Pages

Total Visitors

Friday, July 15, 2016

ಒಲವೇ ನೀ ಬಂದು ನನ್ನ ಕಾಡಿದೆ ..

ಹೋಯ್ ಇಲ್ಲಿ ಬನ್ನಿ.. ಕೇಳಿತ್ತಾ.. ಎಲ್ಲಿದ್ದೀರಿ ಎಲ್ಲರೂ.. ಮಾವನ ತಾರಕ್ಕೇರಿದ ಸ್ವರ ಕೇಳಿ ಗಾಬರಿಯಿಂದ ಅವರಿದ್ದಲ್ಲಿಗೆ ಹೋದರೆ ಅವರೊಂದು ಕೋಣೆಯ ಕಡೆಗೆ ಕೈ ತೋರಿಸಿ ಅಲ್ಲಿ ಹಕ್ಕಿ ಉಂಟು ಅಂದರು.  ಒಂದು ಲೆಕ್ಕದಲ್ಲಿ ಗೋಡೌನ್ ಅನ್ನಬಹುದೇನೋ ಅದನ್ನು.  ಹಳೇ ಪೇಪರ್, ಹೊಲಿಗೆ ಮಿಷನ್, ಪೈಪ್ ಫಿಟ್ಟಿಂಗ್ಸ್ ಇಂತದ್ದೆಲ್ಲಾ ಅದರೊಳಗೆ ಇರುತ್ತಿದ್ದುದು.  ಮಳೆಗಾಲ ಹೊರಗಿನ ನೀರ ಇರಚಲು ಕೋಣೆಯೊಳಗೆ ಬರುತ್ತದೆ ಎಂದು ಮುಚ್ಚಿಯೇ ಇರುವ ಕಿಟಕಿಗಳ ಕೋಣೆ ಅದು. ಬಾಗಿಲೊಂದು ತೆರೆದಿರುತ್ತದೆ ಅಷ್ಟೇ,, ಆ ಬಾಗಿಲಿನ ಒಳಗೆ ಹಕ್ಕಿ ಬರಬೇಕಾದರೂ ಎರಡು ಕೋಣೆ ದಾಟಿಯೇ ಬರಬೇಕು..  ಎಲಾ ಹಕ್ಕಿಯೇ.. ಎಷ್ಟು ಸರ್ಕಸ್ ಮಾಡಿದೆ ಇದು ಎಂದುಕೊಂಡು ಬಾಗಿಲೊಳಗೆ ಇಣುಕಿದೆ. ಪುಟ್ಟ ನಸು ಹಳದಿ, ಒಂದಿಷ್ಟು ಹಸಿರಿನ ಬಣ್ಣದ ಉದ್ದ ಕೊಕ್ಕಿನ ಸನ್ ಬರ್ಡ್ ಅದು. ಬಲ್ಬಿನ ವಯರಿನಲ್ಲಿ ನೇತಾಡುತ್ತಾ ಕುಳಿತಿತ್ತು. ನನ್ನನ್ನು ಕಂಡದ್ದೇ ಮುಚ್ಚಿದ ಕಿಟಕಿಯ ಸರಳಿನ ಬಳಿ ಹೋಗಿ ಕುಳಿತು ಅಪಾಯಕಾರಿ ಪ್ರಾಣಿಯನ್ನು ನೋಡುವಂತೆ ನನ್ನ ಕಡೆ ನೋಡತೊಡಗಿತು.
ನನಗೋ ಅಷ್ಟು ಹತ್ತಿರದಲ್ಲಿ ಆ ಹಕ್ಕಿಯನ್ನು ನೋಡುವಾಗಿನ ಅಚ್ಚರಿ. ಯಾವಾಗಲೂ ಹೂಗಿಡಗಳ ಮೇಲೆ ಕೂತು ಕತ್ತು ಕೊಂಕಿಸಿ ಕೊಕ್ಕನ್ನು ಹೂವಿನೊಳಗೆ ತೂರಿ ಜೇನು ಹೀರುವ  ಈ ಹಕ್ಕಿಯನ್ನು ಕಂಡು  ನಾನು  ಇಲ್ಲೊಂದು ಚೆಂದದ ಹಕ್ಕಿ ಇದೆ, ಕ್ಯಾಮೆರಾ ತೆಗೊಂಡು ಬನ್ನಿ ಅಂತ ಬೊಬ್ಬೆ ಹೊಡೆದಾಗ ಇವರು ಎದ್ದೆನೋ ಬಿದ್ದೆನೋ ಎಂದು ಕ್ಯಾಮರಾ ಕೊರಳಿಗೇರಿಸಿ ಬಂದು ನೋಡಿದರೆ ಅಲ್ಲಿ ಕಾಣುವುದು ಇನ್ನೂ ಕಂಪಿಸುತ್ತಿರುವ ಹೂ ಮಾತ್ರ. ಅದು ಆಗಲೇ ಇನ್ನೆಷ್ಟೋ ಹೂಗಳ ಮಕರಂಧ ಹೀರಿ ಹಾರಿಯಾಗಿರುತ್ತದೆ. ಅಷ್ಟು ಅವಸರದ ಹಕ್ಕಿ ಅದು. ಈಗ ಕೈಗೆ ಸಿಗುವಷ್ಟು ಹತ್ತಿರದಲ್ಲಿದೆ ಎಂದರೆ ಅಚ್ಚರಿಯಲ್ಲದೆ ಮತ್ತೇನು?
ಆದರೇನು? ನೀಲ ಗಗನದಲ್ಲಿ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಯನ್ನು ಬಗಲಲ್ಲಿಟ್ಟುಕೊಳ್ಳಲಾಗುವುದೇ? ಅದನ್ನು ಹೊರಗೆ ಕಳಿಸುವುದೀಗ ನಮ್ಮ ಮಿಷನ್ ಆಗಿತ್ತು.  ನನ್ನನ್ನು ಕಂಡ ಗಾಭರಿಯಲ್ಲಿ ಮತ್ತೆ ಅತ್ತಿತ್ತ ಹಾರಾಡುವುದು, ಫ್ಯಾನಿನ ರೆಕ್ಕೆಯ ಮೇಲೆ ಕುಳಿತುಕೊಳ್ಳುವುದು ಮಾಡುತ್ತಿತ್ತು. ನಾನು ಅದು ಸ್ವಲ್ಪ ಸುದಾರಿಸಿಕೊಳ್ಳಲಿ ಎನ್ನುವಂತೆ ಸುಮ್ಮನೆ ನಿಂತೇ ಇದ್ದೆ. ಹಕ್ಕಿಗೇನನ್ನಿಸಿತೋ.. ಕೋಣೆಯ ಎಲ್ಲಾ ವಸ್ತುಗಳ ಅವಲೋಕನ ಮಾಡಹೊರಟಿತು.
ಹಳೆಯ ಲಾಂದ್ರದ ಪಕ್ಕ ಇನ್ನಷ್ಟು ಹಳೆಯ ಪ್ಲಾಸ್ಟಿಕ್ ಹೂಗಳ ಫ್ಲವರ್ ವಾಸ್ ಒಂದು ದೂಳು ತಿನ್ನುತ್ತಾ ಕುಳಿತು ಸುಮಾರು ವರ್ಷಗಳೇ ಕಳೆದಿತ್ತೇನೋ.. ಹಕ್ಕಿ ಮೆಲ್ಲನೆ ಹೋಗಿ ಅದರ ಮೇಲೆ ಕುಳಿತಿತು. ಹೂವಿನ ರಚನೆಗಳನ್ನು ಕೊಕ್ಕಿನಿಂದ ಕುಕ್ಕಿ ಅದು ನಿಜವಾದ ಹೂವೇನೋ ಎಂದು ಪರೀಕ್ಷೆ ಮಾಡಿತು. ಅಲ್ಲ ಎಂದು ಗೊತ್ತಾದರೂ ಅದಕ್ಕೆ ಕೋಣೆಯಲ್ಲಿದ್ದ ಉಳಿದ ನಿರ್ಜೀವ ವಸ್ತುಗಳಿಂದ ಆ ಹೂವಿನ ವಾಸಿನ ಮೇಲೆ ಪ್ರೀತಿ ಉಂಟಾಯಿತೇನೋ ಎಂಬಂತೆ ಅದರ ತುದಿಯಲ್ಲೇ ಕುಳಿತುಕೊಂಡಿತು. ಹೂವಿಗೀಗ ಜೀವ ಬಂದಂತಾ ಕಾಂತಿ.
 ನಾನು ಕೋಣೆಯ ಒಳಗೆ ಕಾಲಿಟ್ಟರೂ ಹಕ್ಕಿ ಹೂವನ್ನು  ಬಿಟ್ಟು ಕದಲಲಿಲ್ಲ. ಇವರ ಕ್ಯಾಮೆರಾದ ಕ್ಲಿಕ್ ಸದ್ದಿಗೂ ಅದು ಜಾಗ ಬಿಟ್ಟು ಏಳಲಿಲ್ಲ. ಸಮಯ ಸಾಧಿಸಿ ನಾನು ಕಿಟಕಿಯ ಬಾಗಿಲನ್ನು ತೆಗೆದಿಟ್ಟೆ. ಹೊರಗಿನ ಬೆಳಕು ಗಾಳಿ ನುಗ್ಗಿದೊಡನೆ ಹಕ್ಕಿ ಪಕ್ಕನೆದ್ದು ಕಿಟಕಿಯಿಂದ ಹೊರ ಹಾರಿತು.
ಹಕ್ಕಿ ಹಾರಿ ಹೋಗಿ ಎಷ್ಟೋ ಹೊತ್ತಿನವರೆಗೂ ಕಂಪಿಸುತ್ತಿದ್ದ ಹೂವುಗಳು ಮತ್ತೆ  ನಿರ್ಜೀವವಾದವು. ಅದರ ಮೇಲ್ಭಾಗದಲ್ಲಿ ಉದುರಿದ್ದ ಪುಟ್ಟ ಗರಿಯೊಂದು ಈ ಎಲ್ಲಾ ಘಟನೆಗಳು ನಡೆದಿದೆ ಎನ್ನಲಿಕ್ಕೆ ಏಕ ಮಾತ್ರ ಸಾಕ್ಷಿಯಾಗುಳಿದಿತ್ತು.


Monday, July 11, 2016

ಸಮುದ್ರದ ಕಥೆಗಳು

೧. 
ಸೋಮೇಶ್ವರದ ಸಮುದ್ರ ಭೋರ್ಗರೆಯುತ್ತಿತ್ತು.  ಬೇಸಗೆಯ ಕಾಲದಲ್ಲಿ  ಸಂಕೋಚದಿಂದ ಬಂಡೆಗಳನ್ನು  ಸೋಕಿ ಹಿಂತಿರುಗುತ್ತಿದ್ದ ಅಲೆಗಳು ಈಗ ಅವುಗಳ ಮೇಲೆ ಬೆಳ್ನೊರೆಯ ಚಾದರ ಹಾಸಿ ಹಕ್ಕು ಸ್ಥಾಪಿಸಿದ್ದವು. ಗಾಳಿಗೆ ತೂಗಾಡುವ ತೆಂಗಿನಮರಗಳು, ಹಾರಾಡುವ ಹಕ್ಕಿಗಳು ಸಮುದ್ರವನ್ನೇ ಅಚ್ಚರಿಯಿಂದ ನೋಡುವ ಜನರ ಗುಂಪು, ಅಲೆಗಳಲ್ಲಿ ಪಾದಗಳನ್ನು ತೋಯಿಸಿ ನಾಚಿಗೆಯ ನಗು ನಗುವ ಪ್ರೇಮಿಗಳು,  ಇವೆಲ್ಲವೂ ನನಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅವನು ಬಂಡೆಯಾಚೆಯಿಂದ ಏರುತ್ತಾ ಬರುತ್ತಿದ್ದ.
 ಸುಮಾರು ಅರವತ್ತು ವಯಸ್ಸು ದಾಟಿತ್ತೇನೋ  ಪ್ರಾಯ. ಗಂಭೀರ ಮುಖಭಾವ ಅವನ ವಯಸ್ಸಿಗಿಂತ ಹಿರಿಯನನ್ನಾಗಿ ತೋರಿಸುತ್ತಿತ್ತು.  ಮಾಸಿದ ಅಂಗಿ,  ಮಡಚಿ ಕಟ್ಟಿಕೊಂಡ ಹೂವಿನ ಡಿಸೈನ್ ಹೊತ್ತ ಪಂಚೆ. ಹಿಂಬಾಗ ತಳೆದು ನೆಲಕ್ಕೆ ಒರೆಸುವಂತಿದ್ದ ಹವಾಯಿ ಚಪ್ಪಲಿ ಸಂಜೆಯನ್ನು ಆಹ್ಲಾದಕರವಾಗಿ ಕಳೆಯ ಬಂದವರ ಪಟ್ಟಿಗೆ ಆತನನ್ನು ಸೇರಿಸುತ್ತಿರಲಿಲ್ಲ.  ಒಂದು ಕೈಯಲ್ಲಿ ಹಳೆಯ ತಂಗೀಸಿನ ಚೀಲ ತುಂಬಿಕೊಂಡ ಭಾರದಿಂದ ಒಂದು ಬದಿಗೆ ವಾಲಿದಂತಿತ್ತು. ಇನ್ನೊಂದು ಕೈಯಲ್ಲಿ ಗಾಳ.  ಜಾರುವ ಬಂಡೆಯ ಅಂಚಿನಲ್ಲಿ ಜಾಗ್ರತೆಯಾಗಿ ಕುಳಿತುಕೊಂಡ. 
ಮೀನುಗಳ ಪ್ರಾಣ ತೆಗೆಯುವವನಿಗೆ ತನ್ನ ಪ್ರಾಣದ ಬಗ್ಗೆ ಅದೆಷ್ಟು ಕಾಳಜಿ..!! 
 ಸಮುದ್ರದ ಕಡೆಗೆ ಮುಖ ಮಾಡಿ ಕಾಲು ಚಾಚಿ ನಿರಾಳವಾಗಿ ಕುಳಿತುಕೊಂಡವನು ತನ್ನ ಚೀಲವನ್ನು ಒಂದು ಬದಿಗಿರಿಸಿಕೊಂಡ. ಗಾಳದ ತುದಿಗೆ ಏನನ್ನೋ ಕಟ್ಟಿದ.  ಸಮುದ್ರದೊಳಗೆ ಎತ್ತಿ ಎಸೆದ. ಅಲೆಗಳ ರಭಸ ಅವನ ಗಾಳದ ತುದಿಯನ್ನು ಅತ್ತಿತ್ತ ಎತ್ತಿ ಹಾಕುತ್ತಿತ್ತು. ಅವನ ಕೈಗಳು ಅಲುಗಾಡದೇ ನಿಂತಿತ್ತು. ಕಣ್ಣುಗಳು ನೀರಿನಾಳವನ್ನು ಬಗೆದು ನೋಡುವಂತೆ ತೀಕ್ಷ್ಣವಾಗಿತ್ತು. ಇದ್ದಕ್ಕಿದ್ದಂತೆ ಅವನ ಮುಖದ ಗಂಟುಗಳು ಸಡಿಲಾದವು. ತುಟಿಯಂಚು ಕೊಂಚ ಅಗಲವಾಗಿ, ನಗು ನಾನಿದ್ದೇನೆ ಎಂದು ಬಾಗಿಲ ಬಳಿ ನಿಂತಿತು. 
ಯಾವುದೋ ಮೀನು ಹಸಿವಿನಾಸೆಗೆ ಬಂದು ಬಲಿ ಬಿದ್ದು ಗಾಳಕ್ಕೆ ಸಿಲುಕಿ ಒದ್ದಾಡುವಾಗ ತನ್ನ ಹೊಟ್ಟೆ ತುಂಬುವಾಸೆಯ ಸ್ವಾರ್ಥದ  ನಗುವೇನೋ ಅದು.. !!
ಗಾಳ ಹಿಡಿದೆತ್ತಿ ಮತ್ತೆ ಮತ್ತೆ ನೀರಿಗೆಸೆಯುವುದು ಹೊರ ತೆಗೆಯುವುದು ಮಾಡುತ್ತಲೇ ಇದ್ದ. ಒಮ್ಮೆ ಗಾಳವನ್ನೆಳೆದುಕೊಂಡು  ಚೀಲದೊಳಗೆ ಕೈಯಾಡಿಸಿದವನ ಕೈ ಖಾಲಿಯಾಗಿಯೇ ಹೊರ ಬಂತು. ಇಷ್ಟು ಬೇಗ ಖಾಲಿಯಾಯಿತೇ ಎಂಬ ಅಪನಂಬಿಕೆಯಿಂದ ಮತ್ತೊಮ್ಮೆ ಕೈಯಾಡಿಸಿ ಒಳಗೇನೂ ಇಲ್ಲ ಎಂದು ನಿರ್ಧಾರವಾದ ಮೇಲೆ ಕೈ ಹೊರ ತೆಗೆದ. ಹಿಂತಿರುಗಿ  ಇಳಿಜಾರಿನ ಬಂಡೆಯಲ್ಲಿ ಇಳಿಯುವಾಗ ಕಾಲು ಜಾರಿ ಸರಕ್ಕೆಂದು ಮರಳಿನ ಮೇಲೆ ಬಿದ್ದ. 
ತಂಗೀಸಿನ ಚೀಲ ಒಂದು ಕಡೆಗೆ ಗಾಳ ಇನ್ನೊಂದು ಕಡೆಗೆ. ಬಿದ್ದವನು ಏಳಲೆಂದು ಜಾರುವ ಮರಳನ್ನೇ ಆಧಾರವಾಗಿಸಲು ಪ್ರಯತ್ನ ಪಡುತ್ತಿದ್ದ. ಅಲ್ಲೇ ಇದ್ದ ನಾನು ಕೈ ಹಿಡಿದು ಎತ್ತಬಹುದಿತ್ತು. ಆದರೆ  ನನ್ನ ಕಣ್ಣುಗಳು ಅವನ ಚೀಲದ ಕಡೆಗಿತ್ತು. ಅದು ಖಾಲಿಯಾಗಿತ್ತು. ಹಾಗಿದ್ದರೆ ಅವನು ಇಷ್ಟು ಹೊತ್ತು ಗಾಳ ಹಾಕಿ ಹಿಡಿದ ಮೀನುಗಳೆಲ್ಲಾ ಎತ್ತ ಹೋದವು? ಗಾಳದ ಕಡೆಗೆ ನೋಡಿದೆ. ಅದರ ತುದಿಯಲ್ಲಿ ಕೊಕ್ಕೆಯೇ ಇರಲಿಲ್ಲ. 
ಓಹ್.. ನಾನು ಅವನ ಕೈ ಹಿಡಿದು ಎತ್ತುವ ಮೊದಲೇ ಆತ ಮೆಲ್ಲನೆ ಗಾಳವನ್ನು ಮಡಿಚಿ ಕೈಯಲ್ಲಿ ಹಿಡಿದ. ತಂಗೀಸು ಚೀಲವನ್ನು ಹಿಡಿದುಕೊಂಡು ಎದ್ದಿದ್ದ.  ನನ್ನ ಕಡೆಗೂ ನೋಡದೆ ಹಿಂತಿರುಗಿ ಹೋಗುತ್ತಿರುವವನ್ನು ನೋಡುವ ನನ್ನ ಕಣ್ಣುಗಳ ಭಾವ ಬದಲಾಗಿತ್ತು. 

೨. 

ಸಮುದ್ರ ದಂಡೆ ಉದ್ದಕ್ಕೆ  ಹಾದು ಹೋಗಿತ್ತು. ಅಲೆಗಳು ಹೊರಳಿ ಮರಳಿ ದಡವನ್ನೇ ಪ್ರೀತಿಸುತ್ತಿದ್ದವು.  ಪುಟ್ಟ ಕೆಂಪು ಬಣ್ಣದ ಏಡಿಯೊಂದು ಮರಳಿನ ಪೊಟರೆಯಿಂದ  ಹೊರ ಬಂದು ಇನ್ನೊಂದು ತೂತಿನೊಳಕ್ಕೆ ಇಳಿಯಿತು. ಹದ್ದುಗಳು ಕಾಗೆಗಳು ನಿರಾಸೆಯಿಂದ  ನಿಟ್ಟುಸಿರಿಟ್ಟವು. ಸಮುದ್ರ ಅವರನ್ನು ನೋಡಿ ಅಟ್ಟಹಾಸದ ನಗೆ ನಕ್ಕಿತು. ಕಪ್ಪು ದೊಡ್ಡ ಬಂಡೆಯೊಂದರ ಮೇಲೆ ನಿಂತಿದ್ದ ಪ್ರೇಮಿಗಳು ಸಮುದ್ರದ ಬೋರ್ಗರೆತಕ್ಕೆ ತಮ್ಮ ಸಲ್ಲಾಪ ಕೇಳಿಸದೇನೋ ಎಂಬಂತೆ ಕೈಯೊಳಗೆ ಕೈಯನ್ನಿಟ್ಟು. ಕೆನ್ನೆಗೆ ಕೆನ್ನೆ ಒತ್ತಿ  ಕಿವಿಗಳಲ್ಲೇ ಪಿಸುಗುಟ್ಟುತ್ತಿದ್ದರು.  ಕಡಲ  ಹಕ್ಕಿಯೊಂದು ಸುಯ್ಯನೆ ನೀರ ಮೇಲಿಳಿದು ಮೇಲೇರಿ ಕೊಕ್ಕಿನಲ್ಲೇನೋ ಕಚ್ಚಿಕೊಂಡು ಹಾರಿತು. ಅಲೆಗಳೊಂದಿಗೆ ಬರುವ ಮೀನಿಗಾಗಿ ಬಲೆ ಹಾಕಿ ಕಾದವನೊಬ್ಬ ಹಕ್ಕಿಯನ್ನು ಶಪಿಸತೊಡಗಿದ. ಮೂರ್ನಾಲ್ಕು ನಾಯಿಗಳು ಸಮುದ್ರದ ಮೊರೆತವನ್ನು ಜೋಗುಳವೇನೋ ಎಂಬಂತೆ ಕೇಳುತ್ತಾ ತೂಕಡಿಸುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ನಾಯಿ ಎದ್ದು ಬೊಗಳತೊಡಗಿತು. ಅನತಿ ದೂರದಲ್ಲಿ ಕಡು ಕಪ್ಪು ಬಣ್ಣದ ನಾಯಿ ಒಂದು ಮುಖ ತಗ್ಗಿಸಿ ಬಾಲ ಅಲ್ಲಾಡಿಸುತ್ತಾ ಆಗಾಗ ಬಗ್ಗಿ ಸಲಾಮು ಹೊಡೆಯುತ್ತಾ ನಿಮ್ಮ ಪರಿಧಿಯೊಳಗೆ ಬರಬಹುದೇ ಎಂದು ಅಪ್ಪಣೆ ಬೇಡುತ್ತಿತ್ತು. ಉಳಿದೆರಡು ನಾಯಿಗಳು ರಭಸದಿಂದ ಅದರ ಬಳಿಗೆ ಹೋಗಿ ಸುತ್ತ ಮುತ್ತ ತಿರುಗಿ ಪರಿಚಿತ ಎಂದಾದ ಮೇಲೆ ಮರಳಿ ತಮ್ಮ ಸ್ಥಾನಕ್ಕೆ ಮರಳಿದವು. ಹೊಸದಾಗಿ ಬಂದ ನಾಯಿ ಈಗ ಎದೆ ಸೆಟೆಸಿ ಒಳ ಬಂದು ಉಳಿದವರಂತೆ  ಸಮುದ್ರ ನೋಡುತ್ತಾ ಜೂಗರಿಸತೊದಗಿತು. . 
ಪತ್ರಿಕೆಯನ್ನು ಹಿಡಿದು ಬಂದ ವಯಸ್ಸಾದವರೋರ್ವರು ತಮ್ಮ ಚಪ್ಪಲಿಯನ್ನೇ ತಲೆದಿಂಬಾಗಿ ಇಟ್ಟು ಬಂಡೆಯ ಮೇಲೆ ಮಲಗಿ ಓದತೊಡಗಿದರು. ಅವರ ಮಿತ್ರರೊಬ್ಬರು ಅವರ ಪಕ್ಕದಲ್ಲೇ ಕಾಲು ಚಾಚಿ ಆಗಸದಲ್ಲಿ ಇನ್ನಷ್ಟೇ ಹುಟ್ಟಬೇಕಿರುವ ನಕ್ಷತ್ರಗಳನ್ನು ನಿರೀಕ್ಷಿಸುತ್ತಾ ಮಲಗಿದರು. ಯುವತಿಯರ  ಗುಂಪೊಂದು ಸಮುದ್ರ ನೋಡಲೆಂದು ಬಂದವರು ತಮ್ಮ ಫೊಟೋಗಳನ್ನು ತೆಗೆಯುತ್ತಾ ಸಮುದ್ರವನ್ನು ಮರೆತೇಬಿಟ್ಟರು. ನಾಲ್ಕಾರು ಯುವಕರು ಜೊತೆ ಜೊತೆಯಾಗಿ ಹರೆಯದ ಕಣ್ಣುಗಳ ಮಿಲನಕ್ಕೆ ಕಾತರಿಸುತ್ತಾ ಸಮುದ್ರದ ದಂಡೆಯಲ್ಲೇ ಕುಳಿತರು.ಪುಟ್ಟ ಪೋರನೊಬ್ಬ  ತನ್ನದೇ ಚಡ್ಡಿಯನ್ನು ಸಮುದ್ರದತ್ತ ಎಸೆದು ಅದು ಮರಳಿ ಬಾರದಿರುವುದನ್ನು ಕಂಡು ಅಳುತ್ತಿದ್ದರೆ ಅವನ ಜೊತೆಗೆ ಬಂದ ಹಿರಿಯರು ನಗುತ್ತಿದ್ದರು.  
 ಅಲ್ಲೇ ದಂಡೆಯಲ್ಲಿ ಮಾರುತ್ತಿದ್ದ ಉಪ್ಪು  ಮೆಣಸು ಹಾಕಿದ ಉದ್ದುದ್ದ ಮಾವಿನ ಹೋಳುಗಳ ರುಚಿ ನಾಲಿಗೆಗೆ ತಾಗುತ್ತಿದ್ದಂತೆಯೇ ಮನಸ್ಸಿನೊಳಗೂ ಚುರುಕು ಮುಟ್ಟಿಸಿತೇನೋ ಎಂಬಂತೆ ಕಿರುಚಿದ ಸುಂದರ ಕಪ್ಪು ಕಣ್ಣುಗಳ ಒಡತಿಯನ್ನು ಹಲವಾರು ಕಣ್ಣುಗಳು ಅರಳಿ ನೋಡಿದವು. 
ಸೂರ್ಯ ಇದೆಲ್ಲಾ ನನ್ನದೇ ಒಡೆತನದ ರಾಜ್ಯ ಎಂಬಂತೆ ಕೆಂಪು ಶಾಯಿಯ ಮುದ್ರೆಯನ್ನು ಎಲ್ಲೆಡೆಗೊ ಒತ್ತಿ ಪಶ್ಚಿಮದ ಅರಮನೆಯತ್ತ  ಹಾಕಿದ. 
ಇಷ್ಟೆಲ್ಲಾ ಆಗುತ್ತಿದ್ದರೂ ಸೋಮಾರಿ ಸಂಜೆಯೊಂದು ತಣ್ಣಗೆ ಮಲಗಿತ್ತು. 

೩. 
 ಆಕಾಶ ನೀಲಿಯ ಅಂಗಿ, ಮಾಸಲು ಮಣ್ಣಿನ ಬಣ್ಣದ ಪ್ಯಾಂಟು ಹಾಕಿದ ಆತ ಹಿಡಿದ ಚೀಲದಲ್ಲಿ ಬಗೆ ಬಗೆಯ ತರಕಾರಿಗಳ ರಾಶಿ ಇತ್ತು.  ಅದರ ತೂಕಕ್ಕೆ ವಾಲಿದಂತೆ ನಡೆಯುತ್ತಿದ್ದರೂ ಅವನ ನಡಿಗೆ ನಿರ್ದಿಷ್ಟ ಜಾಗದ ಕಡೆಗೇ ಇತ್ತು. ಅಲೆಗಳು ಬಡಿಯುತ್ತಿದ್ದ ಬಂಡೆಯ ಸೀಳಿನ ತುದಿಯಲ್ಲಿ ಜಾಗ ಹಿಡಿದು ಕುಳಿತುಕೊಂಡ. ಕೈಯಲ್ಲಿ ಹಿಡಿದ ಗಾಳದ ತುದಿಗೆ ತರಕಾರಿಗಳನ್ನು ಸಿಕ್ಕಿಸಿ ಸಮುದ್ರದೆಡೆಗೆ ಎಸೆಯುತ್ತಿದ್ದ. ಅದು ಒಮ್ಮೊಮ್ಮೆ ಭಾರಕ್ಕೆ ಜಗ್ಗಿದಂತೆ ಕಂಡರೂ ಅವನು ಎಳೆದಾಗ ಅದರ ತುದಿಯ ತರಕಾರಿ ಹಾಗೇ ಉಳಿದಿರುತ್ತಿತ್ತು. ಈಗ ಬೇರೆ ಬಗೆಯ ತರಕಾರಿ.. ಮತ್ತೆ ಮತ್ತೆ ಅದೇ ಪ್ರಯತ್ನ. ನಿರಾಸೆಯಲ್ಲದೇ ಮತ್ತೇನೂ ಅವನ ಗಾಳಕ್ಕೆ ಬೀಳಲಿಲ್ಲ. ಸಿಟ್ಟಿನಿಂದ ಗಾಳವನ್ನೇ ಸಮುದ್ರದತ್ತ ಎಸೆಯುವ ಪ್ರಯತ್ನದಲ್ಲಿ ವಾಲಿ ಸಮುದ್ರಕ್ಕೆ ಬಿದ್ದ. ಅಲೆಗಳೆತ್ತ ಕೊಂಡೊಯ್ದವೋ ಕಾಣಲೇ ಇಲ್ಲ. 
ಎರಡು ದಿನ ಕಳೆದ ಮೇಲೆ ಪೇಪರಿನ ಒಂದು ಮೂಲೆಯಲ್ಲಿ ಸಣ್ಣ ಸುದ್ದಿಯೊಂದಿತ್ತು.
ಮೀನುಗಳು ತಿಂದು ಗುರುತು ಸಿಗದಂತಾದ ದೇಹವೊಂದು ಸಮುದ್ರ ದಂಡೆಯಲ್ಲಿ ಸಿಕ್ಕಿದೆ.  ತೆಳು ನೀಲಿ ಬಣ್ಣದ ಅಂಗಿ, ಮಾಸಲು ಮಣ್ಣಿನ ಬಣ್ಣದ ಪ್ಯಾಂಟು ಧರಿಸಿದ್ದ ಈ ವ್ಯಕ್ತಿಯ ವಿವರ ತಿಳಿದವರು ವೆನ್ಲಾಕ್ ಆಸ್ಪತ್ರೆಯ ಶವಾಗಾರ ಸಂಪರ್ಕಿಸಿ. 


Tuesday, April 26, 2016

ಸತ್ತವರನ್ನು ಬದುಕಿಸುವ ಹಕ್ಕಿ


ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ಅವಸರ ಅವಸರವಾಗಿ ತಿಂಡಿ ತಿಂದು ಮನೆಯ ಹೊರಗೆ ಕಾದಿರುತ್ತಿದ್ದ ಗೆಳತಿ ನೈನಾಳ ಜೊತೆ  ಗದ್ದೆ ಬಯಲಿಗೆ ಆಟವಾಡಲು ಹೋಗುತ್ತಿದ್ದೆ. ವಠಾರದ ಹುಡುಗರ ಗುಂಪು ಅಲ್ಲಿ ಚಿಣ್ಣಿ ಕೋಲು ಆಡುತ್ತಿತ್ತು. ಹಾಗಂತ ನಾನು ಮತ್ತು ನೈನಾ ಅದರ ವೀಕ್ಷಕರಾಗಿ ಹೋಗುತ್ತಿದ್ದುದೇನಲ್ಲ. ಅಲ್ಲಿ ತಲುಪುವವರೆಗೆ ಗೆಳತಿಯರಾಗಿ ಕೈ ಹಿಡಿದು ನಡೆಯುತ್ತಿದ್ದ ನಾವು ಅಲ್ಲಿಗೆ ತಲುಪಿದ ಕೂಡಲೆ ವಿರುದ್ಧ ಬಣಗಳ ಆಟಗಾರರಾಗುತ್ತಿದ್ದೆವು.
ಆಟ ಬಹಳ ಬಿರುಸಿನಿಂದ ಸಾಗಿತ್ತು. ನಾನು ಹಾರಿಸಿ ಹೊಡೆದ ಕೋಲು ಗದ್ದೆಯ ಬದಿಯ ಬೇಲಿಯ ಸಾಲಿಗೆ ಬಿತ್ತು. ಕೂಡಲೇ ಪರ ಪರ ಸದ್ದಿನೊಂದಿಗೆ ಹೊರ ಬಂದ ಹಕ್ಕಿಯೊಂದು ರೆಕ್ಕೆಗಳನ್ನು ಬಡಿಯುತ್ತಾ ಹೊರ ಹಾರಿತು.  ನೋಡೇ  ಹಕ್ಕಿ ಎಂದು ಗೆಳತಿಯನ್ನು ಕರೆದು ಅದು ಹಾರಿದ ಕಡೆಗೆ ಕೈ ತೋರಿದೆ. ಯಾಕೋ ಮಾತಿಲ್ಲದೆ ಮೌನವಾದಳು.
ಆಟ ಎಷ್ಟೇ ರಸವತ್ತಾಗಿರಲಿ ಸಂಜೆ ಆರು ಗಂಟೆಯೊಳಗೆ ಮನೆ ಸೇರದಿದ್ದರೆ ಕೈಯಲ್ಲಿ ಬೆತ್ತ ಝಳಪಿಸುತ್ತಾ ಬರುವ ಅಮ್ಮ ಕಾಣಿಸಿಕೊಳ್ಳುವ ಭಯವಿದ್ದ ಕಾರಣ ಆಟ ನಿಲ್ಲಿಸಿ ಮನೆಯ ಕಡೆ ಹೊರಟೆ.  ಅಲ್ವೇ.. ಆಗ ಹಕ್ಕಿ ತೋರಿಸಿದರೆ ಮಾತೇ ಆಡ್ಲಿಲ್ವಲ್ಲೇ ಯಾಕೇ? ಎಂದೆ.
 ನಿಂಗಷ್ಟು ಬುದ್ಧಿ ಬೇಡ್ವೇನೇ.. ಅದು ಅದೃಷ್ಟದ ಹಕ್ಕಿ. ಅದನ್ನು ನೋಡಿದವರಿಗೆ ಅದೃಷ್ಟ ಬರುತ್ತೆ. ಆದ್ರೆ ಅವರು ಹಕ್ಕಿ ನೋಡಿದ್ದನ್ನು ಯಾರಿಗೂ ಹೇಳಬಾರದು. ನೀನು ನೋಡಿಯೂ ಪ್ರಯೋಜನ ಇಲ್ಲದೇ ಹೋಯ್ತು, ನೀನು ಹೇಳದೇ ಇದ್ದಿದ್ದರೆ ಇವತ್ತು ನಿಮ್ಮ ಟೀಮ್ ಗೆಲ್ತಿತ್ತು ಗೊತ್ತಾ  ಎಂದಳು.
ಅಚ್ಚರಿಯಿಂದ ಅವಳು ಹೇಳುವುದನ್ನು ಕೇಳಿಸಿಕೊಂಡ ನಾನು ಆ ದಿನ ಕಳೆದುಕೊಂಡ ನನ್ನ ಅದೃಷ್ಟಕ್ಕಾಗಿ ಮರುಗಿದೆ.
ಮರುದಿನ ಶಾಲೆಗೆ ನೈನಾಳ ಜೊತೆಗೆ ಹೊರಟರೂ ನನ್ನ ಕಣ್ಣು ಹಾದಿ ಬದಿಯ ಬೇಲಿ, ಮರ ಗಿಡ, ಪೊದರುಗಳ ನಡುವೆ ನುಸುಳಿ ನುಸುಳಿ ಮರಳುತ್ತಿತ್ತು. ಎಲ್ಲಿಯಾದರೂ ಅದೃಷ್ಟದ ಹಕ್ಕಿ ಮತ್ತೊಮ್ಮೆ ಕಂಡರೆ, ಇವತ್ತು ಶಾಲೆಯಲ್ಲಿ ಹೋಮ್ವರ್ಕ್ ಮಾಡದಿದ್ದರೂ, ಸರಿಯುತ್ತರ ಹೇಳದಿದ್ದರೂ ಟೀಚರುಗಳು ಬಯ್ಯದಂತೆ ನನ್ನ ಅದೃಷ್ಟ ಕೆಲಸ ಮಾಡೀತೇನೋ ಎಂಬ ದೂರದ ಆಸೆ. ಸ್ವಲ್ಪ ದೂರ ನಡೆಯುತ್ತಲೇ ನೈನಾ  ನೋಡೇ ನೀನು ನನ್ನ ಬೆಸ್ಟ್ ಫ್ರೆಂಡ್ ಅಂತ ನಿಂಗೊಂದು ಗುಟ್ಟಿನ ಸುದ್ದಿ ಹೇಳ್ತೀನಿ, ಆದ್ರೆ ಅದನ್ನು ನೀನ್ಯಾರಿಗೂ ಹೇಳಬಾರದು ಎಂದು ಪ್ರಾಮಿಸ್ ಮಾಡಿಸಿಕೊಂಡಳು.
ಅವಳು ಮಾತು ಶುರು ಮಾಡುವುದನ್ನೇ ಕಾದೆ.
ನೋಡೇ, ಯಾರಾದ್ರೂ ಸತ್ರೆ ಏನ್ಮಾಡ್ತಾರೆ ಹೇಳು ಅಂದಳು.
ಆವತ್ತು ಹಿಂದಿನ ಮನೆಯ ತಾತ ಸತ್ತಿದ್ದಾಗ  ದೂರದಲ್ಲೆಲ್ಲೋ ಕೊಂಡೊಯ್ದು  ಸುಟ್ಟು ಹಾಕಿದ ಸುದ್ದಿಯನ್ನು ಕೇಳಿಸಿಕೊಂಡಿದ್ದೆ. ನನಗೇನೋ ಅವರೇನು ಮಾಡ್ತಾರೆ ಅಂತ ನೋಡುವ ಕುತೂಹಲ ಇದ್ದರೂ ಅಮ್ಮ ಹೋಗಲು ಬಿಟ್ಟಿರಲಿಲ್ಲ. ಮಕ್ಕಳೆಲ್ಲಾ ಅಲ್ಲಿಗೆ ಹೋಗಬಾರದು ಎಂದು ತಡೆದಿದ್ದಳು.
ಹಾಗಾಗಿ ನಾನು ಕೇಳಿ ತಿಳಿದಿದ್ದ ಸುದ್ದಿಯನ್ನೇ ಅವಳಿಗೆ ಹೇಳಿದೆ.
ಹೂಂ ಎಂದು ಒಪ್ಪಿದಂತೆ ತಲೆದೂಗಿಸಿ ಮಾತು ಮುಂದುವರಿಸಿದಳು.  ಆದ್ರೆ ಅವರನ್ನು ಮತ್ತೆ ಬದುಕಿಸಬಹುದು ಅಂತ ನಿಂಗೆ ಗೊತ್ತಾ ಎಂದಳು.
ಹೌದಾ.. ಎಂದು ಬಾಯ್ತೆರೆದು ನಿಂತೆ.  ಯಾರಿಗೂ ಗೊತ್ತಿಲ್ಲದಂತಹ ರಹಸ್ಯವೊಂದು ನನ್ನೆದುರು ಅನಾವರಣಗೊಳ್ಳಲಿತ್ತು.
ಹೂಂ ಕಣೇ.. ನಿಜವಾಗಿಯೂ.. ನಿನ್ನೆ ನೋಡಿದ್ದ ಅದೃಷ್ಟದ ಹಕ್ಕಿ ಗೊತ್ತಲ್ಲಾ .. ಆ ಹಕ್ಕಿಯಿಂದ ಮನುಷ್ಯರನ್ನು ಬದುಕಿಸಬಹುದು ಎಂದಳು.
ನನಗೀಗ ನನ್ನ ಗೆಳತಿ ಪ್ರಪಂಚದ ಅತ್ಯದ್ಭುತ ವ್ಯಕ್ತಿಯಂತೆ ಕಾಣಿಸತೊಡಗಿದಳು. ಮತ್ತು ಅವಳು ಹೇಳ ಹೊರಟಿರುವ ವಿಷಯದ ಗಹನತೆಯೂ ನನ್ನರಿವಿಗೆ ಬಂದು ಗಂಭೀರ ಕೇಳುಗಳಾದೆ.
ಆ ಅದೃಷ್ಟದ ಹಕ್ಕಿ ಮೊಟ್ಟೆ ಇಟ್ಟು ಮರಿ ಮಾಡಿರುವ ಸಮಯದಲ್ಲಿ .. ಅಂದ್ರೆ ಆ ಹಕ್ಕಿ ಮರಿಗಳಿನ್ನೂ  ಹಾರಲು ಕಲಿತಿರಬಾರದು. ಅಮ್ಮ ಹಕ್ಕಿ ಆಹಾರ ತರೋದಿಕ್ಕೆ ಹೊರಗೆ ಹೋಗಿ ಸಂಜೆ ಬರುತ್ತೆ. ಅದು ಬರುವ ಸ್ವಲ್ಪ ಮೊದಲಷ್ಟೇ ಗೂಡಿನ ಹತ್ತಿರ ಹೋಗಿ ಆ ಮರಿಗಳನ್ನು ಕೊಲ್ಲಬೇಕು ಎಂದಳು.
ಅಯ್ಯೋ.. ಯಾಕೇ ಆ ಹಕ್ಕಿ ಮರಿಗಳನ್ನು ಕೊಲ್ಲೋದು? ಹಾಗೇ ಆ ಮರಿಗಳು ಸತ್ರೆ ನಮಗೆ ಅದೃಷ್ಟದ ಹಕ್ಕಿ ನೋಡೋದಕ್ಕೆ ಸಿಗುತ್ಯೇನೇ ಮತ್ತೆ ಎಂದು ನನ್ನ ದೂರದೃಷ್ಟಿಯ ಬುದ್ಧಿವಂತಿಕೆಯನ್ನು ತೋರಿಸಿದೆ.  ಹೇಳೋದನ್ನು ಪೂರಾ ಕೇಳು ಎಂದು ಬಯ್ದಳು.
ಸರಿ ಎಂದು ತಲೆಯಲುಗಿಸುತ್ತಾ ಅವಳ ಮಾತುಗಳಿಗೆ ಕಿವಿಗೊಟ್ಟೆ.
ಆ ಮರಿಗಳನ್ನು ಕೊಲ್ಲುವಾಗ ಸ್ವಲ್ಪ ಅಂದರೆ  ಒಂದು  ಸೂಜಿಯ ಮೊನೆಯಷ್ಟೂ ಹಕ್ಕಿ ಮರಿಗಳಿಗೆ ಗಾಯಗಳಾಗಬಾರದು ಹಾಗೆ ಕೊಲ್ಲಬೇಕು ಗೊತ್ತಾಯ್ತಾ.. ಮತ್ತೆ ನಾವಲ್ಲಿಯೇ ಅಡಗಿ ಕೂರಬೇಕು. ಅದರ ಅಮ್ಮ ಗೂಡಿಗೆ ಬಂದು ಮರಿಗಳು ಸತ್ತು ಬಿದ್ದಿದ್ದನ್ನು ನೋಡುತ್ತೆ. ಮರಿಗಳನ್ನು ಪರೀಕ್ಷಿಸಿ ಎಲ್ಲೂ ಗಾಯಗಳಿಲ್ಲ ಅಂತಾದರೆ ಗೂಡು ಬಿಟ್ಟು ವೇಗವಾಗಿ ಹಾರುತ್ತಾ ಹೋಗುತ್ತದೆ. ಅದು ಹೋಗಿ ಬರುವಾಗ ಅದರ ಕೊಕ್ಕಿನಲ್ಲಿ ಒಂದು ಮರದ ಕಡ್ಡಿ ಇರುತ್ತದೆ. ಆ ಕಡ್ಡಿಯನ್ನು ಅದು ಮರಿಗಳ ಮೂಗಿನ ಹತ್ತಿರ ಇಟ್ಟರೆ ಸಾಕು ಮರಿಗಳು ಜೀವ ಆಗಿ ಏಳುತ್ತವೆ. ಯಾಕೆಂದರೆ ಅದು ಸಂಜೀವಿನಿ ಕಡ್ಡಿ. ಅದರ ಕೆಲಸ ಮುಗಿದ ಕೂಡಲೇ ಅದು ಹೊರಗೆ ನೋಡುತ್ತದೆ. ಆಗಲೇ ಕತ್ತಲಾಗಿರುತ್ತೆ ಅಲ್ವಾ.. ಹಾಗಾಗಿ ಅದು ಆ ಕಡ್ಡಿಯನ್ನು ಗೂಡಲ್ಲೇ ಇಟ್ಟುಕೊಳ್ಳುತ್ತದೆ. ಬೆಳಗಾದ ನಂತರ ಮತ್ತೆ ಎಲ್ಲಿಂದ ತಂದಿತೋ ಅಲ್ಲಿಗೆ ತೆಗೊಂಡೋಗಿ ಇಡುತ್ತದೆ.  ನಾವು ಆ ಹಕ್ಕಿಗಳು ಮಲಗಿದ ಮೇಲೆ ಮೆಲ್ಲನೆ  ಅದರ ಗೂಡಿನಿಂದ ಆ ಕಡ್ಡಿಯನ್ನು ತರಬೇಕು.  ಆ  ಕಡ್ಡಿಯಿಂದ ಯಾವುದೇ ಸತ್ತ ಮನುಷ್ಯರನ್ನು ಬದುಕಿಸಬಹುದು ಗೊತ್ತಾ ಎಂದಳು. 
ಕಥೆ ಬಲು ಆಕರ್ಷಣೀಯವಾಗಿ ನಿಮಗೂ ಅಂತಹಾ ಹಕ್ಕಿಯನ್ನು ನೋಡುವ ಅದೃಷ್ಟ ಒಲಿದರೆ ಎಂಬಾಸೆ ಮೂಡಿರಬೇಕಲ್ಲ.   ಆದರೆ ನನಗೆ ನಿಶ್ಚಿತವಾಗಿಯೂ ಗೊತ್ತಿದೆ ನೀವು ಆ ಹಕ್ಕಿಯನ್ನು ನೋಡಿದ ಅದೃಷ್ಟವಂತರೇ ಎಂದು. ಯಾಕೆಂದರೆ ಭಾರತದ ಎಲ್ಲಾ ಕಡೆಯೂ ಸಾಮಾನ್ಯವಾಗಿ ಕಾಣುವ ಕನ್ನಡದದಲ್ಲಿ ಕೆಂಭೂತ ಎಂದೂ ಇಂಗ್ಲೀಷಿನಲ್ಲಿ greater coucal or crow pheasant ಎಂದು ಕರೆಯಲ್ಪಡುವ ನಮ್ಮ ನಿಮ್ಮ ಮನೆಯ ಸುತ್ತ ಮುತ್ತ ಕಾಣಸಿಗುವ  ಹಕ್ಕಿ ಇದು. ಸಾಧಾರಣ ಕಾಗೆಯಷ್ಟೇ ಗಾತ್ರದ ಶಕ್ತಿಶಾಲಿಯಾದ ಮಣ್ಣಿನ ಕೆಂಪು ಬಣ್ಣದ ರೆಕ್ಕೆಗಳನ್ನು ಹೊಂದಿದ ಆಕರ್ಷಕವಾದ ಕೆಂಪನೆಯ ಕಣ್ಣನ್ನು ಹೊಂದಿದ ಹಕ್ಕಿ. ಎತ್ತರೆತ್ತರದ ಮರಗಳಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಬೇರೆ ಹಕ್ಕಿಗಳ ಮೊಟ್ಟೆಗಳನ್ನು ಕದಿಯುವುದರಲ್ಲಿ ಚಾಣಾಕ್ಷ್ಯ. ಹುಳ ಹುಪ್ಪಟೆಗಳು, ಸಣ್ಣ ಸರೀಸೃಪಗಳು, ಬಸವನ ಹುಳ ಇಂತವೆಲ್ಲಾ ಇವುಗಳ ಬ್ರೇಕ್‌ಫಾಸ್ಟ್, ಡಿನ್ನರ್ ಸಪ್ಪರ್ ಗಳು.  ಬೆಳಗ್ಗಿನ ಹೊತ್ತು ಸೋಮಾರಿಗಳಂತೆ ಬಿಸಿಲಿಗೆ ಮೈಯೊಡ್ಡಿ ಕುಳಿತಿರುತ್ತವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಈ ಹಕ್ಕಿಗಳದ್ದು ಅನುರೂಪದ ದಾಂಪತ್ಯ. ಒಂದು ಹೆಣ್ಣು ಒಂದು ಗಂಡು ಹೇಗೋ ಏನೋ ಹೊಂದಿಕೊಂಡು ಎನ್ನುವ ಕವಿವಾಣಿ ಇವರಿಗೂ ಅನ್ವಯವೇ. ಜೊತೆಯಲೀ ಜೊತೆ ಜೊತೆಯಲೀ ಅಂತ ಹಾಡಿಕೊಂಡು ಒಟ್ಟಿಗೆ ಸುತ್ತುವ ಪ್ರೇಮಿಗಳೇ ಇವು. 
ಅಯ್ಯೋ ಈ ಹಕ್ಕಿ ನಮಗೂ ಗೊತ್ತು ಅಂತ ನೀವೂ ಈಗ ಸಂಜೀವಿನಿ ಕಡ್ಡಿಗಾಗಿ ಹುಡುಕಾಟಕ್ಕೆ ಹೊರಟಿರಾ.. ಸ್ವಲ್ಪ ನನ್ನ ಕಥೆಯ ಉಪಸಂಹಾರ ಕೇಳಿ ಹೋಗಿ. 
ತುಂಬಾ ಸಮಯಗಳವರೆಗೆ ಗೆಳತಿ ಹೇಳಿದ ಕಥೆಯನ್ನು  ನಂಬಿ ದಾರಿಯಲ್ಲಿ ಬಿದ್ದ ಸ್ವಲ್ಪ ಭಿನ್ನ ಎಂದು ಕಾಣಿಸಿದ ಒಣಗಿಲು  ಕಡ್ಡಿಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಮನೆಗೆ ಬರುತ್ತಿದ್ದೆ.  ಇದು ಸಂಜೀವಿನಿ ಕಡ್ಡಿ ಇರಬಹುದೇ ಎಂದು ತಿಳಿಯುವ ಪ್ರಯೋಗಕ್ಕಾಗಿ  ಕೆಲವು ಇರುವೆಗಳನ್ನು ಸಾಯಿಸಿ  ಅದರ ಮುಖದೆದುರು ಕಡ್ಡಿ ಹಿಡಿದು ಜೀವ ಬರುವುದೇನೋ ಎಂದು ಕಾಯುತ್ತಿದ್ದೆ. ಒಮ್ಮೆ ಸಂಜೀವಿನಿ ಕಡ್ಡಿ ಕೈಗೆ ಸಿಕ್ಕಿದರೆ ಸತ್ತವರನ್ನೆಲ್ಲಾ ಬದುಕಿಸುವ ಕನಸು ಕಾಣುತ್ತಿದ್ದೆ. ಒಮ್ಮೆ ಬ್ಯಾಗಿನಲ್ಲಿ ನನ್ನ ಪುಸ್ತಕವನ್ನು ತೆಗೆಯಲು ಕೈ ಹಾಕಿದ ಅಮ್ಮನಿಗೆ ಸಿಕ್ಕಿದ್ದು ಈ ಕಸ ಕಡ್ಡಿಗಳ ರಾಶಿ.
ಆ ದಿನ ಜೀವ ಬಂದೇ ಬಿಟ್ಟಿತು..  ನಾನು ಸಾಯಿಸಿದ ಇರುವೆಗಳಿಗಲ್ಲ.. ಅಮ್ಮನ ಕೈಯಲ್ಲಿದ್ದ ಬೆತ್ತಕ್ಕೆ..!!

Friday, March 25, 2016

ಐ ಲವ್ ಯೂ .....ತುಂಬಾ ಹೊತ್ತಿನಿಂದ ಅವರ  ಜಗಳ ಮುಂದುವರಿದಿತ್ತು 
ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ  ಐ ಲವ್ ಯೂ  ಅಂತ ಹೇಳೋದೇ ಇಲ್ಲ ನೀನು  ಎಂದು ಅವಳ ಕೋಪ 
ಹಾಗೆ ಹೇಳಿದರೆ ಮಾತ್ರ ಪ್ರೀತಿ ಇರೋದು ಇಲ್ಲದಿದ್ರೆ ಪ್ರೀತಿ ಇಲ್ಲ ಅಂತ ನಿನಗ್ಯಾರು ಹೇಳಿದರು ಅನ್ನೋದು ಅವನ ವಾದ 
ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗಡಿಯಾರದ ಮುಳ್ಳುಗಳು ಚಲಿಸುತ್ತಿದ್ದವು. 
'ಒಹ್  ಮೊನ್ನೆ ಹೋಟೆಲ್ಲಲ್ಲಿ ತಿಂದಿದ್ದೆವಲ್ಲಾ  ಜೀರಾ ಪೂರಿ ಮತ್ತು  ಆಲೂ ಟೊಮ್ಯಾಟೋ  ಮಸಾಲಾ ಅದನ್ನು ಮಾಡುವ ಅಂತಾ ಇದ್ದೆ.'  ಅಂದಳು ಮುಖ ದುಮ್ಮಿಸಿಕೊಂಡೇ 
'ಓಹ್.. ಹೌದಾ  ...??  ಇವತ್ತಾ.. ?? ಐ ಲವ್ ಯೂ  ಸೋ ಮಚ್ ಡಿಯರ್'  ಎಂದವಳ ದುಂಡು ಕೆನ್ನೆ ತಟ್ಟಿದ. 
ಗಂಡಸಿನ ಹೃದಯದ ದಾರಿ ಹೊಟ್ಟೆಯ ಮೂಲಕವೇ ಅಂತ ಅವಳಜ್ಜಿ ಹೇಳಿದ್ದು ನೆನಪಾಗಿ ನಕ್ಕಳು.  

Monday, March 14, 2016

ಎರಡು ಸಣ್ಣ ಕಥೆಗಳು

ಮರಕುಟಿಗ ಮತ್ತು ಮರ 

ಆ ಮರದಲ್ಲಿದ್ದ ಹಕ್ಕಿಗಳೆಲ್ಲ ರೋಷದಲ್ಲಿ ಬೊಬ್ಬಿರಿಯುತ್ತಿದ್ದವು. " ಇದೊಂದು ಮರಕುಟಿಗಕ್ಕೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಆಶ್ರಯ ಕೊಟ್ಟ ಮರವನ್ನೇ ಕುಟುಕುತ್ತಿದೆ.. ತೊಲಗಾಚೆ.. "  
ಮೈಮೇಲಿದ್ದ ಗೆದ್ದಲು ಹುಳಗಳೆಲ್ಲಾ ಖಾಲಿ ಆಗಿ ಮರ ಕುಶಿಯಿಂದ ತಲೆದೂಗಿ ನಕ್ಕಿತು. 
ಮರಕುಟಿಗ ಹೊಟ್ಟೆ ತುಂಬಿದ ಸಂತಸದಿಂದ ಹಾರಿ ಹೋಯಿತು. 
ಅಬ್ಬಾ .. ನಮ್ಮ ರೋಷಕ್ಕೆ ಹೆದರಿ ಮರಕುಟಿಗ ಹೋಯಿತೆಂದು ತಿಳಿದ ಹಕ್ಕಿಗಳು ನಿರಾಳವಾದವು. 

ಚಿಟ್ಟೆ ಹಕ್ಕಿ ಮತ್ತು ಅವನು 

ಪ್ರತಿ ನಿತ್ಯ ಅವನು ಅದೇ ದೃಶ್ಯ ನೋಡುತ್ತಿದ್ದ.
 ಹಕ್ಕಿಯೊಂದು ಚಿಟ್ಟೆಯನ್ನು ಅಟ್ಟಿಸಿಕೊಂಡು ಬರುವುದು. ಚಿಟ್ಟೆ ತಪ್ಪಿಸಿ ಹಾರುವುದು. 
 ತನ್ನ ಕ್ಯಾಮೆರಾದೊಳಗೆ ಅವೆರಡೂ ಸೆರೆಯಾಗಬೇಕೆಂದವನ  ಆಸೆ.  ಆ ದಿನ ಅವನ ಕಣ್ಣುಗಳಿಗೆ ಅಚ್ಚರಿ ಕಾದಿತ್ತು. 
ಚಿಟ್ಟೆ ಇನ್ನೇನು ಹಕ್ಕಿಯ ಕೊಕ್ಕಿಗೆ  ಸಿಗುವುದರಲ್ಲಿತ್ತು 
ಎರಡೂ ಒಟ್ಟಿಗೆ ಸಿಕ್ಕಿದ ಸಂತಸ ಅವನದು. 
ಕ್ಲಿಕ್ಕಿಸಿಯೇ ಬಿಟ್ಟ. 
ಅವನಾಸೆ ತೀರಿತ್ತು. ಮರುದಿನ ಅವನಲ್ಲಿಗೆ ಹೋಗಲಿಲ್ಲ.  
ಹಕ್ಕಿಯ ಬೇಟೆ ಸಿಕ್ಕಿತ್ತು.  ಅದೂ ಹೋಗಲಿಲ್ಲ.  
ಮತ್ತು 
ಚಿಟ್ಟೆಯೂ  ಹೋಗಲಿಲ್ಲ.  


Monday, January 4, 2016

ಹನಿ ಕರುಣೆ ಕಡಲಾಗಿದ್ದ ಹೊತ್ತು'ಖಾದರ್ ಖಾನ್ ಕೈಸಗಿ ಯ ಕೂದಲು ಕೊಂಕದಂತೆ ನಮಗೆ ತಂದುಕೊಡಬೇಕು' 

ಕೊಡಗಿನ ರಾಜ  ವೀರರಾಜೇಂದ್ರನ   ಈ ಆಜ್ಞೆ ಕೊಡಗಿನ  ದಂಡಿನ ಸಿಪಾಯಿಗಳಿಗೆ ಅಚ್ಚರಿಯನ್ನು ತಂದಿತು. ಶತ್ರು ಸೈನಿಕರನ್ನು ಕಂಡರೆ  'ಹೊಡಿ, ಬಡಿ, ಕೊಚ್ಚು, ಕೊಲ್ಲು' ಎನ್ನುವಲ್ಲಿ ಈ ಕರುಣೆಯೇಕೋ ಅರ್ಥವೇ ಆಗಲಿಲ್ಲ ಅವರಿಗೆ.   
 ಕೊಡಗಿನೊಳಗಿನ ಟಿಪ್ಪು ಸುಲ್ತಾನನ ಆಡಳಿತದ ಶವಸಂಸ್ಕಾರಕ್ಕೆ ಕೊನೆಯ ಕೊಳ್ಳಿ ಇದುವೆಯೋ ಏನೋ ಎಂಬಂತೆ  ಈಗ ಸಿಗುವಂತಿದ್ದ ಜಯ ಈ ಕಾರ್ಯಾಚರಣೆಯಲ್ಲಿ  ಪ್ರಮುಖ  ಪಾತ್ರ ವಹಿಸುವುದರಲ್ಲಿತ್ತು.  ಖಾದರ್ ಖಾನ್ ಕೈಸಗಿ  ಟಿಪ್ಪು ಸುಲ್ತಾನನ ದಂಡಿನ ಸೈನ್ಯಾಧಿಕಾರಿ. ಮುಂದಡಿಡಲು ಸಾಧ್ಯವಿಲ್ಲದಂತೆ ಸಿಕ್ಕಿಬಿದ್ದಿದ್ದಾನೆ ಎಂದರೆ ಕೊಡಗಿನ ಸಿಪಾಯಿಗಳಿಗೆ ಸಿಹಿಯಾದ ಜೇನನ್ನು ಬಾಯೊಳಗೆ ಸುರಿದಂತೆ. ಪರಮಶತ್ರುವಿನ ಸೈನ್ಯಾಧಿಕಾರಿಯನ್ನು ತರಿದೆಸೆಯುವುದಲ್ಲದೆ ಹಾಗೇ ಬಿಡುವುದುಂಟೇ? ಶತ್ರುಗಳು ಯಾರೇ ಆಗಿರಲಿ ಅವರ ಶಿರ ಚೆಂಡಾಡಿದರಲ್ಲದೆ ನಿದಿರೆ ಹೋಗುವವನಲ್ಲದ ಧಣಿಯ ಬಾಯಲ್ಲಿ ಇಂತಹ ಮಾತು..!! ಇದಕ್ಕೆ ಎದುರಾಡುವುದಾಗಲೀ, ಆಜ್ಞೆಯನ್ನು ಧಿಕ್ಕರಿಸುವುದಾಗಲೀ ಆಗದಿನ್ನು. ಒಡೆಯನ ಅಪ್ಪಣೆಯನ್ನು  ಮನದಲ್ಲಿಟ್ಟುಕೊಂಡು ಆಹಾರ ವಸ್ತುಗಳ ಗೋಣಿಯನ್ನೇ ಕೋಟೆಯಂತೆ ಕಟ್ಟಿಕೊಂಡು ನಡುವೆ ಹೆಗ್ಗಣಗಳಂತೆ ಅವಿತಿದ್ದ ಟಿಪ್ಪುವಿನ ಸೈನಿಕರ ದಂಡಿದ್ದ ಜಾಗದತ್ತ ಅಪಹಾಸ್ಯದಿಂದಲೇ ನೋಡುತ್ತಾ ಅದೇ ಕಡೆಗೆ ಹೆಜ್ಜೆಯಿಟ್ಟರು ಕೊಡಗಿನ ಕಲಿಗಳು. 
ಇನ್ನೂ ಟಿಪ್ಪುವಿನ ಸ್ವಾಧೀನದಲ್ಲಿದ್ದ ಮಡಿಕೇರಿಯ ಕೋಟೆಯ ಕಿಲ್ಲೇದಾರನಾದ ಜಾಫರ್ ಕುಲಿಬೇಗ್ ರಹಸ್ಯವಾಗಿ ಶ್ರೀರಂಗ ಪಟ್ಟಣದಿಂದ ಆಹಾರ ಸಾಮಗ್ರಿಗಳನ್ನು ತರಿಸುತ್ತಿದ್ದ ಸುದ್ದಿ ವೀರರಾಜೇಂದ್ರನ ಕಡೆಯವರಿಗೆ ಸಿಕ್ಕಿತ್ತು. ಕೊಡಗಿನ ಯಾವ ಕಡೆಯಿಂದಲೂ ಅವರಿಗೆ ಒಂದಗುಳು ಆಹಾರ ದೊರೆಯದಂತೆ ಮಾಡಿ ಅವರನ್ನು ತಾವಾಗಿಯೇ ಕೋಟೆ ಬಿಟ್ಟು ಹೊರಡುವಂತೆ ಮಾಡಿಸುವುದು ವೀರರಾಜೇಂದ್ರನ ಉಪಾಯವಾಗಿತ್ತು. ಅಂತೆಯೇ ಅವರಿಗೆ ಆಹಾರ ಸಾಮಗ್ರಿಗಳನ್ನು ಹೊತ್ತ ಟಿಪ್ಪುವಿನ ಸೈನಿಕರ ದಂಡು ರಹಸ್ಯವಾಗಿ ಬರುತ್ತಿರುವ ವಿಚಾರ ಗೂಡಾಚಾರರ ಮೂಲಕ ಮೊದಲೇ ವೀರರಾಜೇಂದ್ರನ ಗಮನಕ್ಕೆ ಬಂದಿತ್ತು. ತನ್ನ ಸೈನಿಕರನ್ನು ಸೇರಿಸಿಕೊಂಡು ಅವರು ಬರಬಹುದಾಗಿದ್ದ ಹಾದಿಯಲ್ಲೇ  ಹೊಂಚು ಹಾಕುತ್ತಿದ್ದನು. 
ಕೊಡಗಿನ ದುರ್ಗಮ ಕಾಡು ಕೊಡಗಿನವರ ಪಾಲಿಗೆ ವರವಾಗಿದ್ದರೆ ಅದರ ಆಳ ವಿಸ್ತಾರಗಳನ್ನರಿಯದ ಟಿಪ್ಪುವಿನ ಸೈನಿಕರಿಗೆ ಅದು ನರಕ ದರ್ಶನ ಮಾಡಿಸುತ್ತಿತ್ತು. ಇದಂತೂ ರಹಸ್ಯದ ಕಾರ್ಯಾಚರಣೆ ಆದ ಕಾರಣ ಕಾಡಿನ ಹಾದಿಯೇ ಅವರಿಗೊಲಿದದ್ದು. ಮೊದಲೇ ಕಾದು ಕುಳಿತಿದ್ದ ಕೊಡಗಿನ ಪಡೆಯಿಂದಾಗಿ  ಅಲ್ಲಿಗೆ ಬಂದ ಒಂದು ತಂಡದ ಟಿಪ್ಪುವಿನ ಸೈನಿಕರ ರುಂಡಗಳು ಅಲ್ಲಲ್ಲೇ ಚೆಂಡಾಡಲ್ಪಟ್ಟಿದ್ದವು. ಅಳಿದುಳಿದ ಸೈನಿಕ ಪಡೆ ಓಡಿ ಹಿಂದಿನಿಂದ ಬರುತ್ತಿದ್ದ  ತಮ್ಮ ಅಧಿಕಾರಿಯ ದಂಡಿನ ಜೊತೆ ಸೇರಿಕೊಂಡಿತ್ತು. 
ಅವರು  ಕಾವೇರಿ ನದಿ ದಾಟಿ ಬೀಡು ಬಿಟ್ಟಿದ್ದ ವಿಚಾರ ತಿಳಿದೊಡನೆಯೇ ವೀರರಾಜೇಂದ್ರನ ಸೈನ್ಯ ಅಲ್ಲಿಗೆ ದಾಳಿ ಇಟ್ಟಿತ್ತು. ತನ್ನ ಸೈನ್ಯ ಸೋಲುತ್ತಿರುವುದನ್ನು ಕಂಡ ಸೈನ್ಯಾಧಿಕಾರಿ ಖಾದರ್ ಖಾನ್  ಅಳಿದುಳಿದ  ಸೈನಿಕರ ದಂಡಿನ ಜೊತೆಗೆ ಎತ್ತರದ ಸ್ಥಳವನ್ನಾರಿಸಿಕೊಂಡು ತಾವು ತಂದಿದ್ದ ಆಹಾರ ವಸ್ತುಗಳ ಗೋಣಿಯನ್ನೇ ಸುತ್ತ ಕೋಟೆಯಂತೆ ಕಟ್ಟಿ ಅದರೊಳಗೆ ಅವಿತು ಬಂದೂಕಿನಿಂದ ಯುದ್ಧ ನಡೆಸುತ್ತಿದ್ದರು. ಇದೀಗ ಎಲ್ಲರೂ ತಾವಾಗಿಯೇ ಪಂಜರದೊಳಗೆ ಸಿಕ್ಕಿಬಿದ್ದಂತಾಗಿತ್ತು.  ಅವರಲ್ಲಿ ಒಬ್ಬ ಸೈನಿಕನು ತಪ್ಪಿ ಹೋಗದಂತೆ ವೀರರಾಜೇಂದ್ರ ಆ ಕೋಟೆಯ ಸುತ್ತ ತನ್ನವರನ್ನು ನಿಲ್ಲಿಸಿದ್ದ. ಒಳಗಿನವರು ಎಷ್ಟೇ ಹೋರಾಡಿದರೂ ಸೋಲು ಅವರಿಗೆ ಕಟ್ಟಿಟ್ಟ ಬುತ್ತಿಯಾಗಿತ್ತು. ಹೇಗೂ ಗೆಲ್ಲುವ ಯುದ್ಧವನ್ನು ಬೇಗನೇ ಮುಗಿಸುವ ಆತುರದಲ್ಲಿದ್ದ  ಕೊಡಗಿನ ಸೈನಿಕರು ಉತ್ಸಾಹದಿಂದ ' ನೀವು ಅನುಮತಿ ಕೊಟ್ಟರೆ ಇಂದು ರಾತ್ರಿಯೇ ಅವರನ್ನು ಮುಗಿಸಿಬಿಡುತ್ತೇವೆ.ಆ ಆಹಾರ ಸಾಮಗ್ರಿಗಳನ್ನು ನಮ್ಮಲ್ಲೇ ಹಂಚಿಕೊಡಬೇಕು' ಎಂದು ಒಡೆಯನಾದ  ವೀರರಾಜೇಂದ್ರನಲ್ಲಿ ಬೇಡಿಕೆ ಇಟ್ಟಿದ್ದರು. 

ಆಗಲೇ ವೀರರಾಜೇಂದ್ರ ತನ್ನಾಜ್ಞೆಯನ್ನು ಹೇಳಿದ್ದು. ಅದಕ್ಕೆ ಕಾರಣವಾಗಿ ಆತ 'ಅಂದೊಮ್ಮೆ ನಾವು ಪಿರಿಯಾಪಟ್ಟಣದ ಇಲಾಖೆಯಲ್ಲಿರುವಾಗ ನಂಜರಾಯಪಟ್ಟಣದ ಕಡೆ ಬೇಟೆಗಾಗಿ ಹೋಗಿ ಮರಳಿ ಬರಲು ಆಗದೇ ಇದ್ದ ಕಾಲದಲ್ಲಿ  ಖಾದರ್ ಖಾನ್ ನಮ್ಮನ್ನು ಅವನಲ್ಲಿ ಎರಡು ದಿನ ಉಳಿಸಿಕೊಂಡು ಅನ್ನ ನೀರಿಟ್ಟು ಕಾದಿದ್ದಾನೆ. ಆ ಅನ್ನದ ಋಣವನ್ನು ಅವನ ಪ್ರಾಣ ಉಳಿಸುವುದರ ಮೂಲಕ ತೀರಿಸಲು ಇಚ್ಚಿಸುತ್ತೇವೆ' ಎಂದಿದ್ದನು.  

ಬಿಡಾರದ ಬಹುಪಾಲು ಜನ ಕಣ್ಣಿದಿರು ಕಾಣುತ್ತಿರುವ ಕೋಟೆಯ ಸುತ್ತ ಪಹರೆ ನಡೆಸುತ್ತಿದ್ದುದು ವೀರರಾಜೇಂದ್ರನಿಗೆ ಕಾಣುತ್ತಿತ್ತು. ಇದೊಂದು ಅದ್ಭುತ ಜಯ ಎಂದು ಅವನಿಗೂ ತಿಳಿದಿತ್ತು. ಆದರೆ ಬೇಹುಗಾರರ ಮೂಲಕ ಆ ಸೈನ್ಯದಲ್ಲಿ ಖಾದರ್ ಖಾನ್ ಕೈಸಗಿ ಸಹಾ ಇದ್ದಾನೆ ಎಂಬ ವಿಷಯ ವೀರರಾಜೇಂದ್ರನನ್ನು ಹಳೆಯ ನೆನಪುಗಳಲ್ಲಿ ಮುಳುಗೇಳುವಂತೆ ಮಾಡಿತ್ತು. ನಡೆದು ಬಂದ ದಾರಿ ಸುರುಳಿ ಸುರುಳಿಗಳಾಗಿ ಬಿಚ್ಚಿಕೊಳ್ಳತೊಡಗಿತ್ತು.

ಟಿಪ್ಪು ಸುಲ್ತಾನನ ಸೆರೆಯಾಗಿ ಬದುಕುತ್ತಿದ್ದ ದಿನಗಳವು.

ದಾಯಾದಿಗಳ ಜಗಳವನ್ನು ತನಗನುಕೂಲವಾಗಿಸಿಕೊಂಡು  ಮೋಸದಿಂದ ಹೈದರಾಲಿ ಕೊಡಗನ್ನು ತನ್ನ ಕೈವಶ ಮಾಡಿಕೊಂಡದ್ದಲ್ಲದೇ ಆಗಿನ್ನು ಚಿಕ್ಕ ವಯಸ್ಸಿನವರಾಗಿದ್ದ ನಮ್ಮನ್ನೆಲ್ಲಾ ಹಾಸನದ ಗೋರೂರಿನ ಕೋಟೆಯಲ್ಲಿ ಸೆರೆಯಲ್ಲಿಟ್ಟಿದ್ದನು. 
ಅಧಿಕಾರ ಎನ್ನುವುದು ಎರಡಲಗಿನ ಕತ್ತಿಯಂತೆ. ಇದಕ್ಕೆ ಬಂಧುಗಳೂ, ಶತ್ರುಗಳೂ ಎರಡೂ ಒಂದೇ ತರ. ವಿರೋಧವೆಂದು ಕಂಡು ಬಂದರೆ ಯಾವುದನ್ನೂ ಕತ್ತರಿಸಲು ಹೇಸುವುದಿಲ್ಲ. ಒಂದು ಕಾಲದಲ್ಲಿ ಹೈದರಾಲಿಯ ಗೆಲುವಿಗೆ ಸಹಾಯಕರಾಗಿದ್ದ ಲಿಂಗರಾಜೇಂದ್ರ ಒಡೆಯನ ಮಕ್ಕಳು ನಾವು. ಅರಸನು ಮರಣಿಸಿದ ನಂತರ ನಾವುಗಳು ಚಿಕ್ಕವರೆಂಬ ನೆವದಿಂದ ಕೊಡಗಿನ ಆಳ್ವಿಕೆಯನ್ನು ಮೋಸದಿಂದ ತನ್ನ ವಶ ಮಾಡಿಕೊಂಡಿದ್ದ ಹೈದರಾಲಿಯ ಮಹಾತ್ವಾಕಾಂಕ್ಷೆ  ರಾಜಕುಮಾರರಾದ ನಮ್ಮನ್ನು ಭಿಕಾರಿಗಳನ್ನಾಗಿಸಿತ್ತು. ಅವನ ಮರಣದ ನಂತರ ಬಂದ ಟಿಪ್ಪುವಿನ ಹಂಗಿನಲ್ಲಿ ಬದುಕಬೇಕಾದ ದುರವಸ್ಥೆ ನಮ್ಮದು.  ಬದುಕು ಹೀಗೆಯೇ ಮುಗಿದು ಹೋಗಿಬಿಡುತ್ತದೆ ಎನ್ನುವ ಚಿಂತೆಯ ನಡುವೆ ಎಲ್ಲರೂ ಒಟ್ಟಿಗೇ ಇದ್ದೇವಲ್ಲ ಎನ್ನುವ ಸಮಾಧಾನದ ಅಂಶವೊಂದಿತ್ತು. ಅದಕ್ಕೂ ಕುತ್ತು ಬಂದು ವಂಶಕ್ಕೊಂದು ಅಳಿಸಲಾರದ ಕಳಂಕ ಒದಗೀತೆನ್ನುವ ಯಾವುದೇ ಸಂಶಯಗಳು ಆಗ ನಮ್ಮೊಳಗೆ ಇದ್ದಿರಲಿಲ್ಲ. 
ಹಾಸನದ ಗೋರೂರಿನ ಕೋಟೆಯಿಂದ ಕುಟುಂಬ  ಸಮೇತ ಪಿರಿಯಾಪಟ್ಟಣದ ಕೋಟೆಗೆ ವರ್ಗಾಯಿಸಿದ ನಂತರ ನಡೆದ ಅವಮಾನಕಾರಿ ಘಟನೆಯನ್ನು ನೆನೆದರೆ ಇನ್ನೂ ರಕ್ತ ಕುದಿಯುತ್ತದೆ. ಟಿಪ್ಪುವಿನ ನೆತ್ತರು ಹರಿಸಿಯಲ್ಲದೆ ಅದು ಶಮನವಾಗದು.

ಪಿರಿಯಾಪಟ್ಟಣದ ಕೋಟೆ ಬಹುದೊಡ್ಡದೇ..ಮೈಸೂರು ರಾಜ್ಯ, ಹೈದರಾಲಿ ಮತ್ತು ಟಿಪ್ಪುವಿನ ವಶವಾದಾಗ ಪಿರಿಯಾಪಟ್ಟಣದ ಕೋಟೆಯನ್ನು ನೋಡಿಕೊಳ್ಳಲು ಕಿಲ್ಲೇದಾರನೊಬ್ಬನ ನೇಮಕ ನಡೆದಿತ್ತು. ಆತ ಕೋಟೆಯಲ್ಲಿ ವಾಸ ಮಾಡುತ್ತಿದ್ದರೆ ಕೊಡಗಿನ ನಿಜವಾದ ವಾರಿಸುದಾರರಾದ ನಾವುಗಳು  ಅದರ ಮೂಲೆಯಲ್ಲಿದ್ದ ಸಾಮಾನ್ಯ ಮನೆಯಲ್ಲಿ ಸೆರಯಾಳುಗಳಾಗಿ  ಅನ್ನ ನೀರಿಲ್ಲದೆ ದಿನ ಕಳೆಯುವಂತಹ ದಿನ ಬಂದಿತ್ತು. ರಾಜಕುಟುಂಬವೊಂದು ಇಂತಹ ಹೀನ ಸ್ಥಿತಿಗಿಳಿದೀತೆಂದು ಕನಸು ಮನಸಿನಲ್ಲಿಯೂ ಕೊಡಗಿನ ಜನ ಗ್ರಹಿಸಿರಲಾರರು.  
 ಅತಿ ಸಾಮಾನ್ಯ ಮನೆಯಲ್ಲಿ  ಸರಿಯಾದ ಆಹಾರ ವಸನಗಳಿಲ್ಲದೆ ನಾವು ನರಳುತ್ತಿರುವಾಗಲೇ ಬರ ಸಿಡಿಲಿನಂತಹ ಆಘಾತವೊಂದು ಕುಟುಂಬಕ್ಕೆರಗಿತ್ತು.  ಊರಿಗೆ ಬಂದ ಮಾರಿ ಸಿಡುಬು ರೋಗಕ್ಕೆ ಅಮ್ಮ ಮತ್ತು ಚಿಕ್ಕಮ್ಮ ಬಲಿಯಾದರು.  ಕುಟುಂಬದ  ಇತರ ಜನರೂ ಅವರನ್ನು ಸ್ವಲ್ಪವೇ ಕಾಲದಲ್ಲಿ ಹಿಂಬಾಲಿಸಿದರು.  
ಉಳಿದವರು ನಾವೇ .. ತಮ್ಮ ತಂಗಿಯರ ಜೊತೆಗೆ.
 ಹುಟ್ಟಿದ ಮನೆಗೂ,ಕೊಟ್ಟ ಕುಲಕ್ಕೂ ಕೀರ್ತಿಯನ್ನು ತರಬೇಕಾದ ಹೆಣ್ಣು ಮಕ್ಕಳು ಕುಟುಂಬದಲ್ಲಿರುವುದು ಶೋಭೆಯೇನೋ ಸರಿ. ನಾವೂ ಹಾಗೆಯೇ ತಾನೇ ಅಂದುಕೊಂಡಿದ್ದು. ಆದರೆ ನಡೆದದ್ದೇ ಬೇರೆ. ಅದೊಂದು ಪ್ರಮಾದ ಕೊಡಗಿನ ರಾಜನ ಮನೆತನಕ್ಕೆ ಕಪ್ಪು ಚುಕ್ಕೆಯನ್ನಿಟ್ಟ ವಿಷಯವಾಗಿತ್ತು. ಆದರೆ ಇದರಲ್ಲಿ ತಂಗಿಯರದ್ದೇನೂ ತಪ್ಪಿರಲಿಲ್ಲ.ಇನ್ನು  ನಾವೋ ಅವರನ್ನು ನಮ್ಮೊಡನೆ ಉಳಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದೆವು. 

ಇತಿಹಾಸವು ಇದಕ್ಕೆ ಮೂಕಸಾಕ್ಷಿಯಾಗಿ ಉಳಿಯಬೇಕಾಯಿತು.

ಪಿರಿಯಾಪಟ್ಟಣದಲ್ಲಿ ನಮ್ಮೊಡನೆ ಇದ್ದವರು ಮೂವರು ತಂಗಿಯರು.ನಮ್ಮ ವಿರೋಧದ ನಡುವೆಯೂ ಅವರೆಲ್ಲರನ್ನೂ ಟಿಪ್ಪು ಬಲಾತ್ಕಾರವಾಗಿ ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡಿದ್ದ. ಅವರಲ್ಲಿ ಒಬ್ಬಳು ಒಡ ಹುಟ್ಟಿದವಳೇ ಆಗಿದ್ದರೆ ಉಳಿದಿಬ್ಬರು ಬಲತಂಗಿಯರು.  ಸುಂದರಿಯರಾದ  ದೇವಮ್ಮಾಜಿ ಮತ್ತು ನೀಲಮ್ಮಾಜಿಯನ್ನು ಟಿಪ್ಪು ಬಲವಂತದಿಂದ  ತನ್ನ ಅಂತಃಪುರಕ್ಕೆ ಸೇರಿಸಿದ್ದ. ಉಳಿದೊಬ್ಬಳನ್ನು ತನ್ನ ಆತ್ಮೀಯನಾದ ಖಾದರ್ ಖಾನ್ ಕೈಸಗಿಗೆ ಬಹುಮಾನವಾಗಿ ನೀಡಿದ್ದ. 
ಅಬ್ಬಾ ಎಂತಹ ಕ್ರೂರ ದಿನಗಳವು. ಕೊಡಗಿನ ಮಾನಧನಗಳಾಗಿದ್ದ ಹೆಣ್ಣುಮಕ್ಕಳನ್ನು ಮಾರಾಟಕ್ಕಿಟ್ಟ ವಸ್ತುಗಳಂತೆ ನಡೆಸಿಕೊಂಡಿದ್ದರು. 

ಟಿಪ್ಪುವಿನ ಜನಾನಕ್ಕೆ ಸೇರಿದವರನ್ನು ಮತಾಂತರಗೊಳಿಸಿ ಮೆಹ್ತಾಬ್, ಆಫ್ತಾಬ್ ಎಂದು ಹೆಸರೂ ಬದಲಿಸಿದ್ದರಂತೆ. ಉಳಿದವಳ ಕಥೆಯೂ ಅದೇ ಆಗುತ್ತಿತ್ತು ಖಾದರ್ ಖಾನ್ ಕೈಸಗಿಯ ಕರುಣೆಯಿಲ್ಲದಿದ್ದರೆ. ತನ್ನ ಪಾಲಿಗೆ ಬಂದ ರಾಜಕುಮಾರಿಯನ್ನು ಆತ  ಮಗಳಂತೆ ಕಾಪಾಡಿದ. ಅವಳಿಗಾಗಿ ಪ್ರತ್ಯೇಕ ಮನೆಯೊಂದನ್ನು ಮಾಡಿ ಅಲ್ಲಿ ಅವಳನ್ನಿಟ್ಟು, ಹಿಂದೂ ಯುವತಿಯೊಬ್ಬಳನ್ನೇ ಅವಳ ಸೇವಕಿಯಾಗಿ ನೇಮಿಸಿದ್ದ. 
ಅಣ್ಣನಾಗಿ ತಂಗಿಯರ ಮಾನ ಕಾಪಾಡಲು ಸಾಧ್ಯವಾಗದ ದಿನಗಳವು. ನಮ್ಮನ್ನು ನಾವೇ ಎಷ್ಟು ಶಪಿಸಿಕೊಂಡಿದ್ದರೂ ಜೈಲಿನೊಳಗಿದ್ದ ಅಸಹಾಯಕತೆಯಿಂದ ಕೈ ಕಟ್ಟಿ ಕೂರಲೇಬೇಕಿತ್ತು.  ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ ಅಧಮ್ಯ ಆಕಾಂಕ್ಷೆಯ ಹಕ್ಕಿಯ ರೆಕ್ಕೆಗಳು ಬಲವಾಗಲು ಇದೂ ಒಂದು ಕಾರಣವಿದ್ದೀತು. 
ಇದಕ್ಕೆ ಸಹಕಾರಿಯಾದದ್ದು ನಮ್ಮ ನಾಡಿನ ಜನ. 

ಯಾವ ಕಾರಣಕ್ಕೂ ಟಿಪ್ಪುವಿನ ಆಳ್ವಿಕೆಯನ್ನು ಒಪ್ಪದ ಕೊಡಗಿನ ಜನರು ಅದಕ್ಕಾಗಿ ಪ್ರಾಣ ಕಳೆದುಕೊಂಡದ್ದನ್ನು ಲೆಕ್ಕ ಇಟ್ಟರೆ ಕೊಡಗಿನೆಲ್ಲಾ ಕಲ್ಲುಗಳು ವೀರಗಲ್ಲುಗಳೇ ಆದಾವೇನೋ..!!
ಟಿಪ್ಪುವಿನ ಸೈನಿಕರ ಹಿಂಸೆಯನ್ನು ತಾಳಲಾರದೇ ವ್ಯವಸಾಯ ಮಾಡಿಕೊಂಡು  ಬದುಕುತ್ತಿದ್ದವರು ತಮ್ಮ ಮನೆ ಮಾರುಗಳನ್ನು  ಬಿಟ್ಟು ಕಾಡು ಸೇರಿದರು. ಎದೆಯೊಳಗೆ ಉರಿಯುತ್ತಿದ್ದ ಕ್ರೋಧದ ಬೆಂಕಿಯಿಂದಾಗಿ  ಕೊಡಗಿನ ಜನ ಅವನನ್ನು ವಿರೋಧಿಸುವ ಯಾವ ಸಣ್ಣ ಕಾರಣಗಳನ್ನು ಬರಿದೇ ಹೋಗಗೊಡುತ್ತಿರಲಿಲ್ಲ. ನೆತ್ತರ ಹೊಳೆ ಹರಿಸಿಯೇ ಹರಿಸುತ್ತಿದ್ದರು. ಆದರೆ ಗುಂಪಿಗೊಬ್ಬ ಸಮರ್ಥ ನಾಯಕನಿಲ್ಲದೆ ಅವರ ಪ್ರಯತ್ನಗಳೆಲ್ಲಾ ಹುಣಸೆ ಹಣ್ಣನ್ನು ಹೊಳೆಯಲ್ಲಿ ಗಿವುಚಿದಂತಾಗುತ್ತಿತ್ತು.  ಆಗಲೇ ಅವರಲ್ಲೂ ತಮ್ಮನ್ನು ಬಿಡಿಸುವ ಹೊಸ ಯೋಜನೆಯೊಂದು ಮೊಳಕೆಯೊಡೆದದ್ದು. 

ಪಿರಿಯಾಪಟ್ಟಣ ವ್ಯಾಪಾರ ವಹಿವಾಟಿನ ಪ್ರಮುಖ ಸ್ಥಳ. ಮಲೆಯಾಳಿಗಳೂ. ಕೊಡಗಿನವರೂ ತಮ್ಮಲ್ಲಿ ಮಾರಾಟಕ್ಕಿದ್ದ ವಸ್ತುಗಳನ್ನು ಅಲ್ಲೇ ಕೊಂಡೊಯ್ದು ಮಾರುತ್ತಿದ್ದರು. ಕೊಡಗಿನಲ್ಲೆಲ್ಲೂ ತೆಂಗು ಬೆಳೆಯದ ಕಾರಣ  ಕೇರಳದಿಂದ ಬರುತ್ತಿದ್ದ ತೆಂಗಿನ ಎಣ್ಣೆಗೆ ಅಲ್ಲಿ ಬೇಡಿಕೆ ಹೆಚ್ಚಿತ್ತು.  ಇದನ್ನು ತಿಳಿದ ನಮ್ಮ ದಂಡಿನವರು ಎಣ್ಣೆ ಮಾರುವವರಂತೆ ವೇಷ ಬದಲಾಸಿ ದೊಡ್ಡ ತಪ್ಪಲೆಗಳಲ್ಲಿ ಎಣ್ಣೆಯನ್ನು ಹೊತ್ತು  ಅಲ್ಲಿಗಾಗಮಿಸಿದ್ದರು. ನಾವಿರುವ ಮನೆಯೆದುರು  ಎಣ್ಣೆ ಮಾರುವ ವ್ಯಾಪಾರಿಗಳ ಸೋಗು ಹಾಕಿ ಕುಳಿತಿದ್ದರು.  ಸಮಯ ನೋಡಿಕೊಂಡು  ಯಾರಿಗೂ ತಿಳಿಯದಂತೆ ರಹಸ್ಯವಾಗಿ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಿಂದ ಪಾರು ಮಾಡುವ ಸೂಚನೆಯನ್ನು ನಮಗೆ ತಲುಪಿಸಿದ್ದರು. 
ನಮ್ಮ ಪುಣ್ಯಕ್ಕೆ ಕೋಟೆಯೊಳಗಿನ ಜನರ ಪೈಕಿ  ಟಿಪ್ಪುವಿನ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದ ಹೊಂಬಾಳೆ ನಾಯಕನೂ, ಮುಸಲ್ಮಾನನಾದ ಇಸ್ಮಾಯಿಲ್ ಖಾನನೂ ನಮಗನುಕೂಲರಾಗಿ ಇದ್ದರು.  ನಮ್ಮ ವಯಸ್ಸಿನವನೇ ಆದ ಹೊಂಬಾಳೆ ನಾಯಕನಿಗೂ ನಮಗೂ ಉತ್ತಮ ಮೈತ್ರಿಯ ಬಂಧವೇರ್ಪಟ್ಟಿತ್ತು. ಕೊಡಗಿನ ರಾಜವಂಶದವರಾದ ನಾವುಗಳು ಈ ಹೀನಾಯ ಸ್ಥಿತಿಯಲ್ಲಿದ್ದುದು ಅವನಿಗೆ ಬೇಸರದ ಸಂಗತಿಯಾಗಿತ್ತು. ಅದರಲ್ಲೂ  ನಮ್ಮ ತಂಗಿಯರನ್ನು ಮತಾಂತರಿಸಿ ಟಿಪ್ಪು ತನ್ನ  ಜನಾನಕ್ಕೆ ಸೇರಿಸಿಕೊಂಡಿದ್ದು ಅವನಿಗೆ ಅಸಹನೀಯವೆನಿಸಿತ್ತು. 

ಇನ್ನು ಇಸ್ಮಾಲ್ ಖಾನನಿಗೂ ಕೋಟೆಯ ಕಿಲ್ಲೇದಾರನಿಗೂ ವೈಮನಸ್ಸಿದ್ದ ಕಾರಣ ಆತ ಕಿಲ್ಲೇದಾರನ ಆಡಳಿತದಿಂದ  ಬೇಸತ್ತು ಅಲ್ಲಿಂದ ಹೊರ ಬರುವ ಪ್ರಯತ್ನದಲ್ಲಿದ್ದನು. ಇದು ನಮ್ಮ ಪಾಲಿಗೆ ಸುವರ್ಣಾವಕಾಶವಾಗಿ ಪರಿಣಮಿಸಿತು. ನಮ್ಮ ಮಂದಿಗೆ ಕೋಟೆಯ ಒಳಗಿನಿಂದ ಸಿಕ್ಕಿದ ಈ ಸಹಕಾರ ನಾವು ಹೊರಬರುವಂತಾಗಲು ಸಹಾಯ ಮಾಡಿತ್ತು. 

ವೀರ ರಾಜೇಂದ್ರ ಪಕ್ಕನೆ ನೆನಪುಗಳಿಂದ ಹೊರಬಂದ. ದೂರದಲ್ಲಿ ದೊಂದಿ ಬೆಳಕಿನಲ್ಲಿ ಇನ್ನೂ ಸೈನಿಕರ ಪಹರೆ ಕಾಣಿಸುತ್ತಿತ್ತು. ಒಳಗಿನ ಪ್ರತಿರೋಧ ನಿಂತಂತಿತ್ತು. ಕೊಡಗಿನ ರಾತ್ರಿಗಳೇ ಹೀಗೆ  ಹೊರಗಿನಿಂದ ತಂಪು ತಣ್ಣಗೆ.  ಹಾಗಾಗಿಯೇ ಏನೋ ಎಂತಹ ರಹಸ್ಯವನ್ನೂ ತಣ್ಣಗೆ ಹುದುಗಿಸಿಕೊಳ್ಳಬಲ್ಲವು. 
 ಇಂತದೇ ನೀರವ ರಾತ್ರಿಯಾಗಿತ್ತಲ್ಲವೇ ನಾವು  ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಂಡು  ಹೊರ ಬಂದ ದಿನವೂ..

ಜನರೆಲ್ಲಾ ಬೇಗನೆ ಹೊದ್ದು ಮಲಗುವ ಕೀಲಕ ಸಂವತ್ಸರದ ಮಾರ್ಗಶಿರ ಬಹುಳ ಸಪ್ತಮಿಯ  ಅತಿ ಚಳಿಯ ದಿನವಾಗಿತ್ತದು.  ಕಪ್ಪು ಕತ್ತಲು ಆಗಸವನ್ನು ತುಂಬಿತ್ತು.ಈ ದಿನವನ್ನೇ ನಮ್ಮ ಬಿಡುಗಡೆಗಾಗಿ  ಪ್ರಶಸ್ತ ದಿನವೆಂದು ಎಲ್ಲರೂ ಆರಿಸಿದ್ದರು. 
  
ಮೊದಲನೆಯದಾಗಿ ಪಹರೆಯವರ ಕೈಗೆ ಸಿಕ್ಕಿ ಬೀಳದಂತೆ ಹೊರ ಬರಬೇಕಿತ್ತು. ಅದಕ್ಕಾಗಿ ಹೊಂಬಾಳೆ ನಾಯಕನು ಆ ದಿನ ವಿಶೇಷ ಊಟೋಪಚಾರಗಳನ್ನು ಮಾಡಿಸಿ ಕಾವಲಿದ್ದ ಸೈನಿಕರಿಗೆ ಹೊಟ್ಟೆ ಬಿರಿಯ ಉಣಬಡಿಸಿದ್ದ. ಮನಸೋ ಇಚ್ಚೆ ಹೀರಲು ಮದ್ಯವನ್ನೂ ಒದಗಿಸಿದ್ದ . ಅವರೆಲ್ಲಾ ಅಮಲೇರಿ ಮಲಗುವುದನ್ನೇ ಜಾಗೃತವಾಗಿ ಕಾಯುತ್ತಿತ್ತು ನಮ್ಮ ಜನಗಳ ದಂಡು. ಆ ಕತ್ತಲಿನಲ್ಲಿ ಕರಿಯ ನೂಲಿನಿಂದ ಮಾಡಿದ ಗಟ್ಟಿ ಏಣಿಯ ಒಂದು ತುದಿ ಕೋಟೆಯ ಒಳಗಿದ್ದರೆ ಇನ್ನೊಂದು ತುದಿ ಕೋಟೆಯ ಹೊರಗಿನ ಕಂದಕದಾಚೆಗೆ ಬಿಗಿಯಲ್ಪಟ್ಟಿತ್ತು. ಎಣ್ಣೆ ಮಾರುವ ವೇಷದಲ್ಲಿದ್ದ ಅವರು ಎಣ್ಣೆ ಮಾರುವ ಪಾತ್ರೆಯನ್ನಿಡುವ ಅಗಲ ಕುಕ್ಕೆಗಳನ್ನು ಸಮೀಪ ಇರಿಸಿಕೊಂಡಿದ್ದರು. ಇಸ್ಮಾಯಿಲ್ ಖಾನನೂ  ತನ್ನ ಕೈ ಕೆಳಗಿನ ಪಹರೆಯವರಿಗೆ ಮದ್ಯ ಕುಡಿಸಿ ಅಮಲೇರಿ ನಿದ್ದೆ ಹೋಗುವಂತೆ ಮಾಡಿದ್ದನು. 
ಕರಿ ನೂಲಿನ ಏಣಿಯ ಆಸರೆಯಲ್ಲಿ ಪತ್ನಿ, ಮಗಳು ತಮ್ಮಂದಿರ ಜೊತೆ ಹೊಂಬಾಳೆ ನಾಯಕನ ಬೆನ್ನ ಹಿಂದಿನಿಂದ ನಡೆದು ಬಂದು ಕಂದಕದಾಚೆ ಸೇರಿದ್ದೆವು.  ದೊಡ್ಡ ದೊಡ್ಡ ಬುಟ್ಟಿಗಳಲ್ಲಿ ನಮ್ಮನ್ನು ಕೂರಿಸಿ ವೇಗವಾಗಿ ಕೊಡಗಿನ ಗಡಿಯ ಕಡೆ ನಡೆದಿದ್ದರು ನಮ್ಮ ಜನ. 

ಉಸಿರು ಬಿಗಿ ಹಿಡಿದು ಮೌನದಲ್ಲೇ ದಾರಿ ಸವೆದಿತ್ತು. ನಾವೆಲ್ಲರೂ ಬುಟ್ಟಿಗಳ ಒಳಗಿದ್ದರೆ ಸಣ್ಣ ಕೂಸು ದಂಡಿನವನಾದ ಅಪ್ಪಾಜಿಯ ಕೈಯಲ್ಲಿತ್ತು. ಇನ್ನೊಂದು ಪಹರೆಯ ಉಕ್ಕುಡವನ್ನು ಹಾದು ಹೋದರೆ ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು. ಆದರೆ ಅದು ಸಮೀಪಕ್ಕೆ  ಬರುತ್ತಿರುವಾಗಲೇ ಅಪ್ಪಾಜಿಯ ಕೈಯಲ್ಲಿದ್ದ  ನಮ್ಮ ಪುಟ್ಟ ಕೂಸು ಅಳತೊಡಗಿತ್ತು. ಎಲ್ಲರೂ ಗಾಬರಿಗೊಂಡಿದ್ದೆವು. ತಾಯ ಹಾಲಲ್ಲದೇ ಅದನ್ನು ಸಮಾಧಾನ ಪಡಿಸುವ ಯಾವ ಮಂತ್ರ ದಂಡವೂ ಇರಲಿಲ್ಲ. ಆದರೆ ನಂಜಮ್ಮಾಜಿ  ಬುಟ್ಟಿಯೊಳಗಿದ್ದ ಕಾರಣ ಮಗುವನ್ನೆತ್ತಿ ಹಾಲುಣಿಸುವುದು ಸಾಧ್ಯವೇ ಇರಲಿಲ್ಲ. 

ಮಗುವಿನ ಅಳುವಿನಿಂದ ಎಲ್ಲರೂ ಸಿಕ್ಕಿಬೀಳುವ ಸಾಧ್ಯತೆ ಇತ್ತು. ಸಿಕ್ಕಿಬಿದ್ದರೆ ನಮ್ಮ ಈ ಪ್ರಯತ್ನಕ್ಕೆ ಬದಲಾಗಿ ಟಿಪ್ಪುವಿನ ಬಹುಮಾನ ನಮ್ಮ ಸಾವೇ ಆಗಿದ್ದುದು ಅಷ್ಟೇ ಖಚಿತವಾಗಿತ್ತು. ನಮ್ಮ ಸಾವು ಎಂದರೆ ಕೊಡಗಿನ ಸಾವಿರಾರು ಜನರ ಆಶೋತ್ತರಗಳ ಸಾವೂ ಆಗಿತ್ತು. ಈಗ ಸೋಲನ್ನೊಪ್ಪಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ನಾವು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾದುದಿತ್ತಷ್ಟೇ.    ಕೊಡಗನ್ನು ಟಿಪ್ಪುವಿನಿಂದ ಮುಕ್ತಿಗೊಳಿಸಲು ಇನ್ನೊಂದು ನೆತ್ತರ ತರ್ಪಣವೂ ಬೇಕಿತ್ತೇನೋ..! ಅದೂ ರಾಜಮನೆತನದ್ದೇ ಆಗಿರಬೇಕೆಂದು ವಿಧಿ ನಿರ್ಣಯವಿದ್ದರೆ ಬದಲಾಯಿಸಲು ನಾವಾರು?  ಎಷ್ಟೊಂದು ಮಂದಿಯ ಬಲಿದಾನದ ನಂತರ ಪಡೆದ ಸ್ವಾತಂತ್ರ್ಯವನ್ನು ಸುಮ್ಮನೆ ಹೋಗಗೊಡುವ ಬದಲು ನಮ್ಮದೇ ನೆತ್ತರು ಹರಿಸಿ ಗೆದ್ದುಕೊಳ್ಳುವ ಪ್ರಯತ್ನ ಮಾಡ ಹೊರಟೆವು.
ನಡುಗುತ್ತಿದ್ದ ಧ್ವನಿಯನ್ನು ಸ್ಥಿರವಾಗಿಸಿ ಹೊಂಬಾಳೆ ನಾಯಕನಿಗೆ 'ಮಗುವನ್ನು ಕತ್ತಿಯಿಂದ ಕತ್ತರಿಸಿಬಿಡು' ಎಂದಿದ್ದೆವು. ಪಕ್ಕದಲ್ಲೇ ಸಾಗುತ್ತಿದ್ದ ಬುಟ್ಟಿಯಲ್ಲಿದ್ದ ನಂಜಮ್ಮಾಜಿಗೂ ನಮ್ಮ ಮಾತು ಕೇಳಿರಬೇಕು. ತಾಯ ಕರುಳಲ್ಲವೇ? ಆಕೆಯ ತುಟಿ ಕಚ್ಚಿ ತಡೆಯುತ್ತಿದ್ದ ಬಿಕ್ಕುಗಳು ಒಮ್ಮೊಮ್ಮೆ ಮೌನವನ್ನು ಭಂಗಗೊಳಿಸುತ್ತಿದ್ದವು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಮಗುವಿನ ಸದ್ದು ನಿಂತು ಹೋಯಿತು. ಹೇಗೂ ಕತ್ತಲು. ಎದೆಯೊಳಗಿನ ಬೇಗುದಿ ಕಣ್ಣೀರಾಗಿ ಹರಿದರೂ ಯಾರರಿವಿಗೂ ಬಾರದು. 

ಉಕ್ಕುಡದ ಪಹರೆಯವರು ಗಾಢ ನಿದ್ರೆಯಲ್ಲಿದ್ದುದರಿಂದ ಅಲ್ಲಿಂದ ಯಾವ ತೊಂದರೆಯೂ ಇಲ್ಲದೆ  ಆ ಕತ್ತಲಿನಲ್ಲೇ ನಡೆದು ಕೊಡಗಿನ ಗಡಿ ಸಮೀಪಿಸಿದೆವು. ಅಲ್ಲಿ ಬೋಯಿಗಳು ಪಲ್ಲಕ್ಕಿಗಳನ್ನಿಟ್ಟುಕೊಂಡು ಕಾದು ಕುಳಿತಿದ್ದರು. 
ಆ ಹೊತ್ತಿಗೆ ರಾತ್ರಿಯಿಡೀ ನಿದ್ರೆಯಿಲ್ಲದೆ, ಜೊತೆಗೆ ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದ ನಂಜಮ್ಮಾಜಿ ಜ್ವರದಿಂದ ತತ್ತರಿಸುತ್ತಿದ್ದಳು. ದುಃಖಾತಿರೇಕದಿಂದ 'ನನ್ನ ಮಗುವಿನ ಹೆಣದ ಮೊಗವನ್ನಾದರೂ ತೋರಿಸಿ ನನಗೂ ಒಂದಿಷ್ಟು ವಿಷ ಕೊಟ್ಟು ಬಿಡಿ' ಎಂದು ಬೋರಾಡಿ ಅಳತೊಳಗಿದಳು. ಮುದ್ದು ಕೂಸಿನ ನೆನಪಿಗೆ ನಮ್ಮ ಕಣ್ಣಾಲಿಗಳೂ ಮತ್ತೆ ತುಂಬಿ ಬಂದು 'ಮಗುವನ್ನು ಎಲ್ಲಿ ಕೊಂದು ಬಂದಿರಿ' ಎಂದು ಹೊಂಬಾಳೆ ನಾಯಕನನ್ನು ಕೇಳಿದೆವು. 

ಆತ ನಮ್ಮನ್ನು ನೋಡಿ ತಲೆ ಬಗ್ಗಿಸುತ್ತಾ ' ನಿಮ್ಮ ಅಪ್ಪಣೆಯನ್ನು ಪಾಲಿಸದ ನಮ್ಮನ್ನು ಕ್ಷಮಿಸಿ' ಎಂದಿದ್ದ. 
 ಅಂದರೆ..?
 ಮಗು ಇನ್ನೂ ಬದುಕಿದೆಯೇ..? ಹೇಗೆ ಸಾಧ್ಯ..? 

ನಮ್ಮಾಜ್ಞೆಯನ್ನು ಕೇಳಿದ್ದ ಹೊಂಬಾಳೆ ನಾಯಕ ಅದನ್ನು ಇಸ್ಮಾಯಿಲ್ ಖಾನನ ಕಿವಿಗೂ ಉಸುರಿದ್ದ. ಅವನಿಗೆ ಪಕ್ಕನೆ ನೆನಪಿಗೆ ಬಂದದ್ದು ತನ್ನ ಬಿಡದ ಚಾಳಿಯಾದ ಅಫೀಮು. ಇಸ್ಮಾಯಿಲ್ ಖಾನ್ ತನ್ನ ಜೋಳಿಗೆಯಲ್ಲಿ ಯಾವತ್ತೂ ಇರುತ್ತಿದ್ದ ಅಫೀಮನ್ನು ಎಂಜಲಿನಲ್ಲೇ  ಅರೆದು ಮಗುವಿಗೆ ತಿನ್ನಿಸಿದ್ದನಂತೆ.ಆ ಅಮಲಿನ  ಜೊಂಪಿಗೆ  ಮಗು ಅಳು ನಿಲ್ಲಿಸಿ  ಮೈ ತಿಳಿಯದಂತೆ ನಿದ್ರೆಯಲ್ಲಿ ಮುಳುಗಿತ್ತು. 
ನಂಜಮ್ಮಾಜಿ ಸಂತಸದಿಂದ ಮಗುವನ್ನೆತ್ತಿಕೊಂಡು ಲೊಚ ಲೊಚನೆ ಮುದ್ದಿಕ್ಕುತ್ತಾ ಹಾಲೂಡತೊಡಗಿದ್ದಳು. ಸ್ವಲ್ಪ ಹೊತ್ತಿಗೆ  ಮಗು ನಿದ್ರೆ ತಿಳಿದೆದ್ದು ಚೇತರಿಸಿಕೊಂಡು ಅಳತೊಡಗಿತ್ತು. 
ಓಹ್.. ಎಲ್ಲಿ ಕಳೆದುಹೋಗಿ ಬಿಟ್ಟೆವು ನಾವು..!! 

ಎಷ್ಟೊಂದು ಜನರ ಉಡುಗೊರೆ ನಮ್ಮ ಬಾಳು.  ನಿಚ್ಚಳ ಬೆಳಕಿಲ್ಲದ ಹೋರಾಟದ ಬದುಕಿನಲ್ಲೂ ಇಂತಹ ಒಂದೊಂದು ಘಟನೆಗಳು  ಬೆಳಕ ಕಿರಣಗಳಾಗಿ  ಒಳ ನುಸುಳಿ ಮುಂದಿನ ಬದುಕ ದಾರಿಗೆ ಸಂತಸದ  ಕೈ ದೀವಿಗೆಯಾಗಿದ್ದವು.
ಇಲ್ಲದಿದ್ದರೆ ಸೈನ್ಯಾಧಿಕಾರಿಗೆ ಉಡುಗೊರೆಯಾಗಿ ಕೊಡಲ್ಪಟ್ಟ ತಂಗಿ ಮಾನಪ್ರಾಣಗಳನ್ನುಳಿಸಿಕೊಂಡು ಮತ್ತೆ ದಕ್ಕುವಳೆಂದು  ಆಲೋಚಿಸಿದ್ದಿದೆಯೇ? ನಾವು ತಪ್ಪಿಸಿಕೊಂಡು ಬಂದ ಸುದ್ದಿ ತಿಳಿದ ಕೆಲ ಕಾಲದ ನಂತರ ಟಿಪ್ಪುವಿನ ಅರಿವಿಗೆ ಬಾರದಂತೆ  ಗೌರವ ಪೂರ್ವಕವಾಗಿ ತಂಗಿಯನ್ನು ನಮ್ಮಲ್ಲಿಗೆ ಮರಳಿಸಿದ್ದ ಖಾದರ್ ಖಾನ್ ಕೈಸಗಿ. ಇದಕ್ಕಿಂತ ದೊಡ್ಡ ಉಪಕಾರ ಯಾರಾದರೂ ಮಾಡುವುದು ಶಕ್ಯವಿತ್ತೇ? 
ಆತ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ನಾವೇನು ಮಾಡಬಹುದಿತ್ತೆಂದು ಕೆಲಕಾಲ ಯೋಚಿಸಿದ್ದಿತ್ತು. ಜೊತೆಗೇ ಇದ್ದ  ಹೊಂಬಾಳೆ ನಾಯಕನಿಗೂ, ಇಸ್ಮಾಯಿಲ್ ಖಾನನಿಗೂ ಅಂದೇ ಭೂಮಿಕಾಣಿಗಳನ್ನಿತ್ತು ಗೌರವಿಸಿದ್ದೆವು. ಆದರೆ ಟಿಪ್ಪುವಿನ ಆಧೀನನಾಗಿರುವ ಖಾದರ್ ಖಾನನ ಋಣವನ್ನು ಹೊತ್ತೇ ಜೀವನ ಮುಗಿಸಬೇಕಾಗುತ್ತದೆ ಎಂದುಕೊಂಡಿದ್ದೆವು. 
ಸದ್ಯ.. ಹಾಗಾಗಲಿಲ್ಲ. 

ಅವನುಳಿಸಿದ ಪ್ರಾಣಕ್ಕೆ ಅವನ ಪ್ರಾಣವನ್ನುಳಿಸುವುದೇ ಸರಿಯಾದ ನಿರ್ಧಾರ. ಟಿಪ್ಪುವಿನ ಹೆಮ್ಮೆಯ ಕೋಡು ಮುರಿಯಲೂ ಇದೊಂದು ಅಸ್ತ್ರ. ತನ್ನ ಸೈನ್ಯಾಧಿಕಾರಿ ಕೊಡಗು ರಾಜನ ಪ್ರಾಣಭಿಕ್ಷೆಯಿಂದ ಉಳಿದು ಬಂದಿದ್ದಾನೆಂದರೆ ಅವನಿಗೂ ಅವಮಾನವಲ್ಲವೇ? ಅದಲ್ಲ.. ಕೈಸಗಿ  ಮರಳಿ ಆ ನಾಡಿಗೆ ಹೋಗುವವನಲ್ಲವೆಂದಾದರೆ ನಮ್ಮ  ಈ ಕೃಪೆಯಿಂದ ಶತ್ರುವಂತೂ ಆಗಲಾರ. ಹಾಗಾಗಿಯೇ ಆತ  ಶತ್ರುಗಳ ಕಡೆಯವನಾದರೂ ಅವನನ್ನುಳಿಸುವ  ನಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡಬೇಕಾಗಿ ಬರಲಿಕ್ಕಿಲ್ಲ ಎಂಬ ನಂಬುಗೆಯಿಂದ ನಿದ್ರೆಗಾಗಿ ಹಾತೊರೆಯುವ ಕಣ್ಣುಗಳನ್ನು ಸಂತೈಸುತ್ತಾ ಬಿಡಾರದೊಳಗೆ ನಡೆದನು ರಾಜಾ ವೀರರಾಜೇಂದ್ರ.