Pages

Total Visitors

Saturday, January 8, 2011

ಇಡೀ ಲೋಕ ಕತ್ತಲ ಮೌನದಲ್ಲಿ ನಿದ್ರಿಸುತ್ತಿರುವಾಗ, ಈ   ಗಂಧರ್ವರು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಭೂಮಿಗಿಳಿಯುತ್ತಾರೆ.ಅಂಧಕಾರದಲ್ಲೇ ತಮ್ಮ ಗಮ್ಯವನ್ನು ಗುರುತಿಸುವ ಇವರು ಮೆತ್ತಗೆ ಹೂಗಳ   ಮನೆಯ ಬಾಗಿಲು ಬಡಿಯುತ್ತಾರೆ. ತಮ್ಮ ತಂಪಿನಿಂದಲೇ ಆತ್ಮೀಯತೆಯನ್ನು ಸೂಸಿ ಅವುಗಳ  ಒಡನಾಟ ಗಳಿಸುತ್ತವೆ. ಕನಸ ಲೋಕದಲ್ಲಿ ಕಳೆದು ಹೋಗಿರುವ ಹೂಗಳು ಇವರ  ಮಧುರ ಸ್ಪರ್ಶಕ್ಕೆ ಮನಸೋತು, ಕಣ್ತೆರೆದು ಸ್ವಾಗತಿಸಿ,ತಮ್ಮ ಮೃದು ದಳಗಳನ್ನೇ ಹಾಸಿಗೆಯಂತೆ ಹಾಸಿ ಕುಳ್ಳಿರಿಸುತ್ತವೆ.ಜನ್ಮ ಜನ್ಮಗಳಿಂದ ಹೇಳದೆ  ಉಳಿದು ಹೋದ ಮಾತುಗಳನ್ನು ಮೌನವಾಗಿಯೇ ಕತೆಯಾಗಿಸುತ್ತಾರೆ. .   
  ಒಂದೊಂದೇ ಹನಿ ಹೂವಿನ   ಮೇಲೆ ಬಿದ್ದಾಗಲು ರೋಮಾಂಚನ ... ನವ ಕಂಪನ .. ಹೊಸ ಹುಟ್ಟಿಗೆ, ಹೊಸ ಚಿಗುರಿಗೆ ಮುತ್ತಿನಾಲಿಂಗನ...ಪ್ರಕೃತಿಯ ಅದ್ಭುತ ಚಿತ್ರಕಾವ್ಯ... ಬಣ್ಣ ಬಣ್ಣದ ಹೂಗಳ ಮೇಲೆ ಪವಡಿಸಿದ ನೀರಹನಿ, ತಂಟೆಕೋರ ಪುಟ್ಟ ಮಗು ಈಗಲೋ ಆಗಲೋ ತಾಯ ಸೊಂಟದಿಂದ ಜಾರುವಂತೆ .....ಮತ್ತೊಂದು ಹನಿಯು ಸಂಗಾತಿಯಾದರೆ  ಹೂವಿನ  ಚಿಂತೆ ಮರೆತು ಮೆಲ್ಲನಿಳಿದು ಭೂಮಿ ತಾಯೊಡಲ  ಸೇರುವ ಪರಿ...   ಹೂಗಳ ಎದೆ ಭಾರವಾಗಿಸುತ್ತವೆ
'
ಬೆಳಗು' ಎಲ್ಲರನ್ನು ,ಎಲ್ಲವನ್ನು ಎಚ್ಚರಿಸಿ ಹೊಸದಿನಕ್ಕೆ ನೂಕುವ ಪ್ರತಿನಿತ್ಯದ ಬೆರಗು. ಈಗ ಹೂಗಳಿಗೂ ಇಬ್ಬಂದಿತನ. ಹಾಗೆಂದು ಕರ್ತವ್ಯದ ಕೂಗಿಗೆ ವಿಮುಖವಾಗುದು ಸಾಧ್ಯವೇ..?ಮೆಲ್ಲನೆ ಮೈ ಮುರಿದು ಏಳುವ ತವಕ. ಹಾಗೆಂದು ಅಷ್ಟು ಬೇಗನೆ ಏಳಲು ಬಿಟ್ಟಾವೆಯೇ, ಅಪ್ಪಿ ಹಿಡಿದ ನೀರ ಹನಿಗಳು. ಒಂದೊಂದು ಹನಿಯೂ ಇನ್ನೂ ಕೊಂಚ ಹೊತ್ತು ನನ್ನ ಆಲಿಂಗನದಲ್ಲೇ ಇರು ಎಂದು ಪ್ರೇಯಸಿಯನ್ನು  ಪೀಡಿಸುವ  ಪ್ರಿಯಕರನಂತೆ  ಕಾಡುತ್ತವೆ.  ತಲೆ ಎತ್ತಿ ನೋಡಲೂ ನಾಚಿಕೊಳ್ಳುವ ಹೂಗಳ ಮೊಗದಲ್ಲಿ ಸಾರ್ಥಕ ಭಾವ. ತನ್ನೊಳಗೆ ತುಂಬಿಕೊಂಡ ಪ್ರತಿ ಹನಿಯ ಪ್ರೀತಿಯನ್ನು ಇನ್ನಷ್ಟು ಆಸ್ವಾದಿಸುವ ಆತುರ. ಸ್ವಲ್ಪ ಹೊತ್ತಲ್ಲೇ ಬರುವ ಸೂರ್ಯನ ಆಗಮನಕ್ಕೆ ಮೊದಲೇ ಇನ್ನೊಂದಿಷ್ಟು ಅಕ್ಕರೆಯನ್ನು ಸೂರೆಗೈಯುವ ತವಕ... ಹರಿಯುವ ತನ್ನ ಮೂಲಗುಣವನ್ನೇ ಮರೆತು ಬಿರಿದ ಹೂಗಳ ನಡುವೆ ಸಿಂಗರಿಸಿಕೊಂಡು ನಿಲ್ಲುವುದು ಹನಿ ನೀರಿಗೂ ಪ್ರಿಯವೆಂದೇ ತೋರುತ್ತದೆ.ತನ್ನ ಒಂದೊಂದೇ ಹನಿಯನ್ನು ಜತನದಿಂದ ಹೂವ ಮೇಲೆ ಹಾರವಾಗಿ ಜೋಡಿಸುವ ಇವರ ಕಲೆ ಅತಿ ಸುಂದರ. ಕೆಲವೊಮ್ಮೆ ರಂಗೋಲಿಯ ಚುಕ್ಕಿಗಳಂತೆ ಸಮಾನಾಂತರದಲ್ಲಿ ನಿಂತರೆ , ಮತ್ತೊಮ್ಮೆ ಗುರುಗಳ ಬೆತ್ತಕ್ಕೆ ಹೆದರಿದ ಪುಟ್ಟ ಮಕ್ಕಳಂತೆ ಸಾಲಿನಲ್ಲಿ ನಿಂತು ಬೆಳಕು ತಾಕಿದಾಗ ಎಳೆ ಬಿಸಿಲಿನ ನೋಟಕ್ಕೆ ತಾನು ಕಣ್ಣು ಕೊಟ್ಟು ಪಳಕ್ ಎಂದು ಸಂಭ್ರಮಿಸುವುದು , ಹೊಳೆವ ವಜ್ರವ ಯಾರೋ ಅನಾಮತ್ತಾಗಿ ಇಲ್ಲೆಲ್ಲಾ ಚೆಲ್ಲಿ ಹೋದಂತೆನಿಸದಿರದು.ಬೇರಿನಾಳಕ್ಕಿಳಿದು ಚಿಗುರ ಹೊರ ತರಿಸುವ ನೀರು ಹಸಿರೆಲೆ, ಹೂಗಳ ಮೇಲೆ ಮೂಡಿಸುವ ಚಿತ್ತಾರ.... ಹೋಲಿಕೆಗೆ ನಿಲುಕದ ಸೌಂಧರ್ಯ ....ಯಾರೂ ಕುಂಚ ಹಿಡಿದು ಬಣ್ಣ ತೀಡದಿದ್ದರೂ,ಇವು ಮೆರೆಸುವ ರಂಗಿನ ಸಡಗರ  ....


ಸಹಜವಾಗಿಯೇ ಸುಂದರವಾಗಿರುವ ಹೂವನ್ನು ಅಲಂಕರಿಸಿ ಪ್ರತಿ ನಿತ್ಯ ನವ ವಧುವನ್ನಾಗಿಸುವುದು ಇವರ ಹವ್ಯಾಸ. ಯಾವ ಅರಸಿಕನೂ ಇವರ ಮಾಯೆಯ ಬಲೆಗೆ ಸಿಲುಕದಿರಲಾರ.ಹೂಗಳು ನಿಧಾನಕ್ಕೆ ಸೂರ್ಯಮುಖಿಗಳಾದಂತೆ ಇವು ಮೆಲ್ಲನೆ ತಮ್ಮ ಆಕಾರವನ್ನು ಕಳೆದು ಕೊಳ್ಳುತ್ತವೆ. ಬಿರು ಬಿಸಿಲಿನ ದಾಳಿಗೆ ಆರಿ ಹೋಗುವ ಅರಿವಿದ್ದರೂ ಸ್ವಲ್ಪವೂ ಖೇದ ಪಡದೆ ಇರುವ ಬದುಕನ್ನು ತುಂಬು ಹೃದಯದಿಂದ ಪ್ರೀತಿಸುವ ಇವರ ಜೀವನ ಪ್ರೀತಿ ಅದ್ಭುತ. ಇರುವ ಕ್ಷಣ ಹೊತ್ತಲ್ಲೂ ಸೌಂಧರ್ಯದ ಎಲ್ಲಾ ಮಜಲುಗಳನ್ನು ಕ್ರಮಿಸುತ್ತವೆ.  


 ಅರಳಿ ನಗುವ ಹೂಗಳ ಮೇಲೆ ನೀರ ಚಿನ್ನಾಟ ಪದಗಳ ಬಂಧನದಲ್ಲಿ ಉಳಿಯದು..ನೋಡಿಯೇ ಅನುಭವಿಸಬೇಕಿದರ  ಸವಿ.. ಬಿಂಕ ಬಿನ್ನಾಣ .. 





1 comment:

  1. ಅರಳಿ ನಗುವ ಹೂಗಳ ಮೇಲೆ ನೀರ ಚಿನ್ನಾಟ ಪದಗಳ ಬಂಧನದಲ್ಲಿ ಉಳಿಯದು..ನೋಡಿಯೇ ಅನುಭವಿಸಬೇಕಿದರ ಸವಿ.. ಬಿಂಕ ಬಿನ್ನಾಣ ..


    ಶಬ್ದಗಳ ಮೋಡಿ ಮನ ಸೂರೆಗೊಳ್ಳುತ್ತದೆ! ಧನ್ಯವಾದಗಳು ಅನಿತಾ!

    ReplyDelete