ಮೊದಲ ಬಾರಿಗೆ 'ಸ್ಪರ್ಧೆ' ಎಂಬುದರಲ್ಲಿ ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆ.
ಕೊಂಚ ತಳಮಳ, ಅಳುಕು ಇದ್ದರೂ ಹೊಸ ವಿಷಯದ ಬಗ್ಗೆ ಕುತೂಹಲವೂ ಇತ್ತು.ಆಗಿನ್ನೂ ಅ ಆ ಇ ಈ ಗಳನ್ನೇ ಚಿತ್ರಗಳಂತೆ ಸ್ಲೇಟಿನಲ್ಲಿ ಬರೆದದ್ದರ ಮೇಲೆ ಪುನಃ ಗೀಚಿ ಅದನ್ನು ಇಂಚುಗಟ್ಟಲೆ ದಪ್ಪವಾಗಿಸುತ್ತಿದ್ದ ಕಾಲ. ಅಂತಹ ಕಾಲದಲ್ಲಿ ನಾನು ಚಿತ್ರ ಬಿಡಿಸುವ ಸ್ಪರ್ಧೆಯ ಕಣದಲ್ಲಿ ನೇರವಾಗಿ ಇಳಿಸಲ್ಪಟ್ಟಿದ್ದೆ.
ಎಲ್ಲರೂ ಬರುವಾಗ ಬಿಳಿ ಹಾಳೆ ,ಪೆನ್ಸಿಲ್ ಮತ್ತು ರಬ್ಬರ್ ಗಳನ್ನು ತರಬೇಕೆಂಬುದು ಮೊದಲೇ ತಿಳಿಸಲ್ಪಟ್ಟಿತ್ತು. ಇದರಿಂದಾಗಿ ನಾನು ಆ ದಿನದ ಮಟ್ಟಿಗೆ ಬಳಪ ಸ್ಲೇಟಿನಿಂದ ಒಮ್ಮೆಲೇ ಪೆನ್ಸಿಲ್ ಪೇಪರಿಗೆ ಬಡ್ತಿ ಪಡೆದಿದ್ದೆ. ನನ್ನ ಓರಗೆಯವರಲ್ಲಿಲ್ಲ ಪೆನ್ಸಿಲ್ ನನ್ನ ಬಳಿ ಇದ್ದುದು ನನಗೆ ಗೌರವ ತರುವ ವಿಷಯವಾಗಿತ್ತು.
ನನ್ನಮ್ಮ ಕೂಡ ನನ್ನ ಕೈಯಲ್ಲಿನ ಪೆನ್ಸಿಲ್ ಬಗ್ಗೆ ಅಗತ್ಯಕ್ಕಿಂತ ಜಾಸ್ತಿ ಕಾಳಜಿ ವಹಿಸಿದ್ದರು. ಹೌದೋ ಅಲ್ಲವೋ ಎಂಬಂತೆ ಸೀಸದ ತುದಿ ಕಾಣಿಸುವಂತೆ ಚೂಪು ಮಾಡಿದ ಪೆನ್ಸಿಲ್ ನನ್ನ ಕೈಗಿತ್ತಳು. ನನಗೋ ಅದರ ತುದಿ ಇನ್ನೂ ಉದ್ದ ಇರಬೇಕೆಂಬಾಸೆ. ಆದರೆ ಅಮ್ಮ ಅದನ್ನು ಬಲವಾಗಿ ವಿರೋಧಿಸಿ, 'ನೀನು ಬರೆಯುವಾಗ ದಿನಕ್ಕೆ ನಾಲ್ಕು ಬಳಪದ ಕಡ್ಡಿ ತುಂಡು ಮಾಡುವವಳು. ನಿನ್ನ ಕೈಗೆ ಉದ್ದ ಚೂಪು ಮಾಡಿದ ಪೆನ್ಸಿಲ್ ಕೊಟ್ರೆ ಅದನ್ನು ಪೇಪರ್ ಮೇಲೆ ಒತ್ತಿ ತುಂಡು ಮಾಡ್ತೀಯ ಅಷ್ಟೆ .. ಆಮೇಲೆ ಚಿತ್ರ ಹೇಗೆ ಬಿಡಿಸೋದು'ಅಂತೆಲ್ಲ ಹೆದರಿಸಿದಳು. ಚಿತ್ರ ಬಿಡಿಸಿ ಆದ ಮೇಲೂ ನನ್ನ ಕೈಯಲ್ಲಿ ಪೆನ್ಸಿಲ್ ಉಳಿಯುತ್ತದಲ್ಲ ,ಆಗ ನೋಡಿಕೊಂಡರಾಯ್ತು ಅದರ ಕತೆ ಅಂದುಕೊಂಡೆ.
ಎಲ್ಲಾ ಸಿದ್ಧತೆಗಳು ಮುಗಿದ ನಂತರ ನಾನು ಕೈಯಲ್ಲಿರುವ ಪೆನ್ಸಿಲ್ ಎಲ್ಲರಿಗೂ ಕಾಣಿಸುವಂತೆ ಹಿಡಿದು, ಒಂದು ಗಂಟೆ ಮುಂಚಿತವಾಗಿಯೇ ಮನೆಯಿಂದ ಹೊರಟೆ. ಅಲ್ಲಿ ನನ್ನಂತೆ ತಮ್ಮ ಪೆನ್ಸಿಲ್ ಝಳಪಿಸುತ್ತಾ, ಇನ್ನು ಕೆಲವು ಮಕ್ಕಳು ಕುಳಿತಿದ್ದರು. ಎಲ್ಲರೂ ನನ್ನ ಗೆಳೆಯ ಗೆಳತಿಯರೇ.. ಆದರೂ ಅಂದೇಕೋ ಕೊಂಚ ಬಿಗುವಿತ್ತು ಮುಖದಲ್ಲಿ. ನಾನಂತೂ ಎಲ್ಲರನ್ನು ಕೊಂಚ ಕನಿಕರದಿಂದಲೇ ನೋಡಿದೆನೆನ್ನಿ. ಯಾಕೆಂದರೆ ಪ್ರಥಮ ಬಹುಮಾನ ನನ್ನದೇ ಎಂಬ ಅಚಲ ನಂಬಿಕೆ ನನ್ನಲ್ಲಿತ್ತು.
ಈ ಅತಿ ವಿಶ್ವಾಸಕ್ಕೂ ಕಾರಣವಿರದಿರಲಿಲ್ಲ. ನಮ್ಮ ಮನೆಗೆ ಯಾರೇ ಬಂದರೂ ನಾನು ಕೂಡಲೇ ಸ್ಲೇಟ್ ಹಿಡಿದು ನನಗೆ ಬಿಡಿಸಲು ಬರುತ್ತಿದ್ದ, ಈಗ ನಾನು ಸ್ಪರ್ಧೆಗೂ ಬಿಡಿಸಲು ನಿಶ್ಚಯಿಸಿದ್ದ ಅತ್ಯಪೂರ್ವ ಚಿತ್ರವನ್ನು ಬಿಡಿಸಿ ತೋರಿಸುತ್ತಿದ್ದೆ. ಬಂದವರು ಅಮ್ಮ ಕೊಡುತ್ತಿದ್ದ ಬಿಸಿ ಬಿಸಿ ಕಾಫೀ, ರವೆಉಂಡೆ ಮೆಲ್ಲುತ್ತಾ ನನ್ನ ಚಿತ್ರದ ಕಡೆಗೊಮ್ಮೆ ಕಣ್ಣು ಹಾಯಿಸಿ 'ವ್ಹಾ.. ಎಷ್ಟು ಚೆನ್ನಾಗಿದೆ' ಎಂದು ತಲೆದೂಗುತ್ತಿದ್ದರು. ಹೀಗೆ ಎಲ್ಲರಿಂದಲೂ ಶಹಭಾಸ್ ಗಿರಿ ಪಡೆದುಕೊಂಡ ಚಿತ್ರ ಬಹುಮಾನ ಗೆಲ್ಲದೆ ಹೋದರೆ ಅವರ ನೋಟಕ್ಕೆ ಅವಮಾನವಲ್ಲವೇ..ಆದರೇನು ಸ್ಪರ್ಧೆ ಆದ ಕಾರಣ ಎರಡು ಮತ್ತು ಮೂರನೆ ಬಹುಮಾನಗಳು ಇರುತ್ತವೆ . ಅದನ್ನು ಪಡೆಯಲಿಕ್ಕಾದರೂ ಬೇರೆ ಮಕ್ಕಳು ಬೇಕು ತಾನೆ ಎಂದು ಸಮಾಧಾನಿಕೊಂಡೆ.
ಮತ್ತೊಮ್ಮೆ ಸ್ಪರ್ಧಾಳುಗಳನ್ನು ಎಣಿಸಿ ನೋಡಿದೆ. ಸರಿಯಾಗಿ ಎಂಟು .. ಅದನ್ನು ನೋಡಲು ಬಂದ ವೀಕ್ಷಕರ ಸಂಖ್ಯೆ ನೂರೆಂಟಕ್ಕಿಂತಲೂ ಮಿಕ್ಕಿದ್ದಿತು. ನನ್ನ ಅಪ್ಪನೂ ಸೇರಿದಂತೆ ಕೆಲವು ಹಿರಿಯರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಎಲ್ಲರನ್ನೂ ಸ್ವಲ್ಪ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಹೇಳಿ 'ಹಾಂ ಈಗ ಸುರು ಮಾಡಿ.. ಹತ್ತು ನಿಮಿಷ ಸಮಯವಿದೆ ನಿಮಗೆ'ಎಂದರು.
ನಾನು ಕೂಡಲೇ ಪೇಪರ್ ನ ಮೇಲೆ ಇಂಗ್ಲಿಷ್ ನ ಕ್ಯಾಪಿಟಲ್ ಎಮ್ ಅಕ್ಷರವನ್ನು ಹತ್ತಿರ ಹತ್ತಿರವಾಗಿ ಮೂರು ಸಲ ಬರೆದೆ. ಅದರಿಂದ ಸ್ವಲ್ಪ ಕೆಳಗೆ ಒಂದು ಬಿಂದುವನ್ನು ಹಾಕಿದೆ.ಈಗ ಬಿಂದುವಿನಿಂದ ಎಲ್ಲಾ ಎಮ್ ನ ಕೆಳಗಿನ ಭಾಗಗಳಿಗೆ ಗೆರೆಗಳನ್ನೆಳೆದು ಸೇರಿಸಿದೆ. ಈಗ ಅದೊಂದು ತಾವರೆ ಹೂವಿನ ಆಕಾರ ಪಡೆಯಿತು. ಇನ್ನು ಅದರ ಕೆಳಗೆ ಒಂದು ನೇರ ಗೆರೆ. ಅದರ ನಡುವಿನಲ್ಲೊಂದು ಅಡ್ಡ ಗೆರೆ. ಅಡ್ಡಗೆರೆಯ ಎರಡೂ ಬದಿಯಲ್ಲಿ ವೃತ್ತಾಕಾರದ ಎಲೆ ಎಂದುಕೊಳ್ಳುವಂತಹ ಎರಡು ರಚನೆಗಳು.. ಇವಿಷ್ಟನ್ನು ಮಾಡಲು ನಾನು ತೆಗೆದುಕೊಂಡ ಸಮಯ ಕೇವಲ ಎರಡು ನಿಮಿಷ ಅಷ್ಟೆ.. ಇನ್ನೇನು ನನ್ನದಾಯಿತು ಎಂದು ಏಳಬೇಕೆನ್ನುವುದರಲ್ಲಿ ಅಲ್ಲೇ ಇದ್ದ ಅಪ್ಪ 'ಇನ್ನು ಎಂಟು ನಿಮಿಷ ಇದೆ, ಕೂತ್ಕೋ' ಎಂದರು.
ನನ್ನ ಚಿತ್ರ ಹೇಗೂ ಬಿಡಿಸಿ ಆಗಿತ್ತಲ್ಲ.. ಮೆಲ್ಲನೆ ಹತ್ತಿರದವರು ಏನು ಬಿಡಿಸುತಿದ್ದಾರೆ ಎಂಬ ಕುತೂಹಲದಲ್ಲಿ ಓರೆನೋಟ ಬೀರಿದೆ. ಅದನ್ನು ಗುರುತಿಸಿದ ಅವರು ನನಗೆ ಕಾಣದಂತೆ ಚಿತ್ರವನ್ನು ಮುಚ್ಚಿಟ್ಟುಕೊಂಡು ಬಿಡಿಸತೊಡಗಿದರು. ಸ್ವಲ್ಪ ಹೊತ್ತು ಕಳೆದ ಮೇಲೆ ನನ್ನ ಪಕ್ಕವೇ ಕುಳಿತಿದ್ದ ನನ್ನ ಗೆಳೆಯನೊಬ್ಬ ನೀನು ಏನು ಬಿಡ್ಸಿದ್ದೀಯ ತೋರ್ಸು,ಆಮೇಲೆ ನನ್ನ ಚಿತ್ರ ತೋರಿಸ್ತೀನಿ ಅಂದ. ನಾನು ಧೈರ್ಯದಿಂದ ಅವನಿಗೆ ಮಾತ್ರ ಕಾಣುವಂತೆ ಚಿತ್ರ ತೋರಿಸಿದೆ. ಅವನು ನಕ್ಕಂತೆ ಮಾಡಿ ತಾನು ಬಿಡಿಸಿದ ಚಿತ್ರ ತೋರಿಸಿದ. ಇಡೀ ಹಾಳೆಯ ಮೇಲೆ ಕೊಂಚವೂ ಜಾಗ ಉಳಿಯದಂತೆ ಮರ ಗಿಡ ತೊರೆ ಬೆಟ್ಟ ಗುಡ್ಡಗಳು ತುಂಬಿದ್ದವಲ್ಲಿ. ಮತ್ತೊಮ್ಮೆ ನನ್ನ ಚಿತ್ರದ ಕಡೆಗೆ ನೋಟ ಹಾಯಿಸಿದೆ. ಕೇವಲ ಎರಡಿಂಚು ಉದ್ದಗಲದ ಜಾಗದಲ್ಲಿ ಚಿತ್ರ ತಣ್ಣಗೆ ಕುಳಿತಿತ್ತು. ಗೆಳೆಯ ಪಿಸು ನುಡಿಯಲ್ಲಿ 'ತಾವರೆ ಹೂವಿನ ಕೆಳಗೆ ನಾಲ್ಕು ಗೆರೆ ಎಳೆದು ನೀರಿನಂತೆ ಮಾಡು' ಎಂದ. ಯಾಕೋ ಅವನ ಹತ್ತಿರ ಯಾವ ರೀತಿಯ ಗೆರೆ ಎಂದು ಕೇಳಲು ನನ್ನ ಸ್ವಾಭಿಮಾನ ಬಿಡಲಿಲ್ಲ. ಜೊತೆಗೆ ಅವನೀಗ ನನ್ನ ಪ್ರಥಮ ಸ್ಥಾನದ ಬಹು ದೊಡ್ಡ ಪ್ರತಿಸ್ಪರ್ಧಿಯಾಗಿಯೂ ಕಾಣುತ್ತಿದ್ದ.
ಅಷ್ಟರಲ್ಲಿ 'ಸಮಯ ಆಯ್ತು, ಎಲ್ಲರೂ ಚಿತ್ರಗಳನ್ನು ಕೊಡಿ' ಅಂದರು.ನಾನು ಅವಸರದಿಂದ ನಾಲ್ಕಾರು ಗೀರುಗಳನ್ನು ಉದ್ದಕ್ಕೂ, ಕೆಲವನ್ನು ಅಡ್ಡಕ್ಕೂ ಎಳೆದೆ. ಯಾವುದಾದರೊಂದನ್ನು ತೀರ್ಪುಗಾರರು ನೀರು ಎಂದು ಪರಿಗಣಿಸಿಯಾರೆಂಬ ನಂಬಿಕೆಯಲ್ಲಿ..
ಸ್ವಲ್ಪ ಹೊತ್ತು ಎಲ್ಲ ಕಡೆ ನೀರವ ಮೌನ.. ನನಗೋ ಒಳಗಿನಿಂದಲೇ ಏನೋ ಉದ್ವೇಗ.. ಈಗ ತೀರ್ಪುಗಾರರಲ್ಲೊಬ್ಬರು ಎದ್ದು ನಿಂತು ಪ್ರಥಮ ಸ್ಥಾನಿಯಾದ ನನ್ನ ಗೆಳೆಯನ ಹೆಸರು ಹೇಳಿದರು. ಇದು ನನಗೆ ಮೊದಲೆ ಗೊತ್ತಾಗಿತ್ತಾದ್ದರಿಂದ, ಎರಡು ಮತ್ತು ಮೂರನೆಯ ಹೆಸರುಗಳನ್ನು ಕಿವಿಗೊಟ್ಟು ಕೇಳಿಸಿಕೊಳ್ಳಲು ಕಾದೆ. ಅದೂ ಕೂಡ ಬೇರೆಯವರ ಪಾಲಾಯಿತು. ಕಣ್ಣಲ್ಲಿ ತುಂಬುತ್ತಿದ್ದ ನೀರ ಹನಿಗಳನ್ನು ಅಡಗಿಸಲು ವ್ಯರ್ಥ ಪ್ರಯತ್ನ ಮಾಡುತ್ತ ನಿಂತಿದ್ದೆ. ಅಷ್ಟರಲ್ಲಿ ಭಾಗವಹಿಸಿದ ಎಲ್ಲರಿಗೂ ಪುಟ್ಟ ಪುಟ್ಟ ಬಹುಮಾನಗಳನ್ನು ನೀಡಿ ಹರಸಿದರು.
ಅದೆ ಮೊದಲು ಮತ್ತು ಕೊನೆ ನನ್ನ ಚಿತ್ರ ಕಲೆಯಲ್ಲಿ ನಾನು ಭಾಗವಹಿಸಿದ್ದ ಸ್ಪರ್ಧೆಯದ್ದು...!!
ನನ್ನ ಚಿತ್ರಗಳೆಲ್ಲ ಸ್ಪರ್ಧೆಯ ಮಟ್ಟದಿಂದ ಬಹು ಎತ್ತರದಲ್ಲಿದ್ದು ತೀರ್ಪುಗಾರರಿಗೆ ಅವುಗಳನ್ನು ಮೌಲ್ಯಮಾಪನ ಮಾಡಲು ಕಷ್ಟವಾಗುವುದರಿಂದ ಮತ್ತು ನಾನು ಬಿಡಿಸಿದ 'ಚಿತ್ರ'ಗಳೆಲ್ಲವೂ ಮೇಲ್ಗಡೆ ಹೆಸರು ಬರೆಯದೆ ಇದ್ದರೆ ಯಾವ ಚಿತ್ರವಿದು ಎಂದು ತಿಳಿಯದೆ, ಅದನ್ನು ನೋಡಿ ಕೊಂಚ ಹೊತ್ತಿನ ಕಾಲ ಅವರಿಗೆ ತಮಗೆ ಗೊತ್ತಿರುವ ಚಿತ್ರಕಲೆಯ ಸಾಮಾನ್ಯ ವಿಷಯಗಳು ಮರೆತು ಹೋಗುವುದರಿಂದ, ನಾನಂತೂ ಇನ್ನು ಮುಂದೆ ಇಂತಹ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಂದೇ ನಿಶ್ಚಯಿಸಿಬಿಟ್ಟೆ.
ಇದರಿಂದಾಗಿ ದೇಶ ನನ್ನಂತಾ ಮಹೋನ್ನತ ಕಲಾಪ್ರತಿಭೆಯನ್ನು ಕಳೆದುಕೊಂಡು ಬಡವಾದುದನ್ನು ನೆನೆದರೆ ಇಂದಿಗೂ ಸ್ವಲ್ಪ ಬೇಸರವಾಗುವುದೂ ಸತ್ಯ.. !!