Pages

Total Visitors

Monday, March 26, 2012

ನೀರು ..


ಮಹೇಶನಿಗೆ ತಾನಿದ್ದ ಮನೆ ಬದಲಾಯಿಸಬೇಕೆಂಬ ಬಯಕೆ ಉತ್ಕಟವಾಗಿತ್ತು. ಈಗಿದ್ದ ಮನೆಯೇನೋ ವಿಶಾಲವಾಗಿ
ಸುಂದರವಾಗಿದ್ದರೂ, ನೀರಿನ ತೊಂದರೆ ಬಹಳ.

ಹುಡುಕ ಹೊರಟರೆ ಮನೆಗಳಿಗೇನು ಕೊರತೆಯೇ..?

ಹಲವು 'ಬಾಡಿಗೆಗಿದೆ' ಎಂಬ ಬೋರ್ಡ್ ಇರುವ ಜಾಗಕ್ಕೆ ಎಡತಾಕಿ ,ಕೊನೆಗೊಂದು ಮನೆ ಎಲ್ಲರಿಗೂ ಹಿಡಿಸಿತು. ಈಗಿರುವ ಮನೆಯ ನೀರಿನ ಸಮಸ್ಯೆಯೇ ತಲೆಯೊಳಗೆ ತುಂಬಿದ್ದರಿಂದ ಈ ಹೊಸ ಮನೆಯ ಮಾಲೀಕನಲ್ಲಿ ಆ ಬಗ್ಗೆ ಮಾತನಾಡಲು ಸಂಜೆ ಆಫೀಸ್ ಮುಗಿದ ನಂತರ ಹೊರಟಿದ್ದ.

 ಮಬ್ಬು ಬೆಳಕಿನಲ್ಲಿ ಕುಳಿತಿದ್ದ ಮನೆ ಮಾಲೀಕ.. ನೇರವಾಗಿ ವಿಷಯಕ್ಕೆ ಬಂದವನೇ, 'ಇಲ್ಲಿ ನೀರಿನ ವ್ಯವಸ್ಥೆ ಹೇಗಿದೆ. ಅದು ಇಪ್ಪನಾಲ್ಕು ಗಂಟೆಯೂ ಇದೆ ಅನ್ನುವುದಾದರೆ ನಮಗೆ ಈ ಮನೆ ಓ. ಕೆ.' ಅಂದ.

 'ಅಯ್ಯೋ .. ನೀರೇ..?? 'ಇಲ್ಲಿ ಬನ್ನಿ ಮನೆ ಹಿಂದೆ ದೊಡ್ಡ ಬಾವಿಯೇ ಇದೆ ನೀವು ನೋಡ್ಲಿಲ್ವಾ.. ಇಡೀ ಊರಲ್ಲಿ ಬರಗಾಲ ಬಂದರೂ ಇಲ್ಲಿನ ನೀರಿನ ಒರತೆ ಬತ್ತದು..' ಎಂದು ಹೆಮ್ಮೆಯಿಂದ ನುಡಿದ ಮಾಲೀಕ.

 ಅವನ ಹಿಂದೆಯೇ ಹೋದ ಮಹೇಶನಿಗೆ ದೊಡ್ಡ ಸಿಮೆಂಟಿನ ಕಟ್ಟೆ ಹೊಂದಿದ್ದ ಪಂಪ್ ಹಾಕಿದ ಬಾವಿ ಕಾಣಿಸಿತು. ವಿದ್ಯುತ್ ಇಲ್ಲದಿದ್ದರೆ ಉಪಯೋಗಿಸುವಂತೆ ದೊಡ್ಡ ಮರದ ರಾಟೆಯೂ ತೂಗಾಡುತ್ತಿತ್ತು. ಬಗ್ಗಿ ನೋಡಿದ. ಆಗಷ್ಟೇ ಆಗಸದಲ್ಲಿ ಮೂಡಿದ್ದ ಚಂದ್ರನ ಬೆಳಕು ಬಾವಿಯೊಳಗೆ ತೂರಿ ನೀರನ್ನು ಹೊಂಬಣ್ಣದಲ್ಲಿ ಹೊಳೆಯುವಂತೆ ಮಾಡಿತ್ತು.

 ಆದರೂ ಸಮಾಧಾನವಾಗದೆ, 'ಈಗೇನೋ ನೀರಿದೆ ಅನ್ಸುತ್ತೆ. ಮಾರ್ಚ್ ತಾನೇ .. ಬೇಸಿಗೆ ಜೋರಾಗೋದು ಎಪ್ರಿಲ್ ಮೇ ಯಲ್ಲಿ ಅಲ್ವಾ.. ಆಗ್ಲೂ ಹೀಗೆ ನೀರಿರುತ್ತಾ..?ನೀವು ಕೇಳಿದ ಬಾಡಿಗೆ ಕೊಟ್ಟು ಆಮೇಲೆ ನೀರಿಲ್ಲದೆ ಒದ್ದಾಟ ಅಂದ್ರೆ ತುಂಬಾ ಕಷ್ಟ ಆಗುತ್ತೆ. ಸರಿಯಾಗಿ ಹೇಳಿ ಬಿಡಿ. ಮತ್ತೆ ಮತ್ತೆ ಮನೆ ಬದಲಾಯಿಸೋ ತೊಂದ್ರೆ ತಪ್ಪುತ್ತೆ.'

 'ಅಯ್ಯೋ ಹೇಗೆ ಹೇಳ್ಳಿ ನಿಮ್ಗೆ.. ಈ ಬಾವೀಲಿ ಯಾವಾಗ್ಲೂ ನೀರು ಇರುತ್ತೆ.ನಿಮ್ಗೆ ಇನ್ನೂ ಅನುಮಾನ ಯಾಕೇ..ಕಳೆದ ಇನ್ನೂರು ವರ್ಷದಿಂದ ಈ ಬಾವಿ ನೀರು ಒಂದಿಷ್ಟೂ ಕಡಿಮೆ ಆಗಿಲ್ಲ ಅಂತ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ. ಯಾಕೇಂದ್ರೆ ನಾನಿರೋದೆ ಇಲ್ಲಿ..'ಎಂದು ಕಟ್ಟೆ ಹತ್ತಿ 'ದುಡುಂ' ಎಂದು ಬಾವಿಗೆ ಹಾರಿದರು.


 ಅಷ್ಟರಲ್ಲಿ ಹಿಂದಿನಿಂದ ಗೇಟ್ ತೆಗೆದುಕೊಂಡು ಒಳ ಬಂದವನೊಬ್ಬ ..ಹ್ಹೋ ಸಾರೀ.. ಆಗ್ಲೇ ಬಂದ್ರಾ.. ಸ್ವಲ್ಪ ಲೇಟ್ ಆಯ್ತು ಬರೋದು ..ಬಾವಿ ನೋಡಿದ್ರಾ.. ಒಳ್ಳೆ ಎಳೆನೀರಿನಂತಾ ನೀರು .. ಹೇಗನಿಸ್ತು ನಿಮ್ಗೆ ಈ ಮನೆ .. ಅಂತೆಲ್ಲಾ ಕೇಳುತ್ತಾ ಇದ್ದರೂ ಮಹೇಶ್, ಕೊಂಚವೂ ನೀರಿನ ಅಲುಗಾಟಗವಿಲ್ಲದೇ ಮೌನವಾಗಿದ್ದ ಬಾವಿಯನ್ನು ನೋಡುತ್ತಾ ದಿಗ್ಭ್ರಾಂತನಂತೆ ನಿಂತಿದ್ದ.

Sunday, March 11, 2012

ತುಂಬೆ ನಿನ್ನ ಮಹಿಮೆ ಏನೆಂಬೆ ....



 ವಾಮನನಲ್ಲಿ ಬಲಿ ಚಕ್ರವರ್ತಿ ' ನಾನಿನ್ನು ಭೂಮಿಗೆ ಬರುವ ದಿನ ಯಾವುದು 'ಎಂದು ಕೇಳಿದಾಗ ವಾಮನನ ಉತ್ತರದಲ್ಲಿ' ತುಂಬೆಯ ಮರದಡಿ ಮಕ್ಕಳು ಆಟ ಆಡುವ ದಿನ ' ಎಂಬುದು ಒಂದಾಗಿತ್ತು.ಸಾಧ್ಯವೇ ಇಲ್ಲ ಎಂಬುದನ್ನು ಈ ರೀತಿಯಾಗಿ ತಿಳಿಸಿದ್ದ. ಅದ್ಯಾಕೆ ಅಂತೀರಾ?? ಬನ್ನಿ ಆ ಸಸ್ಯದ ಒಂದಿಷ್ಟು ಪರಿಚಯ ಮಾಡಿಕೊಳ್ಳೋಣ ಆಗ ನಿಮಗೆ ತಿಳಿಯುತ್ತೆ ..!! 

ಏನು ಈ ತುಂಬೆಯ ಗಿಡ, ಏನಿದರ ಮಹತ್ವ ..? ನಮ್ಮ ಸುತ್ತು ಮುತ್ತೆಲ್ಲ ಕಾಣಸಿಗುವ ಪುಟ್ಟ ಎಲೆಗಳ ಮೈಯಲ್ಲೆಲ್ಲ ತೇರಿನಂತೆ ಹೂವನ್ನೇರಿಸಿಕೊಂಡ ಚೆಲುವೆಯೇ ಇವಳು..ತುಂಬಾ ಸಣ್ಣ ನಾಲ್ಕರಿಂದ ಐದು ಕವಲುಗಳಿಂದ ಕೂಡಿದ ಒಂದೆರಡಡಿ  ಬೆಳೆಯುವ ಸಸ್ಯ 

ಇದರ ಸಸ್ಯ ಶಾಸ್ತ್ರೀಯ ಹೆಸರು ' Leacus indica .
ಪುಟ್ಟ ಚೆಂಡಿನಂತಹ ರಚನೆಯ ತುಂಬೆಲ್ಲ ಬಿಳಿ ಹೂಗಳು ಇದನ್ನು  ಅಂದಗಾತಿಯನ್ನಾಗಿ ಮಾಡಿದೆ.ಇದರ ಹೂಗಳ ಆಕಾರವನ್ನು ಆಗ ತಾನೇ ಹುಟ್ಟಿದ ಮಗುವಿನ ಸುಕೋಮಲ ಪಾದಗಳಿಗೆ ಹೋಲಿಸುತ್ತಾರೆ. ಇದಕ್ಕೆ  ಒಂದು ಪುಟ್ಟ ಕತೆ ಕೂಡ ಇದೆ.. ಕೇಳಿ .
.

ಒಂದಾನೊಂದು  ಕಾಲದಲ್ಲಿ ಒಬ್ಬ ಶಿವಭಕ್ತ ರಾಕ್ಷಸ ಶಿವನ ಕುರಿತು ಘೋರವಾಗಿ ತಪಸ್ಸು  ಮಾಡಿದ.ಭಕ್ತ ವತ್ಸಲನಾದ ಶಿವ  ಕೂಡಲೇ  ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ.ತನ್ನೆದುರು ಬಂದ ದೇವರನ್ನು ಕಂಡು ಆನಂದಾತಿಶಯಗೊಂಡ ರಾಕ್ಷಸ ತಡಬಡಾಯಿಸಿ 'ದೇವ ನನ್ನ ಪಾದ ಸದಾ ನಿನ್ನ ಶಿರದ ಮೇಲಿರುವಂತೆ ಕರುಣಿಸು ಎಂದ.ಶಿವ ಕೂಡಲೇ ತಥಾಸ್ಥು ಎಂದ. 

ನಂತರ ತನ್ನ ತಪ್ಪಿನ ಅರಿವಾದ ರಾಕ್ಷಸ, 'ದೇವಾ.. ನನ್ನ ಅಪರಾಧವನ್ನು ಮನ್ನಿಸು. ನಿನ್ನ ಪಾದ ನನ್ನ ಶಿರದ ಮೇಲೆ ಸದಾ ಇರಲಿ ಎನ್ನುವುದುನನ್ನ ಆಶಯವಾಗಿತ್ತು.. ಹಾಗೆ ವರ ನೀಡು ಎಂದ.ಅದಕ್ಕೆ ಕರುಣಾಳುವಾದ ಶಿವನು ಒಮ್ಮೆ  ವರ ನೀಡಿದೆನೆಂದರೆ ಮುಗಿಯಿತು ಬದಲಾಯಿಸಲು ಸಾಧ್ಯವಿಲ್ಲ.ನೀನು ತುಂಬೆ ಗಿಡವಾಗಿ ಹುಟ್ಟು.ನಿನ್ನ ಹೂವಿನ ಆಕಾರ ಪಾದಗಳಂತೆ ಇರುವುದು.. ಆ ಹೂಗಳು ಸದಾ ನನ್ನ ಶಿರದ ಮೇಲೇರಲಿ ಎಂದು ವರ ನೀಡಿದನಂತೆ. . 
        

 ನಾವೆಲ್ಲ ಚಿಕ್ಕವರಾಗಿದ್ದಾಗ ರಾಮನವಮಿ ಹಬ್ಬ ಬಂತೆಂದರೆ ಗದ್ದೆಗಳಲ್ಲೆಲ್ಲ ಹೂವ ಹಾಸಿಗೆಯಂತೆ ಹರಡಿಕೊಂಡಿರುತ್ತಿದ್ದ ಈ ತುಂಬೆಯ ಹೂಗಳನ್ನು ಸಂಗ್ರಹಿಸಿದೇವರಿಗೆ ಏರಿಸುತ್ತಿದ್ದೆವು. ಕೇರಳದ ಓಣಂ ಹಬ್ಬದಲ್ಲಿ ಈ ಹೂವನ್ನು ಹೂವಿನ ರಂಗೋಲಿಯಾದ '  ಆವಪ್ಪೂ' ದಲ್ಲಿ ಬಳಸುತ್ತಾರೆ. ಅಲ್ಲಿ ಕೃಷ್ಣನಿಗೆ ಅತಿ ಪ್ರಿಯವಾದ ಪುಷ್ಪ ಎಂದು ಹೇಳಿದರೆ ನಮ್ಮಲ್ಲಿ ಶಿವನಿಗೆ ಅತಿ ಇಷ್ಟದ ಹೂವೆಂದು ಬಣ್ಣಿಸುತ್ತಾರೆ. 
 ಇದರ ಸುಂದರ ಬಿಳಿ ಹೂಗಳು ಪರಿಶುದ್ಧತೆ ಮತ್ತು ಸಹಜತೆಯನ್ನು ಬಿಂಬಿಸುತ್ತದೆ. 
        
   ಈ ಪುಟ್ಟ ಸಸ್ಯ ಔಷದೀಯ ಸಸ್ಯವಾಗಿಯೂ ಬಳಕೆಯಲ್ಲಿದೆ. ಇದರ ಸೊಪ್ಪು ಅಥವಾ ಇಡೀ ಸಸ್ಯವನ್ನು ( ಸಮೂಲ ) ಅರೆದು ಹಚ್ಚಿದರೆ ಹಾವಿನ ವಿಷ ಶಮನವಾಗುವುದು.ಪುಟ್ಟ ಮಕ್ಕಳ ಕಫಾ   ಬಾಧೆಗೆ ಇದರ ರಸವನ್ನು ಜೇನು ಬೆರೆಸಿ ನೆಕ್ಕಿಸಬೇಕು. ಸ್ತ್ರೀಯರ ರಜಸ್ವಲೆಯ ಸಮಯದಲ್ಲಿ ಬರುವ ಹೊಟ್ಟೆ ನೋವಿನ ಪರಿಹಾರಕ್ಕೆ ಎಲೆಗಳನ್ನು ಮತ್ತು ಹೂಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅರೆದು ಉಂಡೆಗಳನ್ನಾಗಿಸಿ  ದಿನಕ್ಕೆ ಎರಡರಂತೆ ಹಸುವಿನ ಹಾಲಿನಲ್ಲಿ ಸೇವಿಸಬೇಕು.



ಈ ಅಂದಗಾತಿಯನ್ನು ನಮ್ಮ ಹೂದೋಟದಲ್ಲಿ ನೆಟ್ಟು ಬೆಳಸಬಹುದು. ಬೀಜದಿಂದ ವಂಶಾಭಿವೃದ್ದಿ ಹೊಂದುವ  ಈ ಗಿಡ ಕೊಂಚ ನೀರಾಶ್ರಯವಿರುವಲ್ಲಿ ತನ್ನಿಂದ ತಾನೆ ಹುಟ್ಟಿ ಬೆಳೆಯುತ್ತದೆ. ಈಗೆಲ್ಲ ಗದ್ದೆಗಳು ಕಡಿಮೆ ಆಗಿ, ಈ ಪುಟ್ಟ ಗಿಡ ಎಲ್ಲೆಂದರಲ್ಲಿ ಕಾಣ ಸಿಗುವುದಿಲ್ಲ.  ಬಹೂಪಯೋಗಿಯಾದ ಈ ಸಸ್ಯಕ್ಕೆ ನಮ್ಮ ಮನೆಯಲ್ಲೂ ಮನದಲ್ಲೂ ಕೊಂಚ ಜಾಗ ಮೀಸಲಿಡೋಣ, ಏನಂತೀರ..   

Friday, March 9, 2012

ಚಿತ್ರದ ಕತೆ ...





ಮೊದಲ ಬಾರಿಗೆ 'ಸ್ಪರ್ಧೆ' ಎಂಬುದರಲ್ಲಿ ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆ.

 ಕೊಂಚ ತಳಮಳ, ಅಳುಕು ಇದ್ದರೂ ಹೊಸ ವಿಷಯದ ಬಗ್ಗೆ ಕುತೂಹಲವೂ ಇತ್ತು.ಆಗಿನ್ನೂ ಅ ಆ ಇ ಈ ಗಳನ್ನೇ ಚಿತ್ರಗಳಂತೆ ಸ್ಲೇಟಿನಲ್ಲಿ ಬರೆದದ್ದರ ಮೇಲೆ ಪುನಃ ಗೀಚಿ ಅದನ್ನು ಇಂಚುಗಟ್ಟಲೆ ದಪ್ಪವಾಗಿಸುತ್ತಿದ್ದ ಕಾಲ. ಅಂತಹ ಕಾಲದಲ್ಲಿ ನಾನು ಚಿತ್ರ ಬಿಡಿಸುವ ಸ್ಪರ್ಧೆಯ ಕಣದಲ್ಲಿ ನೇರವಾಗಿ ಇಳಿಸಲ್ಪಟ್ಟಿದ್ದೆ. 

ಎಲ್ಲರೂ ಬರುವಾಗ ಬಿಳಿ ಹಾಳೆ ,ಪೆನ್ಸಿಲ್ ಮತ್ತು ರಬ್ಬರ್ ಗಳನ್ನು ತರಬೇಕೆಂಬುದು ಮೊದಲೇ ತಿಳಿಸಲ್ಪಟ್ಟಿತ್ತು. ಇದರಿಂದಾಗಿ ನಾನು ಆ ದಿನದ ಮಟ್ಟಿಗೆ ಬಳಪ ಸ್ಲೇಟಿನಿಂದ ಒಮ್ಮೆಲೇ ಪೆನ್ಸಿಲ್ ಪೇಪರಿಗೆ ಬಡ್ತಿ ಪಡೆದಿದ್ದೆ. ನನ್ನ ಓರಗೆಯವರಲ್ಲಿಲ್ಲ ಪೆನ್ಸಿಲ್ ನನ್ನ ಬಳಿ ಇದ್ದುದು ನನಗೆ ಗೌರವ ತರುವ ವಿಷಯವಾಗಿತ್ತು.  

ನನ್ನಮ್ಮ ಕೂಡ ನನ್ನ ಕೈಯಲ್ಲಿನ ಪೆನ್ಸಿಲ್ ಬಗ್ಗೆ ಅಗತ್ಯಕ್ಕಿಂತ ಜಾಸ್ತಿ ಕಾಳಜಿ ವಹಿಸಿದ್ದರು. ಹೌದೋ ಅಲ್ಲವೋ ಎಂಬಂತೆ ಸೀಸದ ತುದಿ ಕಾಣಿಸುವಂತೆ ಚೂಪು ಮಾಡಿದ ಪೆನ್ಸಿಲ್ ನನ್ನ ಕೈಗಿತ್ತಳು. ನನಗೋ ಅದರ ತುದಿ ಇನ್ನೂ  ಉದ್ದ ಇರಬೇಕೆಂಬಾಸೆ. ಆದರೆ ಅಮ್ಮ ಅದನ್ನು ಬಲವಾಗಿ ವಿರೋಧಿಸಿ, 'ನೀನು ಬರೆಯುವಾಗ ದಿನಕ್ಕೆ ನಾಲ್ಕು ಬಳಪದ ಕಡ್ಡಿ ತುಂಡು ಮಾಡುವವಳು. ನಿನ್ನ ಕೈಗೆ ಉದ್ದ ಚೂಪು ಮಾಡಿದ ಪೆನ್ಸಿಲ್ ಕೊಟ್ರೆ ಅದನ್ನು ಪೇಪರ್ ಮೇಲೆ ಒತ್ತಿ ತುಂಡು ಮಾಡ್ತೀಯ ಅಷ್ಟೆ .. ಆಮೇಲೆ ಚಿತ್ರ ಹೇಗೆ ಬಿಡಿಸೋದು'ಅಂತೆಲ್ಲ ಹೆದರಿಸಿದಳು. ಚಿತ್ರ ಬಿಡಿಸಿ ಆದ ಮೇಲೂ ನನ್ನ ಕೈಯಲ್ಲಿ ಪೆನ್ಸಿಲ್ ಉಳಿಯುತ್ತದಲ್ಲ ,ಆಗ ನೋಡಿಕೊಂಡರಾಯ್ತು ಅದರ  ಕತೆ  ಅಂದುಕೊಂಡೆ.  
ಎಲ್ಲಾ ಸಿದ್ಧತೆಗಳು ಮುಗಿದ ನಂತರ ನಾನು  ಕೈಯಲ್ಲಿರುವ ಪೆನ್ಸಿಲ್ ಎಲ್ಲರಿಗೂ ಕಾಣಿಸುವಂತೆ ಹಿಡಿದು, ಒಂದು ಗಂಟೆ ಮುಂಚಿತವಾಗಿಯೇ ಮನೆಯಿಂದ  ಹೊರಟೆ. ಅಲ್ಲಿ ನನ್ನಂತೆ ತಮ್ಮ ಪೆನ್ಸಿಲ್ ಝಳಪಿಸುತ್ತಾ, ಇನ್ನು ಕೆಲವು ಮಕ್ಕಳು ಕುಳಿತಿದ್ದರು. ಎಲ್ಲರೂ ನನ್ನ ಗೆಳೆಯ ಗೆಳತಿಯರೇ.. ಆದರೂ ಅಂದೇಕೋ ಕೊಂಚ ಬಿಗುವಿತ್ತು ಮುಖದಲ್ಲಿ. ನಾನಂತೂ ಎಲ್ಲರನ್ನು ಕೊಂಚ ಕನಿಕರದಿಂದಲೇ ನೋಡಿದೆನೆನ್ನಿ. ಯಾಕೆಂದರೆ ಪ್ರಥಮ ಬಹುಮಾನ ನನ್ನದೇ ಎಂಬ ಅಚಲ ನಂಬಿಕೆ ನನ್ನಲ್ಲಿತ್ತು.

ಈ ಅತಿ ವಿಶ್ವಾಸಕ್ಕೂ ಕಾರಣವಿರದಿರಲಿಲ್ಲ. ನಮ್ಮ ಮನೆಗೆ ಯಾರೇ ಬಂದರೂ ನಾನು ಕೂಡಲೇ ಸ್ಲೇಟ್ ಹಿಡಿದು ನನಗೆ ಬಿಡಿಸಲು ಬರುತ್ತಿದ್ದ, ಈಗ ನಾನು ಸ್ಪರ್ಧೆಗೂ ಬಿಡಿಸಲು ನಿಶ್ಚಯಿಸಿದ್ದ   ಅತ್ಯಪೂರ್ವ ಚಿತ್ರವನ್ನು ಬಿಡಿಸಿ ತೋರಿಸುತ್ತಿದ್ದೆ.  ಬಂದವರು ಅಮ್ಮ ಕೊಡುತ್ತಿದ್ದ ಬಿಸಿ ಬಿಸಿ ಕಾಫೀ, ರವೆಉಂಡೆ ಮೆಲ್ಲುತ್ತಾ ನನ್ನ ಚಿತ್ರದ ಕಡೆಗೊಮ್ಮೆ ಕಣ್ಣು ಹಾಯಿಸಿ 'ವ್ಹಾ.. ಎಷ್ಟು ಚೆನ್ನಾಗಿದೆ' ಎಂದು ತಲೆದೂಗುತ್ತಿದ್ದರು. ಹೀಗೆ ಎಲ್ಲರಿಂದಲೂ ಶಹಭಾಸ್ ಗಿರಿ ಪಡೆದುಕೊಂಡ ಚಿತ್ರ ಬಹುಮಾನ ಗೆಲ್ಲದೆ ಹೋದರೆ ಅವರ ನೋಟಕ್ಕೆ ಅವಮಾನವಲ್ಲವೇ..ಆದರೇನು ಸ್ಪರ್ಧೆ ಆದ ಕಾರಣ ಎರಡು ಮತ್ತು ಮೂರನೆ ಬಹುಮಾನಗಳು ಇರುತ್ತವೆ . ಅದನ್ನು ಪಡೆಯಲಿಕ್ಕಾದರೂ ಬೇರೆ ಮಕ್ಕಳು ಬೇಕು ತಾನೆ ಎಂದು ಸಮಾಧಾನಿಕೊಂಡೆ. 

ಮತ್ತೊಮ್ಮೆ ಸ್ಪರ್ಧಾಳುಗಳನ್ನು ಎಣಿಸಿ ನೋಡಿದೆ. ಸರಿಯಾಗಿ ಎಂಟು .. ಅದನ್ನು ನೋಡಲು ಬಂದ ವೀಕ್ಷಕರ ಸಂಖ್ಯೆ ನೂರೆಂಟಕ್ಕಿಂತಲೂ ಮಿಕ್ಕಿದ್ದಿತು. ನನ್ನ ಅಪ್ಪನೂ ಸೇರಿದಂತೆ ಕೆಲವು ಹಿರಿಯರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಎಲ್ಲರನ್ನೂ ಸ್ವಲ್ಪ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಹೇಳಿ 'ಹಾಂ ಈಗ ಸುರು ಮಾಡಿ.. ಹತ್ತು ನಿಮಿಷ ಸಮಯವಿದೆ ನಿಮಗೆ'ಎಂದರು.

ನಾನು ಕೂಡಲೇ ಪೇಪರ್ ನ ಮೇಲೆ ಇಂಗ್ಲಿಷ್ ನ ಕ್ಯಾಪಿಟಲ್ ಎಮ್ ಅಕ್ಷರವನ್ನು ಹತ್ತಿರ ಹತ್ತಿರವಾಗಿ ಮೂರು ಸಲ ಬರೆದೆ. ಅದರಿಂದ ಸ್ವಲ್ಪ ಕೆಳಗೆ ಒಂದು ಬಿಂದುವನ್ನು ಹಾಕಿದೆ.ಈಗ ಬಿಂದುವಿನಿಂದ ಎಲ್ಲಾ ಎಮ್ ನ ಕೆಳಗಿನ ಭಾಗಗಳಿಗೆ ಗೆರೆಗಳನ್ನೆಳೆದು ಸೇರಿಸಿದೆ. ಈಗ ಅದೊಂದು ತಾವರೆ ಹೂವಿನ ಆಕಾರ ಪಡೆಯಿತು. ಇನ್ನು ಅದರ ಕೆಳಗೆ ಒಂದು  ನೇರ ಗೆರೆ. ಅದರ ನಡುವಿನಲ್ಲೊಂದು ಅಡ್ಡ ಗೆರೆ. ಅಡ್ಡಗೆರೆಯ ಎರಡೂ ಬದಿಯಲ್ಲಿ ವೃತ್ತಾಕಾರದ ಎಲೆ  ಎಂದುಕೊಳ್ಳುವಂತಹ ಎರಡು ರಚನೆಗಳು.. ಇವಿಷ್ಟನ್ನು ಮಾಡಲು ನಾನು ತೆಗೆದುಕೊಂಡ ಸಮಯ ಕೇವಲ ಎರಡು ನಿಮಿಷ ಅಷ್ಟೆ.. ಇನ್ನೇನು ನನ್ನದಾಯಿತು ಎಂದು ಏಳಬೇಕೆನ್ನುವುದರಲ್ಲಿ ಅಲ್ಲೇ ಇದ್ದ ಅಪ್ಪ 'ಇನ್ನು ಎಂಟು ನಿಮಿಷ ಇದೆ, ಕೂತ್ಕೋ' ಎಂದರು. 

ನನ್ನ ಚಿತ್ರ ಹೇಗೂ ಬಿಡಿಸಿ ಆಗಿತ್ತಲ್ಲ.. ಮೆಲ್ಲನೆ ಹತ್ತಿರದವರು ಏನು ಬಿಡಿಸುತಿದ್ದಾರೆ ಎಂಬ ಕುತೂಹಲದಲ್ಲಿ ಓರೆನೋಟ ಬೀರಿದೆ. ಅದನ್ನು ಗುರುತಿಸಿದ ಅವರು ನನಗೆ ಕಾಣದಂತೆ ಚಿತ್ರವನ್ನು ಮುಚ್ಚಿಟ್ಟುಕೊಂಡು ಬಿಡಿಸತೊಡಗಿದರು. ಸ್ವಲ್ಪ ಹೊತ್ತು ಕಳೆದ ಮೇಲೆ ನನ್ನ ಪಕ್ಕವೇ ಕುಳಿತಿದ್ದ ನನ್ನ ಗೆಳೆಯನೊಬ್ಬ ನೀನು ಏನು ಬಿಡ್ಸಿದ್ದೀಯ ತೋರ್ಸು,ಆಮೇಲೆ ನನ್ನ ಚಿತ್ರ ತೋರಿಸ್ತೀನಿ ಅಂದ. ನಾನು ಧೈರ್ಯದಿಂದ ಅವನಿಗೆ ಮಾತ್ರ ಕಾಣುವಂತೆ ಚಿತ್ರ ತೋರಿಸಿದೆ. ಅವನು ನಕ್ಕಂತೆ ಮಾಡಿ ತಾನು ಬಿಡಿಸಿದ ಚಿತ್ರ ತೋರಿಸಿದ. ಇಡೀ ಹಾಳೆಯ ಮೇಲೆ ಕೊಂಚವೂ ಜಾಗ ಉಳಿಯದಂತೆ ಮರ ಗಿಡ ತೊರೆ ಬೆಟ್ಟ ಗುಡ್ಡಗಳು ತುಂಬಿದ್ದವಲ್ಲಿ. ಮತ್ತೊಮ್ಮೆ ನನ್ನ ಚಿತ್ರದ ಕಡೆಗೆ ನೋಟ ಹಾಯಿಸಿದೆ. ಕೇವಲ ಎರಡಿಂಚು ಉದ್ದಗಲದ ಜಾಗದಲ್ಲಿ ಚಿತ್ರ ತಣ್ಣಗೆ ಕುಳಿತಿತ್ತು. ಗೆಳೆಯ ಪಿಸು ನುಡಿಯಲ್ಲಿ 'ತಾವರೆ ಹೂವಿನ ಕೆಳಗೆ ನಾಲ್ಕು ಗೆರೆ ಎಳೆದು ನೀರಿನಂತೆ ಮಾಡು' ಎಂದ. ಯಾಕೋ ಅವನ ಹತ್ತಿರ ಯಾವ ರೀತಿಯ ಗೆರೆ ಎಂದು ಕೇಳಲು ನನ್ನ ಸ್ವಾಭಿಮಾನ ಬಿಡಲಿಲ್ಲ. ಜೊತೆಗೆ ಅವನೀಗ ನನ್ನ ಪ್ರಥಮ ಸ್ಥಾನದ ಬಹು ದೊಡ್ಡ ಪ್ರತಿಸ್ಪರ್ಧಿಯಾಗಿಯೂ  ಕಾಣುತ್ತಿದ್ದ. 

ಅಷ್ಟರಲ್ಲಿ 'ಸಮಯ ಆಯ್ತು, ಎಲ್ಲರೂ ಚಿತ್ರಗಳನ್ನು ಕೊಡಿ' ಅಂದರು.ನಾನು ಅವಸರದಿಂದ ನಾಲ್ಕಾರು ಗೀರುಗಳನ್ನು ಉದ್ದಕ್ಕೂ, ಕೆಲವನ್ನು ಅಡ್ಡಕ್ಕೂ ಎಳೆದೆ. ಯಾವುದಾದರೊಂದನ್ನು ತೀರ್ಪುಗಾರರು ನೀರು ಎಂದು ಪರಿಗಣಿಸಿಯಾರೆಂಬ ನಂಬಿಕೆಯಲ್ಲಿ..

ಸ್ವಲ್ಪ ಹೊತ್ತು ಎಲ್ಲ ಕಡೆ ನೀರವ ಮೌನ.. ನನಗೋ ಒಳಗಿನಿಂದಲೇ ಏನೋ ಉದ್ವೇಗ.. ಈಗ ತೀರ್ಪುಗಾರರಲ್ಲೊಬ್ಬರು ಎದ್ದು ನಿಂತು ಪ್ರಥಮ ಸ್ಥಾನಿಯಾದ ನನ್ನ ಗೆಳೆಯನ ಹೆಸರು ಹೇಳಿದರು. ಇದು ನನಗೆ ಮೊದಲೆ ಗೊತ್ತಾಗಿತ್ತಾದ್ದರಿಂದ, ಎರಡು ಮತ್ತು ಮೂರನೆಯ ಹೆಸರುಗಳನ್ನು ಕಿವಿಗೊಟ್ಟು ಕೇಳಿಸಿಕೊಳ್ಳಲು ಕಾದೆ. ಅದೂ ಕೂಡ ಬೇರೆಯವರ ಪಾಲಾಯಿತು. ಕಣ್ಣಲ್ಲಿ ತುಂಬುತ್ತಿದ್ದ ನೀರ ಹನಿಗಳನ್ನು ಅಡಗಿಸಲು ವ್ಯರ್ಥ ಪ್ರಯತ್ನ ಮಾಡುತ್ತ ನಿಂತಿದ್ದೆ. ಅಷ್ಟರಲ್ಲಿ ಭಾಗವಹಿಸಿದ ಎಲ್ಲರಿಗೂ ಪುಟ್ಟ ಪುಟ್ಟ ಬಹುಮಾನಗಳನ್ನು ನೀಡಿ ಹರಸಿದರು. 
ಅದೆ ಮೊದಲು ಮತ್ತು ಕೊನೆ ನನ್ನ ಚಿತ್ರ ಕಲೆಯಲ್ಲಿ ನಾನು ಭಾಗವಹಿಸಿದ್ದ  ಸ್ಪರ್ಧೆಯದ್ದು...!!

ನನ್ನ ಚಿತ್ರಗಳೆಲ್ಲ ಸ್ಪರ್ಧೆಯ  ಮಟ್ಟದಿಂದ  ಬಹು ಎತ್ತರದಲ್ಲಿದ್ದು ತೀರ್ಪುಗಾರರಿಗೆ ಅವುಗಳನ್ನು ಮೌಲ್ಯಮಾಪನ ಮಾಡಲು ಕಷ್ಟವಾಗುವುದರಿಂದ ಮತ್ತು ನಾನು ಬಿಡಿಸಿದ 'ಚಿತ್ರ'ಗಳೆಲ್ಲವೂ ಮೇಲ್ಗಡೆ ಹೆಸರು ಬರೆಯದೆ ಇದ್ದರೆ ಯಾವ ಚಿತ್ರವಿದು ಎಂದು ತಿಳಿಯದೆ, ಅದನ್ನು ನೋಡಿ ಕೊಂಚ ಹೊತ್ತಿನ ಕಾಲ ಅವರಿಗೆ ತಮಗೆ ಗೊತ್ತಿರುವ ಚಿತ್ರಕಲೆಯ ಸಾಮಾನ್ಯ ವಿಷಯಗಳು ಮರೆತು ಹೋಗುವುದರಿಂದ, ನಾನಂತೂ ಇನ್ನು ಮುಂದೆ ಇಂತಹ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಂದೇ ನಿಶ್ಚಯಿಸಿಬಿಟ್ಟೆ. 

ಇದರಿಂದಾಗಿ ದೇಶ ನನ್ನಂತಾ ಮಹೋನ್ನತ ಕಲಾಪ್ರತಿಭೆಯನ್ನು ಕಳೆದುಕೊಂಡು ಬಡವಾದುದನ್ನು ನೆನೆದರೆ ಇಂದಿಗೂ  ಸ್ವಲ್ಪ ಬೇಸರವಾಗುವುದೂ ಸತ್ಯ.. !!

--