Pages

Total Visitors

Friday, December 21, 2012

ಕರ್ಚೀಪು


ರೇಣು ಮನೆಗೆ ಬಂದವಳೇ ಶಾಲೆಯ ಚೀಲವನ್ನು ಪಕ್ಕಕ್ಕೆಸೆದು ಮನೆಯ ಹಿಂಬದಿಗೆ ಅಮ್ಮನನ್ನು ಹುಡುಕುತ್ತಾ ಹೊರಟಳು. ಯಾವತ್ತೂ ಅವಳು ಮನೆಗೆ ಬರುವಾಗ ಅಮ್ಮ ಅಯ್ನೋರ ಮನೆಯ ಕೊಟ್ಟಿಗೆಯಲ್ಲಿ ಸಗಣಿ ರಾಶಿ ಮಾಡುತ್ತಾ ಕುಳಿತಿರುತ್ತಾಳೆ. 

'ಅಮ್ಮಾ' ಎಂದು ಹಿಂದಿನಿಂದ ಅವಳ ಕೊರಳನ್ನು ಬಳಸಿ ಹಿಡಿದಳು. ಇಡೀ ದಿನ ಕೆಲಸ ಮಾಡಿ ಬಳಲಿದ್ದರೂ ತನ್ನನ್ನು ಕಾಣುವಾಗ ಅವಳ ಮುಖ ಅರಳುವುದು ತಿಳಿದಿದೆ ರೇಣುವಿಗೆ.. 

" ಹೋಗು ಬೇಗ .. ಕೈಕಾಲು ತೊಳೆದು ಶಾಲೆ ಕೆಲ್ಸ ಮಾಡು. ಕತ್ತಲಾದರೆ ದೀಪ ಉರಿಸಲು ಸೀಮೆ ಎಣ್ಣೆ ಇಲ್ಲ.. ಹೇ..  ನಿಲ್ಲು" ಎಂದು ಸಗಣಿ ಮೆತ್ತಿದ ಕೈಗಳನ್ನು ಹತ್ತಿರದಲ್ಲಿದ್ದ ನೀರಿನ ಪಾತ್ರೆಗೆ ಅದ್ದಿ  ತೊಳೆದು ಸೆರಗಿನ ತುದಿಯಲ್ಲಿ ಒರೆಸಿಕೊಂಡು, ಕೊಟ್ಟಿಗೆಯ ಗೋಡೆ ಸಂದಿನಲ್ಲಿ ಇಟ್ಟಿದ್ದ ಬಾಳೆ ಎಲೆ ಕಟ್ಟನ್ನು ಮಗಳ ಕೈಲಿರಿಸಿದಳು. 

ಅವಸರದಿಂದ ಅದನ್ನು ಬಿಚ್ಚಿದ ರೇಣು ಕಣ್ಣರಳಿಸಿ ಅದರಲ್ಲಿದ್ದ ಹೋಳಿಗೆಯನ್ನು ಮುರಿದು ಬಾಯ ಹತ್ತಿರ ತಂದರೆ ಅದರಲ್ಲೂ ಸಗಣಿಯ ವಾಸನೆ ಸುಳಿಯುತ್ತಿತ್ತು. "ಥೂ ನಂಗ್ ಬೇಡ.. ಇದು ಸಗಣಿ ವಾಸ್ನೆ" ಎಂದಳು. 

ಸುಮ್ನೇ ತಿನ್ನು .. ಅವತಾರ ಮಾಡ್ಬೇಡ, ಸಿಹಿ  ಇದೆ ಅದು, ಬೆಳಿಗ್ಗೆ ಅಮ್ಮಾವ್ರು ಕೊಟ್ಟಿದ್ದು.. ನಿಂಗೆ ಇಷ್ಟ ಅಂತ ಎತ್ತಿಟ್ಟಿದ್ದೆ.  ಎಂದಳು ಅಮ್ಮ. 
ಪಾಪ ಅಮ್ಮ ತಿನ್ನದೇ ನಂಗೆ ಅಂತಲೇ ತೆಗೆದಿಟ್ಟಿದ್ದನ್ನು  ನೋಡಿ "ಹೂಂ .. ಹೂಂ .. ಚೆನ್ನಾಗಿದೆ.. ನೀನೂ ತಿನ್ನು" ಅಂತ ಅಮ್ಮನ ಬಾಯಿಗೂ ತುರುಕಿದಳು. 

ಅಮ್ಮನ ಮುಖ ಅರಳಿದ್ದನ್ನು ಗಮನಿಸಿ ಮತ್ತೆ ಸಣ್ಣ ಸ್ವರದಲ್ಲಿ " ಅಮ್ಮಾ ಮತ್ತೇ.. ಮತ್ತೇ..ನಂಗೇನೋ ಬೇಕು.. ನಾ ಹೇಳಿದ್ದು ತೆಕ್ಕೊಡ್ತೀಯಾ.." ಎಂದು ರೇಣು ಮೆಲ್ಲನೆ ತನ್ನ ಬೇಡಿಕೆ ಇಟ್ಟಳು. 

"ಏನೇ ಅದು.. ಇಲ್ಲಿ ನಾಳೆಯ ಗಂಜಿಗೆ ಕಾಸಿಲ್ಲ ಅಂತ ನಾನು ಒದ್ದಾಡ್ತಿದ್ದೀನಿ ಇವ್ಳದ್ದು ನೋಡಿದ್ರೆ ಬೇರೆಯೇ ರಾಗ.." ಎಂದಳು ಅಮ್ಮ. ಕೂಡಲೇ ಮಗಳ ಮುಖ ಬಾಡಿದ್ದನ್ನು ಗಮನಿಸಿ " ಇರ್ಲಿ ಬಿಡು.. ಹೇಳು ಏನದು" ಎಂದಳು. 

"ನಂಗೆ ಒಂದು ಕರ್ಚಿಪ್ ಬೇಕು. ಶಾಲೆಯಲ್ಲಿ ಎಲ್ಲಾ ಮಕ್ಕಳೂ ತರ್ತಾರೆ. ಎಷ್ಟೆಷ್ಟು ಚಂದ ಇರುತ್ತೆ ಗೊತ್ತಾ.. ನಂಗೂ ಒಂದು ಬಣ್ಣ ಬಣ್ಣದ್ದು ಬೇಕಮ್ಮಾ ತೆಕ್ಕೊಡು.." ಎಂದು ರಾಗ ಎಳೆದಳು ರೇಣು.

ಮಗಳ ಬೇಡಿಕೆ ತೀರಿಸಲಾರದ್ದೇನೂ ಅಲ್ಲ ಎಂದುಕೊಂಡ ಅಮ್ಮ " ಹೂಂ .. ಸರಿ .. ದುಡ್ಡು ಬಂದಾಗ ತೆಕ್ಕೊಡ್ತೀನಿ. ಅಲ್ಲಿವರೆಗೆ ಹಠ ಮಾಡ್ಬಾರ್ದು" ಎಂದಳು. 

ರೇಣು ದಿನಾ ಶಾಲೆಯಿಂದ  ಬಂದ ಕೂಡಲೇ 'ಇವತ್ತು ತಂದಿದ್ದೀಯಾ' ಎಂದು ಕೇಳುವುದು,ಅಮ್ಮ ಅದಕ್ಕುತ್ತರವಾಗಿ 'ಇಲ್ಲಾ .. ನಾಳೆ' ಎಂದು ಸಮಾಧಾನಿಸುವುದು ನಡೆದೇ ಇತ್ತು. 

ಆ ದಿನ ರೇಣು ಶಾಲೆ ಬಿಟ್ಟು ಮನೆಗೆ ಬಂದಾಗ ಅವಳಿಗೆ ಅಚ್ಚರಿ ಕಾದಿತ್ತು. ಮನೆಯಲ್ಲೇ ಅವಳಿಗಾಗಿ ಕಾದಿದ್ದ ಅಮ್ಮ, ಮತ್ತು ಅವಳ ಕೈಯಲ್ಲಿ ಸುಂದರ ಕರ್ಚೀಪು. ಬೇರೆ ಬೇರೆ ಬಣ್ಣದ ಬಟ್ಟೆಯ ತುಣುಕನ್ನು ಸೇರಿಸಿ ಹೊಲಿದು, ಬದಿಗೆ ಜರಿಯ ಬಾರ್ಡರ್ ಹೊತ್ತ ರಂಗು ರಂಗಿನ ಕರ್ಚೀಪು ಅದು. ರೇಣುವಿನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ.

 "ಎಲ್ಲಿಂದ ತಂದೆ ಇದನ್ನಾ" ಎಂದಳು. "ಟೈಲರ್ ಅಂಗಡಿಯಿಂದ  ಬಟ್ಟೆ ತಂದು ನಾನೇ ಹೊಲಿದೆ" ಎಂದಳು ಅಮ್ಮ. ಅಮ್ಮನ ಕೊರಳಪ್ಪಿ ಮುದ್ದಿಟ್ಟಳು ರೇಣು. 

ರಾತ್ರಿ ಮಲಗುವಾಗಲೂ ತನ್ನ ಪಕ್ಕದಲ್ಲೇ ಅದನ್ನಿಟ್ಟುಕೊಂಡು ಮಲಗಿ ಬೆಳಗಾಗುವುದನ್ನೇ ಕಾಯುತ್ತಿದ್ದಳು. ಬೇಗ ಶಾಲೆಗೆ ತಲುಪಿ ಗೆಳತಿಯರಿಗೆ ತೋರಿಸಿ ಅವರ ಹೊಗಳಿಕೆಗೆ ಪಾತ್ರಳಾಗುವ ಆಸೆ. ಶಾಲೆ ಹತ್ತಿರ ಬರುತ್ತಿದ್ದಂತೇ ಕುಷಿಯಿಂದ  ಎದೆ ಡವ ಡವ ಎನ್ನಲು ಪ್ರಾರಂಭಿಸಿತು. 
ಬ್ಯಾಗಿನಲ್ಲಿ ಏನೋ ಹುಡುಕುವವಳಂತೆ ಮಾಡಿ ಗೆಳತಿಯರ ಕುತೂಹಲ ಕೆರಳಿಸಿ ನಂತರ ನಿಧಾನಕ್ಕೆ ಕರ್ಚಿಪನ್ನು ಹೊರತೆಗೆದು ಗೆಳತಿಯರೆದುರು ಹಿಡಿದಳು. 

"ಅರೇ.." ಎಂದು ಎಲ್ಲರೂ ಮುತ್ತಿಕೊಂಡರು. ಒಬ್ಬರ ಮುಖ ಒಬ್ಬರು ನೋಡಿ ಮುಸಿ ಮುಸಿ ನಕ್ಕರು. 

" ಹೇ.. ಇಲ್ಲಿ ನೋಡೇ ಈ ತುಂಡು ನನ್ನ ಲಂಗದ ಬಟ್ಟೆ". 

"ಹ್ಹ ಹ್ಹ ಇದು ನೋಡು ಇದು ನನ್ನಮ್ಮನ ರವಿಕೆಯ ತುಂಡು.." 

"ಈ ಜರಿ  ನನ್ನಕ್ಕನ ಹೊಸ ಚೂಡಿದಾರದ್ದು. ಅಮ್ಮನ ಹಳೇ ಸೀರೆಯನ್ನು ಮೊನ್ನೆ ಹೊಲಿಸಿದ್ದಳು. ಅದರ ಜರಿಯೇ ಇದು.."

"ಅದೇನು ಮಹಾ ನೋಡಿಲ್ಲಿ ಇದು ನನ್ನಣ್ಣನ ಅಂಗಿಯ ಬಟ್ಟೆ. ಬೇಕಿದ್ರೆ ಪರೀಕ್ಷೆ ಮಾಡಬಹುದು. ಇವತ್ತು ಅವನ ಹುಟ್ಟುಹಬ್ಬ. ಇದೇ ಅಂಗಿ ಹಾಕಿದ್ದಾನೆ."

ಗೆಳತಿಯರ ಕಲರವ ಮುಂದುವರಿದೇ ಇತ್ತು. ರೇಣು ಅವಳದ್ದು ಎಂದುಕೊಂಡ ಕರ್ಚಿಪಿನ ಒಂದೊಂದು ತುಂಡಿಗೂ ಅವರು ತಮ್ಮ ಹೆಸರಿನ ಮುದ್ರೆಯೊತ್ತುತ್ತಲೇ ಇದ್ದರು. 



ಅರೆ ಗಳಿಗೆ ಮೌನವಾಗಿದ್ದ ರೇಣು ಕಣ್ಣರಳಿಸಿ ತನ್ನ ಕರ್ಚಿಪನ್ನು ಮರಳಿ ಕೈಯಲ್ಲಿ ಹಿಡಿದು " ಇಲ್ಲಿ ನೋಡಿ ಈ  ನೂಲು ಕಾಣುತ್ತದಲ್ಲಾ.. ಬಿಳೀ ಬಣ್ಣದ್ದು.. ಇದನ್ನೆಲ್ಲಾ ಸೇರಿಸಿದ್ದು.. ಇದು ನನ್ನದು.. ನನ್ನಮ್ಮ ಹೊಲಿದಿದ್ದು.." ಎಂದು ಗತ್ತಿನಲ್ಲಿ ನುಡಿದು, ಅದನ್ನು ಅಮೂಲ್ಯ ವಸ್ತುವಿನಂತೆ ತನ್ನ  ಬ್ಯಾಗಿನೊಳಗೆ ಭದ್ರಪಡಿಸಿದಳು. 

-- 

Saturday, December 8, 2012

ಚಿಟ್ಟೆ ಮತ್ತು ಹಕ್ಕಿ






ಚಿಟ್ಟೆಯೊಂದು ಉದ್ಯಾನವನದಲ್ಲಿ ಅತ್ತಿತ್ತ ಹಾರುತ್ತಿತ್ತು. ತನ್ನ ರಂಗು ರಂಗಿನ ರೆಕ್ಕೆಗಳ ಬಗ್ಗೆ ಅತೀವ ಹೆಮ್ಮೆಯಿಂದ ಬೀಗುತ್ತಿತ್ತು. ಯಾರಾದರು ನೋಡಲಿ .. ಹೊಗಳಲಿ ... ಎಂದದರ ಆಸೆ.. 

ಬೂದು ಬಣ್ಣದ ಹಕ್ಕಿಯೊಂದು ಮರದ ಕೊಂಬೆಯ ಮೇಲೆ ಕುಳಿತು ಗದ್ದಲವೆಬ್ಬಿಸುತ್ತಿತ್ತು. ಅಷ್ಟು ದೊಡ್ಡ ಹಕ್ಕಿಯ ಅನಾಕರ್ಷಕ ಬಣ್ಣ ಚಿಟ್ಟೆಗೆ ನಗು ತರಿಸಿತು. ತನ್ನ ಅಂದ ಅದಕ್ಕೆ ಕಾಣಲೆಂದು ಅದರ ಎದುರಿನಲ್ಲೇ ಮೇಲೆ ಕೆಳಗೆ ಅತ್ತ ಇತ್ತ ಸುತ್ತಿ ಸುಳಿಯಿತು.

ಇದನ್ನೇ ಗಮನಿಸುತ್ತಿದ್ದ ಹಕ್ಕಿ ಪಕ್ಕನೆ ಹಾರಿ ತನ್ನ ಕೊಕ್ಕಿನಲ್ಲಿ ಅದನ್ನು ಸಿಕ್ಕಿಸಿಕೊಂಡಿತು. 

 ನುಂಗುವ ಮೊದಲು  ಚಿಟ್ಟೆಯ ರಂಗು ರಂಗಿನ  ರೆಕ್ಕೆಗಳನ್ನು ಉಪಯೋಗವಿಲ್ಲದ ವಸ್ತು ಎಂಬಂತೆ ಕಿತ್ತೆಸೆಯಿತು.

Sunday, November 25, 2012

ಪೂತನಿ


ನನ್ನ ಹೆಸರೇನೆಂದು ಕೇಳಿದಿರಾ..ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನು .. ಹಾಗಾಗಿಯೇ ಕಂಸ ಮಹಾರಾಜನ ಊಳಿಗದವಳಾದರೂ ನನಗಿಷ್ಟು ಮರ್ಯಾದೆ.. ನನ್ನನ್ನು ಹೆಸರೆತ್ತಿ ಕರೆಯುವ ಧಾರ್ಷ್ಟ್ಯ ಯಾರಿಗಿದ್ದೀತು..?! 

ಮಹಾರಾಜನಿಗೆ ನಾನೆಂದರೆ ಅತೀವ ಪ್ರೀತಿ.. ಅವನ ಆಪ್ತರಲ್ಲಿ ಆಪ್ತಳು ನಾನು. ಈಗೇಕೋ ಕಂದಿದ ಅವನ ಮೊಗದಲ್ಲಿ ಮೊದಲಿನ ಗೆಲುವಿಲ್ಲ.. ರಾಜರೆಂದರೆ ಹಾಗೆ, ಬಗಲಲ್ಲೇ ಚುಚ್ಚುವ ಚೂರಿ.. ನೂಲಿನ ಏಣಿಯಲ್ಲೇ ನಡಿಗೆ.. ಒಂದಿಷ್ಟು ಎಚ್ಚರ ತಪ್ಪಿದರೂ ಮತ್ತೆ ಅವನಿಲ್ಲ. ಸಿಂಹಾಸನಕ್ಕೇನು? ಅದು ಜಢ ವಸ್ತು ತಾನೇ.. ಯಾರು ತನ್ನನ್ನೇರಿದರೂ ಕೂರಲು ಅನುವೀಯುತ್ತದೆ. ಈ ತೂಕ ತಪ್ಪಿದ ರಾಜಕಾರಣದಲ್ಲಿ ನಾನೂ ಒಂದು ಭಾಗ.. ಎಷ್ಟೋ ಜನ ವೀರಾಧಿವೀರರನ್ನು ನನ್ನ ಸೊಬಗಿನರಮನೆಯಲ್ಲಿ ಬಂಧಿಸಿ ಮೇಲಿನ ಲೋಕಕ್ಕೆ ಕಳುಹಿಸಿದವಳು ನಾನು.. ನನ್ನ ಈ ಸೊಬಗು , ಈ ವಿಲಾಸ, ಈ ಲಾಸ್ಯ ಇರುವುದೆಲ್ಲ ಬಾಹ್ಯ ನೋಟದ ನಿಲುಮೆ. ನನ್ನನ್ನು ಅಪ್ಪಿಕೊಳ್ಳುವುದೂ, ಒಪ್ಪಿಕೊಳ್ಳುವುದೂ ಯಾರಿಂದಲೂ ಸಾಧ್ಯವಿಲ್ಲ.. ಯಾಕೆ ಗೊತ್ತೇ.. ನಾನು ವಿಷಕನ್ಯೆ.. 'ಪೂತನಿ'. 

ಎಲ್ಲಾ ರಕ್ಕಸಿಯರಿಗೂ ಹೊರಗಿನಿಂದ ಘೋರರೂಪವಾದರೆ, ನಾನು ಒಳಗೇ ಕ್ರೂರತೆಯನ್ನು ಧರಿಸಿದವಳು..! ನನಗಾಗಿಯಲ್ಲ.. ನನ್ನೊಡೆಯನಿಗಾಗಿ ! 

ಇಂದು ಮತ್ತೆ ಕರೆ ಬಂದಿದೆ ಅರಸನಿಂದ.. ಅದೂ ಅತಿ ರಹಸ್ಯವಾಗಿ.. ಅಂದರೆ ಯಾರೋ ಯಮನಾಲಯಕ್ಕೆ ತೆರಳುವ ಆತುರದಲ್ಲಿ  ಇದ್ದಾರೆ ಎಂದೇ ಅರ್ಥ. ನನಗೂ ಈ ಕೊಲ್ಲುವ ಆಟ ಈ ವಿನೋದವೆನಿಸುತ್ತದೆ. ಸುಂದರ ಜಿಂಕೆ ಎಂದುಕೊಂಡು ನನ್ನೆಡೆಗೆ ತಮ್ಮೆಲ್ಲ ವ್ಯಾಘ್ರ ಕಾಮನೆಯನ್ನು ಹರಿಯಬಿಡುವಾಗ ಹರಿಣವೇ ಹುಲಿಯಾಗಿ ಅವರನ್ನು ಬೇಟೆ ಆಡುವುದೆಂದರೆ..  ಅಧರ ಮಧುವನ್ನು ಅಮೃತವೆಂದೇ ತಿಳಿದು ಕುಡಿಯುವ ಆತುರದಲ್ಲಿರುವಾಗಲೇ ಅವನು ಈ ಲೋಕ ತೊರೆದು ಸುರಕನ್ನೆಯರ ತೋಳ್ತೆಕ್ಕೆ ಸೇರಿ ಆಗಿರುತ್ತದೆ.
.. ಆಹಾ ಎಂತಹ ಸುಖ.. ಹೌದೂ.. ಸುಖವೆಂದರೆ ಇದುವೆಯೇ..? ನಿಜವಾಗಿಯೂ ನಾನು ಈ ಆಟದಲ್ಲಿ ಅಷ್ಟು ಸುಖ ಕಾಣುತ್ತಿದ್ದೇನೆಯೇ..? ಸುಖ ಕೊಟ್ಟು ತೆಗೆದುಕೊಳ್ಳುವುದರಲ್ಲಿ ಇರುತ್ತದಂತೆ.. ನಾನು ಕೊಡುವುದನ್ನು ಸ್ವೀಕರಿಸುವವನು ಅರೆಕ್ಷಣದಲ್ಲಿ ಜೀವ ಕಳೆದುಕೊಳ್ಳುತ್ತಾನೆಂದರೆ ನಾನು ಕೊಡುವುದೇನನ್ನು..!!
ಹುಂ.. ಈ ಬಾರಿ ಯಾರ ಸರದಿಯೋ.. ಯಾರಾದರೇನು ನನ್ನನ್ನು ಕೂಡಿದ ಮೇಲೆ ಇಲ್ಲವಾಗುತ್ತಾನೆ.. 

ಕಂಸನರಮನೆಗೆ ಹೋಗುವುದೇನೋ ಸರಿ.. ಶೃಂಗಾರ ಬೇಡವೇ..ಯಾರಲ್ಲಿ.. ದಾಸಿ.. ಈ ಜೊಂಪೆ ಕೂದಲ್ಲನ್ನಿಷ್ಟು ಎತ್ತಿ ಕಟ್ಟು.. ಅದೋ ಅಲ್ಲಿ ಅರಳಿ ಪರಿಮಳಿಸುವ ಹೂವನ್ನು ನನ್ನ ತುರುಬಿಗೆ ಮುಡಿಸು.. ಹೂಂ.. ಅರೇ ಇದೇನಿದು.. ಹೂವು ನನ್ನ ಸಂಪರ್ಕಕ್ಕೆ ಬಂದೊಡನೆ ಬಾಡಿ ಬಸವಳಿಯುತ್ತದೆ.. ಥತ್.. ಬಿಸುಡಾಚೆ.. ಇಲ್ಲವೇ ಅಲ್ಲಿ ಮುತ್ತು ರತ್ನ ಹವಳದಾಭರಣಗಳು.. ತೂಗಿಬಿಡು ನನ್ನ ಹೆರಳಲ್ಲಿ.. ಹೊಳೆಯಲಿ ನಕ್ಷತ್ರದಂತೆ.. ನೋಡೇ ಇಲ್ಲಿ .. ಈ ಸುಕ್ಕಾದ ಸೆರಗನ್ನಿಷ್ಟು ಸರಿ ಪಡಿಸು.. ಈ ಕಣ್ಣ ಕಾಡಿಗೆ ತುಸು ಹೆಚ್ಚೆನಿಸುತ್ತಿದೆ.. ಸ್ವಲ್ಪ ತೆಗೆದು ಬಿಡೇ.. ಅದೇಕೆ ಅಷ್ಟು ದೂರದಲ್ಲಿ ನಿಂತಿದ್ದೀಯ.. ಓಹೋ .. ನಿನಗೂ ಜೀವಭಯ .. ಹ್ಹ ಹ್ಹ .. ಹೋಗು ನನ್ನೆದುರು ನಿಲ್ಲಬೇಡ.. ತೊಲಗಾಚೆ .. 

 ಕನ್ನಡಿಯಲ್ಲಿರುವ ನನ್ನ ಬಿಂಭ ಅದೆಷ್ಟು ಮನೋಹರ.. ನೋಡುತ್ತಲೇ ಇರುವಾಸೆ.. ಓಹ್.. ಅರಸನ ಅಪ್ಪಣೆ ಅವಸರದ್ದೇ ಇದ್ದಿತ್ತಲ್ಲವೇ.. 

ಇಂದವನು ಹೇಳಿದ್ದೇನು.. ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಅರಸನ ಮೃತ್ಯುರೂಪಿ ಶಿಶು ಬೃಂದಾವನದಲ್ಲಿ ಬೆಳೆಯುತ್ತಿದೆಯಂತೆ.. ಎಷ್ಟು ಸಮಯವಾಯ್ತು ಈ ಸುದ್ಧಿ ತಿಳಿಯಲು.. ಅಂದೊಮ್ಮೆ ಆ ಹೊತ್ತಿನಲ್ಲಿ ಜನಿಸಿದ್ದ ಕಂಡ ಕಂಡ ಶಿಶುಗಳನ್ನೆಲ್ಲ  ವಿಷವೂಡಿ ಕೊಂದಿದ್ದೆ.. ನನ್ನ ಹಾಲಿನಿಂದ ಎಷ್ಟು ವಂಶಗಳು ನಿರ್ನಾಮವಾದವೇನೋ..? ಲೆಕ್ಕವಿಟ್ಟವರಾರು.. ನಾನು ಅರಸನ ಆಯುಧ.. ಆಯುಧಕ್ಕೆ ಪಾಪ ಪುಣ್ಯಗಳ ಚಿಂತೆಯೇಕೆ..

ನಾನು ಮೆಟ್ಟಿದ ಮಣ್ಣೀಗ ಹೊಸ ಊರಿನದ್ದು.. ಅರೇ.. ಎಂತಹ ಸುಂದರ ನಗರಿಯಿದು..ಎಲ್ಲೆಲ್ಲಿಯೂ ಹಸಿರುಟ್ಟ ಭೂಸಿರಿ.. ಗೋವುಗಳ ಕೊರಳ ಘಂಟೆಯುಲಿ.. ಆಹಾ ಮರುಳಾಗುತಿದ್ದೇನೆ.. ಹಾಡಿ ಕುಣಿಯುವ ಇಲ್ಲಿನ ಜನರೆಲ್ಲ ಎಂತಹ ಸೊಬಗನ್ನು ಹೊತ್ತಿದ್ದಾರೆ..!! ನನಗರಿವಿಲ್ಲದ ಸಂಚಲನ ಎದೆಯೊಳಗೆ.. ಏನಿರಬಹುದು.. ?? 

ಹುಂ.. ಇರುವುದೇನು.. ನನ್ನರಸನ ವೈರಿ ಇಲ್ಲೇ ಎಲ್ಲೋ ಅಡಗಿದ್ದಾನೆ.. ಹುಡುಕಬೇಕವನ.. 

ಅದೋ ಅಲ್ಲಿ ಹೆಂಗಳೆಯರ ಗುಂಪು ಹಾಲ ಕೊಡವನ್ನು ತುಳುಕಿಸುತ್ತಾ ಹೋಗುತ್ತಿರುವುದೆಲ್ಲಿಗೆ.. ಹಿಂಬಾಲಿಸಿದರೆ ತಿಳಿದೀತು.. ಹೋ.. ಇವರೆಲ್ಲರ ಗಮನವೂ ಅತ್ತ ಕಡೆಗೆ .. ನಂದನರಮನೆಗೆ.. ನನ್ನ ಗಮ್ಯವೂ ಅದೇ ತಾನೇ.. ತೊಟ್ಟಿಲಿನಲ್ಲಿ ಮಲಗಿ ಕನಸು ಕಾಣುತ್ತಿರಬಹುದು ಅ ಮಗು.. ಪಾಪ ಇನ್ನೆಷ್ಟು ಹೊತ್ತಿದೆ ಅವನಿಗೆ ಭುವಿಯ ಋಣ..

ಗುಂಪಿನೊಳಗೊಂದಾಗಿ ಮನೆಯನ್ನು ಸೇರುವುದೇ ಒಳ್ಳೆಯದು.. ಅಬ್ಬಬ್ಬಾ ತೊಟ್ಟಿಲಿನ ಸುತ್ತ ಅದೆಷ್ಟು ಹೆಂಗಳೆಯರು.. ಇದೇ ಮಗುವಿರಬೇಕು.. ಛೇ.. ಒಂದಿಷ್ಟು ಮುಖ ದರ್ಶನವಾಗಬಾರದೇ..? ಬಂಗಾರದ ತೊಟ್ಟಿಲಲ್ಲಿ ಮಲಗಿದ ಶಿಶುವಿನ ಕೇಕೆ ಕೇಳಿಸುತ್ತಿದೆ.. ಆಹಾ.. ಸಂಗೀತದಿಂಪು.. 

ಅಬ್ಬಬ್ಬಾ .. ಎಂತಹ ಚೆಲುವಿದು.. ಮೋಹಕ ಮುಂಗುರುಳು.. ಅತ್ತಿತ್ತ ಮಿಂಚನ್ನೆಸೆಯುತ್ತಾ ಸುಳಿವ ಕಣ್ಣುಗಳು.. ಹೂದಳಗಳಂತಿರುವ ತುಟಿಗಳು.. ಯಾವ ಶಿಲ್ಪಿ ಕಟೆದನೇನೋ.. ಮನಸೋಲುತ್ತಿದೆ.. ಅರರೇ.. ಈ ನೀಲವರ್ಣ..ನನ್ನೊಳಗಿನ ಹಾಲಾಹಲವೇ ಬಣ್ಣವೆತ್ತಂತೇ.. ಯಾರಿವನು.. !!

ಎಲ್ಲಾ ಹೆಂಗಳೆಯರೂ ಎತ್ತಲೋ ಹೋದರು.. ಇದುವೇ ಸುಸಮಯ.. ಎತ್ತಿ ಹಾಲೂಡಿಸುತ್ತೇನೆ.. ಯಾಕಿಂದು ಮನಸ್ಸಿಗೆ ಹೊಸ ಅನುಭವ.. ಮೊದಲೆಷ್ಟು ಶಿಶುಗಳನ್ನೆತ್ತಿ ಹಾಲೂಡಿಸಿದಾಗಲೂ ಹೀಗಾಗಿರಲಿಲ್ಲ..ಆಹ್.. ಇವನ ಸ್ಪರ್ಷವೇ ಎಷ್ಟು ಸಂತಸದಾಯಕ.. ದಿನಾ ಇವನನ್ನೆತ್ತಿ ಎದೆಗಪ್ಪಿ ಹಾಲೂಡುವ ಯಶೋದೆ ಅದೆಷ್ಟು ಪುಣ್ಯ ಮಾಡಿದ್ದಳೇನೋ.. ಬಟ್ಟಲುಗಣ್ಣುಗಳಲ್ಲಿ ತುಂಟತನ.. ಒಂದಿಷ್ಟು ಅಳುಕಿಲ್ಲ.. ಕಿಲ ಕಿಲ ನಗು.. ಕೊಲ್ಲಲೇ ಮನಸ್ಸಿಲ್ಲ.. ಬಿಟ್ಟು ಹೋಗಿಬಿಡಲೇ.. ಬದುಕಿಕೊಳ್ಳಲಿ.. 

ಹೇಗೆ ಹೋಗಲಿ.. ಅನ್ನದ ಹಂಗು ಕಟ್ಟಿ ಹಾಕುತ್ತಿದೆ ನನ್ನನ್ನು..

 ಅರೆರೆ.. ಹಸಿವಾಗಿರಬೇಕು .. ನಾನೆತ್ತಿದ ಕೂಡಲೇ ಅವನ ತುಟಿಗಳು ಹಾಲನ್ನರಸುತ್ತಿದೆ.. ಅಬ್ಬಾ ಏನು ಆತುರ ಈ ಪೋರನಿಗೆ.. ಎಷ್ಟೊಂದು ಕಾಡುತ್ತಾನೆ.. ಹೀರಿಬಿಡೋ.. ನನ್ನೊಳಗಿನ ಅಷ್ಟೂ ಅಮೃತವೂ ನಿನ್ನದೇ..


 ನಿಲ್ಲು ನಿಲ್ಲು.. ಅಮೃತವೆಂದೆನೇ.. ವಿಷವಲ್ಲವೇ ಇದು.. ಓಹ್.. ಇವನೇನನ್ನು ನನ್ನೊಳಗಿನಿಂದ ಹೀರುತ್ತಿರುವುದು..? ಹಾಲೆಲ್ಲ ಬರಿದಾಗಿ ಜೋತುಬಿದ್ದರೂ ಇನ್ನೂ ಏನನ್ನೋ ಹುಡುಕಾಡುತ್ತಿದ್ದಾನೆ..

ಆಹ್.. ಏನಿದು ನೋವು.. ಸಂಕಟ.. ನನಗೂ ನೋವಾಗಿದ್ದಿದೆಯೇ.. ಇತ್ತು ಈಗಲ್ಲ.. ಚೂರು ಚೂರು ವಿಷವನ್ನೇ ಆಹಾರವಾಗಿಸಿ ಒಡಲೊಳಗೆ ಸೇರಿಸಿಕೊಳ್ಳುತ್ತಿರುವಾಗಿನ ಯಾತನೆ ಇದು.. ಮತ್ತೇಕಿಂದು ಮರುಕಳಿಸುತ್ತಿದೆ..?? ಹಾಲು ಬರಿದಾಗಿದೆ.. ಇನ್ನುಳಿದುದು ಹಾಲಾಹಲ.. ಅಂದರೆ..ಅದನ್ನು ಹೀರಿಯೂ ಅರಗಿಸಿಕೊಳ್ಳಬಲ್ಲವನಿವನು..!! 

ಇನ್ನೇನಾಗಬಹುದು.. ಸಾವು ಬರಬಹುದು.. ಶಿಶುವನ್ನತ್ತ ಎತ್ತಿ ಬಿಸುಟು ಹೋಗಲೇ..? 

ಹೋದರೆ ಕಾರ್ಯ ಸಾಧಿಸದೇ ಬಂದ  ನನ್ನನ್ನು ರಾಜನೆಂದಾದರು ಬರ ಮಾಡಿಕೊಳ್ಳುತ್ತಾನೆಯೇ..? ಅವನ ಕೈಯಲ್ಲಿ ಸಾವು ಬರುವುದಕ್ಕಿಂತ ಇಲ್ಲೇ ಬಂದರೆ ಎಷ್ಟು ಚೆನ್ನ..!! 

ಅರೆಗಳಿಗೆಯಾದರೂ ನನ್ನೆದೆ ಬಡಿತದ ಸದ್ದು ಮಗುವಿನರಿವಿಗೂ ಬಂದಿರಬಹುದಲ್ಲ..! 

ಮಗುವೇ.. ಅಲ್ಲ.. ನನ್ನೆಲ್ಲ ನೋವುಗಳಿಗೂ ಕೊನೆ ಕಾಣಿಸಲು ಬಂದ ದೇವ.. ಯಾರಿಗಿದೆ ಈ ಭಾಗ್ಯ.. ಜನ್ಮ ಸಾರ್ಥಕವಾಯಿತು..ಯಾವುದು ಪರಮ ಸುಖವೋ, ಅದನ್ನು ಪಡೆದ ಮೇಲೆ ಅದಕ್ಕಿಂತ ಹಿರಿದಾದ ಬದುಕಿದೆಯೇ.. ಮೋಕ್ಷವನ್ನೇ ಕರುಣಿಸು ನನಗೆ.. ಎಷ್ಟು ಜನ್ಮಗಳ ಪುಣ್ಯ ಸಂಚಯವಿತ್ತೇನೋ  ನನ್ನ ಬಳಿ.. ನಿನ್ನನ್ನು ಹೀಗೆ ಮಡಿಲೊಳಗಿಟ್ಟು ನಿನ್ನೊಳಗೆ ಐಕ್ಯವಾಗುವ ಪ್ರಾಣ.. ಸಾಕೆಂದು ಹೇಳುವುದಿಲ್ಲ .. ನಿಲ್ಲಿಸಬೇಡ.. ಹೀರಿಬಿಡು..ಎಲ್ಲವನ್ನೂ .. ಸೇರಿಸಿಕೋ ನನ್ನುಸಿರನ್ನು.. !! 

Saturday, November 24, 2012

ನಮ್ಮೂರ ಬಯಲಾಟ


ಯಕ್ಷಗಾನದ ಚೆಂಡೆ ಮೈಲು ದೂರದಲ್ಲಿ ಕೇಳಿದರೂ ಕಿವಿ  ನೆಟ್ಟಗಾಗಿಸಿ ಅತ್ತ ಕಡೆಗೆ ಕಾಲು ಹಾಕುತ್ತಿದ್ದವರು ನನ್ನಪ್ಪ.  ಕೊಡಗಿಗೆ ಬಂದ ಮೇಲೆ ಅಪ್ಪನ ಯಕ್ಷಗಾನದ ಆಸಕ್ತಿಯ ಬಳ್ಳಿಗೆ ನೀರು ಸಿಕ್ಕುತ್ತಿದ್ದುದು ಅಷ್ಟರಲ್ಲೇ ಇತ್ತು. ಈ 'ಮಳೆ'ನಾಡಿಗೆ ಯಾವ ಮೇಳಗಳೂ ಬಂದು ಟೆಂಟ್ ಹಾಕಿ ಆಟ ಆಡಿ ದುಡ್ಡು ಮಾಡುವುದು ಸಾಧ್ಯವೂ ಇರುತ್ತಿರಲಿಲ್ಲ ಎಂದ ಮೇಲೆ ಘಟ್ಟ ಹತ್ತಿ ಬರುವ ತೊಂದರೆಯನ್ನು ಅವರೂ ತೆಗೆದುಕೊಳ್ಳುತ್ತಿರಲಿಲ್ಲ. ಅಪ್ಪ ಆಗೊಮ್ಮೆ ಈಗೊಮ್ಮೆ ದಕ್ಷಿಣ ಕನ್ನಡದ ಕಡೆ ಹೋದರೆ ರಾತ್ರಿಡೀ ನಿದ್ದೆಗೆಟ್ಟು ಆಟ ನೋಡಿ ಕೆಂಗಣ್ಣಿಗನಾಗಿ ಬರುತ್ತಿದ್ದರು. 

ಹೀಗೆ ಅಪರೂಪಕ್ಕೊಮ್ಮೆ ಆಟ ನೋಡಿ ಬರುತ್ತಿದ್ದ ಅಪ್ಪ ಬಹು ದಿನಗಳವರೆಗೆ ಅದರ ಗುಣಗಾನದಲ್ಲಿ ತೊಡಗಿರುತ್ತಿದ್ದರು. ಭಾಗವತರ ಕಂಠಸಿರಿ, ಹಿಮ್ಮೇಳದವರ ನೈಪುಣ್ಯತೆ, ಅರ್ಥದಾರಿಗಳ ಪಾಂಡಿತ್ಯ ಇತ್ಯಾದಿಗಳನ್ನು ಹೊಗಳಿ ವೈಭವೀಕರಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಔಷಧಕ್ಕಾಗಿ ಬಂದ ಪೇಷಂಟುಗಳಿಗೂ ಈ ಹೊಗಳಿಕೆಯ ಗುಟುಕನ್ನು ಕುಡಿಸುತ್ತಿದ್ದರು. ಅವರಿಗೂ ಇದನ್ನು ಸ್ವೀಕರಿಸುವುದು ಅನಿವಾರ್ಯವಾಗಿತ್ತು.  
ಹೀಗೆ ಮೇಲಿಂದ ಮೇಲೆ ಅಪ್ಪನ ದೆಸೆಯಿಂದ   ಯಕ್ಷಗಾನವನ್ನು ಗುಟುಕಾಯಿಸಿದ ಪರಿಣಾಮವೋ ಏನೋ, ನಮ್ಮೂರ ಜನರಿಗೂ ಉತ್ಸಾಹ ಉಕ್ಕಿ ಬಂತು. ಮೊದ ಮೊದಲು ಅಪ್ಪನ ಯಕ್ಷಗಾನದ ಹರಟೆಗೆ ಸುಮ್ಮಗೆ ಹೂಗುಟ್ಟುತ್ತಿದ್ದವರು ಕ್ರಮೇಣ, ಗಂಡು ಕಲೆಯೆನಿಸಿಕೊಂಡ  ಯಕ್ಷಗಾನ ನಮಗೇನು ದೂರದ್ದೇ ಸ್ವಾಮೀ ? ನಮ್ಮ ಪಕ್ಕದ ಊರು ಕರಾವಳಿಯದ್ದಲ್ಲವೇ.. ನಾವೂ ಒಂದು ಆಟ ಆಡೇ ಬಿಡೋಣ ಅನ್ನತೊಡಗಿದರು. 

ಹೇಳಿ ಕೇಳಿ ಟಿಪ್ಪುಸುಲ್ತಾನನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಖ್ಯಾತಿಯ ಪರಂಪರೆಯವರಿವರು, ಮನೆಗೊಬ್ಬ ಯೋಧನಂತೆ ಗಡಿಯಲ್ಲಿ ದೇಶ ಕಾಯುವ ಕೊಡಗಿನ ಕಲಿಗಳು. ಇವರಿಗೆ ಬಯಲಾಟದ ಯುದ್ಧಗಳು ತೀರ ಸಾಧಾರಣವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿದೆ? ಸ್ವಾಮಿ , ನೀವು ಹೇಳಿ ಕೊಡುವುದಾದರೆ ನಾವು ವೇಷ ಕುಟ್ಟಿ ಕುಣಿಯುವುದಕ್ಕೆ ಸೈ ಎಂದು ಪಂಥಾಹ್ವಾನವನ್ನು ನೀಡಿಯೇ ಬಿಟ್ಟರು.

ಯಕ್ಷಗಾನದ ಊರಲ್ಲಿ ಹುಟ್ಟಿ ಬೆಳೆದು ಸದಾ ಯಕ್ಷಗಾನದ ಗುಂಗಿನಲ್ಲೇ ಇರುತ್ತಿದ್ದ ಅಪ್ಪನಿಗೆ ಇದನ್ನು ಕೇಳಿ ಎಲ್ಲಿಲ್ಲದ ಉಮೇದು ಬಂದು ಬಿಟ್ಟಿತು. ಆದರೆ ಅಪ್ಪನಿಗೆ ಯಕ್ಷಗಾನ ತರಬೇತಿಗೆ ಸಂಬಂಧಿಸಿದಂತೆ ಶಾಲಾದಿನಗಳಲ್ಲಿ ಊರ ಕಲಾವಿದರೊಂದಿಗೆ ಬಣ್ಣ ಹಚ್ಚಿ ಕುಣಿದ ಅನುಭವ ಬಿಟ್ಟರೆ ಬೇರೆ ಅನುಭವ ಇರಲಿಲ್ಲ. ಆದರೆ ತಾವಾಗಿ ಬಂದು ರಣವೀಳ್ಯ ನೀಡಿದಾಗ ಸುಮ್ಮನೆ ಕೂರುವುದುಂಟೇ.. ನಾನು ಸಿದ್ದ ಎಂದು ಊರ ಜನರು ಕೊಟ್ಟ ರಣವೀಳ್ಯವನ್ನು ಕಚಕಚನೆ ಜಗಿದೇ ಬಿಟ್ಟರು.

ಕಲಿಯುವುದು ಕಲಿಸುವುದು ಎಲ್ಲ ಸರಿ.. ಆದರೆ ಆಟಕ್ಕೊಂದು ಪ್ರಸಂಗ ಬೇಡವೆ? ಇದನ್ನು ನಿರ್ಧರಿಸಲು ರಾಮ ಮಂದಿರದಲ್ಲಿ ಕಲಾಪ್ರೇಮಿಗಳ ಮೀಟಿಂಗ್ ಕರೆಯಲಾಯಿತು. ಗಧಾಯುದ್ದ, ರಾಮಾಶ್ವಮೇಧದಂತಹಾ ಪ್ರಸಂಗಗಳು ಒಂದಿಲ್ಲೊಂದು ಕಾರಣದಿಂದ ತಳ್ಳಿಹಾಕಲ್ಪಟ್ಟವು. ನಡುವೆ ಹೋಟೇಲ್ ವೆಂಕಟ ಸರಬರಾಜು ಮಾಡಿದ ಗೋಳಿಬಜೆ ಪ್ಲೇಟುಗಟ್ಟಲೆ ಖಾಲಿಯಾದವು. ಕಾಫಿಯ ಹಂಡೆ ಕ್ಷಣಾರ್ದದಲ್ಲಿ ತಳ ಕಂಡಿತು. ಅಂತೂ ಪ್ರಸಂಗ ಯಾವುದೆಂದು ನಿರ್ಧಾರವಾಗದೇ ಎರಡನೇ ಮೀಟಿಂಗಿಗೆ ದಿನ ನಿಗದಿಪಡಿಸಿ ಮೀಟಿಂಗ್ ಬರಖಾಸ್ತು ಮಾಡಲಾತು. 

ಎರಡನೇ ಮೀಟಿಂಗ್ ಕೂಡ ಇದೇ ದಾರಿ ಹಿಡಿದರೆ ಕಷ್ಟ ಎಂಬ ಮುನ್ನೆಚ್ಚರಿಕೆಯಿಂದ  ಅಪ್ಪ ' ಶ್ವೇತಕುಮಾರ ಚರಿತ್ರೆ'ಯೆಂಬ ನವರಸ ಭರಿತ ಪ್ರಸಂಗವೊಂದನ್ನು ಆರಿಸಿಕೊಂಡು ಸಭಾ ಪ್ರವೇಶ ಮಾಡಿದ್ದರು. ಮೊದಲನೇ ಮೀಟಿಂಗ್ ಬಾಬ್ತು ಇರಿಸಿದ್ದ ಕಾಫಿ ತಿಂಡಿಯ ಬಿಲ್ಲನ್ನು ಯಾವ ವೀರನೂ ಎತ್ತಿ ಹೆದೆಗೇರಿಸದೇ ಇದ್ದದ್ದರಿಂದ ಬರಿಗೈಯ್ಯಲ್ಲೇ ಬಂದಿದ್ದ ಹೊಟೆಲ್ ವೆಂಕಟ ಹೀರೋ ಪಾತ್ರ ತನಗೇ ಬೇಕೆಂದು ಪಟ್ಟು ಹಿಡಿದ. ಅವನ ಭರ್ತಿ ದೇಹ ನೋಡಿ ಅಪ್ಪ ಕಥಾ ಸಾರಾಂಶವನ್ನು ಹೇಳಿ ಈ ಕಥೆಯಲ್ಲಿ  ಹೀರೋ, ರಕ್ತ ಮಾಂಸಗಳಿಲ್ಲದ ಪ್ರೇತ ಎಂದಾಗ ಆತ ಸ್ವಲ್ಪ ನಡುಗುತ್ತಲೇ ಅದಾದ್ರೆ ನಂಗೆ ಬೇಡ ಎಂದು ದೂರ ಸರಿದ. 

ಕಲಿಸುವ ಗುರುವಾದ ಕಾರಣ ಅಪ್ಪನೇ ಪಾತ್ರಗಳನ್ನು ಒಬ್ಬೊಬ್ಬರಿಗೂ ಹಂಚಿದರು. ಮಿಲಿಟ್ರಿಯ ರಜೆಯಲ್ಲಿ ಮನೆಗೆ ಬಂದಿದ್ದ ಬೋಪಯ್ಯ ಯಮನಾದರೆ, ವೆಂಕಟ ರಕ್ಕಸನಾದ. ತನಗೆ ಒಗೆಯಲು ಕೊಡುವ ಯಾವುದಾದರು ಒಳ್ಳೆ ಸೀರೆಯನ್ನು ಆ ದಿನದ ಮಟ್ಟಿಗೆ ತಾನೇ ಹೊಂದಿಸುತ್ತೇನೆ ಎಂದು ಸಾರಿದ ಡೋಬಿ ರಾಜ ರಂಬೆಯಾದ. ಮೇಕಪ್ ಇಲ್ಲದಿದ್ದರೂ,ಯಾವತ್ತೂ ಪ್ರೇತ ಕಳೆಯಿಂದ  ನಳ ನಳಿಸುತ್ತಿರುವ ರಾಜನ ತಮ್ಮ ಲಾಲು ಪ್ರೇತವಾದ. ಶೋಕಿಲಾಲನಾಗಿದ್ದ ಟೈಲರ್ ವೀರು ಶ್ವೇತಕುಮಾರನಾದರೆ, ಕಳೆದ ವರ್ಷವಷ್ಟೇ ಹೆಂಡತಿಗೆ ಸೋಡಾ ಚೀಟಿ ಕೊಟ್ಟು ತೌರುಮನೆಗೆ ಸೇರಿಸಿದ್ದ ಕಾಳಯ್ಯ ಶ್ವೇತಕುಮಾರನ ಸಾದ್ವೀಮಣಿ ಹೆಂಡತಿಯಾದ. ಮದುವೆಗಳಿಗೆ ಮಂಟಪ ಕಟ್ಟಿ ಅಲಂಕರಿಸುವ  ಶಿವ ತನಗೆ ಸಿಕ್ಕಿದ ಪರಶಿವನ ಪಾತ್ರಕ್ಕೆ ಬದಲಾಗಿ ಉಳಿದವರಿಗೆಲ್ಲ ಬಣ್ಣದ ಕಾಗದ ಮತ್ತು ರಟ್ಟಿನಿಂದ ಕಿರೀಟ, ಬೇಗಡೆ ಕಾಗದದಿಂದ ಚಿನ್ನಾಭರಣಗಳನ್ನು ಮಾಡುವ ಕೆಲಸದ ಗುತ್ತಿಗೆಯನ್ನೂ ಹಿಡಿದ.
ಉಳಿದೆಲ್ಲಾ ಪಾತ್ರಗಳು ಅವರವರ ಗಾತ್ರಕ್ಕೂ ಮತ್ತು ಆಟದ ದಿನದಂದು ಅವರು ಹೊಂದಿಸುತ್ತೇವೆಂದು ಒಪ್ಪಿಕೊಂಡ  ಸಾಮಾಗ್ರಿಗಳ ಮೇಲೆ ನಿರ್ಧಾರಿತವಾಗಿ ಹಂಚಲ್ಪಟ್ಟಿತು.  ಯಾಕೆಂದರೆ ವೇಷ ಭೂಷಣಗಳಿಗೆ ಖರ್ಚು ಮಾಡುವಷ್ಟು ಫಂಡ್ ಯಾರ ಕಿಸೆಯಲ್ಲೂ ಇರಲಿಲ್ಲ. 

ಹೇಗೂ ಮುಮ್ಮೇಳ ಸಿದ್ಧವಾಯಿತು. ಆದರೆ ಆಟದ ದಿನ ಹಿಮ್ಮೇಳಕ್ಕೆ ವ್ಯವಸ್ಥೆಯೇನೆಂಬುದು ಮೊದಲೇ ನಿರ್ಧಾರವಾಗಬೇಕಿತ್ತು. ಭಾಗವತಿಕೆಗೆ ಅಪ್ಪನೇ ಉತ್ಸುಕತೆಂದಿದ್ದರು. ದೇವಸ್ಥಾನದಲ್ಲಿ ಚೆಂಡೆ ಹೊಡೆಯುತ್ತಿದ್ದ ಮೋಹನನನ್ನು ಆ ದಿನಕ್ಕೆ ಚೆಂಡೆ ಮತ್ತು ಬಾರ್ಬರ್ ಪುಟ್ಟಪ್ಪನನ್ನು ಮದ್ದಳೆಗೆ ಒಪ್ಪಿಸಿದ್ದಾಯ್ತು.ಹಾರ್ಮೋನಿಯಮ್ ಹಿಡಿದು, ಹಾಡುತ್ತಾ,  ಬೇಡುತ್ತಾ, ಅಲೆಯುತ್ತಿದ್ದ ದಾಸಜ್ಜನನ್ನು ಹಾರ್ಮೋನಿಯಮ್ ಶೃತಿ ಕೊಡಲು ಬೇಡಿಕೊಂಡಿದ್ದಾಯಿತು.

ಇನ್ನು ಪ್ರಾಕ್ಟೀಸು ತೊಡಗುವುದೊಂದು ಬಾಕಿ. ಆದರೆ ಅಪ್ಪನಿಗೆ ಇಡೀ ಪ್ರಸಂಗದ ಹಾಡುಗಳು ಬಾಯಿ  ಪಾಠ ಇಲ್ಲದ ಕಾರಣ ನಮ್ಮೂರ ಅಪುರೂಪದ ಯಕ್ಷ ಪ್ರೇಮಿಯೊಬ್ಬರನ್ನು ಸಂಪರ್ಕಿಸುವುದು ಅನಿವಾರ್ಯವಾಯಿತು. ಅವರ ಬಳಿ ಯಕ್ಷಗಾನ ಪ್ರಸಂಗ  ಪುಸ್ತಕಗಳ ಬಹು ದೊಡ್ಡ ಸಂಗ್ರಹವೇ ಇತ್ತು. ಅದನ್ನು ಅಮೂಲ್ಯ ಆಸ್ತಿಯಂತೆ ಕಾಪಾಡುತ್ತಿದ್ದ ಅವರು ಯಾರಿಗೂ ಪುಸ್ತಕ ಕೊಡುತ್ತಿರಲಿಲ್ಲ. ಹಾಗೇ ಚಿಲ್ಲರೆ ಪಲ್ಲರೆಗಳೆಲ್ಲ ಹೋಗಿ ಕೇಳಿದರೆ ಅವರು ಕೊಡುವರೇ..? ಅಪ್ಪನೇ ಸ್ವತಃ ಒಂದೆರದು ಹಿಂಬಾಲ(ಕ) ರನ್ನು ಇಟ್ಟುಕೊಂಡು ಅವರಲ್ಲಿಗೆ ಹೋಗಿ ಪ್ರಸ್ಥಾಪವಿಟ್ಟರು. 

ಅಪ್ಪನೊಂದಿಗೆ ಕೆಲವೊಮ್ಮೆ ಅಪ್ಪನ ಖರ್ಚಿನಲ್ಲೇ ಆಟ ನೋಡಿದ ಋಣಭಾರ ಅವರ ಮೇಲಿದ್ದುದರಿಂದ ತಮ್ಮ ಪುಸ್ತಕ ಸಂಗ್ರಹದ ಕಷ್ಟ ನಷ್ಟಗಳನ್ನು ನೂರ ಒಂದು ಬಾರಿ ಹೇಳಿ, ತಮ್ಮ ಪುಸ್ತಕದ ದೂಳು ಕೂಡಾ ಅಲುಗದಂತೆ ಜಾಗ್ರತೆಯಾಗಿ ತಂದು ಕೊಡಬೇಕೆಂದು ಒತ್ತಿ ಒತ್ತಿ ಹೇಳಿ, ಮದುವೆಯಾದ ಮೊದಲ ವಾರದಲ್ಲೇ ಹೆಂಡತಿಯನ್ನು ತೌರು ಮನೆಗೆ ಕಳುಹಿಸುವ ಗಂಡನೋಪಾದಿಯಲ್ಲಿ ಪುಸ್ತಕವನ್ನು ಅಪ್ಪನ ಕೈಗೆ ಹಸ್ತಾಂತರಿಸಿದರು. 

ಅಪ್ಪ ಅವರು ಹೇಳಿದ್ದಕ್ಕೆಲ್ಲ ತಲೆ ಅಲುಗಿಸಿ ಹೊತ್ತಗೆಯನ್ನು ಹೊತ್ತು ಹೊರ ಬರುತ್ತಿರುವಾಗ ಅವರು ಪುನಃ ಬಂದು ಅಡ್ಡ ನಿಂತು, ನನಗೂ ಒಂದು ಪಾತ್ರ ಕೊಡಿ ಎನ್ನಬೇಕೆ ! ನಡೆಯಲು ಇನ್ನೊಬ್ಬರ ಸಹಾಯ ಬೇಕಿದ್ದ ಈ ಇಳಿವಯಸ್ಸಿನಲ್ಲಿ ಅವರಿಗೆ ಯಾವ ಪಾತ್ರ ಕೊಡುವುದಪ್ಪಾ ಎಂದು ಚಿಂತಿಸುವಾಗ ಅಪ್ಪನಿಗೆ ಪಕ್ಕನೇ  ದ್ವಾರ ಪಾಲಕನ ಪಾತ್ರ ಹೊಳೆತು. ಅದಾದರೆ ಊರುಗೋಲಿನ  ಸಹಾಯದಿಂದ ರಂಗಸ್ಥಳಕ್ಕೆ ಒಂದು ಸುತ್ತಾದರೂ ಬರಬಹುದು ಎಂಬ ಆಲೋಚನೆ ಅಪ್ಪನದ್ದು. ಅದನ್ನೇ ಸೂಚಿಸಿದಾಗ, ಯಕ್ಷ ಪ್ರೇಮಿ  ಆದೀತಪ್ಪ..ಆಗದೇ ಏನು? ಎಲ್ಲಿ ನೋಡುವ ಎಷ್ಟು ಪದ್ಯ ಇದೆ ಆ ಪಾತ್ರಕ್ಕೆ ಅನ್ನುತ್ತಾ ಪುಸ್ತಕದತ್ತ ಕೈ ಚಾಚಿದರು. ಅಪ್ಪ ನಾಜೂಕಾಗಿ, ನಿಮಗೇನು ಅರ್ಥ ಹೇಳಲು ಈ ಮಕ್ಕಳಂತೆ ಬಾಯಿ  ಪಾಠ ಬೇಕೇ.. ಆ ದಿನ ಸಿದ್ಧವಾಗಿ ಬನ್ನಿ ಸಾಕು ಎಂದು ನುಡಿದು ಹೊರಟೇ ಬಿಟ್ಟರು. 

ಅಂತೂ ಇಂತೂ ಯಕ್ಷಗಾನಕ್ಕೆ ಅಗತ್ಯವಿರುವ ಜನಸಂಪತ್ತು, ಪದಾರ್ಥ ಸಂಪತ್ತು ಒಟ್ಟಾದ ಮೇಲೆ ಪ್ರಾಕ್ಟೀಸು ಎಂಬ 'ಸುಂದರ ಕಾಂಡ' ಸುರು ಆಯಿತು.  

ಸಂಜೆಯ ವೇಳೆ ನಮ್ಮೂರಿನ ರಾಮಮಂದಿರದ ಹಳೇ ಕಟ್ಟಡ ಇವರ ಕಲಿಕೆಗೆ ಸೂರು ನೀಡಿತು. ಅಪ್ಪ ಜಾಗಟೆ ಹಿಡಿದು ತಾಳ ಕುಟ್ಟುತ್ತಾ ಒಬ್ಬೊಬ್ಬರನ್ನೇ ಕುಣಿಸತೊಡಗಿದರು. ಎಲ್ಲರೂ ಉತ್ಸಾಹದಲ್ಲಿ ಜಿಗಿದು 'ದಿಂಗಣಾ' ತೆಗೆಯುವಾಗ ಜೀರ್ಣಾವಸ್ಥೆಯಲ್ಲಿದ್ದ ಕಟ್ಟಡದ ಗೋಡೆಗಳು ಅದುರುತ್ತಿದ್ದವು. ಅಪಾಯದ ಅರಿವಾಗಿ ಸೌಮ್ಯ ವೇಷಗಳಿಗೆ ಮಾತ್ರ ಒಳ ಪ್ರವೇಶ ನೀಡಿ ಉಳಿದದ್ದನ್ನು ಹೊರಗಿನ ಅಂಗಳದಲ್ಲಿ ಕುಣಿಸಲಾಯಿತು. ತಿಂಗಳುಗಟ್ಲೆ ಅಭ್ಯಾಸ ಮುಂದುವರೆತು. ಊರಿನ ಜನರೆಲ್ಲಾ ಬೇಗ ಕೆಲಸ ಮುಗಿಸಿ ಸಂಜೆ ಹೊತ್ತು ರಾಮ ಮಂದಿರದಲ್ಲಿ ಇವರನ್ನು ವೀಕ್ಷಿಸಲು ಜಮಾಯಿಸುತ್ತಿದ್ದರು. 

ಎಲ್ಲರೂ ಎಷ್ಟು ಮಗ್ನರಾದರು ಎಂದರೆ ಯಕ್ಷಗಾನ ನಿತ್ಯ ಜೀವನದಲ್ಲೂ ನುಗ್ಗಿಬಿಟ್ಟಿತ್ತು. ಹೋಟೆಲ್ ವೆಂಕಟನಲ್ಲಿಗೆ ಹೋಗಿ ಕುಳಿತರೆ ಸಾಕು, ವೆಂಕಟ ಹೋಟೆಲ್ ಮಾಣಿಯನ್ನು ಕೂಗಿ "ನೀರು ತಾ.. ಥಾ ತೈಯಥ ದಿನಥಾ.. ಬೇಗ ತಾ.. ಇಲ್ಲಿ ತಾ.." ಎಂದು ಹೇಳುತ್ತಿದ್ದ. ಮಾಣಿಯೂ 'ತಿತ್ತಿಥ್ಥೈ ತಿತ್ತಿಥ್ಥೈ' ಎಂದು ನಾಟ್ಯದ ಹೆಜ್ಜೆ ಹಾಕುತ್ತಾ ಬಂದು ನೀರನ್ನು ಟೇಬಲ್ ಮೇಲೆ ಇಡುತ್ತಿದ್ದ. ಡೋಬಿ ಲಾಲು ಮತ್ತು ರಾಜು ಬಟ್ಟೆ ಒಗೆಯುವಾಗ ಬಟ್ಟೆಗಳನ್ನು ತಾಳಕ್ಕೆ ಸರಿಯಾಗಿಯೇ ಕಲ್ಲಿಗೆ ಕುಕ್ಕಿ ಕುಕ್ಕಿ ಒಗೆಯುತ್ತಿದ್ದರು. ಟೈಲರ್ ವೀರುವಿನ ಕಾಲುಗಳು ಮಿಷನನ್ನು ಲಯಬದ್ಧವಾಗಿಯೇ ತುಳಿಯಲು ಪ್ರಾರಂಭಿಸಿ, ಒಂದು ವಾರದಲ್ಲಿ ಕೊಡುತ್ತೇನೆಂದ ಬಟ್ಟೆ ಒಂದು ತಿಂಗಳಾದರೂ ಸಿದ್ಧವಾಗುತ್ತಿರಲಿಲ್ಲ. ಆದರೆ ಊರವರೂ ಕೊಂಚವೂ ಬೇಸರಿಸದೇ ಊರ ಹುಡುಗರ ಈ ಎಲ್ಲಾ ಹುಚ್ಚಾಟಗಳನ್ನು ತಾವು ನೋಡಲಿರುವ ಯಕ್ಷಗಾನಕ್ಕಾಗಿ ಸಹಿಸಿಕೊಂಡರು.   

ಪ್ರದರ್ಶನದ ದಿನ ಹತ್ತಿರ ಬರುತ್ತಿದ್ದಂತೆ ರಣೋತ್ಸಾಹ ಎಲ್ಲರಲ್ಲೂ ತುಂಬಿ ತುಳುಕುತ್ತಿದ್ದರೂ, ಡೈಲಾಗ್ 'ಡೆಲಿವರಿ' ಮಾತ್ರ ನಿಜ ಅರ್ಥದ  ಹೆರಿಗೆ ನೋವಾಗಿ ಎಲ್ಲರನ್ನೂ ಕಾಡತೊಡಗಿತ್ತು. ಮುಂಜಾಗರೂಕತಾ ಕ್ರಮವಾಗಿ ತಪ್ಪಿ ಹೋದ ಡೈಲಾಗುಗಳನ್ನು ನೆನಪಿಸಿಕೊಡಲು ಪರದೆಯ ಹಿಂದಿನಿಂದ ಸಹಕರಿಸಲೆಂದೇ ಎರಡು ಕಂಠಗಳನ್ನು ಸಿದ್ದಪಡಿಸಲಾಯಿತು. 

ಆಟಕ್ಕೆ ಮೂರು ದಿನ ಮುಂಚಿತವಾಗಿ "ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ, ಇದೇ ಬರುವ ಶನಿವಾರದಂದು ನಮ್ಮೂರ ದೇವಸ್ಥಾನದ ಮುಂದೆ ಸಜ್ಜುಗೊಳಿಸಿರುವ, ವಿದ್ಯುತ್ ದೀಪಗಳಿಂದಲಂಕೃತವಾಗಿ ಜಗ ಜಗಿಸುವ ಭವ್ಯ ದಿವ್ಯ ರಂಗುರಂಗಿನ ರಂಗ ಮಂಟಪದಲ್ಲಿ, ಮಣ್ಣಿನ ಮಕ್ಕಳು ಪ್ರದರ್ಶಿಸುವ ಶ್ವೇತಕುಮಾರ ಚರಿತ್ರೆ ಎಂಬ ಅದ್ಭುತ ಪುಣ್ಯ ಕಥಾನಕವನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ" ಎಂಬ ಘೋಷವಾಕ್ಯವನ್ನು  ಜೀಪಿಗೆ ಮೈಕ್ ಕಟ್ಟಿ ಸಾರಲಾಯಿತು. ಅಂತೂ ಇಂತೂ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಪ್ಪ ಕೆಂಪು ಶಾಲು ಹೊದ್ದು ಹಿಮ್ಮೇಳದೊಂದಿಗೆ ಜಾಗಟೆಯೆತ್ತಿ 'ಗಜಮುಖದವಗೆ ಗಣಪಗೇ' ಎಂದು ಹಾಡಿ ಸುರು ಮಾಡಿಯೇ ಬಿಟ್ಟರು. ಮಿರ ಮಿರನೆ ಮಿನುಗುವ ವಿದ್ಯುದ್ದೀಪಾಲಂಕೃತವಾದ ರಂಗಸ್ಥಳದಲ್ಲಿ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವು. ಊರಿನ ಜನಕ್ಕಂತೂ ಆ ವೇಷದೊಳಗಿರುವ ತಮ್ಮ ಮನೆಯ ಜನರನ್ನು ಕಂಡು ಸಂತಸವೋ ಸಂತಸ. ಕೆಲವು ಪಾತ್ರಗಳಂತೂ ಪದ್ಯ ಮುಗಿದರೂ ಕುಣಿಯುವುದನ್ನು ನಿಲ್ಲಿಸದಿದ್ದಾಗ ಅಪ್ಪನೇ ಕೂತಲ್ಲಿಂದ ಇಳಿದು ಬಂದು ಅವರ ರಟ್ಟೆ ಹಿಡಿದು ನಿಲ್ಲಿಸಿ ಅರ್ಥಗಾರಿಕೆ ಸುರು ಮಾಡಲು ಸೂಚಿಸಬೇಕಾಯಿತು. 

ರಂಬೆ ಪಾತ್ರದಾರಿ ರಾಜು, ಮಹಿಳಾ ಸಂಘದ ಅದ್ಯಕ್ಷೆ ಮೀನಾಕ್ಷಮ್ಮನ ಹೊಸ ಸೀರೆಯಲ್ಲಿ ಮಿಂಚುತ್ತಾ ಒಂದು ಸುತ್ತು ನಾಟ್ಯ ಮಾಡಿ ಕಾಲಿಗೆ ಸೀರೆ ತೊಡರಿಸಿಕೊಂಡು ಸ್ಟೇಜಿನಿಂದ ಕೆಳಗೆ ಬಿದ್ದ. ಕೆಳಗಿದ್ದ ಸಭಿಕರು ಅವನನ್ನೆತ್ತಿ ಸ್ಟೇಜಿನ ಮೇಲೆ ಬಿಟ್ಟರು. ಬೀಳುವಾಗ ನಿಲ್ಲಿಸಿದ ಪದ್ಯವನ್ನು ಪುನಃ ಹೇಳಿ ಎಂದು ಭಾಗವತರಾದ ನನ್ನಪ್ಪನಿಗೆ ತಿಳಿಸಿ ಮತ್ತೊಮ್ಮೆ ಕುಣಿದ. ಆಟದ ದಿನ ಸಮೀಪಿಸಿದಾಗ ಯಾರೊಬ್ಬರೂ ಸೀರೆ ಎರವಲು ಕೊಡಲು ಒಪ್ಪದಿದ್ದ ಕಾರಣ ಕಾಳಯ್ಯ ಗುಟ್ಟಿನಲ್ಲಿ ಹೆಂಡತಿಯೊಡನೆ ಸಂಧಾನ ಮಾಡಿಕೊಂಡು ಮರಳಿ ಮನೆಗೆ  ಕರೆ ತಂದದ್ದು ಯಾರಿಗೂ ಗೊತ್ತಿರಲಿಲ್ಲ. ಹೆಂಡತಿಯ ರೇಷ್ಮೆ ಸೀರೆಯನ್ನುಟ್ಟು,  ಪ್ರೇಕ್ಷಕರ ನಡುವೆ ಕುಳಿತಿದ್ದ ಅವಳನ್ನೇ ನೋಡುತ್ತಾ ವೈಯ್ಯಾರದಿಂದ ಕಾಳಯ್ಯ ಕುಣಿಯುವುದನ್ನು ಕಂಡು ಅವಕ್ಕಾದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿಷಲ್ ಹಾಕಿ ಸ್ಪಂದಿಸಿದರು. ಅವಳಂತೂ ಮತ್ತೆ ತನ್ನ ಗಂಡನೆಡೆಗೆ ಮರಳಿಸಿದ 'ಆಟ'ವನ್ನು ಆರಾಧನಾ ಭಾವದಲ್ಲಿ ನೋಡುತ್ತಾ ಕುಳಿತಿದ್ದಳು.

ಅಷ್ಟರಲ್ಲಿ ಸಮಯದೊಂದಿಗೆ ಕಥೆಯೂ ಬೆಳೆದು ಯಮಧರ್ಮರಾಯನೂ ಪ್ರೇತರೂಪದ ಶ್ವೇತ ಕುಮಾರನೂ ಮುಖಾಮುಖಿಯಾಗುವ ಸನ್ನಿವೇಶ ಬಂದೇ ಬಿಟ್ಟಿತು. ಯಮ ಧರ್ಮನ ಪಾತ್ರದಾರಿ ಬೋಪಯ್ಯನಿಗೆ ಗದೆ ಎಂಬ ಆಯುಧ ಸಕಾಲಕ್ಕೆ ಎಲ್ಲೂ ಸಿಗದ ಕಾರಣ ಕೊಡಗಿನ ಮನೆ ಮನೆಯಲ್ಲೂ ಸರ್ವೇ ಸಾಧಾರಣವಾಗಿದ್ದ ಕೋವಿಯನ್ನೇ ಎತ್ತಿಕೊಂಡು ಸ್ಟೇಜಿಗೆ ಬಂದಿದ್ದ. ದೀಪಗಳನ್ನಾರಿಸಿ ಕತ್ತಲುಂಟು ಮಾಡಿದ್ದ ರಂಗ ಸ್ಥಳಕ್ಕೆ ಪ್ರವೇಶಗೈದ ಪ್ರೇತ ವೇಷದಾರಿಯ ವಿಕಾರ ರೂಪಿನಿಂದ ಭಯಗೊಂಡ ಪುಟ್ಟ ಮಕ್ಕಳ ಚಡ್ಡಿಗಳೂ ಒದ್ದೆಯಾದವು. ಕೆಲವು ಹಿರಿ ತಲೆಗಳು ಕಣ್ಣು ಮುಚ್ಚಿಕೊಂಡು ಹನುಮ ಜಪ ಪಠಿಸತೊಡಗಿದವು. 

ದೃಶ್ಯದಲ್ಲಿ ನೈಜತೆ ಇರಲೆಂದು ಯಮನ ಜೊತೆ ಒಂದು ಕೋಣವನ್ನೂ ಸ್ಟೇಜಿನ ಮೇಲೆ ತರುವುದೆಂದು ಮಾತಾಗಿತ್ತು. ಆದರೆ ಗುಂಡೂ ರಾಯರ ಮನೆಯಲ್ಲಿದ್ದ ಏಕಮೇವ ಕೋಣವು ಎರಡು ದಿನಗಳಿಂದ ಸೊಪ್ಪು ಹುಲ್ಲು ಹಿಂಡಿ  ಮುಟ್ಟದೆ ಉಪವಾಸ ಸತ್ಯಾಗ್ರಹ ಮಾಡುತ್ತಿತ್ತು. ಇದರಿಂದಾಗಿ ಸ್ವಲ್ಪ ತಲೆ ಖರ್ಚು ಮಾಡಿದ ಅಪ್ಪನ ಶಿಷ್ಯ ಗಣ ಡೋಬಿ ಲಾಲುವಿನ  ಕತ್ತೆಗೆ ಹಳೇ ಕರಿಗಂಬಳಿ ಹೊದಿಸಿ ತಲೆಗೆ ಕೃತಕ ಕೊಂಬು ಕಟ್ಟಿ ಸ್ಟೇಜಿನ ಮೇಲೆ ತಂದಿದ್ದರು. ಯಮ ವೇಷದಾರಿ ಬೋಪಯ್ಯ ಎಷ್ಟೇ ಜಗ್ಗಿದರೂ  ಕತ್ತೆ ಮಾತ್ರ  ತನಗೆ ಪರಿಚಿತ ವಾಸನೆರುವ ಪ್ರೇತ ವೇಷದಾರಿ ಲಾಲುವಿನ ಹಿಂದೆ  ಹೋಗಿ ನಿಲ್ಲುತ್ತಿತ್ತು. ಈ ಅವಾಂತರದಿಂದಾಗಿ ಗೊಳ್ಳನೆ ಕೇಕೆ ಹಾಕಿ ನಗುತ್ತಿದ್ದ ಸಭಿಕರೆದುರು ತಬ್ಬಿಬ್ಬಾಗಿ ನಿಂತಿದ್ದ  ಯಮನಿಗೂ, ಪ್ರೇತಕ್ಕೂ ತಮ್ಮ ತಮ್ಮ ಸಂಭಾಷಣೆಗಳು ಮರೆತು ಹೋದವು. ಹೇಗೋ ತೆರೆಯ ಹಿಂದೆ  ನಿಂತಿದ್ದ ಕಂಠದಾನಿಗಳು ಎಲ್ಲವನ್ನೂ ಆಡಿ ಸುಧಾರಿಸಿದರು. 

ಈ ಗಲಭೆಯಲ್ಲಿ ಕತ್ತೆಯನ್ನು ಯಾರೂ ಗಮನಿಸಿರಲಿಲ್ಲ. ಅಪ್ಪ ತಮ್ಮ ಮುಂದಿರಿಸಿಕೊಂಡಿದ್ದ ಪ್ರಸಂಗ ಪುಸ್ತಕವನ್ನು ಮೇವು ಎಂದುಕೊಂಡು ಒಂದೇ ತುತ್ತಿಗೆ ಬಾಯಿಗೆ ಸೇರಿಸಿಕೊಂಡಿತು. ಕೊನೇ ಗಳಿಗೆಯಲ್ಲಿ ಇದನ್ನು ಕಂಡ ಅಪ್ಪ ಅದರ ತಲೆಗೆ ಜಾಗಟೆಯ ಕೋಲಿನಲ್ಲಿ ಸಿಟ್ಟಿನಿಂದ ಮೊಟಕಿದರು. ಅದು ಬ್ರೇಂ .. ಎಂದರಚುತ್ತಾ ಸ್ಟೇಜಿನಿಂದ ಕೆಳಗೆ ಜಿಗಿದು ಸಭಿಕರ ಸಾಲಿನ ಮದ್ಯದಲ್ಲಿ ತೂರಿ ಹೊರಗೆ ಓಡಿ ಹೋಯಿತು. ಪುಣ್ಯಕ್ಕೆ ಪ್ರಸಂಗ ಪುಸ್ತಕ ನೀಡಿದ ಯಕ್ಷಪ್ರೇಮಿ  ಆ ದಿನ ತಮ್ಮ ಉಲ್ಬಣಗೊಂಡ ಕಾಲು ನೋವಿನಿಂದಾಗಿ ಇತ್ತ ಕಡೆ ತಲೆ ಹಾಕಿರಲಿಲ್ಲ. ಇಲ್ಲದಿದ್ದರೆ ಈ ದೃಶ್ಯವನ್ನು ನೋಡಿದ್ದರೆ ಎದೆಯೊಡೆದುಕೊಳ್ಳುತ್ತಿದ್ದರೇನೋ..!!

ಮತ್ತೆ ಬಂದ ಪಾತ್ರಗಳೆಲ್ಲವೂ ಅಪ್ಪನಿಗೆ ಬರುತ್ತಿದ್ದ ಬೇರೆ ಯಾವುದೋ ಪದ್ಯಗಳಿಗೆ ಕುಣಿದು ಈ ಆಟದ ಡೈಲಾಗ್ ಹೇಳಿದವು. ಅಂತೂ ಇಂತೂ ಬೆಳಗಾದಾಗ ಶೃತಿ ಪೆಟ್ಟಿಗೆ ಹಿಡಿದು ಕುಳಿತಿದ್ದ ದಾಸಜ್ಜ ಕುಳಿತಲ್ಲೇ ನಿದ್ರೆ ಹೋಗಿದ್ದನು. ಅಪ್ಪ ಮುಗಿಸುವುದೋ ಎಂಬರ್ಥದಲ್ಲಿ ಚೆಂಡೆ ಮದ್ದಲೆಯ ವಾರಸುದಾರರತ್ತ ಪ್ರಶ್ನಾರ್ಥಕ ನೋಟ ಬೀರಿದರು. ಸಮ್ಮತಿಪೂರ್ವಕವಾಗಿ ಅವರುಗಳು ತಲೆಯಾಡಿಸಿದರು. ಅಪ್ಪ ಸುಶ್ರಾವ್ಯವಾಗಿ "ಕರದೊಳು ಪರಶು ಪಾಶಾಂಕುಶ ಧಾರಿಗೇ... ಹರುಷದಿ ಭಕ್ತರ ಪೊರೆವವಗೇ.." ಎಂದು ಮಂಗಳ ಹಾಡಿದರು. ಜೊತೆಗೆ ಮೋಹನನೂ ಪುಟ್ಟಪ್ಪನೂ ಇನ್ನಿಲ್ಲದಂತೆ ಪ್ರಚಂಡವಾಗಿ ಚೆಂಡೆ ಮದ್ದಲೆ ಬಾರಿಸಿ ಮುಕ್ತಾಯ ಮಾಡಿದರು. ಇದರೊಂದಿಗೆ ನಮ್ಮೂರ ಹಮ್ಮೀರರ ಯಕ್ಷಗಾನದಾಟಕ್ಕೆ ತೆರೆ ಬಿದ್ದಂತಾಯ್ತು.

ಹೀಗೆ ಊರವರನ್ನು ಅನಾಯಾಸವಾಗಿ ನಕ್ಕು ನಲಿಸಿದ ಯಕ್ಷಗಾನ ಮುಗಿದು ತಿಂಗಳುಗಟ್ಟಲೆಯಾದರೂ ಜನ ಅದರ ಬಗ್ಗೆ ಮಾತಾಡುವುದು ಬಿಡಲಿಲ್ಲ. ಮೊದಲು ಸುಮ್ಮನೆ ಹೂಗುಟ್ಟುತ್ತಿದ್ದವರೆಲ್ಲಾ ಈಗ ಯಕ್ಷಗಾನದ ಬಗ್ಗೆ ಭಾಷಣ ಬಿಗಿಯಲು ಸುರು ಮಾಡಿದ ನಂತರ ಅಪ್ಪನೇ ಯಾಕೋ ಸಾಕೆನಿಸಿ ಕ್ಲಿನಿಕ್ನಲ್ಲಿ ಆಟದ ವಿಷಯ ಪ್ರಸ್ತಾಪ ಮಾಡುವುದನ್ನು ಬಿಟ್ಟು ಬಿಟ್ಟರು. 

( ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಬರಹ ) 







Wednesday, November 7, 2012

ಪಾಚು ಮತ್ತು ಕಂಪ್ಯೂಟರ್





"ಅಕ್ಕೆರೇ.. ಅಕ್ಕೇರೇ .." ಹೊರಗಿನಿಂದ 'ಪಾಚು' ಜೋರಾಗಿ ಕರೆಯುವುದು ಕೇಳಿಸಿತು.

ಮದ್ಯಾಹ್ನ ಊಟ ಮುಗಿಸಿ ಕೈಯಲ್ಲಿ ನೆಪ ಮಾತ್ರಕ್ಕೆ  ಒಂದು ಪುಸ್ತಕ ಹಿಡಿದು, ಅತ್ತ ನಿದ್ರಾಲೋಕವೂ ಅಲ್ಲದ ಇತ್ತ ಎಚ್ಚರವೂ ಅಲ್ಲದ ತ್ರಿಶಂಕು ಸ್ವರ್ಗದಲ್ಲಿ ತೇಲಾಡುತ್ತಿರುವಾಗ ಇವಳ ಸ್ವರ ನನ್ನನ್ನು ತಟ್ಟನೆ ಭೂಮಿಗೆ  ಎಳೆದು ತಂದು  ಬಿಸುಡಿತು.

ಇನ್ನು ನಾಲ್ಕು ಗಂಟೆಯವರೆಗೆ ಒಳ್ಳೇ ಟೈಮ್ ಪಾಸ್ ಎಂದು ಎದ್ದು ಹೊರಬಂದೆ. 

ಅವಳು ಹೀಗೆ ಅಪುರೂಪಕ್ಕೊಮ್ಮೆ ಸುಳಿವೇನೂ ಕೊಡದೆ ತಟ್ಟನೆ ಪ್ರತ್ಯಕ್ಷವಾಗಿ ಊರಿನಲ್ಲಿರುವವರ ಸುಖ ದು:ಖಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದಳು..!!

ಯಾವುದನ್ನೂ ಬೇಡುವ ಬಾಯಲ್ಲ ಅವಳದ್ದು. ತಾನಾಗೇ ನಮ್ಮೆದುರಿನಲ್ಲಿಯೇ ಅಂಗಳದಲ್ಲಿ ಹರಗಿದ್ದ ರಾಶಿಯಿಂದ  ನಾಲ್ಕು ಅಡಿಕೆ ತೆಗೆದು ಸಿಪ್ಪೆ ಸುಲಿದು ತುಂಡು ಮಾಡಿ ತನ್ನ ಎಲೆ ಅಡಿಕೆಯ ಸಂಚಿಗೆ ಸೇರಿಸಿಕೊಳ್ಳುತ್ತಿದ್ದಳು. ಕತ್ತಿ ಹಿಡಿದು ತೋಟಕ್ಕೆ ನಡೆದು ತೆಂಗಿನ ಮಡಲು ತುಂಡು ಮಾಡಿ ಹೊರೆ ಕಟ್ಟಿಕೊಂಡು ಅದರ ಮೇಲೆರಡು ತೆಂಗಿನಕಾಯನ್ನು ನಮಗೆ ಕಾಣುವಂತೆ ಕಟ್ಟಿ ಇಡುತ್ತಿದ್ದಳು. ಎಲ್ಲಾ ಖುಲ್ಲಂ ಖುಲ್ಲಾ.. !!  

ಅಷ್ಟು ಮಾಡಿ ಉಸ್ಸಪ್ಪ ಎಂದು ಹೇಳುತ್ತಾ 'ಚಾಯ' ಕೊಡಿ ಎಂದು ಜಗಲಿಯಲ್ಲಿ ಕುಳಿತು ಮಾತು ಸುರು ಮಾಡುತ್ತಿದ್ದಳು. 

ಇಂದೇಕೋ ಬಂದವಳೇ ಜಗಲಿಯ ಮೂಲೆ ಸೇರಿ ಕಾಲು ಚಾಚಿ, ಬಾಯಿಗೆರಡು ಅಡಿಕೆ ಹೋಳು ದೂರದಿಂದಲೇ ಎಸೆದು, ವೀಳ್ಯದೆಲೆಯ ತುದಿ ಮುರಿದು ತನ್ನ ಸೀರೆಯಲ್ಲಿ ಅದನ್ನು ಚೆನ್ನಾಗಿ ಉಜ್ಜಿ ಅದರ ಎರಡೂ ಕಡೆಗೆ ಸುಣ್ಣ ಲೇಪಿಸಿದಳು. ಮತ್ತೊಂದು ಕಪ್ಪಾದ ಡಬ್ಬದ ಮುಚ್ಚಳ ತೆಗೆದು ಹೊಗೆಸೊಪ್ಪನ್ನು ಚಿವುಟಿ ತೆಗೆದು , ಎಲ್ಲವನ್ನೂ ಬಾಯಿಗೆ ತುರುಕಿ ಜಗಿಯತೊಡಗಿದಳು. ಆ ಬ್ರಹ್ಮಾನಂದದ ಕ್ಷಣಗಳಲ್ಲಿಯೂ ಎದುರು ಕುಳಿತ ನನ್ನನ್ನು ಮರೆಯದೇ " ಅಕ್ಕೆರೇ.. ನಿಮಗೆ ಗೊತ್ತುಂಟೋ.." ಎಂದಳು. 

ಇದು ಮಾತು ಸುರು ಆಗುವ ಲಕ್ಷಣ .. ನಾನು ಕಿವಿ  ತೆರೆದಿಟ್ಟೆ.

" ನಮ್ಮ ಶಂಕರಣ್ಣೇರ ಮಗ ಶೇಖರಣ್ಣನಿಗೆ ಮದ್ವೆ ಆಗಿ ಎಷ್ಟು ವರ್ಷ ಆಯ್ತು ಹೇಳಿ ನೋಡುವಾ"ಎಂದು ಸವಾಲೆಸೆದಳು. 

ನಾನು ಯೋಚಿಸುತ್ತಾ "ಒಂದಾರು ವರ್ಷ ಆಗಿರಬಹುದು .. ಯಾಕೇ..?" ಅಂದೆ

 "ಅಲ್ಲಾ ಅಕ್ಕೇರೇ ಅವರಿಂದ ಮತ್ತೆ ಮದುವೆಯಾದ ನನ್ನ ಮೊಮ್ಮಗಳು ಎರಡು ಹಡೆದು ಈಗ ಮೂರನೆಯದನ್ನು ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದಾಳೆ. ಶೇಖರಣ್ಣನ ಹೆಂಡತಿ ಈಗ ಬಸುರಿ ಅಂತೆ" ಎಂದಳು ಸ್ವರ ತಗ್ಗಿಸಿ.. 

"ಹೌದಾ. ಹಾಗಿದ್ರೆ ನಿಂಗೆ ಬಾಣಂತನ ಮಾಡುವ ಕೆಲಸ ಉಂಟಲ್ಲ .. ಇನ್ನು ನಾಲ್ಕು ತಿಂಗಳು ನಿನ್ನನ್ನು ಕಾಣುವಂತಿಲ್ಲ.." ಎಂದು ಕೆಣಕಿದೆ.

ಬದಿಯಲ್ಲಿಟ್ಟ ಮರದ ಕೋಲನ್ನು ತೋರಿಸಿ.. "ಈ ದಂಟೆ ಕೈಯಲ್ಲಿ ಹಿಡ್ಕೊಂಡು ಸರ್ತ ನಡೆಯುವುದೇ ದೊಡ್ಡದು ಈಗ.. ಇನ್ನು ಬಾಣಂತನ ನನ್ನದೇ ಮಾಡ್ಬೇಕು .. ನಿಮ್ಮದೊಂದು ತಮಾಷೆ" ಎಂದು ಎದ್ದು ಹೊರಗೆ ಹೋಗಿ ತೋಟದ ಕಡೆಗೆ ಬಗ್ಗಿ ಕೈ ಬೆರಳನ್ನು ಬಾಗಿಟ್ಟು ಪಿಚಕ್ಕೆಂದು ಉಗುಳಿ ಸೆರಗಿನಲ್ಲಿ ಬಾಯೊರೆಸಿಕೊಳ್ಳುತ್ತಾ ಬಂದು ಕುಳಿತಳು. 

"ಅಲ್ಲಾ ನಿಮಗೆ ಗೊತ್ತುಂಟೋ.. ಅವರಿಗೆ ಯಾಕೆ ಇಷ್ಟು ಸಮಯ ಮಕ್ಕಳಾಗಲಿಲ್ಲ ಅಂತ.. ?"

"ಯಾಕೇ..?" ಅಂದೆ ಕುತೂಹಲದ ದ್ವನಿಯಲ್ಲಿ..

ಅವರ ಮನೆಯಲ್ಲಿ ಒಂದು ಕಂಪ್ಲೀಟರು ಅಂತ ಮಿಷನ್ ಉಂಟು. ನೋಡ್ಲಿಕ್ಕೆಲ್ಲ ನಮ್ಮ ಟಿ  ವಿ  ಯ ಹಾಗೇ.. ಅದು ಮನೆಯಲ್ಲಿದ್ರೆ ಮಕ್ಕಳಾಗೋದಿಲ್ಲ ಅಂತೆ.. ಅವ್ರು ಅಂತಲ್ಲ ಸುಮಾರು ಜನ ಇದ್ದಾರಂತೆ  ಈಗ ಹಾಗೆ.." 

"ಮತ್ತೆ ಈಗ ಹೇಗೆ ಬಸುರಿಯಾಗಿದ್ದೇ..?" ಎಂದು ಲಾ ಪಾಯಿಂಟ್   ಎಸೆದೆ. 
  
ನನ್ನ ಮುಖವನ್ನು ಅರೆ ಗಳಿಗೆ ನೋಡಿ.. 'ಅದನ್ನವರು ಮಾರಿದ್ದಾರೆ ಈಗ.. ಹಾಗಾಗಿ ಬಸುರಿ ಆದದ್ದು.."  ಎಂದಳು 

"ಓಹೋ ಹಾಗಾ.. ಯಾರು ತೆಕ್ಕೊಂಡ್ರಪ್ಪಾ ಆ ಹಳೇದನ್ನ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದನ್ನೇ ದೊಡ್ಡದಾಗಿ ಹೇಳಿಬಿಟ್ಟೆ.

"ಮತ್ಯಾರು.. ನಾನೇ.. ನನ್ನ ಪುಳ್ಳಿ ಮನೆಗೆ ಕೊಂಡೋಗಿ ಕೊಟ್ಟಿದ್ದೇನೆ. ಸಾಕು ಅವ್ಳು ಹೆತ್ತದ್ದು. ಹಳೆಯದಾದ್ರು ಪವರ್ ಇರ್ತದಂತೆ.." ಎಂದಳು ಗತ್ತಿನಲ್ಲಿ..!!   

Saturday, November 3, 2012

ಪ್ರತಿಜ್ಞೆ..






ಹಾಸಿಗೆಯಲ್ಲಿ ಕಣ್ಣು ಬಿಟ್ಟು ಮಲಗಿಕೊಂಡೇ ಆಲೋಚಿಸುತ್ತಿದ್ದೆ. ಅಮ್ಮ ಬಂದು 'ಗಂಟೆ ಆಯಿತು ಏಳು ಬೇಗ' ಅಂತ ನಾಲ್ಕಾರು ಸಲ ಕರೆದು ಹೋಗಿದ್ದಳು. ಈಗ ಹೊರಗಿನಿಂದ 'ದೀಪು' ಅಂತ ಅಪ್ಪನ ಸ್ವರವೂ ಕೇಳಿಸಿತು. ಇನ್ನೂ ಏಳದಿದ್ದರೆ ಬೆಳಿಗ್ಗೆ ಬೆಳಿಗ್ಗೆಯೇ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದುಕೊಂಡು ಮೆಲ್ಲನೆ ಎದ್ದು ತಲೆ ಬಗ್ಗಿಸಿಕೊಂಡು ಬಚ್ಚಲು ಮನೆಗೆ ನಡೆದೆ. ಅಪ್ಪ ಮತ್ತು ತಂಗಿ ಪಾಲಿ ಆಗಲೇ ದೋಸೆ ತಿನ್ನುತ್ತಾ ಕುಳಿತಿದ್ದರು. 

ನನ್ನ ತಟ್ಟೆ ತೆಗೆದುಕೊಂಡು ಬಂದು ಪಾಲಿಯ ಪಕ್ಕವೇ ಕೂತೆ. ಯಾರೂ ನನ್ನನ್ನು ಮಾತಾಡಿಸದಿರಲಿ ಅಂತ ದೇವರನ್ನು ಬೇಡಿಕೊಂಡೆ. ಅಪ್ಪ ಆಗಲೇ ತಮ್ಮ ತಟ್ಟೆ ಎತ್ತಿಕೊಂಡು ಕೈ ತೊಳೆಯಲು ಎದ್ದರು. ನಮ್ಮಲ್ಲಿ ಅವರವರ ತಟ್ಟೆ ಲೋಟ ಅವರೇ ತೊಳೆಯಬೇಕು. ಈ ನಿಯಮ ಅಪ್ಪನೇ ಮಾಡಿದ್ದು. ಆದ್ರೆ ಪಕ್ಕದ ಮನೆ ಸುಧಿ ಮನೆಯ ಕ್ರಮವೇ ಒಳ್ಳೇದು ಅಂತ ನನ್ನ ಭಾವನೆ. ಅವ್ನ ತಟ್ಟೆ ಲೋಟ ಎಲ್ಲಾ ಅವ್ನಕ್ಕ ಪ್ರೀತಿನೇ ತೊಳೆದುಕೊಡ್ತಾಳೆ. ಅವ್ನನ್ನ ಕೇಳಿದರೆ ಗಂಡು ಹುಡುಗರು ಮನೆ ಕೆಲ್ಸ ಮಾಡ್ಬಾರ್ದು ಕಣೋ ಅಂತಾನೆ. ನಮ್ಮನೇನೇ ಇಷ್ಟು ವಿಚಿತ್ರ. ಅಪ್ಪ ಅಮ್ಮಂದು ಸಾವಿರ ರೂಲ್ಸ್..  

ಅಮ್ಮ ತಲೆಗೆ ಮೊಟಕಿ 'ಎಲ್ಲಿದ್ದೀಯಾ.. ದೋಸೆ ಬೇಕಾ ಸಾಕಾ ಅಂತ ಆಗಿಂದ ಕೇಳ್ತಾ ಇದ್ದೀನಿ.. ಏನಾಗಿದೆ ನಿಂಗೆ' ಅಂತ ಕೇಳುವವರೆಗೆ ಯೋಚನೆಯಲ್ಲೇ ಮುಳುಗಿದ್ದೆ. ಯಾಕೋ ತಿಂದಿದ್ದು ಒಂದೇ ದೋಸೆ ಆದರೂ ಹೊಟ್ಟೆ ತುಂಬಿದಂತೆನಿಸಿ 'ಸಾಕು ನಂಗೆ' ಅಂತ ಎದ್ದೆ. 

ಇವತ್ತು ಕಡೇ ದಿನ. ಇಂದೊಂದು ದಿನ ಬೇಗ ಕಳೆದು ಬಿಡಲಪ್ಪಾ.. ಓಹ್ ಎಷ್ಟು ಸಾರಿ ಕೇಳಿಕೊಂಡೆನೇನೋ ಹೀಗೆ..ಈ ನನ್ನ ತಲೆಬಿಸಿಗೆ ಕಾರಣವೇ ಬೇರೆ. 

ಮೊನ್ನೆ ಸಂಜೆ ಶಾಲೆ ಮುಗಿದಾಗ ಪ್ರೇಯರ್ ಹಾಲಿಗೆ ಎಲ್ಲರನ್ನೂ ಕರೆದು, 'ನಾಳೆಂದ ಮೂರು ದಿನ ಜನಗಣತಿ ಇರೋದ್ರಿಂದ ನಿಮಗೆಲ್ಲಾ ರಜ.  ಹಾಗಂತ ಇಡೀ ದಿನ ಆಟ ಆಡೋದಲ್ಲ.. ನಾವು ಟೀಚರ್ಸ್ ನಿಮ್ಮ ಮನೆಗೆ ಬರ್ತೀವಿ .ಆಗ ಓದಿಕೊಂಡು ಇರ್ಬೇಕು. ನಿಮ್ಮ ಮನೆಯವರಲ್ಲೂ ವಿಚಾರಿಸುತ್ತೇವೆ. ಓದದವರಿಗೆ  ಶಾಲೆಯಲ್ಲಿ ಪನಿಶ್ ಮೆಂಟ್ ಇದೆ' ಅಂದಿದ್ರು. ಅದಾದ್ರು ದೊಡ್ದ ವಿಷಯ ಅಲ್ಲ. ಟೀಚರ್ ಏನಾದ್ರು ಇಡೀ ದಿನ ಇರ್ತಾರ..? ಅಲ್ಲಿ ಬರೋದು  ಕಾಣುವಾಗ ಪುಸ್ತಕ ಕೈಯಲ್ಲಿ ಹಿಡಿದರಾಯಿತು. ಹಾಗೇ ಆಡ್ಲಿಕ್ಕೆ ಅಮ್ಮ ಆದ್ರೂ ಎಲ್ಲಿ ಬಿಡ್ತಾಳೆ. ಅವ್ಳೇ ಟೀಚರುಗಳಿಗಿಂತ ಹೆಚ್ಚಾಗಿ ಬಯ್ತಾಳೆ. ಅದ್ರೂ ಇದು ನನ್ನ ಸಮಸ್ಯೆಯೇ ಅಲ್ಲ. 

ಸಮಸ್ಯೆ ಇರೋದು ನೀಲಾ ಟೀಚರ್ ನಮ್ಮನೇಗೆ ಬರೋದ್ರಲ್ಲಿ. ಅವ್ರು ನನ್ನ ಕ್ಲಾಸ್ ಟೀಚರ್. ಗಣಿತ ಅವ್ರೇ ಮಾಡೋದು. ನಂಗೂ ಅವ್ರನ್ನ ಕಂಡರೆ ಇಷ್ಟಾನೇ.. ಲೆಕ್ಕದಲ್ಲಿ ಯಾವಾಗ್ಲೂ ನಾನೇ ಫಸ್ಟ್ ಇಡೀ ಕ್ಲಾಸಿಗೆ. ಯಾವಾಗ್ಲಾದ್ರು ಸಿಕ್ಕಿದ್ರೆ ಹೊಗಳ್ತಾ ಇರ್ತಾರೆ ಅಂತ ಅಮ್ಮ ಹೆಮ್ಮೆಯಿಂದ  ಅಪ್ಪನತ್ರ ಹೇಳೋದನ್ನು ಕೇಳಿದ್ದೀನಿ ನಾನು. 

ಆದ್ರೆ ಈ ಸಲದ ಕಥೆಯೇ ಬೇರೆ. ಅದಕ್ಕೆ ಕಾರಣ ಮಾತ್ರ ಈ ಅಪ್ಪ ಅಮ್ಮನೇ.. ಓ ಅಲ್ಲಿ ಕಾಣುತ್ತಲ್ವಾ ಕಲ್ಯಾಣ ಮಂಟಪ..  ಅಲ್ಲಿ ಅಮ್ಮನ ಊರಿನ ಕಡೆಯವರದ್ದು ಮದುವೆ ಇತ್ತು. ಅವ್ರು ಕಾಗದ ಕೊಡೋದಿಕ್ಕು ನಮ್ಮಲ್ಲಿಗೆ ಬಂದಿದ್ರು. 'ನೀವೂ ಬನ್ನಿ. ಅಲ್ಲಿ ಎಲ್ರೂ ನಿಮ್ಮನ್ನ ಕೇಳ್ತಾರೆ .. ಮಕ್ಳಿಗೆ ಅಡುಗೆ ಮಾಡಿಟ್ಟಿದ್ದೀನಿ. ಬಡಿಸ್ಕೊಂಡು ಊಟ ಮಾಡ್ತಾರೆ. ಪರೀಕ್ಶೆ ಇಲ್ಲಾಂದಿದ್ರೆ ಎಲ್ರೂ ಹೋಗ್ಬೋದಿತ್ತು. ತೊಂದ್ರೇ ಏನೂ ಇಲ್ಲ. ಮಕ್ಳು ಅವ್ರ ಪಾಡಿಗೆ ಓದೋದನ್ನು ಅಭ್ಯಾಸ ಮಾಡೋದು ಒಳ್ಳೇದಲ್ವಾ  .. ಓದ್ಕೊಳ್ಳಿ .. ನಾವು ಹೋಗಿ ಬಂದ್ಬಿಡೋಣ ಅಂತ ಅಪ್ಪನೊಂದಿಗೆ ಹೊರಟಿದ್ಲು. ಹೊರಡುವಾಗ ಸಾವಿರ ಸಲ ಹೇಳಿರಬಹುದು. ಮನೇಲೇ ಇರಿ. ಹೊರಗೆಲ್ಲೂ ಹೋಗ್ಬೇಡಿ. ಚೆನ್ನಾಗಿ ಓದಿಕೊಳ್ಳಿ. ನಾವು ಬಂದ ಮತ್ತೆ ಆಟ ಆಡ್ಲಿಕ್ಕೆ ಹೋದ್ರಾಯ್ತು ಅಂತ. ಎಲ್ಲಾದಕ್ಕು ಕೋಲೆಬಸವನ ತರ ತಲೆ ತೂಗಿದ್ದೆವು ನಾನು ಮತ್ತು ಪಾಲಿ. 

ಅವ್ರು ಆಕಡೆ ಹೋದ ಕೂಡ್ಲೇ ಪಾಲಿ ಪಕ್ಕದ ಮನೆ ಶಾರೀನ್ನ ಕರ್ದು ಅವ್ಳ ಜೊತೆ ಗೊಂಬೆ ಆಟ ಆಡ್ತಾ ಕೂತ್ಕೊಂಡ್ಳು. ನನ್ನನ್ನೂ ಕರೆದಳು. ನಂಗ್ಯಾಕೋ ಈ ಗೊಂಬೆ ಆಟ ಇಷ್ಟಾನೇ ಇಲ್ಲ. ನಾನು ಮೆಲ್ಲನೆ ' ನೋಡೇ ಪಾಲಿ ನೀವಿಬ್ರೂ ಇಲ್ಲೇ ಆಡ್ಕೋತಾ ಇರಿ. ನಾನು ಸುಧಿ ಮನೆಗೆ ಹೋಗಿ ಬೇಗ ಬರ್ತೀನಿ' ಅಂದೆ. ಅದಕ್ಕವಳು 'ಬೇಡ ಗೊತ್ತಾದ್ರೆ ಆಮೇಲೆ ಅಮ್ಮ ಬಯ್ತಾಳೆ' ಅಂದ್ಲು. 'ನನ್ನ ಲೆಕ್ಕದ ನೋಟ್ಸ್ ಅವ್ನತ್ರಾನೇ ಇದೆ .. ಈಗ ಬಂದೆ' ಅಂತ ಹೊರಟೇ ಬಿಟ್ಟಿದ್ದೆ. 

ಅಲ್ಲಿ ಹೋಗ್ಬೇಕಿದ್ರೆ ಸುಧಿ ಮನೆಗೆ ಹೊಸ  ಕೇರಂ ಬೋರ್ಡ್ ತಂದಿದ್ರು. ನಮ್ಗಂತೂ ತುಂಬಾ ಇಷ್ಟದ ಆಟ. ಶಾಲೇಲಿ ಗೇಮ್ಸ್ ಪಿರಿಯಡ್ ಗೆ ಎಲ್ಲಾ ಹೊರಗೆ ಆಡ್ತಾ ಇದ್ರೆ ನಾವೊಂದು ನಾಲ್ಕು ಜನ ಕೇರಂ ಆಡ್ತಿದ್ದೆವು.  ಚೆನ್ನಾಗಿ ಬರ್ತಿತ್ತು  ಈ ಆಟ. ಇಲ್ಲಿ ನೋಡಿದ್ರೆ ಪ್ರೀತಿ ಅವ್ಳ ಫ್ರೆಂಡ್ ರಾಜಿ ಮತ್ತೆ ರೀನಾ  ಮೂರೇ ಜನ ಪಾಪರ್ ಆಟ ಆಡ್ತಿದ್ರು. ನನ್ನನ್ನು ಕಂಡ ಕೂಡ್ಲೇ ಪ್ರೀತಿ ' ಹೋ .. ಚಾಂಪಿಯನ್ ಬಂದಾ.. ಒಳ್ಳೇದಾಯ್ತು.. ಬಾರೋ ಆಟಕ್ಕೆ ಅಂತ ಹಿಡಿದೆಳೆದು ಕೂರಿಸಿದಳು. ನಂಗೆ ಅವ್ಳು ಹಾಗೇ ಕರೆದ ಕುಶಿಗೆ  ನೋಟ್ಸು, ಮನೆ, ಪಾಲಿ, ನಾಳೆಯ ಪರೀಕ್ಷೆ ಎಲ್ಲಾ ಮರೆತೇ ಹೋಯ್ತು. 

ಪಾಲಿ ಒಂದೆರಡು ಸಲ ಬಂದು ಕರೆದು ಹೋದಳು. ನಾನು ಒಂದಾಟ  ಆಡಿ ಸ್ವಲ್ಪ ಓದಿ ಬರ್ತೀನಿ ನೀನು ಹೋಗು ಅಂತ ಅವಳನ್ನಟ್ಟಿದೆ. ' ಅಮ್ಮಂಗೆ ಹೇಳ್ತೀನಿ' ಅಂತ ಹೇಳ್ತಾನೇ ಹೋದಳು.

ಸುಧಿಯ ಅಮ್ಮನ ಒತ್ತಾಯಕ್ಕೆ ಊಟ ಕೂಡಾ ಅಲ್ಲೇ ಮಾಡಿ ಮತ್ತೆ ಆಡಿದೆವು. ಗಂಟೆ ಮೂರಾಗುವ ಹೊತ್ತಿಗೆ ಇನ್ನು ಅಮ್ಮ ಅಪ್ಪ ಬರುವ ಹೊತ್ತಾಯಿತು ಅಂತ ಹೊರಟೆ. ಸುಧಿ ಅಮ್ಮ ಕೊಟ್ಟ ಮೈಸೂರ್ ಪಾಕ್ ಆಗಲೇ ಕಿಸೆಯಲ್ಲಿ ತುರುಕಿಕೊಂಡಿದ್ದೆ. ಪಾಲಿಗೆ ಅದನ್ನು ಕೊಟ್ಟು ' ಅಮ್ಮಂಗೆ ನಾನು ಸುಧಿ ಮನೆಗೆ ಹೋಗಿದ್ದು ಹೇಳ್ಬೇಡ ಅಂದೆ. ಅವಳೂ ಮೈಸೂರುಪಾಕಿನ ತುಂಡನ್ನು ಇಡಿಯಾಗಿ ಬಾಯೊಳಗೆ ತುರುಕಿಕೊಂಡಿದ್ದ ಕಾರಣ ಮಾತಾಡಲಾಗದೆ ತಲೆ ಆಡಿಸಿಯೇ ನನ್ನ ಮಾತಿಗೆ ಸಮ್ಮತಿ ಸೂಚಿಸಿದ್ದಳು.

ಸ್ವಲ್ಪ ಹೊತ್ತಲ್ಲಿ ಮನೆಗೆ ಬಂದ ಅಮ್ಮ ಅಪ್ಪನಿಗೆ ಪುಸ್ತಕ ಬಿಡಿಸಿಟ್ಟು ಓದ್ತಾ ಇದ್ದ ನಮ್ಮನ್ನು ಕಂಡು ಕುಶಿ  ಆಗಿ ' ಸಾಕೀಗ ಓದಿದ್ದು.. ಒಳ್ಳೇ ಮಕ್ಕಳು.. ಸ್ವಲ್ಪ ಹೊರಗೆ ಆಡ್ಕೊಳ್ಳಿ ಅಂದಿದ್ದಳು. ನನ್ನ ಸವಾರಿ ಪುನಃ ಸುಧಿ ಮನೆಗೆ ನಡೆದಿತ್ತು ಕೇರಂ ಆಡಲು. 

ಮಾರನೇ ದಿನ ಲೆಕ್ಕ ಪರೀಕ್ಷೆ. ಮಾಡ್ಲಿಕ್ಕೆ ಹೊರಟ್ರೆ ಯಾವ್ದೂ ಸರಿ ಆಗ್ಲಿಲ್ಲ. ತುಂಬಾ ಕಷ್ಟ ಇತ್ತು. ಜೊತೆಗೆ ಟೀಚರ್ ಬೇರೆ ಬೇಗ ಬೇಗ ಮಾಡಿ ಕೊಡಿ.. ನಂಗೆ ಆಫೀಸಲ್ಲಿ ಕೆಲ್ಸ ಇದೆ ಅಂತ ಪೇಪರ್ ಎಳ್ಕೊಂಡು ಹೋಗಿಯೇ ಬಿಟ್ಟಿದ್ರು. ಉತ್ತರ ಪತ್ರಿಕೆ ಕೊಡುವಾಗ ನನ್ನ ಹೆಸರು ಕಡೇಯಲ್ಲಿ ಹೇಳಿ ಮಾರ್ಕ್ ಹೇಳಿದ್ರು. ಹತ್ತಕ್ಕೆ ಎರಡು. ಎಲ್ಲಾ ಮಕ್ಕಳು ನಗ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು. ಟೀಚರಿಗೇ ಪಾಪ ಎನ್ನಿಸಿ.. ಯಾಕೇ ಇಷ್ಟು ಕಡಿಮೆ ಮಾರ್ಕು.. ಏನಾಯ್ತು.. ಅಂದರು. ನಂಗೆ ಮೊನ್ನೆ   ಜೋರು ಜ್ವರ ಬಂದಿತ್ತು.. ಲೆಕ್ಕ ಅಬ್ಯಾಸ ಮಾಡ್ಲಿಕೆ ಆಗ್ಲಿಲ್ಲ  ಮಲಗಿದ್ದೆ ಅಂತ ಸುಳ್ಳು ಬಿಟ್ಟಿದ್ದೆ. ಸರಿ ಸರಿ.. ಮೊದ್ಲೇ ಹೇಳ್ಬೇಕಿತ್ತು.. ಅಂತ ಕನಿಕರ ತೋರಿಸಿದ್ದರು. 

ಎಲ್ಲಾ ಮುಗಿತಪ್ಪ ಅಂತ ಸಮಾಧಾನದಿಂದ ಇದ್ದೆ. ಆದರೆ ಈಗ ಅದೇ ನೀಲಾ ಟೀಚರ್ ಬಂದ್ರೆ ಮೊನ್ನೆಯ ಸಂಗತಿ ಹೇಳಿಯೇ ಹೇಳ್ತಾರೆ. ಆಗ ನಾನು ಸುಳ್ಳು ಹೇಳಿದ್ದು ಅಮ್ಮನಿಗೆ ಗೊತ್ತಾಗುತ್ತೆ. ಜೊತೆಗೆ ಮೊದ್ಲಿನ ದಿನ ಸುಧಿ ಮನೇಲಿ ಆಟ ಆಡಿದ್ದು , ಲೆಕ್ಕದಲ್ಲಿ ಎರಡೇ ಎರಡು ಮಾರ್ಕು ಬಂದಿದ್ದು.. ಎಲ್ಲಾ ಗೊತ್ತಾಗುತ್ತೆ. 
ದೇವ್ರೇ..  ಈ ಸಲ ಕ್ಷಮಿಸು.. ಇನ್ನು ಮುಂದೆ ಸುಧಿ ಮನೆ ಕಡೆ ಹೋಗಲ್ಲ. ಅವರ ಕೇರಂ ಬೋರ್ಡ್ ಮುಟ್ಟಿ ಕೂಡಾ  ನೋದಲ್ಲ. ಅಂತ ಪ್ರತಿಜ್ಞೆ ಮಾಡಿದೆ. 

ಹೊರಗಡೆ ಯಾರೋ ಬಂದ ಸದ್ದು. ಮೆಲ್ಲನೆ ಕಿಟಕಿಯಿಂದಲೇ  ಇಣುಕಿದೆ. ನೀಲಾ ಟೀಚರ್  ಚಿಕ್ಕ ಹುಡುಗಿಯ ಕೈ ಹಿಡಿದು ನಿಂತಿದ್ರು. ಅಮ್ಮ ಸೀರೆ ಸೆರಗಲ್ಲಿ ಕೈ ಒರೆಸಿಕೊಳ್ಳುತ್ತಾ ಹೊರಗೆ ಹೋದಳು. ನನಗೆ ಪ್ರಾಣ ಹೋಗುವಷ್ಟು ಹೆದರಿಕೆ ಆಯ್ತು. 

ಮೊನ್ನೆ ನೋಡಿದ ಒಂದು ಪಿಕ್ಚರಲ್ಲಿ ನನ್ನ ಪ್ರಾಯದ ಹುಡುಗನೊಬ್ಬ ಮನೆ ಬಿಟ್ಟು ಓಡಿ ಹೋಗಿದ್ದು ನೆನಪಾಯ್ತು. ನಾನು ಹಾಗೇ ಎಲ್ಲಿಯಾದರೂ ಓಡಿದರೆ ಹೇಗೆ ಅಂತ ಆಲೋಚಿಸಿದೆ.ಆದ್ರೆ ಆ ಹುಡುಗನಿಗೆ ಬಂದ ತೊಂದರೆಗಳೂ ನೆನಪಾಗಿ ಕಾಲೆತ್ತಿ ಇಡಲು ಶಕ್ತಿ ಇಲ್ಲದಷ್ಟು ಭಯ ಆತು. 

ಅಷ್ಟರಲ್ಲಿ ಅಮ್ಮ 'ಹೋ.. ಬನ್ನಿ ಬನ್ನಿ.. ಇವಳ್ಯಾರು ಪುಟ್ಟ ಹುಡುಗಿ' ಅಂತ ಒತ್ತಾಯ ಮಾಡಿ ಒಳಗೆ ಕರೆಯುವುದು ಕೇಳಿಸಿತು. 

ನೀಲಾ ಟೀಚರ್, ' ನಿಮ್ಮಲ್ಲಿಬ್ರೇ ಮಕ್ಕಳಲ್ವಾ ಇರೋದು .. ಹೊಸದಾಗಿ ಏನೂ ಬರೆಯಲಿಕ್ಕೆ ಇಲ್ಲ. ಹಳೇದನ್ನೇ ನೋಡಿ ಬರೀತೀನಿ. ಇವ್ಳು ನನ್ನ ಮಗಳು. ಮನೇಲಿ ಒಬ್ಳೇ ಆಗ್ತಾಳೆ ಅಂತ ಕರ್ಕೊಂಡು ಬಂದೆ. ಇನ್ನು ಕೆಲವು ಮನೆಗೆ ನುಗ್ಗಿ ಬೇಗ ಮನೆಗೆ ಓಡ್ಬೇಕಪ್ಪ.. ಇವತ್ತು ಸಂಜೆ ಊರಿಂದ ಅತ್ತೆ ಮಾವ ಬರ್ತಾರೆ. ಸಲ್ಪ ಅಡುಗೆ ಆಗ್ಬೇಕು.. ನಿಮ್ಮಲ್ಲಿಗೇನು ಇನ್ನೊಮ್ಮೆ ಬರ್ತೀನಿ' ಅಂತ ಹೊರಟೇ ಬಿಟ್ಟರು.

ನನ್ನ ತಲೆ ಮೇಲಿದ್ದ ದೊಡ್ದ ಬಂಡೆ ಸರಿಸಿದಂತಾಯ್ತು. ಅವರು ಹೋಗುವುದನ್ನು ಕಂಡು ಕುಶಿಯಿಂದ  ಕಿರುಚಬೇಕೆಂದುಕೊಂಡೆ. ಅಮ್ಮ ಬಯ್ದರೆ ಅಂತ ಸುಮ್ಮನಾದೆ. ಬೆಳಿಗ್ಗೆ  ತಲೆ ಬಿಸಿಯಲ್ಲಿ ತಿಂದಿದ್ದ ಒಂದು  ದೋಸೆ    ಕರಗಿ ಮಾಯವಾಗಿತ್ತು. 

ಅಮ್ಮನತ್ರ ಬಿಸ್ಕೆಟ್ ಆದ್ರೂ ಕೇಳ್ತೇನೆ ಅಂತ ಎದ್ದೆ. ಸುಧಿ ಬಾಗಿಲ ಬಳಿ ನಿಂತಿದ್ದವನು ನನ್ನನ್ನು ಕಂಡು ' ಇಷ್ಟೊತ್ತು ಓದ್ತಾ ಕೂತಿದ್ದೆ. ಟೀಚರ್ ನಮ್ಮನೇಗೂ ಬರ್ಲಿಲ್ಲ. ಇನ್ನು ಓದ್ಬೇಕೂಂತ ಇಲ್ಲ. ಬಾ ಕೇರಂ ಆಡೋಣ ಅಂದ.
 ಅರೇ.. ಹೌದಲ್ವಾ.. ಎನ್ನಿಸಿ ,  ' ಅಮ್ಮಾ ನಾನು ಸುಧಿ ಮನೇಗೇ ಆಡ್ಲಿಕ್ಕೆ ಹೋಗ್ತೀನಿ ಅಂತ ಹೊರಟೇ ಬಿಟ್ಟೆ. 

Monday, October 15, 2012

ಉಪ್ಪಿನಕಾಯಿಯೂ.. ಬಾಂಧವ್ಯವೂ..








ಉಪ್ಪಿನಕಾಯಿ  ಹಾಡ ಕೇಳಿ ಬಲು (ರು)ರೂಚೀ..
ತಪ್ಪದೆ ನೀವು ತಿಂದು ನೋಡೀ ಅದರಾ (ರು)ರೂಚೀ..
ಮಾವಿನಕಾಯಿ  ಲಿಂಬೆಕಾಯಿ  ಉಪ್ಪಿನಕಾಯಿ ..
ನೀವು ತಂದು ಹಾಕಬೇಕು ಉಪ್ಪಿನಕಾಯಿ ..

ಹೀಗೆ ನಾಲ್ಕನೇ ತರಗತಿಯಲ್ಲಿ ಎರಡನೇ ಪಿರಿಯಡ್ ನಲ್ಲಿ ವೇದಾವತಿ ಟೀಚರ್ ಹಾಡು ಹೇಳಿ ಕೊಡುತ್ತಿದ್ದರೆ,ನನಗೆ  ಅಮ್ಮ ಮಾಡಿದ ಉಪ್ಪಿನಕಾಯಿಯ ನೆನಪಾಗಿ ಬಾಯಲ್ಲಿ ನೀರೊಡೆದು ಹಸಿವಾಗಲು ಪ್ರಾರಂಭವಾಗುತ್ತಿತ್ತು. ಯಾವಾಗ ಮದ್ಯಾಹ್ನದ ಬೆಲ್ ಹೊಡೆಯೋದು ಎಂದು ಶಾಲೆಯ ಎದುರು ನೇತು ಹಾಕಿದ್ದ ಕಂಚಿನ ಗಂಟೆಯ ಕಡೆಗೆ ದೃಷ್ಟಿ ಹರಿಯುತ್ತಿತ್ತು . 

ಈ 'ಉಪ್ಪಿನಕಾಯಿ ' ಎಂಬ ಕಾಯಿ  ಯಾವ ಮರದಲ್ಲೂ ಬೆಳೆಯುವಂತದ್ದಲ್ಲ. ಆದರೂ ಇದರ ಸವಿ  ತಿಳಿಯದವರಿಲ್ಲ . ಅದೂ ಉಪ್ಪಿನಕಾಯಿ  ಎಂಬ ಒಂದೇ ಹೆಸರಿನಡಿಯಲ್ಲಿ ಎಷ್ಟೊಂದು ಬಗೆ. ಮಾವಿನಕಾಯಿ ಲಿಂಬೆಕಾಯಿ ,ಅಂಬಟೆ, ಕರಂಡೆ, ಬೀಂಪುಳಿಗಳಂತಹಾ ಹುಳಿ ಇರುವ ಕಾಯಿ ಗಳು,ಇವುಗಳ ಜೊತೆ  ಬಗೆ ಬಗೆಯ ತರಕಾರಿಗಳನ್ನು ಸೇರಿಸಿ ಬೆರೆಸಿ ಮಾಡುವ ಉಪ್ಪಿನಕಾಯಿಗಳು ಇದಿಷ್ಟು ವೆಜ್ಜಿಗರಿಗಾದರೆ, ನಾನು ವೆಜ್ಜು ಅನ್ನುವವರಿಗೆ ಸಮುದ್ರ ಫಲಗಳಾದ ಮೀನು ಸಿಗಡಿಗಳ ಉಪ್ಪಿನಕಾಯಿಗಳೂ ಲಭ್ಯ.ಅದು ಯಾವುದೇ ಇರಲಿ ಊಟಕ್ಕೆ ಹರಡಿದ ಬಾಳೆ ಎಲೆಯ ತುದಿಯಲ್ಲೊಂದು ದೃಷ್ಟಿ  ಬೊಟ್ಟಿನಂತೆ ಕೆಂಪು ಬಣ್ಣದ ಉಪ್ಪಿನಕಾಯಿ  ಇಲ್ಲದಿದ್ದರೆ ಊಟಕ್ಕೇನು ಬೆಲೆ!

ನಾನು ಚಿಕ್ಕವಳಿದ್ದಾಗ, ಜಂಬರದ ಮನೆಯಲ್ಲಿ ಊಟಕ್ಕೆ ಕೂತಾಗ ನನ್ನ ಗಾತ್ರ ನೋಡಿ 'ಇದಕ್ಕೆ ಬಳ್ಸಿದರೆ ಸುಮ್ಮನೆ ಇಡ್ಕುಗು' ಎಂದುಕೊಂಡು ಉಪ್ಪಿನಕಾಯಿ  ಬಡಿಸದೇ ಮುಂದಕ್ಕೆ ಹೋಗಿ ಬಿಡುತ್ತಿದ್ದರು. ಹತ್ತಿರದಲ್ಲಿ ಕೂತ ಅಮ್ಮ ಬಯ್ದರೂ ಕೇಳದೆ,ನಾನು ಹಠ ಹಿಡಿದು, ಅವರನ್ನು ಕರೆದು ನನ್ನ ಬಾಳೆ ಎಲೆಗೂ ಬಡಿಸಿ ಹೋಗುವಂತೆ ಮಾಡುತ್ತಿದ್ದೆ. 
 
ಹೀಗೆ ಈ ಉಪ್ಪಿನಕಾಯಿ ಎಲ್ಲರಿಗೂ ಪ್ರಿಯವಾಗಿ   ಸರ್ವವ್ಯಾಪಿಯಾಗಿದ್ದರೂ ಇದನ್ನು ಹಾಕುವ ಕಲೆ ಎಲ್ಲರಿಗೂ ಸಿದ್ಧಿಸುವಂತಹುದಲ್ಲ. ಸಾಮಾನ್ಯವಾಗಿ ಹೊಸಿಲಕ್ಕಿ ತುಳಿದು ಮುದ್ದುಗಾಲಿಟ್ಟು ಮನೆಯೊಳಗೆ  ಬರುವ ಸೊಸೆ  ಸರ್ವರಂಗಳಲ್ಲೂ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾದರೂ, ಈ ಉಪ್ಪಿನಕಾಯಿ  ತಯಾರಿಕೆಯ ಯಜಮಾನಿಕೆ ಮಾತ್ರ ಅತ್ತೆಯ ಕೈಯಲ್ಲೇ ಉಳಿದಿರುತ್ತದೆ. ಉಪ್ಪಿನಕಾಯ ಗುಣಮಟ್ಟವನ್ನು ಕಾಡಲು  ತನ್ನ 'ಕೈಗುಣ' ಅತಿ ಮುಖ್ಯ ಎಂದು ನಂಬಿರುವ ಅತ್ತೆಮ್ಮ ಈ ಜವಾಬ್ಧಾರಿಂದ ನಿವೃತ್ತಳಾಗಿ ತನ್ನ ಹಿರಿತನವನ್ನು ಕಳೆದುಕೊಳ್ಳಲು ಸುತಾರಾಂ ಬಯಸುವುದಿಲ್ಲ. 

ಉಪ್ಪಿನಕಾಯ  ಹಾಕುವುದೇನು ಅಣು ವಿಜ್ಞಾನವೇ ಎಂದು ಕೆಲವರು ಲಘುವಾಗಿ ನಗುವುದನ್ನು ನಾನಿಷ್ಟ ಪಡುವುದಿಲ್ಲ. ಮರದ ಮಿಡಿಯಿಂದ  ಹಿಡಿದು ಉಪ್ಪಿನಕಾಯಿ  ಭರಣಿಯವರೆಗಿನ ಸುಧೀರ್ಘ ಯಾತ್ರೆಯ  ಕಷ್ಟ ಸುಖಗಳು, ನೋವು ನಲಿವುಗಳು ಉಪ್ಪಿನಕಾಯಿ  ತಯಾರಿಸುವ ನಮ್ಮಂತಹಾ ನುರಿತ ಕೈಗಳಿಗೆ ಮಾತ್ರ ಗೊತ್ತಿರುತ್ತದೆಯೇ ವಿನಃ ಬಾಯಿ  ಚಪ್ಪರಿಸುತ್ತಾ ಲೊಟ್ಟೆ ಹೊಡೆದು ಮಿಡಿ ಉಪ್ಪಿನಕಾಯಿಗಳನ್ನು ಹೊಟ್ಟೆಗಿಳಿಸುವವರಿಗಲ್ಲ. ಪೇಟೆಯಲ್ಲಿ ಸಿಗುವ ರೆಡಿಮೇಡ್ ಉಪ್ಪಿನಕಾಯಿ  ಬಾಟಲಿಗಳ ಲೇಬಲ್ ಮೇಲೆ ಬರೆದಿರುವ ಸಾಮಾಗ್ರಿಗಳ ವಿವರ ಓದಿದ ಮಾತ್ರಕ್ಕೆ ಉಪ್ಪಿನಕಾಯಿ  ಹಾಕುವ ಕಲೆ ಸಿದ್ದಿಸುವುದೂ ಇಲ್ಲ. ಬೆರಳು ಚೀಪಿ ಮತ್ತೆ ಮತ್ತೆ ಸವಿಯುವಂತಹಾ ರುಚಿಯ ಉಪ್ಪಿನಕಾಯಿ ತಯಾರಿಕೆ ಒಂದು ಪಾರಂಪರಿಕ ಗುಟ್ಟಿನ ವಿದ್ಯೆ ಅಂದರೆ ಅತಿಶಯವೇನೂ ಇಲ್ಲ ಬಿಡಿ. ಆದರೂ ನಮ್ಮಜ್ಜಿ(ಜ್ಜ) ಮಾಡುವ ಉಪ್ಪಿನಕಾಯಿಯ ಕಥೆಯನ್ನು  ನಿಮ್ಮಲ್ಲಿ ಮುಚ್ಚು ಮರೆಯಿಲ್ಲದೇ ಹಂಚಿಕೊಳ್ಳುತ್ತಿದ್ದೇನೆ ಕೇಳಿ.

ಸಾಧಾರಣವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮಾಮರ ಹೂ ಬಿಡುವ ಕಾಲ. ಇದೇ ಸಮಯದಲ್ಲಿ ಉಪ್ಪಿನಕಾಯಿ  ಭರಣಿಗಳನ್ನು ಜಾಗ್ರತೆಯಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದರೊಂದಿಗೆ  'ಮಿಷನ್ ಉಪ್ಪಿನಕಾಯಿ'ಯ ರಣಾಂಗಣ ಸಿದ್ಧವಾಗುತ್ತಿತ್ತು. ದಿನಕ್ಕೆ ನಾಲ್ಕು ಬಾರಿ ಕೈಯ್ಯಲ್ಲಿ ಕತ್ತಿ ಹಿಡಿದು  ಜೈತ್ರ ಯಾತ್ರೆ ನಡೆಸುತ್ತಿದ್ದ ನನ್ನಜ್ಜಿಯ ದೆಸೆಯಿಂದಾಗಿ ತೋಟದ ಮೂಲೆಯಲ್ಲಿದ್ದ ಮಿಡಿ ಮರದೆಡೆಗೆ ಸಾಗುವ ಹಾದಿ ಕಳೆ ಕೊಳೆಗಳನ್ನೆಲ್ಲಾ ಕಳೆದುಕೊಂಡು ಸ್ವಚ್ಚವಾಗಿ ಬಿಡುತ್ತಿತ್ತು. ಮರದಡಿಯಲ್ಲಿ ನಿಂತು  ಕುತ್ತಿಗೆ ಉದ್ದ ಮಾಡಿ, ಎರಡೂ ಕೈಗಳನ್ನೆತ್ತಿ  ತಮ್ಮ ಚತುರ್ಚಕ್ಷುಗಳಿಂದ ಹೊಮ್ಮುವ ದೃಷ್ಟಿಗೆ  ಪೂರಕವಾಗಿ ಹಿಡಿದು ವೀಕ್ಷಿಸಿ ಮಾವಿನ ಮಿಡಿಯ ಗಾತ್ರವನ್ನು ಅಂದಾಜಿಸಿ ಮನೆಗೆ ಮರಳುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು.

ಮಾವಿನ ಮಿಡಿಗಳಿನ್ನೂ ಮರದಲ್ಲಿರುವಾಗಲೇ ಅಜ್ಜ ಅಂಗಡಿಯಿಂದ  ಸಾಸಿವೆ ಮೆಣಸು ಅರಸಿನ ಕೊಂಬು ಇವುಗಳನ್ನೆಲ್ಲಾ ತಂದು ಜಮಾಯಿಸುತ್ತಿದ್ದರು. ಇವುಗಳನ್ನು ದಿನಗಟ್ಟಲೆ ಬಿಸಿಲಿಗಿಟ್ಟು ಗರಿ ಮುರಿ ಮಾಡುವುದು ಇನ್ನೊಂದು ಕೆಲಸ. ಗರಿ ಗರಿ ಒಣಗಿದ ಮೆಣಸನ್ನು ಕಣ್ಣು ಬಾಯಲ್ಲೆಲ್ಲಾ ನೀರಿಳಿಸಿಕೊಂಡು ಪುಡಿ ಮಾಡುವುದು ಮಗದೊಂದು ಕೆಲಸ. ಈಗಿನಂತೆ ಮಿಕ್ಸಿ ಗ್ರೈಂಡರುಗಳ ಕಾಲವಲ್ಲದ ಕಾರಣ ಈ 'ಸುಲಭ' ಕೆಲಸ ಅಜ್ಜನ ಪಾಲಿಗೆ ಬರುತ್ತಿತ್ತು. ಮೂಗಿಗೆ ಅಡ್ದಲಾಗಿ ದೊಡ್ಡ ಬಟ್ಟೆ ಕಟ್ಟಿ, ತಲೆಗೊಂದು ಮುಂಡಾಸು ಬಿಗಿದು, ಕೈಯಲ್ಲಿ ಬಲವಾದ 'ಬಲಗೆ'ಯನ್ನು ಹಿಡಿದು ಶಸ್ತ್ರಸನ್ನದ್ಧನಾದ ಯುದ್ಧವೀರನಂತೆ ಕಂಗೊಳಿಸುತ್ತಾ ತೊಳೆದು ಒರೆಸಿಟ್ಟ ದೊಡ್ಡ ಕಡೆಯುವ ಕಲ್ಲಿನ ಎದುರು ವಿರಾಜಮಾನರಾಗುತ್ತಿದ್ದರು. 
ಅಜ್ಜಿ ಸಾಮಗ್ರಿಗಳನ್ನೆಲ್ಲಾ ಸೇರು ಪಾವುಗಳಲ್ಲಿ ಅಳೆದು ತಂದಿರಿಸುತ್ತಿದ್ದರು. ಕಾಲ ಕಾಲಕ್ಕೆ ಅಜ್ಜನ ಬೆನ್ನಿನ ಮೇಲೆ ಕುಳಿತ ಸೊಳ್ಳೆಗಳಿಗೆ ಹೊಡೆಯುವುದು, ನೊಣ ಓಡಿಸುವುದು ಮಾಡುತ್ತಾ ಅಜ್ಜನ ಪ್ರೀತಿಗೂ ಪಾತ್ರರಾಗುತ್ತಿದ್ದರು. ಆ ಇಳಿ ವಯಸ್ಸಿನಲ್ಲೂ ಅಜ್ಜನ ಮಮತೆಯ ನೋಟಕ್ಕೆ ಅಜ್ಜಿಯ ಕೆನ್ನೆ ಕೆಂಪು ಮೆಣಸಿನಂತೆ ಬಣ್ಣ ತಳೆಯುವುದನ್ನು ನಾವು ಸೋಜಿಗದಿಂದಲೇ ನೋಡುತ್ತಿದ್ದೆವು. ಪುಡಿಗಳೆಲ್ಲಾ ಸಿದ್ದವಾದ ಮೇಲೆ ಹಂಡೆಗಟ್ಟಲೆ ಕುದಿಸಿ ಆರಿಸಿದ ಉಪ್ಪಿನ ದ್ರಾವಣವೂ ಸಿದ್ಧವಾಗುತ್ತಿತ್ತು. ಇಲ್ಲಿಗೆ ಮಿಷನ್ ಉಪ್ಪಿನಕಾಯಿ  ಒಂದು ಹಂತಕ್ಕೆ ಬಂದಂತಾಗುತ್ತಿತ್ತು.

ನಿಧಾನಕ್ಕೆ ಮಿಡಿಗಾಯಿ ಮರದಲ್ಲಿ ಸಮರ್ಪಕ ಗಾತ್ರ ಹೊಂದಿ ರಾರಾಜಿಸತೊಡಗಿದಾಗ ಅಜ್ಜ ಮತ್ತು ಅಜ್ಜಿಯ 'ಬೆಟಾಲಿಯನ್' ಮರದ ಬಳಿಗೆ ಹೋಗುತ್ತಿತ್ತು. ಅಜ್ಜ ಮರ ಹತ್ತಿ ಗೊಂಚಲು ಗೊಂಚಲು ಮಾವಿನಕಾಯಿಗಳನ್ನು ಕೊಯಿದು  ಬುಟ್ಟಿಯಲ್ಲಿ ಕಟ್ಟಿ ಇಳಿಸುತ್ತಿದ್ದರು. ಮನೆಗೆ  ಬಂದ ಕೂಡಲೇ ಮಜ್ಜನ ಮಾಡುತ್ತಿದ್ದ ಮಾವಿನಕಾಯಿಗಳು, ನೀರಾರಿದ ನಂತರ ತೊಟ್ಟು ಉಳಿಸಿಕೊಂಡು ಪರಿಮಳ ಬೀರುತ್ತಾ ಉಪ್ಪಿನೊಂದಿಗೆ ಭರಣಿ ಸೇರುತ್ತಿದ್ದವು. 
ವಾಲಿ ಗುಹೆಯ ಒಳಗೆ ರಕ್ಕಸನೊಂದಿಗೆ ಹೋರಾಡುತ್ತಿದ್ದಾಗ ಹೊಳೆಯಂತೆ ಹರಿದು ಬಂದ ರಕ್ತ ಧಾರೆಯನ್ನು ನೋಡಿ ಹೆದರಿದ ಸುಗ್ರೀವ ಗುಹೆಯ ಬಾಗೆ ದೊಡ್ಡ ಬಂಡೆಗಲ್ಲನ್ನು ಅಡ್ಡವಿರಿಸಿದ್ದನಂತೆ. ಹಾಗೆಯೇ ಈ ಮಾವಿನಕಾಯಿ  ಭರಣಿಗಳ ಮೇಲೂ ಮಣ ಭಾರದ ಕಲ್ಲು ಗುಂಡುಗಳು ಕುಳಿತುಕೊಳ್ಳುತ್ತಿದ್ದವು.ಜಲಸ್ಥಂಬನ ವಿದ್ಯೆ ಕಲಿತ ದುರ್ಯೋಧನ ವೈಶಂಪಾಯನ ಸರೋವರದ ಒಳಗೇ ಮುಳುಗಿದ್ದಂತೆ ಇದು ಮಾವಿನಕಾಯಿಗಳು ಉಪ್ಪು ನೀರಿನಲ್ಲಿ ಮುಳುಗಿಯೇ ಇರಲು ಸಹಕರಿಸುತ್ತಿತ್ತು.  ಹೀಗೆ ಬಂಧನಕ್ಕೊಳಗಾದ ಒಂದೆರಡು ದಿನಗಳಲ್ಲಿಯೇ  ಮಾವಿನ ಮಿಡಿಗಳು ತಮ್ಮ ಮೂಲ ರೂಪಗಳನ್ನು ಕಳೆದುಕೊಂಡು ಈಜಿಪ್ಟಿನ ಮಮ್ಮಿಗಳಂತೆ ಸಂಕುಚಿತಗೊಂಡು ಮುಂದಿನ ಪ್ರಕ್ರಿಯೆಗೆ ಸಿದ್ಧವಾಗುತ್ತಿದ್ದವು.

ಈಗ ಕೊನೆಯ ಮತ್ತು ಮಹತ್ವದ ಘಟ್ಟ. ನುಣ್ಣಗೆ ಮಾಡಿಟ್ಟ ಪುಡಿಗಳನ್ನು ಮರದ ಸಟ್ಟುಗದ ಸಹಾಯದಿಂದ ಬೆರೆಸಿ, ಅದಕ್ಕೆ ಉಪ್ಪಿನ ದ್ರಾವಣ ಹಾಕಿ ಕಲಸುತ್ತಿದ್ದರು. ಅದರೊಂದಿಗೆ ಉಪ್ಪಲ್ಲದ್ದಿದ ಮಾವಿನ ಮಿಡಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ದೊಡ್ಡ ದೊಡ್ಡ ಭರಣಿಗಳಲ್ಲಿ ತುಂಬಿ, ಮೇಲಿಂದ ಮತ್ತೊಂದಿಷ್ಟು ಹರಳುಪ್ಪು ಹಾಕಿ ಭದ್ರವಾಗಿ ಬಾಯಿ  ಕಟ್ಟಿ ಕತ್ತಲ ಕೋಣೆಗೆ ಸಾಗಿಸುತ್ತಿದ್ದರು. ಇಲ್ಲಿಗೆ ಉಪ್ಪಿನಕಾಯಿ  ಕಥೆ  ಮುಗಿದಂತೆ. 

ಈ ಉಪ್ಪಿನಕಾಯ ಭರಣಿಯ ಮುಚ್ಚಳ ತೆಗೆಯುವುದು ಎಂದರೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುವಷ್ಟೇ ನಿಯಮ ನಿಷ್ಟೆಗಳು ಬೆಕಾಗುತ್ತವೆ.  ಈ ಕೆಲಸದ ಸರ್ವಾಧಿಕಾರ ಅಜ್ಜಿಗೆ ಮಾತ್ರವೇ ಇದ್ದಿದ್ದು. ಪ್ರತಿ ಬಾರಿ ಉಪ್ಪಿನಕಾಯಿ  ಮುಚ್ಚಳ ತೆರೆಯುವ ಮೊದಲು ಕೈಯ್ಯಲ್ಲಿದ್ದ ನೀರ ಪಸೆಯನ್ನೆಲ್ಲಾ ಚೆನ್ನಾಗಿ ಒರೆಸಿಕೊಂಡು ತೆರೆಯಬೇಕಾಗಿತ್ತು. ಒಂದು ಹನಿ ತಗುಲಿದರೂ ಉಪ್ಪಿನಕಾಯ ಷೆಲ್ಪ್ ಲೈಪ್ ಕ್ಷೀಣಿಸುತ್ತದಂತೆ. ಬೇಕಾದಷ್ಟು ಉಪ್ಪಿನಕಾಯಿ  ತೆಗೆದು ಭರಣಿ ಮುಚ್ಚುವ ಮೊದಲು, ಗಾಳಿ ತಾಗಿ ಹಾಳಾಗಬಾರದು ಎಂದು  ಮೇಲಿನಿಂದ ಇನ್ನೊಂದಿಷ್ಟು ಉಪ್ಪು ಬೆರೆಸಿಡುತ್ತಿದ್ದರು. ಇದರಿಂದಾಗಿ ಉಪ್ಪಿನಕಾಯಿ  ಭರಣಿ ಖಾಲಿಯಾಗುವ ಹೊತ್ತಿನಲ್ಲಿ ಅದು ನಿಜ ಅರ್ಥದ 'ಉಪ್ಪಿ'ನಕಾಯಿ  ಆಗಿರುತ್ತಿತ್ತು. 

ಈ ಉಪ್ಪಿನ ಕಾಯಿ  ಕೇವಲ ನಾಲಿಗೆಯ ರುಚಿಗೆ ಮಾತ್ರವಾಗಿರದೇ ಬಾಂಧವ್ಯ ಬೆಸೆಯುವಲ್ಲೂ, ಬೆಳೆಸುವಲ್ಲೂ ಮಹತ್ವದ ಪಾತ್ರ ವಹಿಸುತ್ತಿತ್ತು ಎಂದರೆ ಅಚ್ಚರಿ ಎನಿಸಬಹುದು. ಈ ಡಿಪಾರ್ಟ್ಮೆಂಟಿನ ಹೆಡ್ ಕೂಡಾ  ಅಜ್ಜಿಯೇ ಆಗಿದ್ದರು. ಮದುವೆ ಮಾಡಿ ಕೊಟ್ಟ ಮಗಳಂದಿರಿಗೆ, ತನ್ನ ಅಕ್ಕ ತಂಗಿಯರಿಗೆ, ಅತ್ತಿಗೆ ನಾದಿನಿಯರಿಗೆ  ಎಲ್ಲಾ ಎಷ್ಟೆಷ್ಟು ಕೊಡಬೇಕು ಎಂಬುದನ್ನು ಯಾವುದೇ ವಕೀಲರ ನೆರವಿಲ್ಲದೇ ಪಾಲು ಪಟ್ಟಿ ನಡೆಸುತ್ತಿದ್ದಳು. ಇದರೊಂದಿಗೆ ಅಜ್ಜಿಯ ಉಪಿನಕಾಯಿಯ ರುಚಿಗೆ ಸೋತು, "ಸ್ವಲ್ಪ ಉಪ್ಪಿನಕಾಯಿ  ಇದ್ರೆ ಕೊಡಿ ಅಮ್ಮಾ" ಬೇಡಿ ಬರುತ್ತಿದ್ದವರ ಪಾಲಿಗೂ ಕೊರತೆ ಮಾಡುತ್ತಿರಲಿಲ್ಲ. ತೆಗೆದುಕೊಂಡು ಹೋದವರ ಒಂದೆರಡು ಹೊಗಳಿಕೆಯ ಮಾತುಗಳು ಉಪ್ಪಿನಕಾಯಿ  ಮಾಡುವಾಗ ಅನುಭವಿಸಿದ ಕಷ್ಟವನ್ನೆಲ್ಲಾ ಕ್ಷಣಾರ್ಧದಲ್ಲಿ ನೀಗಿಸಿ, 'ಬರುವ ವರ್ಷ ನಿಂಬೆಕಾಯದ್ದೂ ಸಹ ಮಾಡುವ ಯೋಚನೆಯುಂಟು, ನಿನಗೂ ಕೊಡ್ತೇನೆ' ಎಂದು ಆಶ್ವಾಸನೆ ಕೊಡುವ ಮಟ್ಟಕ್ಕೇರಿಸುತ್ತಿತ್ತು. 

ಈಗೆಲ್ಲ ಕಾರಣಾಂತರಗಳಿಂದ ಮನೆಗಳಲ್ಲಿ ಉಪ್ಪಿನಕಾಯಿ  ಹಾಕುವುದು ಕಮ್ಮಿಯಾಗುತ್ತಿದೆ. ಅಂಗಡಿಯಿಂದ  ಬಣ್ಣ ಬಣ್ಣದ ಡಬ್ಬಗಳಲ್ಲೇ ತುಂಬಿ ಬಂದು ಡೈನಿಂಗ್  ಟೇಬಲ್ ಮೇಲೆ ದಬ್ಬಲ್ಪಡುವ ಉಪ್ಪಿನಕಾಯಿಗಳಲ್ಲಿ ಆತ್ಮೀಯತೆಯ ಪರಿಮಳವಿಲ್ಲ. ಇಷ್ಟು ದುಡ್ಡು ಸುರಿದು ತಂದಿದ್ದೇನೆ ಎಂಬ ಲೆಕ್ಕಾಚಾರದ ಕಹಿ  ಮಾತ್ರ ಇರುತ್ತದೆ. ಸಾಂಪ್ರದಾಯಿಕವಾಗಿ ತಯಾರಿಸಿ ಹಂಚುವ ಉಪ್ಪಿನಕಾಯಿ  ಮರೆಯಾಗುವುದರೊಂದಿಗೆ ಬಾಂಧವ್ಯಗಳೂ ಪ್ರೀತಿಯ ಉಪ್ಪಿಲ್ಲದೇ ಸಪ್ಪೆಯಾಗಿ ಮುಂದೊಂದು ದಿನ ನಮ್ಮ ತಿಕ್ಕಲು ಮಕ್ಕಳು 'ಪಿಕ್ಕಲ್' ಇಲ್ಲದೆ ಊಟ ಮಾಡುವ ಕಾಲ ಬಂದರೂ ಬರಬಹುದೇನೋ..!!    

 

Thursday, October 4, 2012

ಉಪಾಸನೆ.





ಅಯ್ಯೋ..ಅತ್ತೇ.. ಎಂದು  ಹೊರಗಿನಿಂದ ಸುಮಾ ಕೂಗಿದ ಶಬ್ಧ ಕೇಳಿ ವಿಮಲಮ್ಮ ತಮ್ಮ ನೋವಿನ ಕಾಲನ್ನು ಲೆಕ್ಕಿಸದೇ ಹೊರಗೋಡಿದರು. ಅಷ್ಟರಲ್ಲಿ ಪ್ರದೀಪನೂ ಹೆಂಡತಿಯ ಬೊಬ್ಬೆ ಕೇಳಿ "ಏನಾಯಿತೇ" ಎಂದು ಓಡಿ ಬಂದ. 

ಚೆನ್ನಾಗಿ ಸೊಕ್ಕಿ ನಿಂತಿದ್ದ ಮಂದಾರ ಹೂವಿನ ಗಿಡದ ಕಡೆಗೆ ಬೆರಳು ತೋರಿಸಿ ನಿಂತ ಹೆಂಡತಿಯನ್ನು ಕಂಡು, " ಏನೂ ಹಾವೇನಾದರೂ ಇದೆಯಾ? ದೊಡ್ದ ಕೋಲು ಎಲ್ಲಿದೆ ತಾ" ಎಂದ.

ಹಾವಲ್ಲರೀ, ಈ ಗಿಡ ನೋಡಿ. ಒಂದೇ ಒಂದು ಹೂವಿಲ್ಲದಂತೆ ಯಾರೋ ಕದ್ದಿದ್ದಾರೆ. ನಿನ್ನೆ ನೋಡಿದರೆ ಅಷ್ಟೊಂದು ಮೊಗ್ಗಿತ್ತು.ಇಂದು ನೋಡಿ" ಎಂದಳು ಸುಮ ಅಳು ದ್ವನಿಯಲ್ಲಿ.
" ಅಯ್ಯೋ .. ಅದಕ್ಯಾಕಿಷ್ಟು ರಂಪಾಟ ಮಾಡ್ತೀಯಾ.., ನಿನ್ನ ಬೊಬ್ಬೆ ಕೇಳಿ ನಾನೇನಾದರೂ ವಿಷ ಜಂತು ಸೇರ್ಕೊಂಡಿದೆಯಾ ಅಂತ ಹೆದರಿದೆ. ನಡಿ ನಡಿ.. ನಂಗೆ ಆಫೀಸಿಗೆ ಲೇಟ್ ಆಯ್ತು.." ಎಂದ 

ವಿಮಲಮ್ಮ ಬಂದವರೇ ಗಿಡದ ಕಡೆಗೆ ನೋಡಿ, "ಪಾಪ ಎಷ್ಟೊಂದು ಆಸೆಯಿಂದ  ಕಾಯ್ತಾ ಇದ್ದಳು.. ತುಂಬಾ ಹೂ ಬಿಡುತ್ತೆ ಅಂತ. ಯಾರೋ ಪಾಪಿಗಳು ಒಂದನ್ನೂ ಉಳಿಸದೇ ಕೊಯ್ದು ಬಿಟ್ಟಿದ್ದಾರಲ್ಲಾ.. ಅವಳಿಗೆ ಬೇಸರ ಆಗಲ್ವೇನೋ.." ಎಂದು ಸೊಸೆಯ ಪರ ವಹಿಸಿದರು. 

" ಸರಿ, ಇನ್ನೂ ಮೊಗ್ಗಿದೆ ಗಿಡದಲ್ಲಿ.. ನಾಳೆ ಅರಳುತ್ತೆ.. ಯಾರೋ ಪೂಜೆಗೆ ಕೊಯ್ದಿರಬೇಕು. ನಂಗೆ ತಿಂಡಿ ಕೊಟ್ಬಿಡಿ ಬೇಗ.. ಮತ್ತೆ ನೀವು ಅತ್ತೆ ಸೊಸೆ ಆ ವಿಷಯ ಆಲೋಚನೆ ಮಾಡಿ.." ಎಂದು ಒಳ ನಡೆದ. 

ಗಂಡ ಮನೆಯಿಂದ  ಹೊರ ಹೋಗುವವರೆಗೆ ಸುಮ್ಮನಿದ್ದ ಸುಮಾ, " ಅಲ್ಲ ಅತ್ತೇ.. ಯಾರು ಕೊಯ್ದಿರಬಹುದು ಹೂವನ್ನು. ನಂಗೆ ಪಕ್ಕದ ಮನೆ ಶಾಸ್ತ್ರಿಗಳ ಮೇಲೇ ಅನುಮಾನ. ಅವರ ಮನೇಲಿ ಒಂದೇ ಒಂದು ಹೂವಿನ ಗಿಡ ಇಲ್ಲ. ದಿನಾ ಯಾರ್ಯಾರದ್ದೋ ಮನೆ ಮುಂದೆ ಹೂವಿಗಾಗಿ ಅಲೀತಿರ್ತಾರೆ. ಅವರದ್ದೇ ಕೆಲಸ  ನೋಡಿ ಬೇಕಾದ್ರೆ.." ಅಂದಳು.

ಸೊಸೆಯ ಹೂಗಿಡಗಳ ಬಗ್ಗೆ ಇದ್ದ ಪ್ರೀತಿ, ಆಸಕ್ತಿ ಅರಿತಿದ್ದ ವಿಮಲಮ್ಮ, "ಹೋಗ್ಲಿ ಬಿಡೇ.. ದೇವ್ರ ಪಾದಕ್ಕೆ ತಾನೇ ಸೇರಿರೋದು.. ಆದ್ರೆ ಒಂದ್ನಾಲಕ್ಕು ಹೂವಾದ್ರು ಗಿಡದಲ್ಲಿ ಉಳಿಸಬಹುದಿತ್ತು" ಎಂದು ಅಲವತ್ತುಕೊಂಡರು. 

ಇದು ಒಂದು ದಿನದ ಕಥೆಯಾಗಿ ಉಳಿಯಲಿಲ್ಲ. ಪ್ರತಿ ದಿನ ಇದೇ ಪುನರಾವರ್ತನೆಯಾದಾಗ ಸುಮ ಆ ಗಿಡದಲ್ಲಿ ಹೂವನ್ನು ಕಾಣುವ ಆಸೆಯನ್ನು ಬಿಟ್ಟಳು. ಪಕ್ಕದ ಮನೆಯ ಶಾಸ್ತ್ರಿಗಳ ತುಳಸಿಕಟ್ಟೆಯಲ್ಲಿ ಬಣ್ಣ ಕಳೆದುಕೊಂಡು ಒಣಗಿದ ಹೂವುಗಳು ತಮ್ಮ ಮನೆಯ ಮಂದಾರ ಹೂವುಗಳೇ ಎಂದು ತಿಳಿದಿದ್ದರೂ ಅವರನ್ನು ಕೇಳಿ ಬೇಸರ ಪಡಿಸುವ ಸಾಹಸಕ್ಕೆ ಕೈ ಹಾಕುವಂತಿರಲಿಲ್ಲ. 

ನೆರೆಹೊರೆ ಬೇರೆ.. ಅಷ್ಟಲ್ಲದೇ ಪ್ರದೀಪನ ತಂದೆ ಕಾಲವಾದಾಗ ತುಂಬಾ ಸಹಾಯ ಮಾಡಿದ್ದರು ಈ ಮನೆಗೆ ಅಂತ ಅತ್ತೆಯಿಂದ , ಗಂಡನಿಂದ ಕೇಳಿ ತಿಳಿದಿದ್ದಳು. ಪ್ರದೀಪನ ಬಳಿಯೂ ಈ ವಿಷಯ ಹೇಳಿದಾಗ, " ಸುಮ್ಮನಿದ್ದು ಬಿಡು ಸುಮಾ.. ಹೂವಿಗೇನು.. ನಾಳೆಯೂ ಅರಳಬಹುದು. ಶಾಸ್ತ್ರಿಗಳು ಹೆಂಡತಿಯನ್ನು ಕಳೆದುಕೊಂಡ ಮೇಲೆ ಪೂಜೆ ಪುನಸ್ಕಾರಗಳಲ್ಲೇ ಮನಶ್ಯಾಂತಿಯನ್ನು ಕಾಣುತ್ತಿದ್ದಾರೆ. ಮಕ್ಕಳು ಕರೆದರೂ ಅವರೊಂದಿಗೆ ಹೋಗದೇ 'ಇಲ್ಲೂ ಇದ್ದಾನಲ್ಲ.. ಮಗನಂತಿರುವವನು' ಎಂದು ನನ್ನ ಕಡೆಗೆ ಬೆಟ್ಟು ಮಾಡಿದವರು. ಹಾಗಂತ ಇಲ್ಲಿಯವರೆಗೆ ಯಾವ ಸಹಾಯವನ್ನು ಬೇಡಿದವರಲ್ಲ. ನೀನೀಗ ಇದನ್ನೇ ದೊಡ್ಡ ವಿಷಯವಾಗಿ ಕೇಳಿದರೆ ನೊಂದುಕೊಂಡಾರು" ಎಂದಿದ್ದ. ಮನದಲ್ಲಿ ಬೇಸರ ಇದ್ದರೂ ತೋರ್ಪಡಿಸದೇ ಗಂಡನ ಮಾತನ್ನು ಒಪ್ಪಿಕೊಂಡಿದ್ದಳು ಸುಮಾ.

ಇದಾಗಿ ವಾರಗಳುರುಳಿತ್ತು. ಬೆಳಗ್ಗೆ ಎಂದಿನಂತೆ ಸುಮಾ ಗಿಡಕ್ಕೆ ನೀರು ಹಾಕ ಹೋದಾಗ ಗಿಡದ ತುಂಬಾ ತೇರಂತೆ ಅರಳಿ ನಿಂತಿದ್ದ ಬಿಳಿ ಮಂದಾರ ಹೂಗಳು ಕಣ್ಣಿಗೆ ರಾಚಿದವು. ' ಅಬ್ಬಾ.. ಇಷ್ಟು ದಿನಕ್ಕೆ ಒಂದು ದಿನವಾದರೂ ಗಿಡದಲ್ಲಿ ಹೂವನ್ನುಳಿಸುವ ಬುದ್ಧಿ ಬಂತಲ್ಲ ಈ  ಶಾಸ್ತ್ರಿಗಳಿಗೆ' ಎಂದುಕೊಂಡು ಆನಂದದಿಂದ  "ರ್ರೀ.." ಎಂದು ಪ್ರದೀಪನನ್ನು ಕರೆದಳು. 

"ಇವತ್ತೂ ಹೂವಿಲ್ಲ ತಾನೇ.. ಅದನ್ನೇ ಎಷ್ಟು ಸಲ ಹೇಳ್ತೀಯ" ಎಂದ ಬೇಸರದಿಂದ ಪ್ರದೀಪ. 

" ಅದಲ್ಲ.. ಇಲ್ಲಿ ಬಂದು ನೋಡಿ" ಎಂದು ಪುನಃ ಕರೆದಾಗ ಹೊರಬಂದ ಪ್ರದೀಪ, ಗಿಡದ ತುಂಬಾ ಅರಳಿದ ಹೂವಿನ ಕಡೆಗೆ ಅಚ್ಚರಿಯಿಂದ  ನೋಡಿದ. 

" ಇಷ್ಟು ದಿನಕ್ಕೆ ಇವತ್ತು ನೋಡಿ ಗಿಡಕ್ಕೆ ಜೀವ ಕಳೆ ಬಂದಿರೋದು" ಎಂಬ ಹೆಂಡತಿಯ ಮಾತನ್ನು ಕೇಳಿದವನೇ ಯಾಕೋ ಗಾಭರಿಯಿಂದ  ಶಾಸ್ತ್ರಿಗಳ ಮನೆಗೆ ಓಡಿ ಬಾಗಿಲು ತಟ್ಟಿದ. ಬಾಗಿಲು ತೆರೆಯಲಿಲ್ಲ. ಹತ್ತಿರದ ಬೇರೆ ಮನೆಯವರನ್ನು ಕರೆದು ವಿಷಯ ತಿಳಿಸಿ, ಬಾಗಿಲು ಮುರಿದು ಒಳ ನುಗ್ಗಿದರೆ ಶಾಸ್ತ್ರಿಗಳು ದೇವರ ಕೋಣೆಯಲ್ಲೇ ನಮಸ್ಕಾರ ಭಂಗಿಯಲ್ಲಿ ಪ್ರಾಣ ಬಿಟ್ಟಿದ್ದರು. ದೇವರ ಸುತ್ತ ಬಾಡಿದ ಮಂದಾರ ಹೂಗಳು ತುಂಬಿದ್ದವು. 

" ಪುಣ್ಯಾತ್ಮ ಒಳ್ಳೆ ಸಾವು" ಎಂದು ಮಂದಿ ಆಡಿಕೊಂಡರೆ ಸುಮಾ ಮಾತ್ರ ಹೂ ತುಂಬಿ ನಳನಳಿಸುತ್ತಿದ್ದ ಮಂದಾರ ಗಿಡದ ಕಡೆಗೆ ಹನಿ ತುಂಬಿದ ಕಣ್ಣುಗಳಿಂದ ನೋಡುತ್ತಾ ಕುಳಿತಿದ್ದಳು. 

Saturday, September 22, 2012

ಗೋವಿಂದಾಯ ನಮಃ








ಮಧ್ಯಾಹ್ನ ಊಟ ಮಾಡಿ, ಚಿಲ್ಲರೆ ಕೆಲಸಗಳನ್ನು ಮುಗಿಸಿ ಹೊರಬಂದು ಪೇಪರ್ ಹರಡಿಕೊಂಡು ಒಂದಾದ್ರು ಒಳ್ಳೆ ಸುದ್ದಿ ಇದೆಯಾ ಅಂತ ಹುಡುಕುತ್ತಾ ಕುಳಿತಿದ್ದೆ. ತೋಟದ ಕಡೆಂದ 'ಕಿರ್ರೀಮ್..' ಎಂಬ ಶಬ್ಧ ಕೇಳಿಸತೊಡಗಿತು. ಯಾವುದೋ ಹಕ್ಕಿ ಇರಬಹುದೆಂದು ಸುಮ್ಮನಾದರೆ, ಆ ಸ್ವರ ದೀರ್ಘವಾಗಿ ಆರ್ತನಾದದಂತೆ ಜೋರಾಗತೊಡಗಿತು. ಹಗಲು ಹೊತ್ತಾದ ಕಾರಣ ಭೂತ ಚೇಷ್ಟೆ ಇರಲಾರದು ಎಂದು ಧೈರ್ಯ ಮಾಡಿಕೊಂಡು, ಧ್ವನಿ ಮೂಲ ಹುಡುಕುತ್ತಾ ಇಣುಕಿದರೆ ಗಾಳಿಗೆ ತಲೆ ತುಂಡಾಗಿ ನೆಟ್ಟಗೆ ನಿಂತಿದ್ದ ಅಡಿಕೆ ಮರವೊಂದು ಮನೆಯ ಕಡೆ ವಾಲುತ್ತಿತ್ತು. ಇದೊಳ್ಳೆ ಗ್ರಹಚಾರ ಬಂತಲ್ಲಪ್ಪಾ ಎಂದುಕೊಂಡು ಎಲ್ಲರನ್ನೂ ಕರೆದು ತೋರಿಸಿದೆ. ನಮ್ಮನ್ನೆಲ್ಲಾ ನೋಡಿ ನಾಚಿಕೆಯಾತೇನೋ .. ಮರ ಇನ್ನೊಂದಿಷ್ಟು ಬಾಗಿ, ಇವತ್ತಿಗೆ ಇಷ್ಟು ಸಾಕು ಎಂಬಂತೆ ತಟಸ್ಥವಾಯಿತು. 

ಈಗ ಪೀಸಾದ ವಾಲುಗೋಪುರದಂತೆ ನಿಂತಿದ್ದ ಮರ ಮನೆಯ ಮಾಡಿನ ಮೇಲೇನಾದರು ಬಿದ್ದರೆ ಹಂಚುಗಳು ಪೀಸು ಪೀಸಾಗುವದರಲ್ಲಿ ಸಂಶಯವೇ ಇರಲಿಲ್ಲ. ಮನೆಯ ಒಳಗೆ ನಿಶ್ಚಿಂತರಾಗಿ ಕುಳಿತುಕೊಳ್ಳಲೂ ಭಯವಾಗಿ ಇನ್ನೇನು ಮಾಡುವುದಪ್ಪಾ ಎಂದು ಎಲ್ಲರೂ ತಲೆಕೆಡಿಸಿಕೊಳ್ಳತೊಡಗಿದೆವು. ಅದನ್ನು ಕಡಿಸಿಬಿಡುವುದು ಬಿಟ್ಟರೆ ಬೇರೆ ಪರಿಹಾರ ಯಾರಿಗೂ ಹೊಳೆಯಲಿಲ್ಲ. ಹಾಗಾಗಿ ಮರ ಕಡಿಯುವುದರಲ್ಲಿ ನಿಸ್ಸೀಮನಾಗಿದ್ದ ನಮ್ಮೂರಿನ ಗೋವಿಂದನ ನಾಮ ಸ್ಮರಣೆ ಮಾಡದೆ ವಿಧಿರಲಿಲ್ಲ. ಹೇಗೋ ಅವನ  ಮೊಬೈಲ್ ನಂಬರನ್ನು ಪತ್ತೆ ಮಾಡಿ ಫೋನಾಯಿಸಿದೆವು. 

ಮೂರ್ನಾಲ್ಕು ಬಾರಿ ಪೂರ್ತಿ ಹೊಡೆದುಕೊಂಡ ಬಳಿಕ ಫೋನ್ ಎತ್ತಿದ ಗೋವಿಂದ , 'ನಾನೀಗ ಒಂದು ಮರದ ತುದಿಯಲ್ಲಿದ್ದೇನೆ, ನಾಳೆ ಬೆಳಿಗ್ಗೆ ನಿಮ್ಮ ಅಂಗಳದಲ್ಲಿ ಪ್ರತ್ಯಕ್ಷನಾಗುತ್ತೇನೆ' ಎಂದು ಅಭಯ ಪ್ರದಾನ ಮಾಡಿದ. ಆದರೆ ರಾತ್ರಿಯೊಂದು ಕಳೆಯಬೇಕಿತ್ತಲ್ಲ. ಅದು ಹೇಗೆ ಎಂಬುದೇ ನಮ್ಮ ಚಿಂತೆ. ಅದನ್ನು ಅವನಿಗೇ ಅರುಹಿದಾಗ, ಮರದ ಬಾಗುವಿಕೆಯ ತೀವ್ರತೆ,ಅದರ ಉದ್ದ, ಅಗಲ ಎಲ್ಲವನ್ನೂ ವಿಚಾರಿಸಿ, ನಾಳೆಯವರೆಗೆ ಏನೂ ತೊಂದರೆಯಾಗದು, ಭಯ ಬೇಡ ಎಂದು ದೂರದಿಂದಲೇ ಭವಿಷ್ಯ ನುಡಿದ. 

ಸರಿ.. 'ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ' ಎಂದು ಎಲ್ಲಾ ಭಾರವನ್ನು ಅವನ ಮೇಲೆ ಹಾಕಿ ರಾತ್ರಿಯನ್ನು ಅರೆ ನಿದ್ರೆ, ಅರೆ ಜಾಗೃತಾವಸ್ಥೆಯಲ್ಲಿ ಕಳೆದೆವು. ನಾವು ನಿದ್ದೆ ಮಾಡದಿದ್ದರೇನಂತೆ.. ಬೆಳಗಾಗುವುದು ನಿಲ್ಲುತ್ತದೆಯೇ..? 

ಗಂಟೆ ಒಂಬತ್ತಾದರೂ ಬೇಗ ಬರುತ್ತೇನೆಂದು ವಚನವಿತ್ತಿದ್ದ ಗೋವಿಂದ  ನಾಪತ್ತೆ. ಒಮ್ಮೆ ವಾಲಿದ ಮರದ ಕಡೆಗೆ, ಇನ್ನೊಮ್ಮೆ ಅಂಗಳದ ಕಡೆಗೆ ನೋಡುತ್ತಾ ಅತ್ತಿಂದಿತ್ತ ಸುಳಿದಾಡತೊಡಗಿದೆವು.  ಆಗೀಗ ಹೊರಗಿನವರೆಗೆ ಕೇಳಿಸದಂತೆ ತಗ್ಗಿದ ಧ್ವನಿಯಲ್ಲಿ ಅವನನ್ನು ಬಯ್ದುಕೊಂಡೆವು. ಗಡಿಯಾರದ ಮುಳ್ಳು ಹತ್ತನ್ನು ಸಮೀಪಿಸುತ್ತಿದ್ದಂತೆ ಸೈಕಲ್ ಬೆಲ್ ಕೇಳಿಸುವುದಕ್ಕೂ ಮತ್ತು ನನ್ನ ಅಣ್ಣನ ಮಗಳು 'ಮರ ಕಡಿಯುವವರು ಬಂದ್ರೂ' ಅಂತ ಕಿರುಚಿಕೊಂಡು ಒಳ ಬರುವುದಕ್ಕೂ ಸರಿ ಹೋಯಿತು. ಅರೆ ನಂಬಿಕೆಯಲ್ಲಿ ಹೊರಗಿಣುಕಿದರೆ, ಒಂದು ಕೈಯ್ಯಲ್ಲಿ ಸೈಕಲ್ಲನ್ನು ಸಂಭಾಳಿಸಿಕೊಂಡು, ಇನ್ನೊಂದು ಕೈಯ್ಯಲ್ಲಿ ಕೊಡಲಿಯನ್ನು ಹೆಗಲಿಗೇರಿಸಿ ಆಧುನಿಕ ಪರಶುರಾಮನಂತೆ ನಿಂತಿದ್ದ ಗೋವಿಂದ  ಕಾಣಿಸಿದ. 
ಅಸಹನೆ ತುಂಬಿ ತುಳುಕುತ್ತಿದ್ದ ನಮ್ಮ ಮುಖಗಳನ್ನು ನೋಡಿ ಹೆಚ್ಚು ಮಾತು ಬೆಳೆಸದೇ ಬಾಗಿ ನಿಂತಿದ್ದ ಮರವನ್ನೊಮ್ಮೆ ಬಗ್ಗಿ ತಲೆಯೆತ್ತಿ ನೋಡಿ 'ಹೌದಾ.. ಇದು ನಿನ್ನೆ ರಾತ್ರಿ ಬೀಳದೇ ಉಳಿದದ್ದು ನಿಮ್ಮ ಪುಣ್ಯ ಮಾರಾಯ್ರೆ.. ನೀವು ಫೋನಲ್ಲಿ ಹೇಳಿದಾಗ ಇಷ್ಟು ಬಗ್ಗಿದೆ ಅಂತ ಅಂದಾಜಿರಲಿಲ್ಲ' ಎಂದು ನಮ್ಮ ಬೆನ್ನು ಹುರಿಯಲ್ಲಿ ನಡುಕವೆಬ್ಬಿಸಿದ. 'ಆದ್ರೆ ಇನ್ನು ಬಿಡಿ, ನಾನು ಬಂದಾಯ್ತಲ್ಲ.. ಇದೇನು ಮಹಾ..ನನ್ನ ಸರ್ವೀಸಿನಲ್ಲಿ ಇದರ ಅಪ್ಪನಂತಹ ಮರಗಳನ್ನು ಕಡಿದುರುಳಿಸಿದ್ದೇನೆ' ಎಂದು ಎದೆ ತಟ್ಟಿಕೊಂಡು ನಮ್ಮ ಬಣ್ಣವಿಳಿದ ಮೋರೆಗಳನ್ನು ಕೊಂಚ ಗೆಲುವಾಗಿಸಿದ. 

ಮುಂದೇನು ಎಂಬಂತೆ ನಾವು ಕಣ್ಣು ಮಿಟುಕಿಸುತ್ತಿರ ಬೇಕಾದರೆ, "ಹೌದಾ.. ಇಲ್ಲಿ ನೋಡಿ.. ಈಗಿದ್ದ ಹಾಗೆಯೇ ಕಡಿದರೆ ಮರ ಸೀದಾ ಮನೆಯ ಮೆಲೆ ಬೀಳುತ್ತದೆ. ನಿಮ್ಮಲ್ಲಿ ಬಳ್ಳಿ ಏನಾದ್ರು ಇದೆಯಾ.." ಎಂದು ನಮ್ಮಲ್ಲಿಲ್ಲದ  ಹಗ್ಗಕ್ಕೆ ಅವನ ಡಿಮ್ಯಾಂಡ್..
ಅದನ್ನು ಕೇಳಿದ ನನ್ನ ಅಣ್ಣನ ನಾಲ್ಕು ವರ್ಷದ ಮಗಳು ಪುಟ್ಟಿ ಕೂಡಲೇ ಜಿಗಿಯುತ್ತಾ ಮನೆಯೊಳಗೆ ಓಡಿದಳು. ಅತ್ತೆಯವರು ಮಲ್ಲಿಗೆ ಮಾಲೆ ಕಟ್ಟಲು ಸಂಗ್ರಹಿಸಿ ಇಟ್ಟಿದ್ದ ಬಾಳೆ ನಾರುಗಳಿರುವ ಸ್ಥಳ ಅವಳಿಗೆ ಮೊದಲೇ ಗೊತ್ತಿತ್ತೋ ಏನೋ! ಓಡಿ ಬಂದು ಅದನ್ನು  ಗೋವಿಂದನ ಕೈಯಲ್ಲಿಟ್ಟಳು. ಅವನು ಅದನ್ನು ನೋಡಿ, ಯಕ್ಷಗಾನದ ರಕ್ಕಸನಂತೆ ಅಲೆ ಅಲೆಯಾಗಿ ನಕ್ಕು 'ಎಂತ ಪುಟುಗೋಸಿ ಬಳ್ಳಿ ಪುಟ್ಟಮ್ಮಾ ಇದು! ಇದ್ರಲ್ಲಿ ಬೆಕ್ಕಿನ ಮರಿಯನ್ನು ಕಟ್ಲಿಕ್ಕೂ ಆಗ್ಲೀಕಿಲ್ಲ' ಅನ್ನುತ್ತಾ ಪಕ್ಕಕ್ಕೆಸೆದ. ಇವನ ನಗುವಿನ ಅಬ್ಬರಕ್ಕೆ ಮರ ಇನ್ನಷ್ಟು ವಾಲಿತೋ ಎಂದು ಅನುಮಾನದಿಂದ ನಾನೊಮ್ಮೆ ಮರದೆಡೆಗೆ ನೋಡಿದೆ.

ಸರಿಯಾದ ಸಲಕರಣೆಗಳಿಲ್ಲದೇ ಕೆಲಸ ಸಾಗುವುದು ಹೇಗೆ! ಬೇರೆ ಮಾರ್ಗವಿಲ್ಲದೇ ನನ್ನ ಮಗ ಬೈಕ್ ಸ್ಟಾರ್ಟ್ ಮಾಡಿ, ಬೇಡ ಎಂದರೂ ಕೇಳದೇ, ನಾನೂ ಬರುತ್ತೇನೆಂದು ಹಠ ಮಾಡುತ್ತಿದ್ದ ಪುಟ್ಟಿಯನ್ನೇರಿಸಿಕೊಂಡು ಹಗ್ಗ ತರಲು ಪೇಟೆಗೆ ಹೋದ. ಅವರು ಬರುವವರೆಗೆ ವಿರಾಮವೆಂಬಂತೆ ಗೋವಿಂದ  ಅಲ್ಲೇ ಕಲ್ಲಿನ ಮೇಲೆ ಅಂಡೂರಿದ. ಅಲ್ಲಿಗೇ ಅವನಿಗೆ ಕಾಪಿ ತಿಂಡಿಯ ವ್ಯವಸ್ಥೆಯೂ ಆಯಿತು. ಪೇಟೆಯಿಂದ  ಹಗ್ಗ ಬರುವುದರ ಒಳಗೆ ಸಾವಕಾಶವಾಗಿ ತಿಂಡಿ ತಿಂದು ಮುಗಿಸಿ, ಸೊಂಟದಿಂದ ಎಲೆ ಅಡಿಕೆ ಸಂಚಿಯನ್ನು ತೆಗೆದು ನಿರ್ವಿಕಾರ ಚಿತ್ತದಿಂದ ಒಮ್ಮೆ ಒಳಗೆ ಕಣ್ಣಾಡಿಸಿ ಮತ್ತೆ ಸೊಂಟದಲ್ಲಿಟ್ಟುಕೊಂಡ. ಅರೆ! ಎಲೆ ಅಡಿಕೆ ಬೇಡವೆ! ದೇವರ ತಲೆಯಲ್ಲಿ ಹೂವು ತಪ್ಪಿದರೂ ಇವನ ಬಾಯಲ್ಲಿ ಎಲೆ ತಪ್ಪಿದ್ದಲ್ಲ. ಇಂದೇನು ವಿಚಿತ್ರ ಅಂತ ನಾವಂದುಕೊಳ್ಳುತ್ತಿರುವಾಗ ಎದ್ದು ವಾಲಿದ ಮರದ ಕಡೆಗೆ ಕತ್ತಿ ಹಿಡಿದು  ರಭಸದಿಂದ ನಡೆದೇ ಬಿಟ್ಟ. 

ಪರಿಸ್ಥಿತಿಯ ಗಂಭೀರತೆ ಅವನಿಗೂ ಅರಿವಾಗಿರಬೇಕು. ಎಲೆ ಅಡಿಕೆ ತಿನ್ನುತ್ತಾ ಸಮಯ ಪೋಲು ಮಾಡಬಾರದು ಅಂತ ಅಂದು ಕೊಂಡಿರ ಬೇಕು. ಸರಿ.. ಅವನು ಮರ ಕಡಿಯುವ ಶೈಲಿಯನ್ನು ನೋಡುವ ಕುತೂಹಲದಿಂದ ನಾವೆಲ್ಲಾ ಅವನ ಬೆನ್ನಿನ ಹಿಂದೆಯೇ ನಡೆದೆವು. ಅವನು ಸಾವಕಾಶವಾಗಿ ಕೆಳಗೆ ಬಿದ್ದಿದ್ದ  ಅಡಿಕೆಯೊಂದನ್ನು ಕೈಯಲ್ಲೆತ್ತಿಕೊಂಡು ಕತ್ತಿಯಲ್ಲಿ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿ ಒಂದೆರಡು ಹೋಳುಗಳನ್ನು ಬಾಯಿಗೆಸೆದುಕೊಂಡು ಉಳಿದದ್ದನ್ನು ಸಂಚಿಗೆ ಸೇರಿಸಿದ. ಅದರ ಅಳತೆಗೆ ತಕ್ಕಷ್ಟು ವೀಳ್ಯದ ಎಲೆ, ಸುಣ್ಣ, ಹೊಗೆಸೊಪ್ಪುಗಳೂ ಬಾಯಿಗೆ ಸೇರಿದವು. 

ಈಗ ಇವನ ಧಾವಂತದ ನಡಿಗೆಯ ಕಾರಣ ಗೊತ್ತಾಗಿ ತಲೆ ಚಚ್ಚಿಕೊಂಡೆವು.ಆದರೀಗ ಹಸಿ ಅಡಕೆಯೊಂದಿಗೆ ಹೊಗೆಸೊಪ್ಪು ಸೇರಿ ಚುರುಕು ಮುಟ್ಟಿಸಿತೋ ಏನೋ.., ತಾಂಬೂಲದ ರಸ ತುಂಬಿದ್ದ ಬಾಯನ್ನು ಸೊಟ್ಟಗೆ ಮಾಡಿಕೊಂಡು ವಿಚಿತ್ರ ಸ್ವರ ಹೊರಡಿಸುತ್ತಾ ಮರವನ್ನು ಯಾವ ಮಟ್ಟದಿಂದ ಕಡಿದರೆ ಯಾವ ಕಡೆ ಉರುಳುತ್ತದೆ ಇತ್ಯಾದಿ ವಿಷಯಗಳನ್ನು ವಿವರಿಸತೊಡಗಿದ. ಅಲ್ಲಿಂದ ಮುಂದುವರಿದ ಅವನ ಮಾತು ಕಡಿಯಲ್ಪಡುವ ಮರ ಮೊದಲು ಎಷ್ಟು ಫಸಲು ಕೊಡುತ್ತಿತ್ತು ಎಂದು ಅರಿಯುವ ದಿಕ್ಕಿನೆಡೆಗೆ ಹರಿದಿತ್ತು. 

ಒಮ್ಮೆ ಯಾವುದೇ ಅಪಾಯವಿಲ್ಲದೇ ಮರ ನೆಲಕ್ಕುರುಳಿದರೆ ಸಾಕು ಎಂದು ಕಾಯುತ್ತಿದ್ದ ನಮಗೆ ಇವನ ಮಾತುಗಳಿಂದ ಪಿತ್ಥ ನೆತ್ತಿಗೇರ ತೊಡಗಿತು. 'ಬಂದ ಕೆಲಸ ಮೊದಲು ಸುರು ಮಾಡು ಮಾರಾಯ' ಅಂತ ಅವನಿಗೆ ತುಸು ಖಾರವಾಗಿ ಸೂಚಿಸಿದೆವು. ಗೋವಿಂದ  ಬಾಯಲ್ಲಿದ್ದ ತಾಂಬೂಲವನ್ನು ಪಿಚಕ್ಕನೆ ಪಕ್ಕಕ್ಕುಗಿದು, 'ಕಣ್ಣು ಮುಚ್ಚಿ ಬಿಡುವುದರ ಒಳಗೆ ಕಡಿದುರುಳಿಸಿ ಬಿಡ್ತೇನೆ ನೋಡಿ' ಅನ್ನುತ್ತಾ ಬಾಗಿದ ಮರಕ್ಕೆ ಹಗ್ಗದ ಕುಣಿಕೆ ಮಾಡಿ ಕಟ್ಟಲೋಸುಗ ಅದರ ಬಳಿಯೇ ಇದ್ದ ಇನ್ನೊಂದು ಮರವನ್ನು ಸರ ಸರನೆ ಏರಿದ. ಅದರ ಗೆಲ್ಲುಗಳನ್ನಷ್ಟು ಕಡಿದ.  

'ಹ್ವಾಯ್..ಇದ್ಯಾವಾಗ ಇಷ್ಟು ಬಗ್ಗಿದ್ದು ಮಾರಾಯ್ರೇ..' ಎಂದು ನಮ್ಮ ಬೆನ್ನ ಹಿಂದಿನಿಂದ ಕೇಳಿ ಬಂದ ಉದ್ಗಾರ ಪಕ್ಕದ ಮನೆಯ ಕಿಟ್ಟು ಮಾವನದ್ದೇ ಎಂದು ತಿಳಿಯಲು ನಮಗೆ ತಿರುಗಿ ನೋಡ ಬೇಕಾಗಿರಲಿಲ್ಲ. ಅವರನ್ನು ನೋಡಿದ ಗೋವಿಂದ , ಮರದ ತುದಿಯಿಂದಲೇ  'ನಮಸ್ಕಾರ ಧನೀ.. ನಾನು ಇಲ್ಲಿದ್ದೇನೆ' ಎಂದ. 'ಇಂತದ್ದಕ್ಕೆಲ್ಲಾ ನೀನೇ ಆಗ ಬೇಗಷ್ಟೆ  ಗೋವಿಂದಾ.. ..ಅಲ್ಲ ನೀನು ಅಷ್ಟು ಬೇಗ ಮರ ಹತ್ತಿಯೂ ಆಯ್ತಾ ಮಾರಾಯ. ಆ ಮರ ಹತ್ತುವ ಬದಲು ಇದಾ ಈ ಕಡೆ ಇರೋ ಮರ ಹತ್ತಿದ್ರೆ ಕೆಲಸ ಸುಲಭ ಆಗ್ತಿತ್ತಲ್ವೋ ..' ಅನ್ನುತ್ತಾ ಕಿಟ್ಟು ಮಾವ ಸನ್ನಿವೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳತೊಡಗಿದರು. 

ಗೋವಿಂದ  ಏರಿದ ವೇಗದಲ್ಲೇ ಕೆಳಗಿಳಿದ. ತಮ್ಮ ಮಾತಿಗೆ ಬೆಲೆ ಕೊಟ್ಟು ಇಳಿದ ಅಂದುಕೊಂಡು ಕಿಟ್ಟುಮಾವ ನಮ್ಮೆಡೆಗೆ ಹೆಮ್ಮೆಯ ದೃಷ್ಟಿ  ಬೀರಿದರೆ, ಗೋವಿಂದ  ಭೂತ ಹಿಡಿದವರಂತೆ ಮೈ ಕೈ ಕೊಡವಿ  ಕುಣಿಯತೊಡಗಿದ. ಮರ ಹತ್ತುವಾಗ ಸರಿ ಇದ್ದ.. ಈಗೇನಾಯ್ತಪ್ಪಾ ಇವನಿಗೆ ಎಂದು ನಾವು ಗಾಭರಿಯಾದೆವು. ಮರದ ತುದಿಯಲ್ಲಿ ಬೀಡು ಬಿಟ್ಟಿದ್ದ ಕೆಂಜಿರುವೆಗಳು ಅವನ ಮೇಲೆ ದಾಳಿ ಮಾಡಿದ್ದವು. ಯಾರಿದ್ದಾರೆ ಯಾರಿಲ್ಲ ಎಂಬುದನ್ನು ಲೆಕ್ಕಿಸದೇ  ಬಾಗೆ ಬಂದ ಹಾಗೆ ಇರುವೆಗಳ ಸಂತತಿಯನ್ನು ವಾಚಾಮಗೋಚರವಾಗಿ ನಿಂದಿಸುತ್ತಾ ನನ್ನಡೆಗೆ ನೋಡಿ  'ಅಕ್ಕಾ ಆ ಇರುವೆ ಪೌಡರ್ ಇದ್ರೆ ಸ್ವಲ್ಪ ಕೊಡಿ.. ಬೇಗ' ಎಂದ.
  ಅವನಂದದ್ದನ್ನು ಕೇಳಿದ ನನ್ನಣ್ಣನ ಮಗಳು 'ಇರುವೆನೂ  ಪೌಡರ್ ಹಾಕುತ್ತಾ ಅತ್ತೇ..? ಕ್ರೀಮ್ ಕೂಡಾ ಇದ್ಯಾ? ಎಲ್ಲಿದೆ ತೋರ್ಸಿ..' ಅಂತ ನನ್ನ ಹಿಂದೆಯೇ ಬಂದಳು. ಮುಚ್ಚಳ ತೆರೆಯುವ ಮೊದಲೇ  ಘಾಟು ಹೊಡೆಯುವ ಕೀಟನಾಶಕ ಪೌಡರನ್ನು ನೋಡಿ 'ಥೂ' ಎಂದು ಮುಖ ಸಿಂಡರಿಕೊಂಡಳು. ಅವಳನ್ನು ನೋಡಿ ಅನಾಯಾಸವಾಗಿ ಬಂದ ನಗುವನ್ನು ಹತ್ತಿಕ್ಕಿಕೊಳ್ಳುತ್ತಾ ಗೋವಿಂದನಿಗೆ  ಪೌಡರ್ ಡಬ್ಬಿಯನ್ನು ಹಸ್ತಾಂತರಿಸಿದೆ.

ಪುನಃ ಮರದ ಮೇಲೇರಿ ಪೌಡರ್ ಕೊಡವಿ  ಬೇಗನೆ ಇಳಿದು ಬಂದ. ತಾನು ಸೂಚಿಸಿದಂತೆ ಮರ ಬದಲಾಯಿಸದೇ ಇದ್ದದ್ದಕ್ಕೆ ಕೊಂಚ ನಿರಾಶರಾದ ಕಿಟ್ಟುಮಾವ, ಈ ಕಡೆ ಇರೋ ಮರಕ್ಕೂ ಸ್ವಲ್ಪ ಹಾಕು..  ಎಲ್ಲಿಯಾದ್ರು ಇದನ್ನು ಹತ್ತ ಬೇಕಾಗಿ ಬಂದರೇನು ಮಾಡುವುದು ಎಂದರು. ಇವರೇನು ಧನಿಯೋ ಅಲ್ಲ ಶನಿಯೋ ಅನ್ನುವಂತೆ ಮುಖ ಮಾಡಿಕೊಂಡು ಗೋವಿಂದ , ಕಿಟ್ಟು ಮಾವ ತೋರಿಸಿದ  ಮರ ಹತ್ತಿ ಅಲ್ಲಿಯೂ ಪೌಡರ್ ಉದುರಿಸಿದ. 

ಬಾಗಿದ ಮರ ಎಲ್ಲಿ ಮನೆಯ ಮೇಲೆ ಬಿದ್ದು ಹಂಚುಗಳು ಪುಡಿ ಪುಡಿಯಾದೀತೋ ಎಂಬ ಭಯದಲ್ಲಿ ಗೋವಿಂದನನ್ನು  ಕರೆಸಿಕೊಂಡು ಅವನ ವಾಗ್ ಪ್ರವಾಹದಲ್ಲಿ ನಾವು ಸಿಲುಕಿಕೊಂಡಾಗಿತ್ತು. ಹೇಗೋ ಮಾಡಿ ಅವನನ್ನು ಕೆಲಸಕ್ಕೆ ಹಚ್ಚಿದೆವು ಅಂದುಕೊಳ್ಳುತ್ತಿರುವಾಗ ಈ ಕಿಟ್ಟು ಮಾವ ಬಂದು ಸೇರಿಕೊಂಡು ಮಂತ್ರಕ್ಕಿಂತ ಉಗುಳೇ ಹೆಚ್ಚು ಅನ್ನುವ ವಾತಾವರಣ  ನಿರ್ಮಾಣವಾಯಿತು. ಇನ್ನು ಭೋಜನ ವಿರಾಮದ ನೆಪದಲ್ಲಿ ಕೆಲಸ ವಿಳಂಬವಾಗುವ ಮುನ್ಸೂಚನೆ ಅರಿತು ನಮ್ಮ ಪತಿರಾಯರು, " ಗೋವಿಂದ.. ನಮಗೆ ಇವತ್ತು ಏಕಾದಶಿ, ಊಟಕ್ಕೆ ನೀನು ಹೋಟೆಲ್ಲಿಗೆ ಹೋಗಬೇಕಷ್ಟೆ. ನಿನಗೆ ಹಸಿವಾಗ್ತಾ ಇಲ್ವಾ..ಬೇಗ ಒಂದು ಸರ್ತಿ ಕಡಿ ಮಾರಾಯ. ತಡ ಆದ್ರೆ ನೀನು ಊಟದ ಬದಲು ಸಂಜೆಯ ತಿಂಡಿ ತಿನ್ನಬೇಕಷ್ಟೆ..' ಅಂದರು.
ಈಗ ಗೋವಿಂದ ಗಡಬಡಿಸಿ ಕೆಲಸಕ್ಕೆ ಅನುವಾದ. ಆದರೂ ಕಿಟ್ಟು ಮಾವ ತಮ್ಮ ಅನುಭವದ ಪ್ರಕಾರ ಯಾವ ಕಡೆಯಿಂದ  ಮರಕ್ಕೆ ಕೊಡಲಿ ಪೆಟ್ಟು ಬಿದ್ದರೆ ಒಳ್ಳೆಯದು, ಯಾವ ಕಡೆಗೆ ಹಗ್ಗ ಜಗ್ಗಿದರೆ ಕ್ಷೇಮ ಎಂಬ ಬಗ್ಗೆ ಮಾತಾಡತೊಡಗಿದರು. ಕಿಟ್ಟು ಮಾವ ತಮ್ಮ ಬತ್ತಳಿಕೆಂದ ಬಿಡುತ್ತಿದ್ದ ಇಂತಹ ಬಾಣಗಳನ್ನು , ಗೋವಿಂದ  ಸ್ವಯಂ ನಿಪುಣತೆಯಿಂದ  ತಾನು ಕಡಿದುರುಳಿಸಿದ ಕಷ್ಟಾತಿಕಷ್ಟ ಮರಗಳ ಅಂಕೆ ಸಂಖ್ಯೆಗಳನ್ನು, ವಿಳಾಸ ಸಹಿತ  ಒದಗಿಸುತ್ತಾ ಎದುರಿಸತೊಡಗಿದ. 

ಏತನ್ಮಧ್ಯೆ ತಾನು ನಿಗದಿ ಪಡಿಸಿದ ಮರವನ್ನೇ  ಏರಿ, ಕಡಿಯಬೇಕಾಗಿದ್ದ ಮರಕ್ಕೆ ಚತುರತೆಯಿಂದ  ಹಗ್ಗವನ್ನೆಸೆದು ಕುಣಿಕೆ ಹಾಕಿ ಇಳಿದ. ಹಗ್ಗ  ಹಿಡಿದುಕೊಳ್ಳುವವರು ಯಾವ ದಿಕ್ಕಿನಲ್ಲಿ  ನಿಂತು ಜಗ್ಗ ಬೇಕು ಎಂಬುದರ ಬಗ್ಗೆ ವಿವರಿಸಿದ. ಆದ್ರೆ ಕಿಟ್ಟು ಮಾವ ಬಿಡಬೇಕಲ್ಲ! ಅದು ಸಮರ್ಪಕವಲ್ಲವೆಂದು ಅವರ ವಾದ. ನಮಗಂತೂ ಇವರ ವಾದ ವಿವಾದ ಕೇಳಿ ತಲೆ ಚಿಟ್ಟು ಹಿಡಿದು ಹೋಗಿತ್ತು. 'ಎಲ್ಲಿಯಾದ್ರೂ ಸರಿ ಒಮ್ಮೆ ಕಡಿ ಮಾರಾಯಾ' ಎಂಬ ಹುಕುಂ ನಮ್ಮ ಮಾವನವರಿಂದ ಹೊರಟಿತು. 

ಅಷ್ಟರಲ್ಲಿ ಕಿಟ್ಟುಮಾವ ತಾವು ಹೇಳಿದ ದಿಕ್ಕಿಗೆ ಹಗ್ಗ ಹಿಡಿಯುವವರನ್ನು ನಿಲ್ಲಿಸಿಯಾಗಿತ್ತು. ಗೋವಿಂದ  ಸ್ವಲ್ಪ ಕೋಪದಲ್ಲೇ ಮರದ ಮೇಲೆ ಕೊಡಲಿ ಬೀಸಿದ. ಒಂದೆರಡು ಪೆಟ್ಟು ಬಿದ್ದಿತ್ತಷ್ಟೆ. ಒಳಗಿನಿಂದ ಕುಂಬಾಗಿತ್ತೇನೋ ಮರ..ಕೊಂಚ ಆಲುಗಾಡಿದ ಮರ ತುದಿಯಲ್ಲಿ ಹಗ್ಗ ಕಟ್ಟಿದ ಜಾಗದಿಂದ ಲಟಕ್ಕನೆ ತುಂಡಾಗಿ, ಅಲ್ಲೇ ಮರ ಕಡಿಯುವ ಉಸ್ತುವಾರಿ ಹೊತ್ತಿದ್ದ ಕಿಟ್ಟುಮಾವನ ಕಡೆಗೆ ನೇರವಾಗಿ ಬೀಳಲು ಹೊರಟಿತು. ಹೆದರಿದ ಕಿಟ್ಟುಮಾವ ಅದರಿಂದ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಹಾರಿ ಅಲ್ಲಿದ್ದ ತೆಂಗಿನ ಹೊಂಡಕ್ಕೆ ಬಿದ್ದರು. ಅಷ್ಟರಲ್ಲಿ ಉಳಿದರ್ಧ ಮರ ಕೊಡಲಿ ಪೆಟ್ಟು ಬಿದ್ದಲ್ಲಿಂದ ತುಂಡಾಗಿ ಮನೆಯ ಮಾಡಿನ ಮೂಲೆಯಲ್ಲಿದ್ದ  ಕೆಲವು ಹಂಚುಗಳನ್ನು ಒರೆಸಿ ಪುಡಿ ಮಾಡಿ ನೆಲಕ್ಕೊರಗಿತು. ಈ ಶಬ್ಧಕ್ಕೆ, ತನ್ನ ನಿದ್ದೆ ಹಾಳಾದ ಬೇಸರದಲ್ಲಿ ನಮ್ಮ ನಾಯಿ 'ಟೈಗರ್' ಇಡೀ ಪ್ರಪಂಚಕ್ಕೆ ಕೇಳುವ ಹಾಗೆ ಬೊಗಳತೊಡಗಿತು.
ಇದಾಗಿ ಈಗ ಒಂದೆರಡು ದಿವಸಗಳಾಗಿದೆ. ಕಿಟ್ಟು ಮಾವನಿಗೆ ಕಾಲು ನೋವು ಸ್ವಲ್ಪ ಕಡಿಮೆ ಯಾಗಿ ಊರುಗೋಲು ಹಿಡಿದುಕೊಂಡು ನಡೆಯತೊಡಗಿದ್ದಾರೆ. ಆದರೂ ಗೋವಿಂದನ ಮೇಲಿನ ಕೋಪವಿನ್ನೂ ಆರಿಲ್ಲ. ಮನೆಗೆ ಬಂದು ಹೋಗುವವರೊಂದಿಗೆಲ್ಲಾ ಹೇಳಿಕೊಂಡು  ಗೋವಿಂದನಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದಾರೆ. ಇತ್ತ  ಗೋವಿಂದ , ಕಿಟ್ಟು ಮಾವನ ಮನಸ್ಸಿನಲ್ಲಿ ಮರ ಮಾಡಿನ ಮೇಲೆಯೇ ಬೀಳಬೇಕೆಂದಿತ್ತು, ಇದರಲ್ಲಿ ತನ್ನ ತಪ್ಪೇನೂ ಇಲ್ಲ ಎಂದು ಪ್ರಚಾರ ನಡೆಸುತ್ತಿದ್ದಾನೆ. 

ನಾವು ಇವರಿಬ್ಬರ ಉಸಾಬರಿಗೆ ಹೋಗದೇ ಮನೆಯ  ಮಾಡು ರಿಪೇರಿ ಮಾಡುವವನಿಗೆ ಫೋನಿನ ಮೇಲೆ ಫೋನ್ ಮಾಡಿಕೊಂಡು ಕಾಲ ಕಳೆಯುತ್ತಿದ್ದೇವೆ. 


Tuesday, September 11, 2012

ಬೆಳಕಿಂಡಿ..







ಅಬ್ಬಾ ಎಷ್ಟು ತುಂಟ ಮಕ್ಕಳು.. ಹೇಳಿದ್ದೇನೂ ಕೇಳೋದಿಲ್ಲ ..  ವಿಸ್ತಾರವಾಗಿರುವ ಮೈದಾನವಿಡೀ ತಮ್ಮದೇ ಎಂಬಂತೆ ಅತ್ತಿಂದಿತ್ತ ಇತ್ತಿಂದತ್ತ ಕುಣಿಯುತ್ತಿದ್ದಾರೆ.

 ಅರೇ.. ಅದಾರು ಸೈಕಲ್ ಬಿಡುತ್ತಿರುವ ಪುಟ್ಟ ಹುಡುಗಿ..ಜೊತೆಗೆ ಇನ್ನೂ ಒಂದನ್ನು ಕೂರಿಸಿಕೊಂಡು ..

 'ಹೇ.. ಜಾಗ್ರತೆ.. ಮೆಲ್ಲ ತುಳಿ.. ಬಿದ್ದುಗಿದ್ದು ಬಿಟ್ಟೀರಾ..  ..' 
ಛೇ.. .. ಆ ಪಾಪದ ನಾಯನ್ನು ಅದೆಷ್ಟು ಗೋಳಾಡಿಸುತ್ತಾರೆ. ನಿನ್ನೆ ಮನೆ ಅಂಗಳಕ್ಕೂ ಬಂದಿತ್ತು. ಬಾಯಿಗೆ ಸೇರದ ಚಪಾತಿಯೊಂದನ್ನು ಅದರತ್ತ ಎಸೆದಿದ್ದೆ. ಬಾಲ ಅಲ್ಲಾಡಿಸುತ್ತಾ ಕಚ್ಚಿಕೊಂಡು ಓಡಿತ್ತು. ಈಗ ಈ ಮಕ್ಕಳು ಅದಕ್ಕೆ ಕಲ್ಲೆತ್ತಿ ಹೊಡೆಯುತ್ತಿದ್ದಾರೆ. 

'ಕೆಟ್ಟ ಮಕ್ಕಳೇ, ಇಲ್ಲಿ ಕೇಳಿ.. ಪ್ರಾಣಿ  ಹಿಂಸೆ  ಮಹಾಪಾಪ.. ಸುಮ್ಮನಿರಿ. ನರಕದಲ್ಲಿ ನಿಮಗೂ ಇದೇ ರೀತಿಯ ಶಿಕ್ಷೆ ಕೊಡುತ್ತಾನೆ ಯಮ..'
ನಾಯೆತ್ತಲೋ ಓಡಿತು. ಮಕ್ಕಳು ಅದರ ಗೊಡವೆ ಬಿಟ್ಟು ಕ್ರಿಕೆಟ್ ಆಡತೊಡಗಿದರು. ಒಬ್ಬ ಎಸೆದ ಚೆಂಡಂತೂ ನನ್ನ ಕಡೆಗೇ ಬಂತು.. ತಲೆ ಬಗ್ಗಿಸಿದೆ.. 
ಹೋ .. ಅದೆಲ್ಲಿತ್ತು ಪಾಪದ  ಹಸು.. ಮೈದಾನದಲ್ಲಿ ಅದಕ್ಕೇನಿದೆಯಪ್ಪಾ ತಿನ್ನಲು.. ಮಕ್ಕಳು ತಿಂದೆಸೆದು ಬಿಟ್ಟ ಪ್ಲಾಸ್ಟಿಕ್ ಕವರ್ ಗಳೇ.. ಛೇ ಪಾಪ .. ಮಕ್ಕಳಿಗೆ ಹೇಳಬೇಕು ಅಲ್ಲೆಲ್ಲಾ ಎಸೆಯಬೇಡಿ ಎಂದು..


ಗುಲ್ಮೊಹರ್ ಮರದಡಿ ಬೀಸುವ ಗಾಳಿಗೆ ತಟಪತನೆ ಉದುರುತ್ತಿರುವ ಹೂವಿನ ಪಕಳೆಗಳು.. ಅದನ್ನು ಉಗುರುಗಳಿಗೆ ಹಾಕಿಕೊಂಡು 

ರಾಕ್ಷಸರ ಆಟ ಆಡಬಹುದು.. ಆಹಾ.. ಖುಷಿಯಾದೀತು ಮಕ್ಕಳಿಗೆ..


ಥೂ.. ಹಾಳು ಸೊಳ್ಳೆಗಳು.. ಎಷ್ಟು ಸಲ ಹೇಳಬೇಕು ನಿಮಗೆ ಕಿಟಕಿ ಬಾಗಿಲು ಸಂಜೆ ಹೊತ್ತು ತೆರೆದಿರಿಸಬೇಡಿ ಎಂದು.. 
ದಡಾಲನೆ ಮುಚ್ಚಿದ ಬಾಗಿಲು..
ಮತ್ತೇನಿಲ್ಲ .. ಬರಿ ಕತ್ತಲೆ ಮಾತ್ರ..  


Wednesday, August 29, 2012

ಒಗ್ಗರಣೆ






"ಮಾತು ಮಾತಿಗೆ ಸುಮ್ಮನೆ ಒಗ್ಗರಣೆ ಹಾಕ್ಕೊಂಡು ಯಾಕೆ ಬರ್ತೀಯ? ಸ್ವಲ್ಪ ಸುಮ್ನೆ ಕೂತ್ಕೋಬಾರ್ದಾ.." ಅಂತ ಹಿರಿಯರೆಲ್ಲ ನಮ್ಮ ತಲೆ ಹರಟೆ ಮಾತುಗಳಿಗೆ ಗದರುತ್ತಿದ್ದುದು ನಿಮಗೂ ಅನುಭವವೇದ್ಯವೇ ಆಗಿರುತ್ತದೆ. ಆಗೆಲ್ಲ ಈ ಒಗ್ಗರಣೆ ಎಂಬ ಶಬ್ಧವು ಒಂದು ಬೈಗಳೇ ಇರಬಹುದು ಎಂದು ನನ್ನ ತಿಳುವಳಿಕೆಯಾಗಿತ್ತು. 

ಯಾವಾಗ ಅಡುಗೆ ಮನೆಯ ಕೋಣೆಯಲ್ಲಿ ನನ್ನ ಸೀನುಗಳು ಪ್ರತಿಧ್ವನಿಸಲು ತೊಡಗಿದವೋ ಆವಾಗ ತಿಳಿಯಿತು ನೋಡಿ ಇದರ ಮಹತ್ವ. ಚೆನ್ನಾಗಿ ಅಡುಗೆ ಮಾಡಲು ಬಂದರಷ್ಟೆ ಸಾಲದು. ಅದನ್ನು ಅಲಂಕರಿಸುವುದೂ ಕೂಡ ಅಗತ್ಯ.  ಮಾಡಿದ  ಈ ಅಡುಗೆ ಹೈ ಲೈಟ್ ಆಗುವುದು ಒಗ್ಗರಣೆಯ ಬಲದಿಂದಲೇ..!! 

ಕೈಗೆ ಮೈಗೆ ಸಿಡಿಸಿಕೊಳ್ಳದೇ  ಒಗ್ಗರಣೆ ಹಾಕುವುದೆಂದರೆ ಹಗುರದ ವಿಷಯವೇನಲ್ಲ. ಅದಕ್ಕೆಂದೇ ಎಲ್ಲರೂ ಭಾರವಿರುವ ಉದ್ದನೆಯ ಹಿಡಿಯುಳ್ಳ ಕಬ್ಬಿಣದ ಸೌಟೊಂದನ್ನು ಬಳಸುತ್ತಾರೆ. ಅದನ್ನುಒಲೆಯ ಮೇಲಿರಿಸಿ ಸೌಟಿನಲ್ಲಿ ಒಂದಿಷ್ಟುಎಣ್ಣೆಯೋ ತುಪ್ಪವೋ ಸುರಿದು ಬಿಸಿಯಾಗುತ್ತಿದ್ದಂತೆ ಸ್ವಲ್ಪ ಸಾಸಿವೆ ಮತ್ತು ಕೆಂಪು ಮೆಣಸಿನ ಚೂರುಗಳನ್ನು ಹಾಕಿ ಚಟಪಟನೆ ಸಿಡಿಸಿ ಮತ್ತೊಂದಿಷ್ಟು ಇಂಗು, ಕರಿಬೇವಿನ ಎಲೆಗಳನ್ನು  ಹಾಕಿ ಬಾಡಿಸಿ ಮುಚ್ಚಿಟ್ಟ ಅಡುಗೆಯ ಮುಚ್ಚಳವನ್ನು ಸರಿಸಿ ಸಶಬ್ಧವಾಗಿ ಅದರ ಮೇಲೆ ಹರಡಿದರಾಯಿತು. ಕೂಡಲೇ ಇದು ಸೈರನ್ನಿನಂತೆ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಅಡುಗೆಯ ಕೆಲಸ ಮುಗಿಯಿತು ಎಂಬ ಸೂಚನೆ ಕೊಡುತ್ತದೆ. 

'ಆಯ್ತೇನ್ರೀ ಅಡುಗೆ, ಅಹಾ ಏನು ಒಗ್ಗರಣೆ ಪರಿಮಳ ಅಂತೀರಿ, ಇಲ್ಲಿವರೆಗೂ ಬಂತುರೀ' ಅಂತ ಹೇಳೇ ಬಿಡುತ್ತಾರೆ. ಅಲ್ಲಿಯವರೆಗೂ ಜಡಭರತರಂತೆ ಕುಳಿತಿದ್ದ ಮನೆ ಮಂದಿ ಲವಲವಿಕೆಯಿಂದ  ಎದ್ದು ಏನಿವತ್ತು ಊಟಕ್ಕೆ? ಯಾಕೋ ಜೋರು ಹಸಿವಾಗುತ್ತಾ ಇದೆ, ಬೇಗ ಬಡಿಸು ಅನ್ನುತ್ತಾ ಬಂದೇ ಬಿಡ್ತಾರೆ. ಬಿಸಿ ಎಣ್ಣೆಯಲ್ಲಿ ಸಾಸಿವೆ ಸಿಡಿದಾಗ ಬಿಟ್ಟುಕೊಳ್ಳುವ ವಿಶೇಷ ರಸ ವಸ್ತುವಿನ ಸಾಮರ್ಥ್ಯ ಅಂತದ್ದು. ಇನ್ನದಕ್ಕೆ ಇಂಗು ಮೆಣಸುಗಳ ಸಾಥ್ ಸಿಕ್ಕರಂತೂ ಕೇಳಲೇ ಬೇಡಿ. 

ಒಹೋ ಒಗ್ಗರಣೆಗೊಂದು ಒಗ್ಗರಣೆ! ಏನು ಮಹಾ..ಎಲ್ಲರೂ ದಿನಾ ಹಾಕ್ತಾರೆ ಅಂತ ಅಂದುಕೋಬೇಡಿ. ಸಭೆ ಸಮಾರಂಭಗಳ ದೊಡ್ಡ ಅಡುಗೆಯಲ್ಲಿ ಇದರ ಮಹತ್ವ ನೋಡಿ ತಿಳಿದುಕೊಳ್ಳಬಹುದು. ಅಲ್ಲಿ ಹತ್ತಾರು ಮಂದಿ ಸೇರಿಕೊಂಡು ಅಡುಗೆ ಮಾಡುತ್ತಿದ್ದರೂ ಒಗ್ಗರಣೆ ಹಾಕುವುದು ಮೇಲಡಿಗೆಯವರೇ ಅಂದರೆ  ಮುಖ್ಯ ಅಡುಗೆ ಭಟ್ರು. ಅವರ ಕೈಗುಣ ಪ್ರಕಟವಾಗುವುದೇ ಒಗ್ಗರಣೆಯಲ್ಲಿ.ಘಮ್ಮೆನ್ನುವ ಒಗ್ಗರಣೆಯನ್ನು ಹಾಕಿದ ಕೂಡಲೇ ಮುಚ್ಚಿಟ್ಟು ಬಿಡುತ್ತಾರೆ. ಅವುಗಳ ಬಂಧನ ವಿಮೋಚನೆಯಾಗುವುದು ಊಟಕ್ಕಾಯಿತು ಎನ್ನುವಾಗಲೇ.. !!  ಪಾತ್ರೆಗಳ ಮುಚ್ಚಳ ತೆರೆದು ಸೌಟಿಂದ ತಿರುವಿ  ಇತರ ಸಣ್ಣ ಪಾತ್ರೆಗಳಿಗೆ ವರ್ಗಾಯಿಸುತ್ತಾರೆ. ಅಲ್ಲಿಯವರೆಗೆ ಒಗ್ಗರಣೆಯು ಅದರ ಮೇಲೆ ಅಶ್ವತ್ಥ ಎಲೆಯ ಮೇಲೆ ಪವಡಿಸಿದ ಬಾಲಕೃಷ್ಣನಂತೆ ತೇಲುತ್ತಲೇ ಇರಬೇಕು. ಓಹ್.. ಏನು ರುಚಿಯಪ್ಪಾ, ಇವರು ಒಗ್ಗರಣೆ ಹಾಕಿದರೆ ಸಾಕು, ಅದು ಹೇಗೋ ರುಚಿಯೂ ಪರಿಮಳವೂ ದುಪ್ಪಟ್ಟಾಗಿಬಿಡುತ್ತದೆ ಎಂದು ಅವರ ಜನಪ್ರಿಯತೆ ಉಣ್ಣುವವರ ಬಾಯಲ್ಲಿ ವ್ಯಕ್ತವಾಗುತ್ತದೆ.

ಇದರ ಹೆಚ್ಚುಗಾರಿಕೆ ಬರೀ ಇಷ್ಟೇ ಎಂದುಕೊಳ್ಳಬೇಡಿ. ತಿಂಡಿ ಮಾಡಲಿಕ್ಕೆ ಉದಾಸೀನ ಕಾಡುತ್ತಿದೆಯೇ? ಅನ್ನಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಒಂದು ಸ್ಟ್ರಾಂಗ್ ಒಗ್ಗರಣೆ ಕೊಟ್ಟು ಕಲಸಿ ತಿನ್ನಿ. ಊಹೂಂ .. ಬೇಡ.. ಬಾಯಾರಿಕೆ ಅನ್ನಿಸುತ್ತಿದೆಯೇ ? ಕಡೆದಿಟ್ಟ ಮಜ್ಜಿಗೆಗೆ ನೀರು ಸೇರಿಸಿ ಹಸಿಮೆಣಸು ಶುಂಠಿ ಉಪ್ಪು ಸೇರಿಸಿ, ಇಂಗಿನ ಗಮಗಮಿಸುವ ಒಗ್ಗರಣೆ ಹಾಕಿ. ಹೊಟ್ಟೆ ತುಂಬಿದ ಕೊಡದಂತಾದರು ಬಾಯಿ  ಇನ್ನಷ್ಟು ಬೇಡೀತು. ಅದೂ ಬಿಡಿ .. ಹಸಿವೇ ಎನಿಸದೆ ಬಾ ರುಚಿ ಕೆಟ್ಟಂತಾಗಿದೆಯೇ? ಹುಣಸೆ ರಸ ಉಪ್ಪು ಬೆಲ್ಲ ನೀರಿಗೆ ಸೇರಿಸಿ ಕುದಿಸಿ ಒಂದು ಖಡಕ್ ಒಗ್ಗರಣೆ ಹಾಕಿ, ಸೂಪಿನಂತೆ ಕುಡಿರಿ. ವಾಹ್ ಎನಿಸುತ್ತದೆಯೇ..!! 
ಹಾಗೆಂದು ಒಗ್ಗರಣೆ ಎಂದರೆ  ಎಲ್ಲವೂ ಒಂದೇ ರೀತಿಯದೇನೂ ಅಲ್ಲ. ನಮ್ಮೂರ ಪಲ್ಯಗಳು, ಉತ್ತರ ಭಾರತದ ಅಡುಗೆಯಂತೆ ಮೊದಲಿಗೆ ಒಗ್ಗರಿಸಿಕೊಂಡು ನಂತರ ತರಕಾರಿಯೋ, ಬೇಳೆಯೋ, ಸೊಪ್ಪೋ,ಹೀಗೆ ಯಾವುದನ್ನಾದರೂ ತನ್ನೊಳಗೆ ಬೆರೆಸಿಕೊಳ್ಳುತ್ತವೆ. ಅದೇ ನಮ್ಮಲ್ಲಿನ ಸಾರು ಸಾಂಬಾರು ಮಜ್ಜಿಗೆ ಹುಳಿಗಳು ತಯಾರಾದ ನಂತರ ಒಗ್ಗರಣೆಂದ ತಮ್ಮನ್ನು ಸಿಂಗರಿಸಿಕೊಳ್ಳುತ್ತವೆ. ಆದರೆ ಎಲ್ಲದರ ಮೂಲ ಉದ್ದೇಶ ಅಡುಗೆಯ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದೇ ಆಗಿದೆ.
 
 ಈ ಕಾರಣದಿಂದಲೇ 'ನನ್ನ ಕೈ ತಿಕ್ಕಿ ತಿಕ್ಕಿ ತೊಳೆದರೂ ಮೂರು ದಿನಕ್ಕೆ ಈ ಒಗ್ಗರಣೆ ಪರಿಮಳ ಹೋಗೋದಿಲ್ಲ, ಎಂತಾ ಊಟ ಅಂತೀಯಾ'ಎಂದು ಊಟ ಮುಗಿಸಿ ಗಂಟೆಗಳುರುಳಿದ್ದರೂ,ಇನ್ನೂ ಅದರ ಸವಿಗನಸಿನಲ್ಲಿ ಮುಳುಗೇಳುವವರನ್ನು ನೀವು ನೋಡಿರಬಹುದು. ಇನ್ನು, ಸ್ವಾಭಾವಿಕವಾಗಿಯೇ ಘಾಟು ಹೊಂದಿದ ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆಯಾಗಿದ್ದರೆ ಕೈಯ ಜೊತೆಗೆ ಮೈಯೂ ಅದೇ ಪರಿಮಳವನ್ನು ಹೊರಹಾಕುತ್ತದೆ ಬಿಡಿ. 
ಕೆಲವೊಂದು ಪಂಗಡಗಳಲ್ಲಿ ಮನೆಯಲ್ಲಿ ಯಾರಾದರು ತೀರಿ ಹೋಗಿದ್ದರೆ , ಸೂತಕದ ದಿನಗಳು ಕಳೆಯುವವರೆಗೆ ಅಡುಗೆಗೆ ಒಗ್ಗರಣೆ ಬಳಸುವುದಿಲ್ಲ. ಹಾಗಾಗಿಯೇ ಅಪ್ಪಿ ತಪ್ಪಿ ಒಗ್ಗರಣೆ ಹಾಕಲು ಮರೆತಿದ್ದರೆ, ಮನೆಯಲ್ಲಿ , ಹಿರಿತಲೆಗಳೊಮ್ಮೊಮ್ಮೆ  'ಇದೆಂತ ಸಾವಿನ ಅಡುಗೆಯೋ, ಒಗ್ಗರಣೆ ಇಲ್ಲ ಇದ್ರಲ್ಲಿ' ಎಂದು ಬೊಬ್ಬಿರಿಯುವುದನ್ನು ಕೇಳಿರಬಹುದು. ಬಹುಷಃ ಸಾವಿನ ಕರಿನೆರಳು ನಮ್ಮ ಮನೆಯನ್ನೂ ತುಳಿಯದಿರಲಿ  ಎಂಬ ಮುನ್ನೆಚ್ಚರಿಕೆಯೇನೋ ಇದು. 

ತನ್ನ ಸತ್ತ ಮಗುವನ್ನುಬದುಕಿಸು ಎಂದು ಬಂದ ನೊಂದ ತಾಯಿಗೆ, 'ಸಾವು ಕಾಣದ ಮನೆಯ ಸಾಸಿವೆಯ ತಾರವ್ವ' ಎಂದಿದ್ದನಂತೆ ಬುದ್ಧ. ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲಿಯೂ ಅವಳಿಗೆ ಸಿಗಲಿಲ್ಲ. ಹಾಗೆಯೇ ಸಾಸಿವೆ ಇಲ್ಲದ ಮನೆಯೂ ಇದ್ದಿರಲಿಕ್ಕಿಲ್ಲ ಅಲ್ಲವೇ..? ಆಗಿನ ಕಾಲದಲ್ಲೂ ಸಾಸಿವೆ ಎಲ್ಲರ ಅಡುಗೆ ಮನೆಯಲ್ಲಿ ಇದ್ದಿತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ..? ಸಾಸಿವೆ ಇದ್ದಲ್ಲಿ ಒಗ್ಗರಣೆಯೂ ಇದ್ದೀತಲ್ಲವೇ..!! 

ಇಷ್ಟೆಲ್ಲ ಒಗ್ಗರಣೆ ಹಾಕುತ್ತಿರುವ ನಾನು ನನ್ನ ಒಗ್ಗರಣೆ ಕಥೆಯನ್ನು ನಿಮಗೇ ಹೇಳದೇ ಇದ್ದರೆ  ಹೇಗಾದೀತು..! ನಮ್ಮಲ್ಲಿಗೆ ಅವಸರದಲ್ಲಿ ಬಲು ಅಪುರೂಪದ ಅತಿಥಿಗಳ ಆಗಮನವಾಯಿತು. ನಾನು ಕೂಡಾ ಇನ್ನಷ್ಟು ಅವಸರದಲ್ಲಿ ಅಡುಗೆ ಪೂರೈಸಿ ಎಲರನ್ನೂ ಊಟಕ್ಕೆ ಬನ್ನಿ ಎಂದು ತಟ್ಟೆ ಇಟ್ಟು ಆಮಂತ್ರಿಸಿದೆ. ಘಮ ಘಮ ಒಗ್ಗರಣೆಯ ಸುವಾಸನೆ.. ಎಲ್ಲರ ಹೊಗಳಿಕೆಯ ನುಡಿಗಳು ಬೇರೆ.. ನನ್ನ ಹೆಮ್ಮೆಯ ಬೆಲೂನು ಗಾಳಿ ತುಂಬಿ ದೊಡ್ಡದಾಗುತ್ತಲೇ ಇತ್ತು. ಆದರೆ ಅದು ಟುಸ್ಸೆಂದದ್ದು ಪಾಯಸದ ಮೇಲೆ ತೇಲಾಡುತ್ತಿರುವ ಕೆಂಪು ಮೆಣಸು, ಸಾಸಿವೆ, ಕರಿಬೇವಿನೆಲೆಗಳನ್ನು ಕಂಡಾಗಲೇ.. !! ಗಡಿಬಿಡಿಯಿಂದ  ಸಾರು ಸಾಂಬಾರಿನ ಜೊತೆಗೆ ಅದಕ್ಕೂ ಒಗ್ಗರಣೆ ಹಾಕಿದ್ದೆ. ನನ್ನ ಪುಣ್ಯಕ್ಕೆ ಎಲ್ಲವನ್ನೂ ಅಡುಗೆ ಮನೆಂದ ತಂದು ಒಂದೊಂದಾಗಿ ಬಡಿಸುತ್ತಿದ್ದೆ. ಸೌಟಿನಲ್ಲಿ ಮೆಲ್ಲನೆ ಪಾಯಸದ ಒಗ್ಗರಣೆಯನ್ನೆತ್ತಿ ತೆಗೆದು ಸಿಂಕಿಗೆ ಚೆಲ್ಲಿ ಮತ್ತೊಂದಿಷ್ಟು ಏಲಕ್ಕಿ ಹುಡಿ ಸುರುವಿ , ಬೆರೆಸಿ ಆ ದಿನ ಹೇಗೋ ಪರಿಸ್ಥಿತಿ ನಿಭಾಸಿದ್ದೆ. ಆದರೆ ನಂತರ ವಿಷಯ ತಿಳಿದ ನನ್ನವರು ಈಗಲೂ ಪಾಯಸ ಮಾಡಿದ ದಿನ ಒಗ್ಗರಣೆ ಹಾಕಿದ್ದೀ ತಾನೆ.. ಇಲ್ಲದಿದ್ರೆ ರುಚಿಯೇ ಇಲ್ಲ ನೋಡು ಎಂದು ಕಿಚಾಸುವುದನ್ನು ಬಿಟ್ಟಿಲ್ಲ. 

ಅಂದ ಹಾಗೆ ಈ ಒಗ್ಗರಣೆಯನ್ನು ಕಂಡು ಹಿಡಿದ ಮಹಾನುಭಾವನ್ಯಾರು ಎಂಬ ಚಿಂತೆ ನನ್ನನ್ನು ಅಗಾಗ ಕಾಡುವುದುಂಟು. ಸಾಸಿವೆಯ ಒಳಗೊಂದು  ರುಚಿಯ ಕಂಡು ಅದನ್ನು ಬಿಸಿ ಎಣ್ಣೆಯಲ್ಲಿ ಇಂಗು ಮೆಣಸುಗಳೊಂದಿಗೆ ಸಿಡಿಸಿ ಅಡುಗೆಗೊಂದು ಪರಿಮಳದ ಆವರಣವನ್ನು ಕಲ್ಪಿಸಿದವನು ಮಹಾ ಪಾಕಶಾಸ್ತ್ರ ಪರಿಣಿತನೇ ಇರಬೇಕು. ಥಾಮಸ್ ಅಲ್ವ ಎಡಿಸನ್ ಗುಂಡು ಬಲ್ಬನ್ನೂ, ಮಾರ್ಕೋನಿ ರೇಡಿಯೋವನ್ನು , ಗ್ರಹಾಮ್ ಬೆಲ್ ಟೆಲೆಫೋನನ್ನೂ ಕಂಡು ಹಿಡಿಯುವುದಕ್ಕೂ ಮುಂಚೆಯೇ ಇರ ಬೇಕು ಇದರ ಅವಿಷ್ಕಾರವಾದದ್ದು. ಹೆಚ್ಚೇಕೆ ಮಹಾ ಮಹಾ ಬಾಣಸಿಗರಾದ ಭೀಮಸೇನ, ನಳ ಮಹಾರಾಜರು ಹುಟ್ಟುವ  ಮೊದಲೇ ಇದರ ಸಂಶೋಧನೆಯಾಗಿರಬೇಕು. ಅಂತೂ ಇದರ ಕಾಲ ಹಾಗೂ ಕರ್ತೃವಿನ ನಿರ್ಣಯ ಒಗ್ಗರಣೆಯ ಪರಿಮಳದಷ್ಟೇ ನಿಗೂಢ ಹಾಗೂ ಜಟಿಲ. 

ಅಲ್ಲಾ ...  ಒಗ್ಗರಣೆಯ ಬಗ್ಗೆಯೇ ಹೇಳುತ್ತಾ ಕುಳಿತರೆ ಅಡುಗೆ ಮಾಡೋದ್ಯಾವಾಗ? ಅದಕ್ಕೆ ಒಗ್ಗರಣೆ ಬೀಳೋದ್ಯಾವಾಗ ಅಂತ  ಹೇಳ್ತಾ ಇದ್ದೀರಾ.. !! ಎಲ್ಲಾ ರೆಡಿಯಾಗಿದೆ ..ಒಂದಿಷ್ಟು ಒಗ್ಗರಣೆ ಸಿಡಿಸಿದರಾಯಿತು.. ಅರ್ರೇ.. ನೀವೆಲ್ಲಿಗೆ ಹೊರಟ್ರಿ.. ಒಂದಿಷ್ಟು ಊಟ ಮಾಡ್ಕೊಂಡೇ ಹೋದ್ರಾಯ್ತು .. ಬನ್ನಿ ಬನ್ನಿ..