Pages

Total Visitors

Monday, January 9, 2012

ಮಾವೆಂದರೆ ಅಷ್ಟೆ ಸಾಕೇ..  ಹಣ್ಣುಗಳ ರಾಜನೆಂದರೆ ಯಾರೆಂದುಕೊಂಡಿದ್ದೀರಿ ಎಂದು ಯಕ್ಷಗಾನ ಶೈಲಿಯಲ್ಲಿ ಕೇಳಿ ನೋಡಿ.ಎಲ್ಲಾ ಕಡೆಯಿಂದ  ಮಾವಿನ ಹಣ್ಣು ಎಂಬ ಒಂದೇ ಉತ್ತರ ಕೇಳಿ ಬಂದೀತು. ಎಲ್ಲರೂ ಆ ಸಮಯದಲ್ಲಿ ಮಾವುವಾದಿಗಳಾಗುವುದು  ನಿಶ್ಚಿತ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಎಲ್ಲರೂ 'ಆಮ್‌ಆದ್ಮಿ'ಗಳಾಗುತ್ತಾರೆ. !

 ಯಾರೊಂದಿಗಾದರೂ ಸ್ವಲ್ಪ ಹೊತ್ತು ಮಾತಿಗಿಳಿದರೆ ಸಾಕು, ಕೆಲವೇ ಕ್ಷಣದಲ್ಲಿ ಮಾತು ಮಾವಿನ ಕಡೆ ತಿರುಗುತ್ತದೆ. ನಿಮ್ಮಲ್ಲಿ ಮಾವು ಹೂ ಬಿಟ್ಟಿದೆಯೇ   ಬೆಳೆಯಲು ಪ್ರಾರಂಭವಾಯಿತೇ    .. ? ಎಂಬಲ್ಲಿಂದ ಸುರು ಆದರೆ, ನಂತರ ಅದರ ಕುಲ ಗೋತ್ರ ಪ್ರವರಗಳ ಕಡೆ ತಿರುಗಿ ಹಣ್ಣಾಗುವಾಗ ನನ್ನನ್ನು ನೆನಪಿಸಿಕೊಳ್ಳಿ ಎಂಬಲ್ಲಿಗೆ ಪರಿಸಮಾಪ್ತಿಯಾಗುತ್ತದೆ.  ಇದೆಲ್ಲ ಯಾರೂ ತಾವಾಗಿಯೆ ಬೇಕು ಅಂತ ಕೇಳೋದಲ್ಲ.. ಮಾವಿನ ಮಹಿಮೆಯೇ ಇರಬೇಕು ..ಅಚಾನಕ್ ಆಗಿ ಈ ಮಾತನ್ನು  ಹೊರಡಿಸುತ್ತದೆ. 

ಮಾವು ಎಂಬ ಹೆಸರೇ ಬಾಯಲ್ಲಿ ನೀರೂರಿಸುವುದು ಸತ್ಯ . ಅದರಲ್ಲೂಮಲ್ಲಿಕಾ, ನೀಲಂ, ರಸ್‌ಪೂರಿ   ಎಂಬಿತ್ಯಾದಿ ಕಸಿ ಮಾವಿನಹಣ್ಣಿನ ವಿಚಿತ್ರ ಹೆಸರುಗಳನ್ನು ಕೇಳಿದರೆ ರಸಿಕರ ಬಾಯಲ್ಲಿ ಇನ್ನೂ ಹೆಚ್ಚು ಲಾವರಸ ಉತ್ಪತ್ತಿಯಾಗಬಹುದು. ಈ ಕಸಿ ಮಾವಿನ ಹಣ್ಣುಗಳನ್ನು ದುಬಾರಿ ಬೆಲೆ ತೆತ್ತಾದರೂ ಕೊಳ್ಳಬಹುದು. ಆದರೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ನಾಚುವ, ನಾನೀಗ ಪ್ರಸ್ತಾಪಿಸುತ್ತಿರುವ ' ಕಾಟು ಮಾವು' ಎಂಬ ಸಾದಾ ಸೀದಾ ಮಾವಿನ ಪರಿಚಯ ಬಹು ಜನರಿಗೆ ಇರಲಾರದು. 
ಹೆಸರೇ ಸೂಚಿಸುವಂತೆ ಇದು ಕಾಡಿನಲ್ಲಿ ಯವುದೇ ರೀತಿಯ ಉಪಚಾರವಿಲ್ಲದೇ ಸ್ವಾಭಾವಿಕವಾಗಿ ಬೆಳೆಯುವ ಒಂದು ವಿಶಿಷ್ಟ ಬಗೆಯ ಮಾವು. ಗಾತ್ರದಲ್ಲಿ ಇದು ಇತರ ಕಸಿ ಮಾವುಗಳಿಂದ ತುಂಬ ಸಣ್ಣದು. ಆದರೂ ಇದರಿಂದ ತಯಾರಿಸಿದ ಉಪ್ಪಿನಕಾಯಂತೂ ಜಗತ್ಪ್ರಸಿದ್ದ ! ಮಿಡಿಯಾಗಿರುವಾಗಲೇ  ಭರಣಿಯೊಳಗೆ ಇಳಿದು ಉಪ್ಪಿನ ಜೊತೆ ಸರಸವಾಡುತ್ತಾ ಉಪ್ಪಿನಕಾಯಿ  ಪ್ರಿಯರನ್ನು ಆಹ್ವಾನಿಸುವ ಇವುಗಳ ಲೋಕವೇ ಅದ್ಭುತ. 
ನಿಮ್ಮಲ್ಲಿ ಒಂದು ಒಳ್ಳೆಯ ಕಾಟು ಮಾವಿನ ಮರವಿದ್ದರೆ ಸಾಕು. ನೀವು ಅಧಿಕಾರಾವಧಿಯಲ್ಲಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಹಿಂಬಾಲಕರನ್ನು ಪಡೆಯುತ್ತೀರಿ. ಅದರಲ್ಲಿ ಇನ್ನೂ ಹೂ ಅರಳುವ ಮೊದಲೇ ಯಾರ್ಯಾರಿಗೆ ಎಷ್ಟೆಷ್ಟು ನೂರು ಮಿಡಿಗಳು ಬೇಕೆಂಬ ಮುಂಗಡ ಬುಕ್ಕಿಂಗ್ ಕೂಡಾ ನಡೆಯುತ್ತದೆ.ಇನ್ನೇನು ಹೂ ಅರಳಿ ಮಿಡಿ ಕಾಳುಮೆಣಸಿನ ಗಾತ್ರ ಹೊಂದಬೇಕಾದರೆ ಕೆಲವರು ಮೆಣಸು, ಸಾಸಿವೆ ತರಿಸಿ ಪುಡಿ ಮಾಡಿ  ಇಟ್ಟುಕೊಂಡಾಗಿರುತ್ತದೆ.ನೀವು ಹೇಗಿದ್ದೀರಿ ಎಂದು ಕೇಳಲು ಮರೆತರೂ ಮಾವಿನ ಮಿಡಿಗಳ   ಬಗ್ಗೆ ನಿಮ್ಮನ್ನು ದಿನ ದಿನವೂ ವಿಚಾರಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಅದರ ಸೊನೆ, ಪರಿಮಳ, ಹುಳಿ,ಒಗರು ರುಚಿಗಳ ಬಗ್ಗೆ ಕೊಂಚ ಹೊಗಳಿಕೆಯೂ ಆವರಿಸಿಕೊಳ್ಳುತ್ತದೆ. ಆದರೆ  ಮರ ಹತ್ತಿ ಕೊಯ್ಯುವ ಪ್ರವೀಣರನ್ನು ಹುಡುಕುವುದಂತೂ ಬಹು ಪ್ರಯಾಸದ ಕೆಲಸ. ಕತ್ತಲೆಯಲ್ಲಿ ಸೂಜಿ ಹುಡುಕಿದಂತೆ ಅವರನ್ನು ಕಂಡು ಹಿಡಿದು ಮಾವಿನ ಹಣ್ಣಿಗಿಂತಲೂ ಸವಿ ಮಾತನಾಡಿ ಮರ ಹತ್ತಿಸಿ ಮಿಡಿ ಕೊಯ್ಯಿಸಿದರೆ ಆ ವರ್ಷಕ್ಕೆ ಬದುಕಿದಿರಿ ಎಂದರ್ಥ.

ಅಂತೂ ಇಂತೂ ಮಿಡಿಯ ಕೊಯ್ಲು ಮುಗಿದು ಎಲ್ಲರ ಮನೆಯ ಉಪ್ಪಿನ ಕಾಯಿಯ ಭರಣಿ ತುಂಬಿದ ನಂತರ ಮರದಲ್ಲಿ ಉಳಿಯುವ ಕಾಯಿಗಳಿಗೆ ಹಣ್ಣಾಗುವ ಅವಕಾಶ. ಸ್ವಲ್ಪ ದಿನ ಮರಕ್ಕೆ ಕಲ್ಲು ಬೀರುವ ತುಂಟ ಹುಡುಗರಲ್ಲದೆ ಬೇರಾರು ಅದರ ಸನಿಹ ಸುಳಿಯುವುದಿಲ್ಲ. ಸಾವಕಾಶವಾಗಿ ಒಂದೊಂದೇ ಹಣ್ಣು ಬೀಳಲು ಸುರು ಆಗಲಿ. ಆಗ ಪುನಃ ನಿಮ್ಮ ಮರದ ಸುತ್ತ ಜನ ಜಾತ್ರೆ ಕಳೆಕಟ್ಟುತ್ತದೆ. ರಸ್ತೆ ಬದಿಯಲ್ಲಿ ನಿಮ್ಮ ಮರ ಇದ್ದರಂತೂ ಮುಗಿದೇ ಹೋಯಿತು. ನಿಮಗೆ ರುಚಿ ನೋಡಲೂ ಒಂದೆರಡು ಹಣ್ಣು ಸಿಗುವುದು ಸಂಶಯ. ಜೊತೆಗೆ ಆ ಮರವೇನಾದರು ನಿಮ್ಮ ಬೇಲಿಯ ಬದಿಯಲ್ಲಿದ್ದರೆ ಕೇಳಲೇ ಬೇಡಿ.ಎಂತಹ ಬೇಲಿಯನ್ನಾದರು ಜಗ್ಗಿ ಒಳ ನುಗ್ಗುವ ಮಾವು ಪ್ರಿಯರಿಂದ ನಿಮಗೆ ಮುಕ್ತಿ ಸಿಗದು. 

ಏಕೆಂದರೆ ಬಲ್ಲವನೇ ಬಲ್ಲ ಇದರ ರುಚಿಯ .... !!

ಇಷ್ಟೆಲ್ಲ ಮಹಿಮೆಯ ಈ ಮಾವನ್ನು ತಿನ್ನುವ ಬಗ್ಗೆಯೂ ಕೊಂಚ ತಿಳಿಕೊಳ್ಳೋಣ ಆಗದೇ..ಕಸಿ ಹಣ್ಣಿನಂತೆ ಸಿಪ್ಪೆ ತೊಲಗಿಸಿ ತುಂಡರಿಸಿ, ಸ್ಟೈಲಾಗಿ ಫೋರ್ಕ್ ಕುತ್ತಿ, ಒಂದೊಂದೇ ತುಂಡು ಮೆಲ್ಲಲು ಸಾಧ್ಯವಿಲ್ಲ.ಹಾಗೆ ಇವುಗಳನ್ನು ತುಂಡರಿಸಿ  ತಿನ್ನುವ ಪ್ರಯತ್ನವೂ ಕೂಡ ಇವುಗಳಿಗೆ ಮಾಡುವ ಅವಮಾನವೇ ಸರಿ.ತಿನ್ನುವುದಿದ್ದರೆ  ತೊಟ್ಟು ಮಾತ್ರ ತೆಗೆದು, ಹಾಗೆಯೇ ಸಿಪ್ಪೆ ಸಮೇತ ಕಚ್ಚಿ ತಿನ್ನಬೇಕು. ಅದರಿಂದೊಸರುವ ರಸ ನೆಲಕ್ಕೆ ಬೀಳದಂತೆ ಆಗಾಗ ಅಂಗೈಯಿಂದ  ಮೊಳಕೈಯವರೆಗೆ ನೆಕ್ಕಿಕೊಳ್ಳುತ್ತಿರಬೇಕು.ಒಂದು ಹಣ್ಣಿಗೆ ನೀವೆಲ್ಲಿ ಸುಮ್ಮಗಾಗುತ್ತೀರಿ ಮತ್ತೊಂದು ಮಗದೊಂದು ಎಂದು ಹೊಟ್ಟೆ ತುಂಬಿದರೂ ನಾಲಗೆ ಬೇಡುತ್ತಲೇ ಇರುತ್ತದೆ. ಅಂತೂ ಇಂತೂ ಜಗಲಿಯ ಅಂಚಲ್ಲಿ ಬಾಗಿ ನಿಂತು ಮೈ ಕೈಗೆಲ್ಲಾ ರಸ ಸುರಿಸಿಕೊಂಡು ತಿನ್ನುವುದನ್ನು ನಿಲ್ಲಿಸಿದಿರಿ ಎಂದುಕೊಳ್ಳಿ, ನಂತರ ಸೀದಾ ಒಳ ಹೋಗುವಂತೆಯೂ ಇಲ್ಲ. ಹಲ್ಲುಗಳಲ್ಲಿ ಸೇರಿಕೊಂಡಿರುವ ಇದರ ನಾರಿನಭಾಗವನ್ನು ಶುಚಿಗೊಳಿಸುವುದು ಇನ್ನೊಂದು ಕೆಲಸ. 

ಕೆಲವರಂತೂ  ಇದನ್ನು ತಿನುವುದರಲ್ಲಿಎಷ್ಟು  ನಿಷ್ಣಾತರಿರುತ್ತಾರೆಂದರೆ ಈ ಮಾವಿನ ಹಣ್ಣಿನಲ್ಲಿ ನಾರಿನ ಭಾಗ ಇತ್ತು ಎಂದು ಪ್ರಮಾಣ ಮಾಡಿ ಹೇಳಿದರೂ ನಂಬದಂತೆ!!.ಅವರು ತಿನ್ನುವಂತೆ ಗೊರಟಿನ ಮೇಲೆ ಒಂದು ನಾರೂ ಉಳಿಸದೆ ಬೊಕ್ಕ ತಲೆಯಂತೆ ಮಾಡಿ ತಿನ್ನಲು ನಿಮಗೆ ಕೊಂಚ ತರಬೇತಿಯೂ ಬೇಕಾಗಬಹುದು ಬಿಡಿ.


ಈ ಕಾಟು ಮಾವಿನಹಣ್ಣು ತರಕಾರಿಯ ಹಣ ಕೂಡಾ ಉಳಿಸುತ್ತದೆ ಎಂದರೆ ಹೇಗಪ್ಪಾ ಎಂದು ಕಣ್ಣು ಬಾಯಿ  ಬಿಡಬೇಡಿ. ಇಡೀ ಊಟಕ್ಕೆ ಒಂದು ಹಣ್ಣಿದ್ದರೆ ಸಾಕು ನಿಮಗೆ ಬೇರೆ ವ್ಯಂಜನಗಳ ಅವಶ್ಯಕತೆಯೇ ಇಲ್ಲ. ತಟ್ಟೆಗೆ ಅನ್ನ ಸುರುವಿಕೊಂಡು. ಮಾವಿನಹಣ್ಣು ಗಿವುಚಿ,ಒಂದೆರಡು ಹಸಿಮೆಣಸು ನುರಿದುಕೊಂಡು, ಉಪ್ಪು ಸೇರಿಸಿದರಾಯಿತು.ಊಟ ಮಾಡಿ ಏಳುವಾಗ ಹೊಟ್ಟೆ ಭಾರವಾಗಿ  ಯಾರಾದರೂ ಕೈ ಕೊಟ್ಟೇ ಏಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. ಇದರ ರುಚಿಯೆದುರು  ಪಂಚಭಕ್ಷ್ಯ ಪರಮಾನ್ನಗಳು ಗೌಣ. ಇನ್ನು ಇವುಗಳಿಂದ ತಯಾರಿಸುವ ವ್ಯಂಜನಗಳಂತೂ ಹೆಸರು ಕೇಳುವಾಗಲೇ ಹಸಿವನ್ನು ಹೆಚ್ಚಿಸುತ್ತದೆ. ಸಾಸಿವೆ, ಗೊಜ್ಜು, ಮಾಂಬಳ, ಜೂಸ್,ರಸಾಯನ, ಹಲ್ವಾ, ಐಸ್ ಕ್ರೀಮ್ ... ಹೀಗೇ ಇದರ  ಪಟ್ಟಿ ಮುಂದುವರಿಯುತ್ತದೆ. 

ಇಷ್ಟೆಲ್ಲ ಹಣ್ಣಿನ ಬಗ್ಗೆ ತಿಳಿದರೆ ಸಾಕೇ? ಈ ಹಣ್ಣಿನ ಜೊತೆಗೇ ಪೋಣಿಸಿರುವ ದೆವ್ವಗಳ ಕತೆಗಳೂ ಇವುಗಳ ರುಚಿಯನ್ನು ದ್ವಿಗುಣಗೊಳಿಸುತ್ತವೆ. ಈಗ ನೀವು ಕೇಳುತ್ತಿರುವುದು ನನ್ನಜ್ಜಿ ಹೇಳಿದ ಕಥೆ. 

ಆಗಿನ ಕಾಲದಲ್ಲಿ ಬೆಳಗಾಗುವುದೆಂದರೆ ನಾಲ್ಕು ಗಂಟೆಗೆ. ಎದ್ದ ಕೂಡಲೇ ಅಡಿಕೆ ಮರದ ಹಾಳೆಯ ಪಡಿಗೆ ಹಿಡಿದು ಅಕ್ಕ ತಂಗಿಯರೊಂದಿಗೆ ಮಾವಿನ ಮರದಡಿಗೆ ಹೋಗುವ ಕ್ರಮ. ಸ್ವಲ್ಪ ನಿಧಾನವಾದರೆ ಹಣ್ಣುಗಳು ಬೇರೆಯವರ ಪಾಲಾದೀತೆಂಬ ಭಯ ಬೇರೆ. 
ಹೀಗೆ ಒಂದು ದಿನ ಹಣ್ಣು ಹೆಕ್ಕಲು ಹೋದಾಗ, ಮರದ ಬುಡದಲ್ಲಿ ಯಾರೋ ತಲೆಗೆ ಮುಸುಕು ಹಾಕಿಕೊಂಡು ಹಣ್ಣು ಹೆಕ್ಕುತ್ತಿರುವುದು ಕಾಣಿಸಿತಂತೆ. ಯಾಕೋ ಸಂಶಯಗೊಂಡ ಮಕ್ಕಳೆಲ್ಲ ಮನೆಗೆ ಮರಳಿ ಬಂದು ಅಪ್ಪನಿಗೆ ತಿಳಿಸಿದರಂತೆ.ಆಪ್ಪ ಒಂದು ಕೈಯಲ್ಲಿ ಕಬ್ಬಿಣದ ಮೊನಚಾದ ಆಣಿ, ಇನ್ನೊಂದು ಕೈಯಲ್ಲಿ  ಒಂದು ಮಾವಿನಹಣ್ಣೂ ಹಿಡಿದು ಮರದೆಡೆಗೆ ಹೋದರಂತೆ.ಆಗಲೂ ಮಕ್ಕಳು ತಿಳಿಸಿದಂತಹ ಆಕಾರ ಅಲ್ಲಿಯೇ ಇತ್ತಂತೆ. ಇವರನ್ನು ಕಂಡೊಡನೆ ಮಾವಿನ ಹಣ್ಣಿಗಾಗಿ ಕೈ ಚಾಚಿತಂತೆ. ಹಣ್ನನ್ನು ಅದರ ಕೈಯ್ಯಲ್ಲಿಟ್ಟರೆ, ಅದನ್ನು ನೆಲಕ್ಕೆ ಬೀಳಿಸಿ, ಹೆಕ್ಕಿಕೊಡು ಎಂಬುದಾಗಿ ಸನ್ನೆ ಮಾಡಿತಂತೆ. ಅದಕ್ಕೆ ಇವರು ಬೇಕಿದ್ದರೆ ನೀನೇ ಹೆಕ್ಕಿಕೋ ಎಂದು ಹೇಳಿದರಂತೆ. ಆ ಆಕಾರ ಹೆಕ್ಕಲು ಬಗ್ಗಿದಾಗ, ತಾವು ತಂದಿದ್ದ ಆಣಿಯನ್ನು ಅದರ ತಲೆಗೆ ಜೋರಾಗಿ ಚುಚ್ಚಿದರಂತೆ. ಕೂಡಲೇ ಅದು ವಿಕಾರವಾಗಿ ಚೀರುತ್ತಾ ಅಲ್ಲಿಂದ ಮಾಯವಾಯ್ತಂತೆ. ಎಲ್ಲಿಯಾದರೂ ಅದಕ್ಕೆ ಹಣ್ಣು ಹೆಕ್ಕಿಕೊಡಲು ಇವರೇ ಬಗ್ಗಿದ್ದರೆ, ಅದು ಇವರ ಗೋಣು ಮುರಿದು ರಕ್ತ ಕುಡಿಯುತ್ತಿತ್ತಂತೆ. ಕಬ್ಬಿಣದ ಮೊಳೆಯಲ್ಲಿ ತಲೆಗೆ ಮೊಟಕಿದರೆ ಮನುಷ್ಯರೂ ಕಿರುಚಿ ಓಡಲೇ ಬೇಕು ಎಂದು ಕೊಂಕು ತೆಗೆಯಬೇಡಿ !! ಇಂತಹ ಅಂತೆ ಕಂತೆಗಳ ಬೊಂತೆಗಳು ಕಾಟು ಮಾವಿನಹಣ್ಣಿನೊಂದಿಗೆ ಹೇರಳವಾಗಿ ಸಿಗುತ್ತವೆ. ನಿಮ್ಮಲ್ಲೂ ಹಿರಿಯರಿದ್ದರೆ ಕೇಳಿ ನೋಡಿ, ಕಥೆಯ ಸಿಹಿಯೊಂದಿಗೆ ಹಣ್ಣನ್ನು ಸವಿಯುವ ಅವಕಾಶ ನಿಮ್ಮದಾಗಬಹುದು! 

ಕೊನೆಗೆ ಗೊರಟನ್ನು ಎಸೆಯುವಾಗ ಹತ್ತಿರ ಇದ್ದವರ ಹೆಸರು ಕರೆದು, ಅವರು 'ಓ' ಎಂದು ಓಗೊಟ್ಟಾಗ 'ಗೊರಟಿನೊಂದಿಗೆ ಓಡು' ಎಂದು ಹೇಳಲು  ಮರೆಯದಿರಿ!!

9 comments:

 1. ನೀವು ಅಕಾಲದಲ್ಲಿ ಮಾವಿನ ಹಣ್ಣಿನ ಬಗ್ಗೆ ಬರೆದು ಬಾಯಲ್ಲಿ ನೀರು ತರಿಸಿ ಬಿಟ್ಟಿರಿ...

  ಮೊಣಕೈ ವರೆಗೆ ಸುರಿದ ಹಣ್ಣಿನ ರಸ ನೆಕ್ಕಿ ಸವಿಯುವ ಕಾಲ ಮತ್ತೆ ನೆನಪಾಯ್ತು...!::)

  ಚ೦ದ ಬರೆದಿದ್ದೀರಿ..

  ReplyDelete
 2. ನಮ್ಮಲ್ಲಿ ಎರಡು ಬಗೆ ...ಅಪ್ಪೆ ಮಿಡಿ ,ಜೀರಿಗೆ ಮಿಡಿ ಅಂತ ,ನನ್ನ ಅಪ್ಪನ ಅಜ್ಜಿ ಗಂಗಮ್ಮ ಅಂತ ,ಅವರು ಹಾಕಿದ ಮಾವಿನ ಮರ ,ಗಂಗಮ್ಮನ ಜೀರಿಗೆ ಅಂತ ಪ್ರಸಿದ್ಧ .ಅದರ ಗುಳ ತೆಗೆದಿಟ್ಟುಕೊಂಡು ವರ್ಷವೆಲ್ಲಾ ಗೊಜ್ಜು ಮಾಡಿಕೊಂಡು ಸವಿಯುತ್ತಾರೆ .ಅನಂಥಭಟ್ಟ ನ ಅಪ್ಪೆ ..ಅಂತ ಒಂದು ಮಿಡಿ ಹೆಸರುವಾಸಿ .ಮಲೆನಾಡ ಮಣ್ಣಿನ ಸೊಗಡಿದೆ ನಿಮ್ಮ ಬರಹದಲ್ಲಿ .ಮಾವಿನ ಹಣ್ಣಿನ ಬಗೆ ಬಗೆ ಅಡಿಗೆಗಳ ಬಗ್ಗೆ ಬರೆದು ನಮ್ಮ ಬಾಯಿ ನೀರೂರುವಂತೆ ಮಾಡಿದ್ದೀರಿ .
  ನಿಮಗೆ ನಮ್ಮ ಹಾರ್ದಿಕ ಅಭಿನಂದನೆಗಳು .

  ReplyDelete
 3. ಮಾವು ತಿಂದು ಸುಮಾರು ಎರಡೂವರೆ ವರ್ಷ ಆಯ್ತು ಅನ್ಸುತ್ತೆ..... ಛೇ ನಿಮ್ಮ ಬ್ಲಾಗ್ ಓದಿ, ತಿನ್ಬೇಕು ಅನಿಸ್ತಿದೆ.....

  ReplyDelete
 4. ಅನೀತಕ್ಕ ಇದ್ಯಾವುದೊ ಮಾವಿನ ಬಗ್ಗೆಯ ಲೇಖನವೆಂದು ನಾನು ಓದದೆ ಇದ್ದಿದ್ದರೆ ಒಂದು ಚೆಂದದ ಹಾಸ್ಯಭರಿತ ಲೇಖನವನ್ನು ತಪ್ಪಿಸಿಕೊಂಡುಬಿಡುತ್ತಿದ್ದೆ.. ನಿರೂಪಣೆ ತುಂಬಾ ವಿಶಿಷ್ಠವೆನಿಸುತ್ತದೆ ಮತ್ತು ಯಾರಿಗು ಅಷ್ಟಾಗಿ ತಿಳುವಳಿಕೆಯಿಲ್ಲದ ’ಕಾಟು ಮಾವಿನ’ ಬಗ್ಗೆ ಸವಿವರವಾದ ವಿವರ ಚೆಂದವೆನಿಸುತ್ತದೆ ಮತ್ತು ಅದನ್ನು ನಿವೇಧಿಸುವಲ್ಲಿ ನೀವು ಬಳಸಿರುವ ಭಾಷೆ ತುಂಬಾ ಹಿಡಿಸುತ್ತದೆ.. ಮಾವಿನ ಗೊರಟೆಯನ್ನು ಬೋಳು ತಲೆಯಂತೆ ತಿಂದು ಮುಗಿಸುವವರ ಬಗ್ಗೆ ಹಾಸ್ಯದ ಲೇಪಿತ ವಿಡಂಬನೆ ಚೆಂದವೆನಿಸುತ್ತದೆ..:)))

  ReplyDelete
 5. ನಾನು ಸಹ ಮಾವಿನ ಹಣ್ಣುಗಳ ಬೆಗಿನ ’ವೈಜ್ಞಾನಿಕ’ ಲೇಖನವೇನೋ ಅಂತಲೇ ಎಣಿಸಿದ್ದೆ.

  ಒಳ್ಳೆ ಹಾಸ್ಯಬರಿತ ರಸಭರಿತ ಬರಹ.

  ReplyDelete
 6. ಮಾವಿನ ಹಣ್ಣು ತಿಂದಾದ ಮೇಲೆ ಗೊರಟು ಎಸೆಯುವ ಮೊದಲು ಫೋನು ಮಾಡುತ್ತೇನೆ ...:)ಆ ಹಣ್ಣು ಹೆಕ್ಕುವ ಭೂತ ಯಾವುದೆಂದು ಗೊತ್ತಾಯಿತು...:))))

  ReplyDelete
 7. ನಿಮ್ಮ ಬರವಣಿಗೆ ಶೈಲಿ ತುಂಬಾನೇ ಚೆನ್ನಾಗಿದೆ ಅನಿತಕ್ಕ..!! ತಮಾಷೆಯಿದೆ, ತುಂಟತನವಿದೆ, ಮಾಹಿತಿಯಿದೆ, ಸವಿನೆನಪುಗಳಿವೆ.. ತುಂಬಾನೇ ಜೀವಂತಿಕೆ ಇರುವ ಬರಹ.. ತುಂಬಾ ಇಷ್ಟಾ ಆಯ್ತು..!
  ಹ್ಞಾ...! One more thing, "ಸ್ತ್ರೀ ಅಂದರೆ ಅಷ್ಟೇ ಸಾಕೆ...?" ಅನ್ನೋ ಕವಿ-ವಾಣಿ ಕೇಳಿದ್ದೆ,
  "ಮಾವು ಅಂದರೆ ಅಷ್ಟೇ ಸಾಕೆ..?" ಎಂಬ ತಲೆ-ಬರಹ ಕೊಟ್ಟು ತುಂಬಾ ಒಳ್ಳೇ ಕೆಲಸಾನೇ ಮಾಡಿದಿರಾ..!! ;-)

  ReplyDelete
 8. ತುಂಬಾ ಉತ್ಕೃಷ್ಟ ಲಲಿತ ಪ್ರಭಂಧ ಶೈಲಿ.
  ಮಾವಿನ ಬಗ್ಗೆ ತಮ್ಮ ಟಿಪ್ಪಣೆ ಅದ್ಭುತ ಮಾಹಿತಿ ಕಣಜ.

  ReplyDelete
 9. ನಾವು ಚಿಕ್ಕವರಿರುವಾಗ ಮಾವಿನ ಹಣ್ಣು ತಿಂದು ಗೊರಟು ಬಿಸಾಕುವ ಮೊದಲು ಯಾರನ್ನಾದರೂ ಕರೆದು ಅವರು 'ಓ' ಅಂದ್ರೆ ... ನನ್ನ ಗೊರಟಿಗೆ ಗಿಡ ಮರವಾಗಿ ಹಣ್ಣು ಕೊಡೊ ವರೆಗೆ ನೀರು ಹಾಕುತ್ತಿರು ಎಂದು ಓಡಿ ಹೋಗುತ್ತಿದ್ದೆವು

  ReplyDelete