Pages

Total Visitors

Friday, October 28, 2011

ಯಾರಿಗೂ ಹೇಳೋಣು ಬ್ಯಾಡಾ... !!



ಅಪುರೂಪಕ್ಕೆ ಬೆಳಗ್ಗಿನ ತಿಂಡಿಗೆ ಒಗ್ಗರಣೆ ಹಾಕಿದ ಅವಲಕ್ಕಿ , ಉಪ್ಪಿಟ್ಟು ಮಾಡಿದ್ದೆ.ನಂಗೆ ಇಷ್ಟ ಅನ್ನುವ ಕಾರಣಕ್ಕೇನೋ ಮಾಡಿದ್ದು ಹೆಚ್ಚಾಗಿ ಸ್ವಲ್ಪ ಹೆಚ್ಚೇ ಉಳಿದಿತ್ತು. ಸಂಜೆಗೂ ಅದೇ ತಿಂಡಿ ಅಂತ ಬೆಳಗ್ಗೇನೇ ಡಿಕ್ಲೇರ್ ಮಾಡಿಯೂ ಬಿಟ್ಟಿದ್ದೆ.ಮಗ ಸಂಜೆ ಸ್ಪೆಷಲ್ ಕ್ಲಾಸ್ ಇದೆ.ತಿಂಡಿ ನಂಗೆ ಇಡೊದೇನೂ ಬೇಡ ಅಂದ. ಇವರು ನಾನು ಸಂಜೆ ಎಲ್ಲಾದ್ರು ಹೋಗೋಣ ಅಂತಿದ್ದೀನಿ, ಅಂತಂದು ನನ್ನ ಸಿಡುಕಿನ ಉತ್ತರವನ್ನು ಕಾಯತೊಡಗಿದರು. ಮೆಚ್ಚಿನ ತಿಂಡಿ ಹೊಟ್ಟೆಯೊಳಗಿದ್ದುದರಿಂದಲೋ ಏನೋ, ನಾನು ಏನೂ ಮಾತಾಡದೆ ಒಳ ನಡೆದೆ.

ಮಧ್ಯಾಹ್ನ ಊಟದ ನಂತರ ನಸು ನಿದ್ರೆ ಅಗತ್ಯವೇ.. ಅನ್ನುವ ಲೇಖನವನ್ನು ಕೈಯಲ್ಲಿ  ಹಿಡಿದು ಅದ್ಯಾವ ಮಾಯೆಯಲ್ಲಿ ನಿದ್ದೆಗೆ ಜಾರಿದ್ದೆನೋ ನನಗೇ ತಿಳಿದಿರಲಿಲ್ಲ. 
ಹತ್ತಿರದಲ್ಲಿದ್ದ ಫೋನ್ ಒಂದಿಡೀ ಸುತ್ತಿನ ರಿಂಗ್ ಆಗಿ ಎರಡನೇ ಬಾರಿ ಹೊಡೆದುಕೊಳ್ಳಲು ಪ್ರಾರಂಭಿಸಿತು. ಬಲವಂತವಾಗಿ ಕಣ್ಣು ತೆರೆದು ಎದ್ದೆ. ನೋಡಿದರೆ ದೂರದ ಊರಲ್ಲಿರುವ ಚಿಕ್ಕಮ್ಮ. 'ಸಂಜೆಗೆ  ನಾವೆಲ್ಲರೂ ನಿಮ್ಮಲ್ಲಿಗೆ ಬರ್ತಾ ಇದ್ದೀವಿ ಜೊತೆಗೆ ಚಿಕ್ಕಪ್ಪನ ಸ್ನೇಹಿತರೂ ಒಬ್ರು ಇದ್ದಾರೆ. ನಮ್ಮೂರು ನೋಡಕ್ಕೆ ಕರ್ಕೊಂಡು ಬಂದಿದ್ದೀವಿ.. ಬೇಗ ಬರ್ತೀವಿ ..ಆಮೇಲೆ ಮಾತಾಡೋಣ ಆಗದೇ ..? ಈಗ ಫೋನ್ ಇಡ್ಲಾ ಅಂದಳು. ನಾನು ಸಂತೋಷದಿಂದ 'ಸರಿ  ಬೇಗ ಬನ್ನಿ ಚಿಕ್ಕಮ್ಮ' ಅಂದೆ. 

ಈಗ ನನ್ನ ಮೊದಲಿನ ಪ್ಲಾನ್ ಗೆ ಕುತ್ತು ಬಂದಿತ್ತು. ತುಂಬಾ ಸಮಯದ ನಂತ್ರ ನಮ್ಮಲ್ಲಿಗೆ ಬರುತ್ತಿರುವ ಅವಳಿಗೆ ನನ್ನ ಅತ್ಯಪರೂಪದ ಬೆಳಗ್ಗಿನ ಉಳಿದ ಉಪ್ಪಿಟ್ಟು , ಅವಲಕ್ಕಿ ಕೊಡೋದು ಹೇಗೆ? ಹಾಗಂತ ಇದನ್ನು ವೇಸ್ಟ್ ಮಾಡಲೂ ಮನಸ್ಸಿಲ್ಲ. ತಲೆಕೆರೆದುಕೊಳ್ಳುತ್ತಲೇ ಅಡುಗೆ ಮನೆಗೆ ಕಾಲಿಟ್ಟೆ. ಸಾಂಬಾರ್ ಗೆ ಕತ್ತರಿಸಿ ಉಳಿದಿದ್ದ ಅರ್ಧ ತುಂಡು ಕ್ಯಾಬೇಜ್, ಮತ್ತೊಂದು ಬೀಟ್ರೂಟ್ ಯಾಕೋ ಕಣ್ಣು ಸೆಳೆದವು. 

ತಲೆಯೊಳಗೆ ಸಾವಿರ ವೋಲ್ಟ್ ನ ಬಲ್ಬ್ ಇದ್ದಕ್ಕಿದ್ದಂತೇ ಉರಿಯತೊಡಗಿತು. ಕೂಡಲೇ ಸ್ಟೋರ್ ರೂಮಿಗೆ ಹೋಗಿ, ಅಲ್ಲಿ ಬೆಚ್ಚಗೆ ಕುಳಿತಿದ್ದ ಅಕ್ಕಿ ಹುಡಿ, ಮೈದಾ, ಸಣ್ಣ ರವೆ ಮೂರನ್ನೂ ಅರ್ಧರ್ದ ಕಪ್ ತೆಗೆದುಕೊಂಡು ಅಗಲ ಬಾಯ ಪಾತ್ರಕ್ಕೆ ಸುರಿದೆ. ಸ್ವಲ್ಪ ಎಣ್ಣೆ ಬಿಸಿ ಮಾಡಿ ಸೇರಿಸಿದೆ. ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಬೇಜ್ ,ಈರುಳ್ಳಿ,ಹಸಿಮೆಣಸಿನಕಾ, ತುರಿದ ಬೀಟ್ರೂಟ್, ಉಪ್ಪು, ಸ್ವಲ್ಪ ಮೆಣಸಿನ ಹುಡಿ ಎಲ್ಲವನ್ನೂ ಬೆರೆಸಿದೆ.ಅದಕ್ಕೆ ಉಳಿದಿದ್ದ ಉಪ್ಪಿಟ್ಟು ಅವಲಕ್ಕಿಗಳನ್ನು ಸೇರಿಸಿ, ಸ್ವಲ್ಪ ನೀರು ಚಿಮುಕಿಸಿಕೊಂಡು ರೊಟ್ಟಿ  ಹಿಟ್ಟಿನ ಹದಕ್ಕೆ  ಚೆನ್ನಾಗಿ ಕಲಸಿ ಒಂದೈದು ನಿಮಿಷ ಹುದುಗಲು ಬಿಟ್ಟೆ.   ಆ ಹೊತ್ತಿನಲ್ಲಿ ಕಾಯಿ ತುರಿದು ಚಟ್ನಿ ತಯಾರಿಸಿದೆ. ನಿಂಬೆಗಾತ್ರದ ಉಂಡೆಗಳನ್ನು ಮಾಡಿ ಬಾಳೆ ಎಲೆಯಲ್ಲಿ ವಡೆಯ ಆಕಾರದಲ್ಲಿ ತಟ್ಟಿ ಬಿಸಿ ಎಣ್ಣೆಯಲ್ಲಿ ಕರಿದು ತೆಗೆದೆ. 
ಕೊನೆಯ ಒಂದೆರಡು ವಡೆಗಳಿನ್ನೂ ಎಣ್ಣೆಯ ಬಾಣಲೆಗೆ ಬೀಳಲು  ಬಾಕಿ ಇರುವಾಗಲೇ ಚಿಕ್ಕಮ್ಮನ ಮನೆಯವರೆಲ್ಲರೂ ಪ್ರತ್ಯಕ್ಷರಾದರು. ಬಿಸಿ ಬಿಸಿ ವಡೆ, ಚಟ್ನಿ ಮತ್ತು ಟೊಮೇಟೊ ಕೆಚಪ್ ಜೊತೆಗೆ ಎಲ್ಲರೂ ಇಷ್ಟ ಪಟ್ಟು ತಿಂದರು. ಚಿಕ್ಕಮ್ಮನಂತೂ, ಮಗಂಗೇ , ಗಂಡಂಗೆ ಸ್ವಲ್ಪ ತೆಗ್ದಿಟ್ಟಿರೇ.. ಇಲ್ಲಾಂದ್ರೆ ಎಲ್ಲಾ ನಾವೇ ಖಾಲಿ ಮಾಡ್ತೀವಿ ಅಂದ್ಲು. ನನ್ನ ಹೊಸ ರುಚಿ ಎಲ್ಲರಿಗೂ ಇಷ್ಟ ಆಯ್ತಲ್ಲಾ ಅನ್ನುವ ಸಂತಸದಲ್ಲಿ ಖಾಲಿಯಾದ ತಟ್ಟೆಯನ್ನು ಒಳ ಕೊಂಡೊಯ್ಯುತ್ತಿದ್ದೆ. ಅಷ್ಟರಲ್ಲಿ  ಚಿಕ್ಕಪ್ಪನ ಸ್ನೇಹಿತರು ಮೆಲ್ಲನೆ ಅಡುಗೆ ಮನೆಯ ಹತ್ತಿರ ಬಂದು ಈ ತಿಂಡಿಯ ರೆಸಿಪಿ ಬರೆದು ಕೊಡಲು ಸಾಧ್ಯವೇ ಅಂತ ಕೇಳಿದ್ರು.. 

ಅಯ್ಯೋ ..!! ನಾನೇನ್ ಮಾಡ್ಲಿ.. ? ಹೇಳ್ಕೊಡ್ಲಾ.. ಬೇಡ್ವಾ????  

-- 
Anitha Naresh Manchi

Monday, October 24, 2011

ದೀಪಾವಳಿ ..




ಒಂದಿಷ್ಟು  ಮುಚ್ಚುಮರೆ
ಅಲ್ಲೊಮ್ಮೆ ಇಲ್ಲೊಮ್ಮೆ 
ಇಣುಕುವ ಅಂಜಿಕೆ 

ಅವನು ಕೈಯಲ್ಲಿ ಕೈಯಿಟ್ಟು 
ನುಡಿದೇ ನುಡಿಯುತ್ತಾನೆ 
ನೀ ಬೇಲೂರ ಶಿಲಾ ಬಾಲಿಕೆ

ಸುತ್ಯಾರಿಲ್ಲದಿದ್ದರೂ ಪಿಸುಮಾತು 
ಹತ್ತಿರವಾದಷ್ಟು ಕರಗುವ ತನು ಮನ 
ಕುಡಿಯೊಡೆದು ತುಸು ನಾಚಿಕೆ 

ಕಾಲ ಉರುಳುತ್ತದೆ ಬೇಡದಿದ್ದರೂ 
ಗಂಟೆಗಳು ನಿಮಿಷದಷ್ಟು ವೇಗದಿ 
 ನಾಳೆ ಮರಳಿ ನನ್ನೆಡೆಗೆ  ಬಾ ಎಂಬ ಕೋರಿಕೆ .. 

ಮತ್ತೆ ಮತ್ತೆ ಹೆಣೆದುಕೊಳ್ಳುವ ಬೆರಳ ಸಡಿಲಿಸಿ  
 ತಿರುಗಿ ನೋಡುವ ನೋಟದೊಳಗೆ 
 ಹಚ್ಚಿಟ್ಟ ಸಾಲು ಸಾಲು ದೀಪಾವಳಿಯ ದೀಪಿಕೆ 

Friday, October 21, 2011

ಬಂದು ನೋಡಾ.. ನಮ್ಮೂರ ರೋಡಾ..

ನೀವು ಧೈರ್ಯವಂತರಾಗಿದ್ದರೆ ಈ ಆಹ್ವಾನವನ್ನು ಸ್ವೀಕರಿಸುತ್ತೀರಿ ಎಂಬ ನಂಬಿಕೆ ನನ್ನದು..ಅರೆ..!! ಹೊರಟೇ ಬಿಟ್ರಾ.. ಸರಿ.. ಬನ್ನಿ ಬನ್ನಿ ....


ಸಧ್ಯಕ್ಕೆ ನಾವು ವಿಮಾನ ಹೆಲಿಕಾಪ್ಟರ್ ಗಳಲ್ಲಿ   ಹಾರುವಷ್ಟು ಅನುಕೂಲ ಹೊಂದಿಲ್ಲದ ಕಾರಣ ಎಲ್ಲರೂ ರಸ್ತೆಯ  ಮೂಲಕವೇ ಬರಬೇಕೆನ್ನುವುದು ಸತ್ಯವಷ್ಟೆ. ಹಾಗಾಗಿ ನಮ್ಮೂರಿನ ರಸ್ತೆಯಲ್ಲಿ ಸಂಚರಿಸುವಾಗ 
ಪಾಲಿಸಲೇಬೇಕಾದ ಕೆಲವು ಕಿವಿಮಾತುಗಳನ್ನು ನಿಮಗೆ ಹೇಳಲು ಇಷ್ಟ ಪಡುತ್ತೇನೆ.


ನಿಮ್ಮ ಸೀಟ್ ಬೆಲ್ಟ್ ಗಳನ್ನು ಅಗತ್ಯವಾಗಿ ಕಟ್ಟಿಕೊಳ್ಳಿ.

ಒಂದೆರಡು ಜೊತೆ ಬಟ್ಟೆಗಳನ್ನು , ತುಂಬಿರುವ ನೀರಿನ ಬಾಟಲ್ ಗಳನ್ನು ಇರಿಸಿಕೊಳ್ಳಿ. 



ಎಲ್ಲಾ ವಾಹನದವರು ಹೆಲ್ಮೆಟ್ ಜೊತೆಗಿರಿಸಿಕೊಳ್ಳುವುದು ಉತ್ತಮ.

ಇದಿಷ್ಟು ಪೂರ್ವ ಸಿದ್ಧತೆಗಳಾಗಿದ್ದರೆ, ರಾಷ್ಟ್ರೀಯ ಹೆದ್ದಾರಿ ಬಿಟ್ಟು  ಒಳ ತಿರುಗಿ ಕೆಲವು ಹೊಂಡ ಗುಂಡಿಗಳನ್ನು ಲೀಲಾಜಾಲವಾಗಿ ದಾಟಿ ಬನ್ನಿ. ಕೊಂಚ ಮುಂದೆ ಬರುವಾಗ ಒಂದು ಸ್ವಾಗತ ಕಮಾನು ನಿಮ್ಮನ್ನು ಹೊಸ ಲೋಕದೆಡೆಗೆ ಕರೆದೊಯ್ಯುತ್ತದೆ .

ಮುಂದಿನ ಮಾರ್ಗದೆಡೆಗೆ ಕಣ್ಣು ಹಾಯಿಸಿದಾಗಲೇ ಡರ್ ಕೆ ಆಗೆ ಜೀತ್ ಹೆ.. ಎಂಬ ಜಾಹೀರಾತು ನೆನಪಿಗೆ  ಬರುತ್ತಿದೆಯೇ  ..?

ದೊಡ್ಡ ದೊಡ್ಡ ಗುಂಡಿಗಳ ಮಧ್ಯೆ ಸಣ್ಣ ಪೆನ್ಸಿಲ್ ರೇಖೆಯೆಳೆದಂತೆ ಕಪ್ಪಗಿನ ಬಣ್ಣದ ಎಂದೋ ಒಂದು ಸಲ ಇಲ್ಲಿಗೆ ಟಾರ್ ಹಾಕಿದ್ದರು ಎಂಬ ಗುರುತು ಕಾಣಿಸಿತೇ? ಹಾಗಿದ್ದರೆ ನೀವೀಗ ನಮ್ಮ ಮಾರ್ಗವನ್ನು  ಪ್ರವೇಶಿಸಿದ್ದೀರಿ. ಅತಿ ಸಾಹಸದಿಂದ ವಾಹನದ ಒಳಗೇ ಇರಲು ಪ್ರಯತ್ನಿಸಿ . 
ನಿಮ್ಮ ವಾಹನದಿಂದ ಒಂದಿಬ್ಬರನ್ನು ಕೆಳಗೆ ಇಳಿಸಿ,ನಡೆದುಕೊಂಡು ಬರಲು ತಿಳಿಸಿ. ನೀವು ವಾಹನದ ಮೂಲಕ ಗಮ್ಯವನ್ನು ತಲುಪುವ ಹೊತ್ತಿನಲ್ಲಿ ಅವರು ನಡೆದೂ ತಲುಪುತ್ತಾರೆ.. !!

ಅಚ್ಚರಿಯಾಯಿತೇ.!! . ನಿಮ್ಮ ಉತ್ತರ ಹೌದೆಂದಾಗಿದ್ದರೆ  ನೀವೂ ಈ ರಸ್ತೆಯನ್ನು ಪ್ರೀತಿಸತೊಡಗಿದ್ದೀರಿ ಎಂದರ್ಥ.

ಈಗ ನಮ್ಮೂರಿನ ರಸ್ತೆಯನ್ನು ಪ್ರಖ್ಯಾತ ಪ್ರವಾಸಿ ತಾಣವಾಗಿಸುವತ್ತ ಗಮನ ಹರಿಸೋಣ.

ಶಾಲಾ ಮಕ್ಕಳನ್ನು ಕರೆತಂದು ಇಲ್ಲಿನ ಹೊಂಡಗಳಲ್ಲಿ ಗಿಡ ನೆಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಬಹುದು.

ದಕ್ಷಿಣ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆಯಾದ ಕಂಬಳವನ್ನು ಇಲ್ಲಿ ಸುಲಭವಾಗಿ ನಡೆಸಬಹುದು.

ಮಹೀಂದ್ರ ಕಂಪೆನಿಯವರ ಗ್ರೇಟ್ ಎಸ್ಕೇಪ್ ಮಹೀಂದ್ರ ರಾಲಿಯನ್ನು ನಡೆಸಲು ಅವರನ್ನು ಇಲ್ಲಿಗೆ 
ಆಹ್ವಾನಿಸಬಹುದು. ಅವರಿಲ್ಲಿಂದ ಎಸ್ಕೇಪ್ ಆಗಿ ಹೋದರೆ ಅದೇ ದೊಡ್ಡ ರಾಷ್ಟ್ರೀಯ ಸುದ್ದಿಯಾಗಲೂ ಬಹುದು .ಮಳೆಗಾಲದಲ್ಲಿ ಇದು ಸಹಜ ಇಂಗು ಗುಂಡಿಗಳಾಗಿ  ವರ್ತಿಸಿ ಭೂಮಿಯ  ನೀರಿನ ಮಟ್ಟ ಏರಿಸುವುದನ್ನು ನೀವು ಕಾಣಬಹುದು 

ಆಸಕ್ತ ರೈತರಿಗೆ ಇದರಲ್ಲಿ ಮೀನಿನ ಸಾಕಾಣಿಕೆಯನ್ನು ಕೆರೆ ಕಟ್ಟಿಸುವ ಖರ್ಚಿಲ್ಲದೆ ಮಾಡಬಹುದು. 

ಡಾಕ್ಟರ್ ಗಳಿಗೆ ಮತ್ತು ವಾಹನ  ರಿಪೇರಿ ಮಾಡುವವರಿಗೆ ಹೆಚ್ಚಿನ ಆಧಾಯ ನೀಡುವ ಕಾರಣ ಅವರ ಮೇಲೆ ಒಂದಿಷ್ಟು ಹೆಚ್ಚಿನ ಟಾಕ್ಸ್ ಹಾಕಿ ಹಣ ವಸೂಲಿ ಮಾಡುವ ಬಗ್ಗೆ ಸರಕಾರ ಚಿಂತನೆಯನ್ನು ನಡೆಸಬಹುದು 
ಇಂತಹ ರಸ್ತೆಯ ನಿತ್ಯ ಸಂಚಾರಿಗಳಾದ ನಮ್ಮನ್ನು ಅಂದರೆ, ಇನ್ನು ನೆಟ್ಟಗೆ ನಡೆದಾಡಲು ಸೊಂಟ ಕೈಕಾಲು ಸಹಕರಿಸುತ್ತಿರುವವರನ್ನು ಉತ್ತಮ ಆರೋಗ್ಯ ಹೊಂದಿದ ವ್ಯಕ್ತಿ ಎಂದು ಸನ್ಮಾನ ನೀಡಬಹುದು.



ಕೊನೆಯ ಮಾತು: ನಿಮ್ಮ ವಾಹನವನ್ನು ಸುಲಭವಾಗಿ  ಈ ಮಾರ್ಗವಾಗಿ ಚಲಾಯಿಸಬೇಕೆಂದಿದ್ದರೆ  ಈ ಚಿತ್ರದಲ್ಲಿದೆ  ಸುಲಭ ಉಪಾಯ ..



ಇಂತಹ ಅದ್ಭುತಗಳಿಗೆ ಅನುವು ಮಾಡಿಕೊಟ್ಟ ನಮ್ಮೂರ ರಸ್ತೆಗೆ ಈಗ ಎಲ್ಲರೂ ಜೈ 
ಅನ್ನೋಣವೇ..!! 

Tuesday, October 18, 2011

ಜೀನಿಯಾ..



ಇನ್ನೇನು ಅವಳು ನೀರುಣಿಸಲು ಬರುವ ಹೊತ್ತು.. ಇವತ್ತೇನು ಮಾಡುತ್ತಾಳೆ ಎಂಬ ಕುತೂಹಲ ನನಗೆ..

ಎಲೆಯ ಮರೆಯಿಂದ ಮೆಲ್ಲನೆ ತಲೆಯೆತ್ತಿ ನೋಡಿದೆ. ನನ್ನ ಸುತ್ತೆಲ್ಲ ಸುಂದರ ವರ್ಣದ ಎಸಳುಗಳನ್ನು ಮೈ ತುಂಬಾ ಹೊದ್ದು , ಜಗತ್ತಿನ ಚೆಲುವೆಲ್ಲವನ್ನೂ ತಮ್ಮೊಳಗೆ ತುಂಬಿಟ್ಟುಕೊಂಡ ಹೂಗಳು..

ನಾನಾದರು ಪುಟ್ಟ ಹೂವು. ಪ್ರಕೃತಿ ನನ್ನ ಮೇಲೇಕೆ ಮುನಿದಳೋ.. ಬರೀ ಐದಾರು ಪಕಳೆಗಳನ್ನಷ್ಟೆ ಹೊಂದಿದ್ದ ನನ್ನನ್ನಾರೂ ಕಣ್ಣೆತ್ತಿ ನೋಡುತ್ತಿರಲಿಲ್ಲ.


ಅವಳು ನಸುನಗುತ್ತಲೇ ಬಂದಳು. ಜೊತೆಗೊಂದಿಷ್ಟು ಗೆಳತಿಯರು.. ಅವರ ಕುಲು ಕುಲು ನಗು ಮಾತುಗಳಿದ್ದುದೆಲ್ಲಾ
ಹೂಗಳ ಬಗೆಗೇ .. ಆದರೆ ಅದರಲ್ಲಿ ನಾನಿರಲಿಲ್ಲ. ಇಂದು ಯಾರೊಬ್ಬರಾದರೂ ನನ್ನ ಕಡೆಗೆ ನೋಡಲಿ ಎಂದು ಬಯಸುತ್ತಾ ಗಾಳಿಯ ಬೀಸುವಿಕೆಗೆ ತಲೆ ಕುಲುಕಿಸಿ ನಕ್ಕೆ. ಯಾರ ಗಮನವೂ ನನ್ನ ಕಡೆಗಿಲ್ಲ. ನಾನು ಯಾರಿಗೂ ಬೇಕಾಗಿರಲಿಲ್ಲ. ಮನ ಮುದುಡಿತು.



ಅವಳ ಕೈಯಲ್ಲೇನೋ ಇದೆ. ಅದರಿಂದ ಸುಂದರ ಹೂಗಳನ್ನೆಲ್ಲ ದಂಟು ಸಮೇತ ಕತ್ತರಿಸಿ ಗೆಳತಿಯರ ಕೈಗಿತ್ತಳು. ಗಿಡ ಒಂದಿಷ್ಟು ಕೊಸರಾಡಿ ಮತ್ತೆ ಮೌನವಾಯಿತು. ಕೈಯಲ್ಲಿನ ಹೂಗಳನ್ನು  ಧನ್ಯತೆಯ ಭಾವದಲ್ಲಿ ಹೊತ್ತು ಬೀಗುತ್ತಾ ನಡೆದರು.

ನಾನಿದ್ದ ಗಿಡವೀಗ ಬೋಳು ಬೋಳು. ಇಲ್ಲಿಗೆ ಯಾರೂ ಬರುತ್ತಿಲ್ಲ. ನೋಡಲು.. ಹಾಡಿ ಹೊಗಳಲು..

ಇಂದೇಕೆ ಈ ರೀತಿ.. !! ಬೀಸಿ ಬಂದ ತಣ್ಣನೆ ಗಾಳಿ ಸೋಕಿತ್ತಷ್ಟೆ ಮೈಯನ್ನು.. ಶರೀರವೆಲ್ಲ ಹಗುರಾಗಿ ಏನೋ ಕಳಚಿಕೊಂಡಂತೆ..
ಒಂದೊಂದಾಗಿ ಜೀವಕಣಗಳು ಭುವಿಯೆಡೆಗೆ ಧಾವಿಸುತ್ತಿವೆ. ನಾನು ಅವರಿಂದ ಬೇರಾಗುವುದು  ಹೇಗೆ ಸಾಧ್ಯ. ಜೊತೆಗೆ ನಡೆದಿದ್ದೆ. ಯಾವುದೇ ಕನವರಿಕೆ ಬೇಸರಿಕೆಗಳಿಲ್ಲದ ತಾಯ ಮಡಿಲು.

ಭುವಿಯ ಪ್ರತಿ ನೇವರಿಕೆಗೂ ನನ್ನೊಡಲಿನಿಂದ ಜಾರಿದ ಬೀಜಗಳು ಮೆಲ್ಲನೆ ಮೊಳಕೆಯೊಡೆಯುತ್ತಿವೆ.



ಇನ್ನೊಂದು ಜೀವನ ಚಕ್ರವಾಗಲು.. ರೂಪಾಂತರ ಹೊಂದಿದ್ದ ನಾನು ಕೊನೆ ಬಾರಿಗೆಂಬಂತೆ ಗಿಡದ ಕಡೆ ನೋಡಿದೆ. ಗಿಡ ಮೌನವಾಗಿ ತೃಪ್ತಿಯಿಂದ ನಕ್ಕಿತು.


ಕರಗುವ ಕ್ಷಣಗಳು..




ಸವಿಗನಸು ಆಗಷ್ಟೇ ಮೂಡಿತ್ತು
ಕರಗಿ ಬಿಡಬೇಕೇ ಕತ್ತಲು...

ಹೊಸತೊಂದು ಆಟದ ಆವಿಷ್ಕಾರವಾಗಿತ್ತು 
ಮುಗಿದೇ ಬಿಟ್ಟಿತು ಬಾಲ್ಯ 

ಪ್ರಿಯನ ಕಣ್ಣಿಗಿನ್ನೂ ಕಣ್ಣು ಕೂಡಿತ್ತಷ್ಟೇ
ಹರೆಯ ಕೈಗೆ  ಸಿಗದಂತೆ ಜಾರಿತ್ತು 

ತುಟಿಗಿನ್ನೂ ಸೋಕಿತ್ತಷ್ಟೇ ರುಚಿಕರ ತಿನಿಸು 
ಖಾಲಿಯಾಗಿತ್ತು ತುಂಬಿದ್ದ ತಟ್ಟೆ 

ಶಬ್ಧಗಳಿನ್ನೂ  ಹಾಡಾಗಿರಲಿಲ್ಲ
ಉಡುಗಿತ್ತು ಗಂಟಲಿನ ಧ್ವನಿ 

ಅಲ್ಲಲ್ಲಿ ಬೆಳ್ಳಿ ಕೂದಲು ಕಾಣಿಸಿತ್ತಷ್ಟೇ
ಹೇಳದೆ ಕೇಳದೆ ಕಾಲ ಮೀರಿತ್ತು 

ಪಯಣದ ಸುಖವಿನ್ನೂ ಸುರುವಾಗಿತ್ತಷ್ಟೇ 
ಗಮ್ಯ ಕಾಣಿಸಿ ವಾಹನದಿಂದ ಇಳಿಸಿತ್ತು 


ಬೇಕೆನಿಸಿದ್ದೆಲ್ಲ   ಹೀಗೆ ಬೇಗನೆ ಕಳೆದು ಹೋಗುವುದ್ಯಾಕೋ   .. 

  


Saturday, October 15, 2011

ಆಖಿರ್ ಟೂಟ್ ಜಾತಾ ಹೆ..



ಕಂಪ್ಯೂಟರ್ ರೂಮಲ್ಲಿ ಸೇರಿದ ದೂಳನ್ನೆಲ್ಲ ಹೊಡೆದು ಕೆಳಗುರುಳಿಸಿ, ಕತ್ತಿ  ಹಿಡಿದು  ಹೋರಾಡುವ ಯುದ್ಧ  ವೀರನ ಫೋಸ್ ಕೊಡುತ್ತಾ, ಕೈಯಲ್ಲಿನ ಕಸಪೊರಕೆಯಲ್ಲಿ ನಾನೆಷ್ಟು ಹೊರಹಾಕಲೆತ್ನಿಸಿದರೂ ಮತ್ತೆ ಮತ್ತೆ ಒಳಗೆ ನುಗ್ಗಿ ಅಡಗುವ ಜೇಡಗಳನ್ನು ನಿರ್ನಾಮ ಮಾಡುವ ಭರದಲ್ಲಿದ್ದೆ. ಆಗ ಕೇಳಿತ್ತು ಫೋನಿನ ಶಂಖನಾದ... ಹಾಂ! ಈಗ ಒಂದು ಸುತ್ತಿನ ಯುದ್ಧ ಮುಗಿದಂತೆ ಎಂದುಕೊಂಡು ಕೈಯಲ್ಲಿದ್ದ ಶಸ್ತ್ರವನ್ನು ಮಂಚದ ಕೆಳಗೆ ತಳ್ಳಿ ಹೊರಗೆ ನಡೆದೆ.

ಆತ್ತ ಕಡೆಯಿಂದ ಕೇಳಿ ಬಂತು ಅಶರೀರವಾಣಿ. ನಂಗೆ ಒಂದು ಸಣ್ಣ ಆಕ್ಸಿಡೆಂಟ್ ಆಗಿದೆ..

ತಡಬಡಿಸಿ ಕೇಳಿದೆ.. ಸಣ್ಣ ಅಂದ್ರೆ..?

ಹೆದರುವಂತದ್ದು ಏನಿಲ್ಲ.. ಮೂಳೆ ಮುರಿದಿರಬೇಕು ಅನ್ಸುತ್ತೆ. ಮತ್ತೆಲ್ಲ ಸ್ವಲ್ಪ ತರಚಲು ಗಾಯ. ಕೂಡಲೇ ಹೊರಟು ಬಾ ಎಂದು  ಅವರಿರುವ ಆಸ್ಪತ್ರೆಯ ಹೆಸರು ಹೇಳಿದರು.ಇವರ     ' ಸಣ್ಣ' ಗಾಯದ ವಿಸ್ತಾರದ ಬಗ್ಗೆ ಯೋಚಿಸುತ್ತಿದ್ದಂತೆ ಗಾಭರಿಯಾಗತೊಡಗಿತು..

ಬೇಗನೆ ಆಸ್ಪತ್ರೆ ವಾಸಕ್ಕೆ ಬೇಕಾಗುವ ತಯಾರಿಗಳನ್ನು ಮಾಡಿಕೊಂಡು ಚಪ್ಪಲಿ ಸಿಕ್ಕಿಸಿ ಕಾರೇರಿದೆ. ಅಲ್ಲಿಗೆ ತಲುಪುವಾಗ ಸೆಲೈನ್ ಬಾಟಲಿಯಿಂದ  ನಿಧಾನಕ್ಕೆ ಒಳ ಸೇರುತ್ತಿರುವ ಗ್ಲೂಕೋಸ್ ಹನಿಗಳತ್ತ  ದೃಷ್ಟಿ ನೆಟ್ಟು ಅಲ್ಲೊಂದು ಇಲ್ಲೊಂದು ಬ್ಯಾಂಡೇಜ್ ಬಟ್ಟೆಗಳನ್ನು ಮೈಯಲ್ಲೇರಿಸಿಕೊಂಡು ಮಲಗಿರುವ ಇವರು ಕಣ್ಣಿಗೆ ಬಿದ್ದರು.

ಹತ್ತಿರದ ಟಿ ವಿ ಯಲ್ಲಿ 'ಶೀಶಾ ಹೋ ಯಾ ದಿಲ್ ಹೋ ಆಖಿರ್ ಟೂಟ್ ಜಾತಾ ಹೆ..' ಅಂತ ಹಾಡು ಬರ್ತಾ ಇತ್ತು. ನನ್ನನ್ನು ಕಂಡವರೆ ಆರಾಮದಲ್ಲಿ ನಗುತ್ತಾ ಈಗ ಎಕ್ಸರೆ ತೆಗೆದ್ರು. ತೋಳಿನ ಕೆಳಗೆ ಮೂಳೆ ಮುರಿದಿದೆ. ಆಪರೇಷನ್ ಮಾಡಿ ಜೋಡಿಸಬೇಕಷ್ಟೆ ಅಂದರು .. ಬ್ಯಾಡೇಜ್ ಗಳ ಕಡೆಗೆ ನೋಡಿ ಮತ್ತೇನಾದ್ರು ಗಾಯ ಆಗಿದ್ಯಾ ಅಂದ್ರೆ.. ಅದೆಲ್ಲ ಜುಜುಬಿ ಹೆಚ್ಚೇನಿಲ್ಲ  ಅಂದರು.

ಅಷ್ಟರಲ್ಲಿ ಕೈಯಲ್ಲಿ ಸಿರಂಜ್  ಹಿಡಿದು ಬ್ಲಡ್ ಟೆಸ್ಟ್ ಗೆ ಸ್ಯಾಂಪಲ್ ತೆಗೆಯಲು ಬಂದ ನರ್ಸನ್ನು ಕಂಡು ಮಸ್ಕಿಟೋ ಬಂತು ಅಂತ ಪಿಸುಗುಟ್ಟಿದರು. ಇವರ ತಲೆಗೆ ಮೊಟಕುವಷ್ಟು ಕೋಪ ಬಂದರೂ ಅಲ್ಲಿರುವ ಗಾಯಗಳನ್ನು ಕಂಡು ಸುಮ್ಮನುಳಿದೆ.

ಆಸ್ಪತ್ರೆಯ ನಾಲ್ಕನೆಯ  ಫ್ಲೋರ್ ನಲ್ಲಿ  ರೂಮ್ ಸಿಕ್ಕಿ ತ್ರಿಶಂಕುವಾಸಿಗಳಾದೆವು. ಮೇಲೆ ಕೆಳಗೆ ಓಡಾಡಲು ಲಿಫ್ಟ್ ಏನೋ ಇತ್ತು. ಆದರೆ ಲಿಫ್ಟ್ ನ ಬದಿಯಲ್ಲೆ ಬರೆದ ವಾಕ್ಯ ಕಣ್ಣು ಚುಚ್ಚುತ್ತಿತ್ತು. 'ಲಿಫ್ಟ್ ಅನ್ನು ಹಿತ ಮಿತವಾಗಿ ಬಳಸಿ. ಕಾಲ್ನಡಿಗೆಯಲ್ಲಿ ಹಂತಗಳನ್ನು ಕ್ರಮಿಸುವುದು ಆರೊಗ್ಯಕ್ಕೆ  ಸಹಕಾರಿ '. ಹೌದಲ್ಲ ಬಯಸದೆ ಬಂದ ಆಸ್ಪತ್ರೆ ವಾಸದಿಂದಾಗಿ ನಿತ್ಯದ ವ್ಯಾಯಾಮ, ವಾಕಿಂಗ್ ಗಳಿಗೆ ಅವಕಾಶವಿರಲಿಲ್ಲ. ಇದನ್ನಾದರು ಅನುಸರಿಸಿ ಕೊರತೆ ನೀಗಿಸಿಕೊಳ್ಳಬಹುದಲ್ಲ ಅನ್ನಿಸಿತು. ಕೂಡಲೇ ಪಾಲಿಸಲು ಪ್ರಾರಂಭಿಸಿದೆ.

ಆಗಷ್ಟೆ ನಿತ್ಯದ ನಡೆದಾಟ ಮುಗಿಸಿ ಏದುಸಿರು ಬಿಡುತ್ತಾ ರೂಮಿನೊಳಗೆ ನುಗ್ಗಿದ್ದೆ.ನನ್ನನ್ನು ಶ್ರೀಮತಿ  ವಿಶ್ವಸುಂದರಿಯನ್ನಾಗಿ ಮಾಡಲು ಪಣತೊಟ್ಟವರಂತೆ ನರ್ಸ್ ಒಬ್ಬರು ಕೈಗೆ ಇನ್ನೊಂದು ಪ್ರಿಸ್ಕ್ರಿಪ್ಷನ್ ತುರುಕಿ ಫಾರ್ಮಸಿಯೆಡೆಗೆ ಬೆರಳು ಬೊಟ್ಟು ಮಾಡಿದರು. ಅಬೌಟ್ ಟರ್ನ್ ಅಂತ ಪುನಃ ತಿರುಗಿತು ನನ್ನ ಸವಾರಿ.

ಔಷದ ತೆಗೆದುಕೊಂಡು ಮರಳಿ ಬರುವಾಗ , ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ನನ್ನ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಿದ್ದ ಚಪ್ಪಲಿಗಳಲ್ಲಿ ಒಂದು ಯಾಕೋ ಮುನಿಸಿಕೊಂಡು ನಿನ್ನೊಡನಿನ್ನು ಬರಲಾರೆ ಅಂತ ಪಕ್ಕಕ್ಕೆ ವಾಲಿತು. ಪಕ್ಕದ ಗೋಡೆ  ಹಿಡಿದುಕೊಂಡು ಸಾವರಿಸಿ ನಿಂತು ವಿಶ್ವಾಸಘಾತಕ ಚಪ್ಪಲಿಯನ್ನೆತ್ತಿ ನೋಡಿದರೆ ಉಂಗುಷ್ಟ ಕಿತ್ತು ಬಂದಿತ್ತು. ಏನು ಮಾಡಲೂ ತೋಚದೇ ಇಲ್ಲಿಯವರೆಗೆ ನನ್ನನ್ನು ಹೊತ್ತೊಯ್ಯುತ್ತಿದ್ದ ಚಪ್ಪಲಿಗಳನ್ನು ನಾನೇ ಹೊತ್ತು ತಂದು ರೂಮಿನೊಳಗಿರಿಸಿದೆ.

ಈಗ ಇವರ ಮುರಿದ ಮೂಳೆಗಿಂತ ನನ್ನ ತುಂಡಾದ ಚಪ್ಪಲಿಯೇ ದೊಡ್ದ ಸಮಸ್ಯೆಯಾಗಿ ಕಾಡತೊಡಗಿತು. ಮೂಳೆಯನ್ನು ಜೋಡಿಸಲು ಹತ್ತಾರು ಸ್ಪೆಷಲಿಸ್ಟ್ ಗಳನ್ನು ಹೊಂದಿದ ಇಲ್ಲಿ ನನ್ನ ಚಪ್ಪಲಿಯ ಚಿಕಿತ್ಸೆ ಸಾಧ್ಯವಿರಲಿಲ್ಲ. ಅದಿಲ್ಲದೆ ನಡೆಯುವುದು ನನ್ನಿಂದಲೂ ಆಗುತ್ತಿರಲಿಲ್ಲ. ಇವರ ಬಳಿ ಹೇಳಿದರೆ...

"ಇವಳ ನವಿರಾದ ಪಾದಗಳಿಗೆ
ಬೇಕೊಂದು ಜೊತೆ ಚಪ್ಪಲಿ,
ಕಾಸೆಷ್ಟಾದರೂ ಚಿಂತಿಲ್ಲ
ಒಮ್ಮೆ ಕಿರಿ ಕಿರಿ ತಪ್ಪಲಿ ..."





...ಅಂತ ಕವನ ರಚಿಸ ಬೇಕೆ ! ಇವರ ಕಾವ್ಯ ಪ್ರಜ್ಞೆಯನ್ನು   ಪ್ರಶಂಸಿಸುವ ಮೂಡ್ ಇರಲಿಲ್ಲ. ಏನ್ರೀ ಮಾಡೋದು  ಅಂತ ದುಂಬಾಲು ಬಿದ್ದೆ. ಕವನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಬಾರದ ಕಾರಣ ಮುನಿಸಿಕೊಂಡು, ಅಲ್ಲಿ ಆಪರೇಷನ್ ಥಿಯೇಟರ್ ಗೆ  ಹೋಗಿ ಸೂಜಿ ದಾರ ಕೇಳು ಅಂತ ಒದರಿ ಮಗ್ಗುಲು ಬದಲಾಯಿಸಿದರು.

ಈಗ ನನ್ನ ಸಮಸ್ಯೆ ಗಂಭೀರವಾಗತೊಡಗಿತು. ನನ್ನ ಎರಡು ಕಾಲನ್ನು ಒಟ್ಟಿಗೆ ಒಂದೆ ಚಪ್ಪಲಿಯೊಳಕ್ಕೆ ತೂರುವಷ್ಟು ದೊಡ್ಡದಿರುವ ಇವರ ಚಪ್ಪಲಿ ನನಗೆ ರೂಮ್ ನಿಂದ ಹೊರಹೋಗಲು ಉಪಯೋಗವಾಗುತ್ತಿರಲಿಲ್ಲ. '
ಚಪ್ಪಲಿ ಇಲ್ಲದೆ ಹೊರ ಹೋಗಲು ಸಾಧ್ಯವಿಲ್ಲ , ಹೊರ ಹೋಗದೆ ಚಪ್ಪಲಿ ಸಿಗಲ್ಲ ' ಅಂತ ಒಂದು ಹೊಸ ಗಾದೆಯನ್ನೇ  ಸೃಷ್ಟಿ ಮಾಡಿಯೂ  ಆಯ್ತು.

 ಏನೇ  ಆದರೂ  ಇವರ 'ಸಣ್ಣ' ಅಪಘಾತದ ಸುದ್ಧಿ ಹೆಚ್ಚಿನವರಿಗೆ ತಿಳಿಸದ ಕಾರಣ ಬಂದು ಹೋಗುವವರ ಸಂಖ್ಯೆಯೂ ಕಡಿಮೆ ಇತ್ತು. ಯಾರಾದರೊಬ್ಬರು ಬರಲಿ ಎಂದು ನಾನೇ ಹಾತೊರೆದು ಅವರಿಗೆ ಸುದ್ಧಿ ಹೇಳಲಾ, ಇವರಿಗೆ ಫೋನ್ ಮಾಡಲಾ ಅಂತೆಲ್ಲ ಇವರನ್ನು ಕಾಡತೊಡಗಿದೆ.

ಅದೇನು ಅದೃಷ್ಟವೋ .. ನಮ್ಮ ಆತ್ಮೀಯರೊಬ್ಬರು ಯಾರ ಮುಖೇನವೋ ಇವರ ಆಕ್ಸಿಡೆಂಟ್ ವಿಷಯ ತಿಳಿದು ಬಂದೇ ಬಿಡಬೇಕೇ..? ಅವರು ಮೂಳೆಮುರಿತದ  ವಿವರಗಳನ್ನು ಕೇಳುವ ಆತುರ ತೋರಿದರೆ ನಾನು ನನ್ನ ಚಪ್ಪಲಿಯ ಕಥೆ ಹೇಳತೊಡಗಿದೆ.. !  ಪುಣ್ಯಕ್ಕೆ  ನನ್ನ ಕಷ್ಟ ಅರ್ಥ ಮಾಡಿಕೊಂಡು ನನಗಾಗಿ ಅವರೇ ಅಂಗಡಿಗೆ ಹೋಗಿ, ಅಲ್ಲಿಂದಲು ಫೋನ್ ಮಾಡಿ ಬಣ್ಣ, ಗುಣ, ವಿಷೇಶಣಗಳ ಬಗ್ಗೆ ಮಾಹಿತಿ   ನೀಡಿ ನನಗೆ ಬೇಕಾದಂತಿರುವುದನ್ನೆ ಆಯ್ಕೆ ಮಾಡಿ ಒಂದು ಜೊತೆ ಪಾದುಕೆಗಳನ್ನು ನನಗೆ ಪ್ರಧಾನ ಮಾಡಿದರು.



ಕೇವಲ ನೆಲದಿಂದ ಅರ್ಧ ಅಡಿಯಷ್ಟು ನನ್ನ ಎತ್ತರವನ್ನು ಏರಿಸುತ್ತಿದ್ದ ಅದನ್ನು  ಧರಿಸಿ ನಾನು ಅತ್ತಿಂದಿತ್ತ, ಇತ್ತಿಂದತ್ತ ನಡೆಯುವುದನ್ನು ನೋಡಿದೊಡನೆ ಇವರು, ಬೋನ್ ಸ್ಪೆಷಲಿಸ್ಟ್ ರ ಬಳಿ ಒಂದು ಅಪಾಯಿಂಟ್ ಮೆಂಟ್    ತೆಗೊಂಡು  ಪಕ್ಕದ ರೂಮಿಗೆ ಈಗಲೇ ಬುಕ್ಕಿಂಗ್ ಮಾಡಿಬಿಡೋಣವೇ ಎನ್ನುತ್ತಾ ಆಪರೇಷನ್  ಆದ ಕೈಯನ್ನು ಅಭ್ಯಾಸ ಬಲದಿಂದ  ತಲೆಯ ಮೇಲಿಡಲು ಹೋಗಿ ಸಾಧ್ಯವಾಗದೇ ಹಾಯ್ ಎಂದು ಕಿರುಚಿದರು...


Wednesday, October 12, 2011

ನಾಚಿಕೆ ..




ಕಲ್ಲು ನೆಲದ ಎದೆಯ ಮೇಲೆ 

ಬೀಸಿ ಬಂದ ಗಾಳಿಯೊಲುಮೆಗೆ  

ಮೆಲ್ಲನೂರಿ ಬೇರ ತೋಳುಗಳ 

ಲಲ್ಲೆಗರೆದು ಭುವಿಯ ತಬ್ಬಿ  

ಮೋಡ ಕರಗಿ  ಸುರಿದ ಹನಿಮಳೆಯ 

ಸರಸವ ಬಚ್ಚಿಟ್ಟು ತನ್ನೊಳಗೆ 

ಮುಳ್ಳಿನ ಜೊತೆಗೆ ಪುಳಕಿತಗೊಂಡು

ಮೊಗ್ಗು ನಸು ನಾಚಿತು  

Saturday, October 8, 2011

ಕಳೆದು ಹೋಗಿದ್ದೇನೆ ..



ಇಲ್ಲೇ ನೋಡಿ.. ಎಲ್ಲಾ ಇಲ್ಲಿದೆ 

ಕೊಂಡುಕೊಳ್ಳಿ ನೀವು ಬಯಸಿದುದನು

ಬಣ್ಣ ಬೇರೆ ಬೇರೆ ಇರಬಹುದು

ಎಲ್ಲದಕ್ಕೂ  ಸಮಾನ ಬೆಲೆ

ಇರುವ ಸುಳ್ಳು  ಪೊಳ್ಳು 

ಮುಚ್ಚಲೊಂದು ಕವಚವಷ್ಟೇ ..

ತೂಕವೇನಿಲ್ಲ, ನನ್ನಂತೆ ಇದೂ ಖಾಲಿ 

ಒಳಗೆ  ತುಂಬಿಟ್ಟ ಗಾಳಿ 

ನೋಟಕ್ಕಾದರೂ ಹೊಟ್ಟೆ ತುಂಬಿದಂತಿರಬೇಕಲ್ಲ 

ಬಿಟ್ಟರೆ ಹಾರಲೂ ಆಗದ 

ನೆಟ್ಟಗೆ ನಿಲ್ಲಲೂ ಬಾರದ ಜೀವವಿದು 

ಕೊಳ್ಳಿ ಕೊಳ್ಳಿ ಇದನೆಂದು ಕೂಗುತ್ತಲೇ

ಮರೆತಿದ್ದೇನೆ ಇವು ನಿಜವಲ್ಲವೆಂದು 

ಕೊಂಡ ಮುಖಗಳಲ್ಲಿ ನಗೆ ರೇಖೆ ಎಳೆಯುವ 
ಇವುಗಳ ಮರೆಯಲ್ಲಿ ನನ್ನದಿದೆ ಬೆವರು 

ಹೊತ್ತ ಹೊರೆಯ ಇಳುಹುವರಿಲ್ಲದೆಯೇ 

ಎತ್ತಿ ಹಿಡಿದ ಇವುಗಳ ನಡುವೆಯೇ 

ಕಳೆದು ಹೋಗಿದ್ದೇನೆ .. ಬದುಕ ಅರಸುತ್ತಲೇ.. 

Thursday, October 6, 2011

ಸೂರಿಕುಮೇರು..



 ಅವರ ಉದ್ದ ಕೂದಲನ್ನು  ನಯವಾಗಿ ಬಾಚಿ ಮೂರು ಭಾಗವಾಗಿಸಿ, ಸುಂದರ ಜಡೆ ಹೆಣೆಯುತ್ತಾ ಕುಳಿತಿದ್ದೆ.
'ಹೂಗು ಸೂಡ್ಸೆಕ್ಕಾ,' ಎಂಬ ನನ್ನ ಪ್ರಶ್ನೆಗೆ 'ಹುಂ' ಎಂಬಂತೆ ತಲೆ ಅಲುಗಿತು. ಗಿಡದಿಂದ ಕಿತ್ತು ತಂದ ಸುಂದರ ಹೂವನ್ನು ಮುಡಿಸಿದೆ. 'ಈಗ ಎಷ್ಟು  ಚೆಂದ ಆತು ಗೊಂತಿದ್ದಾ' ಎಂದೆ.  ಹಿಂದಿನಿಂದ ದೊಡ್ಡಮ್ಮ, ' ಆಯಿದಿಲ್ಲೆಯೋ ಇನ್ನೂ ಸಿಂಗಾರ, ಸಾಕು ಚೆಂದ ಮಾಡಿದ್ದು' ಎಂದರು. 




'ನೋಡು ನಿನ್ನ ದೊಡ್ದಮ್ಮಂಗೆ ಹುಳ್ಕು ಆವ್ತಾ ಇದ್ದು, ಅದರ ಕೂದಲು ಇಷ್ಟು ಒಪ್ಪ ಇಲ್ಲೆ ಹೇಳಿ' ಎಂದು ಹಿಂದಕ್ಕೆ ತಿರುಗಿದರು ಜಡೆ ಹೆಣೆಸಿಕೊಳ್ಳುತ್ತಿದ್ದ ಸುಂದರ ಕೂದಲಿನ ಒಡೆಯ, ನನ್ನ ದೊಡ್ಡಪ್ಪ, ಯಕ್ಷಗಾನದ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ಟ. 

ಗೋವಿಂದ ದೊಡ್ಡಪ್ಪ ಎಂದರೆ ಮೊದಲಿಗೆ ನೆನಪಾಗುವುದು,  ಅವರು ನನ್ನನ್ನು ಕಂಡೊಡನೆ ಮೂಗಿನ ಮೇಲೆ ಬೆರಳಿಟ್ಟು ಮೂಗು ಕತ್ತರಿಸುತ್ತೇನೆ ಎಂಬಂತೆ ಅಭಿನಯಿಸುತ್ತಿದ್ದುದು. ನಿಜಕ್ಕೂ ಅವರು ನನ್ನ ಮೂಗನ್ನು ಕತ್ತರಿಸುತ್ತಾರೆ ಎಂಬ ಭಯದಲ್ಲಿ ಅವರ ಹತ್ತಿರ ಹೋಗಲೇ ಅಂಜುತ್ತಿದ್ದೆ.

 ಆಗೆಲ್ಲಾ ದೊಡ್ಡಮ್ಮನೇ, ದೊಡ್ಡಪ್ಪನಿಗೆ ಬಯ್ದಂತೆ ಮಾಡಿ ನನ್ನನ್ನೆತ್ತಿ ಸಮಾಧಾನಿಸುತ್ತಿದ್ದರು. ಆದರೆ ಒಂದೆರಡು ದಿನಗಳಲ್ಲೆ , ಅವರು ಸುಮ್ಮನೆ ತಮಾಷೆ  ಮಾಡುವುದು ಎಂದರಿವಿಗೆ ಬಂದು ನಾನು ನನ್ನ ಬಾಲ ಬಿಚ್ಚಿದ್ದೆ. ಸ್ವಲ್ಪವೇ ಕಾಲಾವಧಿಯಲ್ಲಿ ಅವರ ತಲೆ ಮೇಲೇರಿ ಸವಾರಿ ಮಾಡುವ ಆತ್ಮೀಯತೆಯನ್ನು ಹೊಂದಿದ್ದೆ. ನಮ್ಮಲ್ಲಿ ಬೇರಾರಿಗೂ ಇರದ ಅವರ ಉದ್ದನೆ ಕೂದಲು ನನ್ನ ಇನ್ನೊಂದು ಆಕರ್ಷಣೆ. ನಾನು ಜಡೆ ಹೆಣೆಯಲು ಕಲಿತದ್ದೇ ಅವರ ಕೇಶ ಶೃಂಗಾರ ಮಾಡಲು  ನನಗೆ ದೊರೆತ ಪೂರ್ತಿ ಸ್ವಾತಂತ್ರ್ಯದಿಂದ..!!


ಆಗೆಲ್ಲ ನಮ್ಮ ದೊಡ್ಡ ಹಬ್ಬ ಎಂದರೆ ಪುತ್ತೂರು ಜಾತ್ರೆ. ನಾವಿದ್ದ ಕೊಡಗಿನ ಭಾಗಮಂಡಲದಿಂದ ಅಪ್ಪ ಅಮ್ಮ ಅಣ್ಣನೊಡನೆ ಸಂಜೆಗೆ ಪುತ್ತೂರು ತಲುಪುತ್ತಿದ್ದೆವು. ಎಲ್ಲಾ ಊರುಗಳಿಂದ ಸೇರುತ್ತಿದ್ದ ಜನರ ಗೌಜು , ಗದ್ದಲ, ಸಂತೆಯ ಅಂಗಡಿಗಳು, ಜಾತ್ರೆಯನ್ನು ಕಳೆಕಟ್ಟಿಸುತ್ತಿದ್ದರೆ, ಇನ್ನೊಂದು ಮುಖ್ಯ ಸೆಳೆತ ಅ ದಿನ ನಡೆಯುತ್ತಿದ್ದ ಯಕ್ಷಗಾನಗಳು.





 ಹತ್ತಿರ ಹತ್ತಿರದಲ್ಲಿ ಆಟದ ಟೆಂಟ್ ಗಳು. ನಾವು ದೊಡ್ಡಪ್ಪ ಕಲಾವಿದರಾಗಿ ದುಡಿಯುತ್ತಿದ್ದ ಧರ್ಮಸ್ಥಳ ಮೇಳದ ಟೆಂಟ್ ಇರುವ ಕಡೆ ಹೆಜ್ಜೆ ಹಾಕಿ,ಸೀದಾ ಚೌಕಿಯ ಹತ್ತಿರ ಹೋಗುತ್ತಿದ್ದೆವು.ಅವರೆಲ್ಲಾದರು ಎದುರೇ ಇದ್ದರೆ ನಮ್ಮನ್ನು ಸ್ವಾಗತಿಸಿ, ಆಟ ನೋಡಲು ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದರು. ಕೆಲವೊಮ್ಮೆ ನಿದ್ರೆಯಲ್ಲಿದ್ದರೆ, ಅವರನ್ನು ಏಳಿಸುವ ಮಹತ್ಕಾರ್ಯ ನನ್ನದಾಗುತಿತ್ತು. ನಾನೋ, ಅವರು  ಮಲಗಿರುವ ಕಡೆ ಹೋಗಿ, ಕುಂಭಕರ್ಣನನ್ನು ರಾಕ್ಷಸರು ಏಳಿಸುವಂತೆ ಚಿತ್ರ "ಚಿತ್ರ ಹಿಂಸೆ ನೀಡಿ ಏಳಿಸುತ್ತಿದ್ದೆ. 

ಅವರ ವೇಷದ ಪೆಟ್ಟಿಗೆಯ ಮೇಲೆ ಕೂತು, ಬಣ್ಣ ಬಣ್ಣದ ಉಡುಪುಗಳು, ವೇಷದ ಸಾಮಗ್ರಿಗಳು,ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದೆ. ಸಾಮಾನ್ಯ ಮನುಷ್ಯರು ಸ್ವಲ್ಪವೇ ಹೊತ್ತಿನಲ್ಲಿ ರಾಜರೂ, ರಾಕ್ಷಸರೂ, ಆಗಿ ಮಾರ್ಪಾಡಾಗುವುದು  ನನಗೆ ಕನಸಿನಂತೆ ತೋರುತ್ತಿತ್ತು. 

ಆ ರಾತ್ರಿಯ ರಂಗಿನ ಗುಂಗು ತುಂಬಾ ದಿನಗಳ ಕಾಲ ಉಳಿದುಕೊಳ್ಳುತ್ತಿತ್ತು. ಒಂದು ದಿನ ಆಟ ನೋಡಿದರೆ ಮರುದಿನ ಇಡೀ ನಿದ್ದೆ ಮಾಡುತ್ತಿದ್ದ ನನಗೆ, ದೊಡ್ದಪ್ಪ ಹಗಲು ಹೊತ್ತಿನಲ್ಲಿಯೂ ಏನಾದರು ಕೆಲಸ ಮಾಡುತ್ತಿದ್ದುದು ಆಶ್ಚರ್ಯವೆನಿಸುತ್ತಿತ್ತು. 
 
ಬಿಡುವಿಲ್ಲದ ನಿತ್ಯದ ಕೆಲಸ, ಆಯಾಸಗಳ ನಡುವೆಯೂ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ  ಸಂತಸದಿಂದ ಪಾಲ್ಗೊಂಡು, ಸಹಕಾರಿಯಾಗಿರುತ್ತಿದ್ದ ದೊಡ್ಡಪ್ಪ , ಸಮಾರಂಭದ ಕಳೆ ಹೆಚ್ಚಿಸುತ್ತಿದ್ದರು. 

ಹೊಟ್ಟೆ ಹೊರೆಯುವುದಕ್ಕೆ ಒಂದು ಉದ್ಯೋಗ ಎಂದು ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ, ಅದರ  ಆಳ, ಅಗಲಗಳನ್ನು ಅರ್ಥೈಸಿಕೊಂಡು, ಕಿಂಚಿತ್ತೂ ದಕ್ಕೆಯಾಗದಂತೆ ನಡೆದವರು ದೊಡ್ದಪ್ಪ.ನಾಟ್ಯವಾಗಲೀ, ಅರ್ಥ ವೈಭವವಾಗಲೀ ಎರಡರಲ್ಲೂ ಸಮಾನ ಪರಿಣತಿ ಹೊಂದಿದವರು. ಎಪ್ಪತ್ತರ ಹರೆಯದಲ್ಲಿರುವ ಇವರು ಈಗಲೂ ರಂಗಸ್ಥಳವೇರಿದರೆ ಇಪ್ಪತ್ತರ ಯುವಕ.


ಈ ಕ್ಷೇತ್ರದ ಮೇರು ಕಲಾವಿದರಾದರೂ ನನಗೆ ದೊಡ್ದಪ್ಪನಾಗಿಯೇ ಹೆಚ್ಚು ಆಪ್ತರು. ದೊಡ್ದಪ್ಪನ ಮುಂದಿನ ಜೀವನವು ಸುಖಮಯವಾಗಿ, ಅವರ ಆಶೀರ್ವಾದದ ಕೈ ಸದಾ ನಮ್ಮ ತಲೆಯ ಮೇಲೆ ಇರಲೆಂಬುದೇ ನನ್ನ ಆಶಯ.  



Tuesday, October 4, 2011

ಕಾಲ ಮತ್ತು ಮನುಷ್ಯ ..



ಇತಿಹಾಸದ ಅತ್ಯಮೂಲ್ಯ ವಿಷಯಗಳನ್ನೆಲ್ಲ ಸಂಗ್ರಹಿಸಿದ್ದ ಬೃಹತ್ ಮ್ಯೂಸಿಯಮ್ ಅದು.ಅದರ  ವಿಶಾಲತೆಯನ್ನು ಕಣ್ಣಲ್ಲೇ ಅಳೆದ. ತುಂಬಾ ಜನರು ಒಳಗಿದ್ದರೂ ಖಾಲಿ ಎಂದೇ ಎನಿಸುತ್ತಿತ್ತು. ನಿಧಾನಕ್ಕೆ ನೋಡುತ್ತಾ ಮುಂದುವರಿಯುತ್ತಿದ್ದ.

ಒಂದು ಕಡೆ ಸಾವಿರಾರು ತಲೆಬುರುಡೆಗಳನ್ನು ಕ್ರಮಬದ್ಧವಾಗಿ ಜೋಡಿಸಿದ್ದರು.

ಹತ್ತಿರದಲ್ಲಿದ್ದ ಗೈಡ್ ಹೆಮ್ಮೆಯಿಂದ ಹೇಳಿದ. ಇದು ನಮ್ಮ ಶತ್ರು ಸೈನಿಕರ ತಲೆಬುರುಡೆ. ಅವರ ಆಹಾರಕ್ಕೆ ವಿಷವಿಕ್ಕಿ ಎಲ್ಲರನ್ನೂ ಒಂದೇ ಬಾರಿಗೆ ಕೊಂದು, ನಾವು ಗೆದ್ದಿದ್ದೆವು.

ಮೆತ್ತಗೆ ತಲೆದೂಗಿದ.

ಮುಂದಕ್ಕೆ ಹೋದಂತೆಲ್ಲ ಅವರ ಹೆಮ್ಮೆಯ ತುರಾಯಿಯ ಮೇಲೆ ಇಂತಹ ಗರಿಗಳು ಅಸಂಖ್ಯಾತವಿದ್ದವು.

ಎಲ್ಲವನ್ನೂ ನೋಡಿ  ತೃಪ್ತಿಗೊಂಡವನೆ, ಅಲ್ಲಿನ  ಅಧಿಕಾರಿಯ ಕೈಯಲ್ಲಿ ಸುಂದರವಾದ ನಾಣ್ಯವೊಂದನ್ನಿಟ್ಟು ಇದು  ನಮ್ಮ ದೇಶದ ಹಳೆಯ ಕಾಲದ ಅತ್ಯಮೂಲ್ಯ ನಾಣ್ಯ. ಇದನ್ನು ನಿಮ್ಮ ಮ್ಯೂಸಿಯಂ ಗೆ ಅರ್ಪಿಸುತ್ತಿದ್ದೇನೆ.ದಯವಿಟ್ಟು ಸ್ವೀಕರಿಸಿ.

ಅಧಿಕಾರಿಯ ಮುಖ ಆನಂದದಿಂದ ಹೊಳೆಯಿತು.

ಮರುದಿನದ ಪೇಪರ್ ನ ಹೆಡ್ ಲೈನ್  ಹೀಗಿತ್ತು..

ವಿಶ್ವ ವಿಖ್ಯಾತ ಮ್ಯೂಸಿಯಂ ಶಕ್ತಿಯುತ ಮಿನಿ ಬಾಂಬ್ ಧಾಳಿಗೆ ನಾಶ. ಸಾವಿರಾರು ಸಾವು.

ಬದಲಾಗಿದ್ದು ಕಾಲ ಮಾತ್ರ. ಮನುಷ್ಯನಲ್ಲ.

Monday, October 3, 2011

ಬಂಧನ ..





ನಿನ್ನ ಕಣ್ಣ ನೋಟದೊಳಗೆ

ಕೊಲ್ಲುವ ಖಡ್ಗ ವಿದೆ.. 

ಅದೇಕೋ ತಿಳಿಯೆ 

ಇನ್ನಾರಿಗಾದರೂ  

ಅದರಲ್ಲಿ ಇರಿದರೆ 

ಗಾಯವಾಗುವುದಿಲ್ಲಿ ..

ನೆತ್ತರೇನೂ ಹರಿಯುವುದಿಲ್ಲ 

ಕಣ್ಣ  ಹಸಿಯಾಗಿಸಿ 

ಬಿಸಿ ಉಸಿರ ಕಾರಿ 

ನೋವು ಶಮನವಾಗುವುದು ..

ಮತ್ತೊಮ್ಮೆ ಮಗದೊಮ್ಮೆ 

 ಇದು ಮರುಕಳಿಸದಿರಲೆಂದೇ 
ಆ ನಯನಗಳು ಮುಚ್ಚುವಂತೆ 

ಮುದ್ದಿಟ್ಟು ಮೈಮರೆಸಿ 

ಎದೆಯ ಪಂಜರದೊಳಗೆ  

ಪ್ರೀತಿಯ  ಬೇಡಿ ಹಾಕಿ 
ನಿನ್ನ ಬಂಧಿಸಿದ್ದು ...