Pages

Total Visitors

Sunday, November 27, 2011

ಸಂಧ್ಯೆ ...





ಸಂಜೆ ಆರು ಗಂಟೆಯ ಹೊತ್ತಿಗೆ ಯಾರೇ ಬಂದು ಈ ಪಾರ್ಕಿನ ಉತ್ತರ ಮೂಲೆಯ ಬೆಂಚ್ ಕಡೆಗೆ ದ್ಟೃಷ್ಟಿ  ಹಾಯಿಸಿದರೆ ಇಲ್ಲಿ  ಕುಳಿತಿರುವ ನನ್ನನ್ನು ನೋಡದಿರಲು ಸಾಧ್ಯವೇ ಇಲ್ಲ. ಸರಿಯಾಗಿ ಅರ್ಧ ಗಂಟೆಯ ನಂತರ ಇಲ್ಲಿಂದೆದ್ದು ಎರಡು ಕಿ ಮೀ  ದೂರ ಇರುವ ಮನೆಯ ಕಡೆ ನಿಧಾನಕ್ಕೆ ಹೆಜ್ಜೆ ಹಾಕುತ್ತೇನೆ. 

ಆದರೆ ಇವತ್ತು ಗಂಟೆ ಏಳಾದರೂ ಇಲ್ಲಿಂದ ಎದ್ದಿಲ್ಲ. ಏಳೋಣ ಎಂದುಕೊಳ್ಳುವಾಗ ಹೊರಗಿನ ವಿದ್ಯುದ್ದೀಪಗಳ ಬೆಳಕಿನಲ್ಲಿ ಹಗಲಿನಷ್ಟೇ ನಿಚ್ಚಳವಾಗಿ ಕಾಣುವ ಪೇಟೆ, ಜನರ ಓಡಾಟ ನನ್ನನ್ನಿಲ್ಲೇ ಕೂರುವಂತೆ ಮಾಡಿತ್ತು. ಕುಳಿತ ಕಡೆಯಿಂದಲೇ ಜೋಮು ಹಿಡಿದ ಕಾಲನ್ನು ಆಚೆ ಈಚೆ ಮಾಡುತ್ತಿದ್ದೆ ಅಷ್ಟೆ. ನನ್ನ ನೋಟ ಎಲ್ಲಾ ರಸ್ತೆಯ ಕಡೆಗೆ.. 

ವಾಚಿನ ಕಡೆ ನೋಡಿದೆ. ಏಳೂವರೆ ಸಮೀಪಿಸುತ್ತಿತ್ತು. ಮನೆ ತಲುಪಿ, ಮೆಚ್ಚಿನ ಟಿ ವಿ  ಸೀರಿಯಲ್ ನೋಡುವ ಹೊತ್ತು. ಮನೆಯಲ್ಲಿರುವ ಸೊಸೆ, ಮೊಮ್ಮಗಳು ನನ್ನನ್ನು ಕಾಣದೆ ಗಾಭರಿಯಾಗುವುದು ಖಂಡಿತಾ. ಮಗ ಆಫೀಸ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ. 


ಅರೇ.. ಈ ಜನಗಳೆಲ್ಲ ಇನ್ನೂ ಎಷ್ಟೊಂದು ಸಡಗರದಿಂದ ಅತ್ತಿತ್ತ ತಿರುಗುತ್ತಿದ್ದಾರೆ.. ಬೇಗ ಬೇಗ ಮನೆ ಸೇರಿಕೊಳ್ಳಬಾರದಾ ಇವರಿಗೆ.. ಕೂತಲ್ಲೇ ಸಿಡಿಮಿಡಿಗೊಂಡೆ. ಗಂಟೆ ಮುಳ್ಳು ಎಂಟರ ಹತ್ತಿರ ಬಂದಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಈ ಪಾರ್ಕಿನ ಗೇಟನ್ನು ಕ್ಲೋಸ್ ಮಾಡ್ತಾರೆ. ಬೀಗ ಹಾಕುವವ ಬಂದು ನನ್ನನ್ನು ನೋಡಿ ಏನ್ಸಾರ್ ಇಲ್ಲೇ ಕೂತಿದ್ದೀರಾ.. ಏಳಿ ಮನೆಗೆ ಹೋಗಿ ಅಂದ್ರೇನು ಮಾಡೋದು.. ಛೇ.. 

ಮಾಗಿಯ ಚಳಿ ಗಾಳಿ ಶರೀರವನ್ನು ಗಡಗುಟ್ಟಿಸುತ್ತಿತ್ತು. ಎಷ್ಟು ಮುದುಡಿ ಕುಳಿತರೂ ಒಳಗಿನಿಂದಲೇ ನಡುಕ.. ಮನೆಯಲ್ಲಿದ್ದಿದ್ದರೆ ಈಗ ಸೊಸೆ ಕೊಡುವ ಚಪಾತಿ, ಬಿಸಿ ಪಲ್ಯದ ರುಚಿ ನೋಡುವ ಸಮಯ. ನೆನೆಸಿಕೊಂಡ ಕೂಡಲೇ ಯಾಕೋ ಹೊಟ್ಟೆ ಹಸಿಯಲು ಪ್ರಾರಂಭಿಸಿತು. 

ಏನಾದರಾಗಲಿ .. ಎದ್ದು ಮನೆ ಕಡೆಗೆ ಹೋಗಿಯೇ ಬಿಡೋಣ ಎಂದುಕೊಳ್ಳುವಷ್ಟರಲ್ಲಿ ಹಿಂದಿನಿಂದ 'ಅಜ್ಜಾ.. ನೀವಿನ್ನೂ ಇಲ್ಲೇ ಕೂತ್ಕೊಂಡು ಏನ್ ಮಾಡ್ತಿದ್ದೀರಾ.. ನಮ್ಗೆಲ್ಲ ಎಷ್ಟು ಗಾಭರಿಯಾಯ್ತು ಗೊತ್ತಾ.. ಹುಷಾರಾಗಿದೀರ ತಾನೇ.. ಏಳಿ .. ಅಮ್ಮ ನಿಮ್ಗೆ ಗಾಡೀಲಿ ಕೂರುವಾಗ ಚಳಿ ಆಗ್ಬಹುದು ಅಂತ ಶಾಲು ಕಳ್ಸಿದ್ದಾಳೆ. ಇದನ್ನು ಹೊದ್ಕೊಂಡು ನನ್ನ ಕೈನೆಟಿಕ್ ಏರಿ..' ಎನ್ನುವ ಮೊಮ್ಮಗಳ ನುಡಿ. 
ಕುಳಿತಲ್ಲಿಂದಲೇ ಶಾಲಿಗೆ ಕೈಚಾಚಿ 'ನಡೀ ತಾಯಿ  ಬರ್ತೀನಿ' ಅಂದೆ.
ಅವಳು ಮುಂದೆ ಹೋಗುತ್ತಿದ್ದಂತೆ 'ಬದುಕಿದೆಯಾ ಬಡ ಜೀವವೇ' ಎಂದುಕೊಂಡು ಶಾಲನ್ನು ಇಡೀ ದೇಹಕ್ಕೆ ಸುತ್ತಿಕೊಂಡು ಎದ್ದೆ. 

ಆದದ್ದಿಷ್ಟೇ.. ಯಾರೋ ನಾನು ನಿತ್ಯ ಕುಳಿತುಕೊಳ್ಳುವ ಬೆಂಚಿನ ಕೆಳಗೆ ತಿಂಡಿ ತಿಂದು ಆ ಪ್ಲಾಸ್ಟಿಕ್ ಕವರನ್ನು ಹಾಗೇ ಎಸೆದು ಹೋಗಿದ್ದರು. ಅದನ್ನು ಡಸ್ಟ್ ಬಿನ್‌ಗೆ ಹಾಕೋಣವೆಂದು ಬಗ್ಗಿ ಹೆಕ್ಕುವಾಗ ಪ್ಯಾಂಟ್ ಪರ್ರನೆ ಹರಿದು ಹೋಗಿತ್ತು. ನನ್ನ ಪುಣ್ಯ.. ಸೊಸೆ ಚಳಿಗೆ ಅಂತ ಕಳುಹಿಸಿ ಕೊಟ್ಟ ಈ ಶಾಲಿನಿಂದ ಮರ್ಯಾದೆ ಉಳೀತಪ್ಪಾ..ಎಂದುಕೊಂಡು ಇನ್ನೂ  ಕೈಯಲ್ಲೇ ಉಳಿದಿದ್ದ ಕಸವನ್ನು ಡಸ್ಟ್ ಬಿನ್ನಿನೊಳಕ್ಕೆ ಎಸೆದು, ಮೊಮ್ಮಗಳು ನಿಲ್ಲಿಸಿದ್ದ ಗಾಡಿಯ ಕಡೆಗೆ ಉತ್ಸಾಹದಿಂದ ಬೇಗ ಹೆಜ್ಜೆ ಹಾಕತೊಡಗಿದೆ. 

8 comments:

  1. ಪರಿಸರದ ಮೇಲೆ ಕಾಳಜಿಯಿರುವ ಒಬ್ಬ ಸಂಭಾವಿತ ವ್ಯಕ್ತಿ ಅಕಸ್ಮಾತಾಗಿ ಪೇಚಿಗೆ ಸಿಲುಕಿ ಆತ್ಮ ಗೌರವವನ್ನು ಕಾಯಲು ಹೆಣಗಿದ ಕಥೆ...ಬಹಳ ಚೆನ್ನಾಗಿದೆ ಅನಿತ :)

    ReplyDelete
  2. VERY NICE..anithakka.

    ReplyDelete
  3. ಆಹಾ ಅಹಹ್ಹಹ ... ಸೂಪರ್ ಮೇಡಂ.. ನಿಮ್ಮ ಕಥೆ... ಈ ಲೋಕವನ್ನೇ ಕಳೆದು ಹೋದ ನಮ್ಮ ತಾತನ ನೆನಪು ಮಾಡಿದ್ರಿ ... ಆ ಹಳೆಯ ದಿನಗಳ ಸೊಗಸು ಮತ್ತೆ ನಮ್ಮ ಮುಂದೆ ಬಂದಂತಾಯಿತು.. ಅಜ್ಜಿ ತಾತ ಪ್ರೀತಿಯ ವಿಶೇಷತೆಯೇ ಬೇರೆ.. ಅದು ಅತೀ ಸುಲಭವಾಗಿ ಅರ್ಥವಾಗೋಲ್ಲ..
    ನಾವು ಏನೋ ಕಲ್ಪನೆಯಲ್ಲಿ ಇದ್ದರೆ ನೀವು ಕೊನೆಯಲ್ಲಿ ಪರ್ರನೆ ಪ್ಯಾಂಟ್ ಹರಿದು , ಆ ನಮ್ಮ ಕಲ್ಪನೆಯ ದಿಕ್ಕನೆ ಬದಲಿಸಿ , ಮತ್ತೊಮ್ಮೆ ಇದನ್ನು ಓದಿ ನಗುವಂತೆ ಮಾಡಿದಿರಿ.. ಆದರೆ ಒಂದು ವಿಷಯ ನಮ್ಮ ತಾತ ಪ್ಯಾಂಟ್ ಹಾಕುತ್ತಲೇ ಇರಲಿಲ್ಲ.. ಅವರು ಪಂಚೆ ಉಡುತ್ತಿದ್ದರು ... ಅವರಿಗೆ ಈ ರೀತಿಯ ಸಮಸ್ಯೆ ಎಂದೂ ಬರಲಿಲ್ಲ... :)

    ReplyDelete
  4. ಕೊನೆಯ ಸಾಲುಗಳು ಪಜೀತಿಯನ್ನು ಅನಾವರಣಗೊಳಿಸಿ, ಕಥನಕ್ಕೆ ಸಖತ್ ತಿರುವು ಕೊಟ್ಟಿದೆ.

    ಸಾರ್ವಜನಿಕ ಸ್ಥಳಗಳನ್ನು ಕಸದ ಗುಡ್ಡೆಯಾಗಿಸುವ ಅನಾಗರೀಕ ಮಂದಿಗೆ ಇಂತಹ ಹಿರಿಯ ನಾಗರೀಕರು ಆದರ್ಶವಾಗಲಿ.

    ReplyDelete
  5. ಹಹಹ..ಸಿಕ್ಕಾಪಟ್ಟೆ ಪಂಚಿಂಗ್!
    :-)

    ReplyDelete
  6. ತುಂಬಾ ಚೆನ್ನಾಗಿದೆ ಅನೀತಕ್ಕ.. ಕೊನೇ ಪ್ಯಾರಾ ಇಡೀ ಕಥೆಗೇ ಅನಿರೀಕ್ಷಿತ ತಿರುವು ತಂದುಕೊಟ್ಟಿತು. ತುಂಬಾ ಚೆನ್ನಾಗಿದೆ :-)

    ReplyDelete
  7. tumbaa channaagide...nodi anivaaryategalu hege hege barutte endu.....:) ishtavaayitu....

    ReplyDelete