್ಳೇ ಆಗ್ತಾಳೆ ಅಂತ ಕರ್ಕೊಂಡು ಬಂದೆ. ಇನ್ನು ಕೆಲವು ಮನೆಗೆ ನುಗ್ಗಿ ಬೇಗ ಮನೆಗೆ ಓಡ್ಬೇಕಪ್ಪ.. ಇವತ್ತು ಸಂಜೆ ಊರಿಂದ ಅತ್ತೆ ಮಾವ ಬರ್ತಾರೆ. ಸಲ್ಪ ಅಡುಗೆ ಆಗ್ಬೇಕು.. ನಿಮ್ಮಲ್ಲಿಗೇನು ಇನ್ನೊಮ್ಮೆ ಬರ್ತೀನಿ' ಅಂತ ಹೊರಟೇ ಬಿಟ್ಟರು.
ನನ್ನ ತಲೆ ಮೇಲಿದ್ದ ದೊಡ್ದ ಬಂಡೆ ಸರಿಸಿದಂತಾಯ್ತು. ಅವರು ಹೋಗುವುದನ್ನು ಕಂಡು ಕುಶಿಯಿಂದ ಕಿರುಚಬೇಕೆಂದುಕೊಂಡೆ. ಅಮ್ಮ ಬಯ್ದರೆ ಅಂತ ಸುಮ್ಮನಾದೆ. ಬೆಳಿಗ್ಗೆ ತಲೆ ಬಿಸಿಯಲ್ಲಿ ತಿಂದಿದ್ದ ಒಂದು ದೋಸೆ ಕರಗಿ ಮಾಯವಾಗಿತ್ತು.
ಅಮ್ಮನತ್ರ ಬಿಸ್ಕೆಟ್ ಆದ್ರೂ ಕೇಳ್ತೇನೆ ಅಂತ ಎದ್ದೆ. ಸುಧಿ ಬಾಗಿಲ ಬಳಿ ನಿಂತಿದ್ದವನು ನನ್ನನ್ನು ಕಂಡು ' ಇಷ್ಟೊತ್ತು ಓದ್ತಾ ಕೂತಿದ್ದೆ. ಟೀಚರ್ ನಮ್ಮನೇಗೂ ಬರ್ಲಿಲ್ಲ. ಇನ್ನು ಓದ್ಬೇಕೂಂತ ಇಲ್ಲ. ಬಾ ಕೇರಂ ಆಡೋಣ ಅಂದ.
ಅರೇ.. ಹೌದಲ್ವಾ.. ಎನ್ನಿಸಿ , ' ಅಮ್ಮಾ ನಾನು ಸುಧಿ ಮನೇಗೇ ಆಡ್ಲಿಕ್ಕೆ ಹೋಗ್ತೀನಿ ಅಂತ ಹೊರಟೇ ಬಿಟ್ಟೆ.
ಎಷ್ಟು ಚಂದ ಬರೀತೀರೀ ಅನಿತಕ್ಕಾ... ಈ ಕತೆಯ ಮೂಲಕ ನಮ್ಮ ಬಾಲ್ಯವನ್ನ ನೆನಪಿಸ್ತೀರಿ... ನಿಮಗೆ ಸುಭಗವಾದ, ಆಕರ್ಷಕವಾದ ಶೈಲಿ ಒಲಿದಿದೆ. ಇಂಥ ರಸದೂಟ ನಮಗೆ ಸತತ ಸಿಗಲಿ. ಅಭಿನಂದನೆಗಳು.
ReplyDeleteಒಂದು ಮಗುವಿನ ಕಣ್ಣಿಂದ ಚಿತ್ರಿಸಿರುವುದರಿಂದ ಪುಟ್ಟದೊಂದು ಘಟನೆಗೆ ಸಹಜವಾದ ಮುಗ್ಧತೆ ಪ್ರಾಪ್ತವಾಗಿದೆ...ಭಾಷೆ ಇನ್ನಷ್ಟು ಮಗುವಿನ ವಯೋಮಾನಕ್ಕೆ ಅನುಗುಣವಾಗಿ ಬರಬೇಕಾಗಿತ್ತು ಅನಿಸಿತು. (ಬೆಳಿಗ್ಗೆ ಅನ್ನುವುದನ್ನು ಬೆಳಗ್ಗೆ ಎಂದು ಬರೆಯುವುದು ಒಳ್ಳೆಯದು. ಬೆಳಕು>ಬೆಳಗು>ಬೆಳಗ್ಗೆ). ಬರೆವಣಿಗೆ ಕಾಯಕ ಹೀಗೆಯೇ ಮುಂದುವರಿಯಲಿ..:)
ReplyDeleteಲೇಖನ ಸೊಗಸಾಗಿದೆ. ಮಕ್ಕಳ ಅನುಭವವನ್ನು ಅನುಭವಿಸಿ ಬರೆದಿದ್ದೀರಿ. ನಾವೂ ಮಕ್ಕಳಾಗಿಯೇ ಈ ಲೇಖನ ಓದಿದಾಗ ಚೆನ್ನಾಗಿ ಅರ್ಥ ಆಗುತ್ತದೆ.ನಿಮಗೆ ಅಭಿನಂದನೆಗಳು.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
superb :)
ReplyDeleteನನ್ನ ಬಾಲ್ಯದ ದಿನಗಳು ಕಣ್ಮುಂದೆ ಹಾದುಹೋಗುವ ಹಾಗೆ ಮಾಡಿದ ಬರಹ. ಮೊದಮೊದಲು ದೊಡ್ಡವನಾಗಿ ಓದಲು ಕಷ್ಟವೆನಿಸಿದರೂ, ಮಗುವಾಗಿ ಓದಿದಾಗ ಆಪ್ತವೆನಿಸಿತು. ಟಿಪಿಕಲ್ ಅನಿತಕ್ಕ :D
Deleteಹ್ಹ ಹ್ಹ ಹ್ಹಾ..:-D ನನ್ನನ್ನೇ ಆ ಪುಟ್ಟ ಹುಡುಗನಲ್ಲಿ ಹುಡುಕುತಿದ್ದೆ. ಬಹಳ ಸೊಗಸಾದ ನಿರೂಪಣೆ. ನನ್ನ ಬಾಲ್ಯದ ನೆನಪುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ನಮ್ಮ ಊರಿನಲ್ಲಿ ಕಬ್ಬು ತುಂಬಾ ಬೆಳೆಯುತ್ತಾರೆ. ನನಗೆ ಆಲೇ ಮನೆಯ ಬೆಲ್ಲವೆಂದರೆ ಪಂಚಪ್ರಾಣ. ನಮ್ಮ ಅಪ್ಪಾಜಿ ಕಬ್ಬಿನ ವ್ಯವಹಾರದ ಬಗ್ಗೆ ಮಾತನಾಡಲು ಶಂಕ್ರಣ್ಣನ ಆಲೇ ಮನೆಗೆ ಹೋಗುವಾಗೆಲ್ಲಾ ನಾನೂ ಜೊತೆಗೆ ಹೋಗುತ್ತಿದ್ದೆ. ಅತ್ತ ಕಡೆಯಿಂದ ಅವರಲ್ಲಿ ಕೇಳಿ ಆಗ ತಾನೆ ಮಾಡಿದ ಬಿಸಿಬಿಸಿ ಬೆಲ್ಲ ತರಬಹುದೆಂದ! ಹಾಗೆ ಬಹಳಷ್ಟು ಬೆಲ್ಲ ತಿಂದು ಹೊಟ್ಟೆ ನೋವಿನಿಂದ ನರಳುವಾಗ, ಅಮ್ಮ ಸರಿಯಾಗು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಳು! ನಾನು ಆ ನೋವನ್ನು ತಾಳದೆ ದೇವರ ಇದೊಂದು ಸಲ ನೋವು ಮಾಯ ಆಗ್ಬಿಡ್ಲಿ ಇನ್ನೊಂದ್ಸಲ ಬೆಲ್ಲ ತಿನ್ನಲ್ಲ ಅಂತಿದ್ದೆ. ಆದ್ರೆ ನೋವು ವಾಸಿಯಾದ ಮೇಲೆ ಮತ್ತದೇ ಚಾಳಿ! ಚೆನ್ನಾಗಿದೆ ಬರಹ ಅನೀತಕ್ಕ. :)
ReplyDeleteನಿಮ್ಮ ಲೇಖನದಿಂದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತಾಯಿತು... ಬದುಕಿಗೆ ಹತ್ತಿರವಾಗಿ ಸಾಗುತ್ತದೆ ನಿಮ್ಮ ಈ ಲೇಖನ, ಆ ಬಾಲ್ಯ ಇಂದಿನ ಮಕ್ಕಳಲ್ಲಿ ನೋಡಲು ಸಾಧ್ಯವಿಲ್ಲವೇನೋ... ಸುಂದರವಾದ ಬಾಲ್ಯದ ನೆನಪುಗಳು... ಒಂದೊಂದು ಬಾರಿ ನನಗೆ ಅನ್ನಿಸಿದಂಟು ಆಯಾಯ ವಯಸ್ಸಿನಲ್ಲಿ ಕಳೆದ ಬದುಕು ಎಲ್ಲರದ್ದು ಒಂದೆ ರೀತಿಯ ಆಜುಬಾಜಿನಲ್ಲಿರುತ್ತವೆಯೇನೋ ? ಪ್ರತಿಯೊಂದು ಚಿತ್ರಣವು ಮತ್ತೊಬ್ಬರ ಬದುಕಿನಲ್ಲಿಯು ಘಟಿಸಿದ್ದಾಗಿರುತ್ತದೆ... ಬದುಕೇ ಹಾಗೆಯೇ ಅಥವಾ ಅದು ಕಾಲದ ಮಹಿಮೆಯೋ ಏನೋ ಒಂದು ಅರಿಯಲಾರೆವು... ಮನೆಯವರ ಕಣ್ತಪ್ಪಿಸಿ ಅದೆಷ್ಟೋ ಬಗೆಯ ಸಂತೋಷಗಳನ್ನು ಪಡೆದಿದ್ದೇವೆಯೋ,,, ಓದು ಅದು ಅಲರ್ಜಿ,,, ಇಂದು ವ್ಯಾಪಾರೀಕರಣವಾಗುತ್ತಿದೆಯೇನೋ
ReplyDeletehey.. attitta addaadtaa sumne yeno geechidroo ondu chandada kathe agi bidattalla ..en putti nin kaiyyalli magic ideya? :))
ReplyDeletehaha....:) anitakka tumbaa channaagide kathe... omme nanna shaleya dinagaLU nenapaadavu. aadare naanu yavattu heege maadiralilla....:p
ReplyDelete