Pages

Total Visitors

Friday, November 14, 2014

ಮ್..ಮ್.. ಅಂದರೆ ಅಮ್ಮನಾ..

ಭಾಷೆ ಅನ್ನುವುದು ಸಂವಹನದ ಮಾಧ್ಯಮ. ಒಬ್ಬನಿಂದ ಇನ್ನೊಬ್ಬನಿಗೆ ಭಾವನೆಗಳನ್ನು ಹಂಚಿಕೊಳ್ಳಲೆಂದೇ ಹುಟ್ಟಿಕೊಂಡದ್ದು. ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳು ಇರುವ ಕಾರಣ ಒಂದೇ ಭಾಷೆಯನ್ನು ಮಾತನಾಡುವ ಜನರ ಗುಂಪುಗಳು ಪ್ರತ್ಯೇಕವಾಗಿ ತಮ್ಮನ್ನು ಆ ಭಾಷೆಯ ಜನರೆಂದು ಗುರುತಿಸಿಕೊಳ್ಳತೊಡಗಿದರು. ಭಾಷೆಗಳಿಂದಲೇ ಮನುಷ್ಯ ಮನುಷ್ಯನಲ್ಲಿ ಗೋಡೆಗಳು ಎದ್ದವು. ತಮ್ಮ ತಮ್ಮಲ್ಲೇ ತಾನು ಮೇಲು ನೀನು ಕೀಳು ಎಂದು ಪ್ರಾರಂಭವಾದ  ಕಚ್ಚಾಟಗಳು ಇನ್ನೂ ಮುಂದುವರಿಯುತ್ತಲೇ  ಇದೆ.
ಆದರೆ ಇವುಗಳಿಗೂ ಮೀರಿದ, ಪ್ರಪಂಚದಾದ್ಯಂತ ಹೆಚ್ಚಿನೆಲ್ಲಾ ಮನೆಗಳಲ್ಲಿ ಬಳಸಲ್ಪಡುವ 'ಯೂನಿವರ್ಸಲ್ ಲಾಂಗ್ವೇಜ್' ಒಂದಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ. ಇದಕ್ಕೆ ಯಾವುದೇ ವರ್ಣಮಾಲೆಗಳಿಲ್ಲ. ಇಂತಹ ಪದಾರ್ಥಕ್ಕೆ ಇಂತಹುದೇ ಶಬ್ಧಗಳೆಂದಿಲ್ಲ.ಒಂದೇ ಪದ ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸಬಹುದು. ಅತಿ ಕ್ಲಿಷ್ಟವೆಂದು ಕಾಣುವ, ಅರ್ಥೈಸಿಕೊಳ್ಳಲು ಕಠಿಣ ಎನಿಸುವ ಭಾಷೆಯಾದರೂ ಇದು ಎಲ್ಲರೂ ಮೆಚ್ಚುವ ಭಾಷೆ. 
ಈ ವಿಚಿತ್ರ ಭಾಷೆಯ ಬಗ್ಗೆ ಯಾರಿಗೂ ಯಾವುದೇ ರೀತಿಯ ಪೂರ್ವಾಗ್ರಹಗಳಿಲ್ಲದೇ ಇರುವುದು ಮತ್ತು ಇದನ್ನು ಕೇಳಿದವರೆಲ್ಲ ಆನಂದಿಸುವುದು ಇದರ ಹಿರಿಮೆಗೆ ಸಾಕ್ಷಿ. ಇದನ್ನು ಕಲಿಸುವ ಶಾಲೆಗಳಾಗಲೀ, ಭಾಷೆಯ ಬಳಕೆಯನ್ನು ಅಧ್ಯಯನ ಮಾಡುವ ವಿದ್ವಾಂಸರಾಗಲಿ ಇಲ್ಲದಿದ್ದರೂ ಎಲ್ಲೆಡೆ ಪಸರಿಸಿ ಸಂತಸವನ್ನುಂಟುಮಾಡುವ ಈ ಭಾಷೆಯನ್ನು  ತಿಳಿದವರು ನಮ್ಮ ನಿಮ್ಮ ಮನೆಗಳಲ್ಲೂ ಇದ್ದಾರೆ.
 
ಅರ್ರೆರೆ..! ಇದೇನಿದು ಎಂದು  ತಲೆ ಕೆರೆದುಕೊಳ್ಳಬೇಡಿ.

ಇದರ ಬಳಕೆದಾರರು ಮನೆಯೊಳಗಿರುವ ತೊದಲು ನುಡಿಯ ಪುಟಾಣಿಗಳು. ಇವುಗಳು ಪುಟ್ಟ ಮಕ್ಕಳಿರುವ ಎಲ್ಲಾ ಮನೆಗಳಲ್ಲಿ ಅವರವರ ಆಡುನುಡಿಗೆ ಹೊಂದಿಕೊಂಡು ಬೇರೆ ಬೇರೆಯಾಗಿ ಕೇಳಿದರೂ ಎಲ್ಲವನೂ ಒಂದೇ ಹೆಸರಿನಡಿಯಲ್ಲಿ ತರಬಹುದು. ಈ ಭಾಷೆ ಎಷ್ಟು ಆನಂದಕರವೋ ಅಷ್ಟೇ ಅಪಾಯಕಾರಿ ಕೂಡಾ.. ಬಹುಬೇಗ ನಿಮ್ಮನ್ನು ತನ್ನ ಪ್ರಭಾವಲಯದ ತೆಕ್ಕೆಗೆ ಎಳೆದುಕೊಂಡು ನೀವೂ ಕೂಡಾ ಹಾಗೇ ಮಾತನಾಡುವಂತೆ ಪ್ರೇರೇಪಿಸುತ್ತದೆ. ಈ ಭಾಷೆಯ ತಾಕತ್ತೇ ಅಂತಹದು. ಈಗ ನಿಮಗೂ ಅದರ ನೆನಪು ಬರುತ್ತಿರಬಹುದಲ್ಲ.. 

ಹೌದು.. ನಾನು ಬಾಲಭಾಷೆಯ ಬಗೆಗೇ ಹೇಳುತ್ತಿರುವುದು.  





ಮೊದಲಿಗೆ ಈ ಭಾಷೆಯನ್ನು  ಬೇರೆ ಮನೆಗಳಲ್ಲಿ ಕೇಳಿ ಮಾತ್ರ ತಿಳಿದಿದ್ದ ನಾನು 'ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು' ಎಂದು ಹಾಡಲು ಶುರು ಮಾಡಿ ಸ್ವಲ್ಪ ಸಮಯದಲ್ಲಿ ಈ ಭಾಷೆಯ ವಲಯಕ್ಕೆ ಸಿಲುಕಿ ನನ್ನ ಭಾಷೆಯನ್ನು ಮರೆಯುವಂತಾಯಿತು. 

ಮೊದಲಿಗೆ ಕೇವಲ ಬೆಳದಿಂಗಳ ನಗು ಸೂಸುತ್ತಿದ್ದ ಮಗ ತಿಂಗಳು ಉರುಳಿದಂತೆಲ್ಲಾ ವಿಚಿತ್ರ ಶಬ್ಧಗಳನ್ನು ಉಚ್ಚರಿಸತೊಡಗಿದ. ಆ ಶಬ್ಧಗಳಿಗೆ ಅರ್ಥ ಹುಡುಕುವುದು ಕಷ್ಟವೇ ಆಗಿದ್ದರೂ ನನಗೆ ಬೇಕಾದಂತೆ ಅರ್ಥ ಮಾಡಿಕೊಂಡು ಅದೇ ಸರಿ ಎಂದುಕೊಳ್ಳುತ್ತಿದ್ದೆ. 

ಮಗುವಿನ ಮೊದಲ ನುಡಿಯೇ ಅಮ್ಮಾ ಎಂದು ಅನೇಕ ಹಾಡುಗಳಲ್ಲೂ, ಸಿನಿಮಾದ ಸೆಂಟಿಮೆಂಟಲ್ ಡೈಲಾಗುಗಳಲ್ಲೂ ಕೇಳಿ ತಿಳಿದಿದ್ದ ನಾನು ನಮ್ಮ ಮನೆಯ ಮುದ್ದು ಕಂದ 'ಮ್..ಮ್..' ಎಂದೊಡನೆ ಪಾಯಸ ಮಾಡಿ ಇವತ್ತು ನನ್ನ ಮಗ ನನ್ನನ್ನು 'ಅಮ್ಮಾ' ಎಂದ ಎಂದು ಸಂತಸ ಪಟ್ಟಿದ್ದೆ. 

ಮರುದಿನದಿಂದ ಮತ್ತೆ ಮತ್ತೆ ಆ ಪದವನ್ನು ಅವನ ಬಾಂದ ಆಲಿಸುವಾಸೆ. 'ಅಮ್ಮಾ ಹೇಳು ಪುಟ್ಟೂ, ಹೇಳು ಕಂದಾ' ಎಂದು ಎಷ್ಟು ಪೂಸಿ ಮಾಡಿದರೂ ಹೇಳದ ಈ ಕಂದ ಊಟ ಮಾಡಿಸುವ ಹೊತ್ತಿಗೆ ಮನೆಯಿಂದ ಹೊರಗೆ ಕರೆದುಕೊಂಡು ಹೋದೊಡನೇ ಪಕ್ಕದ ಮನೆಯ ನಾಯ ಕಡೆಗೆ ಕೈ ತೋರಿಸುತ್ತಾ 'ಮ್.. ಮ್..' ಎಂದ. 

ಸರಿ ಹೋಗಲಿ .. ಸಣ್ಣದಲ್ಲವೇ.. ಕಲಿತುಕೊಳ್ತಾನೆ ಇನ್ನು ಎಂದು ಸುಮ್ಮನಾದೆ. 

ಒಂದೆರಡು ದಿನದಲ್ಲೇ ಇನ್ನೊಂದು ಅಕ್ಷರ ಶಬ್ಧ ರೂಪವನ್ನು ಪಡೆತು. ಅದು 'ಹ'

ಇದಕ್ಕೇನಿರಬಹುದಪ್ಪಾ ಅರ್ಥ ಅಂತೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವಾಗಲೇ ಆಫೀಸಿಗೆ ಹೊರಟ ಇವರ ಕಾಲಬಳಿ ನಿಂತು 'ಹ' ಎಂದ. ಹೋ.. ಇದು ಅಪ್ಪ ಎಂದು ಕರೆಯುವ ಹೊಸ ವಿಧಾನ ಎಂದುಕೊಂಡು ಅವರ ಸಂತಸಕ್ಕಾಗಿ ಇನ್ನೊಮ್ಮೆ ಪಾಯಸ ಮಾಡಲಾಯಿತು. 

ಸ್ವಲ್ಪ ದಿನಗಳಲ್ಲಿ ಇವನ ಶಬ್ಧಕೋಶಗಳು ಹಲವಾರು ಪದಗಳನ್ನು, ಇಡೀ, ಅರ್ಧ ಅಕ್ಷರಗಳನ್ನು ಪಡೆದುಕೊಂಡು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಈಗ 'ಅಮ್ಮಾ' ಎಂಬುದನ್ನು ನಾನು ಪ್ರಯತ್ನ ಪೂರ್ವಕವಾಗಿ ನನ್ನ ಕಡೆಗೆ ಬೆಟ್ಟು ಮಾಡಿಸಿ ತೋರಿಸಿ ಕಲಿಸಿದ್ದೆ.  ಈಗ ಮುಂದಿನ ಪಾಠವಾಗಿ ಅವನ ಹೆಸರನ್ನು ಹೇಳಿಕೊಡಲು ಪ್ರಯತ್ನ ಮಾಡುತ್ತಿದ್ದೆ. ಚೇ ಹೇಳು ಮುದ್ದು ಎಂದಾಗ ಹೇಳುತ್ತಿದ್ದ. ತ ಹೇಳಿ ಕೊಟ್ಟೆ. ಅದನ್ನೂ ಒಂದೇಟಿಗೆ ಕಲಿತ. ನ ಅಂತಲೂ ಹೇಳಿಕೊಟ್ಟೆ. ಅಯ್ಯೋ ಅದು ಕೂಡಾ ಹೇಳಿದ. ಇನ್ನೇನು ಕಷ್ಟ ಎಂದು ಅವನ ಕಡೆಗೆ ಅವನ ಬೆಟ್ಟು ತಿರುಗಿಸಿ  'ಚೇತನ್ ಹೇಳು..' ಎಂದೆ. 
'ಹೇಹನ್' ಎಂದು ಅವನ ಎದೆ ಅವನೇ ತಟ್ಟಿಕೊಂಡ.  

ಮಕ್ಕಳಿಗೆ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿ ಅವುಗಳನ್ನು ಗುರುತಿಸಲು ಕಲಿಸುವುದು ಸುಲಭ ಎಂದು ಯಾರೋ ಹೇಳಿದರು. ಅಂದಿನಿಂದ ನಮ್ಮ ಮನೆ ಪುಸ್ತಕ ಭಂಡಾರವೇ ಆಯಿತು, ವಿವಿಧ ಪ್ರಾಣಿ ಪಕ್ಷಿಗಳು,  ಹೂಗಳು ಇರುವ ಹಲವು ಪುಸ್ತಕಗಳು ಟೀಪಾಯನ್ನು ಅಲಂಕರಿಸಿದವು. 

'ನೋಡಿ ಕಲಿ ಮಾಡಿ ತಿಳಿ' ಎಂಬ ನುಡಿಯಲ್ಲಿ ನಂಬಿಕೆಟ್ಟು ಅವನೂ ಸ್ವತಂತ್ರವಾಗಿ ಕಲಿಯಲಿ ಎಂದು ಆ ಪುಟ್ಟ  ಕೈಗೆ ಪಕ್ಷಿಗಳ ಪುಸ್ತಕ ಕೊಟ್ಟು ನಾನು ನನ್ನ ಕೆಲಸಗಳಲ್ಲಿ ಮುಳುಗಿದ್ದೆ. ಮಗನ ಕಲಿಕಾ ಪ್ರಗತಿಯನ್ನು ನೋಡುವ ಸಲುವಾಗಿ ಅವನ ಹತ್ತಿರ ಬಂದಾಗ ಹಕ್ಕಿಗಳೆಲ್ಲಾ ತಮ್ಮ ರೆಕ್ಕೆ ಪುಕ್ಕ ಕಳೆದುಕೊಂಡು ಯಾವುದರ ಮೈಗೆ ಇನ್ಯಾವುದರ ತಲೆಯನ್ನೂ ಪಡೆದು ಇಡೀ ರೂಮಿನಲ್ಲಿ ಫ್ಯಾನಿನ ಗಾಳಿಗೆ ಸಿಕ್ಕ ಸಿಕ್ಕ ಕಡೆ ಹಾರಾಡುತ್ತಿದ್ದವು. ಒಂದೆರಡು ತುಂಡುಗಳು ಅವನ ಬಾಯೊಳಗೂ ಸೇರಿದ್ದವು. ಅದನ್ನೆಲ್ಲಾ ಗುಡಿಸಿ ಕಸದ ಬುಟ್ಟಿಗೆ ಸೇರಿಸಿದೆ. ಅಂದಿನಿಂದ ಅವನ ಸ್ವಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಹುಚ್ಚು ಕೆಲಸ ಬಿಟ್ಟು ಅವನಿಗೆ ಎಟುಕದಷ್ಟು ಎತ್ತರದಲ್ಲಿ ಪುಸ್ತಕಗಳನ್ನಿರಿಸಿದೆ. 

ಈಗ ನಾನು ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಾಣಿಗಳ ಚಿತ್ರವಿರುವ ಪುಸ್ತಕವನ್ನು ಎದುರಿರಿಸಿ, ಅವನ ಎರಡೂ ಕೈಗಳನ್ನು ನನ್ನ ವಶದಲ್ಲೇ ಇಟ್ಟುಕೊಂಡು ಚಿತ್ರ ತೋರಿಸಿ ಅವುಗಳ ಹೆಸರನ್ನು ಹೇಳಿಕೊಡಲಾರಂಭಿಸಿದೆ. ಹುಲಿ, ಸಿಂಹ ಚಿರತೆಗಳನ್ನೆಲ್ಲಾ ಮೌನವಾಗೇ ನೋಡಿದ ಅವನು ಖಡ್ಗ ಮೃಗದ ಚಿತ್ರ ಬಂದಾಗ ತುಟಿ ಅರಳಿಸಿದ. 
ಇದು ಖಡ್ಗಮೃಗ ಎಂದು ಹೇಳಿಕೊಟ್ಟೆ.
ಹಗ್ಗುಬುದ ಎಂದ. 

ಮಗ ಸಣ್ಣವನಾದ ಕಾರಣ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಲ್ಲೇ ನನ್ನೊಡನೆ ಕಾಲ ಕಳೆಯುತ್ತಿದ್ದ. ಇದನ್ನೂ ಕಲಿಕಾ ಕೇಂದ್ರವಾಗಿ ಉಪಯೋಗಿಸಬಾರದೇಕೆ ಎಂಬ ಆಸೆ ನನ್ನಲ್ಲಿ ಮೊಳಕೆಯೊಡೆದಿದ್ದೇ ಸರಿ. ಹೊಸ ಪಠ್ಯ ಸಿದ್ಧವಾಯ್ತು. ಅಡುಗೆ ಮನೆಯಲ್ಲಿ ಸಿಗುವ ಅವನಿಗೆ ಇಷ್ಟವಾದ ಪದಾರ್ಥದಿಂದಲೇ ವಿದ್ಯೆಯ ಓಂಕಾರ ಶುರು ಆಯಿತು. ಪುಟ್ಟ ಪುಟ್ಟದಾಗಿ ಬೆಲ್ಲ ತುಂಡು ಮಾಡಿ ಅವನೆದುರಿಗಿಟ್ಟು ಬೆಲ್ಲ ಎಂದು ಹೇಳಿಕೊಟ್ಟೆ. ಒಂದೆರಡು ದಿನ ತಿನ್ನುವುದು ಮಾತ್ರ ಮಾಡಿದ ಅವನು ಹೆಸರು ಹೇಳುವುದರ ಕಡೆಗೆ ಗಮನವೇ ಕೊಡಲಿಲ್ಲ. ಈಗ ನಾನು ಅದನ್ನು ದೂರದಲ್ಲಿಟ್ಟು ಇದೇನು ಹೇಳು, ಹೇಳಿದರೆ ಕೊಡುತ್ತೇನೆ ಎಂದು ಆಸೆ ತೋರಿಸಿದೆ. ಅವನೋ ನನ್ನಿಂದ ಬುದ್ಧಿವಂತ. ಬೆಲ್ಲ ಕೈಗೆ ಬರುವಲ್ಲಿಯವರೆಗೆ ಆ.. ಆ.. ಅಂತ ಅಳಲು ಶುರು ಮಾಡಿದವನು ನಿಲ್ಲಿಸಲೇ ಇಲ್ಲ.
ಮರುದಿನ ಬೆಲ್ಲದ ಪಾಠ ನಿಲ್ಲಿಸುವ ಅಂದಾಜಿನಲ್ಲಿದ್ದೆ. ಆದರೆ ವಿದೇಯ ವಿದ್ಯಾರ್ಥಿಯಂತೆ ಆ ಹೊತ್ತಿಗೆ ಅಡುಗೆ ಮನೆಗೆ ಬಂದ ಅವನು ಬೆಲ್ಲದ ಡಬ್ಬ ತೋರಿಸಿ ' ಮಿಂಗ' ಕೊ.. ಎಂದು ಕೈ ಚಾಚಿದ. ಅಲ್ಲಿಂದ ನಂತರ ನಾವು ಪಾಯಸಕ್ಕೆ ಬೆಲ್ಲದ ಬದಲು ಮಿಂಗ ಹಾಕಲು ಪ್ರಾರಂಭಿಸಿದೆವು. 
ಕಡ್ಲೆ ಎಂಬುದು 'ಹಂಡ'ವಾಯಿತು.  ಪ್ಯಾಂಟು 'ಹ್ಯಾಮು' ಆಗಿ ಬದಲಾಗಿ, ಪೆನ್ನು 'ಹಮ್ಮು' ಆತು. ಕುಳಿತುಕೋ ಎಂಬುದು 'ತೀಕ' ಎಂದಾತು. ಈಗ ಅವನು ಶಿಕ್ಷಕನಾದ. ನಾನು ಕಲಿಯುತ್ತಲೇ ಹೋದೆ. 

ಪ್ರಪಂಚದ ಅತಿ ಸೌಂದರ್ಯಯುತ ಭಾಷೆಯ ಬಗೆಗೆ ಆಗಿನ  ಅವನ ಜ್ಞಾನದ ಕಡಿಮೆ ಪಾಲು ಅನುಭವ ನನ್ನದಾದರೂ ಆ ಅನುಭವ ಕೊಟ್ಟ ಆನಂದದ ಬುತ್ತಿ ಜೀವನ ಪೂರ್ತಿ ನನ್ನೊಡನೆಯೇ ಇರುತ್ತದೆ. ಈಗ ಅವನು ದೊಡ್ಡವನಾಗಿ ಹಲವಾರು ಭಾಷೆಗಳನ್ನು ಒಂದಿಷ್ಟೂ ವ್ಯಾಕರಣ ತಪ್ಪಿಲ್ಲದೇ ಮಾತನಾಡಬಹುದು. ಆದರೆ ಆಗಿನ ಆ ಬಾಲಭಾಷೆ ನೀಡಿದ  ಸಂತಸದ  ಅನುಭೂತಿ ನನ್ನೊಳಗೆ ಈಗಲೂ ಜೀವಂತವಾಗಿ ಉಳಿದಿರುವುದು, ಆಗಾಗ ಮೆಲುಕು ಹಾಕುವಂತಾಗಿ ನಗೆ ತರಿಸುವುದು ಅದರ ಹೆಚ್ಚುಗಾರಿಕೆಯಲ್ಲದೆ ಇನ್ನೇನು..!!