Pages

Total Visitors

Tuesday, November 24, 2015

ಕ್ಯಾಮರಾ ಕಣ್ಣೊಳಗೆ..

ಕ್ಯಾಮೆರಾ ಹಿಡಿದು ಹುಳ, ಹುಪ್ಪಟೆ, ಮರ, ಹೂವು ಅಂತೆಲ್ಲಾ ಫೊಟೋ ತೆಗೆಯುವ ಇವರಿಗೆ ' ನಾವು ಹೋಗುತ್ತಿರುವ ಮನೆಯಲ್ಲಿ ತುಂಬಾ ಹೂಗಿಡಗಳಿವೆ ಎಂದು ಆಮಿಷವೊಡ್ಡಿ ಕ್ಯಾಮೆರಾ ಹೆಗಲಿಗೇರಿಸಿ ಹೊರಡುವಂತೆ ಮಾಡಿದ್ದೆ. ಅವರ ಮನೆಗೆ ಸಾಗುತ್ತಿರುವ ಕಾಲು ಹಾದಿಯಲ್ಲಿ   ಪಾಲೆ ಮರವೊಂದು ಮೈಯಿಡೀ ಹೂ ಹೊತ್ತು  ಸಿಂಗಾರಗೊಂಡು ನನ್ನ ಫೊಟೋ ತೆಗಿ ಎಂದು ಪರಿಮಳ ಸೂಸಿ ಕರೆಯುತ್ತಿತ್ತು. ನಡು ದಾರಿಯಲ್ಲಿ ನಿಂದು ಅದನ್ನು ಕ್ಲಿಕ್ಕಿಸುತ್ತಿರುವಾಗಲೇ ಹಿಂದಿನಿಂದ ಕುತೂಹಲದ ಕಣ್ಣು ಹೊತ್ತ ಅವಳು ಕಂಡಳು. ಆಗಷ್ಟೇ ಅರಳಿದ  ಹೂ ಮೊಗದ ಹುಡುಗಿ.  ನನ್ನ ನಗುವಿಗೆ ಬೇಕೋ ಬೇಡವೋ ಎಂಬ ಅನುಮಾನದಿಂದಲೇ ನಕ್ಕರೂ ಅವಳ ನೋಟವೆಲ್ಲಾ ಕ್ಯಾಮೆರಾದ ಮೇಲೆಯೇ ಇತ್ತು. 

ನಾವು ಮುಂದೆ ನಡೆದಂತೆಲ್ಲಾ ನಮ್ಮ ಹೆಜ್ಜೆಯ ಜೊತೆ ಅವಳ ಹೆಜ್ಜೆಯೂ ಇತ್ತು. ನಾವು ತಲುಪಬೇಕಾದ ಮನೆ ಬಂದಿತ್ತು. ಮುಚ್ಚಿದ ಗೇಟನ್ನು ತೆರೆದು ಒಳನುಗ್ಗಿ ಮತ್ತೆ ಮುಚ್ಚಲು ಹಿಂದೆ ತಿರುಗಿದರೆ ಅವಳಲ್ಲೇ ನಿಂತಿದ್ದಳು. 'ಅವಳದ್ದು ಒಂದು ಫೊಟೋ ತೆಗೀರಿ' ಅಂದೆ. 

ಅದನ್ನೇ ಕಾದವಳಂತೆ ಉಸಿರು ಬಿಗಿ ಹಿಡಿದು ಕೈಗಳನ್ನು ಗಟ್ಟಿಯಾಗಿಸಿ ಸ್ವಲ್ಪವೂ ಚಲನೆಯಿಲ್ಲದ ಕಂಬದಂತೆ ನಿಂತಳು. ನಗು ಉಕ್ಕಿ ಬಂದು ನಕ್ಕುಬಿಟ್ಟೆ. ಅವಳೂ ಹಗುರಾದಂತೆ ನಕ್ಕಳು. ಕ್ಯಾಮೆರಾದೊಳಗೆ ಸೆರೆ ಸಿಕ್ಕಳು. 'ಇನ್ನೂ ಒಂದು ತೆಗೀತೀರಾ..' ಅವಳ ಕಣ್ಣಲ್ಲಿ ನೂರು ದೀಪಗಳ ಬೆಳಕು. ಮತ್ತೆ ಮತ್ತೆ ಕ್ಯಾಮೆರಾ ಅವಳೆಡೆಗೆ ತಿರುಗಲೇಬೇಕಾಯ್ತು. 
ನಾವು ಹೋಗಿದ್ದ ಮನೆಯವರು ಅವಳ ವರಾತ ಹೆಚ್ಚುತ್ತಿರುವುದನ್ನು ಕಂಡು ' ಹೀಗೆ ಫೊಟೋ ತೆಗೆದ್ರೆ ನಿಂಗೆ ಬೇಗ ಮದುವೆ ಆಗುತ್ತೆ ನೋಡು' ಎಂದರು.
ಸಂಜೆಯ ಸೂರ್ಯನ ರಾಗ ರಂಗು ಅವಳ ಕೆನ್ನೆಯಲ್ಲಿ.. 
ನಾಚುತ್ತಾ ಓಡಿದಳು. 

ನಾವು ಮನೆಯೊಳಗೆ ನಡೆದು ಮಾತುಕತೆಯಲ್ಲಿ ಮುಳುಗಿದ್ದಾಗ ಹೊರಗೆ ಗೇಟಿನ ಸದ್ದು. 
ಅವಳ ಜೊತೆ ಅವಳದೇ ಓರಗೆಯ ಮಕ್ಕಳು. ಹತ್ತಿರದವಳನ್ನು ಬೊಟ್ಟು ಮಾಡಿ 'ಇವಳದ್ದು ಫೊಟೋ ತೆಗೀರಿ.. ಇವಳಿಗೂ ನನ್ನದೇ ಪ್ರಾಯ.  ಬೇಗ ಮದುವೆ ಆಗಬೇಕು' ಅಂದಳು. ಎಲ್ಲರೂ ನಗುವಾಗ ಆ ಮಕ್ಕಳ ಮೊಗದಲ್ಲೂ  ನಗೆ ಹಬ್ಬ.. ಅಲ್ಲೇ ಆಟವಾಡುತ್ತಾ ಇದ್ದ ಹುಡುಗನೊಬ್ಬ  ಫೊಟೋ ತೆಗೆಸಿಕೊಳ್ಳದಿದ್ದರೆ  ತನಗೆ ಮದುವೆ ಆಗದೇ ಹೋದೀತೆಂಬ  ಎಂಬ ಆತಂಕದಲ್ಲಿದ್ದಂತೆ ತಾನೂ ಮುಖ ತೋರಿಸಿದ. ಮಕ್ಕಳ ಗುಂಪು ಹೆಚ್ಚುತ್ತಾ ಇತ್ತು. ಯಾರು ಬಂದರೂ ಅವರೆಲ್ಲರ ಜೊತೆ ಅವಳ ನಗು ಮುಖ ಇದ್ದೇ  ಇತ್ತು. 

ಮತ್ತೊಂದು ಸುತ್ತಿನ ಫೋಟೋ ಪ್ರಹಸನ ಮುಗಿಯುವಾಗ ಅವಳು ಫೋಟೋಕ್ಕೆ ಫೋಸ್ ಕೊಡುವುದರಲ್ಲಿ ಎಕ್ಸ್ ಪರ್ಟ್  ಆಗಿದ್ದಳು. 
 ಆಗಸದ ಸೂರ್ಯ ಆಕಳಿಸುತ್ತಾ ಪಡುವಣಕ್ಕಿಳಿಯ ಹೊರಟ.ಮತ್ತು ನಾವು ಮನೆಯ ಕಡೆ ಮುಖ ಮಾಡಿದೆವು. 

Tuesday, November 17, 2015

'ಹೋ ಏನು ...


ಎಳೆನಗೆಯ ಬೆಳದಿಂಗಳು ಎಂದೇ ಗುರುತಿಸಲ್ಪಡುವ ಶ್ರೀಮತಿ ಅನಿತಾ ನರೇಶ್ ಮಂಚಿಯವರ ಮತ್ತೊಂದು ಲಘು ಬರಹಗಳ ಸಂಕಲನ 'ಹೋ ಏನು!!'  ಇದೀಗ ಓದುಗರ ಕೈ ಸೇರಿದೆ.
ಇದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಳಿಯಿರುವ ಮಂಚಿ ಎಂಬ ಸುಂದರ ಗ್ರಾಮದಲ್ಲಿ ೧೪.೧೧.೨೦೧೫ ರಂದು ನಡೆದ ಸರಳ ಸುಂದರ ಕಾರ್ಯಕ್ರಮದ ವಿವರಗಳನ್ನು ತಮ್ಮಲ್ಲಿ ಹಂಚಿಕೊಳ್ಳಲು ನನಗೆ ತುಂಬಾ ಕುಶಿಯಾಗುತ್ತಿದೆ. 
ಮೊದಲೇ ನಿರ್ಧರಿಸಿದಂತೆ ಬೆಂಗಳೂರಿನಿಂದ ಕಾರಿನಲ್ಲಿ ಪುಸ್ತಕಗಳನ್ನು ಹಾಗೂ ಪುಸ್ತಕ ಪ್ರಕಾಶಕರಾದ ಶ್ರೀಯುತ ಅಣಕು ರಾಮನಾಥರನ್ನು, ಸುಧಾ ಪತ್ರಿಕೆಯಲ್ಲಿ  ಪ್ರಸಿದ್ಧವಾಗಿದ್ದ ವಾರೆ ನೋಟ ಎಂಬ ಅಂಕಣದ ರೂವಾರಿ ಶ್ರೀ ಆನಂದರೊಂದಿಗೆ ಕರೆದುಕೊಂಡು ಬಂದು ಹಿಂದಿನ ದಿನ ರಾತ್ರಿಯೇ ಬೀಡು ಬಿಟ್ಟಿದ್ದೆ. ನಾವು ತಲಪುವ ಮೊದಲೇ ಮನೆಯಂಗಳದಲ್ಲಿ ಶಾಮಿಯಾನ ಹಾಕಿ ಕುರ್ಚಿಗಳನ್ನು ಜೋಡಿಸಿ ಇಡಲಾಗಿತ್ತು.  ವೇದಿಕೆಯ ಮುಂದೆ ಹಾಕಿದ್ದ ಹೂವಿನ ರಂಗೋಲೆಯನ್ನು ಮತ್ತೆ ಮತ್ತೆ ನೋಡುವಂತೆ ಪ್ರೇರೇಪಿಸುವ ರೀತಿಯಲ್ಲಿ ಬಹಳ ಕಲಾತ್ಮಕವಾಗಿ ರಚಿಸಲಾಗಿತ್ತು. ಅದರ ಕೇಂದ್ರ ಭಾಗದಲ್ಲಿರಿಸಿದ್ದ ಕಂಚಿನ ಕಾಲು ದೀಪ ಮರುದಿನದ ಶುಭ ಮಹೂರ್ತಕ್ಕಾಗಿ ಕಾಯುವಂತೆ ಕಾಣುತ್ತಿತ್ತು. 

ಮಂಚಿಯ ಮನೆ ಪ್ರವೇಶಿಸಿದ ನನಗೆ ಅಲ್ಲಿದ್ದವರೆಲ್ಲ ಅದ್ಯಾವುದೋ ಕಾಲದಿಂದ ಪರಿಚಿತರೂ ಅದಕ್ಕೂ ಮೇಲಾಗಿ ಆತ್ಮೀಯರೂ ಆದ ಕಾರಣ ಪ್ರಯಾಣದ ಆಯಾಸವೇ ಮರೆತು ಹೊಯಿತು. ಕಳ ಕಳ ಮಾತು ಗಲ ಗಲ ನಗುವಿನ ನಡುವೆ ನಾನೂ ಬೆರೆತು ಹೋಗಿ ವೇದಿಕೆಯಲ್ಲಿ ಬ್ಯಾನರ್ ಕಟ್ಟುವುದು ಮತ್ತಿತರ ಕೆಲಸಗಳಲ್ಲಿ ಮುಳುಗಿ ಹೋದೆ.



 ನಡು ನಡುವೆ ಅನಿತಾ ಮತ್ತು ಅವಳ ಕಸಿನ್ಸ್ ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳಿಂದಾಗಿ ನಗುವಿನ ಭರ ಹೆಚ್ಚಾಗಿ ಕೈಗಳು ಚುರುಕಾದರೂ  ಕೆಲಸ ಒಂದು ಹಂತಕ್ಕೆ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿಯೇ  ನಡು ರಾತ್ರಿ ಕಳೆದಿತ್ತು. ಒಳಗಡೆ ಆನಂದ್ ಸರ್ ಆಗಲೇ ಕಾಲು ಚಾಚಿ ನಿದ್ರಾಲೋಕಕ್ಕೆ ಜಾರಿದ್ದರು. ದಿನ ಮುಗಿಯಿತು ಅಂತ ಸುಲಭದಲ್ಲಿ ಒಪ್ಪಲೊಲ್ಲದ ರಾಮನಾಥ್ ಸಾಹೇಬರು ಮಾತ್ರ ಮನೆಯ ಹಿಂಭಾಗದಲ್ಲಿ ಎಲ್ಲಿ ಮೊಬೈಲು ಸಿಗ್ನಲ್ ಸರಿಯಾಗಿ ಸಿಗುತ್ತದೆ ಅಂತ ಸರ್ವೇ ಮಾಡುತ್ತಿದ್ದರು. 
ಇನ್ನಾದರೂ ಸ್ವಲ್ಪ ದಿಂಬಿಗೆ ತಲೆಗೊಟ್ಟು ವಿಶ್ರಮಿಸೋಣವೆಂದರೆ ಅನಿತನ ಮಗನೂ ಮತ್ತು ಅವನ ಪ್ರಾಯದವರೇ ಆದ ಅನಿತನ ಕಸಿನ್ಸ್ ವೇದಿಕೆಯನ್ನಿಡೀ ತಮ್ಮ ತರಲೆ ಕಾರ್ಯಕ್ರಮದ 'ಅಡ್ಡಾ'ವಾಗಿಸಿಕೊಂಡು  ನರೇಶ್ ಬಾವನನ್ನು ಪುಸಲಾಯಿಸಿ ವಿವಿಧ ಭಂಗಿಯಲ್ಲಿ ಪೋಟೋ ಸೆಷನ್ ನಡೆಸುತ್ತಿದ್ದರು. ನನಗೂ ಅನಿಲ್ ಗೂ ಇದನ್ನು ನೋಡಿ ಉತ್ಸಾಹ ಹೆಚ್ಚಾಗಿ ಅವರ ಜೊತೆ ನಾವೂ ಸೇರಿಕೊಂಡು ಗದ್ದಲವೆಬ್ಬಿಸಿದೆವು. ಸಮಯ ಜಾರುತ್ತಿತ್ತು. ಬೆಳ್ಳಿ ಮೂಡಲು ಕೆಲವೇ ಕ್ಷಣಗಳು ಬಾಕಿತ್ತು. ಆ ಹೊತ್ತಿನಲ್ಲಿ ಅನಿತನ ಅಮ್ಮನ ಕೈಯ್ಯಲ್ಲಿ ಪ್ರೀತಿಯ ಬೈಗುಳ ತಿಂದು ಎಲ್ಲರೂ ಮಲಗಿಕೊಂಡೆವು.
ನಸುಕಿನಲ್ಲೇ ಪ್ರತ್ಯಕ್ಷರಾದ ಧ್ವನಿವರ್ಧಕದ  ಸಹಾಯಕರು ದೇವರ ಸ್ತುತಿಯೊಂದನ್ನು ಹಾಕಿ ಬೆಳಗಾಯಿತು ಎಂದು ನನ್ನನ್ನು  ಎಚ್ಚರಿಸಿದರು. ಆಮೇಲೆ ಮೊದಲೇ ಗೊತ್ತು ಪಡಿಸಿದಂತೆ ಸಂಗತಿಗಳು ಜರುಗತೊಡಗಿದವು.

 ಸುತ್ತಲೂ ಹಸಿರು ಹರಡಿದ ಬೆಟ್ಟಗಳ ಕಣಿವೆಯಲ್ಲಿ ಅಡಕೆ ತೋಟದ ನಡುವೆ ನಿಂತಿರುವ ಅವರ ಮನೆಯಂಗಳದಲ್ಲಿ ಬಂಧು ಮಿತ್ರರು ಹಾಗೂ ಹಿತೈಷಿಗಳು ಪುಸ್ತಕ ಅನಾವರಣವಾಗುವ ಸನ್ನಿವೇಶಕ್ಕೆ ಸಾಕ್ಷಿದಾರರಾಗಲು ಕಾತರದಿಂದ ನೆರೆದಿದ್ದರು. ತಮ್ಮ ಪೋಷಕರೊಂದಿಗೆ ಬಂದಿದ್ದ ಚಿಣ್ಣರ ದಂಡು ಅತ್ತಿತ್ತ ಓಡಾಡುತ್ತಾ ಡಿಕ್ಕಿ ಹೊಡೆಯುತ್ತಾ ಆಡಿಕೊಳ್ಳುತ್ತಿದ್ದದ್ದು ಮತ್ತು ಆ ದಿನ ಮಕ್ಕಳ ದಿನಾಚರಣೆಯೂ ಕೂಡಾ ಆಗಿದ್ದುದು ಕಾರ್ಯಕ್ರಮದೊಳಗೊಂದು ಕಾರ್ಯಕ್ರಮವೆಂಬಂತೆ ಭಾಸವಾಯಿತು. 
ಪೂರ್ವಾಹ್ನ ಹತ್ತಕ್ಕೆ ಸರಿಯಾಗಿ ಕನ್ನಡನಾಡಿನ ಹೆಸರಾಂತ ಹಾಸ್ಯ ಸಾಹಿತಿ ಪ್ರೊಪೆಸ್ಸರ್ ಭುವನೇಶ್ವರಿ ಹೆಗಡೆಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

 ಆಗಲೇ ಸಿದ್ಧರಾಗಿ ನಿಂತಿದ್ದ ಗಣ್ಯರನ್ನು ಅನಿತಾ ನರೇಶ್ ಮಂಚಿ ವೇದಿಕೆಗೆ ಆಹ್ವಾನಿಸಿದರು. ಸೂಕ್ತ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಅರಳತೊಡಗಿತು. ಶ್ರೀ ರಾಮಚಂದ್ರ ಭಟ್ ಕಜೆ ಹಿಂದಿನ ಸಮಾರಂಭಗಳಲ್ಲಿ ನಿಭಾಯಿಸಿದಂತೆ ಇಂದೂ ಕೂಡಾ ಅತ್ಮೀಯವಾಗಿ ಸ್ವಾಗತ ಭಾಷಣ ಮಾಡಿದರು. ಮತ್ತೆ ಬಣ್ಣದ ಕಾಗದದ ಒಳಗಡಗಿದ್ದ ಪುಸ್ತಕವನ್ನು ಶ್ರೀ ಮನೋಹರ್ ಪ್ರಸಾದರು ಬಿಡುಗಡೆಗೊಳಿಸಿ ವೇದಿಕೆಯಲ್ಲಿದ್ದವರಿಗೆಲ್ಲಾ ಒಂದೊಂದು ಪ್ರತಿ ನೀಡಿದರು. ಪ್ರಕೃತಿಯ ಸಿರಿಯನ್ನು ನೆನಪಿಸುವ ಹಸಿರು ಬಣ್ಣ ಎದ್ದುಕಾಣುತ್ತಿದ್ದ ಸುಂದರ ಮುಖಪುಟದ ಪುಸ್ತಕ ಎಲ್ಲರ ಕಣ್ಸೆಳೆಯಿತು. 

. ರಾಮ್ ನರೇಶ್ ಮಂಚಿಯವರ ಕ್ಯಾಮರಕ್ಕೆ ಸಿಲುಕಿದ, ಒಬ್ಬರ  ಹಿಂದೋಬ್ಬರು ನಿಂತು ತುಂಟತನದಲ್ಲಿ ಇಣುಕುವ ಪೋರರ ಛಾಯಾ ಚಿತ್ರದೊಂದಿಗೆ 'ಹೋ ಏನು' ಎಂಬ ತಲೆಬರಹ ಮುದ್ದಾಗಿ ಕಾಣುತ್ತಿತ್ತು. ಹಿಂಭಾಗದಲ್ಲಿ ಅನಿತನ ಸುಂದರ ಚಿತ್ರದ ಕೆಳಗೆ ಅಣಕು ರಾಮನಾಥರು ತುಂಬುಮನಸ್ಸಿನಿಂದ ಬರೆದ ಬೆನ್ನುಡಿಯೆಂಬ ಕಿರು ಕೃತಿ ಪರಿಚಯ ತಿಳಿ ಹಾಸ್ಯದೊಂದಿಗೆ ಗಮನ ಸೆಳೆಯುವಂತಿತ್ತು. ಒಳಪುಟದಲ್ಲಿ ಕೃತಿಯನ್ನು ನಮ್ಮ ನೆಚ್ಚಿನ ಪೆಜತ್ತಾಯ ಮಾವನಿಗೆ ಅರ್ಪಣೆ ಮಾಡಲಾಗಿತ್ತು. ವಿವಿಧ  ವಿಷಯಗಳ ಮೇಲೆ ಬರೆದ ಈ ಲಘು ಬರಹಗಳ ಸಂಕಲನದಲ್ಲಿ ಒಟ್ಟು ೪೨ ಬರಹಗಳಿದ್ದು ಸುಮಾರು ಇನ್ನೂರು ಪುಟಗಳಷ್ಟು ವ್ಯಾಪಿಸಿಕೊಂಡಿವೆ. ಇವುಗಳಲ್ಲಿ ಕೆಲವು ಮುಗುಳ್ನಗೆ ತರಿಸುವಂತದ್ದು, ಇನ್ನು ಕೆಲವು ಘ್ಹೊಳ್ಳೆಂದು ನಗಿಸುವವು, ಮತ್ತೆ ಕೆಲವು ನೆನೆದೂ ನೆನೆದೂ ನಗಿಸುವಂತವು.



 ಈ ನಗೆ ಲೇಖನಗಳಲ್ಲಿ ಯಾವುದೇ ರೀತಿಯ ಪ್ರಚಲಿತ ಜೋಕುಗಳ ಉಲ್ಲೇಖ ಎಲ್ಲೂ ಇರದಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಕಥೆಯ ಪಾತ್ರದಾರಿಗಳು ಮುಕ್ತಾಯದ ಜಾಡು ಹಿಡಿದು ಸಾಗುವಾಗ ಸ್ವಾಭಾವಿಕವಾಗಿಯೇ ನಿಮ್ಮ ಮನಸ್ಸನ್ನು ಹಗುರಾಗಿಸಿ ನಗಿಸುವುದರಲ್ಲಿ ಯಶಸ್ವಿಯಾಗುತ್ತವೆ. ಈ ಲೇಖನಗಳ ಗುಣಮಟ್ಟಕ್ಕೆ ಕನ್ನಡ ನಾಡಲ್ಲಿ ಮನೆಮಾತಾಗಿರುವ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಮೆಚ್ಚಿ ಹರಸಿರುವ ಮುನ್ನುಡಿಯೇ ಕನ್ನಡಿ.


ಇಂತಾ ಚಂದದ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದು ಪುಟ ತಿರುವುತ್ತಿರುವಾಗ ಸುರುವಾದ ಮನೋಹರ ಪ್ರಸಾದರ ಭಾಷಣ ನಮ್ಮೆಲ್ಲರನ್ನೂ ಸಾರಸ್ವತ ಲೋಕದ ಮತ್ತೊಂದು ಅದ್ಭುತ ಸನ್ನಿವೇಶಕ್ಕೆ ಸೆಳೆದೊಯ್ಯಿತು. ಜುಳು ಜುಳು ಹರಿಯುವ ತೊರೆಯಂತೆ ಅವರ ಮಾತು ಸಾಗುತ್ತಿತ್ತು. ಅನಿತಾ ಬರೆದ ಪುಸ್ತಕವನ್ನು ಶ್ಲಾಘಿಸಿದ ಅವರು ರಾಮ್ ನರೇಶ್ ದಂಪತಿಗಳ ಸಾಹಿತ್ಯ ಮತ್ತು ಕಲಾ ಪ್ರೇಮವನ್ನು ಪ್ರಶಂಸಿಸಿದರು. ನಡುವೆ ಒಂದಿಷ್ಟು ತಮಾಷೆ, ಒಂದಿಷ್ಟು ತುಂಟತನವನ್ನು ಬೆರೆಸಿಕೊಳ್ಳುತ್ತಾ ಅವರು ತಮ್ಮ ಆಕರ್ಷಕ ಧ್ವನಿಯಲ್ಲಿ ಸಭಿಕರ ಮನಗೆಲ್ಲುವುದರಲ್ಲಿ ಯಶಸ್ವಿಯಾದರು. ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥರಾದ ಅವರು ಪತ್ರಿಕಾರಂಗದಲ್ಲೊಂದು ಮರೆಯಲಾಗದ ಹೆಸರು. ಸ್ವತಃ ಉತ್ತಮ ಓದುಗರಾದ ಅವರು ತಮ್ಮ ಬಾಲ್ಯದಲ್ಲಿ ಚಂದಮಾಮ ಹಾಗೂ ಸುಧಾ ಪತ್ರಿಕೆ ವಹಿಸಿದ್ದ ಪಾತ್ರವನ್ನು ಸ್ಮರಿಸಿಕೊಂಡರು. ಪುಟ್ಟ ಮಕ್ಕಳು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕೆಂಬುದನ್ನು ಒತ್ತಿ ಹೇಳಿದರು. ಓ ಹೆನ್ರಿಯ ಒಂದು ಸಣ್ಣ ಕಥೆಯನ್ನು ಹೆಕ್ಕಿಕೊಂಡು ಕಥೆಗಳು ಹೇಗಿದ್ದರೆ ಚೆನ್ನಾಗಿರುತ್ತವೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದರು. ಒಟ್ಟಿನಲ್ಲಿ ಬಹುಕಾಲದ ನಂತರ ಒಂದು ಅದ್ಭುತ ಭಾಷಣ ಕೇಳಿದ ಸಂತಸ  ನನ್ನದಾಗಿತ್ತು.

ನಂತರ ನಮ್ಮ ನೆಚ್ಚಿನ ಭುವನಕ್ಕ ಅನಿತಾ ಕೆಲವು ವೇಳೆ ಕಂಪ್ಯೂಟರ್ ಬಳಕೆಯ ವಿಷಯದಲ್ಲಿ ನನ್ನ ಊರುಗೋಲಿನಂತೆ ಎಂದು ನುಡಿದು ನಗಿಸಿದರು. ಮನೋಹರ್ ಪ್ರಸಾದರ ಸವಿ ನುಡಿಗಳನ್ನು ಮೆಚ್ಚಿ ಅಭಿನಂದಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಂತಿಮ ಘಟ್ಟದತ್ತ ಸಾಗುತ್ತಿರುವಾಗ ಮೈಕ್ ಎತ್ತಿಕೊಂಡ ಶ್ರೀ ರಾಮನಾಥ್ ಎಂದಿನಂತೆ ಒಂದು ಅಣಕವಾಡಿನೊಂದಿಗೆ ತಮ್ಮ ಮಾತನ್ನು ಆರಂಭಿಸಿದರು. ತಮ್ಮ ಶೈಲಿಯಲ್ಲಿ ಮಾತು ತೊಡಗಿದ ಅವರು 'ಹೋ ಏನು' ಪುಸ್ತಕದ ಪರಿಚಯವನ್ನು ಸಭಿಕರಿಗೆ  ಮಾಡಿಕೊಟ್ಟರು. ಅನಿತಾ ಮುಕ್ತಾಯ ಹಂತದಲ್ಲಿ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಇದೆಲ್ಲದರ ನಡುವೆ ಡಾ.ಸುರೇಖಾ ರವಿಶಂಕರ್ ಅವರ ಸಮರ್ಥ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ನಂತರ ಲಘು ಸಂಗೀತ ಹಾಗೂ ಯಕ್ಷಗಾನದ ಆಯ್ದ ಹಾಡುಗಳ ಭಾಗವತಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಕುಮಾರಿ ಮೇಘಾ ಕಾಯರ್ಪಾಡಿ ಮತ್ತು ರೇಶ್ಮಾ ನರಸಿಂಹ ಕಜೆ  ಲಘು ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇದರಲ್ಲಿ ರೇಶ್ಮಾ ಕಜೆಯವರು ಅನಿತಾ ಬರೆದಿದ್ದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ್ದು ವಿಶಿಷ್ಟವಾಗಿತ್ತು. 
 ಯಕ್ಷಗಾನಾಮೃತ ಸಿಂಚನ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದು ಸಭಿಕರನ್ನು ರಂಜಿಸಿತು. 

 ಭಾಗವತರಾಗಿ  ಕು. ಕಾವ್ಯಶ್ರೀ ಅಜೇರು ಮತ್ತು ಶ್ರೀ ಮುರಳಿ ಕೃಷ್ಣ ತೆಂಕಬೈಲು ಭಾಗವಹಿಸಿದರು. ಇವರಿಗೆ ಹಿಮ್ಮೇಳದಲ್ಲಿ ಮದ್ದಳೆಯಲ್ಲಿ  ನೆಕ್ಕರೆಮೂಲೆ ಗಣೇಶ್ ಭಟ್, ಚೆಂಡೆಯಲ್ಲಿ ನಿಡ್ವಜೆ ಶಂಕರ ಭಟ್, ಸುಭ್ರಹ್ಮಣ್ಯ ಮುರಾರಿ ಚಕ್ರತಾಳದಲ್ಲಿ ಸಹಕರಿಸಿದರು. ಶ್ರೀ ಕಿಶೋರ್ ಭಟ್ ಕೊಮ್ಮೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಲ್ಲಿಯವರೆಗೆ ಮನಸ್ಸನ್ನು ತುಂಬಿಕೊಳ್ಳುತ್ತಿದ್ದ ನಮಗೆ ಅದಾಗಲೇ ಮೇಜಿನಲ್ಲಿ ತಂದಿಟ್ಟಿದ್ದ ಬಗೆ ಬಗೆಯ ಭಕ್ಷ್ಯಗಳು ಹೊಟ್ಟೆ ತುಂಬಿಸುವ ಬಗ್ಗೆಯೂ ಸೂಚನೆ ನೀಡಿದವು. ಪೊಗದಸ್ತಾದ ಊಟ ಮಾಡುತ್ತಿದ್ದಾಗಲೂ ವೇದಿಕೆಯಲ್ಲಿ ಕು. ಮೇಘಾ ಹಾಡುತ್ತಿದ್ದರೆ ಅದಕ್ಕೆ  ಕೀ ಬೋರ್ಡ್ ಸಾಥ್ ನೀಡುತ್ತಿದ್ದವಳು ಅಮೃತಾ. ಊಟದ ಜೊತೆಗೆ ಇದನ್ನೂ ಆಸ್ವಾದಿಸುತ್ತಾ ತಟ್ಟೆ ಖಾಲಿ ಮಾಡಿದೆವು. 
ಬಹುದಿನಗಳಿಂದ ಕಾಯುತ್ತಿದ್ದ ಕುತೂಹಲದ ಕ್ಷಣಗಳು ಇಷ್ಟು ಬೇಗನೇ ಮುಗಿಯಬಾರದಿತ್ತು ಎಂದುಕೊಳ್ಳುತ್ತಲೇ ಎದ್ದು ಬರಲು ಹಠ ಮಾಡುತ್ತಿದ್ದ ಕಾಲುಗಳನ್ನು ಹೇಗೋ ಎಳೆದು ತಂದು ಕಾರಿಗೇರಿದರೂ ಮನಸ್ಸು ಆ ಗುಂಗಿನಲ್ಲೇ ಮುಳುಗೇಳುತ್ತಿತ್ತು.  









Saturday, September 12, 2015

ಆಯುಧ..




ಶೂರ ಲಂಕಾಧೀಶ್ವರನ  ತಂಗಿ ನಾನು.  ಒಬ್ಬನಲ್ಲ ಇಬ್ಬರಲ್ಲ ಮೂರು ಜನ ಬಲಾಡ್ಯ ಸಹೋದರರೊಡನೆ ಬೆಳೆದ ಮನೆ ಮಗಳು.. ಹೇಗಿರಬೇಕಿತ್ತು ನನ್ನ ಬದುಕು.. ಹೇಗಾಗಿ ಹೋಯಿತು..ಹರೆಯ ನನ್ನೊಳಗೂ ನುಗ್ಗಿತು. ನೂರಾರು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿತು. ಗಂಡಿನ ಬಲವಾದ ತೋಳೊಳಗೆ ಕರಗಬೇಕೆಂಬಾಸೆ ಹೆಣ್ಣಾದ ನನಗೆ ಸಹಜ ತಾನೇ.. ಆದರೆ  ಬೆಳೆದು ನಿಂತ ನನಗೆ ಸರಿಯಾದ ಗಂಡನನ್ನೇನು ಹುಡುಕಲಿಲ್ಲ ನನ್ನಣ್ಣ .. ಲೋಕದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ ಮಾಡಿದ.  ತಂಗಿಗೆ ಮದುವೆ  ಮಾಡದೇ ಅಣ್ಣ ತನ್ನ ಅಂತಃಪುರದ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಾನೆ ಎಂದು ಆಡಿಕೊಳ್ಳದಿರಲಿ ಎಂದಷ್ಟೇ.. 

ವಿದ್ಯುಜ್ಜಿಹ್ವ ನನ್ನ ಗಂಡನೆಂದೆನಿಸಿಕೊಂಡ. ಬಂದ ಬಾಳನ್ನು ಬಂದಂತೆ ಸಂತಸದಿಂದಲೇ ಸ್ವೀಕರಿಸಿದ್ದೆ. ಹೇಡಿ, ಯಾಕೂ ಬೇಡದವ ಎನಿಸಿಕೊಂಡಿದ್ದ ಗಂಡ ನನ್ನ ಸಹವಾಸದಿಂದೇನೋ ಪರಾಕ್ರಮಶಾಲಿಯಾಗುತ್ತಾ ಬೆಳೆದ.. ಅದು ಎಷ್ಟೆತ್ತರಕ್ಕೆ ಎಂದರೆ ರಾವಣನಿಗೆ ಸರಿಸಮನಾಗಿ .. ಕಣ್ಣು ಕುಕ್ಕದಿದ್ದೀತೇ ಅವನಿಗೆ.. ದಿಗ್ವಿಜಯ ಯಾತ್ರೆಯಲ್ಲಿ ಶತ್ರುಗಳೊಡನೆ ಸೇರಿದ ಎಂಬುದೊಂದು ನೆವ..ಹಾಗೊಂದು ವೇಳೆ ಶತ್ರುಗಳೊಡನೆ ಸೇರಿದನೇ ಎಂದುಕೊಂಡರೂ  ತಂಗಿಯ ಗಂಡನೆಂದಾದ ಮೇಲೆ ಕರೆದು ಬುದ್ಧಿ ಹೇಳಬಾರದಿತ್ತೇ..? ಹಾಗೆ ಮಾಡಲಿಲ್ಲ ಅವನು..  ಎಲ್ಲಿಯಾದರೂ ತಂಗಿಯ ಗಂಡ ತನ್ನಿಂದ ಬಲಶಾಲಿಯೂ, ಜನಾನುರಾಗಿಯೂ ಆಗಿ ಬೆಳೆದರೆ ತಾನು ಕುಳಿತ ಸಿಂಹಾಸನ ಕದಲಿ ಬೀಳುವ ಚಿಂತೆ.. ಶತ್ರುವನ್ನು ಸದೆ ಬಡಿದಂತೆ ನನ್ನವನನ್ನು ಕೊಂದು ಬಿಟ್ಟ.. 
ನನ್ನೊಳಗಿನ ಕಣ್ಣೀರು ಇಂಗಿ ಹೋಗುವಷ್ಟು ಶೋಕಿಸಿದೆ..  ಯಾರು ನನ್ನವರು ಎಂದುಕೊಂಡಿದ್ದೆನೋ ಅವರಿಂದಲೇ ಸೋತಿದ್ದೆ. ಬದುಕಿಗಿಂತ ಸಾವೇ ಪ್ರಿಯವೆನಿಸಿತು. ಆದರೆ ಸಾವನ್ನು ನಾನೇ ಬೇಡುವುದೇ..  ಇಲ್ಲ..ಇಲ್ಲ.. ನನ್ನ ಬದುಕನ್ನು ಹಾಳು ಮಾಡಿದವನ ದೇಹ ನೆಲದಲ್ಲಿ ಚಡಪಡಿಸಿ ನರಳುವುದನ್ನು ನಾನು ಕಾಣಬೇಕು.. ನನ್ನವನ ರಕ್ತ ಹರಿಸಿದ ಅವನ ಕೈಗಳು ತುಂಡು ತುಂಡಾಗಿ ನೆಲದ ಮೇಲೆ ಬೀಳಬೇಕು.. ಹಾಂ.. ಆಗ ಶಾಂತಿ ಸಿಕ್ಕೀತು ನನಗೆ.. ಎಲ್ಲ ಕಳೆದುಕೊಂಡಿದ್ದೇನೆ ಈಗ ಈ ದ್ವೇಷದ ನೂಲೇಣಿಯೊಂದನ್ನು ಬಿಟ್ಟು.. ಇದರಿಂದಲೇ ಮೇಲೇರಬೇಕು..ಹೊರಗಿನ ಕಣ್ಣಿಗೆ ಅವನು ನನ್ನಣ್ಣ.. ಅವನಿಗೆ ಹತ್ತಿರವಾದಷ್ಟೂ ಹೊಂಚು ಹಾಕಿ ಇರಿಯುವುದು ಸುಲಭವಾದೀತೇನೋ..  ಮತ್ತೆ ತವರಿಗೆ ಮರಳಿದ್ದೆ. 

ಆಹಾ.. ಈ ರಾವಣನಾದರೂ ಎಷ್ಟೊಂದು ಚತುರ.. ಗೋಳಿಡುತ್ತಾ ಆರ್ತಳಾಗಿ ಬಂದ ನನ್ನ ಮೇಲೆ ಕನಿಕರ ತೋರಿದಂತೆ ಮಾಡಿ ದೂರದ ದಂಡಕಾರಣ್ಯದಲ್ಲಿ ರಕ್ಕಸ ಸೇನೆಯೊಂದಿಗೆ ನನ್ನನ್ನು ನೆಲೆಗೊಳಿಸಿದ. ತಂಗಿ ಕ್ರೂರ ಮೃಗಗಳ ದಾಳಿಗೋ, ಋ ಮುನಿಗಳ ಶಾಪದ ತಾಪಕ್ಕೋ ಸಿಲುಕಿ ಹಾಳಾಗಿ ಹೋಗಲಿ ಎಂಬ ಹಂಚಿಕೆ ಅವನದ್ದು.. ಇಲ್ಲದಿದ್ದರೆ ಸುವರ್ಣಮಯ ಲಂಕೆಯಲ್ಲಿ ಒಂದು ಅರಮನೆ ಕಟ್ಟಿ ನನ್ನನ್ಯಾಕೆ ಇರಗೊಡಬಾರದಿತ್ತು. ನನ್ನ ಮೇಲೆ ಜನ ಕನಿಕರ ತೋರುವುದು ಅವನಿಗೆ ಬೇಕಿರಲಿಲ್ಲ. ನನ್ನನ್ನು ಇಲ್ಲಿಯವರು ಮರೆಯುವಂತೆ ಮಾಡುವುದೇ ಅವನ ತಂತ್ರ. ನಾನು ಅವನ ವಿರುದ್ಧ ಎದ್ದು ನಿಲ್ಲದಂತೆ ನಯವಾದ ಮಾತಿನಲ್ಲಿ ನನ್ನನ್ನು ದೂರ ತಳ್ಳಿದ. 
ಕಾಲ ನನಗೂ ಬಂದೀತು.. ಇಲ್ಲೇ ಇದ್ದರೂ ರಾವಣನನ್ನು ಎದುರಿಸುವ, ಅವನನ್ನು ಕೆಡಹುವ ಜನರನ್ನು ಹುಡುಕುವುದು ನನಗೂ ಕಷ್ಟ.. ಅವನೆದುರು ನಿಲ್ಲುವ ಒಬ್ಬ ರಕ್ಕಸ ಹುಳುವೂ ನನ್ನ ಕಣ್ಣಿಗೆ ಇಲ್ಲಿಯವರೆಗೆ ಬಿದ್ದಿರಲಿಲ್ಲ. ಅಲ್ಲಾದರೆ ಯಾರಾದರೂ ಸಿಕ್ಕಾರು ಎಂಬ ದೂರದ ಆಸೆ ನನಗೆ.. ಹದಿನಾಲ್ಕು ಸಾವಿರ ರಕ್ಕಸ ಸೇನೆಯೊಡನೆ ನಾನು ಕಾನನ ಸೇರಿದೆ. ಈಗ ಒಬ್ಬಳೇ.. ಆಟ ಊಟ ಬೇಟ.. ಎಲ್ಲವೂ ನನಗೆ ಬೇಕಾದಂತೆ.. ಯಾಕೆ ಗಂಡಿಗೊಂದು ಹೆಣ್ಣಿಗೊಂದು ಎರಡು ನ್ಯಾಯ.. ಕಂಡ ಕಂಡ ಹೆಣ್ಣನ್ನೆಲ್ಲಾ ಎಳೆದು ತಂದು  ತಮ್ಮರಮನೆ ತುಂಬಿಸಿಕೊಳ್ಳುತ್ತಾ ಅವರು ಸುಖ ಸಂತೋಷದಲ್ಲಿ ಮೆರೆಯುವಾಗ ನಾನು ನನ್ನ ಮಡಿದ ಪತಿಗಾಗಿ ಎಷ್ಟೆಂದು ಅಳಲಿ.. ನನ್ನ ಮನಸ್ಸಾಗಲೀ ದೇಹವಾಗಲೀ ಯಾರ ಅಧೀನದ್ದು ಅಲ್ಲ. ನನ್ನದೇ ಅದು.. ನನಗೆ ಬೇಕಾದಂತೆ ಬದುಕಬಾರದೇಕೆ..ಸರಿಯಾದ ಜೊತೆಗಾಗಿ ಕಾನನವಿಡೀ ಸುತ್ತುತ್ತಿದ್ದೆ.ಈ ಅಲೆದಾಟಕ್ಕೆ ಇನ್ನೊಂದು ಕಾರಣವೂ ಇತ್ತು. ಇಲ್ಲಿ ಘೋರ ತಪ್ಪಸ್ಸನ್ನಾಚರಿಸುವ ಋ ಮುನಿಗಳು ಅನೇಕ. ಯಾರಾದರು ನನಗಿಂತ ಬಲಾಡ್ಯರಿದ್ದರೆ ಅವರನ್ನು ಕೆಣಕಿ ದ್ವೇಷ ಕಟ್ಟಿಕೊಂಡು ರಾವಣನಿಗೆ ಎದುರಾಗಿಸುವುದು ನನ್ನಾಸೆ. ಉಹೂಂ.. ಅವರೆಲ್ಲರ ಶಕ್ತಿಯೂ ನನ್ನನ್ನು ನೋಡಿದೊಡನೆ ಉಡುಗಿ ಹೋಗುತ್ತಿತ್ತು.ಹಾಗಾಗಿ  ಅವರಿಂದೇನು ಪ್ರಯೋಜನವಾಗುವಂತಿರಲಿಲ್ಲ.  

ಎಲ್ಲೆಲ್ಲೋ ಏಕೆ ಅಲೆಯಲಿ.. ಇಲ್ಲವೇ ನನ್ನ ಪುತ್ರ ಶಂಭೂಕ. ಇವನು ನನ್ನಣ್ಣನಂತೆಯೇ.. ಅಲ್ಲಲ್ಲ.. ಅವನಿಗಿಂತಲೂ ಪರಾಕ್ರಮಶಾಲಿಯದ ರಕ್ಕಸನಾಗಿ ಬೆಳೆದರೆ.. ಲಂಕೆಯನ್ನು ಮುತ್ತಿ ರಾವಣನನ್ನು ಕೊಂದು ನನ್ನ ಹಠ ತೀರಿಸಿಕೊಂಡು ಮಗನನ್ನು ಅಲ್ಲಿಯ ಸುವರ್ಣ ಸಿಂಹಾಸನದ ಮೇಲೆ ಕೂರಿಸಿದರೆ.. ನಾನೇ ಅವನನ್ನು ತಪಸ್ಸಿನಲ್ಲಿ ತೊಡಗುವಂತೆ ಪ್ರೇರೇಪಿಸಿದೆ. ರಾವಣನೂ ಮೊದಲಿಗೆ ಸಾಮಾನ್ಯ ರಕ್ಕಸನೇ ಆಗಿದ್ದ.. ತಪಸ್ಸಿನಿಂದ ಪಡೆದ ವರದ ಮಹಿಮೆಗಳು ಅವನನ್ನು ಪರಾಕ್ರಮಿಯನ್ನಾಗಿಸಿತು.ಯಾರಿಗೂ ನನ್ನ ಹುನ್ನಾರ ತಿಳಿಯಬಾರದೆಂದು ರಹಸ್ಯವಾಗಿ  ಬಿದಿರಿನ ಮೆಳೆಯ ನಡುವಲ್ಲಿ ಕುಳಿತು ಸಾಧನೆ ಮಾಡುವಂತೆ ಉತ್ತೇಜಿಸಿದ್ದೆ.ಅವನು ಮರಳಿ ಬರುವ ಕ್ಷಣಕ್ಕಾಗಿ ಕಾಯುತ್ತಿದ್ದೆ.

ಆದರೆ ಆದಿನ ನಾನು ಕಂಡದ್ದೇನು.. ಯಾವ ತಾಯ ಕಣ್ಣುಗಳೂ ನೋಡಬಾರದ್ದು.. ನೋಡಲಾಗದ್ದು.. ರುಂಡ ಮುಂಡಗಳೆರಡು ಬೇರ್ಪಟ್ಟು ರಕ್ತ ಮಡುವಿನಲ್ಲಿ ಅಸು ನೀಗಿತ್ತು ನನ್ನ ಕಂದಮ್ಮ.. ಉಜ್ವಲವಾಗಿ ಉರಿಯಬೇಕಿದ್ದ ಸೊಡರೊಂದು ಆರಿ ಹೋಯಿತು.. ಹಾ.. ವಿಧಿಯೇ.. ನನ್ನಂತಹ ಹತಭಾಗ್ಯಳು ಯಾರಿದ್ದಾರೆ ಲೋಕದಲ್ಲಿ..
ಆದರೆ ನನ್ನ ಕಂದನನ್ನು ಕೊಂದವರು ಯಾರೇ ಆಗಿರಲಿ ಅದರ ಮೂಲ ಕಾರಣ  ರಾವಣ. ಅವನನ್ನು ಎದುರಿಸುವ ಸಮರ್ಥ ಇಲ್ಲೆಲ್ಲೋ ಬಂದಿರಬಹುದು.. ಇಲ್ಲಿರುವ ತಾಪಸರು ನಮ್ಮನ್ನು ಕಂಡರೆ ಹೆದರಿ ಓಡುವವರು ನನ್ನ ಧೀರ ಕಂದನನ್ನು ಮುಟ್ಟಲು ಸಾಧ್ಯವೇ ಇಲ್ಲ.. ಅವನನ್ನು ಅರಸಬೇಕು ನಾನು..ಇನ್ನೆಲ್ಲವನ್ನೂ ನಾನೇ ಮಾಡಬೇಕು.. ಸಾಧ್ಯವೇ ನನ್ನಿಂದ..?  
ಎಲ್ಲಾ ಮುಗಿಯಿತು ಎಂದುಕೊಂಡಿದ್ದೆ.. ಇಲ್ಲ ಮುಗಿದಂತೆ ಅನಿಸಿದ್ದು ಮಾತ್ರ.. ನನ್ನೊಳಗೆಯೂ ಆಸೆಯ ಮೊಳಕೆಗೆ ನೀರೆರೆಯುವವರು ಇಷ್ಟು ಸುಲಭವಾಗಿ ಸಿಕ್ಕಾರು ಎಂಬ ಕಲ್ಪನೆಯೇ ನನಗಿರಲಿಲ್ಲ. ಎಂತಾ ಧೀಮಂತ ನಿಲುವಿನ ಸುಂದರಾಂಗನವ. ಎಲ್ಲವನ್ನೂ ಗೆಲ್ಲಬಲ್ಲ ಆತ್ಮವಿಶ್ವಾಸ ಅವನಲ್ಲಿದ್ದಂತೆ ತೋರಿತು.   ಹಾಗೆಂದು ದೂರ ನಿಂದು ಸುಮ್ಮನೆ ನೋಡುತ್ತಿದ್ದರೆ ಸಾಕೇ..ಅವನನ್ನು ನನ್ನ ಬಲೆಗೆ ಬೀಳಿಸಬೇಕು..ಅದೂ ಯಾರಿಗೂ ಸಂಶಯ ಬಾರದ ರೀತಿಯಲ್ಲಿ.. ಲೋಕದ ಕಣ್ಣಿಗೆ ನಾನು ಕಾಮಾತುರಳಾಗಿ ಅವನ ಮೇಲೆ ಬಿದ್ದೆ ಅನ್ನಿಸಬೇಕು. ಕಡೆಗಣ್ಣ ನೋಟಕ್ಕೆ ಮರುಳಾಗಿ ನನ್ನವನಾದರೆ ಅವನನ್ನು ರಾವಣನ ವಿರುದ್ಧ ಪ್ರೇರೇಪಿಸಿ ನನ್ನ ಹಗೆ ತೀರಿಸಿಕೊಳ್ಳಬಹುದು.. ರಕ್ಕಸಿಯೆಂದು ನನಗೆದುರಾದರೆ ರಾವಣನನ್ನು ಮುಂದಿಟ್ಟು ಯುದ್ಧ ಮಾಡಬೇಕು.. ಅದೇ ಸರಿ..  
ಸ್ವಚ್ಚವಾಗಿ ಮೈಯನ್ನು ತಿಕ್ಕಿ ತೊಳೆದೆ. ಹೊಚ್ಚ ಹೊಸ ಸೀರೆಯುಟ್ಟೆ, ಎಂದೋ ಬಿಚ್ಚಿ ಎಸೆದಿದ್ದ ಆಭರಣಗಳನ್ನು ಧರಿಸಿದೆ. ಸಿಕ್ಕುಗಟ್ಟಿದ್ದ ಕೂದಲನ್ನು ನಯವಾಗಿ ಬಾಚಿ ಜಡೆ ಹೆಣೆದೆ. ಪರಿಮಳಭರಿತವಾದ ಕಾಡ ಹೂಗಳನ್ನು ಮುಡಿಯಲ್ಲಿಟ್ಟೆ.. ತಿಳಿಜಲದ ಸರೋವರದಲ್ಲಿನನ್ನ ಮೊಗವನ್ನು ನಾನೇ ನೋಡಿಕೊಂಡು ಮೋಹಪರವಶಳಾದೆ.. ಓಹ್.. ನಾನೂ ಸುಂದರಿಯೇ.. ಅವನ ಸೌಂದರ್ಯಕ್ಕೆ ಸಾಟಿಯಾಗಬಲ್ಲ ಚೆಲುವು ನನ್ನದು.  ಅವನನ್ನು ನನ್ನಡೆಗೆ ಸೆಳೆಯಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಯಿತು. 
ನಯವಾಗಿ ಮಾತನಾಡಿಸಿದೆ. ಮಾತುಗಳಲ್ಲಿ ಸಿಹಿ ಜೇನು ತುಂಬಿದೆ. ಅವನದರ ಸವಿಯನ್ನು ಹೀರುವ ಭೃಂಗವಾಗಲೆಂದು ಹಾರೈಸಿದೆ. ಉಹೂಂ..ಹಾಗಾಗಲಿಲ್ಲ. ನಾಡಾಡಿಯಾದ ಆತ ಬರುವಾಗಲೇ ಚೆಂದುಳ್ಳಿ ಚೆಲುವೆಯಂತವಳೊಬ್ಬಳನ್ನು ಜೊತೆಯಲ್ಲೇ ಕರೆತಂದಿದ್ದ. ಅವನರಸಿಯಂತೆ ಅವಳು.. ನಾನು ಅವನನ್ನರಸಿಯೇ ಬಂದವಳು..ಅವಳೊಡನೆ ಅವನನ್ನು ಹಂಚಿಕೊಳ್ಳಬಲ್ಲೆ ಎಂದೆ.  ಏಕಪತ್ನೀವೃತಸ್ಥನಂತೆ ಅವ... ಅವನೇ ದೂರದಲ್ಲಿದ್ದ ತನ್ನ ಸಹೋದರನೆಡೆಗೆ ಬೆರಳು ತೋರಿದ.. ಅವನೊಪ್ಪಿದರೆ.. ಎಂದೂ ಸೇರಿಸಿದ.
 ಹುಂ.. ಇನ್ನೂ ಒಬ್ಬನಿದ್ದಾನೆಯೇ .. ನೋಡಿಬಿಡುವ ಇವನನ್ನೊಮ್ಮೆ..  ಅರ್ರೇ.. ಇವನನ್ನು ನಾನ್ಯಾಕೆ ಮೊದಲೇ ಗಮನಿಸಲಿಲ್ಲ.. ನೋಡಿದ್ದರೆ ಅವನೆಡೆಗೇ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.ಆದರೇನು ಮಾಡಲಿ..ಸಂಶಯ ಬಂತೇನೋ.. ನನ್ನನ್ನೊಪ್ಪದೆ ಸತಾಯಿಸಿ ಅಣ್ಣ ಒಪ್ಪಿದರೆ ನಿನ್ನವನಾದೇನು..ಒಪ್ಪಿದ್ದಾನೆ ಎಂದು ಪ್ರಮಾಣ ಬೇಕೆನಗೆ ಎಂದ.  ಸಿಟ್ಟು ಬಂದರೂ ತಡೆದುಕೊಂಡೆ. ತಿರುಗಿ ಬೀಳಲಿದು ಸಮಯವಾಗಿರಲಿಲ್ಲ.  ಅವನೋ ನನಗೆ ಕಾಣದಿರಲಿ ಎಂದು ನನ್ನ ಬೆನ್ನಲ್ಲೇ ಏನೋ ಬರೆದು ಕಳುಹಿದ. ಮತ್ತೆ ಮರಳಿ ಬೆನ್ನು ತೋರಿಸಿ ನಿಂತೆ.  ಅವನೇನು ಬರೆದನೋ..ಎಂದು ಕೇಳಲು ತಿರುಗಿದ್ದೆನಷ್ಟೇ..ನನ್ನ ಮೈಯನ್ನಿನ್ನೂ ಇವನು ಸೋಕಿರಲಿಲ್ಲ..  ಮಿಂಚಿನಂತೆ ಕಣ್ಣು ಕೋರೈಸಿತ್ತು.. ಮರುಕ್ಷಣದಲ್ಲಿ ನನ್ನ ಕಿವಿ ಮೂಗುಗಳು ತುಂಡಾಗಿ ನೆಲದಲ್ಲಿ ಬಿದ್ದಿತ್ತು.. 
ಬರಿದೆ ಕೆಣಕಿದ್ದಕ್ಕಷ್ಟೇ ಹೆಣ್ಣೆಂದೂ ಕನಿಕರಿಸದೆ  ರಾವಣಾಸುರನ ಶೂರ ತಂಗಿಯನ್ನೇ ಈ ಸ್ಥಿತಿಗೆ ತಂದವರು ಇನ್ನು ಇವರಿಗೆ ವಿರುದ್ಧವಾದುದನ್ನು ಮಾಡಿದರೆ ಕೊಲ್ಲದೇ ಉಳಿದಾರೆ..? ಅಂದರೆ.. ಇದರರ್ಥ ಯುದ್ಧಕ್ಕೆ ಕಹಳೆ ನಾನೇ ಊದಿದ್ದೆ ಎಂದಲ್ಲವೇ..  ಇಷ್ಟರಲ್ಲೇ ಇವರ ಶಕ್ತಿ ಸಾಮರ್ಥ್ಯಗಳ ಅಳತೆ ತಿಳಿಯುವುದು ಹೇಗೆ? ನಮ್ಮವರನ್ನೆಲ್ಲಾ ಯುದ್ಧಕ್ಕೆ ಕಳುಹಿಸಿದೆ. ಎಲ್ಲರನ್ನೂ ಹರಿತ ಬಾಣಗಳಿಂದ ಕೊಂದರು. ಅವರು ಯುದ್ಧ ಮುಗಿಯಿತು ಎಂದುಕೊಂಡರೇನೋ.. ನನಗಿದು ಪ್ರಾರಂಭವಷ್ಟೇ.. ರಾವಣನನ್ನು ಇವರದೆರು ನಿಲ್ಲಿಸಬೇಕಿನ್ನು.. ಇವರನ್ನು ಕೊಲ್ಲಲೋ...ಕೊಲ್ಲಲ್ಪಡಲೋ.. ಯಾವುದಾದರೂ ಸರಿ.. ಜಯ ನನ್ನದೇ.. 
ಅಣ್ಣನೆದುರು ಸುಮ್ಮನೆ ಕಿವಿ  ಮೂಗು ಕಳೆದುಕೊಂಡು ಅತ್ತರೆ ಅವನೇನು ತಂಗೀ ಎಂದು ಬಾಚಿ ತಬ್ಬಿ, ಕಣ್ಣೀರೊರೆಸುವುದಿಲ್ಲ.. ಅವನನ್ನು ಮೇಲೆತ್ತಿಕಟ್ಟಬೇಕಾದರೆ ಅವನೊಳಗಿರುವ ಕಾಮವೋ ಕ್ರೋಧವೋ ಬುಗಿಲೇಳುವಂತೆ ಮಾಡಬೇಕು.. ಅದು ಅರಮನೆಯ ಒಳ ಕೋಣೆಗಳಲ್ಲಿ ಕುಳಿತು ರಹಸ್ಯ ಮಾತುಗಳಲ್ಲಿ ಆಡಬೇಕಾದದ್ದಲ್ಲ.. ರಾಜ ಸಭೆ ನಡೆಯುತ್ತಿರುವಾಗ ಎಲ್ಲರೆದುರಿನಲ್ಲೇ ಆಗಬೇಕು.. ನನ್ನನ್ನು ತಣ್ಣಗಿನ ಮಾತುಗಳಿಂದ ಸಮಾಧಾನಗೊಳಿಸಿ ಮೂಲೆಗುಂಪು ಮಾಡುವ ಮೊದಲೇ ಈ  ಅವಮಾನವನ್ನು ನನ್ನೊಬ್ಬಳ ಅವಮಾನವೆಂದು ಹೇಳಿಕೊಳ್ಳಬಾರದು.. ರಕ್ಕಸ ಕುಲಕ್ಕಾದ ಅವಮಾನವೆಂದೇ ಎತ್ತಿ ಹಿಡಿಯಬೇಕು.. ಲಂಕೆಯ ಮನೆ ಮನೆಯ ಮಗುವೂ ಈ ವಿಷಯವನ್ನು ಅರಿಯಬೇಕು.. ಒಬ್ಬೊಬ್ಬ ರಕ್ಕಸನೂ ದಿನ ನಿತ್ಯ ಇದನ್ನು ರಾವಣನಿಗೆ ನೆನಪಿಸಬೇಕು.. ರಾವಣನ ಗುಣಗಳೂ ದೋಷಗಳೂ ನನಗಲ್ಲದೇ ಇನ್ಯಾರಿಗೆ ತಿಳಿದಿರಲು ಸಾಧ್ಯ.. ಚೆಂದದ ಹೆಣ್ಣುಗಳನ್ನೆಲ್ಲಾ ಹಾಸಿಗೆಗೆಳೆಯುತ್ತಿದ್ದನವ.  ಅಲ್ಲೊಬ್ಬಳಿದ್ದಳಲ್ಲಾ ಚೆಂದುಳ್ಳಿ ಹೆಣ್ಣು ..  ಅವನರಸಿಯೆಂದು ಬೀಗುತ್ತಿದ್ದವಳು.. ನನ್ನ ಈ ಸ್ಥಿತಿಯನ್ನು ನೋಡಿ ನಕ್ಕವಳು.. ಅವಳನ್ನೇ ಮುಂದೊಡ್ಡಬೇಕೀಗ.. 
ಸುರಿಯುತ್ತಿರುವ ನೆತ್ತರ ಧಾರೆಯೊಂದಿಗೇ ತುಂಬಿದ ರಾಜ ಸಭೆಗೆ ನುಗ್ಗಿದೆ. ರಾವಣ ತಡೆಯುವ ಮೊದಲೇ ಎಲ್ಲರಿಗೂ ಕೇಳುವಂತೆ ಬೊಬ್ಬಿಟ್ಟೆ.. ರಕ್ಕಸ ಕುಲದ ಮಾನ ಕಾಪಾಡುವುದೀಗ ನಿನ್ನ ಕೈಯಲ್ಲಿದೆ ಎಂದೆ.ತಪ್ಪು ನನ್ನದೇ ಇರಬಹುದೇ ಎಂಬಂತೆ ಕಣ್ಣುಗಳಿಂದ ತಿವಿದ. ನಾಡಾಡಿಯ ಪಕ್ಕದಲ್ಲಿದ್ದ ಸುಂದರ ತರುಣಿಯನ್ನು ವರ್ಣಿಸಿದೆ.  

ಶಿಲೆಯಂತೆ ಕುಳಿತಿದ್ದ ರಾವಣನಲ್ಲೀಗ ಸಂಚಲನ.. ಕೂಡಲೇ ಎದ್ದು ನಿಂದ.. 

ಮತ್ತಿನದ್ದೆಲ್ಲಾ ಬರಿದೆ ರಾಮಾಯಣ.. 

ಇಂತ ಸುಂದರ ದೃಶ್ಯವೊಂದನ್ನು ನೋಡುವಷ್ಟು ನನ್ನ ಕಣ್ಣುಗಳು ಪುಣ್ಯ ಮಾಡಿದ್ದವೆಂದು ಯಾಕೋ ನಂಬುವುದಕ್ಕೇ ಕಷ್ಟವಾಗುತ್ತಿದೆ. ಪೆಟ್ಟಿನ ಮೇಲೆ ಪೆಟ್ಟು ಬಿದ್ದು ಈ ಸಂತಸಕ್ಕೆ ತೆರೆದುಕೊಳ್ಳಲು ಯಾಕೋ ಭಯವೆನಿಸುತ್ತಿದೆ. ಆದರೂ ಸಿಕ್ಕಷ್ಟನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಬಯಕೆ..  ಯುದ್ಧರಂಗದಲ್ಲಿ ಕಡಿದುರುಳಿದ ಬಾಹುಗಳ, ಚೆಲ್ಲಾಡಿದ ನೆತ್ತರ ನಡುವಿನಲ್ಲಿ ರಾವಣನ ದೇಹ... ಹಸಿ ರಕ್ತದ ವಾಸನೆ ರಕ್ಕಸಿಯಾದ ನನಗೆ ಪ್ರಿಯವೇ.. ಅದರಲ್ಲೂ ನನ್ನ ಬದುಕನ್ನೇ ನಾಶ ಮಾಡಿದ ರಾವಣನ ನೆತ್ತರು.. ನೋಡಿದಷ್ಟೂ ಸಾಲದೆನಿಸಿತು.. ಇದೇ ಅಲ್ಲವೇ ನಾನು ಬಯಸಿದ ಭಾಗ್ಯ.. ಹ್ಹ..ಹ್ಹಹ್ಹ॒..   ಮೆಲ್ಲಗೆ ತುಟಿಗಳಲ್ಲಿ ನುಗ್ಗಿದ  ನಗೆ ಬರು ಬರುತ್ತಾ  ಅಟ್ಟಹಾಸವಾಯಿತು.. ದುಃಖದ್ದೋ ಸುಖದ್ದೋ ತಿಳಿಯದ ಕಣ್ಣೀರ ಪರದೆ ಎಲ್ಲವನ್ನೂ ಮಬ್ಬಾಗಿಸಿತು..ಆದರೂ  ನಾನು ನಗುತ್ತಲೇ ಇದ್ದೆ.. !! 


Monday, July 20, 2015

ಪಿಂಗಳೆ


'ಪಿಂಗಳೇ... ಪಿಂಗಳೇ ..ಒಡತಿ ಕಾಂಚನಲೇಖೆಯ  ಆಗಮನವಾಗುವ ಹೊತ್ತಾಯಿತು.  ನೀನು ಇನ್ನೂ ಹಾಸಿಗೆಯಲ್ಲಿಯೇ ಮಲಗಿರುವೆ ಏಕೆ, ಬೇಗನೇ ಏಳು. ಮೈಗೆ ಚಂದನಾದಿ ಗಂಧಗಳನ್ನು ಲೇಪಿಸಿ ಸುಖವಾದ ಮಜ್ಜನ ಮಾಡಿಸುವೆ. ಇದೇನೇ ಇದು.. ಕೆನ್ನೆ ಕೊರಳುಗಳಲ್ಲಿ ನಖದ ಗುರುತು..ಮಹಾರಾಜರ  ಸಹಿಯೇನೇ ಇದು?.. ಹಹ್ಹ ಹಹ್ಹ.. ನಿನಗಿನ್ನೂ ನಿನ್ನೆಯ ಸುಖದ ಮಂಪರು ಹರಿದಿಲ್ಲವೇ ತಾ?' ಎಂದು ಕೇಳುತ್ತಾ  ಸಖಿಯೊಬ್ಬಳು ಮೈಯನ್ನು ಅಲುಗಾಡಿಸುತ್ತಿದ್ದರೆ ಇನ್ನೂ ನಿದ್ದೆಗಣ್ಣುಗಳಲ್ಲೇ ಇದ್ದ ಪಿಂಗಳೆ ಮೆಲ್ಲನೆ ಬಟ್ಟಲುಗಣ್ಣುಗಳನ್ನು ಅರಳಿಸುತ್ತಾ ಮೈಮುರಿದಳು.
ಎದ್ದೇನು ಮಾಡುವುದಿದೆ ಈಗ. ಅಮ್ಮ ಬಂದರೆ ನಾನು ಸ್ನಾನಗೃಹದಲ್ಲಿರುವೆ ಎಂದು ಹೇಳು. ನನಗೀಗ ಯಾರನ್ನೂ ನೋಡುವ ಮಾತನಾಡುವ ಮನಸ್ಸಿಲ್ಲ. 
ಅಯ್ಯೋ.. ಹಾಗೆ ಸುಳ್ಳು ಹೇಳಲು ನನ್ನಿಂದಾಗದಮ್ಮ..ಇಂದು ನಿನಗೆ    ನೃತ್ಯ ಕಲಿಸಲು ಗುರುಗಳು ಬರುವವರಿದ್ದಾರೆ. ನಿನ್ನನ್ನು ಹೊತ್ತಿಗೆ ಸರಿಯಾಗಿ ಸಿದ್ಧಗೊಳಿಸದಿದ್ದರೆ ನನ್ನ ಹೊಟ್ಟೆಗೆ ಕಲ್ಲು ಬಿದ್ದೀತು ತಾ. ಏಳಮ್ಮಾ..   ನೋಡೀಗ ನಿನಗೆ ನಿದ್ದೆಹರಿದಿದೆ ತಾನೇ.. ಎದ್ದು ಬಿಡು. ಬೇಗನೇ ಸಿದ್ಧಳಾಗು ಪಿಂಗಳೇ..
 ಗುರುಗಳು ಎಂಬ ಶಬ್ಧ ಕೇಳಿದೊಡನೆ ಪಿಂಗಳೆಯು ಏಳುವ ಮನಸ್ಸು ಮಾಡಿದಳು.
 ಮಹಾರಾಜರು  ಸಮಾಧಾನದ ಹೊತ್ತಿನಲ್ಲಿರುವಾಗ ತಾನಾಗಿ ಇಟ್ಟಿದ್ದ ಬೇಡಿಕೆ ಇದು. ಆ ಬೇಡಿಕೆಯನ್ನು ಮನ್ನಿಸಿ ಅವರು ನಾಟ್ಯಗುರುಗಳಿಗಾಗಿ ರಾಜ್ಯವಿಡೀ  ಡಂಗುರ ಹೊಡೆಸಿ, ತಾನೇ ಸ್ವತಃ  ಯಾರನ್ನೋ ಆರಿಸಿದ್ದಾರೆ ಎಂಬ ಸುದ್ದಿಯೂ ಅವಳಿಗೆ ಸಿಕ್ಕಿತ್ತು.
 ನೃತ್ಯದಲ್ಲಿ ಅಪಾರ ಆಸಕ್ತಿದ್ದ ಪಿಂಗಳೆಯ ನೃತ್ಯದ ಜೊತೆ ಅವಳ ಅಪಾರ ಸೌಂದರ್ಯ ರಾಜನ ಕಣ್ಣಿಗೆ ಬಿದ್ದು ಅವಳು ರಾಜನ ಗಣಿಕೆಯಾಗಿ ಬದಲಾದ ಮೇಲೆ ಕಲಿಯುವ ಅವಕಾಶ ತಪ್ಪಿ ಹೋಗಿತ್ತು. ಈಗಿನ್ನು ತಾನಾಗಿ ಬಂದಿರುವ ಅವಕಾಶವನ್ನು ಕಳೆದುಕೊಂಡರೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಸುಮ್ಮನೆ ಬದುಕು ಕಳೆಯಬೇಕಷ್ಟೇ..
ಎಲ್ಲೋ ಹಾರಿ ಬಿದ್ದಿದ್ದ ಸೆರಗನ್ನು ನೆಪಮಾತ್ರಕ್ಕೆ ಮೈಮೇಲೇಳೆದುಕೊಂಡು ಆಕೆ ನಡೆಯುತ್ತಿದ್ದರೆ ಸಖಿಯ ಕಣ್ಣಲ್ಲೂ ಅಮಲೇರುತ್ತಿತ್ತು, ಅಂತಹ ಸೌಂದರ್ಯ ಪಿಂಗಳೆಯದ್ದು. ಹೊಸತಾದ ಬಟ್ಟೆಯನ್ನು ಎತ್ತಿಕೊಂಡು ಸಖಿಯೂ ಅವಳ ಹಿಂದೆಯೇ ನಡೆದಳು. 
  ಅವಳಿಗೆ ಸ್ನಾನ ಮಾಡಿಸುವಾಗ ಅಲ್ಲಲ್ಲಿ ರಕ್ತ ಮೆತ್ತಿದಂತೆ ಕೆಂಪಾಗಿದ್ದ ಅವಳ ಹಾಲು ಬಿಳುಪಿನ ಮೈಯನ್ನು ನೋಡಿ  'ಪಿಂಗಳೇ ಇದೇನೇ ಇದು.. ನಿನ್ನ ಕೋಮಲ ತನುವನ್ನು ಹೀಗೂ ಘಾಸಿಗೊಳಿಸುವುದೇತಕೆ ಹೇಳು ಮಹಾರಾಜರು. ನೀನಾದರೂ ಮಾತುಗಳಲ್ಲೇ ಮೈಮರೆಸಿ ಅವರನ್ನು  ಒಲಿಸಿಕೊಳ್ಳಬಾರದೇನೇ' ಎಂದಳು.
ಪಕ್ಕನೆ ಕಳೆದಿರುಳಿನ ನೆನಪು ಬಂದು ಪಿಂಗಳೆ ಗಂಭೀರಳಾದಳು. ಇನ್ನೂ ಹದಿಹರೆಯದ ಅರಸಿನ ಮಾಸದ ತನ್ನ ಮೈಯ ಒಡೆಯ ಮಹಾರಾಜನಾದರೋ ಮುಪ್ಪಿನೆಡೆಗೆ ಮುಖ ಮಾಡಿರುವವ. ಬರಿದೇ ಹಿಂಸೆ ಮಾಡುವುದನ್ನೇ ಸುಖವೆಂದುಕೊಂಡಿದ್ದಾನೇನೋ ಅವನು.ನೋವು ತಡೆಯದೇ ಕಣ್ಣುಗಳಲ್ಲಿ ನೀರು ಹರಿಯುವಾಗ ಸುಮ್ಮನೆ ತೆಕ್ಕೆಯೊಳಗಿಟ್ಟು ಸಂತೈಸುತ್ತಿದ್ದ ಅವನನ್ನು ಹೇಗೆ ಅರ್ಥ ಮಾಡಿಕೊಳ್ಳುವುದೆಂದು ಇನ್ನೂ ತಿಳಿಯದಾಗಿದ್ದಳು.  ಅಮ್ಮ ಕಾಂಚಮಾಲೆಯೇನೋ ಕಸುಬಿನ ಎಲ್ಲಾ ಕುಶಲತೆಯನ್ನೂ ಪಿಂಗಳೆಗೆ ಕಲಿಸಿದ್ದಲ್ಲದೇ ನಾಲ್ಕು ಪತ್ನಿಯರಿದ್ದರೂ ಇನ್ನೂ ಮಕ್ಕಳೇ ಇಲ್ಲದ ರಾಜನಿಗೆ ನಿನ್ನ ಹೊಟ್ಟೆಯಲ್ಲಾದರೂ ಕುವರನ ಜನನವಾದರೆ ರಾಜ್ಯ ನಮ್ಮ ಕೈಗೆ ಬಂದಂತೆ.. ನೀನು ಇನ್ನು ರಾಜಮಾತೆಯಾಗಿ ಮೆರೆಯಬಹುದು ಎಂದೆಲ್ಲಾ ಕನಸುಗಳನ್ನು ಕಟ್ಟಿಕೊಟ್ಟಿದ್ದಳು. ಆದರೆ ಓರಗೆಯ ಗೆಳತಿಯರು ವರ್ಣಿಸುವ ಶೃಂಗಾರದ ಘಟನೆಗಳೇನೂ ನಡೆಯದ, ಸುಮ್ಮನೆ ತನ್ನನ್ನು ಹಿಂಸೆಗೊಳಪಡಿಸುವ ಮಹಾರಾಜನಿಂದ ತನಗೆ ಮಕ್ಕಳಾಗುವುದುಂಟೇ?  ಇಂತಹ ವಿಷಯಗಳನ್ನು ಯಾರೊಡನೆಯೂ ಹಂಚಿಕೊಳ್ಳುವಂತಿರಲಿಲ್ಲ. ಗೆಳೆತಿಯರು ರಾಜ್ಯದ ಯುವಕರ ಸಂಗದಲ್ಲಿ ಮೈ ಮರೆಯುವುದಲ್ಲದೇ ಅದನ್ನು ಮಾತುಗಳಲ್ಲಿ ಬಯಲಾಗಿಸುವ ದಾರ್ಶ್ಯವನ್ನೂ ತೋರುತ್ತಿದ್ದರು. ಆದರೆ ರಾಜನೊಬ್ಬನ ಅಧಿಕೃತ ಸೊತ್ತಾದ ತಾನು ಯಾರೊಂದಿಗೂ ಹೆಚ್ಚಿಗೆ  ಬೆರೆಯುವಂತೆಯಾಗಲೀ, ಮಾತನಾಡುವಂತೆಯಾಗಲೀ ಇಲ್ಲದೇ ಪಂಜರದ ಬದುಕನ್ನೇ ಬದುಕಬೇಕಾದುದು ಪಿಂಗಳೆಗೆ ಬೇಸರವೆನಿಸುತ್ತಿತ್ತು. ಇವಳೊಬ್ಬಳು ಮುದಿ ಸಖಿ ಮತ್ತು ಅಮ್ಮ ಕಾಂಚನಮಾಲೆಯಲ್ಲದೇ ಬೇರೊಂದು ಜೀವ ಈ ಕೋಣೆಯೊಳಗೆ ಪ್ರವೇಶ ಮಾಡುತ್ತಿದ್ದೆಂದರೆ  ಮಹಾರಾಜರು ಮಾತ್ರ.  
ಹಾಗಾಗಿಯೇ ಇಂದು ಅವಳಿಗೆ ಕುತೂಹಲದ ದಿನ.ಹೊಸ ಗುರುಗಳು. ಪುರುಷರ ನೆರಳು ಸೋಕದ ಕೋಣೆಯಲ್ಲಿ ಒಬ್ಬ ಅಪರಿಚಿತನ ಪ್ರವೇಶ. ಹೇಗಿರಬಹುದು ಆತ? ಗೆಳತಿಯರು ವರ್ಣಿಸುವ ಪುರುಷಸಿಂಹಗಳಂತೆ ಇರಬಹುದೇ? ರೂಪವಂತನೇ? ಗುಣವಂತನೇ? ತನ್ನ ಸೌಂದರ್ಯಕ್ಕೆ ಸೋತು ಶರಣಾಗುವವನೇ?  
ಹೊರಗಿನಿಂದ ಹೆಜ್ಜೆಗಳ ಸದ್ದಾದಂತಾಗಿ ಎದ್ದು ನಿಂತಳು. ಕನ್ನಡಿಯೊಳಗಿನ ಪ್ರತಿಬಿಂಭ ಅಪಾರ ರೂಪರಾಶಿಯೊಬ್ಬಳನ್ನು ದರ್ಶಿಸುತ್ತಾ ಅದು ನೀನೇ ಎಂದು ಹೇಳುತ್ತಿತ್ತು. ಮೊಗದಲ್ಲಿ ನಗುವನ್ನು ತಂದುಕೊಂಡಳು. ಸಖಿ ಬಾಗಿಲು ತೆರೆದು ಯಾರನ್ನೋ ಸ್ವಾಗತಿಸುವುದು ಕೇಳಿಸಿತು. ಕಾಲುಗಳು ಅಲ್ಲಿಗೆ ಹೋಗುವ ಆತುರ ತೋರುತ್ತಿದ್ದರೂ ಅಮ್ಮ ಕಾಂಚನಲೇಖೆ ಕರೆಯದೆ ಹೊರಗೆ ಹೋಗುವಂತಿರಲಿಲ್ಲ. ಹಾಗಾಗಿ ಹೊರಗಿನ ವಿದ್ಯಮಾನಕ್ಕೆ ಕಿವಿಗಳನ್ನು ತೆರೆದಿಟ್ಟಳು. 
ಅಂತೂ 'ಪಿಂಗಳೇ ಇಲ್ಲಿ ಬಾ ಮಗಳೇ'  ಎಂಬ ಸ್ವರ ಕೇಳಿಸಿತು.  ಸಖಿ ಬಂದು ತಲೆಯ ಮೇಲಿನ  ಅವಕುಂಠನವನ್ನು  ಸರಿ ಪಡಿಸಿ ಮೊಗ ಕಾಣದಂತೆ ಮಾಡಿದಳು. ನಿಧಾನಕ್ಕೆ ಎದ್ದು ನಿಂತ ಪಿಂಗಳೆ ಹೆಜ್ಜೆಗಳ ಮೇಲೆ ಹೆಜ್ಜೆಗಳನ್ನಿಡುತ್ತಾ ಹೊರ ಬರುತ್ತಿದ್ದರೆ ಅದೇ ನವಿಲಿನ  ನೃತ್ಯದಂತೆ ಕಾಣಿಸುತ್ತಿತ್ತು. 
  ಇವರು ನಿನ್ನ ಗುರುಗಳಮ್ಮಾ. ಹೆಸರು ಧೀರ್ಘತಮ. ಮಹಾರಾಜರು ನಿನ್ನ ಅಪೇಕ್ಷೆಯೆ ಮೇರೆಗೆ ದೂರದ ಊರಿಂದ ಇವರನ್ನು ಕರೆಸಿದ್ದಾರೆ. 
ಕುತೂಹಲದಿಂದ ಕತ್ತೆತ್ತಿ ನೋಡಿದ ಪಿಂಗಳೆ  ಅಷ್ಟೇ ಬೇಗನೇ ತಲೆ ತಗ್ಗಿಸಿಕೊಂಡು ಮನದಲ್ಲೇ ಮುದುರಿದಳು. 
 ತಲೆ ಹಣ್ಣಾದ ಮುದುಕ. ಬಹುಷಃ ಮಹಾರಾಜರಿಂದಲೂ ಹೆಚ್ಚು ಪ್ರಾಯದವನೇನೋ.. ಹುಂ.. ಇಂತಹವರಲ್ಲದೇ  ಬೇರಾರನ್ನಾದರೂ ತನ್ನ ಬಳಿಗೆ ಮಹಾರಾಜರು ಕಳುಹಿಸುತ್ತಾರೆಯೇ? ಅಯ್ಯೋ.. ತನಗೇನಾಗಿದೆ. ನೃತ್ಯ ಕಲಿಯುವುದಲ್ಲವೇ ತನ್ನ  ಆಸೆದ್ದುದು.. ಯಾರು ಕಲಿಸಿದರೇನು? ಈ  ವಸಂತೋತ್ಸವದಲ್ಲಿ  ನೃತ್ಯ ನೋಡಿದವರು  ಶತ ಶತಮಾನಗಳವರೆಗೆ ನೆನಪಿಟ್ಟುಕೊಳ್ಳಬೇಕು.. ತನ್ನ ಆಲೋಚನೆಗಳಿಂದ ಮುಕ್ತಳಾಗಿ  ತಲೆ ಕೊಡವಿಕೊಂಡು ಅವರ ಕಾಲು ಮುಟ್ಟಿ ನಮಸ್ಕರಿಸಿದಳು.
ಕಾಂಚನಲೇಖೆ ಮಗಳ ಕಡೆಗೆ ತಿರುಗಿ ಸಣ್ಣ ಸ್ವರದಲ್ಲಿ 'ಪಿಂಗಳೇ ನಿನಗೆ ದೇಹಾಲಸ್ಯವಿಲ್ಲದಿದ್ದರೆ ನಿನ್ನ ನೃತ್ಯಾಭ್ಯಾಸ ಇಂದೇ ಶುರುವಾಗುತ್ತದೆ.' ಎಂದಳು.
 ಆಗಲೇ ಗಂಭೀರ ಸ್ವರವೊಂದು ಅವಳನ್ನು ಬೆಚ್ಚಿಬೀಳಿಸಿತು.ಇಲ್ಲಾ.. 'ನಾನಿನ್ನು ಈಕೆಯ ಗುರುವಾಗಲು ಒಪ್ಪಿಗೆ ಕೊಟ್ಟಿಲ್ಲ. ನನ್ನ ಶಿಷ್ಯೆಯಾಗುವವಳಿಗೆ ಕಲಿಕೆಯ ಹಸಿವಿರಬೇಕು. ಅದರ ಹೊರತು ಬೇರೇನು ಯೋಚನೆಗಳೇ ಇರಬಾರದು.  ಮೊದಲಿಗೆ ನೀನು ಇಲ್ಲಿಯವರೆಗೆ ಕಲಿತ  ನೃತ್ಯವನ್ನು ನಾನು ನೋಡಬೇಕಿದೆ. ಆ ಬಳಿಕ ನಿರ್ಧಾರ..' ಎಂದರು.
 ತನ್ನ ಕಲಿಕೆಗೆ ಸರಿಯಾದ ಗುರುವನ್ನೇ ಆಯ್ಕೆ ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಮಹಾರಾಜರ ಬಗ್ಗೆ ಸಂತಸಗೊಂಡಳು ಪಿಂಗಳೆ.
ಕುಣಿತದ ನೆನಪು ಬಂದೊಡನೇ ಅವಳಾಗಲೇ ವರ್ಷಋತುವಿನ ನವಿಲಾಗಿದ್ದಳು. ಹೆಜ್ಜೆಗಳು ನೆಲದಿಂದ ಮೇಲೆದ್ದವು.ಅವಳ ನಡೆಯ ಲಾಸ್ಯಕ್ಕೆ ನಾಟ್ಯದ ಭಾಷ್ಯಕ್ಕೆ ಗುರುಗಳೇ ಬೆರಗಾದರು.ಅಪ್ಪಟ ವಜ್ರ. ಕೊಂಚ ಸಾಣೆಯ ಅವಶ್ಯಕತೆಯಷ್ಟೇ ಬೇಕಾಗಿರುವುದು. ಒಪ್ಪಿಗೆಯ ನಗೆಯಿತ್ತು ಅವರ ಮೊಗದಲ್ಲಿ.
ಪಿಂಗಳೆಗೀಗ ಊಟ ತಿಂಡಿ ನಿದ್ರೆಯ ನೆನಪೇ ಇರಲಿಲ್ಲ. ಅವಳ ಹಗಲು ರಾತ್ರಿಗಳು ನೃತ್ಯಾಭ್ಯಾಸದಲ್ಲೇ ಮುಳುಗೇಳುತ್ತಿತ್ತು.  ಅವಳ ಕಲಿಕೆಯ ವೇಗಕ್ಕೆ ಗುರುಗಳಾದ ಧೀರ್ಘತಮರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದರು.  ಮಹಲಿನಲ್ಲೇ ಗುರುಗಳಿಗೆ ಪ್ರತ್ಯೇಕ ಬಿಡಾರದ ವ್ಯವಸ್ಥೆಯಿತ್ತು. ಹಾಗಾಗಿ ಅವಳ ಯಾವುದೇ ಸಂದೇಹಕ್ಕೆ ತಕ್ಕ ಉತ್ತರ ಕೂಡಲೇ ದೊರೆಯುತ್ತಿತ್ತು. ಈಗ ಸಾಧನೆಯತ್ತ ಮಾತ್ರವಿದ್ದುದು ಅವಳ ನೋಟ. ಗುರುಗಳ ನೃತ್ಯದ ಆಳವಾದ ಅರಿವಿನ ಜೊತೆಗೆ ಈ ಪ್ರಾಯದಲ್ಲೊ ಅವರ ನಡೆಯ ಮಿಂಚಿನ ಸಂಚಾರದ ಬಗ್ಗೆ ಅಚ್ಚರಿ ಅವಳಲ್ಲಿ. ಅಭ್ಯಾಸ ಮಾಡುತ್ತಾ ಇದ್ದರೆ ಅದು ನಿನ್ನ ಪಾಲಿಗೂ ಬಂದೀತೆಂಬ ಗುರುವಿನ ಮಾತುಗಳಲ್ಲಿ ಅವಳಿಗಿನ್ನೂ ನಂಬಿಕೆ ಇದ್ದಿರಲಿಲ್ಲ.ಅವರ ಮೆಚ್ಚುಗೆ ಗಳಿಸಲು ಏನನ್ನಾದರೂ ಮಾಡುವ ಹುಮ್ಮಸ್ಸು ಅವಳದ್ದು. ಯಾವ ಬಳಲಿಕೆಯನ್ನೂ ಗಮನಕ್ಕೆ ತೆಗೆದುಕೊಳ್ಳದೆ ಅಭ್ಯಾಸದತ್ತ ಮನವಿಟ್ಟಿದ್ದಳು.
ಸಂಜೆಯ ಹೊತ್ತು. ಸೂರ್ಯನಾಗಲೇ ಪಶ್ಚಿಮದಿಕ್ಕಿನತ್ತ ದಾಪುಗಾಲು ಹಾಕುತ್ತಾ ಸಾಗುತ್ತಿದ್ದ.ಹೊರಗೆ ಮಂದದ ಬೆಳಕು. ಪಿಂಗಳೆಯ ಮಹಲಿನಲ್ಲಿ ದೀಪಗಳು ಹೊತ್ತಿಕೊಂಡಿದ್ದವು.   ನೃತ್ಯಾಭ್ಯಾಸಕ್ಕಾಗಿ ಇನ್ನೇನು ಗೆಜ್ಜೆಗಳನ್ನು ಕಾಲಿಗೆ ಕಟ್ಟಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಮಹಾರಾಜರು ಬರುತ್ತಿದ್ದಾರೆ ಎಂಬ ಸಂದೇಶ ಬಂದಿತು. 
ಪಿಂಗಳೆಯ ಹೃದಯ ನಿರಾಸೆಗೊಳಗಾದರೂ ತೋರಿಸಿಕೊಳ್ಳದೆ ಕಾಲಂದುಗೆಗೆಗಳನ್ನು ತೆಗೆದು ಪೆಟ್ಟಿಗೆಗೆ ಸೇರಿಸಿದಳು. ಆಗಲೇ ಒಳಸೇರಿದ ಮಹಾರಾಜನ ಒರಟು ತೋಳುಗಳು ಅವಳನ್ನು ಬಳಸಿಕೊಂಡವು. ನಯವಾಗಿ ಅವನ ತೋಳುಗಳನ್ನು ಸರಿಸುತ್ತಾ ' ಇನ್ನಾರು ದಿನಗಳಲ್ಲಿ ವಸಂತೋತ್ಸವವಲ್ಲವೇ ಮಹಾರಾಜ' ಎಂದಳು. 
'ಹೌದು ಪ್ರಿಯೇ ಆದರೆ ಅಲ್ಲಿ ನಿನ್ನ ನೃತ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ನೀನು ನನ್ನ ಹೃದಯದರಸಿ. ನಿನ್ನ ಈ ದೇಹ,  ಸೌಂದರ್ಯ, ಕಲೆ ಎಲ್ಲವೂ ಕೇವಲ ನನಗಾಗಿ ಮಾತ್ರ. ಅದು ಹೊರಗೆಲ್ಲೂ ಕಾಣುವಂತಿಲ್ಲ. ನಿನ್ನಾಸೆ ಪೂರೈಸಲೆಂದಷ್ಟೇ ಗುರುಗಳನ್ನು ಇರಿಸಿದ್ದೇನೆ. ಅವರು ನಿನ್ನ ನೃತ್ಯಭ್ಯಾಸ ಪೂರ್ಣವಾಗಿದೆ ಎಂದ ದಿನ ಅವರೂ ಹೋಗುತ್ತಾರೆ. ಮತ್ತೆ ನಾನು ನೀನು ಇಬ್ಬರೇ..'
 ಮಹಾರಾಜ ಉತ್ಸಾಹದಿಂದ ವರ್ಣಿಸುತ್ತಿದ್ದರೆ ಬೇಸರದಿಂದ   ಪಿಂಗಳೆಯ ಮನಸ್ಸು ಮುದುಡಿಹೋತು. ಯಾರೂ ಆಸ್ವಾದಿಸಿದ ಕಲೆಗೆ ಬೆಲೆ ಎಲ್ಲಿಯದ್ದು ? ಛೇ.. 
ಮರುದಿನ ಅವಳು ಅನ್ಯಮಸ್ಕತೆಯಲ್ಲೇ ಹೆಜ್ಜೆ ಹಾಕುತ್ತಿದ್ದರೆ ಗುರುಗಳು ಅನೇಕಬಾರಿ ಎಚ್ಚರಿಸಬೇಕಾಯಿತು. 'ಯಾಕೆ ಪಿಂಗಳೇ ಆರೋಗ್ಯ ಸರಿ ಇಲ್ಲವೇ? ಇಂದು ನೃತ್ಯಾಭ್ಯಾಸ ಬೇಡವೆಂದಾದರೆ ಬಿಟ್ಟು ಬಿಡು.. ಸುಮ್ಮನೆ ನೃತ್ಯಕ್ಕೆ ಅಪಚಾರ ಮಾಡಬೇಡ.. '
ಎಷ್ಟು ಸಾವರಿಸಿಕೊಳ್ಳಬೇಕೆನ್ನಿಸಿದರೂ ಸಾಧ್ಯವೇ ಆಗಲಿಲ್ಲ. ನೃತ್ಯದ ಹಾಡಿನಲ್ಲಿ ವಸಂತಕಾಲದ ವರ್ಣನೆಯಿದ್ದರೆ ಇವಳ ಕಂಗಳು ಸುಮ್ಮನೆ ಕಣ್ಣೀರಾಗುತ್ತಿದ್ದವು ಏನನ್ನೊ ಯೋಚಿಸುತ್ತಾ..
ಧೀರ್ಘತಮ ಕೈಯಲ್ಲಿದ್ದ ತಾಳವನ್ನು ಬಿಸುಡಿದ ವೇಗಕ್ಕೆ ಅದು ಪಳಾರನೆ ತುಂಡಾಯಿತು.
'ಎಲ್ಲಿದೆ ನಿನ್ನ ಧ್ಯಾನ? ಪರಧ್ಯಾನದಲ್ಲಿ ತೊಡಗಿ ನೃತ್ಯವನ್ನು ಕಡೆಗಣಿಸುವುದಾದರೆ ಇಂದೇ ನಿನ್ನ ವಿದ್ಯಾಭ್ಯಾಸದ ಕೊನೆಯ ದಿನ'.. . 
 ಪಿಂಗಳೆ ಬುಡ ಕಡಿದ ಮರದಂತೆ ಅವನ ಪಾದಗಳಲ್ಲುರುಳಿದಳು. 'ಬೇಡ ಬೇಡ ಗುರುವೇ.. ಹಾಗೆ ಹೇಳಬೇಡಿ .. ನನ್ನ ಮೇಲೆ ಕರುಣೆಯಿಡಿ. ನಾನು ನನ್ನ ಬದುಕಾದ ನೃತ್ಯಕ್ಕೆ ಅಪಚಾರ ಎಸಗುವವಳಲ್ಲ...'
 ಧೀರ್ಘತಮನ ಬಾಹುಗಳು ಅವಳ ಹೆಗಲನ್ನು ಸ್ಪರ್ಶಿಸಿದವು.ಇಲ್ಲಿಯವರೆಗೆ ಇಲ್ಲದ ಹೊಸತೇನೋ ಕಂಪನ ಅವಳ ಮೈಯಲ್ಲಿ.ತನ್ನ ಹೆಗಲ ಮೇಲಿದ್ದ ಅವನ ಕೈಬೆರಳುಗಳನ್ನು ಸುಮ್ಮನೇ ನೋಡಿದಳು.
 'ಎದ್ದೇಳು ಪಿಂಗಳೇ.. ನಿನಗೇನೋ ನೋವಾಗಿದೆ ಎಂದು ನನಗೂ ತಿಳಿದಿದೆ. ಹಂಚಿಕೊಂಡರೆ ದುಃಖ ಕಡಿಮೆಯಾಗುತ್ತದೆ. ನಾನು ನಿನ್ನ ನಂಬಿಕೆಗೆ ತಕ್ಕವನು ಎಂದಿದ್ದರೆ ಅದನ್ನು ನನ್ನೊಡನೆ ಹೇಳು. ಪರಿಹಾರ ಸಿಗುವಂತಹುದಾಗಿದ್ದರೆ ಪರಿಹಾರ ಹುಡುಕೋಣ' ಎಂದ.
ಅತ್ತಿತ್ತ ನೋಡಿದಳು. ನೃತ್ಯಾಭ್ಯಾಸದ ಮಧ್ಯೆ ಯಾರ ಅಡ್ಡಿ ಆತಂಕವೂ ಬರಬಾರದೆಂದು ತನ್ನಪ್ಪಣೆಲ್ಲದೆ  ನೃತ್ಯಾಂಗಣಕ್ಕೆ ಯಾರ ಪ್ರವೇಶವನ್ನೂ ನಿಷೇಧಿಸಿದ್ದ ದೀರ್ಘತಮ.
ಪಿಂಗಳೆಗಾದರೂ ತನ್ನಾಳವನ್ನು ತೋಡಿಕೊಳ್ಳಲು ಜೊತೆ ಎಲ್ಲಿತ್ತು? ಅವನ ಕಂಗಳ ಕಡೆ ನೋಡಿದಳು. ಅಲ್ಲೊಂದು ಪ್ರೀತಿಯ ಕೊಳವಿದ್ದಂತಿತ್ತು. ಮುಳುಗಬಯಸಿದಳು. 
ಎಲ್ಲವನ್ನು ಮಾತುಗಳಲ್ಲಿ ಬಯಲಾಗಿಸಿದಳು. ಮತ್ತೂ ಮುಂದುವರಿಸುತ್ತಾ 'ನನ್ನ ಚಿಂತೆ ನನ್ನ ಬದುಕಿನದಲ್ಲ.. ಇಂದು ರಾಜನಾಡಿದ ಮಾತು ಇನ್ನೂ ನನ್ನನ್ನು ಘಾಸಿಗೊಳಿಸುತ್ತಿದೆ. ಕೇವಲ ಈ ಖಾಲಿ ಗೋಡೆಗಳ ನಡುವೆ ಮಧಿರೆ ಹೀರಿ ಪ್ರಮತ್ತನಾಗಿ ಬಿದ್ದುಕೊಂಡಿರುವ ರಾಜನ ಎದುರು ಮಾತ್ರ ನನ್ನ ನೃತ್ಯ ಪ್ರದರ್ಶನವಂತೆ.. ನಾಡಿದ್ದಿನ ವಸಂತ ಉತ್ಸವದಲ್ಲಿ ನಾನು ಗೆಜ್ಜೆ ಕಟ್ಟಬಾರದಂತೆ.. ಕಲಾವಿದರಿಗೆ ಚಪ್ಪಾಳೆಯ ಸದ್ದೇ ಅಲ್ಲವೇ ವಿಫುಲ ಸಂಪತ್ತು. ಅದಿಲ್ಲದೇ ಇದ್ದರೆ ನನ್ನ ಕಲಿಯುವಿಕೆ ಕಾನನದ ಸುಮವಾಗದೇ.. ಇದೇ ಚಿಂತೆಂದ ಇಂದು ನನ್ನ ಧ್ಯಾನ ಅತ್ತಿತ್ತ ಹಾರಾಡುತ್ತಿತ್ತು. ಈ ಬದುಕು ಸಾಕಾಗಿದೆ. ಇದರಿಂದ ಸಾವೇ ಆನಂದಮಯ ಅನ್ನಿಸುತ್ತಿದೆ' ಎಂದು ಅವನ ಉತ್ತರಕಾಗಿ ಕಾದಳು. 
ಧೀರ್ಘತಮನ ಮೊಗದಲ್ಲಿ ನಸುನಗುವಿತ್ತು. 
ಅವಳು ನೋಡುತ್ತಿದ್ದಂತೆಯೇ ಅವಳ ಕಣ್ಣುಗಳೇ ನಂಬದಂತಹ ಘಟನೆಯೊಂದು ಆ ಕ್ಷಣದಲ್ಲಿ ಜರುಗಿತು.
ಧೀರ್ಘತಮ ತನ್ನ ಮೊಗವನ್ನಾವರಿಸಿದ್ದ ಬಿಳಿಯ ಗಡ್ಡ ಮೀಸೆಗಳನ್ನು ತೆಗೆದ. ತಲೆಯ ಮೇಲಿದ್ದ ಮುಂಡಾಸನ್ನು ಬಿಚ್ಚಿ ಪಕ್ಕದಲ್ಲಿರಿಸಿದ. ಮೈಗೆ ಹಾಕಿದ್ದ ದೊರಗಿನ ನಿಲುವಂಗಿಯನ್ನು ತೆಗೆದ. 
ಇಪ್ಪತ್ತೆರಡೋ ಇಪ್ಪತ್ತಮೂರೋ .. ಅದಕ್ಕಿಂತ ಸ್ವಲ್ಪವೂ ಹೆಚ್ಚಲ್ಲದ ವಯಸ್ಸಾತನದು. 
ಪಿಂಗಳೆಯ ಕದಪುಗಳು ನಾಚಿಕೆಂದಲೂ ಆಘಾತದಿಂದಲೂ ಕೆಂಪೇರಿದವು. ಜೊತೆಗೆ ರಾಜನಿಗೇನಾದರೂ ಈ ವಿಷಯ ತಿಳಿದರೆ ಅನ್ಯಾಯವಾಗಿ ಇವನ ಪ್ರಾಣ ಹೋಗುವುದಲ್ಲಾ ಎಂಬ ಹೆದರಿಕೆಯಿಂದ ಎದೆ ಬಡಿತ ಮಿತಿ ಮೀರಿತು. ಮಾತುಗಳು ತೊದಲುತ್ತಾ.. 'ನೀವು..ಯಾರು? ನಿಜ ಹೇಳಿ.. ಯಾಕೆ ಬಂದಿರಿ ಇಲ್ಲಿ..' ಎಂದಳು.
'ಪಿಂಗಳೇ..' ಅವನ ಸ್ವರದಲ್ಲೀಗ  ನೀಲಮೇಘ ಶ್ಯಾಮನ ಕೊಳಲಿನ ಒನಪಿತ್ತು.'ನಿನಗಾಗಿಯೇ ಬಂದೆ ಎಂದರೆ ನಂಬುವೆಯಾ' ಎಂದ..
ಅವಳ ಕಣ್ರೆಪ್ಪೆಗಳು ಗಲಿಬಿಲಿಂದ ಪಟಪಟನೆ ಬಡಿದುಕೊಂಡವು. 'ನನಗಾಗಿಯೇ..? ಅಂದರೆ..?'
'ಅಂದು ವಸಂತೋತ್ಸವದಲ್ಲೇ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ನಾನು ನೃತ್ಯದಲ್ಲಿ ಸಾಧನೆ ಮಾಡುತ್ತಿದ್ದವನಾದ್ದರಿಂದ ನಿನ್ನೆಡೆಗೆ ಸೆಳೆಯಲ್ಪಟ್ಟೆ. ನಿನ್ನನ್ನು ಮತ್ತೆ ನೋಡಬೇಕೆಂಬ ಬಯಕೆತ್ತು. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು..'ಅವನ ಧ್ವನಿಯಲ್ಲಿನ ಹತಾಶೆ ಪಿಂಗಳೆಯನ್ನು ಅವನ ಬಳಿ ಸಾರಿ ಅವನ ಕೈಗಳನ್ನು ಹಿಡಿದು ಸಾಂತ್ವನಗೊಳಿಸುವಂತೆ ಮಾಡಿತು.
ತನ್ನ ಕೈ ಹಿಡಿದ ಅವಳ ಚಿಗುರು ಬೆರಳುಗಳನ್ನು ಸವರುತ್ತಾ ಮಾತು ಮುಂದುವರಿಸಿದ ಧೀರ್ಘತಮ. 'ಮೊದಲಿನಿಂದಲೇ ಹೇಳಿ ಬಿಡುತ್ತೇನೆ ಕೇಳು.. ನಾನು ನಿಮ್ಮ ದೇಶದ ಪಕ್ಕದಲ್ಲೇ ಇರುವ  ದೇಶ ಸಾಂಬಲ್ಯದ ಯುವರಾಜ. ನಿನಗೂ ರಾಜಕಾರಣದ ಕೊಂಚ ಅರಿ"ದೆ ಎಂದಾದರೆ ನಮ್ಮಿಬ್ಬರ ದೇಶಗಳ ನಡುವಿನ ಶತೃತ್ವದ ಅರಿವೂ ಇರಬಹುದಲ್ಲವೇ? 
ಆದರೂ ಚಿಕ್ಕಂದಿನಿಂದಲೇ ಇದ್ದ ನಾಟ್ಯದ ಬಗೆಗಿನ ವಿಶೇಷ ಮೋಹದಿಂದಾಗಿ ಇಲ್ಲಿಗೆ ಬಂದು   ಯುವರಾಜನೆಂಬ ಗುರುತು ಸಿಗದಂತೆ ವೇಷ ಮರೆಸಿಕೊಂಡು ಬಂದು ಇಲ್ಲಿನ ಗುರುಗಳಲ್ಲಿ ಕಲಿಯುತ್ತಿದ್ದೆ. ನಾನು ನೃತ್ಯದಲ್ಲಿ ಯಾವ ಪರಿಯಲ್ಲಿ ಮುಳುಗಿ ಹೋಗಿದ್ದೆ ಎಂದರೆ ನನಗೆ ನನ್ನ ಸುತ್ತ ಮುತ್ತಲಿನ ಪರಿವೆಯೇ ಇರುತ್ತಿರಲಿಲ್ಲ. ನನ್ನ ದೇಶ ನನ್ನ ಕರ್ತವ್ಯ ನನ್ನ ಜನ ಇವರ ಬಗೆಗಿನ ಚಿಂತೆಗಳೂ ಇರುತ್ತಿರಲಿಲ್ಲ.. ಇದೊಂದೇ ನನ್ನ ಉಸಿರು ನನ್ನ ಜೀವನ ಎಲ್ಲವೂ ಆಗಿತ್ತು. ಆಗಲೇ ಆ ವಸಂತೋತ್ಸವ ನಡೆದಿದ್ದು.. ನಾನು ಅಲ್ಲಿ ಭಾಗವಹಿಸದಿದ್ದರೂ ಅಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಆಸ್ವಾದಿಸಿದ್ದೆ. ಆ ದಿನ ಔತಣಕ್ಕೆಂದು ನನ್ನನ್ನೂ ಒಳಗೆ ಕರೆದೊದ್ದರು. ಬಗೆ ಬಗೆಯ ತಿನಿಸುಗಳನ್ನು ಬಡಿಸಿದ್ದರು. ತುತ್ತೆತ್ತುವ ಮುನ್ನ ರಾಜನ ಕಡೆಯವನೊಬ್ಬ ಬಂದು ' ಇಂದಿನ ಈ ಎಲ್ಲಾ ಸಂಭ್ರಮಕ್ಕೆ ಕಾರಣ  ಯುದ್ಧಭೂಮಿಯಲ್ಲಿ ನಮ್ಮ ಮಹಾರಾಜರ  ಶತ್ರುವಾದ ಸಾಂಬಲ್ಯದ ರಾಜನ ಮರಣ ಮತ್ತು ಅದರಿಂದ ಸಿಕ್ಕಿದ ನಮ್ಮ ಜಯ. ಇನ್ನೀ ಉತ್ಸವವನ್ನು ಪ್ರತೀ ವರ್ಷವೂ ಆಚರಿಸಲಾಗುವುದು' ಎಂಬ ಘೋಷಣಾವಾಕ್ಯವನ್ನು ಕೂಗಿದ. ಆಗಲೇ ನನಗೆ ತಿಳಿದದ್ದು ನನ್ನ ತೀರ್ಥರೂಪರ ಮರಣದ ಸುದ್ದಿ.. ಪಿಂಗಳೇ.. ಯೋಚಿಸು ಎಂತಹಾ ಮಗ ನಾನು ತಂದೆಯ ಮರಣದ ಸಂಭ್ರಮದ ದಿನದಾಚರಣೆಯ ಭೋಜನದಲ್ಲಿ ತುತ್ತೆತ್ತಿಕೊಳ್ಳುವವನಿದ್ದೆ.. ಅಂದೇ ನಿಶ್ಚಯಿಸಿದ್ದೆ .. ನನ್ನಪ್ಪನ ಹತ್ಯೆಗೆ ಪ್ರತೀಕಾರವೆಸಗದೇ ಇಲ್ಲಿಂದ ಹೋಗಲಾರೆ ಎಂದು..
ಆ ದಿನವೇ ನನಗೆ ಗೊತ್ತಾದ ಇನ್ನೂ ಒಂದು ಸುದ್ದಿ ಎಂದರೆ ನನ್ನೆದೆಯಲ್ಲಿ ಇನ್ನೂ ಅಡಿ ಇಡುತ್ತಿದ್ದ ನಿನ್ನ ಕಾಲುಗಳಿಗೆ ಸಂಕಲೆಕ್ಕಿ ರಾಜ ತನ್ನ ವಶ ಮಾಡಿಕೊಂಡಿದ್ದಾನೆ ಎಂಬುದು..
ಎದೆಯಲ್ಲಿ ಕ್ರೋಧದ ಜ್ವಾಲಾಮುಖಿ ಬುಗಿಯೇಳುತ್ತಿತ್ತು. ಸೈನ್ಯ ಕಟ್ಟಿಕೊಂಡು ಸೆಣಸಲು ರಾಜ್ಯವಿಲ್ಲ ಕೋಶವಿಲ್ಲ, ನನ್ನವರೆನಿಸಿಕೊಂಡ ಪ್ರಜೆಗಳಿಲ್ಲ.. ರಣಾಂಗಣದಲ್ಲಿದ್ದ  ಒಬ್ಬಂಟಿ ಯೋಧ ನಾನು.. ಅವಕಾಶಕ್ಕಾಗಿ ಕಾದಿದ್ದೆ.. ಮತ್ತೆ ನಿನ್ನಿಂದಾಗಿಯೇ ಅದು ನನ್ನ ಕೈ ಸೇರಿತು. ನಿನ್ನ ಬಯಕೆಯನ್ನು ಪೂರೈಸಲೆಂದೇ  ರಾಜನ ಅಪ್ಪಣೆಯಂತೆ ನಾನಿಲ್ಲಿಗೆ ಕಾಲಿಟ್ಟೆ. ನನಗೂ ದ್ವೇಷವಿರುವುದು ಇಲ್ಲಿನ ರಾಜನಲ್ಲಿ.. . ನನ್ನ ಶತ್ರು ಅವನೇ.. ಅವನನ್ನು ಕೊಂದು ಮುಗಿಸುವುದು ನನ್ನ ಉದ್ದೇಶ.. ಈಗ ಹೇಳು ನೀನು ನಿನ್ನ ಎದೆಯಾಳದ ಮಾತುಗಳನ್ನು ಬಯಲಿಗಿಟ್ಟಂತೆ ನಾನೂ ನನ್ನ ರಹಸ್ಯವನ್ನು ಬಿಚ್ಚಿಟ್ಟಿದ್ದೇನೆ. ಇಬ್ಬರ ದಾರಿಯೂ ಒಂದೇ ಆಗಿರುವ ಕಾರಣ ಜೊತೆಯಾಗಿ ಸಾಗುವುದಾದರೆ ಈಗ ಹಿಡಿದಿರುವ ಕೈ ಇನ್ನಷ್ಟು ಭದ್ರವಾಗುತ್ತದೆ ಏನೆನ್ನುವೇ' ಎಂದ. 
 ಪಕ್ಕನೇ ಆತನಿಂದ ದೂರವಾದ ಚೆಲುವಾದ ಪಿಂಗಳೆಯ ಮೊಗ ಗಂಭೀರವಾಯಿತು. ಆಲೋಚಿಸುವವಳಂತೆ ಸ್ವಲ್ಪ ಹೊತ್ತು ಮೌನವಾಗಿದ್ದ  ಆಕೆ ನಿಧಾನಕ್ಕೆ ನಾಚುತ್ತಾ ಆತನ ಸಮೀಪ ಬಂದು ಅವನ ಬೆರಳುಗಳಿಗೆ ಬೆರಳುಗಳನ್ನು ಹೆಣೆದಳು. 
' ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ನನ್ನದೊಂದು ನಿಬಂಧನೆಯೂ ಇದೆ. ಈ ಸಲದ ವಸಂತೋತ್ಸವದಲ್ಲಿ ನನ್ನ ನಾಟ್ಯ ನಡೆಯುವಂತೆ ನೀವು ಮಹಾರಾಜರಲ್ಲಿ ಅಪ್ಪಣೆ  ಬೇಡಬೇಕು. ಆ ತುಂಬಿದ ಸಭಾಸದರೆದುರೇ  ನಮ್ಮ ಬದುಕಿನ ನಿರ್ಧಾರವೂ ನಡೆದುಬಿಡಲಿ..'
'ಅದನ್ನು ನನಗೆ ಬಿಡು.. ಅಲ್ಲಿಯವರೆಗೆ ಈ ಮಾತುಗಳು ಮತ್ತು ನನ್ನ ಈ ರೂಪ ನಮ್ಮಿಬ್ಬರಲ್ಲೇ ಇರಲಿ' ಎಂದ ಧೀರ್ಘತಮ ಯಾವುದೋ ಒಂದು ನಿರ್ಧಾರಕ್ಕೆ ಬಂದವನಂತೆ.. 
ತುಂಬಿದ ಸಬಾಂಗಣವದು. ರಾಜ ಮತ್ತು ಸಭಾಸದರು ಮಾತ್ರವಲ್ಲದೇ ಊರ ಪರವೂರ ವಿಶೇಷ ಅತಿಥಿಗಳನ್ನು ಹೊಂದಿತ್ತು. ಆ ದಿನದ ವಿಶೇಷವೆಂದರೆ ಗುರು ಮತ್ತು ಶಿಷ್ಯೆಯರ ಜುಗಲ್ ಬಂಧಿ.. ಧೀರ್ಘತಮನ ಬೇಡಿಕೆಗೆ ರಾಜ ಮಣಿದು ನೀಡಿದ್ದ ಮನ್ನಣೆಯಾಗಿತ್ತದು.
ಸಭಿಕರಿಂದ ಸ್ವಲ್ಪ ದೂರದಲ್ಲೇ ಇದ್ದ ವೇಧಿಕೆಯ ಸಿಂಹಾಸನದ ಮೇಲೆ ರಾಜ ವಿರಾಜಮಾನವಾಗಿದ್ದ. ಒಂದು ಕಡೆ ಅಂತಃಪುರದ ಸ್ತ್ರೀಯರ ದಂಡು ಪರದೆಯ ಹಿಂದೆ ಕುಳಿತು ಅಸೂಯೆಯ ಕಣ್ಣುಗಳಿಂದ ನೋಡುತ್ತಿದ್ದರೆ ಇನ್ನೊಂದೆಡೆ ಅಹ್ವಾನಿತರ ಕುತೂಹಲದ ನೋಟ.. 
ಅವಳು ಸರ್ವಾಲಂಕಾರಭೂತೆಯಾಗಿ ಘಲ್ ಘಲ್ ಎಂದು ಗೆಜ್ಜೆ ನಾದದೊಂದಿಗೆ  ಕೋಲ್ ಮಿಂಚಂತೆ ವೇಧಿಕೆಯನ್ನೇರಿದಳು. ರಾಜ ಅವಳ ಕಡೆಗೆ ಹೆಮ್ಮೆಂದ ನೋಡಿ ಕಣ್ಮಿಟುಕಿಸುತ್ತಾ   ಇನ್ನೊಂದು ಕಡೆಯಿಂದ ವೃದ್ಧನಾದ ಗುರುವನ್ನು ನಿರೀಕ್ಷಿಸುತ್ತಿದ್ದರೆ  ಸದೃಡ ಯುವಕನ ಆಗಮನವಾಯಿತು. ಪಕ್ಕನೆ ಕತ್ತಿ ಹಿರಿದು ಏಳ ಹೊರಟವ ತನ್ನನ್ನು ತಾನು ಸಂಭಾಳಿಸಿಕೊಂಡ. ಇದರಲ್ಲೆನೋ ಸಂಚಿದೆ ಆದರೆ ಆಹ್ವಾನಿತರೆದುರು ಈಗಲೇ ಅದನ್ನು ಪ್ರಚುರ ಪಡಿಸಿದರೆ ತನ್ನ ದೇಶದ ಮರ್ಯಾದೆಯ ಕಥೆಯೇನು ಎಂದು ಚಿಂತಿಸಿ, ತಾನು ಜಾಗರೂಕನಾಗಿದ್ದರೆ ಸರಿ ಎಂದು ಸುಮ್ಮನೆ ಕುಳಿತು ಮುಂದಾಗುವುದನ್ನು ನೋಡ ಹೊರಟ.
ಅವನ ಅಪ್ಪಣೆ ಪಡೆದು ಕಣ್ಮಿಟುಕಿಸುವಷ್ಟರಲ್ಲಿ ಇಬ್ಬರ ನೃತ್ಯವೂ ಶುರುವಾಯಿತು. ಎಲ್ಲರೂ ನರ್ತನದಲ್ಲಿ ತಲ್ಲೀನರಾದರು. ಅದೊಂದು ಮಹಾ ಪ್ರವಾಹ .. ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು.. ಸುಂದರಿಯಾದ ಅವಳಿಗೆ ಸುಂದರನಾದ ಅವನ ಸರಿ ಮಿಗಿಲೆನಿಸುವ ಜೋಡಿ..  ಯಾರ ಕಡೆಗೆ ನೋಡುವುದೆಂಬ ಗೊಂದಲ ನೋಡುಗರಿಗೆ..ರೆಪ್ಪೆ ಪಿಳುಕಿಸದೆ ಎಲ್ಲರ ಕಣ್ಣುಗಳು ಅವರ ನರ್ತನದ ಸುಖವನ್ನು ಕಣ್ಣುಗಳಲ್ಲಿ ಹೀರುತ್ತಿತ್ತು. ಎಲ್ಲರೂ ಮೈ ಮರೆತಿದ್ದರು. ರಾಜನೂ ನೃತ್ಯದ ಮೋಡಿಗೊಳಗಾಗಿದ್ದ. 
ನೃತ್ಯದ ಅಭಿನಯದ ಜೊತೆ ಜೊತೆಗೆ ಅವರಿಬ್ಬರ ಕಣ್ಣುಗಳು ಏನನ್ನೋ ಮಾತನಾಡಿಕೊಳ್ಳುತ್ತಿದ್ದವು.
 ಅವನ ಕಣ್ಣಲ್ಲೀಗ ಅದೇನೋ ಹೊಳೆವ ಸೆಳಕು.. ಅವಳ ಕಣ್ಣಲ್ಲೂ ಪ್ರತಿಫಲಿಸಿತು.
 ನೃತ್ಯದ ಸಹಜ ನಡಿಗೆಯೊಂದಿಗೆ ಉಡುಪಿಗೆ ಕೈ ಹಾಕಿ ಸಣ್ಣದಾದ  ವಿಷ ಸವರಿದ ಹರಿತದ ಚೂರಿಯನ್ನು ಕೈಗೇರಿಸಿಕೊಂಡ. ಅವಳ ಕೈಯಲ್ಲೂ ಅಂತಹುದೇ ಚೂರಿ.. ಒಬ್ಬರ ಗುರಿ ತಪ್ಪಿದರೆ ಇನ್ನೊಬ್ಬರು ಬೇಕಲ್ಲವೇ.. 
ಮೆತ್ತಗಿನ ಕಣ್ಸನ್ನೆ.. 
ಅವನ ಕೈಯಲ್ಲಿದ್ದ ಚೂರಿ ಕೈ ಬಿಟ್ಟಿತು.. ಅವಳ ಕೈಯಲ್ಲಿದ್ದ ಚೂರಿಯೂ.. ರಾಜನ ಕಡೆಗೆ ಹಾರುತ್ತಿದ್ದ ಚೂರಿಗೆ ರಾಜನಿಂದ ಮೊದಲು ಅವಳ ದೇಹ ಅಡ್ಡ ಬಂದಿತು. ಅವಳ ಕೈಯಿಂದೆಸೆದ ಚೂರಿ ನೇರವಾಗಿ ಅವನ ಎದೆಗೇ ತಗಲಿತ್ತು.. ಅವನ ಕಣ್ಣುಗಳಲ್ಲಿ ಅಪನಂಬಿಕೆಯ ನೆರಳು.. 
'ಪಿಂಗಳೇ ಏನು ಮಾಡಿದೆ ನೀನು..' ಆರ್ತನಾಗಿ ಕಿರುಚಿದ್ದ.
ಕುಸಿದು ಬೀಳುತ್ತಿದ್ದ ಪಿಂಗಳೆಗೆ ರಾಜ ಆಧಾರ ನೀಡಿದ್ದ.
ಉಕ್ಕುತ್ತಿದ್ದ ನೆತ್ತರನ್ನು ಬೆರಳುಗಳಲ್ಲಿ ತಡೆ ಹಿಡಿದು 'ಸರಿಯಾದುದನ್ನೇ ಮಾಡಿದ್ದೇನೆ..  ಹೊತ್ತು ಹೆತ್ತು ಅನ್ನ ನೀಡಿದ ದೇಶದ ಅಳಿವನ್ನು ಬಯಸುವವಳಲ್ಲ ಈ ಪಿಂಗಳೆ.. ಪ್ರೀತಿಯ ಅರ್ಥ ನಿನಗಿನ್ನೂ ತಿಳಿದಿಲ್ಲ ರಾಜಕುವರ.. ಯಾರು ದೇಶವನ್ನು ಪ್ರೀತಿಸಲಾರರೋ ಅವರು ಯಾರನ್ನೂ ಪ್ರೀತಿಸಲಾರರು.. ನೀನು ವೀರನೇ ಆಗಿದ್ದರೆ  ಹೆಣ್ಣಿನ ಸಂಘದಿಂದ ಯುದ್ಧ ಗೆಲ್ಲುವ ಆಲೋಚನೆ ಮಾಡುತ್ತಿರಲಿಲ್ಲ..ನಿನ್ನದು ತಪ್ಪು ನಿರ್ಧಾರವಾಗಿತ್ತು. ನನಗೆ ಬದುಕು ಏನೂ ನೀಡದಿದ್ದರೂ ದೇಶಕ್ಕಾಗಿ ಸಾಯುವ ಅವಕಾಶ ನೀಡಿದೆ.. ಅಷ್ಟು ಸಾಕು.. ಮಹಾರಾಜಾ.. ಈ ವಿಷಯವನ್ನು ಮೊದಲೇ ನಿಮ್ಮೊಡನೆ ಹೇಳಿ ಅವನನ್ನು ಕೊಲ್ಲಿಸಬಹುದಿತ್ತು. ಆದರೆ ಅವನನ್ನು ಬಿಟ್ಟು ಬದುಕುವ ಶಕ್ತಿಯನ್ನು ನಾನೂ ಕಳೆದುಕೊಂಡಿದ್ದೇನೆ.. ಅದಕ್ಕಾಗಿಯೇ ಈ ದಿನವನ್ನು ಆರಿಸಿದೆ.. ನನ್ನ ಗುರಿ ತಪ್ಪಲಿಲ್ಲ.. ನಮ್ಮಿಬ್ಬರನ್ನು ಸಾವು ಒಂದುಗೂಡಿಸುತ್ತದೆ. ಅಷ್ಟು ಸಾಕು.. 
ಅವಳ ಮಾತುಗಳು ಮಂದವಾದವು. ಅವನಲ್ಲಿ ಚಲನೆಯಿರಲಿಲ್ಲ.. ಅವಳ ದೇಹ ರಾಜನ  ಹಿಡಿತದಿಂದ ಜಾರಿ ಅವನೆಡೆಗೆ ತೆವಳಿ ಕೈಗಳನ್ನು ಚಾಚಿ ಅವನ ಬೆರಳುಗಳ ಜೊತೆ ತನ್ನವನ್ನು ಹೆಣೆದುಕೊಂಡಿತು.
'ಪಿಂಗಳೇ.. ಏನು ಮಾಡಿಕೊಂಡೆ ನೀನು.. ಅಯ್ಯೋ..' ರಾಜನ ಕಣ್ಣುಗಳು ಹನಿಯುತ್ತಿದ್ದರೆ ಸಭಿಕರೆಲ್ಲರ ಕರತಾಡನದ ಸದ್ದು ಅವಳೊಳಗೆ ಮಾರ್ಧನಿಸುತ್ತಿತ್ತು..ಕಲಾವಿದೆಯ ಕಲಾಮಯ ಬದುಕು ಚಪ್ಪಾಳೆ ಸದ್ದಿನೊಡನೆ ಕೊನೆಗೊಂಡಿತ್ತು.

Friday, June 12, 2015

ಮಳೆಹನಿಯ ಪ್ರೇಮಕಥೆ

ಮತ್ತೆ ಮಳೆ ಹೊಯ್ಯುತಿದೆ ಎಲ್ಲಾ ನೆನಪಾಗುತಿದೆ.. ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲಾ.. ಅರ್ರೇ ಇದೆಲ್ಲಾ ಹಾಡಿನ ಸಾಲುಗಳಲ್ವಾ.. ಹುಂ.. ಹೌದು ಆದರೆ ಮಳೆಯೊಂದಿಗೆ ನೆನಪಾಗುವುದು ಬಾಲ್ಯ.. 
 
ಅಂದು ಬೋರೆಂದು ಸುರಿಯುತ್ತಿರುವ ಜಡಿಮಳೆಯ ಸಂಗೀತಕ್ಕೆ, ಗಾಳಿಯ ಸುಂಯ್ ಗುಟ್ಟುವಿಕೆಯ ಹಿ ಮ್ಮೇಳವಿರುತ್ತಿತ್ತು. ಶಾಲೆ ಶುರು ಆಗುವುದರ ಜೊತೆಗೆ ಮಳೆಗಾಲವೂ ಶುರು ಆಗುತ್ತಿದ್ದ ಕಾರಣ ಶಾಲೆಯ ಪಠ್ಯ ಪುಸ್ತಕಗಳನ್ನು ಕೊಳ್ಳುವುದರಿಂದ ಹೆಚ್ಚು ಮಹತ್ವದ ವಿಷಯ ಯಾವ ಕೊಡೆ ತನಗೆ ಎಂಬುದೇ ಆಗಿತ್ತು. ವರ್ಷಕ್ಕೊಂದು ಕೊಡೆ ಮನೆಗೆ ಬಂದರೆ ಅದೇ ಬಹು ದೊಡ್ಡ  ಸಂಗತಿ . ಆ  ಕೊಡೆ ಅಪ್ಪನ ಕೈ ಸೇರಿದರೆ, ಮೊದಲಿನ ವರ್ಷದ್ದು ಅಮ್ಮನಲ್ಲಿ ಕೈಯಲ್ಲಿ. 
 ಹಳೇ ಕೊಡೆಗಳು ರಿಪೇರಿ ಭಾಗ್ಯ ಕಂಡು ನನ್ನ ಕೈ ಸೇರುತ್ತಿತ್ತು. ಇದಕ್ಕೆ ಕಾರಣಗಳು ಹಲವಿತ್ತು. ಮಳೆ ಬರುತ್ತಿರುವಾಗ ಎಲ್ಲರೂ ಕೊಡೆ ಬಿಡಿಸಿ ನಡೆಯುತ್ತಿದರೆ ಕೊಡೆಯ ಚೂಪಾದ ಕಡ್ಡಿಂದ ಇನ್ನೊಬ್ಬನ ಕೊಡೆಗೆ ಕುತ್ತುವುದು ಗುನ್ನ ಎಂದು ಕರೆಯಲ್ಪಡುತ್ತಿತ್ತು. ಇದು ಹೆಚ್ಚಾಗಿ ಹುಡುಗರು ಆಡುತ್ತಿದ್ದ ಆಟವಾಗಿದ್ದರೂ ನಾವುಗಳೂ ಏನು  ಆಟದಲ್ಲಿ  ಹಿಂದುಳಿದವರಾಗಿರಲಿಲ್ಲ.  ಹಾಗಾಗಿ ಕೊಡೆ ಬೇಗನೇ ಆಕಾಶದಿಂದ ಬೀಳುವ ನೀರನ್ನು ಹಾಗೆಯೇ ನಮ್ಮ ಮೇಲೆ ರವಾನಿಸುತ್ತಿತ್ತು. ನಮಗಾದರೂ ಒದ್ದೆಯಾಗಬಾರದೆಂಬ ಚಿಂತೆಯೇನೂ ಇದ್ದಿರಲೇ ಇಲ್ಲ ಎಂದ ಮೇಲೆ ಕೊಡೆ ಹೇಗಿದ್ದರೇನು.
ಚಪ್ಪಲಿ ಧರಿಸಿ ಶಾಲೆಗೆ ಹೋಗುತ್ತಿದ್ದವರೇ ಕಡಿಮೆ. ಕೆಲವರಲ್ಲಿ ಚಪ್ಪಲಿ ಇದ್ದರೂ ಅದು ನೀಲಿ ಬಣ್ಣದ ಹವಾ ಚಪ್ಪಲಿಯಾಗಿತ್ತು.  ಆ ಚಪ್ಪಲಿಯನ್ನು ಮಕ್ಕಳ ಸ್ನೇ"ಯಾಗೇ ತಯಾರು ಮಾಡಿದ್ದರು ಅಂತ ನನ್ನ ಅನಿಸಿಕೆ. ಅದನ್ನು ಮೆಟ್ಟಿಕೊಂಡು ಮಳೆನೀರು ತುಂಬಿರುವ ರಸ್ತೆಗಳಲ್ಲಿ ನಡೆಯುವುದೇ ಒಂದು ಮೋಜು. ನೆಲದ ಕೆಸರು ನೀರು ಅಂಗಿಯ ಮೇಲೆ ಚಿತ್ತಾರ ಮೂಡಿಸಿ ಅಲ್ಲಿಂದ ಮೇಲೆ ತಲೆಯವರೆಗೂ ಏರಿ ಒದ್ದೆಯಾಗಿಸುತ್ತಿತ್ತು. 

ಸಣ್ಣ ಪುಟ್ಟ ನೀರಿನ ಹರಿವಿರುವ ಜಾಗಗಳಲ್ಲಿ ಇದು ಆಟದ  ದೋಣಿಯಾಗಿಯೂ ಬಳಕೆಯಾಗುತ್ತಿತ್ತು. ಚಪ್ಪಲಿಯ ಉಂಗುಷ್ಟದ ಜಾಗದಲ್ಲಿ ಒಳಗೆ ಸೇರಿಸುತ್ತಿದ್ದ ಹುಲ್ಲಿನ ಹೂವೋ, ಅಥವಾ ಕಾಡು ಹೂಗಳೋ ಧ್ವಜದ ಸ್ಥಾನ ವಹಿಸುತ್ತಿದವು. ಕೆಲವೊಮ್ಮೆ ಅತ್ತಿತ್ತ ಹರಿದಾಡುವ ಇರುವೆಗಳನ್ನೋ. ಚಿಕ್ಕ ಪುಟ್ಟ ಕೀಟಗಳನ್ನೋ ಇದರ ಸವಾರರಾಗಿ ಕಳುಹಿ ಕೊಡುತ್ತಿದ್ದೆವು. ಒಬ್ಬ ನೀರು ಹರಿವ ದಿಕ್ಕಿಗೆ ಚಪ್ಪಲಿಯನ್ನು ತೇಲಿ ಬಿಟ್ಟರೆ ಸ್ವಲ್ಪ ದೂರದಲ್ಲಿ  ಎದುರಿಗೆ ನಿಂತ ಇನ್ನೊಬ್ಬ ಅದನ್ನು ಹಿಡಿದು ದಡ ಸೇರಿಸುತ್ತಿದ್ದ. ಈ ಆಟ ದೊಡ್ಡವರು ಬಂದು ನಮ್ಮನ್ನು  ಬಯ್ಯುವಲ್ಲಿಯವರೆಗೆ ನಿರಾತಂಕವಾಗಿ ಸಾಗುತ್ತಿತ್ತು. 
ಇನ್ನು ಪುಸ್ತಕದ ಹಾಳೆಗಳು ದೋಣಿಯಾಗಿ ಆಕಾರ ಪಡೆದುಕೊಳ್ಳುತ್ತಿದ್ದುದಂತೂ ಸರ್ವೇಸಾಮಾನ್ಯ. ಅದರಲ್ಲೂ ವೈವಿಧ್ಯವಿರುತ್ತಿತ್ತು. ಕತ್ತಿ ದೋಣಿ, ಡಬಲ್ ದೋಣಿ, ಹಾ ದೋಣಿ ಹೀಗೇ ನಾನಾ ನಮೂನೆಗಳು ಸಿದ್ಧವಾಗುತ್ತಿದ್ದವು. ಇದನ್ನು ನಮಗೆ ಮಾಡಿಕೊಡುವವರು ಗುರು ಸಮಾನರೆಂದು ನಮ್ಮಿಂದ ಮಿಗಿಲಾದವರೆಂದು  ಪರಾಕ್ ಹೇಳಿಸಿಕೊಳ್ಳುತ್ತಿದ್ದರು. 
ಉಲ್ಟಾ ಹಾಕಲ್ಪಟ್ಟ ಕೊಡೆಗಳು ದೋಣಿಯಾಗಿ ಕೆಲವೊಮ್ಮೆ ಪರಿವರ್ತನೆಗೊಳ್ಳುತ್ತಿದ್ದರೂ ಹಿರಿಯರ ಕಣ್ಣಿಗೆ ಬಿದ್ದರೆ ಬೆನ್ನಿನಲ್ಲಿ ಬಾಸುಂಡೆ ಮೂಡುವ ಭಯವಿದ್ದುದರಿಂದ ಅದೊಂದು ರಹಸ್ಯ ಕಾರ್ಯಾಚರಣೆಯಾಗಿ ಮಾತ್ರ ನೋಡಲು ಸಿಗುತ್ತಿತ್ತು. 
ಈ ಮಳೆಗಾಲ. ಶಾಲೆಗೆ ಹೋಗಲು ಇಷ್ಟವಿಲ್ಲದ ಮಕ್ಕಳಿಗೆ ವರಪ್ರಧಾನವೇ ಆಗಿದ್ದ ಕಾಲ ಎಂದರೆ ತಪ್ಪೇನಿಲ್ಲ.  ಶೀತವೆಂಬುದು ನಿತ್ಯ ಸಂಗಾತಿಯಾಗಿರುತ್ತಿತ್ತು. ಇದಕ್ಕೆ ನಮಗೆ ಗೊತ್ತೇ ಇಲ್ಲದ ತಲೆನೋವು ಎಂಬುದನ್ನು ಆರೋಪಿಸಿಕೊಂಡು ಮನೆಯಲ್ಲೇ ಹೊದ್ದು ಮಲಗಬಹುದಿತ್ತು. ಮರುದಿನ ಶಾಲೆಗೊಂದು ರಜಾ ಅರ್ಜಿಯ ಸಮೇತ ಹೋದರಾಯಿತು. 
  ನಮ್ಮ ಶಾಲೆಯಲ್ಲಿ ರಜಾ ಅರ್ಜಿಗಳು ಹಳೆಯ ಕೊಡೆಯ ಕಡ್ಡಿಯನ್ನು ಬಗ್ಗಿಸಿ ಮಾಡಿದ ಒಂದು ಕೊಕ್ಕೆಯಂತಹ ಉಪಕರಣದಲ್ಲಿ ಚುಚ್ಚಿ ಇಡಲ್ಪಡುತ್ತಿತ್ತು. ಯಾರಾದರು ಕುತೂಹಲಕ್ಕೆ ಅದನ್ನು ಓದಲು ತೆಗೆದುಕೊಂಡಿರಿ ಎಂದಾದರೆ ಅಲ್ಲಿದ್ದ ಎಲ್ಲ ಅರ್ಜಿಗಳಲ್ಲೂ ಮಕ್ಕಳ ರಜಾದ ಕಾರಣ ಶೀತ ಮತ್ತು ಜ್ವರವೇ ಆಗಿರುತ್ತಿತ್ತು.ಪರೀಕ್ಷೆಯಲ್ಲಿಯೂ ರಜಾ ಅರ್ಜಿ ಬರೆರಿ ಎಂಬ ಪ್ರಶ್ನೆಗೆ ಇರುವ ಉತ್ತರಕ್ಕು ಇದಕ್ಕೂ ಯಾವ ವ್ಯತ್ಯಾಸವೂ ಇರುತ್ತಿರಲಿಲ್ಲ. ಮತ್ತು ಇದರಿಂದ ಬೇರೆಯಾಗಿ ರಜಾ ಅರ್ಜಿಗಳು ಇರಬಹುದೆಂಬ ಕಲ್ಪನೆಯೇ ನಮಗಿರಲಿಲ್ಲ.  

ಹೊಳೆಯ ನೀರು ಮಳೆಗಾಲದಲ್ಲಿ ಉಕ್ಕೇರುತ್ತಿತ್ತು. ನೀರು ಮೇಲೆ ಬರುವ ಜಾಗದಲ್ಲಿ ಸ್ವಲ್ಪ ದೊಡ್ಡ ಹೊಂಡ ಮಾಡುತ್ತಿದ್ದೆವು. ಇದು ಒಬ್ಬರಿಂದಾಗುವ ಕೆಲಸವಲ್ಲವಾದ ಕಾರಣ ಇದು ಒಂದೊಂದು ಗುಂಪಿನ ಹೊಂಡ ಎಂದೇ ಹೆಸರು ಹೊತ್ತುಕೊಳ್ಳುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಬಲಶಾಲಿಯಾದ ಹುಡುಗನೋ, ಗಟ್ಟಿಗಿತ್ತಿ ಹುಡುಗಿಯೋ ಗುಂಪಿನ ಮುಖಂಡರಾಗುತ್ತಿದ್ದರು. ಮಳೆ ಬರುವಾಗ ಉಕ್ಕೇರುವ ನದಿಗಳು, ಮಳೆ ಕಡಿಮೆಯಾದಾಗ  ಇಳಿಯುತ್ತಿದ್ದವು. ಆಗ ಈ ಹೊಡದೊಳಗೆ ಇಳಿದ ಕೆಲವು ಮೀನುಗಳು ಇಲ್ಲೇ ಉಳಿದುಕೊಳ್ಳುತ್ತಿದ್ದವು.  ಅವುಗಳು ಕೆಲ ಸಮಯದವರೆಗೆ ನ್ಯಾಚುರಲ್ ಅಕ್ವೇರಿಯಮ್ ಗಳಾಗಿ ನಮ್ಮ ಬಹುಪಾಲು ಸಮಯವನ್ನು ಕಸಿದುಕೊಳ್ಳುತ್ತಿದ್ದವು. ಇದಕ್ಕೆ ಕಪ್ಪೆಯ ಗೊದ್ದಗಳೂ ಸೇರಿಕೊಂಡು ಅವು ದಿನ ಕಳೆದಂತೆ  ಕಪ್ಪೆಯಾಗಿ ಪರಿವರ್ತಿತವಾಗುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು.

ರಜಾ ದಿನಗಳಲ್ಲಿ ದೊಡ್ಡವರ ಮುಂದಾಳತ್ವದಲ್ಲಿ ಗದ್ದೆಗಳಲ್ಲಿ ಶೇಖರವಾದ ನೀರಿನಲ್ಲಿ ಈಜಿನ ಪಾಠ ನಡೆಯುತ್ತಿತ್ತು. ಶುರು ಶುರುವಿಗೆ ಕೆಸರು ನೀರು ಕಣ್ಣು ಮೂಗು ಬಾಗೆಲ್ಲಾ ಹೋಗಿ ಒಂದೆರಡು ದಿನ ಜ್ವರ ಬರಿಸಿ ಮಲಗಿಸಿದರೂ ಬಿಟ್ಟು ಬಿಡದ ಈ ಪಾಠ ಒಂದು ಮಳೆಗಾಲ ಕಳೆಯುವಾಗ ಕಿರಿಯರನ್ನು ಈಜಲು ತರಬೇತುಗೊಳಿಸುತ್ತಿತ್ತು. 
ಮಳೆಗಾಲಕ್ಕೆಂದೇ ಇರುವ ತಿಂಡಿಗಳಾದ ಹಲಸಿನ ಹಣ್ಣಿನ ವಿವಿಧ ಖಾಧ್ಯಗಳು, ಕೆಸುವಿನ ಸೊಪ್ಪಿನ ಪತ್ರೊಡೆ, ಬೆಚ್ಚಗಿರಲೆಂದು ಮಾಡುವ  ಕಷಾಯಗಳು, ಆಟಿ ತಿಂಗಳಿನ ಔಷಧೀಯ ಆಟಿ ಸೊಪ್ಪಿನ ಪಾಯಸ, ಸಪ್ಪಳ ಸಂಡಿಗೆಗಳ ಜೊತೆಯಲ್ಲಿ ಸುಟ್ಟು ಹಾಕಿದ ಹಲಸಿನ ಬೀಜ,  ಉಪ್ಪು ಹಾಕಿ ಬೇಸಿ ಒಣಗಿಸಿದ ಹಲಸಿನ ಬೀಜದ ಸಾಂತಾಣಿ, ಬೇಸಿಗೆಯಲ್ಲಿ ಒಣಗಿಸಿದ ಮಾವಿನ ಹಣ್ಣಿನ ರಸದ ಮಾಂಬುಳ.. ಒಂದೇ ಎರಡೇ.. ಎಲ್ಲವೂ ನಮ್ಮ ಜಿಹ್ವೆಯನ್ನು ತಣಿಸಿ ನಲಿಯುವಂತೆ ಮಾಡುತ್ತಿತ್ತು. 
ಇನ್ನೆಲ್ಲಿದೆ ಆ ಕಾಲ.. 
ಸ್ಕೂಲ್ ಯೂನಿಫಾರ್ಮ್ ಎಂಬ ಬಟ್ಟೆಯೊಳಕ್ಕೆ ತಳ್ಳಿ ಕುತ್ತಿಗೆಯಲ್ಲಿ ಟೈ ಹಾಕಿ ಬಂಧಿಸಿದ ಪುಟ್ಟ ಜೀವಗಳು ಶಾಲೆಯ ವಾಹನ ಎಂಬ ಪೆಟ್ಟಿಗೆಯೊಳಗೇ ಪ್ಯಾಕ್ ಆಗಿ ಶಾಲೆ ಸೇರುತ್ತಾರೆ. ಅದೇ ವಾಹನದಲ್ಲಿ ಹಾಗೇ ಇಳಿದು ಮನೆ ಸೇರುತ್ತಾರೆ. ಮತ್ತೆ ಹೋಮ್ ವರ್ಕು, ಟ್ಯೂಶನ್ ಕ್ಲಾಸು, ಆ ಕ್ಲಾಸು, ಈ ಕ್ಲಾಸುಗಳ ಜಂಜಾಟದಲ್ಲಿ ಮನೆ ಸೇರುತ್ತಾರೆ. ಮಳೆಯ ಅನುಭೂತಿ, ಅದರೊಂದಿಗೆ ಪ್ರಕೃತಿಯ ಹೊಸ ವಿಷಯಗಳನ್ನು ಅರಿತುಕೊಳ್ಳುವ ಸಡಗರ ಎಲ್ಲ ಇವರಿಗೆ ಸಿಗದ ಮಾಯಾಪೆಟ್ಟಿಗೆಯಲ್ಲಿ ಅಡಗಿಸಿಟ್ಟ ನಿಧಿ. 
ಕಾಲ ಇನ್ನೊಮ್ಮೆ ಮರುಕಳಿಸುವಂತಿದ್ದರೆ.. ನನ್ನದೂ ಇದೇ ಹಾಡು.. 
 'ಎ ದೌಲತ್ ಬಿ ಲೇಲೋ ಎ ಶೊಹರತ್ ಬಿ ಲೇಲೋ
ಬಲೇ ಚೀನ್ ಲೆ ಮುಜ್ ಸೆ ಮೇರೀ ಜವಾನಿ
ಮಗರ್ ಮುಜ್ ಕೊ ಲೌಟಾದೋ ಬಚ್ಪನ್ ಕಾ ಸಾವನ್ 
ವೋ ಕಾಗಜ್ ಕಿ ಕಸ್ತಿ ವೋ ಬಾರಿಶ್ ಕಾ ಪಾನಿ ..'
-- 



Sunday, May 17, 2015

ತೀರ ಸೇರಿದ 'ಕಾಗದದ ದೋಣಿ'ಯ ಪಯಣಿಗ- ಎಸ್. ಎಮ್ ಪೆಜತ್ತಾಯ.


ವೆಬ್ ಪತ್ರಿಕೆ  ಕೆಂಡ ಸಂಪಿಗೆಯಲ್ಲಿ ಓದಿ ಆನಂದಿಸುತ್ತಿದ್ದ ಅವರ ಸರಣಿ ಬರಹಗಳು ಮೊದಲ ಬಾರಿಗೆ ನನ್ನನ್ನು ಅವರ ಬರವಣಿಗೆಯತ್ತ ಸೆಳೆದಿತ್ತು. ಪ್ರತಿಯೊಂದು ಬರಹದಲ್ಲೂ ಅವರ ಅನುಭವಗಳೇ ಹರಳು ಗಟ್ಟಿ ವಜ್ರದಂತೆ ಪ್ರತಿಫಲಿಸುತ್ತಿದ್ದವು. ಅವರ ಜೀವನ ಪ್ರೀತಿ, ಪರಿಸರದ ಬಗೆಗಿನ ಕಾಳಜಿ ಎದ್ದು ತೋರುತ್ತಿತ್ತು. ಇದರ ಜೊತೆಗೆ  ಗಮನಿಸಿದ  ವಿಷಯವೆಂದರೆ ಅವರ ಉತ್ತಮ ಹಾಸ್ಯ ಪ್ರಜ್ಞೆ. ತಮ್ಮನ್ನು ತಾವು ಹಾಸ್ಯ ಮಾಡಿಕೊಳ್ಳುತ್ತಾ, ನಮ್ಮ ತುಟಿಗಳಲ್ಲಿಯೂ ನಗೆ ಬುಗ್ಗೆ ಏಳುವಂತೆ ಮಾಡುತ್ತಿದ್ದ ಅವರ ಬರಹಗಳು ಕೃಯನ್ನೇ ಪ್ರಧಾನವಾಗಿಸಿ ನಮ್ಮದೇ ಸಮಸ್ಯೆಗಳು, ಉತ್ತರಗಳ ನಡುವೆ ಸಾಗುತ್ತಿದ್ದ ಕಾರಣ ಅವರು ನಮಗೆ ಆತ್ಮೀಯರೆನಿಸಿಕೊಂಡರು.  ಅದೇ ಪತ್ರಿಕೆಯಲ್ಲಿ ನಾನು ಬರೆಯುತ್ತಿದ್ದ    ಬರಹಗಳಿಗೆ  ಹೊಸಬಳೆನ್ನುವ ಯಾವುದೇ ಪೂರ್ವಾಗ್ರಹಗಳಿಲ್ಲದ ಅವರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಅವರ ಬಗ್ಗೆ ತಿಳಿಯುವಂತೆ ಮಾಡಿತು. ಹೀಗೆ ಪರಿಚಯವಾದವರೇ ಎಸ್. ಎಮ್. ಪೆಜತ್ತಾಯ. ಅಂದರೆ ನಮ್ಮೆಲ್ಲರ ಪ್ರೀತಿಯ ಪೆಜತ್ತಾಯ ಮಾಮ. 
ಈ ಮೇಲ್ ಮೂಲಕ ಸಂಪರ್ಕ ಬೆಳೆಯಿತು. ಮೊದಲಿಗೆ ಲೇಖಕರೆಂದೇ ನನಗೆ ಪರಿಚಿತರಾದರೂ ಅವರಂತೂ ಖಡಾಖಂಡಿತವಾಗಿ ನಾನು ಲೇಖಕ ಅಲ್ಲ ಮಗಳೇ.. ನಾನು ಕೃಷಿಕ.. ನಾನು ಬರೆದ ಎಲ್ಲಾ  ವಿಷಯಗಳು ನನ್ನ ಅನುಭವಕ್ಕೆ ಸಿಲುಕಿದ್ದಷ್ಟೇ.. ಕಲ್ಪನೆಗಳಲ್ಲ.. ಎಂದುಬಿಟ್ಟಿದ್ದರು. 
ದೈಹಿಕವಾಗಿ ಬಸವಳಿಯುತ್ತಾ ಇದ್ದರೂ  ತಮ್ಮ ನೋವನ್ನೇ ತಮಾಷೆಯ ವಸ್ತುವಾಗಿಸಿದ್ದರವರು. 'ನೋಡು ಮಗು ನೀನು ಸಣ್ಣವಳಾಗಿರುವಾಗ ಚಂದಾಮಾಮ ಓದಿದ್ದೀಯಾ? ಅದರಲ್ಲಿ ಒಂಟಿ ಕಣ್ಣಿನ ಒಂದು ಕಿವಿಯ ಬಕ್ಕ ತಲೆಯ ರಕ್ಕಸನ ಬಗ್ಗೆ ಗೊತ್ತುಂಟೋ.. ನೋಡಬೇಕು ಅಂತ ಇದ್ರೆ ಹೇಳು ನನ್ನ ಫೊಟೋ ಕಳಿಸ್ತೇನೆ.. ನನ್ನ ಒಂದು ಕಣ್ಣು ಕಾಣುವುದಿಲ್ಲ, ಒಂದು ಕಿವಿ ಪೊಟ್ಟಾಗಿದೆ.  ಆದ್ರೆ ಬದುಕಲಿಕ್ಕೆ ಉಳಿದ  ಒಂದು ಕಿವಿ ಒಂದು ಕಣ್ಣು ಸಾಕು ಮಗಳೇ.. ನನ್ನ ಅವಶ್ಯಕತೆಗಳನ್ನು ಅದೂ ಪೂರೈಸುತ್ತದೆ ಅಂದ್ರೆ ನಾನು ಆರೋಗ್ಯವಂತನೇ ಅಲ್ವಾ' ಎಂಬ ಮಾಮನ ಮಾತಿಗೆ ಯಾರಾದರೂ ತಲೆ ದೂಗಲೇ ಬೇಕು. 
ಮತ್ತಿನ ನಮ್ಮ ಸಂಭಾಷಣೆಗಳೆಲ್ಲಾ 'ತೋಟಕ್ಕೆ ಮದ್ದು ಬಿಟ್ಟಾಯ್ತಾ ಮಗಳೇ.. ಈ ಸಲ ಯಾವ ಸ್ಪ್ರೇ ಮಾಡ್ತೀರಿ? ಕೊಕ್ಕೋ ಗಿಡ ಅಡಿಕೆಯ ಮಧ್ಯದಲ್ಲಿ ಚೆನ್ನಾಗಿ ಬರುತ್ತಾ ಮಗೂ, ನಮ್ಮಲ್ಲಿ ಹಂದಿಯ ಕಾಟ ಜೋರು ..ಹಂದಿ ಕೊಕ್ಕೋ ತಿನ್ನುತ್ತಾ.. ಹಾಗೇನಾದರೂ ತಿಂದರೆ  ಪೇಟೆಯ ಮಕ್ಕಳು ಹಂದಿಯ ಪಿಟ್ಟೆಯನ್ನೂ ಚಾಕಲೇಟ್ ಅಂದುಕೊಂಡಾರೋ ಏನೋ?  ನಮ್ಮ ಕಡೆ ಕಂಡಾಬಟ್ಟೆ ನವಿಲಿನ ಕಾಟ.. ಓಡಿಸುವ ಅಂದ್ರೆ ಎಲ್ಲಿಗೆ ಓಡಿಸುವುದು ಹೇಳು.. ಯಾವ ಬೇಲಿಯೂ ಹಾರುವ ಹಕ್ಕಿಗಳನ್ನು ಬಾರದಂತೆ ತಡೆಯುವುದಿಲ್ಲ ಅಲ್ವಾ.. ನಮ್ಮ ಗ್ರಾಚಾರಕ್ಕೆ ಎಲ್ಲಿಯಾದ್ರು ಅದು ಪ್ರಾಯ ಆಗಿ ನಮ್ಮ ತೋಟದಲ್ಲಿ ಸತ್ತರೂ ಮಾರನೇ ದಿನ ನಾವು ಜೈಲೊಳಗೆ..  ನಿಮ್ಮ ಕಡೆ ಕಾಡು ಕೋಣದ ಉಪದ್ರ ಉಂಟಾ.. ನಮ್ಮಲ್ಲಿ ಅದೂ ಜೋರು.. ಅದಕ್ಕೆ ಬೆನ್ನು ತುರಿಸುತ್ತದೆ ಅಂತ ಅಡಿಕೆ ಮರಕ್ಕೆ  ಉಜ್ಜಿಕೊಂಡರೆ ಆ ಮರದ ಜೊತೆ ಜೊತೆಗೆ ಇನ್ನೂ ನಾಲ್ಕು ಮರ ಕೆಳಗೆ ಬಿದ್ದಾಯ್ತು. ಅಲ್ಲಾ ಮಗೂ.. ಅದಾದ್ರೂ ಎಲ್ಲಿಗೆ ಹೋಗ್ಬೇಕು ನೀನೇ ಹೇಳು.. ಅದರ ಕಾಡನ್ನು ಕಡಿದು ನಾವುಗಳು ತೋಟ ಗದ್ದೆ ಅಂತ ಮಾಡಿದ್ದೇವೆ. ಅದಕ್ಕೆ ಕುಡಿಯಲು ಬೇಕಿರುವ ನೀರನ್ನು ನಾವು ಹಾಳು ಮಾಡ್ತಿದ್ದೇವೆ.. ಅವುಗಳಿದ್ರೆ ನಮಗೂ ಬದುಕು ಅಂತ ನಂಬಿದ್ರೆ ಇಬ್ಬರೂ ಬದುಕಿಯೇವು.. ನೀನೇನು ಹೇಳ್ತೀಯಾ.. ? ಅದೆಲ್ಲಾ ಇರಲಿ ನಿಮ್ಮಲ್ಲಿ  ಹಲಸಿನ ಕಾಯಿ ಆಗಿದೆಯಾ?  ನಾನು  ಹಣ್ಣು ತಿನ್ನುವ ಹಾಗಿಲ್ಲ.. ನನ್ನ ಹತ್ತಿರ ಶುಗರ್ ಫ್ಯಾಕ್ಟರಿಯೇ ಉಂಟು.. ಜಂಬು ನೇರಳೆ ಮರ ಉಂಟಲ್ವಾ ನಿಮ್ಮಲ್ಲಿ.. ನನಗೊಂದು ಗಿಡ ಬೇಕು ಆಯ್ತಾ.. ಈ ಸಲ ನಿಮ್ಮ ಮನೆಗೆ ಬಂದಾಗ ಅದನ್ನು ಕೊಡು.. ಮಂಚಿಯ ಹಣ್ಣು ಅಂತಲೇ ಹೆಸರಿಡ್ತೇನೆ.. ಇನ್ನೇನು ವಿಶೇಷ.. ನಿನ್ನ ಸ್ವರ ಕೇಳುವ ಅಂತ ಮಾತಾಡಿದೆ ಮಗೂ ಎಂದು ಹೇಳುತ್ತಿದ್ದವರು ಮಗು ಮನಸ್ಸಿನ ಪೆಜತ್ತಾಯ ಮಾಮಾ..
ಅವರ ಜೊತೆ ಮಾತನಾಡುವಾಗ ಬದುಕು ಇಷ್ಟೊಂದು ಸುಲಭವೇ ಅನ್ನಿಸುತ್ತಿತ್ತು. ಅವರನ್ನು ನೋಡಿಲ್ಲದ ನನಗೆ ಕೆಲವೊಮ್ಮೆ ಅವರು ಯಾವುದೇ ತೊಂದರೆಗಳಿಲ್ಲದ ಆರೋಗ್ಯವಂತರೇ ಇರಬಹುದು ಅಂತಲೂ ಅನ್ನಿಸುತ್ತಿತ್ತು. 
ಫೋನಿನಲ್ಲಿ ಮಾತನಾಡುವಾಗ ನಾನು ಹೇಳಿದ್ದು ಅವರಿಗೆ ಕೇಳದೇ ಹೋದಲ್ಲಿ ಮಗೂ ನೀನೀಗ ಹೇಳಿದ್ದು ಗಾಳಿಗೆ ಹಾರಿ ಹೋಗಿದೆ. ಸ್ವಲ್ಪ ( ಇಂಟರ್ ನೆಟ್)  ಬಲೆಯೊಳಗೆ ತುಂಬಿಸಿ ಮೇಲ್ ಮಾಡು ಎನ್ನುತ್ತಿದ್ದರು.ಉಪಯೋಗಕಾರಿ, ಕುತೂಹಲಕಾರಿ ಎನ್ನಿಸಿದ ವಿಷಯಗಳನ್ನು ಮೇಲ್ ಮೂಲಕ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದುದು ಅವರ ದೊಡ್ಡ ಗುಣ. 
ಒಂದಷ್ಟು ದಿನ ಕಣ್ಣಿನೊಳಗಿನ ರಕ್ತ ಸ್ರಾವದಿಂದಾಗಿ ಇಂಟರ್ ನೆಟ್ಟಿನ ಬಳಕೆಂದ  ವಿಶ್ರಾಂತಿ ಪಡೆಯಬೇಕಾಗಿ ಬಂದಾಗ ಅದನ್ನು ಮೊದಲಾಗಿಯೇ ತಿಳಿಸಿ 'ಫೋನ್ ಮಾಡಬಹುದು ಮಗಳೇ.. ಯಾಕಂದ್ರೆ ಕಿವಿ ನೆಟ್ಟಗುಂಟಲ್ಲಾ' ಎಂದು ತಮ್ಮ ಬಗ್ಗೆ ತಾವೇ ನಗೆಯಾಡಿದ್ದರು. 
ಅದ್ಯಾಕೋ ಒಂದು ದಿನ ನನಗೂ ಮಾಮನಿಗೂ ಗರುಡ ಪುರಾಣ ಪುಸ್ತಕದ ಬಗ್ಗೆ ಚರ್ಚೆ ಶುರು ಆತು.  'ಮಗೂ ನೀನೀಗ ಅದನ್ನು ಓದಬೇಡ.. ನೀನು ಓದಬೇಕಾಗಿದ್ದು ಕಾಮಿಕ್ಸ್ ಪುಸ್ತಕ. ಆಯ್ತಪ್ಪಾ ನೀನೀಗ ದೊಡ್ಡ ಜನ ಅಂತಾದ್ರೆ ಸ್ವಲ್ಪ ಕಥೆ ಕಾದಂಬರಿ ವ್ಯಕ್ತಿಗಳ ಜೀವನ ಚರಿತ್ರೆ ಇದೆಲ್ಲಾ ಓದು. ರಾಮಾಯಣ ಮಹಾಭಾರತ ಓದು..   ಆ ಗರುಡಪುರಾಣದಲ್ಲಿ ಏನುಂಟೋ ಅದೆಲ್ಲವೂ ನಮ್ಮ ನಂತರದ್ದು. ನಾವು ನೋಡದೇ ಇರುವಂತದ್ದು.. ಅಷ್ಟೂ ನಿನಗೆ ಬೇಕು ಅನ್ನಿಸಿದರೆ ನಾನೇ ಅತ್ಲಾಗಿ ಹೋಗುವಾಗ ಗೂಗಲ್ ಮ್ಯಾಪ್ ತೆಗೆದು ನಿಂಗೆ ಕಳಿಸಿಬಿಡ್ತೇನೆ.. ಅಲ್ಲಿ ಹೋಗುವ ರೂಟ್ ಮಾರ್ಕ್ ಕೂಡ ಇರುತ್ತದೆ. ಹೋಗುವ ದಾರಿ ಇದ್ದೀತು. ನನ್ನ ಕಣ್ಣು ಸರೀ ಕಾಣದ ಕಾರಣ ಬರುವ ದಾರಿ ಇದ್ದರೆ ನನಗೆ ಕಾಣ್ಲಿಕ್ಕಿಲ್ಲ.. ನಿಂಗೆ ಕಂಡರೆ ಕೂಡಲೇ ಹೇಳು.. ಸ್ವರ್ಗಕ್ಕೋ, ನರಕಕ್ಕೋ, ಬೈ ಬೈ ಹೇಳಿ ವಾಪಾಸ್ ನಮ್ಮ ಕಾಫಿ ತೋಟದಲ್ಲಿ ಕೂತುಬಿಡುತ್ತೇನೆ. ಇಲ್ಲಾ ನಿಮ್ಮ ಮನೆಯ ಹತ್ತಿರ ಇರುವ ಪೆಜದ ಮರದಲ್ಲಿ ಕೂತುಕೊಳ್ತೇನೆ ಆಯ್ತಾ.. ಹ್ಹಹ್ಹ' ಎಂದು ಮಗು"ನಂತೆ ನಕ್ಕು ಬಿಟ್ಟಿದ್ದರು ಮಾಮಾ .. 
ನಾನು ಬರೆದ ಲಲಿತ ಪ್ರಬಂಧಗಳ ಪುಸ್ತಕ ಓದಿ  ಒಂದೇ ಸಿಟ್ಟಿಂಗಿನಲ್ಲಿ ಅವರು ಬರೆದ  ವಿಮರ್ಶೆಯ ಜೊತೆಗಿದ್ದ ಇನ್ನೊಂದು ವಿಷಯವೆಂದರೆ 'ನಿನ್ನೆ ಸರೋಜಮ್ಮನಿಗೆ ಉಸಿರಾಟದ ತೊಂದರೆ ಜೋರಾಗಿ ಆಸ್ಪತ್ರೆಗೆ ಸೇರಿಸಿದೆವು.. ಈಗ ತೊಂದರೆ ಇಲ್ಲಾ..' 
ಅವರ ಪ್ರೀತಿಯ ಮಡದಿ ಸರೋಜಮ್ಮ ಈಗೆರಡು ವರ್ಷಗಳ ಕೆಳಗೆ ಅವರನ್ನಗಲಿ ಹೋದಾಗ ನಮ್ಮ ಸಾಂತ್ವನವನ್ನು ಸ್ವೀಕರಿಸುವ ಬದಲಿಗೆ ಅವರೇ ನಮಗೆ ಸಾಂತ್ವನ ಹೇಳುತ್ತಿದ್ದರು. ಎಂದೂ ತಮ್ಮ ನೋವನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಲೇ ಇರಲಿಲ್ಲ
 ನಿಜಕ್ಕೂ ಆಗೆಲ್ಲಾ ಮಾಮಾ ಎಂದರೆ ಯಾರೋ ಶಾಪಗ್ರಸ್ಥ ದೇವತೆಯಾಗಿರಬಹುದೇ ಎಂಬ ಅನುಮಾನ ಹುಟ್ಟಿಬಿಡುತ್ತಿತ್ತು. 
ನನ್ನ ಸಣ್ಣ ಕಥೆಗಳಿಗೆ ಮುನ್ನುಡಿ ಬರೆದು ಕೊಡಿ ಮಾಮಾ ಎಂದಾಗ, ಮಗೂ ನಾನು ನಿನ್ನಷ್ಟೂ ಬರೆದಿಲ್ಲ. ನನ್ನ ಹತ್ತಿರ ಯಾಕೆ ಬರೆಸ್ತೀಯಾ.. ಎಂದು ತಮಾಷೆ ಮಾಡುತ್ತಾ ನಕ್ಕಿದ್ದರು. ಆದರೆ ಅಷ್ಟೇ ಕಾಳಜಿಯಿಂದ ನನ್ನೆಲ್ಲಾ ಕಥೆಗಳನ್ನೂ ಕಣ್ಣಿನ ತೊಂದರೆಯ ನಡುವೆಯೂ ಓದಿ ಮುನ್ನುಡಿ ಬರೆದು ಹರಸಿದರು. 
ನಮ್ಮ ಮನೆಯಲ್ಲೇ ನಡೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅವರು ತಮ್ಮ ಮಗಳೊಡನೆ ಬರುವ ಬಗ್ಗೆಯೂ ನಮ್ಮ ನಡುವೆ ಮಾತುಕತೆಗಳು ನಡೆದಿದ್ದವು. ಆದರೆ ಮತ್ತೆ ಆರೋಗ್ಯ ಕೈ ಕೊಟ್ಟ ಕಾರಣ ನನ್ನ ಅವರ ಭೇಟಿ ತಪ್ಪಿ ಹೋಯಿತು. 
ನನಗೂ ಅವರಿಗೂ ಮಾತನಾಡಲಿದ್ದ ಇನ್ನೊಂದು ಸಮಾನ  ವಿಷಯವೆಂದರೆ ನನ್ನ ಅಪ್ಪನ ವಿಷಯ. ಮೂವತ್ತೈದು ವರ್ಷಗಳ ಕೆಳಗೆ 'ಮಾಗುಂಡಿ' ಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ, ಈಗ ನಮ್ಮನ್ನಗಲಿದ ನನ್ನ ಅಪ್ಪ ಅವರಿಗೂ ಪರಿಚಿತರೆಂದು ತಿಳಿದಾಗ ಅಚ್ಚರಿಯೆನಿಸಿತ್ತು. ಅಪ್ಪನ  ಆಗಿನ ಕಾಡಿನ ಸಾಹಸಗಳ ಜೊತೆ ಪೆಜತ್ತಾಯ ಮಾಮನ ಸಾಹಸ ಗಳು ಜುಗಲ್ ಬಂಧಿ ನಡೆಸಿ ನನ್ನ ಬಾಲ್ಯದ ನೆನಪನ್ನು ಹಸಿರುಗೊಳಿಸುತ್ತಿದ್ದವು. ನಾನೂ ನನ್ನಂತಹ ಇನ್ನೂ ಅನೇಕ   ಮಿತ್ರರು ಪೆಜತ್ತಾಯ ಎಂಬ ಬೃಹತ್ ಮರದ ಕೊಂಬೆ ಕೊಂಬೆಗಳಲ್ಲಿ ಕುಳಿತು ಎಬ್ಬಿಸುತ್ತಿದ್ದ ಕಲರವವನ್ನು ಅವರು ಕುಳಿತಲ್ಲಿಯೇ ಆನಂದಿಸುತ್ತಿದ್ದರು. 

ಒಬ್ಬ ಮನುಷ್ಯ ಎಷ್ಟೆಲ್ಲಾ ದೈಹಿಕ ತೊಂದರೆಗಳನ್ನು ಅನುಭವಿಸಬಹುದೋ ಅಷ್ಟನ್ನು ಅವರು ಅನುಭವಿಸುತ್ತಿದ್ದರು. ಕೆಲ ತಿಂಗಳುಗಳ  ಹಿಂದೆ ಅವರು ಮಾತನಾಡುತ್ತಾ ' ಮಗಳೇ.. ನಾನು  ಹಿಂದಿನ ಜನ್ಮದಲ್ಲಿ ನುಂಗಿದ ಕಪ್ಪೆ ಮರಿ ಈಗ ನನ್ನ ಲಿವರಿನ ಮೇಲೆ ಕುಳಿತು ಡೋಂಕ್ರು ಕಪ್ಪೆ (  ದೊಡ್ಡ  ಜಾತಿಯ ಕಪ್ಪೆ) ಆಗಿದೆಯಂತೆ. ಅದೀಗಾ ಫುಟ್ ಬಾಲ್ ನಂತೆ ಊದಿಕೊಂಡಿದೆಯಂತೆ ಅದನ್ನು ಟೆನ್ನಿಸ್ ಬಾಲ್ ಗಾತ್ರಕ್ಕೆ ತರಬೇಕಂತೆ.. ಅಲ್ಲಾ ಮಗೂ ಅದು ಯಾ ಗಾತ್ರದಲ್ಲಿ ಹೊರ ಬಂದರೂ ನನಗೇನು ಆಡ್ಲಿಕ್ಕೆ ಕೊಡ್ತಾರ. ಈ ಡಾಕ್ಟರ್ ಗಳಿಗೆ ಕೆಲಸ ಇಲ್ಲ..  
ಪ್ರತಿ ಸಲದ ಹೆಲ್ತ್ ಚೆಕ್ ಅಪ್ ನಡೆದಾಗಲೂ ಅದನ್ನು ಈ ಮೇಲ್ ಮಾಡಿ ಅವರೆಲ್ಲಾ ಮಿತ್ರರಲ್ಲೂ ಹಂಚಿಕೊಂಡು ಕೊನೆಯಲ್ಲಿ 'ಡೋಂಟ್ ವರಿ, ಐ ಆಮ್ ಫೈನ್' ಎಂಬ ವಾಕ್ಯ ಸೇರಿಸುತ್ತಿದ್ದರು. 
ಇತ್ತೀಚೆಗೆ ನಾನು ಅವರ ಮನೆಗೆ ಭೇಟಿ ಕೊಡುವ ಎಲ್ಲಾ ತಯಾರಿಗಳನ್ನು ಮಾಡಿಕೊಂಡಾಗಿತ್ತು. ಅವರೂ ಆತ್ಮೀಯವಾಗಿ ಸ್ವಾಗತಿಸಿದ್ದರು. ಅವರಿಗೆಂದೇ ಜಂಬು ನೇರಳೆ ಗಿಡ ತೆಗೆದುಕೊಂಡು ಹೋಗಿದ್ದೆ. ಆದರೆ ಇದ್ದಕ್ಕಿದ್ದಂತೆ ಕೀಮೋತೆರಫಿಯ  ನಂತರ ಉಂಟಾದ  ಅವರ ಆರೋಗ್ಯದಲ್ಲಿ ಏರು ಪೇರಿನಿಂದಾಗಿ  ಅವರನ್ನು ಕಂಡು ಮಾತನಾಡುವ ಅವಕಾಶವನ್ನು ಕಳೆದುಕೊಂಡೆ. 
ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಅವರ ಪುಸ್ತಕ ರೈತನೊಬ್ಬನ ನೆನಪುಗಳು. ನನ್ನ ಹತ್ರ ಒಂದು ಪುಸ್ತಕ ಇದೆ ಮಗಳೇ.. ಉಳಿದದ್ದು ಬರ್ಬೇಕಷ್ಟೇ.. ಎಲ್ಲಿ ನಿನ್ನ ಅಡ್ರಾಸ್ ಕೊಡು. ಅದನ್ನು ನಿಂಗೆ ಕಳಿಸ್ತೇನೆ ಎಂದು ತಮ್ಮ ಸ್ವ ಅಕ್ಷರದಲ್ಲಿ ಪ್ರೀತಿಯ ಸೋದರ ಸೊಸೆ ಅನಿತಾಗೆ ಅಂತ ಬರೆದು ಕಳುಹಿಸಿದ್ದರು.  ಸಾಹಿತ್ಯ ಲೋಕಕ್ಕೆ ಈ ಪುಸ್ತಕ ಅವರ ಅತ್ಯುತ್ತಮ ಕೊಡುಗೆಯೇ ಸರಿ. ಕಾಗದದ ದೋಣಿ ಯ ಮುಂದಿನ ಆವೃತ್ತಿಯಂತೆಯೇ ಇರುವ ಇದು ಕೂಡಾ ಅವರದ್ದೇ ಅನುಭವಗಳು. ಇತ್ತೀಚೆಗೆ ಅವರು ಮತ್ತು ಅವರ ಅಮೇರಿಕಾದ ಗೆಳೆಯ ಇಬ್ಬರೂ ಸೇರಿ ಬರೆದಿದ್ದ ಪುಸ್ತಕದ ಬಿಡುಗಡೆಯೂ ಅಮೆರಿಕಾದಲ್ಲಿ ನಡೆತು. ಕೆ.ಟಿ ಗಟ್ಟಿ. ನಾ ಡಿಸೋಜ ಅಂತಹ ಹಲವು ಹಿರಿಯ ಸಾಹಿತಿಗಳ ಪುಸ್ತಕವನ್ನು ಇಂಗ್ಲೀಗೂ ಅನುವಾದಿಸಿ ಗಟ್ಟಿಗರೆನಿಸಿಕೊಂಡವರು ನಮ್ಮ ಮಾಮಾ..
ನಿನ್ನ ಮನೆಗೊಮ್ಮೆ ಬರಬೇಕು ಅಂತ ಆಸೆ ಇದೆ ಮಗಳೇ ... ಎನ್ನುತ್ತಲೇ ಇದ್ದ ಮಾಮಾ ಇದರ ಜೊತೆಗೆ ತಮ್ಮ ಹೊಸ ಪುಸ್ತಕದ ಬಗೆಗಿನ ಸಂವಾದಕ್ಕಾಗಿ ಅಮೆರಿಕೆಗೆ ತೆರಳುವ ಬಗ್ಗೆಯೂ ಆಸೆ ಹೊತ್ತಿದ್ದರು. ಎಪ್ರಿಲ್ ೨೧ಕ್ಕೆ ಬಂದ ಅವರ ಈ ಮೇಲ್ ಹೇಳಿದ್ದಿದನ್ನು..
Good Evening
Next Monday I am on to an  Angioplasty like procedure on my tumor
I am fine.

ಮರುದಿನ  ತಾವೇ ತಮ್ಮ ಮೈಕ್ರೋ ಮಾಕ್ಸ್ ಕ್ಯಾನ್ವಾಸ್ ಮೊಬೈಲಿನಿಂದ ತೆಗೆದ ಒಂದು ಪುಟ್ಟ ಹಳದಿ ಹೂವು. 
ಆಗಾಗ ಮೇಲಿನಿಂದ  ಕಾಲ್ ಬರ್ತಾ ಇರ್ತದೆ ಮಗಳೇ.. ಯಾವತ್ತು ರಿಸೀವ್ ಮಾಡುವ ಮನಸ್ಸಾಗುತ್ತದೋ ಗೊತ್ತಿಲ್ಲಾ.. ಎಂದ ಮಾಮಾ ಕಾಲನ ಕರೆಗೆ ಓಗೊಟ್ಟು ಹೊರಟೇ ಹೋಗಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತಿದೆ. ಯಾಕೆಂದರೆ ಇನ್ನೂ ನೂರಾರು ವರ್ಷಗಳ ಕಾಲ ಬದುಕುವಷ್ಟು ಜೀವನೋತ್ಸಾಹ ಅವರಲ್ಲಿತ್ತು. 
 
ಆದರೆ ನನಗೆ ನಂಬಿಕೆದೆ ಅವರು ಅಲ್ಲಿಯೂ ಸರೋಜಮ್ಮನೊಡನೆ ಸೇರಿ  ಕಾಫಿ ತೋಟ ಮಾಡಿ ಸುರಾಪಾನ ಮಾಡುವ ದೇವಾನು ದೇವತೆಗಳಿಗೆ ಕಾಫಿಯ ಹುಚ್ಚು ಹಿಡಿಸಿಯೇ ಬಿಡುತ್ತಾರೆ..ಇಲ್ಲಿಯಂತಹುದೇ ಇನ್ನೊಂದು ಸುಳಿಮನೆ ಎಸ್ಟೇಟ್ ಅಲ್ಲಿಯೂ ಮಾಡಿಬಿಡುತ್ತಾರೆ. 
ಮಾಮಾ ಅಲ್ಲಿನ ವಿಷಯಗಳ ಬಗೆಗೆ ನಿಮ್ಮ ಮೇಲ್ ಗಾಗಿ ನಾನು ನನ್ನಂತಹ ಹಲವರು ಕಾಯುತ್ತಿದ್ದೇವೆ.. 
ಉತ್ತರಿಸುತ್ತೀರಲ್ಲಾ.. 
 






Friday, March 27, 2015

ಸಭೆಯೊಳಗೆ ದ್ರೌಪದಿಯ


"ನಂದಕ ಕೇಳಿದೆಯಾ .. ಎಂತಹ ಎದೆ ನಡುಗುವ ಸುದ್ದಿಯಿದು? ತುಂಬಿದ ಸಭೆಯಲ್ಲಿ ಕೌರವರು ದ್ರೌಪದಿಯ ವಸ್ತ್ರವನ್ನು ಸೆಳೆದು ಅವಳ ಲಜ್ಜೆಯನ್ನು ಕಳೆದಿದ್ದಾರಂತೆ ? ಅದೂ ಅವಳ ಐವರು ಗಂಡಂದಿರನ್ನು ಮೋಸದ ದ್ಯೂತದಲ್ಲಿ ಸೋಲಿಸಿ ...  ಇದೆಂತಹಾ ದುಷ್ಟತನ ? ರಾಜಸಭೆಯಲ್ಲಿ ಹೀಗಾಗುವುದು ನ್ಯಾಯವೇ? ಬಿಡು ನಾನೇನು ಇದನ್ನು ಹೊಸತಾಗಿ ಹೇಳುವುದು..  ರಾಜನರಮನೆಯಲ್ಲೇ  ಅಲ್ಲವೇ ನಿನ್ನ ಚಿಕ್ಕಪ್ಪ ಊಳಿಗದಲ್ಲಿರುವುದು..ಅವನೇ ಎಲ್ಲವನ್ನೂ ಹೇಳಿರಬಹುದು. ಅವನೆಂದೇಕೆ ರಾಜ್ಯದ ಪ್ರತಿಯೊಬ್ಬ ಮಂದಿಯೂ ಇದೇ ವಿಷಯವನ್ನು ತಾಂಬೂಲದಂತೆ ಜಗಿದು ರಂಗೇರಿಸುತ್ತಿದ್ದಾರೆ ಎಂದ ಮೇಲೆ ಉಗುಳಿದ ಕಲೆಯಾದರೂ ಕಾಣದಿದ್ದೀತೇ.."
" ಓಹೋ.. ಶ್ರಾವಸ್ತ.. ಈ ಸುದ್ದಿ ನಿನ್ನ ಕಿವಿಗೂ  ತಲುಪಿತೇ? ಅಷ್ಟು ಬೇಗನೆ ನಂಬಿಯೂಬಿಟ್ಟೆಯಾ?  ಅಯ್ಯೋ ಹುಚ್ಚಪ್ಪಾ.. ಅಂತಹದ್ದೇನು ಅಲ್ಲಿ  ನಡೆದೇ ಇಲ್ಲವಂತೆ.. ನಿನಗೆ ಯಾರೋ ತಪ್ಪು ಮಾಹಿತಿ ಮುಟ್ಟಿಸಿದ್ದಾರೆ ಶ್ರಾವಸ್ತ.  ಇಂತಹ ಗಾಳಿ ಸುದ್ದಿಗಳನ್ನು ನಾನೆಷ್ಟು ಕೇಳಿಲ್ಲ.. ಅಷ್ಟಕ್ಕೂ ನನ್ನ ಚಿಕ್ಕಪ್ಪ ಆಹುಕನನ್ನು  ಮೊನ್ನೆಯಷ್ಟೇ ಭೇಟಿಯಾಗಿ ಈ ಸಂಗತಿಯ ನಿಜಾನಿಜಗಳ ಬಗ್ಗೆ ಮಾತನಾಡಿದ್ದೆ. ಅವರಂತೂ  ಇದರಲ್ಲಿ ಒಂದಿನಿತೂ ಸತ್ಯವಿಲ್ಲ ಎಂದು ಅಲ್ಲಗಳೆದಿದ್ದರು.."
"ಹಾಗೆ ಹೇಳಿದರೇ ನಂದಕ ಅವರು, ಹಾಗಿದ್ದರೆ ಇಷ್ಟೊಂದು ಜನರಾಡುವ ಮಾತುಗಳೂ ಸುಳ್ಳೇ? ಇರಲಾರದು..  ಆಹುಕ  ದೊರೆಗಳಿಗಂಜಿ ಮಾತನಾಡುತ್ತಿಲ್ಲವೇನೋ.. ಯಾಕೆಂದರೆ ಇದನ್ನು  ನನಗೆ ಇದನ್ನು ಹೇಳಿದ್ದು ಘಟನೆಯ ಪ್ರತ್ಯಕ್ಷದರ್ಶಿ  ಗಣಿಕೆ ಸೋಮಲತೆ. ನಿನಗೆ ಗೊತ್ತಿಲ್ಲದ್ದೇನಿದೆ? ಅರಮನೆಗೆ ಯಾರಾದರೂ ವಿಶೇಷವಾಗಿ  ಬರುವವರಿದ್ದರೆ ಊರಿನೆಲ್ಲಾ ಗಣಿಕೆಯರು ಅಲ್ಲೇ ಇರಬೇಕಾಗುತ್ತದೆ ತಾನೇ.. ಹಾಗೆ ಆ ದ್ಯೂತವಾಡುವ ದಿನ ಇವಳೂ ಅಲ್ಲಿದ್ದಳು. ಬಲಾತ್ಕಾರದಿಂದ ಎಳೆದು ಕೊಂಡೊಯ್ಯುತ್ತಿರುವ  ಪಾಂಡವರೈವರ ಪ್ರೀತಿಯ ಪತ್ನಿ ಬೊಬ್ಬಿಡುವುದನ್ನು, ಶಪಿಸುವುದನ್ನು ಇವಳ ಕಿವಿಗಳು ಕೇಳಿಸಿಕೊಂಡಿವೆ.    ಆದರೆ ರಾಣೀವಾಸದವರು ಇದನ್ನು ಕೇಳಿಯೂ ಕೇಳಿಸದಂತೆ ಬಾಗಿಲನ್ನು ಭದ್ರಪಡಿಸಿದ್ದರಂತೆ.  ನೀನೇ ಹೇಳು ಇಂತಹ ಕೆಟ್ಟ ಸಂಗತಿ ಕುರುಗಳ  ಅರಮನೆಯಲ್ಲಿ ನಡೆಯಬಹುದೇ? ಅದೂ ತಮ್ಮದೇ ಮನೆಯ ಸೊಸೆಯನ್ನು ಹಾಳುಗೆಡವಿ  ಏನನ್ನು ಸಾಧಿಸುತ್ತಾರೆ ಹೇಳು?" 
"ಹುಂ.. ಶ್ರಾವಸ್ತ   ನನಗೂ  ಇದೇ ಕಥೆಯನ್ನು ಸತ್ಯಘಟನೆ ಎಂಬಂತೆ ಯಾರೋ ಹೇಳಿದ್ದರು ಆದರೆ ನಾನು ನಿನ್ನಂತೆ ಅದನ್ನು ನಂಬಲಿಲ್ಲ. ನೋಡು  ಕುರು ಕುಲ ಎಂದರೆ ಏನು? ಅದೆಷ್ಟು  ಎಂತಹ ಧೀಮಂತ ದೊರೆಗಳು ಆಳಿ ಅಳಿದು ತಮ್ಮ ಗುರುತನ್ನು ಮೂಡಿಸಿ ಹೋಗಿದ್ದಾರಿಲ್ಲಿ. ಅಂತಹ ವಂಶದವರು ಹೀಗೆ ಕೀಳಾಗಿ ನಡೆದುಕೊಳ್ಳುವುದುಂಟೇ.. ಅದೂ ಅವರು ಹೇಳುತ್ತಿರುವುದು ಎಲ್ಲಿ ಎಂದಾದರೂ ಆಲೋಚಿಸಿದೆಯಾ? ತುಂಬಿದ ರಾಜ ಸಭೆಯಲ್ಲಿ.. ಅಲ್ಲೇನು ಯುವರಾಜನ ಸಮಪ್ರಾಯದವರಾದ ಪುಂಡರ ಬಳಗ ಮಾತ್ರವಿರುವುದೇ? ಹಿರಿಯರಾದ ಭೀಷ್ಮರಿಲ್ಲವೇ? ದ್ರೋಣ ಕೃಪಾದಿ ಗುರುಗಳಿಲ್ಲವೇ? ಬುದ್ಧಿಶಾಲಿಯಾದ ವಿವೇಕಿಯೂ ಆದ ವಿದುರರಿಲ್ಲವೇ? ಅಷ್ಟೇ ಏಕೆ ಸಿಂಹಾಸನದ ಮೇಲೆ ಕುರು ಕುಲ ತಿಲಕ ದೃತರಾಷ್ಟ್ರ ಮಹಾಪ್ರಭುಗಳಿಲ್ಲವೇ? ಅಷ್ಟೆಲ್ಲಾ ಜನರೆದುರು ಅಂತಹುದೊಂದು ಘಟನೆ ನಡೆದೀತು ಎನ್ನುವುದನ್ನು ಕನಸು ಮನಸಿನಲ್ಲಾದರೂ ಊಹಿಸುವುದು ಹೇಗೆ ಹೇಳು.. ಸುಮ್ಮನೆ ಆರೋಪವಷ್ಟೇ ಇದು.." 
"ಇಲ್ಲ ಗೆಳೆಯಾ.. ಹಾಗೆ ಸಾರಾಸಗಾಟಾಗಿ ಸುಳ್ಳೆಂದು ತಿರಸ್ಕರಿಸಲು ಬರುವುದಿಲ್ಲ. ನಿನಗೆ ತಿಳಿದಿದೆಯೇ ದ್ಯೂತದಲ್ಲಿ ತಮ್ಮೆಲ್ಲವನ್ನೂ ಕಳೆದುಕೊಂಡಿದ್ದಾರೆಂದುಕೊಂಡ ಪಾಂಡವರು ಮತ್ತೆ ತಮ್ಮ ವೇಷಭೂಷಣ ಆಭರಣಗಳ ಸಮೇತ ಮೊದಲಿನೆಲ್ಲಾ ಗೌರವಗಳೊಂದಿಗೆ ಹೊರಟು  ತಮ್ಮ ರಾಜ್ಯಕ್ಕೆ ಮರಳಿದ್ದಾರೆ.  ರಾಜ್ಯಭ್ರಷ್ಟರಾಗಬೇಕಾಗಿದ್ದ ಪಾಂಡವರು ತಮ್ಮದೆಲ್ಲವನ್ನೂ ಮರಳಿ ಪಡೆದದ್ದು ದ್ರೌಪದಿಗೆ ಕುರುರಾಯನಿತ್ತ ವರಗಳಿಂದಂತೆ.." 
"ಅಯ್ಯೋ .. ಇದೆಲ್ಲಾ ಬರಿದೆ ಪೊಳ್ಳು ಮಾತುಗಳು ಶ್ರಾವಸ್ತ.ನಿನಗಾರು ಇಂತಹುದನ್ನೆಲ್ಲಾ ಹೇಳಿ ದುರ್ಯೋಧನನನ್ನು ಕೆಟ್ಟವನೆಂದು ನಿನ್ನೆದುರು ಬಿಂಭಿಸುತ್ತಾರೋ ನನಗೆ ತಿಳಿಯದು. ಅಣ್ಣ ತಮ್ಮಂದಿರು ಸುಮ್ಮನೆ ಮೋಜಿಗೆಂದು ಆಡಿದ ದ್ಯೂತ ಇಂತಹದೆಲ್ಲಾ ಗಾಳಿಮಾತುಗಳಿಗೆ ಕಾರಣವಾಗಿದೆ ಎಂದು ತಿಳಿದರೆ ಪಾಪ ಯುವರಾಜನೆಷ್ಟು ನೊಂದುಕೊಂಡಾನೋ.. ಅವನಿಗೇನು ಅವನಂತಃಪುರದಲ್ಲಿ ರಾಣಿಯರ  ಕೊರತೆಯಿದೆಯೇ? ರಾಣಿಯರ ಮಾತೇಕೆ ಬಿಡು. ನಮ್ಮ ರಾಜ್ಯದ ಗಣಿಕೆಯರಷ್ಟು ಸೊಗಸುಗಾತಿಯರನ್ನು ನೀನೆಲ್ಲಾದರೂ ನೋಡಿದ್ದೀಯಾ? ಒಮ್ಮೆ ಅವರ ಬಲೆಗೆ ಸಿಲುಕಿದವರು ಪರನಾರಿಯರನ್ನು ಕಣ್ಣೆತ್ತಿ ನೋಡಲಾರರು.." 
"ಹ್ಹ ಹ್ಹ ನಂದಕ ನಿನ್ನ ಕೊನೆಯ ಮಾತಿಗಾದರೆ ನನ್ನ ಸಮ್ಮತಿಯಿದೆ. ನಾನು ನಿನ್ನೆ ಇರುಳು ಕಳೆದ ಜಾಗವಿದೆಯಲ್ಲಾ ಅದೆಂತಹ ಮೋಹಕ ಲಲನೆಯರು ಅಲ್ಲಿದ್ದಾರೆಂದರೆ ಅಬ್ಬಾ.. ಬಿಟ್ಟು ಬರಲೇ ಆಗದು ಎಂಬಷ್ಟು.. ತನು ದಣಿದರೂ ಮನ ತಣಿಯದು.. ಛೇ ..ಎಲ್ಲಿಂದೆಲ್ಲಿಗೆ ಹೋಗುತ್ತಿದೆ ವಿಷಯ.."
"ಹುಂ .. ನನಗೂ ನಿನಗೂ ಇಂತಹ "ಷಯಗಳೇ ಚೆಂದ ಮಾತನಾಡಲು. ಅದು ಬಿಟ್ಟು ರಾಜ್ಯದ ಸುದ್ದಿ, ರಾಜರ ಸುದ್ದಿಯೆಲ್ಲಾ ನಮಗ್ಯಾಕೆ ಹೇಳು ಶ್ರಾವಸ್ತ.." 
"ಅಯ್ಯೋ ನಂದಕ.. ನನಗೂ ಇಂತಹ ವಿಷಯಗಳೇ ಮೋಜೆನಿಸುವುದು. ಆದರೇನು ಮಾಡೋಣ ಹೇಳು.. ಆ ಕನಸಿನ ಲೋಕವನ್ನು ಬಿಟ್ಟು ಈ ನರಕಕ್ಕೆ ಬರಲೇಬೇಕಲ್ಲ.  ಇಲ್ಲಿ ಕೇಳು.. ನೀನು ಹೇಳಿದೆಯಲ್ಲವೇ ರಾಜನ ಸಭೆಯಲ್ಲಿ ಅಷ್ಟೂ ಹಿರಿಯರಿದ್ದು ಅನಾಚಾರವಾಗದು ಎಂದು .. ದುರ್ಯೋಧನನ ತೊಡೆ ಮುರಿಯುತ್ತೇನೆ, ದುಶ್ಯಾಸನನ ಕರುಳನ್ನು ಬಗೆಯುತ್ತೇನೆ ಎಂಬ ಭೀಮನ ರಣಕೂಗು ಕೋಟೆಯ ಗೋಡೆಗಳನ್ನು ಸೀಳಿ ಹೊರಗೆ ಅಪ್ಪಳಿಸಿದ್ದು ಬರಿದೆ ಎನ್ನುವೆಯಾ? ಅದೂ ಬಿಡು. ಐವರು ಗಂಡಂದಿರಿದ್ದೂ ದ್ರೌಪದಿ ಸಹಾಯಕ್ಕಾಗಿ ಕೃಷ್ಣನನ್ನು ಕೂಗಿದ್ದು, ಆತ ತನ್ನ ಶಲ್ಯದಿಂದಲೇ ಆಕೆಯ ಮಾನ ಮುಚ್ಚಿದ್ದು.. ಇದೆಲ್ಲವನ್ನೂ ಅರಮನೆಯ ಗೋಡೆ ಗೋಡೆಗಳು ಮಾತನಾಡುತ್ತವೆ ಎಂದಾದ  ಮೇಲೆ ಕೊಂಚವಾದರೂ ಸತ್ಯ ಇರಲೇಬೇಕಲ್ಲ.." 

"ಇಲ್ಲ ಶ್ರಾವಸ್ತ.  ಇದೆಲ್ಲಾ ಕಟ್ಟು ಕಥೆ. ನೀನು ಕೇಳುತ್ತೀ ಎಂದಾದರೆ ಹೇಳುತ್ತೇನೆ ಕೇಳು.  ನಿನಗೆ ತಿಳಿದಿಲ್ಲವೇ ಹಿರಿಯವನಾದ ದೃತರಾಷ್ಟ್ರನನ್ನು ಕುರುಡ ಎಂಬ ಕಾರಣಕ್ಕೆ ದೂರವಿಟ್ಟು ವಯಸ್ಸಿನಲ್ಲಿ ಕಿರಿಯವನಾದ  ಪಾಂಡು ರಾಜನಿಗೆ ಪಟ್ಟ

ಕಟ್ಟಿದ್ದು ಭೀಷ್ಮಾಚಾರ್ಯರೇ ಅಲ್ಲವೇ. ಋಷಿ ಶಾಪಕ್ಕೆ ಹೆದರಿ, ಮಕ್ಕಳಾಗದ ಚಿಂತೆಗೆ ಆತನೇನೋ ಪತ್ನಿಯರ ಸಮೇತ ಇಲ್ಲಿಂದ ಹಿಮಾಲಯದತ್ತ ನಡೆದ. ಮತ್ತೆ ಅರಸರಿಲ್ಲದೇ ಸಿಂಹಾಸನ ಬರಿದಾಗಬಾರದು ಎಂದು ತಾನೆ ನಮ್ಮ ಈಗಿನ ಮಹಾರಾಜರು ಪಟ್ಟಕ್ಕೆ ಬಂದದ್ದು. ದೊಡ್ಡವರ ಮಾತೇ ಇರಬಹುದು ಆದರೂ ಕೇಳುತ್ತೇನೆ  ಅಂದು ಕುರುಡನಾದವನು ರಾಜ್ಯಾಭಿಷೇಕಕ್ಕೆ ಅನರ್ಹ ಎಂದೆನಿಸಿಕೊಂಡ ದೃತರಾಷ್ಟ್ರ ಮಹಾರಾಜರು ಈಗ ಹೇಗೆ ಪಟ್ಟದಲ್ಲಿ ಕುಳಿತುಕೊಳ್ಳಲು ಶಕ್ತರಾದುದು? ಅಂದರೆ ಆಗ ಅವರಿಂದಲೂ ಸಮರ್ಥ ಇನ್ನೊಬ್ಬನಿದ್ದ ಎಂಬ ಕಾರಣಕ್ಕೆ ಪಟ್ಟ ತಪ್ಪಿದ್ದಷ್ಟೇ.. ಈಗಲೂ ಅದೇ ಹುನ್ನಾರವೇ ನಡೆಯುತ್ತಿರುವುದು. ಅದೇ ಪಾಂಡು ರಾಜನ ಮಕ್ಕಳಾದ ಇವರೈವರು ತಮ್ಮ ತಾಯೊಂದಿಗೆ ನಗರಕ್ಕೆ ಬಂದುದೇ ರಾಜ್ಯಕ್ಕೆ ಮುಳುವಾಯಿತು. ಅಲ್ಲಿಯವರೆಗೆ  ಯುವರಾಜನೆಂದೇ ಪರಿಗಣಿಸಲ್ಪಡುತ್ತಿದ್ದ ದುರ್ಯೋಧನ, ಯುಧಿಷ್ಟಿರನ  ಎದುರು ನಿಂತಾಗ ಹೋಲಿಕೆಗಳು ಪ್ರಾರಂಭವಾದವು. ಅವುಗಳೇ ಅಣ್ಣ ತಮ್ಮಂದಿರ ಪ್ರೇಮಭಾವವನ್ನು ಒಡೆದು ಪ್ರತ್ಯೇಕ ಪಂಗಡಗಳಾಗುವಂತೆ ಮಾಡಿದವು. ಇಲ್ಲದಿದ್ದರೆ ಸಮಗ್ರ ಕುರುಕುಲವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕುರು ವಂಶಜರು ಕೌರವರೇ ಅಲ್ಲವೇ. ಪಾಂಡವರು ಎಂಬ ಪ್ರತ್ಯೇಕತೆಯೇಕೆ ಅವರನ್ನು ಕರೆಯುವಲ್ಲಿ? ಅದನ್ನೂ ಹೇಳುತ್ತೇನೆ ಕೇಳು.. ಅವರು ಈಗಿರುವ ಕೌರವರಿಂದ ಹೆಚ್ಚಿನವರು, ಮೇಲ್ಮಟ್ಟದವರು ಎಂಬ ಅರ್ಥ ಬರಲೋಸುಗವೇ ಈ ಸಂಭೋದನೆ. ಪಾಂಡು ರಾಜ ಮೊದಲು ಅಭಿಕ್ತನಾದವನು. ಅವನ ಮಗ  ಯುಧಿಷ್ಟಿರ ನಮ್ಮ ಯುವರಾಜ ದುರ್ಯೋಧನನಿಂದ ಹಿರಿಯ. ಹಾಗಿದ್ದರೆ ಅವನೇ ರಾಜನಾಗಬೇಕು ಎಂಬುದು ಒಂದು ಗುಂಪಿನ ಮಾತು. ಅದನ್ನು ನಡೆಸಲೆಂದೇ ಈಗವರು ತಮ್ಮ ದಾಳವನ್ನು ಬೀಸುತ್ತಿದ್ದಾರೆ. ಅದಕ್ಕಾಗಿ ಆಗಬೇಕಾದುದು ಏನೆಂದರೆ ಯುವರಾಜ ದುರ್ಯೋಧನನನ್ನು ಖೂಳನೆಂದೂ, ಕೆಟ್ಟವನೆಂದೂ ರಾಜ್ಯದ ಜನರು ಅಂದುಕೊಳ್ಳುವಂತೆ ಮಾಡುವುದು.. ಇದಿಷ್ಟೇ ಅಲ್ಲಿ ನಡೆಯುತ್ತಿರುವುದು.." 

"ನಂದಕ ಇಲ್ಲಿ ಕೇಳು ನೀನು ಹೇಳುವ ಮಾತು ಒಂದು ಸ್ವಲ್ಪ ಸತ್ಯವಿರಲೂಬಹುದು. ಹಾಗೆಂದು ನಾನು ಕೇಳಿದ್ದೆಲ್ಲಾ ಪೂರ್ಣ ಸುಳ್ಳಲ್ಲ. ಯಾಕೆ ತಿಳಿದಿದೆಯಾ ದುರ್ಯೋಧನ ನೀನು ಹೇಳಿದಂತೆ ತುಳಿಯಲ್ಪಡುವವನೇನಲ್ಲ. ನಿನಗೆ ನೆನಪಿರಬಹುದು. ಅಂದೊಮ್ಮೆ ದ್ರೋಣಾಚಾರ್ಯರ ಶಿಷ್ಯರ ಕಲಿಕೆಯನ್ನು ಕುರುಜನರಿಗೆ ತೋರಿಸಲೆಂದೇ ಮಹಾನ್ ಉತ್ಸವವೊಂದು ನಡೆದಿತ್ತಲ್ಲ. ಅಲ್ಲಿ ಅರ್ಜುನನ ಧನುರ್ವಿದ್ಯೆಯ ಚಳಕವನ್ನು ನೋಡಿ ಪುಳಕಗೊಂಡವರೇ ಎಲ್ಲಾ.. ಊರಿಗೆ ಊರೇ ಹರುಷದಿಂದ ಬೊಬ್ಬಿರಿಯುತ್ತಿದ್ದರೆ ದುರ್ಯೋಧನಾದಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದರು.  ಆಗ ಅಲ್ಲಿ ಪ್ರತ್ಯಕ್ಷನಾದವನು ಕರ್ಣ.  ಇದೇನು ಮಹಾ ವಿದ್ಯೆಯಲ್ಲ.. ನಾನೂ ಇದನ್ನೆಲ್ಲಾ ಪ್ರದರ್ಶಿಸಬಲ್ಲೆ ಎಂದು ಎಲ್ಲರೆದುರು  ಪಂಥವನ್ನೇ  ಒಡ್ಡಿದ್ದನವ. ಆಗ ದ್ರೋಣರು ಇದು ಕೇವಲ ರಾಜಕುವರರ ವಿದ್ಯೆಯ ಪ್ರದರ್ಶಕ್ಕಿರುವ ಅವಕಾಶ. ಇಲ್ಲಿ ಆ ಅರ್ಹತೆ ಇಲ್ಲದವರಿಗೆ ಭಾಗವಹಿಸುವ ಹಕ್ಕಿಲ್ಲ ಎಂದು ಬಿಟ್ಟಿದ್ದರು. ಕರ್ಣ ತಲೆ ತಗ್ಗಿಸಿದ್ದ. ಆಗ ಇದೇ ನೀನೀಗ ಹೊಗಳುತ್ತಿರುವ ದುರ್ಯೋಧನ ಏನು ಮಾಡಿದ್ದ ನೆನಪಿದೆಯಾ? ಅಂಗ ರಾಜ್ಯವನ್ನೇ  ಕರ್ಣನ ಕೈಯಲ್ಲಿಟ್ಟು ಅವನನ್ನು ರಾಜನನ್ನಾಗಿಸಿದ. ಅದನ್ನು ಆ ಕೂಡಲೆ ಮಹಾರಾಜ ಖಂಡಿಸಬೇಕಿತ್ತಲ್ಲ.. ಆದರೆ ಹಾಗಾಗಲಿಲ್ಲ. ದೃತರಾಷ್ಟ ಯಾಕೆ ವಿರೋಧಿಸಲಿಲ್ಲ ಹೇಳು? ಅವನಿಗೆ ತನ್ನ ಕುವರರಿಂದ ತಮ್ಮನ ಮಕ್ಕಳು ಬಲಶಾಲಿಗಳಾಗುವುದು ಸಮ್ಮತವಿರಲಿಲ್ಲ.   ಅಲ್ಲಿ ನೀನು ಹೇಳಿದಂತೆ ಒಂದೇ ರಾಜ ಮನೆತನದ ಒಂದೇ ರಾಜಛತ್ರದ ಅಡಿಯಲ್ಲಿರುವ   ಕುವರರ ವಿದ್ಯಾಪ್ರದರ್ಶನ ತಾನೇ ಆಗುತ್ತಿದ್ದುದು. ಅಂದ ಮೇಲೆ ಯಾರು ವಿದ್ಯೆಯಲ್ಲಿ ಪ್ರಾವೀಣತೆಯನ್ನು ಪಡೆದಿದ್ದರೂ ಅದು ಕುಲಕ್ಕೆ ಹೆಮ್ಮೆಯ ವಿಷಯವೇ ತಾನೆ? ಹಾಗಿದ್ದಾಗ ತಮ್ಮವನನ್ನೇ ಕಡಿಮೆಯಾಗಿಸಲು ಪರಕೀಯನೊಬ್ಬನನ್ನು ಸಿಂಹಾಸನಕ್ಕೇರಿಸುವಂತಹ ಅಗತ್ಯವೇನಿತ್ತು? ಅಂದರೆ ಈ ಅಸೂಯೆಯ ಕಿಡಿ ಆಗಲೇ ಇತ್ತು ಕೌರವರಲ್ಲಿ ಎಂಬುದು ಜಾಹೀರಾದಂತೆ ಆಗಲಿಲ್ಲವೇ?" 
"ಹುಂ.. ಹೌದೇನೋ ಶ್ರಾವಸ್ತ.. ನಾನು ಅಷ್ಟು ಚಿಂತಿಸಲಿಲ್ಲ. ಆದರೂ  ಪಟ್ಟದರಸನ ಮಗ ಪಟ್ಟಾಭಿಕ್ತನಾಗುವುದೇ ಧರ್ಮವಲ್ಲವೇ? ಹಾಗಿದ್ದರೆ ದುರ್ಯೋಧನನೇ ಯುವರಾಜ. ಇನ್ನು ಮಹಾರಾಜನಾಗಬೇಕಾದವನು. ಅವನನ್ನು ಬಿಟ್ಟು ಯುಧಿಷ್ಟಿರನನ್ನು  ಯಾಕೆ ಪಟ್ಟಕ್ಕೆ ಕೂರಿಸುವ ಚಿಂತೆ?" 


"ನಂದಕ .. ಅದು ಹಾಗಲ್ಲ.  ಅರಸನಾಗಿ ಅಭಿಕ್ತನಾದವನು ಪಾಂಡು. ಅವನ ಅನುಪಸ್ಥಿತಿಯಲ್ಲಿ ರಾಜ್ಯಕ್ಕೊಂದು ರಾಜನ ಅವಶ್ಯಕತೆಗಾಗಿ ಅಷ್ಟೇ  ದೃತರಾಷ್ಟ್ರ ಪೀಠವನ್ನೇರಿದ್ದು. ಅವನು ಈಗಲೂ ರಾಜನೆಂಬ ಬಿರುದು ಬಿಟ್ಟರೆ ರಾಜ್ಯಭಾರ ಮಾಡಿದ್ದಿದೆಯೇ? ರಾಜ್ಯದ ಸಮಗ್ರ ಆಡಳಿತವಿರುವುದು ಭೀಷ್ಮಾಚಾರ್ಯರ ಕೈಯಲ್ಲೇ ಅಲ್ಲವೇ?  ದುರ್ಯೋಧನನ ಕೆಟ್ಟ ಬುದ್ಧಿ ಕುರುಡನಾದ ಮಹಾರಾಜರಿಗೆ ಕಾಣದಿದ್ದೀತು. ಕಣ್ಣಿದ್ದೂ ಕಣ್ಣು ಕಟ್ಟಿಕೊಂಡ ಗಾಂಧಾರಿ ರಾಣಿಗೆ ಕಾಣದಿದ್ದೀತು. ಆದರೆ ಅವನ ವ್ಯವಹಾರವನ್ನೆಲ್ಲಾ ಭೂತಗನ್ನಡಿಯಲ್ಲಿಟ್ಟು ಸೂಕ್ಷ್ಮವಾಗಿ ನೋಡುತ್ತಿರುವ ಭೀಷ್ಮಾಚಾರ್ಯರ ಕಣ್ಣಿಗೆ ಕಾಣದಿದ್ದೀತೇ? ಅವರು ದೃಷ್ಟಿ  ಇರುವುದು ಕೇವಲ ವರ್ತಮಾನಕ್ಕೆ ಮಾತ್ರ ಅಲ್ಲ. ಅದರಿಂದಾಚಿಗಿನ ಭವಿಷ್ಯವೂ ಅವರ ಮುದಿ ಕಣ್ಣುಗಳಿಗೆ ನಿಚ್ಚಳವಾಗಿ ಕಾಣುತ್ತಿದೆ. ದುಷ್ಟ ಬುದ್ಧಿಯ ದುರ್ಯೋಧನನಿಗೆ ಪಟ್ಟ ಕಟ್ಟುವುದೆಂದರೆ ಕುರುಕುಲದ ಕೊನೆಯನ್ನು ಈಗಲೇ ತಂದುಕೊಂಡಂತೆ ಎಂಬುದು ಅವರರಿವಿಗೂ ಬಂದಿರಬಹುದಲ್ಲವೇ?"

"ಶ್ರಾವಸ್ತ .. ಹಾಗೆ ಬಿಳಿಯದೆಲ್ಲಾ ಹಾಲಲ್ಲ ಬಿಡು. ಇದರಲ್ಲಿ ಆ ಕರಿಯ ಕೃಷ್ಣನ ಕರಾಮತ್ತು ಬಹಳವಿದೆ. ಯಾಕೆಂದರೆ ರಾಜ್ಯ ಕೌರವರ ಕೈಗೆ ಹೋದರೆ ಅವನ ಬೇಳೆಯೇನು ಇಲ್ಲಿ ಬೇಯುವುದಿಲ್ಲ. ಅದೇ ಅವನ ಪ್ರಿಯರಾದ, ಅವನ ಅತ್ತೆಯ ಮಕ್ಕಳಾದ ಕೌಂತೇಯರನ್ನಾದರೆ ಬೆರಳ ತುದಿಯಲ್ಲಿ ಕುಣಿಸಬಹುದು.  ಅದೂ ಈ ಹಿರಿಯರೆಂದು ತಲೆ ಹಣ್ಣಾಗಿಸಿಕೊಂಡ ಮಂದ ಕಣ್ಣಿನ  ಮುದುಕರಿಗೆ ಅವನ ನಯವಾದ ಮಾತುಗಳು ಮೋಡಿ ಮಾಡಿವೆ.  ನಮ್ಮಂತಹ ಯುವಕರಿಗೆ ಅವನ  ಮೋಸ ಕಾಣಿಸುತ್ತಿದೆ. ಅದನ್ನು ಹೇಳಹೊರಟರೆ ನಮ್ಮ ಸ್ವರಗಳು ಅವರ ಕಿವಿಗಳಿಗೆ ತಲುಪುವುದೇ ಇಲ್ಲ. ಆಕಸ್ಮಾತ್ ತಲುಪಿದರೂ ನಾವು ದುಷ್ಟರೆಂದೆನಿಸಿಕೊಳ್ಳುವುದಷ್ಟೇ ಆಗುವ ಲಾಭ.. ಇನ್ನು ಕೃಷ್ಣನೋ ಯುದ್ಧವಿಲ್ಲದೇ ಮಾತಿನಿಂದಲೇ ಸಕಲವನ್ನೂ ಗೆಲ್ಲಬಲ್ಲ ಜಾಣ.."

"ನಂದಕ ಅಷ್ಟು ಸುಲಭವಲ್ಲ ಈ ತಲೆ ನೆರೆತ ಹಿರಿಯರನ್ನು ಮೋಸಗೊಳಿಸುವುದು. ಅವರು ಹೊಗಳಿಕೆಗೋ, ಉಪಚಾರಕ್ಕೋ ಮರುಳಾಗಿ ಸೋಲುವವರಲ್ಲ. ಎಲ್ಲವನ್ನೂ ಪರೀಕ್ಷೆಗೊಡ್ಡಿಯೇ ಪಲಿತಾಂಶ ಪಡೆದುಕೊಳ್ಳುವವರು. ನೋಡೀಗ ಪಾಂಡವರ ಪತ್ನಿ ದ್ರುಪದನ ಮಗಳು.  ದ್ರುಪದ ದ್ರೋಣಾಚಾರ್ಯರಿಗೆ ಮಾಡಿದ ಮೋಸ. ಗುರು ದಕ್ಷಿಣೆಯಾಗಿ ಅರ್ಜುನಿಂದ ಪರಾಭವಗೊಂಡು ದ್ರೋಣಾಚಾರ್ಯನ ಕೃಪಾಭಿಕ್ಷೆಂದ ಜೀವದಾನ ಪಡೆದುಕೊಂಡವ. ಹಾಗೆಂದು ಅವನ ಮಗಳು ಕುರುಕುಲದ ಸೊಸೆಯಾದಾಗ ಈ ಹಿರಿಯರು  ಯಾರಾದರೂ ಅಲ್ಲಗಳೆದಿದ್ದಾರೆಯೇ? ದೂರೀಕರಿಸಿದ್ದಾರೆಯೇ? ಇಲ್ಲಾ ಏಕೆ ಹೇಳು. ಅವರಿಗೆ  ವಿಷಮವಿದ್ದುದು ಅವಳಪ್ಪನಲ್ಲಿ ಮಾತ್ರ. ಅದಕ್ಕೂ ಮಗಳಿಗೂ ಸಂಬಂಧವಿಲ್ಲ. ಅದೇ ನೋಡು ದುರ್ಯೋಧನನಿಗೆ ಕೋಪವಿರುವುದೋ, ಅಸೂಯೆರುವುದೋ ಪಾಂಡವರಲ್ಲಿ.  ಆದರೂ ದ್ರೌಪದಿಯನ್ನು ಅವಮಾನಿಸಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಇದೇ ನೀನು ಸ್ವಲ್ಪ ಆಗ ಹೇಳಿದೆಯಲ್ಲವೇ ಅವರಿಬ್ಬರೂ ಸಮಗ್ರ ಕುರುಕುಲದವರು ಎಂದು .. ಅದೇ ಕುರುಕುಲದ ಸೊಸೆಯನ್ನು ಅದೇ ಕುರುಕುಲದ ಮಗನೊಬ್ಬ ಅತ್ಯಾಚಾರಕ್ಕೆಳಸಿರುವುದು ತಪ್ಪಲ್ಲವೇ. ದುರ್ಯೋಧನಾದಿಗಳಿಗೆ ಬೇಕಾದುದೇನು ಗೊತ್ತೇ..? ಪಾಂಡವರು ಅವಮಾನಿತರಾಗಿ ತಾವಾಗಿ ತಾವೇ  ರಾಜ್ಯ ಬಿಟ್ಟು ಹೋಗುವಂತಹುದು. ಒಮ್ಮೆ ಜನ ಮಾನಸದಿಂದ ಅವರ  ಒಳ್ಳೆಯತನದ ನೆನಪು ಮಾಸಿ  ಮರೆಯಾದರೆ ಮತ್ತೆ ಎಲ್ಲಾ ಸುಲಭ. ಅನರ್ಹನಾದರೂ ದೃತರಾಷ್ಟ್ರ ರಾಜನಾಗಿದ್ದಾನಲ್ಲವೇ? ಹಾಗೆಯೇ ದುರ್ಯೋಧನನು ರಾಜನಾಗುತ್ತಾನೆ.  ಅವನು ನಡೆಸುವ ಕೆಟ್ಟ ಕೆಲಸಗಳ ಕುಮ್ಮಕ್ಕಿನಿಂದ ರಾಜ್ಯ ಅರಾಜಕವಾಗುತ್ತದೆ ಅಷ್ಟೇ.."

"ಅಯ್ಯೋ.. ಶ್ರಾವಸ್ತ ನೀನೀಗಾಗಲೇ ಎಲ್ಲಾ ನಡೆದೇ ಬಿಟ್ಟಿದೆಯೇನೋ ಎಂಬಂತೆ ಹೇಳುತ್ತಿರುವುದನ್ನು ಕಂಡರೆ ನಗೆ ಬರುತ್ತದೆ. ಜೊತೆಗೆ ನಿನ್ನ ಮಾತುಗಳೇ ಎಲ್ಲಾದರೂ ಸತ್ಯವಾಗಿಬಿಟ್ಟರೆ ಎಂಬ ಹೆದರಿಕೆಯೂ.." 

"ಇದು ನಡೆದು ಬಿಟ್ಟರೆ ಎನ್ನುವ ಮಾತಿಲ್ಲ ನಂದಕ.. ನಡೆದಾಗಿದೆ.. ಆ ಸತ್ಯವನ್ನು ನಾನೂ ನೀನೂ ಒಪ್ಪಿಕೊಳ್ಳಬೇಕಷ್ಟೇ. ಸತ್ಯವೆನ್ನುವುದು ಬೆಂಕಿಯ ಕೆಂಡ. ಎಲ್ಲಿ ಬಚ್ಚಿಟ್ಟರೂ ಸುಡದೇ ಬಿಡದು. ಅದೇ ನೀನೀಗ ಹೇಳಿದೆಯಲ್ಲಾ ದುರ್ಯೋಧನ ಅಂತಹವನಲ್ಲ.. ಅವನು ಪರಸತಿಯನ್ನು  ಅವಮಾನಕ್ಕೆಳಸಿದುದು ಕಟ್ಟು ಕಥೆ ಎಂದು. ಅದು ಸತ್ಯವೇ ಎನ್ನಲು ಇನ್ನೂ  ಆಧಾರವಿದೆ ನನ್ನಲ್ಲಿ. ಮೊನ್ನೆ ಪಾಂಡವರೈವರು ಸುವರ್ಣಲೇಪಿತ ರಥಗಳಲ್ಲಿ ಬಂದಿದಿಳಿದ್ದಲ್ಲವೇ? ಅದರ ಸಾರಥಿಗಳು ರಥದಲ್ಲೆ ಕುಳಿತು ಮಾಡುವುದೇನು ಎಂದು ಊರು ಸುತ್ತುತ್ತಿದ್ದರು. ಊರು ಸುತ್ತುವುದೆಂದರೆ ಗಣಿಕೆಯರ ಮನೆಯನ್ನು ಹುಡುಕುವುದೇ ಅಲ್ಲವೇ? ಅವರೂ ನುಗ್ಗಿದ್ದು  ಸೋಮಲತೆಯ ಮನೆಗೆ. ಅವಳು ಅಲ್ಲಿರದೇ ಅರಮನೆಗೆ ಹೋಗಿದ್ದ ಕಾರಣ ಮನೆಯ  ಹೊರಗಿನ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದರಂತೆ. ಆಗ ದುರ್ಯೋಧನನ ಸೈನಿಕರು ಬಂದು ಅವರನ್ನು ಹೆಡೆಮುರಿಕಟ್ಟಿ ಎಳೆದೊಯ್ದರಂತೆ. ಸೋಮಲತೆಯ ವೃದ್ದಮಾತೆ ಇದನ್ನೆಲ್ಲಾ ಹೇಳಿದಳು. ಯಾಕೆ ಅವರನ್ನು ಒಯ್ದರು ಬಲ್ಲೆಯಾ?  ಪಾಂಡವರು ಮತ್ತೆ ರಥಗಳ ಮೇಲೆ ಕುಳಿತು ತಮ್ಮ ರಾಜ್ಯಕ್ಕೆ ಹೋಗುವುದಿಲ್ಲ ಎಂಬುದು ಮೊದಲೆ ನಿಶ್ಚೈಸಲ್ಪಟ್ಟಿತ್ತು . ಶಕುನಿಯ ಹಂಚಿಕೆ ಇದ್ದುದು ಕೇವಲ ಮೋಸದ ದ್ಯೂತದಾಟದಲ್ಲಿ ಮಾತ್ರ ಅವರ ಸೋಲಲ್ಲ.. ಅವರ ಒಳಗೆ ಮತ್ತೆಂದೂ ಗೆಲುವಿನ ಮೊಳಕೆಯೇ ಏಳಬಾರದು, ಅವರು ಸೋತು ಕಾಡು ಸೇರಬೇಕು, ರಾಜಕುವರಿ ದ್ರೌಪದಿ ತಮ್ಮ  ತೊತ್ತಾಗಿ ಅಂತಃಪುರದಲ್ಲಿರಬೇಕು ಎಂಬುದೇ ಅವರ ಆಸೆಯಾಗಿತ್ತು. ಇನ್ನೂ ಒಂದು ಗೌಪ್ಯ ಸಂಗತಿಯೂ ನನಗೆ ತಿಳಿದಿದೆ ಕೇಳು. ಹೆಂಗಳೆಯರಿಗೆ ಅಲಂಕಾರ ಎಂದರೆ ಅತಿ ಪ್ರಿಯ ಎಂದು ನೀನೂ ಒಪ್ಪುತ್ತೀಯಾ ತಾನೇ?  ಅದೂ ಪಾಂಡವರೈವರ  ಮಡದಿ ಎಂದ ಮೇಲೆ ಅಲಂಕಾರ ಇಲ್ಲದೇ ಹೊರಗಡಿಟ್ಟಾಳೇ?   ಮೊನ್ನೆ ಅವರು ಮರಳಿ ರಥವೇರುವಾಗ ಅವಳು ಬಿಚ್ಚಿದ ಮುಡಿಯಲ್ಲಿದ್ದಳಂತೆ. ಅವಳ ಮುಡಿಯೆಳೆದು ತುಂಬಿದ ಸಭೆಗೆ ತಂದ  ದುಶ್ಯಾಸನನ ಕರುಳು ಬಗೆದು ಆ ನೆತ್ತರನ್ನು  ಎಣ್ಣೆಯಾಗಿಸಿಯೇ  ಅವಳು ಮುಡಿ ಕಟ್ಟುವುದಂತೆ.  ಈಗ ಹೇಳು ಆ ಹೆಣ್ಣುಮಗಳದ್ದೇನು ತಪ್ಪು. ಈ ಕುಲದ ಸೊಸೆಯಾಗಿ ಬಂದದ್ದೇ?  ಎಲ್ಲರೂ ಒಂದೇ ಕುಲದ ಅಡಿಯಲ್ಲಿ ಬರುವಾಗ ಒಬ್ಬನ ಸೋಲು ಇನ್ನೊಬ್ಬನ ಸೋಲು ಆಗುವುದಿಲ್ಲವೇ? ಅವಮಾನ ಎನ್ನುವುದು ವ್ಯಕ್ತಿಯೊಬ್ಬನ  ವೈಯುಕ್ತಿಕ ನೆಲೆಯಲ್ಲಿ ಆಗದೇ ಇಡೀ ಸಮೂಹವೇ ಅದನ್ನು ಅನುಭವಿಸುವುದಿಲ್ಲವೇ? ಕುರುಕುಲದ ರಾಜಭವನದಲ್ಲಿ ಹೀಗೆ ನಡೆಯಿತಂತೆ ಎಂದರೆ ಅದು ಕೇವಲ ದ್ರೌಪದಿಯೊಬ್ಬಳ ಅವಮಾನ ಮಾತ್ರವೇ ಅಲ್ಲವಲ್ಲ.." 

"ಹೌದು ಶ್ರಾವಸ್ತ. ನಾನೇನೋ ಆಗ ಚಿಕ್ಕಪ್ಪ ಆಹುಕ ಏನೂ ಹೇಳಲಿಲ್ಲವೆಂಬುದರಿಂದ ಅಲ್ಲೇನೂ ನಡೆದಿಲ್ಲ ಎಂದೇ ಅಂದುಕೊಂಡೆ. ಆದರೀಗ ತಿಳಿಯುತ್ತದೆ ಅವನ ಮೌನದ ಹಿಂದೆ ಇದ್ದುದು ಕುರುಕುಲದ ಮಾನ ಹೋಗಬಾರದೆನ್ನುವ ಕಳಕಳಿ. ಅವನ ಮೌನದ ಹಿಂದೆ  ಇದ್ದುದು ಒಂದು ಒಳ್ಳೆಯದಲ್ಲದ ನಡೆ ಮುಂದಿನ ಜನಾಂಗಕ್ಕೆ ತಿಳಿಯಬಾರದ ಕಾಳಜಿ. ಅಥವಾ ಅವನ ಮೌನದ  ಹಿಂದೆ  ಇದ್ದುದು ಭಯದ ಹೊದಿಕೆ..  ಆದರೆ ಇಂತಹ ಮೌನವೂ ಹೇಗೆ ಘಾಸಿಮಾಡುತ್ತದೆ ನೋಡು.. ಒಂದೇ ಮೊಗ ಹೊಂದಿದ ಸತ್ಯಕ್ಕೆ ಇನ್ನೊಂದು  ಮುಖವಾಡವನ್ನೇರಿಸುತ್ತದೆ.  ಅದು ಸುಳ್ಳೇ ಆಗಿರಬೇಕೆಂದೇನೂ ಇಲ್ಲ.. ಸತ್ಯವಲ್ಲ ಅಷ್ಟೇ..  ಒಂದು ನಾವು ನಂಬಿದ ಸತ್ಯ ಇನ್ನೊಂದು ನಾವು ನಂಬಲು ಸಾಧ್ಯವಿಲ್ಲದ ಸತ್ಯ.  ಈ ರಾಜ್ಯದ, ರಾಜಕಾರಣದ ಒಳ ಮರ್ಮವನ್ನು ನಾವು ತಿಳಿದಿರುವೆವೇ? ನಾವು ಜನ ಸಾಮಾನ್ಯರು. ನಮ್ಮದೋ ಮೂರು ಹೊತ್ತಿನ ಹೊಟ್ಟೆಯ ಚಿಂತೆಯಷ್ಟೇ ಇರುವ ಬದುಕು. ಇದು ಹಾಗಲ್ಲ. ಹೊಟ್ಟೆ ತುಂಬಿದವರ ಬದುಕು. ಹೊರಗಿನಿಂದ ನೋಡಿದರೆ ಎಲ್ಲಾ ಇದೆ. ಉಂಡುಟ್ಟು ನಗು ನಗುತ್ತಲೇ ಸುಖವಾಗಿ ಜೀವನ ಕಳೆಯಬಹುದಾದದ್ದು. ನಮ್ಮ ಆಶೆಗಳೂ ಅಂತಹ ಬದುಕನ್ನು ಪಡೆಯುವುದರತ್ತಲೇ ಇರುತ್ತವೆ ಅಲ್ಲವೇ.. ಆದರೀ ರಾಜಕಾರಣ ನೋಡು. ಇದು ನಮಗರ್ಥವಾಗುದು ಅಷ್ಟರಲ್ಲೇ ಇದೆ.ಇಲ್ಲಿ ಬಂಧಗಳಿಲ್ಲ, ಬೇಡಿಗಳಿಲ್ಲದೇ  ಬಂಧನಗಳಿವೆ.  ನಮಗೇಕೆ ದೊಡ್ಡವರ ಸುದ್ದಿ ಎಂದು ಸುಮ್ಮನಿದ್ದುಬಿಡಬಹುದೇ.. ಇರಬಹುದೇನೋ.. ನಮ್ಮ ಪಾಡಿಗೆ ನಮ್ಮನ್ನು ಇರಗೊಟ್ಟರೆ. ಹಾಗಾಗುವುದು ಸಾಧ್ಯವೇ ಇಲ್ಲದ ಸಂಗತಿ ಅಲ್ಲವೇ.. ಯಾಕೆಂದರೆ ಒಮ್ಮೆ ಪಂಗಡಗಳಾಯಿತು ಎಂದರೆ ಜನಬಲದ ಅವಶ್ಯಕತೆ ಬಿದ್ದೇ ಬೀಳುತ್ತದೆ. ಜನಬಲಗಳು ಎರಡೂ  ಕಡೆಯಲ್ಲಿ ಸೇರ್ಪಡೆಗೊಂಡರೆ ಅಭಿಪ್ರಾಯ ಬೇಧಗಳಿಂದ ಸಂಘರ್ಷವಾಗುವುದು ಕೂಡಾ ನಿಶ್ಚಿತವೇ.. ಯುದ್ಧವೆಂದಾದರೆ  ಈಗ ಗೆಳೆಯರಾಗಿರುವ ನೀನೂ ನಾನೂ ವಿರುದ್ಧ ದಿಕ್ಕಿನಲ್ಲಿ ನಿಂತು ಕತ್ತಿ ಹಿರಿಯುತ್ತೇವೆ. ಬಾಣಗಳಿಂದ ಘಾಸಿಗೊಳಿಸುತ್ತೇವೆ.  ನಮ್ಮ ಸಂಖ್ಯೆ ಕಡಿಮೆಯಾದಷ್ಟೂ ರಾಜನ ಸೋಲಷ್ಟೇ.. ಆದರೆ ರಾಜನ ಗೆಲುವಿನಲ್ಲಿ ನಮಗೇನೂ ಪಾಲಿಲ್ಲ.."

"ಅದೇನೋ ನಿಜ ಗೆಳೆಯಾ.. ಆದರೆ ಒಂದು ವೇಳೆ ಯುದ್ಧವೇ ಆಗುವುದಾದಲ್ಲಿ ನಾವ್ಯಾಕೆ ನ್ಯಾಯ ಯಾವುದು ಎನ್ನುವ ಕಡೆಗೇ ಹೋಗಬಾರದು?  ನಮ್ಮ ಹೊಟ್ಟೆಯ ಚಿಂತೆಯನ್ನು ನಾವೇ ನಿವಾರಿಸಿಕೊಳ್ಳುವವರಾಗಿರುವ ಕಾರಣ ಯಾವ ಅನ್ನದ ಋಣ ನಮ್ಮನ್ನು ಅನ್ಯಾಯದೆಡೆಗೇ ನಿಲ್ಲಲು ಪ್ರೇರೇಪಿಸೀತು?  ನಮ್ಮಂತೆ ರಕ್ತ ಮಾಂಸಗಳಿಂದ ಕೂಡಿದ ನಮ್ಮಂತೆಯೇ ಕಾಮಕ್ರೋಧಾದಿಗಳನ್ನು ಮೋಹಿಸುವ ರಾಜನನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸುವ ಹುಚ್ಚಾಟವೇಕೆ? ಅದರ   ಬದಲು ಪ್ರಪಂಚದ ನಿಯಾಮಕನನ್ನೇ ನಂಬಿದರೇ ಒಳಿತಲ್ಲವೇ.   ಆತ ನಾವು ಸತ್ಯದ ಕಡೆಗೇ ನಿಂತರೆ ಹೆಚ್ಚು ಸಂತಸ ಪಡಲಾರನೇ?" 

"ಹೌದು ಶ್ರಾವಸ್ತ .. ನಮ್ಮ ನೆರಳು ನಮಗೇ ಕಾಣದಂತಹ ಹೊತ್ತಿದು.    ನನಗಿನ್ನೂ ಸತ್ಯವನ್ನು ಒರೆ ಹಚ್ಚಲಿದೆ.  ನಾನು ಕಂಡುಕೊಳ್ಳುವ ಸತ್ಯ ನಿನ್ನ ಸತ್ಯದೊಂದಿಗೆ ಸಮೀಕರಿಸುತ್ತದೆ ಎಂದಾದರೆ ಯುದ್ಧಭೂಮಿಯಲ್ಲಿ ನಾವಿಬ್ಬರೂ ಒಂದೇ ವೈರಿಯನ್ನು ಎದುರಿಸುತ್ತೇವೆ.  ಈ ಮಾತಿನಲ್ಲಿ ಎಳ್ಳಿನಿತೂ ವ್ಯತ್ಯಾಸವಿಲ್ಲ... ಅರೆರೇ..  ಮಾತಿನಲ್ಲಿ ಹೊತ್ತು ಹೋಗಿದ್ದೇ ತಿಳಿಯಲಿಲ್ಲ ನೋಡು.. ಕತ್ತಲೇರುತ್ತಿದೆ.. ಮನೆಯ ಕಡೆಗೆ ಬರುವೆಯಾದರೆ ಬಾ.. ಉಂಡು ಹೋಗಬಹುದು.. ನಿಂತೂ ನಿಂತೂ ಕಾಲುಗಳು ಆಯಾಸಗೊಂಡಿವೆ.." 

"ಇಲ್ಲ ನಂದಕ..  ನಾನೂ ನನ್ನ  ಮನೆಯ ಕಡೆಗೆ ಅವಸರವಾಗಿಯೇ ನಡೆಯಬೇಕು.. ಹೇಳಲು ನಿನ್ನಲ್ಲೇನಿದೆ ಮುಚ್ಚುಮರೆ ..  ನಿನ್ನೆ ಇಡೀ ದಿನ ಗಣಿಕೆಯರ ಸಂಗದಲ್ಲಿ   ಹೊತ್ತು ಕಳೆದದ್ದರಿಂದ  ಮನೆಯೊಳಗೆ ಮುನಿಸಿಕೊಂಡಿರುವ ಮಡದಿಯನ್ನು ಸಲ್ಲಾಪಕ್ಕೆಳೆದು ಸಮಾಧಾನಿಸಬೇಕು.. ಬರುತ್ತೇನೆ ಗೆಳೆಯಾ.. ಇನ್ನೊಮ್ಮೆ.."


-- 

Monday, January 26, 2015

ಪ್ರೇಮವೆನಲು ಹಾಸ್ಯವೇ ..




ಬೀಸುವ ಗಾಳಿಯಲೆಗೆ  
ಕರಗುವ ಸುಮ ಸೌರಭದಂತೆ 
ಒಂದಾಗು  ಬಾ  ಎನ್ನಲ್ಲಿ  
ಬಾಯಾರಿ ಬಂದಿಹೆಯೇನು 
ನೀಗುವೆನು  ದಾಹವ
ತುಂಬಿ ಪ್ರೀತಿಯ ಮಾತಿನಲ್ಲಿ 

ಕಲ್ಲು ಮುಳ್ಳುಗಳುಂಟು 
ಜೀವನದ ದಾರಿಯಲಿ 
ಕಾಲೆಡವದಂತೆ ಹಿಡಿ ನನ್ನ ಕೈ 
ನೋಡೋಣ ಬಾನಿನ 
ಮಿನುಗುವ ಚಿಕ್ಕೆಗಳ 
ಓಹೋ .. ತಗಲಿತೇನು   ಮೈಗೆ ಮೈ 

ದುಃಖದಲಿ  ಬೆಂದಾಗ 
ಹನಿಗಣ್ಣಾಗಿ   ದೂರ ನಿಲ್ಲದಿರು
ನಿನ್ನ ಚೆಲು ಮೊಗವ ಹಾಗೆ  ಮರೆಸಿ 
ತೆರೆದಿಹುದು  ಎದೆಯ ಕದ 
ತುಂಬು ತೋಳುಗಳ ಚಾಚಿ 
ಬರಬಾರದೇ ಬಳಿಗೆ ಕನಿಕರಿಸಿ  

ಬದಲಾಯಿಸಲಾರದ ಬದುಕು 
ಕೊಟ್ಟಷ್ಟು ಸಾಕು ಬಿಡು 
ಸಿಗದ ದ್ರಾಕ್ಷೆಯ ಚಿಂತೆ ನಮಗದೇಕೆ  
ಬೆರಳುಗಳ ಹೆಣೆದುಬಿಡು 
ಸಾಗುವೆಡೆ  ಹೆಜ್ಜೆಯಿಡು 
ಮನದ ಮಾತಿಗೆ ಬೇರೆ ಸಾಕ್ಷಿ ಬೇಕೇ 

Thursday, January 8, 2015

ಕೃಷ್ಣೇಗೌಡರ ಆನೆ


ಮನುಷ್ಯ ಸ್ವಭಾವವೇ ಹೀಗೆ. ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನೋಡುವುದು, ತನ್ನ ತಿಳುವಳಿಕೆಯ ವ್ಯಾಪ್ತಿಯನ್ನೇ ಸರಿ ಎಂದುಕೊಳ್ಳುವುದು, ತಪ್ಪುಗಳು ಘಟಿಸುವುದೇನಿದ್ದರೂ ಪರರಿಂದ ನಾನ್ಯಾವತ್ತೂ ಮಿಸ್ಟರ್ ರೈಟ್ ಅಂತಲೇ ಅಂದುಕೊಳ್ಳುವುದು. ಆದರೂ ಒಮ್ಮೊಮ್ಮೆ ತಪ್ಪುಗಾರನಾಗಲೇಬೇಕಾಗಿ ಬಂದಾಗ ಅದನ್ನು ತನ್ನ ತಪ್ಪು ಎಂದು ಒಪ್ಪಿಕೊಳ್ಳದೆ ಇನ್ನೊಬ್ಬರ ಮೇಲೆ ನಯವಾಗಿ ಜಾರಿಸಿಬಿಡುವುದು. ಅದೂ ವಿರೋಧಕ್ಕೆ ಎಡೆಯಿಲ್ಲದಂತೆ ..
ಅಂಕಪರದೆ ಮೇಲೇರಿದೊಡನೇ ಕಥೆಯೊಂದು ಶುರುವಾಗುತ್ತದೆ.  

ಇದರಲ್ಲೂ ಒಬ್ಬ ಆಮ್ ಆದ್ಮಿ ಇದ್ದಾನೆ. ಸಮಾಜದ ಓರೆಕೋರೆಗಳನ್ನು  ನೇರವಾಗಿಸುವ ಮನಸ್ಸು ಇದ್ದರೂ ಅದನ್ನು ಆಗಗೊಡದಂತೆ ಮಾಡುವ  ವ್ಯವಸ್ಥೆಗೆ ಬಲಿಯಾಗಲೇ ಬೇಕಾದ ಅನಿವಾರ್ಯತೆ ಅವನದ್ದು. 
ಹಾಳಾದ ತನ್ನ ಹಳೇ ಜೀಪನ್ನು ಸರಿ ಮಾಡುತ್ತಾ ಕುಳಿತಿದ್ದವನ ಬಳಿ ಬಂದವ ಲೈನ್ ಮ್ಯಾನ್. ಅವನ ಗಮನ ಸೆಳೆಯಲು ಬಾರದಿರುವ ಕೆಮ್ಮನ್ನು ಬರಿಸಿಕೊಳ್ಳುತ್ತಾನೆ. ಕತ್ತೆತ್ತಿ ನೋಡಿದವನ ಹತ್ತಿರ  ತನ್ನ ಕಷ್ಟಗಳನ್ನು ಬಗೆ ಬಗೆಯಾಗಿ ಬಣ್ಣಿಸುತ್ತಾ  ಆ ಹಾಳು 'ಕೃಷ್ಣೇಗೌಡರ ಆನೆ'ಯ ದೆಸೆಯಿಂದ ತಾನು ಅನುಭವಿಸುತ್ತಿರುವ ಅವಸ್ಥೆಗಾಗಿ ಆತ ಮರುಕಪಡುವಂತೆ ಮಾಡುತ್ತಾನೆ. ಮತ್ತು ತನಗೀಗ ಅವಶ್ಯ ಬೇಕಾದ  ಕೊಡಲಿಯ ಬೇಡಿಕೆಯನ್ನು ನಯವಾಗಿ ಇಡುತ್ತಾನೆ.


ಈಗ ' ಆಮ್  ಆದ್ಮಿ' ಕಥೆಗಾರನಾಗುತ್ತಾನೆ. ಹೇಗೆ ಕೃಷ್ಣೇಗೌಡರ ಆನೆ ನಮ್ಮೂರಿಗೆ ಬಂತು ಎನ್ನುವಲ್ಲಿಂದ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾನೆ. 
ರಾಜ ಮಹಾರಾಜರ ತಲೆ ಮೇಲೆ ಕೈಟ್ಟು ಆಶೀರ್ವಾದ  ಮಾಡುವುದು ಬಿಟ್ಟರೆ ಬೇರೇನೂ ಮಾಡದ   ಮಠವೊಂದು ತನ್ನ ಬಳಿ ಇರುವ ಆನೆಯನ್ನು ಅದರ ಕೊರತೆಗಳನ್ನು ಮುಚ್ಚಿಟು , ಕುಡುಕ ಮಾವುತನನ್ನು ಸರಿಪಡಿಸಲಾಗದೇ  ಸಿಕ್ಕ ಹಣಕ್ಕೆ ಮಾರುತ್ತದೆ. ಅದನ್ನು ಕೊಂಡುಕೊಂಡ ಮನುಷ್ಯನು ಕೂಡಾ ಸ್ವಾರ್ಥಿಯೇ.. 
ಘಟ್ಟದ ಮೇಲೆ ಬೆಂಕಿಪೆಟ್ಟಿಗೆಗಾಗಿ ಮರ ಕಡಿಯುವ ಕಂಪೆನಿಯೊಂದು ಗುತ್ತಿಗೆಗೆ ಕಾಡನ್ನು ಕಡಿಯುವ ಕೆಲಸ ಮಾಡಲಿದ್ದು ಅಲ್ಲಿ  ಕಡಿಯುವ ಮರ ಸಾಗಿಸಲು ತನ್ನ ಆನೆಯನ್ನು ಬಾಡಿಗೆ ಕೊಟ್ಟು ಹಣ ಪಡೆಯುವ ಹಂಚಿಕೆ ಅವನದ್ದು. 
ಆದರೆ  ಮಠದಲ್ಲಿ ಕೊಟ್ಟದ್ದನ್ನು ತಿಂದು ಬೆಳೆದ ಆನೆ ಇಲ್ಲೂ ಬೇಡಿ ಬದುಕುವುದನ್ನೇ ವೃತ್ತಿಯಾಗಿಸುತ್ತದೆ.  ತಾನು ನಡೆದದ್ದೇ ದಾರಿ ಎಂಬಂತೆ ಮೂಡಿಗೆರೆ ಬೀದಿ ಬೀದಿಯಲ್ಲಿ ಸುತ್ತುತ್ತದೆ. ಅವರಿವರು ಕೊಟ್ಟದ್ದನ್ನು ತಿಂದು ಬದುಕುತ್ತದೆ. ಆ ಊರಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ತನ್ನ ಸಹಜ ನಡೆಂದ ತನಗೆ ತಿಳಿಯದಂತೆ ತಾನೇ ಹೊಣೆಗಾರನಾಗುತ್ತದೆ. ಕರೆಂಟ್ ಲೈನಿನ ಮೇಲೆ ಮರ ಬೀಳುವುದು, ಯಾವತ್ತೋ ಹಾಕಿದ್ದ ಕಂಬಗಳು ಆನೆಯ ಬೆನ್ನು ತುರಿಸುವ ಕ್ರಿಯೆಂದ ಮುರಿದು ಬೀಳುವುದು, ಅಂಗಡಿಯೊಂದನ್ನು ದೂಡಿ ಹಾಕುವುದು, ಕುರಿಗಳ ಶೆಡ್ಡಿನ ಮೇಲೆ ಮರ ಬೀಳಿಸುವುದು, ಇಷ್ಟು ಸಾಲದು ಎಂಬಂತೆ ಲಾರಿಯನ್ನು ಅಡ್ಡ ಹಾಕಿ ಬೀಳಿಸಿ ಅದರ ಡ್ರೈವರ್ ಸಾಯುವಂತೆ ಮಾಡುವುದು.. ಹೀಗೆ ಸರಣಿ ಪ್ರಕರಣಗಳು ನಡೆಯುತ್ತಾ ಹೋಗುತ್ತವೆ. ಎಲ್ಲರ ಬಾಯಲ್ಲಿಯೂ ಆನೆಯದ್ದೇ ಸುದ್ದಿ. 


ಕೇವಲ ಮಾತಿನ ಪೌರುಷದಲ್ಲಿ ಎಲ್ಲವನ್ನೂ ವಿರೋಧಿಸುವ ಶ್ರೀಸಾಮಾನ್ಯ ಯಾವಾಗ ತಾನು ಘಟನೆಗಳಿಗೆ ಸಾಕ್ಷಿಯಾಗಿ ವಿವರಣೆ ನೀಡುವ ಹೊಣೆ ಹೊರಬೇಕಾಗುತ್ತದೋ  ಆಗ ಮೆಲ್ಲನೆ ಅಲ್ಲಿಂದ ಮರೆಯಾಗಿಬಿಡುತ್ತಾನೆ. ಆದರೆ  ಅದೇ ಘಟನೆಯ ಬಗೆಗೆ ರೆಕ್ಕೆ ಪುಕ್ಕ ಹಚ್ಚಿ ಗಾಳಿಯಲ್ಲಿ ಹಾರಬಿಡುವಾಗ ತಮ್ಮ ಪಾಲನ್ನು ದಾರಾಳವಾಗಿ ಸೇರಿಸುತ್ತಾ ಹೋಗುತ್ತಾನೆ. 
ನಗು ಬರಿಸುವಂತೆ ಕಥೆ ಮುಂದುವರಿಯುತ್ತಾ ಹೋದಂತೆ ಆಳದಲ್ಲಿ  ಚಿಂತನೆಯನ್ನು ಮೂಡಿಸುತ್ತಾ ಹೋಗುತ್ತದೆ. ವ್ಯವಸ್ಥೆಗಳನ್ನು ಎದುರಿಸಿ ಬದಲಿಸಲು ಒಗ್ಗೂಡದ ನಾವುಗಳು ಅದರ ತಣ್ಣಗಿನ ಕ್ರೌರ್ಯಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಾಗಲು ರೋಧಿಸುವುದನ್ನು ಬಿಟ್ಟು ಇನ್ನೇನೂ ಮಾಡಲಾರದೆ ಅದರ ಸುಳಿಯಲ್ಲಿ ಮುಳುಗುತ್ತಾ ಹೋಗುವುದನ್ನಿಲ್ಲಿ ಕಾಣಬಹುದು. 
ಸರಕಾರದಿಂದ ಸಾಮಾನ್ಯ ಪ್ರಜೆಗಳ ಸಹಾಯಕ್ಕೆಂದು ರಚಿಸಲ್ಪಟ್ಟ,  ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾದ ವ್ಯವಸ್ಥೆಗಳು ಪ್ರತಿಷ್ಟೆಯನ್ನು ಮುಂದಿಟ್ಟು  ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುತ್ತಾ ಹೋಗುತ್ತವೆ. ಎಲ್ಲಾ ನ್ಯೂನತೆಗಳಿಗೂ ಇನ್ನೊಬ್ಬನನ್ನು ಬೆಟ್ಟು ಮಾಡುತ್ತಾ ಹೋಗುತ್ತಾರೆ..  ವಿಚಾರಗಳು  ಸರಿ ತಪ್ಪುಗಳ ವಿಮರ್ಶೆಯ ಒಳಗೂ ಸಿಗದೆ ಮನುಷ್ಯನ ಜೀವ ಅಗ್ಗವಾಗುತ್ತದೆ. ವ್ಯವಸ್ಥೆ ಅವನ ಕೊರಳಿನ ಹಗ್ಗವಾಗುತ್ತದೆ. 


ಕಥೆ ಹೇಳುವವನು ಮೌನವಾಗುತ್ತಾನೆ ..
 ಆದರೆ ದುರಂತದಲ್ಲಿ ಕೊನೆಯಾದಂತೆ ಕಾಣುವ ಕಥೆ ಇಲ್ಲಿ ನಿಲ್ಲದೆ ಮುಂದುವರಿಯುತ್ತಾ ಹೋಗುತ್ತದೆ. ಬಹುಷಃ  ಪ್ರಪಂಚದ  ಕೊಟ್ಟ ಕೊನೆಯ ಮನುಷ್ಯ  ತಾನಾಗಿ ಹೊದ್ದು ಮಲಗಿದ ದಬ್ಬಾಳಿಕೆಯ ಹೊದಿಕೆಯನ್ನು ಕಿತ್ತೆಸೆಯುವವರೆಗೂ ಇದು ಮುಂದುವರಿಯುತ್ತಲೇ ಇರುತ್ತದೆ.

ಕಥೆಗಳು, ನಾಟಕಗಳು ಇದರಲ್ಲೆಲ್ಲಾ ಪಾತ್ರಗಳು ನಾಯಕ, ಖಳನಾಯಕ, ನಾಯಕಿ ಅಂತೆಲ್ಲಾ ಮನುಷ್ಯ ಸ್ವಭಾವಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಕಥೆಯೇ ನಾಯಕನಾಗುವ ಮೂಲಕ  'ಕೃಷ್ಣೇಗೌಡರ ಆನೆ' ಪಾತ್ರದಾರಿಗಳ ಕೆಲಸವನ್ನು ಹಗುರಗೊಳಿಸುತ್ತದೇನೋ ಅನ್ನಿಸಿತು. ತೇಜಸ್ವಿಯವರ ಕಥೆಗಳ ಮೋಡಿಯೇ ಅಂತಹದು. ಸುಮ್ಮನೇ ಓದುವಾಗಲೇ ಅದು ನಿಮ್ಮನ್ನು  ಕಾಡು ಮೇಡು ಅಲೆಸುವ, ನೀವೂ ಕಥೆಯೊಳಗೆ ನುಗ್ಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಶಕ್ತಿಯುಳ್ಳದ್ದು. ಅದನ್ನು ನಾಟಕವಾಗಿ ಒಂದು ಚೌಕಟ್ಟಿನೊಳಗೆ ಕೂರಿಸಿದಾಗ ಆ ಅಗಾಧತೆಯನ್ನೆಲ್ಲೋ ಸ್ವಲ್ಪ ಕಳೆದುಕೊಂಡ ಅನುಭವವಾಗುವುದು ಸತ್ಯ. 
 ಆದರೂ ನಗು ಉಕ್ಕಿಸುತ್ತಲೇ ಅಳು ತರಿಸುವ, ದುರಂತವಾದರೂ ಸುಖಾಂತದ ಬಯಕೆ ಮೂಡಿಸುವ ಇಂತಹ ಕಥೆಯ ಆಶಯ ನಮ್ಮೊಳಗೆ ಇಳಿಯುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾದದ್ದೇ ಅದರ ಹೆಚ್ಚುಗಾರಿಕೆ ಎನ್ನಬಹುದು.