Pages

Total Visitors

Sunday, November 27, 2011

ಸಂಧ್ಯೆ ...

ಸಂಜೆ ಆರು ಗಂಟೆಯ ಹೊತ್ತಿಗೆ ಯಾರೇ ಬಂದು ಈ ಪಾರ್ಕಿನ ಉತ್ತರ ಮೂಲೆಯ ಬೆಂಚ್ ಕಡೆಗೆ ದ್ಟೃಷ್ಟಿ  ಹಾಯಿಸಿದರೆ ಇಲ್ಲಿ  ಕುಳಿತಿರುವ ನನ್ನನ್ನು ನೋಡದಿರಲು ಸಾಧ್ಯವೇ ಇಲ್ಲ. ಸರಿಯಾಗಿ ಅರ್ಧ ಗಂಟೆಯ ನಂತರ ಇಲ್ಲಿಂದೆದ್ದು ಎರಡು ಕಿ ಮೀ  ದೂರ ಇರುವ ಮನೆಯ ಕಡೆ ನಿಧಾನಕ್ಕೆ ಹೆಜ್ಜೆ ಹಾಕುತ್ತೇನೆ. 

ಆದರೆ ಇವತ್ತು ಗಂಟೆ ಏಳಾದರೂ ಇಲ್ಲಿಂದ ಎದ್ದಿಲ್ಲ. ಏಳೋಣ ಎಂದುಕೊಳ್ಳುವಾಗ ಹೊರಗಿನ ವಿದ್ಯುದ್ದೀಪಗಳ ಬೆಳಕಿನಲ್ಲಿ ಹಗಲಿನಷ್ಟೇ ನಿಚ್ಚಳವಾಗಿ ಕಾಣುವ ಪೇಟೆ, ಜನರ ಓಡಾಟ ನನ್ನನ್ನಿಲ್ಲೇ ಕೂರುವಂತೆ ಮಾಡಿತ್ತು. ಕುಳಿತ ಕಡೆಯಿಂದಲೇ ಜೋಮು ಹಿಡಿದ ಕಾಲನ್ನು ಆಚೆ ಈಚೆ ಮಾಡುತ್ತಿದ್ದೆ ಅಷ್ಟೆ. ನನ್ನ ನೋಟ ಎಲ್ಲಾ ರಸ್ತೆಯ ಕಡೆಗೆ.. 

ವಾಚಿನ ಕಡೆ ನೋಡಿದೆ. ಏಳೂವರೆ ಸಮೀಪಿಸುತ್ತಿತ್ತು. ಮನೆ ತಲುಪಿ, ಮೆಚ್ಚಿನ ಟಿ ವಿ  ಸೀರಿಯಲ್ ನೋಡುವ ಹೊತ್ತು. ಮನೆಯಲ್ಲಿರುವ ಸೊಸೆ, ಮೊಮ್ಮಗಳು ನನ್ನನ್ನು ಕಾಣದೆ ಗಾಭರಿಯಾಗುವುದು ಖಂಡಿತಾ. ಮಗ ಆಫೀಸ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ. 


ಅರೇ.. ಈ ಜನಗಳೆಲ್ಲ ಇನ್ನೂ ಎಷ್ಟೊಂದು ಸಡಗರದಿಂದ ಅತ್ತಿತ್ತ ತಿರುಗುತ್ತಿದ್ದಾರೆ.. ಬೇಗ ಬೇಗ ಮನೆ ಸೇರಿಕೊಳ್ಳಬಾರದಾ ಇವರಿಗೆ.. ಕೂತಲ್ಲೇ ಸಿಡಿಮಿಡಿಗೊಂಡೆ. ಗಂಟೆ ಮುಳ್ಳು ಎಂಟರ ಹತ್ತಿರ ಬಂದಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಈ ಪಾರ್ಕಿನ ಗೇಟನ್ನು ಕ್ಲೋಸ್ ಮಾಡ್ತಾರೆ. ಬೀಗ ಹಾಕುವವ ಬಂದು ನನ್ನನ್ನು ನೋಡಿ ಏನ್ಸಾರ್ ಇಲ್ಲೇ ಕೂತಿದ್ದೀರಾ.. ಏಳಿ ಮನೆಗೆ ಹೋಗಿ ಅಂದ್ರೇನು ಮಾಡೋದು.. ಛೇ.. 

ಮಾಗಿಯ ಚಳಿ ಗಾಳಿ ಶರೀರವನ್ನು ಗಡಗುಟ್ಟಿಸುತ್ತಿತ್ತು. ಎಷ್ಟು ಮುದುಡಿ ಕುಳಿತರೂ ಒಳಗಿನಿಂದಲೇ ನಡುಕ.. ಮನೆಯಲ್ಲಿದ್ದಿದ್ದರೆ ಈಗ ಸೊಸೆ ಕೊಡುವ ಚಪಾತಿ, ಬಿಸಿ ಪಲ್ಯದ ರುಚಿ ನೋಡುವ ಸಮಯ. ನೆನೆಸಿಕೊಂಡ ಕೂಡಲೇ ಯಾಕೋ ಹೊಟ್ಟೆ ಹಸಿಯಲು ಪ್ರಾರಂಭಿಸಿತು. 

ಏನಾದರಾಗಲಿ .. ಎದ್ದು ಮನೆ ಕಡೆಗೆ ಹೋಗಿಯೇ ಬಿಡೋಣ ಎಂದುಕೊಳ್ಳುವಷ್ಟರಲ್ಲಿ ಹಿಂದಿನಿಂದ 'ಅಜ್ಜಾ.. ನೀವಿನ್ನೂ ಇಲ್ಲೇ ಕೂತ್ಕೊಂಡು ಏನ್ ಮಾಡ್ತಿದ್ದೀರಾ.. ನಮ್ಗೆಲ್ಲ ಎಷ್ಟು ಗಾಭರಿಯಾಯ್ತು ಗೊತ್ತಾ.. ಹುಷಾರಾಗಿದೀರ ತಾನೇ.. ಏಳಿ .. ಅಮ್ಮ ನಿಮ್ಗೆ ಗಾಡೀಲಿ ಕೂರುವಾಗ ಚಳಿ ಆಗ್ಬಹುದು ಅಂತ ಶಾಲು ಕಳ್ಸಿದ್ದಾಳೆ. ಇದನ್ನು ಹೊದ್ಕೊಂಡು ನನ್ನ ಕೈನೆಟಿಕ್ ಏರಿ..' ಎನ್ನುವ ಮೊಮ್ಮಗಳ ನುಡಿ. 
ಕುಳಿತಲ್ಲಿಂದಲೇ ಶಾಲಿಗೆ ಕೈಚಾಚಿ 'ನಡೀ ತಾಯಿ  ಬರ್ತೀನಿ' ಅಂದೆ.
ಅವಳು ಮುಂದೆ ಹೋಗುತ್ತಿದ್ದಂತೆ 'ಬದುಕಿದೆಯಾ ಬಡ ಜೀವವೇ' ಎಂದುಕೊಂಡು ಶಾಲನ್ನು ಇಡೀ ದೇಹಕ್ಕೆ ಸುತ್ತಿಕೊಂಡು ಎದ್ದೆ. 

ಆದದ್ದಿಷ್ಟೇ.. ಯಾರೋ ನಾನು ನಿತ್ಯ ಕುಳಿತುಕೊಳ್ಳುವ ಬೆಂಚಿನ ಕೆಳಗೆ ತಿಂಡಿ ತಿಂದು ಆ ಪ್ಲಾಸ್ಟಿಕ್ ಕವರನ್ನು ಹಾಗೇ ಎಸೆದು ಹೋಗಿದ್ದರು. ಅದನ್ನು ಡಸ್ಟ್ ಬಿನ್‌ಗೆ ಹಾಕೋಣವೆಂದು ಬಗ್ಗಿ ಹೆಕ್ಕುವಾಗ ಪ್ಯಾಂಟ್ ಪರ್ರನೆ ಹರಿದು ಹೋಗಿತ್ತು. ನನ್ನ ಪುಣ್ಯ.. ಸೊಸೆ ಚಳಿಗೆ ಅಂತ ಕಳುಹಿಸಿ ಕೊಟ್ಟ ಈ ಶಾಲಿನಿಂದ ಮರ್ಯಾದೆ ಉಳೀತಪ್ಪಾ..ಎಂದುಕೊಂಡು ಇನ್ನೂ  ಕೈಯಲ್ಲೇ ಉಳಿದಿದ್ದ ಕಸವನ್ನು ಡಸ್ಟ್ ಬಿನ್ನಿನೊಳಕ್ಕೆ ಎಸೆದು, ಮೊಮ್ಮಗಳು ನಿಲ್ಲಿಸಿದ್ದ ಗಾಡಿಯ ಕಡೆಗೆ ಉತ್ಸಾಹದಿಂದ ಬೇಗ ಹೆಜ್ಜೆ ಹಾಕತೊಡಗಿದೆ. 

Wednesday, November 23, 2011

ಕಾಶೀಯಾತ್ರೆ

ದೂರದಲ್ಲಿ ನೋಯುತ್ತಿರುವ ಕಾಲನ್ನು ಎಳೆದು ಹಾಕಿಕೊಂಡು ಬರುತ್ತಿರುವ ಎಂಕಜ್ಜ ಕಾಣಿಸಿದ,ಸ್ಮಶಾನದ ಕಾವಲುಗಾರ ದೇವನಿಗೆ. ಈಗೀಗ ಎಂಕಜ್ಜನಿಗೆ ನಡೆಯುವ ಶಕ್ತಿಯೇ ಕಡಿಮೆಯಾಗಿತ್ತು. ಬಿಕ್ಷೆ ಬೇಡಲು ಹೋಗಬೇಡ ಎಂದು ಹೇಳಿದರೂ ಕೇಳದೆ ನಸುಕಿನಲ್ಲೆದ್ದು ಜೋಳಿಗೆ  ಹಿಡಿದು ಹೊರಟು ಬಿಡುತ್ತಿದ್ದ.
ಏದುಸಿರು ಬಿಡುತ್ತಾ ಬಂದವನೇ ಅಲ್ಲಿದ್ದ ಕಟ್ಟಿಗೆಯ ರಾಶಿಯ ಪಕ್ಕದಲ್ಲಿ ಉಸ್ಸಪ್ಪ ಎಂದು ಕುಳಿತ. ಸ್ವಲ್ಪ ದೂರದಲ್ಲಿ ಹೊಸದಾಗಿ ಉರಿಯುತ್ತಿದ್ದ ಚಿತೆಯನ್ನು ನೋಡಿ .ದೇವನ ಕಡೆಗೆ ಮುಖ ಮಾಡಿ 'ಯಾರದೋ'.. ಎಂದು  ಕೇಳಿದ.
ಕಾಶೀ ಕೃಷ್ಣಯ್ಯನವರದ್ದು ..ಎಂದ ದೇವ.
'ಪುಣ್ಯವಂತರು ಕಣಪ್ಪ ಅವ್ರು.. ವರ್ಷ ವರ್ಷ ಕಾಶಿಗೆ ಹೋಗಿ ಬಂದು ಕಾಶಿ ಸಮರಾಧನೆ ಮಾಡಿ ಊರಿನ ಜನರಿಗೆಲ್ಲಾ ಹೊಟ್ಟೆ ತುಂಬಾ ಊಟ ಹಾಕಿಸ್ತಿದ್ದರು. ಹೋಗಿಯೇ ಬಿಟ್ರಾ..' ಎಂದು ಚಿತೆಯ ಕಡೆಗೆ ತಿರುಗಿ ಕೈ ಮುಗಿದ.
ಮತ್ತೆ ನಿಟ್ಟುಸಿರಿಡುತ್ತಾ, ಎಲ್ಲದಕ್ಕೂ ಪಡ್ಕೊಂಡು ಬಂದಿರಬೇಕು ಕಣ್ಲಾ... ನಮ್ಗೆಲ್ಲಾ ಎಲ್ಲಿಂದ ಬರಬೇಕು  ಅಂತಾ ಅದೃಷ್ಟ.. ಎಂದವನೇ ಜೇಬೆಲ್ಲಾ ತಡಕಾಡಿ ಆ ದಿನದ ಭಿಕ್ಷೆಯ ಗಳಿಕೆಯನ್ನೆತ್ತಿ  ದೇವನೆಡೆಗೆ ಚಾಚಿದ. ದೇವ ಆ ಪುಡಿಕಾಸುಗಳನ್ನೆತ್ತಿಕೊಂಡು ಯಾಂತ್ರಿಕವಾಗಿ ಎಣಿಸತೊಡಗಿದ. ಎಂಕಜ್ಜ ಆಸೆ ಹೊತ್ತ ಹೊಳಪುಗಣ್ಣುಗಳನ್ನು ದೇವನೆಡೆಗೆ ನೆಟ್ಟು, ಸಾಕಾದೀತೇನೋ ಮಗ..ಜೀವ ಹೋಗೊದ್ರೊಳಗೆ ಒಂದಪಾ ಕಾಶಿಗೆ ಹೋಗಬೇಕು ಅಂತ ಬಲು ಆಸೆ ಕಣ್ಲಾ..ಅನ್ನುತ್ತಾ ಆಕಾಶದ ಕಡೆಗೆ ಕೈ ಮುಗಿದ. ನಿಂಗೆಲ್ಲೋ ಹುಚ್ಚು ಅಜ್ಜ.. ನಾಲಕ್ಸಲ ನಮ್ಮೂರ ಸಂತೆಗೆ ಹೋಗಿ ಬರೋದ್ರೊಳಗೆ ಮುಗಿಯುತ್ತೆ ನಿನ್ನ ಕಾಸು.. ಇನ್ನು ಕಾಶಿ ಎಲ್ಲಿ.. ಎಂದು ದೇವ ನಗೆಯಾಡಿದ. 
ದೇವನ ಮಾತು ಕೇಳಿ ಎಂಕಜ್ಜನಿಗೆ  ದುಃಖದಿಂದ ಕಣ್ಣು ಮಂಜಾಗತೊಡಗಿತು.  ಇತ್ತೀಚೆಗೆ ದೇಹದ ಶಕ್ತಿ ಕುಂದಿದ ಮೇಲೆ ಚಿಕ್ಕ ಚಿಕ್ಕ ವಿಷಯಕ್ಕೂ ಅಳುತ್ತಿದ್ದ ಎಂಕಜ್ಜ. 
ಹೇ..  ಸುಮ್ಕಿರು ಅಜ್ಜ.. ನಾನು ನನ್ ದುಡ್ಡು ಕೂಡಿ ಹಾಕಿ ನಿನ್ನ ಕಾಶಿಗೆ ಕರ್ಕೊಂಡೋಗ್ತೀನಿ.. ಇದ್ರಪ್ಪನಂತಾ ಸ್ಮಶಾನಗಳಿವ್ಯಂತೆ ಅಲ್ಲಿ.. ನಂಗೂ ನೋಡ್ಬೇಕು.. ಈಗ ನೀನು ಒಳಕ್ ನಡಿ.. ಅಲ್ಲಿ ಅಯ್ನೋರ್ ಮನೆಯವರು ಕೊಟ್ಟ ಹಣ್ಣುಗಳಿದೆ. ಬೇಕಾದ್ರೆ ತಿನ್ನು ಎಂದ. 
ಕೆನ್ನೆಯಲ್ಲಿಳಿಯುತ್ತಿದ್ದ ಕಣ್ಣೀರನ್ನು ಒರೆಸುವ ಪ್ರಯತ್ನವೂ ಮಾಡದೆ, ನಂಗೇನೂ ಬೇಡಾ ಬಿಡ್ಲಾ.. ಯಾಕೋ ಈಗೀಗ ಹೊಟ್ಟೆನೇ ಹಸಿಯಾಕಿಲ್ಲ ಅಂತದೆ.. ಅನ್ನುತ್ತಾ ಕಾಲೆಳೆದುಕೊಂಡು ಗುಡಿಸಲಿನ ಒಳ ಹೊಕ್ಕ ಎಂಕಜ್ಜ. ಪಾಪ ಕಾಶಿ ಯಾತ್ರೆ ಒಂದೇ ಅಜ್ಜನಿಗಿರೋ ಆಸೆ.ನಮ್ಮಂತವರ ಆಸೆಗಳೆಲ್ಲ ಪೂರೈಸಲುಂಟೇ..  ದೂರದ ಚಿತೆಯ ಕಡೆಗೆ ದ್ಟೃಷ್ಟಿ  ಹರಿಸಿದ ದೇವ. 
ಹಾಗೆ ನೋಡಿದರೆ ಎಂಕಜ್ಜನಿಗೂ , ದೇವನಿಗೂ ಏನೂ ಸಂಬಂಧವಿರಲಿಲ್ಲ. ಎರಡೂ ಅನಾಥ ಜೀವಗಳು. ಚಿಕ್ಕಂದಿನಲ್ಲೇ ತಬ್ಬಲಿಯಾಗಿ ಬೀದಿಗೆ ಬಿದ್ದಿದ್ದ ದೇವ ಅಲ್ಲಿ ಇಲ್ಲಿ ಚಿಂದಿ ಆಯ್ದು ಬದುಕುತ್ತಿದ್ದ. ರಾತ್ರಿಯಾಗುತ್ತಿದ್ದಂತೇ ಬಸ್ ಸ್ಟ್ಯಾಂಡ್‌ನಲ್ಲೋ , ಅಂಗಡಿ ಮುಂಗಟ್ಟುಗಳಲ್ಲೊ ಮಲಗುತ್ತಿದ್ದಾಗ ಎಂಕಜ್ಜನೂ ತನ್ನ ಹರುಕು ಕಂಬಳಿ ಹೊದೆದು ಜೊತೆಗೂಡುತ್ತಿದ್ದ. 
ಒಮ್ಮೊಮ್ಮೆ ಇಡೀ ದಿನ ಹೊಟ್ಟೆಗೇನೂ ಸಿಕ್ಕದೆ ಹಸಿವಿನಿಂದ ನಿದ್ದೆ ಬಾರದೆ ದೇವ ಒದ್ದಾಡುತ್ತಿದ್ದರೆ, ಎಂಕಜ್ಜ ತನ್ನ ಜೋಳಿಗೆಯಿಂದ   ಅರ್ಧ ತುಂಡು ಬನ್ನೊ, ಅನ್ನ ಸಾಂಬಾರು ಬೆರೆಸಿದಂತಿದ್ದ ಮಿಶ್ರಣವೋ, ಹೀಗೆ ಏನಾದರು ದೇವನಿಗೆ ನೀಡುತ್ತಿದ್ದ. ದೇವನೂ ಅಷ್ಟೆ, ಅಪರೂಪಕ್ಕೊಮ್ಮೊಮ್ಮೆ ಕಮಾಯಿ  ಜೋರಿದ್ದಾಗ ಸಾಬರ ಹೋಟೇಲಿನಿಂದ ಬಿರಿಯಾನಿ ತಂದು ಎಂಕಜ್ಜನಿಗೆ ಉಣಬಡಿಸುತ್ತಿದ್ದ. ನಿದ್ದೆ ಬಾರದ ರಾತ್ರಿಗಳಲ್ಲಿ ಎಂಕಜ್ಜನ ಕತೆಗಳು ಜೊತೆಯಾಗುತ್ತಿದ್ದವು.
ದಿನಗಳು ಯಾವುದೇ ಏರು ಪೇರಿಲ್ಲದೆ ಹೀಗೆ ನಡೆಯುತ್ತಿದ್ದಾಗಲೇ ಪಂಚಾಯತ್ ನವರು  ಹೊಸದಾಗಿ ಕಟ್ಟಿಸಿದ ಊರ ಹೊರಗಿನ  ಸ್ಮಶಾನ ಕಾಯುವ ಕೆಲಸ ಅಕಸ್ಮಾತಾಗಿ ದೇವನ ಪಾಲಿಗೆ ಒದಗಿ ಬಂದಿತ್ತು. ಕುಳಿರ್ಗಾಳಿಗೆ ನರ್ತಿಸುತ್ತಿದ್ದ ಉರಿಯುವ ಚಿತೆಗಳ ಕೆನ್ನಾಲಗೆಗಳು ಪಿಶಾಚಿಗಳ ಒಡ್ಡೋಲಗದಂತೆ ಕಂಡು, ನಂಗೆ ಹೆದರಿಕೆ ಆಗುತ್ತೆ ನಾನೊಲ್ಲೆ ಎಂದಿದ್ದ . 
ಆಗ ಎಂಕಜ್ಜ ದೇವನನ್ನು ಕೂರಿಸಿಕೊಂಡು, ಸ್ಮಶಾನದಾಗೆ ನಮ್ಮಪ್ಪ ಶಿವಾ ಕುಂತಿರ್ತಾನೆ, ಪೀಡೆ ಪಿಶಾಚಿಗಳದ್ದು ಏನೂ ನಡೆಯಾಕಿಲ್ಲ ಅಂತ ಧೈರ್ಯ ತುಂಬಿದ್ದ. ನಿಂಗೆ ಅಷ್ಟು ಹೆದ್ರಿಕೆ ಆಗೋದಾದ್ರೆ ರಾತ್ರಿ ನಾನು ಬರ್ತೀನಿ ನಿನ್ ಜೊತೆಗೆ.. ಸಿಕ್ಕಿದ ಕೆಲ್ಸ ಬೇಡ ಅನ್ಬೇಡ ಎಂದು ಬುದ್ಧಿವಾದ ಹೇಳಿದ್ದ. ನಿಶ್ಚಿತ ವರಮಾನ ಅಲ್ಲದೆ ಹೆಣ ಸುಡಲು ಬಂದವರು ಕೊಡುವ ಕೈಕಾಸುಗಳ ಆಸೆ ತೋರಿಸಿದ್ದ. ಇನ್ನು ರಾತ್ರಿ ಮಲಗಲು, ಅಲ್ಲಿ ತಮ್ಮಿಂದ  ಮೊದಲೇ ಮಲಗಿರುತ್ತಿದ್ದ ಬೀದಿ ನಾಯಿಗಳನ್ನು ಓಡಿಸಿ ಜಾಗ ಮಾಡಿಕೊಳ್ಳುವ ಕೆಲ್ಸವೂ ಇಲ್ಲ ಎಂದು ಹೇಳಿ ನಕ್ಕಿದ್ದ. ಅಜ್ಜನ ಮಾತಿಗೆ ಒಪ್ಪಿಕೊಂಡದ್ದಕ್ಕೆ ಅಲ್ಲವೆ ತಾನು ಇಂದು ಸ್ಮಶಾನದ ಮೂಲೆಯಲ್ಲಿರುವ ಆ ಪುಟ್ಟ ಕೋಣೆಯೆಂಬ ಅರಮನೆಗೆ  ಒಡೆಯನಾಗಿರುವುದು! 
ಹೀಗೆ ಎಷ್ಟು ಹೊತ್ತು ಸಾಗಿತ್ತೊ ದೇವನ ಆಲೋಚನಾ ಲಹರಿ. ಯಾಕೋ ನೀರಡಿಕೆಯಾದಂತೆನಿಸಿ ಎದ್ದು ಗುಡಿಸಿಲಿನೆಡೆಗೆ ನಡೆದ. ಮಂದವಾಗಿ ಉರಿಯುತ್ತಿದ್ದ ಹಣತೆಯ ಬೆಳಕಿನಲ್ಲಿ ನೀರು ಕುಡಿದು ಸುಮ್ಮನೆ ಎಂಕಜ್ಜ ಮಲಗುವ ಕಡೆಗೊಮ್ಮೆ ದ್ಟೃಷ್ಟಿ  ಹರಿಸಿದ. ಅರೆ! ಅಲ್ಲಿ ಎಂಕಜ್ಜ ಇರಲಿಲ್ಲ! ಎಲ್ಲಿ ಹೋಗಿರಬಹುದು ಅಂದುಕೊಳ್ಳುವಾಗಲೇ ಬೀಸಿದ  ಗಾಳಿಗೆ  ಅರ್ಧ ತೆರೆದ ಬಾಗಿಲನ್ನು ಕಂಡು  ಹೊರಗಿಣುಕಿದ. ಕಪ್ಪು ಆಗಸದ  ನಡುವಲ್ಲಿ ಜರಿಸೀರೆಯ  ಬೊಟ್ಟುಗಳಂತೆ ಹರಡಿದ್ದವು ನಕ್ಷತ್ರಗಳು. ಕೃಷ್ಣಯ್ಯನವರ ಚಿತೆ ಸುತ್ತೆಲ್ಲಾ ನಂದಿ ನಡುವಲ್ಲಿ ಮಾತ್ರ ಸಣ್ಣದಾಗಿ ಕೆಂಪಾಗಿ ಕಾಣಿಸುತ್ತಿತ್ತು. ದೇವನ ದ್ಟೃಷ್ಟಿ  ಅಂಗಳದ ಸುತ್ತೊಮ್ಮೆ ಅಜ್ಜನಿಗಾಗಿ ಹರಿದಾಡಿತು.ಒಂದು ಮೂಲೆಯಲ್ಲಿ ಕರಿಯ ಕಂಬಳಿಯ ಸಮೇತ ಕುಪ್ಪೆಯಂತೆ ಬಿದ್ದಿದ್ದ ಎಂಕಜ್ಜ. ಧಾವಿಸಿ ಬಂದ ದೇವನ ಕೈಗೆ ತಣ್ಣಗೆ ತಗುಲಿತ್ತು ಅಜ್ಜನ ದೇಹ. ಎದೆ ಒಮ್ಮೆ ಝಲ್ ಎಂದಿತು. 
ಹೆಣ ಮುಟ್ಟುವುದು ಹೊಸತೇನೂ ಅಲ್ಲದಿದ್ದರೂ , ಕೈ ಕೂಡಲೆ ಗಾಭರಿಯಿಂದ  ಹಿಂದೆ  ಬಂತು. ಸುಮ್ಮನೇ ನೋಡುತ್ತಾ ಕುಳಿತ ದೇವ. ಸ್ವಲ್ಪ ಹೊತ್ತಿನ ಮೊದಲು ಕಾಶಿಗೆ ಹೋಗಬೇಕೆಂಬ ಕನಸು ಕಟ್ಟುತ್ತಿದ್ದ ಅಜ್ಜ ಇಷ್ಟು ಬೇಗ ತಣ್ಣಗೆ ಮಲಗಿದ್ದು ದೇವನಿಗೆ ನಂಬಲು ಕಷ್ಟವಾಗುತ್ತಿತ್ತು. ಅಜ್ಜನೊಡನೆ ಹರಕು ಕಂಬಳಿ ಹೊದ್ದು ಮಳೆ ಚಳಿಯೆನ್ನದೆ ಕಳೆದ ಅದೆಷ್ಟೊ ರಾತ್ರಿಗಳು ಇದ್ದಕ್ಕಿದ್ದಂತೆ ಜೀವ ತಳೆದು ಕಣ್ಣ ಮುಂದೆ ಬಂದು ಅಣಕಿಸಿದ ಅನುಭವ. ಕಾಲುಗಳಲ್ಲಿ ಶಕ್ತಿ ಕುಂದಿದಂತೆನ್ನಿಸಿ ದೇವ ಅಲ್ಲೆ ಕುಸಿದು ಕುಳಿತ. ಕಣ್ಣೀರು ಉಕ್ಕಿ ಹರಿಯತೊಡಗಿತು. ಎಷ್ಟು ಹೊತ್ತು ಹಾಗೆ ಕುಳಿತಿದ್ದನೋ ಅವನಿಗೆ ತಿಳಿಯಲಿಲ್ಲ . ಹಕ್ಕಿಗಳ ಕಲರವ ಕಿವಿಗೆ ಬಿದ್ದಾಗ ಪಕ್ಕನೆ ಇಹಕ್ಕೆ ಬಂದಂತೆ ಕಣ್ತೆರೆದ.
ಸಾವಿನ ಸುದ್ದಿ ಅರುಹಲು ತನ್ನನ್ನು ಬಿಟ್ಟರೆ ಇನ್ಯಾರಿದ್ದರು ಎಂಕಜ್ಜನಿಗೆ ! ಆದರೂ ಊರಿನವರಿಗೆ ತಿಳಿಸುವ ಅನಿವಾರ್ಯತೆಯಿತ್ತು .ಮೆಲ್ಲನೆ  ಸಾವರಿಸಿಕೊಂಡು ಎದ್ದವನೇ ಊರಿನ ಕೆಲವು ಜನರಿಗೆ ವಿಷಯ ತಿಳಿಸಿ , ಅಯ್ಯನವರ ಚಿತೆಯ ಪಕ್ಕದಲ್ಲೇ ಇನ್ನೊಂದು ಚಿತೆ ಸಿದ್ಧಗೊಳಿಸಿ ಎಂಕಜ್ಜನ ಶರೀರವನ್ನು ಎತ್ತಿ ಅಗ್ನಿದೇವನಿಗೆ ಅರ್ಪಿಸಿದ. 
ಯಾರು ಇರಲಿ ಇಲ್ಲದಿರಲಿ ದಿನಗಳು ತನ್ನ ಪಾಡಿಗೆ ತಾನೇ ಉರುಳುತ್ತವೆ. ಮನೆಯ ಹೊರಗಿನಿಂದ 'ದೇವಾ' ಎಂಬ ಕೂಗು ಕೇಳಿದಾಗ ಹೊರಬಂದಿದ್ದ. ಕಾಶಿ ಕೃಷ್ಣಯ್ಯನ ಕಡೆಯವರು ಹೊರಗೆ ನಿಂತಿದ್ದರು. 
ಹೆಣ ಸುಡಲು ತಂದಾಗಲೇ, ಮೂರು ದಿನ ಕಳೆದು ಬರುವುದಾಗಿಯೂ,ಕಾಶಿಯಲ್ಲಿ  ಅವರ ಅಸ್ಥಿ ಸಂಚಯನ ಮಾಡಲು ಕೊಂಚ ಬೂದಿ, ಹೊತ್ತದೆ ಉಳಿದ ಮೂಳೆಗಳನ್ನು ಒಂದು ಮಡಿಕೆಯಲ್ಲಿ ಹಾಕಿಡಲು ಹೇಳಿದ್ದರು. ದೇವನಿಗೆ ಇವರನ್ನು ಕಂಡಾಗಲೇ ನೆನಪಾಗಿದ್ದು ಆ ಕೆಲಸ. ಇಲ್ಲೆ ನಿಂತಿರಿ ಈಗ ಬಂದೆ.. ಎಂದು ಪುಟ್ಟ ಮಡಿಕೆ ಮತ್ತು ಅದರ ಬಾಯಿ  ಮುಚ್ಚುವಂತೆ ಕಟ್ಟಲು ಒಂದು ಬಿಳಿಯ ಬಟ್ಟೆಯ ತುಂಡು ಹಿಡಿದು ಹೆಣ ಹೊತ್ತಿಸಿದ ಜಾಗಕ್ಕೆ ನಡೆದ. 
ಕಾಶಿ ಕೃಷ್ಣಯ್ಯನ ಕಡೆಯವರು ಗುಡಿಸಲಿನ ಬಳಿಯಲ್ಲಿ ಏನೋ ಮಾತಿನಲ್ಲಿ ಮುಳುಗಿದ್ದರು. ದೇವ ಅವರ ಕಡೆಗೊಮ್ಮೆ ನೋಡಿ, ಕೃಷ್ಣಯ್ಯನವರ ಚಿತೆಯತ್ತ ನಡೆದ.ಅಲ್ಲೇ ಹತ್ತಿರದಲ್ಲಿ ಎಂಕಜ್ಜನ ಚಿತೆಯು ಮೌನ ಹೊದ್ದು ಮಲಗಿತ್ತು. ಎರಡು ಕಡೆಯ ಬೂದಿಗೂ ಯಾವುದೇ ವ್ಯತ್ಯಾಸ ಕಾಣಲಿಲ್ಲ.ಮನಸ್ಸಿನಲ್ಲೊಮ್ಮೆ ಎಂಕಜ್ಜನ ಕಾಶೀ ಯಾತ್ರೆಯ ಕನಸು ಹಣಕಾಡಿತು. ದೇವನಿಗೆ ಏನನ್ನಿಸಿತೊ ಏನೋ ...  ನಿರ್ಧಾರಕ್ಕೆ ಬಂದವನಂತೆ ಮೆಲ್ಲನೆ ಎಂಕಜ್ಜನ ಚಿತೆಯ ಬೂದಿ ಮತ್ತು ಅಸ್ಥಿಯನ್ನು ಮಡಿಕೆಯೊಳಗೆ ತುಂಬಿ ತಂದು ಕಾದಿದ್ದವರ ಕೈಗೆ ನೀಡಿ, ಮನದೊಳಗೆ 'ಅಜ್ಜಾ ನಿನ್ನನ್ನು ಕಾಶಿಗೆ ಒಂಟಿಯಾಗಿ ಕಳಿಸ್ತಾ ಇದ್ದೀನಿ ನೋಡು' ಎಂದ.  

Wednesday, November 16, 2011

ನಕ್ಷತ್ರ ಲೋಕ..ಪ್ರಪಂಚವಿಡೀ ಒಂದೇ ಶಬ್ಧದೊಳಗೆ ಸೇರಿಕೊಂಡಂತೆ,ಬೇರೆಲ್ಲವೂ ಇದರೊಳಗೆ ಅಡಗಿಕೊಂಡಂತೆ, ಮಗಳಿಗೆ ಮೂಸಂಬಿ ಜ್ಯೂಸ್ ಮಾಡುವ ತಯಾರಿಯಲ್ಲಿ ಬಿಡಿಸಿದ್ದ ತೊಳೆಗಳನ್ನು ಮಿಕ್ಸಿಗೆ ಹಾಕಿ ತಿರುಗಿಸುತ್ತಿದ್ದಳು. ಮಿಕ್ಸಿ ಆಫ್  ಮಾಡಿ ಜ್ಯೂಸನ್ನು ಮಗಳ ಇಷ್ಟದ ಗಾಜಿನ  ಲೋಟದೊಳಗೆ ಸುರಿಯುತ್ತಿರುವಾಗಲೇ ಹೊರಗಿನಿಂದ ಬಿಕ್ಕಳಿಸಿ ಅಳುವ ಸ್ವರ ಕೇಳಿಸಿತು ಶಾಂತಾಳಿಗೆ.

ಅರೇ..!! ಪಲ್ಲವಿ .. ಆಗ್ಲೇ ಬಂದಾಯ್ತಾ..ಇವತ್ತೇನಾಯ್ತಪ್ಪಾ ಇವಳಿಗೆ..? ಕೊಂಚ ಹಠಮಾರಿ.. ಜೊತೆಗೆ ಎಲ್ಲಾದಕ್ಕು ಅಳು.. ಎಂದು ಯೋಚಿಸುತ್ತಲೇ ಮಗಳ ಕೋಣೆಯೆಡೆಗೆ ಹೆಜ್ಜೆ ಹಾಕಿದಳು ಶಾಂತಾ..  

ಅಪ್ಪನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದರಿಂದ ಅಪ್ಪ ಅಮ್ಮ ಎಲ್ಲವೂ ಆಗಿ ಬೆಳೆಸುವ ಅನಿವಾರ್ಯತೆ. ಆದರೂ ಆಗಾಗ ಅಪ್ಪ ಎಲ್ಲಿರಬಹುದು ಈಗ ..? ನಮ್ಮಿಬ್ಬರನ್ನು ನೋಡ್ತಿರಬಹುದಾ.. ಅಂತೆಲ್ಲ ಕೇಳುತ್ತಿದ್ದಳು. 

ಆಗಸದಲ್ಲೆಲ್ಲ ಹರಡಿ ಕಣ್ಣು ಮಿಟುಕಿಸುವ ಚಿಕ್ಕಿಗಳೆಡೆಗೆ ಬೆರಳು ತೋರಿಸಿ ' ಅಪ್ಪ ನಕ್ಷತ್ರವಾಗಿದ್ದಾರೆ ಪುಟ್ಟಿ.. ಅಲ್ಲಿಂದಲೇ ನಮ್ಮನ್ನು ನೋಡ್ತಾರೆ ಎಂದು ಮಗಳನ್ನು   ಸಮಾಧಾನಿಸುತ್ತಿದ್ದಳು  ಶಾಂತಾ .. 

ರಾತ್ರಿ ಕೆಲವೊಮ್ಮೆ ಬಹಳ ಹೊತ್ತು ಆಗಸದೆಡೆಗೆ ನೋಟ ಹರಿಸುವುದು ಪಲ್ಲವಿಯ ಇಷ್ಟದ ಕೆಲಸ ಆಗಿತ್ತು. ತನಗ್ಯಾರಾದರು ಬಯ್ದರೆ, ತನ್ನನ್ನು ಹೊಗಳಿದರೆ ಎಲ್ಲವನ್ನೂ ಅಪ್ಪನಿಗೆ ಒಪ್ಪಿಸುತ್ತಿದ್ದಳು ಕಿಟಕಿಯ ಸರಳಿಗೆ ಜೋತು ಹೊರಗೆ ಕಾಣುವ ಆಗಸದೆಡೆಗೆ ನೋಡುತ್ತಾ..  ಆಗಸ ಅವಳ ಪಾಲಿಗೆ ನೆಂಟನೆ ಆಗಿತ್ತು.. 
ಮಗಳ  ಕೋಣೆಯ ಬಾಗಿಲಲ್ಲೇ ಬಿದ್ದಿದ್ದ ಶಾಲೆಯ ಬ್ಯಾಗನ್ನು ಕೈಯಲ್ಲೆತ್ತಿ ಒಳಗೆ ಇಣುಕಿದಳು. ಕಾಲಿನ ಶೂಸ್ ಗಳನ್ನು ತೆಗೆಯದೇ ಹಾಗೇ ಮಂಚದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಪಲ್ಲವಿ .

ಕೊಂಚ ಆತಂಕದಿಂದ ಹತ್ತಿರ ಹೋಗಿ ಕುಳಿತ ಶಾಂತಾ, 'ಏನಾಯ್ತು ಮುದ್ದು, ಯಾಕಳ್ತಿದ್ದೀಯಾ, ಯಾರಾದ್ರು ಏನಾದ್ರು ಅಂದ್ರಾ ನನ್ನ ಗಿಳಿಮರಿಗೆ..' ಎಂದೆಲ್ಲಾ ಪೂಸಿಹೊಡೆದಳು.
ಅಳು ಜೋರಾಯಿತೇ ವಿನಹ ಕಡಿಮೆ ಆಗಲಿಲ್ಲ. ಈಗ  ಬರೀ ಪುಟ್ಟ ಹುಡುಗಿಯೇನಲ್ಲ.. ಯಾಕೋ ಅತಿಯಾಯ್ತು  ಇವಳದ್ದು ಎನಿಸಿತು ಶಾಂತಾಳಿಗೆ..   

ಆದರೂ ಮೆತ್ತಗೆ ಬೆನ್ನು ತಲೆ ಸವರುತ್ತಾ ಅಲ್ಲೇ ಕುಳಿತಳು. 

'ಅಮ್ಮಾ' ಎಂಬ ಅಳುವಿನೊಂದಿಗೆ ನಡುಗುವ ಸ್ವರದಲ್ಲಿ ಪಲ್ಲವಿಯ ಸ್ವರ ಕೇಳಿದಾಗ ಮೆಲ್ಲನೆ 'ಏನಾಯ್ತು ಕಂದಾ' ಎಂದಳು
' ಮತ್ತೇ.. ಮತ್ತೇ.. ಅಪ್ಪಾ.. ಪುನಃ ಬಿಕ್ಕಳಿಸತೊಡಗಿದಳು ಪಲ್ಲವಿ .

'ರಾತ್ರಿ ನಾವಿಬ್ಬರೂ ನೋಡೋಣ ಅಪ್ಪನನ್ನು.. ಏನಾಯ್ತು ಹೇಳೀಗ ..'ಎಂದಳು..

ಮಲಗಿದವಳು ಮೆಲ್ಲನೆ ಎದ್ದು ಕೂತು 'ಅಮ್ಮಾ.. ಅಪ್ಪ ನಕ್ಷತ್ರವಾಗಿದ್ದಾರೆ ಅಂದಿದ್ದೀಯಲ್ಲ ನೀನು ಅದು ಸತ್ಯ ತಾನೆ.. ಎಂದಳು ಕಣ್ಣು ಒರೆಸಿಕೊಳ್ಳುತ್ತಾ.. 

'ಹೌದು ಮರಿ ಯಾಕೀಗ ಈ ಪ್ರಶ್ನೆ..' ಎಂದು ಕೇಳಿದಳು ಶಾಂತಾ.. 

ದುಃಖ ಇನ್ನಷ್ಟು ಹೆಚ್ಚಿದ ಸ್ವರದಲ್ಲಿ 'ಮತ್ತೇ.. ಇವತ್ತು ಸ್ಕೂಲ್ ನಲ್ಲಿ ಸೈನ್ಸ್ ಟೀಚರ್, ನಕ್ಷತ್ರಗಳಿಗೂ ಸಾವು ಬರುತ್ತೆ ಅಂದ್ರು.. ಹಾಗಾದ್ರೆ ಅಪ್ಪ ಪುನಃ ಸಾಯ್ತಾರಾ.. ಎಂದು ಜೋರಾಗಿ ಅಳತೊಡಗಿದಳು ಪಲ್ಲವಿ ...

 ಶಾಂತಾ ಉತ್ತರ ತಿಳಿಯದೆ ಮಗಳನ್ನಪ್ಪಿಕೊಂಡು ತಾನೂ ಬಿಕ್ಕಳಿಸತೊಡಗಿದಳು...  
  


-- 

Wednesday, November 9, 2011

ಯಾರು ಜೀವವೇ .. ಯಾರು ಬಂದವರು..


'ಬೇಗ ಬೇಗ ಇಳೀರಿ ...' ಎಂದು ಬಸ್ಸು ನಿಲ್ಲುವ ಮೊದಲೇ ಕಂಡಕ್ಟರ್ ಇಳಿಯಲು ಅವಸರ ಮಾಡುತ್ತಿದ್ದ. ಅವನ ಕಡೆಗೊಮ್ಮೆ ಉರಿನೋಟ ಬೀರಿ ನನ್ನ ಲಗೇಜ್ ಹೊತ್ತು ಕೆಳಗಿಳಿದೆ.ಸೂರ್ಯ ಮುಳುಗುವ ಹೊತ್ತು.. ಹಗಲು ತನ್ನ ಕೆಲಸ ಮುಗಿಸಿ ಹೊರಟು ನಿಂತಿದ್ದರೆ ಕತ್ತಲೆ ನಾಚಿಕೊಂಡ ನವವಧುವಿನಂತೆ ಮೆಲ್ಲನಡಿಯಿಡುತ್ತಿತ್ತು.

ಹೋಗಬೇಕಿದ್ದ ದಾರಿಯ ಕಡೆಗೆ ಕಣ್ಣು ಹಾಯಿಸಿದೆ. ದಟ್ಟ ಹಸಿರಿನ ವನಸಿರಿಯ ನಡುವೆ ಹಾವಿನಂತೆ ಬಳುಕಿದ ರಸ್ತೆ. ಇನ್ನು ಹೆಚ್ಚು ಕಡಿಮೆ ಒಂದು ಕಿಲೋ ಮೀಟರ್ ನಷ್ಟು ದೂರವಿತ್ತು ಗೆಳೆಯ ಶೇಖರನ ಮನೆಗೆ..

ನಾನು ಬರುವ ಬಗ್ಗೆ  ಮುಂಚಿತವಾಗಿ ಏನೂ ತಿಳಿಸಿರಲಿಲ್ಲ.ಮೊದಲೇ ಪ್ಲಾನ್ ಮಾಡಿಕೊಂಡು ಹೋಗುವುದು ನನ್ನ ಜಾಯಮಾನವಾಗಿರಲಿಲ್ಲ.ನಮ್ಮಿಬ್ಬರಲ್ಲಿದ್ದ ಆತ್ಮೀಯತೆ ಮತ್ತು  ನನ್ನ ಸ್ವಭಾವದ ಪರಿಚಯವಿದ್ದ ಶೇಖರನಿಗೂ ಈ ಅನಿರೀಕ್ಷಿತ ಭೇಟಿ ಅಪ್ರಿಯವಾಗಲಾರದೆಂದು ನನ್ನ ನಂಬಿಕೆ. 

ಕಣ್ಣನ್ನು ನಸುಗತ್ತಲೆಗೆ ಹೊಂದಿಸಿಕೊಳ್ಳುತ್ತಲೇ ಹೆಜ್ಜೆ ಹಾಕತೊಡಗಿದೆ. ನನ್ನಿಂದ ತುಸು ದೂರದಲ್ಲಿ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು. ಕತ್ತಲಲ್ಲಿ ದಾರಿ ಸವೆಸಲು ಯಾರೋ ಒಬ್ಬರು ಜೊತೆಗೆ ಸಿಕ್ಕರಲ್ಲ ಎಂದು ಸಂತಸದಲ್ಲಿ  ವೇಗವಾಗಿ ನಡೆದು ಸಮೀಪಿಸಲೆತ್ನಿಸಿದೆ. ನನ್ನ ಹೆಜ್ಜೆ ಸಪ್ಪಳಕ್ಕೆ ಮೆಲ್ಲನೆ ನನ್ನೆಡೆಗೆ ತಿರುಗಿ ನೋಡಿದ ಆ ವ್ಯಕ್ತಿಯನ್ನು ಕಂಡಾಗ ಅಚ್ಚರಿಂದ ಕಣ್ಣಗಲಿಸಿ ' ಹೇ ನೀನಾ ಶೇಖರ್' ಎಂದು ಕೂಗಿದೆ. ನನ್ನನ್ನು ಕಂಡವನ ಮೊಗದಲ್ಲಿ ಯಾವುದೇ ಅಚ್ಚರಿಯಾಗಲೀ ಸಂತಸವಾಗಲೀ ಇಲ್ಲದೆ,   ನಿರ್ವಿಕಾರಭಾವದಲ್ಲಿ 'ನಡಿ ಹೋಗೋಣ ಮನೆಗೆ' ಅಂದ.ಅವನ ಮಾತು  ನನಗೆ ತುಸು ಪೆಚ್ಚೆನಿಸಿತು.

ದಾರಿಯುದ್ದಕ್ಕೂ ಅವನ ಹಣಕಾಸಿನ ತಾಪತ್ರಯಗಳ ಬಗ್ಗೆ , ವಿದ್ಯಾಭ್ಯಾಸ ಮುಗಿದು ವರ್ಷಗಳಾಗಿದ್ದರೂ ಒಳ್ಳೆಯ ಉದ್ಯೋಗ ಸಿಗದ ಮಗನ ಬಗ್ಗೆ, ಹೆಂಡತಿಯ ಎಂದೂ ಮುಗಿಯದ ಕಾಯಿಲೆಗಳ ಬಗ್ಗೆ .. ಹೀಗೆ ಹೇಳುತ್ತಲೇ ಹೋದ. 

ನಮ್ಮ ಮನೆಗೆ ವರ್ಷದಲ್ಲಿ 2 -3 ಬಾರಿಯಾದರು ಭೇಟಿ ನೀಡುವ ಶೇಖರ್, ಬರುವಾಗೆಲ್ಲಾ ಅವನ ಹಳ್ಳಿಮನೆಯಿಂದ  ತೆಂಗಿನಕಾಯಿ,  ಹೊಲದಲ್ಲಿ ಬೆಳೆದ ತಾಜಾ ತರಕಾರಿಗಳ ಬುಟ್ಟಿಗಳ ಜೊತೆಗೇ ಆಟೋದಿಂದ ಇಳಿಯುತ್ತಿದ್ದ. ಸದಾ ತಮಾಷೆ ಮಾಡುತ್ತಾ, ಎಲ್ಲರನ್ನು ನಗಿಸುತ್ತ ಇರುವ ಇವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇಷ್ಟರವರೆಗೆ ತನ್ನ ಮನೆಯ ತಾಪತ್ರಯಗಳ ಬಗ್ಗೆ ಒಂದು ಮಾತು ಹೇಳಿದವನಲ್ಲ. ನಾನೂ ಅಷ್ಟೆ.. ಎಷ್ಟೇ ಆತ್ಮೀಯನಾಗಿದ್ದರೂ ವೈಯುಕ್ತಿಕ ಸಮಸ್ಯೆಗಳನ್ನು ವಿಚಾರಿಸಿಕೊಂಡವನಲ್ಲ. ಇಂದೇಕೊ ತದ್ವಿರುದ್ಧವಾಗಿ, ಕುಶಲ ವಿಚಾರಿಸಲು ಕೂಡ ವ್ಯವಧಾನವಿಲ್ಲದವರಂತೆ, ತನ್ನ ಸಮಸ್ಯೆಗಳ ಬಗ್ಗೆ ತೋಡಿಕೊಂಡಿದ್ದ. ಇವನ ಈ ನಡವಳಿಕೆ ನನಗೆ ತೀರ ಹೊಸದಾದ್ದರಿಂದ ನಾನು ಹೇಗೆ ಪ್ರತಿಕ್ರಯಿಸುವುದು   ಎಂದು ತಿಳಿಯದೆ ಗೊಂದಲದಲ್ಲಿ ಹೂಂಗುಡುತ್ತಾ  ಸಾಗುತ್ತಿದ್ದೆ.
ಅಷ್ಟರಲ್ಲಿ ನನಗೆ ತೀರಾ ಪರಿಚಿತವಾದ ಜುಳು ಜುಳು ಶಬ್ದ ಮಾಡುತ್ತಾ ಹರಿಯುವ ಸಣ್ಣ  ತೊರೆ ಬಂದೇ ಬಿಟ್ಟಿತು. ಅದನ್ನು ದಾಟಿ ಎರಡು ಹೆಜ್ಜೆ ನಡೆದರೆ ಶೇಖರನ ಮನೆಯ ಗೇಟ್ ಕಾಣಿಸುತ್ತಿತ್ತು. ಅಷ್ಟೊತ್ತಿಗಾಗಲೇ ಕತ್ತಲು ತನ್ನ ಸಾಮ್ರಾಜ್ಯ ವಿಸ್ತರಿಸತೊಡಗಿದ್ದರೂ, ಮರದ ಮರೆಯಿಂದ  ಇಣುಕುತ್ತಿದ್ದ ಚಂದ್ರನ ಬೆಳಕಿನಲ್ಲಿ ತೊರೆಯ ನೀರು ಬೆಳ್ಳನೆ ಹೊಳೆಯುತ್ತಿತ್ತು. ಸುತ್ತೆಲ್ಲಾ ಆವರಿಸಿದ್ದ ಸಸ್ಯರಾಶಿಯಲ್ಲಡಗಿದ ಬಿಬ್ಬರಿ ಹುಳುಗಳು ತೊರೆಯ ಬಳಿಯಲ್ಲಿದ್ದ ಕಪ್ಪೆಗಳೊಡನೆ ಪೈಪೋಟಿಗೆ ಬಿದ್ದವರಂತೆ ವಿಚಿತ್ರ ಸ್ವರದಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದವು. 

ಇನ್ನೇನು ಮನೆ ಬಂತು ಎನ್ನುವಷ್ಟರಲ್ಲಿ ಶೇಖರ್ ನನ್ನೆಡೆಗೆ ತಿರುಗಿ 'ನಿನ್ನಿಂದ ನನ್ನ ಕುಟುಂಬಕ್ಕೆ ಏನಾದರು ಸಹಾಯ ಮಾಡಲು ಸಾಧ್ಯವಿದ್ದರೆ ಮಾಡು. ಇದು ನಿನ್ನ ಗೆಳೆಯನ ಬೇಡಿಕೆ ಅಷ್ಟೇ.. ಒತ್ತಾಯವಲ್ಲ.. ನೀನು ಒಳಗೆ ಹೋಗು.. ನನಗೊಂದಿಷ್ಟು ಕೆಲಸವಿದೆ' ಎಂದು ಹೇಳಿ, ಯಾಕೋ  ಮಾತುಗಳೆಲ್ಲಾ ಮುಗಿದೇ ಬಿಟ್ಟಿತೇನೋ ಎಂಬಂತೆ ಮೌನವಾಗಿ, ತಿರುಗಿ ಕತ್ತಲಲ್ಲೇ ಮರೆಯಾದ. 


ಇದ್ದಕ್ಕಿದ್ದಂತೆ ನನ್ನ  ಹೆಜ್ಜೆಗಳು ಭಾರವಾದಂತೆನಿಸಿತು. ಮನೆಯ ಬಾಗಿಲ ಬಳಿ ಶೇಖರನ ಮಗ ದೊಡ್ಡ ಸ್ವರದಲ್ಲಿ ಉದ್ವೇಗಗೊಂಡವರಂತೆ ಫೋನಿನಲ್ಲಿ ಯಾರೊಡನೆಯೋ ಮಾತಾಡುತ್ತಿದ್ದವನು,  ನನ್ನನ್ನು ನೋಡಿದವನೇ,   ಫೋನ್ ಕೈಯಿಂದ  ಜಾರಿ ಹೋದುದನ್ನು ಲೆಕ್ಕಿಸದೆ ಓಡಿ ಬಂದು ಅಪ್ಪಿಕೊಂಡ. ಕಣ್ಣುಗಳು ತುಂಬಿ  ಹನಿಯೊಡೆದಿತ್ತು .  ಅಲ್ಲೇ ಮುದುರಿ ಕುಳಿತಂತಿದ್ದ ಗೆಳೆಯನ  ಮಡದಿ ನನ್ನನ್ನು ಕಂಡವಳೇ ಜೋರಾಗಿ ಅಳಲು ಪ್ರಾರಂಭಿಸಿದಳು. ಗಾಭರಿಯಿಂದ  'ಏನಾಯ್ತು ಅತ್ತಿಗೆ, ದಿನೇಶ ಏನಾಯ್ತೋ?' ಎಂದೆ. 

'ಈಗ ಸ್ವಲ್ಪ ಹೊತ್ತಿನ ಮೊದಲು ಅಪ್ಪ ಎದೆನೋವೆಂದು ಕುಸಿದು ಬಿದ್ದರು. ಅಷ್ಟೆ.. ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋದರು ಅಂಕಲ್..ನೋಡಿ ಅಲ್ಲಿ ; ಎಂದು ಬಿಕ್ಕುತ್ತಲೇ ಕೈಯನ್ನು ಪಕ್ಕದ ಕೋಣೆಯ ಕಡೆಗೆ ತೋರಿಸಿದ. ಮಂದವಾಗಿ ಉರಿಯುತ್ತಿದ್ದ ದೀಪ ...  ಬಿಳಿ ಬಟ್ಟೆಯ ಕೆಳಗೆ  ಮಲಗಿತ್ತು ಶೇಖರನ ದೇಹ...

ಹಾಗಿದ್ದರೆ ನನ್ನೊಡನೆ ಇಷ್ಟು ಹೊತ್ತು ಮಾತಾಡಿಕೊಂಡು ಬಂದವರು ಯಾರು..?  ತಣ್ಣನೆಯ ಗಾಳಿಯ ಅಲೆಯೊಂದು ಸೋಕಿ ಮೈಯನ್ನೊಮ್ಮೆ ಕೊಡವಿಕೊಳ್ಳುವಂತೆ ಮಾಡಿತು. ವಿಭ್ರಾಂತನಂತೆ ಹಾಗೇ ನಿಂತುಕೊಂಡೆ. 

Monday, November 7, 2011

ಕಿಟಕಿ ..


ನಾನಿದ್ದೆ ಜೀರ್ಣವಾಗಿದ್ದ ಪುಟ್ಟ ಮನೆಯಲ್ಲಿ ...
ಆಗಸದ ಸುಡು ಸೂರ್ಯ ಸುಡುತ್ತಿದ್ದ ನನ್ನ
 ಮಳೆನೀರ ಎರಚಲಿಗೆ ಮುಖವೊಡ್ಡುತ್ತಿದ್ದೆ..
ತಂಗಾಳಿ ನನ್ನ ಒಳ ಹೊರಗೆ 
ಸುಳಿ ಸುಳಿದು ಆಟವಾಡುತ್ತಿತ್ತು..
ಪ್ರತಿ ಕಂಬಿ ಕಂಬಿಗಳಲ್ಲೂ 
ಪ್ರಿಯಕರನ ಕಾದಿದ್ದ ಪ್ರೇಯಸಿಯ ಕೈಯ ಬಿಸಿ,
ಬರದಾಗ ನಿಂತು ಕಣ್ಣೀರು ಸುರಿಸಿದ್ದ ಅವಳ ಹೃದಯದ ಚೂರು .....
 ಮೇಲೇರ ಹೋಗಿ ಬಿದ್ದು ಅತ್ತಿದ್ದ 
ಪುಟ್ಟ ಕಂದನ ಅಳು ......
ಅಪ್ಪನ ಹೆಗಲೇರಿ ನನ್ನಿಂದ ಎತ್ತರ ಎಂದು ನಕ್ಕಿದ್ದ ಮುಗ್ದ ಹಾಸ ...
 ಕೈಯಾಸರೆಯಲ್ಲೇ ನಡೆಯುತಿದ್ದ ಅಜ್ಜಿಯ ಭರವಸೆ....
ಯಾರೋ ಬಂದು ನನ್ನಂದವ  ಕಂಡು ಎತ್ತಿ ಒಯ್ದರು 
ಸುಂದರ  ಅರಮನೆಗೆ.........
ಅಮೃತ ಶಿಲೆಯ ಗೋಡೆಯೇರಿದ ನಾನು ಕಪ್ಪು ಕನ್ನಡಿಯೊಳಗೆ ಬಂಧಿ ...
ಒಳಗಿನಿಂದಾದರೋ ಕಸೂತಿಯ ಪರದೆಗಳ ಮಾಲೆ...
ಇಲ್ಲಿ ನನ್ನನಾರು ನೋಡುವರಿಲ್ಲ ....ಕಾಡುವರಿಲ್ಲ...ಆಡುವರಿಲ್ಲ....
ನನ್ನ ಅಗತ್ಯವೇ ಇಲ್ಲದ ಸದಾ ಮುಚ್ಚಿರುವ ಬಾಗಿಲಿನ ಈ ಮನೆಯಲ್ಲಿ.....   

Tuesday, November 1, 2011

ಬಣ್ಣದ ಕಡ್ಡಿ.. ಅಂಗಳದ ಬದಿಯಲ್ಲಿ ಸಣ್ಣ ಹಳದಿ ಬಣ್ಣದ ಹೂವನ್ನು  ಮೈ ತುಂಬಾ ಅರಳಿಸಿ, ಹಾಸಿಗೆಯಂತೆ ಕಾಣುತ್ತಿದ್ದ ಗಿಡಗಳು, ಅದಕ್ಕೆ ಮುತ್ತುತ್ತಿದ್ದ ಬಗೆ ಬಗೆಯ ಸುಂದರ ಚಿಟ್ಟೆಗಳು,ಅದನ್ನೆ ಗಮನವಿಟ್ಟು ನೋಡುತ್ತಿದ್ದ  ನಂಗೆ ಹಾರಾಡುವ  ಚಿಟ್ಟೆಯ ಚಿತ್ರ ಬಿಡಿಸೋದು ಸುಲಭ ಅಂತನ್ನಿಸ್ತು. ಈಗಲೇ ಸ್ಲೇಟ್ ನಲ್ಲಿ ಬಿಡಿಸಿ ನಾಳೆ ಗೆಳತಿಯರಿಗೆಲ್ಲ ತೋರಿಸಿ ಅವರನ್ನು ಅಚ್ಚರಿಗೊಳಿಸಬೇಕೆಂದುಕೊಂಡು ಒಳ ಬಂದೆ.

ಬ್ಯಾಗ್ ತೆರೆದು ಕಂಪಾಸ್ ಬಾಕ್ಸನ್ನು  ಸದ್ದಾಗದಂತೆ ಮೆಲ್ಲನೆ ಮುಚ್ಚಳ ತೆಗೆದಾಗ ಮೊದಲಿಗೆ ಕಣ್ಣಿಗೆ ಬಿದ್ದಿದ್ದು ಸ್ಲೇಟಿನ ಬಣ್ಣದ ಕಡ್ಡಿ, ನರಸಿಂಹಾವತಾರದಂತೆ ಪೆನ್ನಿನ ಕೆಳಗಿನ ಭಾಗದ ಒಳ ಹೊಕ್ಕು  ತಲೆ ಪೆನ್ಸಿಲ್, ದೇಹ ಪೆನ್ನು ಆಗಿರುವ ಪೆನ್ಸಿಲ್.  ಅಕ್ಷರಗಳೆಲ್ಲಾ ಅಳಿಸಿಹೋದ ನಸು ಹಳದಿ ಬಣ್ಣದ, ದೊಡ್ಡಣ್ಣ ಕೊಟ್ಟ ಪುಟ್ಟ ಸ್ಕೇಲ್, ಪೆನ್ಸಿಲ್‌ನಿಂದ ಕುತ್ತಿ ಕುತ್ತಿ ಅರೆಜೀವವಾಗಿರುವ ಗಾಯಾಳು ರಬ್ಬರ್..ಅದನ್ನೆಲ್ಲಾ ಕೆಳಗಿಟ್ಟು ಅದರಡಿಯ ಪೇಪರನ್ನು ಮೆಲ್ಲನೆತ್ತಿದೆ.

ಒಂದು ಸಣ್ಣ ನವಿಲುಗರಿ,ಎರಡು ಐದು ಪೈಸೆಯ ಪಾವಲಿಗಳು, ಮತ್ತೊಂದು ಎಲೆ. ಈ ಎಲೆ ಮರಿ ಹಾಕುತ್ತೆ ಅಂತ ಗೆಳತಿ ನೈನಾ ಕೊಟ್ಟಿದ್ದಳು.ಸ್ವಲ್ಪ ಬಾಡಿ ಕಪ್ಪಗಾಗಿತ್ತು. ಆದ್ರೆ ಇನ್ನೂ ಮರಿ ಹಾಕಿರಲಿಲ್ಲ. 
ನವಿಲುಗರಿ ಕೂಡಾ ಪುಸ್ತಕದ ಒಳಗಿಟ್ಟರೆ ಮರಿ ಹಾಕುತ್ತಂತೆ. ಆದ್ರೆ ಪುಸ್ತಕ ತೆರೆಯುವಾಗ ಅಮ್ಮ  ನವಿಲುಗರಿ ಮತ್ತು ಮರಿ ಎಲ್ಲಾದ್ರು ಬಿದ್ದು ಹೋದರೆ ಗೊತ್ತೇ ಆಗಲ್ಲ ಅಂತ ನಾನು ಇದರೊಳಗೆ ಜೋಪಾನ ಮಾಡಿದ್ದೆ. 

ಇದೆಲ್ಲ ಸರಿ .. !! ಇದರೊಳಗೆ ನಾನು ಭದ್ರವಾಗಿಟ್ಟಿದ್ದ ಬಣ್ಣದ ಕಡ್ಡಿ ಎಲ್ಲಿ ಹೋಯ್ತು? ಬ್ಯಾಗೆಲ್ಲ ಬೋರಲು ಹಾಕಿ ಹುಡುಕಿದೆ. ಉಹುಂ ..!! ಎಲ್ಲೂ ಇಲ್ಲ. 
ಇನ್ನೊಬ್ಬ ಗೆಳತಿ ಜಾನಕಿಯ ಹತ್ತಿರ ತುಂಬಾ ಬೇಡಿಕೊಂಡ ಮೇಲೆ, ಅವಳ ಹತ್ತಿರ ಇದ್ದ ಉದ್ದದ ಕಡ್ಡಿಯನ್ನು ಸ್ವಲ್ಪವೇ ಸ್ವಲ್ಪ ತುಂಡು ಮಾಡಿ ಕೊಟ್ಟಿದ್ದಳು. ಇನ್ನೊಂದು ಚೂರು ಉದ್ದ ಮಾಡಿ ಕೊಡಬಹುದಾಗಿತ್ತು. ಆದ್ರೆ ಅವ್ಳು ಸ್ವಲ್ಪ ಕಂಜೂಸ್.ಜೊತೆಗೆ ಕ್ಲಾಸಲ್ಲಿ ಯಾರಿಗೂ ತೋರಿಸಬಾರದು, ಹೇಳಲೂಬಾರದು ಅಂತ ನನ್ನಿಂದ ದೇವರ ಆಣೆ ಹಾಕಿಸಿಕೊಂಡಿದ್ದಳು. ಹಾಗಾಗಿಯೇ ಅದನ್ನು ಕಂಪಾಸ್ ಬಾಕ್ಸಿನ ಅಡಿಯಲ್ಲಿಟ್ಟಿದ್ದೆ. 

ಎಲ್ಲಿಗೆ ಹೋಯ್ತೀಗ..? ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ಳುತ್ತಿತ್ತು. ಲಂಗದ ತುದಿಯಲ್ಲೇ ಅದನ್ನು ಒರಸಿಕೊಂಡು ಮತ್ತೂ ಹುಡುಕಿದೆ. ಆದರೆ ಹುಡುಕಿದಷ್ಟೂ ಎಲ್ಲೂ  ಕಾಣದೆ ಅಳು ಜೋರಾಗಿ ಉಕ್ಕಿ ಬಂತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದೆ. 

ಒಳಗಿದ್ದ ಅಮ್ಮನಿಗೆ ಕೇಳಿಸಿತೇನೋ..!! ಹೊರಬಂದು 'ಏನಾಯ್ತು? ಏನಾದ್ರು ತಾಗಿಸಿಕೊಂಡ್ಯಾ' ಅಂದ್ಲು. ಇಲ್ಲ ಎಂಬಂತೆ ತಲೆ ಅಲುಗಿಸಿ ಅಳು ಮುಂದುವರಿಸಿದೆ.ನಾನು ಬ್ಯಾಗೆಲ್ಲ ಹರಡಿಕೊಂಡು ಕುಳಿತಿದ್ದನ್ನು ನೋಡಿ 'ಏನಾಯ್ತು, ಹೇಳ್ಬಾರದಾ.. ಸುಮ್ಮನೆ ಅತ್ತರೆ ಹೇಗೆ ಗೊತ್ತಾಗೋದು? ಪುನಃ ಎಲ್ಯಾದ್ರು ಮೊನ್ನೆಯ ಹಾಗೆ  ಹೊಸ  ಪೆನ್ಸಿಲ್ ಕಳೆದು ಹಾಕಿಕೊಂಡ್ಯಾ'..? ಅಂದಳು. 

ಅಮ್ಮ ಹೇಳುವ  ಈ ಮೊನ್ನೆ ಅನ್ನುವುದು ಕಳೆದು ಒಂದು ವರ್ಷ ಹೆಚ್ಚಾಗಿದೆ. ಆದರೂ ಇನ್ನೂ ನಾನ್ಯಾವತ್ತೋ ಕಳೆದುಕೊಂಡ ಪೆನ್ಸಿಲನ್ನು ನೆನಪಿಸಿ ಇನ್ನೂ  ಬಯ್ಯುತ್ತಿರುತ್ತಾಳೆ. ಅದೂ ಕೂಡಾ ನಾನು ಕಳೆದುಕೊಂಡದ್ದೇನೂ ಆಗಿರಲಿಲ್ಲ. ವನಜ ತಂದುಕೊಟ್ಟ ನೇರಳೆ ಹಣ್ಣಿಗೆ ಬದಲಾಗಿ ಕೊಟ್ಟಿದ್ದು. ಮನೆಯಲ್ಲಿ ಹೇಳಿದರೆ ಅಮ್ಮ ಕೋಲು ಮುರಿಯುವಂತೆ ಹೊಡೆಯುತ್ತಾಳೆ ಎಂದು ಕಳೆದುಹೋಗಿದೆ ಎಂದಿದ್ದೆ. ಅದಕ್ಕೂ ಪೆಟ್ಟೇನೂ ಕಡಿಮೆ ಬಿದ್ದಿರಲಿಲ್ಲ.. !!  ಸುಳ್ಳು ಹೇಳಬಾರದು ಅಂತ ಪ್ರತಿದಿನ ಹೇಳಿಕೊಡುತ್ತಿದ್ದ ಅಮ್ಮನಿಗೆ  ನಾನು ಸುಳ್ಳು ಹೇಳಿದ್ದು ಅಂತ ಗೊತ್ತಾಗಿದ್ದರೆ ಇನ್ನೂ ಬೀಳ್ತಿತ್ತು. 

ನನ್ನ ಮೌನ ನೋಡಿ,ಅಮ್ಮ ಸ್ವಲ್ಪ ದೊಡ್ದ ಸ್ವರ ಮಾಡಿ  ಬೇಗ ಹೇಳು ಅಂದಳು.ಇನ್ನು ಹೇಳದಿದ್ದರೆ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದು 'ನನ್ನ ಬಣ್ಣದ ಕಡ್ಡಿ ಕಾಣ್ತಾ ಇಲ್ಲ, ಜಾನಕಿ ನಂಗೆ ಅಂತ್ಲೇ ಕೊಟ್ಟಿದ್ದು..' ಎಂದೆ ಸ್ವಲ್ಪ ಹೆದರಿಕೆಯಿಂದ. ಬೇರೆಯವರ ವಸ್ತು ತಂದರೆ ಅಮ್ಮನಿಗೆ  ವಿಪರೀತ ಸಿಟ್ಟು ಬರುತ್ತಿತ್ತು. 

ಆದರೆ ಇವತ್ಯಾಕೋ ಸಮಾಧಾನದ ಸ್ವರದಲ್ಲಿ, 'ಕೇಳಿದ್ರೆ ನಾನು ಹೇಳ್ತಿರಲಿಲ್ವಾ.. ಅಷ್ಟ್ಯಾಕೆ ಅಳ್ಬೇಕಿತ್ತು'..? ಅಂತ ಒಳ ನಡೆದು ನನ್ನ ಕೈಗೆ ಬಣ್ಣದ ಕಡ್ಡಿ ತಂದಿತ್ತಳು. ಒಂದಿಂಚು ಉದ್ದದ ಕಡ್ಡಿಯ ಒಂದು ಭಾಗ ಆಗಲೇ ಏನೋ ಬರೆದಂತೆ ತೆಳ್ಳಗಾಗಿತ್ತು. 

ಸ್ವಲ್ಪ ಸಿಟ್ಟಿನಿಂದ ನನ್ನ ಕಡ್ಡಿ ಯಾಕೆ ತೆಗೆದಿದ್ದು ಅಂದೆ. ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯೋಕೆ ಅಂತ ತೆಗೊಂಡಿದ್ದು ಅಂದಳು. ಈಗಂತೂ ನನ್ನ ಸಿಟ್ಟು ಮೇರೆ ಮೀರಿತು. ನಾನು ಅಷ್ಟು ಕಷ್ಟ ಪಟ್ಟು ಸಂಪಾದಿಸಿದ ಬಣ್ನದ ಕಡ್ಡಿಯ ಮಹತ್ವ ತಿಳಿಯದೆ ಅದನ್ನು ಗ್ಯಾಸ್ ಅಂಡೆಯ ಮೇಲೆ ತಾರೀಕು ಬರೆಯಲು ಉಪಯೋಗಿಸಿದ್ದಾಳಲ್ಲ.. ಏನೆನ್ನಬೇಕು ಇವಳಿಗೆ.. 
ಇವತ್ತು ಹೇಗೂ ತಪ್ಪು ಅಮ್ಮಂದೇ ಆದ್ದರಿಂದ, 'ನೀನ್ಯಾಕೆ ನಂಗೆ ಹೇಳದೆ ತೆಗೊಂಡಿದ್ದು? ಇಷ್ಟು ಸಣ್ಣ ಮಾಡಿ ಕೊಟ್ಟಿದ್ದೀಯಾ.. ನಂಗೆ ಬೇಡಾ ಇದು .. ದೊಡ್ಡ ಮಾಡಿ ಕೊಡು' ಅಂತ ನನ್ನ ವರಸೆ ಸುರು ಮಾಡಿದೆ. 

ಅಮ್ಮನಿಗೇನನ್ನಿಸಿತೋ.. ಮೆಲ್ಲನೆ ನನ್ನ ಹತ್ತಿರ ಬಂದು ನನ್ನ ಕೈಯಿಂದ ಆ ಬಣ್ಣದ ಕಡ್ಡಿಯನ್ನು ತೆಗೆದುಕೊಂಡು 'ಇದು ನಂಗೆ ಆಯ್ತು. ಇದ್ರಲ್ಲಿ  ಅಂಡೆಯ ಮೇಲೆ ಬರೆದರೆ ಚೆನ್ನಾಗಿ ಕಾಣುತ್ತೆ. ಬೇಗ ಅಳಿಸಿ ಹೋಗಲ್ಲ,  ನಿಂಗೆ ಅಪ್ಪನತ್ರ ದೊಡ್ಡ ಕಡ್ಡಿ ತರ್ಲಿಕ್ಕೆ ಹೇಳ್ತೀನಿ.ಅಂತ ನನ್ನ ಪೂಸಿ ಮಾಡಿದಳು. 

ನಾನು ಕುಶಿಯಲ್ಲಿ ' ಹೌದಾ , ನಿಜಕ್ಕೂ ದೊಡ್ದ ಕಡ್ಡಿ ತರಕ್ಕೆ ಹೇಳ್ತೀಯಾ.. ಅಂದೆ. ಅಮ್ಮ ನನ್ನ ಅಳು ನಿಂತ ಸಮಾಧಾನದಲ್ಲಿ 'ಹುಂ, ನಿಜವಾಗಿಯೂ ಹೇಳ್ತೀನಿ ' ಅಂದು ಒಳ ನಡೆದಳು. 

ಇದಾಗಿ ನಾಲ್ಕೈದು ಗ್ಯಾಸ್ ಅಂಡೆಯ ಮೇಲೆ ನನ್ನ ಬಣ್ಣದ ಕಡ್ಡಿಯಲ್ಲಿ ತಾರೀಕುಗಳು ಮೂಡಿದರೂ, ನಂಗಿನ್ನು ಹೊಸ ದೊಡ್ದ  ಕಡ್ಡಿ ಬಂದಿಲ್ಲ. ಕೇಳಿದಾಗೆಲ್ಲ ಕೊಡಿಸ್ತೀನಿ ಇರು ಅಂತ ಹೇಳೋದನ್ನು ಬಿಟ್ಟಿಲ್ಲ.. ಅಮ್ಮ ಸುಳ್ಳು ಹೇಳಲ್ಲ ಅಲ್ವಾ ..