Pages

Total Visitors

Tuesday, April 2, 2013

ಅಕ್ಕಿ ಆರಿಸುವಾಗ .......

ಅವಳದೋ ಧ್ಯಾನಸ್ಥ ಭಾವ. ಕಾಣದಿರುವುದನ್ನೇ ಕಾಣುವ ಹಂಬಲ. ಸಿಗದಿದ್ದಾಗ ಚಡಪಡಿಕೆ, ಆ  ಹುಡುಕಾಟದ ಅರಿವು  ಅವಳ ಬೆರಳುಗಳಿಗೆ ಗೊತ್ತಿತ್ತು,ಕಣ್ಣುಗಳಿಗೆ ಗೊತ್ತಿತ್ತು, ಉಣ್ಣುವ ಬಾಯಿಗಳಿಗೆ ಗೊತ್ತಿತ್ತು. ಅವಳಿಗೂ ನಿರಾಳತೆಯಿತ್ತು.  


ಮೊರದ ತುಂಬಾ ಇದ್ದ   ಬಿಳಿ ಅಕ್ಕಿ ದೂರ ನಿಂತವರಿಗೆ ಕಾಣುತ್ತಿತ್ತು. ಆದರೆ ಅವಳ ಕಣ್ಣುಗಳಿಗೆ ಅದು ಕೇವಲ ಬಿಳಿ ಹಾಸು.ಆ ನೋಟಕ್ಕೆ  ಅದು ಬೇಕಿರಲಿಲ್ಲ. . ಮತ್ತೇನೋ ಇದೆ ಎಂಬುದರ ಹುಡುಕಾಟದಲ್ಲಿ ಕಳೆಯುತ್ತಿದ್ದ ಸಮಯ. 

 ಬತ್ತ, ಕಲ್ಲು, ಹೊಟ್ಟು.. ಅಲ್ಲೆಲ್ಲೋ ಇತ್ತದು ಬೆಳ್ಳನೆಯ ಅಕ್ಕಿಯ ಮರೆಯಲ್ಲಿ.. ಕಾಣದುಳಿದೀತೇ..?? ಕಣ್ಣು ಬಯಸಿದ್ದು ಸಿಕ್ಕಾಗ ಕೈಗೆ ಅವಸರ. ಮೊಗದಲ್ಲಿ ಕಿರುನಗು.ಎಲ್ಲಿ ಅಡಗಿದರೂ  ಕಂಡು ಹಿಡಿದೆ ನಿನ್ನನ್ನು ಎಂಬ ಗೆಲುವಿನ ಭಾವ. ಸಿಕ್ಕಿದ್ದನ್ನು ಅಲ್ಲೇ ಪಕ್ಕದಲ್ಲಿರಿಸಿ ನೋಡುವ ಚಪಲ. 

 ಮತ್ತೊಮ್ಮೆ ಕಣ್ಣಿಗೆ ಕಂಡದ್ದು ಕೈಯಿಂದ ಜಾರಿ ಹೋದಾಗ ನಿರಾಶೆ. ಒಮ್ಮೆ ಜಾರಿದ್ದು ಕೂಡಾ ಹಾಗೆ ಸುಲಭದಲ್ಲಿ ಸಿಕ್ಕೀತೇ.. ಸಿಕ್ಕಿದರೂ ಇದಲ್ಲವೇನೋ..ಅದಿನ್ನೂ ಕೈಗೆ ಸಿಗಲಿಲ್ಲವೇನೋ ಎಂಬ ಒದ್ದಾಟ.. ಬೆರಳುಗಳ ಪಟ್ಟಿನಿಂದ ನುಣುಚಿ ಬೀಳುವ ಅವುಗಳ ಮೇಲೇನೋ ದ್ವೇಷ.. 

ಸಿಕ್ಕಿದ್ದನ್ನು ಹೆಕ್ಕಿದರೆ ಸಾಕೇ.. ಅಕ್ಕಿಯನ್ನು ಗಾಳಿಗೆತ್ತರಿಸಿ ಮತ್ತೆ ಮೊರದಲ್ಲಿ ತುಂಬಿಕೊಳ್ಳುವ ಆಟದಲ್ಲಿ ಕಳೆದುಹೋಗುವುದು ಒಂದಿಷ್ಟು ಪುಡಿ ದೂಳು..

 ಬೇಡದಿದ್ದುದನ್ನು ಆರಿಸಿ ಹೊರಚೆಲ್ಲುವುದೂ ಕಠಿಣ. ಬೇಕಿದ್ದದ್ದು ಮೊದಲು ಅದರೊಳಗೇ ಇತ್ತಲ್ಲ.. ಅದರಿಂದ ಹೊರ ಬಂದ ಮೇಲೆ ಒನಕೆಯ ಪೆಟ್ಟಿಗೆ  ಸಿಕ್ಕದೇ ಉಳಿದ ಅದೇ ಬತ್ತ ಈಗ ಬೇಡವಾಗಿದ್ದುದು... ಅಕ್ಕಿಯಿಂದ ಹೊರಹಾಕಬೇಕಿದ್ದುದು.  ಆ ಪೆಟ್ಟು ನೀಡುವ ನೋವಿನಿಂದ ಪಾರಾಗಿದ್ದೇ ಸುಖ ಅಂದುಕೊಂಡಿದ್ದರೆ, ಅದು ಸುಖವಾಗಿರಲೇ ಇಲ್ಲ ಎಂದು ತಿಳಿದಿದ್ದು ಈಗಲೇ..  

ಕೆಲಸ ಮುಗಿದಿತ್ತು..  ಅವಳ ಮನವೀಗ ಸ್ವತಂತ್ರ..ಕಣ್ಣುಗಳೀಗ ನಿಶ್ಚಿಂತ.. ಹೀಗೊಂದು ಧ್ಯಾನದ ಅಂತ್ಯ.. 




8 comments:

  1. ಅಮ್ಮನಿಗೆ ಅಮ್ಮನ ಕಾಯಕವೇ ಆರಾಧನೆ, ಹಾಗೆಯೇ ಎಲ್ಲಾ ಸ್ತ್ರೀಯರಿಗೂ...ಹೆಣ್ಣಿನ ಕೆಲ್ಸ ಕಾರ್ಯ ಅಮ್ಮನ ಮೂಲಕ ನೋಡಿದ ನಮಗೆ ಈ ಲೇಖನ ಮತ್ತೆ ಆ ಅಪೂರ್ವ ದೃಶ್ಯ ದರ್ಶನ ಮಾಡಿಸಿದ್ದಂತೂ ನಿಜ. ಅನಿತಾ ಸ್ಂಕ್ಷಿಪ್ತ ಆದರೂ ಸಂತೃಪ್ತ...

    ReplyDelete
  2. ಅಕ್ಕಿ ಆರಿಸುವಾಗ
    ಆಕಿ ಹೆಕ್ಕುವಳು ಕಸವ
    ಮೆಚ್ಚುಗೆಯು ನಮ್ಮದೂ
    ನಿಮ್ಮ ಬರಹಕೂ...
    ಆಕೆಯೇಕಾಗ್ರತೆಗೂ!

    ReplyDelete
  3. ಮೊದಲೇ ನನಗೆ ನರಸಿಂಹ ಸ್ವಾಮಿಗಳು ಬಲು ಇಷ್ಟ ಅವರ ಪ್ರಸಿದ್ದ ಗೀತೆ ’ಅಕ್ಕಿ ಆರಿಸುವಾಗ’. ನಿಮ್ಮ ಶೀರ್ಷಿಕೆ ಮತ್ತು ಚಿತ್ರಗಳೂ ಹೊಂದಿಕೆಯಾಗಿವೆ. ಗ್ರಾಮೀಣ ಕರ್ನಾಟಕದ ಸೊಗಡು ನಿಮ್ಮಿಂದ ನಮಗೆ ಪರಿಚಯ.

    ReplyDelete
  4. ಇದು ದಿನ ನಿತ್ಯ ನಡೆಯುವ ಕಾಯಕ.. ಆದ್ರೆ ನಾವು ಇದರಲ್ಲೇನು ಮಹಾ ಎಂದಿಕೊಂಡಿರುತ್ತೇವೆ.. ಆದರೆ ಆ ಕೆಲಸದಲ್ಲಿನ ಮಹತ್ವ ಅರಿವಾಗುವುದು ತಿನ್ನುವಾಗ ಕಸ ಕಡ್ಡಿ ಸಿಕ್ಕಿದಾಗ. ಇಂತಹ ಒಂದು ನಿತ್ಯ ಕಾಯಕವನ್ನು ಸುಂದರ ಲೇಖನವನ್ನಾಗಿ ಅರಳಿಸಿದ ತಾಕತ್ ನಿಮ್ಮ ಲೇಖನಕ್ಕೆ ಇದೆ. ಅಭಿನಂದನೆಗಳು ಮೇಡಂ ಇಷ್ಟವಾಯಿತು

    ReplyDelete
  5. A very fine write up very short and meaningful, both Beragu and this one are very meaningful. The paddy that escaped the beating and found it is happy then realised now it is not so, is avery good sentence and probably the happiness that we enjoy temporarily may not be the one in reality. The sentence that you closed is also very meaningful, about the life. Congrats. Mava.

    ReplyDelete
  6. ಆಪ್ತವಾದ ಭಾವ ....ಅಮ್ಮ ಎಂದರೆ ನೀ ...ಭಾವನೆಯ ಪ್ರತಿರೂಪ ನೀ ...
    ಇಷ್ಟವಾದ ಬರಹ

    ReplyDelete
  7. very nice one madam......

    ReplyDelete