"ಮಾತು ಮಾತಿಗೆ ಸುಮ್ಮನೆ ಒಗ್ಗರಣೆ ಹಾಕ್ಕೊಂಡು ಯಾಕೆ ಬರ್ತೀಯ? ಸ್ವಲ್ಪ ಸುಮ್ನೆ ಕೂತ್ಕೋಬಾರ್ದಾ.." ಅಂತ ಹಿರಿಯರೆಲ್ಲ ನಮ್ಮ ತಲೆ ಹರಟೆ ಮಾತುಗಳಿಗೆ ಗದರುತ್ತಿದ್ದುದು ನಿಮಗೂ ಅನುಭವವೇದ್ಯವೇ ಆಗಿರುತ್ತದೆ. ಆಗೆಲ್ಲ ಈ ಒಗ್ಗರಣೆ ಎಂಬ ಶಬ್ಧವು ಒಂದು ಬೈಗಳೇ ಇರಬಹುದು ಎಂದು ನನ್ನ ತಿಳುವಳಿಕೆಯಾಗಿತ್ತು.
ಯಾವಾಗ ಅಡುಗೆ ಮನೆಯ ಕೋಣೆಯಲ್ಲಿ ನನ್ನ ಸೀನುಗಳು ಪ್ರತಿಧ್ವನಿಸಲು ತೊಡಗಿದವೋ ಆವಾಗ ತಿಳಿಯಿತು ನೋಡಿ ಇದರ ಮಹತ್ವ. ಚೆನ್ನಾಗಿ ಅಡುಗೆ ಮಾಡಲು ಬಂದರಷ್ಟೆ ಸಾಲದು. ಅದನ್ನು ಅಲಂಕರಿಸುವುದೂ ಕೂಡ ಅಗತ್ಯ. ಮಾಡಿದ ಈ ಅಡುಗೆ ಹೈ ಲೈಟ್ ಆಗುವುದು ಒಗ್ಗರಣೆಯ ಬಲದಿಂದಲೇ..!!
ಕೈಗೆ ಮೈಗೆ ಸಿಡಿಸಿಕೊಳ್ಳದೇ ಒಗ್ಗರಣೆ ಹಾಕುವುದೆಂದರೆ ಹಗುರದ ವಿಷಯವೇನಲ್ಲ. ಅದಕ್ಕೆಂದೇ ಎಲ್ಲರೂ ಭಾರವಿರುವ ಉದ್ದನೆಯ ಹಿಡಿಯುಳ್ಳ ಕಬ್ಬಿಣದ ಸೌಟೊಂದನ್ನು ಬಳಸುತ್ತಾರೆ. ಅದನ್ನುಒಲೆಯ ಮೇಲಿರಿಸಿ ಸೌಟಿನಲ್ಲಿ ಒಂದಿಷ್ಟುಎಣ್ಣೆಯೋ ತುಪ್ಪವೋ ಸುರಿದು ಬಿಸಿಯಾಗುತ್ತಿದ್ದಂತೆ ಸ್ವಲ್ಪ ಸಾಸಿವೆ ಮತ್ತು ಕೆಂಪು ಮೆಣಸಿನ ಚೂರುಗಳನ್ನು ಹಾಕಿ ಚಟಪಟನೆ ಸಿಡಿಸಿ ಮತ್ತೊಂದಿಷ್ಟು ಇಂಗು, ಕರಿಬೇವಿನ ಎಲೆಗಳನ್ನು ಹಾಕಿ ಬಾಡಿಸಿ ಮುಚ್ಚಿಟ್ಟ ಅಡುಗೆಯ ಮುಚ್ಚಳವನ್ನು ಸರಿಸಿ ಸಶಬ್ಧವಾಗಿ ಅದರ ಮೇಲೆ ಹರಡಿದರಾಯಿತು. ಕೂಡಲೇ ಇದು ಸೈರನ್ನಿನಂತೆ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಅಡುಗೆಯ ಕೆಲಸ ಮುಗಿಯಿತು ಎಂಬ ಸೂಚನೆ ಕೊಡುತ್ತದೆ.
'ಆಯ್ತೇನ್ರೀ ಅಡುಗೆ, ಅಹಾ ಏನು ಒಗ್ಗರಣೆ ಪರಿಮಳ ಅಂತೀರಿ, ಇಲ್ಲಿವರೆಗೂ ಬಂತುರೀ' ಅಂತ ಹೇಳೇ ಬಿಡುತ್ತಾರೆ. ಅಲ್ಲಿಯವರೆಗೂ ಜಡಭರತರಂತೆ ಕುಳಿತಿದ್ದ ಮನೆ ಮಂದಿ ಲವಲವಿಕೆಯಿಂದ ಎದ್ದು ಏನಿವತ್ತು ಊಟಕ್ಕೆ? ಯಾಕೋ ಜೋರು ಹಸಿವಾಗುತ್ತಾ ಇದೆ, ಬೇಗ ಬಡಿಸು ಅನ್ನುತ್ತಾ ಬಂದೇ ಬಿಡ್ತಾರೆ. ಬಿಸಿ ಎಣ್ಣೆಯಲ್ಲಿ ಸಾಸಿವೆ ಸಿಡಿದಾಗ ಬಿಟ್ಟುಕೊಳ್ಳುವ ವಿಶೇಷ ರಸ ವಸ್ತುವಿನ ಸಾಮರ್ಥ್ಯ ಅಂತದ್ದು. ಇನ್ನದಕ್ಕೆ ಇಂಗು ಮೆಣಸುಗಳ ಸಾಥ್ ಸಿಕ್ಕರಂತೂ ಕೇಳಲೇ ಬೇಡಿ.
ಒಹೋ ಒಗ್ಗರಣೆಗೊಂದು ಒಗ್ಗರಣೆ! ಏನು ಮಹಾ..ಎಲ್ಲರೂ ದಿನಾ ಹಾಕ್ತಾರೆ ಅಂತ ಅಂದುಕೋಬೇಡಿ. ಸಭೆ ಸಮಾರಂಭಗಳ ದೊಡ್ಡ ಅಡುಗೆಯಲ್ಲಿ ಇದರ ಮಹತ್ವ ನೋಡಿ ತಿಳಿದುಕೊಳ್ಳಬಹುದು. ಅಲ್ಲಿ ಹತ್ತಾರು ಮಂದಿ ಸೇರಿಕೊಂಡು ಅಡುಗೆ ಮಾಡುತ್ತಿದ್ದರೂ ಒಗ್ಗರಣೆ ಹಾಕುವುದು ಮೇಲಡಿಗೆಯವರೇ ಅಂದರೆ ಮುಖ್ಯ ಅಡುಗೆ ಭಟ್ರು. ಅವರ ಕೈಗುಣ ಪ್ರಕಟವಾಗುವುದೇ ಒಗ್ಗರಣೆಯಲ್ಲಿ.ಘಮ್ಮೆನ್ನುವ ಒಗ್ಗರಣೆಯನ್ನು ಹಾಕಿದ ಕೂಡಲೇ ಮುಚ್ಚಿಟ್ಟು ಬಿಡುತ್ತಾರೆ. ಅವುಗಳ ಬಂಧನ ವಿಮೋಚನೆಯಾಗುವುದು ಊಟಕ್ಕಾಯಿತು ಎನ್ನುವಾಗಲೇ.. !! ಪಾತ್ರೆಗಳ ಮುಚ್ಚಳ ತೆರೆದು ಸೌಟಿಂದ ತಿರುವಿ ಇತರ ಸಣ್ಣ ಪಾತ್ರೆಗಳಿಗೆ ವರ್ಗಾಯಿಸುತ್ತಾರೆ. ಅಲ್ಲಿಯವರೆಗೆ ಒಗ್ಗರಣೆಯು ಅದರ ಮೇಲೆ ಅಶ್ವತ್ಥ ಎಲೆಯ ಮೇಲೆ ಪವಡಿಸಿದ ಬಾಲಕೃಷ್ಣನಂತೆ ತೇಲುತ್ತಲೇ ಇರಬೇಕು. ಓಹ್.. ಏನು ರುಚಿಯಪ್ಪಾ, ಇವರು ಒಗ್ಗರಣೆ ಹಾಕಿದರೆ ಸಾಕು, ಅದು ಹೇಗೋ ರುಚಿಯೂ ಪರಿಮಳವೂ ದುಪ್ಪಟ್ಟಾಗಿಬಿಡುತ್ತದೆ ಎಂದು ಅವರ ಜನಪ್ರಿಯತೆ ಉಣ್ಣುವವರ ಬಾಯಲ್ಲಿ ವ್ಯಕ್ತವಾಗುತ್ತದೆ.
ಇದರ ಹೆಚ್ಚುಗಾರಿಕೆ ಬರೀ ಇಷ್ಟೇ ಎಂದುಕೊಳ್ಳಬೇಡಿ. ತಿಂಡಿ ಮಾಡಲಿಕ್ಕೆ ಉದಾಸೀನ ಕಾಡುತ್ತಿದೆಯೇ? ಅನ್ನಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಒಂದು ಸ್ಟ್ರಾಂಗ್ ಒಗ್ಗರಣೆ ಕೊಟ್ಟು ಕಲಸಿ ತಿನ್ನಿ. ಊಹೂಂ .. ಬೇಡ.. ಬಾಯಾರಿಕೆ ಅನ್ನಿಸುತ್ತಿದೆಯೇ ? ಕಡೆದಿಟ್ಟ ಮಜ್ಜಿಗೆಗೆ ನೀರು ಸೇರಿಸಿ ಹಸಿಮೆಣಸು ಶುಂಠಿ ಉಪ್ಪು ಸೇರಿಸಿ, ಇಂಗಿನ ಗಮಗಮಿಸುವ ಒಗ್ಗರಣೆ ಹಾಕಿ. ಹೊಟ್ಟೆ ತುಂಬಿದ ಕೊಡದಂತಾದರು ಬಾಯಿ ಇನ್ನಷ್ಟು ಬೇಡೀತು. ಅದೂ ಬಿಡಿ .. ಹಸಿವೇ ಎನಿಸದೆ ಬಾ ರುಚಿ ಕೆಟ್ಟಂತಾಗಿದೆಯೇ? ಹುಣಸೆ ರಸ ಉಪ್ಪು ಬೆಲ್ಲ ನೀರಿಗೆ ಸೇರಿಸಿ ಕುದಿಸಿ ಒಂದು ಖಡಕ್ ಒಗ್ಗರಣೆ ಹಾಕಿ, ಸೂಪಿನಂತೆ ಕುಡಿರಿ. ವಾಹ್ ಎನಿಸುತ್ತದೆಯೇ..!!
ಹಾಗೆಂದು ಒಗ್ಗರಣೆ ಎಂದರೆ ಎಲ್ಲವೂ ಒಂದೇ ರೀತಿಯದೇನೂ ಅಲ್ಲ. ನಮ್ಮೂರ ಪಲ್ಯಗಳು, ಉತ್ತರ ಭಾರತದ ಅಡುಗೆಯಂತೆ ಮೊದಲಿಗೆ ಒಗ್ಗರಿಸಿಕೊಂಡು ನಂತರ ತರಕಾರಿಯೋ, ಬೇಳೆಯೋ, ಸೊಪ್ಪೋ,ಹೀಗೆ ಯಾವುದನ್ನಾದರೂ ತನ್ನೊಳಗೆ ಬೆರೆಸಿಕೊಳ್ಳುತ್ತವೆ. ಅದೇ ನಮ್ಮಲ್ಲಿನ ಸಾರು ಸಾಂಬಾರು ಮಜ್ಜಿಗೆ ಹುಳಿಗಳು ತಯಾರಾದ ನಂತರ ಒಗ್ಗರಣೆಂದ ತಮ್ಮನ್ನು ಸಿಂಗರಿಸಿಕೊಳ್ಳುತ್ತವೆ. ಆದರೆ ಎಲ್ಲದರ ಮೂಲ ಉದ್ದೇಶ ಅಡುಗೆಯ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದೇ ಆಗಿದೆ.
ಈ ಕಾರಣದಿಂದಲೇ 'ನನ್ನ ಕೈ ತಿಕ್ಕಿ ತಿಕ್ಕಿ ತೊಳೆದರೂ ಮೂರು ದಿನಕ್ಕೆ ಈ ಒಗ್ಗರಣೆ ಪರಿಮಳ ಹೋಗೋದಿಲ್ಲ, ಎಂತಾ ಊಟ ಅಂತೀಯಾ'ಎಂದು ಊಟ ಮುಗಿಸಿ ಗಂಟೆಗಳುರುಳಿದ್ದರೂ,ಇನ್ನೂ ಅದರ ಸವಿಗನಸಿನಲ್ಲಿ ಮುಳುಗೇಳುವವರನ್ನು ನೀವು ನೋಡಿರಬಹುದು. ಇನ್ನು, ಸ್ವಾಭಾವಿಕವಾಗಿಯೇ ಘಾಟು ಹೊಂದಿದ ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆಯಾಗಿದ್ದರೆ ಕೈಯ ಜೊತೆಗೆ ಮೈಯೂ ಅದೇ ಪರಿಮಳವನ್ನು ಹೊರಹಾಕುತ್ತದೆ ಬಿಡಿ.
ಕೆಲವೊಂದು ಪಂಗಡಗಳಲ್ಲಿ ಮನೆಯಲ್ಲಿ ಯಾರಾದರು ತೀರಿ ಹೋಗಿದ್ದರೆ , ಸೂತಕದ ದಿನಗಳು ಕಳೆಯುವವರೆಗೆ ಅಡುಗೆಗೆ ಒಗ್ಗರಣೆ ಬಳಸುವುದಿಲ್ಲ. ಹಾಗಾಗಿಯೇ ಅಪ್ಪಿ ತಪ್ಪಿ ಒಗ್ಗರಣೆ ಹಾಕಲು ಮರೆತಿದ್ದರೆ, ಮನೆಯಲ್ಲಿ , ಹಿರಿತಲೆಗಳೊಮ್ಮೊಮ್ಮೆ 'ಇದೆಂತ ಸಾವಿನ ಅಡುಗೆಯೋ, ಒಗ್ಗರಣೆ ಇಲ್ಲ ಇದ್ರಲ್ಲಿ' ಎಂದು ಬೊಬ್ಬಿರಿಯುವುದನ್ನು ಕೇಳಿರಬಹುದು. ಬಹುಷಃ ಸಾವಿನ ಕರಿನೆರಳು ನಮ್ಮ ಮನೆಯನ್ನೂ ತುಳಿಯದಿರಲಿ ಎಂಬ ಮುನ್ನೆಚ್ಚರಿಕೆಯೇನೋ ಇದು.
ತನ್ನ ಸತ್ತ ಮಗುವನ್ನುಬದುಕಿಸು ಎಂದು ಬಂದ ನೊಂದ ತಾಯಿಗೆ, 'ಸಾವು ಕಾಣದ ಮನೆಯ ಸಾಸಿವೆಯ ತಾರವ್ವ' ಎಂದಿದ್ದನಂತೆ ಬುದ್ಧ. ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲಿಯೂ ಅವಳಿಗೆ ಸಿಗಲಿಲ್ಲ. ಹಾಗೆಯೇ ಸಾಸಿವೆ ಇಲ್ಲದ ಮನೆಯೂ ಇದ್ದಿರಲಿಕ್ಕಿಲ್ಲ ಅಲ್ಲವೇ..? ಆಗಿನ ಕಾಲದಲ್ಲೂ ಸಾಸಿವೆ ಎಲ್ಲರ ಅಡುಗೆ ಮನೆಯಲ್ಲಿ ಇದ್ದಿತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ..? ಸಾಸಿವೆ ಇದ್ದಲ್ಲಿ ಒಗ್ಗರಣೆಯೂ ಇದ್ದೀತಲ್ಲವೇ..!!
ಇಷ್ಟೆಲ್ಲ ಒಗ್ಗರಣೆ ಹಾಕುತ್ತಿರುವ ನಾನು ನನ್ನ ಒಗ್ಗರಣೆ ಕಥೆಯನ್ನು ನಿಮಗೇ ಹೇಳದೇ ಇದ್ದರೆ ಹೇಗಾದೀತು..! ನಮ್ಮಲ್ಲಿಗೆ ಅವಸರದಲ್ಲಿ ಬಲು ಅಪುರೂಪದ ಅತಿಥಿಗಳ ಆಗಮನವಾಯಿತು. ನಾನು ಕೂಡಾ ಇನ್ನಷ್ಟು ಅವಸರದಲ್ಲಿ ಅಡುಗೆ ಪೂರೈಸಿ ಎಲರನ್ನೂ ಊಟಕ್ಕೆ ಬನ್ನಿ ಎಂದು ತಟ್ಟೆ ಇಟ್ಟು ಆಮಂತ್ರಿಸಿದೆ. ಘಮ ಘಮ ಒಗ್ಗರಣೆಯ ಸುವಾಸನೆ.. ಎಲ್ಲರ ಹೊಗಳಿಕೆಯ ನುಡಿಗಳು ಬೇರೆ.. ನನ್ನ ಹೆಮ್ಮೆಯ ಬೆಲೂನು ಗಾಳಿ ತುಂಬಿ ದೊಡ್ಡದಾಗುತ್ತಲೇ ಇತ್ತು. ಆದರೆ ಅದು ಟುಸ್ಸೆಂದದ್ದು ಪಾಯಸದ ಮೇಲೆ ತೇಲಾಡುತ್ತಿರುವ ಕೆಂಪು ಮೆಣಸು, ಸಾಸಿವೆ, ಕರಿಬೇವಿನೆಲೆಗಳನ್ನು ಕಂಡಾಗಲೇ.. !! ಗಡಿಬಿಡಿಯಿಂದ ಸಾರು ಸಾಂಬಾರಿನ ಜೊತೆಗೆ ಅದಕ್ಕೂ ಒಗ್ಗರಣೆ ಹಾಕಿದ್ದೆ. ನನ್ನ ಪುಣ್ಯಕ್ಕೆ ಎಲ್ಲವನ್ನೂ ಅಡುಗೆ ಮನೆಂದ ತಂದು ಒಂದೊಂದಾಗಿ ಬಡಿಸುತ್ತಿದ್ದೆ. ಸೌಟಿನಲ್ಲಿ ಮೆಲ್ಲನೆ ಪಾಯಸದ ಒಗ್ಗರಣೆಯನ್ನೆತ್ತಿ ತೆಗೆದು ಸಿಂಕಿಗೆ ಚೆಲ್ಲಿ ಮತ್ತೊಂದಿಷ್ಟು ಏಲಕ್ಕಿ ಹುಡಿ ಸುರುವಿ , ಬೆರೆಸಿ ಆ ದಿನ ಹೇಗೋ ಪರಿಸ್ಥಿತಿ ನಿಭಾಸಿದ್ದೆ. ಆದರೆ ನಂತರ ವಿಷಯ ತಿಳಿದ ನನ್ನವರು ಈಗಲೂ ಪಾಯಸ ಮಾಡಿದ ದಿನ ಒಗ್ಗರಣೆ ಹಾಕಿದ್ದೀ ತಾನೆ.. ಇಲ್ಲದಿದ್ರೆ ರುಚಿಯೇ ಇಲ್ಲ ನೋಡು ಎಂದು ಕಿಚಾಸುವುದನ್ನು ಬಿಟ್ಟಿಲ್ಲ.
ಅಂದ ಹಾಗೆ ಈ ಒಗ್ಗರಣೆಯನ್ನು ಕಂಡು ಹಿಡಿದ ಮಹಾನುಭಾವನ್ಯಾರು ಎಂಬ ಚಿಂತೆ ನನ್ನನ್ನು ಅಗಾಗ ಕಾಡುವುದುಂಟು. ಸಾಸಿವೆಯ ಒಳಗೊಂದು ರುಚಿಯ ಕಂಡು ಅದನ್ನು ಬಿಸಿ ಎಣ್ಣೆಯಲ್ಲಿ ಇಂಗು ಮೆಣಸುಗಳೊಂದಿಗೆ ಸಿಡಿಸಿ ಅಡುಗೆಗೊಂದು ಪರಿಮಳದ ಆವರಣವನ್ನು ಕಲ್ಪಿಸಿದವನು ಮಹಾ ಪಾಕಶಾಸ್ತ್ರ ಪರಿಣಿತನೇ ಇರಬೇಕು. ಥಾಮಸ್ ಅಲ್ವ ಎಡಿಸನ್ ಗುಂಡು ಬಲ್ಬನ್ನೂ, ಮಾರ್ಕೋನಿ ರೇಡಿಯೋವನ್ನು , ಗ್ರಹಾಮ್ ಬೆಲ್ ಟೆಲೆಫೋನನ್ನೂ ಕಂಡು ಹಿಡಿಯುವುದಕ್ಕೂ ಮುಂಚೆಯೇ ಇರ ಬೇಕು ಇದರ ಅವಿಷ್ಕಾರವಾದದ್ದು. ಹೆಚ್ಚೇಕೆ ಮಹಾ ಮಹಾ ಬಾಣಸಿಗರಾದ ಭೀಮಸೇನ, ನಳ ಮಹಾರಾಜರು ಹುಟ್ಟುವ ಮೊದಲೇ ಇದರ ಸಂಶೋಧನೆಯಾಗಿರಬೇಕು. ಅಂತೂ ಇದರ ಕಾಲ ಹಾಗೂ ಕರ್ತೃವಿನ ನಿರ್ಣಯ ಒಗ್ಗರಣೆಯ ಪರಿಮಳದಷ್ಟೇ ನಿಗೂಢ ಹಾಗೂ ಜಟಿಲ.
ಅಲ್ಲಾ ... ಒಗ್ಗರಣೆಯ ಬಗ್ಗೆಯೇ ಹೇಳುತ್ತಾ ಕುಳಿತರೆ ಅಡುಗೆ ಮಾಡೋದ್ಯಾವಾಗ? ಅದಕ್ಕೆ ಒಗ್ಗರಣೆ ಬೀಳೋದ್ಯಾವಾಗ ಅಂತ ಹೇಳ್ತಾ ಇದ್ದೀರಾ.. !! ಎಲ್ಲಾ ರೆಡಿಯಾಗಿದೆ ..ಒಂದಿಷ್ಟು ಒಗ್ಗರಣೆ ಸಿಡಿಸಿದರಾಯಿತು.. ಅರ್ರೇ.. ನೀವೆಲ್ಲಿಗೆ ಹೊರಟ್ರಿ.. ಒಂದಿಷ್ಟು ಊಟ ಮಾಡ್ಕೊಂಡೇ ಹೋದ್ರಾಯ್ತು .. ಬನ್ನಿ ಬನ್ನಿ..