ಅವಳು ಅಕ್ಕಿ ಅರೆಯುವುದು ಎಂದರೆ ಅದೊಂದು ಯಾಗವಿದ್ದಂತೆ. ಮೊದಲಿಗೆ ಕಲ್ಲಿನ ಹತ್ತಿರದಲ್ಲಿ ನೆನೆಸಿಟ್ಟ ಅಕ್ಕಿ ,ನೀರು, ಕುಳಿತುಕೊಳ್ಳಲು ಮಣೆ ಎಲ್ಲಾ ಅಚ್ಚುಕಟ್ಟಾಗಿ ಜೋಡಿಸುತ್ತಿದ್ದಳು.ಕಲ್ಲನ್ನು ಸ್ವಚ್ಚಗೊಳಿಸುವುದರಲ್ಲೂ ಏನೋ ತನ್ಮಯತೆ.
ಮತ್ತೆ ನನ್ನನ್ನು ಕಣ್ಣೋಟದಲ್ಲೇ ಕರೆಯುತ್ತಿದ್ದಳು.ಒಂದು ಕೈ ಕಡೆಯುವ ಕಲ್ಲಿನಲ್ಲಿ ಅಕ್ಕಿಯನ್ನು ತಿರುವುತ್ತಿದ್ದರೆ , ಇನ್ನೊಂದು ನನ್ನ ಕೈಯ್ಯಲ್ಲಿ ಹಿಡಿದಿರುವ ಸ್ಲೇಟಿನ ಅಕ್ಷರಗಳನ್ನು ಸರಿ ಪಡಿಸುತ್ತಿತ್ತು. ನನ್ನ ಸಂಯಮದ ಕಟ್ಟೆ ಒಡೆಯುವುದು ಆವಾಗಲೇ.. ಸಾಕು ಅದೆಲ್ಲ ಸರಿಯೇ ಇದೆ. ಈಗ ಕಥೆ ಹೇಳು ಎಂದು ಪೀಡಿಸುತ್ತಿದ್ದೆ.
ಒಂದಾನೊಂದು ಕಾಲದಲ್ಲಿ ಎಂದು ಕಥೆ ಸುರು ಆದರೆ ನಾನೆಲ್ಲೊ ಮುಖ ತಿರುಗಿಸುತ್ತಿದ್ದೆ. ನನಗೆ ಅದೇ ರಾಜ, ಅದೇ ರಾಣಿ ಅವರ ಸಂಪತ್ತು ತುಂಬಿದ ರಾಜ್ಯದ ನೋವೆ ಇರದ, ಇದ್ದರೂ ಅದು ನನ್ನರಿವಿಗೆ ಬರದಂತೆ ಇರುವ ಕಥೆಗಳು ಸ್ವಲ್ಪವೂ ರುಚಿಸುತ್ತಿರಲಿಲ್ಲ.
ಅವಳೂ ನನ್ನಾಳವನ್ನು ಬಲ್ಲಳು.
ಕಲ್ಲಿನ ಪ್ರದಕ್ಷಿಣೆ ಅದರ ಗುಂಡಿಯ ಒಳಗೇ ಆಗುವಂತೆ ಅವಳೂ ತನ್ನದೇ ಬಾಲ್ಯಕ್ಕೊ, ಕಳೆದು ಹೋದ ಯೌವನಕ್ಕೊ ಸುತ್ತು ಬರುತ್ತಿದ್ದಳು. ಅವಳ ಪ್ರತಿ ಕಥೆಯಲ್ಲೂ ಅವಳೇ ನಾಯಕಿ. ಆ ಕಥೆಗಳಲ್ಲಿ ಅವಳ ನಗು, ಅವಳದೇ ಅಳು.. ಎಲ್ಲವನ್ನು ಮೊಗೆ ಮೊಗೆದು ತುಂಬಿ ನನಸಾಗದ ಕನಸುಗಳನ್ನು ಅಲ್ಲಿ ಹಸನಾಗಿ ಹರವುತ್ತಿದ್ದಳು. ನಿಧಾನಕ್ಕೆ ಒಂದೊಂದನ್ನೆ ಹೆಕ್ಕಿ , ಪೋಣಿಸಿ ನನ್ನ ಮುಡಿಯಲ್ಲೇ ಇಡುತ್ತಿದ್ದಳು. ಅದು ನನ್ನಲ್ಲೇ ಅರಳಿ ಪರಿಮಳಿಸಲಿ ಎಂಬ ಹಾರೈಕೆ ಜೊತೆಗೆ..
ಎಲ್ಲೆಲ್ಲೊ ಹರಡಿದ್ದ ನನಗೇ ತಿಳಿಯದ ಸಂಬಂಧಗಳ ಬಂಧವನ್ನು ಮತ್ತೆ ಬೆಸೆಯುತ್ತಿದ್ದಳು. ಕಳೆದ ಕಾಲದ ಬುತ್ತಿಯ ಗಂಟಿನ ಸವಿಯೂಟವದು. ಅವಳ ಕಥೆಗಳಿಂದಲೇ ನನ್ನ ಜಗತ್ತು ವಿಶಾಲವಾಗುತ್ತಿತ್ತು.
ತಾನಿಟ್ಟ ಪ್ರತಿ ಹೆಜ್ಜೆಗಳ ಮೇಲೆ ನನ್ನ ಪುಟ್ಟ ಪಾದವನ್ನೂ ನೆಟ್ಟಗೆ ನಿಲ್ಲಿಸುವ ಅವಳ ಪ್ರಯತ್ನ..
ಅಕ್ಕಿ ನುಣ್ಣಗಾಗುತ್ತಿದ್ದಂತೆ ನಾನೂ ನಯವಾಗುತ್ತಾ ಸಾಗುತ್ತಿದ್ದೆ. ಅವಳ ಎಲ್ಲಾ ಭಾವಗಳು ನನ್ನಲ್ಲೂ ಮೂಡಿದರೆ ತೃಪ್ತಿಯಿಂದ ನಸು ನಗುತ್ತಿದ್ದಳು. ಅವಳ ಕಣ್ಣ ಹನಿಯೊತ್ತಿದ ಸೆರಗಿನಿಂದಲೇ ನನ್ನ ಮುಖವೊರೆಸುತ್ತಿದ್ದಳು. ಬಿಚ್ಚಿಟ್ಟ ಕಳೆದ ಬದುಕಿನ ಮಾಯೆಯಲ್ಲಿ ತಾನೂ ಕಳೆದು ಹೋದುದಕ್ಕೆ ಸಂಕೋಚಿಸುತ್ತಲೇ ಕುಳಿತಲ್ಲಿಂದ ಎದ್ದೇಳುತ್ತಿದ್ದಳು..
ನನಗಾಗಿ?? ಕಥೆಯಾಗಿದ್ದ ಅವಳು... ನನ್ನಮ್ಮ..
ನನ್ನಂತೆ ಇವಳೂ..
ಹಿಟ್ಟು ನುಣ್ಣಗಾಗುವಾಗ ನೀರು ಕೂಡಾ ಬಸವಳಿಯುತ್ತದೆ....ತಿರುಗುತ್ತಿದ್ದುದು ಕಲ್ಲೋ.. ಕಾಲವೋ..ತಿಳಿಯದಂತೆ.. ತಿರುವುವ ಕೈ ತೂಕಡಿಸುತ್ತಲೇ ತಿರುವುತ್ತಿತ್ತು ಇದಾವುದರ ಪರಿವೆಯಿಲ್ಲದೆ..
ಸದಾ ಕಥೆಗಳಿಗಾಗಿಯೇ ಪೀಡಿಸುವ, ಕಥೆಯನ್ನೇ ನಿಜವೆಂದು ಭ್ರಮಿಸುವ ಹುಚ್ಚು ಹುಡುಗಿಯಾಗಿದ್ದ ಇವಳು.. ಪ್ರತಿ ನೋವಿಗೂ ಅಳುವೊಂದೇ ಉತ್ತರವಲ್ಲ.. ನಕ್ಕೂ ಮರೆಸಬಹುದೆಂದು ತಿಳಿಯದಿದ್ದವಳು.
ಇವಳ ಕುತೂಹಲ ಇದ್ದುದು ನನ್ನ ಬಗೆಗೇ.. ಹರಿದ ನನ್ನ ಸೀರೆಯ ತುಂಡನ್ನೇ ಉಟ್ಟು ನನ್ನಂತೇ ಆಗುತ್ತಿದ್ದ ಬಿನ್ನಾಣಗಿತ್ತಿ....
ಎಲ್ಲವನ್ನೂ ಇದ್ದಂತೆ ಹೇಳಿದರೆ ಕಥೆ ಹೇಗಾದೀತು..?ಹಾಗೆಂದು ಮನ ಬಯಸಿದ್ದನ್ನೆಲ್ಲ ನಾಲಿಗೆ ನುಡಿದರೆ ಇವಳರಿವಿನ ಅಳತೆ ಮೀರಬಹುದೆಂಬ ಚಿಂತೆ.. ಸೋಲುಗಳೆಷ್ಟೇ ಬರಲಿ ,ಪ್ರತಿ ಕೊನೆಯೂ ಗೆಲುವಿನ ಮೆಟ್ಟಿಲೇರಲೇಬೇಕಾದ ಅನಿವಾರ್ಯತೆಯೂ ಜೊತೆಗಿತ್ತು. ಇವಳ ಕಣ್ಣಲ್ಲಿ ಆ ಮೆಚ್ಚುಗೆ ಒಂದು ಕ್ಷಣ ಫಳಫಳಿಸಿ ಮಿಂಚುವುದೂ ನನ್ನ ಎದೆಯುಬ್ಬಿಸುತ್ತಿತ್ತು.
ಪ್ರತಿ ಕಿರಣದ ಗುರಿಯೂ ಬೆಳಕಾಗಿಸುವುದರ ಕಡೆಗೇ ..
ಹರಿವ ತಿಳಿನೀರ ಝರಿಯಂತೆ ಕಪಟವಿಲ್ಲದ ಮುದ್ದು ಕೂಸು.. ನನ್ನ ಒಳಗಿದ್ದ ಕಿಡಿಯ ನಂದಿಸುವ ನೀರು
ಇನ್ನೂ ಹೆಜ್ಜೆ ಮೂಡದ ಹಾದಿಯಲ್ಲಿ ಸಾಗಬೇಕಿದ್ದವಳು ,ಮುಳ್ಳು ಕಲ್ಲುಗಳ ಪರಿಚಯ ಒಳ್ಳೆಯದೇ..
ನನ್ನ ನೆನಹುಗಳಿಗೆ ಕಾವು ಕೊಟ್ಟು ಮತ್ತೆ ಮರಿಯಾಗಿಸುವ, ಇವಳ ರೆಕ್ಕೆಯ ಆಸರೆಯಲ್ಲಿ ಆಗಸಕ್ಕೇರುವ ನನ್ನ ನಿಲುವು ಸ್ವಾರ್ಥವೇ ಎಂಬ ಶಂಕೆಯೂ ಮೂಡುತ್ತಿತ್ತು.
ಆದರೆ ಅನುಭವಗಳ ತಳಹದಿ ಗಟ್ಟಿಯಾಗಿದ್ದಷ್ಟು ಕಟ್ಟಡ ಭದ್ರವಾಗಿ ನಿಂತೀತು ಎಂಬ ಆಸೆ ನನ್ನೊಳಗೆ .
ಏಕೆಂದರೆ ನನಗಾಗಲೇ ತಿಳಿದಿತ್ತಲ್ಲ.. ಇವಳೂ ನನ್ನಂತೆ ಹೆಣ್ಣಾಗುವವಳು..
vibhinna sahiliyalli manasannu bicchiduva nimma barahagalu tumbaa sundaravagiruttade!
ReplyDeleteಹಿಟ್ಟು ನುಣ್ಣಗಾದಾಗ ನೀರು ಬಸವಳಿಯುತ್ತದೆ. ಕಾಲದ ಮಹಿಮೆ ಖಂಡಿತ ಅಲ್ಲ ಅದು, ಕಾಯಕದ, ದುಡಿಮೆಯದ್ದು..
ReplyDeleteಲೇಖನ ಚೆನ್ನಾಗಿದೆ :)
Very Nice....Heart touching,,,,
ReplyDelete.... nice :-)
ReplyDeletenimma ee baraha bahala chennagide.....
ReplyDeleteಬ್ಲಾಗ್ ಓದಿದೆ. ಲೇಖನಗಳೆಲ್ಲ ಚೆನ್ನಾಗಿದ್ದುವು.
ReplyDeleteಬ್ಲಾಗ್ ಪರದೆಯನ್ನು ಕಪ್ಪಿನಿಂದ ಬಿಳಿಗೆ ಬದಲಾಯಿಸಿ ಕಣ್ಣಿಗೆ ಹಿತ ಕೊಡುವಿರ?
ಮಾಲಾ
ರೆಟರಿಕ್ ಸೃಜನಶೀಲ ಬರವಣಿಗೆಯ ಶಕ್ತಿಯೂ ಆಗಬಲ್ಲದು, ಮಿತಿಯೂ ಆಗಬಲ್ಲದು,ಇಲ್ಲಿ ಮನಸಿನ ವ್ಯಾಪಾರಗಳನ್ನು ನೀವು ತೀರ ಸಾಂದ್ರವಾಗಿ ಆದರೆ ಅರ್ಥಗರ್ಭಿತವಾಗಿ ಗ್ರಹಿಸಿರುವದರಿಂದ ರೆಟರಿಕ್ ಆ ಗ್ರಹಿಕೆಗೆ ಪೂರಕವಾಗಿದ್ದು ಅದಕ್ಕೊಂದು ಸೊಬಗನ್ನೂ ನೀಡಿದೆ, ಇಷ್ಟವಾಯ್ತು.
ReplyDeletetumba chennagide kane
ReplyDeleteಮೆಚ್ಚುಗೆಗಾಗಿ ಧನ್ಯವಾದಗಳು..
ReplyDeleteಕಪ್ಪು ಪರದೆ ಸರಿಸಿದ್ದಕ್ಕೆ ವಂದನೆಗಳು.
ReplyDeleteಮಾಲಾ
ಅಮ್ಮನೆಂದರೆ ಹಾಗೇ...ಬೆಳಗೋ ಹಣತೆಯ ಹಾಗೆ...
ReplyDeleteಇಷ್ಟವಾಯಿತು...