ದೂರದಲ್ಲಿ ನೋಯುತ್ತಿರುವ ಕಾಲನ್ನು ಎಳೆದು ಹಾಕಿಕೊಂಡು ಬರುತ್ತಿರುವ ಎಂಕಜ್ಜ ಕಾಣಿಸಿದ,ಸ್ಮಶಾನದ ಕಾವಲುಗಾರ ದೇವನಿಗೆ. ಈಗೀಗ ಎಂಕಜ್ಜನಿಗೆ ನಡೆಯುವ ಶಕ್ತಿಯೇ ಕಡಿಮೆಯಾಗಿತ್ತು. ಬಿಕ್ಷೆ ಬೇಡಲು ಹೋಗಬೇಡ ಎಂದು ಹೇಳಿದರೂ ಕೇಳದೆ ನಸುಕಿನಲ್ಲೆದ್ದು ಜೋಳಿಗೆ ಹಿಡಿದು ಹೊರಟು ಬಿಡುತ್ತಿದ್ದ.
ಏದುಸಿರು ಬಿಡುತ್ತಾ ಬಂದವನೇ ಅಲ್ಲಿದ್ದ ಕಟ್ಟಿಗೆಯ ರಾಶಿಯ ಪಕ್ಕದಲ್ಲಿ ಉಸ್ಸಪ್ಪ ಎಂದು ಕುಳಿತ. ಸ್ವಲ್ಪ ದೂರದಲ್ಲಿ ಹೊಸದಾಗಿ ಉರಿಯುತ್ತಿದ್ದ ಚಿತೆಯನ್ನು ನೋಡಿ .ದೇವನ ಕಡೆಗೆ ಮುಖ ಮಾಡಿ 'ಯಾರದೋ'.. ಎಂದು ಕೇಳಿದ.
ಕಾಶೀ ಕೃಷ್ಣಯ್ಯನವರದ್ದು ..ಎಂದ ದೇವ.
'ಪುಣ್ಯವಂತರು ಕಣಪ್ಪ ಅವ್ರು.. ವರ್ಷ ವರ್ಷ ಕಾಶಿಗೆ ಹೋಗಿ ಬಂದು ಕಾಶಿ ಸಮರಾಧನೆ ಮಾಡಿ ಊರಿನ ಜನರಿಗೆಲ್ಲಾ ಹೊಟ್ಟೆ ತುಂಬಾ ಊಟ ಹಾಕಿಸ್ತಿದ್ದರು. ಹೋಗಿಯೇ ಬಿಟ್ರಾ..' ಎಂದು ಚಿತೆಯ ಕಡೆಗೆ ತಿರುಗಿ ಕೈ ಮುಗಿದ.
ಮತ್ತೆ ನಿಟ್ಟುಸಿರಿಡುತ್ತಾ, ಎಲ್ಲದಕ್ಕೂ ಪಡ್ಕೊಂಡು ಬಂದಿರಬೇಕು ಕಣ್ಲಾ... ನಮ್ಗೆಲ್ಲಾ ಎಲ್ಲಿಂದ ಬರಬೇಕು ಅಂತಾ ಅದೃಷ್ಟ.. ಎಂದವನೇ ಜೇಬೆಲ್ಲಾ ತಡಕಾಡಿ ಆ ದಿನದ ಭಿಕ್ಷೆಯ ಗಳಿಕೆಯನ್ನೆತ್ತಿ ದೇವನೆಡೆಗೆ ಚಾಚಿದ. ದೇವ ಆ ಪುಡಿಕಾಸುಗಳನ್ನೆತ್ತಿಕೊಂಡು ಯಾಂತ್ರಿಕವಾಗಿ ಎಣಿಸತೊಡಗಿದ. ಎಂಕಜ್ಜ ಆಸೆ ಹೊತ್ತ ಹೊಳಪುಗಣ್ಣುಗಳನ್ನು ದೇವನೆಡೆಗೆ ನೆಟ್ಟು, ಸಾಕಾದೀತೇನೋ ಮಗ..ಜೀವ ಹೋಗೊದ್ರೊಳಗೆ ಒಂದಪಾ ಕಾಶಿಗೆ ಹೋಗಬೇಕು ಅಂತ ಬಲು ಆಸೆ ಕಣ್ಲಾ..ಅನ್ನುತ್ತಾ ಆಕಾಶದ ಕಡೆಗೆ ಕೈ ಮುಗಿದ. ನಿಂಗೆಲ್ಲೋ ಹುಚ್ಚು ಅಜ್ಜ.. ನಾಲಕ್ಸಲ ನಮ್ಮೂರ ಸಂತೆಗೆ ಹೋಗಿ ಬರೋದ್ರೊಳಗೆ ಮುಗಿಯುತ್ತೆ ನಿನ್ನ ಕಾಸು.. ಇನ್ನು ಕಾಶಿ ಎಲ್ಲಿ.. ಎಂದು ದೇವ ನಗೆಯಾಡಿದ.
ದೇವನ ಮಾತು ಕೇಳಿ ಎಂಕಜ್ಜನಿಗೆ ದುಃಖದಿಂದ ಕಣ್ಣು ಮಂಜಾಗತೊಡಗಿತು. ಇತ್ತೀಚೆಗೆ ದೇಹದ ಶಕ್ತಿ ಕುಂದಿದ ಮೇಲೆ ಚಿಕ್ಕ ಚಿಕ್ಕ ವಿಷಯಕ್ಕೂ ಅಳುತ್ತಿದ್ದ ಎಂಕಜ್ಜ.
ಹೇ.. ಸುಮ್ಕಿರು ಅಜ್ಜ.. ನಾನು ನನ್ ದುಡ್ಡು ಕೂಡಿ ಹಾಕಿ ನಿನ್ನ ಕಾಶಿಗೆ ಕರ್ಕೊಂಡೋಗ್ತೀನಿ.. ಇದ್ರಪ್ಪನಂತಾ ಸ್ಮಶಾನಗಳಿವ್ಯಂತೆ ಅಲ್ಲಿ.. ನಂಗೂ ನೋಡ್ಬೇಕು.. ಈಗ ನೀನು ಒಳಕ್ ನಡಿ.. ಅಲ್ಲಿ ಅಯ್ನೋರ್ ಮನೆಯವರು ಕೊಟ್ಟ ಹಣ್ಣುಗಳಿದೆ. ಬೇಕಾದ್ರೆ ತಿನ್ನು ಎಂದ.
ಕೆನ್ನೆಯಲ್ಲಿಳಿಯುತ್ತಿದ್ದ ಕಣ್ಣೀರನ್ನು ಒರೆಸುವ ಪ್ರಯತ್ನವೂ ಮಾಡದೆ, ನಂಗೇನೂ ಬೇಡಾ ಬಿಡ್ಲಾ.. ಯಾಕೋ ಈಗೀಗ ಹೊಟ್ಟೆನೇ ಹಸಿಯಾಕಿಲ್ಲ ಅಂತದೆ.. ಅನ್ನುತ್ತಾ ಕಾಲೆಳೆದುಕೊಂಡು ಗುಡಿಸಲಿನ ಒಳ ಹೊಕ್ಕ ಎಂಕಜ್ಜ. ಪಾಪ ಕಾಶಿ ಯಾತ್ರೆ ಒಂದೇ ಅಜ್ಜನಿಗಿರೋ ಆಸೆ.ನಮ್ಮಂತವರ ಆಸೆಗಳೆಲ್ಲ ಪೂರೈಸಲುಂಟೇ.. ದೂರದ ಚಿತೆಯ ಕಡೆಗೆ ದ್ಟೃಷ್ಟಿ ಹರಿಸಿದ ದೇವ.
ಹಾಗೆ ನೋಡಿದರೆ ಎಂಕಜ್ಜನಿಗೂ , ದೇವನಿಗೂ ಏನೂ ಸಂಬಂಧವಿರಲಿಲ್ಲ. ಎರಡೂ ಅನಾಥ ಜೀವಗಳು. ಚಿಕ್ಕಂದಿನಲ್ಲೇ ತಬ್ಬಲಿಯಾಗಿ ಬೀದಿಗೆ ಬಿದ್ದಿದ್ದ ದೇವ ಅಲ್ಲಿ ಇಲ್ಲಿ ಚಿಂದಿ ಆಯ್ದು ಬದುಕುತ್ತಿದ್ದ. ರಾತ್ರಿಯಾಗುತ್ತಿದ್ದಂತೇ ಬಸ್ ಸ್ಟ್ಯಾಂಡ್‌ನಲ್ಲೋ , ಅಂಗಡಿ ಮುಂಗಟ್ಟುಗಳಲ್ಲೊ ಮಲಗುತ್ತಿದ್ದಾಗ ಎಂಕಜ್ಜನೂ ತನ್ನ ಹರುಕು ಕಂಬಳಿ ಹೊದೆದು ಜೊತೆಗೂಡುತ್ತಿದ್ದ.
ಒಮ್ಮೊಮ್ಮೆ ಇಡೀ ದಿನ ಹೊಟ್ಟೆಗೇನೂ ಸಿಕ್ಕದೆ ಹಸಿವಿನಿಂದ ನಿದ್ದೆ ಬಾರದೆ ದೇವ ಒದ್ದಾಡುತ್ತಿದ್ದರೆ, ಎಂಕಜ್ಜ ತನ್ನ ಜೋಳಿಗೆಯಿಂದ ಅರ್ಧ ತುಂಡು ಬನ್ನೊ, ಅನ್ನ ಸಾಂಬಾರು ಬೆರೆಸಿದಂತಿದ್ದ ಮಿಶ್ರಣವೋ, ಹೀಗೆ ಏನಾದರು ದೇವನಿಗೆ ನೀಡುತ್ತಿದ್ದ. ದೇವನೂ ಅಷ್ಟೆ, ಅಪರೂಪಕ್ಕೊಮ್ಮೊಮ್ಮೆ ಕಮಾಯಿ ಜೋರಿದ್ದಾಗ ಸಾಬರ ಹೋಟೇಲಿನಿಂದ ಬಿರಿಯಾನಿ ತಂದು ಎಂಕಜ್ಜನಿಗೆ ಉಣಬಡಿಸುತ್ತಿದ್ದ. ನಿದ್ದೆ ಬಾರದ ರಾತ್ರಿಗಳಲ್ಲಿ ಎಂಕಜ್ಜನ ಕತೆಗಳು ಜೊತೆಯಾಗುತ್ತಿದ್ದವು.
ದಿನಗಳು ಯಾವುದೇ ಏರು ಪೇರಿಲ್ಲದೆ ಹೀಗೆ ನಡೆಯುತ್ತಿದ್ದಾಗಲೇ ಪಂಚಾಯತ್ ನವರು ಹೊಸದಾಗಿ ಕಟ್ಟಿಸಿದ ಊರ ಹೊರಗಿನ ಸ್ಮಶಾನ ಕಾಯುವ ಕೆಲಸ ಅಕಸ್ಮಾತಾಗಿ ದೇವನ ಪಾಲಿಗೆ ಒದಗಿ ಬಂದಿತ್ತು. ಕುಳಿರ್ಗಾಳಿಗೆ ನರ್ತಿಸುತ್ತಿದ್ದ ಉರಿಯುವ ಚಿತೆಗಳ ಕೆನ್ನಾಲಗೆಗಳು ಪಿಶಾಚಿಗಳ ಒಡ್ಡೋಲಗದಂತೆ ಕಂಡು, ನಂಗೆ ಹೆದರಿಕೆ ಆಗುತ್ತೆ ನಾನೊಲ್ಲೆ ಎಂದಿದ್ದ .
ಆಗ ಎಂಕಜ್ಜ ದೇವನನ್ನು ಕೂರಿಸಿಕೊಂಡು, ಸ್ಮಶಾನದಾಗೆ ನಮ್ಮಪ್ಪ ಶಿವಾ ಕುಂತಿರ್ತಾನೆ, ಪೀಡೆ ಪಿಶಾಚಿಗಳದ್ದು ಏನೂ ನಡೆಯಾಕಿಲ್ಲ ಅಂತ ಧೈರ್ಯ ತುಂಬಿದ್ದ. ನಿಂಗೆ ಅಷ್ಟು ಹೆದ್ರಿಕೆ ಆಗೋದಾದ್ರೆ ರಾತ್ರಿ ನಾನು ಬರ್ತೀನಿ ನಿನ್ ಜೊತೆಗೆ.. ಸಿಕ್ಕಿದ ಕೆಲ್ಸ ಬೇಡ ಅನ್ಬೇಡ ಎಂದು ಬುದ್ಧಿವಾದ ಹೇಳಿದ್ದ. ನಿಶ್ಚಿತ ವರಮಾನ ಅಲ್ಲದೆ ಹೆಣ ಸುಡಲು ಬಂದವರು ಕೊಡುವ ಕೈಕಾಸುಗಳ ಆಸೆ ತೋರಿಸಿದ್ದ. ಇನ್ನು ರಾತ್ರಿ ಮಲಗಲು, ಅಲ್ಲಿ ತಮ್ಮಿಂದ ಮೊದಲೇ ಮಲಗಿರುತ್ತಿದ್ದ ಬೀದಿ ನಾಯಿಗಳನ್ನು ಓಡಿಸಿ ಜಾಗ ಮಾಡಿಕೊಳ್ಳುವ ಕೆಲ್ಸವೂ ಇಲ್ಲ ಎಂದು ಹೇಳಿ ನಕ್ಕಿದ್ದ. ಅಜ್ಜನ ಮಾತಿಗೆ ಒಪ್ಪಿಕೊಂಡದ್ದಕ್ಕೆ ಅಲ್ಲವೆ ತಾನು ಇಂದು ಸ್ಮಶಾನದ ಮೂಲೆಯಲ್ಲಿರುವ ಆ ಪುಟ್ಟ ಕೋಣೆಯೆಂಬ ಅರಮನೆಗೆ ಒಡೆಯನಾಗಿರುವುದು!
ಹೀಗೆ ಎಷ್ಟು ಹೊತ್ತು ಸಾಗಿತ್ತೊ ದೇವನ ಆಲೋಚನಾ ಲಹರಿ. ಯಾಕೋ ನೀರಡಿಕೆಯಾದಂತೆನಿಸಿ ಎದ್ದು ಗುಡಿಸಿಲಿನೆಡೆಗೆ ನಡೆದ. ಮಂದವಾಗಿ ಉರಿಯುತ್ತಿದ್ದ ಹಣತೆಯ ಬೆಳಕಿನಲ್ಲಿ ನೀರು ಕುಡಿದು ಸುಮ್ಮನೆ ಎಂಕಜ್ಜ ಮಲಗುವ ಕಡೆಗೊಮ್ಮೆ ದ್ಟೃಷ್ಟಿ ಹರಿಸಿದ. ಅರೆ! ಅಲ್ಲಿ ಎಂಕಜ್ಜ ಇರಲಿಲ್ಲ! ಎಲ್ಲಿ ಹೋಗಿರಬಹುದು ಅಂದುಕೊಳ್ಳುವಾಗಲೇ ಬೀಸಿದ ಗಾಳಿಗೆ ಅರ್ಧ ತೆರೆದ ಬಾಗಿಲನ್ನು ಕಂಡು ಹೊರಗಿಣುಕಿದ. ಕಪ್ಪು ಆಗಸದ ನಡುವಲ್ಲಿ ಜರಿಸೀರೆಯ ಬೊಟ್ಟುಗಳಂತೆ ಹರಡಿದ್ದವು ನಕ್ಷತ್ರಗಳು. ಕೃಷ್ಣಯ್ಯನವರ ಚಿತೆ ಸುತ್ತೆಲ್ಲಾ ನಂದಿ ನಡುವಲ್ಲಿ ಮಾತ್ರ ಸಣ್ಣದಾಗಿ ಕೆಂಪಾಗಿ ಕಾಣಿಸುತ್ತಿತ್ತು. ದೇವನ ದ್ಟೃಷ್ಟಿ ಅಂಗಳದ ಸುತ್ತೊಮ್ಮೆ ಅಜ್ಜನಿಗಾಗಿ ಹರಿದಾಡಿತು.ಒಂದು ಮೂಲೆಯಲ್ಲಿ ಕರಿಯ ಕಂಬಳಿಯ ಸಮೇತ ಕುಪ್ಪೆಯಂತೆ ಬಿದ್ದಿದ್ದ ಎಂಕಜ್ಜ. ಧಾವಿಸಿ ಬಂದ ದೇವನ ಕೈಗೆ ತಣ್ಣಗೆ ತಗುಲಿತ್ತು ಅಜ್ಜನ ದೇಹ. ಎದೆ ಒಮ್ಮೆ ಝಲ್ ಎಂದಿತು.
ಹೆಣ ಮುಟ್ಟುವುದು ಹೊಸತೇನೂ ಅಲ್ಲದಿದ್ದರೂ , ಕೈ ಕೂಡಲೆ ಗಾಭರಿಯಿಂದ ಹಿಂದೆ ಬಂತು. ಸುಮ್ಮನೇ ನೋಡುತ್ತಾ ಕುಳಿತ ದೇವ. ಸ್ವಲ್ಪ ಹೊತ್ತಿನ ಮೊದಲು ಕಾಶಿಗೆ ಹೋಗಬೇಕೆಂಬ ಕನಸು ಕಟ್ಟುತ್ತಿದ್ದ ಅಜ್ಜ ಇಷ್ಟು ಬೇಗ ತಣ್ಣಗೆ ಮಲಗಿದ್ದು ದೇವನಿಗೆ ನಂಬಲು ಕಷ್ಟವಾಗುತ್ತಿತ್ತು. ಅಜ್ಜನೊಡನೆ ಹರಕು ಕಂಬಳಿ ಹೊದ್ದು ಮಳೆ ಚಳಿಯೆನ್ನದೆ ಕಳೆದ ಅದೆಷ್ಟೊ ರಾತ್ರಿಗಳು ಇದ್ದಕ್ಕಿದ್ದಂತೆ ಜೀವ ತಳೆದು ಕಣ್ಣ ಮುಂದೆ ಬಂದು ಅಣಕಿಸಿದ ಅನುಭವ. ಕಾಲುಗಳಲ್ಲಿ ಶಕ್ತಿ ಕುಂದಿದಂತೆನ್ನಿಸಿ ದೇವ ಅಲ್ಲೆ ಕುಸಿದು ಕುಳಿತ. ಕಣ್ಣೀರು ಉಕ್ಕಿ ಹರಿಯತೊಡಗಿತು. ಎಷ್ಟು ಹೊತ್ತು ಹಾಗೆ ಕುಳಿತಿದ್ದನೋ ಅವನಿಗೆ ತಿಳಿಯಲಿಲ್ಲ . ಹಕ್ಕಿಗಳ ಕಲರವ ಕಿವಿಗೆ ಬಿದ್ದಾಗ ಪಕ್ಕನೆ ಇಹಕ್ಕೆ ಬಂದಂತೆ ಕಣ್ತೆರೆದ.
ಸಾವಿನ ಸುದ್ದಿ ಅರುಹಲು ತನ್ನನ್ನು ಬಿಟ್ಟರೆ ಇನ್ಯಾರಿದ್ದರು ಎಂಕಜ್ಜನಿಗೆ ! ಆದರೂ ಊರಿನವರಿಗೆ ತಿಳಿಸುವ ಅನಿವಾರ್ಯತೆಯಿತ್ತು .ಮೆಲ್ಲನೆ ಸಾವರಿಸಿಕೊಂಡು ಎದ್ದವನೇ ಊರಿನ ಕೆಲವು ಜನರಿಗೆ ವಿಷಯ ತಿಳಿಸಿ , ಅಯ್ಯನವರ ಚಿತೆಯ ಪಕ್ಕದಲ್ಲೇ ಇನ್ನೊಂದು ಚಿತೆ ಸಿದ್ಧಗೊಳಿಸಿ ಎಂಕಜ್ಜನ ಶರೀರವನ್ನು ಎತ್ತಿ ಅಗ್ನಿದೇವನಿಗೆ ಅರ್ಪಿಸಿದ.
ಯಾರು ಇರಲಿ ಇಲ್ಲದಿರಲಿ ದಿನಗಳು ತನ್ನ ಪಾಡಿಗೆ ತಾನೇ ಉರುಳುತ್ತವೆ. ಮನೆಯ ಹೊರಗಿನಿಂದ 'ದೇವಾ' ಎಂಬ ಕೂಗು ಕೇಳಿದಾಗ ಹೊರಬಂದಿದ್ದ. ಕಾಶಿ ಕೃಷ್ಣಯ್ಯನ ಕಡೆಯವರು ಹೊರಗೆ ನಿಂತಿದ್ದರು.
ಹೆಣ ಸುಡಲು ತಂದಾಗಲೇ, ಮೂರು ದಿನ ಕಳೆದು ಬರುವುದಾಗಿಯೂ,ಕಾಶಿಯಲ್ಲಿ ಅವರ ಅಸ್ಥಿ ಸಂಚಯನ ಮಾಡಲು ಕೊಂಚ ಬೂದಿ, ಹೊತ್ತದೆ ಉಳಿದ ಮೂಳೆಗಳನ್ನು ಒಂದು ಮಡಿಕೆಯಲ್ಲಿ ಹಾಕಿಡಲು ಹೇಳಿದ್ದರು. ದೇವನಿಗೆ ಇವರನ್ನು ಕಂಡಾಗಲೇ ನೆನಪಾಗಿದ್ದು ಆ ಕೆಲಸ. ಇಲ್ಲೆ ನಿಂತಿರಿ ಈಗ ಬಂದೆ.. ಎಂದು ಪುಟ್ಟ ಮಡಿಕೆ ಮತ್ತು ಅದರ ಬಾಯಿ ಮುಚ್ಚುವಂತೆ ಕಟ್ಟಲು ಒಂದು ಬಿಳಿಯ ಬಟ್ಟೆಯ ತುಂಡು ಹಿಡಿದು ಹೆಣ ಹೊತ್ತಿಸಿದ ಜಾಗಕ್ಕೆ ನಡೆದ.
ಕಾಶಿ ಕೃಷ್ಣಯ್ಯನ ಕಡೆಯವರು ಗುಡಿಸಲಿನ ಬಳಿಯಲ್ಲಿ ಏನೋ ಮಾತಿನಲ್ಲಿ ಮುಳುಗಿದ್ದರು. ದೇವ ಅವರ ಕಡೆಗೊಮ್ಮೆ ನೋಡಿ, ಕೃಷ್ಣಯ್ಯನವರ ಚಿತೆಯತ್ತ ನಡೆದ.ಅಲ್ಲೇ ಹತ್ತಿರದಲ್ಲಿ ಎಂಕಜ್ಜನ ಚಿತೆಯು ಮೌನ ಹೊದ್ದು ಮಲಗಿತ್ತು. ಎರಡು ಕಡೆಯ ಬೂದಿಗೂ ಯಾವುದೇ ವ್ಯತ್ಯಾಸ ಕಾಣಲಿಲ್ಲ.ಮನಸ್ಸಿನಲ್ಲೊಮ್ಮೆ ಎಂಕಜ್ಜನ ಕಾಶೀ ಯಾತ್ರೆಯ ಕನಸು ಹಣಕಾಡಿತು. ದೇವನಿಗೆ ಏನನ್ನಿಸಿತೊ ಏನೋ ... ನಿರ್ಧಾರಕ್ಕೆ ಬಂದವನಂತೆ ಮೆಲ್ಲನೆ ಎಂಕಜ್ಜನ ಚಿತೆಯ ಬೂದಿ ಮತ್ತು ಅಸ್ಥಿಯನ್ನು ಮಡಿಕೆಯೊಳಗೆ ತುಂಬಿ ತಂದು ಕಾದಿದ್ದವರ ಕೈಗೆ ನೀಡಿ, ಮನದೊಳಗೆ 'ಅಜ್ಜಾ ನಿನ್ನನ್ನು ಕಾಶಿಗೆ ಒಂಟಿಯಾಗಿ ಕಳಿಸ್ತಾ ಇದ್ದೀನಿ ನೋಡು' ಎಂದ.