Pages

Total Visitors

Friday, January 25, 2013

ಒಂದು ಬೆರಗು ..

ಎದ್ದವಳೇ ಹೊರಗಿಣುಕಿದೆ. ಕಣ್ಣು ಹೊಸಕಿ ಎರಡೆರಡು ಸಲ ನೋಡಿದೆ. ಇಲ್ಲಾ.. ಏನೂ ಕಾಣಿಸುತ್ತಿಲ್ಲ. ಮನೆಯ ಮುಂದಿದ್ದ ಅಂಗಳ, ಅದರಾಚೆಯ ಮಾವಿನ ಮರಗಳು, ಬದಿಯಲ್ಲಿ ಹಬ್ಬಿದ್ದ ಮಲ್ಲಿಗೆ ಗುಲಾಬಿ ಹೂತೋಟ, ನಂತರದ ಕಾಲು ಹಾದಿ, ಫಸಲು ಹೊತ್ತಿರುವ ತೆಂಗಿನಮರಗಳ ನೋಟ.. ಒಂದೂ ಇಲ್ಲ.   ನನ್ನ ಕಣ್ಣಿಗೆ ಏನಾದರೂ ಆಗಿದೆಯೇ.. ಉಹುಂ.. ಹಾಗೇನಿಲ್ಲ.. ಮನೆಯೊಳಗೆ ಎಲ್ಲಾ ಚೆನ್ನಾಗಿ ಕಾಣುತ್ತಿದೆ. ಇದ್ದಕ್ಕಿದ್ದಂತೆ ನಿಶ್ಚಲವಾಗಿ ನಿಂತಿದ್ದ ಎಲ್ಲವನ್ನೂ ಯಾವ ಮಾಯೆ ಹೊತ್ತೊಯ್ದಿತು..!! 


ಅದರಿಂದಲೂ ದೊಡ್ಡ ಪ್ರಶ್ನೆ ಅದೆಲ್ಲ ಇಲ್ಲದೆ ಬರಡು ಬದುಕು ಬದುಕಲು ಸಾಧ್ಯವೇ..? ಮಾವಿನ ಮರಗಳು ದಿನಾ ಅಂಗಳಕ್ಕೆ ಉದುರಿಸುತ್ತಿದ್ದ ಎಲೆಗಳನ್ನು ಅವುಗಳಿಗೆ ಬಯ್ದುಕೊಳ್ಳುತ್ತಲೇ ಗುಡಿಸಿ ಎಸೆದರೂ, ಮನೆಯ ಎದುರು ಆಚೀಚೆ ಕಾವಲುಗಾರರಂತೆ ನಿಂದ ಅದರ ಎತ್ತರದ ನಿಲುವಿಗೆ, ಅದರ ಮೇಲಿದ್ದ ಹಕ್ಕಿಗಳ ಚೆಲುವಿಗೆ ಮಾರು ಹೋಗುವ ಮನ. 

ಗುಲಾಬಿಯ ಚುಚ್ಚುವ ಮುಳ್ಳು ಎಷ್ಟು ಸಲ ರಕ್ತ ಹೀರಿದರೂ ಪರಿಮಳಿಸಿ ನಗುವ ಹೂವಿನೆಡೆಗೆ ಹರಿವ ಪ್ರೀತಿ..  ಆಧಾರ ಗೂಟದ ಮೇಲೇರಬೇಕಿದ್ದ ಮಲ್ಲಿಗೆ ಬಳ್ಳಿ ನಿಯಮ ತಪ್ಪಿಸಿ ನೆಲದಲ್ಲಿ ಹರಿದಾಡಿ ಕಾಲಿಗೆ ಸಿಕ್ಕಿಕೊಂಡರೂ ಮೆಲ್ಲನೆತ್ತಿ ಮೇಲೇರಿಸುವ ಹಠ.. 


ಒಣಗಿದ ಎಲೆಗಳ ಹಾಸಿಗೆಯ ಮೇಲೆ ಚರ ಪರ ಸದ್ದು ಮಾಡುತ್ತಾ ಯಾರೋ ಬರುತ್ತಿದ್ದಾರೆ ಎಂಬ ಸುಳುಹನ್ನು ಮೊದಲೇ ಬಿಟ್ಟು ಕೊಡುವ ಕಾಲು ಹಾದಿ, ತಂಪಾದ ನೆರಳು ನೀಡುತ್ತಾ  ಹಿತವಾದ ಗಾಳಿಗೆ ಓಲಾಡುತ್ತಾ ಇರುವ ತೆಂಗಿನ ಮರಗಳ ಲಾಸ್ಯ.. ಎಲ್ಲವೂ ರಾತ್ರಿ ಕಳೆಯುವುದರೊಳಗೆ ಹೀಗೆ ಮರೆಯಾಗಬಹುದು ಒಂದು ದಿನ ಎಂಬ ಕಲ್ಪನೆಯೇ ಇರಲಿಲ್ಲ.. ಯಾರಾದರು ಹೇಳಿದರೂ ನಂಬಿಕೆ ಹುಟ್ಟುತ್ತಿರಲಿಲ್ಲ.. 


ಮನೆಯ ಮುಖ ಮಂಟಪದ ಗೇಟನ್ನು ಸದ್ದಿಲ್ಲದೆ ಸರಿಸಿ, ಎದುರಿನ ಅಂಗಳಕ್ಕೆ ಬರಿಗಾಲಲ್ಲಿ ಇಳಿದೆ. ಮತ್ತೆ ನಾಲ್ಕು ಹೆಜ್ಜೆ ಹಾಕಿದ್ದೆನಷ್ಟೇ.. ಏನೋ ಅಸ್ಪಷ್ಟವಾಗಿ ನನ್ನೆದುರು ಎತ್ತರಕ್ಕೆ ನಿಂತಿತ್ತು. ನಡೆಯುತ್ತಿದ್ದಂತೇ ಮಾಮರದ ರೆಂಬೆ ಕೊಂಬೆಗಳೆಲ್ಲಾ ವಿವರವಾಗಿ ಕಾಣಿಸಿದವು. ಕಾಲು ಹಾದಿ ಇನ್ನೂ ಅಲ್ಲೇ  ತಣ್ಣಗೆ ಮಲಗಿತ್ತು. ಹೂಗಳು ಮೆಲ್ಲನೆ ಮೈಮುರಿದು ಏಳುವ ತಯಾರಿಯಲ್ಲಿದ್ದವು. ಅದರಾಚೆಯ ಎಲ್ಲವೂ ನನ್ನ ಹೆಜ್ಜೆಗಳು ಸಾಗುತ್ತಿದ್ದಂತೆ ನಿಚ್ಚಳವಾಗತೊಡಗಿದವು.. ಅಬ್ಬಾ.. ಎಲ್ಲವೂ ಇದ್ದಲ್ಲೇ ಇದೆ.. ಎಂದಿನಂತೆ.. 


ಮರಳುತ್ತಿದ್ದ ನನಗೆ ಇವರ ಧ್ವನಿ ಕೇಳಿಸಿತು.  "ಇಷ್ಟೊಂದು ಇಬ್ಬನಿ ಎಂದೂ ಬಿದ್ದಿರಲಿಲ್ಲ.. ನಿನ್ನ ಗೆಜ್ಜೆ ಸದ್ದು ಹತ್ತಿರ ಬಂದರೂ ನೀನು ಕಾಣಿಸಲಿಲ್ಲ.. !!Wednesday, January 23, 2013

ತುಂಟ ಅಲೆ ..
ಎಲೆ ಕಡಲೆ ನಿನ್ನ ಅಲೆಗಳಿಗೆ 
ತೀರದೆಡೆಗೆ ತೀರದ ಬಯಕೆ 
ತಾಯಿ ನೀನಹುದು ನಿಜ ಆದರೂ 
ಎಳೆದೊಯ್ದು ಬಾಗಿಲು ಹಾಕುವೆಯೇಕೆ 

ರಚ್ಚೆ ಹಿಡಿದ ತುಂಟ ಮಗುವದು  
ಬೋರ್ಗರೆದು ನಿನ್ನ ತೆಕ್ಕೆ ಸಡಿಲಿಸಿ 
ರಭಸದಿಂದ  ಬರುತ್ತಿವೆ ದಡದೆಡೆಗೆ 
ಕ್ಷಣ ಹೊತ್ತು ಬಿಟ್ಟು ಬಿಡಬಾರದೇ ಕನಿಕರಿಸಿ 

ಪಿಸು ಮಾತು , ತುಸು ಪ್ರೀತಿ 
ಬರಡು ನೆಲಕೆ ಬೇಕಿದೆ ತಂಪು ಆಲಿಂಗನ 
ನಿನ್ನಲೆಯ ಅಲೆಯುವ ಹುಚ್ಚಿಗೆ 
ಅದೇ ಹಾಕುವುದು ಕಡಿವಾಣ 

ಮರುಕಳಿಸುವ ನೆನಪ ಅಲೆಗೆ  
ಮರಳ ತೀರ ನೆನೆ ನೆನೆದು ಒದ್ದೆ.
ಹೊತ್ತ ಪರಿವೆಯಿಲ್ಲದೆ ನಿಂತು ನಾನು 
ಈ ಚಿನ್ನಾಟವ ನೋಡುತ್ತಲೇ ಇದ್ದೆ. 

Friday, January 4, 2013

ಇನ್ನೂರು ಅಶ್ವಗಳು..


ರಾಜಾ ಯಯಾತಿ .. ಪೃಥ್ವಿಪತಿಗಳಲ್ಲಿ  ಶ್ರೇಷ್ಠನೆನಿಸಿಕೊಂಡವನು. ಅವನ ಮಗಳಾದ ನನಗೆ ಅಂದರೆ 'ಮಾಧವಿಗೆ ಹರೆಯ ಉಕ್ಕಿ ಹರಿದು, ಮದುವೆಯ ವಯಸ್ಸು ಬಂದಿರುವುದು ಸಾಮಾನ್ಯ ಸುದ್ಧಿಯೇ..? ಹೂವ ಕಂಪು ಎಲ್ಲೆಲ್ಲೂ ಪಸರಿಸುವಂತೆ ನನ್ನ ಅಂದ ಚಂದದ ಬಗೆಗಿನ ಮಾತುಗಳು ದೇಶದಲ್ಲೆಲ್ಲಾ ಹಬ್ಬಿತ್ತು.. ಇಂದೇಕೋ ಉದ್ಯಾನವನದ ತಂಪು ನೆರಳು ಮನಕ್ಕೆ ತಂಪೀಯದೆ ಬಿಸಿ ಅಲೆಗಳನ್ನೆಬ್ಬಿಸುತ್ತಿತ್ತು. ತಿಳಿಗೊಳದಲ್ಲಿ ಕಾಣುತ್ತಿರುವುದು ನನ್ನದೇ ಬಿಂಬವಲ್ಲವೇ..? ನೋಡುತ್ತಾ ಮೈ ಮರೆತೆ. ಆಹಾ.. ಎಷ್ಟು ಸುಕುಮಾರ ಸುಂದರ ದೇಹ.. ಒಂದಿಷ್ಟಾದರೂ ಕುಂದುಕೊರತೆಗಳಿಲ್ಲ.. ಪ್ರಮಾಣ ಬದ್ಧ ಶರೀರ, ಯಾರಿಗೆ ಒಲಿದೀತು ಈ ಸೌಂದರ್ಯ.. ಯಾರಾಗಬಹುದು ಈ ಐಸಿರಿಯ ಒಡೆಯ.. 


ಬಂಗಾರ ವರ್ಣದ ಮೀನೊಂದು ಮೇಲೆದ್ದು ಚಿಮ್ಮಿ  ನೀರೊಳಗೆ ಬಿತ್ತು. ನನ್ನ ಬಿಂಬ ಒಂದಿದ್ದದ್ದು ಎರಡಾಗಿ , ನಾಲ್ಕಾಗಿ, ನೂರಾಗಿ ಹರಡಿ ಹೋಯಿತು. ಅದರಲ್ಲಿ ನನ್ನನ್ನು ಹುಡುಕುವ ಪ್ರಯತ್ನ ಬಿಟ್ಟೆ. ಸುಮ್ಮನೆ ಕುಳಿತಿದ್ದರಿಂದಾಗಿ ಕಾಲು ನೋಯುತ್ತಿತ್ತು. ಒಮ್ಮೆ ಎದ್ದು ಕುಳಿತಿದ್ದ ಭಂಗಿ  ಬದಲಿಸಿದೆ. 

ನನ್ನ ಮದುವೆಯ ಬಗೆಗಿನ ವಿಷಯಗಳು ಆಗೀಗ ನನ್ನ ಕಿವಿಗೆ ಬೀಳುತ್ತಿತ್ತು. ಹೇಗಿರಬಹುದು ನನ್ನ ರಾಜಕುಮಾರ.. ಹುಂ.. ಇರುವುದು ಹೇಗೆ..? ಇನ್ನೂ ಹಸಿ ಯೌವನವನ್ನು ಹೊತ್ತಿರುವ ತನ್ನಪ್ಪನಂತೆ..!! ಉಹೂಂ.. ಹೋಲಿಕೆ ಸರಿಯಲ್ಲ.. ಅಣ್ಣ ಪುರು ತನ್ನ ಯೌವನವನ್ನೆಲ್ಲಾ ಅಪ್ಪನಿಗಾಗಿ ಧಾರೆಯೆರೆದಿದ್ದ. ಹುಚ್ಚು ಕೆಲಸ ಅವನದು ಎಂದೆನಿಸಿತ್ತು ಆಗ.. ಅಪ್ಪನೊಳಗಿರುವುದು ಅಪ್ಪನೋ.. ಅಣ್ಣನೋ.. ? ಅಥವಾ ಇನ್ನೂ ಮುಗಿಯದ ಅವನ ವಾಂಛೆಯೋ.. ? ತಾನು ರಾಜಾ ಯಯಾತಿಯ ಮಗಳೇನೋ ಸರಿ.. ಆದರೆ ಅಮ್ಮ.. ಅವಳೋ ನೂರಾರು ಅಂತಃಪುರದ ರಾಣಿಯರಲ್ಲಿ ಒಬ್ಬಳು..ಹೆಸರಿತ್ತೇ ಅವಳಿಗೆ.. ಯಾರಿಗೆ ಗೊತ್ತು.. ದೇವಯಾನಿ, ಶರ್ಮಿಷ್ಟೆಯನ್ನುಳಿದು ಮತ್ತೆಲ್ಲರೂ ರಾಜನಿಗೆ ಮಾತ್ರ ರಾಣಿಯರು ರಾಜ್ಯಕ್ಕಲ್ಲ.. ಥತ್.. ಇಂದ್ಯಾಕೆ ಇಂತಹ ಯೋಚನೆಗಳು..ತಲೆ ಕೊಡವಿಕೊಂಡೆ.

ಸಖಿಯ ಗೆಜ್ಜೆಯ ನಿನಾದ ಹತ್ತಿರದಲ್ಲೇ..

ಮೆಲ್ಲನೆ ಕೈಯೂರಿ ಏಳ ಹೊರಟವಳನ್ನು ಕೈ ಹಿಡಿದು ಅವಸರವಾಗಿ ಎಬ್ಬಿಸಿದಳು. ಅದುರುತ್ತಿತ್ತು ಅವಳಧರಗಳು.. ಏನನ್ನೋ ಹೇಳಹೊರಟವಳು ಗೊಣಗಿಕೊಂಡಂತೆ ಅತ್ತ ತಿರುಗಿ ಮುಖ ಮರೆಸಿ ಏನೋ ನುಡಿದು ಮೌನವಾದಳು..
ತನಗರಿಯದೇ..!!  ಅವಳು ಹೇಳುವ ವಿಚಾರ.. ಯಾವುದೋ ದೇಶದ ರಾಜಕುಮಾರನ ಪತ್ರ ಬಂದಿರಬಹುದು ನನ್ನನ್ನು ಅವನ ವಧುವಾಗಿ ಬೇಡಲು .. ಯಾರಿರಬಹುದು..? ನಾನೇ ಕೇಳೋಣವೆಂದರೆ ನಾಚಿಕೆಯ ತೆರೆ .. ಅವಳಿಗೋ ನನ್ನನ್ನು ಸತಾಯಿಸುವುದೆಂದರೆ ಬಲು ಪ್ರೀತಿ. ಹೇಳಬಾರದೇ.. ದೀನಳಾಗಿ ನೋಡಿದೆ. 

ಅವಳ ಕಣ್ಣುಗಳಲ್ಲಿ ಆತಂಕದ ನೆರಳು. "ಮಹಾರಾಜರ ಅಪ್ಪಣೆಯಾಗಿದೆ ಕುವರಿ, ಕೂಡಲೇ ರಾಜಸಭೆಗೆ ಹೊರಡು.." ಅಪ್ಪನ ಪ್ರೀತಿಯ ಮಗಳು ನಾನು .. ನನ್ನ ಬಗ್ಗೆ ಅಪ್ಪನಿಗೆ ಭಾರೀ ಹೆಮ್ಮೆ. ನನ್ನನ್ನು ಯೋಗ್ಯ ವರನ ಕೈಗೆ ಕೊಡುವ ಮೊದಲು ನನ್ನ ಅಭಿಪ್ರಾಯ ಅವನಿಗೆ ಮುಖ್ಯವಲ್ಲವೇ..?ಆದರೆ ರಾಜಸಭೆಯಲ್ಲಿ ನನ್ನ ಮದುವೆಯ ಮಾತೇ..? ರಾಜನಾದವನಿಗೆ ಅಂತರಂಗ ಬಹಿರಂಗ ಎಂದು ಬೇರೆ ಬೇರೆ ಇರಲಾರದೇನೋ..?

ನಾಚುತ್ತಲೇ ರಾಜಸಭೆ ಪ್ರವೇಶಿಸಿದೆ. ನನ್ನ ಸೊಬಗಿನ ಬೆಳಕಿಗೆ ಅಲ್ಲಿರುವವರೆಲ್ಲ ಸ್ತಬ್ಧರಾದಂತೆ ಅನಿಸಿತು. ಜಂಬದಿಂದಲೇ ಅಪ್ಪನ ಬಳಿ ಸಾರಿದೆ. ಅಲ್ಲೇ ನಿಂತಿದ್ದ ಮುನಿ ಕುವರನೋರ್ವನ ದೃಷ್ಟಿ  ನನ್ನನ್ನು ಇರಿಯುತ್ತಿತ್ತು.
ರಾಜನಲ್ಲಿಗೆ ಸಹಾಯ ಯಾಚಿಸಿ ಬರುವ ಇಂತಹ ಅನೇಕ ಋಷಿ  ಮುನಿಗಳನ್ನು ಕಂಡಿದ್ದೇನೆ. ಅವರೆಲ್ಲಾ ನಮಗೆ ಪೂಜನೀಯರು. ತಲೆ ಬಾಗಿ ವಂದಿಸಿದೆ. ವನವಾಸಿಗಳಾದ ಅವರು ಕಷ್ಟಕ್ಕೆ ಸಿಲುಕುವುದು, ಸಹಾಯ ಬೇಡಿ ರಾಜನತ್ತ ಮುಖ ಮಾಡುವುದು ಹೊಸದೇನಲ್ಲ. "ಗಾಲವನಂತೆ ಅವನು.. ಮಹರ್ಷಿ  ವಿಶ್ವಾಮಿತ್ರರ ಪ್ರಿಯ ಶಿಷ್ಯ.."   ಪಕ್ಕದಲ್ಲೇ ಇದ್ದ ಸಖಿಯ ಪಿಸುಗುಟ್ಟುವಿಕೆ ಇನ್ನೂ ಮುಗಿದಿರಲಿಲ್ಲ..
ರಾಜ ಯಯಾತಿಯ ಕಂಚಿನ ಕಂಠ ಮೊಳಗಿತು. "ಗಾಲವರ ಬಯಕೆಯಂತೆ   ಶುದ್ಧ ಶ್ವೇತ ವರ್ಣದ,ಒಂದು  ಕಿವಿ  ಮಾತ್ರ ಕಪ್ಪಿರುವ ಗುಣಲಕ್ಷಣಗಳುಳ್ಳ ಎಂಟು ನೂರು ಅಶ್ವಗಳ ಅವರ ಕೋರಿಕೆಯನ್ನು ಪೂರ್ತಿ ಮಾಡುವುದು ಸಾಧ್ಯವಿಲ್ಲವಾದ್ದರಿಂದ, ಅದರ ಬದಲಿಗೆ ಸರ್ವ ಗುಣ ಸಂಪನ್ನೆಯಾದ ನನ್ನ ಕುವರಿಯನ್ನು ಅವರಿಗೆ ದಾನವಾಗಿ ನೀಡುತ್ತಿದ್ದೇನೆ.  ಅವಳನ್ನು ಬಳಸಿಕೊಂಡು ಅವರು ಅಶ್ವಗಳನ್ನು ಪಡೆಯಲಿ..." 

ಸಭೆ ರಾಜನಿಗೆ ಜಯಕಾರವಿಕ್ಕಿತು. 


ಸಾವಿರ ಸಿಡಿಲುಗಳ ಪ್ರಹಾರ ಏಕಕಾಲಕ್ಕೆ ನನ್ನ ಮೇಲಾದಂತೆ..ನಾನು ಬುಡ ಕಡಿದ ಬಾಳೆಯಂತೆ ನೆಲಕ್ಕೊರಗುತ್ತಿದ್ದೆ..  ಸಖಿ ಆಧರಿಸಿ ಹಿಡಿದಿದ್ದಳು.  ಸಾವರಿಸಿಕೊಂಡು ಎದ್ದೆ. ನೂರಾರು ಆಸ್ಥಾನಿಕರ, ಬಂಧು ಬಾಂಧವರ ಸಮ್ಮುಖದಲ್ಲಿ ಮೆಚ್ಚಿದ ವರನ ಕೈ ಹಿಡಿದು,ಎಲ್ಲರ ಉಡೊಗೊರೆ,ಪ್ರೀತಿಯ ಹಾರೈಕೆಗಳಲ್ಲಿ ಎದೆ ತುಂಬಿ ಹೊರಡಬೇಕಾಗಿದ್ದ  ನನಗೆ ಈ ಸ್ಥಿತಿ! ನಾನು ಬಯಸಿದ್ದೆಲ್ಲವನ್ನೂ ನನ್ನಿಚ್ಚೆಯಂತೆ ಕ್ಷಣ ಹೊತ್ತಲ್ಲಿ, ಪೂರೈಸುತ್ತಿದ್ದ ನನ್ನಪ್ಪನೆಲ್ಲಿ ಈಗ.. ಈ ಕಠೋರ ನುಡಿಗಳು ಅವನ ಬಾಯಿಯಿಂದಲೇ  ಬಂದಿತೇ..ಅಥವಾ  ಕುಳಿತಲ್ಲೇ ಕೆಟ್ಟ ಕನಸೇನಾದರು ಬಿತ್ತೇ ನನಗೆ..!! ... ಇಲ್ಲ.. ಇದು ಸತ್ಯ.. ಬಳಸಿ ಹಿಡಿದ ಸಖಿಯ ಕೈಯನ್ನು ಸರಿಸಿದೆ. ಅಪ್ಪನೆಡೆಗೆ ತಿರುಗಿದೆ.. ಅಲ್ಲೆಲ್ಲಿದ್ದ ಅವನು! ರಾಜಾ ಯಯಾತಿಗೆ ಋಷಿಗಳ ಕೋಪಕ್ಕೆ ಸಿಲುಕದೆ ನುಣುಚಿಕೊಳ್ಳಲು  ಮುನ್ನಡೆಸಬೇಕಾಗಿದ್ದ  ಚದುರಂಗದ ಕಾಯಿ  ನಾನಾಗಿದ್ದೆ.

ಪುರಜನರಿಗೆಲ್ಲ ವಿಷಯ ತಿಳಿಯುವ ಮೊದಲೇ ನಾನು ಗಾಲವನೊಡನೆ ರಾಜ್ಯದ ಪರಿಧಿ ದಾಟಿದ್ದೆ. ಸ್ವಲ್ಪ ಹೊತ್ತಿನ ಮೊದಲು ನಾನು ಹೆಮ್ಮೆ ಪಡುತ್ತಿದ್ದ ನನ್ನ ಸೊಬಗು ಸೌಂದರ್ಯಕ್ಕೆ ಸಿಕ್ಕ ಬೆಲೆ ಇದುವೆ..? ಇದರ ಬದಲು ಕುರೂಪಿಯಾಗಿದ್ದರೇ ಚೆನ್ನಿತ್ತು ಎಂದು ಹಾರೈಸಿದೆ. ಗೋಳಾಡಿದೆ, ಅತ್ತೆ.. ಸಾವಾದರೂ ಬರಬಾರದೇ ನನಗೆ .. ಈ ಬದುಕಿಗಿಂತ..ಆದರೆ  ನಾನೀಗ ಇನ್ನೊಬ್ಬನ ಅಧೀನಳು.. ಕೊಂದುಕೊಳ್ಳೋಣವೆಂದರೆ ನನ್ನದಾಗಿರಲಿಲ್ಲ ನನ್ನ ದೇಹ.. 

ಗಾಲವ ಯಾವುದನ್ನೂ ಕೇಳಿಸಿಕೊಳ್ಳದೇ ಮುಂದೆ ಸಾಗುತ್ತಲೇ ಇದ್ದ. ಅವನ ಕಡೆಗೆ ಉರಿನೋಟ ಬೀರಿದೆ. ಗುರು ವಿಶ್ವಾಮಿತ್ರನನ್ನು ಒತ್ತಾಯಪಡಿಸಿ ತನ್ನ ಅಳತೆಯನ್ನು ಮೀರಿ ಗುರುದಕ್ಷಿಣೆಯನ್ನು ಕೊಡುವುದಾಗಿ ಒಪ್ಪಿಕೊಂಡಿದ್ದ.ತಾನೇನು, ತನ್ನ ಯೋಗ್ಯತೆಯೇನು ಎಂಬುದರ ಅರಿವೂ ಇಲ್ಲದ ಇವನ ವಿದ್ಯೆ ಇದ್ದೇನು ಲಾಭ.. ಇಂತಹ ಹುಚ್ಚು ಮುನಿ ಈಗ ನನ್ನನ್ನು ಕರೆದೊಯ್ದು ಯಾರಿಗೆ ಒಪ್ಪಿಸುತ್ತಾನೆಯೋ..  ಎತ್ತ ಕಡೆಗೆ ನನ್ನ ಪಯಣ.. ನನಗೇ ತಿಳಿದಿರಲಿಲ್ಲ.. ನಿಟ್ಟುಸಿರ ಬೇಗುದಿಯೊಂದಿಗೆ ಹೆಜ್ಜೆಗಳು ಸಾಗುತ್ತಿತ್ತು.. 

ಅಯೋಧ್ಯಾ ನಗರಿಯ ದ್ವಾರ.. ಅಲ್ಲಿನ ರಾಜ ಹರ್ಯಾಸ್ವನಿಂದ ಸ್ವಾಗತ.. ಅದೇನು ಮಾತನಾಡಿದರೋ..ಮಕ್ಕಳಿರದ ರಾಜನ ನೋಟದಲ್ಲಿ ಹೊಸ ಬಯಕೆ.. ಪ್ರಾಯ ಸಂದ ರಾಜನ ಅಂತಃಪುರ ಆಗಲೇ ರಾಣಿಯರಿಂದ ತುಂಬಿತ್ತು. ಆದರೂ ನಾನೊಬ್ಬಳು ಹೆಚ್ಚಾದೇನೇ..!!

ಎಲ್ಲಿಯ ನನ್ನ ಕನಸಿನ ಮದುಮಗ! ಎಲ್ಲಿ ಈ ಮುದಿ ರಾಜ..!! ಕತ್ತಲಿನ ವ್ಯವಹಾರಕ್ಕೆ ಶರೀರ ಮಾತ್ರ ಮುಖ್ಯ.. ವಯಸ್ಸು, ಸೌಂದರ್ಯ, ಭಾವನೆಗಳೆಲ್ಲ ಕಾಣುವುದು ಹಗಲ ಬೆಳಕಿನಲ್ಲಿ ಮಾತ್ರ.. ಅವನ ರಾಣಿಯರಿಗೆ ನನ್ನ ಅಂದದ ಬಗ್ಗೆ ಮತ್ಸರ. ಸದಾ ನನ್ನ ಹಿಂದೆ ಮುಂದೆ  ಅಲೆಯುವ ರಾಜನನ್ನು ಒಲಿಸಿಕೊಳ್ಳುವ ಅವರ ಪ್ರಯತ್ನ ನನಗೆ ಮರುಕ ಉಕ್ಕಿಸುತ್ತಿತ್ತು. ನನಗೋ ಅವನ ಸ್ಪರ್ಷ ಮುಳ್ಳಿನ ಕೋಲನ್ನು ಮೈ ಮೇಲೆ ಎಳೆದಂತೆ.. 

ಕಾಲವೇನು ಕಾದು ನಿಲ್ಲುವುದೇ..? ಮೈಯಲ್ಲೇನೋ ಪುಳಕ, ನನ್ನೊಳಗೆ ಉಲ್ಲಾಸ ತುಂಬಿಕೊಂಡಂತೆ.. ನಾನೂ ಹೊಸಬಳಾದಂತೆ..  ಯಾಕೋ ಪಲ್ಲಂಗದಿಂದ ಕೆಳಗಿಳಿಯಲೂ ಮನಸ್ಸಿಲ್ಲ.. ವಯಸ್ಸಾದ ಪರಿಚಾರಿಕೆಯ ಮೊಗದಲ್ಲಿ ತುಂಟ ನಗು, ತಾಯಾಗುತ್ತಿದ್ದೇನೆಯೇ ನಾನು.. ಇಷ್ಟೊಂದು ಸುಖಕರವೇ ಈ ಅನುಭವ.. ಇದನ್ನು ನನಗೆ ನೀಡಿದ್ದಕ್ಕಾಗಿ ಅಂದು ನನ್ನ ಹತ್ತಿರ ಬಂದ ರಾಜ ಪ್ರಿಯನಾದ, ಪತಿಯಾದ. ಅವನಿಗೂ ಸುದ್ಧಿ ತಿಳಿದು ರ್ಹಸುತ್ತಲೇ ನನ್ನ ಮಗ್ಗುಲಿನಿಂದ ಎದ್ದವನ ಮುಖ ದರ್ಶನ ಮತ್ತೆ ನನಗಾಗಿದ್ದು ಪಕ್ಕದಲ್ಲಿ ಮಗು ಅಳತೊಡಗಿದಾಗಲೇ.. ನನಗೇನೂ ಬೇಸರವಿರಲಿಲ್ಲ. ಪುಟ್ಟ ಕಂದನ ಹವಳದ ಬಣ್ಣದ ಕಾಲುಗಳು, ಕನಸಲ್ಲೇನೋ ಎಂಬಂತೆ ಬಿರಿಯುವ ತುಟಿಗಳ ನಗು, ನನ್ನನ್ನು ಮಾಯಾಲೋಕಕ್ಕೆಳೆಯುತ್ತಿತ್ತು. 

ಹಾಲೂಡಹೊರಟರೆ, ಅಲ್ಲೇ ಇದ್ದ ದಾಸಿ ತಡೆದಳು. "ಬೇಡ ತಾಯಿ .. ಅಭ್ಯಾಸವಾದರೆ ಕುವರನಿಗೆ ಕಷ್ಟ..ಮತ್ತೆ ಬಿಟ್ಟಿರಲಾರ ನಿಮ್ಮನ್ನು.." ಅಂದರೆ.. ನನ್ನ ಮಗುವಿಗೆ ನಾನು ಅಭ್ಯಾಸವಾಗುವುದು ಬೇಡ ಅಂದರೇನರ್ಥ..??

ಕೋಣೆಯ ಹೊರಗೆ ತಲೆ ತಗ್ಗಿಸಿ ಕಾಯುತ್ತಿದ್ದ ಗಾಲವ ನುಡಿದ.. "ರಾಜಾ ಹರ್ಯಾಸ್ವನಲ್ಲಿ  ಕೇವಲ ಇನ್ನೂರು ಅಶ್ವಗಳಿವೆ ಅಷ್ಟೇ.. ಇನ್ನುಳಿದ ಅಶ್ವಗಳಿಗಾಗಿ ನೀನು ನನ್ನೊಡನೆ ಮತ್ತೆ ಬರಬೇಕು.. ನಿನ್ನ ಮಗುವಿಗೆ ತಾಯಾಗಲು ಇಲ್ಲಿ ಬೇಕಾದಷ್ಟು ಜನರಿದ್ದಾರೆ.. ನೀನು ಅನಿವಾರ್ಯವಲ್ಲ. ನಿನ್ನ ಅಗತ್ಯ ಇರುವುದು ನನಗೆ.. ನೀನೀಗ ಹೊರಡು ನನ್ನೊಡನೆ.." 

ಜಗತ್ತು ಇಷ್ಟೊಂದು ಕ್ರೂರವಾಗಬಲ್ಲುದೇ..ಎಳೆ ಮಗುವನ್ನು ತೊರೆದು,ಎಳೆದೊಯ್ಯುತ್ತಿದ್ದ ಕಾಲುಗಳ ಕಡೆ ನನ್ನ ಗಮನವೇ ಇರಲಿಲ್ಲ.. ಮತ್ತೆ ಮತ್ತೆ ಹಿಂದೆ  ತಿರುಗಿ ನೋಡುವ ತವಕ.. ನನ್ನ ಪಾಲಿಗೆ ಮುಚ್ಚಿದ್ದ ಕೋಟೆ ಬಾಗಿಲುಗಳ ಚಿತ್ತಾರವಷ್ಟೇ ಕಂಡಿದ್ದು.. 

ಕಾಶಿ ರಾಜನಂತೆ .. ದಿವೋದಾಸ.. ನನ್ನ ಸೌಂದರ್ಯದ ದಾಸನೇ ಆದ. ನನ್ನ ಸೊಬಗನ್ನು ಸಿಂಗರಿಸಿ ದಣಿದ. ಹಾಡಿ ಹಾಡಿ ಹೊಗಳಿದ. ಆದರೂ ತೃಪ್ತಿಲ್ಲ ಅವನಿಗೆ .. ಹೆಣ್ಣು ಎಂದರೆ ನೀನು.. ನಿನ್ನಲ್ಲಿ ಕಂಡ ಸುಖ ಬೇರೆಲ್ಲೂ ಕಂಡಿಲ್ಲ.. ಎಂದು ನನ್ನ ಮೈ ಮರೆಸಿದ. ಹಳೆಯ ನೆನಪ ಕೊಳೆಯನ್ನು ಕಿತ್ತು ಬಿಸುಟೆ. ಅವನವಳೇ ಆದೆ..  ಅವನ ಪ್ರೀತಿ ವರ್ಷಕ್ಕೆ ಹಸಿರಾದೆ, ಹೂಬಿಟ್ಟೆ, ಕಾಯಿ  ಕಚ್ಚಿದ್ದು ನನ್ನರಿವಿಗೆ ಬಂತು. ಅವನೋ ಸಂತಸದಿಂದ ನನ್ನನ್ನಪ್ಪಿ ಕುಣಿದಿದ್ದ. ಅವನ ಪುರುಷತ್ವದ ಸಾರ್ಥಕತೆ ನನ್ನಲ್ಲಿತ್ತಂತೆ. ಯಾಕೋ ಅವನನ್ನು ಮುದ್ದಿಸುವ ಬಯಕೆಯಾತು.. ನನ್ನ ಬಯಕೆಗೆ ಅವನೂ ಹುಚ್ಚೆದ್ದು, ಬೋರ್ಗರೆದ. ಮತ್ತೊಮ್ಮೆ ತುಂಬಿದ ಮಡಿಲು.. ಎಲ್ಲವನ್ನೂ ಮರೆತೆ.. ನಾನು ನನ್ನೊಡಲ ಜೀವ, ಪ್ರೀತಿಸುವ ರಾಜ.. ಸ್ವರ್ಗ ನನ್ನೊಳಗೇ ಇತ್ತು. 

ಪಕ್ಕದಲ್ಲಿ ಬೆಟ್ಟು ಚೀಪುತ್ತಾ ಮಲಗಿದ್ದ ನನ್ನ ಕಂದ.. ನೋಡುವುದಕ್ಕೆ ಎರಡು ಕಣ್ಣು ಸಾಲದು.. ಪಕ್ಕನೆ ಮೊದಲ ಮಗ ನೆನಪಿಗೆ ಬಂದ .. ಹೀಗೇ ಇದ್ದನೇ ಅವನೂ.. 

ಅತ್ತಿತ್ತ ನೋಡಿ ಸಖಿಯನ್ನು ಕರೆದು ಕೂಸನ್ನೆತ್ತಿ ಮಡಿಲಿಗಿಡ ಹೇಳಿದೆ. ಹೂವಂತಿತ್ತು ಹಸು ಕಂದ.. ಜೀವನದ ಎಲ್ಲಾ ಹಸಿವೆಯನ್ನು ತೀರಿಸಿಕೊಳ್ಳುವಂತೆ ಹಾಲು ಹೀರುತ್ತಿದ್ದ. ನಾನು ಆ ಸುಖದ ಅನುಭೂತಿಯನ್ನು ಕಣ್ಣು ಮುಚ್ಚಿ ಅನುಭವಿಸುತ್ತಿದ್ದೆ.

 ಪುತ್ರನನ್ನು ನೋಡ ಬಂದ ರಾಜ.. ನಾಚಿದೆ.. ನಿದ್ದೆ ಬಂದಿದ್ದರೂ ಹಾಲು ಹೀರುವಂತೆ ತುಟಿ ಅಲ್ಲಾಡಿಸುತ್ತಿದ್ದ ಪುಟ್ಟ ಕಂದನ ಕಡೆಗೆ ಗರ್ವದಿಂದ ನೋಡಿ ಅವನೆದುರಿಗೆ ಹಿಡಿದೆ. 
ನೋವಿನ ನಗೆ ನಕ್ಕು ನುಡಿದ.. " ನನ್ನಲ್ಲಿರುವುದು ಕೇವಲ ಇನ್ನೂರು ಅಶ್ವಗಳು.."

ಮತ್ತೆ ಬಿಸಿಲ ಬಯಲಿಗೆ ಬಿದ್ದಿದ್ದೆ.. ನಡೆದಷ್ಟೂ ಮುಗಿಯದ ಹಾದಿ.. ಕಲ್ಲು ಮುಳ್ಳುಗಳು ನನ್ನರಿವಿಗೇ ಬರುತ್ತಿರಲಿಲ್ಲ. ಜೀವನದ ಕಹಿ  ಎಲ್ಲವನ್ನೂ ಸಹಿಸಿಕೊಳ್ಳುವುದನ್ನು ಕಲಿಸಿತ್ತೇ..? ಗಾಲವ ನಿರ್ವಿಕಾರವಾಗಿ ಯಾವುದೋ ಗಮ್ಯದೆಡೆಗೆ  ನಡೆವಂತೆ ನಡೆಯುತ್ತಲೇ ಇದ್ದ. ನಾನೂ ನಡೆಯುತ್ತಿದ್ದೆ.  ಆದರೆ  ಅವನದಾಗಿತ್ತು ಗುರಿ.. ನನ್ನದಲ್ಲ.. 

ಮತ್ತೊಂದು ದೇಶ ..ಮತ್ತೊಬ್ಬ ರಾಜ.. ಹೆಸರು ಉಶೀನರ.. ಹೆಸರೇಕೆ ಬೇಕು..? ಅವನು ಗಂಡು, ನಾನು ಹೆಣ್ಣು ಅಷ್ಟೇ.. ಅವನಿಗೆ ಬೇಕಾಗಿದ್ದುದು ಇನ್ನೊಂದು ಹೆಣ್ಣಿನ ಸುಖ, ಅನುಭವ.. ಅದೆಲ್ಲ ನನ್ನ ಸುಂದರ ದೇಹ ಅವನಿಗೆ ನೀಡಬಲ್ಲದಾಗಿತ್ತು. ಗಾಲವನಿಗೆ ಬೇಕಿದ್ದುದು ಅಶ್ವಗಳು .. ನಡುವಿದ್ದ ನಾನು ಕೇವಲ ವಿನಿಮಯದ ವಸ್ತು.. ನನ್ನದಾಗಿದ್ದ ಯಾವುದೂ ನನ್ನದಾಗಿ ಉಳಿದಿರಲಿಲ್ಲ.. ಅದು ನನ್ನದೇ ಆಗಿತ್ತು ಎಂದು ನಾನು ಅಂದುಕೊಂಡದ್ದೆ ತಪ್ಪೇನೋ..!! 
ಕತ್ತಲೆ ಬೆಳಕಿನ ಅದೇ ದೇಹ ದೇಹಗಳ ಮಿಲನ. ಮತ್ತೆ ಬಸುರಾದೆ. ಪ್ರೀತಿ ಬೇಕೇ ಬಸುರಾಗಲು.. ಕೇವಲ ಕೂಟ ಸಾಲದೇ.. ಅವನಿಗೆ ಸಿಗಬೇಕಿದ್ದುದು ಸಿಕ್ಕಿತ್ತು.. ವಂಶ ಬೆಳಗಲು ಮತ್ತೊಂದು ಮಗು.. ಪ್ರೇಮದ ಅಮಲಿಲ್ಲ.. ಪ್ರೀತಿಯ ಗಮಲಿಲ್ಲ.. ಮೋಹದ ತೆವಲು ಮಾತ್ರವಿತ್ತು.. ಇದೂ ಕೂಡಾ ಒಂದು ವ್ಯಾಪಾರದಂತೆ.. 

ಮತ್ತೆ ಹೆತ್ತೆ.. ಅಳುತ್ತಿದ್ದ ಮಗುವಿನೆಡೆಗೆ ನೋಡಲೇ ಇಲ್ಲ..ತನ್ನ ಪೌರುಷದ ಪತಾಕೆಯನ್ನು ನೋಡುವ ಕುತೂಹಲದಿಂದ ಬಂದ ರಾಜನಲ್ಲಿ ಕೇಳಿದೆ "ನಿನ್ನ ಬಳಿ ಬೇಕಾದಷ್ಟು ಅಶ್ವಗಳಿವೆಯೇ..?"
ತಲೆ ತಗ್ಗಿಸಿದ.. "ಇಲ್ಲ..  ಕೇವಲ ಇನ್ನೂರು ಅಶ್ವಗಳಿವೆ.."

ನಾನೇ ಎದ್ದೆ. ಗಾಲವನನ್ನು ಬರಹೇಳಿ ಎಂದೆ.. ಅವನತಮುಖಿಯಾಗಿ ಹೋದ ರಾಜ ಮತ್ತೆ ನನ್ನೆದುರು ಬರಲೇ ಇಲ್ಲ.. 

ಮುಂದೆ ಗಾಲವ , ಹಿಂದೆ  ನಾನು.. ಮತ್ತದೇ ನೋಟ.. 

"ರಾಜಕುಮಾರಿ"  ಯಾರೋ ಕರೆದಂತಾಯಿತು

ಯಾರಿದು ಮಾತನಾಡಿದ್ದು.. ಅರೇ..! ಗಾಲವ ಮಾತನಾಡುತ್ತಿದ್ದಾನೆ..ಅದೂ ನನ್ನೊಡನೆ.. ಇಷ್ಟು ವರ್ಷಗಳ ಮೌನದ ಕಟ್ಟೆಯೊಡೆದು.. ಪಶ್ಚಾತ್ತಾಪವಿರಬಹುದೇ..?? ಕ್ಷಮಿಸು ಎಂದು ಬೇಡಬಹುದೇ..?? ಎಷ್ಟೆಲ್ಲ ಕಲ್ಪನೆಗಳು ನನ್ನೊಳಗೆ.. 
"ರಾಜಕುಮಾರೀ" ಮತ್ತದೇ ವಾಣಿ.. ಕುಮಾರಿಯೇ ನಾನು.. ಹೌದಲ್ಲವೇ.. ನನ್ನ ಮೇಲೇ ಕಣ್ಣಾಡಿಸಿಕೊಂಡೆ. ನನ್ನ ಯೌವನ ಒಂದಿಷ್ಟು ಮಾಸಿಲ್ಲ.. ಈಗಷ್ಟೇ ಹರೆಯಕ್ಕೆ ಕಾಲಿಟ್ಟ ಹೊಸ ಹೆಣ್ಣಿನಂತೆ ಇದ್ದೇನೆ.. ಮತ್ತೆ ದೇಹದ ಮೋಹ.. 

"ಇನ್ನಾರ ಬಳಿಯೂ ನಾನು ಬಯಸುವ ಅಶ್ವಗಳಿಲ್ಲ.. ಅವುಗಳನ್ನು ಇನ್ನು ಅರಸುವ ಚೈತನ್ಯವೂ ನನ್ನಲ್ಲಿಲ್ಲ. ಹಾಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಮಹರ್ಷಿ  ವಿಶ್ವಾಮಿತ್ರನಿಗೇ ನಿನ್ನನ್ನು ಒಪ್ಪಿಸುತ್ತಿದ್ದೇನೆ. ಅತ್ತ ಕಡೆಗೀಗ ನಮ್ಮ ಪಯಣ.." 
ನಗು ಬಂತು.. ಮೊದಲ ಬಾರಿಗೆ ನಕ್ಕಿದ್ದೆ.. ಸ್ವಲ್ಪವಲ್ಲ .. ಹುಚ್ಚು ಹೊಳೆಯೇ ಹರಿಯಿತು.. ನನ್ನೊಳಗಿನ ದುಃಖ ದುಗುಡಗಳೆಲ್ಲ ನಗುವಾಗಿ ಮಾರ್ಪಟ್ಟಿತೇನೋ..  

"ಇನ್ನುಳಿದ ಇನ್ನೂರು ಅಶ್ವಗಳ ಬದಲಿಗೆ ಈ ಬಳಸಿ ಎಂಜಲಾದ  ದೇಹವಾಗಬಹುದು ಎಂದಾದರೆ ಎಂಟು ನೂರು ಅಶ್ವಗಳ ಬದಲಿಗೆ ನನ್ನ ಮೊದಲಿನ ಯೌವನ ಸಾಲುತ್ತಿರಲಿಲ್ಲವೇ..??" 

ದಿಗ್ಬ್ರಾಂತನಂತೆ ನನ್ನ ಕಡೆಗೆ ನೋಡಿದ. ನನ್ನ ಪ್ರಶ್ನೆ ಅವನಿಗೆ ಉತ್ತರಿಸಲು ಕಷ್ಟಕರವಾಗಿದೆ ಎಂದನಿಸಿರಬೇಕು.. ಮೌನದ ಚಿಪ್ಪೊಳಗೆ ಬಂಧಿಯಾದ.. ಹೆಜ್ಜೆ ಮುಂದಕ್ಕಿಟ್ಟ.. 

ವನದ ನಡುವಿನ ಕಷ್ಟಕರ ಜೀವನಕ್ಕೆ ನಲುಗಿ, ಒಣಗಿದೆಲೆಯ ಬಣ್ಣ ಹೊತ್ತ ಸುಕ್ಕುಗಟ್ಟಿದ ಮೈಯ ನೀಳ ಜಡೆಯ, ಸಿಡುಕು ಮುಖದ ಮುನಿ ವಿಶ್ವಾಮಿತ್ರ.ನನ್ನ ಕಡೆಗೆ ಕಡೆಗಣ್ಣ ನೋಟ ಬೀರುತ್ತಲೇ, ನನ್ನನ್ನು ಅವನಿಗೊಪ್ಪಿಸಿದ ಗಾಲವನನ್ನು ನೋಡಿ, ತುಟಿಗಳ ಮೇಲೆ ಲಾಲಸೆಯ ನಾಲಗೆಯನ್ನಾಡಿಸುತ್ತಾ, "ನನ್ನ ಗುರುದಕ್ಷಿಣೆ ಸಂದಿತು.. ನೀನು ಇನ್ನು ಋಣ ಮುಕ್ತ.. ಹೋಗು" ಎಂದ.

ನನ್ನನ್ನು ಮತ್ತೊಂದು ಬಂಧನಕ್ಕೆ ದೂಡಿ ಗಾಲವ ಬಿಡುಗಡೆ ಪಡೆದಿದ್ದ..!!

 ಹೊರಡುವಾಗ ನನ್ನನ್ನು ಕಂಡು, ನನ್ನ ಪುಣ್ಯ ಸಂಚಯವನ್ನೆಲ್ಲ ನೀನು ಹೆತ್ತ ಮಕ್ಕಳಿಗೆ ಹಂಚಿಬಿಡುತ್ತೇನೆ. ಅವರು ಪ್ರತಿಭಾಶಾಲಿಗಳಾಗುವರು.. ಎಂದು ಹರಸಿದ.
ಪುಣ್ಯವೇ.. ಒಂದು ಹೆಣ್ಣಿನ ಜೀವನವನ್ನೇ ಕೊಂದವರಿಗೆ ಸ್ತ್ರೀ ಹತ್ಯಾ ದೋಷ ಬರುವುದಿಲ್ಲವೇ..? ಕೊಲ್ಲುವುದು ಅಂದರೆ ದೇಹಕ್ಕೆ ಸಾವು ಬರಬೇಕೇನೋ.. ಅವಳ ಅಂತರಾಳದ ನೋವಿಗೂ ಸಾವಿಗೂ ಸಂಬಂಧವಿರಲಾರದು..ನನ್ನನ್ನು ಪಾಪಕೂಪಕ್ಕೆ ದಬ್ಬಿ ,ಈಗ  ಇದು ನಾನು  ಸಂಗ್ರಹಿಸಿದ ಪುಣ್ಯ ಎನ್ನುವರಲ್ಲ ..  ಯಾರಿಗೆ ಬೇಕು.. ಅದೂ ಇವನ ಫಲ  ಸಿಗುವುದು ನನಗಲ್ಲ .. ಮಕ್ಕಳಿಗೆ .. ನಾ ಹೆತ್ತ ಮಕ್ಕಳೇ..??  ನನ್ನದೆಂದು ಒಂದು ದಿನ ಮಡಿಲಿಗೆತ್ತಿ ಕೂರಿಸಿಕೊಳ್ಳುವ ಭಾಗ್ಯವಿಲ್ಲದಿದ್ದರೂ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಇಂತಹ ಪುಣ್ಯದ ಪಾಲುದಾರರು.. 

ಅವನತ್ತ ಹೋಗುವುದನ್ನೇ ಕಾಯುತ್ತಿದ್ದ ವಿಶ್ವಾಮಿತ್ರ.. ಅಲ್ಲಿಯವರೆಗೆ ಕಟ್ಟಿಟ್ಟಿದ್ದ ಪೌರುಷವನ್ನೆಲ್ಲಾ ಒಡ್ಡು ಗಟ್ಟಿ ನನ್ನೆಡೆಗೆ ಹರಿಸಿದ... ಕಾಲಗಳಿಂದ ಹಸಿದಿದ್ದವನು ಉಣ್ಣುವಂತೆ.. ತೃಪ್ತಿಯ ಕೇಕೆ ಅರಣ್ಯದಲ್ಲಿ ಮಾರ್ಧನಿಸಿತು. ಉಂಡ ನಂತರ ಬಾಳೆಲೆಯ ಹಂಗೇಕೆ..??  

ಪ್ರಕೃತಿ ತನ್ನ ಕೆಲಸವನ್ನೂ ಸುಮ್ಮನೆ ಮಾಡುತ್ತಲೇ ಹೋಗುತ್ತದೆ.ಇಲ್ಲದಿದ್ದರೆ ಹೀಗೆ ಮತ್ತೆ ಮತ್ತೆ ಹಸಿರಾಗುವ ಕಾಡಿನಂತಾಗುತ್ತಿದ್ದೆನೇ ನಾನು..?? ಬೇಸಿಗೆಗೆ ಒಣಗಿ ಮತ್ತೆ ನೀರ ಸ್ಪರ್ಷಕ್ಕೆ ಚಿಗುರೊಡೆಯುತ್ತೇನೆಯೇ..?? 

.. ಮತ್ತೆ ಬಸಿರೊಳಗೆ ಒದೆಯುತ್ತಿರುವ ಪಿಂಡ.. ನನ್ನ ದೇಹ ಲಕ್ಷಣವನ್ನು ಗಮನಿಸಿದ ವಿಶ್ವಾಮಿತ್ರನೀಗ ನನ್ನ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದ.ಯಾವುದೋ ತಪ್ಪು ಮಾಡಿದವನಂತೆ ಚಡಪಡಿಸುತ್ತಿದ್ದ..  ತಾನು ಇಲ್ಲಿಯವರೆಗೆ ಮಾಡಿದ ತಪಸ್ಸು, ಕಾಪಿಟ್ಟ ಸಂಯಮ, ನಿಗ್ರಹಿಸಿದ ದೇಹ ಶಕ್ತಿ ಎಲ್ಲವನ್ನೂ ನಾನು ಅಪಹರಿಸಿ ಬಿಟ್ಟಿದ್ದೇನೆ ಎಂಬ ಧೋರಣೆ ಅವನಲ್ಲಿ.. 

ವ್ಯಂಗದ ನಗೆ ಬೀರಿದೆ.. 

ಏನಿತ್ತೋ ಅವನ ಮನದೊಳಗೆ.. ಗಡ್ಡ ಮೀಸೆಗಳಿಂದ ಮುಚ್ಚಿ ಹೋದ ಕಠಿಣ ಮುಖದಲ್ಲಿ ಯಾವುದೇ ಭಾವಗಳೂ ಕಾಣುತ್ತಿರಲಿಲ್ಲ.

ಆಹ್.. ನರ ನರಗಳಲ್ಲಿ ವ್ಯಾಪಿಸಿದ ನೋವು..  ಭೂಮಿಗಿಳಿದ ಇನ್ನೊಂದು ಜೀವದ ಅಳು..ಮತ್ತೊಮ್ಮೆ ತಾಯಾದೆ.. ಹೌದೇ.. ಇಷ್ಟು ಮಕ್ಕಳನ್ನು ಹೆತ್ತದ್ದಲ್ಲದೇ ತಾಯಾಗಿದ್ದೆನೇ..?? ಯಾರದೋ ಬಯಕೆಯ  ಅಗ್ನಿಗೆ  ಎದ್ದ ಜ್ವಾಲೆಗಳಷ್ಟೇ ಇವು.. ಅಗ್ನಿ ಕುಂಡಕ್ಕೆ ಬಿಸಿಯರಿವು ಇದೆಯೇ.. ಕಟ್ಟಿಗೆ ಮಾತ್ರವಲ್ಲವೇ ಉರಿದುರಿದು ಬೂದಿಯಾಗಿದ್ದು..   ವಿಶ್ವಾಮಿತ್ರನೆಡೆಗೆ ನೋಡಿದೆ. 

"ನಾನು ತಪಸ್ಸನ್ನಾಚರಿಸಲು ಈ ಜಾಗ ಬಿಟ್ಟು ದೂರ ಹೋಗುತ್ತಿದ್ದೇನೆ. ನೀನಿನ್ನು ನನ್ನೊಡನೆ ಬರುವ ಅಗತ್ಯವಿಲ್ಲ. ನಿನ್ನ ರಾಜ್ಯಕ್ಕೆ ಕರೆ ಕಳುಹಿದ್ದೇನೆ..ಬಂದಾರು ನಿನ್ನನ್ನು ಕರೆದೊಯ್ಯಲು.. ನೀನೀಗ ಸ್ವತಂತ್ರಳು.. ನನ್ನ ಅಧೀನಳಲ್ಲ" 

ನನ್ನ ರಾಜ್ಯಕ್ಕೆ ಕರೆಯೇ.. ಯಾವುದು ನನ್ನ ರಾಜ್ಯ.. ಯಾರು ನನ್ನವರು.. ಕಂಡು ಕೇಳರಿಯದವನೊಂದಿಗೆ 'ಬಳಸಿಕೊಳ್ಳಿ ಇವಳನ್ನು' ಎಂದು ನೂಕಿದ ಯಯಾತಿಯೇ..?? ಅಥವಾ ತಮ್ಮಲ್ಲಿರುವುದು ಇನ್ನೂರು ಅಶ್ವಗಳು ಮಾತ್ರ ಎಂದು ತಿಳಿದಿದ್ದರೂ ಅದರ ಬೆಲೆಯಾಗಿ ಮಕ್ಕಳನ್ನು ಪಡೆದು ನನ್ನನ್ನು ತಳ್ಳಿದ ರಾಜರುಗಳೇ..?? ನಾನು ಯಾರಿಗೆ ಏನಾಗಬೇಕು.. ಯಾರ ಮಗಳು .. ಯಾರ ಮಡದಿ .. ಯಾರ ತಾಯಿ .. 

ಮಗುವಿನೆಡೆಗೆ ನೋಡಿದೆ. "ಅವನು ನನ್ನ ಫಲ.. ನೀನು ಕೇವಲ ಭೂಮಿ  ಮಾತ್ರ.. ಬೀಜದಿಂದೊಡೆದ ಸಸ್ಯದ ಪ್ರತಿಫಲ ಏನಿದ್ದರೂ ನೆಟ್ಟವನದೇ.." 

ಹೌದಲ್ಲವೇ.. ಇವನೂ ಆ ಗಂಡುಗಳಿಂದ ಬೇರೆಯವನಾಗುವುದು ಹೇಗೆ ಸಾಧ್ಯ.. 

ನನಗೀಗ ಯಾವುದೇ ಬಂಧನವಿರಲಿಲ್ಲ.. ನನ್ನನ್ನಿಲ್ಲಿ ಒಂಟಿಯಾಗಿ ಬಿಟ್ಟು ಎಲ್ಲರೂ ಹೋಗಿದ್ದರು. ಆಶ್ರಮ ಸಮೀಪದಲ್ಲಿದ್ದ ತಿಳಿಗೊಳದಲ್ಲಿ ನನ್ನನ್ನೇ ನೋಡುತ್ತಾ ಕುಳಿತಿದ್ದೆ. ಹದಿ ಹರೆಯದ ಕನಸುಗಳ ಹೊತ್ತ ಅಂದಿನ ಮುಖ ಎಲ್ಲಿ.. ಏನೆಲ್ಲಾ ಇದ್ದೂ ಏನೊಂದನ್ನೂ ನನ್ನದಾಗಿಸಿಕೊಳ್ಳದ ಅಥವಾ ನನ್ನದಾಗಿಸಿಕೊಳ್ಳಲಾರದ ಇಂದಿನ ಮುಖವೆಲ್ಲಿ..  

ಅರಮನೆಯ ಮೇನೆಗಳು ಬಂದು ಹತ್ತಿರದಲ್ಲಿ ನಿಂತಿತ್ತು. ಮೌನವಾಗಿ ಏರಿದೆ. ನಾನು ಬರುತ್ತೇನೆಂದು ಎಲ್ಲರಿಗೂ ತಿಳಿದಿತ್ತು.. ಎಲ್ಲರ ಕುತೂಹಲದ ಕಣ್ಣು ನನ್ನ ಮೇಲೆ.. ಇಳಿದೊಡನೇ ಹತ್ತಿರ ಬಂದ ಸಖಿ ನನ್ನನ್ನಪ್ಪಿ ಬಿಕ್ಕಿದಳು. ಶರ್ಮಿಷ್ಟೆಯ ಮುಖದಲ್ಲಿ ನನ್ನ ಬಗೆಗೆ ಮರುಕವಿತ್ತು. ತನ್ನ ಮಗನನ್ನೂ ರಾಜನಿಗಾಗಿ ಬಲಿ ಕೊಟ್ಟವಳಲ್ಲವೇ ಅವಳು.. ದೇವಯಾನಿ ಯಾವುದೋ ಅಸಹ್ಯವನ್ನು ನೋಡುತ್ತಿರುವವಳಂತೆ ಸಿಂಡರಿಸಿದ ಮೊಗ ಹೊತ್ತಿದ್ದಳು. ಯಾವುದನ್ನೂ ಲೆಕ್ಕಿಸದೇ ಕೆಳಗಿಳಿದೆ. 

ತಲೆ ಸವರಿದ ಕೈಗಳೆಡೆಗೆ ನೋಡಿದೆ.. " ರಾಜಾ ಯಯಾತಿ" 

"ಅಪ್ಪಾ ಎನ್ನಬಾರದೇ ಮಗಳೇ.. ಎಷ್ಟು ಕಾಲವಾಯಿತು ನಿನ್ನ ಬಾಯಿಯಿಂದ  ಅಪ್ಪಾ ಎನಿಸಿಕೊಳ್ಳದೇ.." ಉಸಿರುಗರೆದ.

"ಯಾರು ಅಪ್ಪ.. ನೀನೇ..?? ಒಬ್ಬ ಮಗನ ಯೌವನವನ್ನು ಆಪೋಷನ ತೆಗೆದುಕೊಂಡೆ. ಮಗಳ ಯೌವನವನ್ನು ಬೀದಿಗಿಟ್ಟೆ. ನಿನ್ನನ್ನು ಕರೆಯಬೇಕೇ.. ಅಪ್ಪಾ..ಎಂದು.." 

ಅವನ ಸ್ವರ ಮತ್ತೊಮ್ಮೆ ಕೊಂಚ ನಡುಕಗೊಂಡು ಉಲಿಯಿತು.. " ಮಗಳೇ ನಿನ್ನ ಯೌವನಕ್ಕೆ ಒಂದಿಷ್ಟು ಮುಕ್ಕಾಗಿಲ್ಲ. ನಿನಗೆ ತಕ್ಕ ವರನಿಗಾಗಿ ಸ್ವಯಂವರವನ್ನೇ ಏರ್ಪಡಿಸುತ್ತೇನೆ. ಎಲ್ಲಾ ದೇಶದ ರಾಜರಿಗೂ ಆಮಂತ್ರಣ ಕಳುಹಿಸುತ್ತೇನೆ. ನಿನಗೆ ಯಾರು ಇಷ್ಟವೆಂದೆನಿಸುತ್ತದೋ ಅವನ ಕೊರಳಿಗೆ ವರಮಾಲೆ ಹಾಕು.."

ಹುಂ .. ಈ ಮಾತನ್ನು ಕೇಳಲು ಕಾತರಗೊಂಡಿದ್ದ ಕಿವಿಗಳೂ ಇತ್ತು ನನ್ನಲ್ಲಿ.. ಆಗ ಮಾತುಗಳಿರಲಿಲ್ಲ.. ನನ್ನ ದೇಹದೆಡೆಗೆ ನೋಡಿಕೊಂಡೆ. ಇನ್ನೂ ಕೆಲವು ಕಾಲ ಗಂಡಿಗೆ ಸುಖ ನೀಡಲು ಶಕ್ಯವೇನೋ.. ಯೌವನ ದೇಹದಲ್ಲಿತ್ತು.. ಮನಸ್ಸಿನಲ್ಲಲ್ಲ.. ಹೊರಗೆ ಗೋಚರಿಸುತ್ತಿದ್ದುದೇ ಸತ್ಯವಾಗಿ ಅವರಿಗೆ ಕಂಡಿತ್ತು..  ನನಗಲ್ಲ.. 

" ರಾಜಾ.. ನೀನು ಕನ್ಯಾದಾನ ಮಾಡದೇ ಈ ಮಗಳಿಗೆ ಎಷ್ಟು ಮದುವೆ ಆಗಿದೆ ಎಂದಾದರು ಬಲ್ಲೆಯಾ..ಗಣಿಕೆಯರಿಗಾದರೂ ಇವನು ಬೇಡ ಎಂದು ಹೇಳುವ ಸ್ವಾತಂತ್ರ್ಯ ಒಂದು ದಿನಕ್ಕಾದರೂ ಸಿಕ್ಕೀತೇನೋ ..!! ನನಗೆ ಅದನ್ನೂ ಇಲ್ಲದಂತೆ ಮಾಡಿದೆ ನೀನು ..  ಮತ್ತೆ ಮತ್ತೆ ದೇಹದ ಯೌವನದ ಮಾತು.. ನೀನು ಕೂಡಾ ಹೊದ್ದುಕೊಂಡಿದ್ದೀಯಲ್ಲ  ಕೃತ್ರಿಮ ಯೌವನದ ಆ ಹೊದಿಕೆ .. ಬಿಚ್ಚಿ ಎಸೆದರೆ ಎಷ್ಟು ವೃಣಗಳು ಕೊಳೆತು ನಾರುತ್ತಿದೆಯೋ ಅಲ್ಲಿ.. ಒಮ್ಮೆ ನಿನ್ನನ್ನು ನೀನೇ ನೋಡಿಕೋ.. ನೀನು ಅಂದು ನನ್ನನ್ನು ದಾನ ಮಾಡಿದಾಗಲೇ ನನ್ನ ಹಕ್ಕನ್ನು ಕಳೆದುಕೊಂಡೆ.. ನಾನೀಗ ಯಾರ ಸ್ವಾಮ್ಯವೂ ಅಲ್ಲ. ಯಾರ ಸ್ವಾಮಿತ್ವದ ಅಡಿಯಾಳೂ ಅಲ್ಲ. ಇನ್ನು ನನ್ನ ಬದುಕು,  ನನ್ನಿಚ್ಚೆಯಂತೆ ..ಯಾರ ಅಪ್ಪಣೆಯೂ ನನ್ನನ್ನು ಕಟ್ಟಿ ಹಾಕದು.. ಯಾರ ತಳ್ಳುವಿಕೆಯೂ ಹೊರ ನೂಕದು.. ಮನುಷ್ಯತ್ವವೇ ಇಲ್ಲದ ನರ ರಾಕ್ಷಸರ ನಡುವಿನಲ್ಲಿ ಬದುಕುವುದಕ್ಕಿಂತ ಕ್ರೂರ ಪ್ರಾಣಿಗಳಿರುವ ಕಾನನವೇ ನನಗೆ ಹಿತ.."

ನನ್ನ ಹೆಜ್ಜೆಗಳೀಗ ತಡಬಡಾಯಿಸುತ್ತಿರಲಿಲ್ಲ .. ದಿಟ್ಟ ನಡಿಗೆ ನನ್ನ ಹೊಸ ಬದುಕಿನೆಡೆಗೆ.. ಯಾರ ಹಂಗೂ ಇಲ್ಲದ  ನನ್ನ ಸ್ವಾತಂತ್ರ್ಯದೆಡೆಗೆ.. 
                        * * *

--