Pages

Total Visitors

Friday, September 30, 2011

ಅದ್ಯಾಕಿಂಗಾಡ್ತಾರೋ..ಫೋನ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು.  ಮಗಳನ್ನು ಕರೆದು ಅದನ್ನೆತ್ತಿಕೊಳ್ಳುವಂತೆ ನಾನು ಬಾತ್ ರೂಮ್‌ನಿಂದಲೇ ಕಿರುಚಿದೆ. ಯಾರ ಸದ್ದೂ ಇಲ್ಲ. ನಾನಲ್ಲಿಂದ ಹೊರಬರುವಾಗ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ರಿಂಗ್ ಆಗಿ  ಈಗ ಮೌನವಾಗಿತ್ತು.
ಹೊರಗೆ ಬಂದು ನೋಡಿದರೆ ಅಲ್ಲೇ ಹತ್ತಿರದಲ್ಲೆ ಟಿ ವಿ ಯ ಕಾರ್ಟೂನ್ ಲೋಕದಲ್ಲಿ ಮುಳುಗಿ ಕೂತಿದ್ದ ಮಗಳು ..
ಸಿಟ್ಟು ಸರ್ರನೆ ಏರಿತು. " ದೀಪಾ, ಅಷ್ಟು ಹೊತ್ತಿನಿಂದ ಬಡ್ಕೊಳ್ತಲೇ ಇತ್ತು ಫೋನ್  ,ಇಲ್ಲೇ ಇದ್ರೂ ಯಾಕೆ ರಿಸೀವ್ ಮಾಡಿಲ್ಲ. ಒಮ್ಮೆ ಎತ್ತಿ ಯಾರೂ ಅಂತ ಕೇಳಕ್ಕೇನೇ ನಿಂಗೆ " ಎಂದೆ.

"ಹೋಗ್ ಮಮ್ಮಾ, ಇಷ್ಟೊತ್ನಲ್ಲಿ  ಯಾರೋ ನಿನ್ ಫ್ರೆಂಡ್ಸ್ ಫೋನ್ಮಾಡಿರ್ತಾರೆ. ಎತ್ತಿದ್ರೆ ನನ್ ಜೊತೆ ಒಂದು ಮಾತು ಆಡದೆ ಅಮ್ಮಾ ಇಲ್ವಾ ಒಮ್ಮೆ ಕೊಡು ಅಂತಾರೆ . ಇನ್ನು ನೀನು ಬಾತ್ ರೂಮ್ ಗೆ ಹೋಗಿದ್ದಷ್ಟೆ. ಸುಮ್ನೆ ಫೋನೆತ್ತಿ ಅವ್ರ ದುಡ್ಡು ಯಾಕೆ ಹಾಳು ಮಾಡ್ಲಿ  ಅಂತ ಎತ್ಲೇ ಇಲ್ಲ" ಅಂತ ತಿರುಗಿ ಬಾಣವೆಸೆದಳು.

ನಾನಿನ್ನೂ ಏನೋ ಹೇಳುವಳಿದ್ದೆ. ಅಷ್ಟರಲ್ಲಿ ಮತ್ತೆ ರಿಂಗಾಯಿತು. ಆತ್ಮೀಯ ಗೆಳತಿ ವನಿತಾ ಅವಳ ಮನೆಯಲ್ಲಿ ನಾಳೆಯೇ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ, ಎಲ್ಲರನ್ನೂ ಕರೆತರುವಂತೆ ಬಾರಿ ಬಾರಿಗೂ ಒತ್ತಾಸಿದಳು. ಸರೀ ಕಣೇ ಅಂತ ಫೋನಿರಿಸಿ ಒಮ್ಮೆ ಗೆಳತಿಯ ಭೇಟಿಯಾಗುವ ಅವಕಾಶ ಸಿಕ್ಕಿದ ಸಡಗರದಿಂದ ಮಗಳೆಡೆಗೆ ತಿರುಗಿ ವಿಷಯ ತಿಳಿಸಿ ಅವಳನ್ನೂ ಕರೆದುಕೊಂಡುಹೋಗುವ ಬಗ್ಗೆ ಹೇಳಿದರೆ " ಹೋಗ್ ಮಮ್ಮಾ ನಾನು ಬರಲ್ಲ, ಅಲ್ಲಿ ನಂಗ್ಯಾರು ಪರಿಚಯದೋರೇ ಇಲ್ಲ. ಎಲ್ಲ ಅಂಕಲ್, ಆಂಟೀಸ್ ಗಳೇ ಇರ್ತೀರ".ಎಂದು ಒಂದೇ ವಾಕ್ಯದಲ್ಲಿತಳ್ಳಿ ಹಾಕಿದಳು.

ನಾನೂ ಪಟ್ಟು ಬಿಡದೆ " ಯಾಕಿಲ್ಲ? ವನಿತಾ ಮಗಳೆ ಇರ್ತಾಳೆ, ನಿನ್ ಏಜೇ ಅವ್ಳಿಗೂ , ಹೇಗೂ ಸ್ಕೂಲ್‌ಗೆ ರಜಾ ಈಗ. ನಾಳೆಯೊಂದೇ ದಿನ  ಫ್ರೀ  ಅಷ್ಟೆ. ನಾಡಿದ್ದಿಂದ ನಿನ್ನ ಸಂಗೀತ, ಚೆಸ್, ಸಂಜೆ ಶೆಟಲ್ ಕ್ಲಾಸ್ ಎಲ್ಲಾನೂ ಸುರು ಆಗುತ್ತೆ" ಅಂದೆ.

ಯಾಕೋ ಕಹಿ ಗುಳಿಗೆ ಕುಡಿದವರಂತೆ ಮುಖ ಮಾಡಿ, " ಮತ್ತೆ ನಾಡಿದ್ದು ಮಾಮ ಬರ್ತಾರೆ ಅಂದೆ. ಯಾಕೆ.. ಈ ಸಲಾನೂ ನಾನು ಅಜ್ಜಿ ಮನೆಗೆ ಉಳಿಯಕ್ಕೆ ಹೋಗೋ ಹಾಗಿಲ್ವಾ.? ನಂಗೆ ಈ ಸಲದ ರಜದಲ್ಲಿ ಈಜು ಹೊಡಿಯೋಕೆ ಕಲಿಸ್ತೀನಿ ಅಂದಿದ್ದಾರೆ ಮಾಮ.. "ಅಂದಳು.

"ಹಾಗೆಲ್ಲಾ ಅಜ್ಜಿ ಮನೆ ಅಂತ ಊರಲ್ಲಿ ಕೂತ್ಕೊಂಡ್ರೆ ನೀನು ಕಲಿಯೋದು ಯಾವಾಗ? ಈ ಸಲ ಆದ್ರು ಸಂಗೀತ ಸೀನಿಯರ್ ಎಕ್ಸಾಂಗೆ ಕಟ್ಟ್ಲಿಲ್ಲಾಂದ್ರೆ ಎಷ್ಟು ನಾಚಿಕೆ. ನಮ್ಗೆಲ್ಲ ನಿಮ್ ತರ ಅವಕಾಶಗಳಿದ್ರೆ ಏನೋ ಆಗ್ತಿದ್ವಿ.."

ಕಣ್ಣೀರು ಹೊರ ಚೆಲ್ಲುವಂತಿದ್ದ ಅವಳ ಕಣ್ಣುಗಳೆಡೆಗೆ  ನೋಡಿ ಮೌನವಾದೆ.ಒಮ್ಮೆ ಮನಕ್ಕೆ ಪಿಚ್ಚೆನಿಸಿದರೂ ತೋರಗೊಡದೆ ಒಳನಡೆದೆ.

ರಾತ್ರಿಡೀ ನಮ್ಮ ರಜಾ ಕಾಲವೇ ಕಣ್ಣಿಗೆ ಕಟ್ಟುತ್ತಿತ್ತು.ಯಾವುದೇ ಚಿಂತೆಯಿಲ್ಲದೆ ಅಲೆದಾಡುತ್ತಿದ್ದ ದಿನಗಳವು. ರಜ ಬಂತೆಂದರೆ ನಮ್ಮದೇ ಲೋಕ.. ನಮ್ಮ ಮಕ್ಕಳಿಗೆ ಆ ರೀತಿಯ ಬಾಲ್ಯವೇ ಇಲ್ಲವೆ? ತುಂಬಾ ಹೊತ್ತು ಅದನ್ನೆ ಆಲೋಚಿಸುತ್ತಾ ಮಲಗಿದವಳಿಗೆ  ಬೆಳಗಾಗಿದ್ದು ಸ್ವಲ್ಪ ತಡವಾಗಿಯೇ..

ವನಿತಾಳ ಮನೆಗೆ ಮಗಳನ್ನೂ ಒತ್ತಾಯದಿಂದಲೇ ಹೊರಡಿಸಿದೆ.

ನಮ್ಮನ್ನು ಕಂಡೊಡನೆ ವನಿತಾ ಆತ್ಮೀಯತೆಯಿಂದ ಬರಮಾಡಿಕೊಂಡು, ಉಪಚರಿಸತೊಡಗಿದಳು. "ದೀಪಾ ಅಲ್ವಾ, ಎಷ್ಟು ದೊಡ್ಡವಳಾಗಿದ್ದಾಳೆ.." ಅಂತ ಮಗಳ ತಲೆ ಸವರಿದಳು. ಇನ್ನೇನೋ ಮಾತಿಗೆ ತೊಡಗಬೇಕೆನ್ನುವಷ್ಟರಲ್ಲಿ ಬೇರೆ ಯಾರೋ ಆಹ್ವಾನಿತರು ಬಂದಿದ್ದರಿಂದ " ಈಗ ಬಂದೆ" ಎಂದು ಅವರ ಕಡೆ ಹೆಜ್ಜೆ ಹಾಕಿದಳು.

ಮಗಳು ಅಲ್ಲಿ ನಡೆಯುವ ಪೂಜಾ ಕಾರ್ಯಕ್ರಮದ ಬಗ್ಗೆ ಕುತೂಹಲಗೊಂಡು ಅತ್ತ ಕಣ್ಣು ಹಾಯಿಸಿದರೆ, ನಾನೂ ಪರಿಚಿತ ಮುಖಗಳೆಲ್ಲಾದರೂ ಕಾಣುತ್ತವೇನೋ ಎಂದು ಕುತ್ತಿಗೆ ತಿರುಗಿಸತೊಡಗಿದೆ. ಮಗಳ ಸಮ ವಯಸ್ಸಿನವರ್ಯಾರಾದರು  ಇದ್ದರೆ, ಹತ್ತಿರ ಕರೆದು ಪರಿಚಯ ಮಾಡಿಸಿ ಬಿಟ್ಟರೆ ಅವಳಿಗೂ ಬೋರ್ ಆಗಲಾರದು ಎಂಬ  ಆಲೋಚನೆ ಜೊತೆಗೇ ಇತ್ತು. ಕೆಲವು ಪುಟ್ಟ ಕಂದಮ್ಮಗಳು ಅಮ್ಮನಿಗಂಟಿ ಕುಳಿತದ್ದು ಬಿಟ್ಟರೆ ಮಕ್ಕಳ ಸಂಖ್ಯೆಯೇ ಕಡಿಮೆ ಇತ್ತು.
ಹಿಂದಿನಿಂದ ಯಾರೋ ನನ್ನ ಹೆಸರೆತ್ತಿ ಕರೆದಂತಾಗಿ ತಿರುಗಿ ನೋಡಿದರೆ ಅನೇಕ ಗೆಳತಿಯರ ಗುಂಪೇ ಅಲ್ಲಿ ನೆರೆದಿತ್ತು. ಅವರೊಡನೆ ಮಾತನಾಡುತ್ತಾ ಕುಳಿತೆ. ಅಷ್ಟರಲ್ಲಿ ವನಿತಾ ಕೂಡಾ ಹತ್ತಿರ ಬಂದಳು. ಕೂಡಲೇ ಅವಳ ಮಗಳ ನೆನಪಾಗಿ "ಎಲ್ಲೇ ರಾಗಿಣಿ ಕಾಣ್ತಾ ಇಲ್ಲ" ಅಂದೆ.

" ಇಲ್ಲಾ ಕಣೆ, ಅವ್ಳಿಗಿವತ್ತು ಕಂಪ್ಯೂಟರ್ ಕ್ಲಾಸ್ ಇದೆ. ಅವ್ಳೇನೋ ಹೋಗಲ್ಲ ಅಂತ ಹಠ ಹಿಡಿದಿದ್ದಳು. ನಾನೇ ಬಯ್ದು ಕಳ್ಸಿದೆ.ಫೀಸ್  ತುಂಬಾ ಹೆಚ್ಚು ಕಣೆ. ಒಂದು ದಿನ ಮಿಸ್ ಆಯ್ತೂಂದ್ರೆ ಎಷ್ಟೊಂದು ಲಾಸ್ ಅಂತೀಯಾ..? ಮತ್ತೆ ಅವಳು ಇಲ್ಲಿ ಉಳಿದು ಮಾಡೋದೇನಿದೆ ಹೇಳು. ಯಾರನ್ನೂ ಪರಿಚಯ ಇಲ್ಲ. ಅವಳಾಗಿ ಮಾತಾಡೋದು ಇಲ್ಲ", ಅಂತೆಲ್ಲ ಹೇಳತೊಡಗಿದಳು.

ಈಗಿನ ಮಕ್ಕಳು ಹಾಗೆ.. ಯಾರ ಜೊತೆಗೂ ಬೆರೆಯಲ್ಲ,  ಅವರಾಯ್ತು ಅವರ ಸ್ನೇಹಿತರಾಯ್ತು. ಉಳಿದವರೆಲ್ಲ ಗೊತ್ತೇ ಇಲ್ಲ, ಅಂತೆಲ್ಲ ಗೆಳತಿಯರ ಟೀಕೆ  ಟಿಪ್ಪಣಿಗಳು ಸುರು ಆಯಿತು.

  ಯಾಕೋ ಇವರ ನಾಲಿಗೆ ತುದಿಯ  ಮಾತುಗಳು ಬೇಸರವೆನಿಸಿ ಮಗಳು ಕುಳಿತ  ಕಡೆ ತಪ್ಪಿತಸ್ಥ ನೋಟ ಬೀರಿದೆ. ಅವಳಾಗಲೇ ಅಲ್ಲಿದ್ದ ಪುಟ್ಟ ಮಕ್ಕಳ ಸೈನ್ಯ ಕಟ್ಟಿ ಅವರ ಜೊತೆ ನಲಿಯುತ್ತಿದ್ದಳು.

ಮನದೊಳಗೆ ತುಮುಲ ಪ್ರಾರಂಭವಾಯಿತು. ಈಗಿನ ಮಕ್ಕಳ ಬಗ್ಗೆ ದೂರುವ, ನಾವೆಷ್ಟು ಸರಿ? ಎಂದು ನನ್ನೊಳಗೆ ಪ್ರಶ್ನಿಸಿಕೊಂಡೆ. ನಮ್ಮ ಸ್ಟೇಟಸ್ ಏರಿಸಿಕೊಳ್ಳಲು ಊರಲ್ಲಿದ್ದ ಎಲ್ಲ ಕೋರ್ಸುಗಳಿಗೆ ಸೇರಿಸಿ,  ಅವರಿಗೆ ಒಂದಿಷ್ಟೂ ಉಸಿರಾಡಲು ಸಮಯ ನೀಡದ ನಮ್ಮ ನಡವಳಿಕೆಯೇ ಅಲ್ಲವೇ ಇದಕ್ಕೆಲ್ಲ ಮೂಲ ಕಾರಣ ಎನ್ನಿಸಿತು. ಮಕ್ಕಳಿಗೆ ನಮ್ಮವರೊಂದಿಗೆ ಬೆರೆಯಲು ಆಸೆಯಿದ್ದರೂ, ನಮ್ಮಿಂದಾಗಿಯೇ ಅವಕಾಶಗಳನ್ನು ಕಳೆದುಕೊಳ್ಳುವ ಅವರ ಬಗ್ಗೆ ಚಿಂತಿಸತೊಡಗಿತು ಮನ.

ಊಟ ಆಗುತ್ತಿದ್ದಂತೆಯೇ ಹೊರಟೆ. "ಇರೇ ಸ್ವಲ್ಪ ಹೊತ್ತು, ನಿನ್ಜೊತೆ ಏನೂ ಮಾತಾಡಕ್ಕಾಗಿಲ್ಲ. ಅಷ್ಟು ಅವಸರ ಏನಿದೆ ಮನೆಗೆ ಹೋಗೋಕ್ಕೆ.." ಎಂಬ ಗೆಳತಿಯ ಮಾತಿಗೆ " ನಾಳೆ ನನ್ನ ತಮ್ಮ ಬರ್ತಿದ್ದಾನೆ. ಅವ್ನ ಜೊತೆ ದೀಪಾ ಅಜ್ಜನ ಮನೆಗೆ ಹೋಗ್ತಿದ್ದಾಳೆ. ಪ್ಯಾಕಿಂಗ್ ಇನ್ನೂ ಅಗಿಲ್ಲ ಕಣೆ" ಎಂದೆ. ನನ್ನ ಉತ್ತರ  ಕೇಳಿ ದೀಪಾ ಸಂತಸದಿಂದ  ಅಲ್ಲಿ ಸುತ್ತು ಜನಗಳಿರುವುದನ್ನು ಮರೆತು, " ಥಾಂಕ್ಸ್ ಮಮ್ಮಾ.. ಎಂದು ಮುತ್ತಿಟ್ಟಳು.
Tuesday, September 27, 2011

ಕಲ್ಲರಳುವ ಕಾಲ
ಕಡಲಲೆಯು ಮತ್ತೆ ಮತ್ತೆ

ಸೋಕಿ ಪುಳಕಿತಗೊಂಡು  ಪಿಸುಗುಟ್ಟಿದರೂ
ಮಾರ್ನುಡಿಯದ ಒರಟ....

ಹುಚ್ಚೆದ್ದ ಶರಧಿ 

ತನ್ನ ತೋಳೊಳಗೆ  ಬಂಧಿಸಿ ಆವರಿಸಿದರೂ  

ಜಾರಿಸಿ  ಸರಿಸಿ ಬೀರುವ ಒಣ ನೋಟ ....

ಅಲೆ ಒಂದಿಷ್ಟು ದೂರ ಸರಿದರೆ  ಸಾಕು

ಕಾವೇರಿದ ಬೆಳಕಿಗೆ ಮೈಯೊಡ್ಡಿ 

ಹಗುರಾಗುವ ನಿರ್ಧಯ ....

ಎಂದೆಲ್ಲ ಜರಿದರೂ 

ಕಲ್ಲು ಹೃದಯ 

ಕಾಯುತ್ತಲೇ ಇರುತ್ತದೆ.....

ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು 

ಕನಸಲ್ಲೂ ಕನವರಿಸಿ 

ಮನದಲ್ಲೇ  ನುಡಿಯುತ್ತದೆ ಕಡಲಲೆಗೆ 

ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....

Monday, September 26, 2011

ಕನ್ನಡಕಂ ಗೆಲ್ಗೆ ಚಿಕ್ಕವಳಾಗಿದ್ದಾಗಿನಿಂದ  ನನಗೆ ಅತ್ಯಂತ ಕುತೂಹಲದ ಮತ್ತು ನನ್ನ ಕೈಗೆ ಸದಾ ನಿಲುಕದಷ್ಟು ಎತ್ತರದಲ್ಲಿರುತ್ತಿದ್ದ ವಸ್ತು ಎಂದರೆ ಅಜ್ಜನ ಕನ್ನಡಕ. ಕೇವಲ ಪೇಪರ್ ಓದಲು ಮಾತ್ರ ಬಳಸಲ್ಪಡುತ್ತಿದ್ದ ಅದು  ಕೂಡಲೇ  ಕನ್ನಡಕದ ಗೂಡು ಎಂಬ ಗೂಡಿನ ಬಾಗಿಲೆಳೆದುಕೊಂಡು ನನ್ನ ಕಣ್ಣಿಂದ ಮರೆಯಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅಜ್ಜ ಮರೆತು ಕೆಳಗಿಟ್ಟ ದಿನ ಅದನ್ನು ಕಣ್ಣಿಗೆ ಏರಿಸಿ ನಡೆಯುವ ಅನುಭವವೇ ಅದ್ಭುತ. ನೆಲ ಇನ್ನಷ್ಟು ತಗ್ಗಿನಲ್ಲಿದ್ದಂತೆ ತೋರಿ ಆ ಅಂದಾಜಿಗೆ ಕಾಲಿಡುವಾಗ ಮೊದಲೇ ನೆಲ ಕಾಲಿಗೆ ತಾಗಿ ಮುಗ್ಗರಿಸುವಂತೆ ಮಾಡುತ್ತಿತ್ತು. ಮತ್ತೊಂದು ರಜೆಗೆ ಅಜ್ಜನ ಮನೆಗೆ ಹೋದಾಗ ಅದು ಕೈ ಜಾರಿ ಬಿದ್ದು ಅದರ ಕನ್ನಡಿ ಹುಡಿಯಾಗಿತ್ತು.ಹೊಸದರ ಅಗತ್ಯವಿಲ್ಲ ಎಂದು ಅಜ್ಜ ಅದರ ಫ್ರೇಮ್ ತೆಗೆದಿರಿಸಿದ್ದರು. ಅದಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಅಂಟಿಸಿ ಕುಣಿದದ್ದೇ ಕುಣಿದದ್ದು . ಆದರೂ ಅದು ಎತ್ತರ ತಗ್ಗಿನಲ್ಲಿ ನಡೆದಾಡುವ ಅನುಭವ ನೀಡದೆ ಬೇಗನೆ ಬೇಸರ ತರಿಸಿತು. 

ನಂತರ ಶಾಲೆಗೆ  ಹೋಗುವ ದಿನಗಳಲ್ಲಿ, ಅಂದರೆ ಅದೂ ಹೈಸ್ಕೂಲಿನ ಮೆಟ್ಟಿಲೇರಿದ ಮೇಲೆ ಕೇವಲ ಉಪಾಧ್ಯಾಯರ ಮೂಗಿನ ಮೇಲೆ ರಾರಾಜಿಸುತ್ತಿದ್ದ ಕನ್ನಡಕ, ತಲೆ ನೋವಿನ ಕಾರಣಕ್ಕೆ ಹುಡುಗಿಯೊಬ್ಬಳ ಮೂಗನ್ನು ಅಲಂಕರಿಸಿತು. ಬೇರೆಯ ತರಗತಿಯ ಹುಡುಗಿಯಾಗಿದ್ದರೂ ನಾನಾಗಿ ಮೇಲೆ ಬಿದ್ದು ಅವಳ  ಸ್ನೇಹ ಗಳಿಸಿಕೊಂಡಿದ್ದೆ. ಅವಳು ಕನ್ನಡಕ ಏರಿಸಿದಾಗ ಅದರೊಳಗೆ  ಮಿಣುಗುಟ್ಟುವ ಕಣ್ಣುಗಳ ಸೌಂಧರ್ಯ, ಅದನ್ನು ಹಾಕಿಕೊಂಡಾಗಿನ ಗತ್ತು, ಗೈರತ್ತು ಬೇರೆಲ್ಲಿತ್ತು..?ಆ ಹಾಳು ತಲೆನೋವು ನನಗಾದರೂ ಬರಬಾರದೇ ಎಂದು ಇದ್ದಬದ್ದ ದೇವರನ್ನೆಲ್ಲ ಬೇಡಿಕೊಂಡಿದ್ದೆ. ಆದರೆ ದೇವರಿಗೆ ಕಿವಿ ನೋವಿತ್ತೇನೋ .. ನನ್ನ ಮೊರೆ ಕೇಳಿಸಲೇ ಇಲ್ಲ. 

ಆಗ ನೋಡಿ! ನನ್ನಾಸೆ ಬಳ್ಳಿಗೆ  ನೀರೆರೆಯಲು ಕಾಲಿಟ್ಟಿತ್ತು  ಕೆಂಗಣ್ಣು. ಮದ್ರಾಸ್ ಐ ಎಂಬ ನಾಮದೇಯ ಹೊತ್ತಿದ್ದರೂ, ಕನ್ನಡ ಪ್ರಿಯೆಯಾದ ನಾನು ಅದನ್ನು ಕ್ಷಮಿಸಿ ಸ್ವಾಗತಿಸುವ ತಯಾರಿ  ನಡೆಸಿದ್ದೆ. ಊರಿಗೆ ಬಂದವಳು, ನೀರಿಗೆ ಬಾರದಿದ್ದಾಳೆ ..? ಎಂಬ ನುಡಿಯ ಮೇಲೆ ನಂಬಿಕೆ ಇಟ್ಟು. ಆದರೆ ಇಡೀ ಊರಲ್ಲಿ ಎಲ್ಲರಿಗೂ ಬಂದರೂ, ನನಗೆ ಬಾರದ ಆ ಕಾಯಿಲೆ,  ಅದರ ಸಂಕ್ರಾಮಿಕತೆಯೇ ಬಗ್ಗೆ ನನ್ನಲ್ಲಿ  ಅನುಮಾನ ಹುಟ್ಟಿಸಿತು . ಕಪ್ಪು ಕನ್ನಡಕದಾರಿಗಳಾಗಿ ಸುಂದರಿಯರಾಗಿ ಕಾಣಿಸುತ್ತಿದ್ದ ನನ್ನ ಅನೇಕ ಗೆಳತಿಯರು ನನ್ನಲ್ಲಿ ಅಸೂಯೆ ಹೆಚ್ಚಿಸಿದ್ದು ಸುಳ್ಳಲ್ಲ. ಅಂತೂ ಇಂತೂ ನನ್ನ ಮೇಲೆ ಕರುಣೆ ತೋರದ ಆ ಪಾಪಿ ಕಾಯಿಲೆ ಊರಿಂದ ಕಾಲ್ಕಿತ್ತಿತು.

ಕಾಲೇಜಿನ ದಿನಗಳು  ನಮ್ಮೆಲ್ಲ ಅಲಂಕಾರಕ್ಕೆ ಅಡ್ದಿ ಮಾಡದ ಕಾಲವೆಂದೇ ತಾನೇ ಪ್ರಸಿದ್ಧಿ ..! 'ಸ್ಪೋರ್ಟ್ಸ್ ಡೆ' ಎಂಬ ಒಂದು ದಿನವನ್ನು ನನ್ನ ಆಸೆ ತೀರಿಸುವ ದಿನವಾಗಿ ಆಯ್ಕೆ ಮಾಡಿದೆ. ತಂಪು ಕನ್ನಡಕ ಕಣ್ಣಿಗೇರಿಸಿ ನೂರಾರು ಬಾರಿ ಕನ್ನಡಿಯ ಮುಂದೆ ಸುಳಿದು ನನ್ನ ಅಂದಕ್ಕೆ ನಾನೇ ಬೀಗಿ ಕಾಲೇಜಿನ ದಾರಿ ಹಿಡಿದೆ. ಒಳಗೆ ಕಾಲಿಡುವಾಗಲೇ ಪರಿಚಿತ ಪ್ರಾಧ್ಯಾಪಕರೊಬ್ಬರು ಸಿಕ್ಕಿ " ಅಯ್ಯೋ ..! ಏನಮ್ಮಾ ..! ಕಣ್ಣು ನೋವು ಬಂದಿದೆಯೇ ? ಇವತ್ಯಾಕಮ್ಮಾ ಬಂದೆ? ಹೇಗೂ ಪಾಠ ಇಲ್ಲ,  ಹೋಗು....  ಹಾಸ್ಟೆಲ್ ಗೆ ಹೋಗಿ ರೆಸ್ಟ್ ಮಾಡು...  ಅದು ಗುಣ ಆಗಲಿ, ಜೋರಾದ್ರೆ ಕಷ್ಟ, ಜೊತೆಗೆ ಎಲ್ಲರಿಗೂ ಹರಡಿ ಬಿಡುತ್ತೆ .ಎಂದೆಲ್ಲ ಜೋರಾಗಿ ಹೇಳಿ ಎಲ್ಲರ ಗಮನವನ್ನೂ ನನ್ನಡೆಗೆ ಸೆಳೆದರು. ಇದು ಬಿಸಿಲಿಗೆ  ಅಂತ ತಂಪು ಕನ್ನಡ ಹಾಕಿದ್ದು ಅಂತೆಲ್ಲ ಅವರೆದುರು ಹೇಳಲು ಸಾಧ್ಯವೇ..?ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಮರಳಿ ಹಾಸ್ಟೆಲ್ ಹಾದಿ ಹಿಡಿದೆ. 

ಮದುವೆ ನಿಶ್ಚಯವಾದಾಗ ನನ್ನ ಪತಿಯಲ್ಲಿದ್ದ ಸ್ಕೂಟರ್ ಮೊದಲು ನನ್ನ ಕಣ್ಣಿಗೆ ಬಿತ್ತು. ಅಲ್ಲಿಂದ ಸುರುವಾಯ್ತು ನೋಡಿ ನನ್ನ ಕನಸುಗಳ ಸರಮಾಲೆ. ಎಲ್ಲರೂ ಭಾವಿ ಪತಿಯ ಬಗ್ಗೆ ಕನಸು ಕಾಣುವವರಾದರೆ, ನಾನು  ಸ್ಕೂಟರಿನಲ್ಲಿ   ಕನ್ನಡಕ ಹಾಕಿಕೊಂಡು ಹೋಗುವ ಬಗ್ಗೆ ಕನಸು ಕಾಣುತ್ತಿದ್ದೆ. ಮದುವೆ ಕಳೆದು ನಾನು ಮೊದಲ ಬಾರಿ ಪತಿಯೊಡನೆ ಸ್ಕೂಟರ್ ಏರುವ ಅಮೃತ ಗಳಿಗೆ ಸಮೀಪಿಸಿತು. ಆದರೆ ನನ್ನ  ಖಾಲಿ  ತಲೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನನ್ನ ಪತಿರಾಯ ದಪ್ಪನೆಯ ಗ್ಲಾಸ್ ಹೊಂದಿದ್ದ ಹೆಲ್ಮೆಟನ್ನು ನನ್ನ ತಲೆಯ ಮೇಲೆರಿಸಬೇಕೆ.. !! ಹ್ಹಾ..!! ವಿಧಿಯಾಟವೇ...!! ಎಂದು ಹೆಲ್ಮೆಟ್ ನ ಮೇಲೆಯೆ ತಲೆ ತಲೆ ಬಡಿದುಕೊಂಡೆ. ಈಗಲೂ ನನ್ನಾಸೆ ಕುಂದಿಲ್ಲ. ಇನ್ನೇನು ಕೆಲವೇ ವರ್ಷಗಳು .. ಆಗ ಬರುವ 'ಚಾಲೀಸು'  ನನ್ನ ಕಣ್ಣಿಗೆ  ಕನ್ನಡಕ  ಏರಿಸದೆ ಇರಲಾರದು.ಆದರೆ ಇಲ್ಲೂ ಒಂದು ಭಯದ ನೆರಳಿದೆ. ಚಾಲೀಸು ಗುಣಿಸು ಎರಡರಷ್ಟು ವಯಸ್ಸಾದ ನನ್ನ ಅಜ್ಜಿ  ಕಣ್ಣಿನಿಂದ ಒಂದು ಅಡಿ ದೂರದಲ್ಲಿ ಪುಸ್ತಕ ಹಿಡಿದು ದೊಡ್ಡ ಸ್ವರದಲ್ಲಿ ಒಂದೂ ತಪ್ಪದಂತೆ ಓದುತ್ತಿದ್ದರು, ಯಾವುದೇ ಕನ್ನಡಕದ ನೆರವಿಲ್ಲದೆ. ಸಧ್ಯ ನನಗೆ ಹಾಗಾಗದೆ ಇರಲೆಂದು ಪ್ರಾರ್ಥಿಸುತ್ತಾ,ಸುಂದರ ಕನ್ನಡಕ ನನ್ನ ಮೂಗೇರುವ  ಶುಭ ಗಳಿಗೆಯನ್ನು  ಶಬರಿಯಂತೆ ಕಾಯುತ್ತ ಇದ್ದೇನೆ, ಕನ್ನಡಕ ಒರೆಸುವ ಶುಭ್ರ ಹತ್ತಿ ಬಟ್ಟೆಯನ್ನು ಕೈಯಲ್ಲಿ ಹಿಡಿದು ....


-- 

Sunday, September 25, 2011

ದಣಿವರಿಯದವರು...
ಬಾಳ ಬಂಡಿ ಎಳೆಯಲು

ನಮ್ಮದೂ  ಸಮಪಾಲು

ಹೊತ್ತ ಹೊರೆ ಹಸಿವ ಇಂಗಿಸುವುದಾದರೆ

ಭಾರವೆಲ್ಲಿಯದು..?

ಬದುಕ ಹಗುರಗೊಳಿಸುವ 

ನವಿರಾದ ಕ್ಷಣಗಳಿವು

ಬಿಸಿಯುಸಿರ ಚೆಲ್ಲಿ 

ಕಷ್ಟಗಳ ಹಂಚಿಕೊಳ್ಳುವೆವು  

ಗೆಳೆತನದ ಬೆಳಕಿನಲಿ 

ಎಲ್ಲವೂ ನಿಚ್ಚಳ  

ಸೋಲುವ ಕಾಲುಗಳಿಗೆ ಮಾತುಗಳ 

ಸಾಂತ್ವನದ ನೇವರಿಕೆ

ತಿರುವು ಕಳೆದ ಬಳಿಕ 

ಬಂದೇ ಬರುವುದು ಗೂಡು 

ಮತ್ತೊಮ್ಮೆ ಹೊರಳಿ  ನೋಡಿ 

ನಸುನಗುವಿನ ಪುಟ್ಟ ವಿದಾಯ

ಕಣ್ಣಲ್ಲಿ ಮರಳಿ ಸೇರುವ 

ನಾಳೆಗಳ ಕನಸು..  

Thursday, September 22, 2011

ಆತ್ಮವಿಶ್ವಾಸಕ್ಕೆ ಅಲಂಕಾರವೂ ಸಹಕಾರಿ ಅಂದ್ರೆ..!!
ನನ್ನ ಹೊಸ ಸರ  ಎಲ್ಲಿಟ್ಟೆ ? ಛೆ! ಬೇಗ ಹೊರಡೋಣ ಅಂದ್ರೆ ಇದೊಂದು ಸಿಗ್ತಾ ಇಲ್ಲ.. ಅಬ್ಬಾ.... ಇಲ್ಲಿದೆ ಸಿಕ್ಕಿತು.. ಎಷ್ಟೊಂದು ಗೋಳಾಡಿಸ್ತು ನನ್ನನ್ನು.. ಈ ಸೀರೆಗೆ ಅಂತಲೇ ತುಂಬಾ ಅಂಗಡಿ ಹುಡುಕಿ ತಂದಿದ್ದು ಇದು.. ಜುಟ್ಟಿನ ಹೂವಿನಿಂದ   ಹಿಡಿದು ಕಾಲಿನ ಪಾದರಕ್ಷೆಯವರೆಗೆ ಎಲ್ಲಾ ಮ್ಯಾಚಿಂಗ್ ಮ್ಯಾಚಿಂಗ್ .. ಕನ್ನಡಿಯೂ ಒಮ್ಮೆ ಬೆರಗಾಗಬೇಕೀಗ ಈ ಅಂದ ಕಂಡು ..


ಅರೇ.. ನಾನಾಗಲೆ ಸಿದ್ಧವಾಗಿದ್ದರೂ ಮೂರು ವರ್ಷದ ಪುಟಾಣಿ ಅನಘ ಇನ್ನು ಹೊರಟಿಲ್ಲ.. ಯಾಕೇ ಏನಾಯ್ತು.. ಬರಲ್ವಾ  ಮಾಮಿ ಜೊತೆ  ಅಂತ ಪುಸಲಾಸಿದರೆ ಉಹುಂ .. ಅಂತ ಹೇಳಿ ಮುಖ ತಿರುಗಿಸಿದಳು. ಯಾಕೆ ಪುಟ್ಟಾ ಅಂತ ಇನ್ನು ಸ್ವಲ್ಪ ಬೆಣ್ಣೆ ಹಚ್ಚಿದರೆ, ಮತ್ತೇ.. ಮತ್ತೇ.. ನಿನ್ನ ಡ್ರೆಸ್ಸು ನಾನು ಹಾಕ್ಕೊಂಡಿರೊ ಜೀನ್ಸ್‌ಗೆ ಮಾಚ್ ಆಗ್ತಾ ಇಲ್ಲ.. ಒಂದೋ ನೀನೂ ನನ್ ತರ ಜೀನ್ಸ್ ಹಾಕ್ಕೊ, ಇಲ್ಲಾಂದ್ರೆ ನಂಗು ಸೀರೆ ಉಡ್ಸು ಅಂದಳು..  ಉಫ್ .. ಈ ಮಕ್ಕಳೇ..
ಅಲಂಕಾರ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಎಲ್ಲಿಗಾದರು ಹೊರಡುವಾಗ ಸುಂದರವಾಗಿ ಅಲಂಕರಿಸಿಕೊಂಡು ಹೊರಟರೆ ನಮ್ಮ ಆತ್ಮವಿಶ್ವಾಸ  ಹೆಚ್ಚುತ್ತದೆ.....!! ನಮ್ಮ ರೂಪ ಹೇಗೇ ಇರಬಹುದು ಆದರೆ ನಮ್ಮ ಶರೀರಕ್ಕೊಪ್ಪುವ ಆಭರಣಗಳ ಬಳಕೆಯಿಂದ ಅಂದ ಹೆಚ್ಚುವುದಂತೂ ಸತ್ಯ. ಮುತ್ತು, ಹವಳಗಳು ನಮ್ಮನ್ನು ಸರಳವಾಗಿಯೂ, ಅಂದವಾಗಿಯೂ ತೋರುವಂತೆ ಮಾಡಿದರೆ ಕೆಲವೊಂದು ಬೆಲೆಬಾಳುವ ಕಲ್ಲುಗಳನ್ನು ಹೊಂದಿದ  ಚಿನ್ನದ ಆಭರಣಗಳು ನಮ್ಮ ಪ್ರತಿಷ್ಠೆಯನ್ನು ಒಂದಿಷ್ಟು ಏರಿಸುವುದೂ ಹೌದು ತಾನೆ !!

 ಹಾಗೆಂದು ಇವುಗಳು ಪ್ರತಿಯೊಂದೂ ಬೆಲೆಬಾಳುವವೇ ಆಗಬೇಕೆಂದೇನಿಲ್ಲ. ನೀವು ಕಾಲೇಜು ಕನ್ಯೆಯಾಗಿದ್ದಲ್ಲಿ ಅಥವಾ ಉದ್ಯೋಗಿ ಮಹಿಳೆಯಾಗಿದ್ದಲ್ಲಿ  ನಿಮ್ಮ ಉಡುಪಿನ ಬಣ್ಣಕ್ಕೆ ಹೋಲಿಕೆಯಾಗುವ ಪುಟ್ಟ ಪುಟ್ಟ ಕಿವಿಯ  ಓಲೆಗಳೂ, ಸುಂದರ ಒಂಟಿ ಬಳೆಗಳೂ ನಿಮ್ಮ ನಿತ್ಯದ ಸಂಗಾತಿಗಳಾಗಿದ್ದಲ್ಲಿ ಆರಾಮದಾಯಕವೆನಿಸುತ್ತದೆ. ಅತಿ ಅಬ್ಬರದ ಒಡವೆಗಳ ಅಗತ್ಯವು ಇಲ್ಲಿಗೆ ಬೇಕಾಗುವುದಿಲ್ಲ. ಯುವತಿಯರಿಗಂತೂ ಇದರ ಬೆಲೆಯಿಂದ ಹೆಚ್ಚು ಅದರ ಡಿಸೈನ್ ಮೇಲೇ ಕಣ್ಣು.

ಮದುವೆ ಮುಂಜಿಗಳಂತಹ ಸಮಾರಂಭಗಳು ಕೆಲವರ ಅಲಂಕಾರ ಗಮನಿಸಿದರೆ ಅವರೇ ಪುಟ್ಟ  ಆಭರಣಗಳ ಅಂಗಡಿಗಳಂತೆ ತೋರಿದರೆ ಅಚ್ಚರಿಲ್ಲ.ಮನೆಯ ತಿಜೋರಿಯಲ್ಲಿದ್ದದ್ದನ್ನೆಲ್ಲ ಮೈ ಮೇಲೆ ಹೇರಿಕೊಂಡು ಬಂದು ಕಣ್ಣು ಕುಕ್ಕಿಸುತ್ತಾರೆ. ನಮ್ಮಲ್ಲಿರುವ ಒಡವೆಗಳನ್ನೆಲ್ಲ ಒಂದೇ ಬಾರಿಗೆ ಹೀಗೆ ಪ್ರಧರ್ಶನಕ್ಕೆ   ಇಡಬೇಕೆಂದೇನಿಲ್ಲ. ಸರಳವಾಗಿ  ಕೆಲವನ್ನು  ಮಾತ್ರ  ಧರಿಸಿದರೆ ಚೆಂದ.  ನಾವು ಧರಿಸುವ ಆಭರಣಗಳು ನಮ್ಮ ಮನಸ್ಥಿತಿಯನ್ನೂ ತಿಳಿಸುತ್ತವೆ ಅಂದ್ರೆ ನಂಬಲೇ ಬೇಕು.

ಕೆಲವೊಂದು ಆಭರಣಗಳು ನಮ್ಮನ್ನು ಭಾವನಾತ್ಮಕವಾಗಿಯೂ ಬೆಸೆದಿರುತ್ತವೆ. ಪ್ರಿಯನಿತ್ತ ಮೊದಲ ಉಂಗುರವಿರಬಹುದು ಅಥವಾ ಕಾಲು ಗೆಜ್ಜೆ ಗಳಿರಬಹುದು.. ಅವುಗಳನ್ನು ಅಗಲಿ ಇರುವುದು ಎಂದಿಗೂ ಸಾಧ್ಯವಾಗದು.  ಬೆರಳಲ್ಲಿ ಉಂಗುರ ಕಂಡಾಗ,ಕಾಲ್ಗೆಜ್ಜೆಯ ಘಲ್ ಘಲ್ ಅನುರಣಿಸಿದಾಗ ಮೂಡುವ ಮೊಗದ ಮಂದಹಾಸ ಹೊಸಲೋಕದೆಡೆಗೆ ನಿಮ್ಮನ್ನು ಒಯ್ಯಬಹುದು. ರಾಜಾ ದುಷ್ಯಂತನಿಗೆ ಶಕುಂತಲೆಯ ನೆನಪುಕ್ಕಿ ಬಂದಂತೆ ನಿಮಗೂ ಯಾವುದೋ ನೆನಪುಗಳು  ಮರಳಿ ಕಾಡಬಹುದು.

ಈ ಆಭರಣಗಳು ಸಂಬಂಧಗಳನ್ನು ಬೆಸೆವಲ್ಲೂ ಪಾತ್ರವಹಿಸುತ್ತವೆ. ಅತ್ತೆ ಅಥವಾ ಅಮ್ಮನಿಂದ ಬಳುವಳಿಯಾಗಿ ಬರುವ ಕೆಲವು ಮುಂದಿನ ಪೀಳಿಗೆಗೂ ಅದನ್ನು ತಲುಪಿಸುವ ನಮ್ಮ ಜವಾಬ್ಧಾರಿಯನ್ನು ಎಚ್ಚರಿಸುತ್ತವೆ. ನಾವು ನಮ್ಮ ಪ್ರೀತಿ ಪಾತ್ರರಿಂದ ಇದನ್ನು ಪಡೆಯುವುದರಿಂದ ಅಥವಾ ಅವರಿಗೆ  ನೀಡುವುದರಿಂದ  ಒಲುಮೆಯನ್ನು ಹಂಚಿಕೊಳ್ಳುವಲ್ಲು ಸಹಾಯ ಮಾಡುತ್ತದೆ.
ಕೆಲವೊಮ್ಮೆ ಬೆಲೆಬಾಳುವ ಆಭರಣಗಳು ಆಪತ್ಕಾಲದಲ್ಲಿ ನಮ್ಮ ನೆರವಿಗೂ ಬರುತ್ತವೆ.( ಕೆಲವೊಮ್ಮೆ ಆಪತ್ತನ್ನೂ ತರುತ್ತವೆ.) ನಮ್ಮ ಉಳಿತಾಯವನ್ನು ಇದರ ಮೂಲಕವೇ ಮಾಡಿಕೊಳ್ಳಬಹುದಾದ ಹಲವು ದಾರಿಗಳು ನಮ್ಮ ಮುಂದಿವೆ. ಅಂದ ಹೆಚ್ಚಿಸಲೂ ಆಯ್ತು. ಹಣದ ಸದ್ವಿನಿಯೋಗವೂ ಆಯ್ತು.

ಬಂಗಾರದೊಡವೆ ಬೇಕೇ ನೀರೇ.. ಎಂದು ಹೆಂಗಳೆಯರನ್ನು ಮಾತ್ರವೆ ಈಗ ಕೇಳಬೇಕಾಗಿಲ್ಲ. ಆಭರಣಗಳ ಆಸೆ ಕೇವಲ ಹೆಂಗಸರ ಸೊತ್ತಲ್ಲ.ಗಂಡಸರು ತರಹೇವಾರಿ ಆಭರಣಗಳನ್ನು ಆಸೆ ಪಟ್ಟು ಖರೀದಿಸಿ ತಮ್ಮ ಮೇಲೇರಿಸಿಕೊಳ್ಳುತ್ತಾರೆ.

ಒಮ್ಮೆ ಈ  ವಿಸ್ಮಯ ಲೋಕಕ್ಕೆ ನುಗ್ಗಿದರೆ ಮರಳಿ ಹೋಗುವುದು ಕಷ್ಟ. ನಮಗೆ ಇದರ  ಅಗತ್ಯ ಎಷ್ಟಿದೆ, ಮತ್ತು ಅದಕ್ಕೆ ನಮ್ಮ ಬಜೆಟ್  ಎಷ್ಟು ಎಂಬುದನ್ನು ನಾವೇ ನಿರ್ಧರಿಸಬೇಕು.ಒಂದಿಷ್ಟು ಹಣ ನಮ್ಮ ಮೊಗದಲ್ಲಿ ನಗು ತುಳುಕಿಸಿ ಹೆಮ್ಮೆಂದ ತಲೆ ಎತ್ತಿ ಓಡಾಡುವಂತೆ ಮಾಡುತ್ತದೆ ಎಂದಾದರೆ, ನಾವ್ಯಾಕೆ ಅದನ್ನು ಮಾಡಬಾರದು ನೀವೇ ಹೇಳಿ..  ?

Tuesday, September 20, 2011

ಹೂದೋಟ ....ಬಂಜರಾಗಿದ್ದ ಮನ ,ಅವನ
ಕಂಡೊಡನೆ ಮೆದುವಾಗತೊಡಗಿತ್ತು.

ಕಣ್ಣೋಟ ಬೆರೆತಾಗ
ಹಿಗ್ಗಿನ ವರ್ಷದಾರೆ ಸುರಿದಿತ್ತು .

ನೆನಪುಗಳೆಲ್ಲ  ಬಳಿ ಬಂದು
ಹೊಸ ಕನಸ ಬಿತ್ತಿತ್ತು .

ಕಾಯುವಿಕೆಯಲ್ಲೇ ಕುಡಿಯೊಡೆದು
ಹಸಿರಾಗತೊಡಗಿತ್ತು .

ಬಿಸಿಯುಸಿರಿನ ಸ್ಪರ್ಶಕ್ಕೆ
ಕೆನ್ನೆ ಕೆಂಗುಲಾಬಿ, ಮೊಗ ಕನ್ನೈದಿಲೆಯಾಗಿತ್ತು .

ಮನ ಮಲ್ಲಿಗೆಯಾಗಿ
ತನು ಸುಮ ಪರಿಮಳ ಸೂಸಿತ್ತು .

ಹೊಸ  ಭಾವವೇನೋ  ಮೂಡಿ
ಮೈಯ್ಯೇ  ಹೂದೋಟವಾಗಿತ್ತು ......


Friday, September 16, 2011

ಫಲ ವೈಭವ .. ಪ್ರಕೃತಿಯ ರಮ್ಯ ಕಾವ್ಯ                   ಉತ್ತರವೇ ಇರದ ಪ್ರಶ್ನೆ ಇದು ..  ಬೀಜ ಮೊದಲೋ ವೃಕ್ಷ ಮೊದಲೋ..


 ತಲೆ ಕೆಡಿಸಿಕೊಳ್ಳುವವರು ನಾವೇ   ..ಪ್ರಕೃತಿ ತನ್ನ ಪಾಡಿಗೆ ಕರ್ತವ್ಯವನ್ನು ಮಾಡುತ್ತಲೇ ಇರುತ್ತದೆ.


 ಹನಿ ನೀರ ಸಿಂಚನಕ್ಕೆ ಬೇರುಗಳನ್ನು ಭೂಮಿಯೊಳಕ್ಕಿಳಿಸಿ ಮಣ್ಣ ಪದರದಿಂದ ಬೇಕಾದ ಜೀವರಸವ ಹೀರಿ, ಚಿಗುರೊಡೆದು, ಮೇಲೆದ್ದು ಹಸಿರಾಗಿ  ಬೆಳೆದು ಎತ್ತರೆತ್ತರಕ್ಕೇರುವ  

 ಈ ಸೋಜಿಗ ನಿಧಾನಕ್ಕೆ ಹೂ ಬಿಟ್ಟು ಕಾಯಿ ಕಚ್ಚಿ ನಿಲ್ಲುವುದು ಮತ್ತೊಂದು ಅದ್ಭುತ.
ವಂಶಾಭಿವೃದ್ಧಿ ಮಾತ್ರ ಅದರ ಗುರಿ .. ನಮಗೋ ಅದರ ಬಣ್ಣ, ರುಚಿ , ಸುವಾಸನೆಗಳತ್ತಲೇ ನೋಟ.  

ತಾಯಿ ತನ್ನೊಡಲಲ್ಲಿ ಒಂಬತ್ತು ತಿಂಗಳು ಮಗುವನ್ನು ಹೊತ್ತಂತೆ ಪ್ರತಿ ಸಸ್ಯವೋ ತನಗೆ ಭಾರವಾಗುವಂತಹ ಹಣ್ಣು ಕಾಯಿಗಳನ್ನು ಹೊತ್ತು ನಿಲ್ಲುತ್ತದೆ. 

ಯಾರು ನೋಡದಿದ್ದರೆ ತನ್ನಿಂದ ತಾನೆ ಬಿದ್ದು ಭೂಮಿ ಸೇರಿ ಮತ್ತೊಂದು ಜೀವಕ್ಕೆ ನಾಂಧಿಯಾಗುತ್ತದೆ... ಹಾಗಂತ ಎಲ್ಲಾ ಹಣ್ಣಿನೊಳಗೂ  ಬೀಜ ಇದ್ದೇ ಇರಬೇಕೆನ್ನುವ ನಿಯಮವೇನಿಲ್ಲ. ಮತ್ಯಾರಿಗಾಗಿ ಹಣ್ಣನ್ನು ಹೊತ್ತು ನಿಲ್ಲುತ್ತದೆ... ? ಪ್ರಕೃತಿ ಎಂದರೆ ಎಲ್ಲಾ ಜೀವಜಾಲದ ತಾಯಿ ತಾನೆ? ಒಬ್ಬರಿಗೆ ನಿರುಪಯುಕ್ತವೆನಿಸಿದ್ದು ಇನ್ನೊಬ್ಬರ ಆಹಾರ.. ಮರ ಗಿಡಗಳು ಮಣ್ಣಿನಿಂದ ಪಡೆದದ್ದನ್ನೆಲ್ಲ ಮರಳಿ ಅಲ್ಲಿಗೆ ತಲುಪಿಸುತ್ತವೆ.. ತಮ್ಮದಾಗಿ ಏನನ್ನೂ ಉಳಿಸಿಕೊಳ್ಳದೆ .. ಹೆತ್ತೊಡಲಿಗೆ  ನೆರಳಾಗಿ ತಂಪು ನೀಡುತ್ತದೆ.   

ಮನುಷ್ಯನೂ ಅದರ ಒಂದು ಪುಟ್ಟ ಅಂಗ.. ತಾಯ ದೃಷ್ಟಿಯಲ್ಲಿ ಎಲ್ಲರಿಗೂ ಸಮಪಾಲು. ನಾವೋ ಸ್ವಾರ್ಥಿ ಮಕ್ಕಳು ನಮಗೆ ನಮ್ಮದೇ ಮೇಲು .. .. ಪಡೆದುಕೊಂಡದ್ದನ್ನು     ಮರಳಿ ನೀಡಲು ಸಾಧ್ಯವಿಲ್ಲವೆಂದಾದರೆ

. ನಮ್ಮ ಸುಮಧುರ ನಾಳೆಗಳಿಗಾಗಿ ಈ ಪ್ರಕೃತಿಯ ವೈಭವವನ್ನು
 ಹಾಳುಗೆಡವದಿರೋಣ.. 


ಮುಂದಿನ ಪೀಳಿಗೆಗೆ ಇವೆಲ್ಲ ಕೇವಲ ಚಿತ್ರಪಟ ಗಳಲ್ಲಿ ಮಾತ್ರ ಉಳಿಯದೆ ಕಣ್ಣಿಗೆ ಕಂಡು ಅನುಭವಿಸಲು ಆಗುವಂತಿರಲಿ. ಕಾಡತೊರೆ, ಉಲಿವ ಹಕ್ಕಿ , ಹಸಿರ ಸಿರಿ ಸೊಬಗು ಉಳಿಸೋಣ ಬೆಳೆಸೋಣ ...     

Monday, September 12, 2011

ಇಂದು ಇಂದಿಗೆ..
ತನ್ನದೇ ಎಲೆಯ ಅಚ್ಚು
ಪ್ರತಿಚಿಗುರ ಮೇಲೆ 
ಬರೆದ ಅಕ್ಷರಗಳು ಬೇರೆ ಬೇರೆ 
ತಿರುಗಿಸಿದರೆ ಪುಸ್ತಕದ ಹಾಳೆ 
 ಸುಲಭದಲಿ  ಮರೆತು ಬಿಡುತ್ತೇವೆ 
 ನಿನ್ನೆ ಇದ್ದಂತಿರದು ನಮ್ಮ ನಾಳೆ 

ನಡೆವ ಹೆಜ್ಜೆಗಳಿಗೆ ಕಡಿವಾಣ 
ನೋಡುವ ನೋಟದ ಕಟ್ಟು
ಇರಬೇಕಾದ ರೀತಿ ಇದು ಹೀಗೆಯೇ 
 ನೀತಿಪಾಠದ ಜೊತೆಗೆ ಹಾಕಿ ಚೌಕಟ್ಟು 
ಹಾರಬಯಸುವ ರೆಕ್ಕೆ ಗೋಡೆಯ ಮೇಲೇರಿದೆ 
ಬಲವಾದ ಮೊಳೆಯ ನಡುವಲ್ಲಿ ನೆಟ್ಟು 

 ತುಳಿದ ಹಾದಿಬದಿ  ತಂಪು ಇರಲಿ ಎಂಬಾಸೆಗೆ 
  ಹಸಿರ ಕೊಂಬೆಗಳ ಊರಿ 
ನಡೆದು ಬಿಡು ನನ್ನೊಡನೆ 
ಸುಲಭವಾಗಬಹುದು  ನಡೆವ ದಾರಿ 
ಸುಳ್ಳು ಸೋಗುಗಳ ನಿತ್ಯ ನಾಟಕದಲಿ 
ಸೋಲುತಿದೆ ಒಳ ಮನಸು ಬಾರಿ ಬಾರಿ

Sunday, September 11, 2011

ದಿಲ್ ಕಿ ಆವಾಜ್


..

ದಿಲ್ ಕಿ ಆವಾಜ್ ಸುನೋ .. ಎಂಬ ಮೊಬೈಲ್ ಸ್ವರ ಕೇಳುತ್ತಿದ್ದಂತೆ ಹತ್ತಿರವೇ ಇದ್ದ ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ,ಮೊಬೈಲ್ ಜೇಬಿಗಿಳಿಬಿಟ್ಟು  ಹಲೋ ಎಂದೆ. ಆ ಕಡೆಯಿಂದ ಅದೇ ಪರಿಚಿತ ಆಪ್ತ ಸ್ವರ. ಹಾಯ್ ಎಂದು ಉಲಿಯುವುದು ಕೇಳಿಸಿತು.  ..ನಾನು ಮಾತು ಶುರು ಮಾಡಬೇಕೆಂದು ಕೊಳ್ಳುವಾಗಲೇ ಅವರು ಬೇರೆ ಯಾರೊಂದಿಗೋ ಮಾತನಾಡುವುದು ಕೇಳಿಸಿತು. ಮತ್ತೊಮ್ಮೆ ಅವರ ಹಲೋ ಎಂಬ ಸ್ವರ ಕೇಳಿಸಲಿ ಎಂದು ನಾನು ನನ್ನ ಕೆಲಸದಲ್ಲಿ ಮಗ್ನಳಾದೆ.
ಮೂರು ನಾಲ್ಕು ನಿಮಿಷ ಕಳೆದಿರಬಹುದು. ಹಾಯ್ ಪುಟ್ಟೂ ಲೈನ್ ನಲ್ಲಿ ಇದ್ದೆಯಾ ಎಂಬ ವಾಣಿ ಮೊಳಗಿತು.ಹುಂ ಎಂದೆ. ಸರಿ ಎಂದು ಇನ್ನೇನು ಮಾತು ಪ್ರಾರಂಭವಾಗುತ್ತದೆ ಎನ್ನುವಾಗ ಅವರ ಇನ್ನೊಂದು ಮೊಬೈಲ್ ಹೊಡೆದು ಕೊಳ್ಳಲು ಶುರು ಆಯಿತು. ಒಂದು ನಿಮಿಷ ಎನ್ನುವ ಬೇಡಿಕೆ ಬಂತು. ಹುಂ ಎಂದೆ. ಯಾರಿಗೋ ಫೋನ್ ಮೂಲಕ ಸಲಹೆ ಸೂಚನೆಗಳನ್ನು ನಿಧಾನವಾಗಿ ಕೊಡುತ್ತಾ ಹೋದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಲೇ ಇದ್ದೆ. ಹತ್ತು ನಿಮಿಷ ಕಳೆದಿರಬೇಕು. ನನ್ನ ಕೈ ಆಗಲೇ ಯಾಂತ್ರಿಕವಾಗಿ ಸಾಂಬಾರಿಗೆ ಒಗ್ಗರಣೆ ಹಾಕಿ, ಒಲೆಯ ಮೇಲೆ ಪಲ್ಯ ಬೇಯಲಿಟ್ಟಿತ್ತು. ಸಿಕ್ಕಿಸಿ ಕೊಂಡ ಇಯರ್ ಫೋನ್ ನಿಂದಾಗಿ ಕೈಗಳು ಬಿಡುವಾಗಿಯೇ ಇದ್ದವು.
ಅಷ್ಟರಲ್ಲಿ ಅತ್ತೇ ಬಂದವರು ಸಾರಿಗೆ ಕೊತ್ತಂಬರಿ ಸೊಪ್ಪು ತುಂಡು ಮಾಡಿ ಫ್ರಿಡ್ಜ್ ನೊಳಗೆ ಇಟ್ಟಿದ್ದೇನೆ , ಹೇಳಲು ಮರೆತಿತ್ತು.ಸಿಕ್ಕಿತಾ ಎಂದರು. ನಾನು ಹುಂ ಎನ್ನುವಂತೆ ಕೇವಲ ತಲೆಯಲುಗಿಸಿದೆ. ಅದೇನೂ ಅಂತ ಇಡೀ ದಿನ ಹಾಡು ಕೇಳ್ತೀಯೋ ಎಂದು ಗೊಣಗುತ್ತಾ ಹೊರ ನಡೆದರು.
 ಈಗ ಪುನಾ ಮೊಬೈಲ್ ನಿಂದ ಸ್ಸಾರಿ ಮರಿ ಎಂಬ ನಿನಾಧ ಕೇಳಿ ಬಂತು. ಈಗ ಕಿವಿಗಳನ್ನು ಸೂಕ್ಷ್ಮ ವಾಗಿಸಿ ಮುಂದೇನು ಹೇಳುತ್ತಾರೆ ಎಂದು ಕೇಳಲು ಉತ್ಸುಕಳಾದೆ. ಅಷ್ಟರಲ್ಲಿ ಅವರ ಆಫೀಸ್ ನ ಯಾರಿಗೋ ಯಾವ ಯಾವ ಸಾಮಾನು ಒಟ್ಟಿಗೆ ಒಯ್ಯಬೇಕು ಎಂದು ಪಟ್ಟಿ ಮಾಡಿ ಹೇಳುವುದು, ಜೊತೆಗೆ ಇಷ್ಟು ವರ್ಷಗಳಿಂದ ಕೆಲಸ ಮಾಡ್ತೀರಿ ಸ್ವಲ್ಪ ಸ್ವಂತ ತಲೆ ಖರ್ಚು ಮಾಡಿ ಎಂದು ಎಂದು ಗದರಿಸುವುದು ಕೇಳಿಸಿತು. ಜೊತೆಗೆ ಅವರ ಪಕ್ಕದಲ್ಲಿರುವವರು ಏನೋ ಹೇಳುವುದು ಕೇಳಲು ತೊಡಗಿತು.
ನಾನು ಪಲ್ಯ ಇಳಿಸಿ, ತೆಂಗಿನ ತುರಿ ಬೆರೆಸಿ, ಬೇರೇ ಪಾತ್ರೆಗೆ ವರ್ಗಾಯಿಸಿ, ಅಡುಗೆ ಮನೆ ಸ್ವಚ್ಛ ಗೊಳಿಸಲು ಪ್ರಾರಂಭಿಸಿದೆ. ಪುನಃ ಪುಟ್ಟೂ ಇದ್ದೆಯಾ ಮಗಾ ಎಂಬ ಮಾತು ಕೇಳಿಸಿತು. ಹುಂ ಎಂದು ಸಣ್ಣ ಸ್ವರದಲ್ಲಿ ನುಡಿದೆ.ಹ್ಹ ಹ್ಹ ಎಂಬ ನಗು ಕೇಳಿಸಿತು ಆ ಕಡೆಯಿಂದ. ಜೊತೆಗೆ ಯಾವುದೋ ಪುಟ್ಟ ಮಗುವನ್ನು ಪ್ರೀತಿಯಿಂದ ಮಾತನಾಡಿಸುವುದು ಕೂಡಾ.. ದೂರ ಹೊರಟಿರಿ .. ಈ ರಾಜ ಕುಮಾರಿಯನ್ನು ಎತ್ಕೊಂಡು.. ಬಿಸಿಲು ಎಷ್ಟಿದೆ ನೋಡಿ .. ಛತ್ರಿ ನಾದ್ರೂ ತರಬಾರದಿತ್ತೆ..ಎಂದು ಕಾಳಜಿ ವಹಿಸುವುದು ಕೇಳಿಸಿತು. ಅದಕ್ಕೆ ಪಕ್ಕದವರೇನು ಉತ್ತರ ನೀಡಿದರೋ ತಿಳಿಯಲಿಲ್ಲ.. ನನ್ನದಷ್ಟರಲ್ಲಿ ಅಡುಗೆ ಮನೆ  ಸ್ವಚ್ಛ ಗೊಳಿಸಿ ಆಗಿತ್ತು. ಮೆತ್ತಗೆ ಹೊರ ಹೋಗಿ ದಿನ ಪತ್ರಿಕೆ ಕೈಯಲ್ಲಿ ಹಿಡಿದು ಕುಳಿತೆ.

 ಪುನಃ ಹಾಯ್ ಎಂಬ ಮಾತು ಕಿವಿ ತಟ್ಟಿತು. ಹುಂ ... ಹೇಳಿ ಎಂದೆ. ಅದೆನಾಯ್ತೂಂದ್ರೆ.. ಅಲ್ಲ ಎಷ್ಟು ಸಾರಿ ಹೇಳ್ಬೇಕು ನಿಂಗೆ... ಕಸ ಕ್ಲೀನಾಗಿ ಹೊಡೀಬೇಕೂಂತ..ಅದ್ಕೆ ಅಂತ ತಿಂಗಳು ತಿಂಗಳು ದುಡ್ಡು ಸುರೀತೀನಿ  ...ಆದ್ರೆ ನೀನು ಮಾಡೋ ಕೆಲಸ ನೋಡಿದ್ರೆ..   ನಾನು ಆಫಿಸ್ ನಲ್ಲಿ ಇರಲ್ಲ ಅಂತ ಗುಡಿಸಿದ ಶಾಸ್ತ್ರ  ಮಾಡಿ ಹೋಗಿ ಬಿಡ್ತೀಯ ಅಲ್ವಾ.. ನನ್ನ ಟೇಬಲ್ ಮೇಲೆ ಎಷ್ಟು ದೂಳು ಕೂತಿದೆ ಅಂತ ಹೋಗಿ ನೋಡು... ನೀನು ಮಾಡೋ ಕೆಲಸದ ಚಂದ ನಿಂಗೆ ತಿಳಿಯುತ್ತೆ.. ಇದೇ ಕೊನೆ....  ಇನ್ನೊಂದು ಬಾರಿ ಹೀಗೆ ಆದರೆ ನಾನು ತಿಂಗಳ ದುಡ್ಡು ಎಣಿಸಲ್ಲ.. ಅಷ್ಟೆ ಅಂತ ಸಿಟ್ಟಿನಲ್ಲಿ ಬಯ್ಯುವುದು ಕೇಳಿತು..

 ನಾನು ಪೇಪರ್ ನ ಹೆಡ್ ಲೈನ್ಸ್ ಓದಿ ಅಂಕಣಗಳತ್ತ ನೋಟ ಬೀರಿದೆ. ಅಷ್ಟರಲ್ಲಿ .. ಹ್ಹೆ.. ಪುಟ್ಟೂ ಸ್ಸಾರೀ ಮರಿ ... ಅರ್ಜೆಂಟಾಗಿ ಹೊರಗೆ ಹೋಗ್ಬೇಕು.. ನಿಂಜೊತೆ ಮಾತಾಡಿದ್ದು ಖುಷಿ ಆಯ್ತು.. ಟೇಕ್ ಕೇರ್ .. ಬೈ.. ಎಂಬ ಶಬ್ದ ದೊಂದಿಗೆ ಕಾರಿನ ಬಾಗಿಲು ಮುಚ್ಚಿ ಕೊಂಡ ಶಬ್ದವೂ ಸೇರಿ ಸಂಪರ್ಕ ಕಡಿಯಿತು. ನಾನು ಕಿವಿಯಿಂದ ಇಯರ್ ಫೋನ್ ತೆಗೆದಿರಿಸಿ ಪತ್ರಿಕೆ ಓದುವುದನ್ನು ಮುಂದುವರಿಸಿದೆ.. 
--