Pages

Total Visitors

Sunday, December 25, 2011

ಮಾ(ಬಾ)ತುಕತೆ






ಆಗಷ್ಟೆ ಮರದಿಂದ ಅಡಿಕೆ ತೆಗೆದು ಹಾಕಿ ಆಗಿತ್ತು.ತೋಟದ ತುಂಬೆಲ್ಲ ಕೇಸರಿ ಬಣ್ಣದ ಅಡಿಕೆ. ಹೆಕ್ಕಿ ಬುಟ್ಟಿಗೆ ತುಂಬಿಸುವುದರಲ್ಲೆ ಮಗ್ನಳಾಗಿದ್ದೆ. 
ಹಿಂದಿನಿಂದ  ಏನೋ ಸದ್ದಾದಂತಾಯ್ತು .ನನ್ನ ಹಿಂಬಾಲಕರಂತೆ ನಿಂತಿದ್ದ ಬಾತುಕೋಳಿಗಳ ಪುಟ್ಟ ಗುಂಪೊಂದು ಕುತೂಹಲದ ನೋಟದಲ್ಲಿ ನನ್ನನ್ನು ನೋಡುತ್ತಿದವು.
ಹತ್ತಿರದಲ್ಲೇ ಹರಡಿಕೊಂಡಿದ್ದ ಅಡಿಕೆಯನ್ನು ಒಂದೆರಡು ಬಾರಿ ಕುಕ್ಕಿ ನೋಡಿದವು. 

ಅವುಗಳಲ್ಲಿ ಒಂದು ಇನ್ನು ಸ್ವಲ್ಪ ಹತ್ತಿರ ಬಂದು ಬುಟ್ಟಿಯಲ್ಲಿದ್ದ  ಹಣ್ಣಡಿಕೆಯೊಂದನ್ನು ಕೊಕ್ಕಿನಲ್ಲಿ ಕುಟುಕಿತು. ಯಾವ ರುಚಿಯೂ ಕಾಣದೆ ಪುನಃ ನೆಲಕ್ಕೆ ಹಾಕಿತು.


ನಂತರ ಒಂದಿಷ್ಟೂ ಹೆದರದೆ ನನ್ನ ಬಳಿ ಬಂದು ಏನು ಮಾಡುತ್ತಿದ್ದೀಯಾ ಎಂದಿತು.
ಕೆಲಸದ ತರಾತುರಿಯಲ್ಲಿದ್ದ ನಾನು ಕೊಂಚ ಅಸಹನೆಯಲ್ಲಿ 'ಕಾಣುತ್ತಿಲ್ಲವೇ.. ಅಡಿಕೆ ಹೆಕ್ಕುತ್ತಿರುವುದು'.. ಎಂದೆ. 

ಇದನ್ನು ಹೆಕ್ಕಿ ತಿನ್ನಲು ಉಪಯೋಗಿಸುತ್ತೀಯಾ..ಎಂದಿತು. 
ಕೆಲಸದ ಬೇಸರ ನೀಗಲು ಮಾತುಕತೆಯೂ ಒಂದು ದಾರಿ ಎಂದುಕೊಂಡು,' ಇಲ್ಲ..ಇದನ್ನು ಮನೆಗೆ ಒಯ್ದು ಒಣಗಿಸುತ್ತೇನೆ' ಎಂದೆ.

'ಆಮೇಲೆ ತಿನ್ನುವುದೋ..?' ಎಂದಿತದು ಸೋಜಿಗದಿಂದ.. 

'ಇಲ್ಲ..ಚೆನ್ನಾಗಿ ಒಣಗಿದ ನಂತರ ಸುಲಿದು ಮಾರುತ್ತೇವೆ'ಎಂದೆ. 
ಕೊಂಚ ಗಲಿಬಿಲಿಯಿಂದ 'ಮಾರುವುದೇ .. ಹಾಗೆಂದರೇನು' ಎಂದಿತು.
'ಬೇರೊಬ್ಬರಿಗೆ ಕೊಡುವುದು. ಅದರ ಬದಲಾಗಿ ನಮಗೆ ಹಣ ನೀಡುತ್ತಾರೆ'. ಎಂದೆ..

'ಹಣವೇ.. ಸರಿ ಸರಿ ಆಮೇಲೆ ಅದನ್ನು ತಿನ್ನುವುದಲ್ಲವೇ'.. ಅಂದು ತಲೆ ಅಲುಗಿಸುತ್ತಾ ಕೇಳಿತು. 

'ಇಲ್ಲ ಇಲ್ಲ .. ಹಣವನ್ನು ತಿನ್ನುವುದಿಲ್ಲ.. ಅದರಿಂದ ಆಹಾರ ಪಧಾರ್ಥಗಳನ್ನು ಕೊಂಡು ತಂದು, ಶುಚಿಗೊಳಿಸಿ, ಬೇಯಿಸಿ, ಮಸಾಲೆಗಳನ್ನೆಲ್ಲ ಬೆರೆಸಿ ರುಚಿಕರವಾದ ಬಳಿಕ ತಿನ್ನುವುದು'.. ಎಂದೆ.



..ತಿನ್ನುವುದಕ್ಕೆ ಅಷ್ಟೆಲ್ಲ ಕಷ್ಟ ಪಡಬೇಕೇ..ಯಾಕೋ ಏನೂ ಅರ್ಥವಾಗದವರಂತೆ ಮುಖ ಮಾಡಿಕೊಂಡು, ನನ್ನನ್ನು ನನ್ನ ಪಾಡಿಗೆ ಬಿಟ್ಟು, ಅಲ್ಲೆಲ್ಲ ದಾರಾಳ ಹಾರಿಕೊಂಡಿದ್ದ ಕೀಟಗಳನ್ನು,ನೆಲದಲ್ಲಿ ತೆವಳುತ್ತಿದ್ದ ಎರೆಹುಳುಗಳನ್ನು  ಹಿಡಿದು ತಿನ್ನಲು, ತನ್ನ ಗುಂಪು ಸೇರಿಕೊಂಡಿತು.. 


11 comments:

  1. ದುಡ್ಡು ಮನುಜನ ಬದುಕಲ್ಲಿ ಎಂಥಹ ಒಳ್ಳೆಯ ಮತ್ತು ಕೆಟ್ಟ ಪಾತ್ರ ವಹಿಸುತ್ತದೆ ಅಂತ ಪಾಪ ಬಾತು ಕೋಳಿಗೇನು ಗೊತ್ತಲ್ವಾ ಮೇಡಂ?

    ಒಳ್ಳೆಯ ಸಚಿತ್ರ ಕವನಕ್ಕೆ ಧನ್ಯವಾದಗಳು.

    ReplyDelete
  2. ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳುವುದಾದರೆ ಮನಸ್ಸು ಮನುಷ್ಯನೊಂದಿಗೆ ಮಾತ್ರವಲ್ಲದೇ ತನ್ನ ಸುತ್ತಲ ಪಶು-ಪಕ್ಷಿಗಳೊಂದಿಗಿನ ಸಂವಾದ ಹೇಗಿರುತ್ತದೆ ಅನ್ನೋದಕ್ಕೆ ಇದು ಸಾಕ್ಷಿ.ಇಲ್ಲಿ ಚೆನ್ನಾಗಿದೆ ಹಿಡಿದಿಡುವಂತಹದ್ದು. " ಹಣವೇ...! ಅದನ್ನು ತಿನ್ನುವುದು ಹೇಗೆ?" ಹಹಹಹಹ...! ಇದಕ್ಕೆ ಮುಗ್ದತೆ ಅಂತ ಮೂರ್ತ ಹೆಸರು. ಕೆಲವೊಮ್ಮೆ ನೀವು ಮಗು ಆಗುತ್ತೀರಿ ಅಲ್ವಾ?

    ReplyDelete
  3. ಆಹಾ...! ಇದು ಬೇಕು ಸೃಜನಶೀಲತೆ.ಇದಕ್ಕಿಂತ ಭಿನ್ನವಾಗಿ ಹೇಳುವುದಾದರೆ ಮನಸ್ಸು ಮನುಷ್ಯನೊಂದಿಗೆ ಮಾತ್ರವಲ್ಲದೇ ತನ್ನ ಸುತ್ತಲ ಪಶು-ಪಕ್ಷಿಗಳೊಂದಿಗಿನ ಸಂವಾದ ಹೇಗಿರುತ್ತದೆ ಅನ್ನೋದಕ್ಕೆ ಇದು ಸಾಕ್ಷಿ.ಇಲ್ಲಿ ಚೆನ್ನಾಗಿದೆ ಹಿಡಿದಿಡುವಂತಹದ್ದು. " ಹಣವೇ...! ಅದನ್ನು ತಿನ್ನುವುದು ಹೇಗೆ?" ಹಹಹಹಹ...! ಇದಕ್ಕೆ ಮುಗ್ದತೆ ಅಂತ ಮೂರ್ತ ಹೆಸರು. ಕೆಲವೊಮ್ಮೆ ನೀವು ಮಗು ಆಗುತ್ತೀರಿ ಅಲ್ವಾ?

    ReplyDelete
  4. ಆಹಾ, ಜೀವನದ ಸರಳ ಸತ್ಯವನ್ನು ಅಷ್ಟೇ ಸರಳವಾಗಿ ತೋರಿಸಿದ್ದೀರಿ. ಸೊಗಸಾಗಿದೆ.

    ReplyDelete
  5. ಸುಖದ ಅನ್ವೇಷಣೆಯಲ್ಲಿ ಮನುಷ್ಯ ದೈನಿಕವನ್ನ ಇನ್ನಷ್ಟು ಸಂಕೀರ್ಣಗೊಳಿಸಿಕೊಳ್ಳುತ್ತಿದ್ದಾನಲ್ವಾ..?

    ಚೆನ್ನಾಗಿದೆ ಬರಹ.

    ನಿಜ, ಪ್ರಕೃತಿಯ ಪುಸ್ತಕವನ್ನು ಓದ ಬಲ್ಲವರಾದರೆ ಕಲ್ಲೂ ಕಥೆ ಹೇಳೀತು....

    ReplyDelete
  6. super.. Ofcli thumba janarige odiside..

    ReplyDelete
  7. "ಪರಿಣಾಮಕಾರಿ" ಬರಹ! ಇಷ್ಟ ಆಯ್ತು.

    ReplyDelete
  8. ಅನಿತಕ್ಕ ನಿಜಕ್ಕು ಬಹಳ ಸು೦ದರವಾಗಿ ಬರೆದಿದ್ದೀರಿ. ಪ್ರಕ್ರುತಿಯ ಎಲ್ಲ ವಸ್ತುಗಳಿಗೆ ಬೆಲೆ ಇದೆ, ಆದರೆ ಮಾನವ ಕ೦ಡುಹಿಡಿದ ದುಡ್ಡಿಗೆ....ಉಪಯೋಗವಿದ್ದರೆ ಮಾತ್ರ ಬೆಲೆ ಇಲ್ಲದಿದ್ದಲ್ಲಿ ಕೇವಲ ರದ್ದಿ ಪೇಪರ್...ಈ ಲೇಖನ ಬಹಳ ಇಷ್ಟವಾಯಿತು...

    ReplyDelete
  9. ಅನೀತಕ್ಕ ಅಷ್ಟು ಚಿಕ್ಕದಾಗಿ ಚೊಕ್ಕವಾಗಿ ಸುಂದರ ಕತೆಗಳನ್ನು ನೇಯುವ ನಿಮ್ಮ ಸೃಜನಶೀಲತೆಗೆ ಮನ ಮಾರುಹೋಯ್ತು.. ಸೂಕ್ಷ್ಮ ವಿಷಯದ ಬಗ್ಗೆ ತುಂಬಾ ಸುಂದರವಾಗಿ ಬೆಳಕು ಚೆಲ್ಲುತ್ತದೆ ಕತೆ.. ಮಾನವನ ಜೀವನದಲ್ಲಿನ ಕ್ಲಿಷ್ಟತೆಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದೆ.. ಚೆಂದವಾದ ಸಚಿತ್ರ ಕತೆ, ತುಂಬಾ ಇಷ್ಟವಾಯ್ತು..:)))

    ReplyDelete
  10. ಚೆನ್ನಾಗಿದೆ ಅಕ್ಕ... ಎಷ್ಟೇ ದುಡ್ಡಿದ್ದರೇನು ಹಸಿದಾಗ ಅದನ್ನು ಮುಕ್ಕಲಾಗುವುದಿಲ್ಲ. ನಿಮ್ಮ ಕಥೆ ಮಾರ್ಮಿಕವಾಗಿ ಚೆನ್ನಾಗಿದೆ....

    ReplyDelete
  11. hoi puttakka kate bahala marmikavaagide :):)

    ReplyDelete