Pages

Total Visitors

Sunday, November 25, 2012

ಪೂತನಿ


ನನ್ನ ಹೆಸರೇನೆಂದು ಕೇಳಿದಿರಾ..ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನು .. ಹಾಗಾಗಿಯೇ ಕಂಸ ಮಹಾರಾಜನ ಊಳಿಗದವಳಾದರೂ ನನಗಿಷ್ಟು ಮರ್ಯಾದೆ.. ನನ್ನನ್ನು ಹೆಸರೆತ್ತಿ ಕರೆಯುವ ಧಾರ್ಷ್ಟ್ಯ ಯಾರಿಗಿದ್ದೀತು..?! 

ಮಹಾರಾಜನಿಗೆ ನಾನೆಂದರೆ ಅತೀವ ಪ್ರೀತಿ.. ಅವನ ಆಪ್ತರಲ್ಲಿ ಆಪ್ತಳು ನಾನು. ಈಗೇಕೋ ಕಂದಿದ ಅವನ ಮೊಗದಲ್ಲಿ ಮೊದಲಿನ ಗೆಲುವಿಲ್ಲ.. ರಾಜರೆಂದರೆ ಹಾಗೆ, ಬಗಲಲ್ಲೇ ಚುಚ್ಚುವ ಚೂರಿ.. ನೂಲಿನ ಏಣಿಯಲ್ಲೇ ನಡಿಗೆ.. ಒಂದಿಷ್ಟು ಎಚ್ಚರ ತಪ್ಪಿದರೂ ಮತ್ತೆ ಅವನಿಲ್ಲ. ಸಿಂಹಾಸನಕ್ಕೇನು? ಅದು ಜಢ ವಸ್ತು ತಾನೇ.. ಯಾರು ತನ್ನನ್ನೇರಿದರೂ ಕೂರಲು ಅನುವೀಯುತ್ತದೆ. ಈ ತೂಕ ತಪ್ಪಿದ ರಾಜಕಾರಣದಲ್ಲಿ ನಾನೂ ಒಂದು ಭಾಗ.. ಎಷ್ಟೋ ಜನ ವೀರಾಧಿವೀರರನ್ನು ನನ್ನ ಸೊಬಗಿನರಮನೆಯಲ್ಲಿ ಬಂಧಿಸಿ ಮೇಲಿನ ಲೋಕಕ್ಕೆ ಕಳುಹಿಸಿದವಳು ನಾನು.. ನನ್ನ ಈ ಸೊಬಗು , ಈ ವಿಲಾಸ, ಈ ಲಾಸ್ಯ ಇರುವುದೆಲ್ಲ ಬಾಹ್ಯ ನೋಟದ ನಿಲುಮೆ. ನನ್ನನ್ನು ಅಪ್ಪಿಕೊಳ್ಳುವುದೂ, ಒಪ್ಪಿಕೊಳ್ಳುವುದೂ ಯಾರಿಂದಲೂ ಸಾಧ್ಯವಿಲ್ಲ.. ಯಾಕೆ ಗೊತ್ತೇ.. ನಾನು ವಿಷಕನ್ಯೆ.. 'ಪೂತನಿ'. 

ಎಲ್ಲಾ ರಕ್ಕಸಿಯರಿಗೂ ಹೊರಗಿನಿಂದ ಘೋರರೂಪವಾದರೆ, ನಾನು ಒಳಗೇ ಕ್ರೂರತೆಯನ್ನು ಧರಿಸಿದವಳು..! ನನಗಾಗಿಯಲ್ಲ.. ನನ್ನೊಡೆಯನಿಗಾಗಿ ! 

ಇಂದು ಮತ್ತೆ ಕರೆ ಬಂದಿದೆ ಅರಸನಿಂದ.. ಅದೂ ಅತಿ ರಹಸ್ಯವಾಗಿ.. ಅಂದರೆ ಯಾರೋ ಯಮನಾಲಯಕ್ಕೆ ತೆರಳುವ ಆತುರದಲ್ಲಿ  ಇದ್ದಾರೆ ಎಂದೇ ಅರ್ಥ. ನನಗೂ ಈ ಕೊಲ್ಲುವ ಆಟ ಈ ವಿನೋದವೆನಿಸುತ್ತದೆ. ಸುಂದರ ಜಿಂಕೆ ಎಂದುಕೊಂಡು ನನ್ನೆಡೆಗೆ ತಮ್ಮೆಲ್ಲ ವ್ಯಾಘ್ರ ಕಾಮನೆಯನ್ನು ಹರಿಯಬಿಡುವಾಗ ಹರಿಣವೇ ಹುಲಿಯಾಗಿ ಅವರನ್ನು ಬೇಟೆ ಆಡುವುದೆಂದರೆ..  ಅಧರ ಮಧುವನ್ನು ಅಮೃತವೆಂದೇ ತಿಳಿದು ಕುಡಿಯುವ ಆತುರದಲ್ಲಿರುವಾಗಲೇ ಅವನು ಈ ಲೋಕ ತೊರೆದು ಸುರಕನ್ನೆಯರ ತೋಳ್ತೆಕ್ಕೆ ಸೇರಿ ಆಗಿರುತ್ತದೆ.
.. ಆಹಾ ಎಂತಹ ಸುಖ.. ಹೌದೂ.. ಸುಖವೆಂದರೆ ಇದುವೆಯೇ..? ನಿಜವಾಗಿಯೂ ನಾನು ಈ ಆಟದಲ್ಲಿ ಅಷ್ಟು ಸುಖ ಕಾಣುತ್ತಿದ್ದೇನೆಯೇ..? ಸುಖ ಕೊಟ್ಟು ತೆಗೆದುಕೊಳ್ಳುವುದರಲ್ಲಿ ಇರುತ್ತದಂತೆ.. ನಾನು ಕೊಡುವುದನ್ನು ಸ್ವೀಕರಿಸುವವನು ಅರೆಕ್ಷಣದಲ್ಲಿ ಜೀವ ಕಳೆದುಕೊಳ್ಳುತ್ತಾನೆಂದರೆ ನಾನು ಕೊಡುವುದೇನನ್ನು..!!
ಹುಂ.. ಈ ಬಾರಿ ಯಾರ ಸರದಿಯೋ.. ಯಾರಾದರೇನು ನನ್ನನ್ನು ಕೂಡಿದ ಮೇಲೆ ಇಲ್ಲವಾಗುತ್ತಾನೆ.. 

ಕಂಸನರಮನೆಗೆ ಹೋಗುವುದೇನೋ ಸರಿ.. ಶೃಂಗಾರ ಬೇಡವೇ..ಯಾರಲ್ಲಿ.. ದಾಸಿ.. ಈ ಜೊಂಪೆ ಕೂದಲ್ಲನ್ನಿಷ್ಟು ಎತ್ತಿ ಕಟ್ಟು.. ಅದೋ ಅಲ್ಲಿ ಅರಳಿ ಪರಿಮಳಿಸುವ ಹೂವನ್ನು ನನ್ನ ತುರುಬಿಗೆ ಮುಡಿಸು.. ಹೂಂ.. ಅರೇ ಇದೇನಿದು.. ಹೂವು ನನ್ನ ಸಂಪರ್ಕಕ್ಕೆ ಬಂದೊಡನೆ ಬಾಡಿ ಬಸವಳಿಯುತ್ತದೆ.. ಥತ್.. ಬಿಸುಡಾಚೆ.. ಇಲ್ಲವೇ ಅಲ್ಲಿ ಮುತ್ತು ರತ್ನ ಹವಳದಾಭರಣಗಳು.. ತೂಗಿಬಿಡು ನನ್ನ ಹೆರಳಲ್ಲಿ.. ಹೊಳೆಯಲಿ ನಕ್ಷತ್ರದಂತೆ.. ನೋಡೇ ಇಲ್ಲಿ .. ಈ ಸುಕ್ಕಾದ ಸೆರಗನ್ನಿಷ್ಟು ಸರಿ ಪಡಿಸು.. ಈ ಕಣ್ಣ ಕಾಡಿಗೆ ತುಸು ಹೆಚ್ಚೆನಿಸುತ್ತಿದೆ.. ಸ್ವಲ್ಪ ತೆಗೆದು ಬಿಡೇ.. ಅದೇಕೆ ಅಷ್ಟು ದೂರದಲ್ಲಿ ನಿಂತಿದ್ದೀಯ.. ಓಹೋ .. ನಿನಗೂ ಜೀವಭಯ .. ಹ್ಹ ಹ್ಹ .. ಹೋಗು ನನ್ನೆದುರು ನಿಲ್ಲಬೇಡ.. ತೊಲಗಾಚೆ .. 

 ಕನ್ನಡಿಯಲ್ಲಿರುವ ನನ್ನ ಬಿಂಭ ಅದೆಷ್ಟು ಮನೋಹರ.. ನೋಡುತ್ತಲೇ ಇರುವಾಸೆ.. ಓಹ್.. ಅರಸನ ಅಪ್ಪಣೆ ಅವಸರದ್ದೇ ಇದ್ದಿತ್ತಲ್ಲವೇ.. 

ಇಂದವನು ಹೇಳಿದ್ದೇನು.. ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಅರಸನ ಮೃತ್ಯುರೂಪಿ ಶಿಶು ಬೃಂದಾವನದಲ್ಲಿ ಬೆಳೆಯುತ್ತಿದೆಯಂತೆ.. ಎಷ್ಟು ಸಮಯವಾಯ್ತು ಈ ಸುದ್ಧಿ ತಿಳಿಯಲು.. ಅಂದೊಮ್ಮೆ ಆ ಹೊತ್ತಿನಲ್ಲಿ ಜನಿಸಿದ್ದ ಕಂಡ ಕಂಡ ಶಿಶುಗಳನ್ನೆಲ್ಲ  ವಿಷವೂಡಿ ಕೊಂದಿದ್ದೆ.. ನನ್ನ ಹಾಲಿನಿಂದ ಎಷ್ಟು ವಂಶಗಳು ನಿರ್ನಾಮವಾದವೇನೋ..? ಲೆಕ್ಕವಿಟ್ಟವರಾರು.. ನಾನು ಅರಸನ ಆಯುಧ.. ಆಯುಧಕ್ಕೆ ಪಾಪ ಪುಣ್ಯಗಳ ಚಿಂತೆಯೇಕೆ..

ನಾನು ಮೆಟ್ಟಿದ ಮಣ್ಣೀಗ ಹೊಸ ಊರಿನದ್ದು.. ಅರೇ.. ಎಂತಹ ಸುಂದರ ನಗರಿಯಿದು..ಎಲ್ಲೆಲ್ಲಿಯೂ ಹಸಿರುಟ್ಟ ಭೂಸಿರಿ.. ಗೋವುಗಳ ಕೊರಳ ಘಂಟೆಯುಲಿ.. ಆಹಾ ಮರುಳಾಗುತಿದ್ದೇನೆ.. ಹಾಡಿ ಕುಣಿಯುವ ಇಲ್ಲಿನ ಜನರೆಲ್ಲ ಎಂತಹ ಸೊಬಗನ್ನು ಹೊತ್ತಿದ್ದಾರೆ..!! ನನಗರಿವಿಲ್ಲದ ಸಂಚಲನ ಎದೆಯೊಳಗೆ.. ಏನಿರಬಹುದು.. ?? 

ಹುಂ.. ಇರುವುದೇನು.. ನನ್ನರಸನ ವೈರಿ ಇಲ್ಲೇ ಎಲ್ಲೋ ಅಡಗಿದ್ದಾನೆ.. ಹುಡುಕಬೇಕವನ.. 

ಅದೋ ಅಲ್ಲಿ ಹೆಂಗಳೆಯರ ಗುಂಪು ಹಾಲ ಕೊಡವನ್ನು ತುಳುಕಿಸುತ್ತಾ ಹೋಗುತ್ತಿರುವುದೆಲ್ಲಿಗೆ.. ಹಿಂಬಾಲಿಸಿದರೆ ತಿಳಿದೀತು.. ಹೋ.. ಇವರೆಲ್ಲರ ಗಮನವೂ ಅತ್ತ ಕಡೆಗೆ .. ನಂದನರಮನೆಗೆ.. ನನ್ನ ಗಮ್ಯವೂ ಅದೇ ತಾನೇ.. ತೊಟ್ಟಿಲಿನಲ್ಲಿ ಮಲಗಿ ಕನಸು ಕಾಣುತ್ತಿರಬಹುದು ಅ ಮಗು.. ಪಾಪ ಇನ್ನೆಷ್ಟು ಹೊತ್ತಿದೆ ಅವನಿಗೆ ಭುವಿಯ ಋಣ..

ಗುಂಪಿನೊಳಗೊಂದಾಗಿ ಮನೆಯನ್ನು ಸೇರುವುದೇ ಒಳ್ಳೆಯದು.. ಅಬ್ಬಬ್ಬಾ ತೊಟ್ಟಿಲಿನ ಸುತ್ತ ಅದೆಷ್ಟು ಹೆಂಗಳೆಯರು.. ಇದೇ ಮಗುವಿರಬೇಕು.. ಛೇ.. ಒಂದಿಷ್ಟು ಮುಖ ದರ್ಶನವಾಗಬಾರದೇ..? ಬಂಗಾರದ ತೊಟ್ಟಿಲಲ್ಲಿ ಮಲಗಿದ ಶಿಶುವಿನ ಕೇಕೆ ಕೇಳಿಸುತ್ತಿದೆ.. ಆಹಾ.. ಸಂಗೀತದಿಂಪು.. 

ಅಬ್ಬಬ್ಬಾ .. ಎಂತಹ ಚೆಲುವಿದು.. ಮೋಹಕ ಮುಂಗುರುಳು.. ಅತ್ತಿತ್ತ ಮಿಂಚನ್ನೆಸೆಯುತ್ತಾ ಸುಳಿವ ಕಣ್ಣುಗಳು.. ಹೂದಳಗಳಂತಿರುವ ತುಟಿಗಳು.. ಯಾವ ಶಿಲ್ಪಿ ಕಟೆದನೇನೋ.. ಮನಸೋಲುತ್ತಿದೆ.. ಅರರೇ.. ಈ ನೀಲವರ್ಣ..ನನ್ನೊಳಗಿನ ಹಾಲಾಹಲವೇ ಬಣ್ಣವೆತ್ತಂತೇ.. ಯಾರಿವನು.. !!

ಎಲ್ಲಾ ಹೆಂಗಳೆಯರೂ ಎತ್ತಲೋ ಹೋದರು.. ಇದುವೇ ಸುಸಮಯ.. ಎತ್ತಿ ಹಾಲೂಡಿಸುತ್ತೇನೆ.. ಯಾಕಿಂದು ಮನಸ್ಸಿಗೆ ಹೊಸ ಅನುಭವ.. ಮೊದಲೆಷ್ಟು ಶಿಶುಗಳನ್ನೆತ್ತಿ ಹಾಲೂಡಿಸಿದಾಗಲೂ ಹೀಗಾಗಿರಲಿಲ್ಲ..ಆಹ್.. ಇವನ ಸ್ಪರ್ಷವೇ ಎಷ್ಟು ಸಂತಸದಾಯಕ.. ದಿನಾ ಇವನನ್ನೆತ್ತಿ ಎದೆಗಪ್ಪಿ ಹಾಲೂಡುವ ಯಶೋದೆ ಅದೆಷ್ಟು ಪುಣ್ಯ ಮಾಡಿದ್ದಳೇನೋ.. ಬಟ್ಟಲುಗಣ್ಣುಗಳಲ್ಲಿ ತುಂಟತನ.. ಒಂದಿಷ್ಟು ಅಳುಕಿಲ್ಲ.. ಕಿಲ ಕಿಲ ನಗು.. ಕೊಲ್ಲಲೇ ಮನಸ್ಸಿಲ್ಲ.. ಬಿಟ್ಟು ಹೋಗಿಬಿಡಲೇ.. ಬದುಕಿಕೊಳ್ಳಲಿ.. 

ಹೇಗೆ ಹೋಗಲಿ.. ಅನ್ನದ ಹಂಗು ಕಟ್ಟಿ ಹಾಕುತ್ತಿದೆ ನನ್ನನ್ನು..

 ಅರೆರೆ.. ಹಸಿವಾಗಿರಬೇಕು .. ನಾನೆತ್ತಿದ ಕೂಡಲೇ ಅವನ ತುಟಿಗಳು ಹಾಲನ್ನರಸುತ್ತಿದೆ.. ಅಬ್ಬಾ ಏನು ಆತುರ ಈ ಪೋರನಿಗೆ.. ಎಷ್ಟೊಂದು ಕಾಡುತ್ತಾನೆ.. ಹೀರಿಬಿಡೋ.. ನನ್ನೊಳಗಿನ ಅಷ್ಟೂ ಅಮೃತವೂ ನಿನ್ನದೇ..


 ನಿಲ್ಲು ನಿಲ್ಲು.. ಅಮೃತವೆಂದೆನೇ.. ವಿಷವಲ್ಲವೇ ಇದು.. ಓಹ್.. ಇವನೇನನ್ನು ನನ್ನೊಳಗಿನಿಂದ ಹೀರುತ್ತಿರುವುದು..? ಹಾಲೆಲ್ಲ ಬರಿದಾಗಿ ಜೋತುಬಿದ್ದರೂ ಇನ್ನೂ ಏನನ್ನೋ ಹುಡುಕಾಡುತ್ತಿದ್ದಾನೆ..

ಆಹ್.. ಏನಿದು ನೋವು.. ಸಂಕಟ.. ನನಗೂ ನೋವಾಗಿದ್ದಿದೆಯೇ.. ಇತ್ತು ಈಗಲ್ಲ.. ಚೂರು ಚೂರು ವಿಷವನ್ನೇ ಆಹಾರವಾಗಿಸಿ ಒಡಲೊಳಗೆ ಸೇರಿಸಿಕೊಳ್ಳುತ್ತಿರುವಾಗಿನ ಯಾತನೆ ಇದು.. ಮತ್ತೇಕಿಂದು ಮರುಕಳಿಸುತ್ತಿದೆ..?? ಹಾಲು ಬರಿದಾಗಿದೆ.. ಇನ್ನುಳಿದುದು ಹಾಲಾಹಲ.. ಅಂದರೆ..ಅದನ್ನು ಹೀರಿಯೂ ಅರಗಿಸಿಕೊಳ್ಳಬಲ್ಲವನಿವನು..!! 

ಇನ್ನೇನಾಗಬಹುದು.. ಸಾವು ಬರಬಹುದು.. ಶಿಶುವನ್ನತ್ತ ಎತ್ತಿ ಬಿಸುಟು ಹೋಗಲೇ..? 

ಹೋದರೆ ಕಾರ್ಯ ಸಾಧಿಸದೇ ಬಂದ  ನನ್ನನ್ನು ರಾಜನೆಂದಾದರು ಬರ ಮಾಡಿಕೊಳ್ಳುತ್ತಾನೆಯೇ..? ಅವನ ಕೈಯಲ್ಲಿ ಸಾವು ಬರುವುದಕ್ಕಿಂತ ಇಲ್ಲೇ ಬಂದರೆ ಎಷ್ಟು ಚೆನ್ನ..!! 

ಅರೆಗಳಿಗೆಯಾದರೂ ನನ್ನೆದೆ ಬಡಿತದ ಸದ್ದು ಮಗುವಿನರಿವಿಗೂ ಬಂದಿರಬಹುದಲ್ಲ..! 

ಮಗುವೇ.. ಅಲ್ಲ.. ನನ್ನೆಲ್ಲ ನೋವುಗಳಿಗೂ ಕೊನೆ ಕಾಣಿಸಲು ಬಂದ ದೇವ.. ಯಾರಿಗಿದೆ ಈ ಭಾಗ್ಯ.. ಜನ್ಮ ಸಾರ್ಥಕವಾಯಿತು..ಯಾವುದು ಪರಮ ಸುಖವೋ, ಅದನ್ನು ಪಡೆದ ಮೇಲೆ ಅದಕ್ಕಿಂತ ಹಿರಿದಾದ ಬದುಕಿದೆಯೇ.. ಮೋಕ್ಷವನ್ನೇ ಕರುಣಿಸು ನನಗೆ.. ಎಷ್ಟು ಜನ್ಮಗಳ ಪುಣ್ಯ ಸಂಚಯವಿತ್ತೇನೋ  ನನ್ನ ಬಳಿ.. ನಿನ್ನನ್ನು ಹೀಗೆ ಮಡಿಲೊಳಗಿಟ್ಟು ನಿನ್ನೊಳಗೆ ಐಕ್ಯವಾಗುವ ಪ್ರಾಣ.. ಸಾಕೆಂದು ಹೇಳುವುದಿಲ್ಲ .. ನಿಲ್ಲಿಸಬೇಡ.. ಹೀರಿಬಿಡು..ಎಲ್ಲವನ್ನೂ .. ಸೇರಿಸಿಕೋ ನನ್ನುಸಿರನ್ನು.. !! 

10 comments:

  1. nanage tumbaa ishta aada kathegalallondu...

    ReplyDelete
  2. ಪೂತನೀ ಎಂಬ ಪೌರಾಣಿಕ ಪಾತ್ರದೊಳಗಿಂದ ಕಲ್ಪನೆ ಹರಿಸಲ್ಪಟ್ಟಿದೆ. ಕೆಲವೊಮ್ಮೆ ಈ ವ್ಯಕ್ತಿತ್ವದ ಬಗ್ಗೆ ಅನಿಸಿದ್ದಿದೆ. ಇದೊಂದು ಪ್ರಕೃತಿಯ ಸಂಕೇತ. ಇಲ್ಲಿ ವಿಷದ ಹಾಲು ಅಂದರೆ ಹಾಲಹಲವೂ ಇದೆ. ಕ್ಷೀರಾಮೃತವೂ ಇದೆ. ಕ್ಷೀರಾಮೃತದ ಅತಿಯಾದ ಸೇವನೆಯೋ ಅತಿಯಾದ ಬಳಕೆಯಿಂದ ಕೊನೆಯಲ್ಲಿ ಹಾಲ ಹಲವೇ ಉಳಿದಿದೆ. ತುಲ್ಯವಾಗಿರಬೇಕದವುಗಳ ಅಸಮತೋಲನ ಈ ಪಾತ್ರದ ಅಂತ್ಯದಲ್ಲಿ ಕಂಡಹಾಗೆ... ಭಗವಂತನೇನೋ ಹಾಲನ್ನೂ ಹೀರಿ ಹಾಲಹಲವನ್ನೂ ಮುಗಿಸಿ ಪೂತನಿಗೆ ಮೋಕ್ಷವನ್ನು ಕರುಣಿಸಿದ.. ಆದರೆ ಪ್ರಕೃತಿಯ ಅಮೃತವನ್ನು ಹೀರುತ್ತಾ ಇದ್ದೇವೆ.. ಅದೆಲ್ಲಿವರೆಗೋ ಕೊನೆಯಲ್ಲಿ ಮೋಕ್ಷ ಸಿಗದ ಫೂತನಿಯ ಆವೇಶ ಹೇಗಿರಬಹುದು?

    ReplyDelete
  3. tumba channagi barediddira nita. nimma language sogasaagide. keep it up.

    ReplyDelete
  4. ಪೂತನಿಯ ಅಂತರಂಗದ ಅನಿಸಿಕೆ-ತುಮುಲ ಸರಿಯಾಗಿಯೇ ಮೂಡಿಬಂದಿದೆ. ’ಊಳಿಗದವಳಾದರೂ ನನಗೆಷ್ಟು ಮರ್ಯಾದೆ!’, ’ಆಯುಧಕ್ಕೆ ಪಾಪಪುಣ್ಯಗಳ ಚಿಂತೆಯೇಕೆ?’, ’ಕಾರ್ಯ ಸಾಧಿಸದೇ ಬಂದ ನನ್ನನ್ನು ರಾಜ ಬರಮಾಡಿಕೊಳ್ಳುತ್ತಾನೆಯೇ?’ ಮುಂತಾದ ವಾಕ್ಯಗಳು ಅರ್ಥಗರ್ಭಿತವಾಗಿವೆ. ಈ ಪಾತ್ರವನ್ನು ಇವತ್ತಿನ ಸಂದರ್ಭಕ್ಕೆ ಅನ್ವಯಿಸಲು ಸಾಧ್ಯವಾದರೆ ನಿಜವಾಗಿಯೂ ಸುಂದರ ಬರೆವಣಿಗೆಯಾದೀತು. ಅಭಿನಂದನೆಗಳು.
    ಡಾ.ವಸಂತಕುಮಾರ ಪೆರ್ಲ, ಮಂಗಳೂರು.

    ReplyDelete
  5. ನಿಮ್ಮ ಲೇಖನ ನಿರಾಯಾಸವಾಗಿ ಓದಿಸಿಕೊಂಡು ಹೋಗುವುದು. ಬಣ್ಣದ ಬದುಕಿದ್ದು.... "ಒಂದಿಷ್ಟು ಎಚ್ಚರ ತಪ್ಪಿದರೂ ಮತ್ತೆ ಅವನಿಲ್ಲ. ಸಿಂಹಾಸನಕ್ಕೇನು? ಅದು ಜಢ ವಸ್ತು ತಾನೇ.. ಯಾರು ತನ್ನನ್ನೇರಿದರೂ ಕೂರಲು ಅನುವೀಯುತ್ತದೆ. ಈ ತೂಕ ತಪ್ಪಿದ ರಾಜಕಾರಣದಲ್ಲಿ ನಾನೂ ಒಂದು ಭಾಗ.. ಎಷ್ಟೋ ಜನ ವೀರಾಧಿವೀರರನ್ನು ನನ್ನ ಸೊಬಗಿನರಮನೆಯಲ್ಲಿ ಬಂಧಿಸಿ ಮೇಲಿನ ಲೋಕಕ್ಕೆ ಕಳುಹಿಸಿದವಳು ನಾನು.. ನನ್ನ ಈ ಸೊಬಗು, ಈ ವಿಲಾಸ, ಈ ಲಾಸ್ಯ ಇರುವುದೆಲ್ಲ ಬಾಹ್ಯ ನೋಟದ ನಿಲುಮೆ. ನನ್ನನ್ನು ಅಪ್ಪಿಕೊಳ್ಳುವುದೂ, ಒಪ್ಪಿಕೊಳ್ಳುವುದೂ ಯಾರಿಂದಲೂ ಸಾಧ್ಯವಿಲ್ಲ.." ನನಗೆ ಇಷ್ಟವಾದ ಸಾಲುಗಳಿವು... ಅರ್ಥಪೂರ್ಣವಾದ ಬದುಕಿನರಮನೆಯನ್ನು ಇಲ್ಲಿ ಕಾಣಬಹುದು... ನಿಮ್ಮ ಲೇಖನದಲ್ಲಿ ಏನಾದರೂ ಒಂದು ವಿಶೇಷತೆ ತುಂಬಿರುತ್ತದೆ... ಚೆನ್ನಾಗಿದೆ.

    ReplyDelete
  6. ನೆಗೆಟಿವ್ ಪಾತ್ರಗಳ ಔಚಿತ್ಯವನ್ನು ಕಥೆಗಾರ ಬರೆದಲ್ಲಿಗೆ ಇತಿಶ್ರೀ ಹಾಡಿಬಿಡುತ್ತಾನೆ. ನಿಮ್ಮ ಈ ಬರಹ ಅವಳ ಅಂತರಂಗವನ್ನು ಚೆನ್ನಾಗಿ ತೆರೆದಿಟ್ಟಿದೆ.

    ReplyDelete
  7. ವಿಷಕನ್ಯೆಯಂತರಂಗದ ಒಳಹೊಕ್ಕು ಮಾತಾನಾಡಿಸಿದ್ದು ನಿಮ್ಮ ಎಂದಿನ ಶೈಲಿಗಿಂತ ವಿಭಿನ್ನ ಶೈಲಿಯೆನಿಸಿತು. ಸಮಾಪ್ತಿ ಮನಮುಟ್ಟುವಂತಿದೆ.

    ReplyDelete
  8. ಅನಿತಕ್ಕ ನಿಜಕ್ಕೂ ಈ ಕಥೆ ಬಹಳ ಇಷ್ಟವಾಯಿತು.... ದೈವತ್ವ ಹಾಗೂ ರಾಕ್ಷಸತ್ವ ಎರಡೂ ಗುಣಗಳು ಮನುಷ್ಯನಲ್ಲಿವೆ. ಅ೦ತರ೦ಗದಲ್ಲಿ ಹೆಚ್ಚೆಚ್ಚು ಹೊಕ್ಕಷ್ಟು ದೈವತ್ವನ್ನು ಪಡೇಯುತ್ತೇವೆ. ಇಲ್ಲಿ ಪೂತನಿಯೆ೦ಬ ರಾಕ್ಷಸಿ ಭಗವ೦ತನನ್ನು ಮಡಿಲಲ್ಲಿರಿಸಿಕೊ೦ಡು ಅ೦ತರ೦ಗವನ್ನು ಹೊಕ್ಕು ದೈವತ್ವದಲ್ಲಿ ಲೀನವಾಗುವುದನ್ನು ಬಹಳ ಚನ್ನಾಗಿ ವಿವರಿಸಿದ್ದೀರಿ.....:)

    ReplyDelete
  9. ಕೃಷ್ಣಾವತಾರ ಕೊನೆಯಾಗುವಾಗ ಕೃಷ್ಣ ತನ್ನ ತಾಯಂದಿರನ್ನು ನೆನೆಯುತ್ತಾನೆ ,
    ಅದರಲ್ಲಿ ಪೂತನಿಯೂ ಒಬ್ಬಳು ಅಂತ ಪ್ರೊ ಕೆ. ಎಸ್ . ನಾರಾಯಣಾಚಾರ್ಯರು
    'ಕೃಷ್ಣಾವತಾರದ ಕೊನೆಯ ಘಳಿಗೆಗಳು ' ನಲ್ಲಿ ಬರೆದಿದ್ದಾರೆ. ನಿಮ್ಮ ಬರಹ ಸೊಗಸಾಗಿದೆ

    ReplyDelete
  10. "ಹರಿಣವೇ ಹುಲಿಯಾಗಿ ಅವರನ್ನು ಬೇಟೆ ಆಡುವುದೆಂದರೆ"
    ಇಡಿ ಲೇಖನಕ್ಕೆ ಹೊಳಪು ನೀಡುವ ಸಾಲುಗಳು...ವಿಷ ಊಟ ಬಡಿಸಿದ ತಾಯಿಯ ಮನದಲ್ಲೂ ವಾತ್ಸಲ್ಯದ, ಋಣದ ಭಾವನೆಗಳು ಸೊಗಸಾಗಿ ಮೂಡಿಬಂದಿವೆ...ಸುಂದರ..ಮಹಾಭಾರತ..ಹಾಗೂ ಕೃಷ್ಣ ನನ್ನ ಮೆಚ್ಚಿನ ಕಥೆ ಹಾಗು ಪಾತ್ರಗಳು...ನಿಮ್ಮ ಲೇಖನ..ಚಿತ್ರಗಳು ಆಹಾ...ಕಣ್ಣಿಗೆ ಕಟ್ಟಿದಂತಿವೆ..

    ReplyDelete