Pages

Total Visitors

Friday, May 25, 2012

ಟಿ ವಿ ಎಂಬ ಸುಂದರಿ ..



 ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..' ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. 'ಯಾರೇ ಹೇಳ್ಕೊಟ್ಟಿದ್ದು' ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. 'ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ  ನೋಡಿ... ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ' ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!
ಟಿ ವಿ ನಾ..?? ಕೇವಲ ಅದರ ಬಗ್ಗೆ ಕೇಳಿ ಮಾತ್ರ ತಿಳಿದಿದ್ದ ನನ್ನ ಕಣ್ಣ ಗೋಲಿಗಳು ಸಿಕ್ಕಿ ಹಾಕಿ ಕೊಳ್ಳುವಷ್ಟು ಮೇಲೇರಿದವು  ಅಚ್ಚರಿಯಿಂದ  !! ಕೂಡಲೇ  ಅವಳನ್ನು ಕೇಳಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದೆ. 
ಮನೆಗೆ ಹೋದವಳೇ ಕೈಕಾಲು ತೊಳೆಯದೆ ಅಡುಗೆ ಮನೆಗೆ ನುಗ್ಗಿ ಅಮ್ಮನಿಗೆ ಎಲ್ಲಾ ಸುದ್ಧಿಯನ್ನು ಬಿತ್ತರಿಸಿದೆ. ಅಮ್ಮನೂ ಇದನ್ನು ಅಪ್ಪನಿಗೆ ವರದಿ ಒಪ್ಪಿಸಿದಳು. ಅಪ್ಪನೂ ಇಂತಹ ವಿಷಯಗಳಲ್ಲಿ ತುಂಬಾ ಉತ್ಸಾಹಿ . ಹೊಸತೇನೇ ಇದ್ದರೂ ಅದು ಎಲ್ಲರ ಮನೆಗಳಲ್ಲಿ ಕಣ್ಬಿಡುವ ಮೊದಲೇ ನಮ್ಮಲ್ಲಿ ಇರಬೇಕಿತ್ತು. 

ರೇಡಿಯೊ, ಟೇಪ್ ರೆಕಾರ್ಡರ್ ಗಳಷ್ಟೆ ಅಲಂಕರಿಸಿದ್ದ ಮೇಜೀಗ ಟಿ ವಿ  ಯ ಸ್ವಾಗತಕ್ಕೂ ಸಜ್ಜಾಗಿ ನಿಂತಿತು.ಒಂದು ಶುಭ ಮುಹೂರ್ತದಲ್ಲಿ ಬಲಗಾಲಿಟ್ಟು ಒಳ ಪ್ರವೇಶಿಸಿದಳು ಟಿ ವಿ  ಎಂಬ ಸುಂದರಿ. ನಾನಂತೂ'ಯಾರಿಗೂ ಹೇಳೋದ್ಬೇಡ ಗುಟ್ಟು, ನಮ್ಮಲ್ಲಿ ಟಿ ವಿ  ತರ್ತಾರೆ' ಅಂತ ಮೊದಲೇ ಎಲ್ಲರ ಬಳಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳಿ ಆಗಿತ್ತು. ಇದರ ಜೊತೆಗೆ ನಮ್ಮದು ವಠಾರದ ಮನೆಯಾಗಿದ್ದ ಕಾರಣ ಕುತೂಹಲದ ಧ್ವನಿಗಳೂ, ಕಣ್ಣುಗಳೂ ನೂರ್ಮಡಿಸಿದವು. ಆ ಹೊತ್ತಿನಲ್ಲಿ ನಮ್ಮಲ್ಲಿ ಜಮಾಯಿಸಿದ್ದ ಜನರನ್ನು ಯಾರಾದರು ಹೊರಗಿನವರು ನೋಡಿದ್ದರೆ ಇಲ್ಲೇನೋ ಬಹು ದೊಡ್ಡ ಸಮಾರಂಭ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದರು. 

ಟಿ ವಿ  ಯೇನೋ ಟೇಬಲ್ ಅಲಂಕರಿಸಿತು . ಆದರೆ ಅದರ ಸಿಗ್ನಲ್ ರಿಸೀವ್ ಮಾಡುವ ಆಂಟೆನಾ ವನ್ನು ಅಳವಡಿಸುವ ಕೆಲ್ಸ ಇತ್ತು. ಅದನ್ನು ಸೆಟ್ ಮಾಡಲು ತಾಂತ್ರಿಕ ನೈಪುಣ್ಯದೊಂದಿಗೆ ಮರ ಏರುವ ಚತುರತೆಯೂ  ಬೇಕಿತ್ತು.ಸ್ವಲ್ಪ ಹೊತ್ತಿನಲ್ಲಿ ಅಪ್ಪನ ಗೆಳೆಯರು ಹಗ್ಗದ ಸಹಾಯದಿಂದ ಆಂಟೆನಾ ವನ್ನು ಮರಕ್ಕೇರಿಸಿ, ತಾವೂ  ಏರಿದರು. ಅದನ್ನು ಎಡಕ್ಕೆ ಬಲಕ್ಕೆ ತಿರುಗಿಸುತ್ತಾ ಬಂತಾ ಬಂತಾ ಎಂದು ಬೊಬ್ಬೆ ಹಾಕುತ್ತಿದ್ದರು. ಒಳಗೆ ಟಿ ವಿ  ಯ ಪಕ್ಕದಲ್ಲಿ ನಿಂತವರು' ಇಲ್ಲಾ, ಇಲ್ಲಾ...' ಎಂದು ರಾಗ ಎಳೆಯುತ್ತಿದ್ದರು. ಟಿ ವಿ  ಯಲ್ಲೋ 'ಬರ್ ' ಎಂಬ ಶಬ್ಧದೊಂದಿಗೆ ಅಸಂಖ್ಯಾತ ಕಪ್ಪು ಬಿಳುಪಿನ ಚುಕ್ಕಿಗಳು. 

ಇದನ್ನೇನು ನೋಡುವುದು ಎಂದು ಮಕ್ಕಳಾದ ನಮಗೆಲ್ಲಾ ಬೇಸರ ಬರಲು ಪ್ರಾರಂಭವಾಯಿತು. ಇದ್ದಕ್ಕಿಂದಂತೇ ಏನೋ ಮಾತಾಡಿದಂತೆ  ಕೇಳಿಸಲಾರಂಭಿಸಿತು. ನಾವೆಲ್ಲರೂ ಸರಿ ಆಗಿಯೇ ಹೋಯಿತು ಎಂಬಂತೆ  ಜೋರಾಗಿ ಚಪ್ಪಾಳೆ ಹೊಡೆದೆವು. ಆದರೆ ನಾವು ನೋಡ ಬಯಸಿದ ಚಿತ್ರಗಳ ದರ್ಶನ ಇನ್ನೂ ಆಗಿರಲಿಲ್ಲ. ಅಷ್ಟರಲ್ಲಿ ರಾತ್ರಿಯಾಗಿ ಟಿ ವಿ  ಯ ಕಾರ್ಯಕ್ರಮಗಳು ಮುಗಿಯುವ ಹೊತ್ತೂ ಆಗಿತ್ತು. ಮರ ಹತ್ತಿದವರು ಟಾರ್ಚಿನ ಬೆಳಕಿನಲ್ಲಿ ಕೆಳಗಿಳಿದು 'ನಾಳೆ ಸರಿ ಮಾಡೋಣ ಬಿಡಿ' ಎಂದರು.ನಿರಾಸೆಯಾದರೂ ಎಲ್ಲರೂ ಅವರವರ ಮನೆ ಕಡೆ ನಡೆದರು. ನಾವೂ ಸಂಭ್ರಮವೆಲ್ಲಾ ಮುಗಿದ ಭಾವದಲ್ಲಿ ಬಾಗಿಲು ಹಾಕಿಕೊಂಡೆವು.
ಮನೆಯೊಳಗೆ, ಹೊಸ ಟಿ ವಿ ಯ ಬಗೆಗಿನ ಮಾತಿನ ಸಂಭ್ರಮ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ  'ಕಿಟಾರ್' ಎಂದು ಕಿರುಚಿದ ಸದ್ದು ವಠಾರದ ಮೂಲೆಯ ನೀಲಮ್ಮಜ್ಜಿಯ ಮನೆಯ ಕಡೆಯಿಂದ ಕೇಳಿ ಬಂತು. ನಮ್ಮ ಯಾವುದೇ ಗೌಜು ಗದ್ದಲಗಳಿಗೆ ತಲೆ ಹಾಕದೇ ತನ್ನ ಪಾಡಿಗೆ ತಾನೇ ಬಾಗಿಲು ಹಾಕಿ ನಿದ್ದೆ ಹೋಗಿದ್ದ ಅವಳಿಗೇನಾಯ್ತಪ್ಪ ಎಂದುಕೊಂಡು ಪುನಃ ಮುಚ್ಚಿದ್ದ ಬಾಗಿಲುಗಳು ತೆರೆದುಕೊಂಡು ಅವಳ ಮನೆ ಕಡೆ ಕಾಲು ಹಾಕಿದವು. ಮೆಟ್ಟಿಲ ಬದಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಬೆವರೊರೆಸಿಕೊಳ್ಳಲೂ ಸಾಧ್ಯವಿಲ್ಲದೆ, ಬಿದ್ದಂತೆ ಕುಳಿತುಕೊಂಡಿದ್ದ ಅಜ್ಜಿಯ ಗಾಭರಿ  ಹೊತ್ತ ಮುಖ ಕಂಡು ಬಂತು. ನಮ್ಮೆಲ್ಲರನ್ನು ಕಂಡು ಮೇಲಕ್ಕೆ ಬೆರಳು ತೋರಿಸುತ್ತಾ ' ಅಲ್ಲಿ ದೆವ್ವ.. ದೆವ್ವಾ.. ನಾನೀಗ ನೋಡಿದೆ ಅಂದಳು. 
ನಾನು ಮೆಲ್ಲನೆ ಅಪ್ಪನ ಕೈ ಹಿಡಿದುಕೊಂಡರೆ , ಅಂತಹದನ್ನೆಲ್ಲ ನಂಬದ ಅಪ್ಪ ' ಎಲ್ಲಿ ತೋರ್ಸಿ .. ಏನೋ ಕನಸು ಬಿದ್ದಿರಬೇಕು ನಿಮ್ಗೆ ..' ಅಂದರು . ಆಕೆ ಮಾತ್ರ ಇಲ್ಲ ಸತ್ಯವಾಗಿಯೂ ನೋಡಿದೆ.. ಹಾಂ.. ಇನ್ನೂ ಅಲ್ಲೇ ಇದೆ ನೋಡಿ ಎಂದು ನಡುಗತೊಡಗಿದಳು. ಅವಳು ಕೈ ತೋರಿಸಿದ ಕಡೆ ಚಂದ್ರನ ಮಂದ ಬೆಳಕಿನಲ್ಲಿ  ತನ್ನ ಬಾಹುಗಳನ್ನು ವಿಸ್ತರಿಸಿ ನಿಂದಿದ್ದ ಸ್ವಲ್ಪ ಹೊತ್ತಿನ ಮೊದಲು ಮರವೇರಿದ್ದ ಆಂಟೆನಾ ಇತ್ತು. ಎಲ್ಲರೂ  ಜೋರಾಗಿ ನಗುತ್ತ ಮನೆಗೆ ಮರಳಿದರೂ ಅಂಟೆನಾಕ್ಕೆ ಮರುದಿನದಿಂದ 'ದೆವ್ವ' ಎಂದೇ ಎಲ್ಲರೂ ಕರೆಯತೊಡಗಿದರು. 
ಮತ್ತೂ ಒಂದೆರಡು ದಿನ  ಮರವೇರಿ ಇಳಿದರೂ ಚಿತ್ರಗಳು ಕಾಣದೇ ಯಾಕೋ ಟಿ ವಿ  ಯ ಉಸಾಬರಿಯೆ ಬೇಡ ಎನ್ನಿಸಿ ಬಿಟ್ಟಿತು. ನನಗಂತೂ ಶಾಲೆಯಲ್ಲಿ ಗೆಳತಿಯರು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹೇಳಲು ಸುಳ್ಳಿನ ಕತೆ ಪೋಣಿಸುವುದೇ ಕೆಲಸವಾಗಿತ್ತು. ಆದರೆ ಎಲ್ಲಾ ಕಷ್ಟಗಳಿಗೂ ಕೊನೆ ಎಂಬುದು ಇದ್ದೇ ಇರುತ್ತದಲ್ಲವೇ!!

ಅಪ್ಪನ ಸ್ನೇಹಿತರಲ್ಲೊಬ್ಬರು ಮರದ ಗೆಲ್ಲುಗಳಿಂದಾಗಿ ಸಿಗ್ನಲ್ ಬರುತ್ತಿಲ್ಲ ಅದನ್ನು ಕಡಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಸಲಹೆಯಿತ್ತರು. ಅವರ ಮಾತನ್ನು ಪಾಲಿಸುವ ಭರದಲ್ಲಿ ನಳನಳಿಸುತ್ತಿದ್ದ ಮರ ತನ್ನೆಲ್ಲ ಗೆಲ್ಲುಗಳನ್ನು ಕಳೆದುಕೊಂಡು ಬೋಳಾಯಿತು. ಈಗ ಆಂಟೆನಾವನ್ನು ಅತ್ತಿತ್ತ ತಿರುಗಿಸತೊಡಗಿದಾಗ ನಿಧಾನಕ್ಕೆ ಚಿತ್ರಗಳು ಮೂಡಲಾರಂಭಿಸಿದವು. ಮೊದ ಮೊದಲು ನಮ್ಮ ಕಲ್ಪನೆಯ ಮೇರೆಗೆ ಅದು ಇಂತಹ ಚಿತ್ರ ಎಂದು ಹೇಳಬೇಕಾಗುವ ಪರಿಸ್ಥಿತಿ ಇದ್ದರೂ, ಕ್ರಮೇಣ ನಿಜರೂಪ ತೋರಿದವು. ' ಇಷ್ಟೇ.. ಇನ್ನೂ ಚೆನ್ನಾಗಿ ಕಾಣಬೇಕೆಂದರೆ ಎತ್ತರದ ಮರಕ್ಕೆ ಕಟ್ಟ ಬೇಕಷ್ಟೆ ಎಂದರು. ಅಂತೂ ಇಂತೂ  ಇನ್ನೂ ಕೆಲವು ಮರಗಳು ತಮ್ಮ ರೆಂಬೆ ಕೊಂಬೆಗಳನ್ನು ಕಳೆದುಕೊಂಡಾದ ಮೇಲೆ ಚಿತ್ರಗಳು ನಿಚ್ಚಳವಾಗಿ ತೋರತೊಡಗಿದವು. 

ಈಗ ಮನೆಯಲ್ಲಿ ನಿತ್ಯವೂ ಜಾತ್ರೆ. ಭಾಷೆ ಅರ್ಥವಾಗದಿದ್ದರೂ ಅದು ಚಕ್ರ ತಿರುಗಿಸುತ್ತಾ 'ಊಂ..ಊಂ ' ಎಂದು ಸುರುವಾಗುವುದರಿಂದ ಪರದೆ ಎಳೆಯುವವರೆಗೆ ಎಲ್ಲವನ್ನೂ ನೋಡುತ್ತಿದ್ದೆವು. ಬಾನುವಾರಗಳಂತೂ ನಮ್ಮ ಮನೆ ಯಾವ  ಪಿಕ್ಚರ್ ಥಿಯೇಟರಿಗೂ ಕಡಿಮೆ ಇಲ್ಲದಂತೆ  ಕಂಗೊಳಿಸುತ್ತಿತ್ತು.ಯಾಕೆಂದರೆ ಆ ದಿನಗಳಲ್ಲಿ ಮಧ್ಯಾಹ್ನ ಪ್ರಾದೇಶಿಕ ಭಾಷಾ ಚಿತ್ರವೆಂದು ಅಧಿಕೃತ ಭಾಷೆಗಳ ಚಿತ್ರಗಳನ್ನು ವಾರಕ್ಕೊಮ್ಮೆ ತೋರಿಸುತ್ತಿದರು. ತೆಲುಗು, ತಮಿಳು, ಮಲಯಾಳಂ ಗಳು ಮಿಂಚಿ  ಮರೆಯಾದರೂ, ಕನ್ನಡವಿನ್ನೂ ಪರದೆಯ ಮರೆಯಲ್ಲೇ ಅಡಗಿತ್ತು. 
ಆ ವಾರವೂ ನಾವೆಲ್ಲ ಟಿ ವಿ  ಯ ಮುಂದೆ ಕುಳಿತು ಬರುವ ಜಾಹೀರಾತುಗಳ ಹಾಡುಗಳಿಗೆ ನಮ್ಮ ಧ್ವನಿ ಸೇರಿಸುತ್ತಿದ್ದೆವು. ಇದಕ್ಕಿಂದಂತೆ ಟಿ ವಿ  ಯ ಒಳಗಿನಿಂದ ಚೆಲುವೆಯೊಬ್ಬಳು ' ಆಗೆ ದೇಖಿಯೇ ಕನ್ನಡ ಫೀಚರ್ ಫಿಲ್ಮ್ ಅಮೃತ ಗಲೀಜು' ಅಂದಳು, ದೊಡ್ಡವರೆಲ್ಲ  ಮುಖ ಮುಖ ನೋಡಿಕೊಂಡು ಇದ್ಯಾವುದಪ್ಪಾ ಎಂದು ಚರ್ಚೆ ಮಾಡತೊಡಗಿದರು. ಆಷ್ಟರಲ್ಲಿ ಕನ್ನಡ ಭಾಷೆಯ ಬರಹಗಳು ಕಾಣಿಸಿಕೊಂಡು ' ಅಮೃತ ಘಳಿಗೆ' ಎಂಬ ಹೆಸರು ಮೂಡಿತು. ಘಳಿಗೆ ಯನ್ನು ಇಂಗ್ಲೀಷ್  ನಲ್ಲಿ ಬರೆದುಕೊಂಡಿದ್ದಳೇನೋ..?? ಮ್ಯಾರೇಜ್, ಗ್ಯಾರೇಜ್ ಗಳಂತೆ ಇದನ್ನು ಗಲೀಜ್ ಎಂದು ಓದಿದ್ದಳು.  ಅವಳು ಗಲೀಜು ಎಂದರೂ ಒಳ್ಳೆಯ ಚಲಚಿತ್ರದ ವೀಕ್ಷಣೆಯ ಸಮಾಧಾನ ನಮ್ಮದಾಗಿತ್ತು. ಮತ್ತೆ ಬಂದ ರಾಮಾಯಣವಂತೂ ಟಿ ವಿ  ಯನ್ನು,ದೇವಸ್ಥಾನದ ಸ್ಥಾನಕ್ಕೇರಿಸಿ ಪರಮ ಪೂಜ್ಯವನ್ನಾಗಿ ಮಾಡಿತು. 

ಇಂತಿಪ್ಪ ಕಾಲದಲ್ಲಿ,ಮನೆಯವರೆಲ್ಲ ಒಟ್ಟಾಗಿ ಸೇರಿ,ನ್ಯಾಷನಲ್ ಚ್ಯಾನಲ್ ನ  ಏಕ ಚಕ್ರಾದಿಪತ್ಯದಲ್ಲಿ ಸುಖದಿಂದ ಬದುಕುತ್ತಿದ್ದೆವು.  ಜೊತೆಗೆ ಏನೇ ಆದರೂ ರಾತ್ರಿಯ ನಿರ್ಧಿಷ್ಟ ಹೊತ್ತಿನಲ್ಲಿ ತನ್ನ ಮುಖಕ್ಕೆ ಹೊದಿಕೆಯೆಳೆದುಕೊಂಡು ನಿದ್ದೆ ಮಾಡುತ್ತಿದ್ದ ಈ ಸುರಸುಂದರಾಂಗಿ ಎಲ್ಲರಿಗೂ ನೆಮ್ಮದಿಯ ನಿದ್ದೆಯನ್ನೂ ಕರುಣಿಸಿ,  ಮರುದಿನದ ವೀಕ್ಷಣೆಗೆ ಇನ್ನಷ್ಟು ಉಲ್ಲಾಸದಿಂದ ಸಿದ್ಧರಾಗುವಂತೆ ಮಾಡುತ್ತಿದ್ದಳು.   ಯಾಕೆಂದರೆ  ಈಗಿನಂತೆ   ಆ ಸುಂದರಿ ಇಪ್ಪತ್ನಾಲ್ಕು ಗಂಟೆಯೂ ತನ್ನ ಅವಕುಂಠನವನ್ನು ಸರಿಸಿ ಮುಖದರ್ಶನ ನೀಡುತ್ತಿರಲಿಲ್ಲ.ಇದರಿಂದಾಗಿ ಆಕೆಯನ್ನು ನೋಡುವ ನಮ್ಮ ಹಂಬಲವೂ ಕಡಿಮೆಯಾಗುತ್ತಿರಲಿಲ್ಲ. 
 ಇನ್ನೆಲ್ಲಿ ಆ ಕಾಲ.. !!


-- 

Friday, May 18, 2012

ಹಕ್ಕಿ ಹಾರುತಿದೆ ನೋಡಿದಿರಾ..



 ಮಳೆ ಬಂದು ಕೆಲವು ದಿನಗಳಾಗಿತ್ತು. ತೋಟಕ್ಕೆ ಹೋಗಲು ಬೇಸರವೆನಿಸಿದರೂ, ಗಿಡ ಮರಗಳಿಗೆ ನೀರಿನ ಆವಶ್ಯಕತೆ ಇದೆಯೇನೋ ಅನ್ನಿಸಿ ಮೆಲ್ಲನೆ ಆ ಕಡೆ ಕಾಲು ಹಾಕಿದೆ.  ಅಡಿಕೆ ಮರಗಳ ಸಾಲಿನ ನಡುವಿನಲ್ಲಿದ್ದ ,ಕೊಂಚ ಜಾಸ್ತಿಯೇ ನೀರನ್ನು ಬೇಡುವ ಜಾಯಿ ಕಾಯಿ  ಗಿಡಗಳು ಬಸವಳಿದಂತೆ ಕಂಡಿತು. ಕಣ್ಣಾ ಮುಚ್ಚಾಲೆ ಆಡುತ್ತಿರುವ ಮಳೆಯಿಂದಾಗಿ  ಒಮ್ಮೆ ಇಳೆ ತಂಪಾಗುವುದು ಹೌದಾದರೂ, ಮತ್ತೆ ತಲೆದೋರುವ ಬಿರು ಬಿಸಿಲು ಗಿಡ ಮರಗಳನ್ನು ತಾಪಕ್ಕೆ ಒಡ್ಡುತ್ತದೆ. 

ಸ್ಪ್ರಿಂಕ್ಲರ್ ಗಳನ್ನು ಹಿಡಿದುಕೊಂಡು ಎಲ್ಲಿಂದ ಸುರು ಮಾಡುವುದೆಂದು ಯೋಚಿಸುತ್ತಾ ಮುಂದೆ ಹೋಗುತ್ತಿದ್ದಂತೆಯೇ ನನ್ನ ಪಕ್ಕದಲ್ಲಿ ಒಂದೆರಡು ಬಿಳಿ ಬಣ್ಣದ ಕೊಕ್ಕರೆಗಳು ಧರೆಗಿಳಿದವು.  ಸ್ವಲ್ಪ ಅಂತರದಲ್ಲಿ ಕೊಕ್ಕನ್ನು ಆಗಸದೆಡೆಗೆ ಬೊಟ್ಟು ಮಾಡಿ ನಡೆಯುತ್ತಾ ಬರತೊಡಗಿದವು. ನಾನು ಸುಮ್ಮನೆ ನಿಂತು ಬೇರೆಲ್ಲೊ ನೋಡಿದಂತೆ ನಟಿಸಿ ವಾರೆಗಣ್ಣಲ್ಲಿ ಅವುಗಳ ಪ್ರತಿಕ್ರಿಯೆ ಗಮನಿಸಿದೆ. ಅವುಗಳೂ ಈಗ ತಟಸ್ಥವಾಗಿ ನಿಂತು ಕೊರಳುದ್ದ ಮಾಡಿ ಅತ್ತಿತ್ತ ನೋಡುತ್ತಾ ಏನೂ ಅರಿಯವದವರಂತೆ ನಟಿಸುತ್ತಿದ್ದವು! ನಾನು ಮತ್ತೆ ಹೆಜ್ಜೆ ಹಾಕಿದೆ. ಅವು ಮೆಲ್ಲನೆ ಹಿಂಬಾಲಿಸುತ್ತಿದ್ದವು. ಶಿಸ್ತಿನ ಸಿಪಾಯಿಗಳಂತಿದ್ದ ಅವುಗಳ ಹಾವಭಾವ ನನ್ನನ್ನು ಪುಳಕಿತಗೊಳಿಸಿದವು. ಸ್ಪ್ರಿಂಕ್ಲರ್ ಗಳನ್ನು ಜೋಡಿಸಿ ಇತ್ತ ಬಂದು ಪಂಪ್ ಸ್ಟಾರ್ಟ್ ಮಾಡಿ  ನೋಡಿದರೆ, ಆ ಕ್ಷಣಕ್ಕಾಗಿ ಕಾಯುತ್ತಿದ್ದವರಂತೆ, ನೀರ ಧಾರೆಗೆ ಮೈಯೊಡ್ಡಿ ನಲಿಯುತ್ತಿದ್ದ ಕೊಕ್ಕರೆಗಳು ಕಾಣಿಸಿದವು. 

ತುಸು ಎತ್ತರದಲ್ಲಿ ದಿಣ್ಣೆಯ ಮೇಲಿದ್ದ  ಕುಡಿಯುವ ನೀರಿನ ಟ್ಯಾಂಕ್ ಗೆ ನೀರು ತುಂಬಿಸಿ, ಪೈಪನ್ನು ಪಕ್ಕದಲ್ಲಿ ಕೈತೋಟಕ್ಕೆ ಬಳಸುತ್ತಿದ್ದ ಪುಟ್ಟ ನೀರ ಹೊಂಡ ತುಂಬಲೆಂದು ಇಟ್ಟು ಕೆಳಗಿಳಿದು ಬರುತ್ತಿದ್ದೆನಷ್ಟೆ. ಅಲ್ಲಿಯವರೆಗೆ ಆವರಿಸಿದ್ದ ಗಾಡ ಮೌನದಲ್ಲೀಗ  ಹಕ್ಕಿಗಳ ಕಿಚಿ ಕಿಚಿ ಸದ್ದು!!  ಮೆಲ್ಲನೆ ಅತ್ತ ಕತ್ತು ಹೊರಳಿಸಿ ನೋಡಿದರೆ ಬಗೆ ಬಗೆಯ ಬಣ್ಣದ ಹಕ್ಕಿಗಳು. ನೀರಿನ ಹೊಂಡಕ್ಕಿಳಿದು ಪುಟ್ಟ ರೆಕ್ಕಗಳನ್ನು ಪಟ ಪಟ ಆಡಿಸುತ್ತಾ ಮನಸೋ ಇಚ್ಚೆ ಸ್ನಾನ ಮಾಡುತ್ತಿದ್ದವು. ನನ್ನನ್ನು ಗಮನಿಸಿದವೋ ಏನೋ, ಬುರ್ರನೆ ಹಾರಿ ಪಕ್ಕದಲ್ಲಿದ್ದ ಮರದ ಗೆಲ್ಲಿನಲ್ಲಿ ಸಾಲಾಗಿ ಕುಳಿತು ಒದ್ದೆ ಮೈಯನ್ನು ಕೊಡವಿಕೊಳ್ಳ ತೊಡಗಿದವು!

ಅಡುಗೆ ಮನೆಯ ಕಿಟಕಿಯ ನೇರಕ್ಕೆ ಒಂದು ಪುಟ್ಟ ಬಾಲ್ದಿಯ ತುಂಬ ನೀರು. ಆಗಷ್ಟೆ ಅಲ್ಲಿದ್ದ ನೀರನ್ನು ಗಿಡಗಳಿಗೆ ಚೆಲ್ಲಿ ಹೊಸದಾಗಿ ತುಂಬಿಟ್ಟಿದ್ದೆ. ನಾನು ಮರೆಯಾಗುತ್ತಿದ್ದಂತೆಯೇ , ಎಲ್ಲಿ ಕುಳಿತು ಹೊಂಚು ಹಾಕುತ್ತಿದ್ದವೋ ಕಾಣೆ !ಒಂದೊಂದಾಗಿ ಹಕ್ಕಿಗಳು ಕೆಳಗಿಳಿದು ನೀರು ಕುಡಿದು, ಅಲ್ಲೇ ಚಿಲಿ ಪಿಲಿ ಶಬ್ದ ಮಾಡುತ್ತಾ ಆಟವಾಡತೊಡಗಿದವು. 

ಇವುಗಳ ಚಿನ್ನಾಟವನ್ನು  ನೋಡುತ್ತಿದ್ದರೆ, ಹೊತ್ತು ತನ್ನಷ್ಟಕ್ಕೆ ತಾನೇ ಕಳೆದು ಹೋಗುತ್ತಿತ್ತು. ಎಂತಹ ಬೇಸರದ ವಾತಾವರಣವಿದ್ದರೂ, ಈ ಬಾನಾಡಿಗಳನ್ನು ಕಂಡೊಡನೆ ದುಃಖವೆಲ್ಲಾ ಕರಗಿ ಮನಸ್ಸಿನಲ್ಲಿ ಶಾಂತಿ ತನ್ನಿಂದ ತಾನೇ ನೆಲೆಗೊಳ್ಳುತ್ತಿತ್ತು. 

ಇದು ಬಾನಾಡಿಗಳ ಒಡನಾಟದ ಸುಂದರ ಪ್ರಪಂಚದ ಒಂದು ಮುಖವಾದರೆ, ಇದರ ಹಿಂದಡಗಿರುವ ಕರಾಳತೆಯ ಇನ್ನೊಂದು ಮುಖವನ್ನು ನಿಮಗೆ ಪರಿಚಯಿಸುತ್ತೇನೆ. ಆಧುನಿಕತೆ ಹೆಚ್ಚಿದಂತೆಲ್ಲ ಮನುಷ್ಯನ ಹಿಡಿತಕ್ಕೆ ಸಿಕ್ಕಿದ ಭೂಮಿಯ  ಬಹುಪಾಲು ಅವನ ಅವಶ್ಯಕತೆಗಳಿಗಾಗಿಯೇ ಉಪಯೋಗವಾಗುತ್ತಿದೆ. ಇದು ನಮ್ಮಂತೆ, ಭೂಮಿಯಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳ ಮೇಲೆ ನಮ್ಮಷ್ಟೆ ಹಕ್ಕನ್ನು ಹೊಂದಿದ ಬೇರೆ ಪ್ರಾಣಿಗಳ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ನೀರು ಇದಕ್ಕೆ ಹೊರತಲ್ಲ.
ಈಗೆಲ್ಲ ಕೆರೆ ಬಾವಿಗಳು ಬತ್ತಿ ಹೋಗಿ ಹಕ್ಕಿಗಳಿಗೆ ಸಹಜವಾಗಿ ದಕ್ಕಬೇಕಾದ ನೀರಿನ ಸೆಲೆಗಳು ಮಾಯವಾಗುತ್ತಿವೆ. ಬೇಸಿಗೆಯಲ್ಲಿ ಈ ಪಾಪದ ಜೀವಿಗಳು ಬೇಗೆಯನ್ನು ತಾಳಲಾರದೇ ನೀರಿಗಾಗಿ ಹಾತೊರೆಯುತ್ತಿರುತ್ತವೆ. ಅಲ್ಲಲ್ಲಿ ಮಾನವ ಬೇಕಾಬಿಟ್ಟಿ ಉಪಯೋಗಿಸಿ ಪೋಲು ಮಾಡಿದ ನಂತರ ಚರಂಡಿಯೆಡೆಗೆ   ಹರಿದು ಸಾಗುವ ಕೊಳಕು ನೀರಷ್ಟೆ ಇವುಗಳಿಗೆ ಸಿಗುವ ಅಮೃತ. 

ಬೇಸರವೆನಿಸಿತೇ..?   ಹಾಗಿದ್ದರೆ ನಾವೇಕೆ ಇವುಗಳ ಬಗ್ಗೆ ಕೊಂಚ ಕಾಳಜಿ ವಹಿಸಬಾರದು..? ನಾವು ತೋರುವ ಅಲ್ಪ  ಪ್ರೀತಿಗೆ ಇವುಗಳು ಮರಳಿ ನಮಗೆ ನೀಡುವ ಸಂತಸದ ಅಂದಾಜು ನಿಮಗಿರಲಾರದು! 

ಈಗ ನಿಮಗೂ ಹಕ್ಕಿಗಳ ಲೋಕಕ್ಕೆ ಎಂಟ್ರಿ ಬೇಕು ಅನ್ನಿಸ್ತಿದೆಯಾ.. 
ನೀವು ಮಾಡಬೇಕಾದುದಿಷ್ಟೆ. ನಿಮ್ಮ ಮನೆಯ ಹೂವಿನ ಸಾಲಿನಲ್ಲೋ, ಮರ ಗಿಡಗಳ ನೆರಳಿನಲ್ಲೋ ಅಥವಾ ಬಾಲ್ಕನಿಯ ಮೇಲೋ ಹೆಚ್ಚು ಆಳವಿರದ ಅಗಲವಾದ ಪಾತ್ರೆಗಳಲ್ಲಿ ನೀರು ತುಂಬಿಡಿ. ಪ್ರತಿದಿನ ಅವುಗಳನ್ನು ಬದಲಾಯಿಸುತ್ತಿರಿ. ಕೆಲವೇ ದಿನಗಳಲ್ಲಿ ನಿಮ್ಮಲ್ಲೂ ಹಕ್ಕಿಗಳು ತಮ್ಮ ಮ್ಯಾಜಿಕ್ ತೋರಿಸಲು ತೊಡಗುತ್ತವೆ. 
ಪುಟ್ಟ ಮಕ್ಕಳಿಗೂ ಈ ವಿಷಯದ ಬಗ್ಗೆ ತಿಳಿಹೇಳಿ. ಅವರೂ ಈ ಪುಟಾಣಿ ಜೀವಿಗಳನ್ನು ನೋಡಿ ಕಲಿಯಲು, ಅವರ ಗುಣ ಸ್ವಭಾವಗಳನ್ನು ಹತ್ತಿರದಿಂದ ತಿಳಿಯಲು ಸಹಾಯವಾಗುತ್ತದೆ. ಮಕ್ಕಳಲ್ಲಿ ಪರಿಸರದ ಬಗೆಗಿನ ಪ್ರೀತಿಯೂ ಹೆಚ್ಚುತ್ತದೆ. 

ಮತ್ತೇಕೆ ತಡ ಇಂದಿನಿಂದಲೇ ಸಿದ್ಧರಾಗಿ ಹೊಸ ಗೆಳೆಯರನ್ನು ಸ್ವಾಗತಿಸಲು.. !! 

Friday, May 11, 2012

ಗಾಳ..





ಎಫ್ ಬಿ ತೆರೆಯುತ್ತಿದ್ದಂತೆ ಬದಿಯಲಿ ಬಂದ ಫ್ರೆಂಡ್  ರಿಕ್ವೆಷ್ಟ್ ಗಳನ್ನು ನೋಡಿದ. ಅಲ್ಲಿ ಕಾಣಿಸಿದ ಸುಂದರಿಯೊಬ್ಬಳ  ಭಾವಚಿತ್ರ ನೋಡಿ ದಂಗಾದ ಲಲಿತ್..
ಹೆಸರು ನಿವೇದಿತಾ.. ಕಾಲೇಜು ಕನ್ಯೆ.. ತುಂಟ ನಗುವಿನ ಆ ಮುಖ ತನ್ನ ಗಾಳಕ್ಕೆ ಬೀಳಬಹುದೇ... !! ಅರೆಕ್ಷಣ ಚಿಂತಿಸಿ ,ಕೂಡಲೆ ಕನ್ ಫರ್ಮ್ ಮಾಡಿದ.

ಜೊತೆಗೆ 'ಬಿ ಮೈ ಫ್ರೆಂಡ್ ಫಾರ್  ಎವರ್' ಎಂದು ಮೆಸೇಜ್ ಕಳುಹಿಸಿದ. 

ಕೂಡಲೇ ಆ ಕಡೆಯಿಂದ  'ಇಟ್ ಈಸ್ ಮೈ ಪ್ಲೆಶರ್' ಎಂಬ ಪ್ರತ್ಯುತ್ತರ. 

ಕುಳಿತಲ್ಲೇ ನಸುನಗೆ ಬೀರಿದ. ಲಲಿತ್ ಅಗರ್ವಾಲ್ ಹೆಸರು ಯುವ ಪೀಳಿಗೆಗೆ ಪರಿಚಿತವೇ. ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲೂ ರಾರಾಜಿಸುತ್ತಿದ್ದ ತನ್ನ ಮುಖ. ಅಪ್ಪನ ಉದ್ಯಮದ ಕೋಟಿಗಟ್ಟಲೆ ಹಣದ ಏಕೈಕ ವಾರಸುದಾರ, ಯುವತಿಯರ ನಿದ್ದೆ ಕದಿಯುವಂತಿರುವ ಸುಂದರ ಮೊಗ.. ಇಷ್ಟು ಸಾಲದೇ ನನ್ನನ್ನು ಗುರುತಿಸಲು.. ಹೆಮ್ಮೆಯಿಂದ  ಬೀಗಿತ್ತು ಮನ.

ಲಲಿತ್ ಶೋಕಿಗೆ ಬಲಿ ಬೀಳದ ಹುಡುಗಿಯರೇ ಇಲ್ಲ ಎಂಬ ಮಾತು ಅವನ ಗೆಳೆಯರ ವಲಯದಲ್ಲಿ ಪ್ರಸಿದ್ಧ.ಹೊಸ ಹೊಸ ಚೆಲುವೆಯರ ಕೈ ಹಿಡಿದೋ. ಸೊಂಟ ಬಳಸಿಯೋ ವೀಕೆಂಡ್ ಕಳೆಯುವುದು ಅವನ ಖಯಾಲಿ. ಗೆಳೆಯರೆಲ್ಲ ಇವನ ಅದೃಷ್ಟಕ್ಕೆ  ಕರುಬುವಂತಿತ್ತು ಆ ವೈಭವ. 

ತಡ ಮಾಡದೇ ಅವಳ ಪ್ರೊಫೈಲನ್ನು ಪರೀಕ್ಷಿಸಿದ. ಅವಳ  ಸುಂದರ ಫೊಟೊಗಳಿದ್ದ ಆಲ್ಬಮ್ಮನ್ನೇ ನೋಡುತ್ತಾ ಕುಳಿತ. ಅಪ್ರತಿಮ ಸುಂದರಿಯಾದರೂ, ಅವಳ ಉಡುಪುಗಳು ಅವಳನ್ನು  ಮಧ್ಯಮ ವರ್ಗದಲ್ಲೇ ಗುರುತಿಸುವಂತಿತ್ತು. ಸುಲಭದಲ್ಲೇ ತನ್ನ ಗಾಳಕ್ಕೆ ಸಿಗುವ ಮೀನಿದು ಎಂದುಕೊಂಡ.

ಎಫ್. ಬಿ ಯ ಪರಿಚಯ ಬೆಳೆಯಲು ತಡವಾಗಲಿಲ್ಲ. ಇವನ ಮಾತುಗಳಿಗೆಲ್ಲ ಅವಳ ಸೂಕ್ತ ಪ್ರತಿಕ್ರಿಯೆ, ಅವಳ ಫೋನ್ ನಂಬರ್ ಬೇಗನೇ ಪಡೆಯುವಲ್ಲಿ ಯಶಸ್ವಿಯಾಗಿಸಿತು. ಈಗೆಲ್ಲ ಫೋನ್ ಮೂಲಕವೇ ಸಂಭಾಷಣೆ. ಸ್ನೇಹದ ಮಾತುಗಳು ಪ್ರೀತಿಯ ಕಡೆಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. 

ತನ್ನ ಬಲೆಯನ್ನು ಇನ್ನಷ್ಟು ಅಗಲವಾಗಿ ಬೀಸಲು ಬಯಸಿದ ಲಲಿತ್. ಬೇಕೆಂದೇ ಒಂದೆರಡು ದಿನ ತನ್ನ ಮೊಬೈಲನ್ನು ಆಫ್ ಮಾಡಿಟ್ಟ.  ಆ ಎರಡು  ದಿನಗಳಲ್ಲಿ ಎಫ್ ಬಿ ಯಲ್ಲಿ ಅವಳ ಕಾತರದ ಮೆಸೇಜುಗಳು ತುಂಬಿ ತುಳುಕುತ್ತಿದ್ದವು. 

ಈ ಬಿಸಿ ಆರುವ ಮೊದಲೇ ಅವಳನ್ನು ತನ್ನ ದಾರಿಗೆಳೆಯಲು ನಿರ್ಧರಿಸಿ ಅವಳಿಗೆ ಫೋನ್ ಮಾಡಿದ. 
ಡಿಯರ್ . ನಿನ್ನ ಮರೀಬೇಕಂತಾನೆ   ಎರಡು ದಿನ ನಿನ್ನ ಸಂಪರ್ಕದಿಂದ ದೂರ ಇದ್ದೆ. ಆದರೆ ನೀನಿಲ್ಲದೆ ನಂಗೆ ಬದುಕು ಸಾಧ್ಯವಿಲ್ಲ ಅನ್ನಿಸಿಬಿಟ್ಟಿದೆ. ನಂಗೆ ನಿನ್ನ ನೋಡ್ಬೇಕು.. ಈ ಸಂಡೆ ನಂಗೆ ಸಿಗ್ತೀಯಾ.. ಪ್ಲೀಸ್.. ಇದು ನನ್ನ ಸಾವು ಬದುಕಿನ ಪ್ರಶ್ನೆ.. ನೀನು ಬಾರದೆ ಇದ್ದರೆ ಈ ಜೀವ ಉಳಿಯಲ್ಲ.. ಯೋಚಿಸು ಅಂದ.

ಅತ್ತ ಕಡೆಯಿಂದ  ಕ್ಷಣ ಮೌನದ ನಂತರ ಅವಳ ನಾಚಿಕೆ ಬೆರೆತ ಸ್ವರ ಕೇಳಿಸಿತು. ಭೇಟಿಯಾಗ್ಬೇಕಾ..?? ನಂಗ್ಯಾಕೋ ಭಯ ಆಗುತ್ತೆ. ನಮ್ಮ ಮನೆಯವರಿಗೆ ಗೊತ್ತಾದರೆ ನನ್ನ ಮನೆ ಒಳಗೆ ಸೇರಿಸಲ್ಲ.. ಏನ್ಮಾಡ್ಲಿ..'

ಈ ಮಿಡಲ್ ಕ್ಲಾಸ್ ಹಣೇಬರಹಾನೇ ಇಷ್ಟು.. ಥತ್.. ಅಂದುಕೊಂಡ ಮನದಲ್ಲಿ.. ಆದರೆ ಮಾತುಗಳಿಗೆ ಜೇನಿನ ಸವಿ  ತುಂಬಿ ' ನಾನಿಲ್ವಾ.. ಅಷ್ಟ್ಯಾಕೆ ಭಯ.. ಈ ಸಂಡೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟಿಗೆ ಕಳೆಯೋಣಾ.. ಮತ್ತೆ ನಾನೇ ನಿಮ್ಮ ಮನೆಗೆ ಬಂದು ನಿನ್ನ ಅಪ್ಪ ಅಮ್ಮನ ಹತ್ರ ನಿಮ್ಮ ಮಗಳನ್ನು ಜೀವನಪೂರ್ತಿ ನಂಗೇ ಕೊಟ್ಬಿಡಿ ಅಂತ ಕೇಳ್ತೀನಿ.. ಸರೀನಾ.. ಈಗ್ಲಾದ್ರು ಒಪ್ಕೋ.. 
ಆ ಕಡೆಯಿಂದ  ಅರೆ ಮನಸ್ಸಿನ 'ಹುಂ' ಎಂಬ ಉತ್ತರ ಸಿಕ್ಕಿತು. 
ಲಲಿತ್ ಕುಶಿಯಿಂದ  'ಐ ಲವ್ ಯೂ ಡಿಯರ್.. ಥ್ಯಾಂಕ್ಯೂ.. ಥ್ಯಾಂಕ್ಯೂ' ಎಂದು ಕಿರುಚಿದ. 
ತನ್ನ ಗೆಳೆಯರೆಲ್ಲರಿಗೂ ಇವಳ ಎಫ್ ಬಿ ಯ ಪ್ರೊಪೈಲನ್ನು ತೋರಿಸಿ ಈ ಸಂಡೆ ಇವಳ ಜೊತೆ ಎಂದು ಬೀಗಿದ. ಆವಾಗಾವಾಗ ಫೋನ್ ಮಾಡಿ ಡಿಸ್ಟರ್ಬ್ ಮಾಡದಂತೆ ನಾಳೆ ನನ್ನ ಮೊಬೈಲ್ ಇಡೀ ದಿನ ಆಫ್ .. ಅವ್ಳು ಮತ್ತು ನಾನು ಇಬ್ಬರೇ.. ಹೆಮ್ಮೆಯಿಂದೆಂಬಂತೆ ನುಡಿದ. 

ಒಳ್ಳೇ ಚಾನ್ಸ್ ಹೊಡೆದೆ ಬಿಡು ನೀನು.. ಲಕ್ಕಿ ಫೆಲೋ.. ಎಂಜಾಯ್ ಮಾಡು.. ಎಂದು ಬೆನ್ನು ತಟ್ಟಿ ಕೀಟಲೆಯ ನಗೆ ನಕ್ಕರು ಗೆಳೆಯರು. 

ಸೋಮವಾರ ಎಲ್ಲ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಇವನ ಚಿತ್ರಗಳು ಪ್ರಕಟ ಗೊಳ್ಳುತ್ತಿದ್ದವು. ಕೆಳಗೆ ನಗರದ ಶೀಮಂತ ಉದ್ಯಮಿಯ ಪುತ್ರ ಲಲಿತ್ ಅಗರ್ವಾಲ್ ಅಪಹರಣ. ನಕ್ಸಲೈಟ್ ಗಳ ಕೈವಾಡ. ಒತ್ತೆ ಹಣಕ್ಕಾಗಿ ಬೇಡಿಕೆ. 

ಬೆರಗಾದ ಲಲಿತ್ ನ ಗೆಳೆಯರು ಎಫ್ ಬಿ ಓಪನ್ ಮಾಡಿ ನಿವೇದಿತಾಳನ್ನು ಹುಡುಕಿದರು. ಆ ಹೆಸರಿನ ಅಕೌಂಟ್ ಡಿಲೀಟ್ ಆಗಿತ್ತು.. !! 

Friday, May 4, 2012

ಜನನಿ ಜನ್ಮಭೂಮಿ ..





ಕಡಲ ತಡಿಯ ಸುಂದರ ಊರು. ಅಂಗಳದ ಬದಿಯಲ್ಲೆಲ್ಲಾ ತುಂಬಿ ನಿಂತ ಬಗೆ ಬಗೆಯ ಹೂವು ಹಣ್ಣಿನ ಗಿಡಗಳು.. ಮೂಲೆಯಲ್ಲಿ ಕೈಗೆಟಕುವಂತೆ  ಸಿಹಿ  ಎಳೆನೀರು ಹೊತ್ತಿದ್ದ  ಕುಬ್ಜ ಜಾತಿಯ ತೆಂಗಿನ ಮರಗಳು..ಪಕ್ಕದಲ್ಲೇ ಬಿಸಿಲ ಕಿರಣಗಳನ್ನು ತನ್ನೊಳಗೆ ತುಂಬಿಟ್ಟು ಪಳ ಪಳನೆ ಮಿಂಚುತ್ತಾ ತುಂಬಿ ಹರಿವ  ನದಿ..  ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆಯೇನೋ ಎಂಬಂತಿದ್ದ ಶುಭ್ರ ಪರಿಸರ..  ಗಿಡಗಳಿಗೆ ನೀರುಣಿಸುತ್ತಿದ್ದ ಶಂಕರ ಹತ್ತಿರದಲ್ಲಿ ಕೇಳಿದ ವಾಹನದ ಸದ್ದಿಗೆ ಬೆಚ್ಚಿ ಆ ಕಡೆಗೆ ತಿರುಗಿದ.ಹತ್ತಿರದಲ್ಲೇ ಉಯ್ಯಾಲೆ  ಜೀಕುತ್ತಿದ್ದ ಅವನ ಪುಟ್ಟ ಮಗಳು ನಾಚಿಗೆಯ ನಗು ಹೊದೆದು ಬಂದವರ ಕಡೆಗೆ ನೋಡಿದಳು.

ಭರ್ರನೆ ರಭಸದಿಂದ ಬಂದ ಕಾರಿನೊಳಗಿಂದ ಇಳಿದವರು ರವಿ ,ನಿರ್ಮಲ ಮತ್ತು ಶಂತನು. ಶಂಕರನೆಡೆಗೆ ಕಿರುನೆಗೆ ಬೀರಿ  ಮಾತಿಗೆ ಕಾಯದೆ ನೇರ ಮನೆಯೆಡೆಗೆ ಧಾವಿಸಿದರು. ಕೊಂಚ ಕೊಸರಾಡಿದ ಬೀಗವನ್ನು ತೆಗೆದು ಬಾಗಿಲು ದೂಡಿ ಒಳ ಸರಿದರು. ಅಲ್ಲಿಯವರೆಗೆ ಮುಚ್ಚಿದಂತಿದ್ದ ಮನೆಯೊಳಕ್ಕೆ ಹೊಸಗಾಳಿ ಸುಳಿದು ನನ್ನದೇ ಇದು ಎಂಬಂತೆ ಎಲ್ಲಾ ಕಡೆ ನುಗ್ಗಿತು. 

ನಿರ್ಮಲ ಮುಖಕ್ಕೆ ನೀರು ಹನಿಸಿಕೊಂಡವಳೇ, ಅಡುಗೆ ಕೋಣೆಯ ಕಿಟಕಿ ತೆರೆದು, ಒಳಬೀಳುತ್ತಿದ್ದ ಕಿರು ಬಿಸಿಲ ಧಾರೆಯನ್ನು ನೋಡಿದಳು. ಯಾರಿಗೆಲ್ಲಾ ಬ್ಲ್ಯಾಕ್ ಕಾಫೀ ಬೇಕು..?? ಉತ್ತರಕ್ಕಾಗಿ ಕಾಯದೆ ಆಫ್ ಮಾಡಿಟ್ಟಿದ್ದ ಸಿಲಿಂಡರಿನ ನಾಬ್ ತಿರುಗಿಸಿ ಸ್ಟೌವ್ ಉರಿಸಿ ನೀರು ಕಾಯಲಿಟ್ಟಳು. ಏನಿದೆಯೋ ಏನಿಲ್ಲವೋ ಅಂದುಕೊಳ್ಳುತ್ತಾ ನಿಗದಿತ ಸ್ಥಳಕ್ಕೆ ಕೈ ಹಾಕಿದರೆ ಒಂದೇ ರೀತಿಯ ಡಬ್ಬದಲ್ಲಿ  ಕಾಫಿ ಪುಡಿ, ಸಕ್ಕರೆ ಅಚ್ಚುಕಟ್ಟಾಗಿ ಕುಳಿತಿತ್ತು. ಆ  ಸ್ಪರ್ಷಕ್ಕೆ ಏನೋ ಒಂದು ತರದ ಪುಳಕ.. 

ನಂಗೆ ಕಾಫೀ ಜೊತೆಗೆ ಈ ಚಿಪ್ಸ್ ಕೂಡಾ ಬೇಕು ಎಂದು ಕೈಯಲ್ಲಿ ಹಿಡಿದ ಪ್ಯಾಕೇಟನ್ನು ಗಾಳಿಯಲ್ಲಿ ಹಾರಿಸುತ್ತಾ ಒಳ ಬಂದ ರವಿ . ಕತ್ತರಿ ಇರಿಸುತ್ತಿದ್ದ ಟೇಬಲಿನ ಡ್ರಾಯರ್ ಎಳೆದು ಕವರ್ ಕತ್ತರಿಸ ಹೊರಟ. ಹೊಸತು ಎಂಬತಿತ್ತು ಕತ್ತರಿ.  ಕೈ ಬೆರಳ ತುದಿಯೂ ಕತ್ತರಿಯ ಬಾಯಿಗೆ ಸಿಕ್ಕಿ  ಚಿಲ್ಲನೆ ನೆತ್ತರು ಚಿಮ್ಮಿತು.  ' ಅಮ್ಮಾ..' ಎಂಬ ನೋವಿನ ಉದ್ಗಾರದೊಂದಿಗೆ ಬೆರಳು ಒತ್ತಿ ಹಿಡಿದ. ಕಾಣದ ಕೇಳದ ಹೊಳಹೊಂದು ಕಣ್ಣೆದುರು ಮೂಡಿತ್ತು. 

ಪಕ್ಕದ ಕೋಣೆಗೆ ನುಗ್ಗಿ ಫಸ್ಟ್ ಏಡ್ ಕಿಟ್ ಹಿಡಿದು ಬಂದ ಶಂತನು. ಗಾಯವನ್ನು ಹತ್ತಿಯಲ್ಲಿ ಒರೆಸಿ, ಮುಲಾಮು ಹಚ್ಚಿ ಪುಟ್ಟ ಬ್ಯಾಂಡೆಜ್ ಸುತ್ತಿದ. ಅಮ್ಮ ಅತೀವ ಕಾಳಜಿ ವಹಿಸಿ ಸಿದ್ಧವಾಗಿಡುತ್ತಿದ್ದ ಫಸ್ಟ್ ಏಡ್ ಬಾಕ್ಸ್. ಅಮ್ಮ ಇದ್ದಾಗ ಅದರ ಅಗತ್ಯ ಬಿದ್ದಿರಲಿಲ್ಲ. ಅದೊಂದೇ ಅಲ್ಲ. ತೊಟ್ಟಿಲು, ಅಟ್ಟಣಿಗೆಯ ಮೇಲಿದ್ದ ಪುಟ್ಟ ಟ್ರೈಸಿಕಲ್, ಷೋಕೇಸಿನಲ್ಲಿದ್ದ ಟೆಡ್ಡಿ ಬೇರ್,  ಎಲ್ಲಾ ಇದ್ದಲ್ಲೇ ಇತ್ತು ಒಂದಿಷ್ಟೂ ಬದಲಾಗಿರಲಿಲ್ಲ. ಆ ಮನೆಯ ಕಣ ಕಣವೂ ಪರಿಚಿತ, ಆಪ್ತ.. 
ಈಗ ಹೇಗನ್ನಿಸ್ತಿದೆ ಅಣ್ಣಾ? ಪಸ್ಟ್ ಏಡ್ ಕಿಟ್ಟನ್ನು ತೆಗೆದಲ್ಲೇ ಇಡುತ್ತಾ ಕಳಕಳಿಯಿಂದ  ಶಂತನು ಕೇಳಿದ. ರವಿ ನಿಟ್ಟುಸಿರು ಬಿಡುತ್ತಾ ಕಿರುನಗೆಯೊಂದಿಗೆ 'ಅಮ್ಮನ ಪಸ್ಟ್ ಏಡ್ ಕಿಟ್ ಮತ್ತು ನಿನ್ನಂತ ತಮ್ಮ ಇರ್ಬೇಕಾದ್ರೆ ನೋವಿಗೆಲ್ಲಿ ಜಾಗ?' ಆರಾಮಾಗಿದ್ದೀನಿ ಅಂದ. ನೋವು ಮಾಯವಾಗಿ ನಗು  ಕುಣಿದಿತ್ತು ಆ ಕ್ಷಣಗಳಲ್ಲಿ..

ನಿರ್ಮಲ ಮೆಲ್ಲನೆ, ಶಾಂತೂ, ರವಿ , ಅಮ್ಮ ಇನ್ನೂ ಇಲ್ಲೇ ಇದ್ದಾಳೆ ಅನ್ನಿಸ್ತಾ ಇದೆ ಕಣ್ರೋ..! ಇಲ್ಲಿರುವ ಪ್ರತಿ ವಸ್ತು ಅವಳ ಕಾಳಜಿ, ಜೀವನ ಪ್ರೀತಿಯಿಂದ  ಆವರಿಸಿದಂತಿದೆ. ನಾವು ಕಳೆದು ಕೊಂಡದ್ದು ಅವಳ ಭೌತಿಕ ಕಾಯ ಮಾತ್ರ. ಹೊರಗೆ ನೋಡು ಆ ಗಿಡ ಮರ ಹಸಿರು ಎಲ್ಲಾ ಅವಳದೇ ಸೃಷ್ಟಿ  ಅಲ್ವಾ.. ಎಷ್ಟೆಲ್ಲಾ ಆಸೆಯಿಂದ  ಬದುಕಿನ ಪ್ರತಿ ಕ್ಷಣವನ್ನೂ ಜೀವ ತುಂಬಿ ಕಳೆದಿದ್ದಳವಳು. ನಾವೀಗ ಮಾಡೋದು ಸರಿ ಅನ್ಸುತ್ತಾ.. ಅವಳ ಆತ್ಮ ನೊಂದ್ಕೊಳ್ಳುತ್ತೇನೋ..? ಎಂದು ನುಡಿದಳು.

ಕಾಫೀ  ಕಪ್ ಹಿಡಿದು ಕುಳಿತ ಮೂವರನ್ನು ಮೌನದ ಬಳ್ಳಿ ಬಂಧಿಸಿತು. ತಿಂಗಳ ಕೆಳಗೆ ಕಳೆದುಕೊಂಡ ಅಮ್ಮ ಗೋಡೆಯಲ್ಲಿ ಫೋಟೊವಾಗಿದ್ದಳು. ಒಬ್ಬರ ಮುಖ ಒಬ್ಬರು ನೋಡುತ್ತ ಕೆಲ ಕ್ಷಣ ಕಳೆದರು. ವಾಚ್ ನೋಡಿಕೊಂಡ ರವಿ , ಈ ಜಾಗೆ ಹಾಗೂ ಮನೆಯನ್ನು ಖರೀದಿಸಲು ಒಪ್ಪಿದ್ದ ಸೇಟ್ ಲೀಲಾಧರ ಬರುವ ಹೊತ್ತು ಸಮೀಪಿಸುತ್ತಿತ್ತು. 

ಏನೋ ನಿರ್ಧರಿಸಿದಂತೆ ಎದ್ದ ರವಿ , ಹೊರಗೆ ಮ್ಲಾನ ಮುಖ ಹೊತ್ತು ನಿಂತಿದ್ದ ಶಂಕರನನ್ನು ಕರೆದು, 'ಶಂಕರ ಇನ್ಮೇಲೆ ನೀನು ಔಟ್ ಹೌಸ್ ಬಿಟ್ಟು ಮನೆಯೊಳಗೇ ಇರು. ಅಮ್ಮ ಇದ್ದಾಗ ನೋಡಿಕೊಂಡಿದ್ದಂತೆ ಇನ್ನು ಮುಂದೆ ಒಳಗೂ ಹೊರಗೂ ನೋಡಿಕೊಳ್ಳುವುದು ನಿನ್ನ ಕೆಲಸ. ಬಿಡುವಿದ್ದಾಗಲೆಲ್ಲ  ನಾವು ಬಂದು ಹೋಗ್ತೀರ್ತೀವಿ ಎಂದ.  ಶಂತನು ಫೋನಲ್ಲಿ ಸೇಟ್ ಜೊತೆ ಬದಲಾದ ಇರಾದೆಯ ಬಗ್ಗೆ ಮಾತಾಡುತ್ತಿದ್ದ.

ಶಂಕರನ ಮೊಗದಲ್ಲಿ ಮೂಡಿದ ಸಂತಸಭರಿತ ಅಚ್ಚರಿಯ ನೋಟದ ಹಿಂದೆ  ಅಗಲಿದ್ದ ಒಡತಿಯ ಮನದಾಸೆಯ ಛಾಯೆಯಿತ್ತು.  


--