Pages

Total Visitors

Tuesday, December 17, 2013

ವೃತ್ತಿಧರ್ಮದೂರದಲ್ಲಿದ್ದ  ಗೆಳೆಯರನ್ನು ಕಂಡು ಓಡುತ್ತಾ  ಅವರನ್ನು ಸಮೀಪಿಸಿದ . ಏದುಸಿರು ಬಿಡುತ್ತಾ ಹತ್ತಿರ ಬಂದವನನ್ನು ಕಂಡು ಅವರು ಬೆಚ್ಚಿದರು. 

 ' ಈ ಅವತಾರದಲ್ಲಿ ನಮ್ಮ ಜೊತೆ ಬಂದು ನಮ್ಮ ಮರ್ಯಾದೆ  ಕಳೀತೀಯಾ .. ಹೋಗು ಮೊದಲು  ಈ ಧರಿದ್ರ  ಅಂಗಿ ಚಡ್ಡಿ ಬದಲಾಯಿಸಿ ಬಾ. ನೀನು  ಬರೋವರೆಗೂ ಇಲ್ಲಿಯೇ ನಿಂತಿರ್ತೀವಿ ಬೇಗ ಹೋಗು " ಎಂದು ಅವನನ್ನು ದೂಡಿ ಹಿಂದಕ್ಕೆ ಕಳುಹಿಸಿದರವರು. 

ತಲೆ ತಗ್ಗಿಸಿ ಮರಳಿ ಬಂದ  ಅವನು, ತಾನು ಹಾಕಿದ ಹೊಸತರಂತೆ ತೋರುವ ಅಂಗಿ ಚಡ್ಡಿಗಳನ್ನು ಕಳಚಿ  ಕೊಳೆಯಾದ , ಅಲ್ಲಲ್ಲಿ ಹರಿದು ತೇಪೆ ಹಾಕಿದ ಅಂಗಿ ಚಡ್ಡಿಗಳನ್ನು ಸಿಕ್ಕಿಸಿಕೊಂಡು  ಭಿಕ್ಷೆ  ಬೇಡಲು ಹೊರಟಿದ್ದ  ಗೆಳೆಯರ ಗುಂಪು ಸೇರಿಕೊಳ್ಳಲು ಹೊರಟ .

Thursday, December 5, 2013

ಶಿವು


ಅದೊಂದು ಸುಂದರ ಕಡಲ ತೀರ. ಸಂಜೆಯ ಹೊತ್ತು. ಮುಳುಗುವ ಸೂರ್ಯನ ಕೆಂಬಣ್ಣ ಮರಳ ಮೇಲೂ ರಾಚಿ ಇಡೀ ತೀರ ಬಂಗಾರದಲ್ಲಿ ಅದ್ದಿ ತೆಗೆದಂತೆ ಕಾಣಿಸುತ್ತಿತ್ತು. ಪುಟ್ಟ ಬಂಡೆಯ ಮೇಲೆ ಕಾಲು ಚಾಚಿ ಕುಳಿತಿದ್ದ ಅವನು ಪ್ಯಾಂಟಿಗೆ ಅಂಟಿದ ಮರಳನ್ನು ಕೊಡವುತ್ತಾ ಏಳಲು ಹೊರಟ. ಆಗಲೇ ಅವನ ಕಣ್ಣಿಗೆ ತನ್ನಿಂದ ಸ್ವಲ್ಪ ದೂರದಲ್ಲಿ ತನ್ನಂತೆ ಎದ್ದು ನಿಂತು ಸೀರೆ ಕೊಡವುತ್ತಿದ್ದ ಅವಳು ಕಣ್ಣಿಗೆ ಬಿದ್ದಿದ್ದು.  ಇಷ್ಟು ಹೊತ್ತಿನಿಂದ ಇಲ್ಲಿಯೇ ಕುಳಿತಿದ್ದರೂ ಕಾಣದ ಈಕೆ ಯಾವ ಮಾಯಕದಲ್ಲಿ ಈಗೆದ್ದು ನಿಂತಿದ್ದಾಳೆ ಎನ್ನಿಸಿ ಅಚ್ಚರಿಯಾಯಿತವನಿಗೆ. ಆದೇ ಕುತೂಹಲದಲ್ಲಿ ಮತ್ತೊಮ್ಮೆ ಅವಳತ್ತಲೇ ಕಣ್ಣು ಹಾಯಿಸಿದ. ಅವಳೂ ಇವನನ್ನೇ ನೋಡುತ್ತಿದ್ದಳು. ಅವಳ ಮೊಗದಲ್ಲಿ ಪರಿಚಿತ ಭಾವ. ಇವನ ಹತ್ತಿರಕ್ಕೆ ಹೆಜ್ಜೆ ಇಡುತ್ತಾ ಬಂದಳು. ' ಬನ್ನಿ ಶಿವು ಮನೆಗೆ ಹೋಗೋಣ..' ಎಂದಳು. 

'ಕ್ಷಮಿಸಿ.. ನನ್ನ ಹೆಸರು ಹರಿ ಕುಮಾರ್' ಎಂದ.

ಅವಳು   'ಸರಿ ಹಾಗಿದ್ರೆ ನಾನು ಹೋಗ್ತೀನಿ' ಎಂದಳು. ಅವಳ ಮೊಗದಲ್ಲಿ ಬೇಸರವೂ, ಕಣ್ಣಂಚಿನಲ್ಲಿ ನೀರು ಕಾಣಿಸಿದಂತೆನಿಸಿ ಅವನಿಗೂ ಬೇಸರವೆನಿಸಿತು. 'ಪಾಪ ಅವಳ ಶಿವು ಕೂಡಾ ನನ್ನಂತೆ ಇದ್ದನೇನೋ.. ಒಂದು ಕ್ಷಣ ನಾನು ಶಿವು ಅಂತ ಒಪ್ಪಿಕೊಂಡರೆ ಅವಳ ಮೊಗದಲ್ಲಿ ನಗು ಕಂಡೀತೇನೋ'.. ಎಂದುಕೊಂಡ. 

ತನ್ನಿಂದ ಮುಂದೆ ಹೆಜ್ಜೆ ಹಾಕುತ್ತಿದ್ದ ಅವಳನ್ನುದ್ದೇಶಿಸಿ.. ' ನೋಡಿ ನಾನೇ ಶಿವು .. ಆಗ ಸುಮ್ಮನೆ ಸುಳ್ಳು ಹೇಳಿದೆ .. ನೀವು ಬೇಸರ ಮಾಡ್ಕೋಬೇಡಿ' ಎಂದ. 

ಅವಳ ಮೊಗದಲ್ಲಿ ಅಪನಂಬಿಕೆಯ ನೆರಳು..'ಇನ್ನೊಮ್ಮೆ ಹೇಳಿ.. ನಿಜವಾಗಿಯೂ ನೀವು ಈ ಮಾತನ್ನು ಹೇಳ್ತಾ ಇದ್ದೀರಾ' ಎಂದಳು. 

ಅವನಿಗೀಗ ಇಬ್ಬಂದಿತನ ಕಾಡಿತು.  ಶಿವು ಎಂದು ಒಪ್ಪಿಕೊಂಡರೆ ಅವಳಿಗೆ ಸಂತಸವೆನಿಸುತ್ತದೆ.. ಅಲ್ಲ ಎಂದರೆ ಅವಳ ಮ್ಲಾನ ಮುಖ ನೋಡಬೇಕು.. ಎರಡರಿಂದಲೂ ಅವನಿಗೆ  ಏನೂ ತೊಂದರೆ ಇರಲಿಲ್ಲ..ಆದರೂ ಯಾಕೋ ಆ ಮುಖವನ್ನು ಅಳಿಸುವುದಕ್ಕವನಿಗೆ ಮನಸ್ಸು ಬರಲಿಲ್ಲ. 'ಹೌದು ನಾನೇ ಶಿವು' ಎಂದ ನಿರ್ಧಾರದ ಧ್ವನಿಯಲ್ಲಿ.. 

ಅವಳು ಅವನ ಕೈ ಹಿಡಿದಳು.. ಅವನ ಕೈಯೂ ಅವಳ ಕೈಯೊಳಗೆ ಸೇರಿತು.ಅವಳು ನಗುತ್ತಾ ಅವನೊಡನೆ ಹೆಜ್ಜೆ ಹಾಕಿದಳು.

ರೂಮಿನ ಒಳಗೆ ಬರುತ್ತಿದ್ದಂತೆ ತನ್ನ ಕೈಯನ್ನು ಬಿಗಿಯಾಗಿ ಹಿಡಿದಿದ್ದ ಅವನ ಕೈಯನ್ನು ಸಡಿಲಿಸಿ ಅವನನ್ನು ಮಂಚದ ಮೇಲೆ ಕೂರಿಸಿ 'ಈಗ ಬಂದೆ' ಎಂದು ಹೊರ ಹೋದಳು. ಅವನು ಕುತೂಹಲದಿಂದ ಮುಂದಾಗುವುದನ್ನು ಕಾಯುತ್ತಿದ್ದ. 

ಒಂದು ಕೈಯಲ್ಲಿ ತುಂಬಿದ ಹಾಲಿನ ಲೋಟ  ಹಿಡಿದು  ಬಂದು  ಅವನನ್ನೆಬ್ಬಿಸಿದಳು. 'ನೋಡಿ ಶಿವು..ನೀವು ತುಂಬಾ ಒಳ್ಳೆಯವರು.. ನನ್ನ ಮಾತು ಕೇಳ್ತೀರಲ್ವಾ.. ಈಗ ಈ ಹಾಲು ಕುಡಿಯಿರಿ ಎಂದಳು. ಅವನು ಕುಡಿದು ಕೊಟ್ಟ ಖಾಲಿ ಲೋಟವನ್ನು ಪಕ್ಕಕ್ಕಿಟ್ಟು ಅವನನ್ನು ಮಂಚದ ಮೇಲೆ ಮಲಗುವಂತೆ ಹೇಳಿ ಕುತ್ತಿಗೆಯವರೆಗೆ ಹೊದಿಕೆ ಹಾಕಿ ಕೆನ್ನೆ ತಟ್ಟಿ 'ಗುಡ್ ಬಾಯ್ ಶಿವು' ಎಂದು ತುಂಟ ನಗೆ ನಕ್ಕು ಹೊರ ಹೋದಳು. 

ಸ್ವಲ್ಪ ಹೊತ್ತಿನ ನಂತರ ಅವಳು ತನ್ನ ಪಕ್ಕ ಕುಳಿತ ಇನ್ನೊಬ್ಬ ನರ್ಸ್ ಹತ್ತಿರ ಹೇಳುತ್ತಿದ್ದಳು. 'ಆ ರೂಮಿನ ಪೇಷಂಟಿಗೆ ಈಗ ನಿಧಾನಕ್ಕೆ ಜ್ಞಾಪಕ  ಶಕ್ತಿ ಮರಳುತ್ತಿದೆ ಅನ್ನಿಸುತ್ತೆ. ಇವತ್ತು ವಾಕಿಂಗ್ ಮಾಡಿಸಿ ಬರುವಾಗ  ಅವನು  'ನಾನೇ  ಶಿವು'ಅಂತ ಒಪ್ಪಿಕೊಂಡ..'

Thursday, November 28, 2013

ವೃಕ್ಷ ಮಾತೆ
ಹಸಿರೊಡಲಿನ ಬಸಿರೇ 
ಇಳೆಯ ದೇಹದುಸಿರೇ 
ನೆಲದೊಲುಮೆಯ ಚೇತನವೇ
ಅರಳಿ ನಿಂತ ಸುಮವೇ

ತಂಗಾಳಿಯ ಜೋಕಾಲಿಯ 
ಹಾರಾಡುವ ಬಾನಾಡಿಯ
ಕ್ಷಣ ತಡೆದು ನಿಲ್ಲಿಸಿ
ನೆರಳ ಕೊಟ್ಟು ಲಾಲಿಸಿ

ಭೂರಮೆಯ ವಿಸ್ಮಯವೋ
ನೆಲ ಜಲದ ಪ್ರಣಯವೋ
ಕೊಂಬೆ ಕೊಂಬೆಯಲ್ಲು ಕೆಂಪು
ಪಸರಿಸಿದ ಹೂವ ಕಂಪು

ಪ್ರಕೃತಿಯ ಗಡಿಯಾರವ
ತಿರುಗಿಸುವವರ್ಯಾರವ್ವ
ಪರ್ವ ಮಾಸ ವರ್ಷಕಾಲ
ನಿಲ್ಲದೆ ನಡೆವುದೀ ಜಾಲ

ಹೊತ್ತ ತನ್ನದೆಲ್ಲವ
ಪರರಿಗಿತ್ತು ಸಲಹುವ
ತಾಯೇ ನಿನ್ನ  ಮಮತೆಗೆ
ಕೊಡಲೇನಿದೆ  ಬದಲಿಗೆ ..

Tuesday, November 19, 2013

ಶ್ವಾನ ಕಲಿಸಿದ ಭಾಷೆ


ದೂರದ ಕಾಲೇಜು ಎಂದ ಮೇಲೆ ಉಳಿದುಕೊಳ್ಳಲು ವ್ಯವಸ್ಥೆ ಬೇಡವೇ..?ನನ್ನ ಲಗೇಜ್ ಸಮೇತ ಬಂದಿಳಿದದ್ದು ಮೆಸ್ ಗೆ. ಹೆಸರಾಂತ ಕಾಲೇಜ್ ಆದ ಕಾರಣ ಅದರ ಸುತ್ತ ಮುತ್ತಲಿದ್ದ ಮನೆಯವರಿಗೆ ಇದೊಂದು ಲಾಭದಾಯಕ ಉದ್ಯೋಗವೇ ಆಗಿತ್ತು. ಮನೆಯಂತೆಯೇ ಇದ್ದ ಮೆಸ್  ಜೈಲಿನ ಸೆಲ್ಲುಗಳಂತಹ ಹಾಸ್ಟೆಲ್ ರೂಮುಗಳನ್ನು ನೆನಪಿಸುತ್ತಿರಲಿಲ್ಲ. ಹಾಸ್ಟೆಲ್ಲಿನ ಎಲ್ಲಾ ಸವಲತ್ತುಗಳನ್ನು ಹೊಂದಿದ್ದರೂ, ಅಲ್ಲಿನಂತೆ ವಾರ್ಡನ್ ನ ಹೆದರಿಕೆ ಇರಲಿಲ್ಲ.ಮೆಸ್ಸಿನಲ್ಲಿದ್ದವರನ್ನು  ಮೇಡಂ ಎನ್ನದೆ ಆಂಟೀ ಎಂದು ಕರೆದು ಪೂಸಿ ಹೊಡೆಯುವ ಸೌಭಾಗ್ಯವನ್ನು ಹೊಂದಿದ್ದೆವು.
ಹುಡುಗಿಯರ ಮೆಸ್ ಎಂದ ಮೇಲೆ ಕೇಳಬೇಕೆ.. ಸದಾ ಮಾತು ಮಾತು ಮಾತು..ಎಂದೂ ಮುಗಿಯದ ಮಾತಿನ ಪ್ರಪಂಚ ನಮ್ಮದು. ಆಗೆಲ್ಲ ಆಂಟೀ ತಾಳುವಷ್ಟು ತಾಳಿ ನಂತರ ಬಯ್ಯುತ್ತಿದ್ದರು. ' ನೀವೆಂತ ಕಾಲೇಜಿಗೆ ಸೇರಿದ್ದು ಮಾತಾಡ್ಲಿಕ್ಕಾ.. ನಿಮ್ಮ ಪುಸ್ತಕಕ್ಕೆಲ್ಲ ಫಂಗಸ್ ಬಂದಿದೆ ನೋಡಿ. ನನ್ನ ಗ್ರಾಚಾರಕ್ಕೆ ನೀವು ಫೈಲ್ ಆದ್ರೆ ಬರುವ ವರ್ಷ ಒಂದಾದ್ರು ಮಕ್ಕಳು ನನ್ನ ಮನೆಗೆ ಬರ್ಲಿಕ್ಕುಂಟಾ.. ನೀವು  ಹೀಗೆ  ಮಾಡಿದ್ರೆ ನಾನು ಉಪವಾಸ ಬೀಳ್ಬೇಕಷ್ಟೆ.. ನನ್ನ ಕರ್ಮ ನೀವು ಒಳ್ಳೇ ಮಕ್ಕಳು ಅಂತಲ್ವಾ ನಾನು ಸೇರಿಸಿಕೊಂಡದ್ದು.. ನೀವು  ಹೀಗೆ  ಮಾತಾಡುವುದಾ..' ಎಂದು ತಮ್ಮ ಭಯವನ್ನು ಹೊರ ಹಾಕಿ ನಮ್ಮನ್ನೂ ಹೆದರಿಸುತ್ತಿದ್ದರು.
ಒಂದೆರಡು ದಿನ ಇಂಟೆನ್ಸಿವ್ ಕೇರ್ ನಲ್ಲಿರುವ ಪೇಶಂಟಿನಷ್ಟು ಸೀರಿಯಸ್ಸು ಮುಖ ಹೊತ್ತು ಪುಸ್ತಕದೊಳಗೆ ಮುಳುಗುತ್ತಿದ್ದೆವು. ಮತ್ತೆ ನಾಯಿ ಬಾಲ ಡೊಂಕಾಗುತ್ತಿತ್ತು.ನಮ್ಮ ಈ ದಿನಚರಿಗೆ  ಇನ್ನಷ್ಟು ರಂಗು  ಬಂದಿದ್ದು ಹೊಸ ಹುಡುಗಿಯೊಬ್ಬಳು ಬೊಂಬಾಯಿಯಿಂದ ಎಂಟ್ರಿ ಕೊಟ್ಟಾಗ.

ಆದಿತ್ಯವಾರದ ರಜಾ ದಿನವದು.ಎಂದಿನಂತೆ ಓದುವ ನೆಪದಲ್ಲಿ ಪಿಸಿ ಪಿಸಿ ಹರಟುತ್ತಿದ್ದೆವು. ಹೊರಗಿನ ಬಾಗಿಲು ಬಡಿಯಿತು . ಬಾಗಿಲ ಪಕ್ಕದಲ್ಲೇ ಕುಳಿತಿದ್ದ ನಾನು ಅಂದಿನ ಓದಿಗೆ ಆದ ಸುಖಾಂತದಿಂದಾಗಿ ಸಂತೋಷದಿಂದ ಎದ್ದು ಬಾಗಿಲು ತೆರೆದೆ.ಹೊರಗೆ ಒಬ್ಬಳು ನಮ್ಮದೇ ವಯಸ್ಸಿನ ಹುಡುಗಿ, ಅವಳ ಜೊತೆಯಲ್ಲಿ ಅವಳ ಅಪ್ಪ ಅಮ್ಮ ಆಗಿರಬಹುದು ಎಂದು ನಾನಂದುಕೊಂಡ ಮತ್ತಿಬ್ಬರು ನಡು ವಯಸ್ಕರು. ಅವರು ಹಿಂದಿಯಲ್ಲಿ 'ಮಾಜೀ ಹೆ ಕ್ಯಾ.. ?' ಎಂದರು. ಹಿಂದಿಯನ್ನು  ಹೈಸ್ಕೂಲಿನಲ್ಲಿರುವಾಗ ಬಾಯಿ  ಪಾಠ ಮಾಡಿ ಹೇಗೋ ಕಷ್ಟಪಟ್ಟು ಫಸ್ಟ್ ಕ್ಲಾಸಿನ ಹೊಸಿಲೊಳಗೆ ಬಲವಂತವಾಗಿ ಅದನ್ನೆಳೆದು ತಂದ ಸಾಹಸಿ ನಾನು. ಕಸ್ತೂರಿ ಕನ್ನಡ ಮಾತ್ರ ಮಾತನಾಡುತ್ತಿದ್ದ ನನಗೆ  ,ಹಿಂದಿಯಲ್ಲಿ  ಮಾತನಾಡುವುದೆಂದರೆ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆಯೇ ಸರಿ.ಸಹಾಯಕ್ಕಾಗಿ ಗೆಳತಿಯರ ಮುಖ ನೋಡಿದರೆ ಸರಿ ಸುಮಾರು ನನ್ನಷ್ಟೇ ಭಾಷಾಪಾಂಡಿತ್ಯ ಹೊಂದಿದ ಅವರು ಪುಸ್ತಕದೊಳಗೆ ತಮ್ಮ ಮಸ್ತಕ ತೂರಿಸಿ ಗಂಭೀರರಾಗಿದ್ದಾರೆ. ನಾನೇ ಧೈರ್ಯ ತಂದುಕೊಂಡು 'ಆಯಿಯೇ.. ಬೈಟಿಯೇ..' ಎಂದು,ಮರುಕ್ಷಣದಲ್ಲಿ  'ಆಂಟೀ' ಎಂದು ಕೂಗುತ್ತಾ ಅಲ್ಲಿಂದ ಕಾಲು ತೆಗೆದೆ. ಅವರ ಮತ್ತುಳಿದ ಸಂಭಾಷಣೆಗಳೆಲ್ಲಾ ಅವರ ಮಾತೃಭಾಷೆ ಕೊಂಕಣಿಯಲ್ಲೇ ಮುಂದುವರಿದು ಆ ಹುಡುಗಿ ನಮ್ಮ ಮೆಸ್ಸಿನ ಹೊಸ ಸದಸ್ಯಳಾದಳು. ಅವಳ ಅಮ್ಮ ಅವಳನ್ನು ಬಿಟ್ಟು ಅಳುತ್ತಾ ಹೊರನಡೆದರೆ, ಅವರು ಹೊರ ನಡೆದ ತಕ್ಷಣ ಅವಳು ತನ್ನ ಲಗೇಜಿನ ಮೇಲೆಯೇ ಬೋರಲು ಬಿದ್ದು ಅಳತೊಡಗಿದಳು. ಇದೆಲ್ಲಾ ಮಾಮೂಲಿ ಎಂಬಂತೆ ಆಂಟೀ ತಮ್ಮ ಕೆಲಸ ನೆನಪಿಸಿಕೊಂಡು ಒಳಗೆ ಹೋದರು.ನಮಗೆ ಅವಳನ್ನು ಸುಮ್ಮನೆ ಬಿಡಲಾದೀತೇ.. ಎಷ್ಟೆಂದರು ಅವಳು ನಮ್ಮಂತೆ ದೂರದೂರಿಂದ ಬಂದವಳಲ್ಲವೇ..? ಆದರೆ ನಮ್ಮೊಳಗೆ ಗಡಿ ಸಮಸ್ಯೆಯಂತೆ ಭಾಷಾ ಸಮಸ್ಯೆ ಇತ್ತು.  ಹಾಗಾಗಿ  ನಾವು ಅವಳನ್ನು ಯಾವ ಭಾಷೆಯಲ್ಲಿ ಸಮಾಧಾನಿಸುವುದು ಎಂದು ತಲೆಕೆಡಿಸಿಕೊಳ್ಳತೊಡಗಿದೆವು. ಇದ್ದ ಹದಿನಾಲ್ಕು ಮಂದಿಯೂ ಆಲೋಚಿಸಿ ಅವಳಿಗೆ ಅರ್ಥವಾಗುವ ಹಿಂದಿಯಲ್ಲಿಯೇ ಒಂದೆರಡು ವಾಕ್ಯ ರಚಿಸಿದೆವು.   ಅದನ್ನು ಉರು ಹೊಡೆಯಲು ಸಮಯವಿಲ್ಲದ್ದುದರಿಂದ ಹಾಳೆಯೊಂದರಲ್ಲಿ  ಬರೆದುಕೊಂಡು ದೊಡ್ಡದಾಗಿ ಓದಿ ಹೇಳಿದೆವು. ಅವಳು ನಮ್ಮ ಈ ಪಚೀತಿಗಳನ್ನು ನೋಡುತ್ತಾ ಆಳುತ್ತಿದ್ದವಳು ಬಿದ್ದು ಬಿದ್ದು ನಗತೊಡಗಿದಳು.  

ಸಧ್ಯದ ಪರಿಸ್ಥಿತಿ ಸುಧಾರಿಸಿದರೂ ಇನ್ನು ವರ್ಷ ಪೂರ್ತಿ ಅವಳ ಜೊತೆ ಏಗಬೇಕಲ್ಲ ಎಂಬುದೇ ನಮ್ಮ ಚಿಂತೆ. ಈಗ ಅಚ್ಛ ಕನ್ನಡದ ಹುಚ್ಚು ಕಂದಮ್ಮಗಳಾದ ನಾವು ಅವಳಿಗೆ ಕನ್ನಡ ಕಲಿಸುವ ಬಗ್ಗೆ ಆಲೋಚಿಸುವ ಬದಲು ನಾವೆಲ್ಲ  ಹಿಂದಿ  ಕಲಿಯಲು ಉತ್ಸುಕರಾದೆವು. ಈ ರಾಷ್ಟ್ರ ಭಾಷೆ ಎಂಬ ಕಬ್ಬಿಣದ ಕಡಲೆ ನಮ್ಮೆಲ್ಲರ ಬಾಯಲ್ಲೂ ತುಂಬಿಕೊಂಡಿತು.
ನಮ್ಮೆದುರಿಗಿದ್ದ ಏಕಮಾತ್ರ ಉಪಾಯವೆಂದರೆ ಏಕಲವ್ಯರಾಗುವುದು. ನಮ್ಮ ಗುರು ದ್ರೋಣಾಚಾರ್ಯರು ನಮ್ಮೆದುರು ನ್ಯಾಷನಲ್ ಟಿ  ವಿ ಯ ರೂಪದಲ್ಲಿ ಕಾಣತೊಡಗಿದರು. ಕುಳಿತಲ್ಲಿ ನಿಂತಲ್ಲಿ ನಮ್ಮ ಶಬ್ಧವೇದಿ ಬಾಣಗಳು ಯಾರ್ಯಾರಿಗೋ ತಗಲತೊಡಗಿದವು.ಆಗ ಟಿ ವಿ  ಯಲ್ಲಿ ಬರುತ್ತಿದ್ದ ರಾಮಾಯಣ ಸೀರಿಯಲ್ಲಿನಿಂದ ಪ್ರೇರಣೆ ಹೊಂದಿ ಮಾತಾಶ್ರೀ, ಪಿತಾಶ್ರೀ ಗಳಂತೆ ಎಲ್ಲರ ಹೆಸರಿನ ಮುಂದೆ ಶ್ರೀಗಳನ್ನು ಹಚ್ಚಿ ಅವರನ್ನು ಧನ್ಯರಾಗಿಸಿದೆವು.
ನಮ್ಮ ಗೆಳತಿಯೂ ಈಗ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವಳ ಹಿಂದಿಯನ್ನು ಕುಲಗೆಡಿಸಿ ನಮ್ಮ ಲೆವೆಲ್ಲಿನಲ್ಲೇ ಮಾತನಾಡತೊಡಗಿದಳು.
' ಪಾನೀ ಕಾಯ್ತಾ ಇದೆ ಜಲ್ದಿ ನಹಾಕೆ ಬಾ..' ಎಂದರೆ ಎದ್ದು ಸ್ನಾನದ ಮನೆಗೆ  ಹೋಗುವಷ್ಟು ಬುದ್ಧಿವಂತಳಾದಳು. ನಾವುಗಳು ಇದೇ ಲೆವೆಲ್ಲಿನಲ್ಲಿ ಉಳಿದುಬಿಡುತ್ತಿದ್ದೆವೇನೋ ಆ ಮಹಾಗುರುವಿನ ಎಂಟ್ರಿ ಆಗದಿರುತ್ತಿದ್ದರೆ ... 

ನಮ್ಮ ಮೆಸ್ಸಿನಲ್ಲಿ ಒಂದು ಪೀಚಲು ಶರೀರಿ ನಾಯಿ  ಇತ್ತು.ಅದು ಬ್ಯಾಂಕ್ ಮೆನೇಜರರೊಬ್ಬರ ನಾಯಿಯೆಂದೂ, ಅವರು ಟ್ರಾನ್ಸ್ಪರ್ ಆಗಿ ಹೋಗುವಾಗ ನಾಯಿಯನ್ನು ಅನಾಥವಾಗಿ ಇಲ್ಲಿಯೇ ಬಿಟ್ಟು ಹೋಗಿದ್ದರು ಎಂಬ ಇತಿಹಾಸ ಹೊತ್ತ ನಾಯಿ ಅದಾದ ಕಾರಣ ನಮ್ಮೆಲ್ಲರ ಕರುಣೆಗೂ ಅದು ಪಾತ್ರವಾಗಿತ್ತು.ಮತ್ತು ಇಲ್ಲಿ ನಿತ್ಯ ಆಹಾರ ಸಿಗುತ್ತಿದ್ದುದರಿಂದ ಅದು ಇಲ್ಲಿಯೇ ಅತ್ತಿತ್ತ ಸುಳಿಯುತ್ತಾ ಇದ್ದುದರಿಂದಾಗಿ ಇಲ್ಲಿಯದೇ ನಾಯಿ ಎಂಬಂತಾಗಿತ್ತು. ಅದಕ್ಕೆ ಅದರ ಪಾಲಿನ ಆಹಾರವಲ್ಲದೇ ನಮ್ಮೆಲ್ಲರ ಉಳಿಕೆಯ ಆಹಾರವನ್ನು ಹಾಕುತ್ತಿದ್ದೆವು. ಅದು ಎಲ್ಲವನ್ನೂ ಗಬ ಗಬನೆ ನುಂಗಿ ಮತ್ತೆ ನಮ್ಮನ್ನು ನೋಡಿ ಬೊಗಳುತ್ತಿತ್ತು. ನಾವೆಷ್ಟೇ ಬೆಣ್ಣೆ ಹಚ್ಚಿ ದೋಸೆ ತಿನ್ನಿಸಿದರೂ ಅದು ನಮ್ಮನ್ನು ನೋಡಿ ಗುರ್ ರ್ರ್.. ಅನ್ನುತ್ತಲೇ ಇತ್ತು.ಅಷ್ಟೇಕೆ ಮೆಸ್ಸಿನ ಆಂಟಿಯನ್ನು ನೋಡಿಯೂ ಆಗೀಗ ಬೊಗಳಿ ಗದ್ದಲವೆಬ್ಬಿಸುತ್ತಿತ್ತು. ನಾವ್ಯಾರೂ ಆ ನಾಯಿ  ಬಾಲ ಅಲ್ಲಾಡಿಸುವುದನ್ನೇ ನೋಡಿರಲಿಲ್ಲ. ಒಮ್ಮೊಮ್ಮೆ ಬಯ್ಯುವವರು ಯಾರೂ ಕಾಣಿಸದೇ ಇದ್ದರೆ ಮನೆಯ ಒಳಗೆ ನುಗ್ಗಿ ಬರುತ್ತಿತ್ತು.ಅದಕ್ಕೆ ತಂಟೆ ಮಾಡಿದರೆ ಹೊಡೆಯಲೆಂದೇ ಆಂಟೀ ಒನಕೆಯಿಂದ  ಸ್ವಲ್ಪ ಕಡಿಮೆ ದಪ್ಪದ ಕೋಲೊಂದನ್ನು ತಂದಿರಿಸಿದ್ದರು. 

ಇದು ಮಲ್ಟಿ ಪರ್ಪಸ್ ಕೋಲು. ನಮ್ಮ ಆಂಟೀ ಕೆಲಸದಲ್ಲಿ ತುಂಬಾ ಚುರುಕು. ನಮ್ಮೆಲ್ಲರಿಗೂ ಹೊತ್ತು ಹೊತ್ತಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಹಾಕುತ್ತಿದ್ದುದಲ್ಲದೇ,ಹಪ್ಪಳ ಸಂಡಿಗೆ ಬಾಳ್ಕ ಗಳಂತವುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಅದನ್ನು ಒಣಗಲು ಹಾಕಿದ್ದು ಅದು ಹೇಗೆ ಕಾಗೆಗಳಿಗೆ ಗೊತ್ತಾಗುತ್ತಿತ್ತೋ ಏನೋ?? ಹುಡುಗರು, ಹುಡುಗಿಯರ ಹಾಸ್ಟೆಲ್ಲಿನ ಮುಂದೆ ಅತ್ತಿತ್ತ ಠಳಾಸುವಂತೆ ಇವು ಹಾರಾಟ ಪ್ರಾರಂಭಿಸುತ್ತಿದ್ದವು. ಆಗ ಆಂಟಿ ಈ ಕೋಲನ್ನು ನೆಲಕ್ಕೆ ಹೊಡೆದು ದೊಡ್ಡ ಶಬ್ಧವೆಬ್ಬಿಸಿ ಅವುಗಳನ್ನು ಹೆದರಿ ಹಾರುವಂತೆ ಮಾಡುತ್ತಿದ್ದರು. ಮನೆಯೊಳಗೆ ಸೇರಿಕೊಂಡ ಜಿರಲೆಗಳನ್ನು ಹೊಡೆಯಲು, ಅಪುರೂಪಕ್ಕೊಮ್ಮೆ ನಮ್ಮ ಕೈಗೆ ಸಿಗುತ್ತಿದ್ದ ಮೂಷಿಕವನ್ನು ಮುಗಿಸಲು ಇದೇ ಕೋಲು ಉಪಯೋಗವಾಗುತ್ತಿತ್ತು.ನನ್ನಂತಹ ಉದ್ದ ಕಮ್ಮಿ  ಇರುವವರಿಗೆ ಬಟ್ಟೆ ಹರವಲು ಉಪಯೋಗಿಸಲ್ಪಡುತ್ತಿತ್ತು. ನಾವೇನಾದರೂ ರಾಜ ಮಹಾರಾಜರ ವಂಶಸ್ಥರಾಗಿದ್ದರೆ ಈ ಮಲ್ಟಿ ಪರ್ಪಸ್ ಕೋಲಿಗೆ ಚಿನ್ನದ ಕಟ್ಟು ಹಾಕಿಸುತ್ತಿದ್ದುದರಲ್ಲಿ ಸಂಶಯವೇ ಇರಲಿಲ್ಲ. ಅದು ಯಾರು ಕಣ್ಣು ಮುಚ್ಚಿ ಕೈ ನೀಡಿದರೂ ಹಿಂದಿನ ಬಾಗಿಲಿನ ಮೂಲೆಯಲ್ಲಿ ಕೈಗೆ ಸಿಗುವಂತಿರುತ್ತಿತ್ತು. ಮತ್ತು ಯಾರೇ ತೆಗೆದರೂ ಅಲ್ಲೇ ಇಡಬೇಕೆನ್ನುವ ಸುಗ್ರೀವಾಜ್ಞೆಗೂ ಒಳಪಟ್ಟಿತ್ತು. 

ಆದಿನ ಬೆಳ್ಳಂಬೆಳಗ್ಗೆ  ನಾಯಿ ಒಳಬಂದು ಡೈನಿಂಗ್  ಟೇಬಲ್  ಕೆಳಗೆ ಮಲಗಿ ನಮಗೆ ಹಲ್ಲು ತೋರಿಸಿ ಜೋರು ಮಾಡುತ್ತಿತ್ತು. ಅದನ್ನು ಹೆದರಿಸಲು ನಮ್ಮ ಮಲ್ಟಿ ಪರ್ಪಸ್ ಕೋಲು ಇರುವ ಕಡೆ ಧಾವಿಸಿದರೆ ಅಲ್ಲೆಲ್ಲಿದೆ ಕೋಲು? 

. ನಮ್ಮ ಮೆಸ್ಸಿನ ಆಂಟಿಯಂತೂ ಮೆಸ್ಸಿನ ಹುಡುಗಿಯರು ಕಳೆದು ಹೋಗಿದ್ದರೂ ಇಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ತಮ್ಮ ದೇಹದ ಭಾಗವೇ ತುಂಡಾಯಿತೇನೋ ಎಂಬಂತಹ ದುಃಖದಲ್ಲಿ ಮುಳುಗಿದ್ದರು.ನಾವೆಲ್ಲರೂ ಎಲ್ಲಾ ಕಡೆ ಹುಡುಕಿ ಬಸವಳಿದೆವು. ನಮ್ಮ  ಹಿಂದಿ ಹುಡುಗಿಯೊಬ್ಬಳ ವಿನಃ ಉಳಿದೆಲ್ಲರೂ ಈ ಸಂತಾಪದ ಸಮಯದಲ್ಲಿ ಒಟ್ಟಾಗಿ ನಿಂತಿದ್ದೆವು.

ಅವಳು ಎರಡು ತಿಂಗಳಲ್ಲಿ ಬರುವ ಆದಿತ್ಯವಾರದಲ್ಲಿ ಇದು ಕೊನೆಯ ಆದಿತ್ಯವಾರವಾದ್ದರಿಂದ,   ತನ್ನ ಬಟ್ಟೆಗಳನ್ನು ಒಗೆಯಲು ಬಾತ್ ರೂಮ್ ಸೇರಿದ್ದಳು. ಉಳಿದೆಲ್ಲಾ ಆದಿತ್ಯವಾರಗಳಲ್ಲಿ ನಾವು ನಮ್ಮ ಒಂದು ವಾರದ ಬಟ್ಟೆಯನ್ನು ಒಗೆಯುತ್ತಾ ಕಷ್ಟ ಪಡುತ್ತಿದ್ದರೆ ಅವಳು ಅವಳ ಹಾಕಿದ ಬಟ್ಟೆಗಳಿಗೆ ಸೆಂಟ್ ಸಿಂಪಡಿಸಿ, ಮಡಿಚುವ ಕಾಯಕವೆಸಗುತ್ತಿದ್ದಳು. ಈಗ ಬಾತ್ ರೂಮಿನಿಂದ ಅವಳ  ಹಿಂದಿ  ಹಾಡುಗಳು ನಮ್ಮ ಕಿವಿಯ ತಮ್ಮಟೆಯನ್ನಪ್ಪಳಿಸುತ್ತಿದ್ದವು. ಅವಳ ಹಾಡುಗಳು ಎಷ್ಟು ಚೆನ್ನಾಗಿದ್ದವೆಂದರೆ, ರೊಮ್ಯಾಂಟಿಕ್ ಹಾಡುಗಳು ಶೋಕ ಗೀತೆಯಂತೆಯೂ, ಶೋಕಗೀತೆಗಳು ಯಕ್ಷಗಾನದ ಏರುಪದಗಳಂತೆಯೂ ಕೇಳಿಸುತ್ತಿದ್ದವು.ಆದರೆ ನಮ್ಮ ಬಾತ್ ರೂಮಿನ ಚಿಲಕ ಸರಿ ಇಲ್ಲದ ಕಾರಣ ಎಲ್ಲರೂ ಹಾಡು ಹೇಳುವುದು ಅನಿವಾರ್ಯವಾಗಿತ್ತು.

ಹೊರಗೆ ನಿಂತು 'ಕೋಲ್ ಹೆ ಕ್ಯಾ ನಿನ್ನ ಪಾಸ್' ಅಂತ ವಿಚಾರಿಸಿಕೊಂಡೆವು.. ಅವಳು ನ ಹೀ.. ಡಂಡಾ ಹೆ ಎಂದು  ಎಂದು ಕಿರುಚಿ ಹಾಡು ಮುಂದುವರಿಸಿದಳು. ದಂಡಪಿಂಡ ಯಾವುದಿದ್ದರೂ ನಮಗೇನನಂತೆ ಎಂದು ನಾವು ಮತ್ತೆ ಕೋಲನ್ನು ಅರಸುತ್ತಾ ಮನೆಯ ಮೂಲೆ ಮೂಲೆ ಸುತ್ತುತ್ತಿದ್ದೆವು. ಇದ್ದಕ್ಕಿದ್ದಂತೇ ಬಾತ್ ರೂಮಿ ನಿಂದ  ಹಿಂದೀ ಹಾಡಿನ ಜೊತೆ ಟಪ್ ಟಪ್ ಎಂಬ ಸದ್ದು ಹಾಡಿನೊಡನೆ ಶೃತಿಯಂತೆ ಕೇಳಿ ಬರತೊಡಗಿತು. ನಾವೆಲ್ಲ ಹೋಗಿ ಬಾತ್ ರೂಮಿನ  ಬಾಗಿಲು ತೆರೆಯುವುದನ್ನು ಕಾದು ನಿಂತೆವು. ಬಾಗಿಲು ತೆರೆಯಿತು. ನಮ್ಮೆಲ್ಲರ ಗದ್ದಲವನ್ನು ಒಳಗಿನಿಂದಲೇ ಕೇಳಿದ್ದ ಅವಳು, 'ಕ್ಯಾ ಹುವಾ ಕ್ಯಾ ಡೂಂಡ್ ರಹೆ ಹೆ ಆಪ್ 'ಅಂತ ಕೇಳುತ್ತಾ ಹೊರಬಂದಳು.  ಅವಳೀಗ ಒನಕೆ ಓಬವ್ವನ ಸ್ಟೈಲಿನಲ್ಲಿ ಕಚ್ಚೆಯ ಬದಲು ಹಾಫ್ ಪ್ಯಾಂಟ್ ಹಾಕಿ ಕೈಯಲ್ಲಿ ಒನಕೆಯ ಬದಲು ಕೋಲು ಹಿಡಿದು ನಿಂತಿದ್ದಳು. ಕಲ್ಲಿನಲ್ಲಿ ಬಟ್ಟೆ ಒಗೆಯುವ ಅಬ್ಯಾಸ ಇಲ್ಲದ ಕಾರಣ ಅವಳು ಕೋಲನ್ನು ಬಟ್ಟೆಗಳಿಗೆ ಬಡಿದು ನಮಗೆ ತಿಳಿಯದ ಹೊಸ ರೀತಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು.  ಇದನ್ನೇ ಹುಡ್ಕಿದ್ದು ಅಂತ ಅವಳ ಕೈಯಲ್ಲಿದ್ದ ಕೋಲನ್ನು ತೋರಿಸಿದೆ. 'ಪೆಹೆಲೆ  ಬತಾಯಾತಾನಾ.. ಡಂಡಾ ಹೆ ಮೆರೆ ಪಾಸ್..' ಎಂದು ತಣ್ಣಗೆ ಹೇಳುತ್ತಾ ಬಾಗಿಲ ಮೂಲೆಯಲ್ಲಿಟ್ಟಳು. ಕೋಲು ಕಂಡ ಕೂಡಲೇ ನಾಯಿಯೂ ಬಾಲ ಮುದುರಿ ಹೊರಗೋಡಿತು. 

ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ನಾಯಿ ಕುಂಯ್ ಕುಂಯ್ ಎಂದು ಬಾಲ ಅಲ್ಲಾಡಿಸುತ್ತಾ ಕುಣಿಯುವುದು ಕಾಣಿಸಿತು. ಅದರೆದುರಲ್ಲಿ ನಮ್ಮ ಬಾಂಬೇ ಬೆಡಗಿ  ಹುಣಸೇ ಬೀಜದಷ್ಟು ದೊಡ್ಡ ಮಾರೀ ಬಿಸ್ಕೆಟ್ಟಿನ ತುಂಡನ್ನು ಹಿಡಿದು 'ಆವೋ ರಾಜಾ.. ತುಮ್ಹೇ ಬಿಸ್ಕೆಟ್ ಕಿಲಾತೀ ಹೂಂ..' ಎಂದು  ನಿಂತಿದ್ದಳು ನಾವು ಇಡೀ ಪ್ಯಾಕೆಟ್ ಬಿಸ್ಕೆಟ್ ಹಾಕಿದರೂ ಬಾಲ ಎತ್ತದೇ ಗುರ್ರ್ ಅನ್ನುವ ನಾಯಿ ಈಗ  ಈ ರೀತಿ ವರ್ತಿಸುವುದು ಅಚ್ಚರಿ ತರಿಸಿತು. ಅದು ಅವಳನ್ನು ಎಷ್ಟು ಹಚ್ಚಿಕೊಂಡಿತೆಂದರೆ ಅವಳ ಆಜ್ಞಾನುಸಾರಿಯಾಗಿ ಅವಳು 'ಬೈಟೊ' ಎಂದರೆ ಕುಳಿತು, 'ಉಠೋ' ಎಂದರೆ ನಿಂತು ನಮಗೆ ಅಚ್ಚರಿ ತರಿಸಿತು.
ನಾವೆಲ್ಲರೂ ಈಗ ನಮ್ಮ ಪಾಠ ಪುಸ್ತಕಗಳನ್ನು ಬದಿಗಿಟ್ಟು ನಾಯಿಯ ಈ ನಡವಳಿಕೆಯ ಬಗ್ಗೆ ಸಂಶೋಧನೆ ಪ್ರಾರಂಭಿಸಿದೆವು. ಆ ಸಂಶೋದನೆ ಎಷ್ಟು ಗಂಭೀರವಾಗಿತ್ತೆಂದರೆ ನಾವು ನಾಯಿಯ ಬಾಲದಂತೆ ಅದರ ಹಿಂದೆಯೇ ಬಿದ್ದಿರುತ್ತಿದ್ದೆವು.ಅದನ್ನು ನಾವೂ ಒಲಿಸಿಕೊಳ್ಳಲು ಮನೆಯವರು ಗೋಗರೆದು ಕೇಳಿದರೂ ಕೊಡದ ನಮ್ಮ ನಮ್ಮ  ಪಾಕೆಟ್ ಮನಿಯನ್ನು ಖರ್ಚು ಮಾಡಿ ನಾಯಿಗಾಗಿ  ಬ್ರೆಡ್ಡಿನಿಂದ ಹಿ ಡಿದು ರಸ್ಕಿನವರೆಗೆ, ಮೊಟ್ಟೆಯಿಂದ  ಹಿಡಿದು ಮೂಳೆಯವರೆಗೆ ತಂದು ಹಾಕುತ್ತಿದ್ದೆವು. ಅದಕ್ಕೆ ಖುಷಿ ಆಗಲೆಂದು 'ನಾಯಿಮರಿ  ನಾಯಿಮರಿ' ಪದ್ಯವನ್ನು ಚೆನ್ನಾಗಿ ಕಲಿತು ಹಾಡುತ್ತಿದ್ದೆವು.ಆದರೂ ಅದು ಮೊದಲಿನಂತೆ ನಾವು ಕೊಟ್ಟದ್ದನ್ನು ತಿಂದು ನಮಗೆ 'ಗುರ್ರ್' ಎನ್ನುತ್ತಾ ಇರುತ್ತಿತ್ತು.  
ಮೆಸ್ ಹತ್ತಿರವಿದ್ದುದರಿಂದ ಮದ್ಯಾಹ್ನ ಊಟಕ್ಕೆ ಅಲ್ಲಿಗೆ ಬರುತ್ತಿದ್ದೆವು.  ಆ  ದಿನ ನಾವು ಮನೆಗೆ ಬರುವಾಗ ಸೂಟ್ ಬೂಟಿನಿಂದ ಅಲಂಕೃತರಾದವರೊಬ್ಬರು ಆಂಟಿಯೊಂದಿಗೆ 'ಅದು ನನ್ನ ನಾಯಿ  ನಾನು ಅದನ್ನೀಗ ತೆಗೊಂಡು ಹೋಗ್ತೀನಿ' ಅಂತ ಪಟ್ಟು  ಹಿಡಿದು ಕುಳಿತಿದ್ದರು. ಆಂಟೀ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿಯುತ್ತಿದ್ದರು. ನಾಯಿಯೂ ಅವರನ್ನು ಗುರುತು ಹಿಡಿದು  ಬಾಲ ಅಲ್ಲಾಡಿಸುತ್ತಿತ್ತು. ಇದು ಮಾತಿನಿಂದ ಬಗೆ ಹರಿಯುವಂತೆ ಕಾಣುತ್ತಿರಲಿಲ್ಲ. ಕೊನೆಯದಾಗಿ ಅವರು 'ಆಯ್ತು ಹಾಗಿದ್ರೆ..ನಾನು ಕರೆದಾಗ ನಾಯಿ  ನನ್ನ ಕಡೆ ಬಂದರೆ ನನಗೆ.. ನಿಮ್ಮ ಕಡೆ ಬಂದರೆ ನಿಮಗೆ.. ನಾಯಿ ಯೇ ಫೈಸ್ಲಾ ಮಾಡ್ಲಿ' ಎಂದು ಕೊನೆಯ ತೀರ್ಮಾನ ಹೇಳಿ ಬಿಟ್ಟರು. ನಮಗೂ ಒಪ್ಪದೇ ಬೇರೆ ವಿಧಿಯಿರಲಿಲ್ಲ.  ನಮ್ಮ ಮೌನವನ್ನು ಒಪ್ಪಿಗೆ ಎಂದುಕೊಂಡ ಅವರು 'ಆವೋ ರಾಜ ಮೇರೆ ಪಾಸ್..' ಎಂದರು. 
ಇದ್ದಕ್ಕಿದ್ದಂತೆ  ನಮ್ಮ ಬುದ್ಧಿಯ ಟ್ಯೂಬ್ ಲೈಟುಗಳು ಪ್ರಖರವಾಗಿ ಉರಿದು  ನಾಯಿಯ ನಡವಳಿಕೆಯ ಮಿಸ್ಟ್ರಿ ಸಾಲ್ವ್ ಆಯ್ತು. ಅದು ಹಿಂದಿ ಭಾಷೆಗೆ ಒಗ್ಗಿದ ನಾಯಿ ಯಾದ ಕಾರಣ ನಮ್ಮ ಕನ್ನಡ ಅದಕ್ಕೆ ಅರ್ಥವಾಗುತ್ತಿರಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡೆವು.  ನಾವು ಸೋಲುವ ಭಯವೂ ಹುಟ್ಟಿಕೊಂಡಿತು. ಆದ್ರೆ ನಾಯಿಯನ್ನು ನಮ್ಮ ಕಡೆ ಉಳಿಸಿಕೊಳ್ಳಬೇಕಿದ್ರೆ ಅದಕ್ಕೆ ಅರ್ಥವಾಗುವಂತೇ  ಮಾತಾಡಬೇಕಿತ್ತು. ನಮ್ಮಹಿಂದೀ ಸುಂದರಿ ಬೇರೆ 'ಇವತ್ತು ಪ್ರಾಕ್ಟಿಕಲ್ಸ್ ಇದೆ ಕ್ಯಾಂಟೀನಿಗೆ ಹೋಗ್ತೀನಿ' ಅಂತ ಊಟಕ್ಕೆ ಬಂದಿರಲಿಲ್ಲ.. ಸ್ವಲ್ಪ ಹೊತ್ತು ನಮ್ಮ ಎದೆ ಬಡಿತದ ಸದ್ದೇ ನಮಗೆ ಕೇಳುವಂತಹ ಮೌನ. ಪರೀಕ್ಷಾ ಕಾಲದ ತಲ್ಲಣ.. ಪಾಸಾಗುವುದು ಮಾತ್ರವಲ್ಲ ನೂರಕ್ಕೆ ನೂರು ಬಾರದಿದ್ರೆ ನಾಯಿಯನ್ನು ಕಳೆದುಕೊಳ್ಳುವ ಭಯ ..
.ಈಗ ನಮ್ಮ ನಡುವಿನಿಂದ ಒಂದು ಸ್ವರ ನಿಧಾನಕ್ಕೆ ಎದ್ದಿತು. 'ಆವೋ ರಾಜ ತುಮ್ಹೆ ಅಂಡಾ ಕೊಡ್ತೀನಿ..' ನಮ್ಮ ಶ್ವಾನ ಸುಂದರನೀಗ ಕಿವಿ ನಿಮಿರಿಸಿ  ನಮ್ಮತ್ತ ನೋಡಿತು.ನಮ್ಮನ್ನು ನೋಡಿ ಬಾಲ ಅಲ್ಲಾಡಿಸುತ್ತಾ ಹತ್ತಿರ ಬಂತು.ನಾವೆಲ್ಲ ಸಂತೋಷದಿಂದ   ಕೈ ಕೈ ಹಿಡಿದು ಕುಣಿದೆವು. ಬಂದವರು ಸುಮ್ಮನೆ ಎದ್ದು ಹೋದರು.

ನಾಯಿ  ಕೂಡಾ ತಾನು ಕಲಿತ ಭಾಷೆಗೆ ಕೊಡುವ ಮರ್ಯಾಧೆಯನ್ನು ಕಂಡು ನಾವು ನಮ್ಮ ನುಡಿ ಕನ್ನಡವನ್ನು ಹಿಂದಿ ಹುಡುಗಿಗೆ ಚೆನ್ನಾಗಿ ಕಲಿಸಬೇಕೆಂಬ ದೃಢ ನಿರ್ಧಾರಕ್ಕೆ ಬಂದೆವು. ಜೊತೆಗೆ  ಹಿಂದಿಯನ್ನು  ತಪ್ಪಿಲ್ಲದೆ ಮಾತನಾಡುವಷ್ಟಾದರು ಕಲಿಯಬೇಕೆಂಬ ಹಠವೂ ಹುಟ್ಟಿತು. ಅಂದಿನಿಂದ ನಮ್ಮ ಹರಟೆಯ ಸಮಯವೆಲ್ಲ ಭಾಷಾ ಕಲಿಕೆಯ ಸಮಯವಾಗಿ ಮಾರ್ಪಟ್ಟಿತು. ನಮ್ಮ ಆಂಟೀ ನಮಗೆಲ್ಲಾ ಬಂದ ಒಳ್ಳೆಯ ಬುದ್ಧಿಗಾಗಿ ಸಂತೋಷ ಪಡುತ್ತಾ, ಬರುವ ವರ್ಷ ತಮ್ಮ ಮೆಸ್ಸಿಗೆ ಇನ್ನಷ್ಟು ಹುಡುಗಿಯರು ಬರುವ ಬಗ್ಗೆ ಕನಸು ಕಾಣ ತೊಡಗಿದರು.


Friday, October 25, 2013

ಭಿಕ್ಷುಕರು..


ಭಿಕ್ಷುಕರಿಬ್ಬರು  ನಡೆಯುತ್ತಿದ್ದರು. ಸಾಗುತ್ತಿದ್ದ ದಾರಿ ಕೊಂಚ ದೂರದಲ್ಲಿ ಕವಲೊಡೆಯುವಂತೆ ಕಂಡಿತು. ಅಲ್ಲಿಯವರೆಗೆ ಜೊತೆಯಾಗಿದ್ದ ಅವರು ಆ ಕವಲಿನಲ್ಲಿ ಬೇರಾಗುವುದನ್ನು ಬಯಸಿದರು. ಅವರು ಸಾಗಬೇಕಿದ್ದ ಪ್ರತ್ಯೇಕವಾದ ಹಾದಿಗಳು ಒಂದೊಂದು ಊರನ್ನು ನಿರ್ದೇಶಿಸುತ್ತಿದ್ದವು. ಒಂದು ಊರಿನ ಹೆಸರು ಸಿರಿನಗರ ಎಂದಿದ್ದರೆ ಮತ್ತೊಂದು ಸಾಮಾನ್ಯಪುರ ಎಂದಿತ್ತು. 

ಭಿಕ್ಷುಕರಿಬ್ಬರಲ್ಲೂ ಸಿರಿನಗರಕ್ಕೆ  ಹೋಗುವವನು ತಾನು ತಾನು ಎಂಬ ಸ್ಪರ್ಧೆ ಏರ್ಪಟ್ಟಿತು. ಕೊನೆಗೆ ಅವರಿಬ್ಬರೂ  ಈಗ ಯಾರು ಹೋಗಬೇಕೆಂಬುದನ್ನು ನಾಣ್ಯ ಚಿಮ್ಮಿ  ನಿರ್ಧರಿಸೋಣ. ಆದರೆ ಯಾರೇ ಹೋಗಲಿ ಸರಿಯಾಗಿ ಒಂದು ತಿಂಗಳ ನಂತರ ಇಲ್ಲೇ ಮತ್ತೆ ಭೇಟಿಯಾಗಿ ತಮ್ಮ ತಮ್ಮ ಊರನ್ನು ಬದಲಾಯಿಸಿಕೊಳ್ಳಬೇಕೆಂಬ ಒಪ್ಪಂದಕ್ಕೆ ಬಂದರು.

ಸಿರಿನಗರವನ್ನು ಮೊದಲು ಪ್ರವೇಶಿಸುವ ಭಾಗ್ಯ ಸಿಕ್ಕಿದ ಭಿಕ್ಷುಕ ಹೆಮ್ಮೆಯಿಂದ  ಅಲ್ಲಿಗೆ ಕಾಲು ಹಾಕಿದ. ಅಬ್ಬಾ ಆ ನಗರವಾದರೂ ಹೇಗಿತ್ತು.. ನೋಡಲೆರಡು ಕಣ್ಣು ಸಾಲದು.. ಆಳೆತ್ತರದ ಗೋಡೆಯಾಚೆ ದೂರದಲ್ಲಿ ಕಾಣುವ ಅರಮನೆಯಂತಹ ಮನೆಗಳು, ಒಂದಿಷ್ಟು ಕಸ ಕಡ್ಡಿ ಕೊಳಕುಗಳಿರದ ರಾಜಮಾರ್ಗಗಳು, ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಗೇಟುಗಳಿರುವ ಕಪ್ಪು ಗಾಜಿನ ಆವರಣದ ಒಳಗೇನಿದೆ ಎಂದು ಕಾಣದಂತಿರುವ ಅಂಗಡಿಗಳು, ಹೋಟೇಲುಗಳು, ರಸ್ತೆಗಳಿರುವುದು ಕೇವಲ ವಾಹನ ಸಂಚಾರಕ್ಕೇನೋ ಅಂಬಂತೆ ಅತ್ತಿತ್ತ ಹರಿದಾಡುವ  ವಾಹನಗಳು,  ವಾಹನಗಳ ಸದ್ದು ಬಿಟ್ಟರೆ ಬೇರೇನೂ ಕೇಳದಂತಿರುವ ಮೌನ.. ಎಲ್ಲಿಯೂ ನಡೆದಾಡುವ ಜನರ ಸುಳಿವಿಲ್ಲ.. ಬೇಡುವುದಾದರೂ ಯಾರಲ್ಲಿ.. ? ನಡೆದ ನಡೆದ ...  ಮುಗಿಯದ ಹಾದಿ.. ಇವನು ಹೋದಲ್ಲೆಲ್ಲಾ ಮತ್ತೊಂದು ಇಂತಹದೇ ದೃಶ್ಯ ತೆರೆದುಕೊಳ್ಳುತ್ತಿತ್ತು.. ಇನ್ನೂ ಮುಂದೆ ಯಾರಾದರು ಸಿಗಬಹುದು ಎಂದು ಮತ್ತೂ ನಡೆಯುತ್ತಲೇ ಹೋದ.. ಇದ್ದಕ್ಕಿದ್ದಂತೆ ನಾಲ್ಕಾರು ಕಡೆಯಿಂದ  ವಾಹನಗಳು ಬಂದು ಇವನನ್ನು ಸುತ್ತುವರಿದು ಪಂಜರದಂತಾ ಗೂಡಿನೊಳಗೆ ತಳ್ಳಿತು..

ಸಾಮಾನ್ಯಪುರವನ್ನು ಹೊಕ್ಕ ಭಿಕ್ಷುಕ ಕೊಂಚ ನಿರಾಸಕ್ತಿಂದಲೇ ಪ್ರವೇಶಿಸಿದ. ಗೆಳೆಯನಿಗೆ ಸಿಕ್ಕ ಅದೃಷ್ಟದ ಬಗ್ಗೆ ಕರುಬುತ್ತಾ ತನ್ನ ಭಾಗ್ಯವನ್ನು ಹಳಿಯುತ್ತಾ ನಡೆಯುತ್ತಿದ್ದವನಿಗೆ ಎದುರಾದದ್ದು ಪುಟ್ಟ ಪುಟ್ಟ ಮನೆಗಳು.. ಜೋಪಡಿಗಳು.. ರಸ್ತೆಯಲ್ಲಿ ಕುಣಿಯುತ್ತಾ ಸಾಗುತ್ತಿರುವ ಮಕ್ಕಳು. ಬೆವರಿನಿಂದ ತೋಯ್ದು ಹೊಲದಲ್ಲಿ ದುಡಿಯುತ್ತಿರುವ ಹೆಣ್ಣು ಗಂಡುಗಳು.. ಹಕ್ಕಿಗಳ ಇಂಚರ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಮರ ಗಿಡ.. ಜುಳಜುಳನೆ ಹರಿಯುತ್ತಿರುವ ನದಿ.. ಸುಮ್ಮನೆ ನಡೆಯುತ್ತಿದ್ದವನಲ್ಲಿ ಉತ್ಸಾಹ ಮೂಡಿತು.ತನ್ನ ಕಡೆಗೆ ನೋಡಿಕೊಂಡ.. ತಾನು ಹಾಕಿದ ಮಾಸಲು ಬಟ್ಟೆಯೇ ಅವರ ಬಟ್ಟೆಗಿಂತ ಎಷ್ಟೋ ಚೆನ್ನಾಗಿತ್ತು..ಹೀಗಿದ್ದು ಅವರೊಡನೆ ಬೇಡುವುದೇ.. ವಿಶಾಲ ವೃಕ್ಷದಡಿಯಲ್ಲಿ ಕುಳಿತು ಯೋಚಿಸಿದ. ಅಲ್ಲೇ ಬುತ್ತಿ ಉಣ್ಣಲು ಕುಳಿತವನೊಬ್ಬ ಇವನೊಡನೆ ತನ್ನ ಊಟವನ್ನು ಹಂಚಿಕೊಂಡ.. ಅವನ ಜೊತೆಗೆ ಕರೆದೊಯ್ದ. 

ಒಂದು ತಿಂಗಳು ಕಳೆಯಿತು.. 

ಸಿರಿನಗರದ ಭಿಕ್ಷುಕ ಏನಾದ ಎಂದು ಯಾರಿಗೂ ಗೊತ್ತಾಗಲಿಲ್ಲ. ಸಾಮಾನ್ಯಪುರದಲ್ಲಿ ಭಿಕ್ಷುಕರೇ ಇಲ್ಲ.. 


Tuesday, October 15, 2013

ಹಸಿವುಅದೊಂದು  ದೊಡ್ಡ ಊಟದ ಸರತಿ. ಹಸಿವನ್ನು ಇಂಗಿಸಿಕೊಳ್ಳಲು  ಜನ ಸೇರುತ್ತಲೇ ಇದ್ದರು.
 
 ಸಾಲಿನಲ್ಲಿ ಅವಳು ಸೇರಿಕೊಂಡಳು. ಅವಳ ನಂತರ ಬಂದ ಹಿರಿಯಾಕೆ 'ನನಗೆ ಹೆಚ್ಚು ಹೊತ್ತು  ನಿಲ್ಲಲು ಕಷ್ಟ, ದಯವಿಟ್ಟು ನಿನ್ನ ಮುಂದೆ ನಿಲ್ಲಬಹುದಾ' ಅಂದಳು. ಅವಳು ತಲೆಯಾಡಿಸಿ ಒಪ್ಪಿಗೆ ಸೂಚಿಸಿದಳು, ನಂತರ ಬಂದ ಪುಟ್ಟ ಹುಡುಗ, ಕ್ರಾಪಿನ ಯುವಕ, ಕೋಲೂರಿ ನಡೆಯುತ್ತಿದ್ದ ಮುದುಕ, ಎಲ್ಲರಿಗೂ  ಅವಳಿಂದ ಮುಂದೆ ನಿಲ್ಲಲು ಕಾರಣಗಳಿದ್ದವು.

ಅವಳು ತಲೆಯಾಡಿಸಿ ಒಪ್ಪಿಗೆ ಸೂಚಿಸುತ್ತಲೇ ಇದ್ದಳು..

ಯುವತಿಯೊಬ್ಬಳು ಅವಳನ್ನು ಕಂಡು 'ನೀನು ಹೀಗೆ ಎಲ್ಲರನ್ನೂ ಮುಂದೆ ಹೋಗಲು ಬಿಟ್ಟರೆ ನೀನು ಅಲ್ಲಿಗೆ ತಲುಪುವಾಗ ಬೆಳಗಾಗಬಹುದು' ಎಂದಳು.. 

ಅವಳು ಸುಮ್ಮನೆ ನಕ್ಕು 'ನನಗೆ ಹಸಿವಿಲ್ಲ. ಆದರೆ ಹಸಿವಿನ ಕಣ್ಣುಗಳಿಂದ ತಪ್ಪಿಸಿ ನಿಲ್ಲಲು ಇದಕ್ಕಿಂತ ಸುರಕ್ಷಿತ ಸ್ಥಳವಿಲ್ಲ.  ಬೆಳಗಾಗುವುದನ್ನೇ ಕಾಯುತ್ತಿದ್ದೇನೆ' ಎಂದಳು. 

Thursday, September 5, 2013

ನಿತ್ಯ ಸ್ಮರಣೀಯರು .


ಶಾಲೆಯ ಮೊದಲನೇ ದಿನ.
 

ಕೆಲವು ಮಕ್ಕಳು ಜೋರಾಗಿ ಅಳುತ್ತಿದ್ದರೆ, ಇನ್ನು ಕೆಲವರು ಅವರನ್ನು ನೋಡಿ ನಗುತ್ತಿದ್ದರು. ದೂರದ ಹಳ್ಳಿಯಿಂದ  ಬಂದ ಕೆಲವು ಮಕ್ಕಳು ಸುತ್ತಲಿರುವವರನ್ನು ಮರೆತು ಮಧ್ಯಾಹ್ನ  ಅಮ್ಮ ಕಟ್ಟಿ ಕೊಟ್ಟಿದ್ದ ಬುತ್ತಿಯನ್ನು ಬಿಚ್ಚಿ ರುಚಿ ನೋಡುತ್ತಿದ್ದರು. ಮತ್ತೂ ಕೆಲವರ ಅಮ್ಮಂದಿರು ಮಕ್ಕಳನ್ನು ಸಮಾಧಾನಗೊಳಿಸುತ್ತಾ ಕ್ಲಾಸಿನೊಳಗೇ ನಿಂತುಕೊಂಡು ತಮ್ಮ ಮನೆಯ ಕಷ್ಟ ಸುಖಗಳನ್ನು ಮಾತನಾಡುತ್ತಿದ್ದರು.ಅಷ್ಟರಲ್ಲಿ ತಲೆಯೆಲ್ಲಾ ಬಿಳಿಯಾಗಿ, ವಯಸ್ಸಾದಂತಿದ್ದವರೊಬ್ಬರು ಕ್ಲಾಸಿನೊಳಗೆ ಬಂದರು.  ಪುಟ್ಟ ಬೆಂಚಿನ ಮೇಲೆ ಬಲಿ ಕೊಡಲು ತಂದ ಕುರಿಯ ಮುಖಭಾವ ಹೊತ್ತು ಕೂತಿದ್ದ ನನ್ನ ಹತ್ತಿರ ಬಂದ 'ನೀನು ಒಂದನೇ ಕ್ಲಾಸಾ ಮಗಳೇ.. ನಾನು ಕೂಡಾ ಒಂದನೇ ಕ್ಲಾಸು' ಅಂದರು. 'ನೀವಿಷ್ಟು ಅಜ್ಜ ಆಗಿದ್ದೀರಾ, ನೀವು ಒಂದನೇ ಕ್ಲಾಸಾ' ಎಂದು ಹೇಳಿ  ಜೋರಾಗಿ ನಕ್ಕುಬಿಟ್ಟೆ. ನನ್ನೊಂದಿಗೆ ಉಳಿದ ಮಕ್ಕಳೂ ನಕ್ಕರು.

ಅವರನ್ನು ಕಂಡು ಅಲ್ಲಿದ್ದ ಅಮ್ಮಂದಿರೆಲ್ಲಾ ನಸು ನಾಚುತ್ತಾ ಹೊರಗೆ ಹೋದರು. ಅವರ ಮುಖವನ್ನೇ ನೋಡುತ್ತಾ ಕುಳಿತಿದ್ದ ನಮ್ಮನ್ನು ಕಂಡು " ನಾನೀಗ ಮತ್ತೊಮ್ಮೆ ಹೊರಗೆ ಹೋಗಿ ಒಳಗೆ ಬರ್ತೀನಿ. ಆಗ ನೀವೆಲ್ಲಾ ಎದ್ದು ನಿಂತು 'ನಮಸ್ತೆ ಸರ್' ಅಂತ ಹೇಳಬೇಕು" ಎಂದರು. ಆಗಲೇ ನಮಗೆಲ್ಲಾ ಅವರು ನಮ್ಮ ಸರ್ ಅಂತ ಗೊತ್ತಾಗಿದ್ದು. ನಂಗೆ ಈಗ ನಿಜಕ್ಕೂ ಅಳು ಬರುವ ಹಾಗೇ ಆಯ್ತು. ನಾನು ಅವರನ್ನು ಅಜ್ಜ ಅಂತ ಹೇಳಿದ್ದಕ್ಕೆ ಅವ್ರು ಹೊಡೆದರೆ ಅನ್ನುವ ಭಯ. ಆದರೆ ಹಾಗೇನು ಆಗಲಿಲ್ಲ. ಅವರು ನಮ್ಮ ಶಾಲೆ ಎಂಬ ಭಯವನ್ನು ಹೋಗಲಾಡಿಸಿದ ಸುಬ್ಬಯ್ಯ ಮಾಷ್ಟ್ರು... 

ಶಾಲೆಯ ಕಾರಿಡಾರಿನಲ್ಲಿ ಅತ್ತಿತ್ತ ನಡೆದಾಡುವಾಗ ಅವರ ಉದ್ದದ ಜಡೆ ಕೂಡಾ ಅತ್ತಿತ್ತ ಬಳುಕಾಡುತ್ತಿತ್ತು. ಎಲ್ಲರಂತೆ ಅವರ ಉದ್ದ ಜಡೆಯನ್ನು ನೋಡುವುದು ನನಗೆ ಬಾರೀ ಇಷ್ಟದ ಸಂಗತಿಯಾಗಿತ್ತು. ಆದರೆ ಅವರ ಕೈಯಲ್ಲಿ ಸದಾ ಕಾಣುವ ಬೆತ್ತ, ಸಿಡುಕಿನ ಮುಖ, ಮಕ್ಕಳನ್ನು ಅವರಿಂದ ದೂರವೇ ಇಟ್ಟಿತ್ತು. 

ಆ ದಿನ ನಾನು ಕ್ಲಾಸ್ ರೂಮಿನ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬೆತ್ತ ಹಿಡಿದು ಬರುತ್ತಿದ್ದ ಅವರು ನನ್ನನ್ನು ಕರೆದರು. ಹೆದರಿಕೆಯಿಂದ  ಮೈಯೆಲ್ಲಾ ನಡುಗುತ್ತಾ ಅವರ ಕಡೆಗೆ ತಿರುಗಿದೆ. ಅವರು ಕೈಯಲ್ಲಿ ಹಿಡಿದ ಬೆತ್ತವನ್ನು  ನಾನು ಮುಡಿದ ಗುಲಾಬಿಗೆ ತಾಗಿಸಿ " ಇದು ನಿಮ್ಮ ಮನೆಯಲ್ಲಾಗಿದ್ದಾ" ಎಂದು ಕೇಳಿದರು. ಹೌದೆಂಬಂತೆ ತಲೆ ಅಲ್ಲಾಡಿಸಿದ ನನ್ನನ್ನು ಕಂಡು " ನಾಳೆ ಬರುವಾಗ ಅಮ್ಮನ ಹತ್ರ ಕೇಳಿ ನಂಗೆ ಒಂದು ಗೆಲ್ಲು ತರ್ತೀಯಾ" ಎಂದರು.
ನಗುತ್ತಾ ತಲೆ ಆಡಿಸಿದೆ.ಆ ದಿನವೆಲ್ಲಾ ಏನೋ ಪುಳಕ ...   ಕೆಲವು  ದಿನ ಕಳೆದು  ಹೊಸತಾಗಿ ಶುರು ಆದ ಸ್ಕೌಟ್ ಮತ್ತು ಗೈಡ್ ದಳದಲ್ಲಿ ಅವರು ನನಗಿನ್ನೂ ಹತ್ತಿರವಾದರು. 
ಮೊಟ್ಟೆ ಇಟ್ಟ ಕಪ್ಪು ಕೋಳಿ
ಮೊಟ್ಟೆ ನೋಡಿ ಕೂಗಿತು ಕೇಳಿ
ಬಿಳಿ ಮೊಟ್ಟೇ ಬಿಳಿ ಮೊಟ್ಟೇ ಬಿಳಿ ಮೊಟ್ಟೇ.. 
ಎಂದು ಅವರು ಕಲಿಸಿದ ಹಾಡನ್ನು ಹಂಚು ಹಾರುವಂತೆ ನಾವೆಲ್ಲಾ ಕಿರುಚಿ ಅವರಿಂದ ಮೆಚ್ಚುಗೆಯನ್ನೂ ಪಡೆದೆವು.  ಅವರಿಗಾಗೇ ನಾನು ತಂದ ಹೂವು ಅವರ ಉದ್ದ ಜಡೆಯನ್ನು ಅಲಂಕರಿಸಿದಾಗ ನಮಗೆಲ್ಲಾ ಖುಷಿ ..  ಅವರ ಮುಖದಲ್ಲೂ ತೆಳು ನಗು. ನಂತರ ನಮ್ಮ ತರಗತಿಗೆ ಬರುವಾಗ ಅವರ ಕೈಯನ್ನು ಸದಾ ಅಲಂಕರಿಸುತ್ತಿದ್ದ ಬೆತ್ತ ಮಾಯವಾಗಿತ್ತು. ನಾವು ಏಳನೇ ತರಗತಿ ಮುಗಿಸಿ ಹೊರಡುವಾಗ ತಾಯಿ  ಮಗಳನ್ನು  ತವರು ಮನೆಯಿಂದ  ನೀರಾಡುವ ಹಸಿಕಣ್ಣಿನಲ್ಲಿ ಹರಸಿ ಕಳುಹಿಸುವಂತೆ ಕಳುಹಿಸಿದ ನಮ್ಮ ಅಹಲ್ಯಾ ಟೀಚರ್..

ಕ್ಲಾಸಿನಲ್ಲಿ ಲೀಡರ್, ಅಳಿದೂರಿನಲ್ಲಿ ಉಳಿದವನೇ ಗೌಡ ಅನ್ನುವ ಮಟ್ಟದ ಬುದ್ಧಿವಂತೆ, ಡ್ಯಾನ್ಸ್, ಹಾಡುಗಳೆಂದರೆ ಸದಾ ತಯಾರು, ಶಾಲೆಯ ವಾರ್ಷಿಕೋತ್ಸವ , ಮಕ್ಕಳ ದಿನಾಚರಣೆಗಳೆಲ್ಲಾ  ನನ್ನ ನೃತ್ಯದಿಂದಲೇ ಶುರುವಾಗಿ ನನ್ನ ನೃತ್ಯದೊಂದಿಗೇ ಮಂಗಳ ಹಾಡುತ್ತಿದ್ದ ಸುವರ್ಣ ಕಾಲವದು.ಇಷ್ಟೆಲ್ಲಾ ಕಿರೀಟವನ್ನು ಹೊತ್ತು ನಡೆಯುತ್ತಿದ್ದ  ನನ್ನನ್ನು ಹಿಡಿದು ನಿಲ್ಲಿಸುವುದು ಕೊಂಚ ಕಷ್ಟವೇ ಆಗಿತ್ತು.
ಕ್ಲಾಸಿನಲ್ಲಿ ಯಾರನ್ನು ಹೋಮ್ ವರ್ಕ್ ಬಗ್ಗೆ ಕೇಳಿದರೂ, ನನ್ನನ್ನು ಕೇಳುತ್ತಿರಲಿಲ್ಲ. ಒಂದೆರಡು ಸಲ ಮಾಡದೇ ಹೋದಾಗಲೂ ಯಾರಿಗೂ ಗೊತ್ತಾಗಲೇ ಇಲ್ಲ.ಬಂದ ಕೂಡಲೇ ಟೀಚರ್ ಟೇಬಲ್ ಅಲಂಕರಿಸುತ್ತಿದ್ದ  ಹೋಮ್ ವರ್ಕ್ ಪುಸ್ತಕಗಳನ್ನು ಅವರ ಆಫೀಸ್ ರೂಮಿಗೆ ಕೊಂಡೊಯ್ದು ಇಟ್ಟು,  ತಿದ್ದಿದ ಪುಸ್ತಕಗಳನ್ನು ಮರಳಿ ತಂದು ಮಕ್ಕಳಿಗೆ ಹಂಚುವ ಕೆಲಸ ನನ್ನದೇ ಆದ ಕಾರಣ ನನ್ನ ಕಳ್ಳತನ ಹೊರಗೆ ಬಿದ್ದಿರಲೇ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ನಿಲ್ಲಿಸಿ 'ಎಲ್ಲಿ ನಿನ್ನ ಹೋಮ್ ವರ್ಕ್ ಪುಸ್ತಕ ಕೊಡು' ಎಂದರು. ಮಾಡಿದರಲ್ಲವೇ ಕೊಡುವುದು.. ಹಾಗೆಂದು ಒಪ್ಪಿಕೊಳ್ಳಲು ಮರ್ಯಾದೆ ಪ್ರಶ್ನೆ. ಬ್ಯಾಗಿಗೆ ಕೈ ಹಾಕಿ ತುಂಬಾ ಹೊತ್ತು ಹುಡುಕಿದಂತೆ ಮಾಡಿ ' ಮನೆಯಲ್ಲೇ ಮರೆತು ಬಂದಿದ್ದೇನೆ' ಎಂದೆ. 'ಸರಿ ನಾಳೆ ತಾ' ಎಂದು ಕೂರಿಸಿದರು.

ಮರುದಿನ ಅವರೆಲ್ಲಿ ಕೇಳುತ್ತಾರೆ ಎಂಬ ಭಂಡ ಧೈರ್ಯದಿಂದ ಕ್ಲಾಸಿನೊಳಗೆ ನುಗ್ಗಿ ಗತ್ತಿನಲ್ಲೇ ಕೂತಿದ್ದೆ. ಬಂದ ಕೂಡಲೇ ' ನಿನ್ನ ಹೋಮ್ ವರ್ಕ್ ತೋರಿಸು' ಅಂದರು. ಕಣ್ಣಲ್ಲಿ ಗಂಗಾ ಜಮುನಾ ಹರಿಸುತ್ತಾ ನಿಂತೆ. ಸಾಧಾರಣ ನನ್ನಷ್ಟೇ ಉದ್ದದ ಬೆತ್ತ ಮೇಜಿನ ಮೇಲೆ ಕುಳಿತಿತ್ತು. ಅದನ್ನು ಎತ್ತಿ ಬೋರ್ಡಿನ ಪಕ್ಕದ  ನೆಲದ ಮೇಲೆ ಕುಟ್ಟುತ್ತಾ 'ಇಲ್ಲೇ ಕೂತ್ಕೊಂಡು ಈಗಲೇ ಬರ್ದು ತೋರಿಸು' ಅಂದರು.

ಕೊಟ್ಟ ಮಾತು ತಪ್ಪದ ಪುಣ್ಯಕೋಟಿಯ ಗೋವಿನ ಹಾಡನ್ನು ಹತ್ತು ಸಲ ಬರೆದು ತೋರಿಸಿದೆ. ಅದೇ ಕೊನೆ ಮತ್ತೆಂದೂ ಹೇಳಿದ ಕೆಲಸ ಮಾಡದೇ ಹೋಗಲಿಲ್ಲ. ಒಂದು ಮಾತು ಕೂಡಾ ಬಯ್ಯದೆ ಹೀಗೆ ಪಾಠ ಕಲಿಸಿದ ಲೀಲಾವತಿ ಟೀಚರ್..

ಶಾಲೆಯ ಹಿಂದಿನ ದೊಡ್ಡ ಗುಡ್ಡವನ್ನು ಸಮತಟ್ಟುಗೊಳಿಸಿ ಸಭಾಭವನ  ಕಟ್ಟುವ ತಯಾರಿಯಲ್ಲಿ ಇದ್ದರು. ಅವರು ಗುಡ್ಡದ ಮೇಲ್ಬಾಗದಲ್ಲಿ ನಿಂತು ಕೆಳಕ್ಕೆ ನೋಡುತ್ತಾ ಇದ್ದರು. ಕಡಿಮೆ ಎಂದರೂ ಒಂದಿಪ್ಪತ್ತು ಅಡಿ ಆಳ ಇದ್ದೀತು. ಮಣ್ಣು ಕಲ್ಲಿನ ಆ ರಾಶಿ ತಮ್ಮ ಕನಸಿನ ಕಟ್ಟಡವಾಗುವುದನ್ನು ಕನವರಿಸುತ್ತಾ ಅವರು ನಿಂತಿದ್ದರೆ ಮೆಲ್ಲನೆ ಹಿಂದಿನಿಂದ ಹೋಗಿ ದೂಡುವಂತೆ ಅವರ ಬೆನ್ನು ಮುಟ್ಟಿದೆ. ಒಮ್ಮೆಲೇ ಹೆದರಿ ಆಯತಪ್ಪುವಂತಾದರು. ನಾನು ಅವರ ಕೈ ಹಿಡಿದು ಪಕ್ಕಕ್ಕೆಳೆದು ಅಳು ಮೂತಿ ಮಾಡಿ ನಿಂತೆ. ಅವರು ನಗುತ್ತಾ " ನನ್ನನು ಹೆದರಿಸಿ ಬಿಟ್ಟೆಯಲ್ಲೇ ಹುಡುಗಿ " ಅಂದರು. ಶಾಲೆಯಲ್ಲೆಲ್ಲಾ ಇದೇ ಸುದ್ಧಿ. 'ಹೆಡ್ ಮಾಷ್ಟ್ರನ್ನು ಅನಿತಾ ಹೆದರಿಸಿದಳಂತೆ..'  ಒಮ್ಮೆಗೇ ನಾನು ಶಾಲೆಯಲ್ಲಿ ವರ್ಲ್ಡ್ ಫೇಮಸ್ ಆದೆ.ಸ್ವಲ್ಪ ಹೊತ್ತಿನಲ್ಲಿ ದೊಡ್ಡ ಹುಡುಗರನ್ನು ಕರೆದು ಆ ಜಾಗದಲ್ಲಿ ಮಕ್ಕಳು ಇದೆ ರೀತಿ ತಂಟೆ  ಮಾಡಿ ಬೀಳುವುದು ಬೇಡ ಎಂದು ತಡೆ ಬೇಲಿ ಮಾಡಿಸಿದರು.  

ಅದೇ ದಿನ ಸಂಜೆ ಪ್ರಾರ್ಥನೆ ಸಮಯದಲ್ಲಿ ಒಂದೊಂದಾಗಿ ಕೆಲವು ಹೆಸರನ್ನು ಕರೆದರು. ಆ ಹೆಸರುಗಳಲ್ಲಿ ನನ್ನದೂ ಇತ್ತು. ನೀವಿಷ್ಟೂ ಜನ ನಾಳೆ ಬೆಳಗ್ಗೆ ಬೇಗ ಶಾಲೆಗೆ ಬರಬೇಕು ಅಂದರು. ಯಾಕಿರಬಹುದು ಎಂಬ ಕುತೂಹಲ ನಮ್ಮದು. ಬೆಳಗಾಗುವುದನ್ನೇ ಕಾದು ಅವರು ಹೇಳಿದ ಹೊತ್ತಿಗೆ  ಬಂದು ನಿಂತೆವು. ನಮ್ಮಿಂದ  ಮೊದಲೇ ಬಂದಿದ್ದ ಹೆಡ್ ಮಾಷ್ಟ್ರು ಅಂಗಳದಲ್ಲಿ  ಸ್ವಲ್ಪ ದೂರ ದೂರಕ್ಕೆ ಚಾಕ್ ಪೀಸಿನಲ್ಲಿ ತ್ರಿಕೋನದ ಮೂರು ಬಿಂದುಗಳಂತೆ ಮೂರು ದೊಡ್ಡ ಉರುಟುಗಳನ್ನು ಹಾಕಿದ್ದರು. ನಮ್ಮನ್ನೆಲ್ಲಾ ಒಂದೊಂದರೊಳಗೆ ಒಬ್ಬೊಬ್ಬರು ನಿಲ್ಲುವಂತೆ ಮಾಡಿದರು. ನಮ್ಮ ಕೈಗೆ ಮುಟ್ಟಿದರೆ ಝಣ್ ಝಣ್ ಎನ್ನುವ ಲೇಜಿಮ್ ಗಳನ್ನು ನೀಡಿ ಹೆಜ್ಜೆಗಳನ್ನು ಆ ಮೂರು ಉರುಟುಗಳಿಂದ ಹೊರ ಬಾರದೇ ಇರುವಂತೆ ಮಾಡಿ ಹೆಜ್ಜೆ ಹಾಕಲು ಕಲಿಸಿದರು.ಹೀಗೆ ತಯಾರಾದ ನಮ್ಮ ಲೇಜಿಮ್ ಮತ್ತು ಕೋಲಾಟದ ತಂಡ ಎಲ್ಲಾ ಕಡೆಗಳಿಂದ ಬಹುಮಾನಗಳನ್ನು ಬಾಚಿಕೊಳ್ಳುತ್ತಿತ್ತು. ನಮ್ಮ ಅತಿ ವೇಗದ ಹೆಜ್ಜೆಗಳು ಎಲ್ಲರ ಮನ ಗೆಲ್ಲುತ್ತಿತ್ತು. ಲೇಜಿಮ್ ನ ಎರಡೂ ಕಡೆಗೆ ಉರಿಯುವ ಪಂಜುಗಳನ್ನು ಕಟ್ಟಿ ಕತ್ತಲೆಯಲ್ಲಿ ಲೇಜಿಮ್ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ, ಮತ್ತೆ ಕೆಲವರ ಹೆದರಿಕೆಗೂ ಪಾತ್ರವಾಗಿದ್ದೆವು.ಹಳ್ಳಿ ಶಾಲೆಯ ಮಕ್ಕಳಿಗೆ ಮೊದಲ ಬಾರಿ ಬ್ಯಾಡ್ ಮಿಂಟನ್ ಆಟ ಪರಿಚಯಿಸಿ, ರಾಜ್ಯ ಮಟ್ಟಕ್ಕೇರಿದ ತಂಡವನ್ನು ಸಿದ್ಧಪಡಿಸಿದವರೂ ಅವರೇ..ಖೊ ಎಂದು ಬೆನ್ನಿಗೆ ಬಡಿದು ಆಡುವ ಖೊ ಖೊ ಆಟವನ್ನು ಹೇಳಿಕೊಟ್ಟವರು ಅವರೇ ..  ಶಾಲೆ ಎಂದರೆ ಕೇವಲ ಪಾಠ ಮಾತ್ರ ಎಂಬ ಭ್ರಮೆಯನ್ನು ದೂರ ಮಾಡಿ ವಿದ್ಯಾರ್ಥಿಗಳ ಹತ್ತು ಹಲವು ಪ್ರತಿಭೆಗಳನ್ನು ಹೊರತೆಗೆದ  ರಮೇಶ್ ಹೆಡ್ ಮಾಷ್ಟ್ರು..

ಮಧ್ಯಾಹ್ನ ಊಟ ಮಾಡದೇ ಆಗಾಗ ವಿದ್ಯಾರ್ಥಿಗಳು ಹಸಿವಿನಿಂದ ಬಳಲಿ ತಲೆ ತಿರುಗಿ ಬೀಳುವುದು ನಮ್ಮ ಶಾಲೆಯಲ್ಲಿ ಸಾಮಾನ್ಯ ಸಮಸ್ಯೆ. ಇದಕ್ಕೆ ಹೆತ್ತವರು ಬಡವರಿರಬಹುದು ಪಾಪ ಎಂಬ ಅನುಕಂಪ ಬೇಡ. ಮನೆಯಿಂದ  ಬುತ್ತಿ ಕಟ್ಟಿ ಕೊಟ್ಟದ್ದನ್ನು ದಾರಿಯಲ್ಲೇ ಎಸೆದು ಬರುತ್ತಿದ್ದವರ ಸಂಖ್ಯೆಯೇ ಇದರಲ್ಲಿ ಹೆಚ್ಚಿದ್ದುದು.. ಇದಕ್ಕಿದ್ದ ದೊಡ್ಡ ಕಾರಣವೆಂದರೆ ಊಟ ಮಾಡಿಕೊಂಡು ಸಮಯ ಹಾಳು ಮಾಡಿ, ತಮ್ಮ ಆಟದ ಹೊತ್ತನ್ನು ಕಡಿಮೆ ಮಾಡಲು ಮನಸ್ಸಿಲ್ಲದಿದ್ದುದೇ ಆಗಿತ್ತು. 
ಇದನ್ನು ತಡೆಯಲು ಶಾಲೆಯಲ್ಲಿ ಆಗಾಗ ಶಿಕ್ಷಕರು ಕ್ಲಾಸಿನಲ್ಲಿ ಎಲ್ಲರ ಬುತ್ತಿಗಳನ್ನು ಪರಿಶೀಲಿಸಿ ತಾರದಿದ್ದ ಮಕ್ಕಳಿಗೆ ಕಠಿಣ ಶಿಕ್ಷೆ ವಿಧಿಸುವುದೂ ಜಾರಿಗೆ ಬಂತು. ನಾನು ಕೂಡಾ ಅಮ್ಮ ಕೊಟ್ಟ ಬುತ್ತಿಯನ್ನು ಮನೆಯಲ್ಲೇ ಮಂಚದ ಅಡಿಯಲ್ಲಿ ಅಡಗಿಸಿಟ್ಟೋ, ದೊಡ್ಡ ಸ್ಟೀಲ್ ಪಾತ್ರಗಳ  ಹಿಂದೆ  ಬಚ್ಚಿಟ್ಟು ಬರುವುದರಲ್ಲಿ ಪರಿಣತಿಯನ್ನು ಸಾಧಿಸಿದ್ದೆ. 

ತುಂಬಾ ದಿನಗಳಿಂದ ಬುತ್ತಿ ಪರಿಶೀಲನೆ ಇಲ್ಲದೆ ನಾವುಗಳೆಲ್ಲ ಮೊದಲಿನಂತೆ ಬುತ್ತಿ ತಾರದೇ ಬರುತ್ತಿದ್ದೆವು. ಆ ದಿನ ಕ್ಲಾಸಿಗೆ ಪಾಠ ಮಾಡಲು ಬಂದ ಸರ್ ' ಎಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಬುತ್ತಿ ತೋರಿಸಿ' ಅಂದರು. ನನ್ನ ಬುತ್ತಿ ಆ ದಿನ ಮನೆಯ ಮಂಚದಡಿಯಲ್ಲಿತ್ತು.  ಒಬ್ಬೊಬ್ಬರಾಗಿ ನಿಂತು ತಮ್ಮ ಬುತ್ತಿಯನ್ನು ಕೈಯಿಂದ  ಎತ್ತಿ ತೋರಿಸಿ ಅದರೊಳಗೆ ಏನಿದೆ ಎಂಬುದನ್ನು ಹೇಳಬೇಕಿತ್ತು. ಹೆಚ್ಚಿನವರು ಪೇಪರಿನಲ್ಲಿ ಸುರುಳಿ ಸುತ್ತಿದ ರೊಟ್ಟಿಯನ್ನು ತಂದಿದ್ದರು. ನನ್ನ ತಲೆಗೆ ಅದನ್ನು ನೋಡಿ ಉಪಾಯ ಹೊಳೆಯಿತು. ನಲ್ವತ್ತು ಪೇಜಿನ ಕಾಪಿ ಪುಸ್ತಕದ ಖಾಕಿ ಕಲರಿನ ಬೈಂಡ್  ತೆಗೆದು, ಪುಸ್ತಕವನ್ನು ಸುರುಳಿ ಸುತ್ತಿ ಅದರ ಹೊರಗೆ ಖಾಕಿ ಬೈಂಡನ್ನು ಸುತ್ತಿ ರೊಟ್ಟಿಯ ಸುರುಳಿಯಂತೆ ತಯಾರು ಮಾಡಿದೆ. ನನ್ನ ಸರದಿ ಬಂದಾಗ ರೊಟ್ಟಿ, ಗೆಂಡೆಕಾಳು ಗೈಪ್ಪು'(ಆಲೂಗಡ್ಡೆ ಬೀನ್ಸ್ ಕಾಳಿನ ಗಟ್ಟಿಯಾದ ಸಾಂಬಾರ್) ಎಂದೆ. ಬೀಸುವ ದೊಣ್ಣೆ ತಪ್ಪಿತ್ತು. 

ಅವರು ತುಂಬಾ ಸ್ಟ್ರಿಕ್ಟ್ ಎಂದೇ ಹೆಸರುವಾಸಿ. ಅವರ ಹತ್ತಿರ ನಿಂತು  ಮಾತನಾಡುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಅವರು ಪ್ರತಿ ಪಾಠದಿಂದ ಕಡಿಮೆ ಎಂದರೂ ಎಪ್ಪತ್ತು ಪ್ರಶ್ನೆಗಳನ್ನು ತಾವೇ ಸಿದ್ಧ ಮಾಡಿ ಕೊಡುತ್ತಿದ್ದರು. ಅದಕ್ಕೆಲ್ಲಾ ಉತ್ತರ ಬರೆಯುವುದೆಂದರೆ ಪಾಠ ಪುಸ್ತಕವನ್ನು ಇಡಿಯಾಗಿ ಓದಬೇಕಿತ್ತು. ಆ ಪ್ರಶ್ನೆಗಳನ್ನು ಅವರು ಶಾಲೆಯಲ್ಲಿ ಹೊಸತಾಗಿ ಬಂದ ಟೈಪ್ ರೈಟಿಂಗ್ ಮಿಷನ್ನಿನಲ್ಲಿ ಪ್ರಿಂಟ್ ಮಾಡಿಸುತ್ತಿದ್ದರು. ಒಂದು ಪಾಠ ಮುಗಿದ ಕೂಡಲೇ ಸಿದ್ಧಗೊಳ್ಳುತ್ತಿದ್ದ ಅದನ್ನು ನಾನು ಕ್ಲಾಸಿನಲ್ಲಿ ಓದಿ ಹೇಳಿ ಎಲ್ಲರೂ ಬರೆದುಕೊಳ್ಳುವಂತೆ ಮಾಡುತ್ತಿದ್ದೆ. ಆ ಹೊತ್ತಿನಲ್ಲಿ ಅವರು ಅದರಿಂದ ಮೊದಲು ಕೊಟ್ಟ ಪ್ರಶ್ನೆಗಳ ಉತ್ತರ ತಿದ್ದುತ್ತಿದ್ದರು.

ಆ ದಿನವೂ ಕೆಲವು ಪ್ರಶ್ನೆಗಳನ್ನು ಓದಿ ಹೇಳಿ ಆಗಿತ್ತು. ಇದ್ದಕ್ಕಿದ್ದಂತೇ ಕಂಡ ಪ್ರಶ್ನೆ ನೋಡಿ ನಗು ತಡೆಯಲಾಗಲಿಲ್ಲ. ನೋಟ್ಸ್ ತಿದ್ದುತ್ತಿದ್ದ ಅವರ ಹತ್ತಿರ ಹೋಗಿ ಇದನ್ನು ಜೋರಾಗಿ ಓದಿ ಎಂದೆ. " ಮಾನವನ ಮೂತ್ರ ಜನಕಾಂಗದ ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ" ಎಂದು ಓದಿದರು. ನಾನಿನ್ನೂ ಅಲ್ಲೇ ನಿಂತು ಸರಿಯಾಗಿ ಓದಿ ಎಂದೆ. ಮತ್ತೊಮ್ಮೆ ಕಣ್ಣಾಡಿಸಿ 'ಮಹಾ ತರಲೆ ಕಣಮ್ಮಾ ನೀನು ಎಂದು' ಅವರೂ ನಕ್ಕರು. 'ಮಾನವನ' ಎಂದಿರಬೇಕಾದಲ್ಲಿ 'ಮಾವನ' ಎಂದಿತ್ತು. 

ಶಾಲೆಯ ಒಂದು ಕವಾಟಿನ ಲೈಬ್ರರಿಯು ಮತ್ತಷ್ಟು ಕವಾಟುಗಳನ್ನು ಮರಿ ಹಾಕುವಲ್ಲಿ ಅವರ ಪುಸ್ತಕ ಪ್ರೀತಿ ಕೆಲಸ ಮಾಡಿತ್ತು. ಮೊದ ಮೊದಲು ಕವಾಟಿನೊಳಗೆ ಬಂಧಿಯಾಗಿದ್ದ ಪುಸ್ತಕ ಮಕ್ಕಳ ಕೈಗೆ ಯಾವಾಗ ಬೇಕೆಂದರಾವಾಗ ಮುಕ್ತವಾಗಿ ಸಿಗುವಂತೆ ಮಾಡಿದ ಪೊನ್ನಪ್ಪ ಸರ್.. 

ಉಪ್ಪಿನಕಾಯಿ  ಹಾಡು ಕಲಿಸಿದ ವೇದಾವತಿ ಟೀಚರ್..

ಹಿಂದಿ ಅಕ್ಷರಗಳನ್ನು ಚಿತ್ರಗಳೇನೋ ಎಂಬಂತೆ ನೋಡುತ್ತಿದ್ದ ನಮಗೆ ಹಿಂದಿ ಕಷಾಯವನ್ನು ಆರೆದು ಕುಡಿಸಿದ ಸರಸ್ವತಿ ಟೀಚರ್..

ಇಂಗ್ಲೀಷಿನ ಅಕ್ಷರಗಳನ್ನು ಝೆಡ್ ನಿಂದ  ಎ ಯವರೆಗೆ ಉಲ್ಟಾ ಬರೆಯಲು ಕೂಡಾ ಕಲಿಸಿದ ಪ್ರಸನ್ನ ಸರ್.. 

ನಾವು ಆನೆಮರಿ ಎಂದು ಅವರನ್ನು ಆಡಿಕೊಳ್ಳುವುದನ್ನು ತಿಳಿದಿದ್ದರೂ ಬೇಸರಿಸದೇ ರಸಾಯನ ಶಾಸ್ತ್ರವನ್ನು ಮಾವಿನಹಣ್ಣಿನ ರಸಾಯನದಂತೆ ಸಿಹಿಯಾಗಿ ಉಣಬಡಿಸಿದ ಕರುಣಾಕರ್ ಸರ್..

ಯಾರನ್ನು ನೆನೆದರೂ ಇವರು ನಮ್ಮ ಗುರುಗಳಾಗಿದ್ದರು ಎಂದು ಮನ ತುಂಬಿ ಬರುವಂತೆ ಮಾಡಿದವರಿಗೆಲ್ಲಾ ಈ ಶಿಷ್ಯೆಯ ಸಾಷ್ಟಾಂಗ  ಪ್ರಣಾಮಗಳು..

Tuesday, August 20, 2013

ಹಸಿರ ಹನಿಗಳು..

ಬಸ್ಸು ನನ್ನ ಬದಿಯಲ್ಲಿ ಬ್ರೇಕ್ ಹಾಕಿದರೂ ಹತ್ತಡಿ ದೂರದಲ್ಲಿ ನಿಂತಿತು. ಜೋರಾಗಿ ಸುರಿಯುತ್ತಿರುವ ಮಳೆ ಬಸ್ಸಿನ ಮೆಟ್ಟಲೇರುವವರೆಗೂ ಕೊಡೆ ಮಡಿಚಲು ಅವಕಾಶ ನೀಡಲಿಲ್ಲ. ಹೇಗೋ ಒಂದು ಕೈಯಲ್ಲಿ ಹಿಡಿದ ಕೊಡೆಯನ್ನು ಮಡುಚಿ ಬಸ್ಸಿನೊಳಗೆ ತೂರಿಕೊಂಡೆ. ನನ್ನ ಇನ್ನೊಂದು ಕೈಯಲ್ಲಿ ಬಗೆ ಬಗೆಯ ಹೂಗಿಡಗಳ ಗೆಲ್ಲಿನ ತುಂಡುಗಳ ದೊಡ್ಡ ಕಟ್ಟಿತ್ತು.ಅದು ಯಾರ ಕಣ್ಣು ಕೈಕಾಲುಗಳಿಗೆ ತಾಗದಂತೆ ಜಾಗ್ರತೆ ವಹಿಸುತ್ತಾ ಸೀಟಿಲ್ಲದ ಕಾರಣ ನಿಂತೇ ಇದೆ.ಕೆಲವರ ಕಾಲ ಬುಡದಲ್ಲಿ ಮತ್ತೆ ಕೆಲವರ ಕೊಡೆಯ ಒಳಗೆ, ಇನ್ನು ಕೆಲವರ ಮಡಿಲ ಮೇಲೆ ನನ್ನ ಕೈಯಲ್ಲಿದ್ದಂತೇ ಗಿಡಗಳ ಗೆಲ್ಲುಗಳು ರಾರಾಜಿಸುತ್ತಿದ್ದವು. ನನ್ನ ಕುತೂಹಲದ ಕಣ್ಣುಗಳು ಅವುಗಳ ಮೇಲೆ ಹರಿದಾಡಿದರೆ, ಅಲ್ಲೇ  ಪಕ್ಕದ ಸೀಟಿನಲ್ಲಿ ಕೂತ ಹೆಂಗಸೊಬ್ಬಳು ನನ್ನ ಕೈಯಲ್ಲಿದ್ದ ಗಿಡಗಳ ಕಟ್ಟನ್ನು ಎಳೆದು ತಿರುವಿ  ಮುರುವಿ  ನೋಡಿದಳು. 
'ಗುಲಾಬಿ ಯಾವ ಬಣ್ಣದ್ದು' ಅವಳ ಪ್ರಶ್ನೆ.
 "ಇದಾ.. ಇದು ಹಳದಿ, ಮತ್ತೊಂದು ಕೇಸರಿ.." 
"ಓಹ್.. ಹೌದಾ.. ಒಂದೊಂದೇ ಗೆಲ್ಲು ಇರೋದಾ?" ಅವಳ ಆಸೆಕಂಗಳ ಪ್ರಶ್ನೆ ಮರುಕಳಿಸಿತು. 
"ಕೆಲವು ಗಿಡಗಳು ಎರಡಿವೆ. ನೋಡಿ ಕೊಡ್ಬೇಕಷ್ಟೆ..ಆದ್ರೆ ಈಗ ಬಸ್ಸು ಹೋಗ್ತಾ ಇರುವಾಗ ತೆಗೀಯೋದು ಕಷ್ಟ" ಎಂದೆ ನಾನು. 
"ಅಯ್ಯೋ.. ಬನ್ನಿ ಬನ್ನಿ ನೀವಿಲ್ಲಿ ಕುಳಿತುಕೊಳ್ಳಿ.. ನಂಗೇನು.. ಸ್ವಲ್ಪ ದೂರದಲ್ಲಿ ಇಳಿಯೋದೇ.. ಅದ್ರ ಮೊದ್ಲು ಹುಡ್ಕಿ ಕೊಡಿ" ಎಂದು ಅವಳು ಕುಳಿತಲ್ಲಿಂದ ಎದ್ದು ನನಗೆ ಸೀಟ್ ಬಿಟ್ಟುಕೊಟ್ಟು ನನ್ನ ಕೈಯಿಂದ  ಬರುವ ಗಿಡದ ಗೆಲ್ಲಿಗಾಗಿ ಕಾಯುತ್ತಾ ನಿಂತಳು. ಅವಳ ಕೈಗೆ ನಾನಿತ್ತ ಗೆಲ್ಲನ್ನು ಅಮೂಲ್ಯ ನಿಧಿಯೇನೋ ಎಂಬಂತೆ ಹಿಡಿದುಕೊಂಡಳು. ಇಳಿಯುವಾಗ ನನ್ನೆಡೆಗೆ ತಿರುಗಿದ ಅವಳ ಮೊಗದಲ್ಲಿ ಏನನ್ನೋ ಗೆದ್ದಂತಹ ಸಂಭ್ರಮವಿತ್ತು.  

ಹಾಗಂತ ಹೀಗೆ ಗಿಡ ಹೊತ್ತುಕೊಂಡು ಹೋಗುವವರಲ್ಲೆಲ್ಲಾ ಸುಂದರ ಹೂತೋಟ ಇರುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕೆ ಅಂತೀರಾ? ನಮ್ಮಲ್ಲಿಗೆ ನನ್ನ ದೂರದ ಅತ್ತೆಯೊಬ್ಬರು ಆಗೀಗ ಭೇಟಿ ನೀಡುತ್ತಾರೆ. ಅದೂ ಮಳೆಗಾಲದಲ್ಲಂತೂ ಬಂದೇ ಬರುತ್ತಾರೆ.ಗೇಟು ಸರಿಸುವಾಗಲೇ ಕೈಯಲ್ಲಿ ಗಿಡ ಕತ್ತರಿಸುವ ಹರಿತ ಕತ್ತರಿಯನ್ನು ಝಳಪಿಸುತ್ತಲೇ ಬಿಜಯಂಗೈಯುತ್ತಾರೆ. ಬಂದವರು ಮನೆಯ ಒಳಗೂ ಬಾರದೇ ನೇರವಾಗಿ ಹೂತೋಟಕ್ಕೆ ದಾಳಿ ಇಡುತ್ತಾರೆ. ತಮಗೆ ಬೇಕೆನಿಸಿದ್ದನ್ನೆಲ್ಲಾ ಇದೊಂದು ಗೆಲ್ಲು ತೆಗೊಳ್ತೇನೆ, ಅದ್ರದ್ದೊಂದು ಪಿಳ್ಳೆ ಬೇಕಿತ್ತು ಎಂದು ತುಂಬಿಕೊಳ್ಳುತ್ತಾರೆ. "ಇದು ಕಳ್ದ ಸರ್ತಿಯೂ ಕೊಟ್ಟಿದ್ದೆ ಅಲ್ವಾ.. ಅದೇನಾಯ್ತು" ಎಂದರೆ, "ಅದಾ.. ಅದು ಬದುಕ್ಲಿಲ್ಲ ಮಾರಾಯ್ತಿ . ದೊಡ್ಡ ಚಟ್ಟಿಯಲ್ಲಿ ಭರ್ತಿ ಗೊಬ್ಬರ ಹಾಕಿ ನೆಟ್ಟಿದ್ದೆ ಯಾರದೋ ಕಣ್ಣು ಮುಟ್ಟಿತೋ ಏನೋ .. ಸತ್ತೇಹೋಯ್ತು ನೋಡು. ನಂಗೆ ಬೇಸರವಾಗಿ ಮೂರು ದಿನ ಅನ್ನ ಸೇರ್ಲಿಲ್ಲ. ಆ ಚಟ್ಟಿಯಲ್ಲಿ ಬೇರೇನೂ ಗಿಡ ನೆಡ್ಲೇ ಇಲ್ಲ. ಹಾಗೇ ಇಟ್ಟಿದ್ದೀನಿ. ಇದನ್ನು ತೆಗೊಂಡು ಹೋದ ಕೂಡ್ಲೇ ಮೊದಲು ಅದರಲ್ಲಿ ನೆಟ್ಟಾಗಿಯೇ ನನ್ನ ಸೀರೆ ಬದಲಾಸುವುದು ನೋಡು" ಅಂತ ಬೀಷ್ಮ ಪ್ರತಿಜ್ಞೆ ಮಾಡುತ್ತಿದ್ದರು. ನಿಜವಾದ ಸಂಗತಿ ಏನೆಂದರೆ ಮನೆಗೆ ಹೋದ ಕೂಡಲೇ ಸಾಧಾರಣ ಧನಕ್ಕೆ ಹಾಕುವ ಹುಲ್ಲಿನ ಕಟ್ಟದಷ್ಟು ದೊಡ್ಡ ಇರುವ, ಸರಿಯಾಗಿ ನೆಡಲು ಕಡಿಮೆ ಎಂದರೂ ಅರ್ಧ ಎಕರೆ ಜಾಗ ಬೇಡುವ ಈ ಗಿಡಗಳ ಕಟ್ಟನ್ನು ತಮ್ಮ ಮನೆಯ ಟೆರೇಸಿನ ಮೆಟ್ಟಲುಗಳ ಹಿಂದೆ ಇಟ್ಟು ಬಿಡುತ್ತಿದ್ದರು. ಅದು ಮಳೆ ಬಂದರೆ ಕೊಳೆದೋ ಬಿಸಿಲು ಬಂದರೆ ಒಣಗಿಯೋ ಕಡ್ಡಿಯಂತಾಗಿ ಬಿಸಾಡಲು ಯೋಗ್ಯವಾಗುತ್ತಿದ್ದವು. ಹೂವಿನ ಚಟ್ಟಿಯನ್ನೇರುವ ಭಾಗ್ಯ ಬರುತ್ತಲೇ ಇರಲಿಲ್ಲ. ಹಾಗಾಗಿ ಇವರ ಮನೆಯ ಹೂಕುಂಡಗಳು ಸರಕಾರೀ ವನಮಹೋತ್ಸವದಲ್ಲಿ ಗಿಡ ನೆಟ್ಟ ಹೊಂಡಗಳಂತೆ ಸದಾ ಖಾಲಿಯಾಗಿ ನಳನಳಿಸುತ್ತಿದ್ದವು.

ಇನ್ನು ಕೆಲವರಿಗೆ ಮಳೆಗಾಲ ಬಂತೆಂದರೆ ತಮ್ಮ ಹೂದೋಟವನ್ನು ಗಿಡ ಬೇಡುವವರಿಂದ ಕಾಪಾಡುವ ಚಿಂತೆ. ಒಳ್ಳೆಯ ಜಾತಿಯ ಕಸಿ ಕಟ್ಟಿದ ಗಿಡಗಳನ್ನೆಲ್ಲಾ ಸಾವಿರಾರು ರೂಪಾಯಿ  ದುಡ್ಡು ನರ್ಸರಿಗೆ ಕೊಟ್ಟು ತಂದಿರುತ್ತಾರೆ. ಅದರ ಗೆಲ್ಲನ್ನು ಪಕ್ಕದವರು ಬಿಟ್ಟಿಯಾಗಿಯೇ ಗಿಡ ಮಾಡಿಕೊಳ್ಳುತ್ತಾರೆ ಎಂದು  ಹೊಟ್ಟೆ ನೋವು.  ಹಾಗೆಂದು ಎಲ್ಲರೂ ಹೀಗಿರುವುದಿಲ್ಲ ಬಿಡಿ. 

ನನ್ನ ಪರಿಚಯದವರೊಬ್ಬರಿಗೆ ತಮ್ಮ ಮನೆಯ ಎಲ್ಲಾ ಗಿಡಗಳನ್ನು ಇನ್ನೊಬ್ಬರಿಗೆ ಹಂಚುವುದೆಂದರೆ ಬಾರೀ ಸಂತಸ. ಒಮ್ಮೆ ಅವರಲ್ಲಿ ಅತೀ ಅಪುರೂಪದ ಬಣ್ಣದ ದಾಸವಾಳದ ಗಿಡವಿತ್ತು. ನನ್ನ ಕಣ್ಣುಗಳು ಅವುಗಳ ಮೇಲೇ ಇದ್ದುದನ್ನು ಕಂಡು ಸರಕ್ಕನೆ ಕತ್ತಿಂದ ಅದರ ಗೆಲ್ಲನ್ನೊಂದು ತುಂಡು ಮಾಡಿ ನನ್ನ ಕೈಯಲ್ಲಿಟ್ಟರು. "ಅಯ್ಯೋ.. ಯಾಕೆ ತುಂಡು ಮಾಡಿದಿರಿ? ಇದು ಕಸಿ ಗಿಡ ಅಲ್ವಾ ಗೆಲ್ಲು ಬದುಕುತ್ತಾ" ಅಂದೆ. "ಅರ್ರೇ.. ನೆಟ್ಟು ನೋಡು ಬದುಕುತ್ತಾ ಅಂತ. ಬದುಕದಿದ್ದರೆ ಸಾಯುತ್ತದೆ ಅಷ್ಟೇ. ತಲೆ ಬಿಸಿ ಮಾಡ್ಬೇಡ ಸತ್ರೆ ಅದಕ್ಕೆ ಬೊಜ್ಜ ತಿಥಿ ಎಲ್ಲಾ ಮಾಡುವ ಖರ್ಚೇನು ಇಲ್ಲ" ಅಂತ ತುಂಟ ನಗೆ ನಕ್ಕರು. "ಅಲ್ಲಾ ಹೀಗೆ ನೀವು ದುಡ್ಡು ಕೊಟ್ಟು ತಂದ ಗಿಡವನ್ನು ಎಲ್ಲರಿಗೂ ಕೊಡ್ತೀರಲ್ವಾ.. ನಿಮಗೇನು ಲಾಭ" ಅಂದೆ. 

"ಲಾಭ ನಷ್ಟ ಎಲ್ಲಾ ವ್ಯವಹಾರಗಳಲ್ಲಿರೋದು. ಗಿಡಗಳಿಗೆ ಕೇವಲ ಮಣ್ಣಿನ, ನೀರಿನ ನಂಟು. ಆದ್ರೂ ನಂಗೆ ಲಾಭ ಅಂತು ಇದ್ದೇ ಇದೆ. ನನ್ನ ಮನೆಯಲ್ಲಿ ಆ ಗಿಡ ಅಳಿದರೆ ನಾನು ಗಿಡ ಕೊಟ್ಟಿರುವ ಯಾರದ್ದಾದ್ರು ಮನೆಯಲ್ಲಿ ಇದ್ದೇ ಇರುತ್ತೆ. ಹೋಗಿ ಕೇಳಿದ್ರಾಯ್ತು. ಹತ್ತಿರದಲ್ಲೇ ಸಿಗುತ್ತದೆ.ಮತ್ತೆ ನಂಗೆ ಬೇಕು ಅನ್ನಿಸುವ ಯಾವ ಗಿಡ ಕೇಳಿದ್ರು  ಇಲ್ಲಾ ಅನ್ನುವ ಜನರೇ ಇಲ್ಲ. ನೆರೆ ಹೊರೆಯೊಡನೆ ನಮ್ಮ ಸಂಬಂಧಗಳು ಗಿಡಗಳ ನೆಪದಲ್ಲಿಹತ್ತಿರವಾಗುತ್ತವೆ. ಬೇಕು ಎನ್ನಿಸಿದಾಗ ಸಹಾಯದ ಕೈಗಳು ತಾನಾಗಿಯೇ ಚಾಚುತ್ತವೆ..ನಾನು ಗಿಡಗಳಿಗೆ ಕೊಟ್ಟ ಹಣಕ್ಕಿಂತ ಈ ಸಾಮರಸ್ಯದ ಮೌಲ್ಯ ಹೆಚ್ಚು ಅಂತ ಅನ್ನಿಸಲ್ವಾ ನಿಂಗೆ.." ಅಂದರು. ಅವರ ಮಾತಿಗೆ ನಾನು ತಲೆದೂಗಲೇ ಬೇಕಾಯ್ತು.

ಯಾರು ಏನೇ ಹೇಳಲಿ, ಏನೇ ಅಭಿಪ್ರಾಯ ವ್ಯಕ್ತಪಡಿಸಲಿ, ಮಳೆಗಾಲವಂತು ನಾನು ಯಾರ ಮನೆಗೆ ಹೋದರೂ ಒಂದೆರಡಾದರು ಗಿಡಗಳಿಲ್ಲದೇ ಖಾಲಿ ಕೈಯಲ್ಲಿ ಬಂದದ್ದೇ ಇಲ್ಲ.ಅಲ್ಲಿಲ್ಲಿಂದ ತಂದು ನೆಟ್ಟ ಗಿಡಗಳು ಚಿಗುರಿ ಹೂವೋ ಕಾಯೋ ಬಿಟ್ಟಾಗ ಮತ್ತೊಮ್ಮೆ ಗಿಡಗಳನ್ನು ಕೊಟ್ಟ ಮನೆಯವರ ನೆನಪೂ ಹಸಿರಾಗುತ್ತದೆ. ಗಿಡ ಗೆಳೆತನದ ಬೇರುಗಳೂ ಗಟ್ಟಿಯಾಗಿ ಹರಡಿ ಭದ್ರವಾಗುತ್ತವೆ. ಸುಲಭದಲ್ಲಿ ಮಧುರ ಬಾಂಧವ್ಯದ ಸೇತುವೆ ನಿರ್ಮಿಸುವ ಈ ಗಿಡಗಳ ಬಗೆಗೆ ನಂಗಂತೂ ತುಂಬಾ ಪ್ರೀತಿ..ನಿಮ್ಗೂ ಹಾಗೇ ಅನ್ನಿಸಿದ್ರೆ ಹೇಳಿ.. ನಿಮ್ಮನೆಗೆ ಯಾವಾಗ ಬರ್ಲಿ ಗಿಡ ಕೇಳ್ಳಿಕ್ಕೆ.. ??

Wednesday, August 14, 2013

ಕಾಶ್ಯಪಿ ...ನಾನು ಕಾಶ್ಯಪಿ .. ಹೀಗೆಂದರೆ ಯಾರೆಂದು ನಿಮಗೆ ತಿಳಿದಿಲ್ಲವೇ.. ತಿಳಿಯುವುದಾದರೂ ಹೇಗೆ ಹೇಳಿ. ನನ್ನನ್ನು ನೋಡಿದ ನೆನಪು, ಮಾತನಾಡಿದ ನೆನಪು ನಿಮ್ಮಲ್ಲಿದ್ದರೆ ತಾನೇ..?ಅರಮನೆಯೆಂಬ ಪಂಜರದಲ್ಲಿ ನಾನು ಸದಾ ಬಂಧಿ. ಅಲ್ಲಿ ನನ್ನ ಮಾತುಗಳು ಸ್ವಂತದ್ದಲ್ಲ.ಕಲಿಸಿದ್ದನ್ನು ನುಡಿಯುವ ಗಿಣಿ ನಾನು.. ಆಕಸ್ಮಿಕವಾಗಿ ನನ್ನನ್ನು ನೋಡಿದ್ದರೂ, ಈಗಂತೂ ಹೀಗೆ  ಅರಮನೆಯ ರೀತಿ ರಿವಾಜಿನ ಮುಸುಕನ್ನು ಸರಿಸಿ ಒಬ್ಬಂಟಿಯಾಗಿ ನಡೆಯುತ್ತಿರುವ ನಾನು ಒಂದು ರಾಜ್ಯದ ರಾಣಿಯಾಗಿದ್ದೆ ಎಂದರೆ ನಂಬುವವರಿದ್ದಾರೆಯೇ..!ಹಾಂ.. ಏನು ಹೇಳಿದೆ ನಾನು.. ರಾಣಿಯೆಂದೆನೇ.. ನನ್ನೊಳಗೂ ಅದೇ ಆಸೆಯಿತ್ತೇನೋ .. ಈಗ ಹೊರ ಬಂದಿದೆ ಅಷ್ಟೇ.. ಅವನಾವ ರಾಜ್ಯಕ್ಕೂ ರಾಜನೇ ಆಗಿರಲಿಲ್ಲ ಎಂದ ಮೇಲೆ ನಾನು ರಾಣಿಯಾಗಿದ್ದಾದರೂ ಯಾವಾಗ..? ಹಾಗಿದ್ದರೆ ಅವನ ಹೃದಯದ ರಾಣಿಯಾಗಿದ್ದೆ ಎನ್ನಲೇ.. ಹೂಂ.. ಎನ್ನಬಹುದಿತ್ತೇನೋ..ನನ್ನ ಪಾಲಿನ ಆ ಸುಳ್ಳನ್ನು  ನೀವು ನಿಜವೆಂದು ಒಪ್ಪಿಕೊಳ್ಳುವಿರಾದರೆ ...
 ಒಂದು ಕಾಲದಲ್ಲಿ ನಾನು ಹೀಗಿರಲಿಲ್ಲ. ಸೌಂದರ್ಯಕ್ಕೆ ಮಾಪಕ ಬೇಕೆಂದಿದ್ದರೆ ನನ್ನನ್ನೇ ಅಳತೆ ಕೋಲಾಗಿಸಬಹುದಿತ್ತು. ನನ್ನ ಕನ್ನಡಿ ನನ್ನನ್ನು ಹಾಗೆ ತೋರಿಸುತ್ತಿತ್ತು. ವಿವಾಹಾಪೇಕ್ಷಿ ರಾಜಕುವರರು ನಮ್ಮ ಅರಮನೆಗೆ ಭ್ರಮರಗಳಂತೆ ಸುತ್ತುತ್ತಿದ್ದರು. ಯಾರನ್ನು ವರಿಸಿದರೂ ರಾಜ್ಯಕ್ಕೆ ಮತ್ತೆಲ್ಲರೂ ಶತ್ರುಗಳಾಗುವ ಭಯ. ಇದಕ್ಕಾಗಿಯೇ ನನ್ನ ಅಪ್ಪ ಬಾನುಮಂತ ನನಗೂ ಸ್ವಯಂವರ ಏರ್ಪಡಿಸಿದ್ದ. ಅಲ್ಲಿಗೆ ರಾಜಕುವವರ ದಂಡೇ ಬಂದಿತ್ತು. ಅವರಲ್ಲಿ ಕೌರವನೂ ಇದ್ದ. ಅವನನ್ನು ನೋಡಿದರೂ ಯಾವ ಮಧುರ ಭಾವನೆಗಳೂ ನನ್ನೊಳಗೆ ಮೊಳೆತಿರಲಿಲ್ಲ. ದಿಕ್ಕರಿಸಿ ಮುಂದೆ ಹೋದವಳು ನಾನು. ಆದರೆ ಕರ್ಣ ತನ್ನ ಗೆಳೆಯನಿಗಾಗಿ ನನ್ನನ್ನು ಗೆದ್ದುಕೊಟ್ಟ. ಗೆಳೆಯನ ಪೌರುಷದ ಮೇಲೆ ವಿವಾಹವಾದ ಅವನ ಬಗ್ಗೆ ಪ್ರೀತಿಯೆಂದೇನೂ ಇರದಿದ್ದರೂ ಬಂದ ಬದುಕನ್ನು ಒಪ್ಪಿ ಅಪ್ಪಿಕೊಂಡವಳಾಗಿದ್ದೆ.  

ಕುರುಕುಲದ ಸೊಸೆಯಾಗಿ ಈ ಮನೆಯ ಹೊಸಿಲು ತುಳಿದ ನಾನು ತವರನ್ನು ತೊರೆದು ಬರುವಾಗ ಕನಸ ಮೂಟೆಯನ್ನೂ ಹೊತ್ತೇ ಬಂದವಳು. ಕ್ಷತ್ರಿಯ ಕುಲದ ಹಿರಿಮೆ ಗರಿಮೆ ಎಲ್ಲಾ ಈ ಕುರುಕುಲದ ಕಾಲಡಿಯಲ್ಲೇ ಬಿದ್ದಿತ್ತು. ಯುವರಾಜ ದುರ್ಯೋದನನ ಅರಸಿಯಾಗಿ ಅಂತಃಪುರ ಸೇರಿದ್ದೆ. ದುರ್ಯೋಧನನ ಅತಿ ಪ್ರೀತಿಯ ರಾಣಿ ನಾನು.. ಹಾಗೆಂದು ಅವನು ಕೇವಲ ನನ್ನ ರಮಣ ಮಾತ್ರ ಆಗಿರಲಿಲ್ಲ. ರಾಜ್ಯದ ಹಿತರಕ್ಷಣೆಗಾಗಿ ಒಬ್ಬಳನ್ನು ಮದುವೆಯಾದರೆ, ಯುದ್ಧದಲ್ಲಿ ಗೆದ್ದ ಕನ್ಯೆಯಾಗಿ ಇನ್ನೊಬ್ಬಳು..ಇದು ನಮಗೆ ಹೊಸ ವಿಷಯವೇನೂ ಆಗಿರಲಿಲ್ಲ.  ನನಗೆ ಯಾರ ಮೇಲೂ ಮುನಿಸಿರಲಿಲ್ಲ. ಹೀಗಿರುವುದೇ ರಾಜ ಕುವರನ  ಜೀವನ ಎಂಬುದನ್ನು ಅರಗಿಸಿಕೊಂಡಿದ್ದೆ. ಜೊತೆಗೆ ಅವರ್ಯಾರೂ ನನ್ನ ಸ್ಥಾನವನ್ನು ಕಿಂಚಿತ್ತೂ ಅಲುಗಾಡಿಸುವ ಸಾಮರ್ಥ್ಯ ಹೊಂದಿದವರಾಗಿರಲಿಲ್ಲ ಎನ್ನುವುದೂ ನನ್ನ ನೆಮ್ಮದಿಯ ಮೂಲ ಕಾರಣವಿತ್ತೇನೋ..!
ಇಲ್ಲಿ ನನಗೆ ಸಿಗುತ್ತಿದ್ದ ಬೆಲೆ, ಪ್ರೀತಿ ಆದರಗಳಿಂದಾಗಿ ಇದರಿಂದ ಹೊರಗಿಣುಕುವ ಕಣ್ಣುಗಳನ್ನು ಮುಚ್ಚಿಕೊಂಡಿದ್ದೆ. ಅಂತಃಪುರದ ಹೊರಗಿನ ಲೋಕ ನನ್ನದಲ್ಲ. ನನ್ನರಿವಿಗೆ ಸಿಗದಿದ್ದ ಲೋಕವದು..  ಆದರೆ ರಾಜಕಾರಣ ಮತ್ತು ಕ್ಷತ್ರಿಯರ ಆಯುಧಗಳು ಇನ್ನೊಬ್ಬನ ರಕ್ತಕ್ಕಾಗೇ ಹಪ ಹಪಿಸುತ್ತಿರುವುದನ್ನು ನಾನು ಬಲ್ಲೆ. 
ಅಂದು ಕಿವಿಗೆ ಬಿದ್ದ ಸುದ್ಧಿಯಾದರೂ ಎಂತಹುದು.. ದ್ರುಪದ ಸುತೆ ದ್ರೌಪದಿಗೆ ಸ್ವಯಂವರವಂತೆ..ಅವಳನ್ನು ವರಿಸಲು ರಾಜಕುವರರೆಲ್ಲ ಸಾಲು ಗಟ್ಟಿ ನಿಲ್ಲುತ್ತಿದ್ದರೇನೋ ನಿಜ. ಆದರೆ ನನಗೆ ಆತಂಕ ತಂದಿದ್ದ ವಿಚಾರ ಎಂದರೆ  ಆರ್ಯಪುತ್ರ ದುರ್ಯೋಧನ ಆ ಸ್ವಯಂವರಕ್ಕೆ ಕನ್ಯಾಕಾಂಕ್ಷಿಯಾಗಿ ಹೋಗಲು ತುದಿಗಾಲಲ್ಲಿ ಹೊರಟು ನಿಂತದ್ದು. ಅಂದೊಂದು ದಿನ ಗುರು ದ್ರೋಣಾಚಾರ್ಯರ ಗುರು ದಕ್ಷಿಣೆಯಾಗಿ  ಇದೇ ಕುರುಕುಲದ ಅರ್ಜುನ, ದ್ರುಪದನ ಹೆಡೆಮುರಿ ಕಟ್ಟಿ ಗುರುವಿನ ಕಾಲುಗಳಡಿಯಲ್ಲಿ ಮಲಗಿಸಿದ್ದ. ದ್ರುಪದನ ಎದೆಯೊಳಗೆ ಈ ಅವಮಾನ ಆರದ ಬೆಂಕಿಯಾಗಿ  ಹೊಗೆಯಾಡುತ್ತಿತ್ತು..  ಈ ಸೇಡಿಗಾಗಿಯೇ ಹುಟ್ಟಿ ಬಂದ ಯಜ್ಞಕನ್ಯೆ ಅವಳು.ನನ್ನ ಹಾಗೆ ಕೇದಿಗೆ ಬಣ್ಣದ ಮೈಯ ಒಡತಿಯೇನಲ್ಲ. ಪ್ರಜ್ವಲಿಸಿ ಉರಿದ ನಂತರ ಜಲ ಸ್ಪರ್ಶದಿಂದ ತಣ್ಣಗಾದ ಕೆಂಡದ ಮೈಯವಳು.. ಅವಳ ಪ್ರಖರತೆಗೆ ಕರಗುವವರೇ ಎಲ್ಲ.. ಆದರೂ ಅವಳನ್ನು ಬಯಸಿ ಅಲ್ಲಿಗೆ ನನ್ನರಸ ಹೋಗುವುದು ನನಗೆ ಹರಿತವಾದ ಚೂರಿಯನ್ನು ಮೈಯಲ್ಲಿ ನೆಟ್ಟಂತ ನೋವು ನೀಡುತ್ತಿತ್ತು. ಆರ್ಯಪುತ್ರನಿಗೆ ಇನ್ನಿಲ್ಲದೆ ತಿಳಿಹೇಳಿದೆ. ಕಾಲಿಗೆ ಬಿದ್ದೆ. 'ಯಾರು ಬಂದರೂ ನನ್ನ ಪಟ್ಟದರಸಿ ನೀನೇ ಪ್ರಿಯೆ' ಎಂದು ಮುದ್ದುಗರೆದ.

 ಕ್ಷಣಕಾಲ ಕರಗಿದ್ದೆನಷ್ಟೇ.. ಎಚ್ಚೆತ್ತಾಗ ಅವನ ರಥದ ದೂಳು ಕೋಟೆಯ ಆಚೆ ರಂಗೇರಿಸಿತ್ತು. 

ನಾನೂ ಹಠಕ್ಕೆ ಬಿದ್ದೆ. ದ್ರೋಣಾಚಾರ್ಯರನ್ನು ಕಂಡೆ. 'ನಿಮ್ಮ ಶಿಷ್ಯನನ್ನು ತಡೆಯಿರಿ, ನಿಮ್ಮ ಶತ್ರುವಿನ ಮಗಳು ಅರಮನೆಯ ರಾಣಿಯಾಗುವುದನ್ನು ನೀವು ಇಷ್ಟ ಪಡುವುದು ಸಾಧ್ಯವೇ' ಎಂದು ಕೇಳಿದೆ.  ಅವರು ನಕ್ಕು ನುಡಿದರು. 'ಅವನ ಹಠವೇ ಅವನನ್ನು ಸೋಲಿಸುತ್ತದೆ ಮಗಳೇ.. ನಿಶ್ಚಿಂತೆಯಿಂದಿರು .' 

ಅವರು ಹೇಳಿದ್ದು ನಿಜವಾಗಿತ್ತು. ಅವನ ಆಸೆ ಇದ್ದದ್ದು ದ್ರೌಪದಿಯನ್ನು ಪಡೆಯುವತ್ತ ಮಾತ್ರ. ಅದಕ್ಕಾಗಿ ಗೆಲ್ಲಲೇಬೇಕಿದ್ದ ಸ್ಪರ್ಧೆಯಲ್ಲಿ ಗೆಲ್ಲುವ ಚಾತುರ್ಯ ಅವನಲ್ಲಿರಲಿಲ್ಲ. ಸೋತು ಬರಿಗೈಯಲ್ಲಿ ಮರಳಿದ್ದ. ಆದರೆ ಮನದೊಳಗೆ ಇನ್ನಷ್ಟು ದ್ವೇಷದ ಉರಿ ಹೆಚ್ಚಿಸಿಕೊಂಡಿದ್ದ. ಅದಕ್ಕೆ ಕಾರಣ, ಅವನು ಸತ್ತಿದ್ದಾರೆ ಎಂದು ನಂಬಿದ್ದ ಪಾಂಡವರು ಬದುಕಿರುವುದೇ ಆಗಿತ್ತು. ಅಷ್ಟಾದರೆ ಸುಮ್ಮನಿರುತ್ತಿದನೋ ಏನೋ.. ಆದರೆ ಅವನಿಗೆ ಸಿಗದ ಪಾಂಚಾಲಿ ಪಾಂಡವರೈವರ ಪತ್ನಿಯಾಗಿದ್ದಳು. ತಮ್ಮ ಹಕ್ಕಿಗಾಗಿ ಮತ್ತೆ ಇಲ್ಲಿಗೇ ಮರಳುತ್ತಿದ್ದರು. 

ಪಾಂಡವರ ಬಗೆಗಿನ ಅವನ ಕೋಪಕ್ಕೆ ಅವನು ಮಾತ್ರ ಹೊಣೆ ಎಂಬುವುದನ್ನು ನಾನು ಒಪ್ಪಲಾರೆ. ಕಣ್ಣು ಕಾಣದೇ ಇದ್ದರೂ ತಮ್ಮಂದಿರ ಮಕ್ಕಳ ಅವನತಿಯನ್ನು ಬಯಸುತ್ತಿದ್ದ ದೃತರಾಷ್ಟ್ರ ಕಾರಣನಾಗಿದ್ದ. ಕುಂತಿಗೆ ಮಕ್ಕಳಾತೆಂದು ತಿಳಿದು ತನ್ನ ಹೊಟ್ಟೆಯನ್ನೇ ಹೊಸಕಿಕೊಂಡ ನನ್ನತ್ತೆ ಗಾಂಧಾರಿ ಇದ್ದಳು. ಎಲ್ಲಕ್ಕಿಂತ ಮುಖ್ಯವಾಗಿ ಮಾವ ಶಕುನಿ ಇದ್ದ. ಇವರೆಲ್ಲರ ನಡೆ ನುಡಿಗಳೇ ಅವನ ಹಠಕ್ಕೆ ನಾಂದಿ ಎಂಬುದನ್ನು ನಾನು ಬಲ್ಲೆ. ಆದರೆ ಹೇಳಲು ಸಾಧ್ಯವೇ.. ಹೇಳಿದರೂ ಕೇಳುವವರಿದ್ದರೇ.. 

ಮೋಸದ ದ್ಯೂತದಲ್ಲಿ ಮತ್ತೆ ಅವರನ್ನು ಸೋಲಿಸಿದ. ಎಲ್ಲವನ್ನೂ ತನ್ನದಾಗಿಸಿ ಅವರನ್ನು ಸುಮ್ಮನೇ ಹೊರಗಟ್ಟಬಹುದಿತ್ತು. ಆದರೆ ತನಗಾದ ಅವಮಾನದ ಮುಳ್ಳಿನ ಮೊನೆಯನ್ನು ಮತ್ತೆ ಚುಚ್ಚಿಸಿಕೊಳ್ಳಲೆಂದೇ ದ್ರೌಪದಿಯನ್ನು ತುಂಬಿದ ಸಭೆಗೆ ಕರೆತಂದ. ಪರದೆಯಿಲ್ಲದೇ ಹೊರಲೋಕಕ್ಕೆ ತೆರೆದುಕೊಳ್ಳದ ಸ್ತ್ರೀ ಜಗತ್ತು ನಮ್ಮದು. ಆದರೆ ಅವನು ಮಾಡಿದ್ದೇನು. ಅವಳ ಮೇಲೆ ಇದ್ದೊಂದು ಬಟ್ಟೆಯನ್ನೂ ಸೆಳೆಯಲು ದುಶ್ಯಾಸನನಿಗೆ ಅಪ್ಪಣೆ ಮಾಡಿದ. 
ಅಬ್ಬಾ ಎಂತಹ ಸ್ಥಿತಿ ಅವಳದ್ದು. ಆದರೆ ಸುಮ್ಮನೆ ತಲೆ ತಗ್ಗಿಸಿ ನಿಲ್ಲಲಿಲ್ಲ ಅವಳು, ಮೊದಲಿಗೆ ಬೇಡಿದಳು, ತನ್ನ ಮೇಲೆ ಕನಿಕರಿಸಿ ಎಂದು ಹಿರಿಯರನ್ನು ಕೂಗಿ ಕೂಗಿ ಕೇಳಿದಳು. ಯಾರೂ ತಲೆ ಎತ್ತಲಿಲ್ಲ. ದುಶ್ಯಾಸನ ಸೀರೆಯನ್ನು ಸೆಳೆಯುತ್ತಿದ್ದಾಗ ನನ್ನನ್ನೂ ಹೆಸರಿಸಿ ಕೂಗಿದಳಂತೆ. ಅಂತಃಪುರದ ಮುಚ್ಚಿದ ಬಾಗಿಲಿನ ಒಳಗೆ ಅವಳ ಧ್ವನಿ ಹರಿದು ಬರಲಿಲ್ಲ. ಮತ್ತೆ ಕೆರಳಿದಳು, ಪ್ರತಿಭಟಿಸಿದಳು, ಶಪಿಸಿದಳು. ಕೊನೆಗೆ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಕೃಷ್ಣನಿಗೆ ಶರಣಾದಳು. ವಸುದೇವಪುತ್ರ ಅದೇನು ಮೋಡಿ ಮಾಡಿದನೋ.. ಯಾರು ಅವಳ ಬೆತ್ತಲನ್ನು ಕಾಣಲು ಕಣ್ಣು ಬಿಟ್ಟು ಕುಳಿತಿದ್ದರೋ ಅವರ ಒಳಗೆಲ್ಲಾ ಬೆತ್ತಲಾಯಿತು. ಅವಳು ಇದ್ದಂತೇ ಇದ್ದಳು. 

ಅಯ್ಯೋ.. ಇದೇನಾಗಿಹೋಯಿತು..!! ನಿನ್ನ ತೊಡೆಗಳನ್ನು ಮುರಿದು ನಿನ್ನನ್ನು ಕೊಲ್ಲುತ್ತೇನೆ ಎಂದು ಭೀಮ ತುಂಬಿದ ಸಭೆಯಲ್ಲಿ ಮಾಡಿದ ಪ್ರತಿಜ್ಞೆ ನನ್ನ ಕಿವಿಗಳಿಗೂ ಅಪ್ಪಳಿಸಿತು. ದ್ರೌಪದಿಯ ಬಿರಿದ ಕೇಶಕ್ಕೆ ದುಶ್ಯಾಸನನ ರುಧಿರವನ್ನೇ ಎಣ್ಣೆಯಾಗಿಸಿ ಬಾಚಿ ಕಟ್ಟುತ್ತೇನೆ. ಅಲ್ಲಿಯವರೆಗೆ ಈ ಕೇಶ ಹೀಗೇ ಹಾರಾಡುತ್ತಿರಲಿ .. ಸೋಲಿನಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಧೀರೋದ್ದಾತ ಸ್ವರವದು. ಈಗ ದ್ಯೂತದಲ್ಲಿ ಸೋತವರು ತಲೆ ಎತ್ತಿ ಕುಳಿತಿದ್ದರು, ಗೆದ್ದೆವೆಂದುಕೊಂಡಿದ್ದವರು ಮತ್ತಷ್ಟು ಕಶ್ಮಲದ ಗುಂಡಿಗೆ ಬಿದ್ದಿದ್ದರು.  

ಎಂತಹ ಷಂಡನನ್ನು ಗಂಡನಾಗಿ ಪಡೆದಿದ್ದೇನೆ ನಾನು ಎಂದು ಆಗ ಅರಿವಾಯಿತು ನನಗೆ. ಅಂತಃಪುರಕ್ಕೆ ಬಂದವನನ್ನು ನೋಟದಿಂದಲೇ ತಿವಿದೆ. ಬುದ್ಧಿ ಮಾತುಗಳನ್ನು ಹೇಳಿದೆ. ಕಾಲಪ್ಪಳಿಸಿ ಹೋದ. ಕೌರವ ಕೆಟ್ಟವನೇ.. ಅಲ್ಲ ಸಹವಾಸ ದೋಷದಿಂದ ಕೆಟ್ಟವನಾದ ಎಂದಿದ್ದರೆ ಆತ ನನ್ನ ಸಹವಾಸಿಯಾಗಿಯೂ ಇದ್ದನಲ್ಲವೇ.. ನಾನೇಕೆ ಅವನನ್ನು ಬದಲಿಸಲು ಆಗಲಿಲ್ಲ..? ಮೊದಲಿನಿಂದಲೂ ಅವನನ್ನು ಅನುಸರಿಸಬೇಕಾದ  ನನಗೆ ಅವನ ಬೆನ್ನು ಮಾತ್ರ ಕಾಣುತಿತ್ತೇನೋ.. ಮೊಗದ ಕಡೆ ನೋಡಿದರೆ ಅದರ ಕ್ರೂರತನ ತಿಳಿಯುತ್ತಿತ್ತು.. ಅವನ ದಾರಿ ಬೇರೆ.. ನನ್ನದೇ ಬೇರೆ ಎಂದು ಅಂದು ಅರಿವಾಯಿತು. 

ಹದಿನೆಂಟು ದಿನಗಳ ಯುದ್ಧ ಮುಗಿದಿತ್ತು.ಗೆದ್ದವರು ಯಾರಿದರಲ್ಲಿ.. ಯಾರ ಮೊಗದಲ್ಲೂ ಗೆಲುವಿನ ನಗೆಯಿರಲಿಲ್ಲ. ಎಲ್ಲರೂ ಕಳೆದುಕೊಂಡವರೇ ಆಗಿದ್ದರು. ಎತ್ತ ನೋಡಿದರೂ ಹೆಣಗಳ ರಾಶಿ. ಗಂಗೆಯ ದಡದಲ್ಲಿ ಚಿತೆಗಳು ಸಾಲಾಗಿ ಉರಿಯುತ್ತಿದ್ದವು. ಗುರುತು ಹಿಡಿದವರೆಷ್ಟೋ, ಅನಾಥ ಹೆಣಗಳೆಷ್ಟೋ.. ಅದರ  ಬೆಂಕಿಯ ದಗೆಗೆ ಗಂಗೆಯ ನೀರೇ ಕುದಿಯುತ್ತಿದೆ.. 

ಹಾಂ.. ಯಾವ ಭೂಮಿಗಾಗಿ ಆಸೆ ಪಟ್ಟಿದ್ದನೋ ಅದೇ  ಭೂಮಿಯಲ್ಲಿ ಮಲಗಿದ್ದ ದುರ್ಯೋಧನ. ಅವನನ್ನು ಏಳಿಸಿ ಪರಾಕು ಹೇಳುವವರಾರೂ ಇರಲಿಲ್ಲ.ಜೀವ ಇರುವಾಗ ಏನನ್ನೆಲ್ಲಾ ಬೇಡಿದ್ದನೋ, ಸಾಯುವಾಗ ಒಂದನ್ನೂ ಒಯ್ಯಲಿಲ್ಲ.ಅಲ್ಲಿಯವರೆಗೆ ದುರ್ಯೋಧನನಾಗಿದ್ದವ ಸತ್ತ ನಂತರ ತನ್ನ ಭೌತಿಕ ಲಾಂಚನಗಳು, ಅಧಿಕಾರ ದರ್ಪ, ಮೋಹ ಮಾತ್ಸರ್ಯ ಎಲ್ಲವನ್ನೂ ಕಳಚಿ ತಣ್ಣಗೆ ಬಿದ್ದ ಹೆಣವಾಗಿದ್ದ. ಏನನ್ನು ಸಾಧಿಸಿದ ಕೌರವ.. ಯಾಕಾಗಿ ಹೋರಾಡಿದ..?  ಸೋಲು ಖಚಿತ ಎಂದು ತಿಳಿದಿದ್ದರೂ ಯುದ್ಧ ಮಾಡಿ ಸೋತ. ಸಾಯುತ್ತೇನೆ ಎಂದು ತಿಳಿದಿದ್ದರೂ ಓಡಿ ಹೋಗದೆ ಸತ್ತ.. ಮಲಗಿರುವ ಅವನು ಉತ್ತರ ಹೇಳದೇ ಮೌನವಾಗಿದ್ದ. ಅವನ ಮೌನ ಇನ್ನೂ ಸಾವಿರ ಸಾವಿರ ಇಂತಹ ಪ್ರಶ್ನೆಗಳಿಗೆ ತಾನಾಗೆ ಉತ್ತರ ಹೇಳುತ್ತಿತ್ತು.
ಕುರುಕ್ಷೇತ್ರದ ಯುದ್ಧಭೂಮಿಯ ಪ್ರತಿಕ್ಷಣವನ್ನೂ ಸಂಜಯ, ಕಣ್ಣು ಕಾಣದ ನನ್ನ ಮಾವ ದೃತರಾಷ್ಟ್ರನಿಗೆ ಹೇಳುತ್ತಿದ್ದನಂತೆ. ಇಡೀ ಯುದ್ಧಭೂಮಿಯ ಯಾವ ಭಾಗವೂ ಅವನ ಕಣ್ಣಿಂದ ಮರೆಯಾಗಿರಲಿಲ್ಲ.ಆದರೆ ಅವನ ಆ ಕಣ್ಣುಗಳಿಗೂ ನಮ್ಮ ಒಳಗಿನ ಯುದ್ಧದ ಅರಿವೇ ಇರಲಿಲ್ಲ. ನಿಟ್ಟುಸಿರಿನಲ್ಲಿ ನಿತ್ಯ ಬೇಯುವ ನಮ್ಮ ನೋವಿನ ಭಾವ ಅವನ ಎದೆಯನ್ನು ತಟ್ಟಿರಲೇ ಇಲ್ಲ. ಒಮ್ಮೆ ಅವನ ಒಳಗಣ್ಣ ನೋಟಕ್ಕೆ ನಮ್ಮ ನೋವು ನಿಲುಕುವಂತಿದ್ದರೆ.. ಬದುಕೇ ಬದಲಾಗುತ್ತಿತ್ತೇನೋ.. ಈಗ ಚಿಂತಿಸಿ ಏನು ಪ್ರಯೋಜನ..!!

 ಅರೇ..! ಯಾರಲ್ಲಿ ಸಾಲಾಗಿ ಹೋಗುತ್ತಿರುವವರು.. ಈ ಹೆಣಗಳ ರಾಶಿಯ ನಡುವೆಯೂ ಸಿಂಗರಿಸಿಕೊಂಡು, ಪರಿಮಳ ದ್ರವ್ಯವನ್ನು ಪೂಸಿಕೊಂಡು ನಡೆಯುತ್ತಿರುವವರು.. ಓಹ್.. ಅಂತಃಪುರದ ರಾಣಿಯರು.. ಗಂಡನೊಡನೆ ಚಿತೆಯೇರಲು ಹೋಗುತ್ತಿದ್ದಾರೆ. ನಾನೂ ಅವರಲ್ಲೊಬ್ಬಳಾಗಲೇ.. ಎಲ್ಲರ ದೃಷ್ಟಿ  ನನ್ನ ಮೇಲಿದೆ. ಅವನು ಸತ್ತ ಮೇಲೆ ನನಗೆ ಬದುಕುವ ಹಕ್ಕಿಲ್ಲ ಎಂದಿರಬಹುದೇ ಆ ನೋಟದ ಭಾವ.. ಇಲ್ಲಿ ಹೀಗೆ ಒಂಟಿಯಾಗಿ ನಿಲ್ಲುವುದು ಅಸಹನೀಯವೆನಿಸಿತು. ಹಿಂತಿರುಗೋಣವೆಂದುಕೊಂಡೆ.

..ಮಂದಮಾರುತವೊಂದು ಸನಿಹದಲ್ಲೇ ಸುಳಿದಂತೆ...!! ಕಣ್ಣೆತ್ತಿ ನೋಡಿದೆ... ಮೊಗದ ಮೇಲೆ ಆರದ ಮಂದಹಾಸ. ಅದೂ ಇಂತಹ ಸಮಯದಲ್ಲೂ.. ಕೃಷ್ಣನಲ್ಲವೇ ಅವನು.. ನನ್ನ ಹತ್ತಿರವೇ ಬರುತ್ತಿದ್ದಾನೆ.. ಮರಳಿ ಹೋಗಲೇ..ಹೆಜ್ಜೆಗಳು ಕದಲಲಿಲ್ಲ..  
"ಭಾನುಮತಿ.. ದುರ್ಯೋಧನನ ಸತಿ.." ಅವನ ಸ್ವರ ಕೋಮಲವಾಗಿತ್ತು. 
ಮಾತಾನಾಡದೇ ವಂದಿಸಿದೆ. " ನೀನು ಸಹಗಮನ ಮಾಡುವುದಿಲ್ಲ ಎಂದು ನಿರ್ಧರಿಸಿದ್ದು ನನಗೆ ಸಂತಸ ತಂದಿತು" ಎಂದ. 

ಬದುಕನ್ನು ಜೂಜಿನಂತೆ ತಿಳಿದ. ಇನ್ನೊಬ್ಬರು ಬಿದ್ದಾಗ , ಸೋತಾಗ, ಸತ್ತಾಗ ಅದು ತನ್ನ ಗೆಲುವು ಎಂದುಕೊಂಡ ಅವನ ಹಿಂದೆ  ಹೋಗುವುದೇ..  ಅವನು ಗೆಲುವೆಂದುಕೊಂಡದ್ದು ಸೋಲಿನ ಪ್ರಪಾತವಾಗಿತ್ತು. ಎದ್ದು ಬರಲು ಸಾಧ್ಯವೇ ಇರಲಿಲ್ಲ. ಕೈ ಹಿಡಿದೆತ್ತಲಾರದಷ್ಟು ಆಳಕ್ಕೆ ಮುಳುಗಿದ್ದ ಕೌರವ. ಬದುಕಿರುವಾಗಲೇ ಅವನ ದಾರಿಯಲ್ಲಿ ಹೆಜ್ಜೆ ಹಾಕದವಳಿಗೆ ಸತ್ತ ನಂತರ ಕಾಣದ ಮಾರ್ಗವನ್ನು ತುಳಿಯಲೇನಿತ್ತು. ಅವನಿಲ್ಲದೇ ಬದುಕಿಲ್ಲ ಎಂಬುದು ಸುಳ್ಳು..  ಬದುಕಿಗೆ ಅನಿವಾರ್ಯ ಯಾರೂ ಇಲ್ಲ ಎಂಬುದರ ಅರಿವು ನನ್ನೊಳಗಿತ್ತು. ಅವನ ಅನೀತಿ, ಅನಾಚಾರ, ಅನ್ಯಾಯಗಳ ಮಾರ್ಗದಲ್ಲಿ ಎಲ್ಲೂ ನನ್ನ ಹೆಜ್ಜೆ ಗುರುತುಗಳಿರಲಿಲ್ಲ. ಹಾಗಾಗಿ ಈಗಲೂ ಅವನು ಹೋದ ದಾರಿ ನನ್ನದಾಗಿರಲಿಲ್ಲ.
ಅವನ ಮೊಗವನ್ನು ಮತ್ತೊಮ್ಮೆ ನೋಡಿದೆ. ಕೊಂಕಿತ್ತೇ ಅವನ ನುಡಿಗಳಲ್ಲಿ.. ಇಲ್ಲ.. ಉತ್ತರದ ನಿರೀಕ್ಷೆಯೂ ಅವನಿಗಿರಲಿಲ್ಲ. ಆದರೆ ನನ್ನೊಳಗು ತಿಳಿದವನಂತೆ ಕಣ್ಣಲ್ಲೇ ಸಾಂತ್ವನ ಹೇಳಿ ನಿರ್ಗಮಿಸಿದ.

ಓಹ್.. ಎಷ್ಟೆಲ್ಲಾ ಕೆಲಸಗಳಿವೆ ನನಗೆ.. ನಾನಿನ್ನೂ ಇಲ್ಲಿಯೇ ಯಾಕೆ ನಿಂತಿದ್ದೇನೆ..?
ಈಗ ಬದುಕುಳಿದವರಲ್ಲಿ ಸ್ತ್ರೀಯರೇ ಹೆಚ್ಚು. ಅವರ ಕಣ್ಣೀರಿಗೆ ಸಾಂತ್ವನ ಹೇಳಬೇಕು.ದುರ್ಯೋಧನನ ಹಠದಿಂದಾಗಿ ತಮ್ಮವರೆಲ್ಲರನ್ನೂ ಕಳೆದುಕೊಂಡವರಿಗೆ ಆಸರೆಯಾಗಬೇಕು. ಹೆಚ್ಚೇಕೆ ಐವರು ಗಂಡಂದಿರನ್ನು ಪಡೆದ ದ್ರೌಪದಿಯೂ ನನ್ನಂತೆಯೇ ಹತಭಾಗ್ಯಳಾಗಿದ್ದಳು. ನಾಳಿನ ಬೆಳಕಾಗಿದ್ದ ತನ್ನ ಮಕ್ಕಳನ್ನು ಕಳೆದುಕೊಂಡು ದುಃಖಿತೆಯಾಗಿದ್ದಳು. ಈ ಘೋರಪಾತಕ ನಡೆದದ್ದು ಕೌರವನ ಕೊನೆಯ ಕುತ್ಸಿತ ಕುಮ್ಮಕ್ಕಿನಿಂದಾಗಿಯೇ..ಅದಕ್ಕಾಗಿ ಅವಳ ಕ್ಷಮೆ ಕೇಳಬೇಕು. 

ಇದ್ದಷ್ಟು ದಿನ ಅನ್ಯಾಯವೆಂದು ಗೊತ್ತಿದ್ದೂ ಪ್ರತಿಭಟಿಸದ ನನ್ನ ಪಾಪವನ್ನು ಈಗ ಬೇರೆಯವರ ನೋವಿಗೆ ಔಷಧವಾಗುವ ಮೂಲಕವಾದರೂ ತೊಡೆದುಕೊಳ್ಳಬೇಕು. ಇನ್ನು ಕೂಡುವುದಾಗಲೀ ಕಳೆಯುವುದಾಗಲೀ ಇರದ ನನ್ನ ಬದುಕನ್ನು ನನ್ನ ಆತ್ಮತೃಪ್ತಿಗಾಗಿಯೇ ಬದುಕಬೇಕು..  ಸಾವಿಗೇನು..? ಯಾವತ್ತಿದ್ದರೂ ಅದಾಗಿಯೇ ಆಲಂಗಿಸುತ್ತದೆ.. 

ಹೆಜ್ಜೆಗಳು ದೃಢವಾಗಿ ಮತ್ತೆ ಅರಮನೆಯ ಕಡೆಗೆ ಮರಳತೊಡಗಿದವು. 

Monday, July 22, 2013

ಮಾಯಗಾರಅಂತರರಾಜ್ಯ ಪೊಲಿಸರಿಗೂ ಬೇಕಾದ ವಾಹನ ಕಳ್ಳ ಅವನು. ಅವನಿಗಾಗಿ ಎಲ್ಲ ಕಡೆಯಿಂದಲೂ  ಬಲೆ ಬೀಸುತ್ತಿದ್ದರು.  ಅವನನ್ನು ಹಿಡಿದರೆ  ಪ್ರಮೋಷನ್ ಮೇಲೆ ಪ್ರಮೋಷನ್ ಆಗುವಂತಹ ಚ್ಯಾನ್ಸ್ ಪೊಲಿಸರದ್ದು. ಸಧ್ಯಕ್ಕೆ ಆತ ಇಲ್ಲಿಗೆ ಬಂದಿರುವ ಸುಳಿವು ದೊರೆತು ಅವನ ಹಿಂದೆ  ಬಿದ್ದಿದ್ದರು. 

ಪೊಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಮಾಯವಾಗುವುದರಲ್ಲಿ ನಿಸ್ಸೀಮನಾದ ಆತನನ್ನು ಹುಡುಕುವ ಈ ಕೆಲಸಕ್ಕೆ 'ಆಪರೇಷನ್ ಮಾಯಗಾರ' ಅಂತಲೇ ನಾಮಕರಣ ಮಾಡಿದ್ದರು. ಯಾರಿಗೂ ಸುಳಿವು ಸಿಗದಂತೆ ನುಣುಚಿಕೊಂಡು ಹೋಗುವುದರಲ್ಲಿ ಪರಿಣತನಾದ ಆತ ಇಂದು ಖಂಡಿತ ಸಿಕ್ಕಿ ಬೀಳುವವನಿದ್ದ. ಎರಡು ಮೂರು ಮಾರ್ಗದಿಂದ ಪೊಲಿಸ್ ವಾಹನಗಳು ಅವನನ್ನು ಸುತ್ತುವರಿದು ಹುಡುಕುತ್ತಿದ್ದವು. ಯಾವ ದಾರಿಯಲ್ಲಿ ಹೋದರೂ ತೊಂದರೆ ತಪ್ಪುವಂತಿರಲಿಲ್ಲ.ಒಂದು ಪೊಲಿಸ್ ವ್ಯಾನ್ ಅಂತೂ ಹಿಂಬಾಲಿಸಿಕೊಂಡೇ ಬರುತ್ತಿತ್ತು. ಅವನಿಗೆ ಹೆಚ್ಚು ಯೋಚಿಸಲು ಸಮಯವಿರಲಿಲ್ಲ.ಸಿಕ್ಕಿ ಬಿದ್ದರಂತೂ ವರ್ಷಾನುಗಟ್ಟಲೆ ಜೈಲಿನಲ್ಲೇ ಕೊಳೆಯಬೇಕಾಗುತ್ತದೆ ಎಂಬ ಸತ್ಯ ಅವನಿಗೆ ತಿಳಿಯದ್ದುದೇನಲ್ಲ.

ಹಾಗೆಂದು ಅಷ್ಟು ಸುಲಭದಲ್ಲಿ ಅವರ ಕೈಗೆಟುಕಲು ತಾನೇನು ಮಿಠಾಯಿ ಚಪ್ಪರಿಸುವ ಹುಡುಗನೇ.. ಅವನು ಮೀಸೆಯಡಿಯಲ್ಲೇ ನಕ್ಕ. ಎಷ್ಟು ಬಾರಿ ಹೀಗಾಗಿದೆಯೇನೋ..!! ಆಗೆಲ್ಲ ಅದೃಷ್ಟ ಅವನನ್ನು ಕೈ ಬಿಟ್ಟಿರಲಿಲ್ಲ. ಇಂದೂ ಅವನಿಗೆ ಅದೇ ಧೈರ್ಯ. 

ಇಂದು ಅವನು ಕದ್ದ ಕಾರೇನು ಚಿಲ್ಲರೆಯದಲ್ಲ. ಯಾರ ಕೈಗೆ ಧಾಟಿಸಿದರೂ ಹತ್ತು ಲಕ್ಷಕ್ಕೆ ಮೋಸವಿರಲಿಲ್ಲ. ಈ ವಿಷಯ ನೆನಪಾದೊಡನೆ ಇನ್ನಷ್ಟು ಜಾಗೃತನಾದ. ಎಕ್ಸಲರೇಟರ್ ಮೇಲೆ ಇಟ್ಟ ಕಾಲು ತೆಗೆಯದೇ ವೇಗವಾಗಿ ಚಲಾಸುತ್ತಿದ್ದ. ಅವನ ಕಣ್ಣು ಕೂಡಾ ಅಷ್ಟೇ ವೇಗವಾಗಿ ಸುತ್ತಲಿನ ಪರಿಸರವನ್ನು ಅವಲೋಕಿಸುತ್ತಿತ್ತು. ಇದ್ದಕ್ಕಿದ್ದಂತೆ ಎಡಗಡೆ ಕಲ್ಲಿನ ಕಾಂಪೌಂಡ್ ಒಳಗಿಂದ ಧೂಳಿನ ಮೋಡವನ್ನೆಬ್ಬಿಸಿಕೊಂಡು ಹಳೇ ಟ್ರಕ್ ಒಂದು ಅಡ್ಡಡ್ಡಲಾಗಿ ಧುತ್ತೆಂದು ರಸ್ತೆಗಿಳಿತು. ಕಣ್ಣೆವೆ ಇಕ್ಕುವುದರೊಳಗೆ  ಆಗಿ ಹೋಗಬಹುದಾಗಿದ್ದ ಅಪಘಾತವನ್ನು ಚಾಣಾಕ್ಷತನದಿಂದ ತಪ್ಪಿಸಿ ಟ್ರಕ್ ಬಂದ ದಿಕ್ಕಿನೆಡೆಗೆ ಕಣ್ಣು ಹೊರಳಿಸಿ ನೋಡಿದ.  

ಕಬ್ಬಿಣದ ಗೇಟ್ ನಿಧಾನಕ್ಕೆ ಮುಚ್ಚುತ್ತಾ ಇತ್ತು. ತಕ್ಷಣ ಕಾರನ್ನು ತೊಂಬತ್ತು ಡಿಗ್ರಿಯಲ್ಲಿ ತಿರುಗಿಸಿ ಆ ಗೇಟಿನೊಳಗೆ ನುಗ್ಗಿಸಿದ. ಆಟೋಮ್ಯಾಟಿಕ್ ಗೇಟ್ ಅದು. ಕಾರು ಒಳ ಬಂದ ನೂಲೆಳೆಯಷ್ಟರಲ್ಲಿ ಗೇಟ್ ಮುಚ್ಚಿಕೊಂಡು ತನ್ನಿಂದ ತಾನೇ ಲಾಕ್ ಆಗಿತ್ತು. ತನ್ನ ಸಂತಸವನ್ನು ಕಾರಿನ ಸ್ಟೇರಿಂಗಿನ ಮೇಲೆ ಗುದ್ದಿ ಆಚರಿಸಿದ. ಅದೊಂದು ಕಮಟು ಹೊಗೆಯಿಂದಾವರಿಸಿದ್ದ ಯಾವುದೋ ಕಾರ್ಖಾನೆ.ಆದರೆ ಇದು ಕೂಡಾ ಸುರಕ್ಷಿತ ಸ್ಥಳವೇನು ಅಲ್ಲ ಎಂದು ಅವನಿಗೆ ಗೊತ್ತಿತ್ತು.  ತಾತ್ಕಾಲಿಕವಾಗಿ ಸ್ವಲ್ಪ ಹೊತ್ತು ಇದರೊಳಗೇ ಉಳಿಯಬೇಕಾದ್ದರಿಂದ ಪಕ್ಕನೆ  ಕಾಣದಂತಿರುವ ಅಡಗು ತಾಣಕ್ಕಾಗಿ ಅತ್ತಿತ್ತ ಕಣ್ಣು ಹಾಯಿಸಿದ. 

ಕಾರನ್ನು ಸ್ವಲ್ಪವೇ ಮೂವ್ ಮಾಡಿ ಹತ್ತಿರದಲ್ಲೇ ಇದ್ದ ಭಾರೀ ಗಾತ್ರದ ಕಭ್ಬಿಣದ ಷೆಡ್ ಒಳಗೆ ನಿಲ್ಲಿಸಿದ. ಅದರೊಳಗೆ ಒಂದು ಬದಿಯಲ್ಲಿ ಕತ್ತು ನಿಲುಕಿಸಿ ನೋಡುವಷ್ಟು ಎತ್ತರಕ್ಕೆ ಹಳೇ ಕಬ್ಬಿಣದ ಸಾಮಗ್ರಿಗಳನ್ನು ರಾಶಿ ಹಾಕಿದ್ದರು. ಷೆಡ್ಡಿನ ಮತ್ತೊಂದು ತುದಿಯಲ್ಲಿ ಏನಿತ್ತು ಎಂಬುದು ಕಾಣಿಸದಷ್ಟು ಕಪ್ಪು ಹೊಗೆ. ಭಾರೀ ಗಾತ್ರದ ಯಂತ್ರಗಳ ಸದ್ದು ಕಿವಿ  ಒಡೆದು ಹೋಗುವಷ್ಟು ಜೋರಾಗಿತ್ತು. ಅಲ್ಲಿಯಂತೂ ಅವನು ಎಷ್ಟು ಜೋರಾಗಿ ಕಿರುಚಿದರೂ ಆ ಸದ್ದು ಅವನ ಕಿವಿಯನ್ನೇ ತಲುಪುವಂತಿರಲಿಲ್ಲ. 

ಕಾರಿನ ಫಸ್ಟ್ ಏಡ್ ಬಾಕ್ಸ್ ಓಪನ್ ಮಾಡಿ ಕಿವಿಯೊಳಗೆ ಹತ್ತಿ ತುಂಡನ್ನು ತುರುಕಿದ.ಕೂಡಲೇ ಹೊರ ಹೋಗುವಂತಿರಲಿಲ್ಲ. ಸ್ವಲ್ಪ ಹೊತ್ತು ಸೀಟು ಅಡ್ಡ ಹಾಕಿ ರಿಲ್ಯಾಕ್ಸ್ ಮಾಡೋಣ ಎಂದು ಸೀಟಿನ ಕೆಳಗಿರುವ ಹ್ಯಾಂಡಲ್ ಎಳೆದಿದ್ದನಷ್ಟೆ. ಕಾರು ಇದ್ದಕ್ಕಿದ್ದಂತೇ ಗಾಳಿಯಲ್ಲಿ ಮೇಲಕ್ಕೆದ್ದಿತು. ಅರ್ರೇ.. ಇದೇನಾಗ್ತಿದೆ ಎಂದುಕೊಂಡು ಕಿಟಕಿಯ ಗ್ಲಾಸ್ ಜಾರಿಸಿ ಹೊರಗಿಣುಕಿದ. ಅವನ ಕಾರೀಗ ನೆಲದಿಂದ ಸುಮಾರು ಹತ್ತನ್ನೆರಡು ಅಡಿಗಳ ಎತ್ತರದಲ್ಲಿ ನೇತಾಡುತ್ತಿತ್ತು.ಗಾಬರಿಯಿಂದ  ಬಾಗಿಲು ತೆಗೆದು ಹಾರೋಣ ಎಂದುಕೊಂಡು ಬಾಗಿಲು ನೂಕಿದ. ಆದರೆ ಅದೆಲ್ಲಿ ತೆರೆಯಿತು?! ಹೊರಗೆ ಬೇರೆ ಬೇರೆ ರೀತಿಯ  ಕಬ್ಬಿಣದ ಸಾಮಗ್ರಿಗಳು ಅಂಟಿಕೊಂಡು ಬಾಗಿಲನ್ನು ತೆಗೆಯಲಾರದಂತೆ ಮಾಡಿಬಿಟ್ಟಿತ್ತು. ಯಾವುದೋ ಕಾಂತೀಯ ಶಕ್ತಿಯೊಂದು ಎಲ್ಲವನ್ನು ಆಕರ್ಷಿಸಿ ತನ್ನೆಡೆಗೆ ಎಳೆದುಕೊಳ್ಳುತ್ತಿತ್ತು. 

ಅವನ ಮೈಯೆಲ್ಲ ಬೆವರಿನಿಂದ ಒದ್ದೆಯಾಯಿತು. ಎದುರಿನ ಗಾಜಿನಲ್ಲಿ ಕಾರಿನೊಂದಿಗೆ ಇನ್ನಷ್ಟು ವಸ್ತುಗಳು ಜೋತಾಡುತ್ತಾ ಇದ್ದುದು ಅರೆ ಬರೆಯಾಗಿ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ದೊಪ್ಪನೆ ಎಲ್ಲವೂ ಕಳಚಿಕೊಂಡಂತಾಯ್ತು. ಜೊತೆಗೆ ಇವನ ಕಾರು ಕೂಡಾ ಕೆಳಗೆ ಬೀಳುತ್ತಿತ್ತು. ಕೊನೆಯದಾಗಿ ಎಲ್ಲವೂ ಕೇಸರಿ ಬಣ್ಣದಲ್ಲಿ ಕಂಡ ಹಾಗಾಯಿತು ಅಷ್ಟೆ. ಸುಡು ಬಿಸಿಯ ಅಲೆಯೊಂದು ಹಾಯ್ದು ಎಲ್ಲವೂ ಒಂದೇ ಆಗಿ ಕರಗಿ ನೀರಾಯಿತು. ಅವನೀಗ ನಿಗಿ ನಿಗಿ ಉರಿಯುವ ಕೆಂಡವಾಗಿ ಅದರಲ್ಲಿ ತೇಲುತ್ತಿದ್ದ.

ಹೊರಗೆ ಪೋಲಿಸ್ ವಾಹನ ಮುಚ್ಚಿದ ಗೇಟಿನ ಬಳಿ ನಿಧಾನಿಸಿತು. 'ಸ್ಕ್ರಾಪ್ ಮೆಲ್ಟಿಂಗ್ ಎಂಡ್ ರಿಸೈಕ್ಲಿಂಗ್ ಇಂಡಸ್ಟ್ರಿ' ಎಂಬ ಬೋರ್ಡನ್ನು ಕುಳಿತಲ್ಲಿಂದಲೇ ಇಣುಕಿ ಓದಿದ ಇನ್ ಸ್ಪೆಕ್ಟರ್  ಚಾಲಕನಿಗೆ ಮುಂದೆ ಚಲಿಸುವಂತೆ ಕೈ ಸನ್ನೆ ಮಾಡಿದ. 

'ಆಪರೇಷನ್ ಮಾಯಗಾರ' ಮುಂದುವರೆದಿತ್ತು.. ಆದರೆ ಮಾಯಗಾರ ನಿಜಕ್ಕೂ ಮಾಯವಾಗಿದ್ದ. -- 
Anitha Naresh Manchi

Wednesday, July 17, 2013

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ..


"ನನ್ನ ಹೊಸ ಸಾಕ್ಸ್ ಎಲ್ಲಿ ಕಾಣ್ತಿಲ್ಲ?" ಪತಿರಾಯರು ಆಫೀಸಿಗೆ ಹೊರಟು ಬೊಬ್ಬೆ ಹಾಕುತ್ತಿದ್ದರು. 
"ಅಲ್ಲೇ ಇಟ್ಟಿದ್ದೀನಿ ನೋಡಿ.. ಯಾವಾಗ್ಲು ಇಡುವ ಸ್ಟ್ಯಾಂಡಿನಲ್ಲೇ.. ಸ್ವಲ್ಪ ಸರಿ ಕಣ್ಣುಬಿಟ್ಟು ನೋಡಿದ್ರೆ ಸಿಗುತ್ತೆ.. ನಾನೇ ಕೈಗೆ ಹಿಡಿಸಿ ಆಗ್ಬೇಕು ನಿಮ್ಗೆ.." ಎಂದು ಸ್ವಲ್ಪ ಜೋರಿನಿಂದ ದಬಾಯಿಸಿದೆ. 
"ಅಲ್ಲೇ ಇದ್ರೆ ನಿನ್ನನ್ಯಾಕೆ ಕೇಳ್ತಿದ್ದೆ? ಬೇಗ ಹುಡ್ಕಿ ಕೊಡು ಲೇಟ್ ಆಗ್ತಿದೆ ನಂಗೆ.."
"ಅರ್ರೇ ..!! ಅಲ್ಲೇ ಇಟ್ಟಿದ್ದೆ ನಿನ್ನೆ ..ಎಲ್ಲಿ ಹೋಗುತ್ತೆ.. ಅದ್ಕೇನಾದ್ರೂ ಕಾಲು ಇದೆಯಾ ಎಲ್ಲೆಲ್ಲೋ ಹೋಗ್ಲಿಕ್ಕೆ.." ಎಂದು ಗೊಣಗುತ್ತಾ ನಾನೂ ಬಂದು ನೋಡಿದೆ.  ಅಲ್ಲೆಲ್ಲೂ ಕಾಣಿಸಲೇ ಇಲ್ಲ..
"ಇಲ್ಲಿಯೇ ಇಟ್ಟಿದ್ದೆ.. ಸರೀ ನೆನಪಿದೆ ನಂಗೆ.. ಈಗ ನೀವು ಬೇರೆ ಹಾಕ್ಕೊಂಡು ಹೋಗಿ.. ಆಮೇಲೆ ಹುಡ್ಕಿಡ್ತೀನಿ" ಅಂದೆ.
"ನೀನು ಹುಡ್ಕಿ ಇಡು.. ಬಂದು ಹಾಕ್ಕೊಂಡು ಮನೆಯೊಳಗೆ ಓಡಾಡ್ತೀನಿ ..ಇದೇನು ಹೊಸ ಸಮಸ್ಯೆ ಅಲ್ಲ.. ಮೊನ್ನೆಯೂ ಒಂದು ಹೀಗೇ ಆಗಿತ್ತು.. ಇವತ್ತಿನ್ನು ಒಂದೊಂದು  ಕಾಲಿಗೆ ಒಂದೊಂದು  ಬಣ್ಣದ್ದನ್ನು  ಹಾಕ್ಕೊಂಡು ಹೋಗ್ಬೇಕಷ್ಟೆ.." ಎಂದು ದುಸು ದುಸು ಮಾಡುತ್ತಾ ಹೋದರು.
ಇವ್ರು ಹೇಳಿದ್ದು ಸರಿಯೇ ಇತ್ತು.. ಮೊನ್ನೆ ಕೂಡಾ ಒಂದು ಸಾಕ್ಸ್ ಕಾಣೆಯಾಗಿದ್ದು ಇನ್ನೂ ಸಿಕ್ಕಿರಲೇ ಇಲ್ಲ.. ಇವತ್ತಂತೂ ಹುಡುಕಿಯೇ ಬಿಡಬೇಕು ಎಂದು ಸೆರಗು ಬಿಗಿದು ಸಿದ್ಧಳಾದೆ. ರೂಮ್ ಇಡೀ ಜಾಲಾಡಿದರೂ  ಅದರ ಸುಳಿವಿಲ್ಲ. ಯಾಕೋ ಕವಾಟಿನ ಹಿಂದೆ  ಕೂಡಾ ನೋಡಿ ಬಿಡುವ ಎಂದೆನಿಸಿ ಟಾರ್ಚ್ ಹಾಕಿ ನೋಡಿದೆ. ಕಪ್ಪಗೆ ಏನೋ ಕಂಡಿತು.  ಸೀದಾ ಮುಟ್ಟಲು ಹೆದರಿಕೆಯಾಗಿ ಒಂದು ಕೋಲು ಹಿಡಿದುಕೊಂಡು ಮೆಲ್ಲನೆ ಎಳೆದೆ.

ನೋಡಿದರೆ ಅದು  ಹರಿದು ತೂತಾಗಿ ಜೀರ್ಣಾವಸ್ಥೆಗೆ ತಲುಪಿರುವ ಇವರ ಹೊಸ ಸಾಕ್ಸಿನ ಕಳೇಬರ. ಅದರ ಜೊತೆಗೆ ಕಾಣೆಯಾಗಿದ್ದ ಹಳೆ ಸಾಕ್ಸಿನ ತುಣುಕುಗಳು ಅಂಟಿಕೊಂಡಿದ್ದವು.ಈ ರೀತಿಯಾಗಿ  ಮೋಕ್ಷ ಕಂಡ ಎರಡು ಸಾಕ್ಸಿನ ಅವಸ್ಥೆ ನೋಡಿದರೆ ಇದು ಮೂಷಿಕರಾಜನ ಕೆಲಸವೇ ಅಂತ ಗ್ಯಾರಂಟಿಯಾಗಿ ಹೋಯಿತು. 
ಇದನ್ನು ಹಿಡಿಯುವುದು ಹೇಗಪ್ಪ ಅನ್ನೋದನ್ನ  ತಲೆ ಕೆರೆದುಕೊಂಡು ಚಿಂತಿಸತೊಡಗಿದೆ.ಕೂಡಲೇ  ಅಂಗಡಿಗೆ ಹೋಗಿ ಯಾವುದಾದ್ರು ಇಲಿ ಕೊಲ್ಲುವ ಔಷಧ ಕೊಡಿ ಅಂತ ಕೇಳಿದೆ. ಅವರು ಒಂದು ಬಿಸ್ಕೆಟ್ ತರದ ತುಂಡುಗಳಿರುವ ಪ್ಯಾಕೆಟ್ ಕೊಟ್ಟು ಇದನ್ನು ರಾತ್ರಿ ಇಲಿ  ಬರುವ ಜಾಗದಲ್ಲಿಇಡಿ. ಇದನ್ನು ತಿಂದ್ರೆ ಇಲಿ ಕೂಡಲೆ ಸಾಯ್ತದೆ. ಆದ್ರೆ ಇದನ್ನು ಇಡುವ ಮೊದಲು ಅದಕ್ಕೆ ಇಷ್ಟ ಆಗುವ ಯಾವುದಾದ್ರು ತಿಂಡಿ ಇಟ್ಟು ಮೊದಲು ಅದನ್ನು ಆಕರ್ಷಿಸಬೇಕು. ನೋಡಿ ಈ ಚಕ್ಕುಲಿ, ಕೋಡುಬಳೆ, ನೆಲಗಡಲೆ ಚಿಕ್ಕಿ, ಚಿಪ್ಸ್ ಇದೆಲ್ಲ ಇಲಿಗೆ ಬಾರೀ ಇಷ್ಟ ಅಂದ್ರು.ಸರಿ ಎಲ್ಲಾ ಒಂದೊಂದು ಪ್ಯಾಕೆಟ್ ಕೊಡಿ ಅಂತ ಕಟ್ಟಿಸಿಕೊಂಡು ಮನೆಗೆ ಬಂದೆ. 

ಇವರು ಸಂಜೆ ಆಫೀಸಿನಿಂದ ಬಂದವರು ನಾನು ಕಾಫೀ ಮಾಡುವ ಹೊತ್ತಿಗೆ ಎಲ್ಲಾ ತಿಂಡಿ ಪ್ಯಾಕೆಟ್ ಓಪನ್ ಮಾಡಿ ತಟ್ಟೆಗೆ ತುಂಬಿಕೊಂಡು ಕ್ರಿಕೆಟ್ ಮ್ಯಾಚ್ ನೋಡಲಿಕ್ಕೆ ಸುರು ಮಾಡಿದ್ರು. ಹೋಯ್.. ಅದು ನಿಮ್ಗಲ್ಲ .. ಇಲಿಗೆ ಮಾರಾಯ್ರೆ .. ಅಂತ ಕಿರುಚಿ ಅವರ ಕೈಯಿಂದ ತಟ್ಟೆ ಎಳೆದಿಟ್ಟು ಅವರಿಗೆ ಸಪ್ಪೆ ಉಪ್ಪಿಟ್ಟು ತುಂಬಿದ ತಟ್ಟೆ ಕೊಟ್ಟೆ. 
ತಿಂಡಿ ಪ್ಯಾಕೆಟ್ ಎಲ್ಲಾ ಖಾಲಿ ಆದ್ರೂ ಇಲಿ ಒಂದು ದಿನವೂ ಅದಕ್ಕಾಗಿ ಇರುವ  ವಿಷಪೂರಿತ ಬಿಸ್ಕೆಟ್ ಮುಟ್ಟಲೇ ಇಲ್ಲ. ಪಕ್ಕದ ಮನೆಯವರು ಹೇಳಿದ್ರು ಅಂತ ಬಗೆ ಬಗೆಯ ಹಣ್ಣಿನ ಒಳಗೆ ಅದರ ಬಿಸ್ಕೆಟ್ ತುರುಕಿ ಇಟ್ಟೆ. ಸಾಲದು ಅಂತ  ಫ್ರುಟ್ ಸಲಾಡ್ ಮಾಡಿ ಕೊಟ್ರೂ ಆ ಮೂಷಿಕ ಮೂಸಿ ಕೂಡ ನೋಡಲಿಲ್ಲ. ಊಹೂಂ.. ಅದನ್ನು ಕೊಲ್ಲುವ ನನ್ನ ಎಲ್ಲಾ ಪ್ರಯತ್ನಗಳನ್ನು ನುಚ್ಚು ನೂರು ಮಾಡಿ ಆರಾಮವಾಗಿ ರಾತ್ರಿ ದಡ ಬಡ ಸದ್ದು ಮಾಡುತ್ತಾ ಅತ್ತಿತ್ತಾ ಓಡಾಡುತ್ತಿತ್ತು. ಸ್ಕಾರ್ಫ್, ಕರ್ಚಿಫ್, ,ಟಿ ವಿ  ಗೆ ಮುಚ್ಚಿದ ಬಟ್ಟೆಯ ಕವರ್, ಮಗನ  ತಲೆ ಏರುವ ನಮೂನೆವಾರು ಕ್ಯಾಪುಗಳು ಆಗಿಂದಾಗ್ಗೆ ಕಾಣೆಯಾಗಿ ಅಲ್ಲಿಲ್ಲಿ ಹರಿದು ಹೊಸ ಡಿಸೈನಿನಲ್ಲಿ ಮತ್ತೆ ಕೈ ಸೇರುತ್ತಿತ್ತು. ಈ ಸಮಸ್ಯೆಂದಾಗಿ ನನ್ನ ತಲೆ ಕೆಟ್ಟು ಹನ್ನೆರಡಾಣೆಯಾಗಿತ್ತು.

ಸಂಜೆ ಮಗ ಮನೆಗೆ ಬರುವಾಗ ಅವನ ಬೈಕಿನ ಎದುರು ಭಾಗದಲ್ಲಿ ಒಂದು ಪುಟ್ಟ ಬಾಕ್ಸ್ ಇತ್ತು. "ಇವತ್ತು ನಮ್ಮಲ್ಲಿ ಯಾರದ್ದಾದ್ರೂ ಬರ್ತ್ ಡೇ ಉಂಟಾ ಹೇಗೆ.. ಏನೋ ಗಿಫ್ಟ್ ಇದ್ದಂತೆ ಕಾಣುತ್ತೆ" ಅಂದೆ. "ಇದು ನಿಂಗೆ ಅಂತ್ಲೇ ತಂದಿದ್ದು, ಮೆಲ್ಲಗೆ ಬಿಡಿಸಿ ನೋಡು"  ಅಂತ ಬಾಕ್ಸನ್ನು ನನಗೆ  ಹಸ್ತಾಂತರಿಸಿದ. 
ಕುತೂಹಲದಿಂದ ಬಾಕ್ಸ್ ತೆರೆದು ಇಣುಕಿದರೆ ಪುಟ್ಟ ಬೆಕ್ಕಿನ ಮರಿಯೊಂದು 'ಮಿಯಾಂಯ್' ಎಂದಿತು. 
"ಇದೆಂತಕ್ಕೆ ತಂದೆ ಮಾರಾಯ. ಈಗ ಇರೋ ಇಲಿ ಸಾಕಲಿಕ್ಕೆ ಬಿಸ್ಕೆಟ್, ಚಿಪ್ಸ್ ತಂದು ಸಾಕಾಯ್ತು ಇನ್ನು ಇದಕ್ಕೆ ಹಾಲು ಕೂಡಾ ತರ್ಬೇಕು" ಅಂತ ಗೊಣಗಿದೆ. ಹಾಲಿನ ಪಾತ್ರೆಗೆ ಬಾಯಿ  ಹಾಕಿ ನೆಕ್ಕಿಕೊಂಡು, ರಾತ್ರಿ ಹಾಸಿಗೆಯ ಮೇಲೆ  ಗುರ್ ಗುರ್ ಎಂದು ಸದ್ದು ಮಾಡುತ್ತಾ ಮಲಗುವ  ಈ 'ಫಿಲಿಸ್ ಡೊಮೆಸ್ಟಿಕ್' ಗಳನ್ನು ನೋಡಿದರೆ ನನಗೆ 'ಸ್ಟಿಕ್' ಹಿಡಿದು ಓಡಿಸುವಷ್ಟು ಸಿಟ್ಟು ಬರುತ್ತಿತ್ತು. 

ನನ್ನ ಗೊಣಗಾಟಕ್ಕೆ ಪ್ರತಿಯಾಗಿ ಅವನು "ಇದು ನಿನ್ನ ಮಾಮೂಲಿ ಕಂಟ್ರಿ ಬೆಕ್ಕಲ್ಲ. ಇದು ಪರ್ಷಿಯನ್  ಕ್ರಾಸ್ ಬೆಕ್ಕು .. ಇದರ ಬಾಲ ನೋಡು ಎಷ್ಟು ಚಂದ ಇದೆ.... ಈಗ  ನಮಗೆ ಉಪದ್ರ ಕೊಡುವ ಇಲಿಗಳಿಂದ ನಮಗೆ ಮುಕ್ತಿ ಕರುಣಿಸುವ ದೇವರು ಇದು..  ಸ್ವಲ್ಪ ದೊಡ್ಡದಾಗಲಿ.. ಆಮೇಲೆ ನೋಡು"  ಎಂದ. 

ಒಡನೆ ಮಹಾಭಾರತದಲ್ಲಿ ದುರ್ಯೋಧನ ಹೇಗೆ 'ನಿಷ್ಪಾಂಡವ ಪ್ಲಥ್ವಿ'ಯ ಬಗ್ಗೆ ಕನಸು ಕಾಣುತ್ತಿದ್ದನೋ  ಹಾಗೆ ನಾನು ಮೂಷಿಕವಿಲ್ಲದ ವಾಸದ ಮನೆಯ ಕನಸು ಕಂಡೆ. ಈ ಬೆಕ್ಕಿನ ಜಾತಿ ಯಾವುದಾದರೂ ಇರಲಿ..  ಇಲಿ ಹಿಡಿಯುವುದು ಅದರ ಜನ್ಮ ಸಿದ್ಧ ಹಕ್ಕು ಮತ್ತು ಕರ್ತವ್ಯ ತಾನೇ... 'ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟ ನೆಗೆ'ದಿದ್ದನ್ನು ಹಿರಿಯರಿಂದ ಕೇಳಿ ತಿಳಿದಿದ್ದೆನಲ್ಲ.ಇಷ್ಟು ಸಣ್ಣದನ್ನು ಸಾಕಲಿಕ್ಕೇನು ಮಹಾ ಕಷ್ಟ ಅಂದುಕೊಂಡು ಮರುದಿನದಿಂದ ಅರ್ಧ ಲೀಟರ್ ಹಾಲು ಹೆಚ್ಚಿಗೆ ತರಿಸಿಕೊಳ್ಳತೊಡಗಿದೆ. 

ಬೆಕ್ಕಿಗಾಗಿ ರಟ್ಟಿನ ಬಾಕ್ಸಿನೊಳಗೆ ನನ್ನ ಹಳೇ ಕಾಟನ್ ಸೀರೆಯ ಹಂಸ ತೂಲಿಕಾ ತಲ್ಪ ಸಿದ್ಧವಾಯಿತು. ಮಗ ಅದನ್ನು ತನ್ನ ಮಂಚದ ಅಡಿಯಲ್ಲೇ ಇಟ್ಟುಕೊಳ್ಳುತ್ತೇನೆಂದು ಎತ್ತಿಕೊಂಡು ಹೋದ. ಮರುದಿನ ಬೆಳಿಗ್ಗೆ ಎದ್ದು ಬೆಕ್ಕಿನ ಹಾಸಿಗೆಗೆ ಇಣುಕಿದರೆ ಖಾಲಿಯಾದ ಹಾಸಿಗೆ ನನ್ನನ್ನಣಕಿಸಿತು. 'ಅಯ್ಯೋ ಇದನ್ನು ಏನಾದ್ರು ಇಲಿ ತೆಗೊಂಡೋಯ್ತಾ ಹೇಗೆ' ಎಂದು ಗಾಭರಿಯಿಂದ ಮಗನನ್ನೇಳಿಸಿದೆ. ಅವನ ಹೊದಿಕೆ ಸರಿಸಿದ ಕೂಡಲೇ ಅವನ ಮಗ್ಗುಲಿನಿಂದ ಮೈ ಮುರಿದು ಎದ್ದ ಬೆಕ್ಕಿನ ಮರಿ 'ಮಿಯಾಂಯ್' ಎಂದು ನನಗೆ ಗುಡ್ ಮಾರ್ನಿಂಗ್ ಹೇಳಿತು. 

"ಪಾಪ ಅಮ್ಮ ಇದು.. ರಾತ್ರಿ ಸಣ್ಣಗೆ ಅಳ್ತಾ ಇತ್ತು.ಅದರ ಅಮ್ಮನನ್ನೆಲ್ಲ ಬಿಟ್ಟು ಬಂದಿದ್ದಲ್ವಾ.. ಅದಕ್ಕೆ ಎತ್ತಿ ನನ್ನ ಹತ್ತಿರ ಮಲಗಿಸಿಕೊಂಡೆ. ಸ್ವಲ್ಪವೂ ರಗಳೆ ಮಾಡದೆ ಮಲಗಿತು" ಎಂದ ಪ್ರಾಣಿಗಳ ಮನಃಶಾಸ್ತ್ರ ಕಲಿತವರ ಫೋಸ್ ಕೊಡುತ್ತಾ.. 

ಈಗ ನಾನೂ ಇಲಿಯ ಬಗ್ಗೆ ಚಿಂತೆ ಮಾಡುವುದು ಬಿಟ್ಟೆ. ಹೇಗೂ ಬೆಕ್ಕಿದೆ ಅಲ್ವಾ .. ಇಲಿಯೂ ಆಗೀಗ ಏನಾದರೂ ಕಾಟ ಕೊಟ್ಟರೂ ಭೂಮಿಯ ಮೇಲೆ ಇನ್ನು ಅದಕ್ಕಿರುವ ಕೆಲವೇ ದಿನಗಳನ್ನು ನೆನೆದು, ಅಲ್ಲಿಯವರೆಗೆ ಗಮ್ಮತ್ತು ಮಾಡಲಿ ಎಂದು ಕ್ಷಮಿಸಿ ಬಿಡುತ್ತಿದ್ದೆ. 

ನಿಧಾನಕ್ಕೆ ದೊಡ್ಡದಾಗುತ್ತಿದ್ದ ಬೆಕ್ಕು ಒಂದು ದಿನ  ಸಣ್ಣ ಹಲ್ಲಿ ಮರಿಯನ್ನು ಹಿಡಿದು ತಂದು ನನ್ನೆದುರಿಗೆ ಇಟ್ಟಿತು. ಇದು ನನಗೆ ನನ್ನ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿರುವ ಸೂಚನೆ ಎನಿಸಿತು.ಇದನ್ನು ಮನೆಯಲ್ಲಿ ಎಲ್ಲರಿಗೂ ಹೇಳಿ ಸಂಭ್ರಮ ಪಟ್ಟೆ. 

ಮರುದಿನ ಮಗ ಮನೆಗೆ ಬಂದವನೇ "ಅಮ್ಮಾ ಇಂದಿನಿಂದ ಬೆಕ್ಕಿಗೆ ಅನ್ನ ಹಾಕ್ಬೇಡ" ಅಂದ.. "ಯಾಕೋ.. ಅದೇನು ಮಾಡಿತು ನಿಂಗೆ ಪಾಪದ್ದು. ಅದ್ಕೆ ಒಂದು ಮುಷ್ಟಿ ಅನ್ನ ಹಾಕಿದ್ರೆ ಎಂತ ಬರ ಬರುತ್ತಾ ನಮ್ಗೆ" ಎಂದೆ. 

"ಹಾಗಲ್ಲ ಅಮ್ಮಾ.. ಬೆಕ್ಕಿಗೆ ಅಂತ್ಲೇ ಬೇರೆ ರೀತಿಯ ಆಹಾರ ಸಿಗುತ್ತೆ. ಅದನ್ನು ಹಾಕ್ಬೇಕಂತೆ. ನನ್ನ ಫ್ರೆಂಡ್ ಹೇಳಿದ. ನೋಡು ನಾನು ತೆಗೊಂಡೇ ಬಂದಿದ್ದೀನಿ.ಇದ್ರ ಹೆಸ್ರು 'ಓನ್ಲೀ ಫಾರ್ ಕ್ಯಾಟ್ಸ್' ಅಂತ.  ಇದು ಜೂನಿಯರ್ ಬೆಕ್ಕುಗಳಿಗೆ. ಒಳ್ಳೇ ಬ್ರಾಂಡೆಡ್ ಕಂಪೆನಿಯ ಫುಡ್ ಇದು..  ಸ್ವಲ್ಪ ದೊಡ್ಡ ಆದ ಮೇಲೆ ಬೇರೆ ತರದ್ದು ಉಂಟು. ಈ ಅನ್ನ, ದೋಸೆ ಇಡ್ಲಿ ಅಂತ ಮನುಷ್ಯರು ತಿನ್ನುವುದನ್ನು ಅದಕ್ಕೆ ಹಾಕಿದ್ರೆ ಅದರ ಹೊಟ್ಟೆ ಹಾಳಾಗುತ್ತಂತೆ.. ಇವತ್ತಿನಿಂದಲೇ ಈ ಹೊಸ ಆಹಾರ ಸುರು ಮಾಡು" ಎಂದು ಪ್ಯಾಕೆಟ್ ಬಿಡಿಸಿ, ಸಣ್ಣ ಸಣ್ಣ ಉಂಡ್ಲಕಾಳಿನಂತದ್ದನ್ನು  ಬೆಕ್ಕಿಗೆ ಹಾಕಿದ. ಅದು ಬಾರೀ ಇಷ್ಟ ಪಟ್ಟು ಕ್ಷಣಾರ್ಧದಲ್ಲಿ ತಟ್ಟೆ ಖಾಲಿ ಮಾಡಿತು.

ಬೆಕ್ಕು, ಬದಲಾದ ತನ್ನ ಆಹಾರಕ್ಕೆ ಎಷ್ಟು ಒಗ್ಗಿ ಹೋಯಿತು  ಎಂದರೆ ಅನ್ನ ದೋಸೆಗಳನ್ನು ತಿನ್ನುವುದಿರಲಿ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ತಾನು ಕುಡಿಯುವ ಹಾಲಿನ ಮೇಲೆಯೂ ಈ 'ಕ್ಯಾಟಾಹಾರ' ತೇಲಿಕೊಂಡು ಇರದಿದ್ದರೆ ಅದನ್ನೂ ಮೂಸಿ ನೋಡುತ್ತಿರಲಿಲ್ಲ. 

ಇಷ್ಟಾದರೂ ಸುಮ್ಮನೆ ಇರುತ್ತಿದ್ದೆನೇನೋ.. 

ಒಂದು ದಿನ ರಾತ್ರಿ ಪಕ್ಕನೆ ಏನೋ ಸದ್ದಿಗೆ ಎಚ್ಚರ ಆಯ್ತು. ಸದ್ದಿನ ಮೂಲ ಹುಡುಕುತ್ತಾ ಟಾರ್ಚ್  ಹಿಡಿದು  ಹೊರ ನಡೆದೆ. ಬೆಳಕು ಹರಿಸಿ ನೋಡಿದ ದೃಶ್ಯ ನನಗೆ ಹಾರ್ಟ್ ಅನ್ನುವುದು ಇದ್ದಿದ್ದರೆ  ಅದು ಒಡೆಯುವಂತೆ ಇತ್ತು. ಬೆಕ್ಕಿನ ಆಹಾರ 'ಓನ್ಲಿ ಫಾರ್ ಕ್ಯಾಟ್'  ಪ್ಯಾಕೇಟಿನ ಒಂದು ಬದಿ ಹರಿದು ಓಪನ್ ಆಗಿ ಅದರಿಂದ ತುಂಡುಗಳು ಹೊರಗೆ ಚೆಲ್ಲಿದೆ. ಅದರ ಒಂದು ಮಗ್ಗುಲಿನಲ್ಲಿ ನಮ್ಮ ಬೆಕ್ಕೂ , ಇನ್ನೊಂದು ಮಗ್ಗುಲಿನಲ್ಲಿ ಇಲಿಯೂ ಅದನ್ನು ತಿನ್ನುತ್ತಾ ಕುಳಿತಿವೆ. 

ಆಹಾರವನ್ನು ಅರಸಿ ತಿನ್ನುವ ಮೂಲ ಗುಣವನ್ನೇ ಮರೆಯುವಂತೆ ಮಾಡುವ ಕಂಪೆನಿಗಳೋ, ಅವುಗಳನ್ನು ನಂಬಿ ನಮ್ಮ ಸಹಜ ಆಹಾರವನ್ನು ಮರೆಯುವ ನಾವುಗಳೂ, ಈ ಬೆಕ್ಕಿನಿಂದ ಪಾಠ ಕಲಿಯಬೇಕಾದ್ದು ಇದೆ ಅನ್ನಿಸಿತು. 

ಈಗ ನಾನು ಪುನಃ ಇಲಿ ಹಿಡಿಯುವ ಹೊಸ ಅನ್ವೇಷಣೆಗಳ ಬಗ್ಗೆ ಕಿವಿ  ತೆರೆದಿದ್ದೇನೆ. ನಿಮ್ಮ ಸಲಹೆಗಳೇನಾದರೂ ಇದ್ರೆ ದಯವಿಟ್ಟು ತಿಳಿಸಿ. 


Monday, June 10, 2013

ಎಲ್ಲಿ ಭೂರಮೆ..ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ವನಸಿರಿ ಮಳೆ ಹನಿಗಳ ಮಾಲೆ ಧರಿಸಿ ಬೀಸಿ ಬರುವ ಗಾಳಿಯಲೆಗೆ ತೊನೆದಾಡುತ್ತಾ ನರ್ತಿಸುತ್ತಿದ್ದವು.ನಾವು ಸಾಗುತ್ತಿರುವ ಬೆಟ್ಟಗಳ ನಡುವಿನ ತಿರುವು ಮುರುವಿನ  ಹಾದಿ ಇದ್ಯಾವುದೂ  ತನಗೆ ಸಂಬಂಧವಿಲ್ಲ ಎನ್ನುವಂತೆ ಒದ್ದೆಯಾಗಿ  ತಣ್ಣಗೆ ಮಲಗಿತ್ತು.

 ಯಾವುದೇ ಎಚ್ಚರಿಕೆಯ ಸೂಚನೆಗಳಿಲ್ಲದಿದ್ದರೂ ವಾಹನದ ವೇಗ ತನ್ನಿಂದ ತಾನೇ ತಗ್ಗುತಿತ್ತು. ಕಣ್ಣು ಸರಿ ಇದ್ದರೂ ತಡಕಾಡುತ್ತಾ ಚಲಾಯಿಸುವಂತಾಗುತ್ತಿತ್ತು.ಕಣ್ಣಿನ ಎದುರು ಮಂಜಿನ ಲೋಕವೊಂದು ಪ್ರತ್ಯಕ್ಷವಾಗಿತ್ತು.ನೆಲಕ್ಕೆ ಹೆಜ್ಜೆಯೂರಿ ನಿಂತಾಗ ತಣ್ಣನೆಯ ಅಲೆಯೊಂದು ನಮ್ಮನ್ನು ಸುತ್ತುವರಿಯಿತು. ಮಂಜಿನ ಪದರದೊಳಗೆ ಸಿಲುಕಿದ ನಾವು ನಮ್ಮ ಗುರುತು ಪರಿಚಯಗಳನ್ನು ಕಳೆದುಕೊಂಡು ವಿಶ್ವ ಮಾನವರಾದೆವು. ಹತ್ತಡಿ ದೂರದಲ್ಲಿ ನಿಂತರೂ ಕಣ್ಣಿಗೆ ಗೋಚರಿಸದೇ ಅದೃಶ್ಯ ಜೀವಿಗಳಾದೆವು.'ನಮಗೆ ನಾವು ಮಾತ್ರ ಬೇರಾರು ಇಲ್ಲ' ಎಂಬ ವೇದಾಂತವು ತಲೆಯೊಳಗೆ ನುಗ್ಗಿ ಸುಲಭವಾಗಿಯೇ ವೇದಾಂತಿಗಳಾದೆವು. ಪ್ರಕೃತಿಯ ಮಾಯಾಜಾಲದ ಬಲೆಯೊಳಗೆ ಸಿಲುಕಿ ಎಲ್ಲವನ್ನೂ ಮರೆತೆವು.

ಪುಟ್ಟದೊಂದು ಕೊಳ, ಅದರ ಹಿಂದೆ  ಕುಂಡಿಕೆ ಅಲ್ಲೇ ಸ್ವಲ್ಪ ಮೇಲ್ಬಾಗದಲ್ಲಿ ಎರಡು ದೇವರ ಗುಡಿಗಳು ಇದ್ದವು. ಒಂದು ಪಕ್ಕದಲ್ಲಿ ಪ್ರಪಾತವಿದ್ದರೆ ಇನ್ನೊಂದೆಡೆಯಲ್ಲಿ ಎತ್ತರದ ಗಿರಿಯಿತ್ತು. ಇದರರ್ಥ ನಾವು ಕೊಡಗಿನ ತಲಕಾವೇರಿಯ ಮಡಿಲನ್ನು ಸೇರಿದ್ದೇವೆ ಎಂದಾಗಿತ್ತು.


ಹೌದು ಇದು ಕಾವೇರಿಯ ಉಗಮ ಸ್ಥಳ. ಪುರಾಣ ಪ್ರಸಿದ್ಧ ಭೂಮಿ. ಲೋಪಾಮುದ್ರೆ ಲೋಕ ಕಲ್ಯಾಣಕ್ಕಾಗಿ ಅಗಸ್ತ್ಯನ  ಕಮಂಡಲದಿಂದ ಹೊರ ಬಂದು ಕಾವೇರಿಯಾಗಿ ಹರಿಯಲು ಮೊದಲಿಟ್ಟದ್ದು ಇಲ್ಲಿಂದಲೇ. ದಕ್ಷಿಣದ ಸುರಗಂಗೆ, ಬಿಂದು ಮಾತ್ರ ಪ್ರೋಕ್ಷಣೆಯಿಂದ  ಸರ್ವ ಪಾಪಗಳನ್ನು ನಿವಾರಿಸುವ ಶಕ್ತಿ ಹೊಂದಿದ ದೇವಿಯೆಂದೇ ಪೂಜಿಸಲ್ಪಡುವ ಕಾವೇರಿ ತಾಯಿಯ ತವರಿದು. ನೀರು ಸಕಲ ಚರಾಚರಗಳಿಗೂ ಮೂಲ . ಕೊಳೆಯನ್ನು ತೊಳೆಯುತ್ತದೆ. ಅನ್ನವನ್ನು ನೀಡುತ್ತದೆ.  ಇದರಿಂದಾಗಿ ಸಹಜವಾಗಿಯೇ ಪೂಜನೀಯವೆನಿಸುತ್ತದೆ. ಅದರಲ್ಲೂ ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಮನದಣಿಯೆ ಉಣಬಡಿಸುವ ತಾಣ ಪವಿತ್ರ ಕ್ಷೇತ್ರವೂ ಆಗಿದ್ದಾಗ ಮನಸ್ಸು ಅಲ್ಲಿಗೆಳೆಯುವುದರಲ್ಲಿ ಅಚ್ಚರಿಯೇನಿದೆ?

ಮುಂದೇನಿದೆ ಎಂಬ ಕುತೂಹಲವೇ.. ಬನ್ನಿ ನಮ್ಮೊಡನೆ..


ಎತ್ತರೆತ್ತರದ ಪರ್ವತಗಳಿಂದ ಸುತ್ತುವರಿದ ಈ ಸ್ಥಳ ಕೊಡಗಿನ ಪ್ರವಾಸಿಗಳ ಮುಖ್ಯ ಆಕರ್ಷಣೆ. ಪ್ರಕೃತಿಯ ನಡುವೆ ಕರಗಿ ಹೋಗಬೇಕೆನ್ನುವವರ ಕನಸಿನ ಅರಮನೆ.ಭಾಗಮಂಡಲದಿಂದ ಎಂಟು ಕಿಲೋ ಮೀಟರುಗಳ ಅಂತರದಲ್ಲಿರುವ ತಲಕಾವೇರಿ ಪ್ರವಾಸಿಗಳ ಸ್ವರ್ಗ. 


ಕಾವೇರಿ ಕುಂಡಿಕೆಯನ್ನೊಳಗೊಂಡ ಪುಟ್ಟದೇಗುಲ.ಎದುರಿಗೊಂದು ಕೊಳ. ಅದರ  ತಣ್ಣಗಿನ  ನೀರಲ್ಲಿ ಮುಳುಗೇಳುವುದೂ ಅದ್ಭುತ ಅನುಭವ.ಅಲ್ಲೇ ಮೇಲ್ಬಾಗದಲ್ಲಿ ಗಣಪತಿ ಮತ್ತು ಅಗಸ್ತೇಶ್ವರನ ಗುಡಿ. ಅದರ ಪಕ್ಕದಲ್ಲಿರುವ ಮೆಟ್ಟಿಲುಗಳು ನಿಮ್ಮನ್ನು ಬ್ರಹ್ಮಗಿರಿಯನ್ನೇರಿಸುತ್ತವೆ.  ಮೇಲೇರಿ ಸುತ್ತ ಕಣ್ಣು ಹಾಯಿಸಿದರೆ ಅಲೆ ಅಲೆಯಾಗಿ ಪರ್ವತಗಳು ಕಾಣಿಸುತ್ತವೆ. ಸುಮ್ಮನೆ ನಿಂತಲ್ಲಿಂದಲೇ ಒಂದು ಸುತ್ತು ತಿರುಗಿ. ನೀವೊಂದು ಹಸಿರಿನ ಬೆಟ್ಟಗಳ ಗೋಲದೊಳಗೆ ಕುಳಿತಂತೆ ಅನುಭವವಾಗುತ್ತದೆ. ನಿಮ್ಮಿಂದ ತಗ್ಗಿನಲ್ಲಿ  ಕೆಳಗೆ ಮೋಡಗಳು ಲಾಸ್ಯವಾಡುತ್ತಾ ಸಂಚರಿಸುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಮೋಡಗಳು ನಿಮ್ಮನ್ನು ಆವರಿಸಿ ಮುಚ್ಚಿ ಬಿಡಬಹುದು.ಅರಸಿಕ ಮನಸ್ಸೂ ಇಲ್ಲಿ ಕವಿಯಾಗಬಹುದು. ಭಾವುಕ ಮನಸ್ಸು ಮೌನವಾಗಬಹುದು. 


ಹೊತ್ತು ತಾನಾಗಿಯೇ ಕರಗುತ್ತದೆ.  ಕಾಲವೆಂಬುದನ್ನು ಸ್ಥಗಿತಗೊಳಿಸಿ ಇಲ್ಲೇ ಉಳಿಯುವ ಮನ ನಿಮ್ಮದಾಗುತ್ತದೆ.ಮತ್ತೊಮ್ಮೆ ಬರುವ ಪ್ರತಿಜ್ಞೆ ಮಾಡಿಯೇ ಕುಳಿತಲ್ಲಿಂದ ಏಳುತ್ತೀರಿ. ಮನಸ್ಸು ನಿಮಗರಿವಿಲ್ಲದೇ


 ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲೆ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ  ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
ಅಲ್ಲಿ ಆ ಕಡೆ ನೋಡಲಾ
ಅಲ್ಲಿ ಕೊಡವರ ನಾಡಲಾ
ಅಲ್ಲಿ ಕೊಡವರ ಬೀಡಲಾ
ಎಂಬ ಪಂಜೆಯವರ ಹಾಡನ್ನು ಗುಣುಗುಣಿಸತೊಡಗುತ್ತದೆ.


Wednesday, May 22, 2013

ಅರಿವಿನ ಮಿತಿ

"ಅಮ್ಮಾ.. ಅಮ್ಮಾ.. ಇವತ್ತೇನಾಯ್ತು ಗೊತ್ತಾ..?? ಓಡುತ್ತಾ ಮನೆಯೊಳಗೆ ಬಂದ ಪುಟ್ಟಿ ಏದುಸಿರು ಬಿಡುತ್ತಾ ಹೇಳಿದಳು. 

"ಏನಾಯ್ತೇ  ಪುಟ್ಟಿ .." ಅಮ್ಮ ಶಬ್ಧ ಮಾಡುತ್ತಾ ತಿರುಗುತ್ತಿದ್ದ ಮಿಕ್ಸಿಯನ್ನು ನಿಲ್ಲಿಸಿದಳು. ಟಿ ವಿ  ನೋಡುತ್ತಿದ್ದ ಅಪ್ಪ ವಾಲ್ಯೂಮ್ ಕಡಿಮೆ ಮಾಡಿದ. ಜೋರಾಗಿ ಮಂತ್ರ ಹೇಳುತ್ತಾ ಪೂಜೆ ಮಾಡುತ್ತಿದ್ದ ಅಜ್ಜ ಮನಸ್ಸಿನಲ್ಲೇ ಹೇಳತೊಡಗಿದ. ಅಡಿಕೆ ಹೋಳುಗಳನ್ನು ಗುದ್ದುತ್ತಿದ್ದ ಅಜ್ಜಿ ಕಲ್ಲನ್ನು ಸದ್ದಾಗದಂತೆ ಎತ್ತಿ ಕೈಯಲ್ಲಿ ಹಾಗೇ ಹಿಡಿದುಕೊಂಡಳು.ಪಕ್ಕದ ಮನೆಯ ಹೆಂಗಸಿನ ಕಿವಿಗಳು ಗೋಡೆಗೆ ಅಂಟಿಕೊಂಡವು.  

"ಅದೇನು ಗೊತ್ತಾ.. ನಾನು ಬರುವಾಗ..  ನೋಡು ..  ಓ ಅಲ್ಲಿ .. ಸರೀ  ನೋಡು..   ಕಾಣುತ್ತದಲ್ಲಾ.. ಹುಂ.. ಅಲ್ಲಿ  ಒಂದು ಚೆಂದದ ಹಕ್ಕಿ ಕೂತಿತ್ತು. ದೊಡ್ಡ ಕೊಕ್ಕು, ಹೊಳೆಯುವ ಬಣ್ಣ, ಆಹಾ.. ಅದರ ಕಣ್ಣು ಕೂಡಾ ಚಂದ ಇತ್ತು.. ನಾನು ಸದ್ದು ಮಾಡದೇ  ಹತ್ತಿರ ಬಂದರೂ ನನ್ನನ್ನು ಅದು ಹೇಗೋ ನೋಡಿ 'ಕಾವ್ ಕಾವ್' ಎಂದು ಹಾರಿಯೇ ಹೋಯಿತು.. ಛೇ.. ಅಲ್ಲೇ ಇದ್ದಿದ್ದರೆ ನಿಮಗೆಲ್ಲಾ ನೋಡಬಹುದಿತ್ತು.." ಅವಳ ಕಣ್ಣುಗಳು ಅದ್ಭುತವೊಂದನ್ನು ತುಂಬಿಕೊಂಡಂತೆ ಮಿಂಚುತ್ತಿತ್ತು. ಪ್ರಕೃತಿಯ ಯಾವೊದೋ ಒಂದು ರಹಸ್ಯ ತನ್ನೆದುರು ಅನಾವರಣಗೊಂಡಂತೆ ಕನವರಿಸುತ್ತಿದ್ದಳು. 

ಅಮ್ಮ ಮಿಕ್ಸಿ ಸ್ವಿಚ್ ಆನ್ ಮಾಡಿದಳು. ಟಿ ವಿ ಯ ವಾಲ್ಯೂಮ್ ಮೊದಲಿನಂತೆ ಏರಿತು. ಅಜ್ಜನ ಮಂತ್ರ ಜೋರಾಗಿ ಕೇಳಲಾರಂಭಿಸಿತು. ಅಜ್ಜಿ  ಅಡಿಕೆ ಗುದ್ದತೊಡಗಿದಳು.ಪಕ್ಕದ ಮನೆಯ ಹೆಂಗಸು ಮನದೊಳಗೆ 'ತಥ್.. ಕಾಗೆ ಅದು' ಎಂದು ಗೊಣಗಿಕೊಂಡಳು. 

Thursday, May 9, 2013

ಸಂತೆ


ಕನಸುಗಳಿದೆಯೇ ಇಲ್ಲಿ ಮಾರಲಿಕ್ಕೆ 
ಹುಡುಕಿದರೆ ಹೆಕ್ಕಲಿಕ್ಕೆ.. 
ಯಾರಾದರು ಕಳೆದುಕೊಂಡಿರುವರೆ
ಈ ಸಂತೆಯೊಳಗೆ.. 
ಬದುಕುಗಳ ಮಾಲೆ ಕಟ್ಟಿ 
ಬಣ್ಣ ತುಂಬಿ .. ನೇತು ಹಾಕಿದ್ದಾರಿಲ್ಲಿ
ಕೊಳ್ಳಬಲ್ಲವರಿಗಾಗಿ .ಕಾಯುತಿದೆ.. 
ಹಳೆಯದಕ್ಕೆ ಹೊಸ ಮೆರಗು 
ನೀಡಿ ಕರೆಯುತಿದೆ..
ನುಗ್ಗಿ ಕೊಳ್ಳುವ ಜನ ಇರುವವರೆಗೆ.. 
ಒಂದಿಷ್ಟು ಪರಿಚಿತ ಮುಖಗಳಲ್ಲೂ 
ಅಪರಿಚಿತ ಭಾವ ......
ಗುರುತರಿಯದಿದ್ದರೂ ಕಿರುನಗೆಯ ಧಾರೆ .. 
ಸಣ್ಣ ಹೂವ ಮಾಲೆಯಾದರೂ ಸರಿ.. 
ಕೊಂಡು ಕೊಡುವವರಿದ್ದರೆ.. 
ಮೊಗದಲ್ಲಿ ನಗು ತುಳುಕಿ ಬೆಳಗೀತು... 
ಹೊರಳಿ ಮನೆಗೆ ನಡೆವ ವೇದನೆಯೋ .. 
ಮರಳಿ ಬರುವ ಕಿರು ಆಸೆಯ ತುಡಿತವೋ .. 
ಕಾಡೀತು ಯಾವತ್ತಿಗೂ..
ಸಂತೆಯೊಳಗಿನ ಏಕಾಂತದ 'ಮತ್ತು'... 
ಇನ್ನೊಮ್ಮೆ ಹಂಚಲು ಸಂತಸವ ಹೊತ್ತು...
                              -- ಅನಿತಾ ನರೇಶ್ ಮಂಚಿ 
ಸಂತೆಯ ಸರಕ ನೋಡಿ 
ಬೆರಗಾಗಿ ನಿಂತೆಯಲ್ಲೆ !
ಕೊಂಡದ್ದು ಕಳೆದದ್ದು ಸರಿಹೋಯ್ತು 
ನೋಡಿಲ್ಲಿ!
ಬಗೆ ಬಗೆಯಾ ಓಲೆ ಬಣ್ಣಾದ ಮಾಲೆ
ರಂಗು ಮಾಸೀತು ಜೋಕೆ !
ಅಗ್ಗದ ಅರಿವೇ ಜಗ್ಗಿ ಎಳೆದಾಗ 
ಹರಿದೇ ಹೊಯ್ತಲ್ಲೇ ಚೆಲುವೆ !
ಈ ಚಿಲ್ಲರೆ ಸರಕು ತರವಲ್ಲ ನಿನಗೆ
ತಂದೇನು ರೇಶಿಮೆ ಮಕಮಲ್ಲ ಉಡುಗೆ
ಅಸಲಿ ಬಂಗಾರ ನೀನು 
ನಿನಗೇಕೆ ನಕಲಿ ಗೊಡವೆ !
ಜೋಡಿಸಿ ಇಟ್ಟಿರುವೆ ಸಿಹಿ ಮುತ್ತ ಮಾಲೆ
ತುಂಬಲೇನೇ ನಿನ್ನ ಕೆನ್ನೆ ಗುಳಿ ... !!
                          -- ಅಶೋಕ ಭಾಗಮಂಡಲ