Pages

Total Visitors

Tuesday, July 24, 2012

ತಾನೊಂದು ಬಗೆದರೆ..
'ಶಾಲಿನಿ ಬೇಗ ರೆಡಿ ಆಗು ಮತ್ತೆ ಲೇಟ್ ಆದ್ರೆ ಕಷ್ಟ'  ಅಂತ ಅವಸರ ಮಾಡಿದ ದಿವಾಕರ.

'ಬಂದೆ ಇರಿ ಒಂದು ನಿಮಿಷ..' ಎಂದು ಮತ್ತೊಮ್ಮೆ ಕನ್ನಡಿಯ ಕಡೆಗೆ ನೋಡಿ ತನ್ನ ಪರ್ಸ್ ಕೈಯಲ್ಲಿ ಹಿಡಿದು ತನ್ನನ್ನೇ ನೋಡುತ್ತಾ ನಿಂತ ಅತ್ತೆಯ ಕಡೆಗೆ ತಿರುಗಿ ನಸು ನಗು ಬೀರಿದಳು. ಬಾಗಿಲು ಹಾಕ್ಕೊಳ್ಳಿ ಜಾಗ್ರತೆ ಎಂದು ಹೇಳಲು ಮರೆಯಲಿಲ್ಲ.

'ಹುಂ.. ! ಸರಿ ನಾನಿರೋದು ಅದಕ್ಕೇ ಅಲ್ವೇ..' ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾ ಗಿರಿಜಮ್ಮ ಅವರು ಹೋಗುವುದನ್ನೇ ನೋಡುತ್ತಾ ನಿಂತರು.

ದಿವಾಕರ ಒಬ್ಬನೇ ಮಗ . ಕಳೆದ ವರ್ಷವಷ್ಟೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿತ್ತು ಬಾಳು. ಶಾಲಿನಿ ಅಚ್ಚುಮೆಚ್ಚಿನ ಸೊಸೆ. ಅವನೇ ಇಷ್ಟಪಟ್ಟು ಮದುವೆಯಾಗಿದ್ದರೂ ಎಲ್ಲದರಲ್ಲೂ ಹೊಂದಿಕೊಂಡಿದ್ದಳು. ಆದರೆ ಈ ಕೆಲವು ದಿನಗಳಿಂದ ಗಿರಿಜಮ್ಮನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಅದೂ ಮೊನ್ನೆ ಅವರ ಮಾತುಗಳು ಕಿವಿಗೆ ಬೀಳದೆ ಹೋಗಿದ್ದರೆ ಇನ್ನೂ ಸೊಸೆ ಒಳ್ಳೆಯವಳು ಎಂಬ ಭ್ರಮೆಯಲ್ಲೇ ಇರುತ್ತಿದ್ದೆನೇನೋ .. ಎಂದು ತಲೆಕೊಡವಿಕೊಂಡರು.

ಹೊರಗೆ ಬಿಸಿಲಿಗೆ ಹಾಕಿದ್ದ ಬಟ್ಟೆ ಗಾಳಿಗೆ ಕೆಳಗೆ ಬಿದ್ದಿತ್ತು. ಅದನ್ನೆತ್ತಿ ಮಡಚಿ ಒಳಗಿಡಲು ಅವರ ಕೋಣೆಯ ಬದಿಯಲ್ಲೇ ಸಾಗುತ್ತಿದ್ದಾಗ ಕಿವಿಗೆ ಬಿದ್ದ ಮಾತಾದರು ಎಂತಹದು..!

'ನೋಡ್ರೀ ಎಷ್ಟು ದಿನಾಂತ ಇದನ್ನು ನೋಡೋದು..ಆನಂದಾಶ್ರಮದಲ್ಲಿ ಹೋಗಿ ವಿಚಾರಿಸಬಾರದಾ..? ಯಾರೋ ಏನೋ ತಿಳ್ಕೋಳ್ತಾರಂತ ನಾವು ಜೀವನ ಮಾಡೋಕಾಗುತ್ತಾ? ನಮ್ಗೆ ಸರಿ ಅನ್ನಿಸಿದ್ರೆ ಆಯ್ತು.. ಇವತ್ತು ನೀವು ಅಲ್ಲಿ ಮಾತಾಡ್ಲೇ ಬೇಕು..'

ಈ ಮಾತಿಗೆ ದಿವಾಕರ ಏನು ಹೇಳಿದನೋ ..ನಿಂತಲ್ಲೇ ತಲೆ ತಿರುಗಿದಂತಾಗಿ  ಕಣ್ಣು ಕತ್ತಲಿಡುವುದು ಅರಿವಾದಾಗ  ಪಕ್ಕನೆ ಕೋಣೆಯೊಳಕ್ಕೆ ನುಗ್ಗಿ ಸಾವರಿಸಿಕೊಳ್ಳುವಷ್ಟರಲ್ಲಿ ಅವರಿಬ್ಬರು ಕೆಲಸಕ್ಕೆ ಹೋಗಿ ಆಗಿತ್ತು.

 ಲೊಡ್ಡಾದ ಮರ ..ನಾನಾದರು ಇನ್ನು ಯಾರಿಗೆ ಬೇಕು.. ಆದರೆ ನನ್ನ ಪಾಡಿಗೆ ನಾನು ಈ ಮನೆಯೊಳಗೆ ಇರುವುದೂ ಬೇಡವಾಗಿದೆಯೇ ಇವರಿಗೆ?
ಇಡೀ ದಿನ ಅವರಿಬ್ಬರೂ ದುಡಿಯಲು ಹೊರಗೆ ಹೋಗುತ್ತಾರೆ. ಮನೆಯ ಎಲ್ಲಾ ಕೆಲ್ಸ ಮುಗಿಸಿ ಹೋಗುವ ಸೊಸೆ.. ಸ್ವಲ್ಪ ಕೆಲಸವೇನಾದರು ಇದ್ದರೆ ಹೊತ್ತಾದರು ಹೋಗಬಹುದೇನೋ? ಹೇಳಿದರೆ ನೀವು ಹಾಯಾಗಿ ಇರಿ ಎಂದು ಬಾಯಿ ಮುಚ್ಚಿಸುತ್ತಿದ್ದಳು.ಅಥವಾ ಅವಳು ಒಪ್ಪಿದರೂ ಮನಸ್ಸು ಕೆಲಸ ಮಾಡಲು ಪ್ರೇರೇಪಿಸುತ್ತಿತ್ತೇ ಹೊರತು ದೇಹ ಸಹಕರಿಸುತ್ತಿರಲಿಲ್ಲ.

ಅವಳಿಗೂ ಏನೂ ಮಾಡದೆ ಬಿಟ್ಟಿ ಅನ್ನ ತಿಂತಾರೆ ಅಂತ ಅನ್ನಿಸುತ್ತಿದೆಯೋ ಏನೋ.. ಆನಂದಾಶ್ರಮ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಸೇವಾಶ್ರಮ.ಮೊದಲೊಂದೆರಡು ಬಾರಿ ಯಾರನ್ನೋ ನೋಡಬೇಕು ಎಂದು ಹೋಗಿದ್ದ ನೆನಪು. ಆದರೆ ಅಲ್ಲಿನವರ ಶೂನ್ಯ ತುಂಬಿದ ನೋಟ ಹೆಚ್ಚು ಹೊತ್ತು ನನ್ನನ್ನು ಅಲ್ಲಿ ನಿಲ್ಲದಂತೆ ಮಾಡಿತ್ತು. ಈಗ ನನ್ನನ್ನು ಅಲ್ಲಿಗೆ ಮೆತ್ತಗೆ ಸಾಗಿಸುವ ಹುನ್ನಾರವೇ .. ?  ಈ ಮನೆಯ ಪ್ರತಿ ಕಲ್ಲು ನನ್ನ ಗಂಡನ ದುಡಿಮೆಯಿಂದ ಪೇರಿಸಿದ್ದು. ಈಗ ನಾನು ಈ ಮನೆಗೆ ಪರಕೀಯಳೇ..? ತಲೆ ಸಿಡಿಯತೊಡಗಿತು.
ಇಂದು ಅತಿ ತರಾತುರಿಯಲ್ಲಿ ಹೊರಟಿದ್ದು ಅಲ್ಲಿಗೆ ಎಂದು ತಿಳಿದಿದೆ. ಬರುವಾಗ ಇನ್ನೇನು ಕಾದಿದೆಯೋ..? ನನ್ನನ್ನು ಒಂದು ಮಾತು ಈ ಬಗ್ಗೆ ಕೇಳಬೇಕೆನ್ನಿಸಲಿಲ್ಲ ಇಬ್ಬರಿಗೂ.. ಕಣ್ಣೀರು ಕೆನ್ನೆಯ ಮೇಲೆ ಧಾರೆಯಾಗಿ ಹರಿಯುತ್ತಿದ್ದರೂ ಒರೆಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಗಿರಿಜಮ್ಮ.. ಅಲ್ಲೇ ಕುಸಿದು ಕುಳಿತರು.

ಎಷ್ಟು ಹೊತ್ತಿನ ಮೈ ಮರೆವೋ.. ಹೊರಗೆ ಬಾಗಿಲಿನ ಗಂಟೆ ಜೋರಾಗಿ ಸದ್ದು ಮಾಡುತ್ತಿತ್ತು. ಮೆಲ್ಲನೆದ್ದು ಬಾಗಿಲು ತೆರೆದರು. ಸೊಸೆ ಗಡಿಬಿಡಿಯಿಂದಲೇ ಒಳಬಂದಳು. ಕೈಯಲ್ಲಿ ಬಟ್ಟೆಯ ಪ್ಯಾಕೆಟ್.

ಓಹೋ.. ನನ್ನನ್ನು ಕಳಿಸುವಾಗ ಉಡೂಗೊರೆ.. ವ್ಯಂಗ್ಯ ನಗು ಮುಖದ ಮೇಲೆ ಹರಡಿತು.

 ಅಷ್ಟರಲ್ಲಿ ಶಾಲಿನಿ ' ಅತ್ತೇ .. ಇಲ್ಲಿ ನೋಡಿ..ಇದರಲ್ಲಿ  ನಿಮಗ್ಯಾವ ಸೀರೆ ಹಿಡಿಸುತ್ತೋ ಹೇಳಿ' ಎಂದಳು. ಬಾಯಿ ತೆರೆಯಬೇಕೆನ್ನುವುದರಲ್ಲೇ 'ಬಿಡಿ ನಾನೇ ಹೇಳ್ತೀನಿ. ನಿಮ್ಮ ಇಷ್ಟದ ಕಲರ್ ನಂಗೆ ಗೊತ್ತಿಲ್ವೇ.'.ಎಂದು ಕೈಯಲ್ಲಿ ಒಂದು ಸೀರೆ ತುರುಕಿದಳು. ನಿರಾಸಕ್ತಿಯಿಂದ ಅದನ್ನು ಹಿಡಿದು ಬಾರದೇ ಇರುವ ದಿವಾಕರನನ್ನು ವಿಚಾರಿಸಿದರು.


'ಅವರು ಈಗ ಬರ್ತಾರೆ ಆಟೋ ತೆಗೊಂಡು.. ಅವ್ರು ಬರೋದ್ರೊಳಗೆ ನೀವು ಈ ಸೀರೆ ಉಟ್ಟು ಸಿದ್ಧರಾಗಿ' ಎಂದು ನುಡಿದು ಒಳ ಹೋದವಳು  ಪುನಃ ತಡೆದು 'ಅತ್ತೇ.. ನಿಮಗೆ ತಿಳಿಸದೆ ನಾವು ಕೆಲವು ವಿಷಯಗಳನ್ನು ನಿಶ್ಚಯಿಸಿದ್ದೇವೆ... ನೀವು ಬೇಸರಿಸಬಾರದು' ಎಂದಳು.

ಎದೆಯೊಳಗೆ ಲಾವಾರಸ ಕುದಿಯುತ್ತಿದ್ದರೂ ತೋರಗೊಡದೆ  'ಏನಮ್ಮಾ 'ಎಂದರು.

'ಸ್ವಲ್ಪ ನಿಲ್ಲಿ ನಿಮಗೇ ಗೊತ್ತಾಗುತ್ತೆ.. ನೀವೀಗ ಮೊದಲು ಸೀರೆ ಉಟ್ಟು ಬನ್ನಿ' ಎಂದಳು ಶಾಲಿನಿ.
ಬಂದದ್ದು ಬರಲಿನ್ನು ಎಂದು ತಾವೇ ಬಿಗುವಾದರು.ಹರಕೆಯ ಕುರಿಗೂ ಅಲಂಕಾರ ಬೇಕು ತಾನೇ.. ಎಂದು ಮನದಲ್ಲೇ ಅಂದುಕೊಂಡರು.

ಕೈಯಲ್ಲಿ ಹಿಡಿದ ಸೀರೆಯ ಮಡಿಕೆ ಇನ್ನೂ ಬಿಚ್ಚಿರಲಿಲ್ಲ. ಅಷ್ಟರಲ್ಲಿ ಅಟೋ ನಿಂತ ಸದ್ದಾಯಿತು. ಸೀರೆ ಹಾಗೇ ಹಿಡಿದು ಹೊರಬಂದರು. ಶಾಲಿನಿಯೂ ಸಡಗರದಿಂದ ಹೊರಗೆ ನಡೆದಳು. ಹೊರಗೆ ನೋಡಿದರೆ ಯಾರೋ ಆಟೋದಿಂದ ಇಳಿಯುತ್ತಿದ್ದಾರೆ. ಯಾರಿರಬಹುದು..? ಇಷ್ಟು ದೂರದಿಂದ ಕಾಣುವುದೂ ಇಲ್ಲ.  ಕಣ್ಣುಜ್ಜಿಕೊಂಡು ಮತ್ತೊಮ್ಮೆ ನೋಡಿದರು. ಸಾವಿತ್ರಿಯಲ್ಲವೇ ಅವಳು..? ಇವಳ ಮಗ ಶಂಕರ ಮತ್ತು ದಿವಾಕರ ಆತ್ಮೀಯ ಗೆಳೆಯರು.  ದೂರದ ಡೆಲ್ಲಿಯಲ್ಲಿದ್ದ ಇವಳೆಲ್ಲಿಂದ ಬಂದಳು ಇಲ್ಲಿಗೆ.. ?

ಶಾಲಿನಿ ಸಂತಸದಿಂದ  ಸ್ವಾಗತ ಕೋರುತ್ತಿದ್ದರೆ, ನನ್ನ ಮುಖದಲ್ಲಿ ಅರಳಲು ಪ್ರಾರಂಭಿಸುತ್ತಿದ್ದ ನಗು ಒಳ ಬರುತ್ತಿರುವ  ದಿವಾಕರನನ್ನು ನೋಡಿ ಮುದುಡಿತು. ಅವನು  'ಅಮ್ಮಾ..  ಸ್ವಲ್ಪ ಇಲ್ಲಿ ಬರ್ತೀಯಾ' ಎಂದು ಹೆಗಲಿಗೆ ಕೈ ಹಾಕಿ ಆಚೆ ಕರೆದುಕೊಂಡು ಹೋದ.. ಬಂದವರೆದುರಿಗೆ ಅಮ್ಮನ ಮೇಲೆ ಭಾರೀ ಪ್ರೀತಿ ಅಂತ ತೋರಿಸಿಕೊಳ್ಳುವ ನಾಟಕ ಇದು ಎನ್ನಿಸಿ ಕಹಿಯಾಯಿತು.

 'ಅಮ್ಮಾ ನಾನು ಹೇಳುವುದನ್ನು ಗಮನವಿಟ್ಟು ಕೇಳು.. ಶಂಕರ  ಗೊತ್ತಲ್ವಾ ನಿಂಗೆ ..ಅವನು ಮಿಲಿಟ್ರಿ ಸೇವೆಯಲ್ಲಿ ತೀರಿಕೊಂಡು ಎರಡು ವರ್ಷ ಆಯ್ತಮ್ಮ..ಇವರು ಇತ್ತೀಚೆಗೆ ಇಲ್ಲಿನ ಆಶ್ರಮ ಸೇರಿದ್ದರು. ನಂಗೆ ಮೊನ್ನೆಯಷ್ಟೆ ವಿಷಯ ತಿಳಿಯಿತು..ಶಾಲಿನಿಗೆ ಹೇಳಿದ್ದೆ. ಅವಳು ಇವರನ್ನು ನಮ್ಮ ಮನೆಗೆ ಕರೆದುಕೊಂಡು ಬರುವ ಬಗ್ಗೆ ಆನಂದಾಶ್ರಮದಲ್ಲಿ ಮಾತಾಡಿ ಅಂತ ನನ್ನನ್ನು ಬಲವಂತ ಪಡಿಸಿದಳು.ನೀನು ಇಡೀ ದಿನ ಒಬ್ಬಳೇ ಮೌನವಾಗಿ ಕಾಲ ಕಳೆಯುವುದನ್ನು ನಮಗೆ ನೋಡಲೇ ಕಷ್ಟವಾಗುತ್ತಿತ್ತು.. ಆದರೆ ಅನಿವಾರ್ಯವಾಗಿತ್ತು ಸಹಿಸಿಕೊಳ್ಳುವುದು .. ಇಂದಿನಿಂದ ಇವರು ನಮ್ಮಲ್ಲೇ ಇರ್ತಾರೆ.. ನಿಂಗೆ ಜೊತೆಯಾಗಿ..  ..ಇನ್ನು ಅವರೆದುರು ಇದನ್ನು ಮಾತನಾಡುವುದು ಬೇಡ. ಮೊದಲೇ ನಿನಗ್ಯಾಕೆ ಇದನ್ನು ತಿಳಿಸಲಿಲ್ಲ ಅಂದ್ರೆ ತುಂಬಾ ಸ್ವಾಭಿಮಾನಿಯಾದ ಅವರನ್ನು ಒಪ್ಪಿಸುವ ಭರವಸೆ ನಮಗಿರಲಿಲ್ಲ. ಆದ್ರೆ ಶಾಲಿನಿಯ ಹಠಕ್ಕೆ ಸೋತು ಹೋದರು.ನಮ್ಮಲ್ಲಿಗೆ ಬರಲೊಪ್ಪಿದರು.'

'ಅರೇ.. !! ಹೊಸ ಸೀರೆ ಇನ್ನೂ ಉಟ್ಟಿಲ್ವಾ.. ಹ್ಯಾಪಿ ಬರ್ತ್ ಡೆ ಅಮ್ಮ.. ,ನಿನ್ನ ಹುಟ್ಟಿದ ದಿನ ಇಂದು... ನಿಂಗೆ ನೆನಪಿದೆಯಾ ಇಲ್ವಾ.. ಬೇಗ ಸೀರೆ ಉಟ್ಟು ರೆಡಿ ಆಗು.. ಆಟೋ ಇನ್ನು ಇಲ್ಲೇ ಇದೆ ನಾವು ದೇವಸ್ಥಾನಕ್ಕೆ ಹೋಗಿ ಬರೋಣ.. ಬರೋ ಹೊತ್ತಿಗೆ ನಮ್ಮ ಮೇಡಮ್ ಬಿಸಿ ಅಡುಗೆ ತಯಾರಿ ಮಾಡ್ತಾರೆ ಅಲ್ವಾ ಶಾಲಿನಿ' ಎಂದು ಅತ್ತ ನೋಡುತ್ತಿದ್ದರೆ ಗಿರಿಜಮ್ಮ ಒಳಗಿನಿಂದ ಉಕ್ಕುವ ಸಂತಸದಲೆಗಳ ಹೊಡೆತಕ್ಕೆ ಸಿಲುಕಿ ಮಾತುಗಳನ್ನು ಮರೆತವರಂತೆ ನಿಂತೇ ಇದ್ದರು. 

-- 

21 comments:

 1. ಕಥೆ ತುಂಬಾ ಚೆನ್ನಾಗಿದೆ ಅನಿತಾ ಅವರೇ... ಮೊದಲಿನಿಂದ ಕಡೆಯವರೆಗೂ ಕುತೂಹಲವನ್ನು ಕಾಯ್ದುಕೊಂಡು ಹೋಗುವುದನ್ನು ಅಚ್ಚುಕಟ್ಟಾಗಿ ನಿಬಾಯಿಸಿದ್ದೀರಾ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ಓದುವಾಗ ಕಣ್ಣಾಲಿಗಳಿಂದ ಎಲ್ಲರಲ್ಲೂ ಕಣ್ಣೀರು ಹರಿಯುವುದು ಸಹಜ ಮೊದಲ ಭಾಗದಲ್ಲಿ ಕಣ್ಣಾಲಿಗಳಿಂದ ನೀರು ಹರಿದಿದ್ದು, ಹತಾಶೆಯ ಭಾವದಿಂದ, ಹಿರಿಯ ಚೇತನವು ನಮ್ಮ ಬದುಕಿಗೆ ದುಬಾರಿಯಾಯಿತೇ ಎಂಬ ಭಾವದಿಂದ ಕಣ್ಣಂಚಲಿ ನೀರು ಹರಿದಿದ್ದು ಸಹಜ,,, ಹಿರಿಯ ಚೇತನಗಳಿಗೆ ಆಸರೆಯಾಗಿ ನಿಲ್ಲಬೇಕಾದ ನಮ್ಮ ಯುವಪೀಳಿಗೆ, ಅದನ್ನು ನಿರ್ಲಕ್ಷ್ಯ ತೋರಿಸುತ್ತಿರುವುದು ಇಂದು ಜಗಜಾಹೀರವಾಗುತ್ತಿದೆ. ಆದರೆ ನಿಮ್ಮ ಕಥೆಯ ಕೊನೆಯ ತಿರುಳು ಮಾತ್ರ ಹಿರಿಯ ಚೇತನಕ್ಕೆ ಆಸರೆ ನೀಡುವ ಸೊಸೆಯನ್ನು ತಂದು,ಹಿರಿಯ ಜೀವಕ್ಕೆ ಆಶ್ರಯ ನೀಡಿ ಕಣ್ಣಾಲಿಗಳಿಂದ ಆನಂದಭಾಷ್ಪ ಮೂಡುದೇ ಇರಲಾರದು... ಕಥೆ ತುಂಬಾ ಚೆನ್ನಾಗಿದೆ ಅನಿತಾ ಅವರೇ... ಮೊದಲಿನಿಂದ ಕಡೆಯವರೆಗೂ ಕುತೂಹಲವನ್ನು ಕಾಯ್ದುಕೊಂಡು ಹೋಗುವುದನ್ನು ಅಚ್ಚುಕಟ್ಟಾಗಿ ನಿಬಾಯಿಸಿದ್ದೀರಾ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ಓದುವಾಗ ಎಲ್ಲರಲ್ಲೂ ಕಣ್ಣಾಲಿಗಳಿಂದ ಕಣ್ಣೀರು ಹರಿಯುವುದು ಸಹಜ. ಮೊದಲ ಭಾಗದಲ್ಲಿ ಹತಾಶೆಯ ಭಾವದಿಂದ, ಹಿರಿಯ ಚೇತನವು ನಮ್ಮ ಬದುಕಿಗೆ ದುಬಾರಿಯಾಯಿತೇ ಎಂಬ ಭಾವದಿಂದ ಕಣ್ಣೀರು ಹರಿದಿದ್ದು ಸಹಜ,,, ಹಿರಿಯ ಚೇತನಗಳಿಗೆ ಆಸರೆಯಾಗಿ ನಿಲ್ಲಬೇಕಾದ ನಮ್ಮ ಯುವಪೀಳಿಗೆ, ಅದನ್ನು ನಿರ್ಲಕ್ಷ್ಯ ತೋರಿಸುತ್ತಿರುವುದು ಇಂದು ಸಹಜವಾಗಿ ಕಾಣಬಹುದಾಗಿದೆ. ಆದರೆ ನಿಮ್ಮ ಕಥೆಯ ಕೊನೆಯ ತಿರುಳು ಮಾತ್ರ ಹಿರಿಯ ಚೇತನಕ್ಕೆ ಆಸರೆ ನೀಡುವ ಸೊಸೆಯನ್ನು ತಂದು, ಹಿರಿಯ ಜೀವಕ್ಕೆ ಆಶ್ರಯ ನೀಡಿ ಕಣ್ಣಾಲಿಗಳಿಂದ ಆನಂದಭಾಷ್ಪ ಮೊಡಿಸುವಲ್ಲಿ ಯಶಸ್ವಿಯಾದಿರೀ... ಇಂತಹ ಸ್ವಾಸ್ಥ್ಯ ಸಮಾಜ ರೂಪುಗೊಂಡರೇ ಎಷ್ಟು ಚೆನ್ನಾಗಿರುತ್ತದೆ... ಹೊಂದಾಣಿಕೆಯ ಭಾವ ಎಲ್ಲರಲ್ಲೂ ಮೂಡಿದಾಗ ಸ್ವಾಸ್ಥ್ಯ ಸಮಾಜವನ್ನು ಎದುರುನೋಡಲು ಸಾಧ್ಯ... ಇಂತಹ ಲೇಖನಗಳಿಂದ ನಮ್ಮ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದಂತಾಯಿತು.

  ReplyDelete
 2. ಸರಳ, ಸುಂದರ ಕಥೆ. ಸುಲಭವಾಗಿ ಓದಿಸಿಕೊಂಡು ಹೋಗುವ ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಯ್ತು.

  ReplyDelete
 3. ಕಥೆ ಚೆನ್ನಾಗಿದೆ. ಸದಾ ಗೋಳನ್ನೇ ತೋರಿಸುವ ಟೀವಿ ವಾಹಿನಿಗಳೇಕೆ ಇಂತಹ ಪಾಸಿಟಿವ್ ಆಗಿರುವ ಕಥೆಗಳನ್ನು ತೋರಿಸಬಾರದು?

  ReplyDelete
 4. ಸೂಪರ್ಬ್ ಅನಿತಾ.. ಹೆತ್ತ ತ೦ದೆ-ತಾಯಿಗಳಿಗೆ ದಿವಾಕರನ೦ತ ಮಗ, ಶಾಲಿನಿಯ೦ತ ಸೊಸೆ ಸಿಗಲಿ ಅ೦ತ ಹಾರೈಸುವೆ. ವೃದ್ಧ ತ೦ದೆ ತಾಯ೦ದಿರನ್ನು ಅನಾಥಾಶ್ರಮಕ್ಕೆ ಸೇರಿಸುವ ಈಗಿನ ಕಾಲದಲ್ಲಿ ದಿವಾಕರ, ಶಾಲಿನಿಯ೦ತವರೂ ಇದ್ದಾರೆ ಅ೦ತ ತೋರಿಸಿರುವ ಪರಿ ಇಷ್ಟ ಆಯ್ತು ಅನಿ...

  ReplyDelete
 5. ಒಳ್ಳೆಯ ತಿರುವು...

  ReplyDelete
 6. ಒಳ್ಳೆಯ ತಿರುವುಕೊಟ್ಟ ಕಥೆ.

  ReplyDelete
 7. ಅನಿತಾ ಕಥೆ ತುಂಬಾ ಚೆನ್ನಾಗಿದೆ. ಇಂತಹ ಸೊಸೆ ಎಲ್ಲರಿಗೂ ಇರಬಾರದೇ ಎಂದನಿಸಿ ಹೃದಯ ಭಾರವಾಯಿತು. ನಿಮ್ಮ ಕಥೆ ಹೇಳುವ ಶೈಲಿ ಬಹಳ ಸುಂದರವಾಗಿದೆ.

  ReplyDelete
 8. kathe chennagide. sarala sundara. innastu kathegalannu odalu utsukanaagiddene..

  ReplyDelete
 9. ಹೃದಯಸ್ಪರ್ಶಿಯಾಗಿದೆ .ಕಣ್ಣು ತುಂಬಿ ಬಂತು .ದಿವಾಕರ ,ಶಾಲಿನಿ ಯ ಹಾಗೆ ..ಅಂಥವರೂ ಇರುತ್ತಾರ ? ಗೊತ್ತಿಲ್ಲ .ಹಾಗೆ ಬಯಸುವ ಮನಸ್ಸಾಗುತ್ತಿದೆ .ಅಮೆರಿಕಾದಲ್ಲಿ ನನ್ನ ಮಗಳ ಮನೆ ಪಕ್ಕದಲ್ಲಿ ಅಮೆರಿಕನ್ಸ್ ಸಂಸಾರ ವೊಂದಿದೆ .ಅವಳ ಹೆಸರು ಲಿನ್..ನನ್ನ ಮಗಳ ಸ್ನೇಹಿತೆ .ಅವಳ ತಾಯಿ ,ಅವಳ ಅತ್ತೆ ( ಗಂಡನ ತಾಯಿ ) ಒಟ್ಟಿಗೆ ಇದ್ದಾರೆ .ಅವರಿಬ್ಬರೇ ಪ್ರವಾಸ ,ಶಾಪಿಂಗ್ ಎಲ್ಲಾ ಹೋಗುತ್ತಾರೆ .ನೋಡಲು ತುಂಬಾ ಖುಷಿ ಎನಿಸುತ್ತದೆ .
  ಅಭಿನಂದನೆಗಳು .

  ReplyDelete
 10. ಇತ್ತೀಚೆಗೆ ಏನೊ ಕೆಲಸದ ಮೇಲೆ ನಾನೊಂದು ವೃದ್ದಾಶ್ರಮಕ್ಕೆ ಹೋಗಿದ್ದೆ. ಕೆಲಸದ ಬಗ್ಗೆ ಆಶ್ರಮದ ಮ್ಯಾನೆಜರ್ ಜೊತೆ ಮಾತಾಡುತ್ತಾ ಆಶ್ರಮದ ವಲಯದಲ್ಲಿ ನಡೆದಾಡುತ್ತಿದ್ದೆ. ಅಲ್ಲೊಬ್ಬ ಅಜ್ಜಿ ತಮ್ಮ ಚುರುಕು ಮಾತಿನಿಂದ ನನ್ನ ಗಮನ ಸೆಳೆದರು. ಪುಟ್ಟ ಉದ್ಯಾನವನದಲ್ಲಿ ಅವರು ಆಶ್ರಮದ ಸಹಾಯಕಿಯೊಂದಿಗೆ ಕುಳಿತು ಹರಟುತ್ತಿದ್ದರು. ಅವರ ಮಾತು ಹೂವಿನ ಗಿಡಗಳ ಬಗ್ಗೆ. ಅಜ್ಜಿ ಪದೇ ಪದೇ ಅದರ ಎಲೆ ಹೇಗಿದೆ ಹೇಳು, ಗಿಡ ಯಾವುದು ಅಂತ ನಾನು ಹೇಳ್ತೀನಿ ಅಂತಿದ್ರು. ನನ್ನ ಮುಖದಲ್ಲಿ ಇಣುಕಿದ ಅಚ್ಚರಿಯನ್ನು ಗುರುತಿಸಿದ ಮ್ಯಾನೇಜರ್, "ಪಾಪ ಅಜ್ಜಿಗೆ ವಯಸ್ಸಾಗಿ ಕಣ್ಣು ಕಾಣಿಸ್ತಿಲ್ಲ ಸರ್ , ಆದ್ರೂ ತುಂಬಾ ಸ್ವಾಭಿಮಾನಿ. ತಮ್ಮೆಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ತಾರೆ, ಅವರಿಗೆ ಈ ಆಶ್ರಮದ ಇಂಚಿಂಚೂ ಗೊತ್ತಿದೆ. ಯಾರ ಸಹಾಯವೂ ಇಲ್ಲದೇ ನಡೆದಾಡ್ತಾರೆ" ಅಂದ್ರು. ನನಗೆ ಹೇಗೆ ಪ್ರತಿಕ್ರಿಯೆ ವ್ಯಕ್ತ ಪಡಿಸುವುದು ಎಂದು ತಿಳಿಯದೆ ಪೆದ್ದು ಪೆದ್ದಾಗಿ 'ಅವರ ಮಕ್ಕಳು ನೋಡ್ಕೋಳ್ಳೊಲ್ವಾ ಸರ್ ' ಅಂತ ಕೇಳಿದೆ. ಮ್ಯಾನೇಜರ್ ನನ್ನ ದಡ್ಡತನಕ್ಕೆ ನಕ್ಕವರಂತೆ ನಕ್ಕು, " ಮಕ್ಕಳು ನೋಡಿಕೊಂಡ್ರೆ ಅವರ್ಯಾಕಿಲ್ಲಿರ್ತಿದ್ರು ಸರ್?!" ಅಂದರು. ಮತ್ತೆ ನಮ್ಮ ಮಾತು ಬೇರೆಲ್ಲಿಗೋ ಸಾಗಿತು ಅಂತ ಇಟ್ಟುಕೊಳ್ಳುವಾ. ಈ ಕಥೆ ಓದಿದಾಗ ಯಾಕೊ ಅದು ಮತ್ತೆ ನೆನಪಾಯಿತು. ತುಂಬಾ ತುಂಬಾ ಚಂದ ಬರ್ದಿದ್ದಿ ಅನಿತ. ಎಲ್ಲರೂ ಮೂಲತಃ ಒಳ್ಳೆಯವರೆ..ಹಾಗೂ ಕೆಟ್ಟವರೂ ಕೂಡ. ಆದರೆ ನಮ್ಮಲ್ಲಿರುವ ಒಳ್ಲೆತನಕ್ಕೆ ಒತ್ತು ಕೊಟ್ಟು ಹೆಚ್ಚು ಹೆಚ್ಚು ಪೋಷಿಸುವುದು ಪ್ರತಿಯೊಬ್ಬನ ಕರ್ತವ್ಯ ಅಂತ ನನಗನಿಸುತ್ತೆ. ಮಾಮೂಲಾಗಿ ನಡೀತಿರೋದನ್ನೆ ಮೊದಲಿಗೆ ಹೇಳುತ್ತಾ ಹೋಗಿ, ಕಥೆಯ ಕೊನೆಯಲ್ಲಿ ನೀನು ಕಾಣಿಸುವ ಅಕಸ್ಮಿಕ ತಿರುವು, "ಹಾಗಲ್ಲ , ಇದು ಹೀಗೆ ಇರ್ಬೇಕು ನೋಡಿ" ಅನ್ನುವ ನಿನ್ನ ಶೈಲಿ ಅಂತ ನಾನು ಭಾವಿಸ್ತೇನೆ.
  ಒಂದು ಉತ್ತಮ ಕಥೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು :))

  ReplyDelete
 11. ತುಂಬಾ ಇಷ್ಟ ಆಯ್ತು...ಚೆನ್ನಾಗಿ ಬರೆದಿದ್ದೀರಾ.

  ReplyDelete
 12. ಎಷ್ಟು ಚಂದ ಬರೆದಿದ್ದೀರ... ಅನಿತಕ್ಕನ ಕೈಗೆ ನೂರು ಮುತ್ತು... ಮನಸಿಗೆ ಸಹಸ್ರ ವಂದನೆ

  ReplyDelete
 13. ವೊವ್...ಕಥೆಯಲ್ಲಿನ ತಿರುವು ಇಷ್ಟ ಆಯಿತು....ಉತ್ತಮ ನಿರೂಪಣೆ...

  ReplyDelete
 14. ಕತೆಯ ನಿರೂಪಣೆ ಚೆನ್ನಾಗಿದೆ.

  ReplyDelete
 15. ಈಗಿನ ಕೂಡು ಕುಟುಂಬದಲ್ಲಿನ ವೃದ್ಧರ ಸಮಸ್ಯೆಯನ್ನು ಚೆನ್ನಾಗಿ ಬಿಂಬಿಸಿದ್ದೀರ...ಕಥೆ ಇಷ್ಟವಾಯಿತು..

  ReplyDelete
 16. ಕ್ಷೈಮ್ಯಾಕ್ಸ್ ಇಷ್ಟವಾಯ್ತು

  ReplyDelete
 17. ಕಥೆ ತು೦ಬಾ ಇಷ್ಟವಾಯಿತು ಅನಿಯಕ್ಕ... ಇದ್ದರೆ ಇ೦ತಹ ಮಗ ಸೊಸೆ ಇರಬೇಕು. ಈಗಿನ ಕಾಲದಲ್ಲಿ ಬಹಳ ಅಪರೂಪ ಬಿಡಿ. ಅಲ್ಲದೇ ಸಾವಿತ್ರಿಯವರನ್ನು ತಮ್ಮ ಮನೆಗೆ ಕರೆತ೦ದಿದ್ದು ಅವರ ಮನುಷ್ಯತ್ವವನ್ನು ಎತ್ತಿ ಹಿಡಿದಿದೆ....:)

  ReplyDelete
 18. ಎಂದಿನಂತೆ ಸುಂದರ ಕಥಾವಸ್ತು. ಅದನ್ನು ಓದುಗರಿಗೆ ಸುಳಿವೂ ಬಿಡದೆ ಊಹೆಯೂ ಮಾಡದಂತ ಅಂತ್ಯದಲ್ಲಿ ಕಥೆ ಮುಗಿಸಿದ್ದು ನಿಜಕ್ಕೂ ವಾಹ್. ಒಳ್ಳೆಯ ಕಥೆ.
  ಮಾಲಾ

  ReplyDelete
 19. katheya tiruLu ishTa aaytu..... saraLa sundara kathe....

  ReplyDelete