Pages

Total Visitors

Friday, December 16, 2011

ತುಂ ಬಿನ್ ಜಾವೂ ಕಹಾ ...




ಇನ್ನೂ ಮಲಗಿಯೇ ಇದ್ದ ಹೆಂಡತಿಯ ಕಡೆಗೊಮ್ಮೆ ನೋಡಿದೆ. ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವ ಒಂದು ಕ್ಷಣ ಮೂಡಿತು. ಮನಸ್ಸನ್ನು ಗಟ್ಟಿ ಮಾಡಿಕೊಂಡು ಕಣ್ಣುಗಳನ್ನು ಕೂಡಲೇ ಅವಳ ಕಡೆಯಿಂದ  ಇತ್ತ ತಿರುಗಿಸಿ ಅಗತ್ಯದ ಯಾವುದೇ ವಸ್ತು ಉಳಿದಿಲ್ಲ  ಎಂಬುದನ್ನು ಮತ್ತೊಮ್ಮೆ ಕಣ್ಣಾಡಿಸಿ ಪರೀಕ್ಷಿಸಿಕೊಂಡೆ. ಭಾರವಾದ ಸೂಟ್ ಕೇಸನ್ನು ಕೈಯಲ್ಲಿ ಹಿಡಿದು ಸದ್ದಾಗದಂತೆ ಬಾಗಿಲು ಮುಚ್ಚಿ ಹೊರಬಂದೆ. ಮನೆಯ ಮುಂದೆ ಇಳಿಜಾರಾದ ಕಾರಣ ಕಾರನ್ನು ಸದ್ದಾಗದಂತೆ ಕೊಂಚ ದೂರ ನ್ಯೂಟ್ರಲ್‌ನಲ್ಲೆ ಚಲಾಯಿಸಿ ನಂತರ ಸ್ಟಾರ್ಟ್ ಮಾಡಿ ಹೊರಟೆ. 
ಮೊಬೈಲ್ ನಲ್ಲಿ ಮೆಸೇಜ್ ಬಂದ ಸದ್ದು. ಕಾಯುತ್ತಿದ್ದೇನೆ ,ಹೊರಟಿದ್ದೀರಾ?.. ಸ್ವರ್ಣ..

ಗಾಡಿ ಇನ್ನೂ ಕೊಂಚ ವೇಗ ವೃದ್ಧಿಸಿಕೊಂಡಿತು ..



ಸ್ವರ್ಣ..ಎಷ್ಟು ಸುಂದರ ಹೆಸರು. ಹೆಸರಿನಷ್ಟೆ ಅವಳೂ , ಅವಳ ವ್ಯಕ್ತ್ವಿತ್ವ, ಅವಳ ಆಲೋಚನೆಗಳು,  ಎಲ್ಲವೂ ಸುಂದರವೆ..ಒಂದೆರಡು ಬಾರಿಯ ಭೇಟಿಯಲ್ಲೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿದ್ದಳು.

ಕಾರಿನ ಹೆಡ್ ಲೈಟಿನ ಬೆಳಕಿಗೆ ಕಂಡ ಮುಂಜಾನೆಯ ಗಾಳಿಗೆ ಹಾರುತ್ತಿದ್ದ ಅವಳ  ಬಣ್ಣದ ಸೆರಗು ನನ್ನ ಯೋಚನಾ ಲಹರಿಯನ್ನು ತುಂಡರಿಸಿತು. 

ಕೈಯಲ್ಲಿ ಪರ್ಸ್ ಹಿಡಿದು  ಕಾಯುತ್ತಾ ನಿಂತಿದ್ದಳು .ನನ್ನನ್ನು ಕಾಣುತ್ತಿದ್ದಂತೆಯೇ ಅವಳ ಮೊಗದಲ್ಲಿ ಅರಳಿತ್ತು ಸಂತಸ ಬೆರೆತ ನಸು ನಗು.ನನ್ನನ್ನು ಬಿಟ್ಟು ಹೋಗಿಯೇ ಬಿಟ್ರೇನೋ ಅಂದ್ಕೊಂಡೆ.. ಅಂದಳು. 
ಕಾರಿನಲ್ಲಿ  ಆನ್ ಮಾಡಿದ್ದ ಎಫ್ ಎಂ ನಲ್ಲಿ ' ತುಂ ಬಿನ್ ಜಾವೂ   ಕಹಾ   .. ' ಎಂದ್ಹು  ತೇಲಿ ಬರುತ್ತಿದ್ದ ಹಾಡು ಆಗಷ್ಟೇ ಅವಳ ಕಿವಿಗೆ ಬಿದ್ದು ಮೊಗದಲ್ಲಿ ನಾಚಿಕೆ ಆವರಿಸಿತು.
ನನಗ್ಯಾಕೋ ನಮ್ಮ ನಡುವೆ ಮಾತಿಗಿಂತ ಮೌನ ತುಂಬ ಹಿತಕರವೆನಿತು. ಅವಳೂ ಅದನ್ನು ಅರ್ಥ ಮಾಡಿಕೊಂಡವಳಂತೆ ಒಂದೊಂದಾಗಿ ಓಡುತ್ತಿರುವಂತೆ ಬಾಸವಾಗುವ ರಸ್ತೆ ಬದಿಯ ಮರಗಿಡಗಳ ಕಡೆಗೆ ಕಣ್ಣು ನೆಟ್ಟಳು. 
ಸ್ವಲ್ಪ ಮುಂದೆ ಸಾಗುತ್ತಿದ್ದಂತೆ  ರೋಡ್ ನಿಂದ ಒಂದು ಕವಲು ದಾರಿಯ ಕಡೆಗೆ ಬೆರಳು ತೋರಿಸಿ ಈ ರಸ್ತೆ .. ಎಂದಳು.ತಲೆಯಲುಗಿಸಿದ ನಾನು ಸುತ್ತಲಿನ ಹಸಿರು , ಬೆಳಗಿನ ಬೆಳಕಿಗೆ ಅಲ್ಲಲ್ಲಿ ಅನಾವರಣಗೊಳ್ಳುತ್ತಿದ್ದ ಮನೆಗಳು, ಎಲ್ಲವನ್ನೂ ಕಣ್ಣೊಳಗೆ ಇಳಿಸುತ್ತಲೇ ದಾರಿ ಸವೆಸುತ್ತಿದ್ದೆ. 

ದೂರದ ಪರಿವೆಯೇ ಇರಲಿಲ್ಲ. ನನ್ನೆಲ್ಲ ದುಃಖಗಳೂ ಇಂದೇ ಕೊನೆಗೊಳ್ಳುವುದು ಎಂಬ  ಸಮಾಧಾನ ಭಾವ ಎಲ್ಲವನ್ನೂ ಮರೆಸಿತ್ತು. 

ಹಳೆಯ ದೊಡ್ಡ ಕಟ್ಟಡವೊಂದು ದೂರದಲ್ಲಿ ಕಾಣಿಸಿದಾಗ ಅದರ ಎದುರು ನಿಲ್ಲಿಸಿ ಎಂದಳು. ತಾನೇ ಮುಂದಾಗಿ ಒಳ ನಡೆದು ಯಾರನ್ನೋ ಕರೆದು ಕಾರಿನಲ್ಲಿದ್ದ  ಬ್ಯಾಗ್ ಗಳನ್ನು ಒಯ್ಯಲು ಹೇಳಿದಳು. 

ನನ್ನ ಮನದಲ್ಲೇನೋ ಕಂಪನ .ಏನನ್ನೋ ಕಳೆದುಕೊಳ್ಳುತ್ತಿದ್ದೇನೆಯೇ..  ಕಣ್ಣಲ್ಲಿ ಕಂಬನಿ ಇಣುಕಿದಂತೆನಿಸಿ, ಕೆನ್ನೆ ಸವರಿಕೊಂಡೆ. ಒದ್ದೆಯಾಯಿತು ಕೈ.. ಎದೆಯೊಳಗಿನ ಭಾರ ಕರಗಿದಂತೆ.. 
ಜೊತೆಗೊಂದು ನಿರ್ಧಾರ ಭಾವ.. ಇಲ್ಲ...  ನನ್ನ ಈ ನಡೆಯಿಂದ ನನ್ನ ಮುಂದಿನ ಬದುಕಿಗೆ ಕೆಡುಕೇನೂ ಆಗಲಾರದು  ಎನ್ನುವ  ಪೂರ್ಣ ವಿಶ್ವಾಸ.

ಇವಳನ್ನು ಮೊದಲ ಬಾರಿಗೆ ಕಂಡು ,ಭೇಟಿಯಾಗಿ ವಿಷಯ ತಿಳಿಸಿದಾಗಲೇ ತನ್ನ ಅನಾಥ ಆಶ್ರಮಕ್ಕೆ ಅವುಗಳ ಅಗತ್ಯ ಇದೆ ಎಂದು ಇಲ್ಲಿಯವರೆಗೆ ಕರೆತಂದಿದ್ದಳು.    ಕಳೆದುಕೊಂಡಿದ್ದ ಮಗನ ಆಟಿಕೆ ಬಟ್ಟೆ ಬರೆಗಳನ್ನು ಹರವಿಟ್ಟುಕೊಂಡು ನಿತ್ಯವೂ ಅಳುತ್ತಿದ್ದ ಹೆಂಡತಿಯನ್ನು ಸಮಾಧಾನ ಗೊಳಿಸಲು ಇದರಿಂದ ಉತ್ತಮ ದಾರಿಯ ಆಯ್ಕೆ ನನ್ನಲ್ಲಿರಲಿಲ್ಲ.ಜೇಬಿಗೆ ಕೈ ಹಾಕಿ ಸಹಿ ಹಾಕಿದ್ದ ಚೆಕ್ ಒಂದನ್ನು ಅವಳ ಕೈಗೆ ನೀಡಿ ಇದು ನನ್ನ ಪುಟ್ಟ ಕಾಣಿಕೆ. ಇನ್ನೊಮ್ಮೆ ನನ್ನವಳೊಡನೆ ಇಲ್ಲಿಗೆ ಬರುತ್ತೇನೆ .. ಎಂದು, ಅವಳೇನೋ ಹೇಳಲು ಬಾಯಿ ತೆರೆಯುತ್ತಿದ್ದಂತೆ ಕಾರು ಚಲಾಯಿಸಿದೆ. ಕಾರಿನ ಸೈಡ್ ಮಿರರ್ ನಲ್ಲಿ ಅವಳು ತನ್ನ ಆಶ್ರಮದ ಪುಟಾಣಿ ಮಕ್ಕಳೊಡನೆ ಕೈ ಬೀಸುತ್ತಿರುವುದು ಕಾಣಿಸಿತು. 


6 comments:

  1. ಅನೀತಕ್ಕ ಈ ನಿಮ್ಮ ಕತೆಯ ಪ್ರತಿಯೊಂದು ಸಾಲುಗಳನ್ನು ಓದುವಾಗಲೂ, ಓದುಗನೆದೆಯಲ್ಲಿ ಕುತೂಹಲವನ್ನು ಹೆಚ್ಚಿಸುತ್ತಾ ತನ್ನ ನೈಜತೆಯನ್ನು ಕಾಪಾಡಿಕೊಳ್ಳುತ್ತಾ ಸಾಗುತ್ತದೆ..:))) ನಾವು ಮೊದಲಲ್ಲಿ ಕಂಡ ದೃಶ್ಯಗಳು ಮೂಡಿಸುವ ಭಾವಗಳು ಒಮ್ಮೆಲೆ ಕಡೆಯಲ್ಲಿ ಬದಲಾಗಿಬಿಡುತ್ತವೆ, ನಿಮ್ಮ ಸುಂದರ ನಿರೂಪಣೆಗೊಂದು ಸಲಾಂ.. ಎಲ್ಲೂ ಆ ಕುತೂಹಲವನ್ನು ಬಿಟ್ಟುಕೊಡದಂತೆ ಕಡೆಯವರೆಗೂ ಕತೆಯನ್ನು ಸುಂದರವಾಗಿ ಕೊಂಡೋಯ್ದಿದ್ದೀರಿ.. ತನ್ನ ಪತ್ನಿಯನ್ನು ಆಕೆಯ ದುಃಖದಿಂದ ಸಮಾಧಾನಪಡಿಸಲು ಕಷ್ಟಪಡುವ ಕಥಾನಾಯಕ ಮನದಲ್ಲಿ ಉಳಿಯುತ್ತಾನೆ..:)))

    ReplyDelete
  2. ಮನ ಕುಲುಕೋ ಬರಹ ಅನಿತಾ ಅವರೇ,

    ಅತ್ತು ಬಿಟ್ಟೆ ಎಂದರೆ ನೀವು ನಂಬಲಿಕ್ಕಿಲ್ಲ.

    ಹೀಗೆ ಮುಂದೆ ನನಗೂ ತೀರಾ ವಯಸಾದಾಗ, ಯಾವುದೋ ವೃದ್ಧಾಶ್ರಮದಲ್ಲಿ ನೀವೇ ನನ್ನ ಗುರುತು ಹಿಡಿದು ಮಾತಾಡಿಸ್ತೀರೇನೋ?

    ReplyDelete
  3. ಮೊದಲ ಓದಿಗೆ ಕತೆಯಲ್ಲಿನ anti-climax ಯಾಕೋ ತುಸು ಪ್ರಯತ್ನಪಟ್ಟು ತಂದದ್ದೇನೋ ಅನಿಸಿತು, ಆದರೆ actually climax ಸಹಜವಾಗಿಯೇ ಇದ್ದು, ಕತೆಯ ಬೆಳವಣಿಗೆ ಮಾತ್ರ ಈ climaxನ್ನು anti-climax ನಂತೆ ತೋರುವುದಕ್ಕೋಸ್ಕರ ಪ್ರಯತ್ನ ಪಟ್ಟು ಕಟ್ಟಿದಂತೆನಿಸಿತು. ಉದಾಹರಣೆಗೆ

    "ಸ್ವರ್ಣ..ಎಷ್ಟು ಸುಂದರ ಹೆಸರು. ಹೆಸರಿನಷ್ಟೆ ಅವಳೂ , ಅವಳ ವ್ಯಕ್ತ್ವಿತ್ವ, ಅವಳ ಆಲೋಚನೆಗಳು, ಎಲ್ಲವೂ ಸುಂದರವೆ..ಒಂದೆರಡು ಬಾರಿಯ ಭೇಟಿಯಲ್ಲೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿದ್ದಳು"

    "ನನ್ನನ್ನು ಬಿಟ್ಟು ಹೋಗಿಯೇ ಬಿಟ್ರೇನೋ ಅಂದ್ಕೊಂಡೆ.. ಅಂದಳು"

    "ತುಂ ಬಿನ್ ಜಾವೂ ಕಹಾ .. ' ಎಂದ್ಹು ತೇಲಿ ಬರುತ್ತಿದ್ದ ಹಾಡು ಆಗಷ್ಟೇ ಅವಳ ಕಿವಿಗೆ ಬಿದ್ದು ಮೊಗದಲ್ಲಿ ನಾಚಿಕೆ ಆವರಿಸಿತು"

    ಈ ಮುಂತಾದ ಭಾವಗಳು ನಾಯಕನಿಗೂ ಈಕೆಗೂ ಅದೊಂದು ರೀತಿಯ ಸಂಬಂಧವನ್ನು ’ಕಲ್ಪಿಸು’ತ್ತವೆ; ಆದರೆ ಕೊನೆಯಲ್ಲಿ ನಾಯಕನ ಉದ್ದೇಶವೇ ಬೇರೆ. ಆ ಉದ್ದೇಶದ ಬೆಳಕಿನಲ್ಲಿ ಮೇಲೆ ಕಾಣಿಸಿದ ಕತೆಯ ವಿವರಗಳು ತುಸು ಅಸಹಜವೆನಿಸುತ್ತವೆ.

    ಶೈಲಿ ಎಂದಿನಂತೆ ಸೊಗಸಾಗಿದೆ.

    ReplyDelete
  4. ಅನಿತಕ್ಕ...ಕತೆ ಅದ್ಭುತವಾಗಿದೆ. ಎ೦ದಿನ೦ತೆ ಬಹಳ ಇಷ್ಟವಾಯಿತು...

    ReplyDelete
  5. ನಿರೂಪಣೆ ಸಹ್ಯವಾಗಿದ್ದು ಸುಖಾಂತದಲ್ಲಿ..ಒಳ್ಳೆ ಕತೆ,

    ReplyDelete
  6. hooooooo eneno andukollotara bardu konege kate bere :):):)

    ReplyDelete