Pages

Total Visitors

Friday, March 27, 2015

ಸಭೆಯೊಳಗೆ ದ್ರೌಪದಿಯ


"ನಂದಕ ಕೇಳಿದೆಯಾ .. ಎಂತಹ ಎದೆ ನಡುಗುವ ಸುದ್ದಿಯಿದು? ತುಂಬಿದ ಸಭೆಯಲ್ಲಿ ಕೌರವರು ದ್ರೌಪದಿಯ ವಸ್ತ್ರವನ್ನು ಸೆಳೆದು ಅವಳ ಲಜ್ಜೆಯನ್ನು ಕಳೆದಿದ್ದಾರಂತೆ ? ಅದೂ ಅವಳ ಐವರು ಗಂಡಂದಿರನ್ನು ಮೋಸದ ದ್ಯೂತದಲ್ಲಿ ಸೋಲಿಸಿ ...  ಇದೆಂತಹಾ ದುಷ್ಟತನ ? ರಾಜಸಭೆಯಲ್ಲಿ ಹೀಗಾಗುವುದು ನ್ಯಾಯವೇ? ಬಿಡು ನಾನೇನು ಇದನ್ನು ಹೊಸತಾಗಿ ಹೇಳುವುದು..  ರಾಜನರಮನೆಯಲ್ಲೇ  ಅಲ್ಲವೇ ನಿನ್ನ ಚಿಕ್ಕಪ್ಪ ಊಳಿಗದಲ್ಲಿರುವುದು..ಅವನೇ ಎಲ್ಲವನ್ನೂ ಹೇಳಿರಬಹುದು. ಅವನೆಂದೇಕೆ ರಾಜ್ಯದ ಪ್ರತಿಯೊಬ್ಬ ಮಂದಿಯೂ ಇದೇ ವಿಷಯವನ್ನು ತಾಂಬೂಲದಂತೆ ಜಗಿದು ರಂಗೇರಿಸುತ್ತಿದ್ದಾರೆ ಎಂದ ಮೇಲೆ ಉಗುಳಿದ ಕಲೆಯಾದರೂ ಕಾಣದಿದ್ದೀತೇ.."
" ಓಹೋ.. ಶ್ರಾವಸ್ತ.. ಈ ಸುದ್ದಿ ನಿನ್ನ ಕಿವಿಗೂ  ತಲುಪಿತೇ? ಅಷ್ಟು ಬೇಗನೆ ನಂಬಿಯೂಬಿಟ್ಟೆಯಾ?  ಅಯ್ಯೋ ಹುಚ್ಚಪ್ಪಾ.. ಅಂತಹದ್ದೇನು ಅಲ್ಲಿ  ನಡೆದೇ ಇಲ್ಲವಂತೆ.. ನಿನಗೆ ಯಾರೋ ತಪ್ಪು ಮಾಹಿತಿ ಮುಟ್ಟಿಸಿದ್ದಾರೆ ಶ್ರಾವಸ್ತ.  ಇಂತಹ ಗಾಳಿ ಸುದ್ದಿಗಳನ್ನು ನಾನೆಷ್ಟು ಕೇಳಿಲ್ಲ.. ಅಷ್ಟಕ್ಕೂ ನನ್ನ ಚಿಕ್ಕಪ್ಪ ಆಹುಕನನ್ನು  ಮೊನ್ನೆಯಷ್ಟೇ ಭೇಟಿಯಾಗಿ ಈ ಸಂಗತಿಯ ನಿಜಾನಿಜಗಳ ಬಗ್ಗೆ ಮಾತನಾಡಿದ್ದೆ. ಅವರಂತೂ  ಇದರಲ್ಲಿ ಒಂದಿನಿತೂ ಸತ್ಯವಿಲ್ಲ ಎಂದು ಅಲ್ಲಗಳೆದಿದ್ದರು.."
"ಹಾಗೆ ಹೇಳಿದರೇ ನಂದಕ ಅವರು, ಹಾಗಿದ್ದರೆ ಇಷ್ಟೊಂದು ಜನರಾಡುವ ಮಾತುಗಳೂ ಸುಳ್ಳೇ? ಇರಲಾರದು..  ಆಹುಕ  ದೊರೆಗಳಿಗಂಜಿ ಮಾತನಾಡುತ್ತಿಲ್ಲವೇನೋ.. ಯಾಕೆಂದರೆ ಇದನ್ನು  ನನಗೆ ಇದನ್ನು ಹೇಳಿದ್ದು ಘಟನೆಯ ಪ್ರತ್ಯಕ್ಷದರ್ಶಿ  ಗಣಿಕೆ ಸೋಮಲತೆ. ನಿನಗೆ ಗೊತ್ತಿಲ್ಲದ್ದೇನಿದೆ? ಅರಮನೆಗೆ ಯಾರಾದರೂ ವಿಶೇಷವಾಗಿ  ಬರುವವರಿದ್ದರೆ ಊರಿನೆಲ್ಲಾ ಗಣಿಕೆಯರು ಅಲ್ಲೇ ಇರಬೇಕಾಗುತ್ತದೆ ತಾನೇ.. ಹಾಗೆ ಆ ದ್ಯೂತವಾಡುವ ದಿನ ಇವಳೂ ಅಲ್ಲಿದ್ದಳು. ಬಲಾತ್ಕಾರದಿಂದ ಎಳೆದು ಕೊಂಡೊಯ್ಯುತ್ತಿರುವ  ಪಾಂಡವರೈವರ ಪ್ರೀತಿಯ ಪತ್ನಿ ಬೊಬ್ಬಿಡುವುದನ್ನು, ಶಪಿಸುವುದನ್ನು ಇವಳ ಕಿವಿಗಳು ಕೇಳಿಸಿಕೊಂಡಿವೆ.    ಆದರೆ ರಾಣೀವಾಸದವರು ಇದನ್ನು ಕೇಳಿಯೂ ಕೇಳಿಸದಂತೆ ಬಾಗಿಲನ್ನು ಭದ್ರಪಡಿಸಿದ್ದರಂತೆ.  ನೀನೇ ಹೇಳು ಇಂತಹ ಕೆಟ್ಟ ಸಂಗತಿ ಕುರುಗಳ  ಅರಮನೆಯಲ್ಲಿ ನಡೆಯಬಹುದೇ? ಅದೂ ತಮ್ಮದೇ ಮನೆಯ ಸೊಸೆಯನ್ನು ಹಾಳುಗೆಡವಿ  ಏನನ್ನು ಸಾಧಿಸುತ್ತಾರೆ ಹೇಳು?" 
"ಹುಂ.. ಶ್ರಾವಸ್ತ   ನನಗೂ  ಇದೇ ಕಥೆಯನ್ನು ಸತ್ಯಘಟನೆ ಎಂಬಂತೆ ಯಾರೋ ಹೇಳಿದ್ದರು ಆದರೆ ನಾನು ನಿನ್ನಂತೆ ಅದನ್ನು ನಂಬಲಿಲ್ಲ. ನೋಡು  ಕುರು ಕುಲ ಎಂದರೆ ಏನು? ಅದೆಷ್ಟು  ಎಂತಹ ಧೀಮಂತ ದೊರೆಗಳು ಆಳಿ ಅಳಿದು ತಮ್ಮ ಗುರುತನ್ನು ಮೂಡಿಸಿ ಹೋಗಿದ್ದಾರಿಲ್ಲಿ. ಅಂತಹ ವಂಶದವರು ಹೀಗೆ ಕೀಳಾಗಿ ನಡೆದುಕೊಳ್ಳುವುದುಂಟೇ.. ಅದೂ ಅವರು ಹೇಳುತ್ತಿರುವುದು ಎಲ್ಲಿ ಎಂದಾದರೂ ಆಲೋಚಿಸಿದೆಯಾ? ತುಂಬಿದ ರಾಜ ಸಭೆಯಲ್ಲಿ.. ಅಲ್ಲೇನು ಯುವರಾಜನ ಸಮಪ್ರಾಯದವರಾದ ಪುಂಡರ ಬಳಗ ಮಾತ್ರವಿರುವುದೇ? ಹಿರಿಯರಾದ ಭೀಷ್ಮರಿಲ್ಲವೇ? ದ್ರೋಣ ಕೃಪಾದಿ ಗುರುಗಳಿಲ್ಲವೇ? ಬುದ್ಧಿಶಾಲಿಯಾದ ವಿವೇಕಿಯೂ ಆದ ವಿದುರರಿಲ್ಲವೇ? ಅಷ್ಟೇ ಏಕೆ ಸಿಂಹಾಸನದ ಮೇಲೆ ಕುರು ಕುಲ ತಿಲಕ ದೃತರಾಷ್ಟ್ರ ಮಹಾಪ್ರಭುಗಳಿಲ್ಲವೇ? ಅಷ್ಟೆಲ್ಲಾ ಜನರೆದುರು ಅಂತಹುದೊಂದು ಘಟನೆ ನಡೆದೀತು ಎನ್ನುವುದನ್ನು ಕನಸು ಮನಸಿನಲ್ಲಾದರೂ ಊಹಿಸುವುದು ಹೇಗೆ ಹೇಳು.. ಸುಮ್ಮನೆ ಆರೋಪವಷ್ಟೇ ಇದು.." 
"ಇಲ್ಲ ಗೆಳೆಯಾ.. ಹಾಗೆ ಸಾರಾಸಗಾಟಾಗಿ ಸುಳ್ಳೆಂದು ತಿರಸ್ಕರಿಸಲು ಬರುವುದಿಲ್ಲ. ನಿನಗೆ ತಿಳಿದಿದೆಯೇ ದ್ಯೂತದಲ್ಲಿ ತಮ್ಮೆಲ್ಲವನ್ನೂ ಕಳೆದುಕೊಂಡಿದ್ದಾರೆಂದುಕೊಂಡ ಪಾಂಡವರು ಮತ್ತೆ ತಮ್ಮ ವೇಷಭೂಷಣ ಆಭರಣಗಳ ಸಮೇತ ಮೊದಲಿನೆಲ್ಲಾ ಗೌರವಗಳೊಂದಿಗೆ ಹೊರಟು  ತಮ್ಮ ರಾಜ್ಯಕ್ಕೆ ಮರಳಿದ್ದಾರೆ.  ರಾಜ್ಯಭ್ರಷ್ಟರಾಗಬೇಕಾಗಿದ್ದ ಪಾಂಡವರು ತಮ್ಮದೆಲ್ಲವನ್ನೂ ಮರಳಿ ಪಡೆದದ್ದು ದ್ರೌಪದಿಗೆ ಕುರುರಾಯನಿತ್ತ ವರಗಳಿಂದಂತೆ.." 
"ಅಯ್ಯೋ .. ಇದೆಲ್ಲಾ ಬರಿದೆ ಪೊಳ್ಳು ಮಾತುಗಳು ಶ್ರಾವಸ್ತ.ನಿನಗಾರು ಇಂತಹುದನ್ನೆಲ್ಲಾ ಹೇಳಿ ದುರ್ಯೋಧನನನ್ನು ಕೆಟ್ಟವನೆಂದು ನಿನ್ನೆದುರು ಬಿಂಭಿಸುತ್ತಾರೋ ನನಗೆ ತಿಳಿಯದು. ಅಣ್ಣ ತಮ್ಮಂದಿರು ಸುಮ್ಮನೆ ಮೋಜಿಗೆಂದು ಆಡಿದ ದ್ಯೂತ ಇಂತಹದೆಲ್ಲಾ ಗಾಳಿಮಾತುಗಳಿಗೆ ಕಾರಣವಾಗಿದೆ ಎಂದು ತಿಳಿದರೆ ಪಾಪ ಯುವರಾಜನೆಷ್ಟು ನೊಂದುಕೊಂಡಾನೋ.. ಅವನಿಗೇನು ಅವನಂತಃಪುರದಲ್ಲಿ ರಾಣಿಯರ  ಕೊರತೆಯಿದೆಯೇ? ರಾಣಿಯರ ಮಾತೇಕೆ ಬಿಡು. ನಮ್ಮ ರಾಜ್ಯದ ಗಣಿಕೆಯರಷ್ಟು ಸೊಗಸುಗಾತಿಯರನ್ನು ನೀನೆಲ್ಲಾದರೂ ನೋಡಿದ್ದೀಯಾ? ಒಮ್ಮೆ ಅವರ ಬಲೆಗೆ ಸಿಲುಕಿದವರು ಪರನಾರಿಯರನ್ನು ಕಣ್ಣೆತ್ತಿ ನೋಡಲಾರರು.." 
"ಹ್ಹ ಹ್ಹ ನಂದಕ ನಿನ್ನ ಕೊನೆಯ ಮಾತಿಗಾದರೆ ನನ್ನ ಸಮ್ಮತಿಯಿದೆ. ನಾನು ನಿನ್ನೆ ಇರುಳು ಕಳೆದ ಜಾಗವಿದೆಯಲ್ಲಾ ಅದೆಂತಹ ಮೋಹಕ ಲಲನೆಯರು ಅಲ್ಲಿದ್ದಾರೆಂದರೆ ಅಬ್ಬಾ.. ಬಿಟ್ಟು ಬರಲೇ ಆಗದು ಎಂಬಷ್ಟು.. ತನು ದಣಿದರೂ ಮನ ತಣಿಯದು.. ಛೇ ..ಎಲ್ಲಿಂದೆಲ್ಲಿಗೆ ಹೋಗುತ್ತಿದೆ ವಿಷಯ.."
"ಹುಂ .. ನನಗೂ ನಿನಗೂ ಇಂತಹ "ಷಯಗಳೇ ಚೆಂದ ಮಾತನಾಡಲು. ಅದು ಬಿಟ್ಟು ರಾಜ್ಯದ ಸುದ್ದಿ, ರಾಜರ ಸುದ್ದಿಯೆಲ್ಲಾ ನಮಗ್ಯಾಕೆ ಹೇಳು ಶ್ರಾವಸ್ತ.." 
"ಅಯ್ಯೋ ನಂದಕ.. ನನಗೂ ಇಂತಹ ವಿಷಯಗಳೇ ಮೋಜೆನಿಸುವುದು. ಆದರೇನು ಮಾಡೋಣ ಹೇಳು.. ಆ ಕನಸಿನ ಲೋಕವನ್ನು ಬಿಟ್ಟು ಈ ನರಕಕ್ಕೆ ಬರಲೇಬೇಕಲ್ಲ.  ಇಲ್ಲಿ ಕೇಳು.. ನೀನು ಹೇಳಿದೆಯಲ್ಲವೇ ರಾಜನ ಸಭೆಯಲ್ಲಿ ಅಷ್ಟೂ ಹಿರಿಯರಿದ್ದು ಅನಾಚಾರವಾಗದು ಎಂದು .. ದುರ್ಯೋಧನನ ತೊಡೆ ಮುರಿಯುತ್ತೇನೆ, ದುಶ್ಯಾಸನನ ಕರುಳನ್ನು ಬಗೆಯುತ್ತೇನೆ ಎಂಬ ಭೀಮನ ರಣಕೂಗು ಕೋಟೆಯ ಗೋಡೆಗಳನ್ನು ಸೀಳಿ ಹೊರಗೆ ಅಪ್ಪಳಿಸಿದ್ದು ಬರಿದೆ ಎನ್ನುವೆಯಾ? ಅದೂ ಬಿಡು. ಐವರು ಗಂಡಂದಿರಿದ್ದೂ ದ್ರೌಪದಿ ಸಹಾಯಕ್ಕಾಗಿ ಕೃಷ್ಣನನ್ನು ಕೂಗಿದ್ದು, ಆತ ತನ್ನ ಶಲ್ಯದಿಂದಲೇ ಆಕೆಯ ಮಾನ ಮುಚ್ಚಿದ್ದು.. ಇದೆಲ್ಲವನ್ನೂ ಅರಮನೆಯ ಗೋಡೆ ಗೋಡೆಗಳು ಮಾತನಾಡುತ್ತವೆ ಎಂದಾದ  ಮೇಲೆ ಕೊಂಚವಾದರೂ ಸತ್ಯ ಇರಲೇಬೇಕಲ್ಲ.." 

"ಇಲ್ಲ ಶ್ರಾವಸ್ತ.  ಇದೆಲ್ಲಾ ಕಟ್ಟು ಕಥೆ. ನೀನು ಕೇಳುತ್ತೀ ಎಂದಾದರೆ ಹೇಳುತ್ತೇನೆ ಕೇಳು.  ನಿನಗೆ ತಿಳಿದಿಲ್ಲವೇ ಹಿರಿಯವನಾದ ದೃತರಾಷ್ಟ್ರನನ್ನು ಕುರುಡ ಎಂಬ ಕಾರಣಕ್ಕೆ ದೂರವಿಟ್ಟು ವಯಸ್ಸಿನಲ್ಲಿ ಕಿರಿಯವನಾದ  ಪಾಂಡು ರಾಜನಿಗೆ ಪಟ್ಟ

ಕಟ್ಟಿದ್ದು ಭೀಷ್ಮಾಚಾರ್ಯರೇ ಅಲ್ಲವೇ. ಋಷಿ ಶಾಪಕ್ಕೆ ಹೆದರಿ, ಮಕ್ಕಳಾಗದ ಚಿಂತೆಗೆ ಆತನೇನೋ ಪತ್ನಿಯರ ಸಮೇತ ಇಲ್ಲಿಂದ ಹಿಮಾಲಯದತ್ತ ನಡೆದ. ಮತ್ತೆ ಅರಸರಿಲ್ಲದೇ ಸಿಂಹಾಸನ ಬರಿದಾಗಬಾರದು ಎಂದು ತಾನೆ ನಮ್ಮ ಈಗಿನ ಮಹಾರಾಜರು ಪಟ್ಟಕ್ಕೆ ಬಂದದ್ದು. ದೊಡ್ಡವರ ಮಾತೇ ಇರಬಹುದು ಆದರೂ ಕೇಳುತ್ತೇನೆ  ಅಂದು ಕುರುಡನಾದವನು ರಾಜ್ಯಾಭಿಷೇಕಕ್ಕೆ ಅನರ್ಹ ಎಂದೆನಿಸಿಕೊಂಡ ದೃತರಾಷ್ಟ್ರ ಮಹಾರಾಜರು ಈಗ ಹೇಗೆ ಪಟ್ಟದಲ್ಲಿ ಕುಳಿತುಕೊಳ್ಳಲು ಶಕ್ತರಾದುದು? ಅಂದರೆ ಆಗ ಅವರಿಂದಲೂ ಸಮರ್ಥ ಇನ್ನೊಬ್ಬನಿದ್ದ ಎಂಬ ಕಾರಣಕ್ಕೆ ಪಟ್ಟ ತಪ್ಪಿದ್ದಷ್ಟೇ.. ಈಗಲೂ ಅದೇ ಹುನ್ನಾರವೇ ನಡೆಯುತ್ತಿರುವುದು. ಅದೇ ಪಾಂಡು ರಾಜನ ಮಕ್ಕಳಾದ ಇವರೈವರು ತಮ್ಮ ತಾಯೊಂದಿಗೆ ನಗರಕ್ಕೆ ಬಂದುದೇ ರಾಜ್ಯಕ್ಕೆ ಮುಳುವಾಯಿತು. ಅಲ್ಲಿಯವರೆಗೆ  ಯುವರಾಜನೆಂದೇ ಪರಿಗಣಿಸಲ್ಪಡುತ್ತಿದ್ದ ದುರ್ಯೋಧನ, ಯುಧಿಷ್ಟಿರನ  ಎದುರು ನಿಂತಾಗ ಹೋಲಿಕೆಗಳು ಪ್ರಾರಂಭವಾದವು. ಅವುಗಳೇ ಅಣ್ಣ ತಮ್ಮಂದಿರ ಪ್ರೇಮಭಾವವನ್ನು ಒಡೆದು ಪ್ರತ್ಯೇಕ ಪಂಗಡಗಳಾಗುವಂತೆ ಮಾಡಿದವು. ಇಲ್ಲದಿದ್ದರೆ ಸಮಗ್ರ ಕುರುಕುಲವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕುರು ವಂಶಜರು ಕೌರವರೇ ಅಲ್ಲವೇ. ಪಾಂಡವರು ಎಂಬ ಪ್ರತ್ಯೇಕತೆಯೇಕೆ ಅವರನ್ನು ಕರೆಯುವಲ್ಲಿ? ಅದನ್ನೂ ಹೇಳುತ್ತೇನೆ ಕೇಳು.. ಅವರು ಈಗಿರುವ ಕೌರವರಿಂದ ಹೆಚ್ಚಿನವರು, ಮೇಲ್ಮಟ್ಟದವರು ಎಂಬ ಅರ್ಥ ಬರಲೋಸುಗವೇ ಈ ಸಂಭೋದನೆ. ಪಾಂಡು ರಾಜ ಮೊದಲು ಅಭಿಕ್ತನಾದವನು. ಅವನ ಮಗ  ಯುಧಿಷ್ಟಿರ ನಮ್ಮ ಯುವರಾಜ ದುರ್ಯೋಧನನಿಂದ ಹಿರಿಯ. ಹಾಗಿದ್ದರೆ ಅವನೇ ರಾಜನಾಗಬೇಕು ಎಂಬುದು ಒಂದು ಗುಂಪಿನ ಮಾತು. ಅದನ್ನು ನಡೆಸಲೆಂದೇ ಈಗವರು ತಮ್ಮ ದಾಳವನ್ನು ಬೀಸುತ್ತಿದ್ದಾರೆ. ಅದಕ್ಕಾಗಿ ಆಗಬೇಕಾದುದು ಏನೆಂದರೆ ಯುವರಾಜ ದುರ್ಯೋಧನನನ್ನು ಖೂಳನೆಂದೂ, ಕೆಟ್ಟವನೆಂದೂ ರಾಜ್ಯದ ಜನರು ಅಂದುಕೊಳ್ಳುವಂತೆ ಮಾಡುವುದು.. ಇದಿಷ್ಟೇ ಅಲ್ಲಿ ನಡೆಯುತ್ತಿರುವುದು.." 

"ನಂದಕ ಇಲ್ಲಿ ಕೇಳು ನೀನು ಹೇಳುವ ಮಾತು ಒಂದು ಸ್ವಲ್ಪ ಸತ್ಯವಿರಲೂಬಹುದು. ಹಾಗೆಂದು ನಾನು ಕೇಳಿದ್ದೆಲ್ಲಾ ಪೂರ್ಣ ಸುಳ್ಳಲ್ಲ. ಯಾಕೆ ತಿಳಿದಿದೆಯಾ ದುರ್ಯೋಧನ ನೀನು ಹೇಳಿದಂತೆ ತುಳಿಯಲ್ಪಡುವವನೇನಲ್ಲ. ನಿನಗೆ ನೆನಪಿರಬಹುದು. ಅಂದೊಮ್ಮೆ ದ್ರೋಣಾಚಾರ್ಯರ ಶಿಷ್ಯರ ಕಲಿಕೆಯನ್ನು ಕುರುಜನರಿಗೆ ತೋರಿಸಲೆಂದೇ ಮಹಾನ್ ಉತ್ಸವವೊಂದು ನಡೆದಿತ್ತಲ್ಲ. ಅಲ್ಲಿ ಅರ್ಜುನನ ಧನುರ್ವಿದ್ಯೆಯ ಚಳಕವನ್ನು ನೋಡಿ ಪುಳಕಗೊಂಡವರೇ ಎಲ್ಲಾ.. ಊರಿಗೆ ಊರೇ ಹರುಷದಿಂದ ಬೊಬ್ಬಿರಿಯುತ್ತಿದ್ದರೆ ದುರ್ಯೋಧನಾದಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದರು.  ಆಗ ಅಲ್ಲಿ ಪ್ರತ್ಯಕ್ಷನಾದವನು ಕರ್ಣ.  ಇದೇನು ಮಹಾ ವಿದ್ಯೆಯಲ್ಲ.. ನಾನೂ ಇದನ್ನೆಲ್ಲಾ ಪ್ರದರ್ಶಿಸಬಲ್ಲೆ ಎಂದು ಎಲ್ಲರೆದುರು  ಪಂಥವನ್ನೇ  ಒಡ್ಡಿದ್ದನವ. ಆಗ ದ್ರೋಣರು ಇದು ಕೇವಲ ರಾಜಕುವರರ ವಿದ್ಯೆಯ ಪ್ರದರ್ಶಕ್ಕಿರುವ ಅವಕಾಶ. ಇಲ್ಲಿ ಆ ಅರ್ಹತೆ ಇಲ್ಲದವರಿಗೆ ಭಾಗವಹಿಸುವ ಹಕ್ಕಿಲ್ಲ ಎಂದು ಬಿಟ್ಟಿದ್ದರು. ಕರ್ಣ ತಲೆ ತಗ್ಗಿಸಿದ್ದ. ಆಗ ಇದೇ ನೀನೀಗ ಹೊಗಳುತ್ತಿರುವ ದುರ್ಯೋಧನ ಏನು ಮಾಡಿದ್ದ ನೆನಪಿದೆಯಾ? ಅಂಗ ರಾಜ್ಯವನ್ನೇ  ಕರ್ಣನ ಕೈಯಲ್ಲಿಟ್ಟು ಅವನನ್ನು ರಾಜನನ್ನಾಗಿಸಿದ. ಅದನ್ನು ಆ ಕೂಡಲೆ ಮಹಾರಾಜ ಖಂಡಿಸಬೇಕಿತ್ತಲ್ಲ.. ಆದರೆ ಹಾಗಾಗಲಿಲ್ಲ. ದೃತರಾಷ್ಟ ಯಾಕೆ ವಿರೋಧಿಸಲಿಲ್ಲ ಹೇಳು? ಅವನಿಗೆ ತನ್ನ ಕುವರರಿಂದ ತಮ್ಮನ ಮಕ್ಕಳು ಬಲಶಾಲಿಗಳಾಗುವುದು ಸಮ್ಮತವಿರಲಿಲ್ಲ.   ಅಲ್ಲಿ ನೀನು ಹೇಳಿದಂತೆ ಒಂದೇ ರಾಜ ಮನೆತನದ ಒಂದೇ ರಾಜಛತ್ರದ ಅಡಿಯಲ್ಲಿರುವ   ಕುವರರ ವಿದ್ಯಾಪ್ರದರ್ಶನ ತಾನೇ ಆಗುತ್ತಿದ್ದುದು. ಅಂದ ಮೇಲೆ ಯಾರು ವಿದ್ಯೆಯಲ್ಲಿ ಪ್ರಾವೀಣತೆಯನ್ನು ಪಡೆದಿದ್ದರೂ ಅದು ಕುಲಕ್ಕೆ ಹೆಮ್ಮೆಯ ವಿಷಯವೇ ತಾನೆ? ಹಾಗಿದ್ದಾಗ ತಮ್ಮವನನ್ನೇ ಕಡಿಮೆಯಾಗಿಸಲು ಪರಕೀಯನೊಬ್ಬನನ್ನು ಸಿಂಹಾಸನಕ್ಕೇರಿಸುವಂತಹ ಅಗತ್ಯವೇನಿತ್ತು? ಅಂದರೆ ಈ ಅಸೂಯೆಯ ಕಿಡಿ ಆಗಲೇ ಇತ್ತು ಕೌರವರಲ್ಲಿ ಎಂಬುದು ಜಾಹೀರಾದಂತೆ ಆಗಲಿಲ್ಲವೇ?" 
"ಹುಂ.. ಹೌದೇನೋ ಶ್ರಾವಸ್ತ.. ನಾನು ಅಷ್ಟು ಚಿಂತಿಸಲಿಲ್ಲ. ಆದರೂ  ಪಟ್ಟದರಸನ ಮಗ ಪಟ್ಟಾಭಿಕ್ತನಾಗುವುದೇ ಧರ್ಮವಲ್ಲವೇ? ಹಾಗಿದ್ದರೆ ದುರ್ಯೋಧನನೇ ಯುವರಾಜ. ಇನ್ನು ಮಹಾರಾಜನಾಗಬೇಕಾದವನು. ಅವನನ್ನು ಬಿಟ್ಟು ಯುಧಿಷ್ಟಿರನನ್ನು  ಯಾಕೆ ಪಟ್ಟಕ್ಕೆ ಕೂರಿಸುವ ಚಿಂತೆ?" 


"ನಂದಕ .. ಅದು ಹಾಗಲ್ಲ.  ಅರಸನಾಗಿ ಅಭಿಕ್ತನಾದವನು ಪಾಂಡು. ಅವನ ಅನುಪಸ್ಥಿತಿಯಲ್ಲಿ ರಾಜ್ಯಕ್ಕೊಂದು ರಾಜನ ಅವಶ್ಯಕತೆಗಾಗಿ ಅಷ್ಟೇ  ದೃತರಾಷ್ಟ್ರ ಪೀಠವನ್ನೇರಿದ್ದು. ಅವನು ಈಗಲೂ ರಾಜನೆಂಬ ಬಿರುದು ಬಿಟ್ಟರೆ ರಾಜ್ಯಭಾರ ಮಾಡಿದ್ದಿದೆಯೇ? ರಾಜ್ಯದ ಸಮಗ್ರ ಆಡಳಿತವಿರುವುದು ಭೀಷ್ಮಾಚಾರ್ಯರ ಕೈಯಲ್ಲೇ ಅಲ್ಲವೇ?  ದುರ್ಯೋಧನನ ಕೆಟ್ಟ ಬುದ್ಧಿ ಕುರುಡನಾದ ಮಹಾರಾಜರಿಗೆ ಕಾಣದಿದ್ದೀತು. ಕಣ್ಣಿದ್ದೂ ಕಣ್ಣು ಕಟ್ಟಿಕೊಂಡ ಗಾಂಧಾರಿ ರಾಣಿಗೆ ಕಾಣದಿದ್ದೀತು. ಆದರೆ ಅವನ ವ್ಯವಹಾರವನ್ನೆಲ್ಲಾ ಭೂತಗನ್ನಡಿಯಲ್ಲಿಟ್ಟು ಸೂಕ್ಷ್ಮವಾಗಿ ನೋಡುತ್ತಿರುವ ಭೀಷ್ಮಾಚಾರ್ಯರ ಕಣ್ಣಿಗೆ ಕಾಣದಿದ್ದೀತೇ? ಅವರು ದೃಷ್ಟಿ  ಇರುವುದು ಕೇವಲ ವರ್ತಮಾನಕ್ಕೆ ಮಾತ್ರ ಅಲ್ಲ. ಅದರಿಂದಾಚಿಗಿನ ಭವಿಷ್ಯವೂ ಅವರ ಮುದಿ ಕಣ್ಣುಗಳಿಗೆ ನಿಚ್ಚಳವಾಗಿ ಕಾಣುತ್ತಿದೆ. ದುಷ್ಟ ಬುದ್ಧಿಯ ದುರ್ಯೋಧನನಿಗೆ ಪಟ್ಟ ಕಟ್ಟುವುದೆಂದರೆ ಕುರುಕುಲದ ಕೊನೆಯನ್ನು ಈಗಲೇ ತಂದುಕೊಂಡಂತೆ ಎಂಬುದು ಅವರರಿವಿಗೂ ಬಂದಿರಬಹುದಲ್ಲವೇ?"

"ಶ್ರಾವಸ್ತ .. ಹಾಗೆ ಬಿಳಿಯದೆಲ್ಲಾ ಹಾಲಲ್ಲ ಬಿಡು. ಇದರಲ್ಲಿ ಆ ಕರಿಯ ಕೃಷ್ಣನ ಕರಾಮತ್ತು ಬಹಳವಿದೆ. ಯಾಕೆಂದರೆ ರಾಜ್ಯ ಕೌರವರ ಕೈಗೆ ಹೋದರೆ ಅವನ ಬೇಳೆಯೇನು ಇಲ್ಲಿ ಬೇಯುವುದಿಲ್ಲ. ಅದೇ ಅವನ ಪ್ರಿಯರಾದ, ಅವನ ಅತ್ತೆಯ ಮಕ್ಕಳಾದ ಕೌಂತೇಯರನ್ನಾದರೆ ಬೆರಳ ತುದಿಯಲ್ಲಿ ಕುಣಿಸಬಹುದು.  ಅದೂ ಈ ಹಿರಿಯರೆಂದು ತಲೆ ಹಣ್ಣಾಗಿಸಿಕೊಂಡ ಮಂದ ಕಣ್ಣಿನ  ಮುದುಕರಿಗೆ ಅವನ ನಯವಾದ ಮಾತುಗಳು ಮೋಡಿ ಮಾಡಿವೆ.  ನಮ್ಮಂತಹ ಯುವಕರಿಗೆ ಅವನ  ಮೋಸ ಕಾಣಿಸುತ್ತಿದೆ. ಅದನ್ನು ಹೇಳಹೊರಟರೆ ನಮ್ಮ ಸ್ವರಗಳು ಅವರ ಕಿವಿಗಳಿಗೆ ತಲುಪುವುದೇ ಇಲ್ಲ. ಆಕಸ್ಮಾತ್ ತಲುಪಿದರೂ ನಾವು ದುಷ್ಟರೆಂದೆನಿಸಿಕೊಳ್ಳುವುದಷ್ಟೇ ಆಗುವ ಲಾಭ.. ಇನ್ನು ಕೃಷ್ಣನೋ ಯುದ್ಧವಿಲ್ಲದೇ ಮಾತಿನಿಂದಲೇ ಸಕಲವನ್ನೂ ಗೆಲ್ಲಬಲ್ಲ ಜಾಣ.."

"ನಂದಕ ಅಷ್ಟು ಸುಲಭವಲ್ಲ ಈ ತಲೆ ನೆರೆತ ಹಿರಿಯರನ್ನು ಮೋಸಗೊಳಿಸುವುದು. ಅವರು ಹೊಗಳಿಕೆಗೋ, ಉಪಚಾರಕ್ಕೋ ಮರುಳಾಗಿ ಸೋಲುವವರಲ್ಲ. ಎಲ್ಲವನ್ನೂ ಪರೀಕ್ಷೆಗೊಡ್ಡಿಯೇ ಪಲಿತಾಂಶ ಪಡೆದುಕೊಳ್ಳುವವರು. ನೋಡೀಗ ಪಾಂಡವರ ಪತ್ನಿ ದ್ರುಪದನ ಮಗಳು.  ದ್ರುಪದ ದ್ರೋಣಾಚಾರ್ಯರಿಗೆ ಮಾಡಿದ ಮೋಸ. ಗುರು ದಕ್ಷಿಣೆಯಾಗಿ ಅರ್ಜುನಿಂದ ಪರಾಭವಗೊಂಡು ದ್ರೋಣಾಚಾರ್ಯನ ಕೃಪಾಭಿಕ್ಷೆಂದ ಜೀವದಾನ ಪಡೆದುಕೊಂಡವ. ಹಾಗೆಂದು ಅವನ ಮಗಳು ಕುರುಕುಲದ ಸೊಸೆಯಾದಾಗ ಈ ಹಿರಿಯರು  ಯಾರಾದರೂ ಅಲ್ಲಗಳೆದಿದ್ದಾರೆಯೇ? ದೂರೀಕರಿಸಿದ್ದಾರೆಯೇ? ಇಲ್ಲಾ ಏಕೆ ಹೇಳು. ಅವರಿಗೆ  ವಿಷಮವಿದ್ದುದು ಅವಳಪ್ಪನಲ್ಲಿ ಮಾತ್ರ. ಅದಕ್ಕೂ ಮಗಳಿಗೂ ಸಂಬಂಧವಿಲ್ಲ. ಅದೇ ನೋಡು ದುರ್ಯೋಧನನಿಗೆ ಕೋಪವಿರುವುದೋ, ಅಸೂಯೆರುವುದೋ ಪಾಂಡವರಲ್ಲಿ.  ಆದರೂ ದ್ರೌಪದಿಯನ್ನು ಅವಮಾನಿಸಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಇದೇ ನೀನು ಸ್ವಲ್ಪ ಆಗ ಹೇಳಿದೆಯಲ್ಲವೇ ಅವರಿಬ್ಬರೂ ಸಮಗ್ರ ಕುರುಕುಲದವರು ಎಂದು .. ಅದೇ ಕುರುಕುಲದ ಸೊಸೆಯನ್ನು ಅದೇ ಕುರುಕುಲದ ಮಗನೊಬ್ಬ ಅತ್ಯಾಚಾರಕ್ಕೆಳಸಿರುವುದು ತಪ್ಪಲ್ಲವೇ. ದುರ್ಯೋಧನಾದಿಗಳಿಗೆ ಬೇಕಾದುದೇನು ಗೊತ್ತೇ..? ಪಾಂಡವರು ಅವಮಾನಿತರಾಗಿ ತಾವಾಗಿ ತಾವೇ  ರಾಜ್ಯ ಬಿಟ್ಟು ಹೋಗುವಂತಹುದು. ಒಮ್ಮೆ ಜನ ಮಾನಸದಿಂದ ಅವರ  ಒಳ್ಳೆಯತನದ ನೆನಪು ಮಾಸಿ  ಮರೆಯಾದರೆ ಮತ್ತೆ ಎಲ್ಲಾ ಸುಲಭ. ಅನರ್ಹನಾದರೂ ದೃತರಾಷ್ಟ್ರ ರಾಜನಾಗಿದ್ದಾನಲ್ಲವೇ? ಹಾಗೆಯೇ ದುರ್ಯೋಧನನು ರಾಜನಾಗುತ್ತಾನೆ.  ಅವನು ನಡೆಸುವ ಕೆಟ್ಟ ಕೆಲಸಗಳ ಕುಮ್ಮಕ್ಕಿನಿಂದ ರಾಜ್ಯ ಅರಾಜಕವಾಗುತ್ತದೆ ಅಷ್ಟೇ.."

"ಅಯ್ಯೋ.. ಶ್ರಾವಸ್ತ ನೀನೀಗಾಗಲೇ ಎಲ್ಲಾ ನಡೆದೇ ಬಿಟ್ಟಿದೆಯೇನೋ ಎಂಬಂತೆ ಹೇಳುತ್ತಿರುವುದನ್ನು ಕಂಡರೆ ನಗೆ ಬರುತ್ತದೆ. ಜೊತೆಗೆ ನಿನ್ನ ಮಾತುಗಳೇ ಎಲ್ಲಾದರೂ ಸತ್ಯವಾಗಿಬಿಟ್ಟರೆ ಎಂಬ ಹೆದರಿಕೆಯೂ.." 

"ಇದು ನಡೆದು ಬಿಟ್ಟರೆ ಎನ್ನುವ ಮಾತಿಲ್ಲ ನಂದಕ.. ನಡೆದಾಗಿದೆ.. ಆ ಸತ್ಯವನ್ನು ನಾನೂ ನೀನೂ ಒಪ್ಪಿಕೊಳ್ಳಬೇಕಷ್ಟೇ. ಸತ್ಯವೆನ್ನುವುದು ಬೆಂಕಿಯ ಕೆಂಡ. ಎಲ್ಲಿ ಬಚ್ಚಿಟ್ಟರೂ ಸುಡದೇ ಬಿಡದು. ಅದೇ ನೀನೀಗ ಹೇಳಿದೆಯಲ್ಲಾ ದುರ್ಯೋಧನ ಅಂತಹವನಲ್ಲ.. ಅವನು ಪರಸತಿಯನ್ನು  ಅವಮಾನಕ್ಕೆಳಸಿದುದು ಕಟ್ಟು ಕಥೆ ಎಂದು. ಅದು ಸತ್ಯವೇ ಎನ್ನಲು ಇನ್ನೂ  ಆಧಾರವಿದೆ ನನ್ನಲ್ಲಿ. ಮೊನ್ನೆ ಪಾಂಡವರೈವರು ಸುವರ್ಣಲೇಪಿತ ರಥಗಳಲ್ಲಿ ಬಂದಿದಿಳಿದ್ದಲ್ಲವೇ? ಅದರ ಸಾರಥಿಗಳು ರಥದಲ್ಲೆ ಕುಳಿತು ಮಾಡುವುದೇನು ಎಂದು ಊರು ಸುತ್ತುತ್ತಿದ್ದರು. ಊರು ಸುತ್ತುವುದೆಂದರೆ ಗಣಿಕೆಯರ ಮನೆಯನ್ನು ಹುಡುಕುವುದೇ ಅಲ್ಲವೇ? ಅವರೂ ನುಗ್ಗಿದ್ದು  ಸೋಮಲತೆಯ ಮನೆಗೆ. ಅವಳು ಅಲ್ಲಿರದೇ ಅರಮನೆಗೆ ಹೋಗಿದ್ದ ಕಾರಣ ಮನೆಯ  ಹೊರಗಿನ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದರಂತೆ. ಆಗ ದುರ್ಯೋಧನನ ಸೈನಿಕರು ಬಂದು ಅವರನ್ನು ಹೆಡೆಮುರಿಕಟ್ಟಿ ಎಳೆದೊಯ್ದರಂತೆ. ಸೋಮಲತೆಯ ವೃದ್ದಮಾತೆ ಇದನ್ನೆಲ್ಲಾ ಹೇಳಿದಳು. ಯಾಕೆ ಅವರನ್ನು ಒಯ್ದರು ಬಲ್ಲೆಯಾ?  ಪಾಂಡವರು ಮತ್ತೆ ರಥಗಳ ಮೇಲೆ ಕುಳಿತು ತಮ್ಮ ರಾಜ್ಯಕ್ಕೆ ಹೋಗುವುದಿಲ್ಲ ಎಂಬುದು ಮೊದಲೆ ನಿಶ್ಚೈಸಲ್ಪಟ್ಟಿತ್ತು . ಶಕುನಿಯ ಹಂಚಿಕೆ ಇದ್ದುದು ಕೇವಲ ಮೋಸದ ದ್ಯೂತದಾಟದಲ್ಲಿ ಮಾತ್ರ ಅವರ ಸೋಲಲ್ಲ.. ಅವರ ಒಳಗೆ ಮತ್ತೆಂದೂ ಗೆಲುವಿನ ಮೊಳಕೆಯೇ ಏಳಬಾರದು, ಅವರು ಸೋತು ಕಾಡು ಸೇರಬೇಕು, ರಾಜಕುವರಿ ದ್ರೌಪದಿ ತಮ್ಮ  ತೊತ್ತಾಗಿ ಅಂತಃಪುರದಲ್ಲಿರಬೇಕು ಎಂಬುದೇ ಅವರ ಆಸೆಯಾಗಿತ್ತು. ಇನ್ನೂ ಒಂದು ಗೌಪ್ಯ ಸಂಗತಿಯೂ ನನಗೆ ತಿಳಿದಿದೆ ಕೇಳು. ಹೆಂಗಳೆಯರಿಗೆ ಅಲಂಕಾರ ಎಂದರೆ ಅತಿ ಪ್ರಿಯ ಎಂದು ನೀನೂ ಒಪ್ಪುತ್ತೀಯಾ ತಾನೇ?  ಅದೂ ಪಾಂಡವರೈವರ  ಮಡದಿ ಎಂದ ಮೇಲೆ ಅಲಂಕಾರ ಇಲ್ಲದೇ ಹೊರಗಡಿಟ್ಟಾಳೇ?   ಮೊನ್ನೆ ಅವರು ಮರಳಿ ರಥವೇರುವಾಗ ಅವಳು ಬಿಚ್ಚಿದ ಮುಡಿಯಲ್ಲಿದ್ದಳಂತೆ. ಅವಳ ಮುಡಿಯೆಳೆದು ತುಂಬಿದ ಸಭೆಗೆ ತಂದ  ದುಶ್ಯಾಸನನ ಕರುಳು ಬಗೆದು ಆ ನೆತ್ತರನ್ನು  ಎಣ್ಣೆಯಾಗಿಸಿಯೇ  ಅವಳು ಮುಡಿ ಕಟ್ಟುವುದಂತೆ.  ಈಗ ಹೇಳು ಆ ಹೆಣ್ಣುಮಗಳದ್ದೇನು ತಪ್ಪು. ಈ ಕುಲದ ಸೊಸೆಯಾಗಿ ಬಂದದ್ದೇ?  ಎಲ್ಲರೂ ಒಂದೇ ಕುಲದ ಅಡಿಯಲ್ಲಿ ಬರುವಾಗ ಒಬ್ಬನ ಸೋಲು ಇನ್ನೊಬ್ಬನ ಸೋಲು ಆಗುವುದಿಲ್ಲವೇ? ಅವಮಾನ ಎನ್ನುವುದು ವ್ಯಕ್ತಿಯೊಬ್ಬನ  ವೈಯುಕ್ತಿಕ ನೆಲೆಯಲ್ಲಿ ಆಗದೇ ಇಡೀ ಸಮೂಹವೇ ಅದನ್ನು ಅನುಭವಿಸುವುದಿಲ್ಲವೇ? ಕುರುಕುಲದ ರಾಜಭವನದಲ್ಲಿ ಹೀಗೆ ನಡೆಯಿತಂತೆ ಎಂದರೆ ಅದು ಕೇವಲ ದ್ರೌಪದಿಯೊಬ್ಬಳ ಅವಮಾನ ಮಾತ್ರವೇ ಅಲ್ಲವಲ್ಲ.." 

"ಹೌದು ಶ್ರಾವಸ್ತ. ನಾನೇನೋ ಆಗ ಚಿಕ್ಕಪ್ಪ ಆಹುಕ ಏನೂ ಹೇಳಲಿಲ್ಲವೆಂಬುದರಿಂದ ಅಲ್ಲೇನೂ ನಡೆದಿಲ್ಲ ಎಂದೇ ಅಂದುಕೊಂಡೆ. ಆದರೀಗ ತಿಳಿಯುತ್ತದೆ ಅವನ ಮೌನದ ಹಿಂದೆ ಇದ್ದುದು ಕುರುಕುಲದ ಮಾನ ಹೋಗಬಾರದೆನ್ನುವ ಕಳಕಳಿ. ಅವನ ಮೌನದ ಹಿಂದೆ  ಇದ್ದುದು ಒಂದು ಒಳ್ಳೆಯದಲ್ಲದ ನಡೆ ಮುಂದಿನ ಜನಾಂಗಕ್ಕೆ ತಿಳಿಯಬಾರದ ಕಾಳಜಿ. ಅಥವಾ ಅವನ ಮೌನದ  ಹಿಂದೆ  ಇದ್ದುದು ಭಯದ ಹೊದಿಕೆ..  ಆದರೆ ಇಂತಹ ಮೌನವೂ ಹೇಗೆ ಘಾಸಿಮಾಡುತ್ತದೆ ನೋಡು.. ಒಂದೇ ಮೊಗ ಹೊಂದಿದ ಸತ್ಯಕ್ಕೆ ಇನ್ನೊಂದು  ಮುಖವಾಡವನ್ನೇರಿಸುತ್ತದೆ.  ಅದು ಸುಳ್ಳೇ ಆಗಿರಬೇಕೆಂದೇನೂ ಇಲ್ಲ.. ಸತ್ಯವಲ್ಲ ಅಷ್ಟೇ..  ಒಂದು ನಾವು ನಂಬಿದ ಸತ್ಯ ಇನ್ನೊಂದು ನಾವು ನಂಬಲು ಸಾಧ್ಯವಿಲ್ಲದ ಸತ್ಯ.  ಈ ರಾಜ್ಯದ, ರಾಜಕಾರಣದ ಒಳ ಮರ್ಮವನ್ನು ನಾವು ತಿಳಿದಿರುವೆವೇ? ನಾವು ಜನ ಸಾಮಾನ್ಯರು. ನಮ್ಮದೋ ಮೂರು ಹೊತ್ತಿನ ಹೊಟ್ಟೆಯ ಚಿಂತೆಯಷ್ಟೇ ಇರುವ ಬದುಕು. ಇದು ಹಾಗಲ್ಲ. ಹೊಟ್ಟೆ ತುಂಬಿದವರ ಬದುಕು. ಹೊರಗಿನಿಂದ ನೋಡಿದರೆ ಎಲ್ಲಾ ಇದೆ. ಉಂಡುಟ್ಟು ನಗು ನಗುತ್ತಲೇ ಸುಖವಾಗಿ ಜೀವನ ಕಳೆಯಬಹುದಾದದ್ದು. ನಮ್ಮ ಆಶೆಗಳೂ ಅಂತಹ ಬದುಕನ್ನು ಪಡೆಯುವುದರತ್ತಲೇ ಇರುತ್ತವೆ ಅಲ್ಲವೇ.. ಆದರೀ ರಾಜಕಾರಣ ನೋಡು. ಇದು ನಮಗರ್ಥವಾಗುದು ಅಷ್ಟರಲ್ಲೇ ಇದೆ.ಇಲ್ಲಿ ಬಂಧಗಳಿಲ್ಲ, ಬೇಡಿಗಳಿಲ್ಲದೇ  ಬಂಧನಗಳಿವೆ.  ನಮಗೇಕೆ ದೊಡ್ಡವರ ಸುದ್ದಿ ಎಂದು ಸುಮ್ಮನಿದ್ದುಬಿಡಬಹುದೇ.. ಇರಬಹುದೇನೋ.. ನಮ್ಮ ಪಾಡಿಗೆ ನಮ್ಮನ್ನು ಇರಗೊಟ್ಟರೆ. ಹಾಗಾಗುವುದು ಸಾಧ್ಯವೇ ಇಲ್ಲದ ಸಂಗತಿ ಅಲ್ಲವೇ.. ಯಾಕೆಂದರೆ ಒಮ್ಮೆ ಪಂಗಡಗಳಾಯಿತು ಎಂದರೆ ಜನಬಲದ ಅವಶ್ಯಕತೆ ಬಿದ್ದೇ ಬೀಳುತ್ತದೆ. ಜನಬಲಗಳು ಎರಡೂ  ಕಡೆಯಲ್ಲಿ ಸೇರ್ಪಡೆಗೊಂಡರೆ ಅಭಿಪ್ರಾಯ ಬೇಧಗಳಿಂದ ಸಂಘರ್ಷವಾಗುವುದು ಕೂಡಾ ನಿಶ್ಚಿತವೇ.. ಯುದ್ಧವೆಂದಾದರೆ  ಈಗ ಗೆಳೆಯರಾಗಿರುವ ನೀನೂ ನಾನೂ ವಿರುದ್ಧ ದಿಕ್ಕಿನಲ್ಲಿ ನಿಂತು ಕತ್ತಿ ಹಿರಿಯುತ್ತೇವೆ. ಬಾಣಗಳಿಂದ ಘಾಸಿಗೊಳಿಸುತ್ತೇವೆ.  ನಮ್ಮ ಸಂಖ್ಯೆ ಕಡಿಮೆಯಾದಷ್ಟೂ ರಾಜನ ಸೋಲಷ್ಟೇ.. ಆದರೆ ರಾಜನ ಗೆಲುವಿನಲ್ಲಿ ನಮಗೇನೂ ಪಾಲಿಲ್ಲ.."

"ಅದೇನೋ ನಿಜ ಗೆಳೆಯಾ.. ಆದರೆ ಒಂದು ವೇಳೆ ಯುದ್ಧವೇ ಆಗುವುದಾದಲ್ಲಿ ನಾವ್ಯಾಕೆ ನ್ಯಾಯ ಯಾವುದು ಎನ್ನುವ ಕಡೆಗೇ ಹೋಗಬಾರದು?  ನಮ್ಮ ಹೊಟ್ಟೆಯ ಚಿಂತೆಯನ್ನು ನಾವೇ ನಿವಾರಿಸಿಕೊಳ್ಳುವವರಾಗಿರುವ ಕಾರಣ ಯಾವ ಅನ್ನದ ಋಣ ನಮ್ಮನ್ನು ಅನ್ಯಾಯದೆಡೆಗೇ ನಿಲ್ಲಲು ಪ್ರೇರೇಪಿಸೀತು?  ನಮ್ಮಂತೆ ರಕ್ತ ಮಾಂಸಗಳಿಂದ ಕೂಡಿದ ನಮ್ಮಂತೆಯೇ ಕಾಮಕ್ರೋಧಾದಿಗಳನ್ನು ಮೋಹಿಸುವ ರಾಜನನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸುವ ಹುಚ್ಚಾಟವೇಕೆ? ಅದರ   ಬದಲು ಪ್ರಪಂಚದ ನಿಯಾಮಕನನ್ನೇ ನಂಬಿದರೇ ಒಳಿತಲ್ಲವೇ.   ಆತ ನಾವು ಸತ್ಯದ ಕಡೆಗೇ ನಿಂತರೆ ಹೆಚ್ಚು ಸಂತಸ ಪಡಲಾರನೇ?" 

"ಹೌದು ಶ್ರಾವಸ್ತ .. ನಮ್ಮ ನೆರಳು ನಮಗೇ ಕಾಣದಂತಹ ಹೊತ್ತಿದು.    ನನಗಿನ್ನೂ ಸತ್ಯವನ್ನು ಒರೆ ಹಚ್ಚಲಿದೆ.  ನಾನು ಕಂಡುಕೊಳ್ಳುವ ಸತ್ಯ ನಿನ್ನ ಸತ್ಯದೊಂದಿಗೆ ಸಮೀಕರಿಸುತ್ತದೆ ಎಂದಾದರೆ ಯುದ್ಧಭೂಮಿಯಲ್ಲಿ ನಾವಿಬ್ಬರೂ ಒಂದೇ ವೈರಿಯನ್ನು ಎದುರಿಸುತ್ತೇವೆ.  ಈ ಮಾತಿನಲ್ಲಿ ಎಳ್ಳಿನಿತೂ ವ್ಯತ್ಯಾಸವಿಲ್ಲ... ಅರೆರೇ..  ಮಾತಿನಲ್ಲಿ ಹೊತ್ತು ಹೋಗಿದ್ದೇ ತಿಳಿಯಲಿಲ್ಲ ನೋಡು.. ಕತ್ತಲೇರುತ್ತಿದೆ.. ಮನೆಯ ಕಡೆಗೆ ಬರುವೆಯಾದರೆ ಬಾ.. ಉಂಡು ಹೋಗಬಹುದು.. ನಿಂತೂ ನಿಂತೂ ಕಾಲುಗಳು ಆಯಾಸಗೊಂಡಿವೆ.." 

"ಇಲ್ಲ ನಂದಕ..  ನಾನೂ ನನ್ನ  ಮನೆಯ ಕಡೆಗೆ ಅವಸರವಾಗಿಯೇ ನಡೆಯಬೇಕು.. ಹೇಳಲು ನಿನ್ನಲ್ಲೇನಿದೆ ಮುಚ್ಚುಮರೆ ..  ನಿನ್ನೆ ಇಡೀ ದಿನ ಗಣಿಕೆಯರ ಸಂಗದಲ್ಲಿ   ಹೊತ್ತು ಕಳೆದದ್ದರಿಂದ  ಮನೆಯೊಳಗೆ ಮುನಿಸಿಕೊಂಡಿರುವ ಮಡದಿಯನ್ನು ಸಲ್ಲಾಪಕ್ಕೆಳೆದು ಸಮಾಧಾನಿಸಬೇಕು.. ಬರುತ್ತೇನೆ ಗೆಳೆಯಾ.. ಇನ್ನೊಮ್ಮೆ.."


--