Pages

Total Visitors

Thursday, December 1, 2011

ಸೌಧ ..



ಬಸ್ ಹೊರಡಲು ಇನ್ನೊಂದೆರಡು ನಿಮಿಷ ಅಷ್ಟೆ..  ನನ್ನ ಪಕ್ಕದ ಸೀಟ್ ಕಾಲಿ ಇತ್ತು. ಅದರೆಡೆಗೊಮ್ಮೆ ಕಣ್ಣು ಹಾಸಿ ಆರಾಮವಾಗಿ ಕಾಲು ಚಾಚಿ ಕುಳಿತೆ. ಕೊಂಚ ಭಾರವಿರಬಹುದು ಅನ್ನುವಂತೆ ಭಾಸವಾಗುವ ಬ್ಯಾಗುಗಳನ್ನು ಹೊತ್ತು ಟಿಕೆಟ್ ನಂಬರನ್ನು ಸೀಟಿನ ನಂಬರಿನೊಂದಿಗೆ ತಾಳೆ ಹಾಕುತ್ತಾ ನನ್ನ ಪಕ್ಕಕ್ಕೆ ಬಂದು ನಿಂತವಳನ್ನು ಕತ್ತೆತ್ತಿ ಕುತೂಹಲದಿಂದ ನೋಡಿದೆ. ವಯಸ್ಸು ನನ್ನಿಂದ ಕೊಂಚ ಹೆಚ್ಚೇ ಆಗಿದ್ದಂತೆ ಅವಳ ಕೂದಲಿನ ಬಣ್ಣ ಹೇಳಿತು. ಸ್ವಲ್ಪ ದಡೂತಿ ದೇಹ, ಮೊಗದಲ್ಲಿ ಪ್ರಶಾಂತ ನಗೆ. ಮೆತ್ತಗೆ ಲಗ್ಗೇಜುಗಳನ್ನು ಸೀಟಿನ ಕೆಳಗೆ ಜೋಡಿಸಿ ಕುಳಿತುಕೊಳ್ಳಲು ಅನುವಾದಳು. ಅವಳು ಕುಳಿತುಕೊಳ್ಳುವಾಗ ನನ್ನನ್ನು ಇನ್ನಷ್ಟು ಬದಿಗೆ ಸರಿಸಿದಂತೆನಿಸಿತು. ನಾನು ಸ್ವಲ್ಪ ಬಿಗಿಯಾಗಿ ಕುಳಿತು ಕಿಟಕಿಯ ಹೊರಗಿಣುಕಿದೆ.

ಬಸ್ಸಾಗಲೇ ಹೊರಟಾಗಿತ್ತು. ಅವಳು ಮುಂದಕ್ಕೆ ಬಾಗಿ ಬ್ಯಾಗಿನಲ್ಲೇನೊ ಹುಡುಕುತ್ತಿದ್ದಳು. ಡ್ರೈವರ್ ಒಮ್ಮೆಲೇ ಹಾಕಿದ ಬ್ರೇಕ್ ಗೆ ಜೋಲಿಹೊಡೆದು ನನ್ನಡೆಗೆ ವಾಲಿದಳು. ನಾನು ಓದಲೆಂದು ಹಿಡಿದಿದ್ದ ಪುಸ್ತಕ ಅವಳ ಕೈ ತಗಲಿ ಜಾರಿ ಕೆಳಗೆ ಬಿತ್ತು. ನಾನು ಬಗ್ಗುವುದರೊಳಗೆ ಅದನ್ನು ಹೆಕ್ಕಿ ಕೊಟ್ಟು 'ಸ್ಸಾರೀ' ಎಂದಳು. ಅವಳ ಮಂದಹಾಸ ಮತ್ತೊಮ್ಮೆ ನನ್ನನ್ನು ಸೆಳೆಯಿತು. ನಗು ಅವಳ ಮೊಗದಿಂದ ನನ್ನ ಮೊಗದೆಡೆಗೂ ಹರಿದು  ಪ್ರತಿಫಲಿಸಿತು. ತುಟಿಯರಳಿಸಿದ ನನ್ನನ್ನು ಕಂಡು ಮಾತು ಸುರು ಮಾಡಲು ಸಿಕ್ಕಿದ ಅನುಮತಿಯೇನೋ ಎನ್ನುವಂತೆ 'ನೀವು ದೂರ' ಎಂದಳು. 

ಮಗಳ ಮನೆಗೆ ಹೋಗ್ತಿದ್ದೀನಿ.. ನೀವು..? 

ಒಂದು ಕ್ಷಣ ಏನನ್ನೊ ಧ್ಯಾನಿಸಿದವಳಂತೆ ನನ್ನ ಕಡೆಗೆ ನೋಡಿ 'ಮಗನ ಮನೆಗೆ' ಎಂದಳು.

ಹೌದಾ.. ಏನು ಮಾಡ್ತಿದ್ದಾನೆ ನಿಮ್ಮ ಮಗ, ಎಷ್ಟು ಮಕ್ಕಳು ನಿಮಗೆ ನನ್ನ ಪ್ರಶ್ನೆ ಮರಳಿತು.

'ಎರಡು ಗಂಡು ಮಕ್ಕಳು, ಒಬ್ಬ ಇಂಜಿನಿಯರ್ ಆಗಿದ್ದಾನೆ , ಇನ್ನೊಬ್ಬ ಡೆಲ್ಲಿಯಲ್ಲಿ ಸರ್ಕಾರಿ ಉದ್ಯೋಗಿ. ಅಲ್ಲಿಂದಲೇ ಬರ್ತಾ ಇದ್ದೀನಿ ಈ ಮಗನ ಮನೆಗೆ .. ನಿಮಗೆಷ್ಟು ಮಕ್ಕಳು..' ಎಂದಳು 

'ಮೂವರು, ಇಬ್ಬರು ಹುಡುಗರು, ಒಬ್ಬಳು ಹುಡುಗಿ. ಎಲ್ಲರಿಗೂ ಮದುವೆ ಆಗಿದೆ. ಮಗಳು  ಚೊಚ್ಚಲ ಬಸುರಿ,ದಿನ ತುಂಬುತ್ತಾ ಬಂತು. ಹಾಗಾಗಿ ಅವಳ ಮನೆಗೆ ಹೊರಟಿದ್ದೇನೆ.ಇನ್ನೇನು ಕೆಲ ದಿನಗಳಲ್ಲಿ ಅಜ್ಜಿಯೂ ಆಗ್ತೀನಿ ಅಂದೆ ನಗುತ್ತಾ..  

ಅವಳು ನಸುನಕ್ಕು, 'ನಾನಾಗಲೇ ಇಬ್ಬರು ಮೊಮ್ಮಕ್ಕಳ ದೊಡ್ಡ ಅಜ್ಜಿ ಆಗಿದ್ದೀನಿ. ಎಷ್ಟು ಸುಂದರ ಅಲ್ವಾ ಪುಟ್ಟ ಮಕ್ಕಳ ಒಡನಾಟ.. ನಮ್ಮ ಬಾಲ್ಯ ಮತ್ತೊಮ್ಮೆ ಮರುಕಳಿಸುತ್ತೆ. ಹಾಗೇ ತುಂಬಾ ಜವಾಬ್ದಾರಿಯ ಕೆಲಸ ಕೂಡಾ.. ಕಳೆದ ಸಲ ನನ್ನ ಡೆಲ್ಲಿಯಲ್ಲಿರುವ ಮೊಮ್ಮಗ ಅಲ್ಲೇ ಮನೆಯ ಕಾಂಪೌಂಡ್ ಒಳಗೇ ಇರುವ ಪುಟ್ಟ ಈಜುಕೊಳಕ್ಕೆ ಬಿದ್ದಿದ್ದ. ನಾನು ಕೂಡಲೇ ಹಾರಿ ಅವನನ್ನು ಎತ್ತಿ ಹಿಡಿದಿದ್ದಕ್ಕಾಯ್ತು. ಇಲ್ಲದಿದ್ದರೆ ...!! ಮಗ ಸೊಸೆ ಮತ್ತೆ ನನ್ನ ಹೊಗಳಿದ್ದೇ ಹೊಗಳಿದ್ದು.. ಅವರ ಕಣ್ಣಲ್ಲಿ ನಾನು ಆ ಕ್ಷಣದಲ್ಲಿ ದೇವರೇ ಆಗಿದ್ದೆ. ಆದ್ರೆ ನಂಗೆ ಅದನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತೆ' ಅಂದಳು.

ನನಗ್ಯಾಕೋ ಅವಳು ತನ್ನ ಮಗನ ಮನೆಯಲ್ಲಿರುವ ಈಜುಕೊಳದ ಬಗ್ಗೆ ಹೇಳಲೇ ಈ ವಿಷಯವನ್ನು ಎತ್ತಿರಬೇಕೆಂದೆನಿಸಿತು. ಈಗ ಸುಮ್ಮನುಳಿದು ಕಡಿಮೆ ಎನಿಸಿಕೊಳ್ಳಲು ನಾನೂ ಇಷ್ಟ ಪಡಲಿಲ್ಲ. ದೊಡ್ಡ ಮಗನ ಫಾರ್ಮ್ ಹೌಸಿನ ಅಂದ, ಎರಡನೇ ಮಗನ ಮೂರಂತಸ್ತಿನ ಮನೆಯ ವೈಭವ, ಮಗಳ ಹೊಸ ಹೊಸ ಡಿಸೈನಿನ ಆಭರಣಗಳ ವಿನ್ಯಾಸ ಎಲ್ಲವನ್ನೂ ಮಾತಿನಲ್ಲಿ ತಂದೆ. 
ನಮ್ಮಿಬ್ಬರ ಮಾತುಗಳು, ಬರ್ರೋ ಎಂದು ಸಾಗುತ್ತಿದ್ದ  ಬಸ್ಸಿನ ವೇಗವನ್ನು ಮೀರಿಸುವಂತೆ ಅತ್ತಿತ್ತ ಹರಿದಾಡಿದವು.ನಡುವಿನಲ್ಲೊಮ್ಮೆ ಬಸ್ ಊಟಕ್ಕೆ ನಿಲ್ಲಿಸಿದಾಗ ನಾವಿಬ್ಬರೂ ಹಳೆಯ ಗೆಳತಿಯರಂತೆ ಬೆರಳುಗಳನ್ನು ಹೆಣೆದು ಹೋಟೆಲ್ ಗೆ ನುಗ್ಗಿದ್ದೆವು. ಊಟ ಮಾಡಿ ಸಿಹಿ  ಬೀಡಾ ಬಾಯೊಳಗೆ ತುರುಕಿಕೊಳ್ಳುತ್ತಾ ಮತ್ತೊಮ್ಮೆ ಮಾತಿನ ಲೋಕದಲ್ಲಿ ವಿಹರಿಸತೊಡಗಿದೆವು. 

ನಮ್ಮ ಮಾತಿನಲ್ಲಿ, ನಮ್ಮಿಬ್ಬರ ಕುಟುಂಬದ ಚಿತ್ರಣಗಳು ಅನಾವರಣಗೊಳ್ಳುತ್ತಿದ್ದಂತೆ ಪರಸ್ಪರ ಎಲ್ಲರೂ ಪರಿಚಿತರಾದಂತೆನಿತು. 

ನಿಲ್ದಾಣ ಬಂದದ್ದು ಇಬ್ಬರ ಮುಖದಲ್ಲೂ ಬೇಸರದ ಚಿನ್ಹೆ ಮೂಡಿಸಿತು. ಆದರೆ ಅನಿವಾರ್ಯವಾದದ್ದರಿಂದ ಇಬ್ಬರೂ ಎದ್ದು ನಿಂತೆವು.  ಕಿಟಕಿ ಬದಿಯಲ್ಲಿದ್ದ ನಾನು ಇನ್ನೇನಾದರೂ ಉಳಿದಿದೆಯೇ ಎಂದು ನಿಧಾನಕ್ಕೆ ಕಣ್ಣು ಹಾಸಿ, ಪರೀಕ್ಷಿಸಿ ಕೆಳಗಿಳಿಯುತ್ತಿದ್ದಂತೇ, ಅವಳು ಅಲ್ಲಿ ಬಂದ ಖಾಲೀ ಆಟೋದೊಳಗೆ,ಕೈಯಲ್ಲಿದ್ದ ಚೀಟಿಯೊಂದನ್ನು ತೋರಿಸಿ, ಹತ್ತುತ್ತಿದ್ದಳು.

ಅವಳ ವಿಳಾಸವನ್ನು ಕೇಳದ ನನ್ನ ಮರೆವಿಗೆ ನಾನೇ ಬೈದುಕೊಳ್ಳುತ್ತಾ, ಅವಳೇರುತ್ತಿದ್ದ ಆಟೋದ ಕಡೆಗೆ ಧಾವಿಸುವಾಗಲೇ ಅದು ಧೂಳೆಬ್ಬಿಸುತ್ತಾ ಮರೆಯಾತು. ಸುಂದರ ಪ್ರಪಂಚವೊಂದು ಕಣ್ಣೆದುರೇ ಪುಡಿಯಾದ ಅನುಭವ.ಒಳಗಿನ ಖಾಲೀತನ ಹೊರಗಿಣುಕಲು ಪ್ರಯತ್ನಿಸಿತು. 

ಅಷ್ಟರಲ್ಲಿ ನನ್ನನ್ನು ತಾಕುವಂತೆ ಬಂದು ನಿಂತ ಇನ್ನೊಂದು ಆಟೋ ಹತ್ತಿ , ಹೋಗಬೇಕಿದ್ದ ಜಾಗದ ಹೆಸರು  ಹೇಳಿದೆ. ಆಟೊ ಗುರಿ ತಲುಪಿ ನಿಂತರೂ ಅರಿವಾಗದೇ ಅನ್ಯಮನಸ್ಕಳಾಗಿ ಕುಳಿತ ನನ್ನನ್ನು ಡ್ರೈವರ್, 'ಮೇಡಮ್' ಎಂದಾಗ ಗಡಬಡಿಸಿ  ಇಳಿದೆ. 

ನಿಧಾನಕ್ಕೆ ಹೆಜ್ಜೆ ಹಾಕಿ ಗೇಟ್ ಸರಿಸಿ, ಪರಿಚಿತ ಮುಖಗಳಿಗೆ ಮುಗುಳ್ನಗುತ್ತಾ ನನ್ನ ಕೋಣೆಯ ಕಡೆಗೆ ನಡೆದೆ. ಇನ್ನೇನು ಕೈ ಕಾಲು ಮುಖ ತೊಳೆದುಕೊಳ್ಳಲು ಟವೆಲ್ ಹಿಡಿದು ಹೊರಟಿದ್ದೆನಷ್ಟೆ, ಬಾಗಿಲು ಬಡಿಯ್ತಿತು. 'ಆಸರೆ' ಹಿರಿಯ ನಾಗರಿಕರ ಆಶ್ರಮದ ಜಯ ಮೇಡಮ್ ಹೊರಗೆ ನಿಂತಿದ್ದರು. ನನ್ನ ಪ್ರಶ್ನಾರ್ಥಕ ಮೊಗದ ಕಡೆ ನೋಡಿದವರೇ,ತಮ್ಮ ಹಿಂದಕ್ಕೆ  ಬೆರಳು ತೋರಿಸಿ, ಇವರು ಇವತ್ತಿನಿಂದ  ನಿಮ್ಮ ಜೊತೆಗಾತಿ. ನಿಮ್ಮ ರೂಮ್ ಇವರೂ ಶೇರ್ ಮಾಡ್ಕೊಳ್ತಾರೆ ಅಂದ್ರು. ಅವರ ಮರೆಯಿಂದ  ಇಣುಕಿದವಳನ್ನು ನೋಡಿದರೆ... ಬಸ್ಸಿನಲ್ಲಿದ್ದ ಅದೇ ಪ್ರಶಾಂತ ಮಂದಹಾಸ ! 
ಅವಳು ಮುಂದಡಿ ಇಟ್ಟು, ಅಚ್ಚರಿಯಿಂದ ಸ್ಥಬ್ಧಳಾಗಿದ್ದ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದೊತ್ತಿ, 'ನೀವು ಚೆನ್ನಾಗಿ ಕಥೆ ಕಟ್ಟುತ್ತೀರಿ' ಅಂದಳು. 

'ನೀವೂ ಕೂಡಾ' ಎಂದೆ ಜೋರಾಗಿ ನಗುತ್ತಾ.. 

ಇಬ್ಬರ ನಗುವಿನಲ್ಲಿ ಸಮಸ್ತ ನೋವುಗಳಿಗೂ ಪರಿಹಾರವಿದ್ದಂತೆ ಕಾಣುತ್ತಿತ್ತು.  

- - ಅನಿತಾ ನರೇಶ್ ಮಂಚಿ .
-- 

14 comments:

  1. ಪಾತ್ರಗಳು ವಾಕ್ಚಾತುರ್ಯದಿಂದ ಗೆದ್ದವು. ನಿಮ್ಮ ಶೈಲಿಯೇ ಅಂತದು.

    ಯಾಕೋ ಮನಸು ಭಾರವಾಯ್ತು. ಕಣ್ಣಂಚಿನಲ್ಲಿ ನೀರು. ನನ್ನವಳ ಜೊತೆ ನನ್ನ ವೃದ್ಧಾಪ್ಯವು ಯಾವ ವೃದ್ಧಾಶ್ರಮದಲ್ಲಿದೆಯೋ? ಆ ಕರಿ ಬಸಜ್ಜನಿಗೇ ಗೊತ್ತು!

    ReplyDelete
  2. ನಿಜಬದುಕಿನ ಚಿತ್ರಗಳು ಎಲೆಯ ಹಿಂಭಾಗದಲ್ಲಿ ಮರೆಯಾಗಿವೆ.ಎಲೆಯ ಮೇಲಿನ ಇಬ್ಬನಿಯ ಬಿಂದುಗಳಲ್ಲಿ ಏನೇ ಹೊಳಪು ಬಿಂಬಿಸಿದರೂ ನಿಜದ ಬದುಕು ತೋರಲೇಬೇಕಲ್ಲವೇ?
    ಇದೇ ಚಿತ್ರಣವನ್ನು ನೀವು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ..

    ReplyDelete
  3. ಅಬ್ಬಾ ಭಯಂಕರ ತಿರುವು ಕೊನೆಯಲ್ಲಿ.. ಏನು ಬರೀತಿರ್ರೀ ಅನೀತಕ್ಕ .. ಚೆನ್ನಾಗಿದೆ :-)

    ReplyDelete
  4. ಅಬ್ಬಾ ಭಯಂಕರ ತಿರುವು ಕೊನೆಯಲ್ಲಿ.. ಏನು ಬರೀತಿರ್ರೀ ಅನೀತಕ್ಕ .. ಚೆನ್ನಾಗಿದೆ :-)

    ReplyDelete
  5. 'ನಗು ಅವಳ ಮೊಗದಿಂದ ನನ್ನ ಮೊಗದೆಡೆಗೂ ಹರಿದು ಪ್ರತಿಫಲಿಸಿತು. ತುಟಿಯರಳಿಸಿದ ನನ್ನನ್ನು ಕಂಡು ಮಾತು ಸುರು ಮಾಡಲು ಸಿಕ್ಕಿದ ಅನುಮತಿಯೇನೋ ಎನ್ನುವಂತೆ 'ನೀವು ದೂರ' ಎಂದಳು'.

    ಈ ತರಹದ ವಾಕ್ಯ ರಚನೆಗಳಿಂದ ಎಲ್ಲರನ್ನು ಸೆಳೆಯುವ ನಿನ್ನ ಬರಹಗಳು ಕುರುಬನಿಗೊದಗಿದ ಕಂಬಳಿಯಂತೆ ಅಪ್ಯಾಯಮಾನವಾಗಿರುತ್ತವೆ. :):)

    ReplyDelete
  6. ಅನಿತಕ್ಕ...ನಿಮ್ಮ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದೇನೆ....:)ನಿಮ್ಮ ಕತೆಗಳಲ್ಲಿ ಬರುವ ತಿರುವುಗಳ೦ತು ಬಹಳ ಹಿಡಿಸುವುದು...:)ಇ೦ತಹ ಕತೆಗಳು ಹೀಗೆ ಬರುತ್ತಿರಲಿ.............

    ReplyDelete
  7. ಇಬ್ಬರು ಹೆಂಗಸರು ಮಾತಿನ ಮಹಲನ್ನು ಕಟ್ಟುತ್ತಾರೆ ಕೊನೆಗೆ ಬಿದ್ದದ್ದನ್ನು ಕಂಡು ನಗುತ್ತಾರೆ ಆದರೆ ಅಂತರಾಳದ ಬೇಗೆ ಯಾರುಕಂಡಾರು .......

    ReplyDelete
  8. ಕಥಾವಸ್ತು ಮಂತ್ರ ಮುಗ್ಧನನ್ನಾಗಿಸಿತು. ನಿರೂಪಣಾ ಶೈಲಿ ಅದ್ಭುತ. ಸಾಮಾಜಿಕ ಮೌಲ್ಯ ಕುಸಿತದ ಒಂದು ಸುಂದರ ಚಿತ್ರಣ.

    ReplyDelete
  9. ನಿಜವಾಗಿಯೂ ಈ ತಿರುವು ಅಪೇಕ್ಷಿಸಿರಲಿಲ್ಲ..!
    ಏನು ಹೇಳಬೇಕೆಂದು ತಿಳಿಯುತ್ತಿಲ್ಲಾ..!

    ನಿಮ್ಮೊಲವಿನ,
    ಸತ್ಯ..!

    ReplyDelete
  10. ಸಾಮಾನ್ಯ ಘಟನೆಯೊಂದನ್ನು ಹಿಡಿದು ಎಲ್ಲಿಯೂ ನಾಟಕೀಯತೆ ಇಲ್ಲದೆ ಚಿತ್ರಿಸುವ ನಿಮ್ಮ ಶೈಲಿ ಬಹುಬೇಗ ಮುಟ್ಟುತ್ತೆ - ತಟ್ಟುತ್ತೆ ಮಾತ್ರವಲ್ಲ ಬಹುಕಾಲ ನನ್ನಲ್ಲೇ ಉಳಿಯುತ್ತೆ....ಓದಿಸಿ ಮತ್ತಷ್ಟು

    ReplyDelete
  11. ಓದಿಸಿದಷ್ಟು ಮತ್ತಷ್ಟು ಓದಿಸುವ ನಿಮ್ಮ ಶೈಲಿ. ಖುಷಿ ಆಯಿತು.ಹಾಗೆಯೇ ಉಣ ಬಡಿಸುತ್ತಿರಿ. ಸುಂದರವಾಗಿದೆ ಬರಹ.

    ReplyDelete
  12. ಸೊಗಸಾದ ಕತೆ. ಕೊನೆ, ಮನಕಲಕಬೇಕಿತ್ತು, ಆದರೆ ಅದೂ ಸೊಗಸೇ ಅನ್ನುವಷ್ಟು ನವಿರಾಗಿ ಮೂಡಿಬಂದಿದೆ. ಕತೆಯ ತಂತ್ರದ ಮೇಲೆ ನಿಮಗೆ ಒಳ್ಳೆಯ ಹಿಡಿತವಿದೆ.

    ReplyDelete
  13. ಒಳ್ಳೆ ಕಥೆ ಅನಿತಕ್ಕ.. ಇನ್ನೂ ಇಂತಹ ಕಥೆಗಳನ್ನು ಸ್ವಲ್ಪ ಬೆಳೆಸಿ ಬರೆದರೆ ಇನ್ನೂ ಸೂಪರ್ :) :):))))

    ReplyDelete