Pages

Total Visitors

Saturday, June 30, 2012

* ವಿಪರ್ಯಾಸ


ಒಂದು ಹೊಸ ಚಂದ್ರನ 
ಉದಯವಾಯಿತು 
ನಡುವೆ ಮೋಡದ ಆಣೆಕಟ್ಟು .........

ರಾಶಿ ರಾಶಿ ನಕ್ಷತ್ರಗಳ ಮಡಿಲಿಗೆ 
ತುಂಬಿಸಿತ್ತು
ಕತ್ತಲೆಯ ಪಕ್ಕಕ್ಕಿಟ್ಟು ...........

ಸಂತಸಕ್ಕೆ ರೆಕ್ಕೆ 
ಮೂಡಿಸಿತು 
ಹಾರಲು ಆಗಸವ ಕಿತ್ತಿಟ್ಟು ..........

ಬಾಳ ಕಡಲು ಗಾಳಿಯನ್ನೆಲ್ಲ
ದೂರಸರಿಸಿತ್ತು 
ನನ್ನ ಹಾಯಿ ದೋಣಿಯಲ್ಲಿಟ್ಟು ........

ಬದುಕು ದುಃಖವನ್ನೆಲ್ಲ 
ಕೊಂಡೊಯ್ದಿತು 
ನನಗೊಂದು ಅಳುವ ಹೃದಯವನಿತ್ತು ....


Monday, June 25, 2012

ಕಾಡುವಂತ ಗೆಳೆಯ ಬೇಕು..





ಪ್ರತಿ ಕ್ಷಣವೂ ರಚ್ಚೆ ಹಿಡಿದ ಪುಟ್ಟ ಮಗುವಿನಂತೆ ನನಗೇ ಜೋತು ಬೀಳುವ ಇವನು ಇವತ್ತು ಹೀಗೆ ತಣ್ಣಗೆ ಮಲಗುವುದು ಎಂದರೆ.. 

ಪಾದರಸದಂತೆ ಚುರುಕಾಗಿದ್ದವನು, ಈಗ ಕೆಲವು ದಿನಗಳಿಂದ ಯಾಕೋ ಹೀಗೇ.. ನಾನಾಗಿ ಮಾತನಾಡಿದರೆ ಬೇಕೋ ಬೇಡವೋ ಎಂಬ ಉತ್ತರ.. ಕೆಲವೊಮ್ಮೆ ಇವನೇನು ಹೇಳುತ್ತಿದ್ದಾನೆ ಎಂದು ನನಗರಿವಾಗದಂತೆ ಅಸ್ಪಷ್ಟ.. ಒಮ್ಮೊಮ್ಮೆ ಸುಮ್ಮನೆ ಕುಳಿತನೆಂದರೆ ಎಷ್ಟು ಮಾತನಾಡಿಸಿದರೂ ಮಾತನಾಡಲಾರ..  ತನ್ನಷ್ಟಕ್ಕೆ ತಾನೇ ಸರಿ ಹೋದಾನು ಎಂದು ನನ್ನದೇ ಚಿಂತೆಗಳಲ್ಲಿ ಮುಳುಗಿ ಇವನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. 

ಇಂದು ಹತ್ತಿರವಿದ್ದವನನ್ನು ತಟ್ಟಿ ಎಬ್ಬಿಸಹೋದರೆ ಕೊರಡಿನಂತೆ ಸುಮ್ಮನೆ ಬಿದ್ದುಕೊಂಡಿದ್ದ.ನನಗೂ ಇವನ ಸಿಟ್ಟು ಸೆಡವು ನೋಡಿ ಬೇಸರವಾಗಿತ್ತು. ಕೊಂಚ ಜೋರಾಗಿ ಅಲುಗಾಡಿಸಿದೆ.ಉಹೂಂ.. ಯಾವುದೇ ರೀತಿಯ ಸ್ಪಂದನವಿಲ್ಲ.. 

ಕಂಡವರೆಲ್ಲ ಹೇಳುತ್ತಿದ್ದರು.. ಸಾಕೇ..  ಅದೆಷ್ಟು ಅಂತ  ಇಡೀ ದಿನ ಅವನೊಡನೆ ಇರ್ತೀಯ.. ನಿನ್ನ ಕೈ ಕೂಸಿನಂತಾಗಿದ್ದಾನೆ ಅವನು .. ಸತ್ಯ ಎಂದರೆ ನಾನೆ ಇವನ ಕೂಸಾಗಿದ್ದೆ. ನನ್ನ ನೋವು ನಲಿವು ಎಲ್ಲವೂ ಇವನೊಡನೆ ಹಂಚಿಕೊಳ್ಳುತ್ತಿದ್ದೆ.. ನನ್ನೆಲ್ಲ ಮಿಡಿತಗಳನ್ನು ಅರಿತವನಂತೆ ನಾನು ಪಿಸುನುಡಿದರೂ ಕೇಳಿಸಿಕೊಳ್ಳುತ್ತಿದ್ದ.. !!

ಛೇ.. ಏನಾಗಿದೆ ಇವನಿಗೆ.. ??ನನ್ನೆಲ್ಲವೂ ಆಗಿದ್ದವನು ಇಷ್ಟು ಸುಲಭವಾಗಿ ನನ್ನನ್ನಗಲಿ ಹೋಗುವುದೆಂದರೆ..  ನನ್ನ ಒಳಗೇನೋ ಕುಸಿದು ಬಿದ್ದ ಅನುಭವ.. ಮುಂದಕ್ಕೆ ಯೋಚಿಸಲೂ ಸಾಧ್ಯವಾಗದೇ ಬಿಕ್ಕತೊಡಗಿದೆ. 

... ಅಯ್ಯೋ .. ಅದಕ್ಯಾಕಿಷ್ಟು ಅಳು.. ಎಲ್ಲಿ ನಿನ್ನ ಸಿಮ್ ತೆಗೆದು ಈ ಹೊಸ ಮೊಬೈಲಿಗೆ  ಹಾಕು.. ಆ ಓಬಿರಾಯನ ಕಾಲದ ಮೊಬೈಲನ್ನು ಎಲ್ಲಿಯಾದರೂ ಜಾಗ್ರತೆ ತೆಗೆದಿಡು.. ಮ್ಯೂಸಿಯಮ್‌ನವರಿಗೆ ಬೇಕಾದೀತು.. ಎಂದು ನನ್ನ ಕಡೆಗೊಂದು ಚಂದದ ಬಾಕ್ಸ್ ತಳ್ಳಿದರು ಇವರು..!!


Monday, June 18, 2012





ಪ್ರಳಯ ..ಪ್ರಳಯ ..  !!

 2012 ರಲ್ಲಿ ಪ್ರಳಯ ಎಂದು ಸುದ್ಧಿ ಪತ್ರಿಕೆಗಳು, ಮೀಡಿಯಾಗಳು ಆಗಾಗ್ಗೆ ಹೇಳಿ ಹೇಳಿ ಅದನ್ನೀಗ 2030 ಕ್ಕೆ ವಿಸ್ತರಿಸಿದ್ದು ಎಲ್ಲರಿಗೂ ತಿಳಿದ ವಿಚಾರ ತಾನೇ..! ಆದರೂ ಭೂಮಿ ತಾಯಿಯೇಕೋ ಇದನ್ನು ಆಗಾಗ್ಗೆ ನೆನಪಿಸಿಕೊಂಡು ಸುಮ್ಮನೆ ನಗುವುದುಂಟು. ಅವಳು ನಕ್ಕಳು ಎಂದರೆ ಸಾಕು ಮತ್ತೊಮ್ಮೆ ಜಗವೆಲ್ಲ ಎದ್ದು ನಿಂತು,ಭೂಕಂಪ ಎಂದು ರಣರಂಪ ಮಾಡಿ , ತ್ಸುನಾಮಿಯೋ...  ಸುನಾಮಿಯೋ  ಎಂದು ಉಚ್ಚರಿಸಲು ಬಾರದ ನಾಮವನ್ನು ಜಪಿಸುತ್ತದೆ. 

ಮೊನ್ನೆ ಮೊನ್ನೆ ಆದದ್ದು ಹೀಗೆಯೇ.. ಇಂಡೊನೇಶಿಯಾವನ್ನು ಗಡಗಡನೆ ನಡುಗಿಸಿದ ಭೂಕಂಪ ಇಂಡಿಯಾವನ್ನು ಅಲ್ಲಾಡಿಸಿ, ನಮ್ಮನ್ನೆಲ್ಲ ಹಗಲು ಹೊತ್ತಿನಲ್ಲಿ ಮನೆ ಬಿಟ್ಟು ಬೀದಿಗಿಳಿಯುವಂತೆ ಮಾಡಿತ್ತು. ಟಿ ವಿ  ಯಲ್ಲಿ ಬರುವ ಬ್ರೇಕಿಂಗ್ ನ್ಯೂಸ್ ಗಳೆಲ್ಲ ಕಂಪಿಸುತ್ತಾ ಭೂಕಂಪನದ ಸುದ್ಧಿಯನ್ನು ಬಿತ್ತರಿಸುತ್ತಿದ್ದವು.ವಿಜ್ಞಾನಿಗಳು, ಜ್ಯೋತಿಷಿಗಳು  ಎಲ್ಲಾ ಮೇಲೆದ್ದು ಮೈ ಕೊಡವಿಕೊಂಡು  ತಮ್ಮ ತಮ್ಮ ಕಾಸ್ಟೂಮ್ ಹಾಕಿಕೊಂಡು ಜನರಿಗೆ  ದರ್ಶನ ಭಾಗ್ಯವೀಯುತ್ತಿದ್ದರು. 

ಮುಂದೇನೋ ಕಾದಿದೆ ಎಂದು ಒಳಗೊಳಗೇ ಹೆದರುತ್ತಾ ಅದನ್ನೇ ವೀಕ್ಷಿಸುತ್ತಿದ್ದವಳಿಗೆ ಹತ್ತಿರದಲ್ಲೇ ಕಂಪನದ ಅನುಭವವಾತು. ಗಾಭರಿಯಿಂದ  ಎದ್ದು ನಿಂತರೆ ಪಕ್ಕದಲ್ಲಿದ್ದ ಮೊಬೈಲ್ ಸೈಲೆಂಟ್ ಮೋಡ್ ನಲ್ಲಿ ತನ್ನ ಮೈ ಕುಲುಕಿಸುತ್ತಾ ಮೆಸೇಜ್ ಬಂದಿದೆ ಎಂದಿತು. ತೆರೆದು ನೋಡಿದರೆ 'ಬೀಚ್ ಹತ್ತಿರವಿದೆಯೆಂದು ಬಿಡು ಬೀಸಾಗಿ ಹೋಗಬೇಡ, ಕಡಲು ಮುನಿದಿದೆ ಜಾಗ್ರತೆ'  ಎಂದಿತ್ತು.

ಯಾಕೋ ಒಳ ಮನಸ್ಸು ನಡುಗಿ ಕೂಡಲೇ ಅದನ್ನು ಪರೀಕ್ಷೆ ಮುಗಿಸಿ ಮರಳುತ್ತಿದ್ದ ಮಗನ ಮೊಬೈಲ್ ಗೆ ರವಾನಿಸಿದೆ. ಅವನು ಮರುಕ್ಷಣದಲ್ಲಿ ' ಮಧ್ಯಾಹ್ನ ಎಕ್ಸಾಂ ಸುರು ಆಗುವಾಗ  ನಾನಿದ್ದ ನೆಲ ನಡುಗಲು ಪಾರಂಭಿಸಿತು.. ಎದುರಿದ್ದ ಕೊಶ್ಚನ್ ಪೇಪರ್ ನೋಡಿದಾಗ  ..' ಎಂದು ಕಿಡಿಗೇಡಿ ಉತ್ತರ ನೀಡಿದ. ಸ್ವಲ್ಪ ಹೊತ್ತಿನಲ್ಲಿ ಪುನಃ ಅವನ ಮೆಸೇಜ್.. 'ಅಪ್ಪನ ಹತ್ರ ಗುಡ್ಡ ಬೆಟ್ಟ ಎಲ್ಲಾ ಕಡೆ ಸಲೀಸಾಗಿ ಹೋಗುವಂತ ಹೊಸ ಮೋಡೆಲ್ ಗಾಡಿ ತೆಗೋಳ್ಳೋಕೆ ಹೇಳಮ್ಮಾ.. ಸುನಾಮಿ  ಬಂದ್ರೆ ಅದ್ರಲ್ಲಿ ರೋಡ್ ಇಲ್ಲದ ಕಡೆಯೂ ಆರಾಮವಾಗಿ ಹೋಗ್ಬೋದು' ಎಂದು ತನ್ನ ಕ್ರಾಸ್ ಕಂಟ್ರಿ ರೇಸಿನಲ್ಲಿ ಭಾಗವಹಿಸುವ ಕನಸನ್ನು ನನಸಾಗಿಸುವ ಹೊಸ ಮಾರ್ಗ ಹುಡುಕಿದ. ಇದೆಲ್ಲಿಯಾದರೂ ಇವನಪ್ಪನ ಕಿವಿಗೆ ಬಿದ್ದರೆ ಕೋಪದಿಂದ ಅವರ ಮೈ ಕಂಪಿಸುವುದು ಗ್ಯಾರಂಟಿ ಎಂದುಕೊಂಡೆ. 

ಅಷ್ಟರಲ್ಲಿ ಆತ್ಮೀಯರೊಬ್ಬರು ಫೋನಾಯಿಸಿ ನಾವು ಇಂತಹ ಸಮಯದಲ್ಲಿ ನಮ್ಮೊಡನೆ ಇರಲೇಬೇಕಾದ ವಸ್ತುಗಳನ್ನು ತುಂಬಿಟ್ಟುಕೊಂಡು ಎಮರ್ಜೆನ್ಸಿ ಕಿಟ್ ಅಂತ ಮಾಡಿಕೊಂಡಿದ್ದೇವೆ. ನೀವು ಹಾಗೆ ಜೋಡಿಸಿಟ್ಕೊಳ್ಳಿ, ಏನಾದ್ರು  ಅವಘಡ ನಡೆದರೆ ಅದನ್ನೆತ್ತಿಕೊಂಡು ಹೊರಗೋಡಿದರೆ ಆಯ್ತು ಎಂದು ಒಳ್ಳೆಯ ಸಲಹೆ ನೀಡಿದರು. ನನಗೂ ಅದು ಸರಿ ಅನ್ನಿಸಿ ನಮ್ಮ ಮನೆಯ ಸದಸ್ಯರಿಗೂ ವಿಷಯ ತಿಳಿಸಿದೆ. ಸರಿ ಎಂದು ಎಲ್ಲರೂ ಗೋಣಾಡಿಸಿ, ತಮ್ಮ ತಮ್ಮ ಅಗತ್ಯದ ವಸ್ತುಗಳನ್ನು ಹೇಳತೊಡಗಿದರು.ನಾನು ಒಂದು ಹಳೆಯ ಡೈರಿ ಹಿಡಿದುಕೊಂಡು ಪ್ರತಿಯೊಬ್ಬರು ಹೇಳಿದ್ದನ್ನು ನಮೂದಿಸತೊಡಗಿದೆ. 

ಮೊದಲಿಗೆ ಮಾವ, ಮನೆ ಜಾಗದ ರೆಕಾರ್ಡುಗಳು, ಹಣ, ಬ್ಯಾಂಕಿನ ಪಾಸ್ ಬುಕ್,ಬಿ ಪಿ ಶುಗರ್ ಕೆಮ್ಮು ದಮ್ಮು , ಆ ನೋವು ಈ ನೋವಿನ ಮಾತ್ರೆಗಳು,ಕಷಾಯದ ಹುಡಿಯ ಡಬ್ಬ,ತಾವು ಓದುವ ತಲೆ ದಿಂಬಿನಷ್ಟು ದಪ್ಪಗಿರುವ ಆಧ್ಯಾತ್ಮದ ಪುಸ್ತಕಗಳು, ಮನೆದೇವರ ಸಂಪುಟ.. ಹೀಗೆ ತಮ್ಮ ಅಗತ್ಯವನ್ನು ವಿಸ್ತರಿಸುತ್ತಿದ್ದರು. 

ಅತ್ತೆ, ನಮ್ಮ ಅಡುಗೆ ಮನೆಯ ಸಕಲ ಪಾತ್ರೆ ಪಡಗಗಳು , ದವಸ ಧಾನ್ಯಗಳು, ಗ್ಯಾಸ್ ಸ್ಟೊವ್ ಸಿಲಿಂಡರ್, ನೆಲದಲ್ಲಿ ಮಲಗಿದರೆ ಮೈ ಕೈ ನೋವು ಬರುವ ಕಾರಣ, ನಾಲ್ಕು ಜನ ಸೇರಿದರೂ ಅತ್ತಿತ್ತ ಸರಿಸಲು ಕಷ್ಟ ಪಡಬೇಕಾದ, ಬೀಟಿ ಮರದ ಮಂಚ,ನೆಲದ ಮೇಲೆ ಕುಳಿತುಕೊಂಡು ಊಟ ಮಾಡಲು ಕಾಲು ನೋವಾಗುವುದರಿಂದ ಡೈನಿಂಗ್ ಟೇಬಲ್, ಚೇರ್ ಗಳು,  ಬೆಡ್ ಶೀಟ್, ಹಾಸಿಗೆ ವಸ್ತ್ರಗಳು,ಎಲ್ಲರ ಬಟ್ಟೆಬರೆಗಳು , ಕವಾಟಿನಲ್ಲಿ ಇಟ್ಟಿರುವ ಅವರ ಮದುವೆಯ ಸೀರೆಯಿಂದ  ಹಿಡಿದು ಕರವಸ್ತ್ರಗಳವರೆಗೆ ಎಲ್ಲವನ್ನೂ ಪಟ್ಟಿಗೆ ಸೇರಿಸಿ ಇನ್ನೇನಿದೆಯಪ್ಪಾ ಎಂದು ಆಲೋಚಿಸತೊಡಗಿದರು. 

ಅದನ್ನು ಬರೆದು ಸುಸ್ತಾಗಿ ಇವರ ಕಡೆ ತಿರುಗಿದರೆ, ಮೊಬೈಲ್, ತಮ್ಮ ಅತಿ ಪ್ರೀತಿಯ ಕ್ಯಾಮರಾ, ಹ್ಯಾಂಡಿಕ್ಯಾಮ್ , ಲ್ಯಾಪ್ ಮೇಲೆ ಪವಡಿಸುವ ಲ್ಯಾಪ್ ಟಾಪ್ , , ಎಕ್ಸ್ಟ್ರ ಬ್ಯಾಟರಿಗಳು ಅವನ್ನೆಲ್ಲ ಕಾಲ ಕಾಲಕ್ಕೆ ಚಾರ್ಜ್ ಮಾಡಲು ಅನುಕೂಲವಾಗುವಂತೆ ಜನರೇಟರ್, ಎಂದೆಲ್ಲ ಹೇಳಿ ನನ್ನ ಲೀಸ್ಟನ್ನು ಸಂಪನ್ನ ಗೊಳಿಸಿದರು. 

ಅಷ್ಟರಲ್ಲಿ ಬೈಕಿನ ಮೇಲೆ  ರಂಗ ಪ್ರವೇಶ ಮಾಡಿದ ಮಗರಾಯ, ಪಕ್ಕದಲ್ಲಿದ್ದ ಸ್ಟೋರ್ ರೂಮಿಗೆ ದಾಳಿ ಮಾಡಿ ಖಾಲಿಯಾದ ಕ್ಯಾನುಗಳನ್ನು ಕೈಯಲ್ಲಿ ಹಿಡಿದು , ಬೈಕ್, ಕಾರ್ ಅದಕ್ಕೆ ಪೆಟ್ರೋಲ್ ಡೀಸೆಲ್, ಆಯಿಲ್, ಕೂಲೆಂಟ್ ಎಂದು ಪೆಟ್ರೋಲ್ ಬಂಕಿನಲ್ಲಿರುವ ಎಲ್ಲವನ್ನೂ ಹೇಳಿದ. ಮತ್ತೊಮ್ಮೆ ಮನೆ ಒಳಗೆ ಹೋಗಿ ಬಂದವನೇ, ಬಣ್ಣ ಬಣ್ಣದ ಕೂಲಿಂಗ್ ಗ್ಲಾಸುಗಳು, ಕೂದಲನ್ನು ಚಿತ್ರ ವಿಚಿತ್ರವಾಗಿ ನಿಲ್ಲಿಸುವ ಯಾವು ಯಾವುದೋ ಕ್ರೀಮು,ಶರೀರದ ಒಂದೊಂದು ಅಂಗಕ್ಕು ಪ್ರತ್ಯೇಕ ಪ್ರತ್ಯೇಕವಾಗಿ ಸಿಂಪಡಿಸುವ ಸೆಂಟುಗಳು,ಶ್ಯಾಂಪು ಸೋಪುಗಳು, ತರಹೇವಾರಿ ಬಣ್ಣದ ಶೂಸ್, ಚಪ್ಪಲುಗಳು  ತಿನ್ನಲು ಚಿಪ್ಸ್ ಕುರ್ ಕುರೆ ಬ್ರೆಡ್ ಜ್ಯಾಮು,ಚಾಕ್ಲೆಟ್ ಗಳು, ಎರಡು ನಿಮಿಷದಲ್ಲಿ ಸಿದ್ಧವಾಗುವ ನ್ಯೂಡಲ್ಸ್ ಪ್ಯಾಕೇಟ್ ಗಳ ಸರಮಾಲೆ  ಪಟ್ಟಿಯೊಳಗೆ ತುರುಕಿದ. 

ನಮ್ಮ ಎಲ್ಲಾ ಚಟುವಟಿಕೆಗಳನ್ನು ಕಿವಿ  ಬಡಿಯುತ್ತಾ ಬಾಲ ಬೀಸುತ್ತಾ ನೋಡುತ್ತಿದ್ದ ನಮ್ಮ ಮನೆಯ ಬಾಲ ಇರುವ ಏಕೈಕ ಸದಸ್ಯ, ಹುಲಿಯಂತಿರುವ ನಾಯಿ  ಬೊವ್ ಬೊವ್ ಎಂದಿತು. ಕೂಡಲೇ ಆದರ ಪರವಾಗಿ ವಕಾಲತ್ತು ವಹಿಸಿದ ನನ್ನ ಮಗ ಅದರ ಅಗತ್ಯದ ನಾಯಿ  ಬಿಸ್ಕತ್ತು, ಸಿರಪ್ ಗಳು, ಚೈನ್, ಬೆಲ್ಟ್ ಅಂತೆಲ್ಲ ಸೇರಿಸಿ ಅದನ್ನು ಸಮಾಧಾನ ಗೊಳಿಸಿದ. 

ಉಳಿದದ್ದೀಗ ನನ್ನ ಸರದಿ. ಎಲ್ಲೆಲ್ಲಿಂದಲೂ ಸಂಪಾದಿಸಿದ ಮನೆಯ ಸುತ್ತಲೂ ಇರುವ ಹೂವಿನ ಕುಂಡಗಳು, ನನ್ನ ಅತಿ ಅಗತ್ಯದ ವ್ಯಾನಿಟಿ ಬ್ಯಾಗೆಂಬ ಮಾಯಾಚೀಲಗಳು, ಅವುಗಳಿಗೆ ಮ್ಯಾಚಿಂಗ್ ಡ್ರೆಸ್ ಚಪ್ಪಲಿ,ಹೇರ್ ಬ್ಯಾಂಡ್ ಗಳು, ಮುಖಕ್ಕೆ ಹಚ್ಚುವ ನ್ಯಾಚುರಲ್ ,ಹರ್ಬಲ್ ಎಂದೆಲ್ಲ ಹೇಳಿಕೊಳ್ಳುವ ಬಗೆ ಬಗೆಯ ಕ್ರೀಮುಗಳು, ನೀರಿನ ಕ್ಯಾನುಗಳು,ಚಾಕೊಲೇಟ್ ನ  ಡಬ್ಬ , ಕತೆ ಪುಸ್ತಕಗಳ ರಾಶಿ, ಹೀಗೆ ಯಥಾನುಶಕ್ತಿ ಸೇರಿಸಿದೆ. 

ಬರೆಯುತ್ತಿದ್ದ ಲೀಸ್ಟಿನ ಉದ್ದ ಸಾಧಾರಣ ಸೀರೆಯಷ್ಟಾಗಿತ್ತು. ಮನೆಯ ಸ್ಥಿರ ವಸ್ತುಗಳಾದ ಗೋಡೆ ಬಾಗಿಲುಗಳು,ನೆಲದಾಳಕ್ಕೆ ಬೇರು ಬಿಟ್ಟ ಮರ ಗಿಡಗಳು, ಇವುಗಳನ್ನುಳಿದು ಬೇರೆಲ್ಲ  ನಮ್ಮ ಪಟ್ಟಿಯೊಳಗೆ ಕೂತಿತ್ತು. ಆದರೆ ಇದನ್ನೆಲ್ಲ ಹೊತ್ತೊಯ್ಯಬೇಕಾದರೆ ಮಹಾವಿಷ್ಣುವು ಮತ್ತೊಮ್ಮೆ ಮತ್ಸ್ಯಾವತಾರ ತಾಳಿ, ದೊಡ್ದ ಹಡಗನ್ನು ಕಳುಹಿಸಬೇಕಿತ್ತು!!

ತುಂಬಾ ಹೊತ್ತಿನಿಂದ ನಮ್ಮ ಮನೆಯ ವಿದ್ಯಮಾನಗಳನ್ನು ಬಾಗಿಲಿಗೆ ಕಿವಿ  ಇಟ್ಟು ಕೇಳಿಸಿಕೊಳ್ಳುತ್ತಿದ್ದ ಪಕ್ಕದ ಮನೆಯ ವಿಮಲಮ್ಮ ,ಈಗ ಪ್ರತ್ಯಕ್ಷವಾಗಿ, 'ಅದೇನು ಮಾತು ಅಂತ ಆಡ್ತೀರೋ ನೀವುಗಳು..    ಒಂದು ವೇಳೆ ಭೂಕಂಪನೋ ಸುನಾಮಿನೋ ಆಯ್ತು ಅಂದ್ರೆ ನೀವೀಗ ಬರ್ದಿದ್ದೀರಲ್ಲ ಆ ಚೀಟಿ ಕೈಯಲ್ಲಿ ಹಿಡ್ಕೊಂಡು ಹೊರಗೆ ಓಡ್ರೀ'.. ಅಲ್ಲಾ ಎಂತಾ  ಹುಚ್ಚು ಜನಗಳು ..ಸುಮ್ ಸುಮ್ನೆ ಹೆದರ್ತಾವೆ..ನಮ್ಮ ನಿದ್ದೆನೂ ಕೆಡಿಸ್ತಾವೆ.. ನಾನೇನೋ ರಸವತ್ತಾಗಿ ಅತ್ತೇ ಸೊಸೆ ಜಗಳನೋ,ಅಪ್ಪ ಮಕ್ಕಳ  ಗಲಾಟೆನೋ ಆಗುತ್ತೆ  ಅಂತ ಕಾದ್ರೆ.. ಇವುಗಳು ಅಸಂಭದ್ದ ಮಾತಾಡ್ತಾವೆ..'..ಛೇ ..  ಇನ್ನು ನಾನು ಏನೇನೆಲ್ಲ ತುಂಬಿಸಿಟ್ಟುಕೊಳ್ಳಬೇಕಪ್ಪಾ '   ಎಂದು ಗೊಣಗುತ್ತಾ  ಅವಸರದಿಂದ ಅವಳ ಮನೆ ಬಾಗಿಲನ್ನು ಡಬಾರನೆ ಮುಚ್ಚಿದಳು.  


Friday, June 1, 2012

ಇರುಳಿರುಳಳಿದು ..



ಸಂಜೆ ಹೊತ್ತು. ಆಗಸದ ಕೆಂಪು ಗಿಡ ಮರಗಳ ಮೇಲೆ ಪ್ರತಿಫಲಿಸಿ ಸುಂದರ ಮೆರುಗು ನೀಡಿತ್ತು. ಬೆಂಗಳೂರು ಮಂಗಳೂರು ಎಂಬ ಬೋರ್ಡ್ ಹೊತ್ತು ಭರದಿಂದ ಸಾಗುತ್ತಿದ್ದ ಬಸ್ಸಿನ ಕಿಟಕಿ ಬದಿಯಲ್ಲಿ ತೂಕಡಿಸುತ್ತಿದ್ದೆ. 

'ದಡ್' ಎಂಬ ಭಾರೀ ಶಬ್ಧ, ಜೊತೆಗೆ ಬ್ರೇಕಿನ ಕ್ರೀಚ್ ..ಕಿಚ್.. ಕಿಚ್ ಎಂಬ ದೀರ್ಘ ಕರ್ಕಶ ಧ್ವನಿಯೊಂದಿಗೆ  ಬಸ್ ನಿಂತಿತು. ಬಸ್ಸಿನ ಗಾಜುಗಳಿಗೆ ರಪ ರಪನೆ ಕಲ್ಲುಗಳು ಬೀಳತೊಡಗಿದವು. ಗಾಜನ್ನು ಪುಡಿ ಮಾಡಿ ತೂರಿ ಬಂದ ಕಲ್ಲುಗಳು ಒಂದೆರಡು ಪ್ರಯಾಣಿಕರನ್ನು ಗಾಯಗೊಳಿಸಿದವು. ಡ್ರೈವರಿನ ಹಣೆಗೆ ಕಲ್ಲೇಟು ತಗಲಿ ಆತ ಸೀಟಿನಿಂದ ಇತ್ತ ಬಂದು ಬಿದ್ದಿದ್ದ.  ನನ್ನ ಶರ್ಟಿನ ಮೇಲೂ ರಕ್ತದ ಕಲೆಗಳು.  ಏನಾಗುತ್ತಿದೆ ಎಂಬ ಸುಳಿವಿಲ್ಲದೆ, ಬಸ್ಸಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು . 
ಕೈಯಲ್ಲಿ ಹಿಡಿದ ಕಲ್ಲಿನೊಂದಿಗೆ ಬಸ್ಸನ್ನು ಪುಡಿಗಟ್ಟುತ್ತಿದ್ದವರ ಆಕ್ರೋಶಭರಿತ ಸ್ವರಗಳು ಹೊರಗಿನಿಂದ ಕೇಳತೊಡಗಿತ್ತು. ಅಷ್ಟರಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಇನ್ನೊಂದು ಬಸ್ ಕಂಡು ಪುಂಡರ ಗುಂಪು ಅತ್ತ ತಿರುಗಿತು. ಆ ಸಮಯವನ್ನು ಸದುಪಯೋಗಗೊಳಿಸಿಕೊಂಡ ನಮ್ಮ ಬಸ್ಸಿನ ಕಂಡೆಕ್ಟರ್ ಎಲ್ಲರನ್ನೂ ಲಗೇಜ್ ತೆಗೆದುಕೊಂಡು ಬೇಗ ಬೇಗ ಕೆಳಗಿಳಿಯುವಂತೆ ಮನವಿ  ಮಾಡಿಕೊಂಡ. ಎಲ್ಲರೂ ದಡ ದಡನೆ ಬಸ್ಸಿನಿಂದಿಳಿದು ರಸ್ತೆಯ ಬದಿಗೆ ಸರಿದು ನಿಂತೆವು. 

ನಮ್ಮೊಂದಿಗೆ ನಿಂತಿದ್ದ  ಬಸ್ಸಿನ ಕಂಡೆಕ್ಟರ್ ಪಿಸು ಧ್ವನಿಯಲ್ಲಿ 'ಈಗಷ್ಟೇ ಯಾವುದೋ  ಬಸ್ಸು ಬಡಿದು ಬೈಕಿನವನಿಗೆ ಪೆಟ್ಟಾಗಿದೆಯಂತೆ. ಆ ಬಸ್ಸಿನವ ನಿಲ್ಲಿಸದೆ ಹೋಗಿದ್ದಾನಂತೆ. ಯಾವ ಬಸ್ಸು ಅಂತ ತಿಳ್ಕೊಂಡು ಅವ್ರ ಮೇಲೆ ಆಕ್ಷನ್ ತಗೋಳೋದ್ಬಿಟ್ಟು, ಈ ಕಳ್ಳ ನನ್ ಮಕ್ಳು ಸಿಕ್ಕ ಸಿಕ್ಕ ಬಸ್ಸಿಗೆಲ್ಲ ಕಲ್ಲು ಹೊಡೆದು ಡ್ಯಾಮೇಜ್ ಮಾಡ್ತಾ ಇದ್ದಾರೆ' ಎಂದು ಹೇಳಿದ. 
ಈ ಮಧ್ಯೆ ಯಾರದೋ ಫೋನ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಿತ್ತು. ಪೇಟೆಯಿಂದ  ಎರಡು ಮೂರು ಕಿಲೋ ಮೀಟರ್ ದೂರವಿದ್ದ ಇಲ್ಲಿಗೆ ಧಾವಿಸಿ ಬರುತ್ತಿರುವ ಅವರ ಸೈರನ್ನಿನ ಸದ್ದು ನಮ್ಮನ್ನು ಕೊಂಚ ಸಮಾಧಾನ ಪಡಿಸಿತು. ಬಂದವರೇ ನಮ್ಮನ್ನುದ್ದೇಶಿಸಿ, ಎಲ್ಲಾ ಬೇಗ ಬೇಗ ಪೇಟೆ ಸೇರ್ಕೊಂಡು ಯಾವುದಾದ್ರೂ ಹೋಟೆಲ್ನಲ್ಲೋ ಅಥವಾ ನೆಂಟರ ಮನೆಯಲ್ಲೋ ತಂಗುವ ವ್ಯವಸ್ಥೆ ಮಾಡಿಕೊಳ್ಳಿ. ಪೇಟೆಯ ಇನ್ನೊಂದು ಬದಿಯಲ್ಲೂ ರೋಡ್ ಬ್ಲಾಕ್ ಆಗಿದೆ. ಸಧ್ಯಕ್ಕೆ ನಾಳೆವರೆಗೆ ಕ್ಲಿಯರ್ ಆಗೋ ತರ ಕಾಣಿಸ್ತಿಲ್ಲ ಅಂದರು.

ಪೋಲಿಸ್ ಬಂದ ತಕ್ಷಣ ಕಲ್ಲೆಸೆಯುವುದನ್ನು ನಿಲ್ಲಿಸಿದ ಜನರು ದೊಡ್ದ ಸ್ವರದಲ್ಲಿ ನ್ಯಾಯ ಕೊಡಿಸಿ ಅಂತ ಕಿರುಚತೊಡಗಿದರು. ಅಷ್ಟರಲ್ಲಿ ಇನ್ಯಾರೋ ಕಿಡಿಗೇಡಿಗಳು ಪೋಲೀಸರತ್ತ ಕಲ್ಲು ತೂರಿದರು. ಸಹನೆ ಕಳೆದುಕೊಂಡ ಪೋಲೀಸರು ಲಾಠಿ ಚಾರ್ಜ್ ಮಾಡ ತೊಡಗಿದರು. ನಾವೆಲ್ಲ ಗಾಭರಿಯಿಂದ  ಲಗ್ಗೇಜ್ ಹಿಡಿದುಕೊಂಡು ಹೊರಟೆವು. ಪಕ್ಕದ ಬಸ್ಸಿನ ಜನರೂ ಸಹ ಭಯ ಭೀತರಾಗಿ  ಬಸ್ಸಿನಿಂದಿಳಿದು ನಮ್ಮ ಜೊತೆ ಪೇಟೆಯ ಕಡೆಗೆ ಹೆಜ್ಜೆ ಹಾಕತೊಡಗಿದರು.

ಅವರ ನಡುವೆಯೇ ಅವಳ ಮುಖ ಕಂಡಿದ್ದು.. ಹೆಗಲ ಮೇಲೆ ನಿದ್ದೆ ಮಾಡುತ್ತಿರುವ ಕಂದಮ್ಮ, ಇನ್ನೊಂದು ಕೈಯಲ್ಲಿ ಭಾರದ ಬ್ಯಾಗ್ ಹಿಡಿದು ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಳು. ನಾನು ಕೂಡಲೇ ಹೋಗಿ ಆ ಬ್ಯಾಗ್ ಹಿಡಿದುಕೊಳ್ಳೋಣವೆಂದುಕೊಂಡೆ. ಅಷ್ಟರಲ್ಲೇ ಯಾರೋ ಯುವಕನೊಬ್ಬ 'ಕೊಡಿ ಇತ್ಲಾಗಿ ಬ್ಯಾಗ್, ನೀವು ನಡೀರಿ, ನಾನು ಹಿಡ್ಕೊಳ್ತೀನಿ' ಎಂದು ಅದನ್ನು ಎತ್ತಿ ಅನಾಮತ್ತಾಗಿ ತನ್ನ ಹೆಗಲಿಗೇರಿಸಿಕೊಂಡ. 
ಆ ಕ್ಷಣದಲ್ಲೇ ಅವಳ ಕಣ್ಣುಗಳು ನನ್ನ ಕಣ್ಣುಗಳನ್ನು ಸೇರಿದ್ದು. ಅದರ ತೀಕ್ಷ್ಣತೆಗೆ   ನನ್ನೊಳಗೊಮ್ಮೆ ಮಿಂಚು  ಸುಳಿದಂತಾಯಿತು. ಅಷ್ಟೇ.. ಅವಳು ಎಚ್ಚರಗೊಳ್ಳುತ್ತಿರುವ ಮಗುವಿನ ಬೆನ್ನು ತಟ್ಟುತ್ತಾ ಅದನ್ನು ಸಮಾಧಾನಗೊಳಿಸುತ್ತಾ ಮುಂದೆ ಹೆಜ್ಜೆ ಹಾಕಲಾರಂಭಿಸಿದಳು. 

ಬೇಗ ಹೋಗದಿದ್ದರೆ ಹೋಟೆಲಿನಲ್ಲಿ ರೂಂ ಸಿಗದಿದ್ದರೆ ಎಂಬ  ಮುಂದಾಲೋಚನೆಯಿಂದ  ನನ್ನ ನಡಿಗೆ ಚುರುಕುಗೊಳಿಸಿದೆ. ಮೊದಲು ಕಾಣ ಸಿಕ್ಕಿದ  ಹೋಟೆಲ್‌ವೊಂದರ ಕೌಂಟರಿನಲ್ಲಿ ಹಣ ಕಟ್ಟಿ ರೂಮ್ ಪಡೆದೆ. ಜೋಡಿ ಮಂಚಗಳಿದ್ದ ರೂಮಿನೊಳಗೆ ಅತ್ತಿತ್ತ ಸರಿದಾಡಲು ಸ್ವಲ್ಪ ಜಾಗವಿತ್ತಷ್ಟೆ. ಮೇಲೆ ಧೂಳು ಹಿಡಿದ ಸೀಲಿಂಗ್ ಫ್ಯಾನ್ ಒಂದು ನೇತಾಡುತ್ತಿತ್ತು. ಮೂಲೆಯಲ್ಲಿ ಪುಟ್ಟ ಕನ್ನಡಿ ಹೊತ್ತಿದ್ದ ಡ್ರೆಸ್ಸಿಂಗ್ ಟೇಬಲ್. ಕನ್ನಡಿಯ ಮೇಲೆಲ್ಲಾ ಯಾರೋ ಅಂಟಿಸಿ ಮರೆತಿದ್ದ ಬಿಂದಿಗಳು. ಅದರ ನೇರಕ್ಕೆ ಇಕ್ಕಟ್ಟಾದ ಒಂದು ಬಾತ್ ರೂಮ್. ನನ್ನಂತೆ ಬೇಗ ಬಂದ  ಕೆಲವು ಪ್ರಯಾಣಿಕರಿಗೆ ಇಷ್ಟಾದರು ಸಿಕ್ಕಿದ್ದು ನಸೀಬು. ಹೋಟೇಲಿನವರಾಗಲೇ 'ನೋ ರೂಮ್ಸ್" ಎಂದು ಬೋರ್ಡ್  ಹಾಕಿದ್ದರು. ಆದರೂ ಕೆಲವರು ದೊಡ್ಡ ಸ್ವರದಲ್ಲಿ ತಗಾದೆ ತೆಗೆಯುತ್ತಿದ್ದದ್ದು ಕೇಳಿ ಬರುತ್ತಿತ್ತು. ಉಳಿದವರು ವೈಟಿಂಗ್ ಹಾಲ್ ನಲ್ಲಿ ಲಗ್ಗೇಜು ಹರಡಿಕೊಂಡು ಕೂತಿದ್ದರು. ಒಳಗಿದ್ದ ಕಿಟಕಿಯನ್ನು ಹೊರಗಿನ ಹೊಸ ಗಾಳಿಗೆ ತೆರೆದು ಬಾಗಿಲ ಬಳಿ ಬಂದು ಯಾರನ್ನೊ ಕಾಯುವವರಂತೆ ಸುಮ್ಮನೆ ನಿಂತುಕೊಂಡೆ. 

ಮಗುವನ್ನೆತ್ತಿಕೊಂಡು ಕಾಲ ಬಳಿ ಲಗೇಜ್ ಇರಿಸಿ, ಹುಡುಕುವ ನೋಟ ಬೀರುತ್ತಿದ್ದ ಅವಳು ನನ್ನನ್ನು ಕಂಡೊಡನೇ ಹತ್ತಿರ ಬಂದಳು. ನನ್ನ ಮೌನವನ್ನೇ ಸಮ್ಮತಿ ಎಂದುಕೊಂಡಳೇನೋ .. ಒಳ ನುಗ್ಗಿ ಮಗುವನ್ನೆತ್ತಿ ಮಂಚದ ಮೇಲೆ ಮಲಗಿಸಿದಳು. ಅಮ್ಮನ ಬೆಚ್ಚನೆಯ ಆಸರೆ ತಪ್ಪಿದ ಅನುಭವಕ್ಕೆ  ಮಗು ಅಳಲು ಪ್ರಾರಂಭಿಸಿತು. ಕೂಡಲೇ ಅವಳು ಹಾಸಿಗೆಯ ಮೇಲೊರಗಿ ಮಗುವನ್ನು ಅವುಚಿಕೊಂಡಳು. 

ಆಚೆ ಸುಳಿದಾಡುತ್ತಿದ್ದ ರೂಮ್ ಬಾಯ್‌ಗೆ ಎರಡು ಊಟ ಎಂದೆ. ಸಮ್ಮತಿಯೆಂಬಂತೆ ತಲೆಯಾಡಿಸಿದ ಅವನು ಅವಳೆಡೆಗೊಂದು ಕುತೂಹಲದ ನೋಟ ಬೀರಿ,ಉಳಿದವರ ಆರ್ಡರ್ ತೆಗೆದುಕೊಳ್ಳಲು ಮುಂದೆ ಹೋದ. 
ಆಗೊಮ್ಮೆ ಈಗೊಮ್ಮೆ ನಿದ್ದೆಯಲ್ಲಿದ್ದ ಮಗುವಿನ ಕುಸು ಕುಸು ಅಳು ಬಿಟ್ಟರೆ ನಮ್ಮ ನಡುವೆ ಮೌನದ  ಪರದೆ ಹರಡಿತ್ತು. ಊಟ ಮುಗಿಸಿ ಕೈ ತೊಳೆದು ಸುಮ್ಮನೆ ಕಿಟಕಿಯ ಹೊರಗಿಣುಕುತ್ತಾ ನಿಂತೆ. ಎಷ್ಟು ಹೊತ್ತು ನಿಂತಿದ್ದೆನೇನೋ.. ದೂರದಲ್ಲಿ ಪೇಟೆಯ ದೀಪಗಳು ಒಂದೊಂದಾಗಿ ಆರಿ ನಿದ್ರೆ ಎಲ್ಲರನ್ನೂ ತನ್ನ ತೆಕ್ಕೆಗೆಳೆದುಕೊಳ್ಳುತ್ತಿರುವಂತೆ ಕಂಡಿತು. ಮೆತ್ತಗೆ ತಿರುಗಿ ನೋಡಿದರೆ ಅವಳು ಮಗುವನ್ನಪ್ಪಿ ನಿದ್ದೆ ಹೋಗಿದ್ದಳು. ಮೇಲೆ ಕಿರ ಕಿರ ಸದ್ದು ಮಾಡುತ್ತಾ ಸುತ್ತುತ್ತಿದ್ದ ಫ್ಯಾನಿನ ಗಾಳಿಗೆ ಅವಳ ಮುಂಗುರುಳುಗಳು ಗಲ್ಲಕ್ಕೆ ಕಚುಗುಳಿಡುತ್ತಿರುವುದನ್ನು ನೋಡುತ್ತಾ ನಿಂತೆ. 
ಅವಳಿಗೆ ಗೊತ್ತಾಯಿತೇನೋ! ಭಾರವಾಗಿದ್ದ ರೆಪ್ಪೆಗಳನ್ನು ತೆರೆದು 'ಸ್ವಲ್ಪ ಕಿಟಕಿ ಮುಚ್ತೀರಾ ಪ್ಲೀಸ್.. ಸೊಳ್ಳೆ ಕಚ್ಚಿದರೆ ಮಗು ಆಗಾಗ ಏಳುತ್ತೆ ಅಂದಳು. ಮಾತಿಲ್ಲದೆ ಕಿಟಕಿ ಭದ್ರ ಪಡಿಸಿ ಹಿಂದೆ  ತಿರುಗಿ ನೋಡಿದೆ. ' ಇಲ್ಲೇ ಮಲಗಿ' ಎಂದು ಮಂಚದ  ಖಾಲಿ ಜಾಗದೆಡೆಗೆ  ಕೈ ತೋರಿಸಿದಳು. ಸುಮ್ಮನೆ ಮಲಗಿದೆ. ಮಲಗಿದ್ದ ಮಗು ನನ್ನ ಕಡೆಗೆ ಹೊರಳಿ ಅಪ್ಪಿಕೊಂಡಿತು. ಮಗುವನ್ನು ತಟ್ಟುತ್ತಿದ್ದ ಅವಳ ಕೈಗಳು ನನ್ನನ್ನು ಸ್ಪರ್ಷಿಸಿದವು. 
ಹಿಂತೆಗೆಯುವಳೇನೋ ಎಂದುಕೊಂಡೆ.. ಉಹೂಂ.. ನಾನಂತೂ ಆ ಸ್ಪರ್ಷವನ್ನೇ ಬಯಸಿದವನಂತೆ ಇನ್ನಷ್ಟು ಹತ್ತಿರವಾದೆ. 

ಬೆಳಗಿನ ಕಿರಣಗಳು ಮುಚ್ಚಿದ ಕಿಟಕಿಯ ಗಾಜಿನೊಳಗೆ ತೂರಿ ನನ್ನನ್ನೆಬ್ಬಿಸಿದವು. ಮಗು ಗೋಡೆಯ ಬದಿಯಲ್ಲಿ ಹಾಯಾಗಿ ಮಲಗಿದ್ದರೆ, ಅವಳು ನನ್ನ ತೋಳ್ತೆಕ್ಕೆಯಲ್ಲಿದ್ದಳು. ಮೆಲ್ಲನೆ  ಏಳುವ ನನ್ನ ಪ್ರಯತ್ನ ಅವಳನ್ನೂ  ಎಚ್ಚರಗೊಳಿಸಿತು. ಒಮ್ಮೆಲೇ ನಾಚಿಕೆಯಿಂದ  ಕೆಂಪಡರಿ ' ನೀವು ಬರೀ ಕೆಟ್ಟವರು' ಎಂದು ನನ್ನ ಎದೆಗೆ ಗುದ್ದಿದಳು. 
ಆ ಕೈಯನ್ನು ಅಲ್ಲಿಗೇ ಒತ್ತಿಕೊಂಡು ' ಅದೇನಪ್ಪ ಅಂತಹ ಕೆಟ್ಟತನ ಈಗ ಕಂಡಿದ್ದು ನನ್ನಲ್ಲಿ' ಎಂದೆ ನಗುತ್ತಾ.. 

ಮತ್ತೇನು.. ನಾನು ಇನ್ನೊಂದು ನಾಲ್ಕು ದಿನ  ತವರಲ್ಲಿ ಇದ್ದು ಬರ್ತೀನಿ ಅಂದಿದ್ದಕ್ಕೆ ಎಷ್ಟೋಂದು ಕೋಪ ನಿಮ್ಗೆ.. ಯಾವತ್ತೂ ಮಾತಾಡಲ್ಲ ಅಂತ ಬೇರೆ ಚಾಲೆಂಜ್ ಮಾಡ್ತೀರ?  ಅದಕ್ಕೆ ಎರಡು ದಿನ ಮುಂಚಿತವಾಗಿ ಬಂದು ನಿಮ್ಮನ್ನು ಸರ್‌ಪ್ರೈಸ್ ಮಾಡೋಣ ಅಂತ  ಹೊರಟಿದ್ದೆ' ಅಂದಳು. 

 'ನಿನ್ನನ್ನು ಬಿಟ್ಟು ಯಾರಿರ್ತಾರೆ? ನಾನೂ ಕೂಡಾ  ನಿನ್ನನ್ನು ಕರ್ಕೊಂಡು ಹೋಗೋದಕ್ಕೆ ಅಂತಾನೆ ನಿಮ್ಮಪ್ಪನ ಮನೆ ಕಡೆ ಹೊರಟಿದ್ದೆ ಚೆಲುವೇ..'ಎಂದವಳ ದುಂಡು ಕೆನ್ನೆ ಹಿಂಡಿದೆ.

ನಿದ್ರೆ ತಿಳಿದೆದ್ದ ಕಂದಮ್ಮ,ಹೊಳೆವ ಕಂಗಳಿಂದ  ನನ್ನನ್ನು ದಿಟ್ಟಿಸಿ ನೋಡಿ, ತೊದಲು ನುಡಿಯಲ್ಲಿ 'ಅಪ್ಪಾ ..' ಎಂದಿತು.