Pages

Total Visitors

Wednesday, November 9, 2011

ಯಾರು ಜೀವವೇ .. ಯಾರು ಬಂದವರು..


'ಬೇಗ ಬೇಗ ಇಳೀರಿ ...' ಎಂದು ಬಸ್ಸು ನಿಲ್ಲುವ ಮೊದಲೇ ಕಂಡಕ್ಟರ್ ಇಳಿಯಲು ಅವಸರ ಮಾಡುತ್ತಿದ್ದ. ಅವನ ಕಡೆಗೊಮ್ಮೆ ಉರಿನೋಟ ಬೀರಿ ನನ್ನ ಲಗೇಜ್ ಹೊತ್ತು ಕೆಳಗಿಳಿದೆ.ಸೂರ್ಯ ಮುಳುಗುವ ಹೊತ್ತು.. ಹಗಲು ತನ್ನ ಕೆಲಸ ಮುಗಿಸಿ ಹೊರಟು ನಿಂತಿದ್ದರೆ ಕತ್ತಲೆ ನಾಚಿಕೊಂಡ ನವವಧುವಿನಂತೆ ಮೆಲ್ಲನಡಿಯಿಡುತ್ತಿತ್ತು.

ಹೋಗಬೇಕಿದ್ದ ದಾರಿಯ ಕಡೆಗೆ ಕಣ್ಣು ಹಾಯಿಸಿದೆ. ದಟ್ಟ ಹಸಿರಿನ ವನಸಿರಿಯ ನಡುವೆ ಹಾವಿನಂತೆ ಬಳುಕಿದ ರಸ್ತೆ. ಇನ್ನು ಹೆಚ್ಚು ಕಡಿಮೆ ಒಂದು ಕಿಲೋ ಮೀಟರ್ ನಷ್ಟು ದೂರವಿತ್ತು ಗೆಳೆಯ ಶೇಖರನ ಮನೆಗೆ..

ನಾನು ಬರುವ ಬಗ್ಗೆ  ಮುಂಚಿತವಾಗಿ ಏನೂ ತಿಳಿಸಿರಲಿಲ್ಲ.ಮೊದಲೇ ಪ್ಲಾನ್ ಮಾಡಿಕೊಂಡು ಹೋಗುವುದು ನನ್ನ ಜಾಯಮಾನವಾಗಿರಲಿಲ್ಲ.ನಮ್ಮಿಬ್ಬರಲ್ಲಿದ್ದ ಆತ್ಮೀಯತೆ ಮತ್ತು  ನನ್ನ ಸ್ವಭಾವದ ಪರಿಚಯವಿದ್ದ ಶೇಖರನಿಗೂ ಈ ಅನಿರೀಕ್ಷಿತ ಭೇಟಿ ಅಪ್ರಿಯವಾಗಲಾರದೆಂದು ನನ್ನ ನಂಬಿಕೆ. 

ಕಣ್ಣನ್ನು ನಸುಗತ್ತಲೆಗೆ ಹೊಂದಿಸಿಕೊಳ್ಳುತ್ತಲೇ ಹೆಜ್ಜೆ ಹಾಕತೊಡಗಿದೆ. ನನ್ನಿಂದ ತುಸು ದೂರದಲ್ಲಿ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು. ಕತ್ತಲಲ್ಲಿ ದಾರಿ ಸವೆಸಲು ಯಾರೋ ಒಬ್ಬರು ಜೊತೆಗೆ ಸಿಕ್ಕರಲ್ಲ ಎಂದು ಸಂತಸದಲ್ಲಿ  ವೇಗವಾಗಿ ನಡೆದು ಸಮೀಪಿಸಲೆತ್ನಿಸಿದೆ. ನನ್ನ ಹೆಜ್ಜೆ ಸಪ್ಪಳಕ್ಕೆ ಮೆಲ್ಲನೆ ನನ್ನೆಡೆಗೆ ತಿರುಗಿ ನೋಡಿದ ಆ ವ್ಯಕ್ತಿಯನ್ನು ಕಂಡಾಗ ಅಚ್ಚರಿಂದ ಕಣ್ಣಗಲಿಸಿ ' ಹೇ ನೀನಾ ಶೇಖರ್' ಎಂದು ಕೂಗಿದೆ. ನನ್ನನ್ನು ಕಂಡವನ ಮೊಗದಲ್ಲಿ ಯಾವುದೇ ಅಚ್ಚರಿಯಾಗಲೀ ಸಂತಸವಾಗಲೀ ಇಲ್ಲದೆ,   ನಿರ್ವಿಕಾರಭಾವದಲ್ಲಿ 'ನಡಿ ಹೋಗೋಣ ಮನೆಗೆ' ಅಂದ.ಅವನ ಮಾತು  ನನಗೆ ತುಸು ಪೆಚ್ಚೆನಿಸಿತು.

ದಾರಿಯುದ್ದಕ್ಕೂ ಅವನ ಹಣಕಾಸಿನ ತಾಪತ್ರಯಗಳ ಬಗ್ಗೆ , ವಿದ್ಯಾಭ್ಯಾಸ ಮುಗಿದು ವರ್ಷಗಳಾಗಿದ್ದರೂ ಒಳ್ಳೆಯ ಉದ್ಯೋಗ ಸಿಗದ ಮಗನ ಬಗ್ಗೆ, ಹೆಂಡತಿಯ ಎಂದೂ ಮುಗಿಯದ ಕಾಯಿಲೆಗಳ ಬಗ್ಗೆ .. ಹೀಗೆ ಹೇಳುತ್ತಲೇ ಹೋದ. 

ನಮ್ಮ ಮನೆಗೆ ವರ್ಷದಲ್ಲಿ 2 -3 ಬಾರಿಯಾದರು ಭೇಟಿ ನೀಡುವ ಶೇಖರ್, ಬರುವಾಗೆಲ್ಲಾ ಅವನ ಹಳ್ಳಿಮನೆಯಿಂದ  ತೆಂಗಿನಕಾಯಿ,  ಹೊಲದಲ್ಲಿ ಬೆಳೆದ ತಾಜಾ ತರಕಾರಿಗಳ ಬುಟ್ಟಿಗಳ ಜೊತೆಗೇ ಆಟೋದಿಂದ ಇಳಿಯುತ್ತಿದ್ದ. ಸದಾ ತಮಾಷೆ ಮಾಡುತ್ತಾ, ಎಲ್ಲರನ್ನು ನಗಿಸುತ್ತ ಇರುವ ಇವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇಷ್ಟರವರೆಗೆ ತನ್ನ ಮನೆಯ ತಾಪತ್ರಯಗಳ ಬಗ್ಗೆ ಒಂದು ಮಾತು ಹೇಳಿದವನಲ್ಲ. ನಾನೂ ಅಷ್ಟೆ.. ಎಷ್ಟೇ ಆತ್ಮೀಯನಾಗಿದ್ದರೂ ವೈಯುಕ್ತಿಕ ಸಮಸ್ಯೆಗಳನ್ನು ವಿಚಾರಿಸಿಕೊಂಡವನಲ್ಲ. ಇಂದೇಕೊ ತದ್ವಿರುದ್ಧವಾಗಿ, ಕುಶಲ ವಿಚಾರಿಸಲು ಕೂಡ ವ್ಯವಧಾನವಿಲ್ಲದವರಂತೆ, ತನ್ನ ಸಮಸ್ಯೆಗಳ ಬಗ್ಗೆ ತೋಡಿಕೊಂಡಿದ್ದ. ಇವನ ಈ ನಡವಳಿಕೆ ನನಗೆ ತೀರ ಹೊಸದಾದ್ದರಿಂದ ನಾನು ಹೇಗೆ ಪ್ರತಿಕ್ರಯಿಸುವುದು   ಎಂದು ತಿಳಿಯದೆ ಗೊಂದಲದಲ್ಲಿ ಹೂಂಗುಡುತ್ತಾ  ಸಾಗುತ್ತಿದ್ದೆ.
ಅಷ್ಟರಲ್ಲಿ ನನಗೆ ತೀರಾ ಪರಿಚಿತವಾದ ಜುಳು ಜುಳು ಶಬ್ದ ಮಾಡುತ್ತಾ ಹರಿಯುವ ಸಣ್ಣ  ತೊರೆ ಬಂದೇ ಬಿಟ್ಟಿತು. ಅದನ್ನು ದಾಟಿ ಎರಡು ಹೆಜ್ಜೆ ನಡೆದರೆ ಶೇಖರನ ಮನೆಯ ಗೇಟ್ ಕಾಣಿಸುತ್ತಿತ್ತು. ಅಷ್ಟೊತ್ತಿಗಾಗಲೇ ಕತ್ತಲು ತನ್ನ ಸಾಮ್ರಾಜ್ಯ ವಿಸ್ತರಿಸತೊಡಗಿದ್ದರೂ, ಮರದ ಮರೆಯಿಂದ  ಇಣುಕುತ್ತಿದ್ದ ಚಂದ್ರನ ಬೆಳಕಿನಲ್ಲಿ ತೊರೆಯ ನೀರು ಬೆಳ್ಳನೆ ಹೊಳೆಯುತ್ತಿತ್ತು. ಸುತ್ತೆಲ್ಲಾ ಆವರಿಸಿದ್ದ ಸಸ್ಯರಾಶಿಯಲ್ಲಡಗಿದ ಬಿಬ್ಬರಿ ಹುಳುಗಳು ತೊರೆಯ ಬಳಿಯಲ್ಲಿದ್ದ ಕಪ್ಪೆಗಳೊಡನೆ ಪೈಪೋಟಿಗೆ ಬಿದ್ದವರಂತೆ ವಿಚಿತ್ರ ಸ್ವರದಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದವು. 

ಇನ್ನೇನು ಮನೆ ಬಂತು ಎನ್ನುವಷ್ಟರಲ್ಲಿ ಶೇಖರ್ ನನ್ನೆಡೆಗೆ ತಿರುಗಿ 'ನಿನ್ನಿಂದ ನನ್ನ ಕುಟುಂಬಕ್ಕೆ ಏನಾದರು ಸಹಾಯ ಮಾಡಲು ಸಾಧ್ಯವಿದ್ದರೆ ಮಾಡು. ಇದು ನಿನ್ನ ಗೆಳೆಯನ ಬೇಡಿಕೆ ಅಷ್ಟೇ.. ಒತ್ತಾಯವಲ್ಲ.. ನೀನು ಒಳಗೆ ಹೋಗು.. ನನಗೊಂದಿಷ್ಟು ಕೆಲಸವಿದೆ' ಎಂದು ಹೇಳಿ, ಯಾಕೋ  ಮಾತುಗಳೆಲ್ಲಾ ಮುಗಿದೇ ಬಿಟ್ಟಿತೇನೋ ಎಂಬಂತೆ ಮೌನವಾಗಿ, ತಿರುಗಿ ಕತ್ತಲಲ್ಲೇ ಮರೆಯಾದ. 


ಇದ್ದಕ್ಕಿದ್ದಂತೆ ನನ್ನ  ಹೆಜ್ಜೆಗಳು ಭಾರವಾದಂತೆನಿಸಿತು. ಮನೆಯ ಬಾಗಿಲ ಬಳಿ ಶೇಖರನ ಮಗ ದೊಡ್ಡ ಸ್ವರದಲ್ಲಿ ಉದ್ವೇಗಗೊಂಡವರಂತೆ ಫೋನಿನಲ್ಲಿ ಯಾರೊಡನೆಯೋ ಮಾತಾಡುತ್ತಿದ್ದವನು,  ನನ್ನನ್ನು ನೋಡಿದವನೇ,   ಫೋನ್ ಕೈಯಿಂದ  ಜಾರಿ ಹೋದುದನ್ನು ಲೆಕ್ಕಿಸದೆ ಓಡಿ ಬಂದು ಅಪ್ಪಿಕೊಂಡ. ಕಣ್ಣುಗಳು ತುಂಬಿ  ಹನಿಯೊಡೆದಿತ್ತು .  ಅಲ್ಲೇ ಮುದುರಿ ಕುಳಿತಂತಿದ್ದ ಗೆಳೆಯನ  ಮಡದಿ ನನ್ನನ್ನು ಕಂಡವಳೇ ಜೋರಾಗಿ ಅಳಲು ಪ್ರಾರಂಭಿಸಿದಳು. ಗಾಭರಿಯಿಂದ  'ಏನಾಯ್ತು ಅತ್ತಿಗೆ, ದಿನೇಶ ಏನಾಯ್ತೋ?' ಎಂದೆ. 

'ಈಗ ಸ್ವಲ್ಪ ಹೊತ್ತಿನ ಮೊದಲು ಅಪ್ಪ ಎದೆನೋವೆಂದು ಕುಸಿದು ಬಿದ್ದರು. ಅಷ್ಟೆ.. ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದರು ಅಂಕಲ್..ನೋಡಿ ಅಲ್ಲಿ ; ಎಂದು ಬಿಕ್ಕುತ್ತಲೇ ಕೈಯನ್ನು ಪಕ್ಕದ ಕೋಣೆಯ ಕಡೆಗೆ ತೋರಿಸಿದ. ಮಂದವಾಗಿ ಉರಿಯುತ್ತಿದ್ದ ದೀಪ ...  ಬಿಳಿ ಬಟ್ಟೆಯ ಕೆಳಗೆ  ಮಲಗಿತ್ತು ಶೇಖರನ ದೇಹ...

ಹಾಗಿದ್ದರೆ ನನ್ನೊಡನೆ ಇಷ್ಟು ಹೊತ್ತು ಮಾತಾಡಿಕೊಂಡು ಬಂದವರು ಯಾರು..?  ತಣ್ಣನೆಯ ಗಾಳಿಯ ಅಲೆಯೊಂದು ಸೋಕಿ ಮೈಯನ್ನೊಮ್ಮೆ ಕೊಡವಿಕೊಳ್ಳುವಂತೆ ಮಾಡಿತು. ವಿಭ್ರಾಂತನಂತೆ ಹಾಗೇ ನಿಂತುಕೊಂಡೆ. 





12 comments:

  1. ಅನಿತಾ ಮೇಡಂ...
    ಕೊನೆಯ ಪ್ಯಾರಾ ಓದುತ್ತಿದ್ದಂತೆ ಮೈ-ಜುಮ್ಮೆನಿಸುವ ಅನುಭವ.....
    ನನ್ನ ಪ್ರಕಾರ ಅನಿರೀಕ್ಷಿತವಾಗಿ ಬರುವವರು ಅತಿಥಿ ಮತ್ತು ಸಾವು ಮಾತ್ರ,
    ಆತ್ಮೀಯ ಸ್ನೇಹಿತನ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡುವ ಕಥಾನಾಯಕಿಗಿಂತ ಮೊದಲೇ ಮೃತ್ಯುವಿನ ನೆರಳು ಸೋಕಿರುವ ಚಿತ್ರಣ ಅದ್ಭುತ....
    ನಿಮ್ಮಿಂದ ಇಲ್ಲಿಯವರೆಗೆ ಸರಳವಾಗಿ-ಸುಲಲಿತವಾಗಿ ಲಘು ಪ್ರಬಂಧಗಳನ್ನು ಓದುತ್ತಿದ್ದ ನನಗೆ ಇದೊಂದು ವಿಶಿಷ್ಟವಾದ ಥ್ರಿಲ್ಲರ್ ನೀಡಿದ್ದೀರಿ ಅಭಿನಂದನೆಗಳು... :)

    ReplyDelete
  2. nijakku idu adbhutavaagide....aakasmikavaagi banda saavu, maneya javaabdaarigalella haage iddu, jagattina moha innu haage ulididdo eno shekhar saavina nantaravu maataduvantaayitu.....

    ReplyDelete
  3. ಒಹ್..ನಿಮ್ಮ ಈ ಹೊಸ ತಾಂತ್ರಿಕತೆ ಹಿಡಿಸಿತು.
    ಒಳ್ಳೇ ಥ್ರಿಲ್ಲರ್ ಕಂ ಸಸ್ಪೆನ್ಸ್ .. Enjoyed. :-)

    ReplyDelete
  4. ವಾವ್ಹ್..ಸೂಪರ್ಬ್.. ಒಳ್ಳೆಯ ಕತೆ..

    ReplyDelete
  5. ಅದ್ಭುತ ! ತುಂಬಾ ತುಂಬಾ ಇಷ್ಟ ಆಯಿತು :):)

    ReplyDelete
  6. Tumba adbhutavagide saralateinda shokakke karidukondu hoda reeti hidisitu. Namm jeevanadalli intaha ghatanegalu nadeittave aaga namma bhavanegalu heege irutte.

    ReplyDelete
  7. ಯಬ್ಬಾ.. ಮೈ ಝಮ್ ಎಂದಿದ್ದು ಇನ್ನೂ ನಿಂತಿಲ್ಲ. ಜೊತೆಗೆ ಕಣ್ಣೂ ಮಂಜು.
    ಸೂಪರ್ ಅನಿತಾ. ತುಂಬಾ ಚೆನ್ನಾಗಿದೆ ಕತೆ.

    ReplyDelete