Pages

Total Visitors

Sunday, December 18, 2011

ಹೋರಾಟ





ಕುದಿಯುತ್ತಿರುವ ಸಾರಿಗೆ ಏನೋ ಕಡಿಮೆಯಾದಂತನಿಸಿತು. ಕೊತ್ತಂಬರಿ ಸೊಪ್ಪೇ ಹಾಕಿರಲಿಲ್ಲ. ಅದನ್ನು ತರಲು ಅಂಗಳದ ಮೂಲೆಯ ಕೈತೋಟದ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. 

ಪಕ್ಕನೇ ಎರಡು ದೊಡ್ಡ ಜಾತಿಯ ಕಡು ಕಪ್ಪು ಬಣ್ಣದ ಇರುವೆಗಳು ಕಣ್ಣು ಸೆಳೆದವು.ಇರುವೆಗಳ ಸಹಕಾರೀ ಗುಣ, ಶಿಸ್ತು,ಕಾರ್ಯ ಚಟುವಟಿಕೆಗಳ ಬಗ್ಗೆ ಮಾತ್ರ ತಿಳಿದಿದ್ದ ನನಗೆ ಇವುಗಳು ಕಾಳಗಕ್ಕೆ ಸಿದ್ಧರಾದಂತೆ ಎದುರು ಬದುರು ನಿಂತಿರುವ ರೀತಿ ಹೊಸದಾಗಿ ತೋರಿತು. 

ಹೊರಟ ಕೆಲಸ ಮರೆತು ಅವುಗಳತ್ತಲೇ ನೋಡುತ್ತಾ ನಿಂತೆ. ನಾನು ಅಂದುಕೊಂಡಿದ್ದು ನಿಜವಾಗಿತ್ತು.ಅವು ಹತ್ತಿರ ಬಂದು ಬಲಾಬಲಗಳ ಪರೀಕ್ಷೆ ಮಾಡುವಂತೆ ಕೈಯಿಂದ ಕಾಲಿನಿಂದ ಪರಸ್ಪರ ದೂಡಿಕೊಳ್ಳುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ಇರುವೆ ಪಕ್ಕದ ಗೋಡೆಯ ಮೇಲೆ ಹತ್ತಿ ಅಲ್ಲಿಂದ ಕೆಳಗಿದ್ದ ಇರುವೆಯ ಮೇಲೆ ನೆಗೆದು ಅದನ್ನು ಕೆಡವಿತು. ಬಲವಾಗಿ ಒಂದನ್ನೊಂದು ಗಟ್ಟಿ ಹಿಡಿದುಕೊಂಡು ಉಂಡೆಯಾಕಾರದಂತೆ ಅತ್ತಿಂದಿತ್ತ ಇತ್ತಿಂದತ್ತ ಉರುಳಿ ತಮ್ಮ ಚೂಪಾದ ಕೊಂಡಿಗಳಲ್ಲಿ ಚುಚ್ಚಿಕೊಳ್ಳುತ್ತಿದ್ದವು.

.ಬೀದಿ ನಾಯಿಗಳ ಜಗಳ ನೋಡಿ ಅಭ್ಯಾಸವಿದ್ದ ನನಗೆ, ಅವುಗಳಂತೆ ಇವು ಕೂಡಾ ಒಂದು ಶರಣಾಗತಿಯನ್ನು ಸೂಚಿಸುತ್ತಾ ನಿಂತರೆ ಇನ್ನೊಂದು ಅದನ್ನು ಬಿಟ್ಟು ಹೋಗಬಹುದು ಎಂದುಕೊಂಡು, ಮಾಡಬೇಕಿದ್ದ ಕೆಲಸ ನೆನಪಿಸಿಕೊಂಡು ಅಲ್ಲಿಂದ ಕಾಲ್ತೆಗೆದೆ. 

ಸ್ವಲ್ಪ ಹೊತ್ತು ಕಳೆದು ಪುನಃ ಕುತೂಹಲದಿಂದ ಆ ಜಾಗಕ್ಕೆ ಬಂದು ಪರೀಕ್ಷಿಸಿದೆ. ಎರಡೂ ಇರುವೆಗಳು ಅತ್ಯಂತ  ಪ್ರೀತಿಪಾತ್ರರಂತೆ  ಒಂದನ್ನೊಂದು ಅಪ್ಪಿಕೊಂಡು ಸತ್ತು ಬಿದ್ದಿದ್ದವು.

ಸಾಲಾಗಿ ಬರುತ್ತಿದ್ದ ಇನ್ನೊಂದು ಜಾತಿಯ  ಚಿಕ್ಕ ಇರುವೆಗಳ ಸಾಲು ಅವುಗಳನ್ನು ತಮ್ಮ ಆಹಾರವೆಂಬಂತೆ  ಗೂಡಿಗೆ ಹೂತ್ತೊಯ್ಯಲು ಪ್ರಯತ್ನಿಸುತ್ತಿರುವುದು ಯಾಕೋ ಶವ ಮೆರವಣಿಗೆಯಂತೆ ತೋರಿತು. 

ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತೆಷ್ಟು ನಿಜ .. !!


6 comments:

  1. ಎರಡು ಇರುವೆಗಳ ಕಾಳಗವನ್ನು ಉದಾಹರಣೆಯಾಗಿಟ್ಟು "ಇಬ್ಬರ ಜಗಳ ಮೂರನೆಯವನಿಗೆ ಲಾಭ" ಎಂಬ ಸತ್ಯ ದರ್ಶನದಲ್ಲಿನ ನಿಮ್ಮ ನಿರೂಪಣೆ ಅಭಿನಂದನಾರ್ಹ.. ತುಂಬ ಸರಳ ಸಾಲುಗಳಲ್ಲಿ ಸುಂದರ ಪದಗಳ ಜೋಡಣೆಯ ಮೂಲಕ ಬಹು ಸುಂದರವಾಗಿ ಕತೆಯನ್ನು ಹೆಣೆದಿದ್ದೀರಿ.. ನೈಜ ನಿರೂಪಣೆ ಮನ ಗೆದ್ದಿತು, ಸುಂದರ ಕತೆ..

    ReplyDelete
  2. ಒಳ್ಳೆ ಕಥೆ ,.. ಮತ್ತೆ ಸಾಂಬಾರಿಂಗೆ ಅದರನ್ನೇ ಹಾಕಿದೆಯಾ ?

    ReplyDelete
  3. Yes strange naa??iruvegaLa kaaLaga?
    i think i have seen ur posts in Avadhi!! have enjoyed many of ur hilarious writings!!
    :-)
    malathi s

    ReplyDelete
  4. iruveyannu kolluvudu sulabhavalla, aadare avugala madyaye vishamya estu dodda krourya esagitu... yaavude jeevi tamma tamma naduveye irabahudaada dveeshakke baliyaadastu bereyavara droohakke baliyaaguva saadyate kadime. e ghatane manushya lokakke innu bere eno heluttide... artha maadikolluva manassugalige... thanks for giving an example of eternal truth.

    ReplyDelete
  5. ಅನಿತಾ, ತುಂಬ ತುಂಬ ಇಷ್ಟ ಅಯಿತು. ಈ ಜಗತ್ತು ಎಷ್ಟು ಮಹತ್ತರ ಸ್ವರೂಪದ್ದಾಗಿದೆಯೋ ಅಷ್ಟೇ ಸೂಕ್ಷ್ಮ ರೂಪದಲ್ಲೂ ಅದರ ಅಸ್ಥಿತ್ವವಿದೆ ಅನ್ನುವುದನ್ನು ನೀನು ಈ ಬರವಣಿಗೆಯ ಮೂಲಕ ನೆನಪಿಸುವುದರಲ್ಲಿ ಸಫಲಳಾಗಿದ್ದಿ. ಸ್ಪಂದಿಸುವ ಶಕ್ಥಿಯಿದ್ದರೆ ಸೂಕ್ಷ್ಮಾತಿ ಸೂಕ್ಶ್ಮ ವಿಶಯಗಳೂ ನಮ್ಮ ಅರಿವಿಗೆ ನಿಲುಕುವುದು ಸಾದ್ಯ.
    ನೈಜ ಚಿತ್ರಗಳನ್ನು ಬಳಸಿಕೊಂಡದ್ದು ಬರವಣಿಗೆಗೆ ಮೆರಗು ನೀಡಿದೆ.

    ReplyDelete
  6. ಚಿತ್ರಗಳು ತುಂಬಾನೆ ಚೆನ್ನಾಗಿದೆ! ಕಾದಾಟ ನೋಡಿ ಆಶ್ಚರ್ಯವಾಯಿತು!

    ReplyDelete