Pages

Total Visitors

Thursday, October 4, 2012

ಉಪಾಸನೆ.

ಅಯ್ಯೋ..ಅತ್ತೇ.. ಎಂದು  ಹೊರಗಿನಿಂದ ಸುಮಾ ಕೂಗಿದ ಶಬ್ಧ ಕೇಳಿ ವಿಮಲಮ್ಮ ತಮ್ಮ ನೋವಿನ ಕಾಲನ್ನು ಲೆಕ್ಕಿಸದೇ ಹೊರಗೋಡಿದರು. ಅಷ್ಟರಲ್ಲಿ ಪ್ರದೀಪನೂ ಹೆಂಡತಿಯ ಬೊಬ್ಬೆ ಕೇಳಿ "ಏನಾಯಿತೇ" ಎಂದು ಓಡಿ ಬಂದ. 

ಚೆನ್ನಾಗಿ ಸೊಕ್ಕಿ ನಿಂತಿದ್ದ ಮಂದಾರ ಹೂವಿನ ಗಿಡದ ಕಡೆಗೆ ಬೆರಳು ತೋರಿಸಿ ನಿಂತ ಹೆಂಡತಿಯನ್ನು ಕಂಡು, " ಏನೂ ಹಾವೇನಾದರೂ ಇದೆಯಾ? ದೊಡ್ದ ಕೋಲು ಎಲ್ಲಿದೆ ತಾ" ಎಂದ.

ಹಾವಲ್ಲರೀ, ಈ ಗಿಡ ನೋಡಿ. ಒಂದೇ ಒಂದು ಹೂವಿಲ್ಲದಂತೆ ಯಾರೋ ಕದ್ದಿದ್ದಾರೆ. ನಿನ್ನೆ ನೋಡಿದರೆ ಅಷ್ಟೊಂದು ಮೊಗ್ಗಿತ್ತು.ಇಂದು ನೋಡಿ" ಎಂದಳು ಸುಮ ಅಳು ದ್ವನಿಯಲ್ಲಿ.
" ಅಯ್ಯೋ .. ಅದಕ್ಯಾಕಿಷ್ಟು ರಂಪಾಟ ಮಾಡ್ತೀಯಾ.., ನಿನ್ನ ಬೊಬ್ಬೆ ಕೇಳಿ ನಾನೇನಾದರೂ ವಿಷ ಜಂತು ಸೇರ್ಕೊಂಡಿದೆಯಾ ಅಂತ ಹೆದರಿದೆ. ನಡಿ ನಡಿ.. ನಂಗೆ ಆಫೀಸಿಗೆ ಲೇಟ್ ಆಯ್ತು.." ಎಂದ 

ವಿಮಲಮ್ಮ ಬಂದವರೇ ಗಿಡದ ಕಡೆಗೆ ನೋಡಿ, "ಪಾಪ ಎಷ್ಟೊಂದು ಆಸೆಯಿಂದ  ಕಾಯ್ತಾ ಇದ್ದಳು.. ತುಂಬಾ ಹೂ ಬಿಡುತ್ತೆ ಅಂತ. ಯಾರೋ ಪಾಪಿಗಳು ಒಂದನ್ನೂ ಉಳಿಸದೇ ಕೊಯ್ದು ಬಿಟ್ಟಿದ್ದಾರಲ್ಲಾ.. ಅವಳಿಗೆ ಬೇಸರ ಆಗಲ್ವೇನೋ.." ಎಂದು ಸೊಸೆಯ ಪರ ವಹಿಸಿದರು. 

" ಸರಿ, ಇನ್ನೂ ಮೊಗ್ಗಿದೆ ಗಿಡದಲ್ಲಿ.. ನಾಳೆ ಅರಳುತ್ತೆ.. ಯಾರೋ ಪೂಜೆಗೆ ಕೊಯ್ದಿರಬೇಕು. ನಂಗೆ ತಿಂಡಿ ಕೊಟ್ಬಿಡಿ ಬೇಗ.. ಮತ್ತೆ ನೀವು ಅತ್ತೆ ಸೊಸೆ ಆ ವಿಷಯ ಆಲೋಚನೆ ಮಾಡಿ.." ಎಂದು ಒಳ ನಡೆದ. 

ಗಂಡ ಮನೆಯಿಂದ  ಹೊರ ಹೋಗುವವರೆಗೆ ಸುಮ್ಮನಿದ್ದ ಸುಮಾ, " ಅಲ್ಲ ಅತ್ತೇ.. ಯಾರು ಕೊಯ್ದಿರಬಹುದು ಹೂವನ್ನು. ನಂಗೆ ಪಕ್ಕದ ಮನೆ ಶಾಸ್ತ್ರಿಗಳ ಮೇಲೇ ಅನುಮಾನ. ಅವರ ಮನೇಲಿ ಒಂದೇ ಒಂದು ಹೂವಿನ ಗಿಡ ಇಲ್ಲ. ದಿನಾ ಯಾರ್ಯಾರದ್ದೋ ಮನೆ ಮುಂದೆ ಹೂವಿಗಾಗಿ ಅಲೀತಿರ್ತಾರೆ. ಅವರದ್ದೇ ಕೆಲಸ  ನೋಡಿ ಬೇಕಾದ್ರೆ.." ಅಂದಳು.

ಸೊಸೆಯ ಹೂಗಿಡಗಳ ಬಗ್ಗೆ ಇದ್ದ ಪ್ರೀತಿ, ಆಸಕ್ತಿ ಅರಿತಿದ್ದ ವಿಮಲಮ್ಮ, "ಹೋಗ್ಲಿ ಬಿಡೇ.. ದೇವ್ರ ಪಾದಕ್ಕೆ ತಾನೇ ಸೇರಿರೋದು.. ಆದ್ರೆ ಒಂದ್ನಾಲಕ್ಕು ಹೂವಾದ್ರು ಗಿಡದಲ್ಲಿ ಉಳಿಸಬಹುದಿತ್ತು" ಎಂದು ಅಲವತ್ತುಕೊಂಡರು. 

ಇದು ಒಂದು ದಿನದ ಕಥೆಯಾಗಿ ಉಳಿಯಲಿಲ್ಲ. ಪ್ರತಿ ದಿನ ಇದೇ ಪುನರಾವರ್ತನೆಯಾದಾಗ ಸುಮ ಆ ಗಿಡದಲ್ಲಿ ಹೂವನ್ನು ಕಾಣುವ ಆಸೆಯನ್ನು ಬಿಟ್ಟಳು. ಪಕ್ಕದ ಮನೆಯ ಶಾಸ್ತ್ರಿಗಳ ತುಳಸಿಕಟ್ಟೆಯಲ್ಲಿ ಬಣ್ಣ ಕಳೆದುಕೊಂಡು ಒಣಗಿದ ಹೂವುಗಳು ತಮ್ಮ ಮನೆಯ ಮಂದಾರ ಹೂವುಗಳೇ ಎಂದು ತಿಳಿದಿದ್ದರೂ ಅವರನ್ನು ಕೇಳಿ ಬೇಸರ ಪಡಿಸುವ ಸಾಹಸಕ್ಕೆ ಕೈ ಹಾಕುವಂತಿರಲಿಲ್ಲ. 

ನೆರೆಹೊರೆ ಬೇರೆ.. ಅಷ್ಟಲ್ಲದೇ ಪ್ರದೀಪನ ತಂದೆ ಕಾಲವಾದಾಗ ತುಂಬಾ ಸಹಾಯ ಮಾಡಿದ್ದರು ಈ ಮನೆಗೆ ಅಂತ ಅತ್ತೆಯಿಂದ , ಗಂಡನಿಂದ ಕೇಳಿ ತಿಳಿದಿದ್ದಳು. ಪ್ರದೀಪನ ಬಳಿಯೂ ಈ ವಿಷಯ ಹೇಳಿದಾಗ, " ಸುಮ್ಮನಿದ್ದು ಬಿಡು ಸುಮಾ.. ಹೂವಿಗೇನು.. ನಾಳೆಯೂ ಅರಳಬಹುದು. ಶಾಸ್ತ್ರಿಗಳು ಹೆಂಡತಿಯನ್ನು ಕಳೆದುಕೊಂಡ ಮೇಲೆ ಪೂಜೆ ಪುನಸ್ಕಾರಗಳಲ್ಲೇ ಮನಶ್ಯಾಂತಿಯನ್ನು ಕಾಣುತ್ತಿದ್ದಾರೆ. ಮಕ್ಕಳು ಕರೆದರೂ ಅವರೊಂದಿಗೆ ಹೋಗದೇ 'ಇಲ್ಲೂ ಇದ್ದಾನಲ್ಲ.. ಮಗನಂತಿರುವವನು' ಎಂದು ನನ್ನ ಕಡೆಗೆ ಬೆಟ್ಟು ಮಾಡಿದವರು. ಹಾಗಂತ ಇಲ್ಲಿಯವರೆಗೆ ಯಾವ ಸಹಾಯವನ್ನು ಬೇಡಿದವರಲ್ಲ. ನೀನೀಗ ಇದನ್ನೇ ದೊಡ್ಡ ವಿಷಯವಾಗಿ ಕೇಳಿದರೆ ನೊಂದುಕೊಂಡಾರು" ಎಂದಿದ್ದ. ಮನದಲ್ಲಿ ಬೇಸರ ಇದ್ದರೂ ತೋರ್ಪಡಿಸದೇ ಗಂಡನ ಮಾತನ್ನು ಒಪ್ಪಿಕೊಂಡಿದ್ದಳು ಸುಮಾ.

ಇದಾಗಿ ವಾರಗಳುರುಳಿತ್ತು. ಬೆಳಗ್ಗೆ ಎಂದಿನಂತೆ ಸುಮಾ ಗಿಡಕ್ಕೆ ನೀರು ಹಾಕ ಹೋದಾಗ ಗಿಡದ ತುಂಬಾ ತೇರಂತೆ ಅರಳಿ ನಿಂತಿದ್ದ ಬಿಳಿ ಮಂದಾರ ಹೂಗಳು ಕಣ್ಣಿಗೆ ರಾಚಿದವು. ' ಅಬ್ಬಾ.. ಇಷ್ಟು ದಿನಕ್ಕೆ ಒಂದು ದಿನವಾದರೂ ಗಿಡದಲ್ಲಿ ಹೂವನ್ನುಳಿಸುವ ಬುದ್ಧಿ ಬಂತಲ್ಲ ಈ  ಶಾಸ್ತ್ರಿಗಳಿಗೆ' ಎಂದುಕೊಂಡು ಆನಂದದಿಂದ  "ರ್ರೀ.." ಎಂದು ಪ್ರದೀಪನನ್ನು ಕರೆದಳು. 

"ಇವತ್ತೂ ಹೂವಿಲ್ಲ ತಾನೇ.. ಅದನ್ನೇ ಎಷ್ಟು ಸಲ ಹೇಳ್ತೀಯ" ಎಂದ ಬೇಸರದಿಂದ ಪ್ರದೀಪ. 

" ಅದಲ್ಲ.. ಇಲ್ಲಿ ಬಂದು ನೋಡಿ" ಎಂದು ಪುನಃ ಕರೆದಾಗ ಹೊರಬಂದ ಪ್ರದೀಪ, ಗಿಡದ ತುಂಬಾ ಅರಳಿದ ಹೂವಿನ ಕಡೆಗೆ ಅಚ್ಚರಿಯಿಂದ  ನೋಡಿದ. 

" ಇಷ್ಟು ದಿನಕ್ಕೆ ಇವತ್ತು ನೋಡಿ ಗಿಡಕ್ಕೆ ಜೀವ ಕಳೆ ಬಂದಿರೋದು" ಎಂಬ ಹೆಂಡತಿಯ ಮಾತನ್ನು ಕೇಳಿದವನೇ ಯಾಕೋ ಗಾಭರಿಯಿಂದ  ಶಾಸ್ತ್ರಿಗಳ ಮನೆಗೆ ಓಡಿ ಬಾಗಿಲು ತಟ್ಟಿದ. ಬಾಗಿಲು ತೆರೆಯಲಿಲ್ಲ. ಹತ್ತಿರದ ಬೇರೆ ಮನೆಯವರನ್ನು ಕರೆದು ವಿಷಯ ತಿಳಿಸಿ, ಬಾಗಿಲು ಮುರಿದು ಒಳ ನುಗ್ಗಿದರೆ ಶಾಸ್ತ್ರಿಗಳು ದೇವರ ಕೋಣೆಯಲ್ಲೇ ನಮಸ್ಕಾರ ಭಂಗಿಯಲ್ಲಿ ಪ್ರಾಣ ಬಿಟ್ಟಿದ್ದರು. ದೇವರ ಸುತ್ತ ಬಾಡಿದ ಮಂದಾರ ಹೂಗಳು ತುಂಬಿದ್ದವು. 

" ಪುಣ್ಯಾತ್ಮ ಒಳ್ಳೆ ಸಾವು" ಎಂದು ಮಂದಿ ಆಡಿಕೊಂಡರೆ ಸುಮಾ ಮಾತ್ರ ಹೂ ತುಂಬಿ ನಳನಳಿಸುತ್ತಿದ್ದ ಮಂದಾರ ಗಿಡದ ಕಡೆಗೆ ಹನಿ ತುಂಬಿದ ಕಣ್ಣುಗಳಿಂದ ನೋಡುತ್ತಾ ಕುಳಿತಿದ್ದಳು. 

17 comments:

 1. ಚೆನ್ನಾಗಿದೆ ಕಥೆ. ಕೊನೆಯಂತೂ ಹನಿಗಣ್ಣಾಯಿತು.
  ಮಾಲಾ

  ReplyDelete
 2. Nimma kathegalu yavathoo short and sweet.. End anthoo Bhavapoorna.. Arambha Namma maneyalle nadeda sambhashaneya scriptna hagithu..KRISHNA BHAT

  ReplyDelete
 3. ಬದುಕಿಗೆ ಹತ್ತಿರವಾದ ಕಥೆ, ಕಥೆಯಲ್ಲಿ ಯಾವುದು ನಮ್ಮವಲ್ಲ, ಯಾರು ನಮ್ಮವರಲ್ಲ ಒಂದು ಕಡೆಯಾದರೇ ಇನ್ನೊಂದು ಹೂವಿನ ಮೂಲಕ, ನೆರೆಹೊರೆಯವರ ಸಂಬಂಧಗಳು ಮೂಲಕ ಎಲ್ಲರೂ ನಮ್ಮವರು ಎಲ್ಲವೂ ನಮ್ಮದು ಎನ್ನುವ ಹಾಗೆ ಬದುಕು ಸಾಗುತ್ತಾ ಹೋಗುತ್ತದೆ... ಅವರ ಇರುವಿಕೆಯು ಹೂವಿನೊಂದಿಗೆ ಹಾಗೂ ದೇವರಲ್ಲಿನ ಏಕಾತನತೆಯೊಂದಿಗೆ ದಿನಗಳನ್ನು ಎಣಿಸುವ ಆ ಹಿರಿ ಜೀವ..! ಕೊನೆಗೊಂದು ದಿನ ಹೂವಿನ ನಂಟಿನೊಂದಿಗೆ ಸಂಬಂಧವನ್ನು ಕಳೆದುಕೊಂಡು ಸಾವಿನ ಅಂತ್ಯವನ್ನ ಗಿಡದಲ್ಲಿ ಉಳಿಯುವ ಹೂವಿನ ಸಂಕೇತವಾಗಿ ಬಿಂಬಿಸಿ,ಕಥೆಯು ಬದುಕಿಗೆ ಹತ್ತಿರವಾಗುವಂತೆ ತರುವಲ್ಲಿ ಸಫಲರಾಗಿದ್ದೀರಾ.... ಕಥೆಯ ಅಂತ್ಯ ಮಾತ್ರ ದುಃಖದ ಸಂಗತಿ..

  ReplyDelete
 4. ""ಇಷ್ಟು ದಿನಕ್ಕೆ ಇವತ್ತು ನೋಡಿ ಗಿಡಕ್ಕೆ ಜೀವ ಕಳೆ ಬಂದಿರೋದು" ಎಂಬ ಹೆಂಡತಿಯ ಮಾತನ್ನು ಕೇಳಿದವನೇ ಯಾಕೋ ಗಾಭರಿಯಿಂದ ಶಾಸ್ತ್ರಿಗಳ ಮನೆಗೆ ಓಡಿ ಬಾಗಿಲು ತಟ್ಟಿದ." - ಇಲ್ಲಿ ಕತೆ ಪಕ್ಕನೆ ಹೊರಳಿಕೊಳ್ಳುವ ರೀತಿ ಸೊಗಸಾಗಿದೆ. ಮಾನವೀಯ ಸಂಬಂಧಗಳ ಸೂಕ್ಷ್ಮ ಎಳೆಯೊಂದನ್ನು ಬಹು ನವಿರಾಗಿ ಬಿಡಿಸಿದ್ದೀರಿ

  ReplyDelete
 5. ಸಂಬಂಧಗಳೇ ಹೀಗೆ ಇರುವಾಗ ಇರುಸುಮುರಿಸು ಮಾಡುವ, ಕಳೆದುಕೊಂಡಾಗ ಕಾಡುವ... ಹ್ಹ್ಮ್ಮ್ಮ್..

  ReplyDelete
 6. " ಇಷ್ಟು ದಿನಕ್ಕೆ ಇವತ್ತು ನೋಡಿ ಗಿಡಕ್ಕೆ ಜೀವ ಕಳೆ ಬಂದಿರೋದು" ಎಂಬ ಹೆಂಡತಿಯ ಮಾತನ್ನು ಕೇಳಿದವನೇ ಯಾಕೋ ಗಾಭರಿಯಿಂದ ಶಾಸ್ತ್ರಿಗಳ ಮನೆಗೆ ಓಡಿ ಬಾಗಿಲು ತಟ್ಟಿದ. ಬಾಗಿಲು ತೆರೆಯಲಿಲ್ಲ. ಹತ್ತಿರದ ಬೇರೆ ಮನೆಯವರನ್ನು ಕರೆದು ವಿಷಯ ತಿಳಿಸಿ, ಬಾಗಿಲು ಮುರಿದು ಒಳ ನುಗ್ಗಿದರೆ ಶಾಸ್ತ್ರಿಗಳು ದೇವರ ಕೋಣೆಯಲ್ಲೇ ನಮಸ್ಕಾರ ಭಂಗಿಯಲ್ಲಿ ಪ್ರಾಣ ಬಿಟ್ಟಿದ್ದರು. ದೇವರ ಸುತ್ತ ಬಾಡಿದ ಮಂದಾರ ಹೂಗಳು ತುಂಬಿದ್ದವು.
  tunmbaa ishta aytu kathe..oppa iddu :)

  ReplyDelete
 7. ಆತ್ಮೀಯ
  ಕಥೆಯ ಹ೦ದರ ಚೆನ್ನಾಗಿದೆ. ವಸ್ತುವೂ ಕೂಡ, ಸಾವನ್ನು ಹೂವಿನೊ೦ದಿಗೆ ಸಮೀಕರಿಸಿದ ರೀತಿ ಚೆನ್ನಾಗಿಯೇ ಮೂಡಿದೆ.
  ಬಾಡಿದ ಹೂಗಳು ಶಾಸ್ತ್ರಿಗಳ ಮನೆಯ ಒಳಗಿದ್ದರೆ ಅರಳಿಯೂ ಸತ್ತ೦ತೆ ಕಾಣುವ ಹೂಗಳನ್ನು ನೋಡಿದ ಸುಮಾಳ ಮನಸ್ಥಿತಿ ಇನ್ನೂ ಬಲಿಯಬಹುದಿತ್ತು.
  ಶಾಸ್ತ್ರಿಗಳು ಹೂಗಳಿಗಾಗಿ ಅಥವಾ ಬದುಕಿಗಾಗಿ ಪರಿತಪಿಸಿದರೇ?
  ಸುಮಾ ಬಾಡುವ ಹೂಗಳ ಮೇಲಿರಿಸಿದ ಪ್ರೀತಿ ಬಾಡಿದ್ದಕ್ಕೆ ದುಃಖಿಸಿದಳೇ?
  ಪ್ರಶ್ನೆಗಳಿಗೆ ಕಥೆ ಮತ್ತು ಓದುಗನ ಮನಸ್ಥಿತಿಯ ಮೇಲೆ ಉತ್ತರ ಸಿಗುವ೦ತೆ ಮಾಡುತ್ತದೆ
  ಹರಿ

  ReplyDelete
 8. ಕಥೆ ಚೆನ್ನಾಗಿದೆ ಅನಿತಾ... ಸಂಬಂಧಗಳು ಹೀಗೇ ಇರುತ್ತವೆ ಇರುಸುಮುರುಸು ಇದ್ದಾಗ ಇಲ್ಲದಾಗ ಬೇಸರ :(

  ReplyDelete
 9. chandada kate Anitha!!
  malathi S

  ReplyDelete
 10. ನಿಮ್ಮ ಕಥೆ ಲೇಖನಗಳ ಮುಕ್ತಾಯ ತುಂಬ ಚೆನ್ನಾಗಿರುತ್ತದೆ ಅನಿತಕ್ಕ. ಚಿಕ್ಕ ಕಥೆಯಾದರೂ ಬಹಳಷ್ಟನ್ನು ಹೇಳುತ್ತದೆ ಈ ಕಥೆ . ಮೊದಲಿಗೆ ಅಷ್ಟು ಕಷ್ಟಪಟ್ಟು ಬೆಳೆಸುವು ಹೂವನ್ನು ಕೊಯ್ದುಬಿಡುವ ಪಕ್ಕದಮನೆ ಅಜ್ಜನ ಬಗ್ಗೆ ಸಿಟ್ಟು ಬಂದರೂ ಕೊನೆಕೊನೆಗೆ ಛೆ ಪಾಪ ಅನ್ನಿಸಿಬಿಡುತ್ತದೆ ಆತನ ಬಗ್ಗೆ .

  ReplyDelete
 11. very nice...like the way u write... Anitha... :))

  ReplyDelete
 12. ಬದುಕನ್ನು ಸಮೀಕರಿಸಿದ ರೀತಿ ನನಗೆ ನೆಚ್ಚಿಗೆಯಾಯಿತು.

  ReplyDelete
 13. ತುಂಬಾ ಇಷ್ಟವಾಯ್ತು ಅನಿತಾ.

  ReplyDelete