Pages

Total Visitors

Thursday, September 5, 2013

ನಿತ್ಯ ಸ್ಮರಣೀಯರು .


ಶಾಲೆಯ ಮೊದಲನೇ ದಿನ.
 

ಕೆಲವು ಮಕ್ಕಳು ಜೋರಾಗಿ ಅಳುತ್ತಿದ್ದರೆ, ಇನ್ನು ಕೆಲವರು ಅವರನ್ನು ನೋಡಿ ನಗುತ್ತಿದ್ದರು. ದೂರದ ಹಳ್ಳಿಯಿಂದ  ಬಂದ ಕೆಲವು ಮಕ್ಕಳು ಸುತ್ತಲಿರುವವರನ್ನು ಮರೆತು ಮಧ್ಯಾಹ್ನ  ಅಮ್ಮ ಕಟ್ಟಿ ಕೊಟ್ಟಿದ್ದ ಬುತ್ತಿಯನ್ನು ಬಿಚ್ಚಿ ರುಚಿ ನೋಡುತ್ತಿದ್ದರು. ಮತ್ತೂ ಕೆಲವರ ಅಮ್ಮಂದಿರು ಮಕ್ಕಳನ್ನು ಸಮಾಧಾನಗೊಳಿಸುತ್ತಾ ಕ್ಲಾಸಿನೊಳಗೇ ನಿಂತುಕೊಂಡು ತಮ್ಮ ಮನೆಯ ಕಷ್ಟ ಸುಖಗಳನ್ನು ಮಾತನಾಡುತ್ತಿದ್ದರು.ಅಷ್ಟರಲ್ಲಿ ತಲೆಯೆಲ್ಲಾ ಬಿಳಿಯಾಗಿ, ವಯಸ್ಸಾದಂತಿದ್ದವರೊಬ್ಬರು ಕ್ಲಾಸಿನೊಳಗೆ ಬಂದರು.  ಪುಟ್ಟ ಬೆಂಚಿನ ಮೇಲೆ ಬಲಿ ಕೊಡಲು ತಂದ ಕುರಿಯ ಮುಖಭಾವ ಹೊತ್ತು ಕೂತಿದ್ದ ನನ್ನ ಹತ್ತಿರ ಬಂದ 'ನೀನು ಒಂದನೇ ಕ್ಲಾಸಾ ಮಗಳೇ.. ನಾನು ಕೂಡಾ ಒಂದನೇ ಕ್ಲಾಸು' ಅಂದರು. 'ನೀವಿಷ್ಟು ಅಜ್ಜ ಆಗಿದ್ದೀರಾ, ನೀವು ಒಂದನೇ ಕ್ಲಾಸಾ' ಎಂದು ಹೇಳಿ  ಜೋರಾಗಿ ನಕ್ಕುಬಿಟ್ಟೆ. ನನ್ನೊಂದಿಗೆ ಉಳಿದ ಮಕ್ಕಳೂ ನಕ್ಕರು.

ಅವರನ್ನು ಕಂಡು ಅಲ್ಲಿದ್ದ ಅಮ್ಮಂದಿರೆಲ್ಲಾ ನಸು ನಾಚುತ್ತಾ ಹೊರಗೆ ಹೋದರು. ಅವರ ಮುಖವನ್ನೇ ನೋಡುತ್ತಾ ಕುಳಿತಿದ್ದ ನಮ್ಮನ್ನು ಕಂಡು " ನಾನೀಗ ಮತ್ತೊಮ್ಮೆ ಹೊರಗೆ ಹೋಗಿ ಒಳಗೆ ಬರ್ತೀನಿ. ಆಗ ನೀವೆಲ್ಲಾ ಎದ್ದು ನಿಂತು 'ನಮಸ್ತೆ ಸರ್' ಅಂತ ಹೇಳಬೇಕು" ಎಂದರು. ಆಗಲೇ ನಮಗೆಲ್ಲಾ ಅವರು ನಮ್ಮ ಸರ್ ಅಂತ ಗೊತ್ತಾಗಿದ್ದು. ನಂಗೆ ಈಗ ನಿಜಕ್ಕೂ ಅಳು ಬರುವ ಹಾಗೇ ಆಯ್ತು. ನಾನು ಅವರನ್ನು ಅಜ್ಜ ಅಂತ ಹೇಳಿದ್ದಕ್ಕೆ ಅವ್ರು ಹೊಡೆದರೆ ಅನ್ನುವ ಭಯ. ಆದರೆ ಹಾಗೇನು ಆಗಲಿಲ್ಲ. ಅವರು ನಮ್ಮ ಶಾಲೆ ಎಂಬ ಭಯವನ್ನು ಹೋಗಲಾಡಿಸಿದ ಸುಬ್ಬಯ್ಯ ಮಾಷ್ಟ್ರು... 

ಶಾಲೆಯ ಕಾರಿಡಾರಿನಲ್ಲಿ ಅತ್ತಿತ್ತ ನಡೆದಾಡುವಾಗ ಅವರ ಉದ್ದದ ಜಡೆ ಕೂಡಾ ಅತ್ತಿತ್ತ ಬಳುಕಾಡುತ್ತಿತ್ತು. ಎಲ್ಲರಂತೆ ಅವರ ಉದ್ದ ಜಡೆಯನ್ನು ನೋಡುವುದು ನನಗೆ ಬಾರೀ ಇಷ್ಟದ ಸಂಗತಿಯಾಗಿತ್ತು. ಆದರೆ ಅವರ ಕೈಯಲ್ಲಿ ಸದಾ ಕಾಣುವ ಬೆತ್ತ, ಸಿಡುಕಿನ ಮುಖ, ಮಕ್ಕಳನ್ನು ಅವರಿಂದ ದೂರವೇ ಇಟ್ಟಿತ್ತು. 

ಆ ದಿನ ನಾನು ಕ್ಲಾಸ್ ರೂಮಿನ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬೆತ್ತ ಹಿಡಿದು ಬರುತ್ತಿದ್ದ ಅವರು ನನ್ನನ್ನು ಕರೆದರು. ಹೆದರಿಕೆಯಿಂದ  ಮೈಯೆಲ್ಲಾ ನಡುಗುತ್ತಾ ಅವರ ಕಡೆಗೆ ತಿರುಗಿದೆ. ಅವರು ಕೈಯಲ್ಲಿ ಹಿಡಿದ ಬೆತ್ತವನ್ನು  ನಾನು ಮುಡಿದ ಗುಲಾಬಿಗೆ ತಾಗಿಸಿ " ಇದು ನಿಮ್ಮ ಮನೆಯಲ್ಲಾಗಿದ್ದಾ" ಎಂದು ಕೇಳಿದರು. ಹೌದೆಂಬಂತೆ ತಲೆ ಅಲ್ಲಾಡಿಸಿದ ನನ್ನನ್ನು ಕಂಡು " ನಾಳೆ ಬರುವಾಗ ಅಮ್ಮನ ಹತ್ರ ಕೇಳಿ ನಂಗೆ ಒಂದು ಗೆಲ್ಲು ತರ್ತೀಯಾ" ಎಂದರು.
ನಗುತ್ತಾ ತಲೆ ಆಡಿಸಿದೆ.ಆ ದಿನವೆಲ್ಲಾ ಏನೋ ಪುಳಕ ...   ಕೆಲವು  ದಿನ ಕಳೆದು  ಹೊಸತಾಗಿ ಶುರು ಆದ ಸ್ಕೌಟ್ ಮತ್ತು ಗೈಡ್ ದಳದಲ್ಲಿ ಅವರು ನನಗಿನ್ನೂ ಹತ್ತಿರವಾದರು. 
ಮೊಟ್ಟೆ ಇಟ್ಟ ಕಪ್ಪು ಕೋಳಿ
ಮೊಟ್ಟೆ ನೋಡಿ ಕೂಗಿತು ಕೇಳಿ
ಬಿಳಿ ಮೊಟ್ಟೇ ಬಿಳಿ ಮೊಟ್ಟೇ ಬಿಳಿ ಮೊಟ್ಟೇ.. 
ಎಂದು ಅವರು ಕಲಿಸಿದ ಹಾಡನ್ನು ಹಂಚು ಹಾರುವಂತೆ ನಾವೆಲ್ಲಾ ಕಿರುಚಿ ಅವರಿಂದ ಮೆಚ್ಚುಗೆಯನ್ನೂ ಪಡೆದೆವು.  ಅವರಿಗಾಗೇ ನಾನು ತಂದ ಹೂವು ಅವರ ಉದ್ದ ಜಡೆಯನ್ನು ಅಲಂಕರಿಸಿದಾಗ ನಮಗೆಲ್ಲಾ ಖುಷಿ ..  ಅವರ ಮುಖದಲ್ಲೂ ತೆಳು ನಗು. ನಂತರ ನಮ್ಮ ತರಗತಿಗೆ ಬರುವಾಗ ಅವರ ಕೈಯನ್ನು ಸದಾ ಅಲಂಕರಿಸುತ್ತಿದ್ದ ಬೆತ್ತ ಮಾಯವಾಗಿತ್ತು. ನಾವು ಏಳನೇ ತರಗತಿ ಮುಗಿಸಿ ಹೊರಡುವಾಗ ತಾಯಿ  ಮಗಳನ್ನು  ತವರು ಮನೆಯಿಂದ  ನೀರಾಡುವ ಹಸಿಕಣ್ಣಿನಲ್ಲಿ ಹರಸಿ ಕಳುಹಿಸುವಂತೆ ಕಳುಹಿಸಿದ ನಮ್ಮ ಅಹಲ್ಯಾ ಟೀಚರ್..

ಕ್ಲಾಸಿನಲ್ಲಿ ಲೀಡರ್, ಅಳಿದೂರಿನಲ್ಲಿ ಉಳಿದವನೇ ಗೌಡ ಅನ್ನುವ ಮಟ್ಟದ ಬುದ್ಧಿವಂತೆ, ಡ್ಯಾನ್ಸ್, ಹಾಡುಗಳೆಂದರೆ ಸದಾ ತಯಾರು, ಶಾಲೆಯ ವಾರ್ಷಿಕೋತ್ಸವ , ಮಕ್ಕಳ ದಿನಾಚರಣೆಗಳೆಲ್ಲಾ  ನನ್ನ ನೃತ್ಯದಿಂದಲೇ ಶುರುವಾಗಿ ನನ್ನ ನೃತ್ಯದೊಂದಿಗೇ ಮಂಗಳ ಹಾಡುತ್ತಿದ್ದ ಸುವರ್ಣ ಕಾಲವದು.ಇಷ್ಟೆಲ್ಲಾ ಕಿರೀಟವನ್ನು ಹೊತ್ತು ನಡೆಯುತ್ತಿದ್ದ  ನನ್ನನ್ನು ಹಿಡಿದು ನಿಲ್ಲಿಸುವುದು ಕೊಂಚ ಕಷ್ಟವೇ ಆಗಿತ್ತು.
ಕ್ಲಾಸಿನಲ್ಲಿ ಯಾರನ್ನು ಹೋಮ್ ವರ್ಕ್ ಬಗ್ಗೆ ಕೇಳಿದರೂ, ನನ್ನನ್ನು ಕೇಳುತ್ತಿರಲಿಲ್ಲ. ಒಂದೆರಡು ಸಲ ಮಾಡದೇ ಹೋದಾಗಲೂ ಯಾರಿಗೂ ಗೊತ್ತಾಗಲೇ ಇಲ್ಲ.ಬಂದ ಕೂಡಲೇ ಟೀಚರ್ ಟೇಬಲ್ ಅಲಂಕರಿಸುತ್ತಿದ್ದ  ಹೋಮ್ ವರ್ಕ್ ಪುಸ್ತಕಗಳನ್ನು ಅವರ ಆಫೀಸ್ ರೂಮಿಗೆ ಕೊಂಡೊಯ್ದು ಇಟ್ಟು,  ತಿದ್ದಿದ ಪುಸ್ತಕಗಳನ್ನು ಮರಳಿ ತಂದು ಮಕ್ಕಳಿಗೆ ಹಂಚುವ ಕೆಲಸ ನನ್ನದೇ ಆದ ಕಾರಣ ನನ್ನ ಕಳ್ಳತನ ಹೊರಗೆ ಬಿದ್ದಿರಲೇ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ನಿಲ್ಲಿಸಿ 'ಎಲ್ಲಿ ನಿನ್ನ ಹೋಮ್ ವರ್ಕ್ ಪುಸ್ತಕ ಕೊಡು' ಎಂದರು. ಮಾಡಿದರಲ್ಲವೇ ಕೊಡುವುದು.. ಹಾಗೆಂದು ಒಪ್ಪಿಕೊಳ್ಳಲು ಮರ್ಯಾದೆ ಪ್ರಶ್ನೆ. ಬ್ಯಾಗಿಗೆ ಕೈ ಹಾಕಿ ತುಂಬಾ ಹೊತ್ತು ಹುಡುಕಿದಂತೆ ಮಾಡಿ ' ಮನೆಯಲ್ಲೇ ಮರೆತು ಬಂದಿದ್ದೇನೆ' ಎಂದೆ. 'ಸರಿ ನಾಳೆ ತಾ' ಎಂದು ಕೂರಿಸಿದರು.

ಮರುದಿನ ಅವರೆಲ್ಲಿ ಕೇಳುತ್ತಾರೆ ಎಂಬ ಭಂಡ ಧೈರ್ಯದಿಂದ ಕ್ಲಾಸಿನೊಳಗೆ ನುಗ್ಗಿ ಗತ್ತಿನಲ್ಲೇ ಕೂತಿದ್ದೆ. ಬಂದ ಕೂಡಲೇ ' ನಿನ್ನ ಹೋಮ್ ವರ್ಕ್ ತೋರಿಸು' ಅಂದರು. ಕಣ್ಣಲ್ಲಿ ಗಂಗಾ ಜಮುನಾ ಹರಿಸುತ್ತಾ ನಿಂತೆ. ಸಾಧಾರಣ ನನ್ನಷ್ಟೇ ಉದ್ದದ ಬೆತ್ತ ಮೇಜಿನ ಮೇಲೆ ಕುಳಿತಿತ್ತು. ಅದನ್ನು ಎತ್ತಿ ಬೋರ್ಡಿನ ಪಕ್ಕದ  ನೆಲದ ಮೇಲೆ ಕುಟ್ಟುತ್ತಾ 'ಇಲ್ಲೇ ಕೂತ್ಕೊಂಡು ಈಗಲೇ ಬರ್ದು ತೋರಿಸು' ಅಂದರು.

ಕೊಟ್ಟ ಮಾತು ತಪ್ಪದ ಪುಣ್ಯಕೋಟಿಯ ಗೋವಿನ ಹಾಡನ್ನು ಹತ್ತು ಸಲ ಬರೆದು ತೋರಿಸಿದೆ. ಅದೇ ಕೊನೆ ಮತ್ತೆಂದೂ ಹೇಳಿದ ಕೆಲಸ ಮಾಡದೇ ಹೋಗಲಿಲ್ಲ. ಒಂದು ಮಾತು ಕೂಡಾ ಬಯ್ಯದೆ ಹೀಗೆ ಪಾಠ ಕಲಿಸಿದ ಲೀಲಾವತಿ ಟೀಚರ್..

ಶಾಲೆಯ ಹಿಂದಿನ ದೊಡ್ಡ ಗುಡ್ಡವನ್ನು ಸಮತಟ್ಟುಗೊಳಿಸಿ ಸಭಾಭವನ  ಕಟ್ಟುವ ತಯಾರಿಯಲ್ಲಿ ಇದ್ದರು. ಅವರು ಗುಡ್ಡದ ಮೇಲ್ಬಾಗದಲ್ಲಿ ನಿಂತು ಕೆಳಕ್ಕೆ ನೋಡುತ್ತಾ ಇದ್ದರು. ಕಡಿಮೆ ಎಂದರೂ ಒಂದಿಪ್ಪತ್ತು ಅಡಿ ಆಳ ಇದ್ದೀತು. ಮಣ್ಣು ಕಲ್ಲಿನ ಆ ರಾಶಿ ತಮ್ಮ ಕನಸಿನ ಕಟ್ಟಡವಾಗುವುದನ್ನು ಕನವರಿಸುತ್ತಾ ಅವರು ನಿಂತಿದ್ದರೆ ಮೆಲ್ಲನೆ ಹಿಂದಿನಿಂದ ಹೋಗಿ ದೂಡುವಂತೆ ಅವರ ಬೆನ್ನು ಮುಟ್ಟಿದೆ. ಒಮ್ಮೆಲೇ ಹೆದರಿ ಆಯತಪ್ಪುವಂತಾದರು. ನಾನು ಅವರ ಕೈ ಹಿಡಿದು ಪಕ್ಕಕ್ಕೆಳೆದು ಅಳು ಮೂತಿ ಮಾಡಿ ನಿಂತೆ. ಅವರು ನಗುತ್ತಾ " ನನ್ನನು ಹೆದರಿಸಿ ಬಿಟ್ಟೆಯಲ್ಲೇ ಹುಡುಗಿ " ಅಂದರು. ಶಾಲೆಯಲ್ಲೆಲ್ಲಾ ಇದೇ ಸುದ್ಧಿ. 'ಹೆಡ್ ಮಾಷ್ಟ್ರನ್ನು ಅನಿತಾ ಹೆದರಿಸಿದಳಂತೆ..'  ಒಮ್ಮೆಗೇ ನಾನು ಶಾಲೆಯಲ್ಲಿ ವರ್ಲ್ಡ್ ಫೇಮಸ್ ಆದೆ.ಸ್ವಲ್ಪ ಹೊತ್ತಿನಲ್ಲಿ ದೊಡ್ಡ ಹುಡುಗರನ್ನು ಕರೆದು ಆ ಜಾಗದಲ್ಲಿ ಮಕ್ಕಳು ಇದೆ ರೀತಿ ತಂಟೆ  ಮಾಡಿ ಬೀಳುವುದು ಬೇಡ ಎಂದು ತಡೆ ಬೇಲಿ ಮಾಡಿಸಿದರು.  

ಅದೇ ದಿನ ಸಂಜೆ ಪ್ರಾರ್ಥನೆ ಸಮಯದಲ್ಲಿ ಒಂದೊಂದಾಗಿ ಕೆಲವು ಹೆಸರನ್ನು ಕರೆದರು. ಆ ಹೆಸರುಗಳಲ್ಲಿ ನನ್ನದೂ ಇತ್ತು. ನೀವಿಷ್ಟೂ ಜನ ನಾಳೆ ಬೆಳಗ್ಗೆ ಬೇಗ ಶಾಲೆಗೆ ಬರಬೇಕು ಅಂದರು. ಯಾಕಿರಬಹುದು ಎಂಬ ಕುತೂಹಲ ನಮ್ಮದು. ಬೆಳಗಾಗುವುದನ್ನೇ ಕಾದು ಅವರು ಹೇಳಿದ ಹೊತ್ತಿಗೆ  ಬಂದು ನಿಂತೆವು. ನಮ್ಮಿಂದ  ಮೊದಲೇ ಬಂದಿದ್ದ ಹೆಡ್ ಮಾಷ್ಟ್ರು ಅಂಗಳದಲ್ಲಿ  ಸ್ವಲ್ಪ ದೂರ ದೂರಕ್ಕೆ ಚಾಕ್ ಪೀಸಿನಲ್ಲಿ ತ್ರಿಕೋನದ ಮೂರು ಬಿಂದುಗಳಂತೆ ಮೂರು ದೊಡ್ಡ ಉರುಟುಗಳನ್ನು ಹಾಕಿದ್ದರು. ನಮ್ಮನ್ನೆಲ್ಲಾ ಒಂದೊಂದರೊಳಗೆ ಒಬ್ಬೊಬ್ಬರು ನಿಲ್ಲುವಂತೆ ಮಾಡಿದರು. ನಮ್ಮ ಕೈಗೆ ಮುಟ್ಟಿದರೆ ಝಣ್ ಝಣ್ ಎನ್ನುವ ಲೇಜಿಮ್ ಗಳನ್ನು ನೀಡಿ ಹೆಜ್ಜೆಗಳನ್ನು ಆ ಮೂರು ಉರುಟುಗಳಿಂದ ಹೊರ ಬಾರದೇ ಇರುವಂತೆ ಮಾಡಿ ಹೆಜ್ಜೆ ಹಾಕಲು ಕಲಿಸಿದರು.ಹೀಗೆ ತಯಾರಾದ ನಮ್ಮ ಲೇಜಿಮ್ ಮತ್ತು ಕೋಲಾಟದ ತಂಡ ಎಲ್ಲಾ ಕಡೆಗಳಿಂದ ಬಹುಮಾನಗಳನ್ನು ಬಾಚಿಕೊಳ್ಳುತ್ತಿತ್ತು. ನಮ್ಮ ಅತಿ ವೇಗದ ಹೆಜ್ಜೆಗಳು ಎಲ್ಲರ ಮನ ಗೆಲ್ಲುತ್ತಿತ್ತು. ಲೇಜಿಮ್ ನ ಎರಡೂ ಕಡೆಗೆ ಉರಿಯುವ ಪಂಜುಗಳನ್ನು ಕಟ್ಟಿ ಕತ್ತಲೆಯಲ್ಲಿ ಲೇಜಿಮ್ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ, ಮತ್ತೆ ಕೆಲವರ ಹೆದರಿಕೆಗೂ ಪಾತ್ರವಾಗಿದ್ದೆವು.ಹಳ್ಳಿ ಶಾಲೆಯ ಮಕ್ಕಳಿಗೆ ಮೊದಲ ಬಾರಿ ಬ್ಯಾಡ್ ಮಿಂಟನ್ ಆಟ ಪರಿಚಯಿಸಿ, ರಾಜ್ಯ ಮಟ್ಟಕ್ಕೇರಿದ ತಂಡವನ್ನು ಸಿದ್ಧಪಡಿಸಿದವರೂ ಅವರೇ..ಖೊ ಎಂದು ಬೆನ್ನಿಗೆ ಬಡಿದು ಆಡುವ ಖೊ ಖೊ ಆಟವನ್ನು ಹೇಳಿಕೊಟ್ಟವರು ಅವರೇ ..  ಶಾಲೆ ಎಂದರೆ ಕೇವಲ ಪಾಠ ಮಾತ್ರ ಎಂಬ ಭ್ರಮೆಯನ್ನು ದೂರ ಮಾಡಿ ವಿದ್ಯಾರ್ಥಿಗಳ ಹತ್ತು ಹಲವು ಪ್ರತಿಭೆಗಳನ್ನು ಹೊರತೆಗೆದ  ರಮೇಶ್ ಹೆಡ್ ಮಾಷ್ಟ್ರು..

ಮಧ್ಯಾಹ್ನ ಊಟ ಮಾಡದೇ ಆಗಾಗ ವಿದ್ಯಾರ್ಥಿಗಳು ಹಸಿವಿನಿಂದ ಬಳಲಿ ತಲೆ ತಿರುಗಿ ಬೀಳುವುದು ನಮ್ಮ ಶಾಲೆಯಲ್ಲಿ ಸಾಮಾನ್ಯ ಸಮಸ್ಯೆ. ಇದಕ್ಕೆ ಹೆತ್ತವರು ಬಡವರಿರಬಹುದು ಪಾಪ ಎಂಬ ಅನುಕಂಪ ಬೇಡ. ಮನೆಯಿಂದ  ಬುತ್ತಿ ಕಟ್ಟಿ ಕೊಟ್ಟದ್ದನ್ನು ದಾರಿಯಲ್ಲೇ ಎಸೆದು ಬರುತ್ತಿದ್ದವರ ಸಂಖ್ಯೆಯೇ ಇದರಲ್ಲಿ ಹೆಚ್ಚಿದ್ದುದು.. ಇದಕ್ಕಿದ್ದ ದೊಡ್ಡ ಕಾರಣವೆಂದರೆ ಊಟ ಮಾಡಿಕೊಂಡು ಸಮಯ ಹಾಳು ಮಾಡಿ, ತಮ್ಮ ಆಟದ ಹೊತ್ತನ್ನು ಕಡಿಮೆ ಮಾಡಲು ಮನಸ್ಸಿಲ್ಲದಿದ್ದುದೇ ಆಗಿತ್ತು. 
ಇದನ್ನು ತಡೆಯಲು ಶಾಲೆಯಲ್ಲಿ ಆಗಾಗ ಶಿಕ್ಷಕರು ಕ್ಲಾಸಿನಲ್ಲಿ ಎಲ್ಲರ ಬುತ್ತಿಗಳನ್ನು ಪರಿಶೀಲಿಸಿ ತಾರದಿದ್ದ ಮಕ್ಕಳಿಗೆ ಕಠಿಣ ಶಿಕ್ಷೆ ವಿಧಿಸುವುದೂ ಜಾರಿಗೆ ಬಂತು. ನಾನು ಕೂಡಾ ಅಮ್ಮ ಕೊಟ್ಟ ಬುತ್ತಿಯನ್ನು ಮನೆಯಲ್ಲೇ ಮಂಚದ ಅಡಿಯಲ್ಲಿ ಅಡಗಿಸಿಟ್ಟೋ, ದೊಡ್ಡ ಸ್ಟೀಲ್ ಪಾತ್ರಗಳ  ಹಿಂದೆ  ಬಚ್ಚಿಟ್ಟು ಬರುವುದರಲ್ಲಿ ಪರಿಣತಿಯನ್ನು ಸಾಧಿಸಿದ್ದೆ. 

ತುಂಬಾ ದಿನಗಳಿಂದ ಬುತ್ತಿ ಪರಿಶೀಲನೆ ಇಲ್ಲದೆ ನಾವುಗಳೆಲ್ಲ ಮೊದಲಿನಂತೆ ಬುತ್ತಿ ತಾರದೇ ಬರುತ್ತಿದ್ದೆವು. ಆ ದಿನ ಕ್ಲಾಸಿಗೆ ಪಾಠ ಮಾಡಲು ಬಂದ ಸರ್ ' ಎಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಬುತ್ತಿ ತೋರಿಸಿ' ಅಂದರು. ನನ್ನ ಬುತ್ತಿ ಆ ದಿನ ಮನೆಯ ಮಂಚದಡಿಯಲ್ಲಿತ್ತು.  ಒಬ್ಬೊಬ್ಬರಾಗಿ ನಿಂತು ತಮ್ಮ ಬುತ್ತಿಯನ್ನು ಕೈಯಿಂದ  ಎತ್ತಿ ತೋರಿಸಿ ಅದರೊಳಗೆ ಏನಿದೆ ಎಂಬುದನ್ನು ಹೇಳಬೇಕಿತ್ತು. ಹೆಚ್ಚಿನವರು ಪೇಪರಿನಲ್ಲಿ ಸುರುಳಿ ಸುತ್ತಿದ ರೊಟ್ಟಿಯನ್ನು ತಂದಿದ್ದರು. ನನ್ನ ತಲೆಗೆ ಅದನ್ನು ನೋಡಿ ಉಪಾಯ ಹೊಳೆಯಿತು. ನಲ್ವತ್ತು ಪೇಜಿನ ಕಾಪಿ ಪುಸ್ತಕದ ಖಾಕಿ ಕಲರಿನ ಬೈಂಡ್  ತೆಗೆದು, ಪುಸ್ತಕವನ್ನು ಸುರುಳಿ ಸುತ್ತಿ ಅದರ ಹೊರಗೆ ಖಾಕಿ ಬೈಂಡನ್ನು ಸುತ್ತಿ ರೊಟ್ಟಿಯ ಸುರುಳಿಯಂತೆ ತಯಾರು ಮಾಡಿದೆ. ನನ್ನ ಸರದಿ ಬಂದಾಗ ರೊಟ್ಟಿ, ಗೆಂಡೆಕಾಳು ಗೈಪ್ಪು'(ಆಲೂಗಡ್ಡೆ ಬೀನ್ಸ್ ಕಾಳಿನ ಗಟ್ಟಿಯಾದ ಸಾಂಬಾರ್) ಎಂದೆ. ಬೀಸುವ ದೊಣ್ಣೆ ತಪ್ಪಿತ್ತು. 

ಅವರು ತುಂಬಾ ಸ್ಟ್ರಿಕ್ಟ್ ಎಂದೇ ಹೆಸರುವಾಸಿ. ಅವರ ಹತ್ತಿರ ನಿಂತು  ಮಾತನಾಡುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಅವರು ಪ್ರತಿ ಪಾಠದಿಂದ ಕಡಿಮೆ ಎಂದರೂ ಎಪ್ಪತ್ತು ಪ್ರಶ್ನೆಗಳನ್ನು ತಾವೇ ಸಿದ್ಧ ಮಾಡಿ ಕೊಡುತ್ತಿದ್ದರು. ಅದಕ್ಕೆಲ್ಲಾ ಉತ್ತರ ಬರೆಯುವುದೆಂದರೆ ಪಾಠ ಪುಸ್ತಕವನ್ನು ಇಡಿಯಾಗಿ ಓದಬೇಕಿತ್ತು. ಆ ಪ್ರಶ್ನೆಗಳನ್ನು ಅವರು ಶಾಲೆಯಲ್ಲಿ ಹೊಸತಾಗಿ ಬಂದ ಟೈಪ್ ರೈಟಿಂಗ್ ಮಿಷನ್ನಿನಲ್ಲಿ ಪ್ರಿಂಟ್ ಮಾಡಿಸುತ್ತಿದ್ದರು. ಒಂದು ಪಾಠ ಮುಗಿದ ಕೂಡಲೇ ಸಿದ್ಧಗೊಳ್ಳುತ್ತಿದ್ದ ಅದನ್ನು ನಾನು ಕ್ಲಾಸಿನಲ್ಲಿ ಓದಿ ಹೇಳಿ ಎಲ್ಲರೂ ಬರೆದುಕೊಳ್ಳುವಂತೆ ಮಾಡುತ್ತಿದ್ದೆ. ಆ ಹೊತ್ತಿನಲ್ಲಿ ಅವರು ಅದರಿಂದ ಮೊದಲು ಕೊಟ್ಟ ಪ್ರಶ್ನೆಗಳ ಉತ್ತರ ತಿದ್ದುತ್ತಿದ್ದರು.

ಆ ದಿನವೂ ಕೆಲವು ಪ್ರಶ್ನೆಗಳನ್ನು ಓದಿ ಹೇಳಿ ಆಗಿತ್ತು. ಇದ್ದಕ್ಕಿದ್ದಂತೇ ಕಂಡ ಪ್ರಶ್ನೆ ನೋಡಿ ನಗು ತಡೆಯಲಾಗಲಿಲ್ಲ. ನೋಟ್ಸ್ ತಿದ್ದುತ್ತಿದ್ದ ಅವರ ಹತ್ತಿರ ಹೋಗಿ ಇದನ್ನು ಜೋರಾಗಿ ಓದಿ ಎಂದೆ. " ಮಾನವನ ಮೂತ್ರ ಜನಕಾಂಗದ ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ" ಎಂದು ಓದಿದರು. ನಾನಿನ್ನೂ ಅಲ್ಲೇ ನಿಂತು ಸರಿಯಾಗಿ ಓದಿ ಎಂದೆ. ಮತ್ತೊಮ್ಮೆ ಕಣ್ಣಾಡಿಸಿ 'ಮಹಾ ತರಲೆ ಕಣಮ್ಮಾ ನೀನು ಎಂದು' ಅವರೂ ನಕ್ಕರು. 'ಮಾನವನ' ಎಂದಿರಬೇಕಾದಲ್ಲಿ 'ಮಾವನ' ಎಂದಿತ್ತು. 

ಶಾಲೆಯ ಒಂದು ಕವಾಟಿನ ಲೈಬ್ರರಿಯು ಮತ್ತಷ್ಟು ಕವಾಟುಗಳನ್ನು ಮರಿ ಹಾಕುವಲ್ಲಿ ಅವರ ಪುಸ್ತಕ ಪ್ರೀತಿ ಕೆಲಸ ಮಾಡಿತ್ತು. ಮೊದ ಮೊದಲು ಕವಾಟಿನೊಳಗೆ ಬಂಧಿಯಾಗಿದ್ದ ಪುಸ್ತಕ ಮಕ್ಕಳ ಕೈಗೆ ಯಾವಾಗ ಬೇಕೆಂದರಾವಾಗ ಮುಕ್ತವಾಗಿ ಸಿಗುವಂತೆ ಮಾಡಿದ ಪೊನ್ನಪ್ಪ ಸರ್.. 

ಉಪ್ಪಿನಕಾಯಿ  ಹಾಡು ಕಲಿಸಿದ ವೇದಾವತಿ ಟೀಚರ್..

ಹಿಂದಿ ಅಕ್ಷರಗಳನ್ನು ಚಿತ್ರಗಳೇನೋ ಎಂಬಂತೆ ನೋಡುತ್ತಿದ್ದ ನಮಗೆ ಹಿಂದಿ ಕಷಾಯವನ್ನು ಆರೆದು ಕುಡಿಸಿದ ಸರಸ್ವತಿ ಟೀಚರ್..

ಇಂಗ್ಲೀಷಿನ ಅಕ್ಷರಗಳನ್ನು ಝೆಡ್ ನಿಂದ  ಎ ಯವರೆಗೆ ಉಲ್ಟಾ ಬರೆಯಲು ಕೂಡಾ ಕಲಿಸಿದ ಪ್ರಸನ್ನ ಸರ್.. 

ನಾವು ಆನೆಮರಿ ಎಂದು ಅವರನ್ನು ಆಡಿಕೊಳ್ಳುವುದನ್ನು ತಿಳಿದಿದ್ದರೂ ಬೇಸರಿಸದೇ ರಸಾಯನ ಶಾಸ್ತ್ರವನ್ನು ಮಾವಿನಹಣ್ಣಿನ ರಸಾಯನದಂತೆ ಸಿಹಿಯಾಗಿ ಉಣಬಡಿಸಿದ ಕರುಣಾಕರ್ ಸರ್..

ಯಾರನ್ನು ನೆನೆದರೂ ಇವರು ನಮ್ಮ ಗುರುಗಳಾಗಿದ್ದರು ಎಂದು ಮನ ತುಂಬಿ ಬರುವಂತೆ ಮಾಡಿದವರಿಗೆಲ್ಲಾ ಈ ಶಿಷ್ಯೆಯ ಸಾಷ್ಟಾಂಗ  ಪ್ರಣಾಮಗಳು..