Pages

Total Visitors

Sunday, April 20, 2014

ಆಪರೇಷನ್ ಸ್ಪೈಡರ್



ಮನೆಯೊಳಗೆ ಕುಳಿತು ಮಾಡಲೇನೂ ಕೆಲಸವಿಲ್ಲದ್ದರೆ ನಾನು ಜೇಡನ ಬಲೆಯನ್ನು ಹುಡುಕಿಕೊಂಡು ಹೊಸ ಆಟ ಆಡಲು ಹೊರಡುತ್ತೇನೆ.ಇದು ನಾನು ಮತ್ತು ಜೇಡ ಮಾತ್ರ ಆಡುವ ಆಟ. ಈ ಆಟ ಕೂಡಾ ಕುತೂಹಲದ್ದೇ .. ಸುಮ್ಮನೆ ನೆಲದಲ್ಲಿ ಬಿದ್ದಿದ್ದ ತರಗೆಲೆಯನ್ನು ಜೇಡನ ಬಲೆಗೆ ಎಸೆದು ಸ್ವಲ್ಪ ಅಲುಗಾಡಿಸುವುದು. ಕೂಡಲೇ ಅಲ್ಲಿಗೆ ಜೇಡ ಬಂದು ಬಲೆಯೊಳಗೆ ಸಿಕ್ಕಿದ ಎಲೆಯನ್ನು ಪ್ರಾಣಿಯೆಂದು ತಿಳಿದು ಹಿಡಿದು ಅಮುಕಿ ಸಾಯಿಸಲು ಹೊರಡುತ್ತದೆ. 


 ಅದು ತನ್ನ ಆಹಾರವಲ್ಲ ಎಂದು ತಿಳಿದಾಗ ಅದು ಮಾಡುವ ಕೆಲಸ ಇದೆಯಲ್ಲ ಅದು ನಿಜಕ್ಕೂ ಅಚ್ಚರಿ ತರುವಂತಹದ್ದು. ಮೆಲ್ಲನೆ ಎಲೆಯ ಸುತ್ತಲೂ ಸುತ್ತಿ ತನ್ನ ಬಲೆಯ ಎಳೆ ಕಡಿಯದಂತೆ ಅದನ್ನು ನಾಜೂಕಾಗಿ ಬೇರ್ಪಡಿಸುತ್ತಾ ಹೋಗುತ್ತದೆ. ಎಲ್ಲಾ ಬಂಧಗಳನ್ನು ಕಳಚಿಸಿ ನೆಲಕ್ಕೆ ಬೀಳಿಸುತ್ತದೆ. ಮತ್ತೆ ತನ್ನೆಲ್ಲಾ ಗಡಿ ರೇಖೆಗಳಿಗೆ ಒಂದು ವಿಸಿಟ್ ಕೊಟ್ಟು ಎಲ್ಲೂ ಏನೂ ಕಸಗಿಸ ಇಲ್ಲ ಅಂತ ಚೆನ್ನಾಗಿ ನೋಡಿಕೊಂಡು ಯಾವುದೋ ಒಂದು ನೂಲೇಣಿ ಹಿಡಿದು ಮೇಲಕ್ಕೇರಿ ಅಡಗಿ ಕುಳಿತುಕೊಳ್ಳುತ್ತದೆ. ಹೀಗೆ ಆಡಲು ನನಗೂ ಮಿಸ್ಟರ್ ಕ್ಲೀನಪ್ಪ ಜೇಡನಿಗೂ ಬೇಸರ ಎಂಬುದೇ ಇಲ್ಲ. 

ಆದರೆ ಇವತ್ತು ನಾನು ಅದರ ಬಲೆಯ ಹತ್ತಿರ ಹೋಗುವಾಗಲೇ ಒಂದು ಅನಾಹುತ ನಡೆದೇ ಹೋಗಿತ್ತು. 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ..' ಅಂತ ನನ್ನ ಬಗ್ಗೆಯೇ ಹಾಡು ಬರೆದಿದ್ದು ಅಂತ ಆ ಚಿಟ್ಟೆ ಜಂಬದಲ್ಲೆ ತಲೆಯೆತ್ತಿ ಆಗಸದತ್ತಲೇ ಮೊಗ ಮಾಡಿ ಹಾರುತ್ತಿತ್ತೋ ಏನೋ..ಅರೆಕ್ಷಣದ ಚಂಚಲತೆ ಸಾಕಿತ್ತು ಬಲಿಯಾಗಲು ..  ಪಕ್ಕನೆ ಬರಿಗಣ್ಣಿಗೆ ಕಾಣದ ಸೂಕ್ಷ್ಮವಾದ ಬಲೆಯೊಳಗೆ ಸಿಕ್ಕಿಯೇ ಬಿಟ್ಟಿತು. ಅಂಟಂಟು .. ಇಬ್ಬೀ.. ಕೊಳಕು.. ಎಂದೆಲ್ಲಾ ಯೋಚಿಸುತ್ತಾ ಬಿಡಿಸಿಕೊಳ್ಳಲು ಅತ್ತಿತ್ತ ಹೊಯ್ದಾಡಿತು. ಇಷ್ಟೇ ಸೂಚನೆ ಸಾಕು ಆ ಬೇಟೆಗಾರನಿಗೆ ತನ್ನ ಬಲೆಯೊಳಗೆ ಮಿಕವೊಂದು ಸಿಕ್ಕಿಬಿದ್ದಿದೆ.. ಇನ್ನೇನಿದ್ದರೂ ಭೂರಿ ಭೋಜನದ ಸಂಭ್ರಮ ಎಂದು ತಿಳಿದುಕೊಳ್ಳಲು.. 

ಮತ್ತಿನ ಕ್ಷಣದಲ್ಲೇ  ಬಲವಾದ ಎಂಟು ಕಾಲು, ವಿಕಾರ ಮೊಗ ಹೊತ್ತ ಆ ರಕ್ಕಸ ಬಂದೇ ಬಿಟ್ಟ. ತಪ್ಪಿಸಿಕೊಳ್ಳಲು ಒಂದಿಷ್ಟೂ ಸಮಯವಿಲ್ಲ. ಎಲ್ಲಾ ಎಷ್ಟು ಪಕ್ಕಾ ಲೆಕ್ಕಾಚಾರ ಎಂದರೆ ಅವೆಲ್ಲಾ ಕ್ಷಣಗಳಲ್ಲೇ ನಡೆದುಬಿಡುವಂತಹವುಗಳು.


ಬಂದದ್ದೇ ತನ್ನ ಬಲವಾದ ಕಾಲುಗಳಲ್ಲಿ ಚಿಟ್ಟೆಯನ್ನು ಹಿಡಿದಿಟ್ಟು ಅದರ ಅಲುಗಾಟ ನಿಲ್ಲುವವರೆಗೆ ಅದನ್ನು ಕಚ್ಚಿ ಹಿಡಿಯಿತು. ಎಲ್ಲಾ ಮುಗಿಯಿತು ಎಂದು ನಿಶ್ಚಯವಾದ ಕೂಡಲೇ ಆದನ್ನಲ್ಲೇ ಬಿಟ್ಟು ಮತ್ತೊಂದು ಸಲ ಅತ್ತಿತ್ತ ಅವಲೋಕನ ಮಾಡಿತು. ಮತ್ತೆ ಚಿಟ್ಟೆಯ ಕಳೇಬರದ ಕಡೆ ಸುಳಿದಾಡಿತು.ಇನ್ನೇನಿಲ್ಲಾ ಆಹಾರ ಸಿಕ್ಕಿದಲ್ಲಿಗೆ ಕಥೆ ಮುಗಿಯಿತು ಅಂದುಕೊಳ್ಳಬೇಡಿ. ಅದಕ್ಕೆ ಮಾಡಲಿಕ್ಕೆ ಇನ್ನೂ ಎಷ್ಟೊಂದು ಕೆಲಸವಿತ್ತು ಗೊತ್ತಾ? 



 ಯಾಕೆಂದರೆ ಕೂಡಲೇ ಅದನ್ನು ತಿಂದು ತೇಗಲು ಹಸಿವಿರಲಿಲ್ಲವೋ ಏನೋ..ಹಾಗೆಂದು ಅದನ್ನು ಅಲ್ಲಿಯೇ ಬಿಟ್ಟು ಹೋದರೆ ಸುರಕ್ಷಿತವಾಗಿರುತ್ತದೆ ಎಂಬ ಧೈರ್ಯ ಎಲ್ಲಿಯದು. ಹಾಗಿದ್ದರೆ ಅದನ್ನು ಕಟ್ಟಿಡಬೇಕು. ಇಲ್ಲವೇ ಮುಚ್ಚಿಡಬೇಕು.ಅದಕ್ಕೆ  ನಮಗೆಲ್ಲ ಸಿದ್ಧವಾದ ಬ್ಯಾಗುಗಳು ಸಿಗುತ್ತವೆ. ಆದರೆ ಜೇಡ   ಮಾರ್ಕೆಟ್ಟಿಗೆ ಹೋಗಿ  ಚಿಟ್ಟೆ ಹಾಕಲಿಕ್ಕೆ ಒಂದು ಚೀಲ ಕೊಡಿ ನೋಡುವಾ ಅಂತ ಬ್ಯಾಗ್ ತರಲಿಕ್ಕಾಗುತ್ತಾ... ಇಲ್ಲವಲ್ಲ. ಅದಕ್ಕೂ ಜೇಡನ ಬಳಿ ಉಪಾಯವಿದೆ ನೋಡಿ.
ಅಗಲಕ್ಕೆ ಹರಡಿದಂತೆ ಸಿಕ್ಕಿ ಬಿದ್ದಿದ್ದ ಚಿಟ್ಟೆಯ ರೆಕ್ಕೆಗಳನ್ನು ಮೆಲ್ಲನೆ ಬಿಡಿಸಿಕೊಂಡಿತು. ಈಗ ಅದರ ದೇಹದ ಭಾಗ ಮಾತ್ರ ಬಲೆಗೆ ಅಂಟಿಕೊಂಡಿತ್ತು. ಕೆಲವೊಮ್ಮೆ ಹೀಗೆ ಮಾಡುವಾಗ ತೂಕ ಹೆಚ್ಚಾಗಿದ್ದ ದೇಹವಾದರೆ ಪಕ್ಕನೆ ಬಿದ್ದು ಬಿಡುತ್ತದೆ. ಆಗ ಜೇಡ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ನಿರಾಸೆಯಲ್ಲಿ ಮತ್ತೆ ಆಹಾರಕ್ಕಾಗಿ ಕಾಯಬೇಕಾಗುತ್ತದೆ. ಆದರೆ ಇದು ಹಾಗಾಗಲಿಲ್ಲ. ರೆಕ್ಕೆಗಳ ಸುತ್ತ ಹೋಗಿ ಬಂದು ತನ್ನ ಅಂಟಿನಿಂದ ಅದನ್ನು ಹತ್ತಿರ ತಂದಿತು. ಎಷ್ಟು ಹತ್ತಿರ ಎಂದರೆ ಚಿಟ್ಟೆಯ ದೇಹ ಕಾಣದ ಹಾಗೆ ರೆಕ್ಕೆಗಳು ಅದನ್ನು ಮುಚ್ಚಿ ಹಿಡಿಯುವಷ್ಟು. ನಂತರ ಅದರ ಸುತ್ತ ವೇಗವಾಗಿ ತಿರುಗುತ್ತಾ ಅದನ್ನು ತನ್ನ ಬಲೆಯ ಎಳೆಗಳಲ್ಲಿ ಬಿಗಿಯಾಗಿಸುತ್ತಾ ಹೋಯಿತು. ಈಗ ಅದೊಂದು ಶವ ಪೆಟ್ಟಿಗೆಯಂತೆ ಕಾಣುತ್ತಿತ್ತು. 

ಅದನ್ನು ತನ್ನ ಬಲೆಯ ಗೂಡಿಗೆ ಚೆನ್ನಾಗಿ ಅಂಟುವಂತೆ ಮಾಡಿತೀಗ. ಇಷ್ಟೆಲ್ಲಾ ಕೆಲಸ ಮುಗಿದ ಮೇಲೆ ಮತ್ತೊಮ್ಮೆ ತನ್ನ ಇಡೀ ಬಲೆಯ ನೇಯ್ಗೆಯನ್ನು ಪರಿಶೀಲಿಸಿತು. ಚಿಟ್ಟೆಯ ಒದ್ದಾಟದಿಂದ ಸ್ವಲ್ಪ ಹರಿದು ಹೋಗಿದ್ದ ಬಲೆಯನ್ನೆಲ್ಲಾ ಹೊಸ ಎಳೆಗಳನ್ನು  ಹಾಕುತ್ತಾ ಮೊದಲಿನಂತೆ  ಜೋಡಿಸಿತು. ಈಗ ನನ್ನ ಕಡೆಗೆ ನೋಟ ಬೀರುತ್ತಾ ಹೇಗೆ ನನ್ನ ಕೆಲಸ ಎಂದು ಕೇಳಿದಂತೆ ಬಾಸವಾಯಿತು. ನಾನು ಅದಕ್ಕೆ ತಂಬ್ಸ್ ಅಪ್ ಎಂದು ತೋರಿಸಿದೆ. 

ಚಿಟ್ಟೆಯ ಸಾವಿಗೆ ಮನಸ್ಸಿಗೆ ಒಂದು ಕ್ಷಣ ಬೇಸರವಾದರೂ ಜೇಡನ ಆಹಾರವಲ್ಲವೇ ಅದು ಎಂದೆನಿಸಿತು. ಆಹಾರ ಪದ್ದತಿ ಬೇರೆ ಬೇರೆ ಇರಬಹುದು.  ಹಸಿವು ಎಂಬುದು ಎಲ್ಲರಿಗೂ ಒಂದೇ ಸಮನಾದುದು ತಾನೇ? ಅದು ಅದರ ಬೇಟೆಯಾಡುವ ಕ್ರಮ. ಚಿಟ್ಟೆಯಲ್ಲದಿದ್ದರೆ  ಇನ್ನೇನೋ.. ಪ್ರಕೃತಿ ಅವುಗಳಿಗೆ ಅವುಗಳದ್ದೇ ನಿಯಮಗಳನ್ನು ಇರಿಸಿದ್ದಾಳೆ. ಮನುಷ್ಯನಂತೆ ಪ್ರಾಣಿಗಳು ಎಂದೂ ಅವುಗಳನ್ನು ಅತಿಕ್ರಮಿಸಲಾರವು. ಅಷ್ಟಲ್ಲದೇ ಹೇಳುತ್ತಾರೆಯೇ..?  ಕೊಂದ ಪಾಪ ತಿಂದು ಪರಿಹಾರ..!! ಹೊತ್ತಿನ ಪರಿವೆಯೇ ಇಲ್ಲದೆ ಅದರ ಬೇಟೆಯ ಕ್ರಮವನ್ನು ನೋಡುತ್ತಾ ನಿಂತುಬಿಟ್ಟಿದ್ದೆ. ನನ್ನ ಹೊಟ್ಟೆಯೂ ಹಸಿವಾಗಿದೆ ಎಂದು ಸೂಚಿಸುತ್ತಿತ್ತು. ಮೆಲ್ಲನೆದ್ದು ಮನೆಗೆ ಹೊರಟೆ.