Pages

Total Visitors

Sunday, January 19, 2014

ನೋಡಿದ್ಯೇನೆ ಅಕ್ಕಾ..
ಹಾರುವ ಹೂಗಳನ್ನು ಎಂದಾದ್ರೂ ನೋಡಿದ್ದೀರಾ? ಅರ್ರೇ.. ಹಾರುವ 
ಹೂಗಳೇ ನಿಮ್ಮಲ್ಲಿದೆಯೇ.. ಎಂದು ಮೀಡಿಯಾಗಳಿಗೆ  ಸುದ್ಧಿ ಮುಟ್ಟಿಸಿ, 
ಕ್ಯಾಮೆರಾ ಎತ್ತಿಕೊಂಡು ಬರಬೇಡಿ. ಹಸಿರಿನ ವನಸಿರಿಯ ಸುತ್ತ ಕಣ್ತೆರೆದು  
ನೋಡಿ. ನಿಮ್ಮಲ್ಲೂ ಕಂಡೀತು ಈ ರೆಕ್ಕೆಗಳಿರುವ ಸುಂದರ ಹೂವು.


.  ಕಾಣ್ತಾ ಇಲ್ವಾ.. ನಿಲ್ಲಿ ಅವುಗಳ ಪರಿಚಯ ಮಾಡಿಸಿ ಬಿಡುತ್ತೇನೆ.  ಅವುಗಳನ್ನು ಪಾತರಗಿತ್ತಿ,  ಚಿಟ್ಟೆ ಎಂದೆಲ್ಲಾ ಕರೆಯುತ್ತಾರೆ.. ಈಗ  ನಿಮ್ಮ ಅರಳಿದ ಕಣ್ಣುಗಳಲ್ಲಿ ಅವುಗಳ ಸೌಂದರ್ಯ ತುಂಬಿಕೊಳ್ಳುತ್ತಾ ಇದೆ ಅಲ್ವಾ.. ! 
ಹೌದು ಪ್ರಕೃತಿಯ ಕುಂಚ ಇವುಗಳ ರೆಕ್ಕೆಗಳ ಮೇಲೆ ಮೂಡಿಸುವ ಕಲೆಯನ್ನು ನೋಡಿಯೇ  ಸವಿಯಬೇಕು. ಈ ಚಿಟ್ಟೆಗಳೇನೋ ಕೀಟ ಪ್ರಪಂಚದ ನರ್ತಕಿಯರಂತೆ ಕಾಣುತ್ತಿದ್ದರೂ, ಈ ರೂಪ ಪಡೆಯಲು ಇವುಗಳು ಪಡುವ ಕಷ್ಟವನ್ನು ಕಂಡರೆ ನಮ್ಮ ಸೌಂದರ್ಯ ಸ್ಪರ್ಧೆಯ ಸೌಂದರ್ಯ ರಾಣಿಯರು ಪಡುವ ಕಷ್ಟ ನಮ್ಮ ಗಣನೆಗೇ ಬಾರದು.  ಪುಟ್ಟ ತತ್ತಿಯಾಗಿ ವಿಶಿಷ್ಟವಾದ ಅಂಟಿನಿಂದ ಗಿಡಗಳ ಎಲೆಯ ಮೇಲೆಯೋ, ಕೆಳಗೆಯೋ ಅಂಟಿ ಕೂತುಕೊಳ್ಳುವ ಇವುಗಳು ತತ್ತಿ ಒಡೆದು ಹೊರ ಬಂದೊಡನೇ ತಾನು ಕೂತ ಎಲೆಯನ್ನೇ ಕಬಳಿಸುವ ರಾಕ್ಷಸ ಕಂಬಳಿ ಹುಳುಗಳಾಗಿ ನಿಂತ  ನೆಲವನ್ನೇ ಬಗೆಯುವ  ನಮ್ಮ ರಾಜಕಾರಿಣಿಗಳನ್ನು ನೆನಪಿಗೆ ತರುತ್ತಾರೆ. 
 ಕಣ್ಣಿಗೆ ಕಂಡ ಹಸಿರೆಲ್ಲಾ ಹೊಟ್ಟೆಯ ಒಳಗೆ ಸೇರಿದೊಡನೇ ನಿಧಾನಕ್ಕೆ ತಮ್ಮ ಸುತ್ತು ಬಲೆಯನ್ನು ನೇಯ್ದುಕೊಳ್ಳುತ್ತಾ ಧ್ಯಾನಸ್ಥ ಸ್ಥಿತಿಯನ್ನು ತಲುಪುತ್ತವೆ. 

 ಈ ಸ್ಥಿತಿಯಲ್ಲಿ ತಮ್ಮನ್ನು ತಾವೇ ಪರಿವರ್ತನೆಯ ಕ್ರಿಯೆಗೆ ಒಡ್ಡಿಕೊಳ್ಳುವ ಇವು ಕೋಶದಿಂದ ಹೊರ ಬರುವಾಗ ಮೋಕ್ಷವನ್ನು ಪಡೆದ ಆತ್ಮದಂತಾಗುತ್ತದೆ. ಈಗ ನೋಡಿ ಇವುಗಳ  ವರ್ಣವೈವಿದ್ಯ. 
 ಪ್ರಕೃತಿ ತನ್ನ ಅಮೂಲ್ಯ ಸಮಯವನ್ನು ಇವುಗಳಿಗೆಂದೇ ಮೀಸಲಿಟ್ಟು ಒಂದೊಂದೇ ಬಣ್ಣಗಳನ್ನು ಹಚ್ಚಿ ಚಿತ್ತಾರ ಮಾಡಿದಂತೆ. ಅದೆಷ್ಟು ಬಣ್ಣಗಳು. ಅದೆಂತಾ ವಿನ್ಯಾಸಗಳು .. ಕಲಾವಿದನ ಕಲ್ಪನೆಯ ಆಚೆಯೂ ಅವುಗಳ ಪರಿಧಿ. ತುಂಬಿ ತುಳುಕುವ ಸೊಬಗು,  ಎಲ್ಲೆ ಇರದ ಆಗಸ, ಹಗುರ ದೇಹ, ಹಾರಲು ಸಹಾಯ ಮಾಡುವ ರೆಕ್ಕೆಗಳು.. ಇಷ್ಟು ಸಾಲದೇ ಸ್ವಾತಂತ್ರ್ಯದ ಸವಿಯನ್ನು ಸವಿಯಲು.. 
 ಸೂರ್ಯನ ಬೆಳಕು ಮೈ ಮೇಲೆ ಬಿದ್ದೊಡನೆಯೇ ಅರಳುವ ಹೂವುಗಳು ಇವರ ಆಕರ್ಷಣೆಯ ಕೇಂದ್ರ. ಬಣ್ಣ ಬಣ್ಣದ ಹೂವುಗಳು ಅರಳುವುದು ತಮಗಾಗಿಯೇ ಎಂಬಂತೆ ಆ ಕುಸುಮ ಬಾಲೆಯರನ್ನು ತಬ್ಬಿ ನೇವರಿಸುತ್ತವೆ. 

 ನೋವಾಗದಂತೆ ಕುಳಿತು ಮಧುವನ್ನು ಹೀರಿ ಕಾಲುಗಳಿಗೆ ಅಂಟಿಕೊಂಡ ಪರಾಗರೇಣುಗಳ ಸಹಿತ ಇನ್ನೊಂದರೆಡೆಗೆ ಪಯಣ. ಅಲ್ಲಿ ಬಿತ್ತುವ ಬೀಜ ಮತ್ತೊಂದು ಹುಟ್ಟಿಗೆ ನಾಂಧಿ. ಮತ್ತೊಂದು ಜೀವನ ವೃತ್ತಕ್ಕೆ ಮುನ್ನುಡಿ..
 ನಿಮ್ಮ ಮನೆಯಂಗಳದಲ್ಲೂ ಈ ಹಾರುವ ಹೂಗಳನ್ನು ನೋಡಲು ಬಯಸುತ್ತೀರಾದರೆ ಹೂ ಗಿಡಗಳನ್ನು ಬೆಳೆಸಿ. ಸಹಜ ಕೃಷಿಗೆ ಮನ ಮಾಡಿ. ಚಿಟ್ಟೆಗಳಿಗೆ ಪ್ರಿಯವಾದ ಕರಿಬೇವು, ನಿಂಬೆ ಜಾತಿಯ ಸಸ್ಯಗಳಿಗೂ ನಿಮ್ಮ ಕೈ ತೋಟದಲ್ಲಿ ಜಾಗವಿಡಿ. ಕಂಬಳಿ ಹುಳಗಳನ್ನು ಕೊಲ್ಲಲೆಂದು ಬಗೆ ಬಗೆಯ ಕೀಟ ನಾಶಕಗಳನ್ನು ಸುರಿದು ಪರಿಸರ ಹಾಳುಗೆಡವದಿರಿ. 


ಚಿಟ್ಟೆಯಿಂದಲೇ ಪರಾಗಸ್ಪರ್ಷ ಹೊಂದುವ ಹಲವು ಹೂಗಳಿವೆ. ಹಲವು ಗಿಡಗಳು ಮತ್ತೆ ಭೂಮಿಯಲ್ಲಿ ಜನ್ಮವೆತ್ತಬೇಕಾದರೆ ಇವುಗಳ ಸಹಾಯ ಬೇಕೇ ಬೇಕು. ಮಕ್ಕಳಿಗೆ ಚಿಟ್ಟೆಗಳನ್ನು ಹಿಂಸಿಸದಿರಲು ಹೇಳಿ.
  

 ಮನುಷ್ಯ ತಾನಾಗಿ  ತಾನು ಏನನ್ನೂ ಸೃಷ್ಟಿಸಲಾರ  ಅಂದ ಮೇಲೆ ಪ್ರಕೃತಿಯನ್ನು ಹಾಳು ಮಾಡುವ ಅಧಿಕಾರವೂ ಇಲ್ಲ. ಈ ಪುಟ್ಟ ಬಣ್ಣದ ಬೆಡಗಿಯರ ಹಾರಾಟವನ್ನು ನೋಡುವುದರಿಂದ ಕದಡುವ ಮನಃಶ್ಯಾಂತಿಯನ್ನು ಮರಳಿ ಪಡೆಯಬಹುದು. 


ಒಂದಷ್ಟು ಹೊತ್ತು ನಿಸರ್ಗದೊಡನಾಟ ನಿಮ್ಮ ಮನಸ್ಸಿನಲ್ಲೂ ರೆಕ್ಕೆ ಮೂಡಿಸಿ, ಕಲ್ಪನೆಯ ಆಗಸದಲ್ಲಿ ಹಾಯಾಗಿ ಹಾರುವಂತೆ ಮಾಡಬಹುದು. ಅವುಗಳೊಡನಾಟದ ಮಧುರತೆಯ ಸವಿಯನ್ನು ಹೀರಬಹುದು. 'ಪಾತರಗಿತ್ತಿ ಪಕ್ಕಾ .. ನೋಡಿದ್ಯೇನೆ ಅಕ್ಕಾ..' ಅಂತ ಹಾಡಬಹುದು.

Saturday, January 18, 2014

ಕೋಪವೇಕೆ..
ನಕ್ಕು ಬಿಡೇ ಗೆಳತಿ 
ಕರಗಿ ಹರಿಯಲಿ ನೋವ ಬಂಡೆಗಳು
ಒಲವೊಸರ ಧಾರೆಯಾಗಿ 
ಅದರ ಹನಿ ಸ್ಪರ್ಶಕ್ಕೆ 
ಕಾದಿಹೆನು ಜನುಮಗಳಿಂದ
ತಣಿಸು ಬಾ ಬೇಗೆ ನೀಗಿ

ಈ ಬಿಂಕ ಬಿಗುಮಾನ
ಆ ಕೊಂಕು ಕುಡಿಹುಬ್ಬು
ಕೆನ್ನೆಯ ಕೆಂಪೆಲ್ಲ ನನ್ನದೇ ನಲ್ಲೆ
ಕೊಡುವೆಯೇನೇ ಎನಗೆ
ಕಿರುನಗುವ ರಸದೂಟ
ನೀನೀಗ ಕಬ್ಬ ಜಲ್ಲೆ

ಸಿಹಿಯ  ಜೊತೆ ಕಹಿ ಬೇಕು
ನೋವಿನಲು ನಲಿವು
ಒಣ ಕೊಂಬೆಯಲ್ಲು ಜೀವ ಸೆಲೆಯು
ಜೊತೆ ನೀನು ಇರುವಾಗ
ಕತ್ತಲೆಯ ಬದುಕಿನಲು 
ಕೋಟಿ  ನಕ್ಷತ್ರದ ಹೊಳೆವ ಪ್ರಭೆಯು

ಆ ಚಿಂತೆ ಈ ಚಿಂತೆ ನೂರಾರು ನೆವಗಳ
ಗುಡಿಸಿ ಸಾರಿಸಿ 
ರಂಗೋಲಿಯಲಿ ಮುಚ್ಚು
ಹೆಣೆದು ಬೆರಳುಗಳ
ಕೂಡಿಸಿ ಕಣ್ಬೆಳಕು
ಬಾ ಇಲ್ಲಿ ಎದೆಯೊಳಗೆ ದೀಪ ಹಚ್ಚು.


Wednesday, January 15, 2014

ರಾಜ ಪರಂಪರೆಲೋಕದ ಕಣ್ಣಿಗೆ ಅವನು ಅರೆಹುಚ್ಚ. ಮಕ್ಕಳಿಗೆ ಮಾತ್ರ ಅವನು ಪ್ರೀತಿಯ ಕಥೆಯಜ್ಜ. 

ಅವನ ಕಥೆಗಳಲ್ಲಿ  ಇಣುಕುತ್ತಿದ್ದ ರಾಜಕುಮಾರಿಗೆ ಏಳು ಮಹಡಿಯಷ್ಟುದ್ದದ ಜಡೆಯಿತ್ತು. ಇನ್ನೂ ನಡು ಬೆನ್ನೂ ಸವರದ ನಮ್ಮ ಕೂದಲ ಬಗ್ಗೆ ನಮಗೆ ನಿರಾಶೆ ..

ರಾಜಕುಮಾರ ಎಲ್ಲಾ ಯುದ್ಧವಿದ್ಯೆಗಳಲ್ಲೂ ಪ್ರವೀಣ... ಅವನ ಬಳಿಯಿದ್ದ ಕುದುರೆಯಂತೂ ಅತ್ಯದ್ಭುತ. ಬೇಕಾದಾಗ ರೆಕ್ಕೆ ಬಿಡಿಸಿ ಹಾರುತ್ತಿತ್ತು. ಒಮ್ಮೊಮ್ಮೆ ಅದರ ತಲೆಯ ಮೇಲೆ  ಒಂಟಿ ಕೊಂಬು.

ಕಥೆಗಳಲ್ಲಿ ಬರುವ  ಮಾಂತ್ರಿಕನಂತೂ ಹಗಲಲ್ಲೂ ಹೆದರಿಕೆ ಹುಟ್ಟಿಸುವಂತಿದ್ದ.

ಕೊನೆಗೆಲ್ಲವೂ ಒಳಿತೇ  ಆಗುತ್ತಿದ್ದ ಆ ಕಥೆಗಳನ್ನು ಕೇಳುತ್ತ  ನಾವು ಕುತೂಹಲ ಹೊತ್ತ ನಮ್ಮ ಕಣ್ಣು ಕಿವಿಗಳನ್ನು ಅವನಿಗೊಪ್ಪಿಸಿ ಕಥೆಯ ಲೋಕದಲ್ಲಿ ನಡೆದಾಡುತ್ತಿದ್ದೆವು. ಆ ಕಾಲದಲ್ಲೇ ಬದುಕುತ್ತಿದ್ದೆವು. 

ಕಾಲ ಸರಿಯಿತು..

ನಾವು ಬೆಳೆದೆವೆಂದುಕೊಂಡೆವು .ನೈಜ ಬದುಕಿನ ಮುಂದೆ ಕಥೆಯ ರುಚಿ ಮಾಸಿತು. 

ಕೇಳುವ ಕಿವಿಗಳಿರದೆ ಕಥೆಯಜ್ಜ ಮೌನವನ್ನೇ ಹಾಸಿ ಹೊದ್ದ.

ಕಥೆಗಳಳಿದವು.. 

ಹೀಗೆ ರಾಜ ಪರಂಪರೆ ನಶಿಸಿತಂತೆ.. 
--