ಅಂಗಳದ ಬದಿಯಲ್ಲಿ ಸಣ್ಣ ಹಳದಿ ಬಣ್ಣದ ಹೂವನ್ನು ಮೈ ತುಂಬಾ ಅರಳಿಸಿ, ಹಾಸಿಗೆಯಂತೆ ಕಾಣುತ್ತಿದ್ದ ಗಿಡಗಳು, ಅದಕ್ಕೆ ಮುತ್ತುತ್ತಿದ್ದ ಬಗೆ ಬಗೆಯ ಸುಂದರ ಚಿಟ್ಟೆಗಳು,ಅದನ್ನೆ ಗಮನವಿಟ್ಟು ನೋಡುತ್ತಿದ್ದ ನಂಗೆ ಹಾರಾಡುವ ಚಿಟ್ಟೆಯ ಚಿತ್ರ ಬಿಡಿಸೋದು ಸುಲಭ ಅಂತನ್ನಿಸ್ತು. ಈಗಲೇ ಸ್ಲೇಟ್ ನಲ್ಲಿ ಬಿಡಿಸಿ ನಾಳೆ ಗೆಳತಿಯರಿಗೆಲ್ಲ ತೋರಿಸಿ ಅವರನ್ನು ಅಚ್ಚರಿಗೊಳಿಸಬೇಕೆಂದುಕೊಂಡು ಒಳ ಬಂದೆ.
ಬ್ಯಾಗ್ ತೆರೆದು ಕಂಪಾಸ್ ಬಾಕ್ಸನ್ನು ಸದ್ದಾಗದಂತೆ ಮೆಲ್ಲನೆ ಮುಚ್ಚಳ ತೆಗೆದಾಗ ಮೊದಲಿಗೆ ಕಣ್ಣಿಗೆ ಬಿದ್ದಿದ್ದು ಸ್ಲೇಟಿನ ಬಣ್ಣದ ಕಡ್ಡಿ, ನರಸಿಂಹಾವತಾರದಂತೆ ಪೆನ್ನಿನ ಕೆಳಗಿನ ಭಾಗದ ಒಳ ಹೊಕ್ಕು ತಲೆ ಪೆನ್ಸಿಲ್, ದೇಹ ಪೆನ್ನು ಆಗಿರುವ ಪೆನ್ಸಿಲ್. ಅಕ್ಷರಗಳೆಲ್ಲಾ ಅಳಿಸಿಹೋದ ನಸು ಹಳದಿ ಬಣ್ಣದ, ದೊಡ್ಡಣ್ಣ ಕೊಟ್ಟ ಪುಟ್ಟ ಸ್ಕೇಲ್, ಪೆನ್ಸಿಲ್‌ನಿಂದ ಕುತ್ತಿ ಕುತ್ತಿ ಅರೆಜೀವವಾಗಿರುವ ಗಾಯಾಳು ರಬ್ಬರ್..ಅದನ್ನೆಲ್ಲಾ ಕೆಳಗಿಟ್ಟು ಅದರಡಿಯ ಪೇಪರನ್ನು ಮೆಲ್ಲನೆತ್ತಿದೆ.
ಒಂದು ಸಣ್ಣ ನವಿಲುಗರಿ,ಎರಡು ಐದು ಪೈಸೆಯ ಪಾವಲಿಗಳು, ಮತ್ತೊಂದು ಎಲೆ. ಈ ಎಲೆ ಮರಿ ಹಾಕುತ್ತೆ ಅಂತ ಗೆಳತಿ ನೈನಾ ಕೊಟ್ಟಿದ್ದಳು.ಸ್ವಲ್ಪ ಬಾಡಿ ಕಪ್ಪಗಾಗಿತ್ತು. ಆದ್ರೆ ಇನ್ನೂ ಮರಿ ಹಾಕಿರಲಿಲ್ಲ.
ನವಿಲುಗರಿ ಕೂಡಾ ಪುಸ್ತಕದ ಒಳಗಿಟ್ಟರೆ ಮರಿ ಹಾಕುತ್ತಂತೆ. ಆದ್ರೆ ಪುಸ್ತಕ ತೆರೆಯುವಾಗ ಅಮ್ಮ ನವಿಲುಗರಿ ಮತ್ತು ಮರಿ ಎಲ್ಲಾದ್ರು ಬಿದ್ದು ಹೋದರೆ ಗೊತ್ತೇ ಆಗಲ್ಲ ಅಂತ ನಾನು ಇದರೊಳಗೆ ಜೋಪಾನ ಮಾಡಿದ್ದೆ.
ಇದೆಲ್ಲ ಸರಿ .. !! ಇದರೊಳಗೆ ನಾನು ಭದ್ರವಾಗಿಟ್ಟಿದ್ದ ಬಣ್ಣದ ಕಡ್ಡಿ ಎಲ್ಲಿ ಹೋಯ್ತು? ಬ್ಯಾಗೆಲ್ಲ ಬೋರಲು ಹಾಕಿ ಹುಡುಕಿದೆ. ಉಹುಂ ..!! ಎಲ್ಲೂ ಇಲ್ಲ.
ಇನ್ನೊಬ್ಬ ಗೆಳತಿ ಜಾನಕಿಯ ಹತ್ತಿರ ತುಂಬಾ ಬೇಡಿಕೊಂಡ ಮೇಲೆ, ಅವಳ ಹತ್ತಿರ ಇದ್ದ ಉದ್ದದ ಕಡ್ಡಿಯನ್ನು ಸ್ವಲ್ಪವೇ ಸ್ವಲ್ಪ ತುಂಡು ಮಾಡಿ ಕೊಟ್ಟಿದ್ದಳು. ಇನ್ನೊಂದು ಚೂರು ಉದ್ದ ಮಾಡಿ ಕೊಡಬಹುದಾಗಿತ್ತು. ಆದ್ರೆ ಅವ್ಳು ಸ್ವಲ್ಪ ಕಂಜೂಸ್.ಜೊತೆಗೆ ಕ್ಲಾಸಲ್ಲಿ ಯಾರಿಗೂ ತೋರಿಸಬಾರದು, ಹೇಳಲೂಬಾರದು ಅಂತ ನನ್ನಿಂದ ದೇವರ ಆಣೆ ಹಾಕಿಸಿಕೊಂಡಿದ್ದಳು. ಹಾಗಾಗಿಯೇ ಅದನ್ನು ಕಂಪಾಸ್ ಬಾಕ್ಸಿನ ಅಡಿಯಲ್ಲಿಟ್ಟಿದ್ದೆ.
ಎಲ್ಲಿಗೆ ಹೋಯ್ತೀಗ..? ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ಳುತ್ತಿತ್ತು. ಲಂಗದ ತುದಿಯಲ್ಲೇ ಅದನ್ನು ಒರಸಿಕೊಂಡು ಮತ್ತೂ ಹುಡುಕಿದೆ. ಆದರೆ ಹುಡುಕಿದಷ್ಟೂ ಎಲ್ಲೂ ಕಾಣದೆ ಅಳು ಜೋರಾಗಿ ಉಕ್ಕಿ ಬಂತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದೆ.
ಒಳಗಿದ್ದ ಅಮ್ಮನಿಗೆ ಕೇಳಿಸಿತೇನೋ..!! ಹೊರಬಂದು 'ಏನಾಯ್ತು? ಏನಾದ್ರು ತಾಗಿಸಿಕೊಂಡ್ಯಾ' ಅಂದ್ಲು. ಇಲ್ಲ ಎಂಬಂತೆ ತಲೆ ಅಲುಗಿಸಿ ಅಳು ಮುಂದುವರಿಸಿದೆ.ನಾನು ಬ್ಯಾಗೆಲ್ಲ ಹರಡಿಕೊಂಡು ಕುಳಿತಿದ್ದನ್ನು ನೋಡಿ 'ಏನಾಯ್ತು, ಹೇಳ್ಬಾರದಾ.. ಸುಮ್ಮನೆ ಅತ್ತರೆ ಹೇಗೆ ಗೊತ್ತಾಗೋದು? ಪುನಃ ಎಲ್ಯಾದ್ರು ಮೊನ್ನೆಯ ಹಾಗೆ ಹೊಸ ಪೆನ್ಸಿಲ್ ಕಳೆದು ಹಾಕಿಕೊಂಡ್ಯಾ'..? ಅಂದಳು.
ಅಮ್ಮ ಹೇಳುವ ಈ ಮೊನ್ನೆ ಅನ್ನುವುದು ಕಳೆದು ಒಂದು ವರ್ಷ ಹೆಚ್ಚಾಗಿದೆ. ಆದರೂ ಇನ್ನೂ ನಾನ್ಯಾವತ್ತೋ ಕಳೆದುಕೊಂಡ ಪೆನ್ಸಿಲನ್ನು ನೆನಪಿಸಿ ಇನ್ನೂ ಬಯ್ಯುತ್ತಿರುತ್ತಾಳೆ. ಅದೂ ಕೂಡಾ ನಾನು ಕಳೆದುಕೊಂಡದ್ದೇನೂ ಆಗಿರಲಿಲ್ಲ. ವನಜ ತಂದುಕೊಟ್ಟ ನೇರಳೆ ಹಣ್ಣಿಗೆ ಬದಲಾಗಿ ಕೊಟ್ಟಿದ್ದು. ಮನೆಯಲ್ಲಿ ಹೇಳಿದರೆ ಅಮ್ಮ ಕೋಲು ಮುರಿಯುವಂತೆ ಹೊಡೆಯುತ್ತಾಳೆ ಎಂದು ಕಳೆದುಹೋಗಿದೆ ಎಂದಿದ್ದೆ. ಅದಕ್ಕೂ ಪೆಟ್ಟೇನೂ ಕಡಿಮೆ ಬಿದ್ದಿರಲಿಲ್ಲ.. !! ಸುಳ್ಳು ಹೇಳಬಾರದು ಅಂತ ಪ್ರತಿದಿನ ಹೇಳಿಕೊಡುತ್ತಿದ್ದ ಅಮ್ಮನಿಗೆ ನಾನು ಸುಳ್ಳು ಹೇಳಿದ್ದು ಅಂತ ಗೊತ್ತಾಗಿದ್ದರೆ ಇನ್ನೂ ಬೀಳ್ತಿತ್ತು.
ನನ್ನ ಮೌನ ನೋಡಿ,ಅಮ್ಮ ಸ್ವಲ್ಪ ದೊಡ್ದ ಸ್ವರ ಮಾಡಿ ಬೇಗ ಹೇಳು ಅಂದಳು.ಇನ್ನು ಹೇಳದಿದ್ದರೆ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದು 'ನನ್ನ ಬಣ್ಣದ ಕಡ್ಡಿ ಕಾಣ್ತಾ ಇಲ್ಲ, ಜಾನಕಿ ನಂಗೆ ಅಂತ್ಲೇ ಕೊಟ್ಟಿದ್ದು..' ಎಂದೆ ಸ್ವಲ್ಪ ಹೆದರಿಕೆಯಿಂದ. ಬೇರೆಯವರ ವಸ್ತು ತಂದರೆ ಅಮ್ಮನಿಗೆ ವಿಪರೀತ ಸಿಟ್ಟು ಬರುತ್ತಿತ್ತು.
ಆದರೆ ಇವತ್ಯಾಕೋ ಸಮಾಧಾನದ ಸ್ವರದಲ್ಲಿ, 'ಕೇಳಿದ್ರೆ ನಾನು ಹೇಳ್ತಿರಲಿಲ್ವಾ.. ಅಷ್ಟ್ಯಾಕೆ ಅಳ್ಬೇಕಿತ್ತು'..? ಅಂತ ಒಳ ನಡೆದು ನನ್ನ ಕೈಗೆ ಬಣ್ಣದ ಕಡ್ಡಿ ತಂದಿತ್ತಳು. ಒಂದಿಂಚು ಉದ್ದದ ಕಡ್ಡಿಯ ಒಂದು ಭಾಗ ಆಗಲೇ ಏನೋ ಬರೆದಂತೆ ತೆಳ್ಳಗಾಗಿತ್ತು.
ಸ್ವಲ್ಪ ಸಿಟ್ಟಿನಿಂದ ನನ್ನ ಕಡ್ಡಿ ಯಾಕೆ ತೆಗೆದಿದ್ದು ಅಂದೆ. ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯೋಕೆ ಅಂತ ತೆಗೊಂಡಿದ್ದು ಅಂದಳು. ಈಗಂತೂ ನನ್ನ ಸಿಟ್ಟು ಮೇರೆ ಮೀರಿತು. ನಾನು ಅಷ್ಟು ಕಷ್ಟ ಪಟ್ಟು ಸಂಪಾದಿಸಿದ ಬಣ್ನದ ಕಡ್ಡಿಯ ಮಹತ್ವ ತಿಳಿಯದೆ ಅದನ್ನು ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯಲು ಉಪಯೋಗಿಸಿದ್ದಾಳಲ್ಲ.. ಏನೆನ್ನಬೇಕು ಇವಳಿಗೆ..
ಇವತ್ತು ಹೇಗೂ ತಪ್ಪು ಅಮ್ಮಂದೇ ಆದ್ದರಿಂದ, 'ನೀನ್ಯಾಕೆ ನಂಗೆ ಹೇಳದೆ ತೆಗೊಂಡಿದ್ದು? ಇಷ್ಟು ಸಣ್ಣ ಮಾಡಿ ಕೊಟ್ಟಿದ್ದೀಯಾ.. ನಂಗೆ ಬೇಡಾ ಇದು .. ದೊಡ್ಡ ಮಾಡಿ ಕೊಡು' ಅಂತ ನನ್ನ ವರಸೆ ಸುರು ಮಾಡಿದೆ.
ಅಮ್ಮನಿಗೇನನ್ನಿಸಿತೋ.. ಮೆಲ್ಲನೆ ನನ್ನ ಹತ್ತಿರ ಬಂದು ನನ್ನ ಕೈಯಿಂದ ಆ ಬಣ್ಣದ ಕಡ್ಡಿಯನ್ನು ತೆಗೆದುಕೊಂಡು 'ಇದು ನಂಗೆ ಆಯ್ತು. ಇದ್ರಲ್ಲಿ ಅಂಡೆಯ ಮೇಲೆ ಬರೆದರೆ ಚೆನ್ನಾಗಿ ಕಾಣುತ್ತೆ. ಬೇಗ ಅಳಿಸಿ ಹೋಗಲ್ಲ, ನಿಂಗೆ ಅಪ್ಪನತ್ರ ದೊಡ್ಡ ಕಡ್ಡಿ ತರ್ಲಿಕ್ಕೆ ಹೇಳ್ತೀನಿ.ಅಂತ ನನ್ನ ಪೂಸಿ ಮಾಡಿದಳು.
ನಾನು ಕುಶಿಯಲ್ಲಿ ' ಹೌದಾ , ನಿಜಕ್ಕೂ ದೊಡ್ದ ಕಡ್ಡಿ ತರಕ್ಕೆ ಹೇಳ್ತೀಯಾ.. ಅಂದೆ. ಅಮ್ಮ ನನ್ನ ಅಳು ನಿಂತ ಸಮಾಧಾನದಲ್ಲಿ 'ಹುಂ, ನಿಜವಾಗಿಯೂ ಹೇಳ್ತೀನಿ ' ಅಂದು ಒಳ ನಡೆದಳು.
ಇದಾಗಿ ನಾಲ್ಕೈದು ಗ್ಯಾಸ್ ಅಂಡೆಯ ಮೇಲೆ ನನ್ನ ಬಣ್ಣದ ಕಡ್ಡಿಯಲ್ಲಿ ತಾರೀಕುಗಳು ಮೂಡಿದರೂ, ನಂಗಿನ್ನು ಹೊಸ ದೊಡ್ದ ಕಡ್ಡಿ ಬಂದಿಲ್ಲ. ಕೇಳಿದಾಗೆಲ್ಲ ಕೊಡಿಸ್ತೀನಿ ಇರು ಅಂತ ಹೇಳೋದನ್ನು ಬಿಟ್ಟಿಲ್ಲ.. ಅಮ್ಮ ಸುಳ್ಳು ಹೇಳಲ್ಲ ಅಲ್ವಾ ..
ಅಮ್ಮ ಹೇಳಿದ 8..9..ಸುಳ್ಳುಗಳು
ReplyDeleteನಿಮ್ಮ ಬರವಣಿಗೆಗೆ ಶುಭಕೋರುತ್ತಾ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನೂ ಹೇಳುತ್ತಿದ್ದೇನೆ.
ReplyDeletehmmm ! Amma sullu helalla :-) bannada kaDdI barotte kaayta iri... barowargu baritaa iri :) chennaagide anithakka :)
ReplyDeleteಬರವಣಿಗೆ ತುಂಬ ಚೆನಾಗಿದೆ ...ಹೀಗೆಯೇ ಸಾಗಲಿ
ReplyDeleteನನ್ನ ಬಾಲ್ಯವನ್ನು ಉತ್ಕಲಿಸೋ ಬಯಕೆ ತಂದಿರಿ, ಧನ್ಯವಾದಗಳು.
ReplyDeleteಬಣ್ಣದ ಕಡ್ಡಿ ಒಳ್ಳೆಯ ಬರಹ.
ಆ ಬಣ್ಣದ ಕಡ್ಡಿಯನ್ನು ಅಮ್ಮ ಕೊಡಿಸದೇ ಇರುವುದೇ ಒಳ್ಳೆಯದು. ಆ ನೆಪದಲ್ಲಾದರೂ ಅವಳನ್ನು ಪೀಡಿಸಬಹುದು ಏನಂತೀರಾ?
ಒಳ್ಳೆ ಸರಳ ಶೈಲಿ ಬರಹಗಾರರು ನೀವು. ಭೇಷ್!
ನನ್ನ ಬ್ಲಾಗಿಗೂ ಬನ್ನಿರಿ.
ಹೌದು ,ಅಮ್ಮ ಸುಳ್ಳು ಹೇಳಲ್ಲ.ಬಣ್ಣದ ಕಡ್ಡಿ ಸಿಕ್ಕೇ ಸಿಗುತ್ತೆ ..ಕಾಯ್ತಾ ಇರಿ...:):)
ReplyDeleteಅನಿತಾ ನಿಂಗೆ ಅಮ್ಮ ಬಣ್ಣದ ಕಡ್ಡಿ ಕೊಟ್ರೆ ನಂಗೂ ಬೇಕಿತ್ತು :):):)
ReplyDeleteತುಂಬಾ ಚೆನ್ನಾಗಿದೆ ಅಂತ ಬರೆದು ಬರೆದು ಬೋರ್ ಆಗಿದೆ. ಏನಾದ್ರೂ ಕೆಟ್ಟದಾಗಿ ಬರೆ. ಸರೀ ಬೈದು ಕಮ್ಮೆಂಟ್ ಹಾಕ್ತೀನಿ :):):)
ಬಣ್ಣದ ಕಡ್ದಿಯ ಗುಂಗಲ್ಲಿ ಪುಟ್ಟಕ್ಕನಿಗೆ ಹಳದಿ ಹೂಗಳ ಮೇಲೆ ಕುಳಿತ ಚಿಟ್ಟೆ ಮರೆತೇ ಹೋಯ್ತಲ್ಲ! :)
ReplyDelete