Pages

Total Visitors

Saturday, August 27, 2011

ಹೇಳೇ ಗೆಳತಿ ..




ಬೆಳಗ್ಗಿನಿಂದಲೇ ಅವಳ ಮ್ಲಾನ ವದನವನ್ನು ನೋಡಲೇ ಆಗುತ್ತಿರಲಿಲ್ಲ. ನಾವು ಗೆಳತಿಯರೆಲ್ಲ ಗುಂಪುಗೂಡಿ ಪ್ರಶ್ನೆ ಮಾಡಿದರೂ ಉತ್ತರವಿಲ್ಲ. ಯಾಕೋ ಅವಳ ಕಣ್ಣಾಲಿಗಳಲ್ಲಿ ಮಡುಗಟ್ಟಿದ ನೀರನ್ನು ನೋಡಲಾಗದೇ ಒತ್ತಾಯಿಸಿದರೆ ಇನ್ನೆಲ್ಲಿ ಅಳುತ್ತಾಳೊ ಎಂಬ ಭಯದಿಂದ ನಮ್ಮ ನಮ್ಮ ಬೆಂಚುಗಳಿಗೆ ಮರಳಿದೆವು.

ಕ್ಲಾಸಿನೊಳಗೆ ಟೀಚರ್ ಬಂದು ಏನೇನು ಹೇಳಿದರೋ , ಯಾವುದೂ ನನ್ನ ತಲೆಯೊಳಗೆ ಇಳಿಯಲಿಲ್ಲ.ಹಿಂದಿನ  ಬೆಂಚ್ ನಲ್ಲಿ ಕುಳಿತು ಕಣ್ಣೀರಾಗ್ತಿದ್ದ ಗೆಳತಿಯ ಕಡೆಗೇ ಕಣ್ಣೆಳೆಯುತ್ತಿತ್ತು. ಬೇಗ ಒಮ್ಮೆ ಮಧ್ಯಾಹ್ನವಾದರೆ ಸಾಕಿತ್ತು ಎಂಬ ಚಡಪಡಿಕೆ.
ಊಟದ ಬುತ್ತಿ ಕೈಯಲ್ಲಿ  ಹಿಡಿದು ನಾವಿಬ್ಬರೂ ಜೊತೆಯಾದೆವು. ಯಾವತ್ತು  ಹೀಗೆ ಕಂಡವಳೆ ಅಲ್ಲ. ಯಾಕೊ ಅವಳ ಹೊಸ ತರ ನನ್ನಲ್ಲಿ ಅಪರಿಚಿತ ಭಾವವನ್ನು ಮೂಡಿಸಿತು.ಮೌನವಾಗಿಯೆ ಹೆಜ್ಜೆ ಹಾಕುತ್ತಿದ್ದವಳ ಕೈ  ಹಿಡಿದೆ. ಒಮ್ಮೆ ಮೊಗವೆತ್ತಿ ನನ್ನೆಡೆಗೆ ನೋಡಿದವಳೇ, ಮತ್ತೆ ಎಲ್ಲೊ ನೋಟ ಬೀರಿದಳು. ಬಲವಂತ ಮಾಡುವುದು ನನಗೂ ಸಾಧ್ಯವಿಲ್ಲದೆ ಅವಳ ಕೈಯನ್ನೆ ಬಿಗಿಯಾಗಿ ಅದುಮಿ ಹಿಡಿದು ನಡೆದೆ.

ಊಟದ ಬುತ್ತಿ ಬಿಡಿಸಿಟ್ಟು ಚಿತ್ರಪಟದೊಳಗಿನ ಚಿತ್ರದಂತೆ ಕುಳಿತೇ ಇದ್ದಳು. ಕಣ್ಣಲ್ಲಿ ಸೋನೆ ಮಳೆ..ಆದರೂ ಏನೊಂದು ಕೇಳದೆ ಸುಮ್ಮನುಳಿದಿದ್ದ ನನ್ನನ್ನು ತಿವಿದು  ಹೇಯ್ .. !! ನಾನ್ಯಾಕೆ  ಅಳ್ತಿದ್ದೀನಿ ಅಂತ ಕೇಳಲ್ಲವೇನೇ?" ಅಂದಳು ಅದಕ್ಕಾಗಿಯೇ ಕಾದಿದ್ದರೂ, ಬಿಂಕ ಬಿಡದೆ , " ನಿಂಗೆ ಹೇಳ್ಬೇಕು ಅನ್ನಿಸಿದರೆ ನೀನೇ ಹೇಳ್ತೀಯ. ನಮ್ಮೊಳಗೆ ಗುಟ್ಟೇನು " ಎಂದೆ.

ಮೆಲ್ಲನೆ ಮಾತಾದಳು ಹುಡುಗಿ..

"ಹುಂ.. ಆದರೂ ನಿಂಗೆ ಹೇಗೆ ಹೇಳೋದು ಅಂತಾನೇ ಅರ್ಥ ಆಗ್ತಿಲ್ಲ, ಅಥವಾ ನಾನು ಹೇಳಿದ್ದನ್ನು ನಿಂಗೆ ಅರ್ಥ ಮಾಡ್ಕೊಳ್ಳೋಕ್ಕಾಗುತ್ತಾ ಅಂತ್ಲೂ ನಂಗೆ ಗೊತ್ತಿಲ್ಲ" ಅಂದಳು.

"ಯಾಕೆ.. ಏನಾಯ್ತು ಅಂತಾದ್ದು.."ಅಂದೆ ಕುತೂಹಲದಿಂದ

ನನ್ನ ಕೈ ಗಟ್ಟಿ ಹಿಡಿದು ಬಿಕ್ಕಿದಳು.  ಮಾತುಗಳಳಿದು ಮೌನವಾದೆ.

ಸಣ್ಣ ಸ್ವರದಲ್ಲಿ "ನಾನು ದೊಡ್ಡವಳಾಗಿದ್ದೀನಿ" ಅಂದಳು.

.ನಿಜಕ್ಕೂ ಅವಳು ಹೇಳಿದ ಹಾಗೆ ವಿಷಯ ನನಗೆ ಅರ್ಥವೂ ಆಗಲಿಲ್ಲ. ಅವಳ ಕಣ್ಣೀರ ಕೋಡಿ ನೋಡಿ ದೊಡ್ಡವಳಾಗುವುದು ಎಂದರೆ ಅಸಹನೀಯ ವೇದನೆಯೂ ಇರುತ್ತದೇನೋ ಎಂಬ ಭಯವೂ..

ಈಗ ತನ್ನಷ್ಟಕ್ಕೆ ತಾನೇ ಸುಧಾರಿಸಿಕೊಂಡ ಅವಳು ಮೆತ್ತಗೆ ಎಲ್ಲವನ್ನೂ  ವಿವರಿಸಿದಳು.ನನಗಿದು ಕಂಡು ಕೇಳರಿಯದ ವಿಚಿತ್ರ.

ಮೆಲ್ಲಗೆ ಪ್ರಶ್ನಿಸಿದೆ.ನಂಗೂ ಹೀಗೇ ಆಗುತ್ತಾ..

ತುಂಟ ನಗು ಇಣುಕಿತು ಅವಳ ಮೊಗದಲ್ಲಿ .. "ನೀನೂ ಹುಡುಗಿ ಅಲ್ವಾ.. ಎಲ್ರಿಗೂ ಹೀಗೇ  ಆಗುತ್ತೆ"ಎಂದಳು.

ದೂರದಲ್ಲಿದ್ದ ಅಕ್ಕನ ನೆನಪು ಬಂತು.ಮೊದಲೆಲ್ಲಾ ಅವಳು ಬಂದೊಡನೆ ಊರೆಲ್ಲಾ ಸುತ್ತಿ, ಇದ್ದ ಎಲ್ಲಾ ಹಣ್ಣಿನ ಮರಗಳನ್ನು ಎಡತಾಕಿ ಬರುತ್ತಿದ್ದೆವು. ಕಳೆದ ಬಾರಿ ಬಂದಾಗ ಅಮ್ಮ ಅವಳನ್ನು ಹೊರಗೆ ಹೋಗಲೇ ಬಿಟ್ಟಿರಲಿಲ್ಲ.ಹಾಗೆಲ್ಲ ಸುತ್ತಾಡಬಾರದು ಎಂಬ ತಾಕೀತು ಬೇರೆ. ಅಣ್ಣಂದಿರೊಂದಿಗೆ ಮೊದಲಿನಂತೆ ಕುಣಿದಾಡುವ ಹಾಗೂ ಇರಲಿಲ್ಲ.ಅವಳಲ್ಲೂ ಕೇಳಿದ್ದಕ್ಕೆ ದೊಡ್ಡವಳಾಗಿದ್ದೇನೆ. ಎಂಬ ಪದವನ್ನೆ ಉಪಯೋಗಿಸಿದ್ದಳು.ಆದರೆ ಎಷ್ಟೇ ಬೇಡಿಕೊಂಡರೂ "ನಿಂಗೆ ಗೊತ್ತಾಗುತ್ತೆ, ನಾನು ಹೇಳಲ್ಲ ಹೋಗು" ಎಂದಿದ್ದಳು.

ನನಗೆ ಅಸಹನೀಯ ಎನ್ನಿಸಿತು ಈ  'ದೊಡ್ಡವಳಾಗುವುದು'..ನನ್ನೆಲ್ಲಾ ಚಟುವಟಿಕೆಗಳಿಗೆ ಬೇಲಿಯಾಗುವ ಅದರ ಬಗ್ಗೆ ನಿಜಕ್ಕೂ ಸಿಟ್ಟು ಬಂತು..ಮನಸ್ಸಿನಲ್ಲೇ ಕಾಣದ ದೇವರಿಗೆ ಹರಕೆಯನ್ನೂ ಹೊತ್ತೆ. ನನ್ನನ್ನೆಂದೂ ದೊಡ್ಡವಳನ್ನಾಗಿ ಮಾಡದೆ ಇರು ಎಂದು.ಗೆಳತಿ ಅವಳೆ ಒಪ್ಪಿಕೊಂಡ ಕಾರಣ ತಾನೆ ಈ ಸಂಗತಿ ನನಗೂ ತಿಳಿದಿದ್ದು . ಹಾಗಾಗಿ ನಾನಾಗಿ ಹೇಳದೆ ಯಾರಿಗೂ ಗೊತ್ತಾಗದು ಈ  ವಿಷಯ  ಎಂದು ನನ್ನನ್ನೇ ಸಮಾಧಾನಿಸಿಕೊಂಡೆ. ಇದರೊಂದಿಗೆ ಇಷ್ಟರವರೆಗೆ ನನ್ನರಿವಿಗೆ  ಬರದೆ ಇದ್ದ ಪ್ರಪಂಚದ ಯಾವುದೋ ಒಂದು ರಹಸ್ಯವು ನನ್ನ ವಶವಾದ  ಸಂತಸ.

ನನ್ನಲ್ಲಿ ಇನ್ನೂ ನೂರಾರು ಪ್ರಶ್ನೆಗಳಿತ್ತು. ಮನೆಯಲ್ಲಿ ಕೇಳೋಣವೆಂದರೆ ಅದೇನೋ ಸಂಕೋಚ..

ಎದೆಯೊಳಗೇ ಬಚ್ಚಿಟ್ಟೆ ಎಲ್ಲಾ ಪ್ರಶ್ನೆಗಳನ್ನೂ .... ನಾನಾಗಿಯೇ ಉತ್ತರ ಕಂಡುಕೊಳ್ಳುವವರೆಗೇ..

6 comments:

  1. ಇಲ್ಲಿ ನೀವು ಆಯ್ದುಕೊಂಡಿರುವ ಪ್ರತಿಯೊಬ್ಬ ಹೆಣ್ಣು ಮಗಳ ಮನಸ್ಸಿನ ವಿಷಯ. ಅಗತ್ಯವೇ ಆಗಿತ್ತು.ನಿಮ್ಮಂತಹ ರೇಶಿಮೆ ಎಳೆಯ0ತಿರುವ ಮನಸ್ಸಿನ ಬರಹಗಾರ್ತಿಯರು ಮಾತ್ರ ಇದನ್ನು ಸೆರೆ ಹಿಡಿಯ ಬಲ್ಲರು.ಆದರೆ ನನಗನ್ನಿಸಿದಂತೆ ಮನಸ್ಸು ಹರವಿಕೊಂಡಿದ್ದು ಕಡಿಮೆಯೆನಿಸಿತು.ಆಗಸಕ್ಕೆ ಹಾರಿದಾಗ ಕೇವಲ ಮೋಡವನ್ನೇ ನೋಡಬೇಡಿ, ಅಲ್ಲಿರುವ ಚಿಕ್ಕೆ ಮತ್ತು ಚುಕ್ಕಿಗಳು, ಅವುಗಳ ಭಾವಗಳು ನೇರವಾಗಿ ಸ್ವತಃ ಪ್ರಕ್ರುತ್ತಿಯ ಪ್ರತಿರುಪವಾಗಿರುವ ಹೆಣ್ಣು ಮನಸ್ಸು ಪದಗಳೊಂದಿಗೆ ಮಾತಾಡುವಂತಿರಲಿ. ಹೆಣ್ಣು ದೊಡ್ಡವಳಾಗೋದು ಅನ್ನುವ ನಿಮ್ಮ ಒಕ್ಕಣೆ ನೋಡಿ ಭೂಮಿಯೇ ಮಾತಾಡಿದಂತೆ ಭಾಸವಾಯಿತು.ಇನ್ನಷ್ಟು ಅದನ್ನು ವಿಸ್ತರಿಸಿ. ಅಭಿನಂದನೆಗಳು.

    ReplyDelete
  2. ರವಿಯವರೇ.. ಈ ಲೇಖನ ಪತ್ರಿಕೆಯಲ್ಲಿನ ಪ್ರಕಟಣೆಗಾಗಿ ಶಬ್ಧಗಳ ಮಿತಿಯಲ್ಲಿ ಬರೆಯುವ ಅನಿವಾರ್ಯತೆಯಿಂದ ಬರೆದದ್ದು..ಹಾಗಾಗಿ ಕೇವಲ ಆಗಸದ ನೀಲಿ ಮಾತ್ರ ನಿಲುಕಿದ್ದು :)

    ReplyDelete
  3. Dear Anitha Naresh Manchi,

    You have quite effectively handled the sensitive issue which every teen aged girl faces in life!
    My own experience and feelings were similar !
    Nice write up Mrs Manchi.

    Nimisha Shetty.

    ReplyDelete
  4. ani houdu idu nammellara badukina ondu ghatta allavaa !! chennagide ....

    ReplyDelete