Pages

Total Visitors

Friday, January 27, 2012

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವು ..
ಗಾಳಿಯಲ್ಲಿ ತೇಲಿ ಬಂದ ಹೂವ ಕಂಪಿಗೆ ಮಾರು ಹೋದ ದ್ರೌಪತಿ ಭೀಮಸೇನನನ್ನು ಕಾಡಿಸಿ ಪೀಡಿಸಿ ಸೌಗಂಧಿಕಾ ಪುಷ್ಪವನ್ನು ತರಿಸಿದ್ದು .. , ಯುದ್ಧದಲ್ಲಿ ಸಹಾಯಕ್ಕಾಗಿ ಕೃಷ್ಣನೊಡನೆ ಹೋದ ಸತಿ ಸತ್ಯಭಾಮೆ  ದೇವೇಂದ್ರನ ಉದ್ಯಾನವನದಿಂದ ಪಾರಿಜಾತವನ್ನು ಭೂಮಿಗೆ ತಂದದ್ದು ಇದೆಲ್ಲ ಸ್ತ್ರೀಯರ ಪ್ರಕೃತಿ ಪ್ರೇಮದ , ಗಿಡಗಳ ಬಗೆಗಿನ ಪ್ರೀತಿಯ ಪರಾಕಾಷ್ಟತೆಯನ್ನು ಸೂಚಿಸುತ್ತದೆ ಎಂದರೆ ಹೆಣ್ಣು ಮಕ್ಕಳ ಗಂಡಂದಿರಾರು ಒಪ್ಪಿ ತಲೆಯಾಡಿಸುವುದಿಲ್ಲ ಎಂದು ನನಗೆ ತಿಳಿದಿದೆ ಬಿಡಿ. ಯಾಕೆಂದರೆ ನಾನೂ ಈ ಸಮಸ್ಯೆಯನ್ನು ಅನುಭವಿಸಿದವಳೇ ಇದ್ದೇನೆ.
ಪಕ್ಕದ ಮನೆಯ ಕಾಂಪೋಂಡ್ ದಾಟಿ ಬರುವ ಅದಾವುದೋ ಹೂವ ಪರಿಮಳ , ಅವರ ಗೇಟಿನ ಬದಿಯಿಂದಲೇ ಕಾಣ ಬರುವ ಅದರ ಪಾರ್ಶ್ವನೋಟ ನನ್ನನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂದರೆ ಅವರೆಂದೋ ತೋರಿಕೆಗಾಗಿ ಕೇಳಿ ಮರೆತ ಪುಸ್ತಕವನ್ನೋ , ಮ್ಯಾಗಜಿನ್ನನ್ನೋ ಕೂಡಲೇ ಕೈಯಲ್ಲಿ ಹಿಡಿದು ಅವರ ಮನೆಯ ಗೇಟನ್ನು ಕಿರ್ ಗುಟ್ಟಿಸುತ್ತೇನೆ. ಕಣ್ತುಂಬ ಅದರ ಅಂದವನ್ನು ತುಂಬಿಕೊಂಡರಷ್ಟೇ ಸಾಕೇ.. ಗಿಡದ ಬುಡದಲ್ಲಿ ನನಗೆ ನೆಡಲಾಗುವಷ್ಟು ದೊಡ್ದ ಗೆಲ್ಲುಗಳು ಕವಲೊಡೆದಿವೆಯೇ, ಒಣಗಿದ ಬೀಜಗಳಿವೆಯೇ, ಹೀಗೆ ಎಲ್ಲವನ್ನೂ ಕೂಲಂಕುಶವಾಗಿ ಕಣ್ಣುಗಳು ಕ್ಷಣಾರ್ಧದಲ್ಲಿ ಅಳೆದು ಬಿಡುತ್ತವೆ. ನಿಧಾನಕ್ಕೆ ಅವರ ಮೂಡ್ ಹೇಗಿದೆ ಎನ್ನುವುದನ್ನು ನೋಡಿಕೊಂಡು ಗಿಡ ಕೇಳುವ ಹುನ್ನಾರವೂ ತಲೆಯೊಳಗೆ ತಿರುಗಾಡುತ್ತಿರುತ್ತದೆ. ನನ್ನವರ ಅದೃಷ್ಟ ನೆಟ್ಟಗಿದ್ದರೆ ಗಿಡದ ಯಾವುದೋ ಒಂದು ನೆಡುವಂತಹ ಭಾಗ ನನ್ನ ಕೈಯಲ್ಲಿರುತ್ತದೆ. ಇಲ್ಲದಿದ್ದರೆ ಕೂಡಲೆ ಪತಿ ಪರಾಯಣೆಯಾದ ನಾನು ಅವರನ್ನು ಸ್ತುತಿಸಲು ತೊಡಗುತ್ತೇನೆ. ಮೊದಲಿನ ಕಾಲದಲ್ಲಿ ಋಷಿ ಮುನಿಗಳು ಒಂಟಿ ಕಾಲಿನಲ್ಲಿ ನಿಂತು ತಪ್ಪಸ್ಸನ್ನಾಚರಿಸುತ್ತಿದ್ದರು ಎಂದು ಕೇಳಿದ್ದೋ, ಓದಿದ್ದೋ ನೆನಪಿದ್ದರೆ ಒಮ್ಮೆ ಅದನ್ನು ಕಣ್ಣೆದುರು ತಂದುಕೊಳ್ಳಿ. ಅದಕ್ಕಿಂತಲೂ ಕಠಿಣ  ತಪಸ್ಸು  ನನ್ನದು . ಗಿಡ ನನ್ನ ಕೈಗೆ ಬರುವವರೆಗೆ ಊಟ, ಉಪಚಾರಗಳ ಗೊಡವೆಗೇ ಹೋಗುವುದಿಲ್ಲ. ಪತಿದೇವರಾದರೂ ಎಷ್ಟೆಂದು ನನ್ನ ತಪಸ್ಸನ್ನು ಪರೀಕ್ಷಿಸಲೆತ್ನಿಸಿ ಹೋಟೇಲುಗಳಿಗೆ ಎಡತಾಕಿಯಾರು ನೀವೆ ಹೇಳಿ..? ಕೂಡಲೆ ಒಲಿದು ತಥಾಸ್ತು ಎಂದು ನರ್ಸರಿಯಿಂದ  ಕೊಂಡ ಗಿಡವೊಂದನ್ನು ನನ್ನ ಕೈಯಲ್ಲಿಟ್ಟು, ನಾನು ಅದರ ಅಂದ ಚಂದಗಳನ್ನು ಹೊಗಳಲು ಸುರು ಮಾಡುವ ಮೊದಲೇ ಮಾಯವಾಗಿ ಬಿಡುತ್ತಾರೆ!

ಇಂತಿಪ್ಪ ಕಾಲದಲ್ಲೊಮ್ಮೆ ನನ್ನ ತವರೂರಿನಲ್ಲಿ ಊರಿಗೆ ಊರೇ ಸಂಭ್ರಮಿಸುವ ಜಾತ್ರೆ ಸಮೀಪಿಸಿತು. ಮಗಳಿಲ್ಲದ ಜಾತ್ರೆ ತೌರಿನವರಿಗೆ ಹೇಗೆ ರುಚಿಸೀತು ಎಂಬ ಸತ್ಯವನ್ನರಿತು ನಾನು ಒಂದೆರಡು ದಿನ ಮುಂಚಿತವಾಗಿಯೇ ತಲುಪಿದ್ದೆ. ನನ್ನ ಓರಗೆಯ ಗೆಳತಿಯರನೇಕರು ಇದನ್ನೇ ಅನುಸರಿಸುತ್ತಿದ್ದ ಕಾರಣ ನಮ್ಮ ಮಾತು ಗೌಜು ಗದ್ದಲಗಳಲ್ಲಿ ಜಾತ್ರೆ ಯಾವಾಗ ಕಳೆತೆಂದೇ ತಿಳಿಯುತ್ತಿರಲಿಲ್ಲ. 
ಈ ಸಲ ನನ್ನಿಂದ ಒಂದು ದಿನ ಮುಂಚಿತವಾಗಿಯೇ ಬಂದು ಅಪ್ಪನ ಮನೆಯ ಸೇವೆಯನ್ನು ಸ್ವೀಕರಿಸುತ್ತಿದ್ದ ಗೆಳತಿ, ನನ್ನ ಮುಖ ಕಂಡೊಡನೇ ಅವಸರದಿಂದ 'ಹೇ ಈ ಸಲ ಜಾತ್ರೆಗೆ ಹೂವಿನ ಬೀಜಗಳ ಅಂಗಡಿ ಬಂದಿದೆ ಕಣೇ.. ನಾನಂತೂ ನಿನ್ನೆಯೇ ಕೆಲವು ಜಾತಿಯ ಬೀಜಗಳನ್ನು ತೆಗೆದಿಟ್ಟುಕೊಂಡೂ ಆಯ್ತು ಎಂದು ನನ್ನ ಹೊಟ್ಟೆ ಉರಿಸಿದಳು. ಹತ್ತಿರವೇ ಇದ್ದ ಅವಳ ಮನೆಗೆ ನನ್ನನ್ನೆಳೆದೊಯ್ದು ಬಣ್ಣ ಬಣ್ಣದ ಹೂವಿನ ಚಿತ್ರಗಳುಳ್ಳ ಕಾಗದದ ಪುಟ್ಟ ಲಕೋಟೆಗಳನ್ನು ತೋರಿಸಿದಳು. ಒಳಗೇನಿದೆ ಎಂದು ನೋಡುವಂತಿರಲಿಲ್ಲ. ನನ್ನ ಕಣ್ಣಲ್ಲಿ ಹೊಳೆದ ಆಸೆಯನ್ನು ಅರ್ಥೈಸಿಕೊಂಡು,  'ನಾಳೆಯೂ ಇರುತ್ತೆ, ನಾನೇ ಕರ್ಕೊಂಡು ಹೋಗ್ತೀನಿ' ಎಂದು ಬೇಗನೇ ಅವುಗಳನ್ನು ಎತ್ತಿ ಒಳಗಿಟ್ಟಳು.

ರಾತ್ರಿಯಿಡೀ ಕನಸಿನಲ್ಲೆಲ್ಲ ನಾನು ಕಾಗದದ ಲಕೋಟೆಯ ಮೇಲೆ ಕಂಡ ಹೂವುಗಳ ಉದ್ಯಾನವನದಲ್ಲಿ ವಿಹರಿಸಿದ್ದೇ ವಿಹರಿಸಿದ್ದು. ಬೆಳಗಾಗುತ್ತಿದ್ದಂತೆ ಸೂರ್ಯ ಎಲ್ಲರಿಗಿಂತ ಮೊದಲು ನನ್ನನ್ನೇ ಏಳಿಸಿದ್ದ. ಅಮ್ಮ ಇನ್ನೂ ತಿಂಡಿಯ ತಯಾರಿಯಲ್ಲಿರುವಾಗಲೇ ಪಕ್ಕದ ಮನೆಯಲ್ಲಿದ್ದ ಗೆಳತಿಯನ್ನು ಕರೆದುಕೊಂಡು  ಹೂವಿನ ಬೀಜದ ಅಂಗಡಿಗೆ ನಡೆದು ಕಣ್ಣಿಗೆ ಅಂದವೆಂದು ಕಂಡ ಎಲ್ಲಾ ಹೂಗಳ ಬೀಜಗಳನ್ನು ಖರೀದಿಸಿದೆ. 

ಬಣ್ಣ ಬಣ್ಣದ ಹೂವಿನ ಚಿತ್ರಗಳು. ನೋಡಿದರೆ ಕಣ್ಣು ತಂಪೆನಿಸುತ್ತಿತ್ತು. ಸಾಮಾನ್ಯವಾಗಿ ಜಾತ್ರೆಯ ನಂತರವೂ ನನ್ನ ತೌರಿನ ವಾಸ್ತವ್ಯವನ್ನು ಒಂದೆರಡು ದಿನಕ್ಕೆ ವಿಸ್ತರಿಸುತ್ತಿದ್ದ ನಾನು, ಮೇಲಿಂದ ಮೇಲೆ ಬರ ತೊಡಗುವ ಇವರ ಫೋನ್  ಕರೆಗಳ ಕರಕರೆ ಸುರುವಾವಾದ ನಂತರವೇ  ಹೊರಡುತ್ತಿದ್ದೆ. ಆದರೆ ನಾನು ಈ ಸಲ ಜಾತ್ರೆ ಮುಗಿಯುತ್ತಿದ್ದಂತೇ, ಗಂಟು ಮೂಟೆ ಕಟ್ಟಿ ಹೊರಟೇ ಬಿಟ್ಟಿದ್ದೆ. ಇವರ ಅಚ್ಚರಿಯ ನೋಟಕ್ಕೆ ಉತ್ತರಿಸುವ ಗೋಜಿಗೆ ಹೋಗದೇ, ತಂದ ಲಗೇಜನ್ನು ಬಿಚ್ಚುವ ಮುಂಚೆಯೇ ಚಟ್ಟಿಗಳಿಗೆ ಮಣ್ಣು ತುಂಬುವ ಕಾರ್ಯದಲ್ಲಿ ನಿರತಳಾದೆ. 

ಇವರು ನನ್ನನ್ನು ಇಂತಹ  ಹೊತ್ತಿನಲ್ಲಿ ಮಾತಾಡಿಸುವ ಅಪಾಯಕ್ಕೆ ಕೈ ಹಾಕದೇ ನನ್ನಮ್ಮ ಕಟ್ಟಿಕೊಟ್ಟಿದ್ದ ಕೋಡುಬಳೆ, ರವೆಉಂಡೆಗಳು ಹೇಗಾಗಿದೆ ಎಂದು ನೋಡಲು ತಟ್ಟೆಗೆ ಹಾಕಿಕೊಂಡು ಆರಾಮವಾಗಿ ಸೋಫಾರೂಢರಾದರು.

ನಾನು  ಒಂದೊಂದೇ ಲಕೋಟೆಗಳನ್ನು ಜಾಗ್ರತೆಯಿಂದ  ಹರಿದು ,ಒಳಗಿನ ಬೀಜಗಳನ್ನು ನೋಡತೊಡಗಿದೆ. ಅಚ್ಚರಿಯೆಂಬಂತೆ ಎಲ್ಲಾ ಲಕೋಟೆಗಳಲ್ಲೂ ಬೀಜಗಳು ಕಪ್ಪಾಗಿದ್ದು ಒಂದೇ ರೀತಿಯ ಆಕಾರ ಗಾತ್ರಗಳನ್ನು ಹೊಂದಿದ್ದವು. ಒಂದೇ ತರದ ಬೀಜಗಳಿಂದ ಇಷ್ಟೊಂದು ಬಗೆಯ ಹೂವುಗಳೇ ! ಎಂದು ಉದ್ಗರಿಸುತ್ತಾ ಇವರೆಡೆಗೆ ತಿರುಗಿ , " ನೋಡ್ತಾ ಇರಿ ಇನ್ನು  ಕೆಲವೇ ದಿನಗಳಲ್ಲಿ ನಮ್ಮನೆಗೆ ಸುಂದರ ಹೂದೋಟ ಹೊಂದಿದ ಮನೆ ಅಂತ ಅವಾರ್ಡ್ ಬರುತ್ತೆ. ಮೊನ್ನೆ ಆ ಪಕ್ಕದ ಮನೆ ಯಶೋದಮ್ಮ ಅಂತೂ ಒಂದು ಪುಟ್ಟ ಗಿಡ ಕೊಡೋಕ್ಕೂ ಹೇಗಾಡ್ಬಿಟ್ರು  ಅಂತೀರಿ! ಇನ್ನು ನನ್ನ ಗಾರ್ಡನ್ ನೋಡಿ ತಾವೇ ಬರ್ತಾರೆ ನನ್ಹತ್ರ ಗಿಡ ಕೇಳ್ಕೊಂಡು" ಎಂದು ಹೆಮ್ಮೆಯಿಂದ  ನುಡಿದು ಕನಸಿನ ಲೋಕಕ್ಕೂ ಹೋಗಿ ಬಂದೆ. ಇವರೋ ಬಾಯೊಳಗೆ ತುಂಬಿಕೊಂಡ ರವೆ ಉಂಡೆಯಿಂದಾಗಿ  ಹುಂ.. ಉಹುಂ.. ಮ್ ಮ್.. ಎಂದೇನೋ ಸ್ವರ ಹೊರಡಿಸಿದರು. 

ಮರುದಿನದಿಂದಲೇ ದಿನಕ್ಕೆ ನಾಲ್ಕು ಸಲ ಚಟ್ಟಿಯ ಕಡೆಗೆ ಇಣುಕುತ್ತಾ  ,ಜಾತಕ ಪಕ್ಷಿಯಂತೆ ಬೀಜಗಳು ಮೊಳಕೆಯೊಡೆಯುವ ಸುಮುಹೂರ್ತವನ್ನು ಕಾಯುತ್ತಾ ಕುಳಿತೆ. ಎಸೆಯದೆ ಉಳಿಸಿಕೊಂಡಿದ್ದ ಬಣ್ಣದ ಹೂವಿನ ಲಕೋಟೆಗಳನ್ನು ಅಡುಗೆ ಮನೆಯ ಕಟ್ಟೆಯಲ್ಲೆ ಇಟ್ಟುಕೊಂಡು ಅಗಾಗ ನೋಡಿ ಆನಂದಿಸುತ್ತಿದ್ದೆ. ತಾಳುವಿಕೆಗಿಂತ ತಪವು ಇಲ್ಲ ಅಂತ ದಾಸರು ಸುಮ್ಮನೇ ಹೇಳಿಲ್ಲ ನೋಡೀ.. ಒಂದು ಶುಭ ಮುಂಜಾನೆ ಎಲ್ಲಾ ಮಣ್ಣಿನ ಚಟ್ಟಿಗಳಲ್ಲೂ  ಪುಟ್ಟ ಪುಟ್ಟ ಹಸಿರೆಲೆಗಳ ಗಿಡಗಳು ತಲೆದೋರಿದ್ದವು! ದಿನೇ ದಿನೇ ಗಿಡಗಳು ದೊಡ್ದದಾಗುತ್ತಿದ್ದಂತೆ ಮತ್ತೊಮ್ಮೆ ಆಶ್ಚರ್ಯ ಪಡುವ ಸರದಿ ನನ್ನದಾಯಿತು. ಅದ್ಯಾಕೋ ಎಲ್ಲಾ ಗಿಡಗಳ ಎಲೆಗಳೂ ಒಂದೆ ರೀತಿಯದಾಗಿದ್ದವು.ಗಿಡಗಳೆಲ್ಲ  ಮೂರ್ನಾಲ್ಕು  ಇಂಚುಗಳಷ್ಟು ಬೆಳೆಯುವ ಮೊದಲೇ ಎಲೆಯ ಬುಡದಿಂದ  ಬತ್ತದ ಉಮಿಯಂತೆ ತೋರುವ  ಪಾಚಿ ಬಣ್ಣದ ಮೊಗ್ಗುಗಳು ಮೂಡಿದವು. ಅಷ್ಟರಲ್ಲೇ ಯಶೋದಮ್ಮ ನಮ್ಮ ಮನೆಗೆ ಬಂದಿದ್ದವರು ನನ್ನ ಚಟ್ಟಿಗಳ  ಕಡೆಗೆ ತಿರುಗಿ ನೋಡಿ 'ಅದ್ಯಾಕೆ ಕಾಡು ಹರಿವೆ ಗಿಡ ಇಷ್ಟೊಂದು ಚಟ್ಟಿ ಗಳಲ್ಲಿ ಬೆಳೀತಿದ್ದೆಯಾ..?? ಪಲ್ಯ ಮಾಡೋಕು ಕಹಿ ಆಗುತ್ತೆ ಅದು' ಅಂದುಬಿಡಬೇಕೇ ..   ಬಣ್ಣ ಬಣ್ಣದ ಹೂಗಳ ನನ್ನ ಕನಸೆಲ್ಲ ಕಪ್ಪು ಬಿಳುಪಾಗಿ ನನ್ನನ್ನು ಅಣಕಿಸಿ ಮಾಯವಾದವು.  
ಇವರು ನನ್ನನ್ನು ಮತ್ತು ನನ್ನ ಉದ್ಯಾನವನದ ಅಂದ ಕಂಡು ನಗುತ್ತಿದ್ದರೆ , ನಾನು ಛಲ ಬಿಡದೆ ಬಣ್ಣದ ಲಕೋಟೆಗಳ ಮೇಲೆ ಸರಬರಾಜುದಾರರ ವಿಳಾಸವೇನಾದರೂ ಇದೆಯೋ ಎಂದು ಹುಡುಕುತ್ತಿದ್ದೆ.ಕೋಲು ಕೊಟ್ಟು ಹೊಡೆಸಿಕೊಳ್ಳಲು ಅವರೇನು ನಿನ್ನಂತ  ಅತಿ ಬುದ್ಧಿವಂತರೇ ..ಎಂದು  ನನ್ನ ವೇದನೆಯ ಅಗ್ನಿಗೆ ಇವರು  ಇನ್ನೊಂದಿಷ್ಟು  ತುಪ್ಪ ಸುರಿದರು .ಕೋಪ ಬಂದರೂ ಮಾತನಾಡದೆ ಲಕೋಟೆ ಗಳನ್ನೆಲ್ಲ  ಬಚ್ಚಲ ಒಲೆಗೆ ಎಸೆದೆ . 

 ಈಗ ಯಥಾ ಪ್ರಕಾರ ನನ್ನ ಮೊದಲಿನ  ಹವ್ಯಾಸದಂತೆ ಅವರಿವರ  ಮನೆಯ ಕಾಂಪೋಂಡಿನ ಕಡೆಗೆ ಕಣ್ಣು ಹಾಯಿಸುವುದನ್ನು ಪ್ರಾರಂಭಿಸಿದ್ದೇನೆ. 


Friday, January 20, 2012

ಐ ಲವ್ ಯೂ ರಸ್ನಾಅಡಿಗೆ ಮಾಡುವ ವಿಧಿ ವಿಧಾನಗಳನ್ನೆಲ್ಲ ನನ್ನ ಮಸ್ತಕದೊಳಗೆ ಇಳಿಸಲು ಸಮಯದ ಅಭಾವ ಹೊಂದಿದ ಅಮ್ಮ ಪುಸ್ತಕದ ಹಾಳೆಯೊಳಗಿಳಿಸಿ ಅದನ್ನು ನನ್ನ ಕಣ್ಣಿಗೆ ಕಾಣುವಂತೆ ಟೇಬಲ್ ಮೇಲಿಟ್ಟು 'ಜಾಗ್ರತೆ' ಎನ್ನುವ ಪದವನ್ನು ಮನೆಯಲ್ಲಿ ಹೇಳಿದ್ದು ಸಾಲದೆ, ಬಸ್ಸಿನ ಸೀಟಿನಲ್ಲಿ ಅಸೀನಳಾಗಿ ಬಸ್ ಹೊರಟ ಮೇಲೂ ತಲೆ ಹೊರಗೆ ಹಾಕಿ ಹೇಳಿದಳು. 

ಅಮ್ಮನನ್ನು ಬೀಳ್ಕೊಟ್ಟು ಮನೆಯೊಳಗೆ ಕಾಲಿಡುವಾಗಲೇ ರೋಮಾಂಚನ . ನೀಟಾಗಿ ಅಡುಗೆ ಮನೆಯಲ್ಲಿ ಕವುಚಿಟ್ಟ ಸ್ಟೀಲ್ ಪಾತ್ರೆಗಳು ಲೋಟ ಸೌಟುಗಳು ನನ್ನ ಗಡಿಬಿಡಿಗೆ ಸ್ಥಾನಪಲ್ಲಟಗೊಂಡಾಗ ಉಂಟಾಗುವ ಶಬ್ಧಗಳು ಸಂಗೀತ ವಾದ್ಯಗಳೋ ಎಂಬಂತೆ ನನ್ನ ಸ್ವರ ಅದರೊಡನೆ ಜೊತೆಗೂಡುತ್ತಿತ್ತು. ಅಡುಗೆ ಮನೆಯೊಡನಾಟ ಹೊಸತೇನು ಅಲ್ಲವಾದರೂ. ಅಲ್ಲಿ ಅಮ್ಮನ ಸ್ಟವ್  ಆಫ್  ಎಂಬ ಆರ್ಡರೋ, ಕಾಯಿ  ಹೆರೆದು ಕೊಡ್ತೀಯ ಮುದ್ದು ಪ್ಲೀಸ್ ಎಂಬ ಬೇಡಿಕೆಗಳೋ.. ಇರುತ್ತಿದ್ದವು. ಇಡೀ ಅಡುಗೆ ಮನೆಯನ್ನು ನನ್ನ ಕಾರ್ಯ ಕ್ಷೇತ್ರವಾಗಿಸುವ ಸಂಪೂರ್ಣ ಸ್ವಾತಂತ್ರ್ಯ ಬಂದದ್ದು ಇಂದೇ.. 

ಮೊದಲಿಗೆ ತಿಂಡಿ ಡಬ್ಬಗಳನ್ನೆಲ್ಲ ಹುಡುಕಿ ನನಗಿಷ್ಟವಾದ ಹುರಿಗಾಳನ್ನು ತಟ್ಟೆ ತುಂಬಾ ಸುರುವಿಕೊಂಡೆ..ಬಾಯಿಗೆ ಹುರಿಗಾಳೆಸೆದುಕೊಂಡು, ಅಮ್ಮ ಬರೆದಿಟ್ಟ ಹಾಳೆಯ ಮೇಲೆ ಕಣ್ಣಾಡಿಸಿದೆ. 
ತರಕಾರಿ ಚೆನ್ನಾಗಿ ತೊಳೆದು ಎಂಬಲ್ಲಿಂದ ಸುರುವಾಗಿ,ಇಳಿಸಿ ಒಗ್ಗರಣೆ ಹಾಕುವಲ್ಲಿಯವರೆಗಿನ ವಿಸ್ತಾರವಿತ್ತಲ್ಲಿ. ಕಣ್ಣೆತ್ತಿ ಗೋಡೆಯ ಮೇಲಿದ್ದ ಗಂಟೆ ನೋಡಿದರೆ ಅದಿನ್ನೂ ಹತ್ತರ ಸಮೀಪ ಬಂದಿತ್ತಷ್ಟೆ. ಇಷ್ಟು ಬೇಗ ಯಾಕೆ ಈ ಯಕಶ್ಚಿತ್ ಸಾಂಬಾರನ್ನು ಮಾಡಿಡುವುದು ಎಂದು ತಟ್ಟೆಯಲ್ಲಿದ್ದ ಹುರಿಗಾಳಿನೊಡನೆ ಹೊರ ಬಂದು ಟಿ ವಿ  ಯೊಳಗೆ ಕಣ್ಣು ತೂರಿಸಿದೆ. ರಸಮಯ ಘಟ್ಟಕ್ಕೆ ಬಂದಿತ್ತು ಯಾವುದೋ ಹಳೆ ಸಿನೆಮಾ ..

ಅಷ್ಟರಲ್ಲಿ ಬಾಗಿಲಿನ ಬೆಲ್ ಹೊಡೆದುಕೊಂಡಿದ್ದು ಕೇಳಿಸಿತು. ಎದ್ದ  ರಭಸಕ್ಕೆ ಮಡಿಲಲ್ಲಿಟ್ಟುಕೊಂಡಿದ್ದ ಹುರಿಗಾಳಿನ ತಟ್ಟೆ ಚಿಮ್ಮಿ  ನೆಲದ ಮೇಲೆಲ್ಲ ಹರಡಿತು. ಅದನ್ನೆಲ್ಲ ಕ್ಲೀನ್ ಮಾಡುವಷ್ಟು ವ್ಯವದಾನವಿಲ್ಲದೆ ಕಾಲಿನಲ್ಲಿ ಅವಸರ ಅವಸರವಾಗಿ ಮಂಚದ ಅಡಿಗೆ ಸರಿಸಿ, ಕಾಣದಂತೆ ಮಾಡಿ ಬಾಗಿಲು ತೆರೆದರೆ, ನಾವು ಮೊದಲಿದ್ದ ಮನೆಯ ನೆರೆಯಲ್ಲಿದ್ದ ಆಂಟಿ. ಮತ್ತು ಅವರ ಕೈ ಹಿಡಿದುಕೊಂಡು ನಿಂತ ನೇರವಾಗಿ ಇಂಗ್ಲೆಂಡಿನಿಂದಲೇ ಇಂಪೋರ್ಟ್ ಆದಂತೆ ಕಾಣುತ್ತಿದ್ದ ಬಿಳಿ ಬಣ್ಣದ ಪುಟ್ಟ ಹುಡುಗಿ .

ಟಿ ವಿ ಯ ವಾಲ್ಯೂಮಿನ ತರಂಗಗಳಿಂದಲೇ ಗೊತ್ತಾದವರಂತೆ ಅಮ್ಮ ಮನೇಲಿಲ್ವಾ ಅಂದರು ಅನುಭವಿ  ಆಂಟಿ.

ಕೊಂಚ ಗಂಭೀರ ಮುಖಬಾವದೊಂದಿಗೆ  ಅಮ್ಮ ಇಲ್ಲ, ಹೊರಗೋಗಿದ್ದಾರೆ, ನೀವು ಬನ್ನಿ ಒಳಗೆ ಅಂತ ಆದರದಿಂದ  ಸ್ವಾಗತಿಸಿದೆ.  

ಅತ್ತಿತ್ತ ಕಣ್ಣಾಡಿಸುತ್ತಲೇ ಒಳಗೆ ಬಂದು ಕುರ್ಚಿಯಲ್ಲಿ ಕುಳಿತು ಕೈಯಲ್ಲಿದ್ದ ಪುಸ್ತಕದ ಕಟ್ಟನ್ನು ಟೀಪಾಯಿಗೆ ವರ್ಗಾಯಿಸಿದರು. ಓದ್ಲಿಕ್ಕೆ ಅಂತ ಮೊನ್ನೆ ತೆಗೊಂಡು ಹೋಗಿದ್ದೆ,  ಕೊಟ್ಟಿದ್ದೀನಿ ಅಂತ ಅಮ್ಮನಿಗೆ ಹೇಳ್ಬಿಡು ಅಂದರು. ಆ ಪುಸ್ತಕವನ್ನವರು ತೆಗೆದುಕೊಂಡು ಹೋಗಿ ತಿಂಗಳುಗಳೇ  ಉರುಳಿದ್ದವು. ನಾಲ್ಕಾರು ಬಾರಿ ಕೇಳಿದ ಮೇಲಷ್ಟೆ ಬಂದಿದೆ ಇಂದಿಲ್ಲಿಗೆ ಎನ್ನುವ ಸತ್ಯ ನನಗೂ ತಿಳಿದಿತ್ತು. 

ಅಮ್ಮ ಅಡುಗೆ ಎಲ್ಲಾ ಮಾಡಿಟ್ಟು ಹೋದ್ರಾ.. ಎಂದು ಪ್ರಶ್ನಿಸಿ,ಉತ್ತರದ ಅವಕಾಶವೂ ನೀಡದೆ ಮೇಲೆದ್ದು ನಿಂತು ನಾನಿನ್ನು ಹೊರಡ್ತೀನಿ .. ಪೇಟೆ ಕಡೆ ಹೋಗ್ಬೇಕಿದೆ ಎಂದರು.
ಮನೆಗೆ ಬಂದ ಅತಿಥಿಗಳಿಗೆ ಬಾಯಾರಿಕೆಯೂ ಕೊಡದೆ ಹಾಗೇ ಕಳುಹಿಸಿ ನನ್ನ ಮರ್ಯಾದೆಗೆ ಕುಂದುಂಟು ಮಾಡಿಕೊಳ್ಳುವ ಇಚ್ಚೆ ನನಗಿರಲಿಲ್ಲ. ಇರಿ. ಒಂದು ನಿಮಿಷ. ಕುಡಿಯಲಿಕ್ಕೆ ಏನಾದ್ರು ತರ್ತೀನಿ , ನಿಮ್ಗೆ ಕಾಫಿ ತಾನೆ.. ನಿಂಗೇನು ಪುಟ್ಟಾ ಎಂದು ಮುದ್ದು ಹುಡುಗಿಯ ಗಲ್ಲ ಸವರಿ ಕೇಳಿದೆ. ನಂಗೆ ಜ್ಯೂಸ್ ಅಕ್ಕಾ ಎಂದು ಕೀ ಕೊಟ್ಟಂತೆ ಉಲಿದಳು. 

ಕಾಫಿ ಎನ್ನುವ ದ್ರಾವಣವನ್ನು ನಾನು ಕುಡಿಯದೇ ಇರುವ ಕಾರಣ, ನೋಡಿದ್ದ  ಬಣ್ಣದ ಅಂದಾಜಿನ ಮೇಲೆ ಒಂದು ಲೋಟ ತಯಾರಿಸಿದೆ. ಜ್ಯೂಸ್  ಮಾಡಲು ಸಕ್ಕರೆ ಡಬ್ಬದಿಂದ ಒಂದಷ್ಟು ಸಕ್ಕರೆ ಸುರುವಿ  ನಿಂಬೆ ಹಣ್ಣು ಹಿಂಡಿ,ನೀರು ಸೇರಿಸಿ ಗೊಟಕಾಯಿಸಿದೆ. ನೀರಿನದೇ ಬಣ್ಣ ಹೊತ್ತಿದ್ದ ಅದು ಗಾಜಿನ ಲೋಟದಲ್ಲಿಳಿದಾಗ ಏಕೋ ಆಕರ್ಷಕ ಅನ್ನಿಸಲಿಲ್ಲ.ಆಗಷ್ಟೇ ಟಿವಿಯಲ್ಲಿ ಸುಂದರ  ಟ್ರೇಯ ಮೇಲಿಟ್ಟ ಉದ್ದುದ್ದದ  ಲೋಟಗಳಲ್ಲಿ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿದ್ದ ಜ್ಯೂಸಿನ ಜಾಹಿರಾತನ್ನು ನೋಡಿದ್ದೆ.  ಮಕ್ಕಳೆಲ್ಲಾ ಒಕ್ಕೊರಳಲ್ಲಿ ಐ ಲವ್ ಯೂ ರಸ್ನಾ ಎಂದು ಕಿರುಚುತ್ತಿದ್ದುದನ್ನು  ನೋಡಿಯೇ ಬಾಯಾರಿಕೆ ಆಗುವಂತಿತ್ತು ಅದು .ಇದನ್ನು ಯಾಕೆ ಅದೇ ರೀತಿ ವರ್ಣಮಯಗೊಳಿಸಬಾರದು  ಎಂಬ ಯೋಚನೆ ತಲೆಗೆ ಬಂದಿದ್ದೇ ತಡ  , ಸಾಮಗ್ರಿಗಾಗಿ ಕೊಂಚ ತಡಕಾಡಿದೆ.  ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿಯೇ ಬಿಟ್ಟಿತು. ಒಂದು ಚಮಚ ಭರ್ತಿ ರಂಗಿನ ಹುಡಿಯನ್ನು ಹಾಕಿ ಚೆನ್ನಾಗಿ ಕಲಕಿ ರಸ್ನಾ ಗರ್ಲ್ ನಂತೆ ಇದ್ದ ಪುಟ್ಟ ಹುಡುಗಿಯ  ಕೈಗೆ ನೀಡಿದೆ. 
ಆಂಟಿ ಕಾಫಿಯ ಕಪ್ಪನ್ನು ಅನುಮಾನಿಸುತ್ತ ಎತ್ತಿಕೊಂಡು, ಕಾಫಿಯ ಪರಿಮಳಕ್ಕೇನೋ ಕಣ್ಣು ಮುಚ್ಚಿ ಕುಡಿದರು. ಆದರೆ ನನ್ನ ನೋಟವೆಲ್ಲ ಪುಟ್ಟ ಹುಡುಗಿಯತ್ತಲೇ... ಸಂತಸದಿಂದ ಕಣ್ಣರಳಿಸಿ,ಗಾಜಿನ ಲೋಟದಲ್ಲಿದ ಜ್ಯೂಸನ್ನು ಪೂರ್ತಿಯಾಗಿ ಕುಡಿದು ಮುಗಿಸುವವರೆಗೆ ಲೋಟ ಕೆಳಗಿಳಿಸದ ಬಾಲೆ, ಲೋಟ ಕೆಳಗಿಟ್ಟವಳೇ ಹೋಗೋಣ ದೊಡ್ಡಮ್ಮ ಎಂದು ಹೇಳತೊಡಗಿದಳು.ಅವಳ ತುಟಿಯ ಸುತ್ತೆಲ್ಲ ಜ್ಯೂಸಿನ ಬಣ್ಣ ಮೆತ್ತಿ  ಮುಖವೀಗ ಹನುಮಂತನಂತಾಗಿತ್ತು. ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ನಾನು ನಿಂತಿದ್ದರೆ ,  ಆಂಟಿ ಇವಳನ್ನು ಕರೆದುಕೊಂಡು ಹೇಗಮ್ಮ ಪೇಟೆಗೆ ಹೋಗೋದು .. ಎಂದು ಕೈಯಲ್ಲಿದ್ದ ಕರವಸ್ತ್ರ ದಲ್ಲಿ ಒರೆಸಲು ಪ್ರಯತ್ನಿಸಿ ಅದನ್ನು ರಂಗು ರಂಗಾಗಿಸಿದರು. ನನ್ನ ಕಡೆಗೆ ತಿರುಗಿ ಸೋತ ಸ್ವರದಲ್ಲಿ "ಎಲ್ಲಿ ಸ್ವಲ್ಪ ನೀರು ಕೊಡು"  ಎಂದು ನೀರು ತೆಗೆದುಕೊಂಡು ಆ  ಬಣ್ಣವನ್ನು ತಿಕ್ಕಿ ತಿಕ್ಕಿ ತೊಳೆಯ ಹೊರಟು ಅವಳ ಮುಖವನ್ನು ನಿಜವಾದ ಮಂಗನಂತೆ ಮಾಡಿ ಬಿಟ್ಟರು. 
ಅವರಲ್ಲಿಂದ ಹೋದ ಮೇಲೇ  ಬಿದ್ದು ಬಿದ್ದು ನಗಲು ಶುರು ಮಾಡಿದ  ನಾನು, ಸಾಂಬಾರು ಮಾಡಿದ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ ಆಗದೇ.. Monday, January 9, 2012

ಮಾವೆಂದರೆ ಅಷ್ಟೆ ಸಾಕೇ..  ಹಣ್ಣುಗಳ ರಾಜನೆಂದರೆ ಯಾರೆಂದುಕೊಂಡಿದ್ದೀರಿ ಎಂದು ಯಕ್ಷಗಾನ ಶೈಲಿಯಲ್ಲಿ ಕೇಳಿ ನೋಡಿ.ಎಲ್ಲಾ ಕಡೆಯಿಂದ  ಮಾವಿನ ಹಣ್ಣು ಎಂಬ ಒಂದೇ ಉತ್ತರ ಕೇಳಿ ಬಂದೀತು. ಎಲ್ಲರೂ ಆ ಸಮಯದಲ್ಲಿ ಮಾವುವಾದಿಗಳಾಗುವುದು  ನಿಶ್ಚಿತ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರೂ 'ಆಮ್‌ಆದ್ಮಿ'ಗಳಾಗುತ್ತಾರೆ. !

 ಯಾರೊಂದಿಗಾದರೂ ಸ್ವಲ್ಪ ಹೊತ್ತು ಮಾತಿಗಿಳಿದರೆ ಸಾಕು, ಕೆಲವೇ ಕ್ಷಣದಲ್ಲಿ ಮಾತು ಮಾವಿನ ಕಡೆ ತಿರುಗುತ್ತದೆ. ನಿಮ್ಮಲ್ಲಿ ಮಾವು ಹೂ ಬಿಟ್ಟಿದೆಯೇ   ಬೆಳೆಯಲು ಪ್ರಾರಂಭವಾಯಿತೇ    .. ? ಎಂಬಲ್ಲಿಂದ ಸುರು ಆದರೆ, ನಂತರ ಅದರ ಕುಲ ಗೋತ್ರ ಪ್ರವರಗಳ ಕಡೆ ತಿರುಗಿ ಹಣ್ಣಾಗುವಾಗ ನನ್ನನ್ನು ನೆನಪಿಸಿಕೊಳ್ಳಿ ಎಂಬಲ್ಲಿಗೆ ಪರಿಸಮಾಪ್ತಿಯಾಗುತ್ತದೆ.  ಇದೆಲ್ಲ ಯಾರೂ ತಾವಾಗಿಯೆ ಬೇಕು ಅಂತ ಕೇಳೋದಲ್ಲ.. ಮಾವಿನ ಮಹಿಮೆಯೇ ಇರಬೇಕು ..ಅಚಾನಕ್ ಆಗಿ ಈ ಮಾತನ್ನು  ಹೊರಡಿಸುತ್ತದೆ. 

ಮಾವು ಎಂಬ ಹೆಸರೇ ಬಾಯಲ್ಲಿ ನೀರೂರಿಸುವುದು ಸತ್ಯ . ಅದರಲ್ಲೂಮಲ್ಲಿಕಾ, ನೀಲಂ, ರಸ್‌ಪೂರಿ   ಎಂಬಿತ್ಯಾದಿ ಕಸಿ ಮಾವಿನಹಣ್ಣಿನ ವಿಚಿತ್ರ ಹೆಸರುಗಳನ್ನು ಕೇಳಿದರೆ ರಸಿಕರ ಬಾಯಲ್ಲಿ ಇನ್ನೂ ಹೆಚ್ಚು ಲಾವರಸ ಉತ್ಪತ್ತಿಯಾಗಬಹುದು. ಈ ಕಸಿ ಮಾವಿನ ಹಣ್ಣುಗಳನ್ನು ದುಬಾರಿ ಬೆಲೆ ತೆತ್ತಾದರೂ ಕೊಳ್ಳಬಹುದು. ಆದರೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ನಾಚುವ, ನಾನೀಗ ಪ್ರಸ್ತಾಪಿಸುತ್ತಿರುವ ' ಕಾಟು ಮಾವು' ಎಂಬ ಸಾದಾ ಸೀದಾ ಮಾವಿನ ಪರಿಚಯ ಬಹು ಜನರಿಗೆ ಇರಲಾರದು. 
ಹೆಸರೇ ಸೂಚಿಸುವಂತೆ ಇದು ಕಾಡಿನಲ್ಲಿ ಯವುದೇ ರೀತಿಯ ಉಪಚಾರವಿಲ್ಲದೇ ಸ್ವಾಭಾವಿಕವಾಗಿ ಬೆಳೆಯುವ ಒಂದು ವಿಶಿಷ್ಟ ಬಗೆಯ ಮಾವು. ಗಾತ್ರದಲ್ಲಿ ಇದು ಇತರ ಕಸಿ ಮಾವುಗಳಿಂದ ತುಂಬ ಸಣ್ಣದು. ಆದರೂ ಇದರಿಂದ ತಯಾರಿಸಿದ ಉಪ್ಪಿನಕಾಯಂತೂ ಜಗತ್ಪ್ರಸಿದ್ದ ! ಮಿಡಿಯಾಗಿರುವಾಗಲೇ  ಭರಣಿಯೊಳಗೆ ಇಳಿದು ಉಪ್ಪಿನ ಜೊತೆ ಸರಸವಾಡುತ್ತಾ ಉಪ್ಪಿನಕಾಯಿ  ಪ್ರಿಯರನ್ನು ಆಹ್ವಾನಿಸುವ ಇವುಗಳ ಲೋಕವೇ ಅದ್ಭುತ. 
ನಿಮ್ಮಲ್ಲಿ ಒಂದು ಒಳ್ಳೆಯ ಕಾಟು ಮಾವಿನ ಮರವಿದ್ದರೆ ಸಾಕು. ನೀವು ಅಧಿಕಾರಾವಧಿಯಲ್ಲಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಹಿಂಬಾಲಕರನ್ನು ಪಡೆಯುತ್ತೀರಿ. ಅದರಲ್ಲಿ ಇನ್ನೂ ಹೂ ಅರಳುವ ಮೊದಲೇ ಯಾರ್ಯಾರಿಗೆ ಎಷ್ಟೆಷ್ಟು ನೂರು ಮಿಡಿಗಳು ಬೇಕೆಂಬ ಮುಂಗಡ ಬುಕ್ಕಿಂಗ್ ಕೂಡಾ ನಡೆಯುತ್ತದೆ.ಇನ್ನೇನು ಹೂ ಅರಳಿ ಮಿಡಿ ಕಾಳುಮೆಣಸಿನ ಗಾತ್ರ ಹೊಂದಬೇಕಾದರೆ ಕೆಲವರು ಮೆಣಸು, ಸಾಸಿವೆ ತರಿಸಿ ಪುಡಿ ಮಾಡಿ  ಇಟ್ಟುಕೊಂಡಾಗಿರುತ್ತದೆ.ನೀವು ಹೇಗಿದ್ದೀರಿ ಎಂದು ಕೇಳಲು ಮರೆತರೂ ಮಾವಿನ ಮಿಡಿಗಳ   ಬಗ್ಗೆ ನಿಮ್ಮನ್ನು ದಿನ ದಿನವೂ ವಿಚಾರಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಅದರ ಸೊನೆ, ಪರಿಮಳ, ಹುಳಿ,ಒಗರು ರುಚಿಗಳ ಬಗ್ಗೆ ಕೊಂಚ ಹೊಗಳಿಕೆಯೂ ಆವರಿಸಿಕೊಳ್ಳುತ್ತದೆ. ಆದರೆ  ಮರ ಹತ್ತಿ ಕೊಯ್ಯುವ ಪ್ರವೀಣರನ್ನು ಹುಡುಕುವುದಂತೂ ಬಹು ಪ್ರಯಾಸದ ಕೆಲಸ. ಕತ್ತಲೆಯಲ್ಲಿ ಸೂಜಿ ಹುಡುಕಿದಂತೆ ಅವರನ್ನು ಕಂಡು ಹಿಡಿದು ಮಾವಿನ ಹಣ್ಣಿಗಿಂತಲೂ ಸವಿ ಮಾತನಾಡಿ ಮರ ಹತ್ತಿಸಿ ಮಿಡಿ ಕೊಯ್ಯಿಸಿದರೆ ಆ ವರ್ಷಕ್ಕೆ ಬದುಕಿದಿರಿ ಎಂದರ್ಥ.

ಅಂತೂ ಇಂತೂ ಮಿಡಿಯ ಕೊಯ್ಲು ಮುಗಿದು ಎಲ್ಲರ ಮನೆಯ ಉಪ್ಪಿನ ಕಾಯಿಯ ಭರಣಿ ತುಂಬಿದ ನಂತರ ಮರದಲ್ಲಿ ಉಳಿಯುವ ಕಾಯಿಗಳಿಗೆ ಹಣ್ಣಾಗುವ ಅವಕಾಶ. ಸ್ವಲ್ಪ ದಿನ ಮರಕ್ಕೆ ಕಲ್ಲು ಬೀರುವ ತುಂಟ ಹುಡುಗರಲ್ಲದೆ ಬೇರಾರು ಅದರ ಸನಿಹ ಸುಳಿಯುವುದಿಲ್ಲ. ಸಾವಕಾಶವಾಗಿ ಒಂದೊಂದೇ ಹಣ್ಣು ಬೀಳಲು ಸುರು ಆಗಲಿ. ಆಗ ಪುನಃ ನಿಮ್ಮ ಮರದ ಸುತ್ತ ಜನ ಜಾತ್ರೆ ಕಳೆಕಟ್ಟುತ್ತದೆ. ರಸ್ತೆ ಬದಿಯಲ್ಲಿ ನಿಮ್ಮ ಮರ ಇದ್ದರಂತೂ ಮುಗಿದೇ ಹೋಯಿತು. ನಿಮಗೆ ರುಚಿ ನೋಡಲೂ ಒಂದೆರಡು ಹಣ್ಣು ಸಿಗುವುದು ಸಂಶಯ. ಜೊತೆಗೆ ಆ ಮರವೇನಾದರು ನಿಮ್ಮ ಬೇಲಿಯ ಬದಿಯಲ್ಲಿದ್ದರೆ ಕೇಳಲೇ ಬೇಡಿ.ಎಂತಹ ಬೇಲಿಯನ್ನಾದರು ಜಗ್ಗಿ ಒಳ ನುಗ್ಗುವ ಮಾವು ಪ್ರಿಯರಿಂದ ನಿಮಗೆ ಮುಕ್ತಿ ಸಿಗದು. 

ಏಕೆಂದರೆ ಬಲ್ಲವನೇ ಬಲ್ಲ ಇದರ ರುಚಿಯ .... !!

ಇಷ್ಟೆಲ್ಲ ಮಹಿಮೆಯ ಈ ಮಾವನ್ನು ತಿನ್ನುವ ಬಗ್ಗೆಯೂ ಕೊಂಚ ತಿಳಿಕೊಳ್ಳೋಣ ಆಗದೇ..ಕಸಿ ಹಣ್ಣಿನಂತೆ ಸಿಪ್ಪೆ ತೊಲಗಿಸಿ ತುಂಡರಿಸಿ, ಸ್ಟೈಲಾಗಿ ಫೋರ್ಕ್ ಕುತ್ತಿ, ಒಂದೊಂದೇ ತುಂಡು ಮೆಲ್ಲಲು ಸಾಧ್ಯವಿಲ್ಲ.ಹಾಗೆ ಇವುಗಳನ್ನು ತುಂಡರಿಸಿ  ತಿನ್ನುವ ಪ್ರಯತ್ನವೂ ಕೂಡ ಇವುಗಳಿಗೆ ಮಾಡುವ ಅವಮಾನವೇ ಸರಿ.ತಿನ್ನುವುದಿದ್ದರೆ  ತೊಟ್ಟು ಮಾತ್ರ ತೆಗೆದು, ಹಾಗೆಯೇ ಸಿಪ್ಪೆ ಸಮೇತ ಕಚ್ಚಿ ತಿನ್ನಬೇಕು. ಅದರಿಂದೊಸರುವ ರಸ ನೆಲಕ್ಕೆ ಬೀಳದಂತೆ ಆಗಾಗ ಅಂಗೈಯಿಂದ  ಮೊಳಕೈಯವರೆಗೆ ನೆಕ್ಕಿಕೊಳ್ಳುತ್ತಿರಬೇಕು.ಒಂದು ಹಣ್ಣಿಗೆ ನೀವೆಲ್ಲಿ ಸುಮ್ಮಗಾಗುತ್ತೀರಿ ಮತ್ತೊಂದು ಮಗದೊಂದು ಎಂದು ಹೊಟ್ಟೆ ತುಂಬಿದರೂ ನಾಲಗೆ ಬೇಡುತ್ತಲೇ ಇರುತ್ತದೆ. ಅಂತೂ ಇಂತೂ ಜಗಲಿಯ ಅಂಚಲ್ಲಿ ಬಾಗಿ ನಿಂತು ಮೈ ಕೈಗೆಲ್ಲಾ ರಸ ಸುರಿಸಿಕೊಂಡು ತಿನ್ನುವುದನ್ನು ನಿಲ್ಲಿಸಿದಿರಿ ಎಂದುಕೊಳ್ಳಿ, ನಂತರ ಸೀದಾ ಒಳ ಹೋಗುವಂತೆಯೂ ಇಲ್ಲ. ಹಲ್ಲುಗಳಲ್ಲಿ ಸೇರಿಕೊಂಡಿರುವ ಇದರ ನಾರಿನಭಾಗವನ್ನು ಶುಚಿಗೊಳಿಸುವುದು ಇನ್ನೊಂದು ಕೆಲಸ. 

ಕೆಲವರಂತೂ  ಇದನ್ನು ತಿನುವುದರಲ್ಲಿಎಷ್ಟು  ನಿಷ್ಣಾತರಿರುತ್ತಾರೆಂದರೆ ಈ ಮಾವಿನ ಹಣ್ಣಿನಲ್ಲಿ ನಾರಿನ ಭಾಗ ಇತ್ತು ಎಂದು ಪ್ರಮಾಣ ಮಾಡಿ ಹೇಳಿದರೂ ನಂಬದಂತೆ!!.ಅವರು ತಿನ್ನುವಂತೆ ಗೊರಟಿನ ಮೇಲೆ ಒಂದು ನಾರೂ ಉಳಿಸದೆ ಬೊಕ್ಕ ತಲೆಯಂತೆ ಮಾಡಿ ತಿನ್ನಲು ನಿಮಗೆ ಕೊಂಚ ತರಬೇತಿಯೂ ಬೇಕಾಗಬಹುದು ಬಿಡಿ.


ಈ ಕಾಟು ಮಾವಿನಹಣ್ಣು ತರಕಾರಿಯ ಹಣ ಕೂಡಾ ಉಳಿಸುತ್ತದೆ ಎಂದರೆ ಹೇಗಪ್ಪಾ ಎಂದು ಕಣ್ಣು ಬಾಯಿ  ಬಿಡಬೇಡಿ. ಇಡೀ ಊಟಕ್ಕೆ ಒಂದು ಹಣ್ಣಿದ್ದರೆ ಸಾಕು ನಿಮಗೆ ಬೇರೆ ವ್ಯಂಜನಗಳ ಅವಶ್ಯಕತೆಯೇ ಇಲ್ಲ. ತಟ್ಟೆಗೆ ಅನ್ನ ಸುರುವಿಕೊಂಡು. ಮಾವಿನಹಣ್ಣು ಗಿವುಚಿ,ಒಂದೆರಡು ಹಸಿಮೆಣಸು ನುರಿದುಕೊಂಡು, ಉಪ್ಪು ಸೇರಿಸಿದರಾಯಿತು.ಊಟ ಮಾಡಿ ಏಳುವಾಗ ಹೊಟ್ಟೆ ಭಾರವಾಗಿ  ಯಾರಾದರೂ ಕೈ ಕೊಟ್ಟೇ ಏಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. ಇದರ ರುಚಿಯೆದುರು  ಪಂಚಭಕ್ಷ್ಯ ಪರಮಾನ್ನಗಳು ಗೌಣ. ಇನ್ನು ಇವುಗಳಿಂದ ತಯಾರಿಸುವ ವ್ಯಂಜನಗಳಂತೂ ಹೆಸರು ಕೇಳುವಾಗಲೇ ಹಸಿವನ್ನು ಹೆಚ್ಚಿಸುತ್ತದೆ. ಸಾಸಿವೆ, ಗೊಜ್ಜು, ಮಾಂಬಳ, ಜೂಸ್,ರಸಾಯನ, ಹಲ್ವಾ, ಐಸ್ ಕ್ರೀಮ್ ... ಹೀಗೇ ಇದರ  ಪಟ್ಟಿ ಮುಂದುವರಿಯುತ್ತದೆ. 

ಇಷ್ಟೆಲ್ಲ ಹಣ್ಣಿನ ಬಗ್ಗೆ ತಿಳಿದರೆ ಸಾಕೇ? ಈ ಹಣ್ಣಿನ ಜೊತೆಗೇ ಪೋಣಿಸಿರುವ ದೆವ್ವಗಳ ಕತೆಗಳೂ ಇವುಗಳ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಈಗ ನೀವು ಕೇಳುತ್ತಿರುವುದು ನನ್ನಜ್ಜಿ ಹೇಳಿದ ಕಥೆ. 

ಆಗಿನ ಕಾಲದಲ್ಲಿ ಬೆಳಗಾಗುವುದೆಂದರೆ ನಾಲ್ಕು ಗಂಟೆಗೆ. ಎದ್ದ ಕೂಡಲೇ ಅಡಿಕೆ ಮರದ ಹಾಳೆಯ ಪಡಿಗೆ ಹಿಡಿದು ಅಕ್ಕ ತಂಗಿಯರೊಂದಿಗೆ ಮಾವಿನ ಮರದಡಿಗೆ ಹೋಗುವ ಕ್ರಮ. ಸ್ವಲ್ಪ ನಿಧಾನವಾದರೆ ಹಣ್ಣುಗಳು ಬೇರೆಯವರ ಪಾಲಾದೀತೆಂಬ ಭಯ ಬೇರೆ. 
ಹೀಗೆ ಒಂದು ದಿನ ಹಣ್ಣು ಹೆಕ್ಕಲು ಹೋದಾಗ, ಮರದ ಬುಡದಲ್ಲಿ ಯಾರೋ ತಲೆಗೆ ಮುಸುಕು ಹಾಕಿಕೊಂಡು ಹಣ್ಣು ಹೆಕ್ಕುತ್ತಿರುವುದು ಕಾಣಿಸಿತಂತೆ. ಯಾಕೋ ಸಂಶಯಗೊಂಡ ಮಕ್ಕಳೆಲ್ಲ ಮನೆಗೆ ಮರಳಿ ಬಂದು ಅಪ್ಪನಿಗೆ ತಿಳಿಸಿದರಂತೆ.ಆಪ್ಪ ಒಂದು ಕೈಯಲ್ಲಿ ಕಬ್ಬಿಣದ ಮೊನಚಾದ ಆಣಿ, ಇನ್ನೊಂದು ಕೈಯಲ್ಲಿ  ಒಂದು ಮಾವಿನಹಣ್ಣೂ ಹಿಡಿದು ಮರದೆಡೆಗೆ ಹೋದರಂತೆ.ಆಗಲೂ ಮಕ್ಕಳು ತಿಳಿಸಿದಂತಹ ಆಕಾರ ಅಲ್ಲಿಯೇ ಇತ್ತಂತೆ. ಇವರನ್ನು ಕಂಡೊಡನೆ ಮಾವಿನ ಹಣ್ಣಿಗಾಗಿ ಕೈ ಚಾಚಿತಂತೆ. ಹಣ್ನನ್ನು ಅದರ ಕೈಯ್ಯಲ್ಲಿಟ್ಟರೆ, ಅದನ್ನು ನೆಲಕ್ಕೆ ಬೀಳಿಸಿ, ಹೆಕ್ಕಿಕೊಡು ಎಂಬುದಾಗಿ ಸನ್ನೆ ಮಾಡಿತಂತೆ. ಅದಕ್ಕೆ ಇವರು ಬೇಕಿದ್ದರೆ ನೀನೇ ಹೆಕ್ಕಿಕೋ ಎಂದು ಹೇಳಿದರಂತೆ. ಆ ಆಕಾರ ಹೆಕ್ಕಲು ಬಗ್ಗಿದಾಗ, ತಾವು ತಂದಿದ್ದ ಆಣಿಯನ್ನು ಅದರ ತಲೆಗೆ ಜೋರಾಗಿ ಚುಚ್ಚಿದರಂತೆ. ಕೂಡಲೇ ಅದು ವಿಕಾರವಾಗಿ ಚೀರುತ್ತಾ ಅಲ್ಲಿಂದ ಮಾಯವಾಯ್ತಂತೆ. ಎಲ್ಲಿಯಾದರೂ ಅದಕ್ಕೆ ಹಣ್ಣು ಹೆಕ್ಕಿಕೊಡಲು ಇವರೇ ಬಗ್ಗಿದ್ದರೆ, ಅದು ಇವರ ಗೋಣು ಮುರಿದು ರಕ್ತ ಕುಡಿಯುತ್ತಿತ್ತಂತೆ. ಕಬ್ಬಿಣದ ಮೊಳೆಯಲ್ಲಿ ತಲೆಗೆ ಮೊಟಕಿದರೆ ಮನುಷ್ಯರೂ ಕಿರುಚಿ ಓಡಲೇ ಬೇಕು ಎಂದು ಕೊಂಕು ತೆಗೆಯಬೇಡಿ !! ಇಂತಹ ಅಂತೆ ಕಂತೆಗಳ ಬೊಂತೆಗಳು ಕಾಟು ಮಾವಿನಹಣ್ಣಿನೊಂದಿಗೆ ಹೇರಳವಾಗಿ ಸಿಗುತ್ತವೆ. ನಿಮ್ಮಲ್ಲೂ ಹಿರಿಯರಿದ್ದರೆ ಕೇಳಿ ನೋಡಿ, ಕಥೆಯ ಸಿಹಿಯೊಂದಿಗೆ ಹಣ್ಣನ್ನು ಸವಿಯುವ ಅವಕಾಶ ನಿಮ್ಮದಾಗಬಹುದು! 

ಕೊನೆಗೆ ಗೊರಟನ್ನು ಎಸೆಯುವಾಗ ಹತ್ತಿರ ಇದ್ದವರ ಹೆಸರು ಕರೆದು, ಅವರು 'ಓ' ಎಂದು ಓಗೊಟ್ಟಾಗ 'ಗೊರಟಿನೊಂದಿಗೆ ಓಡು' ಎಂದು ಹೇಳಲು  ಮರೆಯದಿರಿ!!

Tuesday, January 3, 2012

ಅನುಬಂಧ ..

ಕ್ಲಾಸ್ ತಲುಪಲು ಇನ್ನೊಂದಿಷ್ಟು ದೂರ ಇರುವಾಗಲೇ ಅಲ್ಲಿ ಗುಂಪು ಕಟ್ಟಿ ಮಾತನಾಡುತ್ತಿದ್ದ ಗೆಳತಿಯರ ಸ್ವರದೊಂದಿಗೆ ನನ್ನದನ್ನೂ ಸೇರಿಸಿದೆ. 
ಒಮ್ಮೆ  ಕತ್ತೆತ್ತಿ ನನ್ನ ಗ್ರೂಪಿನವರೆಲ್ಲ ಇರುವುದನ್ನು ಧೃಡಪಡಿಸಿಕೊಂಡು 'ಹೇ ಗೊತ್ತಾ ವಿಷ್ಯ..' ಅಂದೆ. 
ಏನೇ ಅದು.. ಪ್ರಪಂಚದ ಯಾವುದೋ ರಹಸ್ಯವೊಂದು ಅನಾವರಣಗೊಳ್ಳುವ ಕ್ಷಣಗಣನೆಯಿದ್ದಿತು ಅವರ ಕುತೂಹಲಭರಿತ ನೋಟದಲ್ಲಿ.. 
ಇನ್ನೊಮ್ಮೆ ಗಂಟಲು ಸರಿ ಪಡಿಸಿಕೊಂಡು 'ನಮ್ಮ ಕಾಲೇಜಿನ ಬ್ಯೂಟಿಕ್ವೀನ್, ನಮ್ಮ ತರಗತಿಯ ನಿರ್ಮಲಾಗೆ ಮದ್ವೆಯಂತೆ' ಎಂದೆ.
ಅರೆ .. ಹೌದಾ.. ಯಾವಾಗ, ಎಲ್ಲಿ.. ಯಾರೇ ಹುಡ್ಗ ಅಂತೆಲ್ಲ ಪ್ರಶ್ನೆಯ ಮಳೆ ನನ್ನ ತಲೆಯ ಮೇಲೆ ಸುರಿಯತೊಡಗಿತು.
'ಅದೆಲ್ಲ ನಂಗೂ ಗೊತ್ತಿಲ್ಲ.. ಮದ್ವೆ ಅಂತ ಮಾತ್ರ ಗೊತ್ತಿರೋದು..' 
 ಮೊದಲು ಮಾತಾಡುತ್ತಿದ್ದ ಸುದ್ಧಿ ಗಳಿಗೆಲ್ಲ ಫುಲ್ ಸ್ಟಾಪ್ ಜಡಿದು, ಯಾರಾಗಿರಬಹುದು ಹುಡುಗ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳಲುತೊಡಗಿದರು. 
'ಆ ಬೈಕ್ ನಲ್ಲಿ ಯಾವಾಗ್ಲೂ ಕಾಲೇಜ್ಗೆ  ಸುತ್ತು ಹೊಡೀತಾ ಇರ್ತಾನಲ್ವಾ ಹೀರೋ ತರ  ಅವನೇ ಇರ್ಬೇಕು..' ಎಂದಿತು ಒಂದು ಸ್ವರ.
'ಥೂ.. ಅವ್ನಲ್ಲ ಕಣೆ.. ಅವನಿಗೆ ಬೈಕ್ ಗೆ ಪೆಟ್ರೋಲ್ ಹಾಕ್ಬೇಕಾದ್ರೂ ಅವ್ನಪ್ಪನತ್ರ ಹಲ್ ಗಿಂಜಬೇಕು..ಅವ್ನನ್ನ ಇವ್ಳು ಈ ಜನ್ಮದಲ್ಲಿ ಮದ್ವೆ ಆಗಲ್ಲ ಬಿಡು..' 
'ಹೇ.. ನಮ್ಮ ಶುಕಮುನಿ ಲೆಕ್ಚರ್ ಅಲ್ಲ ತಾನೆ..' ಇನ್ನೊಬ್ಬಳ ಚಿಂತೆ.
'ಪಾಠ ಮಾಡುವಾಗ ಬೋರ್ಡ್, ತಪ್ಪಿದ್ರೆ ನೆಲ.. ಇವೆರಡನ್ನು ಬಿಟ್ಟರೆ ಬೇರೆಲ್ಲೂ ನೋಡದ ಅವರಂತೂ ಅಲ್ಲವೇ ಅಲ್ಲ..' ತಳ್ಳಿ ಹಾಕಿತೊಂದು ಗಡಸು ಕಂಠ.
' ಬಿಡು ನಂಗೆ ಗೊತ್ತಾಯ್ತು.. ಆವತ್ತು ಅವ್ಳ ಬರ್ಥ್ ಡೇಗೆ ನಮ್ಮನ್ನೆಲ್ಲಾ ಹೋಟೆಲ್ ಗೆ ಕರ್ಕೊಂಡು ಹೋಗಿ ಟ್ರೀಟ್ ಕೊಡ್ಸಿದ್ಲಲ್ಲಾ.. ಆ ದಿನ ಹೋಟೆಲ್ನವನು ಅವ್ಳತ್ರ ದುಡ್ಡೇ ತೆಗೊಂಡಿಲ್ಲ.ಅವ್ನೇ ಆಗಿರ್ಬೋದು ಕಣೇ.. ಅಂತ ತಿಂಡಿಪೋತಿಯೊಬ್ಬಳು ನೆನಪಿಸಿದಳು. 
'ಇಲ್ಲಾಮ್ಮ.. ನೋಡೋಕ್ಕೇನೋ ಚಿಕ್ಕವನ ತರ ಕಾಣಿಸಿದ್ರೂ, ಅವನಿಗೆ ಆಗ್ಲೇ ಮದ್ವೆ ಆಗಿ ಎರಡು ಮಕ್ಳ ಅಪ್ಪ ಆಗಿದ್ದಾನೆ..' ಅವ್ನಾಗಿರಲ್ಲ' ಇನ್ನೊಬ್ಬಳ  ಹೇಳಿಕೆ. 
ಊರಲ್ಲಿದ್ದ, ನಮಗೆ ಗೊತ್ತಿರೋ ,ವಿವಾಹಯೋಗ್ಯ ಅಂತ ನಮ್ಗನ್ನಿಸೋ ಎಲ್ರನ್ನು ಕಣ್ಣೆದುರಿಗೆ ತಂದುಕೊಂಡು ಪೆರೆಡ್ ನಡೆಸಿದರೂ ಅವಳನ್ನು ಮದುವೆಯಾಗುವ ಗಂಡು ಯಾರಿರಬಹುದೆನ್ನುವ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. 
ನಮ್ಮ ಇಷ್ಟೆಲ್ಲಾ ಚರ್ಚೆಗೆ ಕಾರಣವೂ ಇರದಿರಲಿಲ್ಲ. ಕಾಲೇಜ್ ಗೆ ಪ್ರತಿದಿನ ಹನ್ನೊಂದು ಗಂಟೆಗೆ ಹಾಜರಾಗುವ ಪೋಸ್ಟ್ ಮ್ಯಾನ್ ಅವಳ ಕೈಗೊಂದು ಪತ್ರ ನೀಡದೇ ಹೋದದ್ದನ್ನು ನಾವ್ಯಾರು ಕಂಡೇ ಇಲ್ಲ. ಆ ಪತ್ರವನ್ನು ಅವಳು ಜೋಪಾನ ಮಾಡುವ ರೀತಿ, ಮತ್ತೆ ಮತ್ತೆ ಓದಿ ಕನಸಿನ ಲೋಕದಲ್ಲಿದ್ದಂತಿರುತ್ತಿದ್ದ ಅವಳ ನಡವಳಿಕೆ ಎಲ್ಲವೂ ನಮಗೆ ಕೆಟ್ಟ ಕುತೂಹಲವನ್ನು ಉಂಟು ಮಾಡಿತ್ತು. ಪತ್ರದ ಹಿಂದಿನ  ಬದಿಯಲ್ಲಿ ದಿನಕ್ಕೊಂದು ಹೆಸರು ಬೇರೆ.. ಈ ವಿಷಯ ಅವಳ ಪಕ್ಕವೇ ಕುಳಿತುಕೊಳ್ಳುವ ನಮ್ಮ ಗುಂಪಿನ ಸದಸ್ಯೆಯ ಗಂಭೀರ ಪತ್ತೇದಾರಿ ಕೆಲಸದ ನಂತರ ದೊರಕಿದ್ದು. ಆದರೂ ಆ ಪತ್ರದ ಮೂಲವ್ಯಾವುದು ಅಂತ ನಮಗೆ ತಿಳಿದಿರಲಿಲ್ಲ. 
ಸ್ವಲ್ಪ ದೂರದಲ್ಲಿ ಪುಸ್ತಕ ಎದೆಗವುಚಿಕೊಂಡು ಅವಳು ಬರುವುದನ್ನು ಕಾಣದಿದ್ದರೆ ನಮ್ಮ ಚರ್ಚೆ ಇನ್ನೂ ಮುಂದುವರಿಯುತ್ತಿತ್ತು. 
ಬಂದವಳೇ ನಮ್ಮ ಗುಂಪಿನ ಸಮೀಪ ಬಂದು ಮುಖ ಕೆಂಪೇರಿಸಿಕೊಂಡು 'ನಂಗೆ ಈ ತಿಂಗಳು 17  ನೇ ತಾರೀಖಿಗೆ ಮದ್ವೆ' ಅಂದಳು. 
ನಾವೆಲ್ಲರೂ 'ಕಂಗ್ರಾಟ್ಸ್ ಕಣೇ' ಅಂತ ಶುಭ ಹಾರೈಸಿದೆವು. 
ನಮ್ಮ ಗುಂಪಿನಿಂದ ಒಂದು ಸ್ವರ ಮೆಲ್ಲನೆದ್ದಿತು. ' ಯಾರೇ ಗಂಡು? ಏನ್ ಮಾಡ್ಕೊಂಡಿದ್ದಾರೆ? 
ಅವಳು ಸುಂದರ ನಗೆಯರಳಿಸಿ 'ಗೊತ್ತಿದ್ರೂ ನನ್ನನ್ಯಾಕೆ ಸತಾಯಿಸ್ತೀರಾ ' ಎಂದು   ಅಮಾಯಕ ನೋಟವೆಸೆದಳು.. 

ಸಾಕೇ ಬಿನ್ನಾಣ .. ನಮಗ್ಯಾರಿಗೂ ಗೊತ್ತಿಲ್ಲ ಅಂತ ನಿಂಗೆ ಗೊತ್ತಿದೆ.. ಈಗ್ಲೂ ಇಷ್ಟ ಇಲ್ಲದಿದ್ರೆ ಹೇಳಬೇಡ ಅಂದಿತೊಂದು ಖಡಕ್ ವಾಣಿ .. 
ನೀವು ನೋಡಿದ್ದೀರಿ ಅವರನ್ನ .. ಅಂದಳು ಇನ್ನಷ್ಟು ನಾಚಿ.. 
ಹೌದೇ. ಎಂದು ನಾವುಗಳು ಮುಖ ಮುಖ ನೋಡಿಕೊಂಡೆವು..
 ಆದರೂ ಸೋತೆವು ಎನ್ನುವುದನ್ನು ಒಪ್ಪಿಕೊಳ್ಳದ ಕೋಮಲ ಕಂಠವೊಂದು  .. ನೀನೇ ಹೇಳಿ ಬಿಡು.. ಗಂಡ ಆದ ಮೇಲೆ ಹೆಸರು ಹೇಳಬಾರದು ಅಂತ ನಮ್ಮ ಅಜ್ಜಿ ಹೇಳ್ತಾ ಇದ್ರು ಅಂತ ಅಂದಿತು. 
ಅವಳು ಇನ್ನೊಂದಿಷ್ಟು  ನುಲಿಯುತ್ತಾ' ಅದೇ ಕಣ್ರೇ.. ದಿನಾ ಬರಲ್ವಾ ಲೆಟರ್ ತೆಗೊಂಡು ಪೋಸ್ಟ್ ಮ್ಯಾನ್.. ದಿನೇಶ್ ..  ಅವ್ರೇ ಮದ್ವೆ ಗಂಡು .. ಅಂದಳು.