.
ಆಗಸಕ್ಕೆ ಚಪ್ಪರ ಹಾಕಿದಂತೆ ತುಂಬಿದ ಕಾರ್ಮೋಡ, ಜಡಿಗುಟ್ಟಿ ಬೀಳುವ ಮಳೆ, ಚಳಿಯಿಂದ ಗದಗುಟ್ಟುವ ಮೈಯಲ್ಲೆ, ಕಿಟಕಿಯ ಸಂದಿಯಿಂದ , ಬಾಗಿಲ ಮರೆಯಿಂದ,ಮತ್ತೆ ಮತ್ತೆ ಮಳೆಯ ರಭಸವನ್ನು ನೋಡುವ ಆಸೆ..! ನೀರು ತನ್ನ ಧಾರೆಯಲ್ಲೇ ಭೂಮಿ ಆಗಸವನ್ನು ಬಂಧಿಸುವ ಹಠದಲ್ಲಿದ್ದರೆ, ನಾವು ಅದರ ಆರ್ಭಟವನ್ನು ಮೀರಿಸುವ ಧ್ವನಿಯಲ್ಲಿ 'ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ' ಎಂದು ರಾಗವಾಗಿ ಹಾಡುತ್ತಿದ್ದೆವು..!ಏಕೆಂದರೆ ನಮಗೆಲ್ಲ ಅತಿ ಪ್ರಿಯವಾದ ಕಾಲವೆಂದರೆ ಈ ಮಳೆಗಾಲವೇ ತಾನೆ..?
ಇದು ಕಾವೇರಿ ಕನ್ನಿಕೆಯರು ಮಮತೆಯಿಂದ ತೋಳಲ್ಲಿ ಬಳಸಿದಂತೆ ಕಾಣುವ ಪುಟ್ಟ ಊರು. ಊರಿನ ಸುತ್ತಲೂ ಗದ್ದೆ ಬಯಲುಗಳು. ಇವುಗಳ ಅಂಚಲ್ಲಿ ಕಣ್ಮನ ತಣಿಸುವ ಹಸಿರು ರಾಶಿಯನ್ನು ಹೊದ್ದ ನೀಲಿ ಬೆಟ್ಟಗಳು. ಸದಾ ಮೋಡಗಳೊಡನೆ ಸರಸವಾಡುವ ಈ ಬೆಟ್ಟಗಳ ತಪ್ಪಲಿನ ಕಾಡಿನಲ್ಲಿ ಏಲಕ್ಕಿ ತೋಟಗಳ ನಡುವೆ ಅಲ್ಲಲ್ಲಿ ರೈತಾಪಿ ವರ್ಗದವರ ಮನೆಗಳಿವೆ. ಒಂದೇ ಒಂದು ಅಂಗಡಿಯೂ ಇಲ್ಲದೇ, ಸರಿಯಾದ ರಸ್ತೆಯೂ ಇಲ್ಲದೇ ಗ್ರಾಮವೆಂದು ಕರೆಸಿಕೊಳ್ಳುವ ಖ್ಯಾತಿ ಈ ಪ್ರದೇಶಗಳದ್ದು. ಈ ಗ್ರಾಮವಾಸಿಗಳು ತಮ್ಮ ದೈನಂದಿನ ಅಗತ್ಯದ ವಸ್ತುಗಳಿಗಾದರೂ ಸರಿ ಅಥವಾ ತಮ್ಮ ಮಕ್ಕಳ ಶಾಲೆಗಾದರೂ ಸರಿ, ಕಾಡಿನ ಮೂಲಕ ಹಳ್ಳ ಕೊಳ್ಳಗಳನ್ನು ಹಾಯ್ದು, ಕಾವೇರಿ ಅಥವಾ ಕನಿಕೆಯನ್ನು ದಾಟಿ ನಮ್ಮೂರಿಗೆ ಬಂದೇ ತೀರಬೇಕು. ಹೀಗೆ ಊರೆನ್ನಿಸಿಕೊಂಡು ಬೀಗುತ್ತಿದ್ದ ನಮ್ಮೂರಿನಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಈಗಿರುವಷ್ಟು ಸೌಕರ್ಯಗಳೇನೂ ಇರಲಿಲ್ಲ. ಆದರೆ ಮಳೆಗಾಲದಲ್ಲಿ ಮಾತ್ರ ಈಗಿನ ದುಪ್ಪಟ್ಟು ಮಳೆಯಾಗುತ್ತಿತ್ತು.
ಹಗಲೊ ಅಲ್ಲ ರಾತ್ರಿಯೊ ಎಂದು ಸಂದೇಹ ಮೂಡಿಸುವಂತೆ ಕಪ್ಪಡರಿಕೊಂಡು ಎಡೆ ಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಸುತ್ತ ಮುತ್ತಲಿನ ಬೆಟ್ಟ ಗುಡ್ಡಗಳಲ್ಲಿನ ಝರಿ ತೊರೆಗಳೆಲ್ಲಾ ಉಕ್ಕಿ ಹರಿದು ಕಾವೇರಿ ಕನ್ನಿಕೆಯರನ್ನು ಮೈದುಂಬಿಸಿ ಬಿಡುತ್ತಿದ್ದವು. ನೋಡು ನೋಡುತ್ತಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಹಾಲುಕ್ಕಿದಂತೆ ಪಕ್ಕದ ಗದ್ದೆಗಳಿಗೆ ಮಗುಚುತ್ತಿತ್ತು. ಗದ್ದೆಗಳನ್ನು ನುಂಗಿದ ನೀರು ಮೆಲ್ಲನೆ ರಸ್ತೆಗಳಿಗೂ ನುಗ್ಗುತ್ತಿತ್ತು ಅನ್ನೋಣ. ಹಾಗಾಗಿ ಮಳೆಗಾಲ ಮುಗಿಯುವ ಮೊದಲು ಹಲವು ಬಾರಿ ಕಾವೇರಿ ತನ್ನ ಅಪಾರ ಜಲರಾಶಿಯಿಂದ ಗದ್ದೆಯೆಲ್ಲಿತ್ತು ರಸ್ತೆಯೆಲ್ಲಿತ್ತು ಎಂದರಿಯದಂತೆ ಮಾಡಿ ಸಮುದ್ರಾವತಾರ ತಳೆಯುತ್ತಿದ್ದಳು. ಇತ್ತ ನಮ್ಮೂರು ಎಲ್ಲ ಮಾರ್ಗಗಳ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿಬಿಡುತ್ತಿತ್ತು.
ನಮ್ಮ ಮನೆಯಿದ್ದ ಭಾಗದಿಂದ ಪೇಟೆಗೆ ಹೋಗಬೇಕಾದರೆ, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯನ್ನು ಹಾದು ಹೋಗಬೇಕಾಗಿತ್ತು. ಕಾವೇರಿಯಲ್ಲಿ ಪ್ರವಾಹ ಹೆಚ್ಚಿದಾಗಲೆಲ್ಲ ಈ ಸೇತುವೆಯೂ ಮುಳುಗಿ ಬಿಡುತ್ತಿತ್ತು. ಹೀಗಾದಾಗ ಒಂದು ಯಕಶ್ಚಿತ್ ಬೆಂಕಿಪೊಟ್ಟಣ ಬೇಕಾದರೂ ಸಹ 'ಟೌನ್' ಎಂದು ನಾವು ಕರೆಯುತ್ತಿದ್ದ, ಏಳೆಂಟು ಅಂಗಡಿ ಮುಂಗಟ್ಟುಗಳ ದರ್ಶನ ನೀರಿಳಿದ ನಂತರವೇ.. ಇಂತಹ ಗಂಭೀರ ಸಂದರ್ಭಗಳಲ್ಲಿ ಹಿರಿಯರು ಒಂದೆರಡು ವಾರಗಳಿಗೆ ಒದಗುವಷ್ಟು ದಿನಸಿ ಸಂಗ್ರಹಿಸಿಟ್ಟುಕೊಳ್ಳುವ ಧಾವಂತದಲ್ಲಿದ್ದರೆ, ಇದ್ಯಾವುದರ ಪರಿವೆಯಿಲ್ಲದ ಚಿಣ್ಣರಾದ ನಮಗೆ ಸಂತಸದ ಪರ್ವಕಾಲ.
ಹೊರಗಡಿ ಇಡಲಾಗದಂತೆ ಗುಡುಗು ಮಿಂಚುಗಳ ಮೇಳದೊಂದಿಗೆ ಜಡಿಗುಟ್ಟಿ ಸುರಿವ ಮಳೆ. ಬಾಗಿಲು ಕಿಟಕಿಗಳನ್ನು ತೆರೆದರಂತೂ ನೀರ ಹನಿ ಎರಚಿ, ನೆಲವನ್ನೆಲ್ಲಾ ತೋಯಿಸಿ ತೊಪ್ಪೆ ಮಾಡಿ ಬಿಡುತ್ತಿತ್ತು. ನಾವೆಲ್ಲಾ ಒಳಗಡೆ ಬೆಚ್ಚಗೆ ಒಲೆಬದಿಯಲ್ಲಿ ಕುಳಿತುಕೊಂಡು ಹಲಸಿನ ಬೇಳೆಯನ್ನೋ ಜೋಳವನ್ನೋ ಸುಟ್ಟು ತಿನ್ನುತ್ತಿದ್ದೆವು. ಸ್ವಲ್ಪ ಮಳೆ ಕಡಿಮೆಯಾತೆಂದರೆ ಕೊಡೆ ಹಿಡಿದುಕೊಂಡು ನೀರಿನ ಮಟ್ಟ ಪರೀಕ್ಷಿಸಲು ಗೆಳತಿಯರೊಂದಿಗೆ ಹೊಳೆ ಬದಿಗೆ ಓಡುತ್ತಿದ್ದೆವು. ಆಗಿನ್ನೂ ಡಾಮರು ಕಾಣದ ಜಲ್ಲಿ ಮಾರ್ಗವಾದ್ದರಿಂದ, ರಸ್ತೆಂಯಿದಲೇ ಕೆಲವು ಕಲ್ಲುಗಳನ್ನು ಹೆಕ್ಕಿ ತಂದು ಸಾಲಾಗಿ ನೀರಿಗಡ್ಡಲಾಗಿಟ್ಟು ತೆರಳುತ್ತಿದ್ದೆವು. ಮಳೆ ಅವಕಾಶ ಕೊಟ್ಟಾಗ ಪುನಃ ಬಂದು ನೀರು ನಮ್ಮ ಗುರುತಿನ ಸಾಲಿನಿಂದ ಹಿಂದೆ ಇದೆಯೊ ಅಥವ ಮುಂದೆ ಬಂದಿದೆಯೊ ಎಂದು ಪರೀಕ್ಷಿಸುವುದು ನಮಗೆಲ್ಲ ಒಂದು ಆಟವಾಗಿತ್ತು. ಮಳೆ ಜೋರಾದರೆ ನಮ್ಮ ಗುರುತಿನ ಕಲ್ಲು ಮುಳುಗಿ ಕಾಣದಾಗುತ್ತಿತ್ತು. ಹೀಗಾಗುವುದು ಸೇತುವೆಯ ಮೇಲೆ ನೀರು ಏರಿ, ಸೇತುವೆ ಮುಳುಗುತ್ತದೆ ಎಂಬುದಕ್ಕೆ ಮುನ್ಸೂಚನೆ.
ಕಾವೇರಿಯಂತೂ ಕ್ಷಿಪ್ರ ಪ್ರವಾಹದ ಖ್ಯಾತಿಯವಳು. ಊರಲ್ಲಿ ಮಳೆಯ ರಭಸ ಕಮ್ಮಿ ಇದ್ದಾಗಲೂ, ಎಲ್ಲೊ ದೂರದ ಬೆಟ್ಟಗಳ ಮೇಲೆ ಸುರಿದ ಮಳೆನೀರನ್ನೆಲ್ಲಾ ರಾತೋ ರಾತ್ರಿ ತುಂಬಿಕೊಂಡು ಬಂದು ಬೆಳಗಾಗುವಷ್ಟರಲ್ಲಿ ಸೇತುವೆಯ ತಳವನ್ನು ಸ್ಪರ್ಶಿಸಿ ನಾವೆಲ್ಲ ಬೆಕ್ಕಸ ಬೆರಗಾಗುವಂತೆ ಮಾಡಿ ಬಿಡುತ್ತಿದ್ದಳು. ಇಂತಹಾ ಸಮಯದಲ್ಲೇ ನಮಗೆಲ್ಲ ಶಾಲೆಗೆ ಹೋಗಲು ಎಲ್ಲಿಲ್ಲದ ಉತ್ಸಾಹ. ಪ್ರತಿನಿತ್ಯ ರಂಪ ಮಾಡುವ ಮಕ್ಕಳು ಅಂದು ಎಲ್ಲರಿಂದ ಮೊದಲೇ ಬೆನ್ನಿಗೆ ಚೀಲ ಏರಿಸಿ ಸಿದ್ಧರಾಗುತ್ತಿದ್ದರು.
ಹೇಗೂ ಅರ್ಧ ದಾರಿ ಸವೆಯುವ ಮೊದಲೇ ರಜೆ ಘೋಷಿಸುತ್ತಾರೆ ಎಂದು ಮೊದಲೇ ತಿಳಿದಿರುತ್ತಿತ್ತು. ಓರಗೆಯ ಮಕ್ಕಳೊಂದಿಗೆ ಕೊಡೆಗೆ ಕೊಡೆ ಮುಟ್ಟುವಷ್ಟು ಹತ್ತಿರದಲ್ಲಿ ಗುಂಪುಗಟ್ಟಿಕೊಂಡು ಬಾತು ಕೋಳಿಗಳಂತೆ ಕಲರವ ಎಬ್ಬಿಸುತ್ತಾ ರಸ್ತೆಯ ಮೇಲೆ ಮೊಣಕಾಲಿನ ಮಟ್ಟದಲ್ಲಿ ಹರಿಯುವ ನೀರಿನಲ್ಲಿ ಟಪ್ ಟಪ್ ಹೆಜ್ಜೆ ಹಾಕಿ ಸಾಗುವ ಗಮ್ಮತ್ತನ್ನು ಅನುಭವಿಸಿಯೇ ಅರಿಯಬೇಕು. ಆಗೆಲ್ಲಾ ಮಳೆಗಾಲಕ್ಕೆ ಬೇರೆ, ಬೇಸಿಗೆಗಾಲಕ್ಕೆ ಬೇರೆ ಅಂತೆಲ್ಲ ಬಗೆಬಗೆಯ ಚಪ್ಪಲಿಗಳ ಸಂಗ್ರಹ ನಮ್ಮಲ್ಲಿರಲಿಲ್ಲ. ಎಲ್ಲಾ ಕಾಲಕ್ಕೂ ಹವಾ ಚಪ್ಪಲಿಗಳೆ ಸಂಗಾತಿಗಳು. ಒಬ್ಬರ ಕೊಡೆಗೆ ಒಬ್ಬರು ಗುನ್ನ ಹಾಕಿಕೊಂಡು ಜೋರಾಗಿ ನಗುತ್ತಾ ಸಾಗುವಾಗ ಈ ಚಪ್ಪಲಿಗಳು ಒಮ್ಮೊಮ್ಮೆ ಪಕ್ಕನೆ ಕಾಲಿನಿಂದ ಜಾರಿ ತೇಲುತ್ತಿದ್ದವು. ಒಬ್ಬರ ಚಪ್ಪಲಿ ಹಾಗಾದರೆ ಸಾಕು! ಮತ್ತುಳಿದವರೆಲ್ಲ ಚಪ್ಪಲಿ ಸಡಿಲಿಸಿಕೊಂಡು ಅವು ದೋಣಿಗಳಂತೆ ತೇಲುವುದನ್ನು ನೋಡಿ ಕುಷಿ ಪಡುತ್ತಿದ್ದೆವು. ಅಲ್ಲದೆ ಹಳೆಯ ನ್ಯೂಸ್ ಪೇಪರ್ ಗಳನ್ನು ಹುಡುಕಿ ತಂದು ಹಲವು ತರದ ದೋಣಿ , ಹಡಗುಗಳನ್ನು ಮಾಡಿ ತೇಲಿ ಬಿಡುವುದೂ ಇತ್ತು. ಕೆಲವೊಮ್ಮೆ ಈ ಹವ್ಯಾಸಕ್ಕಾಗಿ ಶಾಲೆಯ ಪುಸ್ತಕಗಳಿಂದಲೂ ಪೇಜ್ ಗಳನ್ನು ಹರಿದು ಮನೆಯವರಿಂದ ಪೆಟ್ಟು ತಿಂದಿದ್ದೂ ಇದೆ.
ಈ ಎಲ್ಲಾ ಸಂಭ್ರಮಗಳು ಮೊದಲನೆ ದಿನ ಮಾತ್ರ ಇರುತ್ತಿದ್ದುದು. ಮತ್ತಿನ ದಿನಗಳಲ್ಲಿ ರೌದ್ರ ರೂಪ ತಾಳುತ್ತಿದ್ದ ನದಿ ನಮ್ಮನ್ನು ಹತ್ತಿರಕ್ಕೆ ಹೋಗದಂತೆ ಮಾಡುತ್ತಿತ್ತು.
ವಿಪರೀತ ಮಳೆ, ಶೀತಲ ವಾತಾವರಣ ಮತ್ತು ಸುತ್ತಲೂ ಅಖಂಡ ಜಲರಾಶಿ! ಒಮ್ಮೆ ಊಹಿಸಿಕೊಳ್ಳಿ! ದೊಡ್ಡವರು ಚಿಕ್ಕವರೆನ್ನುವ ಭೇದವಿಲ್ಲದೆ ಹಲವರು ಶೀತ ಜ್ವರದ ಭಾದೆಗೆ ಈಡಾಗುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ವೈದ್ಯರಾಗಿದ್ದ ನನ್ನಪ್ಪನಿಗೆ ಹೊಳೆಯ ಆ ಕಡೆ ಇದ್ದ ಪೇಶಂಟ್ ಗಳ ಮೇಲೆ ಅಪಾರ ಕರುಣೆ ಉಕ್ಕೇರುತ್ತಿತ್ತು. . ಅಪಾಯವೆಂದು ಗೊತ್ತಿದ್ದರೂ ಲೆಕ್ಕಿಸದೆ ನದಿಯನ್ನು ದಾಟಲು ತೆಪ್ಪವನ್ನು ನಿರ್ಮಿಸಲು ತೊಡಗುತ್ತಿದ್ದರು. ಅವರಿವರ ತೋಟಗಳಿಂದ ಗಾಳಿಗೆ ಉರುಳಿದ ಬಾಳೆ ಗಿಡಗಳನ್ನು ಸಂಗ್ರಹಿಸಿ ಒಂದೇ ಅಳತೆಗೆ ಕತ್ತರಿಸಿಟ್ಟುಕೊಳ್ಳುತ್ತಿದ್ದರು. ನಂತರ ಒಂದರ ಬದಿಯಲ್ಲೊಂದರಂತೆ ಜೊತೆಯಾಗಿಟ್ಟು ಅವುಗಳಿಗೆ ಲಂಬ ಕೋನದಲ್ಲಿ ಬಿದಿರಿನ ಕಡ್ಡಿಗಳನ್ನು ಚುಚ್ಚಿ ,ಗಟ್ಟಿಯಾದ ಹಗ್ಗದಿಂದ ಕಟ್ಟುತ್ತಿದ್ದರು.. ಅದರ ಒಂದು ಬದಿಗೆ ಉದ್ದನೆ ಹಗ್ಗ ಕಟ್ಟಿ , ಇನ್ನೊಂದು ತುದಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ನೀರಿಗೆ ತಳ್ಳಿ ಸರಿಯಾಗಿ ತೇಲುವುದೇ ಎಂದು ಪರೀಕ್ಷಿಸುವುದು ಅದರ ಅಂತಿಮ ಘಟ್ಟ. ಇವೆಲ್ಲವೂ ವಿಜ್ಞಾನಿಗಳು ಉಪಗ್ರಹ ಉಡ್ಡಯನಕ್ಕೆ ಪೂರ್ವಭಾವಿಯಾಗಿ ನಡೆಸುವ ಪರೀಕ್ಷೆಗಳನ್ನು ಮೀರಿಸುವಂತಿರುತ್ತಿದ್ದವು. ಅಪ್ಪನಿಗೆ ಎಲ್ಲವೂ ತೃಪ್ತಿಕರವೆಂದು ಕಂಡು ಬಂದರೆ ಕೈಯಲ್ಲಿ ಒಂದು ಚಪ್ಪಟೆ ಬಡಿಗೆ ಹಿಡಿದು ಹುಟ್ಟು ಹಾಕುತ್ತಾ ಪೇಟೆಯ ಕಡೆಗೆ ಸಾಗುತ್ತಿದರು. ಆ ಅಪರೂಪದ ದೃಶ್ಯವನ್ನು ನೋಡಲು ನದಿಯ ಎರಡೂ ಕಡೆ ಛತ್ರಿದಾರಿಗಳಾದ ಜನಸ್ತೋಮವಿರುತ್ತಿತ್ತು.
ಒಮ್ಮೆ ಹೀಗೆ ಅಪ್ಪ ತೆಪ್ಪದಲ್ಲಿ ಹೋಗುತ್ತಿರುವಾಗ ಮಳೆ ಬಂತು ಎಂದು ಕೈಯಲ್ಲಿದ್ದ ಕೊಡೆ ಬಿಚ್ಚಿದ್ದೇ ತಪ್ಪಾಯಿತು. ಬೀಸುತ್ತಿದ್ದ ಗಾಳಿಗೆ ಅಪ್ಪನ ಕೊಡೆ ಹಾಯಿಯಂತಾಗಿ ತೆಪ್ಪದ ದಿಕ್ಕು ತಪ್ಪಿಸಿತು. ಇದ್ದಕ್ಕಿದ್ದಂತೆ ತೆಪ್ಪ ಕಾವೇರಿ ಹೊಳೆಯ ಸೆಳವಿಗೆ ಸಿಕ್ಕಿ ಬಂಗಾಳಕೊಲ್ಲಿಯ ಕಡೆಗೆ ಸಾಗ ತೊಡಗಿತು. ಅಪ್ಪ ತಪ್ಪಿನ ಅರಿವಾಗಿ ಕೂಡಲೇ ಕೊಡೆ ಮಡಚಿ ಕೆಳಗಿಟ್ಟು ಹುಟ್ಟನ್ನೆತ್ತಿಕೊಂಡರು. ಭರದಿಂದ ಹುಟ್ಟು ಹಾಕುತ್ತಾ ದಡ ಸೇರಲೆತ್ನಿಸಿದರಾದರೂ, ಗಾಳಿಯ ರಭಸ ಹೆಚ್ಚಿದ್ದ ಕಾರಣ ತೆಪ್ಪ ನಿಯಂತ್ರಣಕ್ಕೆ ಬಾರದೇ ಪ್ರವಾಹದ ದಿಕ್ಕಿನಲ್ಲಿ ವೇಗವಾಗಿ ಕೆಳಕ್ಕೆ ಸಾಗತೊಡಗಿತು.
ತೆಪ್ಪದ ಮೇಲೆ ತೇಲಿಕೊಂಡು ನದಿ ದಾಟುವ ಅಪ್ಪನ ಸಾಹಸವನ್ನು ನೊಡಿ ಆನಂದಿಸಲು ನಿಂತಿದ್ದ ಜನರು ಈಗ ' ಅಯ್ಯೋ ಡಾಕ್ಟ್ರು ಕೊಚ್ಕೊಂಡು ಹೋಗ್ತಿದ್ದಾರೆ' ಎಂದು ಬೊಬ್ಬೆ ಹಾಕತೊಡಗಿದರು. ಇಲ್ಲಿಯವರೆಗೆ ಎಲ್ಲರೊಂದಿಗೆ ಅಪ್ಪನ ಕಸರತ್ತನ್ನು ಸವಿಯುತ್ತಿದ್ದ ಅಮ್ಮ ಕಣ್ಣು ಮುಚ್ಚಿಕೊಂಡು ರಾಮನಾಮ ಹೇಳಿಕೊಂಡು ಉಮ್ಮಳಿಸಿ ಬರುತ್ತಿದ್ದ ದುಖಃವನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ನಾನಂತೂ ಅಣ್ಣನ ಅಂಗಿ ಹಿಡಿದುಕೊಂಡು ಜೋರಾಗಿ ಅಳುತ್ತಿದ್ದೆ. ಸ್ವಲ್ಪ ದೂರದವರೆಗೆ ಕಾಣುತ್ತಿದ್ದ ತೆಪ್ಪ ನಂತರ ಏನಾಯಿತೆಂದೇ ತಿಳಿಯದಾಯಿತು. ಮನೆಯಲ್ಲಿದ್ದ ಚಿಕ್ಕಪ್ಪ ಗಡಿಬಿಡಿಯಲ್ಲಿ ಒಂದು ಉದ್ದದ ಹಗ್ಗ ಹಿಡಿದುಕೊಂಡು ನೀರಿನಲ್ಲಿ ಸ್ವಲ್ಪ ದೂರ ನಡೆಯುತ್ತಾ ಮುಳುಗುವಂತಾದಾಗ ಈಜುತ್ತಾ ನದಿಯ ಇನ್ನೊಂದು ದಡದೆಡೆಗೆ ಹೋಗತೊಡಗಿದರು.
ಎಲ್ಲರೂ ಕುತ್ತಿಗೆ ಎತ್ತಿ, ಅತ್ತ ನೋಡುತ್ತಿದ್ದರೂ ಏನಾಗುತ್ತಿದೆ ಎಂಬುದು ಕೊಂಚವೂ ಅರಿವಿಗೆ ಬಾರದೆ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಗುಸು ಗುಸು ಮಾತು ಪ್ರಾರಂಭಿಸಿದರು.ಈ ಸಂದರ್ಭದಲ್ಲಿ ನಮ್ಮೂರಿನ ಆತ್ಮ ಗೌರವಕ್ಕೆ ಕುಂದು ಅನ್ನಿಸಬಹುದಾದ ಒಂದು ಸತ್ಯವನ್ನು ಹೇಳುವ ಅನಿವಾರ್ಯತೆ ನನಗಿದೆ. ಒಂದರ ಬದಲಿಗೆ ಎರಡು ನದಿಗಳಿರುವ ಊರಾದರೂ ಈಜು ಬಲ್ಲವರ ಸಂಖ್ಯೆ ಬೆರೆಳೆಣಿಕೆಗೂ ನಿಲುಕದಷ್ಟು ಕಡಿಮೆಯೇ. ಅದರಲ್ಲೂ ಪ್ರವಾಹಕ್ಕೆ ಎದೆಗೊಟ್ಟು ಈಜುವವರಂತೂ ಇಲ್ಲವೆ ಇಲ್ಲ ಅನ್ನ ಬಹುದು. ಮಳೆಗಾಲ ಹೊರತು ಪಡಿಸಿದರೆ ನದಿಯಲ್ಲಿ ಮೊಣಕಾಲು ತೋಯುವಷ್ಟು ಕೂಡ ನೀರಿನ ಮಟ್ಟ ಇರದೇ ಇರುತ್ತಿದ್ದದ್ದೆ ಇದಕ್ಕೆ ಕಾರಣವಿರಬಹುದು. ಹೀಗಾಗಿ ನಿಸ್ಸಹಾಯಕರಾಗಿ ನಿಂತವರ ಕಣ್ಣುಗಳಲ್ಲಿ ಆತಂಕ ಮನೆ ಮಾಡಿತ್ತು.
ಸ್ವಲ್ಪ ಹೊತ್ತಿನಲ್ಲಿ ಪಕ್ಕದ ದಡದಲ್ಲಿ ಹ್ಹೋ.. ಎಂಬ ಬೊಬ್ಬೆ .. ನಾವೆಲ್ಲ ಕೆನ್ನೆಯ ಮೇಲಿಳಿಯುತ್ತಿದ್ದ ಹನಿಗಳನ್ನು ಒರೆಸಲು ಮರೆತು ಅತ್ತ ತಿರುಗಿದರೆ , ಅಮ್ಮ ಮುಚ್ಚಿದ್ದ ಕಣ್ಣನ್ನು ತೆರೆಯುವುದಕ್ಕೂ ಭಯಪಟ್ಟುಕೊಂಡಿದ್ದಳು. ದೂರದಲ್ಲಿ ಮಹಾನ್ ಐಂದ್ರಜಾಲಿಕನಂತೆ ನೀರಿನ ಅಲೆಗಳನ್ನು ಕತ್ತರಿಸಿಕೊಂಡು ಈಜಿ ಬರುತ್ತಿರುವ ಅಪ್ಪ, ಅವರಿಂದ ಇನ್ನು ಕೊಂಚ ಹಿಂದಿನಿಂದ ಚಿಕ್ಕಪ್ಪ.. ಈಗ ಅಮ್ಮನನ್ನು ಅಲುಗಿಸಿ 'ಅಪ್ಪ ಬಂದರು ..ಹ್ಹೋ' ಎಂದು ಸಂತಸದಿಂದ ಕಿರುಚುವ ಸರದಿ ನಮ್ಮದಾದರೆ, ಉಳಿದವರೆಲ್ಲರ ಸಮಾಧಾನದ ನಿಟ್ಟುಸಿರು..
ಗಾಳಿಯ ವೇಗಕ್ಕೆ ಚಲಿಸಿದ ತೆಪ್ಪದೊಂದಿಗೆ ಯಾವುದೇ ಪ್ರತಿರೋಧವಿಲ್ಲದೆ ಒಂದಿಷ್ಟು ದೂರ ಹೋದ ಅಪ್ಪ, ನೀರಿಗೆ ಮುಟ್ಟುವಂತೆ ಬಾಗಿದ್ದ ಮರದ ಕೊಂಬೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು, ತೆಪ್ಪವನ್ನು ಕಷ್ಟಪಟ್ಟು ಅದಕ್ಕೆ ಕಟ್ಟಿಕೊಂಡಿದ್ದರು. ಗಾಳಿಯ ಬಿರುಸು ಇನ್ನೂ ಇದ್ದುದರಿಂದ ತೆಪ್ಪದೊಂದಿಗೆ ಮರಳುವುದು ಅಸಾಧ್ಯ ಎಂದುಕೊಂಡು,ಕೈಯಲ್ಲಿದ್ದ ಕೊಡೆಯನ್ನು ಇನ್ನೂ ಮೇಲಿನ ಮರದ ಕೊಂಬೆಗೆ ಸಿಕ್ಕಿಸಿ ಈಜಿ ಮರಳಿ ಬರತೊಡಗಿದರು.
ಅಪ್ಪ ಮತ್ತು ಚಿಕ್ಕಪ್ಪ ಹತ್ತಿರ ಬಂದೊಡನೆಯೇ ನಾವೆಲ್ಲ ಕುಣಿಯತೊಡಗಿದರೆ, ಅಮ್ಮ ಅಲ್ಲಿಯವರೆಗಿನ ಆತಂಕ ಮರೆತು 'ಅಲ್ಲಾ ನಿಮ್ಗೆ ಎಷ್ಟು ಹೇಳಿದರೂ ಕೇಳೋದಿಲ್ಲ ನೀವು.. ಈ ರೀತಿ ಬಟ್ಟೆ ಒದ್ದೆ ಮಾಡಿಕೊಂಡರೆ ಒಣಗಿಸೋದಾದ್ರು ಹೇಗೆ.. ಹುಂ.. ಇಬ್ಬರೂ ಬೇಗ ಒಳಗೆ ಹೋಗಿ ಬಟ್ಟೆ ಬದಲಾಸಿ.. ಬಿಸಿ ಬಿಸಿ ಏನಾದ್ರು ಕುಡಿಯಲು ಮಾಡ್ತೀನಿ.. ಥಂಡಿಗೆ ನಾಳೆ ಶೀತ ಜ್ವರ ಆದ್ರೆ ಕಷ್ಟ ಅಂತ ಯಜಮಾನಿಕೆ ಸುರು ಮಾಡಿದಳು.
ಪ್ರವಾಹ ತಗ್ಗಿದ ಮೇಲೆ, ಅಪ್ಪ ಮರ ಹತ್ತುವವರಿಗೆ ಹೇಳಿ, ತೆಪ್ಪ ಕಟ್ಟಿದ್ದ ಮರ ಹತ್ತಿಸಿ ತಮ್ಮ ಕೊಡೆ ಇಳಿಸಿಕೊಂಡಿದ್ದರು. ತೆಪ್ಪ ಮಾತ್ರ ಬಾಳೆದಂಡುಗಳು ಒಣಗುವವರೆಗೂ ಅಲ್ಲೇ ಉಳಿದು ಮಹಾಭಾರತದ ಕತೆಯಲ್ಲಿ ಕೇಳಿದ್ದ ಬನ್ನಿ ಮರಕ್ಕೆ ಕಟ್ಟಿದ್ದ ಶವಾಕಾರದ ಪಾಂಡವರ ಆಯುಧವನ್ನು ನೆನಪಿಸುತ್ತಿತ್ತು.ಅಪ್ಪ ಮರ ಹತ್ತುವವನಿಗೆ ಕೊಟ್ಟ ಬಕ್ಷೀಸಿನ ಮೊತ್ತ ಕೇಳಿದ ಅಮ್ಮ , ಅದರಲ್ಲಿ ಎರಡು ಹೊಸ ಕೊಡೆ ಬರ್ತಿತ್ತು ಅಂತ ತುಂಬಾ ದಿನ ಅಣಕಿಸುತ್ತಿದ್ದಳು.
ಇಂತಹ ಪ್ರವಾಹದ ದಿನಗಳಲ್ಲಿ ಬೇರೇನೂ ಕೆಲಸ ಮಾಡುವುದು ಸಾಧ್ಯವಿಲ್ಲದ ಕಾರಣ ಯುವಕರು ಹಣ ಮಾಡಲು ದಾರಿಯೊಂದನ್ನು ಕಂಡುಕೊಂಡಿದ್ದರು.ನೀರಿನಲ್ಲಿ ಅನಾಯಾಸವಾಗಿ ತೇಲಿ ಬರುತ್ತಿದ್ದ ದೊಡ್ಡ ದೊಡ್ಡ ಮರದ ದಿಮ್ಮಿಗಳೇ ಅವರ ಆದಾಯದ ಮೂಲ. ಅವುಗಳನ್ನು ಕಾಯುತ್ತಾ ಹಗಲು ಇರುಳು ಎನ್ನದೆ ಗಂಟೆಗಟ್ಟಲೆ ನೀರಿನಲ್ಲೇ ಕಾಲ ಕಳೆಯುತ್ತಿದ್ದರು. ಎಷ್ಟು ಭಾರದ ಮರವಾದರೂ ಸರಿ ನೀರಿನಲ್ಲಿ ತೇಲುವುದರಿಂದಾಗಿ ಅದನ್ನು ಎಳೆದು ಬದಿಗೆ ತರುವುದು ಸುಲಭವಾಗಿತ್ತು. ಅದನ್ನು ನೋಡಿದಾಗಲೇ ಬೆಲೆ ನಿಗದಿ ಮಾಡಿ ಕೊಂಡೊಯ್ಯಲು ಕಾಯುತ್ತಿದ್ದ ಜನರಿಂದಾಗಿ ಕೂಡಲೇ ಮಾರಾಟವಾಗಿ ಹಣ ಕೈ ಸೇರುತ್ತಿತ್ತು. ಹೀಗೆ ಯಾರದೋ ಮನೆಯ ಬಾಗಿಲಾಗಲು ಕಡಿಯಲ್ಪಟ್ಟಿದ್ದ ಮರ ಇನ್ಯಾರದೋ ಮನೆಯ ಕುರ್ಚಿ ಮೇಜುಗಳಾಗಿ ಮತ್ಯಾರದೋ ಕಿಸೆಯೊಳಗೆ ಹಣವಾಗಿ ಕುಣಿಯುತ್ತಿದ್ದುದು ವಿಧಿಲೀಲೆಯೆ ಸರಿ!!
ಒಂದು ಸಾರಿ ತುಂಬಿಕೊಂಡ ನದಿ ನೀರಿನ ಪ್ರವಾಹ ಹೆಚ್ಚೆಂದರೆ ಮೂರ್ನಾಲ್ಕು ದಿನಗಳ ಅತಿಥಿಯಾಗಿರುತ್ತಿತ್ತು. ಮತ್ತೆ ಮಳೆಯ ಪ್ರಮಾಣ ಕಮ್ಮಿ ಆಗುತ್ತಿದ್ದಂತೆ ಕಾವೇರಿ ಕನಿಕೆಯರು ಸೌಮ್ಯ ರೂಪ ತಾಳಿ ಶಾಂತವಾಗಿ ಹರಿಯುತ್ತಿದ್ದವು. ಕಾರ್ಮೋಡಗಳು ಕರಗಿ ಎಳೆ ಬಿಸಿಲು ಹಣಕಿದಾಗ ನಿತ್ಯ ಜೀವನ ಸಹಜತೆಗೆ ಮರಳಿ ಅಪ್ಪ ಅಮ್ಮನ ಮುಖದಲ್ಲಿ ಸಮಾದಾನದ ಗೆರೆ ಮೂಡಿಸಿದರೆ, ನಮಗೆ ಇಷ್ಟು ದಿನ ನೀರಿನ ಮೋಜಿನಲ್ಲಿ ದಿನ ದೂಡಿ, ಮಾಡಲು ಮರೆತಿದ್ದ ಹೋಮ್ ವರ್ಕ್ ಗಳೆಲ್ಲ ನೆನಪಾಗಿ , ಬೆನ್ನಿನಲ್ಲಿ ಚಳಿ ಹುಟ್ಟಿಸಿ, ಮತ್ತದೇ ಶಾಲೆಗೆ ಹೋಗಬೇಕಲ್ಲ ಎಂಬ ಚಿಂತೆ ಕೊರೆಯಲು ಪ್ರಾರಂಭವಾಗುತ್ತಿತ್ತು. ಮತ್ತೆ ಆಗಸದ ಕಡೆಗೆ ಇನ್ನೊಂದಿಷ್ಟು ಆರ್ದ್ರ ದೃಷ್ಟಿ ಬೀರಿ 'ಹುಯ್ಯೊ ಹುಯ್ಯೋ ಮಳೆರಾಯ' ಎಂಬ ಹಾಡನ್ನು ಇನ್ನಷ್ಟು ಕರಣಾರಸದೊಂದಿಗೆ ಹಾಡುತ್ತಿದ್ದೆವು.